ಅಂಕಿಗಳು ನಿಜ ಹೇಳ್ತಿವೆ, ಕೇಳಿಸಿಕೊಳ್ಳಿ

 In ECONOMY, general


ಇತ್ತೀಚಿನ ದಿನಗಳಲ್ಲಿ ಅಂಕಿಅಂಶಗಳ ಬಗ್ಗೆ ಸಾಕಷ್ಟು ಚರ್ಚೆಗಳು, ವಿವಾದಗಳು ಆಗುತ್ತಿವೆ. ಒಂದು ಕಾಲದಲ್ಲಿ ಭಾರತದ ಅಂಕಿ ಅಂಶಗಳನ್ನು ಜಗತ್ತು ಮೆಚ್ಚುಗೆಯಿಂದ ನೋಡುತ್ತಿತ್ತು. ಈಗ ಅನುಮಾನದಿಂದ ನೋಡುತ್ತಿದೆ. ಆ ಸ್ಥಿತಿಗೆ ತಲುಪಿದ್ದೇವೆ. ಎಷ್ಟೋ ಅಂಕಿ ಅಂಶಗಳ ಸಂಗ್ರಹಣೆ, ಸಮೀಕ್ಷೆಗಳನ್ನು ನಡೆಸುವುದನ್ನು ಸರ್ಕಾರ ನಿಲ್ಲಿಸಿಬಿಟ್ಟಿದೆ. ಪ್ರಕಟವಾಗುತ್ತಿರುವ ಅಂಕಿಅಂಶಗಳ ಗುಣಮಟ್ಟದ ಬಗ್ಗೆಯೂ ಸಾಕಷ್ಟು ಅನುಮಾನಗಳಿವೆ. ಅದು ಸರ್ಕಾರದ ಉದ್ದೇಶಪೂರ್ವಕ ನಡೆ ಅನ್ನುವ ಅನುಮಾನ ದಟ್ಟವಾಗಿದೆ. ಇತ್ತೀಚೆಗೆ ಜನಸಂಖ್ಯಾ ವಿಜ್ಞಾನದ ಅಂತರರಾಷ್ಟ್ರೀಯ ಸಂಸ್ಥೆ – ಐಐಪಿಎಸ್‌ನ ನಿರ್ದೇಶಕ ಕೆ ಎಸ್ ಜೇಮ್ಸ್ ಅವರನ್ನು ಅಮಾನತ್ತುಗೊಳಿಸಿರುವುದು ಈ ಅನುಮಾನಕ್ಕೆ ಇನ್ನಷ್ಟು ಪುಷ್ಟಿನೀಡಿದೆ. ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮವನ್ನು ಅಮಾನತಿಗೆ ಕಾರಣವನ್ನಾಗಿ ಕೊಟ್ಟಿದ್ದರೂ, ಸಂಸ್ಥೆ ಪ್ರಕಟಿಸಿರುವ ವರದಿಗಳು ಸರ್ಕಾರಕ್ಕೆ ಪಥ್ಯವಾಗಿರಲಿಲ್ಲ ಅನ್ನುವುದು ತಿಳಿದಿರುವ ವಿಷಯ.
ಈ ಸಂಸ್ಥೆಗೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಗಳನ್ನು(ಎನ್‌ಎಫ್‌ಎಚ್‌ಎಸ್) ಸಿದ್ದಪಡಿಸುವ ಜವಾಬ್ದಾರಿಯನ್ನು ನೀಡಲಾಗಿದೆ. ಐದನೇ ಸಮೀಕ್ಷೆಯ ಮಾಹಿತಿ ಎರಡು ಹಂತಗಳಲ್ಲಿ ಬಿಡುಗಡೆಯಾಗಿದೆ. ೧೭ ರಾಜ್ಯಗಳು ಹಾಗೂ ಯುನಿಯನ್ ಟೆರಿಟೆರಿಗೆ ಸಂಬಂಧಿಸಿದ ಮೊದಲ ಹಂತದ ಅಂಕಿಅಂಶಗಳು ಡಿಸೆಂಬರ್ ೨೦೨೦ರಲ್ಲಿ ಬಿಡುಗಡೆಯಾಯಿತು. ಆಗ ಹರ್ಷವರ್ಧನ್ ಕೇಂದ್ರ ಆರೋಗ್ಯ ಮಂತ್ರಿಯಾಗಿದ್ದರು. ಅದು ಅಡುಗೆ ಇಂಧನ, ಶೌಚಾಲಯ, ರಕ್ತಹೀನತೆ ಇತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ಸಂಗ್ರಹಿಸಿತ್ತು. ಎರಡನೆಯ ಹಂತದ ವರದಿ ನವೆಂಬರ್ ೨೦೨೧ರಲ್ಲಿ ಬಿಡುಗಡೆಯಾದಾಗ ಮಾಂಡವೀಯ ಆರೋಗ್ಯ ಮಂತ್ರಿಗಳಾಗಿದ್ದರು. ಅವು ಪ್ರಕಟಿಸಿದ ಮಾಹಿತಿಗಳು ಸರ್ಕಾರದ ನಿರೀಕ್ಷೆಗೆ ಪೂರಕವಾಗಿರಲಿಲ್ಲ. ಈಗ ಆರನೆಯ ಸಮೀಕ್ಷೆ ನಡೆಯುತ್ತಿದೆ. ಹಿಂದಿನ ಸಮೀಕ್ಷೆಯ ತಪ್ಪುಗಳನ್ನು ಸರಿಪಡಿಸುವ ಉದ್ದೇಶ ಇದಕ್ಕೆ ಇದೆಯಂತೆ.
ಸರ್ಕಾರಕ್ಕೆ ತನಗೆ ಅನುಕೂಲವಾಗುವಂತಹ ಅಂಕಿ ಅಂಶಗಳು ಬೇಕು. ಆದರೆ ಎನ್‌ಎಫ್‌ಎಚ್‌ಎಸ್ ಪ್ರಕಟಿಸಿರುವ ಎಷ್ಟೋ ಮಾಹಿತಿಗಳು ಸರ್ಕಾರಕ್ಕೆ ಪಥ್ಯವಾಗುತ್ತಿಲ್ಲ. ಉದಾಹರಣೆಗೆ ಭಾರತದಲ್ಲಿ ಎಲ್ಲರೂ ಶೌಚಾಲಯಗಳನ್ನು ಬಳಸುತ್ತಾರೆ, ಎಲ್ಲರಿಗೂ ಶೌಚಾಲಯದ ಸೌಲಭ್ಯವಿದೆ ಎಂದು ಸರ್ಕಾರ ಹೇಳಿಕೊಂಡು ಬಂದಿದೆ. ಆದರೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ೧೯% ಜನರಿಗೆ ಶೌಚಾಲಯ ಸೌಲಭ್ಯವಿಲ್ಲ ಎಂದು ತಿಳಿಸಿದೆ. ಬಹುಶಃ ಲಕ್ಷದ್ವೀಪವನ್ನು ಬಿಟ್ಟರೆ ಶೇಕಡ ನೂರರಷ್ಟು ಶೌಚಾಲಯ ಬಳಸುವ ರಾಜ್ಯಗಳೇ ಇಲ್ಲ ಅನ್ನಬಹುದು. ಬೆಳಗ್ಗೆ ರೈಲಿನಲ್ಲಿ ಒಮ್ಮೆ ಪ್ರಯಾಣ ಮಾಡಿದರೆ ಇದು ಕಾಣುತ್ತದೆ. ಇದಕ್ಕೆ ದೊಡ್ಡ ಸಮೀಕ್ಷೆಯೂ ಬೇಕಾಗಿಲ್ಲ.
ಹಾಗೆಯೇ ಅಡುಗೆ ಇಂಧನದ ಬಗ್ಗೆಯೂ ಅದು ಹೊರಹಾಕಿರುವ ಮಾಹಿತಿ ಸರ್ಕಾರಕ್ಕೆ ಮುಜುಗರ ತಂದಿದೆ. ದರ ಪ್ರಕಾರ ಪಟ್ಟಣಗಳಲ್ಲಿ ೮೯.೭% ರಷ್ಟು ಜನ ಅಡುಗೆ ಗ್ಯಾಸ್ ಬಳಸುತ್ತಾರೆ. ಗ್ರಾಮೀಣ ಪ್ರದೇಶಗಳ್ಲಲಿ ೪೩.೨% ಜನ ಗ್ಯಾಸ್ ಬಳಸುತ್ತಾರೆ. ಸರಾಸರಿ ತೆಗೆದುಕೊಂಡರೆ ಗ್ಯಾಸ್ ಬಳಸುವವರ ಸಂಖ್ಯೆ ೫೮.೬%. ಇದು ತನ್ನ ಉಜ್ವಲ ಯೋಜನೆಯ ವಿಫಲತೆಯನ್ನು ಹೇಳುತ್ತಿದೆ ಅನ್ನುವ ಬೇಸರ ಸರ್ಕಾರಕ್ಕೆ.
ಹಾಗೆಯೇ ಭಾರತದಲ್ಲಿ ೨೦೧೫-೧೬ಕ್ಕೆ ಹೋಲಿಸಿದರೆ ೨೦೧೯-೨೧ರಲ್ಲಿ ರಕ್ತ ಹೀನತೆ ಹೆಚ್ಚಾಗಿದೆ ಸಮೀಕ್ಷೆ ವರದಿ ಮಾಡಿತ್ತು. ಕೇಂದ್ರ ಸರ್ಕಾರಕ್ಕೆ ಸಮಸ್ಯೆ ಇರುವುದು ಇದೊಂದೇ ಸಮೀಕ್ಷೆಯ ಬಗ್ಗೆ ಅಲ್ಲ. ಬಹುತೇಕ ಎಲ್ಲಾ ಸಮೀಕ್ಷೆಗಳ ಬಗ್ಗೆಯೂ ತಕರಾರು, ಅಸಮಾಧಾನ ಇದೆ. ಇತ್ತೀಚಿನ ದಿನಗಳಲ್ಲಿ ಈ ಅಸಹನೆ ಸ್ಪಷ್ಟವಾಗಿ ವ್ಯಕ್ತವಾಗುತ್ತಿದೆ. ನಿರ್ದೇಶಕ ಕೆ ಎಸ್ ಜೇಮ್ಸ್ ಅವರನ್ನು ಅಮಾನತ್ತುಗೊಳಿಸುವ ಮಟ್ಟಿಗೆ ಹೋಗಿದೆ. ಈ ಹಿಂದೆಯೂ ಅವರನ್ನು ನಿವೃತ್ತಿ ಪಡೆಯಲು ಕೇಳಲಾಗಿತ್ತಂತೆ. ಆದರೆ ಅವರು ಈ ಕಾರಣಕ್ಕೆ ರಾಜೀನಾಮೆ ಕೊಡಲು ತಯಾರಿರಲಿಲ್ಲ ಎಂದು ದಿ ವೈರ್ ವರದಿ ಮಾಡಿದೆ. ಇಂತಹ ಕ್ರಮಗಳ ಪರಿಣಾಮ ಗಾಬರಿಯಾಗುವಂಥದ್ದು. ಜೇಮ್ಸ್ ಜೊತೆಯಲ್ಲಿ ಕೆಲಸ ಮಾಡುತ್ತಿದ್ದವರು, ಈಗ ಎರಡು ರಾಜ್ಯಗಳ ಅಂಕಿಅಂಶ ಸಂಗ್ರಹಣೆಯಲ್ಲಿ ತೊಡಗಿರುವ ಒಬ್ಬ ಅಧಿಕಾರಿ ದಿ ವೈರ್ ಪತ್ರಿಕೆಗೆ ನಿರ್ದೇಶಕರ ಅಮಾನತ್ತು ಗಾಬರಿ ತಂದಿದೆ. ಇನ್ನು ಮುಂದೆ ನಾವು ಅಂಕಿ ಅಂಶಗಳ ಪ್ರಕಟಣೆಗೆ ಸಂಬಂಧಿಸಿದಂತೆ ಜಾಗರೂಕರಾಗಿರಬೇಕು ಎಂದಿದ್ದಾರೆ. ಇದು ನಿಜವಾಗಿ ಆತಂಕದ ವಿಷಯ. ಎನ್‌ಎಫ್‌ಎಚ್‌ಎಸ್ ವರದಿಗಳ ಬಗ್ಗೆ ಸರ್ಕಾರದ ಕಡೆಯಿಂದ ಟೀಕೆಗಳು ಪ್ರಾರಂಭವಾಗಿದ್ದವು. ಪ್ರಧಾನಿಯವರ ಆರ್ಥಿಕ ಸಲಹಾ ಸಮಿತಿಯ ಶಮಿಕಾ ರವಿ ಕಟುವಾಗಿಯೇ ಟೀಕಿಸಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಲೇಖನ ಬರೆದಿದ್ದರು. ಅವರೆಲ್ಲಾ ತಮ್ಮ ಟೀಕೆಗಳನ್ನು ಪ್ರಕಟಿಸಿದ್ದರು. ಪಣಾಬ್ ಸೇನ್, ಅಮಿತಾಬ್ ಕುಂಡು ಹಾಗೂ ಪಿ. ಸಿ ಮೋಹನನ್ ಅಂತವಹರು ಅದಕ್ಕೆ ಪ್ರತಿಕ್ರಿಯಿಸಿದ್ದರು. ಇದನ್ನು ಒಪ್ಪುವುದೂ ಬಿಡುವುದು ಬೇರೆ ವಿಷಯ. ಆದರೆ ಸರ್ಕಾರ ತಮ್ಮ ಕಾರ್ಯಕ್ರಮದ ಪ್ರಚಾರಕ್ಕೆ ಅನುಕೂಲಕ್ಕೆ ಬೇಕಾಗುವಂತೆ ಅಂಕಿಅಂಶವನ್ನು ನಿರೀಕ್ಷಿಸುವುದು ಆತಂಕಕಾರಿ ವಿಷಯ. ಸರ್ಕಾರದ ಹಸ್ತಕ್ಷೇಪ ಇರಬಾರದು ಎಂಬ ಕಾರಣಕ್ಕೆ ಇವೆಲ್ಲವನ್ನು ಸ್ವಾಯತ್ತ ಸಂಸ್ಥೆಗಳಾಗಿ ರೂಪಿಸಲಾಗಿವೆ. ಮೋಹನನ್ ಅಂತಹವರು ಸರ್ಕಾರದ ಹಸ್ತಕ್ಷೇಪ ಹಾಗೂ ದಿವ್ಯ ನಿರ್ಲಕ್ಷ್ಯವನ್ನು ತಡೆಯಲಾಗದೆ ರಾಜಿನಾಮೆ ಕೊಟ್ಟು ಬಂದವರು. ಜೇಮ್ಸ್ ಹಾರ್ವಡಿನ ಜನಸಂಖ್ಯೆ ಹಾಗೂ ಬೆಳವಣಿಗೆಯ ಕೇಂದ್ರದಲ್ಲಿ ಉನ್ನತ ಸಂಶೋಧನೆ ಮಾಡಿ ಬಂದವರು. ಈ ವಿಷಯದಲ್ಲಿ ಪ್ರಾಧ್ಯಾಪಕರಾಗಿ ಹಲವು ವರ್ಷ ಕೆಲಸ ಮಾಡಿದ್ದವರು. ಹಲವು ಪ್ರಮುಖ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿದ್ದ ಅನುಭವವಿದ್ದವರು.
ಸಮಸ್ಯೆ ಅಂದರೆ ಕೇಂದ್ರ ಸರ್ಕಾರಕ್ಕೆ ಅಂಕಿಅಂಶಗಳ ಜೊತೆಗಿನ ಸಂಬಂಧ ಚೆನ್ನಾಗಿಲ್ಲ. ತಮಗೆ ಆಗದವರನ್ನು ದೂರ ಇಡುವುದು ದೊರೆಗಳ ಸ್ವಭಾವ. ಈಗ ಅಂಕಿಅಂಶಗಳನ್ನು ದೂರ ಇಡಲಾಗುತ್ತಿದೆ. ಬಳಕೆದಾರರ ಖರ್ಚಿನ ಸಮೀಕ್ಷೆಯನ್ನು ತಿರಸ್ಕರಿಸಲಾಯಿತು. ೨೦೧೯ರಲ್ಲಿ ನಿರುದ್ಯೋಗಕ್ಕೆ ಸಂಬಂಧಿಸಿದ ಅಂಕಿಅಂಶವನ್ನು ಚುನಾವಣೆ ಮುಗಿಯುವವರೆಗೆ ತಡೆಹಿಡಿಯಲಾಗಿತ್ತು. ಸರ್ಕಾರ ತೋರಿದ್ದ ನಿರ್ಲಕ್ಷದಿಂದ ಅದರ ಮುಖ್ಯಸ್ಥರಾಗಿದ್ದ ಪಿ ಸಿ ಮೋಹನನ್ ಮೊದಲಾದವರು ರಾಜೀನಾಮೆ ನೀಡಿದ್ದು ಆಗಲೇ. ಸಮಿತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ನಮಗೆ ತೋರುತ್ತಿದೆ. ಸಮಿತಿಯ ಹಲವು ನಿರ್ಧಾರಗಳನ್ನು ಸರ್ಕಾರ ಪರಿಗಣಿಸುತ್ತಿಲ್ಲ. ನಮ್ಮನ್ನು ಕಡೆಗಾಣಿಸಲಾಗುತ್ತಿದೆ ಎಂದು ನಮಗೆ ಅನ್ನಿಸುತ್ತಿದೆ ಎಂದು ಅವರು ಹೇಳಿದ್ದರು.

ಜನಗಣತಿಯಂತಹ ಬಹುಮುಖ್ಯ ಕಾರ್ಯಕ್ರಮಗಳನ್ನು ಮುಂದೂಡಲಾಗುತ್ತಿದೆ. ಅದು ೨೦೨೧ರಲ್ಲೇ ನಡೆಯಬೇಕಿತ್ತು. ಇನ್ನೂ ನಡೆದಿಲ್ಲ. ೧೮೮೧ರಲ್ಲಿ ಪ್ರಾರಂಭವಾದ ಜನಗಣತಿ ೨೦೧೧ರವರೆಗೆ ನಿರಂತರವಾಗಿ ನಡೆದುಕೊಂಡು ಬಂದಿತ್ತು. ಎರಡು ಜಾಗತಿಕ ಯುದ್ಧಗಳು, ಚೀನೀ ಆಕ್ರಮಣದ ಸಂದರ್ಭದಲ್ಲೂ ನಿಂತಿರಲಿಲ್ಲ. ೨೦೨೧ರಲ್ಲಿ ಕೋವಿಡ್ ಕಾರಣಕ್ಕೆ ಮುಂದೂಡಲಾಗಿತ್ತು. ಆದರೆ ಬಿಹಾರ, ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಪಂಜಾಬ್, ಉತ್ತರ ಪ್ರದೇಶ ಮತ್ತು ಉತ್ತರಾಕಾಂಡ್‌ಗಳಲ್ಲಿ ಕೋವಿಡ್ ನಡುವೆಯೇ ಚುನಾವಣೆಯನ್ನು ನಡೆಸಲಾಯಿತು. ಲಾಕ್‌ಡೌನ್ ತೆರವಾದ ಮೇಲೆ ಮಾರುಕಟ್ಟೆಗಳು, ಮಾಲ್‌ಗಳು, ಚಿತ್ರಮಂದಿರಗಳು, ಧಾರ್ಮಿಕ ಸಭೆಗಳಂತಹ ಎಲ್ಲಾ ಸಾರ್ವಜನಿಕ ಚಟುವಟಿಕೆಗಳು ಪ್ರಾರಂಭವಾದವು. ನಿಂತದ್ದು ಜನಗಣತಿ ಮಾತ್ರ. ಹೆಚ್ಚಿನ ಮಾಹಿತಿಗಳಿಗಾಗಿ ೨೦೧೧ರ ಜನಗಣತಿಯನ್ನೇ ಆಧರಿಸಲಾಗುತ್ತಿದೆ. ದೇಶದ ಜನಸಂಖ್ಯೆ, ಜೀವನಮಟ್ಟ, ಬಡತನದ ಪ್ರಮಾಣ, ವಲಸಿಗರ ಸ್ಥಿತಿಗತಿ, ವಿಭಿನ್ನ ಯೋಜನೆಗಳ ಫಲಾನುಭವಿಗಳ ಸಂಖ್ಯೆ ಇತ್ಯಾದಿ ಮಾಹಿತಿಗಳು ಇಲ್ಲದೇ ಹೋದರೆ ಸರ್ಕಾರದ ಯೋಜನೆಗಳು ಫಲಕಾರಿಯಾಗುವುದು ಕಷ್ಟ. ಸಾರ್ವಜನಿಕರ ಪಡಿತರ ಪದ್ಧತಿಯಂತಹ ಯೋಜನೆಯಲ್ಲೂ ನಿಜವಾದ ಫಲಾನುಭವಿಗಳ ಲೆಕ್ಕ ಸಿಗುವುದಿಲ್ಲ. ಹಳೆಯ ಲೆಕ್ಕಾಚಾರಕ್ಕೆ ಜೋತು ಬಿದ್ದಿರುವುದರಿಂದ ೧೨ ಕೋಟಿ ಜನ ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎನ್ನಲಾಗಿದೆ.

ಕಾರಣ ಏನೇ ಇರಲಿ ಜನಗಣತಿಯ ವಿಳಂಬ ಗಂಭೀರವಾದ ವಿಷಯ. ಜನಗಣತಿಯಷ್ಟೇ ಅಲ್ಲ, ಹಲವು ಸಮೀಕ್ಷೆಗಳನ್ನು ಸರ್ಕಾರ ಮುಂದೂಡುತ್ತಿದೆ. ಆಗಿರುವ ಕೆಲವು ಸಮೀಕ್ಷೆಗಳ ವರದಿಯನ್ನೂ ಪ್ರಕಟಿಸುತ್ತಿಲ್ಲ. ಇದು ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸುತ್ತಿದೆ. ಇವನ್ನು ಅವಲಂಬಿಸಿದ ಇನ್ನಿತರ ಸೂಚ್ಯಂಕಗಳ ಲೆಕ್ಕಾಚಾರದಲ್ಲಿ ಎಡವಟ್ಟಾಗುತ್ತದೆ. ಉದಾಹರಣೆಗೆ ಗ್ರಾಹಕರ ವೆಚ್ಚ ಸೂಚ್ಯಂಕವನ್ನು ಸರ್ಕಾರ ತಡೆಹಿಡಿದಿದೆ. ಇದರಿಂದ ಗ್ರಾಹಕರು ಬಳಸುತ್ತಿರುವ ವಸ್ತುಗಳ ಬಗ್ಗೆ ಮಾಹಿತಿ ಸಿಗುವುದಿಲ್ಲ. ಹಾಗಾಗಿ ಗ್ರಾಹಕರ ಬೆಲೆ ಸೂಚ್ಯಂಕವನ್ನು ಪರಿಷ್ಕರಿಸಲಾಗುವುದಿಲ್ಲ. ಇದರಿಂದ ಹಣದುಬ್ಬರ ತಡೆಯಲು ಸರ್ಕಾರ ಕೈಗೊಳ್ಳುವ ಕ್ರಮದಲ್ಲಿ ಏರುಪೇರಾಗಬಹುದು.

ಪ್ರಧಾನ ಮಂತ್ರಿಗಳ ಆರ್ಥಿಕ ಸಲಹ ಸಮಿತಿಯ ಬಿಬೇಕ್ ದೇಬ್ರಾಯ್ ಅವರೇ ಇತ್ತೀಚೆಗೆ ಲೇಖನವೊಂದರಲ್ಲಿ ಬರೆದಂತೆ ಸರಿಯಾದ ಮಾಹಿತಿ ಇಲ್ಲದ್ದರಿಂದ ನಮಗೆ ಎಷ್ಟು ಜನ ದಾರಿದ್ರ್ಯ ರೇಖೆಯಿಂದ ಕೆಳಗಿದ್ದಾರೆ ಎಂದು ಲೆಕ್ಕ ಮಾಡಲು ಸಾಧ್ಯವಾಗುತ್ತಿಲ್ಲ. ಹಣದುಬ್ಬರವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ನಮ್ಮ ಆರ್ಥಿಕ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಹಾಗೂ ನಿರ್ವಹಿಸಲು ನಮಗಿರುವ ಸಾಮಗ್ರಿಗಳು ಸಾಲುವುದಿಲ್ಲ. ಹಾಗಾಗಿ ಸಂಖ್ಯಾಶಾಸ್ತ್ರ ಹಾಗೂ ಕಾರ್ಯಕ್ರಮ ಅನುಷ್ಠಾನದ ಮಂತ್ರಾಲಯವು ಈ ನ್ಯೂನತೆಯನ್ನು ಪರಿಹರಿಸುವುದು ಅತ್ಯವಶ್ಯಕ. ಅಂಕಿಅಂಶಗಳ ವಿಶ್ಲೇಷಣೆಯಲ್ಲಿ ಚೌಕಾಸಿ ಸಾಧ್ಯವಿಲ್ಲ. ವಿವಿಧ ಸಮತಿಗಳ ವರದಿಯನ್ನು ಪ್ರಕಟಿಸದೇ ಇರುವುದು ಜವಾಬ್ದಾರಿಯಿಂದ ಜಾರಿಕೊಂಡಂತೆ ಆಗುತ್ತದೆ. ಹಾಗಾಗಬಾರದು ಎಂದಿದ್ದಾರೆ.

ಉನ್ನತ ಗುಣಮಟ್ಟದ ದತ್ತಾಂಶ ಸಂಗ್ರಹಕ್ಕೆ ಪರ್ಯಾಯವೇ ಇಲ್ಲ. ನಿಖರವಾದ ಅಂಕಿಅಂಶಗಳು ಹೇಳುವ ಸತ್ಯ ಸರ್ಕಾರಕ್ಕೆ ಪಥ್ಯವಾಗದೇ ಇರಬಹುದು. ಆದರೆ ಅಂಕಿಅಂಶಗಳನ್ನು ನಿರ್ಲಕ್ಷಿಸುವುದರಿಂದ ನೀತಿ ರೂಪಿಸುವವರು ಕತ್ತಲಲ್ಲಿ ತಡಕಾಡಬೇಕಾಗುತ್ತದೆ. ದೇಶದ ಸಾಂಖ್ಯಿಕ ವ್ಯವಸ್ಥೆಯನ್ನು ಮತ್ತೆ ಬಲಪಡಿಸಬೇಕು. ವಿಶ್ವಾಸಾರ್ಹತೆಯನ್ನು ಮತ್ತೆ ತಂದುಕೊಡಬೇಕು.

ಸರ್ಕಾರಕ್ಕೆ ಪಥ್ಯವಾಗದ ಸತ್ಯವನ್ನು ಹೇಳುವವರ ಮೇಲೆ ಕ್ರಮತೆಗೆದುಕೊಳ್ಳವುದು ಪರಿಹಾರವಲ್ಲ. ಸಂಖ್ಯೆಗಳು ಹೇಳುವ ಸತ್ಯಗಳನ್ನು ಕಿವಿಗೊಟ್ಟು, ಮುಕ್ತಮನಸ್ಸಿನಿಂದ ಕೇಳಿಸಿಕೊಳ್ಳುವುದು ಒಳ್ಳೆಯದು.

 

Recommended Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.