ಏರುತ್ತಿರುವ ಅಸಮಾನತೆಗೆ ಕಡಿವಾಣ ಹಾಕಬೇಕಾಗಿದೆ

 In ECONOMY

ಒಂದು ದೇಶದ ಬೆಳವಣಿಗೆ ಅಂದರೆ ಜಿಡಿಪಿ ಅಂದುಕೊಂಡು ಅದರ ಹಿಂದೆಯೇ ಸಾಗಿರುವ ಪ್ರಸ್ತುತ ಸ್ಥಿತಿಯಲ್ಲಿ ಅಸಮಾನತೆ, ಬಡತನ ಇತ್ಯಾದಿ ವಿಷಯಗಳು ನಮ್ಮ ಸರ್ಕಾರಗಳಿಗೆ ಪ್ರಮುಖ ಅಂಶಗಳೇ ಆಗುತ್ತಿಲ್ಲ. ಭಾರತ ಆ ಬಗ್ಗೆ ಅಂಕಿಅಂಶಗಳನ್ನು ಪ್ರಕಟಿಸುವುದನ್ನು ನಿಲ್ಲಿಸಿ ವರ್ಷಗಳೇ ಆಗಿಬಿಟ್ಟಿವೆ. ಮಾಹಿತಿ ಕೊರತೆಯಿಂದಾಗಿ ಆ ಬಗ್ಗೆ ಗಂಭಿರವಾದ ಚರ್ಚೆಗಳು ನಡೆಯುತ್ತಿಲ್ಲ. ನಮ್ಮ ಪತ್ರಿಕೆಗಳ ವರದಿಗಳು, ಚರ್ಚೆಗಳು ಬಹುಪಾಲು ಜಿಡಿಪಿಯ ಸುತ್ತಲೇ ಸುತ್ತುತ್ತಿವೆ.
ನಮ್ಮ ನಡುವಿನ ಅಪರೂಪದ ಅರ್ಥಶಾಸ್ತ್ರಜ್ಞ ಥಾಮಸ್ ಪಿಕೆಟ್ಟಿ ಪ್ಯಾರಿಸ್ ಸ್ಕೂಲ್ ಆಫ್ ಎಕಾನಮಿಕ್ಸ್‌ನಲ್ಲಿ, ವರ್ಲ್ಡ್ ಎಕನಾಮಿಕ್ ಲ್ಯಾಬ್ ಎಂಬ ಸಂಸ್ಥೆಯನ್ನು ಕಟ್ಟಿಕೊಂಡು ಅಸಮಾನತೆಯನ್ನು ಕುರಿತು ತೀರಾ ಗಂಭೀರವಾದ ಅಧ್ಯಯನ ಮಾಡುತ್ತಿದ್ದಾರೆ. ವಿನೂತನವಾದ ಹಾಗೂ ಪಾರದರ್ಶಕವಾದ ಕ್ರಮವನ್ನು ಬಳಸಿಕೊಂಡು ಆದಾಯ ಹಾಗೂ ಸಂಪತ್ತಿನ ಅಸಮಾನತೆಯನ್ನು ಕುರಿತಂತೆ ತುಂಬಾ ಮೌಲಿಕವಾದ ಮಾಹಿತಿಯನ್ನು ಕಲೆಹಾಕಿ ಪ್ರಕಟಿಸುತ್ತಿದ್ದಾರೆ. ಅದರಿಂದ ಅಸಮಾನತೆಯನ್ನು ಕುರಿತು ಗಂಭೀರ ಚರ್ಚೆ ಇಂದು ನಮಗೆ ಸಾಧ್ಯವಾಗುತ್ತಿದೆ. ಅವರ ಉದ್ದೇಶವೂ ಅದೆ. ಕೆಲವೇ ದಿನಗಳ ಹಿಂದೆ ಅದು ಪ್ರಕಟಿಸಿರುವ ೨೦೧೮ರ ಜಾಗತಿಕ ಅಸಮಾನತೆಯನ್ನು ಕುರಿತ ವರದಿ ಈ ನಿಟ್ಟಿನಲ್ಲಿ ಒಂದು ಅಮೂಲ್ಯ ನಿಧಿ. ಪ್ರಾರಂಭದಲ್ಲಿ ಅದು ಜಾಗತಿಕ ಸ್ಥಿತಿಯ ಬಗ್ಗೆ ಒಂದು ಸಮಗ್ರ ಚಿತ್ರವನ್ನು ಕೊಟ್ಟು ನಂತರ ವಿವಿಧ ದೇಶಗಳ ಸ್ಥಿತಿಯನ್ನು ವಿವರಿಸುತ್ತದೆ. ಕೊನೆಗೆ ಸಾಧ್ಯವಿರುವ ಪರಿಹಾರಗಳನ್ನು ಚರ್ಚೆಗೆ ನಮ್ಮ ಮುಂದೆ ಇಡುತ್ತದೆ. ಅದರೆ ಆಯಾ ದೇಶಗಳೇ ಒಂದು ಪ್ರಜಾಸತ್ತಾತ್ಮಕವಾದ ರೀತಿಯಲ್ಲಿ ಪರಿಹಾರಗಳನ್ನು ಕಂಡುಕೊಳ್ಳಬೇಕೆಂದು ಅದು ಭಾವಿಸುತ್ತದೆ.
ಅದು ದಾಖಲಿಸುವ ಕೆಲವು ಪ್ರಮುಖ ಅಂಶಗಳು: ಕಳೆದ ಕೆಲವು ದಶಕಗಳಲ್ಲಿ ಜಗತ್ತಿನಾದ್ಯಂತ ಅಸಮಾನತೆ ತೀವ್ರವಾಗುತ್ತಿದೆ. ಕೆಲವು ದೇಶಗಳಲ್ಲಿ ಅದು ವೇಗವಾಗಿ ಏರುತ್ತಿದೆ. ಕೆಲವು ದೇಶಗಳಲ್ಲಿ ಏರಿಕೆಯ ಪ್ರಮಾಣ ಕಡಿಮೆ ಇದೆ. ಭಾರತ ಹಾಗೂ ಚೀನಾದಲ್ಲಿ ಅಸಮಾನತೆ ತುಂಬಾ ವೇಗವಾಗಿ ಹೆಚ್ಚುತ್ತಿದೆ. ೧೯೮೦ರ ಮಧ್ಯಭಾಗದಿಂದ ಈಚೆಗೆ ಭಾರತದಲ್ಲಿ ಅಸಮಾನತೆ ತೀವ್ರವಾಗಿ ಬೆಳೆಯುತ್ತಿದೆ. ಹಾಗೂ ಅದು ನಿರಂತರವಾಗಿ ಏರುತ್ತಿದೆ. ೧೯೮೦ರ ಪ್ರಾರಂಭದಲ್ಲಿ ಒಟ್ಟಾರೆ ಆದಾಯದ ಶೇಕಡ ೬ರಷ್ಟು ಶೇಕಡ ೧ರಷ್ಟು ಅತಿ ಶ್ರೀಮಂತರಿಗೆ ಹೋಗುತ್ತಿತ್ತು. ೨೦೦೦ರ ವೇಳೆಗೆ ಅದು ಶೇಕಡ ೧೫ರಷ್ಟಾಯಿತು. ಈಗ ಅದು ಶೇಕಡ ೨೨ರಷ್ಟಾಗಿದೆ.
ಕೇವಲ ಸರಾಸರಿ ವರಮಾನವನ್ನು ನೋಡಿದರೆ ನಮಗೆ ಸ್ಪಷ್ಟ ಚಿತ್ರ ಸಿಗುವುದಿಲ್ಲ. ಭಾರತದಲ್ಲಿ ೨೦೦೦ರಿಂದ ಈಚೆಗೆ ಸರಾಸರಿ ವರಮಾನ ಶೇಕಡ ೪ರಷ್ಟು ಪ್ರಮಾಣದಲ್ಲಿ ಏರುತ್ತಿದೆ. ಸರಾಸರಿಯ ಆಚೆಗೆ ನೋಡಿದರೆ ಬೇರೆಯದೇ ಆದ ಸತ್ಯ ಕಾಣಿಸುತ್ತದೆ. ಕೆಳಸ್ತರದಲ್ಲಿರುವ ಶೇಕಡ ೫೦ರಷ್ಟು ಜನರ ಆದಾಯ ಶೇಕಡ ೨.೫ರಷ್ಟು ಏರುತ್ತಿದೆ. ಆದರೆ ಮೇಲಿನ ಶೇಕಡ ೧ರಷ್ಟು ಶ್ರೀಮಂತರ ಆದಾಯ ಶೇಕಡ ೬ರಷ್ಟು ಏರುತ್ತಿದೆ. ಈ ವ್ಯತ್ಯಾಸದಿಂದಾಗಿ ಅಸಮಾನತೆ ಹೆಚ್ಚುತ್ತಾ ಹೋಗುತ್ತದೆ. ಜೊತೆಗೆ ಈ ಕೆಳಗಿನ ಶೇಕಡ ೫೦ ಜನಕ್ಕೆ ಜೀವನಾವಶ್ಯಕ ವಸ್ತುಗಳಿಗೆ ಹಾಗೂ ಶಿಕ್ಷಣ, ಆರೋಗ್ಯ, ಅಥವಾ ಸಾರಿಗೆಗೆ ಇರುವ ಸೌಲಭ್ಯವೂ ಅಷ್ಟರಲ್ಲೇ ಇದೆ.
ಮೇಲಿನ ಶೇಕಡ ೦.೧ರಷ್ಟು ಜನ ಅಂದರೆ ಕೇವಲ ಎಂಟು ಲಕ್ಷ ಜನರಿಗೆ, ಕೆಳಸ್ತರದಲ್ಲಿರುವ ಇಡೀ ಶೇಕಡ ೫೦ ಜನರಷ್ಟು ಅಂದರೆ ಸುಮಾರು ೪೦೦ ಮಿಲಿಯನ್ ವಯಸ್ಕರ ಆದಾಯಕ್ಕೆ ಸಮಾನವಾದ ಆದಾಯ ತಲುಪುತ್ತಿದೆ. ಈ ಅಂಶವನ್ನು ಗಣನೆಗೆ ತೆಗೆದುಕೊಂಡರೆ ಸರ್ಕಾರ ಮಾಡಬೇಕಾದದ್ದು ತಂಬಾ ಇದೆ ಅನ್ನುವುದು ಸ್ಪಷ್ಟ.
ಕೇವಲ ಆದಾಯದ ಅಸಮಾನತೆಯನ್ನಷ್ಟೇ ನೋಡಿದರೆ ಸಾಕೆ?
ನಿಜ, ಅಸಮಾನತೆ ಅಂದರೆ ಕೇವಲ ಅರ್ಥಿಕ ಅಸಮಾನತೆ ಅಲ್ಲ. ಅದು ಇನ್ನೂ ಹೆಚ್ಚು ಸಂಕೀರ್ಣವಾದದ್ದು. ಅದು ಆರೋಗ್ಯ, ನ್ಯಾಯಯುತ ಕಾನೂನು ವ್ಯವಸ್ಥೆ, ಒಳ್ಳೆಯ ಶಿಕ್ಷಣ, ಸುರಕ್ಷಿತ ಪರಿಸರ ಇವೆಲ್ಲಾವನ್ನು ಒಳಗೊಳ್ಳುತ್ತದೆ. ವರದಿ ನೇರವಾಗಿ ಈ ಎಲ್ಲಾ ಆಯಾಮಗಳನ್ನು ಚರ್ಚಿಸುವುದಿಲ್ಲ. ಆದರೆ ಆರ್ಥಿಕೇತರ ಅಸಮಾನತೆ ಮತ್ತು ಆರ್ಥಿಕ ಅಸಮಾನತೆಯ ನಡುವಿನ ಸಂಬಂಧವನ್ನು ಸೂಚಿಸಲಾಗಿದೆ. ಉದಾಹರಣೆಗೆ ಒಳ್ಳೆಯ ಶಿಕ್ಷಣ, ಆರೋಗ್ಯ ಹಾಗೂ ಇತರ ಆರ್ಥಿಕೇತರ ಅಸಮಾನತೆಗೂ ಪೋಷಕರ ಆದಾಯಕ್ಕೂ ಇರುವ ಸಂಬಂಧ. ಇದು ತುಂಬಾ ಮುಖ್ಯ. ಏಕೆಂದರೆ ಶಿಕ್ಷಣ, ಆರೋಗ್ಯ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಇರುವ ಅವಕಾಶಗಳಲ್ಲಿ ತುಂಬಾ ಅಸಮಾನತೆ ಇದೆ. ಇದು ತಗ್ಗಿಸುವುದು ಆರ್ಥಿಕ ಅಸಮಾನತೆಯನ್ನು ತಗ್ಗಿಸುವ ದೃಷ್ಟಿಯಿಂದ ತುಂಬಾ ಮುಖ್ಯವಾಗುತ್ತದೆ.
ಹೆಚ್ಚು ಸಮಾನವಾದ ಅಭಿವೃದ್ಧಿ ನಮ್ಮ ಆದ್ಯತೆಯಾಗಬೇಕು. ಹಲವು ದೇಶಗಳು ಅಸಮಾನತೆಯನ್ನು ತಗ್ಗಿಸುವ ದೃಷ್ಟಿಯಿಂದ ಪ್ರಗತಿಪರ ಹಣಕಾಸು ನೀತಿಯನ್ನು ಅನುಸರಿಸುತ್ತಿವೆ. ಉದಾಹರಣೆಗೆ ಶಿಕ್ಷಣ ಹಾಗೂ ಆರೋಗ್ಯ ಇವು ಎಲ್ಲರಿಗೂ ಸಿಗುವಂತಾಗಬೇಕು ಅನ್ನುವ ದೃಷ್ಟಿಯಿಂದ ಸರ್ಕಾರ ಈ ಕ್ಷೇತ್ರಗಳಲ್ಲಿ ಹೆಚ್ಚಿನ ಬಂಡವಾಳ ತೊಡಗಿಸುತ್ತಿವೆ. ಆದರೆ ಜಗತ್ತಿನಾದ್ಯಂದ ಸರ್ಕಾರಿ ಆದಾಯ, ಮತ್ತು ಸಂಪತ್ತು ಕಡಿಮೆಯಾಗುತ್ತಿದೆ. ಎಷ್ಟೋ ದೇಶಗಳಲ್ಲಿ ಅದು ಇಲ್ಲವೇ ಇಲ್ಲ.
ಹಲವು ರೀತಿಯಲ್ಲಿ ಸರ್ಕಾರ ಇದಕ್ಕಾಗಿ ಆದಾಯ ಸಂಗ್ರಹಿಸುತ್ತಿವೆ. ಕೆಲವು ದೇಶಗಳು ಪ್ರಗತಿಪರ ತೆರಿಗೆ ನೀತಿಯನ್ನು ಅನುಸರಿಸುತ್ತಿವೆ. ಅಂದರೆ ಶ್ರೀಮಂತರು ಹೆಚ್ಚಿನ ತೆರಿಗೆಯನ್ನು ಕಟ್ಟಬೇಕು, ಯಾಕೆಂದರೆ ಅವರಿಗೆ ಕಟ್ಟುವ ಸಾಮರ್ಥ್ಯ ಇದೆ. ವರದಿ ಗಮನಿಸುವ ಇನ್ನೊಂದು ಅಂಶವೆಂದರೆ, ಅನುವಂಶೀಯವಾಗಿ ಬಂದ ಸಂಪತ್ತಿಗೆ ಭಾರತದಲ್ಲಿ ತೆರಿಗೆ ಇಲ್ಲ. ಶ್ರೀಮಂತ ಕುಟುಂಬದಲ್ಲಿ ಹುಟ್ಟಿದೆ ಅನ್ನುವ ಒಂದೇ ಕಾರಣಕ್ಕೆ ಯಾವುದೇ ತೆರಿಗೆ ಕಟ್ಟದೆಯೇ ಇಡೀ ಸಂಪತ್ತು ಆ ವಂಶಜರಿಗೆ ಸೇರುತ್ತದೆ. ಆದರೆ ಬಡವರು ಜೀವನಾವಶ್ಯಕ ವಸ್ತುಗಳಿಗೆ ಅತಿಹೆಚ್ಚು ತೆರಿಗೆ ಕಟ್ಟುತ್ತಾರೆ. ಸರ್ಕಾರ ಈ ನಿಟ್ಟಿನಲ್ಲಿ ಯೋಚಿಸಬೇಕು ಎಂದು ವರದಿ ಹೇಳುತ್ತದೆ.
ಹೀಗೆ ಹಲವಾರು ವಿಷಯಗಳು ಆ ವರದಿಯಲ್ಲಿ ಚರ್ಚಿತವಾಗಿದೆ. ಭಾರತ ಹಾಗೂ ಚೀನಾ ಕುರಿತ ಹೋಲಿಕೆಗಳು ಅಲ್ಲಿವೆ. ಚೀನಾ ಭಾರತಕ್ಕಿಂತ ನಾಲ್ಕುಪಟ್ಟು ಬೆಳವಣಿಗೆ ದರವನ್ನು ಸಾಧಿಸಿದೆ. ೧೯೮೦ರ ನಂತರ ಶೇಕಡ ೮೦೦ರಷ್ಟು ಬೆಳವಣಿಗೆ ಅಲ್ಲಿ ಸಾಧ್ಯವಾಗಿದೆ. ಭಾರತದಲ್ಲಿ ಅದು ಶೇಕಡ ೨೦೦ರಷ್ಟು ಇದೆ. ಭಾರತದ ಅರ್ಧದಷ್ಟು ಅಸಮಾನತೆ ಅಲ್ಲಿದೆ. ಚೀನಾದಲ್ಲಿ ಶೇಕಡ ೧ರಷ್ಟು ಅತಿ ಶ್ರೀಮಂತರಲ್ಲಿ ಶೇಕಡ ೧೪ರಷ್ಟು ಸಂಪತ್ತು ಶೇಖರವಾಗುತ್ತಿದೆ. ಭಾರತದಲ್ಲಿ ಅತಿಶ್ರೀಮಂತರ ಸಂಪತ್ತಿನ ಪಾಲು ಶೇಕಡ ೨೨ರಷ್ಟು ಇದೆ. ಆದರೆ ಎರಡು ದೇಶಗಳಲ್ಲಿ ಇರುವ ರಾಜಕೀಯ ವ್ಯವಸ್ಥೆ ತುಂಬಾ ಬೇರೆ ಇರುವುದರಿಂದ ಇದಕ್ಕಿಂತ ಹೆಚ್ಚಿನ ಹೋಲಿಕೆ ಸಾಧ್ಯವಾಗುವುದಿಲ್ಲ.
ಹೆಚ್ಚಿನ ಸಮಾನತೆಯನ್ನು ಸಾಧಿಸುವ ದೃಷ್ಟಿಯಲ್ಲಿ ಹೆಚ್ಚು ಆರೋಗ್ಯಪೂರ್ಣ ಚರ್ಚೆಗೆ ಅನಿವಾರ್ಯವಾದ ಮಾಹಿತಿಯನ್ನು ಈ ವರದಿ ನಮ್ಮ ಮುಂದಿಡುತ್ತದೆ ಹಾಗೂ ಅಸಮಾನತೆ, ಬಡತನ ಇತ್ಯಾದಿ ವಿಷಯಗಳು ಸರ್ಕಾರದ ಆದ್ಯತೆಯ ವಿಷಯಗಳಾಗಬೇಕೆಂಬ ನಿಟ್ಟಿನಲ್ಲಿ ಹೊಸ ಒತ್ತಾಯ ಇಂತಹ ಅಧ್ಯಯನಗಳಿಂದ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ವ್ಯಾಪಕ ಚರ್ಚೆ ನಡೆಯಬೇಕು.

Recommended Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.