ಆತ್ಮದೊಂದಿಗೆ ಒಂದು ಸಂವಾದ- ಕಿಶೋರಿ ಅಮೋನ್ಕರ್ ಒಂದು ಒಂದು ಸಂದರ್ಶನ

 In RAGAMALA

ಕಿಶೋರಿ ಅಮೋನ್ಕರ್ ಅಪರೂಪದ ವ್ಯಕ್ತಿ. ತಮ್ಮದೆ ಆದ ಘನತೆಯನ್ನು ಕಾಪಾಡಿಕೊಂಡು ಬಂದವರು. ಅವರ ಸಂಗೀತದಷ್ಟೆ ಅವರ ವಿಚಾರಗಳು ಘನವಾದದ್ದು. ಸಂಗೀತಧರ್ಮವನ್ನು ಕುರಿತಂತೆ ಆಕೆಗಿರುವ ಕಾಳಜಿಯನ್ನು ಅದು ತೋರಿಸುತ್ತದೆ. ಸ್ವರಮಂಡಲ ಹಿಡಿದು ಕಣ್ಣು ಮುಚ್ಚಿ ಸಂಗೀತದದಲ್ಲಿ ಮುಳಗಿದರೆ ಅದು ಬೇರೆ ಜಗತ್ತು. ಅದು ಪ್ರದರ್ಶನವಲ್ಲ. ಅದೊಂದು ಧ್ಯಾನ. ಅವರು ಕೆಲದಿನಗಳ ಹಿಂದೆ ಲಕ್ಷ್ಮಿ ವಿಶ್ವನಾಥನ್ ಜೊತೆಯಲ್ಲಿ ಹಿಂದು ಪತ್ರಿಕೆಗಾಗಿ ಹಂಚಿಕೊಂಡ ಕೆಲವು ವಿಚಾರಗಳನ್ನು ಇಲ್ಲಿ ಕನ್ನಡದಲ್ಲಿ ನೀಡಲಾಗಿದೆ.
ತಾಯಿ ಹಾಗೂ ಗುರು ಮೊಗುಬಾಯಿ ಕುರ್ಡಿಕರ್ ಬಗ್ಗೆ ಅವರಿಗೆ ಅತೀವ ಗೌರವ. ಹಾಗೆ ಗುರು-ಶಿಷ್ಯ ಪರಂಪರೆಯಲ್ಲಿ ಸಂಗೀತ ಕಲಿಯುವುದೆ ನಿಜವಾದ ಕಲಿಕೆ ಅನ್ನುವುದನ್ನು ನಂಬಿದವರು ಅವರು.
ನನಗೆ ಗುರು-ಶಿಷ್ಯ ಪರಂಪರೆ ಬಗ್ಗೆ ತುಂಬಾ ನಂಬಿಕೆ. ಗ್ರಂಥಗಳನ್ನು ನೋಡಿ, ಕ್ಯಾಸೆಟ್ ಕೇಳಿ ಸಂಗೀತ ಕಲಿಯುವುದಕ್ಕೆ ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಪಾಠಗಳನ್ನು ರೆಕಾರ್ಡ ಮಾಡಿಕೊಳ್ಳುತ್ತಾರೆ. ಮನೆಗೆ ಹೋಗಿ ಆ ನಿರ್ಜೀವ ಸಂಗೀತವನ್ನು ಕಲಿಯುತ್ತಾರೆ. ಗುರುವಿನಿಂದ ನೇರವಾಗಿ ಕಲಿಯುವುದೇ ಜೀವಂತ ಕಲಿಕೆ. ಅದು ಆತ್ಮಗಳ ಕೊಡುಕೊಳ್ಳುವಿಕೆ. ನೀವು ಒಂದು ಯಂತ್ರದಿಂದ ಸಂಗೀತ ಕಲಿಯುವುದಕ್ಕೆ ಸಾಧ್ಯವಿಲ್ಲ.
ಈ ಕಲೆಗೆ ಧ್ಯಾನ ಬೇಕು. ಅಂದರೆ ನನಗೆ ಸಾರ್ವಜನಿಕರನ್ನು ಕಂಡರೆ ಪ್ರೀತಿ ಇಲ್ಲ ಅಂತಲ್ಲ. ಅವರಿಂದಾಗಿಯೇ ನಾನು ಈ ಸ್ಥಿತಿಯಲ್ಲಿರುವುದು. ಪ್ರತಿ ಶ್ರೋತ್ರವನ್ನು ನಾನು ರಾಘವೇಂದ್ರ ಸ್ವಾಮಿಯ ಅವತಾರವಾಗಿ ಕಾಣುತ್ತೇನೆ. ನಾನು ಹಾಡುವಾಗ ನೀವೆಲ್ಲಾ ರಾಘವೇಂದ್ರರಾಗಿ ಬಿಡುತ್ತೀರಿ. . . . . . ಇತ್ತೀಚೆಗೆ ಕಾರ್ಯಕ್ರಮಗಳು ಸಾಕು ಅನ್ನಿಸಿದೆ. ಅದರಿಂದ ಹೊರಗೆ ಉಳಿಯಬೇಕು ಅನ್ನಿಸುತ್ತಿದೆ. ಸಂಪೂರ್ಣವಾಗಿ ಬೋಧನೆಯಲ್ಲಿ ತೊಡಗಿಸಿಕೊಳ್ಳಬೇಕು. ಅಂತಹ ಅವಕಾಶಕ್ಕಾಗಿ ಕಾಯುತ್ತಿದ್ದೇನೆ. ಅದು ನನ್ನ ಗುರಿ.
ಉತ್ತರ ಭಾರತದಲ್ಲಿ ಸಂಗೀತವನ್ನು ಮನೋರಂಜನೆ ಅಂತ ಭಾವಿಸುತ್ತಾರೆ. ಅದನ್ನು ಅಮೂಲಾಗ್ರ ವಿರೋದಿಸುತ್ತೇನೆ. . . ಜನ ಸಂಗೀತವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಮನಸೋಇಚ್ಚೆ ನಡೆದುಕೊಳ್ಳುತ್ತಾರೆ. ನೀವು ಹಾಡುತ್ತಿದ್ದರೆ ಬೇಕೆನಿಸಿದಾಗ ಒಳಗೆ ಬರುತ್ತಾರೆ, ಬೇಡ ಅನ್ನಿಸಿದಾಗ ಹೊರಗೆ ಹೋಗುತ್ತಾರೆ. ಮದ್ರಾಸಿನಲ್ಲೂ ಶ್ರೋತೃಗಳು ಹೀಗೇ ಮಾಡುತ್ತಾರೆ. ಅದು ಅವರ ತಪ್ಪಲ್ಲ. ನಿಮ್ಮ ಎದುರಿಗೆ ತಿರುಪತಿ ಬಾಲಾಜಿ ಬಂದು ನಿಂತರೆ ಏನು ಮಾಡುತ್ತೀರಿ? ನೀವು ನಿಮ್ಮನ್ನೆ ಮರೆತು ಅಲ್ಲೇ ಹಾಗೇ ನಿಂತು ಬಿಡುತ್ತೀರಿ. ಅದಕ್ಕೇ ನನಗನ್ನಿಸುತ್ತೆ. ನನ್ನನ್ನು ಮರೆತು ಸಂಗೀತದಲ್ಲಿ ಪೂರ್ಣ ತಲ್ಲೀನಳಾಗೋದಕ್ಕೆ ನನಗೆ ಸಾಧ್ಯ ಆಗುತ್ತಿಲ್ಲ. ಹಾಗಾಗಿ ನಿಮ್ಮನ್ನು ಉಳಿದೆಲ್ಲವನ್ನು ಮರೆತು ಅದರಲ್ಲಿ ತಲ್ಲೀನಾಗಿಸುವುದಕ್ಕೆ ನನಗೆ ಆಗುತ್ತಿಲ್ಲ.
ನಾವು ಸಂಗೀತವನ್ನು ಮನರಂಜನೆ ಮಾಡಿಬಿಟ್ಟಿದ್ದೇವೆ. ಹಾಡುವುದು, ತಾಲೀಮು ಹಾಗು ಪ್ರದರ್ಶನ ಇವೆಲ್ಲಾ ಬೇರೆ ಬೇರೆ. ಅವು ಸಂಗೀತದ ಮೂರು ಅಂಶಗಳು. ನಾನು ಹಾಡುವುದಕ್ಕೆ ಮಹತ್ವ ಕೊಡುತ್ತೇನೆ. ಹಾಡೋದು ಅಂದ್ರೆ ನಿಮ್ಮ ಆತ್ಮದೊಂದಿಗೆ ನೀವು ಮಾತನಾಡುವುದು. ನೀವು ಅಭಿವ್ಯಕ್ತಿಸಬೇಕೆಂದುಕೊಂಡಿರುವುದನ್ನು ಮೊದಲು ನಿಮ್ಮೊಳಗೆ ಧ್ಯಾನಿಸುತ್ತೀರಿ.
ಭಾರತೀಯ ಸಂಗೀತ ಅನ್ನೋದು ಭಾವನೆಗಳ ಅಭಿವ್ಯಕ್ತಿ. ಇದು ನನ್ನ ಬಲವಾದ ನಂಬಿಕೆ. ನಾನು ನಿನ್ನನ್ನು ಪ್ರೀತಿಸುತ್ತೇನೆ ಅಂದರೆ ಅದನ್ನು ಹೇಗೆ ಅಳತೆ ಮಾಡುವುದು. ನೀವು ಆ ಕಂಪನಗಳನ್ನು ಅನುಭವಿಸಬೇಕು. ನಾವು ನಮ್ಮ ಸಂಗೀತವನ್ನು ಫಾರ್ಮೆಟ್ಟುಗಳಿಗೆ ಇಳಿಸಿಬಿಟ್ಟಿದ್ದೇವೆ. ಉತ್ತರ ಭಾರತದಲ್ಲಿ ಪ್ರತಿಯೊಂದು ರಾಗವನ್ನು ಒಂದು ವಿಶಿಷ್ಟ ಕ್ರಮದಲ್ಲಿ ಹಾಡುತ್ತೇವೆ. ಮೊದಲು ಆಲಾಪ್, ನಂತರ ವಿಸ್ತಾರ, ನಂತರ ಅಲಾಪಿಗೆ ಪದಗಳನ್ನು ಸೇರಿಸುತ್ತೇವೆ, ತಾನಗಳಿಗೆ ಪದಗಳನ್ನು ಸೇರಿಸುತ್ತೇವೆ, ಅಮೇಲೆ ದೃತ. . . . ನಾವು ಇಡೀ ಈ ಕ್ರಮವನ್ನು ಪುನರುಕ್ತಿ ಮಾಡುತ್ತಾ ಹೋಗುತ್ತಿರುತ್ತೇವೆ. ಇಲ್ಲಿ ದೃತ ಹಾಡಬೇಕಾಗಿಲ್ಲ ಅಂತ ನನಗೆ ಅನ್ನಿಸುತ್ತದೆ. ದೃತ ಸಂಪೂರ್ಣವಾಗಿ ಬೇರೆಯದೇ ಆದ ಭಾವನೆಯನ್ನು ಧ್ವನಿಸುತ್ತದೆ. ನೀವು ರೆಸ್ಟಲೆಸ್ ಆದಾಗ, ಅಥವಾ ಭಾವನೆಗಳು ತೀರಾ ತೀವೃವಾಗಿದ್ದ ಸಂದರ್ಭದಲ್ಲಿ ಅದನ್ನು ಹಾಡುತ್ತೀರಿ. ಆದರೆ ನಾವು ಹಾಗೆ ಮಾಡುತ್ತಿಲ್ಲ. ನಾನೂ ಈ ತಪ್ಪಿನಲ್ಲಿ ಭಾಗಿ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ನೀವು ಕರ್ನಾಟಕ ಸಂಗೀತದಲ್ಲೂ ಹೀಗೆ ಮಾಡುತ್ತೀರಿ. ಒಂದು ಪ್ರದರ್ಶನದಲ್ಲಿ ಮದ್ಯೆ ವಿರಾಮ ಕೊಡುತ್ತೀರಿ. ಸ್ವಲ್ಪ ಸಮಯವನ್ನು ವಯಲಿನ್‌ಗೆ, ಸ್ವಲ್ಪ ಸಮಯವನ್ನು ಮೃದಂಗಕ್ಕೆ ಬಿಡುತ್ತಿರಿ. ಇದು ಭಾವನೆಗಳಿಂದ ನೀವು ತೆಗೆದುಕೊಳ್ಳುತ್ತಿರುವ ಬ್ರೇಕ್.
ಹೀಗೆ ರೂಢಿಯಾಗಿರುವ ಚೌಕಟ್ಟಿನಿಂದ ಹೇಗೆ ಹೊರಬರುವುದು? ಈ ನಿರ್ಧಾರಿತ ವಿನ್ಯಾಸದ ಹಿಂದೆ ಹೂತುಹೋಗಿರುವ ಆ ಇನ್ನೊಂದು ಸಂಗೀತವನ್ನು ಹೊರಕ್ಕೆ ತೆಗೆಯುವುದು ಹೇಗೆ?
ನೀವು ಕಲಿಯುತ್ತಿರುವ ಹಂತದಲ್ಲಿ ಈ ಫಾರ್ಮೆಟ್ಟುಗಳು ಬೇಕಾಗುತ್ತವೆ. ಆದರೆ ಈಗ ನಾನು ನನ್ನ ಭಾವನೆಗಳ ಬೆನ್ನತ್ತಿ ಹೋಗಬೇಕು. ಅದನ್ನು ನಾನೇ ಅನುಭವಿಸಬೇಕು. ಆ ಸ್ತಿತಿ ತಲುಪುವುದಕ್ಕೆ ಅಪಾರವಾದ ಶಕ್ತಿ ಬೇಕಾಗುತ್ತದೆ. ಆ ಶಕ್ತಿಯನ್ನು ಕರುಣಿಸು ಅಂತ ಭಗವಂತನನ್ನು ಪ್ರಾರ್ಥಿಸುತ್ತೇನೆ. ಅದೊಂದು ತೀರಾ ಅಮೂರ್ತವಾದ ಸ್ತಿತಿ.
ಭೌದ್ಧಿಕತೆ ಹಾಗೂ ಹೃದಯ
ನನ್ನ ವಿದ್ಯಾರ್ಥಿಗಳಲ್ಲಿ ಬುದ್ದಿ ಮತ್ತು ಮನಸ್ಸುಗಳ ಸೊಗಸಾದ ಮಿಶ್ರಣ ಕಾಣುತ್ತೇನೆ. ಕಲೆಗೆ ಆ ಹದ ಬೇಕು. ನೀವು ಕೇವಲ ಭಾವನಾತ್ಮಕವಾಗಿದ್ದರೆ ಸಾಲದು. ಭೌದ್ದಿಕತೆಯೂ ಬೇಕು. ಭೌದ್ದಿಕತೆ ಹಾಗೂ ಹೃದಯ, ಇವುಗಳ ಹದವಾದ ಸಮತೋಲನ ಸಾಧ್ಯವಾಗಬೇಕು. ಭಾರತೀಯ ಧರ್ಮದಲ್ಲಿ ಅದನ್ನು ಸಂಯಮ ಅನ್ನುತ್ತಾರೆ. ನಾವು ಅಂತಿಮವಾಗಿ ಮೋಕ್ಷವನ್ನು ಪಡೆಯುವುದು ಹೀಗೆ. ಅದಕ್ಕೆ ನಿಮಗೆ ನಿಯಂತ್ರಣ ಇರಬೇಕು ಅನ್ನುವ ಅರಿವು ನಿಮಗಿರಬೇಕು. ನಾನು ಈ ನಿಯಂತ್ರಣ ಕಂಡುಕೊಳ್ಳಲು ಕಲಿಯುತ್ತಿದ್ದೇನೆ. ನಾನು ತುಂಬಾ ಬುದ್ಧಿವಂತೆ ಅನ್ನುವುದು ನನಗೆ ಗೊತ್ತು. ಅದಕ್ಕೆ ನಮ್ಮ ತಾಯಿ ಒಂದು ಹಂತದವರೆಗೆ ನನ್ನನ್ನು ಯಾವುದೇ ಕಾರ್ಯಕ್ರಮಗಳಿಗೂ ತಮ್ಮ ಜೊತೆಗೆ ಕರೆದುಕೊಂಡುಹೋಗುತ್ತಿರಲಿಲ್ಲ.
ಸಂಗೀತದಲ್ಲಿ ಭಾವನೆಯೇ ಮುಖ್ಯ. ಹಾಗಾಗಿ ಕಿಶೋರಿಯವರು ಬೇರೆ ದೇಶಕ್ಕೆ ಹೋದರೂ ತಮ್ಮ ಸಂಗೀತದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳುತ್ತಿರಲಿಲ್ಲ.
ಸಂಗೀತ ಸಾರ್ವತ್ರಿಕವಾದದ್ದು ಎಂದು ನಾನು ನಂಬುತ್ತೇನೆ. . . . ನೀವು ವಿನ್ಯಾಸವನ್ನು, ಚೌಕಟ್ಟನ್ನು ಬದಲಿಸಬಹುದು. ಆದರೆ ಭಾವನೆಗಳನ್ನು ಬದಲಿಸಿಕೊಳ್ಳಲು ಸಾಧ್ಯವಿಲ್ಲ. ನನಗೆ ಭಾವನೆಗಳೇ ತುಂಬಾ ಮುಖ್ಯ.
ಹಿಂದುಸ್ತಾನಿ ಹಾಗೂ ಕರ್ನಾಟಕ- ಈ ಎರಡು ಪದ್ಧತಿಗಳು ಹೆಚ್ಚಾಗಿ ಪ್ರಾಯೋಗಿಕ ಕಾರಣಗಳಿಗಾಗಿ ಆದ ಸಂಪ್ರದಾಯಗಳು. ಅದರ ಹಿಂದೆ ಪ್ರಾದೇಶಿಕ ಸಾಂಸ್ಕೃತಿಕ ಒತ್ತಡಗಳ ಪ್ರಭಾವವೂ ಇವೆ. ಸಂಗೀತ ಅನ್ನೋದು ಸ್ವರಗಳ ಜಗತ್ತು ಎಂದೇ ನನ್ನ ಭಾವನೆ. ತುಂಬಾ ಪದಗಳನ್ನು ತುರುಕಬಾರದು. ನಮ್ಮ ಗಾಯನದಲ್ಲಿ ತುಂಬಾ ಲಯದ ಸರ್ಕಸ್ಸು ಒಳ್ಳೆಯದಲ್ಲ. ವಾದ್ಯಕಲಾವಿದರು ಲಯವಾದಕರೊಂದಿಗೆ ಸರ್ಕಸ್ಸು ಮಾಡುವುದನ್ನು ಇನ್ನಾದರೂ ನಿಲ್ಲಿಸಬೇಕು. ಎಲ್ಲವನ್ನು ಚಮತ್ಕಾರಕ್ಕೆ ಇಳಿಸಿಬಿಡಬಾರದು. ಹೀಗೆ ಚಮತ್ಕಾರಕ್ಕೆ ಇಳಿದ ಕಲಾವಿದರೇ ಇಂದು ಶ್ರೋತೃಗಳನ್ನು ಅತಿಯಾಗಿ ಶೋಷಿಸುತ್ತಿರುವರು. ಶ್ರೋತೃಗಳು ಕೂಡ ಸಂಗೀತ ತಮ್ಮನ್ನು ರೋಮಾಂಚನಗೊಳಿಸಬೇಕೆಂದು ನಂಬತೊಡಗಿದ್ದಾರೆ. ಅದು ಭಾರತೀಯ ಶಾಸ್ತ್ರೀಯ ಸಂಗೀತದ ಮೂಲ ಆಶಯಕ್ಕೆ ವಿರುದ್ಧ. ಸಂಗೀತ ನಿಜವಾಗಿ ನೆಮ್ಮದಿಯನ್ನು, ಶಾಂತಿಯನ್ನು ಕೊಡಬೇಕು.

Recommended Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.