ಅರ್ಥ-1, ಜನವರಿ

ಇಂದು ಭಾರತದ ಆರ್ಥಿಕತೆ ಸಂಕಷ್ಟದಲ್ಲಿದೆ. ನೋಡಲು ಮನಸ್ಸಿದ್ದವರಿಗೆ ಢಾಳಾಗಿ ಕಾಣುತ್ತಿದೆ. ಅದು ದಿನದಿಂದ ದಿನಕ್ಕೆ ವಿಕೋಪಕ್ಕೆ ಹೋಗುತ್ತಿದೆ. ಜೊತೆಗೆ ಇಂದು ಭಾರತದ ಒಟ್ಟಾರೆ ವಾತಾವರಣವೂ ಹಾಳಾಗುತ್ತಿದೆ. ಹಿಂಸೆ, ದ್ವೇಷ, ಒಡಕು ಒಂದೇ ಸಮ ಹರಡುತ್ತಿದೆ. ಪರಸ್ಪರ ವಿಶ್ವಾಸ ನಾಶವಾಗುತ್ತಿದೆÉ. ಜಾತಿ, ಧರ್ಮದ ಕಾರಣಕ್ಕೆ ಒಬ್ಬರನ್ನೊಬ್ಬರು ದ್ವೇಷಿಸುತ್ತಿದ್ದೇವೆ. ಭಿನ್ನಾಭಿಪ್ರಾಯಗಳನ್ನು ಸಹಿಸಿಕೊಳ್ಳುವುದಕ್ಕೆ ಸಾಧ್ಯವಾಗದ ಸ್ಥಿತಿಯಲ್ಲಿದ್ದೇವೆ. ಚರ್ಚೆ, ಸಂವಾದದ ಬದಲು ಹಿಂಸೆ, ಪ್ರತಿಕಾರದ ದಾರಿ ಹಿಡಿದಿದ್ದೇವೆ. ಇದು ನಮ್ಮ ಆರ್ಥಿಕ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತಿದೆ. ಮನಸ್ಸು ಒಡೆಯುವುದು ಓಟಿನ ರಾಜಕೀಯದ ದೃಷ್ಟಿಯಿಂದ ಒಳ್ಳೆಯದಿರಬಹುದು. ಆದರೆ ನೈತಿಕವಾಗಿ, ಆರ್ಥಿಕವಾಗಿ, ದೇಶದ ಒಳಿತಿನ ದೃಷ್ಟಿಯಿಂದ ಕೆಟ್ಟದ್ದು. ನಮ್ಮ ಹಿರಿಯರು ಬಯಸಿದ್ದ ಪ್ರೀತಿಯ, ಸುಭದ್ರ ದೇಶದ ಕನಸು ಆದರ್ಶ ನಮ್ಮದಾಗಬೇಕು. ಅದಿಲ್ಲದೆ ಆರ್ಥಿಕತೆಯು ಸುಧಾರಿಸುವುದಿಲ್ಲ. ಇನ್ನಷ್ಟು ಹಾಳಾಗುತ್ತದೆ. ಇದು ಇಂದು ಬಹುತೇಕ ಅರ್ಥಿಕತಜ್ಞರೂ ಆಡುತ್ತಿರುವ ಮಾತು.
ಇಂದು ನಮ್ಮನ್ನು ಕಾಡುತ್ತಿರುವ ಆರ್ಥಿಕತೆಯ ಸಮಸ್ಯೆಯನ್ನು ಕುರಿತು ಗಂಭೀರವಾಗಿ ಚಿಂತಿಸಬೇಕು. ಉದ್ಯೋಗ, ಆಹಾರ, ಆರೋಗ್ಯ, ಶಿಕ್ಷಣ ಎಲ್ಲರಿಗೂ ದಕ್ಕಬೇಕು.
ಈ ಹಿನ್ನಲೆಯಲ್ಲಿ ಹಲವು ತಜ್ಞರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅವನ್ನು ಕೇಳಿಸಿಕೊಳ್ಳೋಣ ಅನ್ನುವ ಉದ್ದೇಶದಿಂದ ಕೆಲವನ್ನು ಅನುವಾದಿಸಿ, ಸಂಗ್ರಹಿಸಿ ಆಗಾಗ ನಿಮ್ಮ ಮುಂದೆ ಇಡುತ್ತಿದ್ದೇವೆ. ಇದೊಂದು ನಿಯತಕಾಲಿಕವಲ್ಲ. ಆದರೂ ಎರಡು ತಿಂಗಳಿಗೊಮ್ಮೆ ಅಂದುಕೊಂಡಿದ್ದೇವೆ. ಇಲ್ಲಿ ಇರುವ ಲೇಖನಗಳಲ್ಲಿ ಕೆಲವು ಈಗಾಗಲೇ ಹಲವು ಪತ್ರಿಕೆಯಲ್ಲಿ ಪ್ರಕಟವಾಗಿವೆ. ಎಲ್ಲವೂ ಹೊಸದಾಗೇ ಇರಬೇಕೆನ್ನುವ ಅಭಿಪ್ರಾಯ ನಮ್ಮದಲ್ಲ. ಒಂದೆಡೆ ಇದ್ದರೆ ಚರ್ಚೆಗೆ, ಓದಿಗೆ ಅನುಕೂಲ ಅಂತ ಹೀಗೆ ಮಾಡುತ್ತಿದ್ದೇವೆÉ. ನಿಮ್ಮ ಅಭಿಪ್ರಾಯ ತಿಳಿಸಿ, ನಿಮ್ಮ ಗಮನಕ್ಕೆ ಬಂದ ಒಳ್ಳೆಯ ಲೇಖನಗಳನ್ನು ನಮ್ಮ ಗಮನಕ್ಕೂ ತನ್ನಿ. ನಿಮ್ಮ ಗೆಳೆಯರೊಂದಿಗೂ ಹಂಚಿಕೊಳ್ಳಿ. ಇದು ಪಿಡಿಎಫ್ ರೂಪದಲ್ಲಿ ನಿಮಗೆ ಕಳುಹಿಸುತ್ತೇನೆ. ಇಲ್ಲಿಯ ಲೇಖನಗಳನ್ನು ಸದ್ಭಳಕೆ ಮಾಡಿಕೊಳ್ಳುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಗಮನಕ್ಕೆ ತಂದರೆ ಸಂತೋಷವಾಗುತ್ತದೆ
ಟಿ ಎಸ್ ವೇಣುಗೋಪಾಲ್
statsvenugopal@gmail.com