ಇದು ಎಂಥಾ ಲೋಕವಯ್ಯ?

 In RAGAMALA
T Brinda 1920 ಮತ್ತು 30ರ ದಶಕದಲ್ಲಿ ಭಾರತವು ಗ್ರಾಮಾಫೋನ್ ಕಂಪನಿಗಳ ಮತ್ತು ಧ್ವನಿಮುದ್ರಣಗಳ ಸುಗ್ಗಿಯನ್ನು ಕಂಡಿತು.  ಯುರೋಪಿನಿಂದ ಇಲ್ಲಿಗೆ ಬಂದ ವಿದೇಶಿ ಗ್ರಾಮಾಫೋನ್ ಕಂಪನಿಗಳು ಹಲವರ ಸಂಗೀತವನ್ನು ಧ್ವನಿಮುದ್ರಿಸಿಕೊಂಡವು.  ಹಾಗೆ ಮುದ್ರಿಸಿಕೊಂಡಿದ್ದರಲ್ಲಿ ಹೆಚ್ಚಿನ ಧ್ವನಿಗಳು ಹೆಂಗಸರದ್ದು ಮತ್ತು ಅವರಲ್ಲಿ ಹೆಚ್ಚಿನವರು ಜಾತಿಯ ಏಣಿಯಲ್ಲಿ ತುಂಬಾ ಕೆಳಸ್ಥರದಲ್ಲಿ ಇದ್ದ ದೇವದಾಸಿ ಕುಟುಂಬದವರು.  ಇದು ಕಾಲಿಟ್ಟ ಸ್ವಲ್ಪ ದಿನಗಳಲ್ಲೇ ಭಾರತದಲ್ಲಿ ಆಕಾಶವಾಣಿಯು ಪ್ರಾರಂಭವಾಯಿತು.  ಅದು ಪ್ರಾರಂಭವಾಗಿ ಹಲವಾರು ವರುಷಗಳು ಕಳೆದರೂ ಮದ್ರಾಸಿನ ಆಕಾಶವಾಣಿ ಸ್ಟುಡಿಯೋದಲ್ಲಿ ದೇವದಾಸಿ ಕುಲಕ್ಕೆ ಸೇರಿದ ಒಬ್ಬಳೇ ಒಬ್ಬ ಸಂಗೀತಗಾತರ್ಿಯ ಸಂಗೀತದ ಧ್ವನಿಮುದ್ರಣ ನಡೆದಿರಲಿಲ್ಲ.  ಅವರನ್ನು ಕರೆದರೆ ಆಕಾಶವಾಣಿ ಧ್ವನಿಮುದ್ರಣ ಸ್ಟುಡಿಯೋದ ಪಾವಿತ್ರ್ಯ ಹಾಳಗುತ್ತದೆ ಎಂದು ಭಾವಿಸಿದ್ದರು.  ಜೊತೆಗೆ ಅಲ್ಲಿ ಪ್ರತಿ ಗುರುವಾರ ಸಂಜೆ ಪ್ರಸಾರವಾಗುತ್ತಿದ್ದ ರಾಗ ತಾನ ಪಲ್ಲವಿಯ (ಇದು ಕನರ್ಾಟಕ ಸಂಗೀತದ ಅತ್ಯಂತ ಕ್ಲಿಷ್ಟವಾದ ರಚನೆಗಳು ಮತ್ತು ಅತಿಹೆಚ್ಚಿನ ಸೃಜನಶೀಲತೆ ಮತ್ತು ಪಾಂಡಿತ್ಯವನ್ನು ಒಳಗೊಳ್ಳುವ ಭಾಗಗಳು.) ಕಾರ್ಯಕ್ರಮದಲ್ಲಿ ಒಬ್ಬಳೇ ಒಬ್ಬ ಮಹಿಳೆಯೂ ಪಲ್ಲವಿಯನ್ನು ಹಾಡಿರಲಿಲ್ಲ ಅಥವಾ ನುಡಿಸಿರಲಿಲ್ಲ.  ಈ ಬಗ್ಗೆ ಪ್ರಶ್ನಿಸಿದಾಗ ‘ಈ ಸ್ಲಾಟ್ನಲ್ಲಿ ಕಾರ್ಯಕ್ರಮನೀಡಲು ಹೆಂಗಸರಿಗೆ ಅವಕಾಶ ನೀಡುವುದುಬೇಡ ಎನ್ನುವ ನಿಯಮವನ್ನು ಮದ್ರಾಸ್ ಆಕಾಶವಾಣಿಯಲ್ಲಿ ಮಾಡಿಕೊಂಡಿದ್ದೇವೆ ಎಂದು ಸಂಬಂಧಪಟ್ಟವರು ಯಾವ ಅಳುಕೂ ಇಲ್ಲದೆ ನಿರಾಳವಾಗಿ ಉತ್ತರಿಸಿದರಂತೆ. (‘ ಇಂದಿರಾ ಮೆನನ್). ಆಕಾಶವಾಣಿಯಂಥ ಒಂದು ಸಕರ್ಾರಿ  ಸಂಸ್ಥೆ ಸಾಮಾಜಿಕ ಸಂಪ್ರದಾಯಕ್ಕೆ ವ್ಯತಿರಿಕ್ತವಾಗಿ ಹೋಗುವ ಎದೆಗಾರಿಕೆಯನ್ನು ತೋರಲಿಲ್ಲ.
ಈ ಎರಡೂ ಸಂಸ್ಥೆಗಳ ಹಿಂದಿರುವ ಧೋರಣೆ ನಮಗಿಲ್ಲಿ ತುಂಬಾ ಮುಖ್ಯವಾಗುತ್ತದೆ.  ಪಾಶ್ಚಿಮಾತ್ಯ ಸಮಾಜದಲ್ಲಿ ಮೊದಲನೆಯದಾಗಿ ಜಾತಿಯ ಕಲ್ಪನೆ ಇರಲಿಲ್ಲ ಮತ್ತು ಮಹಿಳೆಯರು ಸಂಗೀತವನ್ನು ಹಾಡುವುದು ಅಥವಾ ನುಡಿಸುವುದಕ್ಕೆ ಸಂಬಂಧಿಸಿದಂತೆ ಲಿಂಗಾಧಾರಿತ ಕಲ್ಪನೆಗಳು ಅಷ್ಟಾಗಿ ಇರಲಿಲ್ಲ. ಹಾಗಾಗಿ ಅವರಿಗೆ ಹೆಂಗಸರು ಅಥವಾ ದೇವದಾಸಿಯರು ಹಾಡುವ, ನುಡಿಸುವ ಸಂಗೀತವನ್ನು ದಾಖಲಿಸುವುದಕ್ಕೆ ಯಾವ ಒದ್ದಾಟವೂ ಇರಲಿಲ್ಲ.  ಆದರೆ, ಇದೇ ನೆಲದಲ್ಲಿ ರೂಪುಗೊಂಡ ಆಕಾಶವಾಣಿಯು ಇವೆಲ್ಲವನ್ನೂ ಮೈಗೂಡಿಸಿಕೊಂಡಿತ್ತು. ನಮ್ಮ ಸಂಗೀತ ಲೋಕ ತನ್ನ ಸುತ್ತಲಿನ ಎಲ್ಲಾ ಸಾಂಸ್ಕೃತಿಕ ಪೂರ್ವಗ್ರಹಗಳನ್ನೂ ಮೈಗೂಡಿಸಿಕೊಂಡಿತ್ತು.  ಈ ನೆಲದ ನಾಡಿ ಮಿಡಿತದಲ್ಲಿ ಸೇರಿಹೋಗಿರುವ ಜಾತಿ ಹಾಗೂ ಲಿಂಗಾಧಾರಿತ ಪೂರ್ವಗ್ರಹಗಳು ಸಂಗೀತ ಪ್ರಪಂಚದೊಳಗೂ ಬೆರೆತು ಹೋಗಿತ್ತು.  ಜಾತಿಯ ಏಣಿಯ ಕೆಳಗಿನ ಮೆಟ್ಟಿಲಿನಲ್ಲಿದ್ದ ದೇವದಾಸಿ ಕುಲದವರು ಮತ್ತು ಒಟ್ಟಾರೆಯಾಗಿ ಪುರುಷರ ಲೋಕದ ಅಂಚಿನಲ್ಲಿಯೇ ಉಳಿದುಬಿಟ್ಟಿರುವ ಹೆಂಗಸರು (ಮೇಲ್ಜಾತಿಯ ಹೆಂಗಸರೂ ಸೇರಿದಂತೆ) ತಮ್ಮಂಥ ಒಬ್ಬ ಹೆಂಗಸೇ ಅಧಿದೇವತೆಯಯಾಗಿರುವ ವೀಣಾಪಾಣಿಯ ಲೋಕದಲ್ಲಿ ಏನೆಲ್ಲಾ ಕಂಡರು, ಏನೆಲ್ಲಾ ಅನುಭವಿಸಿದರು, ತಮಗಾಗಿ ಒಂದು ಅಂಗೈಯ್ಯಗಲ ಜಾಗವನ್ನು ಮಾಡಿಕೊಳ್ಳಲು ಎಷ್ಟೆಲ್ಲಾ ಹೆಣಗಾಡಿದರು ಮತ್ತು ಎಷ್ಟೋ ಬಾರಿ ತಮ್ಮ ಕಲೆಯನ್ನೇ ಪ್ರತಿಭಟನೆಯ ಸಾಧನವಾಗಿ ಮಾಡಿಕೊಂಡರು ಎನ್ನುವ ಹಲವಾರು ‘ಹರ್ ಸ್ಟೋರಿಗಳನ್ನು’ ಸಂಗೀತ ಪ್ರಪಂಚದ ‘ಹಿಸ್ ಸ್ಟೋರಿ’ ಒಳಗೊಂಡಿದೆ.  ಈ ಕಥಾನಕಗಳು ನಾನು ಇಲ್ಲಿ ಹೇಳುತ್ತಿರುವಷ್ಟು ಸರಳವಾಗಿ ಪ್ರತ್ಯೇಕವಾಗಿ ಕಾಣಸಿಗುವುದಿಲ್ಲ.  ಅವು ಅತ್ಯಂತ ಜಟಿಲವಾಗಿ ಸಂಕೀರ್ಣವಾಗಿ ಒಂದರೊಂದಿಗಿನ್ನೊಂದು ಹೆಣೆದುಕೊಂಡು ಬಿಟ್ಟಿದೆ- ಜಾತಿಯೊಳಗೆ ಲಿಂಗ, ಲಿಂಗದೊಳಗೆ ಜಾತಿ, ಅವುಗಳೊಳಗೆ ಸಾಂಸ್ಕೃತಿಕ ನಂಬಿಕೆಗಳು- ಹೀಗೆಲ್ಲಾ.   
ಬೌದ್ಧಿಕವಾಗಿ ಹೆಂಗಸರ ಬುದ್ಧಿ ಮೊಳಕಾಲ ಕೆಳಗೆ ಹಾಗಾಗಿ ತುಂಬಾ ಸೃಜನಶೀಲವಾದ ಮೇಲ್ಮಟ್ಟದ ಸಂಗೀತ ಅವರಿಗಲ್ಲ.  ಹೆಂಗಸರು ಸುಕೋಮಲವಾಗಿ ಸ್ತ್ರೀತ್ವದ ಪ್ರತೀಕವಾಗಿರಬೇಕು ಆದ್ದರಿಂದ ಅವರ ಸಂಗೀತ ಮಧುರವಾಗಿ ಸುಲಲಿತವಾಗಿ ಇರಬೇಕು ಮತ್ತು ಸರಳವಾಗಿ, ಕಿವಿಗಿಂಪಾಗಿ, ಮನಸ್ಸಿಗೆ ಮುದನೀಡುವಂತೆ ಇರಬೇಕೇ ಹೊರತು, ಬುದ್ಧಿಗೆ ಕೆಲಸಕೊಡುವಂಥ ಹೆಚ್ಚಿನ ಕ್ಲಿಷ್ಟತೆ ಮತ್ತು ಸಂಕೀರ್ಣತೆಯನ್ನು ಹೊಂದಿರಬಾರದು, ಸಂಗೀತದಲ್ಲಿ ಸುಧೀರ್ಘವಾದ ಆಲಾಪಗಳನ್ನು ಮತ್ತು ಸ್ವರಪ್ರಸ್ತಾರದಲ್ಲಿ ತುಂಬಾ ಲೆಕ್ಕಾಚಾರವನ್ನು ಅವರು ಮಾಡಬಾರದು ಎನ್ನುವುದು ಹೆಚ್ಚುಕಡಿಮೆ ಅಲಿಖಿತ ನಿಯಮವಾಗಿಬಿಟ್ಟಿತ್ತು.  ಬೇರೆ ಹೆಂಗಸರು ಹೋಗಲಿ, ಸಂಗೀತಕ್ಕಾಗಿಯೇ ತಮ್ಮ ಬದುಕನ್ನು ಮುಡುಪಾಗಿಟ್ಟ ದೇವದಾಸಿ ಹೆಂಗಸರೂ ಕೂಡ ಈ ನಿಯಮವನ್ನು ಪಾಲಿಸಬೇಕಿತ್ತು.  ಇದನ್ನು 1930ರ ದಶಕದಲ್ಲಿ ದೈರ್ಯವಾಗಿ ಈ ನಿಯಮವನ್ನು ಉಲ್ಲಂಘಿಸಿ ಕಛೇರಿಯಲ್ಲಿ ಆಲಾಪನೆಯನ್ನು ದೀರ್ಘವಾಗಿ ಹಾಡಿ ಸ್ವರ ಹಾಕಿದ ಏಕೈಕ ದೇವದಾಸಿ ತಮ್ಮ ಮುತ್ತಜ್ಜಿಯಾದ ತಂಜಾವೂರಿನ ಮಂಗಮ್ಮಾಳ್ ಎಂದು ತಮ್ಮ ಮುತ್ತಜ್ಜಿಯ ಬಗ್ಗೆ ಕನರ್ಾಟಕ ಸಂಗೀತದ ಹೆಸರಾಂತ ಮೃದಂಗವಾದಕರಾದ ತಂಜಾವೂರ್ ಉಪೇಂದ್ರನ್ ಅವರು ನೆನಪಿಸಿಕೊಳ್ಳುತ್ತಾರೆ.(ತಮಿಳ್ ಇಸೈ ವಿಜಾ ಮಲರ್, ಮದ್ರಾಸ್, 1981-82).
ಹೀಗೆ ಘನವಾದ, ಉತ್ತಮ ಮಟ್ಟದ ಸಂಗೀತ ಹೆಂಗಸರಿಗೆ ಹೇಳಿಮಾಡಿಸಿದ್ದಲ್ಲ ಎನ್ನುವ ಕಾರಣಕ್ಕಾಗಿ ಹಲವಾರು ತಲೆಮಾರು ಕಾಲ ಹೆಂಗಸರು ಸಂಗೀತದಲ್ಲಿ ಕೇವಲ ಕೃತಿಗಳನ್ನು ಮಾತ್ರವೇ ಹಾಡಿಕೊಂಡು ಇದ್ದು ಬಿಟ್ಟರು.  ಆದರೆ ಸ್ತ್ರೀತ್ವಕ್ಕೆ ಇವೆಲ್ಲಾ ಶೋಭಿಸುವುದಿಲ್ಲ ಎಂದು ಅವರನ್ನು ಇವುಗಳಿಂದ ದೂರವಿಟ್ಟಿದ್ದು, ಇವುಗಳನ್ನು ಅವರು ಅಭ್ಯಾಸಮಾಡದಂತೆ ಮಾಡಿದ್ದು ನಂತರದಲ್ಲಿ ನಮ್ಮ ವಿಸ್ಮೃತಿಯ ಭಾಗವಾಗಿಬಿಟ್ಟಿತು.  ಕಾಲಕ್ರಮದಲ್ಲಿ ಉತ್ತಮ ಮಟ್ಟದ ಸಂಗೀತ ಹೆಂಗಸರಿಗೆ ಸಾಧ್ಯವಿಲ್ಲ ಎನ್ನುವುದೇ ಸತ್ಯವಾಗಿ, ಆ ಸತ್ಯ ಈ ನಾದಲೋಕದ ಅರಿವಿನ ಭಾಗವಾಗಿಬಿಟ್ಟಿತ್ತು.  ಈ ಸತ್ಯವನ್ನು ಸಂಗೀತ ಪ್ರಪಂಚದ ಗಂಡಸರು ಮತ್ತು ಹೆಂಗಸರೆಲ್ಲರೂ ಹೆಚ್ಚು ಕಡಿಮೆ ಒಪ್ಪಿಕೊಂಡುಬಿಟ್ಟಿದ್ದರು.  ಬಹುಷ ನಾವು ಯಾವುದನ್ನು ಸತ್ಯ ಎಂದು ನಂಬಿಕೊಳ್ಳುತ್ತೀವೋ ಅದನ್ನು ನಮ್ಮ ಕ್ರಿಯೆಗಳು ಗಟ್ಟಿಗೊಳಿಸುತ್ತಿರುತ್ತದೆ. ವಿಚಾರಗಳು ಮತ್ತು ಕ್ರಿಯೆ ಎರಡೂ ಒಂದನ್ನೊಂದು ಗಟ್ಟಿಗೊಳಿಸುತ್ತಾಹೋಗುವ ದುರಂತವನ್ನು ಇಲ್ಲಿ ಕಾಣಬಹುದು.  ಇದಕ್ಕೊಂದು ಸಣ್ಣ ಉದಾಹರಣೆ ಅಂದ್ರೆ, ವೀಣಾ ಧನಮ್ಮಾಳ್.  ಕನರ್ಾಟಕ ಸಂಗೀತದಲ್ಲಿ ಅವರ ಸ್ಥಾನ ತುಂಬಾ ದೊಡ್ಡದು.  ದೇವದಾಸಿ ಕುಟುಂಬಕ್ಕೆ ಸೇರಿದ ಅವರ ಬದುಕೆಲ್ಲವೂ ಸಂಗೀತಕ್ಕೇ ಮುಡುಪಾಗಿತ್ತು.  ಅವರ ಕುಟುಂಬದವರಿಂದ ಎಂ. ಎಸ್. ಸುಬ್ಬುಲಕ್ಷ್ಮಿಯಂಥ ದಿಗ್ಗಜರೆಲ್ಲರೂ ಸಂಗೀತ ಕಲಿತಿದ್ದರು.  ವೀಣಾ ಧನಮ್ಮಾಳ್ ಅವರ ಮಗಳು ಕಾಮಾಕ್ಷಿಯಮ್ಮಾಳ್ ತನ್ನ ಮಗಳು ಬೃಂದಾಳನ್ನು ತಂಜಾವೂರ್ ನೈನಾ ಪಿಳ್ಳೆಯವರಲ್ಲಿ ‘ಗಂಡುಸಂಗೀತವನ್ನು’ ಕಲಿಯಲು ಸೇರಿಸಿದಾಗ ಧನಮ್ಮಾಳ್ ಸಾಕಷ್ಟು ಅಸಮಾಧಾನವನ್ನು ಮತ್ತು ಹೆಂಗಸರಿಗೆ ಇವೆಲ್ಲಾ ಬೇಕಾ ಎನ್ನುವ ಸಂದೇಹವನ್ನೂ ವ್ಯಕ್ತಪಡಿಸಿದರು. ಎಂಬುದನ್ನು ಶ್ರೀಮತಿ ಟಿ. ಬೃಂದಾರವರ ಶಿಷ್ಯೆ ಇಂದಿರಾ ಮೆನನ್ ಅವರು ದಾಖಲಿಸುತ್ತಾರೆ.  ಹೆಚ್ಚಿನ ಹೆಂಗಸರು ಸಂಗೀತದಲ್ಲೇ ಮುಳುಗಿದ್ದರೂ ಒಂದು ಸೃಜನಶೀಲವಾದ ಹುಡುಕಾಟದಲ್ಲಿ ತೊಡಗಿಕೊಳ್ಳುವುದಕ್ಕೆ ಅವಕಾಶವಿಲ್ಲದೇ ಹೋದದ್ದರಿಂದ, ಅಂತಹ ಹುಡುಕಾಟ ಮತ್ತು ತೊಡಗಿಕೊಳ್ಳುವಿಕೆ ಅವರಿಗೆ ಸಾಧ್ಯವಿಲ್ಲವೆಂದೇ ಆಗಿಬಿಟ್ಟಿತು.  ಮತ್ತು ಕಾಲಕ್ರಮದಲ್ಲಿ ಅದು ಹಾಗಾಗಿದ್ದಕ್ಕೆ ಕಾರಣವೇ ಮರೆತುಹೋಯಿತು.  ನಂತರದಲ್ಲಿ ಇದು ಕಾಲದಿಂದ ಕಾಲಕ್ಕೆ ಬೆಳದು ಗಟ್ಟಿಯಾಗಿರುವ ಗ್ರಹೀತವೇ ಹೊರತು ಸತ್ಯವಲ್ಲ ಎನ್ನುವುದನ್ನು ಹಲವಾರು ಹೆಂಗಸರು ಸಾಧಿಸಿ ತೋರಿಸಿದರೂ ಕೂಡ, ಇಂದಿಗೂ ಹೆಂಗಸರ ಔನ್ನತ್ಯವನ್ನು ಒಪ್ಪಲು ಮನಸ್ಸುಗಳು ಸಿದ್ದವಾಗಿಲ್ಲ.  ನಮ್ಮ ಗಂಗೂಬಾಯಿ ಹಾನಗಲ್ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಹಿಂದೂಸ್ಥಾನಿ ಸಂಗೀತದಲ್ಲಿ ಅತಿದೊಡ್ಡ ಸಾಧನೆಯನ್ನು ಮಾಡಿದ ಮುಸಲ್ಮಾನ ಸಂಗೀತಗಾರ ಉಸ್ತಾದ್ ಅನ್ನಿಸಿಕೊಳ್ಳುತ್ತಾನೆ ಮತ್ತು ಹಿಂದು ಸಂಗೀತಗಾರ ಪಂಡಿತ ಎನ್ನಿಸಿಕೊಳ್ಳುತ್ತಾನೆ, ಆದರೆ ಏನೇ ಸಾಧನೆ ಮಾಡಿದರೂ ಹೆಂಗಸರನ್ನು ಕೇವಲ ಬಾಯಿ ಅಂತ ಅಷ್ಟೆ ಹೇಳ್ತಾರೆ. ಎಂದು ಸಿ.ಎಸ್. ಲಕ್ಷ್ಮಿಯವರು ಮಾಡಿದ ಸಂದರ್ಶನವೊಂದರಲ್ಲಿ ಹೇಳುತ್ತಾರೆ .  ಈ ಸರಳ ಮತ್ತು ನೇರ ಮಾತುಗಳು ಈ ದೇಶದಲ್ಲಿ ಶತಶತಮಾನಗಳಿಂದ ಇರಬಹುದಾದ ಮನಸ್ಥಿತಿಗೆ ಹಿಡಿದ ಕನ್ನಡಿ.  
ಹಿಂದೆಲ್ಲಾ ಕೆಳಜಾತಿಗೆ ಸೇರಿದ ದೇವದಾಸಿಯರು ಸಂಗೀತವನ್ನು ಹಾಡ್ತಾರೆ ಮತ್ತು ನುಡಿಸ್ತಾರೆ ಎನ್ನುವ ಕಾರಣಕ್ಕೆ ಅವರಿಗೆ ಮೇಲುಜಾತಿಯ ಗಂಡಸರ್ಯಾರೂ ಪಕ್ಕವಾದ್ಯವನ್ನು ನುಡಿಸುತ್ತಿರಲಿಲ್ಲ. ಆದರೆ ಈ ಮನಸ್ಥಿತಿಯ  ಹಿಂದೆ ಕೇವಲ ಜಾತಿಮಾತ್ರ ಕೆಲಸಮಾಡುತ್ತಿರಲಿಲ್ಲ.  ಜೊತೆಗೆ ಗಂಡಸರ ಅಹಂ ಕೂಡ ಕೆಲಸ ಮಾಡುತ್ತಿತ್ತು.  ಏಕೆಂದರೆ, ನಂತರದಲ್ಲಿ ಮೇಲ್ಜಾತಿಯ ಹೆಣ್ಣುಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಸಂಗೀತ ಪ್ರಪಂಚಕ್ಕೆ ಕಾಲಿಟ್ಟ ಮೇಲೆ ಪರಿಸ್ಥಿತಿ ಬದಲಾಗಬೇಕಾಗಿತ್ತು.  ಆದರೆ ಅದಕ್ಕೆ ವ್ಯತಿರಿಕ್ತವಾಗಿ ನಂತರವೂ ಇದು ಮುಂದುವರೆಯಿತು.  ಶ್ರೀಮತಿ ಡಿ.ಕೆ. ಪಟ್ಟಮ್ಮಾಳ್ ಅವರು ಅತ್ಯಂತ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಿಂದ ಸಂಗೀತಕ್ಕೆ ಕಾಲಿಟ್ಟು, ಅತ್ಯಂತ ಘನವಿದ್ವಾಂಸರೆನಿಸಿಕೊಂಡವರನ್ನೂ ಕೂಡ ಬೆರಗುಗೊಳಿದವರು. ಅವರಿಗೂ ಈ ಬವಣೆ ತಪ್ಪಲಿಲ್ಲ. ಭಾರತರತ್ನ ಮ್ಯಾಗ್ಸೆಸೆ ಪ್ರಶಸ್ತಿವಿಜೇತೆ, ನೀನು ಸಂಗೀತ ಪ್ರಪಂಚದ ಸಾಮ್ರಾಜ್ಞಿ ನಾನಾದರೋ ಕೇವಲ ಒಬ್ಬ ಪ್ರಧಾನಿ ಎಂದು ನೆಹರೂವಿನಿಂದ ಹೊಗಳಿಸಿಕೊಂಡ ಎಂ.ಎಸ್, ಸುಬ್ಬುಲಕ್ಷ್ಮಿಗೂ ಈ ಬವಣೆ ತಪ್ಪಲಿಲ್ಲವಲ್ಲ ಎನ್ನುವ ವಿಷಾದಕರ ಅಂಶವನ್ನು ಖ್ಯಾತ ಪತ್ರಕರ್ತ ಟಿ.ಜೆ.ಎಸ್. ಜಾಜರ್್ ತಮ್ಮ ಕೃತಿ ‘ಎಂ,ಎಸ್. ಎ ಲೈಫ್ ಇನ ಮ್ಯೂಸಿಕ್ ಎಂಬ ಕೃತಿಯಲ್ಲಿ ದಾಖಲಿಸುತ್ತಾರೆ.

Biography_Beginning

   ಇನ್ನು ಅಲ್ಟ್ರಾ ಮಾಡ್ರನ್ ಆದ ಈ 21ನೇ ಶತಮಾನದಲ್ಲೂ ಬಹುತೇಕ ಗಂಡಸರು ವೇದಿಕೆಯಲ್ಲಿ ಹೆಂಗಸರ ಪಕ್ಕ ಕುಳಿತು ಪಕ್ಕವಾದ್ಯವನ್ನು ನುಡಿಸುವುದಿಲ್ಲ ಅಷ್ಟೇ ಅಲ್ಲ ತಮಗೆ ಅವರು ಪಕ್ಕವಾದ್ಯವನ್ನು ನುಡಿಸುವುದನ್ನು ಇಷ್ಟ ಪಡುವುದೂ ಇಲ್ಲ.  ವೇದಿಕೆಯಲ್ಲಿ ಕಾರ್ಯಕ್ರಮ ಪ್ರಾರಂಭವಾದ ಮೇಲೆ ವಯೊಲಿನ್ ನುಡಿಸಲು ಕುಳಿತಿದ್ದ ಅಥವಾ ಘಟ ನುಡಿಸಲು ಕುಳಿತಿದ್ದ ಮಹಿಳೆಯರನ್ನು ವೇದಿಕೆಯಿಂದ ಕೆಳಗಿಳಸಿ ಕಳಿಸಿರುವ ಘಟನೆಗಳು ನಡೆದಿವೆ .  ಲಾಲ್ಗುಡಿ ಜಯರಾಮನ್ ಅವರಂಥ  ಖ್ಯಾತ ಪಿಟೀಲು ವಿದ್ವಾಂಸರು ಹೆಂಗಸರಿಗೆ ಪಕ್ಕವಾದ್ಯ ನುಡಿಸಿದರೆ ಸಂಗೀತದ ಗುಣಮಟ್ಟ ಕುಸಿಯುತ್ತದೆ ಎಂದು ಸಾರ್ವಜನಿಕವಾಗಿ ಹೇಳಿದ್ದು ಇಂದು ತೆರೆದ ರಹಸ್ಯ. (ಇಂದಿರಾ ಮೆನನ್, ಮದ್ರಾಸ್ ಕ್ವಾರ್ಟೆಟ್ಸ್). ಸಂಗೀತದ ಇತಿಹಾಸಕಾರರಾದ ರಂಗರಾಮಾನುಜ ಅಯ್ಯಂಗಾರ್ಯರು ಇದನ್ನು ತುಂಬಾ ಸೂಕ್ಷ್ಮವಾಗಿ ಹೆಂಗಸರು ತಮಗೆ ಬೇಕಾದ ಪಕ್ಕವಾದ್ಯಗಾರರ ಗುಂಪನ್ನು ತಾವೇ ಸಿದ್ಧಪಡಿಸಿಕೊಳ್ಳಬೇಕು ಎನ್ನುತ್ತಾರೆ.  ಅದಕ್ಕಾಗಿಯೋ ಏನೋ ವೀಣಾ ಧನಮ್ಮಾಳ್ ಅವರು ವೀಣೆ ಒಂದು ಪರಿಪೂರ್ಣವಾದ ವಾದ್ಯ ಅದಕ್ಕೆ ತಂಬೂರಿಯ ಶ್ರುತಿಯ ಅಗತ್ಯವಾಗಲೀ, ಲಯವಾದ್ಯಗಳ ಅಗತ್ಯವಾಗಲೀ ಇಲ್ಲ ಎಂದು ಘೋಷಿಸಿಬಿಟ್ಟಿದ್ದರು.  ಅವರು ನುಡಿಸುವಾಗ ತಂಬೂರವನ್ನಾಗಲೀ, ಮೃದಂಗ ಘಟಗಳನ್ನಾಗಲೀ ಜೊತೆಗೆ ಇಟ್ಟುಕೊಳ್ಳುತ್ತಿರಲಿಲ್ಲ.   
 ಮಹಿಳೆಯರು ಸಂಪ್ರದಾಯ ಮತ್ತು ಪರಂಪರೆಯನ್ನು ಉಳಿಸಿ ಜತನದಿಂದ ಕಾಪಾಡುವ ರಕ್ಷಕರು ಪಾಲಕರು ಮತ್ತು ಪೋಷಕರು ಎಂಬುದು ಎಂದಿನಿಂದಲೂ ಇರುವ ಗಾಢವಾದ ನಂಬಿಕೆ.  ಪರಂಪರೆ ಮತ್ತು ಸಂಪ್ರದಾಯದ ರಕ್ಷಣೆ ಮತ್ತು ಪಾಲನೆಯಲ್ಲಿ ಅವರ ನಿಣರ್ಾಯಕ ಪಾತ್ರವನ್ನು ಅಂಬೇಡ್ಕರ್ ಕೂಡ ತುಂಬಾ ಚೆನ್ನಾಗಿ ಗುರುತಿಸಿದ್ದರು.  ಸಂಗೀತ ನೃತ್ಯದಂತಹ ಕಲಾಪರಂಪರೆಯನ್ನು ಉಳಿಸಿ ಮುಂದಿನ ತಲೆಮಾರಿಗೆ ಒಪ್ಪಿಸುವುದು ಈ ಸಾಮಾನ್ಯ ಹೊಣೆಗಾರಿಕೆಯ ಭಾಗವೇ ಆಗಿದೆ.  ಆದರೆ ಅವರದ್ದು ಇಲ್ಲಿ ಹೆಚ್ಚುಕಡಿಮೆ ಆಕರ್ೀವ್ಸ್ನ ಕೆಲಸ.  ಆಂದರೆ ಕನರ್ಾಟಕ ಸಂಗೀತದ ಕೃತಿಭಂಡಾರವನ್ನೆಲ್ಲಾ ಜೋಪಾನವಾಗಿ ಯಾವ ಬದಲಾವಣೆಯೂ ಇಲ್ಲದೆ ಕಾಪಾಡುವುದು,  ಅದನ್ನು ಲಿಖಿತರೂಪಕ್ಕೆ ಬದಲಾಗಿ ಮಾನವಕಂಠದಲ್ಲೇ ಕಾಪಾಡಿ ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ವಗರ್ಾಯಿಸುವುದು.  ಮೇಲ್ಜಾತಿಯ ಮಹಿಳೆಗೆ ಸಂಗೀತ ನೃತ್ಯ ನಿಷೇಧಿತ ಕ್ಷೇತ್ರಗಳಾಗಿದ್ದರಿಂದ ಈ ಹೊಣೆಗಾರಿಕೆಯನ್ನು ನಿರ್ವಹಿಸಬೇಕಾಗಿದ್ದವಳು ದೇವದಾಸಿಕುಲದ ಹೆಣ್ಣುಮಗಳು.  ಈ ಪರಂಪರೆಯನ್ನು ಉಳಿಸಲು ನಡೆಯುವ ಪ್ರಯತ್ನದೊಳಗೇ ಸೂಕ್ಷ್ಮವಾಗಿ ಕಾರ್ಯಗತವಾಗಿರುವ ಎರಡು ಬಗೆಯ ತಾರತಮ್ಯಗಳನ್ನು ಗಮನಿಸಬೇಕಾದ ಅವಶ್ಯಕತೆ ಇದೆ ಅಂತ ನನಗನ್ನಿಸುತ್ತದೆ.  ಸಂಗೀತದಲ್ಲಿ ಸೃಜನಶೀಲತೆಗೆ ತುಂಬಾ ಅವಕಾಶವಿರುವ ಆಲಾಪನೆ, ಸ್ವರಪ್ರಸ್ತಾರ, ನೆರವಲ್ಲು, (ಒಂದು ಸಾಹಿತ್ಯದ ಭಾಗವನ್ನು ಸಂಗೀತದ, ರಾಗದ ವಿವಿಧ ಸಾಧ್ಯತೆಗಳನ್ನು ಅಭಿವ್ಯಕ್ತಿಸಲು ಬಳಸುವುದು) ಮುಂತಾದವುಗಳನ್ನು ಪ್ರಯೋಗಮಾಡುವ ಎಲ್ಲಾ ಅವಕಾಶಗಳು ಗಂಡಸರದ್ದು. ಮತ್ತು ಸಂಗೀತದಲ್ಲಿ ತುಂಬಾ ಪ್ರಶಸ್ತವಾದ ಹಾಡುಗಾರಿಕೆಯನ್ನು ಅಭ್ಯಾಸಮಾಡುವುದು ಮೇಲ್ಜಾತಿಯ ಗಂಡಸರ ಹಕ್ಕ್ತು. ದೇವದಾಸಿ ಕುಲದ ಗಂಡಸರು ಹಾಡುಗಾರಿಕೆಯಲ್ಲಿ ತೊಡಗಿಕೊಳ್ಳುವಂತಿರಲಿಲ್ಲ.  ಅವರು ಏನಿದ್ದರೂ ಓಲಗವನ್ನು ನುಡಿಸಬಹುದಿತ್ತು ಅಥವಾ ನಾಟ್ಯವನ್ನು ಕಲಿಸುವ ಗುರುವಾಗಬಹುದಿತ್ತು.  ಹಾಡುವ ಹಕ್ಕು ಏನಿದ್ದರೂ ಮೇಲ್ಜಾತಿಯ ಪುರುಷರದ್ದು ಮಾತ್ರ.  ಆ ಕಾಲದಲ್ಲಿ ಇದಕ್ಕೆ ಸೆಡ್ಡು ಹೊಡೆದು ನಿಂತ ಏಕೈಕ ಸಂಗೀತಗಾರ ತಂಜಾವೂರಿನ ನೈನಾ ಪಿಳ್ಳೆ. ಇಡೀ ಸಂಗೀತದ ಇತಿಹಾಸ ಒಂದರ್ಥದಲ್ಲಿ ಜಾತಿ, ಧರ್ಮ, ಪುರುಷನ ಅಹಂ ಮತ್ತು ಲಿಂಗತಾರತಮ್ಯದ ಒಂದು ಸಂಕೀರ್ಣವಾದ ಪಾತಾಳ ಗರಡಿ. ಇದಕ್ಕೆ ಸಂಬಂಧಿಸಿದ ಹಲವಾರು ಸೂಕ್ಷ್ಮವಾದ ಗ್ರಹಿಕೆಗಳು ಈ ಪ್ರಪಂಚದೊಳಗೆ ಸದ್ದಿಲ್ಲದೆ ಕೆಲಸ ಮಾಡುತ್ತಿತ್ತು ಮತ್ತು ಇಂದೂ ಕೂಡ ಕೆಲಸಮಾಡುತ್ತಿದೆ.  
ಈ ನಾದಲೋಕದೊಳಗೆ ನಾದದ ಮೂಲಕವೇ ತಮಗಾಗುತ್ತಿದ್ದ ಅವಮಾನ ಮತ್ತು ತಾರತಮ್ಯವನ್ನು  ಪ್ರತಿಭಟಿಸುವ, ಅಹಂಗಳನ್ನು ಮಣಿಸಲು ಪ್ರಯತ್ನಿಸಿರುವುದು, ವಿಭಿನ್ನ ಬಗೆಗಳಲ್ಲಿ ತಮ್ಮ ಪಾರಮ್ಯವನ್ನು ಅಂಚಿಗೆ ಸರಿದುಹೋದವರು ಸ್ಥಾಪಿಸಿದ್ದು ನಿಜವಾಗಿಯೂ ಹೃದಯ ಸ್ಪಷರ್ಿಯಾಗಿವೆ.  ಕಾಂಚೀಪುರದ ಧನಕೋಟಿ ಅಮ್ಮಾಳ್ ಆಗಿನ ಕಾಲದಲ್ಲಿ ತುಂಬಾ ಹೆಸರು ಮಾಡಿದ್ದ ಸಂಗೀತಗಾತರ್ಿ.  ಒಮ್ಮೆ ಜಮೀನುದಾರೊಬ್ಬರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹಾಡುತ್ತಿದ್ದಾಗ, ಶ್ರೀಮಂತ ಜಮೀನುದಾರ ಪ್ರೇಕ್ಷಕರೊಬ್ಬರು ಅವರನ್ನುದ್ದೇಶಿಸಿ ಏಕವಚನದಲ್ಲಿ, ಧನಕೋಟಿ ರಾಮಾಯಣದ ಕೀರ್ತನೆಯೊಂದನ್ನು ಹಾಡು. ಎಂದು ತುಂಬಿದ ಸಭೆಯಲ್ಲಿ ಹೇಳಿದಾಗ.  ಅವರು, ತಾನು ಹಾಡುತ್ತಿದ್ದ ಕೃತಿಯನ್ನು ನಿಲ್ಲಿಸಿ, ರಾವಣ ಆಸ್ಥಾನಕ್ಕೆ ಹನುಮಂತನು ಬಂದಾಗ ರಾವಣನು ಅವನನ್ನು ಏ ಕಪಿ, ಯಾರೋ ನೀನು? ಎಂದು ಕೇಳುವ ಹಾಡಿನ ಭಾಗವನ್ನು ಹಾಡಿದಾಗ, ಇಡೀ ಸಭಾಂಗಣದಲ್ಲಿ ಸ್ಮಶಾನ ಮೌನ ಆವರಿಸಿತ್ತು ಎನ್ನುವುದನ್ನು ಸಂಗೀತದ ಇತಿಹಾಸಕಾರರೆಲ್ಲರೂ ದಾಖಲಿಸಿದ್ದಾರೆ.  ರಾಗ ತಾನ ಪಲ್ಲವಿಯಂಥ ಕ್ಲಿಷ್ಟವಾದ ರಚನೆಯನ್ನು ಹೆಂಗಸರು ಹಾಡಲೇಬಾರದು ಎನ್ನುವ ಮನಃಸ್ಥಿತಿಯಿದ್ದ ಕಾಲದಲ್ಲಿ, ಸದ್ದಿಲ್ಲದೆ ಆ ಕ್ಷೇತ್ರದಲ್ಲಿ ಎಲ್ಲರೂ ಹುಬ್ಬೇರಿಸುವಂಥ ಸಾಧನೆಯನ್ನು ಮಾಡಿ ಪುರುಷರ ಭದ್ರಕೋಟೆಯಾದ ಲಯಪ್ರಪಂಚಕ್ಕೆ ಲಗ್ಗೆ ಇಟ್ಟು ಪುರುಷಲೋಕವನ್ನು ದಂಗುಬಡಿಸುವುದರ ಜೊತೆಗೆ ಸ್ತ್ರೀಲೋಕ ತಾವು ನಂಬಿ ಒಪ್ಪಿಕೊಂಡು ಬಿಟ್ಟಿದ್ದ ಸತ್ಯಗಳನ್ನು ಪುನರ್ ಪರಿಶೀಲಿಸುವಂತೆ ಮಾಡಿ, ಅವರಲ್ಲಿ ಆತ್ಮವಿಶ್ವಾಸವನ್ನು ವಿದುಷಿ ಪಟ್ಟಮ್ಮಾಳ್ ಅವರು ಮೂಡಿಸಿದ್ದು ಇಂದು ಇತಿಹಾಸ.  ಸೃಜನಶೀಲತೆ ಮತ್ತು ಭಾವಪರಾಕಾಷ್ಟತೆಯ ಪ್ರತೀಕವೆನಿಸಿದ್ದ ಆಲಾಪನೆ ಗಂಡಸರ ಜನ್ಮಸಿದ್ಧ ಹಕ್ಕಾಗಿತ್ತು.  ಆದರೆ ಆ ಕ್ಷೇತ್ರದಲ್ಲಿ ಅವರೆಲ್ಲರಿಗಿಂತ ಭಿನ್ನವಾದ ನವ ನಾವೀನ್ಯತೆಯನ್ನು ಮತ್ತು ಸೃಜನಶೀಲತೆಯನ್ನು ಸಾಧಿಸಿ, ಅಪರೂಪದ ರಾಗಗಳನ್ನು ಎಲ್ಲರೂ ಅಚ್ಚರಿಪಡುವಂತೆ ವಿಸ್ತರಿಸಿ, ಅವಕಾಶ, ಛಲ ಮತ್ತು ಸಾಧನೆ ಇತಿಹಾಸವನ್ನು ಬದಲಿಸಬಲ್ಲದು ಎಂದು ಎಂ.ಎಲ್. ವಸಂತಕುಮಾರಿಯವರು ತೋರಿಸಿದರು.  
ಇತಿಹಾಸ ಎಷ್ಟೆಂದರೂ ನಮ್ಮ ಗ್ರಹೀತಗಳು ಮತ್ತು ಪೂರ್ವಗ್ರಹಗಳ ಮೂಲಕ ನಿಮರ್ಿಸಿದ್ದಲ್ಲವೇ? ನಮ್ಮ ಗ್ರಹೀತಗಳನ್ನು ಬದಲಿಸಿಕೊಳ್ಳಲು ಪ್ರಯತ್ನಿಸಿದಾದ ಮತ್ತು ಪೂರ್ವಗ್ರಹಗಳನ್ನು ತೊಡೆದು ಹಾಕಲು ಮನಸ್ಸು ಮಾಡಿದಾಗ ಬೇರೊಂದು ಇತಿಹಾಸದ ಸೃಷ್ಟಿ ಸಾಧ್ಯವಿಲ್ಲವೇ ಎನ್ನುವುದು ಇಂದು ನಾವು ಗಂಭೀರವಾಗಿ ಆಲೋಚಿಸಬೇಕಾದ ಪ್ರಶ್ನೆ.  ತಂತ್ರಜ್ಞಾನದ ದೃಷ್ಟಿಯಂದ ಯಾವುದೇ ಬಗೆಯ ಆಧುನಿಕತೆ ಬಂದರೂ ಕೂಡ ಅವು ಈಗಾಗಲೇ ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಇರುವ ಗ್ರಹಿಕೆಗಳು ಮತ್ತು ಧೋರಣೆಗಳನ್ನು ಬದಲಾದ ರೂಪದಲ್ಲಿ ಅಭಿವ್ಯಕ್ತಿಸುತ್ತಿರುತ್ತವೇ ಹೊರತು ಅದನ್ನು ಬದಲಾಯಿಸುವುದಿಲ್ಲ.  ಹಾಗಾಗಿ ಸಾಂಸ್ಕೃತಿಕ ಹಾಗೂ ಸಾಮಾಜಿಕ ಪೂರ್ವಗ್ರಹಗಳನ್ನು, ಗ್ರಹಿಕೆ ಮತ್ತು ಧೋರಣೆಗಳನ್ನು ಬದಲಿಸಲೇಬೇಕಾದ ತುತರ್ು ಇಂದು ನಮ್ಮ ಮುಂದಿದೆ

ಶೈಲಜ
 

Recommended Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.