ಆ ಹಾಡುಗಳು
ಸತ್ಯಜಿತ್ ರೇ
[ಇಂದು ಸತ್ಯಜಿತ್ ರೇ ಬದುಕಿದ್ದರೆ ಅವರಿಗೆ ನೂರು ವರ್ಷ. ಅತ್ಯಂತ ಪ್ರತಿಭಾವಂತ ಕಲಾವಿದರು. ಭಾರತೀಯ ಸಿನಿಮಾಕ್ಕೆ ಜಗತ್ಪ್ರಸಿದ್ಧಿಯನ್ನು ತಂದುಕೊಟ್ಟವರು. ಹಲವು ಕ್ಷೇತ್ರಗಳಲ್ಲಿ ಪ್ರತಿಭೆಯಿದ್ದವರು. ಅವರ ಜನ್ಮ ಶತಮಾನೋತ್ಸವದ ಈ ಸಂದರ್ಭದಲ್ಲಿ ಹಲವರು ಅವರ ಕೊಡುಗೆಯನ್ನು ಹಲವು ರೀತಿಗಳಲ್ಲಿ ನೆನಪಿಸಿಕೊಳ್ಳುತ್ತಿದ್ದಾರೆ. ಸಿನಿಮಾ ಸಂಗೀತಕ್ಕೆ ಅವರು ನೀಡಿದ ಕೊಡುಗೆ ಕಡಿಮೆಯೇನಲ್ಲ. ಅವರು ತುಂಬಾ ಇಷ್ಟಪಡುತ್ತಿದ್ದ ಕ್ಷೇತ್ರಗಳಲ್ಲಿ ಸಂಗೀತವೂ ಒಂದು. ಅವರಿಗೆ ಅದರ ಬಗ್ಗೆ ಒಂದು ಸ್ಪಷ್ಟ ಕಲ್ಪನೆಯಿತ್ತು. ಮೊದಲಿಗೆ ರವಿಶಂಕರ್, ಅಲಿ ಅಕ್ಬರ್ ಖಾನ್, ಇಂತಹ ಪ್ರಖ್ಯಾತರೊಂದಿಗೆ ಕೆಲಸ ಮಾಡಿದ ಅವರು, ನಂತರದ ದಿನಗಳಲ್ಲಿ ತಮ್ಮ ಸಿನಿಮಾಗಳಿಗೆ ತಾವೇ ಸಂಗೀತ ಸಂಯೋಜನೆ ಮಾಡಲು ಪ್ರಾರಂಭಿಸಿದ್ದರು. ಅವರ ಒಂದು ಲೇಖನದ ಭಾವಾನುವಾದವನ್ನು ನಿಮ್ಮ ಮುಂದಿಡುತ್ತಿದ್ದೇವೆ.]’ಹಿಂದಿ ಸಿನಿಮಾಗಳಾ? ಅಂದರೆ ತುಂಬಾ ಹಾಡುಗಳಿರುತ್ತವಲ್ಲಾ, ಆ ಸಿನಿಮಾಗಳಾ?
ಹೌದು, ಖಂಡಿತಾ. ಹಿಂದಿ ಸಿನಿಮಾದ ಈ ವ್ಯಾಖ್ಯೆ ನಾವು ಕಲ್ಪಿಸಿಕೊಳ್ಳುವುದಕ್ಕಿಂತಲೂ ಹೆಚ್ಚು ವ್ಯಾಪಕವಾಗಿ ಹರಡಿದೆ. ವಿದೇಶಗಳಲ್ಲಿ ಈ ಬಗ್ಗೆ ಅಳುಕಿನಿಂದಲೇ ನನ್ನನ್ನು ಕೇಳುತ್ತಾರೆ. ನನಗೆ ಈ ಪ್ರಶ್ನೆಯಿಂದ ಬೇಸರವಾಗಬಹುದು ಅಂದುಕೊಂಡು ಅನುಮಾನದಿಂದಲೇ ಕೇಳುತ್ತಾರೆ. ನನಗೇಕೆ ಬೇಸರ? ವಾಸ್ತವವಾಗಿ ಇದಕ್ಕೆ ಹಲವು ಉತ್ತರಗಳು ಸಾಧ್ಯ. ನಾನು ಆ ಉತ್ತರಗಳನ್ನು ಹಲವು ಸಂದರ್ಭದಲ್ಲಿ ನೀಡಿದ್ದೇನೆ. ಒಂದು ಉತ್ತರವೆಂದರೆ, ಭಾರತೀಯರಿಗೆ ಸಂಗೀತವೆಂದರೆ ತುಂಬಾ ಇಷ್ಟ. ಅವರಿಗೆ ಹಾಡುಗಳನ್ನು ಕಂಡರೆ ಬಲು ಪ್ರೀತಿ. ಹಾಡುಗಳನ್ನು ಕೇಳುವುದಕ್ಕೆ ಮತ್ತೆ ಮತ್ತೆ ಸಿನಿಮಾ ನೋಡುತ್ತಾರೆ. ಈ ಉತ್ತರ ಮತ್ತೊಂದು ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ’ಹಾಡುಗಳಿಲ್ಲದ ಸಿನಿಮಾಗಳನ್ನು ನೋಡುವುದೇ ಇಲ್ಲ ಅನ್ನುವ ಮಟ್ಟಿಗೆ ಜನ ಹಾಡುಗಳನ್ನು ಬಯಸುತ್ತಾರೆಯೇ? ಹಾಡುಗಳಿಲ್ಲದ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಗುವುದೇ ಇಲ್ಲವೇ?’ ಇದು ಕ್ಲಿಷ್ಟವಾದ ಪ್ರಶ್ನೆ. ಇಟಲಿಯವರು, ಸ್ಪೇನಿನವರು ಅಷ್ಟೇ ಏಕೆ ರಷ್ಯಾದವರು ಅಥವಾ ಅಮೇರಿಕೆಯವರು ಹಾಡುಗಳನ್ನು ಇಷ್ಟಪಡುವುದಕ್ಕಿಂತಲೂ ಭಾರತೀಯರು ಹಾಡುಗಳನ್ನು ಹೆಚ್ಚು ಇಷ್ಟಪಡುತ್ತಾರೆ ಅನ್ನುವುದಕ್ಕೆ ಜನಾಂಗೀಯವಾದ ಯಾವುದೇ ಪುರಾವೆಗಳಿಲ್ಲ.
ಎರಡನೆಯ ಉತ್ತರ ಅಸಡ್ಡೆಯಿಂದ ನೀಡುವುದು. ಅದು ಹೇಗಾಗುತ್ತೆ ಅನ್ನೋದು ನಿಮಗೆ ಗೊತ್ತಲ್ಲಾ. ಹಾಡು ಇರುವ ಒಂದು ಸಿನಿಮಾ ಯಶಸ್ವಿಯಾಗುತ್ತದೆ. . . . ನಂತರ ಇನ್ನೊಂದು ಅಂತಹ ಸಿನಿಮಾ ಬರುತ್ತದೆ. . . . ಆಮೇಲೆ ಇನ್ನೊಂದು . . . . .’ ಆ ಸರಣಿಯನ್ನು ಉಪೇಕ್ಷೆಯಿಂದ ಹಾಗೇ ಮುಂದುವರಿಸುತ್ತೀರಿ. ಇದರಲ್ಲಿರುವ ನಿರಾಶೆಯ ಸೂಚನೆ ಸ್ಪಷ್ಟ. ಹೀಗೆ ಚಿಗುರಿ ವ್ಯಾಪಿಸುವ ಹಾಡಿನ ಸಾಂಕ್ರಾಮಿಕತೆ ಮಾಧ್ಯಮದ ಜೀವಂತಿಕೆಯನ್ನು ನಿರ್ದಯೆಯಿಂದ ದುರ್ಬಲಗೊಳಿಸುತ್ತದೆ.
ಬಹುಶಃ ಮೂರನೆಯ ಉತ್ತರವೇ ಹೆಚ್ಚು ನಿಜವೆನಿಸುತ್ತದೆ. ಭಾರತೀಯರಿಗೆ ಸಂಗೀತವೊಂದೇ ತೀರಾ ದುಬಾರಿಯಲ್ಲದ ಮನರಂಜನೆ. ಅವರಿಗೆ ಪಾಶ್ಚಾತ್ಯರಿಗೆ ಇರುವಷ್ಟು ಆಯ್ಕೆಗಳಿಲ್ಲ. ಮ್ಯೂಸಿಕ್ ಹಾಲ್‌ಗಳು (ಹಾಡು, ನೃತ್ಯ, ವಿನೋದ, ದೊಂಬರಾಟ ಮುಂತಾದವುಗಳನ್ನು ಒಳಗೊಂಡಿರುವ ವಿವಿಧ ವಿನೋದಾವಳಿ), ವಿಡಂಬನಾತ್ಮಕ ರೂಪಕಗಳು, ನಾಟಕಗಳು, ಶಾಶ್ವತವಾದ ಸರ್ಕಸ್ಸುಗಳು ಹೀಗೆ ಯಾವ ಆಯ್ಕೆಯೂ ಇರುವುದಿಲ್ಲ. ಮನೋಹರವಾದದ್ದು, ರಮ್ಯವಾದದ್ದು, ಹಾಸ್ಯಮಯವಾದದ್ದನ್ನು ನೋಡುವುದಕ್ಕೆ, ಹಾಡುವುದಕ್ಕೆ ಮತ್ತು ನರ್ತಿಸುವುದಕ್ಕೆ ಇರುವ ಬಯಕೆ ಹೇಗಾದರೂ ಈಡೇರಬೇಕು. ಸಿನಿಮಾ ಆ ಬಯಕೆಯನ್ನು ಈಡೇರಿಸದಿದ್ದರೆ ಇನ್ಯಾವುದರಿಂದಲೂ ಅದು ಸಾಧ್ಯವಾಗುವುದಿಲ್ಲ.
ಹಾಗಾಗಿ ಹಾಡಿನ ಸೂತ್ರಕ್ಕೆ ಪೂರಕವಾದ ಪರಿಸ್ಥಿತಿಯಿದೆ. ಅದಕ್ಕೆ ಒಂದು ಆಧಾರವೂ ಇದೆ. ಆಯಾಸಗೊಂಡಿರುವ, ಯಾವ ತರಬೇತಿಗೂ ಒಳಪಡದಿರುವ ಹಾಗೂ ಅಭಿರುಚಿಯೊಂದು ರೂಪುಗೊಂಡಿಲ್ಲದ ಮನಸ್ಸುಗಳಿಗೆ ಏಕತಾನತೆಯಿಂದ ತಪ್ಪಿಸಿಕೊಂಡು, ಆಗೀಗ ಆಯಾಸ ಪರಿಹರಿಸಿಕೊಳ್ಳಲು ಸಾಧ್ಯವಾಗುವುದಾದರೆ, ಜನಪ್ರಿಯ ಮನರಂಜನೆಯ ಹಲವು ಅಂಶಗಳನ್ನು ಒಳಗೊಂಡಿರುವ, ಹಾಡುಗಳಿರುವ ಸಿನಿಮಾ ಒಂದು ಒಳ್ಳೆಯ ಪರಿಹಾರ ಅನ್ನುವುದರಲ್ಲಿ ಅನಮಾನವಿಲ್ಲ. ಎಲ್ಲರೂ ಭಾವಿಸಿಕೊಂಡಿರುವುದು ಹೀಗೇ ಮತ್ತು ಮುಂದೆಯೂ ಬಹುಕಾಲ ಇದನ್ನು ಹೀಗೇ ಕಲ್ಪಿಸಿಕೊಳ್ಳುತ್ತಾರೆ ಅನ್ನುವ ಅನುಮಾನ ನನ್ನದು. ಈ ಅಭ್ಯಾಸ ತುಂಬಾ ಹಳೆಯದು ಮತ್ತು ವ್ಯಾಪಕವಾದದ್ದು. ಅದು ನಮ್ಮೊಳಗೆ ಅದೆಷ್ಟು ಅಂತರ್ಗತವಾಗಿದೆಯೆಂದರೆ, ಅವು ನಮ್ಮಲ್ಲಿ ಬೆಳೆಸಿರುವ ವಿಶಿಷ್ಟವಾದ ಲಕ್ಷಣಗಳು ನಮಗೆ ಕಾಣಿಸುತ್ತಲೇ ಇಲ್ಲ. ಅವುಗಳನ್ನು ಒಮ್ಮೆ ಗಮನಿಸುವುದು ಒಳ್ಳೆಯದು. ಸಿನಿಮಾದಲ್ಲಿ ಆಗುತ್ತಿರುವ ಜಾಗತಿಕ ಕ್ರಾಂತಿಯಲ್ಲಿ ಬದಲಾಗದೆ ಉಳಿದಿರುವುದು ಈ ಹಾಡುಗಳು ಮಾತ್ರ.
ಒಂದು ’ಸಂಗೀತಾತ್ಮಕ’ವಲ್ಲದ ಕಥೆಯಲ್ಲಿ ಆರು ಹಾಡುಗಳಿಗೆ ಅವಕಾಶ ಕಲ್ಪಿಸು ಅಂತ ನನ್ನನ್ನು ಕೇಳಿದರೆ ನಾನು ಕೈಚೆಲ್ಲಿ ಕೂರುತ್ತೇನೆ. ಬಲವಂತ ಮಾಡಿದರೆ ವಿರೋಧಿಸುತ್ತೇನೆ ಅಥವಾ ಸಿಟ್ಟಾಗುತ್ತೇನೆ. ಆದರೂ ಒಂದು ಸಿನಿಮಾಗೆ ಆರು ಹಾಡುಗಳು ಅನ್ನುವುದು ಒಂದು ಸ್ವೀಕೃತ ಸರಾಸರಿ. ಆದರೆ ಭಾರತೀಯ ಸಿನಿಮಾದ ಚರಿತ್ರೆಯಲ್ಲಿ ಯಾವುದೇ ಸಮಯದಲ್ಲೂ ಕೆಲವೇ ಕೆಲವು ಓದುಗರಿರುವ ಸಿನಿಮಾ ಪತ್ರಿಕೆಯಲ್ಲಿ ಕೆಲವು ಬೆರೆಳೆಣಿಕೆಯ ಮಂದಿ ಕುಚೋದ್ಯದಿಂದ ಬರೆದದ್ದು ಬಿಟ್ಟರೆ ಉಳಿದಂತೆ ಇದನ್ನು ವಿರೋಧಿಸುವ ಧ್ವನಿ ಎದ್ದಿಲ್ಲ. ನಾನು ಒಮ್ಮೆ ಅಮೇರಿಕೆಯ ಪತ್ರಿಕೆಯೊಂದರಲ್ಲಿ ಹಿಂದಿ ಸಿನಿಮಾ ಕುರಿತ ವಿಮರ್ಶೆಯೊಂದನ್ನು ಓದಿದ್ದೆ. ಅದರಲ್ಲಿ ಚಲನಚಿತ್ರ ಗೀತೆಗಳಿಗೆ ಇರುವ ಬ್ರೆಕ್ಟ್ ಪ್ರತಿಪಾದಿಸುವ ಪರಕೀಯತೆಯ ಸಾಧ್ಯತೆಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ನೀವು ನೋಡುತ್ತಿರುವುದು ಸಿನಿಮಾ, ಅದು ವಾಸ್ತವವಲ್ಲ ಅನ್ನುವುದನ್ನು ಅದು ಜನರಿಗೆ ಮನದಟ್ಟು ಮಾಡಿಕೊಡುತ್ತಿರುತ್ತದೆ. ಒಟ್ಟಾರೆಯಾಗಿ ಭಾರತೀಯ ಕಲೆಯ ಅವಾಸ್ತವ ಪರಂಪರೆಯಲ್ಲಿ ಒಂದು ಆಸಕ್ತಿದಾಯಕವಾದ ಶೈಲೀಕರಣದ ಉದಾಹರಣೆ ಎಂದು ವಿಮರ್ಶಕರು ಬರೆದಿದ್ದರು. ಸಿನಿಮಾ ತಯಾರಕರು ಹಾಡುಗಳನ್ನು ಆ ನೆಲೆಯಲ್ಲಿ ನೋಡುತ್ತಾರೆಯೇ, ಎನ್ನುವುದು ನನಗೆ ತಿಳಿಯದು. ಸಿನಿಮಾದ ಉದ್ದೇಶಕ್ಕೆ ಒಂದು ವೇಳೆ ಹಾಡುಗಳು ಪೂರಕವಾಗಿದ್ದರೆ ನನಗೆ ವೈಯಕ್ತಿಕವಾಗಿ ಹಾಡುಗಳ ಬಗ್ಗೆ ಯಾವ ತಕರಾರಿಲ್ಲ. ಹಾಗಿದ್ದಾಗ ಕಲಾತ್ಮಕತೆಯ ದೃಷ್ಟಿಯಿಂದಲೂ ಆಕ್ಷೇಪಿಸುವುದಕ್ಕೆ ಕಾರಣವಿಲ್ಲ.
ಇನ್ನೊಂದು ವಿಚಿತ್ರವಾದ ರೂಢಿಯನ್ನು ಜನ ಸಲೀಸಾಗಿ ಒಪ್ಪಿಕೊಂಡಿದ್ದಾರೆ. ಸಿನಿಮಾದಲ್ಲಿ ಒಂದು ಹಾಡನ್ನು ಕೇಳುವ ಶ್ರೋತೃಗಳು ಹಿನ್ನೆಲೆ ಗಾಯನದ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿರುವ ಏಳೆಂಟು ಜನಪ್ರಿಯ ಗಾಯಕರ ಕಂಠಕ್ಕೆ ಹೊಂದಿಕೊಂಡಿರುತ್ತಾರೆ. ಹಾಡುವ ಧ್ವನಿ ಮತ್ತು ಮಾತನಾಡುವ ಧ್ವನಿ ತಾಳೆಯಾಗುವುದು ತೀರಾ ಅಪರೂಪ ಮತ್ತು ಆಕಸ್ಮಿಕ. ಜೊತೆಗೆ ಅದು ಹಾಗಿರಬೇಕೆಂಬ ನಿರೀಕ್ಷೆಯೂ ಇರಲಿಲ್ಲ. ಆದರೆ ಇಂಥದ್ದಕ್ಕೆ ಒಗ್ಗಿಕೊಳ್ಳದೇ ಇರುವವರಿಗೆ ನಾದಗುಣದಲ್ಲಿ (ಣimbಡಿe) ಹೀಗೆ ಆಗುವ ಬದಲಾವಣೆ ತಲ್ಲಣವನ್ನು ಉಂಟು ಮಾಡಬಹುದು. ಆದರೆ ಹಾಡಿಗೆ ಒಗ್ಗಿಕೊಂಡಿರುವ ಕೇಳುಗರಿಗೆ ತಮ್ಮ ಅಚ್ಚುಮೆಚ್ಚಿನ ಏಳೆಂಟು ಕಂಠಗಳನ್ನು ಗುರುತಿಸುವುದಕ್ಕೆ ಆಗದೇ ಹೋದಾಗ ತಲ್ಲಣವುಂಟಾಗಬಹುದು.
ಸಿನಿಮಾದಲ್ಲಿ ಈ ಹಾಡುಗಳನ್ನು ಚಿತ್ರೀಕರಿಸುವುದಕ್ಕೆ ಅದೆಷ್ಟು ಆಲೋಚಿಸಿರುತ್ತಾರೆ ಎನ್ನುವುದು ಕೂಡ ಅಚ್ಚರಿಯ ವಿಷಯವೇ ಆಗಿದೆ. ಕೇವಲ ನೃತ್ಯದ ಸನ್ನಿವೇಶಗಳಿಗೆ ಮಾತ್ರವಲ್ಲ, ಹಾಡುಗಳಿಗೂ ಅಷ್ಟೊಂದು ಚಿಂತನ-ಮಂಥನ ನಡೆದಿರುತ್ತದೆ. ನೃತ್ಯಗಳು ಚಲನೆಗೆ ಸಂಬಂಧಿಸಿದ್ದು ಹಾಗಾಗಿ ಅದನ್ನು ಕ್ಯಾಮೆರಾ ಹಾಗೂ ಕಟ್‌ಗಳನ್ನು ಬಳಸಿ ಹೆಚ್ಚು ಸಲೀಸಾಗಿ ನಿರ್ವಹಿಸಬಹುದು. ಹಾಡುಗಳ ಚಿತ್ರೀಕರಣ ನಿಜಕ್ಕೂ ಸಮಸ್ಯಾತ್ಮಕ. ಹಿಂದಿನ ಸಂಪ್ರದಾಯದಂತೆ ಹಾಡುವವರು ಒಂದು ಮರದಿಂದ ಇನ್ನೊಂದು ಮರಕ್ಕೆ, ಒಂದು ಕಿಟಕಿಯಿಂದ ಇನ್ನೊಂದಕ್ಕೆ, ಮಧ್ಯದಲ್ಲಿ ಒಂದು ಕಂಬವನ್ನು ಸುತ್ತುತ್ತಾ ಹೋಗುವುದು ಈಗ ನಿಂತಿದೆ. ಈಗ ಹಾಡುಗಳಿಗೆ ನೃತ್ಯ ಸಂಯೋಜಿಸಿರುತ್ತಾರೆ. ಹಾಡಿನ ಪ್ರತಿಯೊಂದು ಸಾಲನ್ನೂ ಬೇರೆ ಬೇರೆ ದೃಶ್ಯಗಳ ಹಿನ್ನೆಲೆಯಲ್ಲಿ ಚಿತ್ರಿಸುವುದು ಕೂಡ ಈಗ ಅಪರೂಪವೇನಲ್ಲ. ಇದು ಒಂದು ದಿಟ್ಟತನದ ಅನ್ವೇಷಣೆ. ನಾನು ಅಪಹಾಸ್ಯ ಮಾಡುತ್ತಿಲ್ಲ. ಇದು ಸಿನಿಮಾದ ಉಳಿದ ಶೈಲಿಗೆ ಹೊಂದಿಕೊಳ್ಳುವಂತಿದ್ದರೆ ಸಂಪೂರ್ಣವಾಗಿ ಸಿನಿಮೀಯ ಹಾಗೂ ಸಮರ್ಥನೀಯ. ಅಂದರೆ ಇಡೀ ಸಿನಿಮಾವನ್ನೇ ಕೋರಿಯೋಗ್ರಾಫ್ ಮಾಡಬೇಕು ಎಂದು ನಾನು ಹೇಳುತ್ತಿಲ್ಲ. ಆದರೆ ಒಟ್ಟು ಚಿತ್ರೀಕರಣ ಈ ಅವಾಸ್ತವಿಕತೆಗೆ ಹೊಂದಿಕೊಳ್ಳುವಂತಿರಬೇಕು. ಸಿನಿಮಾದ ಸನ್ನಿವೇಶಗಳು ಹಾಡಿಗೆ ಜಾರಿಕೊಳ್ಳುವುದು ಗಮನಕ್ಕೆ ಬಾರದಷ್ಟು ಸುಲಲಿತವಾಗಿ, ಸಹಜವಾಗಿರಬೇಕು.
ಇನ್ನು ಕೊನೆಯದಾಗಿ ಸಾಹಿತ್ಯ ರಚಿಸುವ ಮತ್ತು ಅದಕ್ಕೆ ಸಂಗೀತವನ್ನು ಸಂಯೋಜಿಸುವ ಪರಿಣತರ (ಸಾಮಾನ್ಯವಾಗಿ ಅದು ಇಬ್ಬರ ತಂಡವಾಗಿರುತ್ತದೆ) ಬಗ್ಗೆ ಹೇಳಬೇಕು. ನಾನು ಹಲವು ವರ್ಷಗಳಿಂದ ಹಿಂದಿ ಚಲನಚಿತ್ರ ಗೀತೆಗಳಲ್ಲಿ ಆಗುತ್ತಿರುವ ಬೆಳವಣಿಗೆಯನ್ನು ಗಮನಿಸುತ್ತಿದ್ದೇನೆ. ನನ್ನ ಮಗ ಅವುಗಳಲ್ಲಿ ತೋರುತ್ತಿರುವ ನಿರಂತರ ಆಸಕ್ತಿಯಿಂದ ಇದು ನನಗೆ ಸಾಧ್ಯವಾಗಿದೆ. ಅದರಲ್ಲಿ ಕಂಡುಬರುತ್ತಿರುವ ಸೃಜನಶೀಲತೆಯನ್ನು ನೋಡಿ ಬೆರಗಾಗಿದ್ದೇನೆ. ಕಾವ್ಯವಾಗಿ ಅವುಗಳು ತುಂಬಾ ಕಲಕುವಂಥದ್ದಲ್ಲ. ಆದರೆ ಎಷ್ಟೊಂದು ಹಾಡುಗಳು ಬಂದಿವೆ! ವಾಸ್ತವವಾಗಿ ಒಂದು ರಚನೆ ಒಳ್ಳೆಯ ಸಾಹಿತ್ಯವಾಗಬೇಕಾದರೆ ಅದು ಮಹಾಕಾವ್ಯವಾಗಬಾರದು. ಯಾಕೆಂದರೆ ಒಂದು ಮಹಾನ್ ಕಾವ್ಯಕ್ಕೆ ಅದರದೇ ಆದ ಸಂಗೀತ ಶಕ್ತಿ ಇರುತ್ತದೆ. ಚಲನಚಿತ್ರ ಸಂಗೀತದಲ್ಲಿ ನಿಜವಾಗಿಯೂ ಗಮನಾರ್ಹವಾದ ಅಂಶವೆಂದರೆ, ಅದಕ್ಕೆ ಬಳಸಿರುವ ಧಾಟಿ, ಮಟ್ಟು ಹಾಗೂ ವಾದ್ಯಗಳು. ಮೊದಲಿಗೆ ಇಡೀ ಪ್ರಪಂಚದ ಸಾಧ್ಯವಿರುವ ಶಾಸ್ತ್ರೀಯ, ಜಾನಪದ, ನೀಗ್ರೊ, ಗ್ರೀಕ್, ಪಂಜಾಬಿ, ಚಾ-ಚಾ, ಅಥವಾ ಜಗತ್ತಿನ ಯಾವುದೇ ಮೂಲೆಯಿಂದ ನೀವು ಯೋಚಿಸಬಹುದಾದ ಎಲ್ಲಾ ಪ್ರಕಾರಗಳ ಸಂಗೀತದ ನುಡಿಗಟ್ಟುಗಳನ್ನು ಬಳಸಿಕೊಳ್ಳುತ್ತಾರೆ. ವಾದ್ಯಗಳ ಸಂಯೋಜನೆಯಲ್ಲಿ ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲದಂತಹ ವೈದೃಶ್ಯವನ್ನು ಮೂಡಿಸುವಲ್ಲಿ ಅವರು ತೋರುವ ಧಾರ್ಷ್ಟ್ಯ, ಓಜಸ್ಸು, ವರ್ಣಮಯವಾದ ನಾದಗುಣ ಮತ್ತು ವಿಭಿನ್ನತೆಗೆ ಸಂಬಂಧಿಸಿದ ಭಾವತೀವ್ರತೆ ಇವು ತುಂಬಾ ಪ್ರಶಂಸನೀಯ. ಅದರಲ್ಲಿನ ಮುಖ್ಯ ವಿಷಯವೆಂದರೆ, ಸಂಗೀತವಾಗಿ ಅದು ಅರ್ಥಪೂರ್ಣವಾಗಿರುತ್ತದೆ. ಆದರೆ ಈ ಮಾತನ್ನು ಆಧುನಿಕ ಬಂಗಾಳಿ ಹಾಡುಗಳ ಬಗ್ಗೆ ಹೇಳಲಾಗುವುದಿಲ್ಲ.
ನಿರಂತರವಾಗಿ ಸೃಷ್ಟಿಸುತ್ತಲೇ ಇರಬೇಕೆನ್ನುವ ಒತ್ತಡ ಕೆಲವೊಮ್ಮೆ ಎರವಲು ಪಡೆಯುವುದಕ್ಕೆ ಕಾರಣವಾಗಿರಬಹುದು. ಆದರೆ ಮೊಜಾರ್ಟನ ಸಿಂಪೋನಿಯ ಒಂದು ಸೊಗಸಾದ ಚಲನೆಯ ಪ್ರಮುಖ ಭಾಗವನ್ನು ಹೆಕ್ಕಿಕೊಂಡು ಒಂದು ಚಿತ್ರಗೀತೆಯನ್ನು ಮಾಡಿದರೆ ಹಾಗೂ ಅದು ಮನವೊಪ್ಪುವಂತಿದ್ದರೆ ನನಗೆ ಕೋಪಬರುವುದಿಲ್ಲ. ನಾನದನ್ನು ಮೆಚ್ಚಿಕೊಳ್ಳುತ್ತೇನೆ.
ಭಾವಾನುವಾದ: ಟಿ ಎಸ್ ವೇಣುಗೋಪಾಲ್, ಶೈಲಜ