ಇವ ನಮ್ಮವ ಇವ ನಮ್ಮವ ಇವ ನಮ್ಮವನೆನ್ನಿ

 In GANDHI

 

ಗಾಂಧಿ ಶತಮಾನೋತ್ಸವ ಸಂದರ್ಭದಲ್ಲಿ ಹೊರತಂದ ‘ಮಹಾತ್ಮ ಗಾಂಧಿ – ನೂರು ವರುಷಗಳು’ ಗ್ರಂಥದಲ್ಲಿ ಪ್ರಕಟಗೊಂಡಿದ್ದ ಸುಚೇತಾ ಕೃಪಲಾನಿಯವರ ಲೇಖನ ಓದುತ್ತಿದ್ದಾಗ, ಅಲ್ಲೊಂದು ಘಟನೆ ನನ್ನ ಗಮನ ಸೆಳೆಯಿತು. ಅಲ್ಲಿ ಸುಚೇತಾರವರು ತಾನು ಗಾಂಧಿಯ ಜೊತೆ ಜಗಳವಾಡಿದ ಸಂದರ್ಭವೊಂದನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಾರೆ. 1945 ಮತ್ತು 46ರಲ್ಲಿ ನೌಖಾಲಿಯು ಕೋಮುದ್ವೇಷದ ದಳ್ಳುರಿಯಲ್ಲಿ ಹೊತ್ತಿ ಉರಿಯುತ್ತಿತ್ತು. ಅದಲ್ಲದೆ ಇನ್ನೂ ಉಳಿದ ಕಡೆ ಹಿಂದು ಹಾಗು ಮುಸ್ಲಿಮರು ತಾವು ಮನುಷ್ಯರು ಎನ್ನುವುದನ್ನೇ ಮರೆತು ಪರಸ್ಪರ ಒಬ್ಬರು ಇನ್ನೊಬ್ಬರನ್ನು ಕೊಲ್ಲುತ್ತಿದ್ದರು. ಆಗ ಇಂಥ ವಿಷಮ ಸಂದರ್ಭದಲ್ಲಿ ಕೆಲಸ ಮಾಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಗಾಂಧಿ ಆಗಷ್ಟೇ ವೈದ್ಯಕೀಯ ಶಿಕ್ಷಣ ಮುಗಿಸಿ ಬಂದಿದ್ದ 22ರ ಹರೆಯದ ಸುಶೀಲಾ ನೈಯ್ಯರ್ಅನ್ನು, ಕೋಮುಗಲಭೆಪೀಡಿತ ಹಳ್ಳಿಯೊಂದಕ್ಕೆ ಕಳಿಸುತ್ತಾರೆ. ಹರೆಯದ ಯುವತಿ ಆಭಾ ಗಾಂಧಿಯನ್ನು ಮತ್ತು ಸುಚೇತಾ ಕೃಪಲಾನಿಯನ್ನು ಅದೇ ರೀತಿಯ ಬೇರೆ ಎರಡು ಹಳ್ಳಿಗಳಿಗೆ ಕಳಿಸುತ್ತಾರೆ, ಎಳೆಯ ಹುಡುಗಿಯರನ್ನು ಇಂತಹ ಅಪಾಯಕಾರಿ ಸ್ಥಳಕ್ಕೆ ಕಳಿಸುತ್ತಿರುವ ಬಗ್ಗೆ ಕೋಪಗೊಂಡು ಸುಚೇತಾ ಕೃಪಲಾನಿ ಗಾಂಧಿ ಜೊತೆ ಜಗಳವಾಡುತ್ತಾರೆ. ಆದರೆ ಗಾಂಧಿ ಅದ್ಯಾವುದಕ್ಕೂ ಸೊಪ್ಪುಹಾಕದೆ ತುಂಬು ಆತ್ಮವಿಶ್ವಾಸದಿಂದ ತನ್ನ ತೀಮರ್ಾನಕ್ಕೆ ಅಂಟಿಕೊಳ್ಳುತ್ತಾರೆ.
ಅದನ್ನು ಓದುತ್ತಿದ್ದಾಗ, ಗಾಂಧಿಯವರು ಮಹಿಳೆಯರ ಬಗ್ಗೆ ಏನು ಯೋಚಿಸಿದ್ರು ಅಂತ ಈ ತನಕ ನಾನು ತಲೆಯಲ್ಲಿ ತುಂಬಿಕೊಂಡಿದ್ದೆನೋ ಅದೆಲ್ಲವನ್ನೂ ಸ್ವಲ್ಪ ಹೊತ್ತು ಒಂದು ಪಕ್ಕಕ್ಕಿಟ್ಟು ಮಹಿಳೆಯರಿಗೆ ಸಂಬಂಧಿಸಿದಂತೆ ಗಾಂಧಿಯವರ ಆಲೋಚನೆಗಳನ್ನು ಮತ್ತೊಮ್ಮ ಹೊಸದಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಬಾರದೇಕೆ ಎನ್ನಿಸಿತು.
ಸಾರ್ವಜನಿಕ ಬದುಕಿಗೆ ಮೊಟ್ಟ ಮೊದಲು ಗಾಂಧೀಜಿಯವರು ಕರೆತಂದಷ್ಟು ಹೆಚ್ಚಿನ ಸಂಖ್ಯೆಯ ಮಹಿಳೆಯರನ್ನು ಆ ಕಾಲದ ಇನ್ಯಾವ ನಾಯಕರು ಕರೆತರಲಿಲ್ಲ. (ಸ್ವಲ್ಪ ನಂತರದಲ್ಲಿ ಅಂಬೇಡ್ಕರ್ ಬಿಟ್ಟು) ಇಷ್ಟು ಬೃಹತ್ ಪ್ರಮಾಣದಲ್ಲಿ ಮಹಿಳೆಯರನ್ನು ಸಾಮಾಜಿಕ ಸಾರ್ವಜನಿಕ ಬದುಕಿಗೆ ತರುವ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಒಳಗೆ ಅಪಾರವಾದ ಗಾಭರಿ ವ್ಯಕ್ತವಾಗುತ್ತಿತ್ತು. ಹೀಗೆ ಸಾರ್ವಜನಿಕ ಬದುಕಿಗೆ ತೆರೆದುಕೊಳ್ಳುವ ಮಹಿಳೆಯರು ತಮ್ಮ ಮನೆ, ಸಂಸಾರ, ಮಕ್ಕಳು ಮತ್ತು ಅದಕ್ಕೆ ಸಂಬಂಧಿಸಿದ ಸಾಂಪ್ರದಾಯಿಕ ಕೆಲಸಗಳು ಇವೆಲ್ಲವನ್ನೂ ಕಡೆಗಾಣಿಸಿಬಿಡಬಹುದು, ಮತ್ತು ಆ ಮೂಲಕ ಇಡೀ ಕೌಟುಂಬಿಕ ವ್ಯವಸ್ಥೆಯ ಬುಡವೇ ಅಲುಗಾಡಿಬಿಡಬಹುದು ಎಂಬುದು ಹೆಚ್ಚಿನವರ ಗಾಬರಿ ಕೂಡ ಆಗಿತ್ತು. ಹೀಗಾಗುವುದಿಲ್ಲ ಎನ್ನುವ ಆತ್ಮವಿಶ್ವಾಸವನ್ನು ಮೂಡಿಸುತ್ತಲೇ ನಿಧಾನವಾಗಿ ಮಹಿಳೆಯರನ್ನು ಸಾರ್ವಜನಿಕ ರಂಗಕ್ಕೆ ಅವರು ಎಳೆದು ತರಬೇಕಾಗಿದ್ದ ದೊಡ್ಡ ಸವಾಲು ಗಾಂಧಯ ಮುಂದೆ ಇತ್ತು. ಹಾಗಾಗಿ ಮಹಿಳೆಯರನ್ನು ಸಾರ್ವಜನಿಕ ಬದುಕಿನೊಂದಿಗೆ ಮಿಳಿತಗೊಳಿಸುವ ಪ್ರಕ್ರಿಯೆ ತುಂಬಾ ನಿಧಾನವಾಗಿ, ಹಂತಹಂತವಾಗಿ ನಡೆಯಬೇಕಾಗಿತ್ತು.
ಬಹುಷ ಅದರಿಂದಾಗಿಯೇ ಗಾಂಧಿ, ಮಹಿಳೆಯರ ಸಾಂಪ್ರದಾಯಿಕ ಪಾತ್ರವನ್ನು ಪ್ರಶ್ನಿಸದೆಯೇ ಅವರನ್ನು ತಮ್ಮ ಆಂದೋಲನದ ಮುಖ್ಯ ಸಾಮಾಜಿಕ ತಳಹದಿಯಾಗಿ ಮಾಡಿಕೊಂಡರೇನೋ ಎನಿಸುತ್ತದೆ. ಜೊತೆಗೆ ಗಾಂಧಿಯವರು ಪ್ರಾರಂಭದಲ್ಲಿ ಮನೆಯನ್ನೇ ಮಹಿಳೆಯರ ಕಾರ್ಯ ಚಟುವಟಿಕೆಗಳ ರಂಗವನ್ನಾಗಿ ಮಾಡಿಕೊಂಡು, ತಾಯಂದಿರಾಗಿ, ಮಡದಿಯರಾಗಿ, ಸಹೋದರಿಯರಾಗಿ ಸ್ತ್ರೀಯರ ಅಧಿಕಾರವನ್ನು ವಿಸ್ತರಿಸಲು ಯತ್ನಿಸಿದರು. ಆದರೆ ಮಹಿಳೆಯರು ತಮ್ಮ ನೆಲೆಯಲ್ಲೇ ರಾಜಕೀಯ ಅಧಿಕಾರವನ್ನು ಪಡೆಯಬೇಕೆಂಬ ವಿಚಾರಕ್ಕೆ ಅವರು ಅಷ್ಟಾಗಿ ಗಮನ ಹರಿಸಲಿಲ್ಲ. ಆದರೆ ಪುರುಷರಿಗೆ ಸಮಾನರಾಗಿ ಮಹಿಳೆಯರು ಕೂಡ ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸುವುದಕ್ಕೆ ವಿಶೇಷ ವಿರೋಧ, ಪ್ರತಿಭಟನೆ ಕಂಡುಬರದ ರೀತಿಯಲ್ಲಿ ಅವರ ಹೋರಾಟಕ್ಕೆ ಗಾಂಧಿಯವರು ನೈತಿಕ ಸಮ್ಮತಿಯನ್ನು ದೊರಕಿಸಿಕೊಟ್ಟರು ಮತ್ತು ಅದಕ್ಕೆ ಅನುಕೂಲವಾಗುವ ಒಂದು ಸಾಮಾಜಿಕ ರಾಜಕೀಯ ಸನ್ನಿವೇಶವನ್ನು ನಿಮರ್ಾಣ ಮಾಡಿದರು. ಇದು ಮಹಿಳೆಯರ ಹೋರಾಟಕ್ಕೆ ಗಾಂಧೀಜಿಯರವರ ಬಹು ದೊಡ್ಡ ಕೊಡುಗೆ ಎನ್ನಬಹುದು. ಇದಲ್ಲದೆ ಪುರುಷ ಪ್ರಧಾನವಾದ ಚೌಕಟ್ಟಿಗೆ ಧಕ್ಕೆ ಬಾರದ ರೀತಿಯಲ್ಲಿ, ಅದನ್ನು ವಿಶೇಷವಾಗಿ ಪ್ರಶ್ನಿಸದ ರೀತಿಯಲ್ಲಿ ಮಹಿಳಾ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳಬಹುದಾದ ಆಂದೋಳನವನ್ನು ಗಾಂಧಿ ರೂಪಿಸಿದರು. (ಮಧು ಕಿಶ್ವರ್).
ಅವರು ಜೀವನದುದ್ದಕ್ಕೂ ಪ್ರತಿಪಾದಿಸಿದ ಪ್ರತಿಯೊಂದು ಸಿದ್ಧಾಂತ ಮತ್ತು ಕ್ರಿಯೆಯ ಹಿನ್ನೆಲೆಯಲ್ಲಿ ಮಹಿಳೆಯರ ವಿಚಾರ ಇದ್ದೇ ಇತ್ತು. ಅದು ಅವರ ತಾತ್ವಿಕ ಚೌಕಟ್ಟಿನ ಬಹು ಪ್ರಮುಖ ಭಾಗವಾಗಿತ್ತು. ಅವರು ಮಹಿಳೆಯರಿಗೆ ಸಂಬಂಧಿಸಿದ ಪ್ರತಿಯೊಂದು ವಿಚಾರವನ್ನೂ, ಪ್ರತಿಯೊಂದು ಹೆಜ್ಜೆಯಲ್ಲೂ ತನ್ನ ಹೋರಾಟದ ಭಾಗವನ್ನಾಗಿ ಮಾಡಿಕೊಂಡಿದ್ದರು.
ಅವರಿಗೆ ಸ್ತ್ರೀಶಕ್ತಿಯ ವ್ಯಾಪ್ತಿ ಮತ್ತು ಅಗಾಧತೆಯ ಪರಿಚಯವಾದದ್ದು ತಮ್ಮ ವೈಯುಕ್ತಿಕ ಬದುಕಿನಲ್ಲಿ ಸ್ವಲ್ಪ ಮಟ್ಟಿಗೆ ತನ್ನ ತಾಯಿಯ ಒಡನಾಟದಲ್ಲಿ, ನಂತರ ಹೆಚ್ಚುಕಡಿಮೆ ಬಾಲ್ಯದಿಂದ ಒಟ್ಟಿಗೆ ಬೆಳೆದು, ಜೀವನದುದ್ದಕ್ಕೂ ಒಟ್ಟಿಗೆ ಇದ್ದ ಪತ್ನಿ ಕಸ್ತೂರ ಬಾ ಅವರಿಂದ. ಮಹಿಳೆಯರಿಂದ ಮತ್ತು ಅದರಲ್ಲೂ ಮುಖ್ಯವಾಗಿ ತನ್ನ ತಾಯಿ ಹಾಗೂ ಹೆಂಡತಿಯಿಂದ ಅಹಿಂಸಾತ್ಮಕವಾದ, ನಿಷ್ಕ್ರಿಯ ವಿರೋಧವನ್ನು ವ್ಯಕ್ತಪಡಿಸಲು ತಾನು ಕಲಿತೆನೆಂದು ಸ್ವತಃ ಗಾಂಧಿಯವರೇ ಹೇಳಿಕಕೊಂಡಿದ್ದಾರೆ. ಕಸ್ತೂರಬಾರವರನ್ನು ಹೆದರಿಸಿ ಬೆದರಿಸಿ, ಪೀಡಿಸಿ ಗಾಂಧಿ ಅವರನ್ನು ತನಗೆ ಬೇಕಾದಂತೆ ನಡೆಸಿಕೊಳ್ಳುತ್ತಿದ್ದರು. ಅದರ ವಿರುದ್ಧ ಮೌನವಾಗಿಯೇ ವಿರೋಧವನ್ನು ಸೂಚಿಸುತ್ತಿದ್ದ ಕಸ್ತ್ತೂರಬಾ ಅವರಿಂದ ನಾನು ಸಮಾನತೆ ಮತ್ತು ಪರಸ್ಪರ ಗೌರವದಿಂದ ವತರ್ಿಸುವ ವ್ಯಕ್ತಿಯಾಗಿ ಬದಲಾದೆನೆಂದು ಅವರು ಹೇಳಿಕೊಳ್ಳುತ್ತಾರೆ. ಇದರ ಜೊತೆಗೆ ದಕ್ಚಿಣ ಆಫ್ರಿಕದಲ್ಲಿ ಬಿಳಿಯರ ವಿರುದ್ಧ ಪ್ರತಿಭಟಿಸುವ ಸಂದರ್ಭದಲ್ಲಿ ಮಹಿಳೆಯರು ತೋರಿಸಿದ ಅಪಾರವಾದ ಕೆಚ್ಚು ಮತ್ತು ಸಹನೆ ಕೂಡ ಅಂಥ ಒಂದು ಬದಲಾವಣೆಯನ್ನು ತನ್ನಲ್ಲಿ ಮೂಡಿಸಲು ಕಾರಣ ಎಂದು ಹಲವೆಡೆಗಳಲ್ಲಿ ಗಾಂಧಿ ದಾಖಲಿಸುತ್ತಾರೆ. ದಕ್ಷಿಣ ಆಫ್ರಿಕದ ಸಕರ್ಾರವು ಕ್ರೈಸ್ತ ವಿವಾಹ ಬಿಟ್ಟು ಉಳಿದೆಲ್ಲಾ ವಿವಾಹಗಳು ಕಾನೂನುಬಾಹಿರ ಎಂದು ಘೋಷಿಸಿದಾಗ, ಅಲ್ಲಿನ ಉಳಿದ ಧರ್ಮದ ಮಹಿಳೆಯರೆಲ್ಲರೂ ಶಾಂತಿಯಿಂದ ಅದನ್ನು ಪ್ರತಿಭಟಿಸಿ ಬಂಧನಕ್ಕೊಳಗಾಗುತ್ತಾರೆ. ದೈಹಿಕ ಬಲವಿಲ್ಲದ ಅವರು ತಮ್ಮ ನೈತಿಕ ಒತ್ತಡದಿಂದ, ಭಾವನಾತ್ಮಕ ತೀವ್ರತೆಯಿಂದ ತಮ್ಮ ಪುರುಷ ಸಂಗಾತಿಗಳ ಮನಸ್ಸನ್ನು ಮಿಡಿಯುತ್ತಾರೆ. ಆಗ ನೂರಾರು, ಸಾವಿರಾರು ಗಣಿ ಕಾಮರ್ಿಕರು ಗುದ್ದಲಿ ಸಲಿಕೆಗಳನ್ನು ಬಿಸಾಕಿ ಅವರೊಡನೆ ಆಂದೋಲನಕ್ಕೆ ಸೇರಿಕೊಳ್ಳುತ್ತಾರೆ. ಬಿಳಿಯರ ಸಕರ್ಾರ ಈ ಶಾಂತಿಪೂರಿತವಾದ ಈ ಅಹಿಂಸಾತ್ಮಕವಾದ ಒತ್ತಡಕ್ಕೆ ಮಣಿಯಲೇ ಬೇಕಾಗುತ್ತದೆ. ಆ ಸಂದರ್ಭದಲ್ಲಿ ಶಸ್ತ್ರವೇ ಇಲ್ಲದೆ ಮಹಿಳೆಯರು ಎದುರಾಳಿಗಳನ್ನು ಕಂಗೆಡಿಸಬಲ್ಲರು ಎಂಬುದನ್ನು ಅರಿತೆ ಎನ್ನುತ್ತಾರೆ ಗಾಂಧಿ. ಕಷ್ಟಕಾರ್ಪಣ್ಯಗಳನ್ನು ಮತ್ತು ನೋವು ಹಸಿವೆಗಳನ್ನು ನುಂಗಿಕೊಳ್ಳುವುದು ಹೆಂಗಸರ ಬದುಕಿನ ಭಾಗವೇ ಆಗಿತ್ತು. ಆದರೆ ಸಾರ್ವಜನಿಕ ಬದುಕಿನಲ್ಲಿ ಅದು ಒಂದು ವಿಭಿನ್ನ ಹಾಗೂ ಅತ್ಯಂತ ಯಶಸ್ವೀ ಪ್ರತಿಭಟನೆಯ ಆಯುಧವಾಗಬಹುದು ಎಂದು ಗಾಂಧಿ ಗ್ರಹಿಸಿಕೊಂಡರು. ಇದರಿಂದಲೇ ಅವರ ಸತ್ಯಾಗ್ರಹದ ಕಲ್ಪನೆ, ಉಪವಾಸದ ಕಲ್ಪನೆ ರೂಪುಗೊಂಡಿತು, ಅಹಿಂಸೆ ಹಾಗೂ ಮೌನ ಪ್ರತಿಭಟನೆ ಅವರ ಪಾಲಿಗೆ ಅತ್ಯಂತ ದೊಡ್ಡ ಸಾರ್ವಜನಿಕ ಮೌಲ್ಯವಾಯಿತು.
ದಕ್ಷಿಣ ಆಫ್ರಿಕದ ಅನುಭವದಿಂದಾಗಿ ಗಾಂಧಿಗೆ ಒಂದು ಅಂಶ ಅರ್ಥವಾಗಿತ್ತು, ಮಹಿಳೆಯರು ಅಬಲೆಯರು ಎನ್ನುವುದಕ್ಕಿಂತ ಹೆಚ್ಚಾಗಿ ಅವರನ್ನು ಅಬಲೆಯರನ್ನಾಗಿ ಮಾಡಲಾಗಿದೆ ಎಂದು. ಹೀಗೆ ಮಾಡುವುದರ ಹಿಂದೆ ಸಾಂಸ್ಕೃತಿಕ ಮೌಲ್ಯಗಳು ತುಂಬಾ ಕೆಲಸಮಾಡಿವೆ ಎನ್ನುವುದನ್ನು ಅವರು ಅರ್ಥಮಾಡಿಕೊಂಡಿದ್ದರು. ಮಹಿಳೆಯರು ಸ್ವತಂತ್ರರಾಗಬೇಕಾದರೆ ಅವರು ನಿಭರ್ೀತರಾಗಬೇಕು, ಮಹಿಳೆಯರ ದೈಹಿಕ ದೌರ್ಬಲ್ಯಕ್ಕಿಂತ ಸಮಾಜ ಅವರ ಮೇಲೆ ವಿಧಿಸಿರುವ ಸಾಂಸ್ಕೃತಿಕ ಅಸಹಾಯಕತೆ, ಮಾನಸಿಕ ಭಯ ಇವೇ ಮುಂತಾದವು ಅವರ ಶಕ್ತಿಯನ್ನು ಉಡುಗಿಸಿವೆ. ಗಂಡಸು ಹೆಂಗಸಿನ ಸಮಾನಸ್ಕಂಧಳು, ಇಬ್ಬರೂ ಸಾಮಾಜಿಕ ವ್ಯವಹಾರವನ್ನು ನಡೆಸುವುದರಲ್ಲಿ ಸಹಭಾಗಿಗಳೆಂದು ಗಾಂಧಿ ನಿಜವಾಗಿಯೂ ನಂಬಿದ್ದರು. ಕಷ್ಟದ, ಸಾಹಸದ ಕೆಲಸಗಳನ್ನು ಹೆಂಗಸರ ಮುಂದಿಡಲು ಅವರು ಎಂದೂ ಹಿಂಜರಿಯಲಿಲ್ಲ. ಖಾನ್ ಅಬ್ದುಲ್ ಗಫಾರ್ ಖಾನರು ಜೈಲಿನಲ್ಲಿದ್ದಾಗ ಪಠಾಣರ ನಡುವೆ ಕೆಲಸಮಾಡಲು ಅತ್ಯಂತ ಸೂಕ್ಷ್ಮಸ್ವಭಾವದವಳಾಗಿದ್ದ, ದಾದಾಭಾಯಿ ನವರೋಜಿಯವರ ಮೊಮ್ಮಗಳು ಖುಷರ್ಿದಾ ಬೇಹನ್ ನವರೋಜಿಯವರನ್ನು ಕಳುಹಿಸಿದರು. ಗಾಂಧಿಯವರ ದೃಷ್ಟಿಯಲ್ಲಿ ಶಸ್ತ್ರಾಸ್ತ್ರಗಳು ದೌರ್ಬಲ್ಯದ ಸಂಕೇತ. ಹೆಂಗಸನ್ನು ಅಬಲೆಯೆಂದು ಕರೆಯುವುದೊಂದು ಬೈಗುಳ. ಇದು ಗಂಡು ಹೆಂಗಸಿಗೆ ಮಾಡಿದ ಅನ್ಯಾಯ. ಬಲ ಎಂದರೆ ಪಶುಬಲ ಎನ್ನುವುದಾದರೆ, ಹೆಂಗಸು ಗಂಡಸಿಗಿಂತ ದುರ್ಬಲಳು ನಿಜ ಆದರೆ ಬಲ ಎನ್ನುವುದನ್ನು ಗಾಂಧಿ ಬೇರೆ ಬಗೆಯಲ್ಲಿ ವ್ಯಾಖ್ಯಾನಿಸಲು ಪ್ರಯತ್ನಿಸಿದರು. ಬಲ ಎನ್ನುವುದನ್ನು ನೈತಿಕ ಬಲವೆಂದು, ಆತ್ಮಶಕ್ತಿಯೆಂದು ಅಧರ್ೈಸಿದರು.
ಹೀಗೆ ಪಶುಬಲವನ್ನು ಪ್ರಶ್ನಿಸುವುದರ ಮೂಲಕ ಗಾಂಧಿ ಈಗಾಗಲೇ ಒಪ್ಪಿತವಾಗಿ ಚಾಲ್ತಿಯಲ್ಲಿದ್ದ ಹಲವಾರು ಮೂಲಭೂತ ಗ್ರಹೀತಗಳನ್ನು ಪ್ರಶ್ನಿಸುತ್ತಿದ್ದರು. ಪುರುಷಪ್ರಾಧಾನ್ಯ ಮತ್ತು ಅದರೊಂದಿಗೆ ಬಿಡಿಸಲಾರದಂತೆ ಬೆಸೆದುಕೊಂಡಿದ್ದ ಪಶುಬಲ, ಕ್ರೌರ್ಯ, ಹಿಂಸೆ, ಅಧಿಕಾರ ಮತ್ತು ಇವನ್ನೇ ಆಧಾರವಾಗಿ ಹೊಂದಿದ್ದ ಆಧುನಿಕ ನಾಗರಿಕತೆಗಳ ಮೌಲ್ಯವ್ಯವಸ್ಥೆಯನ್ನೇ ಪ್ರಶ್ನಿಸುತ್ತಿದ್ದರು. ಮತ್ತು ಆ ಮೂಲಕ ದೈಹಿಕ ಬಲಾಬಲಗಳನ್ನೇ ತಾರತಮ್ಯದ ಮೂಲವನ್ನಾಗಿ ಮಾಡಿಕೊಂಡಿದ್ದ ವ್ಯವಸ್ಥೆಯ ಬುಡಕ್ಕೇ ಏಟುಕೊಡಲು ಪ್ರಯತ್ನಿಸಿದರು. ಮುಖ್ಯವಾಹಿನಿಯು ಸ್ತ್ರೀತ್ವದ ಗುಣಗಳು ಎಂದು ನಿರ್ವಚಿಸಿದ್ದ ತ್ಯಾಗ ಸಹನೆ, ಪ್ರೀತಿ, ತಾಳ್ಮೆ,, ಸಹಿಷ್ಣುತೆ, ಇವುಗಳನ್ನೇ ಬಳಸಿಕೊಂಡು, ಶೋಷಣೆಯ ಮೂಲವನ್ನೇ ಶೋಷಣೆಯನ್ನು ಪ್ರತಿಭಟಿಸುವ ಆಯುಧವನ್ನಾಗಿ ಪರಿವತರ್ಿಸಿದರು. ಈ ವ್ಯವಸ್ಥೆ ಸ್ತ್ರೀಯರದ್ದು ಎಂದು ಹೇಳಿ ಬಳುವಳಿಯಾಗಿ ಕೊಟ್ಟ ಗುಣಗಳಿಂದಲೇ ಈ ವ್ಯವಸ್ಥೆಯನ್ನು ಒಡೆದು ಅಸ್ಥಿರಗೊಳಿಸಲು ಪ್ರಯತ್ನಿಸಿದರು. ಇದು ಪರಂಪರೆಯೊಳಗೆ ಇದ್ದುಕೊಂಡೇ ಪರಂಪರೆಯನ್ನು ಭಿನ್ನಗೊಳಿಸುವ ಅಗಾಧವಾದ ಶಕ್ತಿಯಾಯ್ತು. ಈ ಮೂಲಕ ಅಹಿಂಸೆ, ಸಹನೆ, ತಾಳ್ಮೆ, ಮೌನ ಪ್ರತಿಭಟನೆ ಇವು ಕೇವಲ ಹೆಂಗಸಿನ ದೌರ್ಬಲ್ಯದ ಸಂಕೇತವಾಗಿ ಉಳಿಯದೆ ಸಾಂಸ್ಥೀಕರಣಗೊಂಡಿರುವ ಅಸಹನೆ, ಅಸಹಿಷ್ಣುತೆ, ಪಶುಬಲ ಮತ್ತು ಅದರ ಮೂರ್ತರೂಪಗಳಾದ ಪುರುಷ ಮತ್ತು ಸಾಮ್ರಾಜ್ಯ ಇವುಗಳ ವಿರುದ್ಧ ಇಡೀ ಮನುಕುಲವೇ ಹೋರಾಟಮಾಡಲು ಬಳಸಬಹುದಾದ ಧನಾತ್ಮಕ ಅಸ್ತ್ರವಾದವು ಮತ್ತು ದೈನಂದಿನ ಬದುಕಿನ ಮೌಲ್ಯಗಳಾದವು.
ಮೇಲ್ನೋಟಕ್ಕೆ ಗಾಂಧಿಯ ವಿಚಾರಧಾರೆ ಅವರ ಕಾಲದ ಉಳಿದ ಸಮಾಜಸುಧಾರಕರ ದೃಷ್ಟಿಕೋನದಂತೆಯೇ ಕಂಡರೂ ಕೂಡ ಅದರ ಹಿಂದಿದ್ದ ತಾತ್ವಿಕ ನಿಲುವು ಮಾತ್ರ ಅವರಿಗಿಂತ ಭಿನ್ನವಾಗಿತ್ತು ಎಂದು ಸ್ಪಷ್ಟವಾಗಿ ಅನ್ನಿಸುತ್ತದೆ. ಅದರಲ್ಲೂ ಮುಖ್ಯವಾಗಿ ಶಿಕ್ಷಣದ ಬಗ್ಗೆ ಮತ್ತು ಮಹಿಳೆಯು ಸಾರ್ವಜನಿಕ ಬದುಕಿನಲ್ಲಿ ಪಾಲ್ಗೊಳ್ಳುವುದರ ಬಗ್ಗೆ ಅವರ ಆಲೋಚನೆಗಳನ್ನು ನೋಡಿದಾಗ ಅದು ಅರಿವಾಗುತ್ತದೆ. ಆ ಕಾಲದ ಉಳಿದ ಸಮಾಜಸುಧಾರಕರ ಹಾಗೆ ಅವರು ಮಹಿಳೆಯರನ್ನು ಸುಧಾರಣೆಗೆ ಒಳಗಾಗಬೇಕಾದ ವಸ್ತುಗಳೆಂದೂ, ಮತ್ತು ನಮ್ಮ ಉದಾರ ಕಾಳಜಿಯನ್ನು ಬಯಸುವ ಅಸಹಾಯಕ ಜೀವಿಗಳೆಂದೂ ಕಾಣುವುದಿಲ್ಲ. ಬದಲಾಗಿ ಅವರು ಕ್ರಿಯಾಶೀಲರಾದ, ಆತ್ಮಪ್ರಜ್ಞೆಯುಳ್ಳ ಮತ್ತು ಸಾಮಾಜಿಕ ಬದಲಾವಣೆ ತರಲು ಶಕ್ತರಾದ ವ್ಯಕ್ತಿಗಳೆಂದು ಅವರು ಗ್ರಹಿಸಿದ್ದರುಮಹಿಳೆಯರು ವೈಯುಕ್ತಿಕ ಮತ್ತು ಸಾಮಾಜಿಕ ಬದುಕಿನ ಅನಾಹುತಗಳನ್ನು ನಿವಾರಿಸುವ ಸುಧಾರಣೆಯ ಪ್ರವರ್ತಕರೆನಿಸಿಕೊಂಡಿದ್ದರು. ಮಹಿಳೆಯರ ಸ್ಥಿತಿಗತಿಗಳಿಂದಾಗಿ ನಮ್ಮ ಅನೇಕ ಆಂದೋಳನಗಳು ಅರ್ಧಕ್ಕೆ ನಿಂತುಬಿಡುತ್ತವೆ. ಬಹಳಷ್ಟು ಕಾರ್ಯಗಳು ಸೂಕ್ತ ಪರಿಣಾಮ ಬೀರುತ್ತಿಲ್ಲ. ಈ ದೇಶದ ಅರ್ಧದಷ್ಟು ಇರುವ ಸ್ತ್ರೀಯರು ಅರ್ಥಪೂರ್ಣವಾಗಿ ಪಾಲ್ಗೊಳ್ಳದ ಹೊರತು ಹಲವಾರು ಮೂಲಭೂತ ಬದಲಾವಣೆಗಳು ಸಾದ್ಯವಾಗುವುದಿಲ್ಲ ಎನ್ನುವುದನ್ನು ಗಾಂಧಿ ತುಂಬಾ ಸ್ಪಷ್ಟವಾಗಿ ಗಮನಿಸಿದ್ದರು ಮತ್ತು ಒಟ್ಟು ಜನಸಂಖ್ಯೆಯ ಒಂದರ್ಧ ಭಾಗ ನಿಷ್ಕ್ರಿಯವಾಗಿದ್ದರೆ, ನಿರಾಸಕ್ತಿ ಪ್ರದಶರ್ಿಸಿದರೆ, ಯಾವುದೇ ಆಂದೋಳನ ಯಶಸ್ವಿಯಾಗಲಾರದು ಎಂಬ ತಿಳುವಳಿಕೆ ಗಾಂಧಿಯವರಲ್ಲಿತ್ತು.
ಅವರನ್ನು ಬಿಟ್ಟು ಸುಧಾರಣೆಗಳನ್ನು ಮತ್ತು ಆಂದೋಳನಗಳನ್ನು ಮಾಡಲು ಪ್ರಯತ್ನಿಸುತ್ತಿದ್ದವರ ಬಗ್ಗೆ ನಮ್ಮ ಜನರು ಪೈಸೆ ಉಳಿಸಲು ಹೋಗಿ ರೂಪಾಯಿ ಕಳೆದುಕೊಳ್ಳುವ ವ್ಯಾಪಾರಿಯಂತೆ ಎಂದು ತಮಾಶೆಮಾಡುತ್ತಿದ್ದರು. ಖಾದಿಗೆ ಸಂಬಂಧಿಸಿದ ಆಂದೋಲನದಲ್ಲಿ ಮಹಿಳೆಯರು ವಿದೇಶೀ ವಸ್ತ್ರವನ್ನು ತಿರಸ್ಕರಿಸಿ ಖಾದಿಯನ್ನು ಸ್ವೀಕರಿಸದಿದ್ದರೆ ಈ ದೇಶದಲ್ಲಿ ಖಾದಿ ಆಂದೋಲನ ಸಫಲವಾಗುವುದಿಲ್ಲ ಎನ್ನುವುದು ಅವರ ಅರಿವಿಗೆ ಬಂದಿತ್ತು. ಹಾಗೆಯೇ ಈ ದೇಶದ ಬಹುದೊಡ್ಡ ಕಳಂಕವಾದ ಅಸ್ಪೃಷ್ಯತಾ ನಿವಾರಣೆ ಮಹಿಳೆಯರು ಮನಸ್ಸುಮಾಡಿದರೆ ಮಾತ್ರ ಸಾಧ್ಯ ಎನ್ನುವುದು ಅವರ ಜೀವನಾನುಭವವಾಗಿತ್ತು. ಇನ್ನೊಬ್ಬರ ಮಲಮೂತ್ರಗಳನ್ನು ಬಳಿದು ಶುಚಿಗೊಳಿಸುತ್ತಾರೆ ಎನ್ನುವ ಕಾರಣಕ್ಕಾಗಿಯೇ ಹರಿಜನರನ್ನು ನೀವು ಅಸ್ಪೃಷ್ಯರನ್ನಾಗಿ ಕಾಣುವುದಾದರೆ, ತನ್ನ ಮಕ್ಕಳಿಗಾಗಿ ಈ ಬಗೆಯ ಸೇವೆಯನ್ನು ಮಾಡುವ ತಾಯಿಯು ಏನಾಗಬೇಕು? ಎಂದು ಪ್ರಶ್ನಿಸುತ್ತಾರೆ. ಎಲ್ಲಿಯವರಗೆ ಸ್ತ್ರೀಯರು ಪ್ರತಿಭಟಿಸುತ್ತಾರೆಯೋ ಅಲ್ಲಿಯವರಗೆ ಅಸ್ಪೃಷ್ಯತಾ ನಿವಾರಣೆಯಲ್ಲಿ ಏನನ್ನೂ ಸಾಧಿಸಲಾಗುವುದಿಲ್ಲ ಎನ್ನುವುದನ್ನು ಗಾಂಧಿ ತಮ್ಮ ಮನೆಯಲ್ಲಿ ಕಸ್ತೂರಬಾ ಅವರ ಜೊತೆಗಿನ ಅನುಭವದ ಮೂಲಕವೇ ಗ್ರಹಿಸಿದ್ದರು. ಈ ಅಂಶವನ್ನು ಅಂಬೇಡ್ಕರ್ ಕೂಡ ಇದೇ ರೀತಿಯಲ್ಲಿ ಗ್ರಹಿಸಿದ್ದರು. ಅವರು ಹೆಂಗಸರನ್ನು ಜಾತಿ ಪದ್ಧತಿಯ ಆಚರಣೆಯನ್ನು ಚಾಲ್ತಿಯಲ್ಲಿಡುವ ಹೆಬ್ಬಾಗಿಲುಗಳು ಎಂದು ಹೇಳುತ್ತಿದ್ದರು. ಹಾಗೆಯೇ ಕೋಮುವಾದವನ್ನು ಹೆಂಗಸರು ಮನಸ್ಸು ಮಾಡದಿದ್ದರೆ ನಿಮರ್ೂಲನ ಮಾಡುವುದು ಸಾಧ್ಯವಿಲ್ಲ ಎಂಬುದನ್ನೂ ಅವರು ಅರಿತಿದ್ದರು. ದುರಾಗ್ರಹದ ಮೂಲಕ ಕೈಕೇಯಿ ತನಗೆ ಬೇಕಾದ್ದೆಲ್ಲವನ್ನೂ ಪಡೆದುಕೊಳ್ಳಲು ಸಾಧ್ಯವಾಗುವುದಾದರೆ, ಸತ್ಯಾಗ್ರಹದ ಮೂಲಕ ಹೆಣ್ಣುಮಕ್ಕಳು ಏನನ್ನಾದರೂ ಸಾಧಿಸಲು ಸಾದ್ಯವಿಲ್ಲವೇ? ಎಂದು ಕೇಳುವ ಮೂಲಕ ಗಾಂಧಿ ಪ್ರತಿ ಮಹಿಳೆಯೂ ಸಾಂಪ್ರದಾಯಿಕ ಕುಟುಂಬ ವ್ಯವಸ್ಥೆಯೊಳಗೆ ಈಗಾಗಲೇ ತನಗೆ ಅದು ನೀಡಿರುವ ಸ್ಪೇಸನ್ನು ತಿರುಗ ಮುರುಗ ಮಾಡಬಹುದಾದ ಸಾಧ್ಯತೆಗಳ ಬಗ್ಗೆ ಸಾಕಷ್ಟು ಗಂಭೀರವಾಗಿ ಅವರು ಧ್ಯಾನಿಸಿದರು.
ತಮ್ಮ ಈ ಗ್ರಹಿಕೆಯಿಂದಾಗಿಯೇ ಮಹಿಳೆಯರ ವಿಮೋಚನೆಯಲ್ಲಿ ಮಹಿಳೆಯರು ಮುಖ್ಯ ಪಾತ್ರವನ್ನು ವಹಿಸಬೇಕೆಂದು ಗಾಂಧಿ ಬಯಸಿದ್ದರು. ಹೆಂಗಸಿನ ಈ ಸ್ಥಿತಿಗೆ ಗಂಡಸೇ ಮೂಲ ಕಾರಣ ಎಂಬುದರ ಬಗ್ಗೆ ಗಾಂಧಿಗೆ ಯಾವ ಸಂಶಯವೂ ಇರಲಿಲ್ಲ. ಆದರೆ ಅನೇಕ ಮಹಿಳೆಯರು ಸದಾ ಗಂಡಸರ ಮೇಲೆ ಗೂಬೆ ಕೂರಿಸಿ ಮನಸ್ಸಿಗೆ ನೆಮ್ಮದಿ ತಂದುಕೊಂಡುಬಿಡುವುದರ ಬಗ್ಗೆ ಅವರಿಗೆ ಅಸಮಾಧಾನವಿತ್ತು. ಹಾಗೆ ಮಾಡುವುದರಿಂದ ಪರಿಸ್ಥಿತಿ ಬದಲಾಗುವುದಿಲ್ಲ. ಕೇವಲ ಆಕ್ಷೇಪಿಸಿ ಮುಗಿಸಿಬಿಡುವುದು ತೀರಾ ನೇತ್ಯಾತ್ಮಕ ಧೋರಣೆ ಎಂದು ಅವರಿಗನ್ನಿಸಿತ್ತು. ಹಾಗಾಗಿ ತಮ್ಮ ಪರಿಸ್ಥಿತಿಯನ್ನು ಬದಲಾಯಿಸಿಕೊಳ್ಳುವ ಒತ್ತಡ ಹೆಂಗಸರಿಂದಲೂ ಬರಬೇಕು, ಸ್ತ್ರೀ ವಿಮೋಚನೆಯಲ್ಲಿ ಮಹಿಳೆಯರ ಪಾತ್ರ ತುಂಬಾ ದೊಡ್ಡದಿದೆ ಎಂದು ಪದೇ ಪದೇ ಹೇಳುತ್ತಿದ್ದರು. ವಿಮೋಚನೆಯ ಚುಕ್ಕಾಣಿಯನ್ನು ಸ್ವತಃ ದಮನಿತರು ಕೈಗೆತ್ತಿಕೊಳ್ಳುವವರಗೆ ವಿಮೋಚನೆ ಸಾದ್ಯವಿಲ್ಲ ಎಂಬುದು ಅವರಿಗೆ ಸ್ವತಃ ತಾವೇ ಹೋರಾಟದಲ್ಲಿ ಇದ್ದುದರಿಂದ ಚೆನ್ನಾಗಿ ಅರಿವಾಗಿತ್ತು. ಪ್ರಜ್ಞಾವಂತರಾದ ಮಹಿಳೆಯರು ತಮ್ಮ ಸಹೋದರಿಯರಿಗೆ ಬಾಧ್ಯಸ್ಥರಲ್ಲವೇ? ಗಂಡಸರಿಗೆ ತಾಯಂದಿರಾದ ಇವರು ಸುಧಾರಣೆಯ ಹೊಣೆಯನ್ನು ಹೊರಬಾರದೇ? ತಾನು ಪ್ರಾಯ ಪ್ರಬುದ್ಧಳಾಗದ ಹೊರತು ಮದುವೆಯಾಗುವುದಿಲ್ಲ ಮತ್ತು ತನ್ನ ಆಯ್ಕೆಯ ಪುರಷನನ್ನಲ್ಲದೆ ಇನ್ನೊಬ್ಬನನ್ನು ಮದುವೆಯಾಗುವುದಿಲ್ಲ ಎಂದು ಪ್ರತಿಯೊಬ್ಬ ಹುಡುಗಿಯೂ ಹೇಳುವಂತಾಗಬೇಕು. ಮಹಿಳೆಯ ಏಳಿಗೆಗಾಗಿ ಪುರಷನು ನೆರವಾಗಬೇಕು ಆದರೆ ಕೊನೆಗೂ ತನಗೇನು ಬೇಕು ಎನ್ನವುದನ್ನು ಮಹಿಳೆಯೇ ದೃಢವಾಗಿ ನಿರ್ಧರಿಸಬೇಕು ಎನ್ನುತ್ತಿದ್ದರು.
ಆ ಕಾಲದ ಉಳಿದ ಸಮಾಜಸುಧಾರಕರು ಮಹಿಳೆಯರಿಗೆ ಶಿಕ್ಷಣವನ್ನು ನೀಡಬೇಕಾದ್ದು ಅವರನ್ನು ಮತ್ತಷ್ಟು ಒಳ್ಳೆಯ ತಾಯಿ ಮತ್ತು ಪತ್ನಿಯನ್ನಾಗಿ ಮಾಡುವುದಕ್ಕೆ ಗೃಹಕೃತ್ಯಗಳನ್ನು ಇನ್ನಷ್ಟು ಚೆನ್ನಾಗಿ ನಡೆಸಿಕೊಂಡುಹೋಗುವುದಕ್ಕೆ ಎಂದು ನಂಬಿದ್ದರು. ಆದರೆ ಗಾಂಧಿ ಅದಕ್ಕಿಂತ ತುಂಬಾ ಭಿನ್ನವಾಗಿ ಯೋಚಿಸುತ್ತಿದ್ದರು. ಅವರ ದೃಷ್ಟಿಯಲ್ಲಿ ಮಹಿಳೆಯರಿಗೆ ತಮ್ಮ ಸಹಜ ಹಕ್ಕುಗಳನ್ನು ರಕ್ಷಿಸಿಕೊಳ್ಳಲು, ವಿವೇಕದಿಂದ ಚಲಾಯಿಸಲು ಮತ್ತು ಸಂದರ್ಭ ಬಂದಾಗ ಅವುಗಳನ್ನು ವಿಸ್ತರಿಸಲು ಶಿಕ್ಷಣ ಒಂದು ಸಾಧನವಾಗಿತ್ತು. ಅವರು ಮಹಿಳೆಯರನ್ನು ಸ್ವತಂತ್ರ ವ್ಯಕ್ತಿತ್ವವುಳ್ಳ ಇಂಡಿವಿಜುಯಲ್ಸ್ ಹಾಗೆ ನಡೆಸಿಕೊಳ್ಳುತ್ತಿದ್ದರು. ಅವರಿಗೆ ಅಕ್ಷರಜ್ಞಾನಕ್ಕೂ ಮತ್ತು ವಿವೇಕ ಹಾಗೂ ಅರಿವಿಗೂ ಇರುವ ಅಂತರ ಚೆನ್ನಾಗಿ ಗೊತ್ತಿತ್ತು. ಅವರು ಅಕ್ಷರಜ್ಞಾನವನ್ನೇ ಶಿಕ್ಷಣ ಎಂದು ಭಾವಿಸುವ ಅನಾಹುತಕ್ಕೆ ಕೈಹಾಕಲಿಲ್ಲ. ಹಾಗಾಗಿಯೇ ಅವರಿಗೆ ಓದು ಬರಹದ ಪರಿಜ್ಞಾನವಿಲ್ಲದೆಯೂ ಸಾಕ್ಷಷ್ಟು ಉತ್ತಮವಾದ ಮತ್ತು ಉಪಯುಕ್ತವಾದ ಕೆಲಸವನ್ನು ಮಹಿಳೆಯು ಮಾಡಬಹುದು, ಅನಕ್ಷರತೆಯ ಆಧಾರದ ಮೇಲೆ ಮಹಿಳೆಯರಿಗೆ ಸಮಾನತೆಯ ಹಕ್ಕನ್ನು ನಿರಾಕರಿಸಲು ಗಂಡಸರಿಗೆ ಯಾವ ಸಮರ್ಥನೆಯೂ ಇಲ್ಲ ಎಂದು ಹೇಳಲು ಸಾಧ್ಯವಾಯಿತು. ಅವರು ಮಹಿಳಾ ವಿಮೋಚನೆ ಮತ್ತು ಸುಧಾರಣೆಯ ಪ್ರಶ್ನೆ ಮತ್ತು ರಾಜಕೀಯವಾಗಿ ಸ್ವರಾಜ್ಯವನ್ನು ಹೊಂದುವುದು ಇವೆರೆಡೂ ಬೇರೆ ಎಂದು ಭಾವಿಸಿರಲೇಇಲ್ಲ. ಸಾಮಾಜಿಕ ಸುಧಾರಣೆಗಿಂತ ರಾಜಕೀಯ ಹೋರಾಟಕ್ಕೇ ಹೆಚ್ಚಿನ ಮಹತ್ವ ಸಲ್ಲಿಸಬೇಕೆಂದು ವಾದಿಸಿದವರಿಗೆ, ಸ್ವರಾಜ್ಯ ಸಂಪಾದನೆಯಾಗುವವರೆಗೂ ಸಮಾಜ ಸುಧಾರಣೆಯ ಗುರಿಯನ್ನು ಮುಂದೂಡಬೇಕೆಂದರೆ ಸ್ವರಾಜ್ಯದ ಅರ್ಥವನ್ನೇ ನೀವು ತಿಳಿದಿಲ್ಲ ಎಂದಾಯ್ತು ಎನ್ನುತ್ತಿದ್ದರು.
ರಾಷ್ಟ್ರೀಯ ಆಂದೋಲನದ ಜೊತೆಗೆ ಮಹಿಳಾ ಪ್ರಶ್ನೆಯನ್ನು ಹೆಣೆಯುವ ಅವರ ಪ್ರಯತ್ನದಿಂದಾಗಿ ಕಾಂಗ್ರೆಸ್ ಪಕ್ಷದ ಹಲವಾರು ಸದಸ್ಯರಲ್ಲಿ ಈ ಬಗ್ಗೆ ಅಸಾಧಾರಣವಾದ ಸಹಾನುಭೂತಿ ಮೂಡಿತು. ಗಾಂಧೀಜಿಯವರು ಹೋರಾಟದ ತಂತ್ರದ ಜೊತೆಗೆ ಅದರ ರೂಪವನ್ನು ಬಲು ಎಚ್ಚರಿಕೆಯಿಂದ ಆಯ್ದುಕೊಂಡರು. ಹಿಂಸೆ, ಪಾಶವೀಶಕ್ತಿ ಮತ್ತು ಆಯುಧಗಳ ನೆರವಿನಿಂದಲೇ ಸಾಮಾಜಿಕ ಸಂಘರ್ಷವನ್ನು ಬಗೆಹರಿಸುವ ಕ್ರಮ ಹೆಂಗಸರನ್ನು ಮೂಲೆಗುಂಪು ಮಾಡುತ್ತದೆ. ಮತ್ತು ಈ ಗುಣಗಳನ್ನು ಬಿಟ್ಟು ಉಳಿದ ಗುಣಗಳನ್ನು ತಿರಸ್ಕಾರದಿಂದ ನೋಡುವ ಮನಃಸ್ಥಿತಿಯೂ ಬೆಳೆಯುತ್ತದೆ. ಆದರೆ ಗಾಂಧಿಯವರು ಮತ್ತೆ ಮತ್ತೆ ಪ್ರತಿಪಾದಿಸಿದ ಅಹಿಂಸಾತ್ಮಕ ಸತ್ಯಾಗ್ರಹದ ಮಾದರಿ ಮುಖ್ಯವಾಗಿ ಮಹಿಳೆಯರು ರಾಜಕೀಯದಲ್ಲಿ ಮತ್ತು ಆಂದೋಳನಗಳಲ್ಲಿ ಪಾಲ್ಗೊಳ್ಳಲು ಅನುಕೂಲಕರವಾದ ವಾತಾವರಣವನ್ನು ನಿಮರ್ಾಣಮಾಡಿತು.
ಗಾಂಧಿಯವರು ಮಹಿಳಾ ಸಮಸ್ಯೆಗಳ ಬಗ್ಗೆ ತುಂಬಾ ಗಂಭೀರವಾದ ಒಳನೋಟಗಳನ್ನು ಹೊಂದಿದ್ದರು ಎನ್ನುವುದನ್ನು ತುಂಬಾ ಗೌರವದಿಂದ ಒಪ್ಪಿಕೊಳ್ಳುವ ಲೇಖಕಿ ಮಧು ಕಿಶ್ವರ್ ಅವರು ಈ ಸಂದರ್ಭದಲ್ಲಿ ನಾವು ಗಮನಹರಿಸಬೇಕಾದ ಇನ್ನು ಕೆಲವು ಅಂಶಗಳನ್ನು ಗುರುತಿಸುತ್ತಾರೆ. ಮಹಿಳೆಯರನ್ನು ಸಮಾಜಿಕ ಸುಧಾರಣೆ ಮತ್ತು ಸಾಮಾಜಿಕ ಪರಿವರ್ತನೆಯ ಹರಿಕಾರರಾಗೇ ಗ್ರಹಿಸಿಕೊಂಡಿದ್ದ ಗಾಂಧಿ ನಿಸ್ವಾರ್ಥ ಸಮಾಜ ಸೇವಕರಾಗಿ ರಾಷ್ಟ್ರೀಯ ಆಂದೋಲನದಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಬಿಡುಗಡೆಯ ಹಾದಿಯನ್ನು ಹುಡುಕಿಕೊಳ್ಳಲು ಮಹಿಳೆಯರನ್ನು ಪ್ರೋತ್ಸಾಹಿಸಿದರು. ಇದು ಪ್ರಜ್ಞಾಪೂರ್ವಕವೋ ಅಥವಾ ಅಪ್ರಜ್ಞಾಪೂರ್ವಕವೋ, ಒಟ್ಟು ಮಹಿಳೆಯರು ಸ್ವತಃ ತಾವೇ ಒಂದು ರಾಜಕೀಯ ಶಕ್ತಿಯಾಗಿ ರೂಪುಗೊಳ್ಳಬಹುದಾದ ಪ್ರಕ್ರಿಯೆಗೆ ಹೆಚ್ಚು ಪೂರಕವಾಗಲಿಲ್ಲ. ಸ್ತ್ರೀಪುರುಷರಿಬ್ಬರು ಸಮಾನರು ಎಂದು ಗಾಂಧಿ ಸಂಪೂರ್ಣವಾಗಿ ನಂಬಿ, ಮಹಿಳೆಯರ ವಿರುದ್ಧವಾಗಿರುವ ನ್ಯಾಯ ತಾರತಮ್ಯವನ್ನು ನಿವಾರಿಸಲು ಬೆಂಬಲ ನೀಡಿದರೂ ಕೂಡ ಅವರ ಸಮಾನತೆಯ ಕಲ್ಪನೆಯು ಸಮಾನ ಉದ್ಯೋಗಾವಕಾಶ, ಆಥರ್ಿಕ ಮತ್ತು ರಾಜಕೀಯ ಅಧಿಕಾರ ಕ್ಷೇತ್ರಕ್ಕೆ ವಿಸ್ತರಿಸಿರಲಿಲ್ಲ. ಹಾಗೆಯೇ ಗಾಂಧಿ ಪ್ರತಿಪಾದಿಸಿದ ಮಹಿಳೆಯರ ಪಾತ್ರವೂ ಶ್ರಮವಿಭಜನೆಯ ತತ್ವವನ್ನೇ ಅವಲಂಬಿಸಿತ್ತು. ಮತ್ತು ಐತಿಹಾಸಿಕವಾಗಿ ಈ ತತ್ವವೇ ಸ್ತ್ರೀಯರ ಶೋಷಣೆಗೆ ಮತ್ತು ದಬ್ಬಾಳಿಕೆ ಕಾರಣವಾಗಿತ್ತು ಎನ್ನುವುದನ್ನು ಮರೆಯುವುದಕ್ಕಾಗುವುದಿಲ್ಲ.

Recommended Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.