ಈ ಹೆಣ್ಣು ಮಕ್ಕಳು ದೇಶಕ್ಕಾಗಿ ವೆಂಟಿಲೇಟರ್ ಮಾಡಲು ಹೊರಟಿದ್ದಾರೆ.

 In corona-covid-19, ECONOMY


ಸೊಮಾಯಾ ಫರೂಖಿ ತನ್ನ ನಾಲ್ಕು ಗೆಳತಿಯರೊಂದಿಗೆ ಬೆಳಗ್ಗೆ ಎದ್ದು ಅಪ್ಪನ ಕಾರಿನಲ್ಲಿ ಮೆಕಾನಿಕ್ ವರ್ಕ್‌ಷಾಪ್‌ಗೆ ಹೋಗುತ್ತಾಳೆ. ಇದು ಹೆಚ್ಚಿನ ದಿನಗಳಲ್ಲಿ ಅವರ ದಿನಚರಿ. ಅದೇನು ಸಲೀಸಾದ ಪ್ರಯಾಣವಲ್ಲ. ಪೋಲಿಸರ ಚೆಕ್‌ಪಾಯಿಂಟುಗಳನ್ನು ತಪ್ಪಿಸಿಕೊಂಡು ಹೋಗಬೇಕು. ಅದಕ್ಕೆ ಹೆದ್ದಾರಿ ಬಿಟ್ಟು, ಸಂದಿಗೊಂದಿಗಳಲ್ಲಿ ಹೋಗಬೇಕು. ಅವರಿರುವ ಹೆರತ್ ನಗರ ಆಫ್ಗಾನಿಸ್ತಾನದಲ್ಲಿ ಕೊರೋನಾದ ಹಾಟ್ ಸ್ಪಾಟ್. ಅಲ್ಲಿ ಲಾಕ್‌ಡೌನ್ ಕಟ್ಟುನಿಟ್ಟಾಗಿ ಜಾರಿಯಲ್ಲಿದೆ. ಈ ಹುಡುಗಿಯರಿಗೆ ಕೆಲದಿನಗಳ ಹಿಂದೆ ಜಾಗತಿಕ ಒಲಿಂಪಿಯಾಡ್ ರೊಬೋಟಿಕ್ಸ್‌ನಲ್ಲಿ ಬಹುಮಾನ ಬಂದಿತ್ತು. ಈಗ ಜನರ ಪ್ರಾಣ ಉಳಿಸಬೇಕು. ಅದಕ್ಕೆ ಈ ಸಾಹಸ ಮಾಡುತ್ತಿದ್ದೇವೆ ಅಂತಾರೆ ಆ ಮಕ್ಕಳು. ಕಾರಿನ ಭಾಗಗಳನ್ನು ಬಳಸಿಕೊಂಡು ಜೀವ ಉಳಿಸೋದಕ್ಕೆ ಅಂತ ಉಸಿರಾಡುವ ಯಂತ್ರವನ್ನು ಮಾಡಲು ಹೊರಟಿದ್ದಾರೆ. ವೈರಾಣು ವಿರುದ್ಧ ತಮ್ಮ ದೇಶ ನಡೆಸುತ್ತಿರುವ ಹೋರಾಟದಲ್ಲಿ ನೆರವಾಗಬೇಕು ಅಂತ ಆಸೆ ಅವರಿಗೆ. ನಮ್ಮ ಯಂತ್ರದಿಂದ ಒಂದೇ ಒಂದು ಜೀವ ಉಳಿದರೂ ಸಾಕು. ನಮಗೆ ಹೆಮ್ಮೆಯಾಗುತ್ತೆ ಅನ್ನುತ್ತಾಳೆ ೧೭ವರ್ಷದ ಫರೂಖಿ.
ಅವರ ಈ ಸಾಹಸ ಅದರಲ್ಲೂ ಸಂಪ್ರದಾಯಸ್ಥ ಆಫ್ಗಾನಿಸ್ತಾನದಲ್ಲಿ ತುಂಬಾ ಮಹತ್ವದ ಸಂಗತಿ. ಕೇವಲ ಒಂದು ತಲೆಮಾರಿನ ಹಿಂದೆ ಅಂದರೆ ೧೯೯೦ರ ಕೊನೆಯಲ್ಲಿ ಇಸ್ಲಾಮಿಕ್ ಮೂಲಭೂತವಾದಿ ತಾಲಿಬಾನ್ ಆಳುತ್ತಿದ್ದಾಗ ಹೆಣ್ಣುಮಕ್ಕಳಿಗೆ ಶಾಲೆಗೆ ಹೋಗುವುದಕ್ಕೆ ಅವಕಾಶವಿರಲಿಲ್ಲ. ಫರೂಖಿಯ ಅಮ್ಮ ಮೂರನೇ ಕ್ಲಾಸಿಗೆ ತನ್ನ ಶಿಕ್ಷಣವನ್ನು ಕೊನೆಗೊಳಿಸಬೇಕಾಯಿತು.
ಇರೋದು ಕೇವಲ ೪೦೦ ವೆಂಟಿಲೇಟರ್
ಕೊರೋನಾ ಮಹಾಮಾರಿಯನ್ನು ಆಫ್ಗಾನಿಸ್ತಾನ ಹೆಚ್ಚುಕಡಿಮೆ ಖಾಲಿ ಕೈಯಲ್ಲಿ ಎದುರಿಸುತ್ತಿದೆ. ಅಲ್ಲಿ ೩೬೬ ಲಕ್ಷ ಜನ ಇದ್ದಾರೆ. ಇರೋದು ಕೇವಲ ೪೦೦ ವೆಂಟಿಲೇಟರ್‌ಗಳು.. ಸಧ್ಯಕ್ಕೆ ಅಲ್ಲಿ ಕೇವಲ ೯೦೦ ಕೊರೋನಾ ವೈರಾಣು ಪ್ರಕರಣ ವರದಿಯಾಗಿದೆ. ಅದರಲ್ಲಿ ೩೦ ಜನ ಸತ್ತಿದ್ದಾರೆ. ಬಹುಶಃ ಇನ್ನೂ ಹೆಚ್ಚು ಜನರಿಗೆ ಸೋಂಕು ಇರಬಹುದು ಅನ್ನುವ ಅನುಮಾನವಿದೆ. ಅಲ್ಲಿ ಟೆಸ್ಟ್ ಕಿಟ್ಟುಗಳ ಕೊರತೆ ತುಂಬಾ ಇದೆ. ಹಾಗಾಗಿ ಬಹುಪಾಲು ಪ್ರಕರಣಗಳು ಬೆಳಕಿಗೆ ಬಂದಿಲ್ಲದಿರಬಹುದು. ಕೊರತೆಗೆ ಒಂದು ಉತ್ತರ ಕಂಡುಕೊಳ್ಳಬೇಕು ಅನ್ನುವ ಹಂಬಲ ಫರೂಖಿ ಮತ್ತು ಆಕೆಯ ಗೆಳತಿಯರನ್ನು ಈ ಸಾಹಸಕ್ಕೆ ನೂಕಿದೆ.
ಬೆಳಗ್ಗೆ ಫರೂಖಿಯ ಅಪ್ಪ ಈ ಹುಡುಗಿಯರನ್ನು ಸಂದಿಗೊಂದಿಗಳನ್ನು ಸುತ್ತಿ ಬಳಸಿ, ಚೆಕ್‌ಪೋಸ್ಟ್‌ಗಳನ್ನು ತಪ್ಪಿಸಿಕೊಂಡು ಹೆರಾತ್‌ನಲ್ಲಿರುವ ತಂಡದ ಕಛೇರಿಗೆ ತಲುಪಿಸುತ್ತಾರೆ. ಅಲ್ಲಿಂದ ಮತ್ತೊಂದು ಕಾರಿನಲ್ಲಿ ಊರಾಚೆ ಇರುವ ಒಂದು ಮೆಕಾನಿಕ್ ಷಾಪಿಗೆ ಬರುತ್ತಾರೆ.
ಹೆರಾತ್‌ನಲ್ಲಿ ತುಂಬಾ ತುರ್ತು ಕೆಲಸವಿದ್ದಾಗ ಮಾತ್ರ ಜನ ಮನೆಯಿಂದ ಆಚೆ ಹೋಗಬಹುದು. ರೋಬೋಟಿಕ್ಸ್ಸ್ ತಂಡಕ್ಕೆ ಕೆಲವೇ ಕಾರು ಪಾಸುಗಳು ಸಿಕ್ಕಿವೆ. ಫರೂಖಿಯ ಅಪ್ಪನ ಬಳಿ ಅಂತಹ ಪಾಸ್ ಇಲ್ಲ. ಅವರಿಗೆ ಈವರೆಗೆ ಅಂತಹ ಪಾಸ್ ಪಡೆಯಲು ಸಾಧ್ಯವಾಗಿಲ್ಲ. ಆದರೆ ಈ ಹುಡುಗಿಯರಿಗೆ ಕಾಯುವ ತಾಳ್ಮೆ ಇಲ್ಲ. ಸೆಕ್ಯುರಿಟಿಯವರು ಕ್ರಮ ತೆಗೆದುಕೊಳ್ಳಬಹುದು ಎಂಬ ಭಯ ಇದೆ. ಆದರೆ ನಮಗೆ ಬೇರೆ ದಾರಿ ಇಲ್ಲ. ನಾವು ಜನರ ಪ್ರಾಣ ಉಳಿಸುವುದಕ್ಕೆ ಪ್ರಯತ್ನಿಸಬೇಕು ಅಂತ ಫರೂಖಿ ಹೇಳುವಾಗ ಅವಳ ಕಾಳಜಿ ಅರ್ಥವಾಗುತ್ತಿತ್ತು. ವರ್ಕಷಾಪಿನಲ್ಲಿ ಮಕ್ಕಳು ಎರಡು ವಿನ್ಯಾಸಕ್ಕೆ ಸಂಬಂಧಿಸಿದಂತೆ ಪ್ರಯೋಗ ಮಾಡುತ್ತಿದ್ದಾರೆ. ಒಂದು, ಮ್ಯಾಸುಚೂಸೆಟ್ಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಮುಕ್ತವಾಗಿ ಬಿಡುಗಡೆ ಮಾಡಿರುವ ಒಂದು ನಕ್ಷೆ. ಅವರು ಅದಕ್ಕೆ ಟೊಯೊಟೊ ಕಾರಿನ ವಿಂಡ್ ಷೀಲ್ಡ್ ವೈಪರ್, ಬ್ಯಾಟರಿ, ಬ್ಯಾಗ್ ವಾಲ್ವ್ ಮಾಸ್ಕಿನ ಸೆಟ್ಟುಗಳು, ಮಾನವಚಾಲಿತ ಆಕ್ಸಿಜನ್ ಪಂಪ್ ಇವುಗಳನ್ನೆಲ್ಲಾ ಬಳಸಿಕೊಂಡು ಪ್ರಯತ್ನಿಸುತ್ತಿದ್ದಾರೆ. ವರ್ಕ್‌ಷಾಪಿನ ಮೆಕಾನಿಕ್ಕುಗಳು ವೆಂಟಿಲೇಟರಿನ ಫ್ರೇಮ್ ರಚಿಸಲು ಅವರಿಗೆ ನೆರವಾಗುತ್ತಿದ್ದಾರೆ. ಎಂಐಟಿಯ ಪ್ರೊಫೆಸರ್ ಡೇನಿಯಲ್ ರಸ್ ತಮ್ಮ ಮಾದರಿಯನ್ನು ತಯಾರಿಸಲು ಮಕ್ಕಳು ಮಾಡುತ್ತಿರುವ ಪ್ರಯತ್ನವನ್ನು ಸಂತೋಷದಿಂದ ಸ್ವಾಗತಿಸಿದ್ದಾರೆ. ಅದು ಸ್ಥಳೀಯವಾಗಿ ತಯಾರಾಗಿ, ಪರೀಕ್ಷಿಸಲ್ಪಡುವುದನ್ನು ನೋಡುವುದಕ್ಕೆ ಸಂತೋಷವಾಗುತ್ತದೆ ಎಂದು ತಿಳಿಸಿದ್ದಾರೆ.
ಹಣದ ನೆರವು
ಆ ತಂಡ ಪ್ರಾರಂಭವಾಗುವುದಕ್ಕೆ ನಗರದ ತಾಂತ್ರಿಕ ಉದ್ದಿಮೆದಾರ ರೊಯಾ ಮಹಬೂಬ್ ನೆರವಾಗಿದ್ದಳು. ಅವಳು ಹೆಣ್ಣುಮಕ್ಕಳ ಸಬಲೀಕರಣಕ್ಕೆಂದು ಹಣವನ್ನು ಸಂಗ್ರಹಿಸುತ್ತಿದ್ದಾಳೆ. ಮೇ ಅಥವಾ ಜೂನ್ ವೇಳೆಗೆ ವೆಂಟಿಲೇಟರ್ ಸಿದ್ಧವಾಗುತ್ತದೆ ಅನ್ನುವ ನಂಬಿಕೆ ಅವಳದ್ದು. ತಂಡದಲ್ಲಿ ಒಟ್ಟು ೧೫ ಜನ ಇದ್ದಾರೆ. ಅವರೆಲ್ಲಾ ಬೇರೆ ಬೇರೆ ಪ್ರಾಜೆಕ್ಟುಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ವೆಂಟಿಲೇಟರ್ ಒಮ್ಮೆ ತಯಾರಾದ ಮೇಲೆ ಅದನ್ನು ಪರೀಕ್ಷೆಗೆಂದು ಆರೋಗ್ಯ ಮಂತ್ರಾಲಯಕ್ಕೆ ಕಳುಹಿಸಲಾಗುತ್ತದೆ. ಪ್ರಾರಂಭದಲ್ಲಿ ಪ್ರಾಣಿಗಳ ಮೇಲೆ ಪ್ರಯೋಗ ಮಾಡಲಾಗುತ್ತದೆ.
೨೦೧೭ರಲ್ಲಿ ನಡೆದ ಜಾಗತಿಕ ರೊಬೋಟ್ ಒಲಂಪಿಯಾಡಿನಲ್ಲಿ ಪಾಲ್ಗೊಂಡಾಗ ಫರೂಖಿಗೆ ಕೇವಲ ೧೪ ವರ್ಷ. ಅವಳು ಮತ್ತು ಅವಳ ತಂಡಕ್ಕೆ ಈ ಸಂಕಷ್ಟದ ಸಮಯದಲ್ಲಿ ದೇಶಕ್ಕೆ ಏನಾದರೂ ಮಾಡಬೇಕು ಅನ್ನುವ ತವಕ. ಆಫ್ಗನ್ನರು ಈ ಮಹಾಮಾರಿಯ ಬಿಕ್ಕಟ್ಟಿನಲ್ಲಿ ಆಫ್ಗಾನಿಸ್ತಾನಕ್ಕೆ ನೆರವಾಗಬೇಕು ಎನ್ನುತ್ತಾಳೆ.
ಫರೂಖಿಯಂಥವರು ನಮ್ಮ ಮಕ್ಕಳಿಗೆ ಮಾದರಿಯಾಗಲಿ.

https://www.thehindu.com/news/international/afghan-girls-turn-car-parts-into-ventilators/article31383542.ece

Recommended Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.