ಆನಂದ್ ತೇಲ್ತುಂಬ್ಡೆ

 In SUTTA MUTTA

ದೇವನೂರು ಮಹಾದೇವ ಅವರು ಒಂದು ಲೇಖನ ಕೊಟ್ಟು ಅನುವಾದ ಮಾಡಿಕೊಡು ಅಂದರು. ಅದು ತೇಲ್ತುಂಬ್ಡೆ ಬಗ್ಗೆ. ನನ್ನ ಅನುವಾದದ ಮೇಲೆ, ಅವರ ಭಾಷೆಯಲ್ಲೇ ಹೇಳುವುದಾದರೆ ’ಕೈಯಾಡಿಸಿದರು’. ಅದು ಏನೇನೋ ಬದಲಾಗಿಬಿಟ್ಟಿತು. ನಾನೊಂದಿಷ್ಟು ಕಲಿತೆ ಅಂದುಕೊಂಡಿದ್ದೇನೆ. ಅಥವಾ ಆ ಭ್ರಮೆಯಾದರೂ ಇದೆ. ಇದು ತೇಲ್ತುಂಬ್ಡೆಯೊಡನೆ ಖರಗ್ ಪುರ್ ಐಐಟಿಯಲ್ಲಿ ಒಡನಾಡಿದ್ದ ಅನಿರ್ಬನ್ ಗೋಸ್ವಾಮಿ ಮತ್ತು ಅನುಪಮ್ ಬ್ಯಾನರ್ಜಿ ಬರೆದ ಲೇಖನದ ಮೂಲ ಲೇಖನದ ಸಂಕ್ಷಿಪ್ತ ಭಾವಾನುವಾದ

ಸುಪ್ರೀಂ ಕೋರ್ಟಿನ ನಿರ್ದೇಶನದ ಮೇರೆಗೆ ಏಪ್ರಿಲ್ ೬, ೨೦೨೦ರಂದು ಪ್ರೊಫೆಸರ್ ಆನಂದ್ ತೇಲ್ತುಂಬ್ಡೆ ಶರಣಾದರು. ಆ ಮೂಲಕ ರಾಜಕೀಯ ಅಪರಾಧಕ್ಕೆ ಭಯಂಕರ ಯುಎಪಿಎ ಅಡಿಯಲ್ಲಿ ಬಂಧನಕ್ಕೊಳಗಾದ ಐಐಎಂ ಅಹಮದಾಬಾದ್‌ನ ಮೊಟ್ಟ ಮೊದಲ ಹಳೆಯ ವಿದ್ಯಾರ್ಥಿ, ಐಐಟಿಯ ಮೊದಲ ಪ್ರಾಧ್ಯಾಪಕ ಮತ್ತು ಮೊದಲ ಕಾರ್ಪೋರೇಟ್ ಸಿಇಒ. ಅಷ್ಟೇ ಅಲ್ಲ ಬಾಬಾಸಾಹೇಬ ಅಂಬೇಡ್ಕರ್‌ರ ಕುಟುಂಬದಿಂದ ಹೀಗೆ ಬಂಧಿತರಾಗಿರುವ ಮೊತ್ತ ಮೊದಲ ವ್ಯಕ್ತಿಯಾಗಿದ್ದಾರೆ.

ತೇಲ್ತುಂಬ್ಡೆಯವರು ಉದ್ಯೋಗಿಗಳ ನಡುವೆ ಅದರಲ್ಲೂ ವಿಶೇಷವಾಗಿ ಕಾರ್ಮಿಕರ ನಡುವೆ ತುಂಬಾ ಜನಪ್ರಿಯರಾಗಿದ್ದರು. ಎಷ್ಟೋ ಬಾರಿ ಅವರು ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳು ಕೆಲಸಗಾರರ ವಿರುದ್ಧವೇ ಇದ್ದಾಗಲೂ ಕಾರ್ಮಿಕರು ಇವರ ನ್ಯಾಯಪರತೆಯನ್ನು ಗೌರವಿಸಿ ಆ ತೀರ್ಮಾನಗಳನ್ನು ಗೌರವಿಸಿ ಸುಮ್ಮನಾಗುತ್ತಿದ್ದರು. ೧೯೭೦ರಲ್ಲಿ ಇಂಡಿಯನ್ ಆಯಿಲ್ ಕಂಪೆನಿಯಲ್ಲಿ ಅವರು ಟ್ರೈನೀ ಆಗಿದ್ದಾಗ ನಡೆದ ಒಂದು ಘಟನೆ -ಪಶ್ಚಿಮ ಬಂಗಾಳದ ಬರ್ಧಮಾನ್ ಸಂಸ್ಥೆಯ ಆಡಳಿತ ಮಂಡಲಿಯು ತೇಲ್ತುಂಬ್ಡೆಯವರಿಗೆ ಒಂದು ಜವಾಬ್ದಾರಿಯನ್ನು ವಹಿಸುತ್ತದೆ. ಆಗ ಕೈಗಾರಿಕಾ ಚಳುವಳಿಗಳು ತೀವ್ರವಾಗಿದ್ದ ಸಮಯ. ಅವರನ್ನು ನಿಯೋಜಿಸಿದ್ದ ಬರೌನಿ ತೈಲಶುದ್ಧೀಕರಣ ಸಂಸ್ಥೆಯಲ್ಲಿ ಕಾರ್ಮಿಕರು ಅಧಿಕಾರಿಗಳನ್ನು ಹೊಡೆಯುವುದು ತೀರಾ ಮಾಮೂಲಿಯಾಗಿತ್ತು. ಆಧಿಕಾರಿಗಳು ಕೆಲಸಗಾರರಿಗೆ ಹೆದರಿಕೊಂಡೇ ಬದುಕುತ್ತಿದ್ದರು. ಎಂತಹ ಕೆಲಸಗಾರರು ಬೇಕು ಎಂದು ಕಂಪನಿಯ ಚೀಫ್ ಮ್ಯಾನೇಜರ್ ತೇಲ್ತುಂಬ್ಡೆಯವರನ್ನು ಕೇಳಿದಾಗ, ಕನಿಷ್ಠ ಪಕ್ಷ ಒಮ್ಮೆಯಾದರೂ ಯಾರಾದರೂ ಮ್ಯಾನೇಜರನ್ನು ಹೊಡೆದಿರುವ ಮತ್ತು ಮ್ಯಾನೇಜ್‌ಮೆಂಟ್‌ಗೆ ತಲೆನೋವಾಗಿರುವ ಕೆಲಸಗಾರರನ್ನು ತಮಗೆ ನೀಡುವಂತೆ ಕೇಳಿಕೊಂಡರಂತೆ! ಆಗಷ್ಟೇ ವೃತ್ತಿಗೆ ಕಾಲಿಟ್ಟಿದ್ದ ಯುವಕನಿಂದ ಈ ಮನವಿ ಕೇಳಿದ ಮುಖ್ಯಸ್ಥರು ದಂಗಾಗಿಬಿಟ್ಟರು. ಕೊನೆಗೆ ಬೇರೆ ಬೇರೆ ಘಟಕಗಳಿಂದ ದುರ್ವರ್ತನೆಯ ದೊಡ್ಡ ಇತಿಹಾಸವೇ ಇದ್ದ ೧೪ ಜನ ಸಮಸ್ಯಾತ್ಮಕ ಕಾರ್ಮಿಕರನ್ನು ತೇಲ್ತುಂಬ್ಡೆಯವರ ತಂಡಕ್ಕೆ ನೀಡುತ್ತಾರೆ. ಅವರಲ್ಲಿ ಹೆಚ್ಚಿನವರು ಯೂನಿಯನ್ನಿನ ಪದಾಧಿಕಾರಿಗಳೂ ಆಗಿದ್ದರು. ಎಂದೂ ಯಾವ ಕೆಲಸವನ್ನೂ ಮಾಡಿದವರೇ ಅಲ್ಲ. ಆದರೆ ಅವರೊಂದಿಗೆ ತೇಲ್ತುಂಬ್ಡೆಯವರು ನಡೆದುಕೊಂಡ ರೀತಿ ಹೇಗಿತ್ತೆಂದರೆ ಅವರೆಲ್ಲರೂ ಇವರ ತಂಡದಲ್ಲ್ಲಿ ತುಂಬಾ ಸಕ್ರಿಯರಾಗಿ ಭಾಗವಹಿಸಿ, ಕಷ್ಟಪಟ್ಟು ಕೆಲಸ ಮಾಡಿ ಅವಧಿಗೆ ಮೊದಲೇ ಯೋಜನೆಯನ್ನು ಮುಗಿಸಿಬಿಟ್ಟರು! ಅದೂ ಕಡಿಮೆ ಖರ್ಚಿನಲ್ಲಿ! ತೇಲ್ತುಂಬ್ಡೆಯವರು ಅಲ್ಲಿಂದ ನಿರ್ಗಮಿಸುವಾಗ ಈ ಹಿರಿಯ ಕಾರ್ಮಿಕರ ಕಣ್ಣೀರಿಡುತ್ತಾರೆ. ತೆಲ್ತುಂಬ್ಡೆಯೊಂದಿಗೆ ಕೆಲಸ ಮಾಡಿದ್ದು ತಮ್ಮ ಜೀವಮಾನದ ಅತ್ಯಂತ ಸೊಗಸಾದ ಗಳಿಗೆಗಳು, ಅಷ್ಟು ಸಣ್ಣ ಹುಡುಗ ತಮ್ಮನ್ನು ಹೋರಿಗಳಂತೆ ದುಡಿಯುವಂತೆ ಮಾಡಿದನಲ್ಲ ಎಂಬುದು ಅವರನ್ನೇ ಚಕಿತಗೊಳಿಸಿತ್ತು. ಇಂತಹ ಘಟನೆಗಳು ತೆಲ್ತುಂಬ್ಡೆಯವರ ವೃತ್ತಿ ಜೀವನದುದ್ದಕ್ಕೂ ಹೇರಳವಾಗಿವೆ. ಅವರೊಂದಿಗೆ ಕೆಲಸ ಮಾಡಿದ ಪ್ರತಿಯೊಬ್ಬರು ಅದೇ ತಮ್ಮ ವೃತ್ತಿಜೀವನದ ಅತ್ಯುತ್ತಮ ಘಳಿಗೆ ಅಂತ ಪ್ರೀತಿಯಿಂದ ನೆನೆಯುತ್ತಾರೆ.

ನನಗೆ ಇಲ್ಲಿಯವರಗೆ ಒಬ್ಬ ಕೆಟ್ಟ ವ್ಯಕ್ತಿಯೂ ಸಿಕ್ಕಿಲ್ಲ ಅಂತ ಹೇಳುತ್ತಿದ್ದ ತೆಲ್ತುಂಬ್ಡೆಯವರು ತಮ್ಮ ಕಾರ್ಪೋರೇಟ್ ಬದುಕಿನ ನಾಲ್ಕು ದಶಕಗಳಲ್ಲಿ ನಿರ್ವಹಿಸಿದ ನೂರಾರು ಜವಾಬ್ದಾರಿಗಳಲ್ಲಿ ಪ್ರತಿಯೊಂದರಲ್ಲೂ ಹೊಸತೇನನ್ನಾದರೂ ಸೃಷ್ಟಿಸುತ್ತಿದ್ದರು. ಭಾರತ್ ಪೇಟ್ರೋಲಿಯಂನ ಇನ್‌ಫರ್ಮೇಷನ್ ಸಿಸ್ಟಮ್ಸ್‌ನ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದಾಗ ಅಷ್ಟೊಂದು ಬೃಹತ್ತಾದ ಕಾರ್ಪೋರೇಷನ್ನಿನ ಸತ್ವಹೀನವಾಗಿದ್ದ ಇಡಿಪಿ ವಿಭಾಗವನ್ನು ಕೇವಲ ಆರೇ ತಿಂಗಳಿನಲ್ಲಿ ಅಗ್ರಶ್ರೇಣಿಯ ಇನ್‌ಫರ್ಮೇಷನ್ ಸಿಸ್ಟಮ್ಸ್ ಆಗಿ ಮಾರ್ಪಡಿಸಿದರು. ಐಟಿ ಕಂಪೆನಿಗಳೂ ಅಸೂಯೆ ಪಡುವ ಮಟ್ಟಕ್ಕೆ ಅದು ಬೆಳೆಯಿತು. ಆ ಕಾಲಕ್ಕೇ ಭಾರತ್ ಪೆಟ್ರೋಲಿಯಂನಲ್ಲಿ ತೇಲ್ತುಂಬ್ಡೆಯವರ ಮಾಹಿತಿ ತಂತ್ರಜ್ಞಾನದಲ್ಲಿನ ನವನವೀನ ದೃಷ್ಟಿಕೋದಿಂದಾಗಿ ಕಛೇರಿಗಳ ಯಾಂತ್ರಿಕರಣ, ನೆಟ್ ವರ್ಕಿಂಗ್, ಇ-ಮೇಲ್, ಮತ್ತು ವರ್ಕಫ್ಲೋ ಸಿಸ್ಟಮ್ಸ್, ಇಂಟ್ರಾನೆಟ್, ದಾಖಲೆ ನಿರ್ವಹಣಾ ವ್ಯವಸ್ಥೆ, ಡಾಟಾ ವೇರ್ ಹೌಸಿಂಗ್ ಮತ್ತು ಬಿಸಿನೆಸ್ ಇಂಟೆಲಿಜೆನ್ಸ್ ಸಿಸ್ಟಂಸ್, ನಾಲೆಡ್ಜ್ ಮ್ಯಾನೇಜ್‌ಮೆಂಟ್ ಸಿಸ್ಟಂ ಮತ್ತು ಎಸ್‌ಎಪಿ ಜಾರಿಗೆ ತಂದಿದ್ದೆಲ್ಲಾ ಸೇರಿ ಹೊಸರೂಪವನ್ನೇ ನೀಡಿಬಿಟ್ಟಿತ್ತು. ಅವರ ಕಿರಿಯರು ಅವರನ್ನು ಗೌರವಿಸುತ್ತಿದ್ದರು, ಹೆಚ್ಚು ಕಡಿಮೆ ಪೂಜಿಸುತ್ತಿದ್ದರು. ಮೇಲಧಿಕಾರಿಗಳಿಗೆ ಇವರನ್ನು ನಿರ್ಲಕ್ಷಿಸುವುದಕ್ಕೆ ಅವರಿಗೆ ಸಾಧ್ಯವಿರಲಿಲ್ಲ. ಹಾಗಾಗಿ ತುಂಬಾ ಕಿರಿಕಿರಿ ಮಾಡಿಕೊಳ್ಳುತ್ತಿದ್ದರು. ಅದರೂ ಇವರು ಉನ್ನತ ಮಟ್ಟಕ್ಕೆ ಏರುವುದನ್ನು ತಡೆಯಲು ಯಾರಿಗೂ ಸಾಧ್ಯವಾಗುತ್ತಿರಲಿಲ್ಲ. ಮುಂದೆ ಬಿಪಿಸಿಎಲ್ ನಿರ್ವಾಹಕ ನಿರ್ದೇಶಕರಾದರು, ಪೆಟ್ರೋನೆಟ್ ಇಂಡಿಯಾದ ನಿರ್ವಾಹಕ ನಿರ್ದೇಶಕರು ಮತ್ತು ಸಿಇಒ ಆಗಿ ನಿವೃತ್ತರಾದರು.

ನಿವೃತ್ತಿಯಾದ ಮೇಲೆ ಖರಗಪುರದ ಐಐಟಿ ಇವರನ್ನು ಬಿಸಿನೆಸ್ ಮ್ಯಾನೇಜ್‌ಮೆಂಟಿನ ಅಧ್ಯಾಪಕರಾಗಿ ಆಹ್ವಾನಿಸಿತು. ೧೯೧೬ವರೆಗೆ ಅಲ್ಲಿ ಪ್ರಾಧ್ಯಾಪಕರಾಗಿದ್ದರು. ಆಗ ಅವರಿಗೆ ಗೋವಾದ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟಿನಲ್ಲಿ ಬಿಗ್ ಡೆಟಾ ಅನಾಲಿಟಿಕ್ಸ್‌ನಲ್ಲಿ ಹೊಸ ಕೋರ್ಸನ್ನು ಪ್ರಾರಂಭಿಸಲು ಆಹ್ವಾನ ಬಂತು. ಅವರು ಒಂದು ನವೀನ ಮಾದರಿಯ ತರಗತಿಯನ್ನು ಯೋಜಿಸಿ ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದರು. ಅದು ಭಾರತದಲ್ಲೇ ಹೊಸ ಪದವಿ. ಅದರೆ ದೇಶದಲ್ಲೇ ಅತ್ಯುತ್ತಮ ಹತ್ತು ಅನೆಲಿಟಿಕ್ಸ್ ಕಾರ್ಯಕ್ರಮದಲ್ಲಿ ಅದೂ ಒಂದಾಯಿತು. ಒಂದು ಟರ್ಮ್ ಕೂಡ ಮುಗಿದಿರಲಿಲ್ಲ. ಇನ್ನೂ ಒಂದು ತಂಡವೂ ಹೊರಬಂದಿರಲಿಲ್ಲ. ವಿದ್ಯಾರ್ಥಿಗಳ ಸಂಖ್ಯೆ ದುಪ್ಪಟ್ಟಾಯಿತು!

ತೇಲ್ತುಂಬ್ಡೆಯವರು ಎಂದರೆ ಇಷ್ಟೇ ಅಲ್ಲ. ಅವರು ಸಮಕಾಲೀನ ವಿಷಯದ ಬಗ್ಗೆ ನಿರಂತರವಾಗಿ ಬರೆಯುತ್ತಿದ್ದರು. ಲೋಕಚಿಂತಕರೆಂದು ಸಮಾಜ ಅವರನ್ನು ಗುರುತಿಸಿತ್ತು. ಕಳೆದ ವರ್ಷ ವಿಚಾರವಾದಿಗಳ ಪ್ರತಿಷ್ಠಿತ ವೇದಿಕೆ ವಿಚಾರವೇದ್ ಸಮ್ಮೇಳನದ ಅಧ್ಯಕ್ಷತೆಗೆ ಅವರನ್ನು ಆಯ್ಕೆಮಾಡಲಾಗಿತ್ತು. ಕಾರ್ಪೋರೇಟ್ ಜಗತ್ತಿನಲ್ಲಿ ಉನ್ನತ ಪದವಿಗಳನ್ನು ನಿರ್ವಹಿಸುತ್ತಲೇ ಮಹಾರಾಷ್ಟ್ರದ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣಾ ಸಮಿತಿಯು ನಡೆಸುತ್ತಿದ್ದ ವಿವಿಧ ಸತ್ಯಾನ್ವೇಷಣಾ ತಂಡಗಳಲ್ಲಿ ಸದಸ್ಯರಾಗಿ ಭಾಗವಹಿಸುತ್ತಿದ್ದರು. ಅನ್ಯಾಯದ ವಿರುದ್ಧ ದೇಶದಲ್ಲಿ ನಡೆಯುತ್ತಿದ್ದ ಪ್ರತಿಯೊಂದು ಹೋರಾಟದಲ್ಲೂ ಭಾಗವಹಿಸುತ್ತಿದ್ದರು. ಐಐಟಿ ಖರಗ್‌ಪುರದಲ್ಲಿ ಪ್ರಾಧ್ಯಾಪಕರಾಗಿದ್ದುಕೊಂಡೇ, ತಮಿಳುನಾಡಿನ ಪರಮಕುಡಿಯಲ್ಲಿ ದಲಿತರ ಕೊಲೆಯ ವಿರುದ್ಧ ಹೋರಾಟವನ್ನು ಮುನ್ನಡೆಸಲು ಹೋಗುತ್ತಿದ್ದರು. ತೆಲಂಗಾಣದ ಮಹಬೂಬನಗರದ ಪಥಪಲ್ಲಿಯಲ್ಲಿ ದಲಿತರ ಚಳುವಳಿಯ ಮುಂಚೂಣಿಯಲ್ಲಿರುತ್ತಿದ್ದರು. ಅವರು ತಮ್ಮ ಅನುಭವವನ್ನು ಲೇಖನಗಳು ಹಾಗೂ ಪುಸ್ತಕಗಳ ರೂಪದಲ್ಲಿ ಸಿದ್ಧಾಂತೀಕರಿಸಿ ಬರೆಯುತ್ತಿದ್ದರು. ಅವರ ಬರಹಗಳಿಗೆ ಒಂದು ವಿಶಿಷ್ಟ ಶೈಲಿಯಿತ್ತು. ನಮಗೆ ಪರಿಚಿತವಿರುವ ಯಾವುದೇ ಶೈಲಿಗೂ ಅದನ್ನು ಹೋಲಿಸಲಾಗುವುದಿಲ್ಲ. ಅದು ಶೈಕ್ಷಣಿಕವಾಗಿ ಹಾಗೂ ಪ್ರಾಯೋಗಿಕವಾಗಿ ಅವರ ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ಅವರು ೨೮ ಪುಸ್ತಕಗಳನ್ನು ಬರೆದಿದ್ದಾರೆ. ನೂರಾರು ಲೇಖನಗಳನ್ನು ಬರೆದಿದ್ದಾರೆ. ಹಲವಾರು ಭಾಷಣಗಳನ್ನು ಮಾಡಿದ್ದಾರೆ. ಇವೆಲ್ಲಾ ಅವರ ಕಲಿತ ಶಿಸ್ತಿನ ಭಾಗವಲ್ಲ. ಅವರ ಹೆಚ್ಚಿನ ಬರಹಗಳು ಅನುವಾದಗೊಂಡಿವೆ.

ಪ್ರಸ್ತುತ ಸರ್ಕಾರ ಇವರನ್ನು ಎಲ್ಗರ್ ಪರಿಷತ್ತಿನ ಮೊಕದ್ದಮೆಯಲ್ಲಿ ಭಯಂಕರವಾದ ಕಾನೂನುಬಾಹಿರ ರಕ್ಷಣಾ ಕಾಯ್ದೆಯಡಿ (ಯುಎಪಿಎ) ಬಂಧಿಸಿದೆ. ಆದರೆ ವಿಶೇಷವೆಂದರೆ ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳು ಅವರನ್ನು ತುಂಬು ಗೌರವದಿಂದ ಕಾಣುತ್ತಿವೆ. ಒಂದರ್ಥದಲ್ಲಿ ಸರ್ಕಾರದ ನಿಲುವಿನೊಂದಿಗೆ ತಮ್ಮ ಸಹಮತವಿಲ್ಲ ಅನ್ನುವುದನ್ನು ತೋರಿಸುವುದಕ್ಕೋ ಅನ್ನುವಂತೆ ಅವರನ್ನು ಗೌರವಿಸುತ್ತಲೇ ಇವೆ. ಉದಾಹರಣೆಗೆ ಗೋವಾ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ತನ್ನ ಬೋರ್ಡ್ ಆಫ್ ಗೌರ‍್ನರ‍್ಸ್‌ಗೆ ಅವರನ್ನು ಆಯ್ಕೆಮಾಡಿಕೊಂಡಿದೆ. ಬಹುಶಃ ಭಾರತದ್ಯಾಂತ ಎಲ್ಲ ವರ್ಗದ ಜನರ ಬೌದ್ಧಿಕ ಗೌರವಕ್ಕೆ ಪಾತ್ರವಾಗಿರುವುದು ಇವರೊಬ್ಬರೇ ಎಂದು ಕಾಣುತ್ತದೆ. ಇಂತಹ ಸುಪ್ರಸಿದ್ಧ ವ್ಯಕ್ತಿಯನ್ನು ಬಂಧಿಸಿ ಜೈಲಿನಲ್ಲಿಟ್ಟಿರುವ ಭಾರತದ ಈ ವ್ಯವಸ್ಥೆಯ ಬಗ್ಗೆಯೇ ಅಯ್ಯೋ ಅನ್ನಿಸುತ್ತದೆ. ಇವರ ಬಂಧನ ಈ ದೇಶದ ಆಳ್ವಿಕೆಯ ಚರಿತ್ರೆಯಲ್ಲಿ ಒಂದು ಅಳಿಸಲಾಗದ ಕಪ್ಪು ಚುಕ್ಕೆಯಾಗಿ ಉಳಿಯುತ್ತದೆ.

ಅನಿರ್ಬನ್ ಗೋಸ್ವಾಮಿ ಮತ್ತು ಅನುಪಮ್ ಬ್ಯಾನರ್ಜಿ ಇಬ್ಬರೂ ಐಐಟಿ ಖರಗ್‌ಪುರದ ಹಿರಿಯ ವಿದ್ಯಾರ್ಥಿಗಳು. ಅವರು ಐಐಟಿ ಯಲ್ಲಿ ಇದ್ದಾಗ ತೆಲ್ತುಂಬ್ಡೆಯವರ ಜೊತೆಗಿನ ವೈಯಕ್ತಿಕ ಒಡನಾಟ ಮತ್ತು ಇನ್ನಿತರ ವ್ಯಕ್ತಿಗಳ ಅನುಭವವನ್ನು ಆಧರಿಸಿ ಬರೆಯಲಾಗಿದೆ

Recent Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.