ಅರ್ಥಶಾಸ್ತ್ರ, ಮನಶ್ಶಾಸ್ತ್ರ ಮಾತುಕತೆಗೆ ಕೂತಾಗ

 In Behavior Economics, ECONOMY

ಟಿ ಎಸ್ ವೇಣುಗೋಪಾಲ್
ವರ್ತನ ಅರ್ಥಶಾಸ್ತ್ರಕ್ಕೆ ದೆಸೆ ತಿರುಗಿದೆ. ಕೆಲವು ವರ್ಷಗಳ ಹಿಂದೆ ಅದನ್ನು ಕೇಳುವವರೇ ಇರಲಿಲ್ಲ. ಎಲ್ಲರೂ ಹೀಯಾಳಿಸುವವರೇ ಆಗಿದ್ದರು. ಈ ವರ್ಷ ಅದಕ್ಕೆ ಮತ್ತೊಂದು ನೋಬೆಲ್ ಬಹುಮಾನ. ಸಿಮನ್, ಕನೆಮನ್ ಆದ ಮೇಲೆ ರಿಚರ್ಡ್ ಎಚ್ ಥೇಲರ್ ಈಗ ಮೂರನೆಯವನು. ಲೊವೆನ್‌ಸನ್ ಕ್ಯೂನಲ್ಲಿದ್ದಾನೆ.
ವರ್ತನ ಅರ್ಥಶಾಸ್ತ್ರ ಒಂದು ಭಿನ್ನವಾದ ಹೊಸ ಶಿಸ್ತೇನಲ್ಲ. ಅದು ಅರ್ಥಶಾಸ್ತ್ರವೇ. ಮನಶ್ಶಾಸ್ತ್ರ ಹಾಗೂ ಇತರ ಸಮಾಜವಿಜ್ಞಾನದ ಕಾಣ್ಕೆಗಳನ್ನು ಸೇರಿಸಿಕೊಂಡು ಅರ್ಥಶಾಸ್ತ್ರವನ್ನು ಹೆಚ್ಚು ಶ್ರೀಮಂತಗೊಳಿಸುವ, ನಿಖರಗೊಳಿಸುವ ಒಂದು ಪ್ರಯತ್ನ.
ನಿಜ ಹೇಳಬೇಕೆಂದರೆ ಅದು ಮನಶ್ಶಾಸ್ತ್ರ ಹಾಗೂ ಅರ್ಥಶಾಸ್ತ್ರಗಳ ನಡುವಿನ ಒಂದು ಸಂವಾದ. ಅರ್ಥಶಾಸ್ತ್ರಜ್ಞನ ದೃಷ್ಟಿಯಲ್ಲಿ ಮನುಷ್ಯ ವಿವೇಚನಾಶೀಲ, ಸ್ವಾರ್ಥಿ ಹಾಗೂ ಅವನ ಅಭಿರುಚಿ ಬದಲಾಗುವುದಿಲ್ಲ. ಆದರೆ ಒಬ್ಬ ಮನೋವಿಜ್ಞಾನ ಲೋಕದ ಮನುಷ್ಯನೇ ಬೇರೆ. ಅವನು ಪೂರ್ಣ ವಿವೇಚನಾಶೀಲನೂ ಅಲ್ಲ, ಸ್ವಾರ್ಥಿಯೂ ಅಲ್ಲ. ಜೊತೆಗೆ ಅವನ ರುಚಿಯೂ ಒಂದೇ ರೀತಿ ಇರುವುದಿಲ್ಲ, ಬದಲಾಗುತ್ತಿರುತ್ತದೆ. ಅವರಿಬ್ಬರೂ ಚರ್ಚಿಸುತ್ತಿರುವ ಜೀವಿಗಳೇ ಬೇರೆ ಬೇರೆ ಅನ್ನಿಸಿಬಿಡುತ್ತದೆ. ರಿಚರ್ಡ್ ಥೇಲರ್ ಅವರನ್ನು ಹ್ಯುಮನ್ಸ್ ಹಾಗೂ ಎಕಾನ್ಸ್ ಎಂದು ಕರೆಯುತ್ತಾನೆ. ಅದನ್ನು ಮಾನವರು ಹಾಗೂ ವಿತ್ತಿಕರು ಎನ್ನಬಹುದು.
ಮನುಷ್ಯನ ನಿಲುವು ಆ ಕ್ಷಣದಲ್ಲಿ ಲಭ್ಯವಿರುವ ಮಾಹಿತಿಯನ್ನು ಅವಲಂಬಿಸಿರುತ್ತದೆ. ಹಾಗಾಗಿ ಅವನ ಚಿಂತನೆ ಯಾವಾಗಲೂ ಸುಸಂಗತವಾಗಿರುವುದಕ್ಕೆ ಸಾಧ್ಯವಿಲ್ಲ. ಜೊತೆಗೆ ಅವನು ವಿತ್ತಿಕನಂತೆ ತರ್ಕಬದ್ಧವಾಗಿಯೂ ಇರುವುದಿಲ್ಲ. ಮಾನವರು ಯಾವಾಗಲೂ ಸ್ವಾರ್ಥಿಗಳಾಗಿರುವುದಿಲ್ಲ. ಎಷ್ಟೋ ಸಲ ತುಂಬಾ ಉದಾರಿಗಳಾಗಿರುತ್ತಾರೆ, ತಮ್ಮ ಜೊತೆಯವರಿಗೆ ನೆರವು ನೀಡುವುದಕ್ಕೂ ಉತ್ಸುಕರಾಗಿರುತ್ತಾರೆ. ನಾಳೆ ಏನಾಗುತ್ತದೆ ಎನ್ನುವುದು ಕೂಡ ಹೆಚ್ಚು ಸಲ ಅವರಿಗೆ ತಿಳಿದಿರುವುದಿಲ್ಲ. ಇದು, ಒಬ್ಬ ಮನೋವಿಜ್ಞಾನಿ ಮನುಷ್ಯನನ್ನು ಗ್ರಹಿಸಿಕೊಳ್ಳುವ ಕ್ರಮ. ಎಮಸ್ ಟ್ರಾವರ್‌ಸ್ಕಿ ಇಸ್ರೇಲಿನ ಒಬ್ಬ ಪ್ರಖ್ಯಾತ ವರ್ತನ ಅರ್ಥಶಾಸ್ತ್ರಜ್ಞ. ಅವನು ಒಮ್ಮೆ ಒಂದು ಪಾರ್ಟಿಯಲ್ಲಿ ಮೈಕೇಲ್ ಜಾನ್ಸನ್ ಅನ್ನೋ ಅಮೇರಿಕೆಯ ಪ್ರಖ್ಯಾತ ಅರ್ಥಶಾಸ್ತ್ರಜ್ಞನನ್ನು ಅವನ ಹೆಂಡತಿ ಮತ್ತು ಇತರ ಎಲ್ಲಾ ಪರಿಚಿತರ ಬಗ್ಗೆ ಕೇಳುತ್ತಾ ಹೋಗುತ್ತಾನೆ. ಮೈಕೇಲ್ ಎಲ್ಲರ ದಡ್ಡತನವನ್ನು ವರ್ಣರಂಜಿತವಾಗಿ ವಿವರಿಸುತ್ತಾ ಹೋಗುತ್ತಾನೆ. ಅದನ್ನೆಲ್ಲಾ ಕೇಳಿ ಎಮೋಸ್ ಮೈಕ್, ನಿನ್ನ ಸುತ್ತಮುತ್ತ ಇರೋವರೆಲ್ಲಾ ಬರಿ ದಡ್ಡರೇ ಎನ್ನುತ್ತೀಯೆ. ಆದರೆ ನಿನ್ನ ಆರ್ಥಿಕ ಮಾಡೆಲ್ಲುಗಳಲ್ಲಿನ ಜನರೆಲ್ಲಾ ತುಂಬಾ ಬುದ್ದಿವಂತರು, ವಿವೇಚನಾಶೀಲರು. ಅದು ಹೇಗೆ ಸಾಧ್ಯ? ಎಂದು ಲೇವಡಿ ಮಾಡುತ್ತಾನೆ.
ಇದರರ್ಥ ಸಾಂಪ್ರದಾಯಿಕ ಅರ್ಥಶಾಸ್ತ್ರ ಹೇಳುವಂತೆ ಮನುಷ್ಯರು ವಿವೇಚನಾಶೀಲರಲ್ಲ. ಅವರೆಲ್ಲಾ ಸದಾ ತರ್ಕಬದ್ಧವಾಗಿ ನಡೆದುಕೊಳ್ಳುವುದಿಲ್ಲ. ನಮ್ಮ ಮುಂದೆ ಎರಡು ಆಯ್ಕೆಗಳಿದ್ದರೆ ನಾವು ಹೆಚ್ಚಾಗಿ ತಪ್ಪು ಆಯ್ಕೆಯನ್ನೇ ಮಾಡಿಕೊಳ್ಳುತ್ತೇವೆ. ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಗೊತ್ತಿದ್ದರೂ ಹಸಿವಾದಾಗ ಬರ್ಗರ್, ಚಿಪ್ಸ್ ಇಂಥದ್ದನ್ನೇ ಕೊಳ್ಳುತ್ತೇವೆ. ಯಾವುದು ಸುಲಭವೋ ಅದನ್ನು ಎಲ್ಲರೂ ಆರಿಸಿಕೊಳ್ಳುತ್ತಾರೆ. ಅವರ ಆಯ್ಕೆ ಒಳ್ಳೆಯದು, ಹೆಚ್ಚು ಉಪಯುಕ್ತವಾದದ್ದು, ಜಾಣತನದ್ದು ಆಗಬೇಕಾಗಿಲ್ಲ.
ಅರ್ಥಶಾಸ್ತ್ರದ ಸಿದ್ಧಾಂತಗಳು ನಿರೀಕ್ಷಿಸುವ ರೀತಿಯಲ್ಲಿ ಜನ ವರ್ತಿಸುವುದಿಲ್ಲ. ಆ ಸಿದ್ಧಾಂತಗಳಲ್ಲಿ ಬರುವ ಮನುಷ್ಯ ನಿಜಜೀವನದಲ್ಲಿ ಸಿಗೋದು ಕಷ್ಟ. ಅದಕ್ಕೆ ಥೇಲರ್ ಆ ವಿತ್ತಿಕರನ್ನು ಕಾಲ್ಪನಿಕ ವ್ಯಕ್ತಿಗಳು ಅಂತಲೇ ಕರೆಯುತ್ತಾನೆ. ವಿತ್ತಿಕರನ್ನು ಹೀಗೆ ವರ್ಣಿಸಬಹುದು:
೧. ಅವರ ಆಯ್ಕೆಗಳು ಸ್ಪಷ್ಟವಾಗಿ, ನಿಖರವಾಗಿರುತ್ತವೆ. ಅವರದು ಯಾವುದೇ ಪೂರ್ವಗ್ರಹಗಳಿಲ್ಲದ ನಂಬಿಕೆ ಹಾಗೂ ನಿರೀಕ್ಷೆಗಳು.
೨. ಇಂತಹ ನಂಬಿಕೆ ಹಾಗೂ ನಿರೀಕ್ಷೆಗಳನ್ನು ಆಧರಿಸಿ, ತಮಗೆ ಗರಿಷ್ಠ ಲಾಭತರುವ ಆಯ್ಕೆಗಳನ್ನೇ ಅವರು ಮಾಡಿಕೊಳ್ಳುತ್ತಾರೆ ಮತ್ತು ಎಲ್ಲಾ ಆಯ್ಕೆಗಳನ್ನೂ ಅಳೆದುನೋಡಿ ಆರಿಸಿಕೊಳ್ಳಲು ಬೇಕಾದ ಅಸಾಧ್ಯ ಗ್ರಹಣಶಕ್ತಿ ಅವರಿಗಿರುತ್ತದೆ.
೩. ಅವರಿಗೆ ಸ್ವ-ಹಿತವೇ ಪ್ರಧಾನ.
ಆದರೆ ಈ ಗ್ರಹಿಕೆಗಳು ನಿಜವಲ್ಲ. ಉದಾಹಣೆಗೆ ಜನ ಗರಿಷ್ಠ ಉಪಯುಕ್ತತೆ ಇರುವುದನ್ನೇ ಆರಿಸಿಕೊಳ್ಳುತ್ತಾರೆ ಎನ್ನುವ ನಂಬಿಕೆಯನ್ನೇ ತೆಗೆದುಕೊಳ್ಳಿ. ಆಯ್ಕೆ ಅನ್ನುವುದು ಅಷ್ಟು ಸಲೀಸಾಗಿರುವುದಿಲ್ಲ. ತುಂಬಾ ಸರಳವಾದ ಉದಾಹರಣೆಯನ್ನೇ ನೋಡಿ, ಒಂದು ಸಾಮಾನು ತೆಗೆದುಕೊಳ್ಳುವುದಕ್ಕೆ ಅಂಗಡಿಗೆ ಹೋದರೆ ಅಲ್ಲಿರುವ ಕೆಲವೇ ಪರ್ಯಾಯಗಳಲ್ಲಿ ಯಾವುದು ಅತ್ಯುತ್ತಮ ಎನ್ನುವುದನ್ನು ನಿರ್ಧರಿಸುವುದು ಕಷ್ಟ. ಅಂತಹುದರಲ್ಲಿ ಒಂದು ವೃತ್ತಿಯನ್ನೋ, ಜೊತೆಗಾರನನ್ನೋ ಆರಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಅಷ್ಟೇ ಅಲ್ಲ ಅಂತಹ ಆಯ್ಕೆಯನ್ನು ಮಾಡಿಕೊಳ್ಳುವುದಕ್ಕೆ ನಿಮಗೆ ಬಲವಾದ ಇಚ್ಛಾಶಕ್ತಿ ಇರಬೇಕು. ತಕ್ಷಣದ ಚಪಲಕ್ಕೆ ಬಲಿಯಾಗಬಾರದು. ಇವೆಲ್ಲಾ ಸುಮ್ಮನೆ ನಂಬಿಕೊಂಡುಬಿಡುವ ಸಂಗತಿಗಳಲ್ಲ. ಅರ್ಥಶಾಸ್ತ್ರಜ್ಞರು ಇವನ್ನೆಲ್ಲಾ ಅಪ್ರಸ್ತುತ ಅಂಶಗಳು ಎಂದು ಭಾವಿಸಿ (Suಠಿಠಿoseಜಟಥಿ iಡಿಡಿeಟeveಟಿಣ ಜಿಚಿಛಿಣoಡಿs) ನಿರ್ಲಕ್ಷಿಸುತ್ತಾರೆ. ಎಷ್ಟೋ ಬಾರಿ ಇಂತಹ ’ಅಪ್ರಸ್ತುತ ಅಂಶಗಳೇ’ ನಮ್ಮ ನಿರ್ಧಾರಗಳಲ್ಲಿ ಮುಖ್ಯವಾಗಿಬಿಟ್ಟಿರುತ್ತವೆ.
ನಮ್ಮ ಸಾಧರಣ ಮನುಷ್ಯರು ವಿತ್ತಿಕರಂತಲ್ಲ. ಅವರು ಐನ್‌ಸ್ಟೀನ್ ಹಾಗೆ ಬುದ್ಧಿವಂತರಲ್ಲ. ಬೌದ್ಧ ಭಿಕ್ಕುಗಳಂತೆ ಆತ್ಮನಿಗ್ರಹಿಗಳಲ್ಲ. ಅವರಿಗೆ ಭಾವನೆಗಳಿರುತ್ತವೆ. ಭವಿಷ್ಯದ ಬಗ್ಗೆ ಅವರು ಅಷ್ಟಾಗಿ ಯೋಚಿಸುವುದಿಲ್ಲ. ಅವರು ಅರ್ಥಶಾಸ್ತ್ರಜ್ಞರು ಬಯಸುವ ಯಂತ್ರಮಾನವರಲ್ಲ. ಆರ್ಥಶಾಸ್ತ್ರದೊಳಕ್ಕೆ ಇಂತಹ ಸಾಧಾರಣ ’ಮಾನವ’ರನ್ನೂ ಸೇರಿಸಿಕೊಳ್ಳಬೇಕು. ಆಗ ಆರ್ಥಿಕ ಸಿದ್ದಾಂತಗಳನ್ನು ಹೆಚ್ಚು ಕರಾರುವಾಕ್ಕಾಗಿ ರೂಪಿಸುವುದಕ್ಕೆ ಸಾಧ್ಯವಾಗಬಹುದು. ಅರ್ಥಶಾಸ್ತ್ರಕ್ಕೆ ಉಳಿದ ಸಮಾಜವಿಜ್ಞಾನಗಳ ಕಾಣ್ಕೆಗಳನ್ನು ಬಳಸಿಕೊಳ್ಳುವುದಕ್ಕೆ ಆಗಬೇಕು. ಆಗ ಹೆಚ್ಚು ಉತ್ತಮವಾದ ಆರ್ಥಿಕ ಮಾಡೆಲ್ಲುಗಳನ್ನು ನಿರ್ಮಿಸುವುದಕ್ಕೆ ಸಾಧ್ಯ. ಇದು ವರ್ತನ ಅರ್ಥಶಾಸ್ತ್ರದ ನಿಲುವು.
ನಮ್ಮ ನಿರ್ಧಾರವನ್ನು ಮೂರು ಅಂಶಗಳು ಪ್ರಧಾನವಾಗಿ ನಿರ್ಧರಿಸುತ್ತವೆ. ಒಂದು ನಮ್ಮ ಗ್ರಹಣಶಕ್ತಿ. ಎರಡನೆಯದಾಗಿ ನಮ್ಮ ಆತ್ಮಸ್ಥೈರ್ಯ. ಮೂರು ನಮ್ಮ ಸಾಮಾಜಿಕ ಆದ್ಯತೆಗಳು. ಅರ್ಥಶಾಸ್ತ್ರವು ಅಪ್ರಸ್ತುತ ಎಂದು ಭಾವಿಸಿರುವ ಇಂತಹ ಅಂಶಗಳಿಗೆ ವರ್ತನ ಅರ್ಥಶಾಸ್ತ್ರವು ಮಹತ್ವ ನೀಡುತ್ತಾ, ಮನುಷ್ಯನ ವರ್ತನೆಯನ್ನು ಅರ್ಥಶಾಸ್ತ್ರದ ಕೇಂದ್ರವನ್ನಾಗಿ ಮಾಡಿಕೊಂಡಿದೆ. ಥೇಲರ್ ಹೇಳುವಂತೆ ಆರ್ಥಿಕ ಚಟುವಟಿಕೆಗಳ ನಿಜವಾದ ಕರ್ತೃಗಳು ಮನುಷ್ಯರು. ಈ ಸತ್ಯವನ್ನು ಆರ್ಥಿಕ ಮಾದರಿಗಳು ಅಳವಡಿಸಿಕೊಳ್ಳಬೇಕು.” ಹೀಗೆ ಮಾಡುವುದರಿಂದ ಸಾರ್ವಜನಿಕ ನೀತಿಯನ್ನು ಕುರಿತ ನಮ್ಮ ಗ್ರಹಿಕೆಗಳು ಸುಧಾರಿಸುತ್ತವೆ.
ಮನಶ್ಶಾಸ್ತ್ರ ಹಾಗೂ ಅರ್ಥಶಾಸ್ತ್ರದ ನಡುವಿನ ಕೊಡುಕೊಳ್ಳವಿಕೆಯಿಂದ ಮನೋವಿಜ್ಞಾನದ ಹಲವು ಅಂಶಗಳು ಅರ್ಥಶಾಸ್ತ್ರದೊಳಕ್ಕೆ ಬಂದಿವೆ. ಹಾಗೇ ಅರ್ಥಶಾಸ್ತ್ರದ ಎಷ್ಟೋ ಅಂಶಗಳು ಮನಶ್ಶಾಸ್ತ್ರದ ವ್ಯಾಪ್ತಿಯನ್ನೂ ವಿಸ್ತರಿಸಿವೆ. ಇಲ್ಲಿ ಕೇವಲ ಅರ್ಥಶಾಸ್ತ್ರದ ಮೇಲೆ ಆಗಿರುವ ಪ್ರಭಾವವನ್ನಷ್ಟೇ ನೋಡುತ್ತಿದ್ದೇವೆ. ಈ ಕೊಡುಕೊಳ್ಳ್ಳುವಿಕೆಯಿಂದ ಅರ್ಥಶಾಸ್ತ್ರಕ್ಕೆ ಸಂಕುಚಿತ ಹೊಮೋಎಕನಾಮಿಕ್ಸ್ ಪರಿಕಲ್ಪನೆಯಿಂದ ಹೊರಬರುವುದಕ್ಕೆ ಸಾಧ್ಯವಾಗಿದೆ ಹಾಗೂ ಹಲವು ಅಧ್ಯಯನ ವಿಧಾನಗಳು ಅರ್ಥಶಾಸ್ತ್ರಕ್ಕೆ ದಕ್ಕಿವೆ. ಅದು ಹೆಚ್ಚೆಚ್ಚು ಪ್ರಾಯೋಗಿಕ ವಿಜ್ಞಾನವೂ ಆಗುವುದಕ್ಕೆ ಸಾಧ್ಯವಾಗಿದೆ.
ನಿಜ ಹೇಳಬೇಕೆಂದರೆ ವರ್ತನ ಅರ್ಥಶಾಸ್ತ್ರ ಹೊಸದೇನೂ ಅಲ್ಲ. ಅದರ ಸ್ಪಷ್ಟ ಕಲ್ಪನೆಗಳನ್ನು ಅರ್ಥಶಾಸ್ತ್ರದ ಪಿತಾಮಹ ಆಡಂ ಸ್ಮಿತ್‌ನಲ್ಲೇ ಕಾಣಬಹುದು. ಆದರೆ ಇತ್ತೀಚಿಗೆ ಗಣಿತಶಾಸ್ತ್ರ ಅರ್ಥಶಾಸ್ತ್ರವನ್ನು ವ್ಯಾಪಿಸಿಕೊಂಡ ಮೇಲೆ ಮಾನವನನ್ನು ಆಚೆಗೆ ಇಡಲಾಗಿದೆ. ಮಾನವನನ್ನು ಅರ್ಥಶಾಸ್ತ್ರದ ಅಧ್ಯಯನದೊಳಕ್ಕೆ ಮತ್ತೆ ಸೇರಿಸಿಕೊಳ್ಳೋಣ ಅನ್ನೋದು ವರ್ತನ ಅರ್ಥಶಾಸ್ತ್ರಜ್ಞರ ಮನವಿ ಅಷ್ಟೆ.
’ಎಲ್ಲಾ ಅರ್ಥಶಾಸ್ತ್ರಜ್ಞರೂ ಮುಕ್ತಮನಸ್ಸಿನಿಂದ ಯೋಚಿಸಲಾರಂಭಿಸಿ, ಯಾವುದನ್ನೂ ಅಪ್ರಸ್ತುತ ಎಂದು ತಳ್ಳಿಹಾಕದೆ, ತಮ್ಮ ಅಧ್ಯಯನಗಳಲ್ಲಿ ಸೇರಿಸಿಕೊಳ್ಳಲು ಪ್ರಾರಂಭಿಸಿದರೆ ವರ್ತನ ಅರ್ಥಶಾಸ್ತ್ರ ಎಂಬ ಪ್ರತ್ಯೇಕ ಶಾಖೆ ಇರುವುದಿಲ್ಲ ಅಥವಾ ಪ್ರತಿಯೊಂದು ಅರ್ಥಶಾಸ್ತ್ರವೂ ವರ್ತನ ಅರ್ಥಶಾಸ್ತ್ರವಾಗಿಬಿಡುತ್ತದೆ’ ಎನ್ನುವ ಥೇಲರ್ ಅವರ ಮಾತು ಅರ್ಥಪೂರ್ಣ.
ಮನಶ್ಶಾಸ್ತ್ರ ಹಾಗೂ ಅರ್ಥಶಾಸ್ತ್ರದ ನಡುವಿನ ಸಂವಾದದ ವಿವಿಧ ಮಗ್ಗುಲುಗಳನ್ನು ಪರಿಚಯಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮುಂದೆ ಮಾಡಲಾಗುತ್ತದೆ.

Recommended Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.