ಅಸಮಾನತೆಯ ಹೊಸ ರೂಪಗಳು

 In ECONOMY

ಜಗತ್ತು ಸಮಾನತೆಯ ಕಡೆ ಸಾಗುತ್ತಿದೆ, ಹೊಸ ತಂತ್ರಜ್ಞಾನ, ಜಾಗತೀಕರಣದಿಂದಾಗಿ ನಾವು ಹೆಚ್ಚು ಸಮಾನರಾಗುತ್ತಿದ್ದೇವೆ ಇತ್ಯಾದಿ ಮಾತುಗಳನ್ನು ಕೇಳುತ್ತಲೇ ಇದ್ದೇವೆ. ಅದೇ ರೀತಿಯಲ್ಲಿ ಸಂಪತ್ತು ಕೆಲವೇ ಜನರ ಕೈಯಲ್ಲಿ ಕೇಂದ್ರೀಕೃತವಾಗುತ್ತಿದೆ ಅಂತ ಹಲವಾರು ಅಧ್ಯಯನಗಳು ಹೇಳುತ್ತಿವೆ. ಪಿಕೆಟ್ಟಿಯಂತಹವರು ಇದನ್ನು ಕುರಿತೇ ತೀರಾ ಗಂಭೀರವಾದ ಸಂಶೋಧನೆಯಲ್ಲಿ ತೊಡಗಿದ್ದಾರೆ. ಕೆಲವೇ ಶ್ರೀಮಂತರ ಕೈಯಲ್ಲಿ ಜಗತ್ತಿನ ಅರ್ಧದಷ್ಟು ಸಂಪತ್ತು ಸೇರಿಕೊಂಡಿದೆ. ಅಷ್ಟೇ ಅಲ್ಲ ಅದರ ಪ್ರಮಾಣ ಹೆಚ್ಚಾಗುತ್ತಾ ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಹೆಚ್ಚುತ್ತಿದೆ ಅಂತ ಅವರ ಅಧ್ಯಯನಗಳು ಹೇಳುತ್ತಿವೆ. ಇದು ಸಾಲದು ಎಂಬಂತೆ ತಂತ್ರಜ್ಞಾನದ ಬೆಳೆವಣಿಗೆಯಿಂದ ಅಸಮಾನತೆ ಭೀಕರ ಸ್ವರೂಪ ತಾಳುವ ಸಾಧ್ಯತೆಯನ್ನು ಕುರಿತು ನೋವಾ ಹರಾರಿ ಅಂತಹವರ ಬರಹಗಳು ನಮ್ಮನ್ನು ಎಚ್ಚರಿಸುತ್ತಿವೆ.
ಸಮಾನತೆ ಅನ್ನುವುದು ಲಾಗಾಯ್ತಿನಿಂದ ನಮ್ಮ ಮೌಲ್ಯವಾಗಿರಲಿಲ್ಲ ಅನ್ನುವುದು ವಾಸ್ತವ. ಒಂದು ಕಾಲದಲ್ಲಿ ಅಸಮಾನತೆ ಸ್ವಾಭಾವಿಕ ಅಷ್ಟೇ ಅಲ್ಲ, ಅದು ಅವಶ್ಯಕ ಅಂತಲೂ ಜನ ಒಪ್ಪಿಕೊಂಡಿದ್ದರು. ಸಮಾನತೆ ಅನ್ನುವುದು ಮಾನವ ಸಮಾಜದಲ್ಲಿ ಗೊಂದಲವನ್ನಷ್ಟೇ ಸೃಷ್ಟಿಸಬಲ್ಲದು ಎಂಬ ನಂಬಿಕೆ ಬಲವಾಗಿತ್ತು. ಕೈಗಾರಿಕೀಕರಣದ ನಂತರ ಮನುಷ್ಯ ವಿಶ್ವದ ಕೇಂದ್ರವಾದ. ಕೆಲಸಕ್ಕೆ ಆರೋಗ್ಯವಂತ ಜನ ಬೇಕಾದರು. ಅವರ ಶಿಕ್ಷಣ, ಆರೋಗ್ಯ ಇತ್ಯಾದಿಗಳ ಕಡೆ ಸರ್ಕಾರ ಗಮನ ಕೊಡಲಾರಂಭಿಸಿತು. ಜಪಾನಿನಲ್ಲಿ ೧೯೧೪ರಲ್ಲಿ ಸಿರಿವಂತರು ಸಾಮಾನ್ಯರಿಗಾಗಿ ಆಸ್ಪತ್ರೆಗಳನ್ನು ನಿರ್ಮಿಸಿದರು, ಕೊಳಚೆ ಪ್ರದೇಶಗಳಲ್ಲಿ ಚರಂಡಿಗಳನ್ನು ನಿರ್ಮಿಸಿದರು. ಜಪಾನ್ ಒಂದು ಪ್ರಬಲ ರಾಷ್ಟ್ರವಾಗಿ ರೂಪುಗೊಳ್ಳಬೇಕಾದರೆ ಅವರಿಗೆ ಲಕ್ಷಾಂತರ ಆರೋಗ್ಯವಂತ ಸೈನಿಕರು, ಕೆಲಸಗಾರರು ಅವಶ್ಯಕತೆ ಇತ್ತು. ಜೊತೆಗೆ ಅದು ಕಮ್ಯುನಿಸಂ, ಉದಾರವಾದ ಇತ್ಯಾದಿ ಚಿಂತನೆಗಳು ಹುಟ್ಟಿಕೊಂಡ ಕಾಲ. ಬಹುಶಃ ಇವೆಲ್ಲಾ ಒಟ್ಟಾಗಿ ಸೇರಿಕೊಂಡು ಸಮಾನತೆ ಔಚಿತ್ಯಪೂರ್ಣ ಮೌಲ್ಯವಾಗಿ ಕಾಣಿಸತೊಡಗಿತು. ಇಪ್ಪತ್ತನೆಯ ಶತಮಾನದಲ್ಲಿ ಅಸಮಾನತೆಯನ್ನು ಕಡಿಮೆಗೊಳಿಸುವ ಪ್ರಯತ್ನಗಳು, ಚಿಂತನೆಗಳು ಪ್ರಮುಖವಾಗಿ ಕಾಣಿಸಿಕೊಳ್ಳತೊಡಗಿದವು. ಆಗಿನ ಅತಿದೊಡ್ಡ ವೈದ್ಯಕೀಯ ಸಾಧನೆ ಅಂದರೆ ಸಾಮೂಹಿಕ ನೈರ್ಮಲ್ಯ ಸೌಲಭ್ಯ, ಸಾಮೂಹಿಕ ಲಸಿಕೆಗಳು, ಸೋಂಕು ಪಿಡುಗುಗಳ ನಿರ್ಮೂಲನ, ಇತ್ಯಾದಿ. ಕ್ರಮೇಣ ಜಾಗತೀಕರಣದಿಂದ ಭಾರತದ ಕೊಳಚೆಪ್ರದೇಶದಲ್ಲಿ ವಾಸಿಸುತ್ತಿರುವವನಿಗೂ ಕೆನಡಾ ಹಾಗೂ ಫಿನ್‌ಲ್ಯಾಂಡಿನ ಜನರಿಗೆ ದೊರಕುತ್ತಿರುವ ಸೌಲಭ್ಯಗಳು ಸಿಗುತ್ತದೆ ಇತ್ಯಾದಿ ಕನಸುಗಳು ಮೂಡತೊಡಗಿದವು. ಈ ಭರವಸೆಯನ್ನು ಹೊತ್ತುಕೊಂಡೇ ಒಂದು ಇಡೀ ಪೀಳಿಗೆ ಬೆಳೆಯಿತು. ಆದರೆ ಅದು ಆಗಲಿಲ್ಲ. ಅಷ್ಟೇ ಅಲ್ಲ ಅಸಮಾನತೆ ಇನ್ನೂ ತೀವ್ರವಾಗಬಹುದು ಅನ್ನುವ ಆತಂಕ ನಮ್ಮನ್ನು ಕಾಡುತ್ತಿದೆ.
ತಂತ್ರಜ್ಞಾನದಲ್ಲಿ ಆಗುತ್ತಿರುವ ಬೆಳೆವಣಿಗೆಯಿಂದ ಆರ್ಥಿಕ ಅಸಮಾನತೆಗಿಂತಲೂ ಹೆಚ್ಚಿನ, ಹೊಸರೀತಿಯ ಅಸಮಾನತೆಯ ಸಾಧ್ಯತೆಯ ಬಗ್ಗೆ ಹರಾರಿಯವರು ತಮ್ಮ ಬರಹಗಳ ಮೂಲಕ ನಮ್ಮನ್ನು ಎಚ್ಚರಿಸುತ್ತಿದ್ದಾರೆ. ಇಂದು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ – ಕೃತಕ ಬುದ್ದಿಮತ್ತೆಯ(ಎಐ) ಕ್ಷೇತ್ರದಲ್ಲಿ ಅಪಾರ ಸಂಶೋಧನೆಯಾಗುತ್ತಿದೆ. ಇನ್ನೊಂದು ಕಡೆ ಜೈವಿಕ ತಂತ್ರಜ್ಞಾನದಲ್ಲೂ ಅಪಾರ ಆವಿಷ್ಕಾರಗಳು ನಡೆದಿವೆ. ಇವೆರಡು ಸೇರಿ ತಂತ್ರಜ್ಞಾನ ಕ್ಷೇತ್ರದಲ್ಲಿ ಒಂದು ದೊಡ್ಡ ಕ್ರಾಂತಿಯೇ ಆಗುತ್ತಿದೆ. ಮನುಷ್ಯನ ಕೆಲಸವನ್ನೆಲ್ಲಾ ಈಗ ರೋಬೋಟುಗಳು ಮಾಡ ಹೊರಟಿವೆ. ಮನುಷ್ಯನ ಕೆಲಸವಿಲ್ಲದಂತಾಗುತ್ತಿದ್ದಾನೆ. ಮನುಷ್ಯನಿಗೆ ಎರಡು ರೀತಿಯ ಸಾಮರ್ಥ್ಯಗಳಿವೆ ಎನ್ನಬಹುದು. ಒಂದು ದೈಹಿಕವಾದದ್ದು, ಇನ್ನೊಂದು ಗ್ರಹಿಕೆಗೆ, ಬುದ್ಧಿಮತ್ತೆಗೆ ಸಂಬಂಧಿಸಿದ್ದು. ಹಿಂದೆ ಯಂತ್ರಗಳು ಮನುಷ್ಯನ ದೈಹಿಕ ಸಾಮರ್ಥ್ಯಕ್ಕೆ ಸವಾಲಾಗಿದ್ದವು. ಅವು ಮನುಷ್ಯನೊಂದಿಗೆ ಸ್ಪರ್ಧಿಸುತ್ತಿದ್ದವು. ದೈಹಿಕ ಕೆಲಸಗಳಿಗಾಗಿ ಯಂತ್ರಗಳಿಗೆ ಶರಣಾಗಿದ್ದ ಮನುಷ್ಯ, ಹಾಗಾಗಿ ಕೃಷಿ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ಕೆಲಸಗಳು ಯಾಂತ್ರೀಕರಣಗೊಂಡಾಗ ಮನುಷ್ಯ ಸೇವಾ ಕ್ಷೇತ್ರದ ಕಡೆಗೆ ಬಂದ. ಆದರೆ ಬುದ್ಧಿ ಮತ್ತು ಗ್ರಹಣಶಕ್ತಿಗೆ ಸಂಬಂಧಿಸಿದ ಕೆಲಸಗಳನ್ನು ತಾನೇ ನಿರ್ವಹಿಸುತ್ತಿದ್ದ. ಅಲ್ಲಿಗೆ ಯಂತ್ರಗಳು ಕಾಲಿಡುವುದಿಲ್ಲ ಅನ್ನುವ ಭ್ರಮೆಯಲ್ಲಿದ್ದ.
ಆದರೆ ಇಂದು ಕೃತಕ ಬುದ್ಧಿಮತ್ತೆ(ಎಐ) ಹಾಗೂ ಜೈವಿಕ ತಂತ್ರಜ್ಞಾನದಲ್ಲಿ ಆಗಿರುವ ಸಂಶೋಧನೆಯಿಂದ ಮನುಷ್ಯನ ಬೌದ್ಧಿಕ ಕ್ರಿಯೆಗಳೆಲ್ಲಾ ಕೇವಲ ಕೆಲವು ಅಲ್ಗಾರಿದೆಮ್‌ಗಳು – ಸೂತ್ರಗಳು ಅಂತಾಗಿಬಿಟ್ಟಿದೆ. ನ್ಯೂರೋ ಸೈನ್ಸ್‌ನಲ್ಲಿ ಆಗಿರುವ ಸಂಶೋಧನೆಗಳು ಮನುಷ್ಯನ ಮೆದುಳನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ತುಂಬಾ ದೂರ ಹೋಗಿದೆ. ನಾವು ಅಂತಃಸ್ಪೂರ್ತಿ ಎಂದು ಏನನ್ನು ಕರೆಯುತ್ತಿದ್ದೆವೋ ಅವೆಲ್ಲಾ ತನಗೆ ಗೊತ್ತು ಅಂತ ಇಂದು ವಿಜ್ಞಾನ ಹೇಳುತ್ತಿದೆ. ಇಂದು ರೋಬೋ ಕಾರನ್ನು ಚಲಿಸಬಲ್ಲದು, ವೈದ್ಯನ ಬಹುತೇಕ ಕೆಲಸಗಳನ್ನು ಮಾಡಬಲ್ಲದು, ಚೆಸ್ ಆಡಬಲ್ಲದು, ಸಂಗೀತವನ್ನು ನುಡಿಸಬಲ್ಲದು. ಹೀಗೆ ಮನುಷ್ಯ ತನ್ನ ಸ್ವತ್ತು ಅಂದುಕೊಂಡಿದ್ದ ಎಷ್ಟೋ ಕೆಲಸಗಳನ್ನು ರೋಬೋಗಳು ಮಾಡುತ್ತವೆ. ಒಬ್ಬ ಸಾಧಾರಣ ಮನುಷ್ಯನಿಗಿಂತ ಸಮರ್ಪಕವಾಗಿಯೂ ಮಾಡಬಲ್ಲದು. ಹರಾರಿ ಹೇಳುವಂತೆ ಅದು ಪರಿಪೂರ್ಣವಾಗಿ ಮಾಡಬೇಕಾಗಿಲ್ಲ. ಅದು ಸಾಧ್ಯವಿಲ್ಲದೆಯೂ ಇರಬಹುದು. ಅದು ಒಬ್ಬ ಸಾಧಾರಣ ಚಾಲಕನಿಗಿಂತ ಚೆನ್ನಾಗಿ ಕಾರು ಓಡಿಸಿದರೆ ಸಾಕು, ಒಬ್ಬ ಸಾಧಾರಣ ವೈದ್ಯನಿಗಿಂತ ಚೆನ್ನಾಗಿ ನಿರ್ವಹಿಸಿದರೆ ಸಾಕು. ಅದು ಈಗ ಸಾಧ್ಯವಾಗಿದೆ.
ಜೊತೆಗೆ ಮನುಷ್ಯನಿಗಿಲ್ಲದ ಎರಡು ಸಾಮರ್ಥ್ಯಗಳು ಅವುಗಳಿಗೆ ಇದೆ. ಮನುಷ್ಯರು ಬಹುತೇಕ ಪ್ರತ್ಯೇಕ ವ್ಯಕ್ತಿಗಳಾಗಿ ಉಳಿದುಕೊಂಡುಬಿಡುತ್ತಾರೆ. ಅವರನ್ನು ಒಟ್ಟಾಗಿ ವ್ಯಕ್ತಿಗಳನ್ನು ಕನೆಕ್ಟ್ ಮಾಡುವುದಕ್ಕೆ ಸಾಧ್ಯವಿಲ್ಲ. ಆದರೆ ನೂರಾರು ರೋಬೋಟ್‌ಗಳನ್ನು ಒಂದು ನೆಟ್‌ವರ್ಕನಿಂದ ಕನೆಕ್ಟ್ ಮಾಡಿಬಿಡಬಹುದು. ನೂರಾರು ಸ್ವಯಂಚಾಲಿತ ಕಾರುಗಳನ್ನು ಒಂದು ನೆಟ್‌ವರ್ಕಿನಲ್ಲಿ ಬಂಧಿಸಬಹುದು.
ಹಾಗೆಯೇ ಮನುಷ್ಯನ ಇನ್ನೊಂದು ಸಮಸ್ಯೆಯೆಂದರೆ ಮನುಷ್ಯ ಹೊಸ ಅವಿಷ್ಕಾರಗಳಿಗೆ ಅಪ್‌ಡೇಟ್ ಆಗುವುದು ಸ್ವಲ್ಪ ಕಷ್ಟ. ಒಂದು ಹೊಸ ಆವಿಷ್ಕಾರ ಅಥವಾ ಕ್ರಮಕ್ಕೆ ಜಗತ್ತಿನ ಎಲ್ಲಾ ವೈದ್ಯರನ್ನೂ ಒಗ್ಗಿಸುವುದು ಸುಲಭವಲ್ಲ. ಆದರೆ ರೋಬೋಟ್ ವಿಷಯದಲ್ಲಿ ಅದು ಕೇವಲ ಅಲ್ಗಾರಿದೆಮ್‌ನಲ್ಲಿ ಒಂದಿಷ್ಟು ಮಾರ್ಪಾಡು ಅಷ್ಟೆ.
ರೋಬೋ ಹೆಚ್ಚಿನ ಕೆಲಸಗಳನ್ನು ಮನುಷ್ಯನಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಮಾಡಿಬಿಡಬಲ್ಲದು. ಇವೆಲ್ಲಾ ಊಹೆಗಳಲ್ಲ, ಕೆಲವೇ ವರ್ಷಗಳಲ್ಲಿ ವಾಸ್ತವವಾಗುತ್ತವೆ, ಎಷ್ಟೋ ಆಗಿವೆ. ಈಗ ಪ್ರಶ್ನೆ, ಮನುಷ್ಯ ಏನು ಮಾಡಬೇಕು? ಅವನೊಂದು ಉಪಯೋಗಕ್ಕೆ ಬಾರದ ಸಮುದಾಯವಾಗಿಬಿಡಬಹುದೆ? ಹೌದೆನ್ನುತ್ತಾನೆ ಹರಾರಿ. ಹೊಸ ಉದ್ಯೋಗಗಳು ಸೃಷ್ಟಿಯಾಗಬಲ್ಲದು. ಈಗ ಹಾಗೇ ಆಗುತ್ತಿದೆ. ಹಾಗಾಗಿ ಹರಾರಿ ಊಹಿಸಿರುವಂತೆ ಮನುಷ್ಯ ಇನ್ನೂ ಉಪಯೋಗಕ್ಕೆ ಬಾರದ ಸಮುದಾಯವಾಗಿಲ್ಲ. ಆದರೆ ಯಾವತ್ತೂ ಹೀಗೆ ಇರುತ್ತೆ ಅಂತ ಹೇಳುವುದಕ್ಕೆ ಆಗುವುದಿಲ್ಲ. ಜೊತೆಗೆ ತಂತ್ರಜ್ಞಾನ ಬದಲಾದಂತೆ ಮನುಷ್ಯ ಹೊಸ ಕೌಶಲ ಕಲಿತುಕೊಳ್ಳಬೇಕು. ಟೈಪ್‌ರೈಟರ್ ಬದಲು ಕಂಪ್ಯೂಟರ್ ಬಂದಾಗ ಮನುಷ್ಯ ಹೊಸ ಕೌಶಲ ಕಲಿಯಬೇಕಾಯಿತು. ಆದರೆ ಅದು ಅಷ್ಟು ಸುಲಭವಲ್ಲ. ಈ ಅನಿಶ್ಚಯತೆ ಮಾನಸಿಕ ಒತ್ತಡವನ್ನು ಸೃಷ್ಟಿಸಬಲ್ಲದು. ಹಾಗಾಗಿ ಹೊಸ ಕೌಶಲ ಕಲಿಯುವವರೆಗೆ ಸರ್ಕಾರ ಅವನ ಬೆಂಬಲಕ್ಕೆ ನಿಲ್ಲಬೇಕು.
ಜೈವಿಕ ತಂತ್ರಜ್ಞಾನದ ಬೆಳೆವಣಿಗೆಯ ಇನ್ನೊಂದು ಅಪಾಯವೂ ನಮ್ಮನ್ನು ಕಾಡುತ್ತಿದೆ. ಅದು ಒಂದು ಹೊಸ ರೀತಿಯ ಅಸಮಾನತೆಗೆ ನಮ್ಮನ್ನು ತಳ್ಳಬಹುದು. ಹರಾರಿಯವರು ಮಾನವ ಸಮಾಜ ಜೈವಿಕ ಜಾತಿಗಳಾಗಿ ವಿಭಜನೆಗೊಳ್ಳುವ ಅಪಾಯದ ಬಗ್ಗೆ ಎಚ್ಚರಿಸಿದ್ದಾರೆ.
ಚರಿತ್ರೆಯುದ್ದಕ್ಕೂ ಶ್ರೀಮಂತರು ಉಳಿದವರಿಗಿಂತ ತಮಗೆ ಹೆಚ್ಚಿನ ಕೌಶಲವಿದೆ, ಅದರಿಂದಾಗಿಯೇ ನಮಗೆ ಜಗತ್ತನ್ನು ಆಳುವುದಕ್ಕೆ ಸಾಧ್ಯವಾಗಿದೆ ಎಂದು ಹೇಳಿಕೊಳ್ಳುತ್ತಿದ್ದರು. ಆದರೆ ವಾಸ್ತವದಲ್ಲಿ ಆ ವಾದದಲ್ಲಿ ಹುರುಳಿರಲಿಲ್ಲ. ನಿಜವಾಗಿಯೂ ಅವರಿಗೆ ಒಬ್ಬ ಸಾಮಾನ್ಯ ಮನುಷ್ಯನಿಗಿಂತ ಹೆಚ್ಚಿನ ಬುದ್ಧಿಮತ್ತೆಯಾಗಲಿ, ಕೌಶಲವಾಗಲಿ ಇರಲಿಲ್ಲ. ಅವರಿಗೆ ಅಧಿಕಾರ ಸಾಧ್ಯವಾಗಿದ್ದು ಆರ್ಥಿಕ ಸಿರಿವಂತಿಕೆಯಿಂದಾಗಿ ಹಾಗೂ ಅದರೊಂದಿಗೆ ಅವರಿಗೆ ದಕ್ಕಿದ ಕಾನೂನು, ರಾಜಕೀಯ ಅಧಿಕಾರ ಇತ್ಯಾದಿ ಅನುಕೂಲಗಳಿಂದ.
ಆದರೆ ೨೧ನೇ ಶತಮಾನದಲ್ಲಿ ಅದು ನಿಜವಾಗುವ ಸಾಧ್ಯತೆ ಇದೆ. ಒಬ್ಬ ಶ್ರೀಮಂತ ಕೊಳಚೆ ಪ್ರದೇಶದಲ್ಲಿರುವ ಒಬ್ಬ ಸಾಮಾನ್ಯನಿಗಿಂತ ಹೆಚ್ಚು ಬುದ್ಧಿವಂತ, ಸೃಜನಶೀಲ ಹಾಗೂ ಪ್ರತಿಭಾಶಾಲಿ ಆಗುವ ಸಾಧ್ಯತೆ ಇದೆ. ಜೈವಿಕ ತಂತ್ರಜ್ಞಾನದಲ್ಲಿ ಆಗುತ್ತಿರುವ ಸಂಶೋಧನೆಗಳು ಮನುಷ್ಯನಿಗೆ ಅಂತಹ ಅವಕಾಶಗಳನ್ನು ಕಲ್ಪಿಸಬಲ್ಲದು. ಆದರೆ ಅವು ತುಂಬಾ ದುಬಾರಿಯಾಗಿರುತ್ತವೆ. ಹಾಗಾಗಿ ಜನಸಾಮಾನ್ಯರಿಗೆ ಅವು ಎಟಕುವುದಕ್ಕೆ ಸಾಧ್ಯವೇ ಇಲ್ಲ. ಈಗಲೇ ನೋಡಿ ಇಂದು ನಿಮಗೆ ಆಧುನಿಕ ಆಸ್ಪತ್ರೆಯ ಸೌಲಭ್ಯಕ್ಕೆ ಲಕ್ಷಾಂತರ ರೂಪಾಯಿಗಳು ಬೇಕು. ಶೇಕಡ ೯೦ರಷ್ಟು ಜನಕ್ಕೆ ವಾರ್ಷಿಕ ವರಮಾನ ಕೆಲವು ಸಾವಿರ ದಾಟುವುದಿಲ್ಲ. ಹೊಸ ಹೊಸದಾಗಿ ಆವಿಷ್ಕಾರಗೊಂಡ ತಂತ್ರಜ್ಞಾನ ಸ್ವಾಭಾವಿಕವಾಗಿಯೇ ಹೆಚ್ಚೆಚ್ಚು ದುಬಾರಿಯಾಗುತ್ತವೆ. ಜನರಿಂದ ದೂರವಾಗುತ್ತಾ ಹೋಗುತ್ತವೆ. ಈಗ ಔಷಧಿಗಳನ್ನು ಮೊದಲಿನಂತೆ ಖಾಯಿಲೆ ವಾಸಿಮಾಡಲು ಸಂಶೋಧಿಸುತ್ತಿಲ್ಲ. ೨೧ನೇ ಶತಮಾನದಲ್ಲಿ ಸಂಶೋಧನೆಗಳು ಆರೋಗ್ಯವಂತರನ್ನು ಮತ್ತಷ್ಟು ಉತ್ತಮಗೊಳಿಸಲು ಹೆಣಗುತ್ತಿದೆ. ಈಗ ಅವರಿಗೆ ಹೆಚ್ಚಿನ ನೆನಪು, ಹೆಚ್ಚಿನ ಬುದ್ಧಿಮತ್ತೆ, ಹೆಚ್ಚಿನ ಆಯಸ್ಸು ಬೇಕು. ಹಣದಿಂದ ಆಯಸ್ಸನ್ನು, ಬುದ್ದಿಮತ್ತೆಯನ್ನು, ಸೌಂದರ್ಯವನ್ನು ಕೊಳ್ಳುವುದಕ್ಕೆ ಸಾಧ್ಯ ಅಂತಾದರೆ ಸಿರಿವಂತರು ಕೊಳ್ಳುತ್ತಲೇ ಹೋಗುತ್ತಾರೆ. ಇದು ವಾಸ್ತವವೇ ಆಗಿಬಿಟ್ಟರೆ ಜಗತ್ತಿನ ಬಹುಪಾಲು ಸಂಪತ್ತು ಮಾತ್ರವಲ್ಲ, ಜಗತ್ತಿನ ಬಹುಪಾಲು ಸೌಂದರ್ಯ, ಸೃಜನಶೀಲತೆ ಹಾಗೂ ಆರೋಗ್ಯ ಕೇವಲ ೧%ರಷ್ಟು ಶ್ರೀಮಂತರ ಕೈಸೇರುತ್ತದೆ. ಹೊಸ ಕಂದರ ಮನುಷ್ಯನ ನಡುವೆ ಸೃಷ್ಟಿಯಾಗುತ್ತದೆ. ಇದು ಮುಚ್ಚಬಹುದಾದ ಕಂದರವಲ್ಲ!
ಜೈವಿಕ ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆಯ ಸಂಶೋಧನೆಗಳು ಒಟ್ಟಿಗೆ ಕೂಡಿಕೊಂಡು ಒಂದು ಕಡೆ ಸೂಪರ್‌ಮ್ಯಾನ್‌ಗಳ ಒಂದು ಸಣ್ಣ ಗುಂಪು ಹುಟ್ಟಿಕೊಳ್ಳುತ್ತದೆ. ಇನ್ನೊಂದು ಕಡೆ ನಿರುಪಯುಕ್ತ ಮಾನವರ ಒಂದು ದೊಡ್ಡ ಸಮೂಹ ಅವರ ಮರ್ಜಿಯಲ್ಲಿ ನಿಲ್ಲುತ್ತದೆ. ಪಾಪ ಈ ಜನ ಆರ್ಥಿಕವಾಗಿ, ರಾಜಕೀಯವಾಗಿ ನಿರುಪಯುಕ್ತರಾಗುತ್ತಾರೆ. ಆದ ಕಾರಣ ಸರ್ಕಾರಕ್ಕೂ ಇವರಿಗೆ ನೆರವಾಗುವ ತುರ್ತು ಇರುವುದಿಲ್ಲ ಅನ್ನುತ್ತಾರೆ. ಪ್ರವಾಹ ಇತ್ಯಾದಿ ನೈಸರ್ಗಿಕ ಬಿಕ್ಕಟ್ಟು ಬಂದಾಗ ಇಂತಹ ಜನ ಸಂಪೂರ್ಣ ಕೊಚ್ಚಿಹೋಗುತ್ತಾರೆ.
ಮುಂದೇನಾಗಬಹುದು, ಊಹಿಸಿಕೊಳ್ಳುತ್ತಾ ಹೋಗೋಣ. ಆ ಕೆಲವೇ ಮಂದಿ ತಮ್ಮದೇ ಕೋಟೆಗಳನ್ನು ಕಟ್ಟಿಕೊಂಡು, ನೆಮ್ಮದಿಯ ಬಾಳು ನಡೆಸುತ್ತಾ, ಡ್ರೋನುಗಳು, ರೋಬೋಗಳನ್ನು ರಕ್ಷಣೆಗೆ ಇಟ್ಟುಕೊಂಡು ನೆಮ್ಮದಿಯ ಬಾಳನ್ನು ನಡೆಸುತ್ತಾ ಇರಬಹುದು. ಬೇಡ ಹಾಗಾಗದಿರಲಿ. ಸಧ್ಯ ಇವೆಲ್ಲಾ ಊಹೆಗೆ ಮುಗಿದುಹೋಗಲಿ.
ಹಾಗಂತ ಹರಾರಿಯವರ ಆತಂಕವನ್ನು ತಳ್ಳಿಹಾಕುವುದಕ್ಕೆ ಸಾಧ್ಯವಿಲ್ಲ. ಸಾಮಾನ್ಯವಾಗಿ ವಿಜ್ಞಾನಿಗಳು, ಸಂಶೋಧಕರು ತಂತ್ರಜ್ಞಾನದ ಬೆಳವಣಿಗೆಯನ್ನು ಕುರಿತು ಬಹಳ ರಮ್ಯವಾದ ಚಿತ್ರವನ್ನು ಕಟ್ಟಿಕೊಡುತ್ತಾರೆ. ಆದರೆ ನಮಗೆ ಅದರ ಅಪಾಯದ ಬಗ್ಗೆಯೂ ಎಚ್ಚರವಿರಬೇಕು. ಹರಾರಿಯಂತಹ ಇತಿಹಾಸಕಾರರು, ದಾರ್ಶನಿಕರು ಅವರ ಚಿಂತೆ ಕಳವಳಗಳು ಕನಿಷ್ಠ ನಮ್ಮನ್ನು ಒಂದಿಷ್ಟು ಕಾಡಿಸಬೇಕು, ಯೋಚಿಸುವಂತೆ ಮಾಡಬೇಕು. ತಂತ್ರಜ್ಞಾನ ಜಗತ್ತನ್ನು ಬದಲಿಸುತ್ತದೆ. ಅವುಗಳ ಪರಿಣಾಮ ಒಂದೇ ರೀತಿಯಿರುವುದಿಲ್ಲ. ಪೂರ್ವ ಹಾಗೂ ಪಶ್ಚಿಮ ಜರ್ಮನಿಯಲ್ಲಿ ಇದ್ದ ತಂತ್ರಜ್ಞಾನ ಒಂದೇ ರೀತಿಯವು. ಆದರೆ ಅಲ್ಲಿದ್ದ ವ್ಯವಸ್ಥೆಗಳು ತೀರಾ ವಿಭಿನ್ನ.
ಇಂದು ನಮ್ಮನ್ನು ಕಾಡುತ್ತಿರುವ ಅಣುಬಾಂಬಿನ ಆತಂಕವಾಗಲಿ, ಪರಿಸರ ಮಾಲಿನ್ಯದ ಸಮಸ್ಯೆಯಾಗಲಿ, ತಂತ್ರಜ್ಞಾನ ತಂದೊಡ್ಡುತ್ತಿರುವ ಏರುಪೇರಾಗಲಿ ಇವೆಲ್ಲಾ ಜಾಗತಿಕ ಮಟ್ಟದ ಸಮಸ್ಯೆಗಳು. ಇವುಗಳಿಗೆ ದೇಶದ ಮಟ್ಟದಲ್ಲಿ ಪರಿಪೂರ್ಣ ಉತ್ತರ ಸಿಗದೇ ಹೋಗಬಹುದು. ಈಗಿರುವ ಯಾವುದೇ ಸಿದ್ಧ ಸಿದ್ಧಾಂತಗಳಲ್ಲೂ ಇವಕ್ಕೆ ಪರಿಹಾರವೂ ಇಲ್ಲದೇ ಇರಬಹುದು. ಹಾಗೆಯೇ ಹಲವರು ಬಯಸುವಂತೆ ಗತಕಾಲಕ್ಕೆ ಹೋಗುವುದು ಪರಿಹಾರವೂ ಇಲ್ಲ, ಸಾಧ್ಯವೂ ಇಲ್ಲ. ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಯೋಚಿಸುವ ಅವಶ್ಯಕತೆ ಹಿಂದೆಂದಿಗಿಂತ ಇಂದು ಬಹಳ ಇದೆ. ಜಗತ್ತು ವೇಗವಾಗಿ ಬದಲಾಗುತ್ತಿರುವುದರಿಂದ ನಿರ್ಧಾರಗಳನ್ನು ಬೇಗ ತೆಗೆದುಕೊಳ್ಳಬೇಕು. ಮುಂದಕ್ಕೆ ದೂಡುವ ಸೌಭಾಗ್ಯ ನಮಗಿಂದು ಇಲ್ಲ.
ಟಿ ಎಸ್ ವೇಣುಗೋಪಾ

Recommended Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.