ಒಂದು ಹೊತ್ತಿಗೂ ಗತಿಯಿಲ್ಲದೆ ಕ್ಯಾಂಪಿನಲ್ಲಿರುವ ಕಾರ್ಮಿಕರು

 In SUTTA MUTTA

ಹಿಂದು ಪತ್ರಿಕೆಯಲ್ಲಿ ಬಂದ ವರದಿ
ಮಹಮದ್ ಶಬೀರ್ ಅಸ್ಸಾಂ ಇದೆ ವಲಸೆ ಬಂದ ಕಾರ್ಮಿಕ. ಅವನದು ಐದು ಜನರ ಕುಟುಂಬ. ಮೂರು ಮಕ್ಕಳು ಮತ್ತು ಹೆಂಡತಿಯೊಂದಿಗೆ ಬೆಂಗಳೂರು ಸಿಟಿ ಹೊರವಲಯದಲ್ಲಿರುವ ಕರಿಯಮ್ಮ ಅಗ್ರಹಾರ ಕ್ಯಾಂಪ್‌ನಲ್ಲಿ ವಾಸಿಸುತ್ತಿದಾನೆ. ಅವನ ಮನೆಯೊಳಗೆ ಈಗ ಊಟದ ರೇಷನಿಂಗ್ ಪ್ರಾರಂಭ ಆಗಿದೆ. ಈವರೆಗೆ ದಿನ ಎರಡು ಹೊತ್ತು ಊಟ ಮಾಡುತ್ತಿದ್ದರು. ಈಗ ಒಂದು ಹೊತ್ತಿಗೆ ಬಂದಿದ್ದಾರೆ. ಒಂದೆರಡು ದಿನಗಳಲ್ಲಿ ಅದೂ ಕಷ್ಟವಾಗಬಹುದು. ಕೋವಿಡ್-೧೯ ಹರಡುವುದನ್ನು ತಡೆಯುವುದಕ್ಕೆ ಜಾರಿಗೆ ಬಂದ ಲಾಕ್‌ಡೌನ್ ಜನರ ಬದುಕನ್ನೇ ಬದಲಿಸಿದೆ. ಅವರ ಬದುಕು ಮೂರಾಬಟ್ಟೆಯಾಗಿದೆ.
ನೀವು ಎಲ್ಲೇ ಹೋಗಿ ಕೆಲಸಗಾರರ ಎಲ್ಲಾ ಕ್ಯಾಂಪುಗಳಲ್ಲೂ ಇದೇ ಕಥೆಯನ್ನು ಕೇಳುತ್ತೀರಿ. ಅವರಿಟ್ಟುಕೊಂಡಿದ್ದ ಆಹಾರ ಪದಾರ್ಥಗಳು ಕಡಿಮೆಯಾಗುತ್ತಿದೆ. ಕೆಲವೇ ದಿನಗಳಲ್ಲಿ ಖಾಲಿಯಾಗುತ್ತದೆ.
’ನಾವು ಇನ್ನು ಮೇಲೆ ದಿನಕ್ಕೆ ಒಂದೇ ಹೊತ್ತು ಊಟ ಅಂದುಕೊಂಡಿದ್ದೇವೆ. ಆಗ ಇನ್ನೊಂದೆರಡು ದಿನಕ್ಕೆ ರೇಷನ್ ಉಳಿಯಬಹುದು’ ಅಂತ ಹಲವರು ಹೇಳಿಕೊಂಡರು.
ಕೆಲಸವಿಲ್ಲದೆ ಒಂದು ವಾರವಾಯಿತು. ಹಣ ಮತ್ತು ರೇಷನ್ ಎರಡೂ ಮುಗಿಯುತ್ತಾ ಬಂದಿದೆ. ಇನ್ನೊಂದೆರಡು ದಿನಗಳಲ್ಲಿ ಸರ್ಕಾರ ಸಹಾಯ ಮಾಡದೇ ಹೋದರೆ ಉಪವಾಸ ಬೀಳುತ್ತೇವೆ ಇದು ರಾಯಚೂರಿನಿಂದ ಭರಮಪ್ಪನ ಅಳಲು.
ಉತ್ತರ ಕರ್ನಾಟಕ ಮತ್ತು ಅಸ್ಸಾಂ, ಒಡಿಸ್ಸಾ, ಉತ್ತರ ಪ್ರದೇಶ, ಬಿಹಾರ್ ಮತ್ತು ಪಶ್ಚಿಮ ಬಂಗಾಳದಿಂದ ಬಂದ ಜನ ಒಂದೇ ಕಡೆ ತುಂಬಾ ಒತ್ತೊತ್ತಾಗಿ ಪಕ್ಕಪಕ್ಕದಲ್ಲಿಯೇ ಬದುಕುತ್ತಿದ್ದಾರೆ. ಕೆಲವರಂತೂ ಹತಾಶೆಯಲ್ಲಿ ಊಟ ಸಂಪಾದಿಸಿಕೊಳ್ಳಲು ಏನೇನೊ ದಾರಿ ಹುಡುಕುತ್ತಿದ್ದಾರೆ. ಬೆಂಗಳೂರಿನ ವಲಸೆ ಕೆಲಸಗಾರರ ಸಂಘದ ಹೇಮಂತ್ ಕುಮಾರ್ ಒಂದು ಘಟನೆ ಹೇಳಿದರು: ಎರಡು ದಿನಗಳ ಹಿಂದೆ, ಕೆಮ್ಮುತ್ತಿದ್ದ ವಲಸೆ ಕಾರ್ಮಿಕನೊಬ್ಬ ತನ್ನನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಲು ಕೇಳಿಕೊಂಡ. ಅವನಿಗೆ ಕೋವಿಡ್-೧೯ ಸೋಂಕು ತಗುಲಿರಬೇಕೆಂದು ಅವನನ್ನು ವೈದ್ಯರು ರಾಜೀವ್ ಗಾಂಧಿ ಇನ್ಟ್‌ಇಟ್ಯೂಟ್ ಆಫ್ ಛೆಸ್ಟ್ ಡಿಸೀಸಸ್‌ಗೆ ಕಳುಹಿಸಿಕೊಟ್ಟರು. ಅಲ್ಲಿ ಅವನಿಗೆ ಏನೂ ಆಗಿಲ್ಲವೆಂದು ತಿಳಿಯಿತು. ತನಗೇನೂ ಆಗಿರಲಿಲ್ಲ, ಕೆಮ್ಮು ಇರಲಿಲ್ಲ. ಊಟ ಸಿಗುತ್ತೆ ಅಂತ ಹಾಗೆ ಮಾಡಿದೆ ಎಂದ. ಜನ ಆಹಾರಕ್ಕೆ ಎಷ್ಟು ಹತಾಶರಾಗಿದ್ದಾರೆ ಅಂತ ಇದರಿಂದ ಗೊತ್ತಾಗುತ್ತೆ ಅಂತ ಅವರು ತಿಳಿಸಿದರು. ಹಣ ಮತ್ತು ರೇಷನ್ ಖಾಲಿಯಾದ ತಕ್ಷಣ ಸಾಲದ ಶಾರ್ಕ್‌ಗಳು ಇವರ ಪ್ರಾಣ ಹಿಂಡಿ ತೀವ್ರ ಸಾಲದ ಬಲೆಗೆ ಇವರನ್ನು ತಳ್ಳುತ್ತವೆ ಎಂದು ಅವರು ಆತಂಕಗೊಂಡಿದ್ದರು.
ನಗರದ ದಕ್ಷಿಣ ಭಾಗದ ಬೇರೆ ಬೇರೆ ಕ್ಯಾಂಪುಗಳಲ್ಲಿ -ಮುನೆಕೊಲಾಲ, ವೈಟ್‌ಫಿಲ್ಡ್, ವರ್ತೂರು, ಮಾರತಹಳ್ಳಿ ಮತ್ತು ಕುಂಡಲಹಲ್ಲಿ- ಇರುವ ವಲಸೆ ಕಾರ್ಮಿಕರು ಆಹಾರ ಪದಾರ್ಥಗಳು, ಹಾಲು ಮತ್ತು ನೀರು ಇಲ್ಲದೆ ಸಂಕಷ್ಟದಲ್ಲಿದ್ದಾರೆ. ಯಾವುದೇ ಕ್ಯಾಂಪುಗಳಿಗೆ ಸರ್ಕಾರದ ಪ್ರತಿನಿಧಿಗಳ್ಯಾರೂ ಈವರೆಗೂ ಹೋಗಿಲ್ಲ ಅಂತ ಅವರೆಲ್ಲಾ ಹೇಳುತ್ತಾರೆ. ಕೋವಿಡ್-೧೯ ಸಂಬಂಧಿಸಿದಂತೆ ಅವರಿಗೆ ನೆರವಾಗಲು ಅಥವಾ ಅದರ ಬಗ್ಗೆ ನೀಡಲು ಯಾರೂ ಹೋಗೇ ಇಲ್ಲವಂತೆ. ಕಾರ್ಮಿಕ ಇಲಾಖೆ ಪ್ರತಿಯೊಬ್ಬ ಕಾರ್ಮಿಕ ಆಫಿಸರಿಗೂ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಲು ಹಾಗು ಅರಿವು ಮೂಡಿಸಲು ೧೫ ಲಕ್ಷ ರೂಪಾಯಿ ನೀಡಿದ್ದಾರೆ. ಆದರೂ ಅವರ‍್ಯಾರು ಅಲ್ಲಿಗೆ ಹೋಗಿಲ್ಲ.
ಕೈತೊಳೆಯಲೂ ನೀರಿಲ್ಲ.
ಹೆಚ್ಚಿನ ಹೆಂಗಸರು ಸೀರೆಯ ಸೆರಗು ಅಥವಾ ದುಪ್ಪಟ್ಟಾದಿಂದ ಮುಖವನ್ನು ಮರೆಕೊಂಡಿದ್ದರು. ಗಂಡಸರು ಕರವಸ್ತ್ರದಿಂದ ತಮ್ಮ ಮೂಗು ಬಾಯಿಗಳನ್ನು ಮುಚ್ಚಿಕೊಂಡಿದ್ದರು. ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕ ಉತ್ಪಲ್‌ದತ್ ದೂರದರ್ಶನದಲ್ಲಿ ಕೋವಿಡ್-೧೯ರ ಬಗ್ಗೆ ಹೇಳುತಿದ್ದಾರೆ. ನಮಗೆ ತುಂಬಾ ಹೆದರಿಕೆಯಾಗುತ್ತಿದೆ ಎಂದ. ಅವರಿಗೆ ಪದೇ ಪದೇ ಕೈತೊಳೆಯುತ್ತಿರಬೇಕೆಂದು ತಿಳಿದಿದೆ. ಆದರೆ ಹಾಗೆ ಮಾಡೋದಕ್ಕೆ ಆಗೋದಿಲ್ಲ. ಅವರ ಕ್ಯಾಂಪಿನಲ್ಲಿ ನೀರಿನ ಕೊರತೆ ತುಂಬಾ ತೀವ್ರವಾಗಿದೆ. ಯಜಮಾನರು ಪ್ರತಿ ಮನೆಗೆ ವಾರಕ್ಕೆ ಮೂರು ಡ್ರಮ್ ನೀರು ಕೊಡುತ್ತಾರೆ. ಆದರೆ ಕೋವಿಡ್ ಭೀತಿ ಪ್ರಾರಂಭವಾದ ಮೇಲೆ ಟ್ಯಾಂಕರುಗಳು ಓಡಾಡುತ್ತಿಲ್ಲ ಹಾಗಾಗಿ ನೀರು ಸರಬರಾಜಾಗುತ್ತಿಲ್ಲ. ನಾವು ೨೫ ರುಪಾಯಿ ಕೊಟ್ಟು ಒಂದು ಕ್ಯಾನ್ ಕುಡಿಯುವ ನೀರು ಕೊಳ್ಳುತ್ತಿದ್ದೇವೆ. ಕೈತೊಳೆಯುವುದಕ್ಕೆ, ಸ್ನಾನ ಮಾಡುವುದಕ್ಕೆ ನೀರಿಲ್ಲ ಎಂದು ರಾಯಚೂರಿನ ಶಿವಮ್ಮ ಹೇಳುತ್ತಾಳೆ. ನೀರಿಗೆ ಇಷ್ಟು ಕಷ್ಟವಿರುವಾಗ ನೈರ್ಮಲ್ಯವನ್ನು ಕುರಿತ ಮಾತುಗಳು ಸುಳ್ಳು ಹಾಗೂ ಅರ್ಥಹೀನ ಅನ್ನಿಸಿಬಿಡುತ್ತವೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕೂಡ ಕಷ್ಟ.
ಹೆಚ್ಚಿನ ಕುಟುಂಬಗಳಲ್ಲಿ ಮಕ್ಕಳಿದ್ದಾರೆ. ಅವರಿಗೆ ಹಾಲು ಸಿಗುವುದು ಕೂಡ ಕಷ್ಟವಾಗುತ್ತಿದೆ. ೩೦ರ ಹರೆಯದ ಅಮೀನಳಿಗೆ ಐದು ಜನ ಮಕ್ಕಳು. ಅವಳು ಕುಂಡಲಹಳ್ಳಿಯ ಕ್ಯಾಂಪಿನಲ್ಲಿರುವ ತನ್ನ ಶೆಡ್‌ನ ಮುಂದೆ ಮಕ್ಕಳೊಂದಿಗೆ ಮಲಗುತ್ತಾಳೆ. ಅವಳ ಕೊನೆಯ ಮಗ ಇನ್ನೂ ಎದೆಹಾಲು ಕುಡಿಯುವ ಕೂಸು. ಉಳಿದ ನಾಲ್ಕು ಜನ ಮಕ್ಕಳಿಗೆ ಇನ್ನೂ ಹತ್ತು ವರಷ ಆಗಿಲ್ಲ. ಎಲ್ಲರೂ ಹಸಿವಿನಿಂದ ಕಂಗಾಲಾಗಿದ್ದಾರೆ. ಆ ಕ್ಯಾಂಪಿನಲ್ಲೊಂದು ಟೆಂಟ್ ಶಾಲೆ ಇತ್ತು. ಅಲ್ಲಿ ಮಕ್ಕಳಿಗೆ ಪ್ರತಿದಿನ ಮಧ್ಯಾಹ್ನದ ಊಟ ಮತ್ತು ಹಾಲು ಸಿಗುತ್ತಿತ್ತು. ಆದರೆ ಈಗ ಇದು ನಿಂತುಹೋಗಿದೆ. ಈಗ ಮಕ್ಕಳಿಗೆ ಹಾಲಿಲ್ಲದ ಗಂಜಿ ಕುಡಿಸುತ್ತಿದ್ದೇವೆ. ಆದರೆ ಚಿಕ್ಕವನಿಗೆ ಮಾತ್ರ ಹಾಲು ಬೇಕೇ ಬೇಕು. ಆದರೆ ಸಿಗುತ್ತಿಲ್ಲ. ಅದು ಸಿಕ್ಕಾಗ ಕೊಂಡುಕೊಳ್ಳೋದಕ್ಕೆ ಕಾಸಿರೊಲ್ಲ. ಎನ್ನುವುದು ಅಮೀನಾಳ ಅಳಲು.
ಕರಿಯಮ್ಮನ ಅಗ್ರಹಾರದಲ್ಲಿ ಅಂಗಡಿ ಮಾಲಿಕನಿಗೂ ಮತ್ತು ಅಲ್ಲಿನ ನಿವಾಸಿಗಳಿಗೂ ಜಗಳ ಆಯಿತು. ಇಬ್ಬರು ಪೋಲಿಸರು ಅಲ್ಲಿಗೆ ಬಂದರು. ಮಾಲಿಕ ಎಲ್ಲದಕ್ಕೂ ಹುಚ್ಚಾಪಟ್ಟೆ ಬೆಲೆ ಏರಿಸಿಬಿಟ್ಟಿದ್ದಾನೆ ಅಂತ ಅವರು ಗಲಾಟೆ ಮಾಡುತ್ತಿದ್ದರು.ಕೊನೇ ಪಕ್ಷ ಹಾಲಿನ ಬೆಲೆ ಏರಿಸಬೇಡ ಅದು ಮಕ್ಕಳಿಗೆ ತುಂಬಾ ಅವಶ್ಯಕ ಅಂತ ನಾವು ಅವನಿಗೆ ಹೇಳುತ್ತಿದ್ದೇವೆ. ಈ ಕ್ಯಾಂಪುಗಳಲ್ಲಿ ಹಾಲಿನ ಕೊರತೆಯಿದೆ. ಅದನ್ನು ಸರಿಪಡಿಸಲು ಪ್ರಯತ್ನಿಸುತ್ತೇವೆ ಎಂದು ಅವರಿಗೆ ಹೇಳಿದ್ದೇವೆ ಎಂದು ಒಬ್ಬರು ಹೆಡ್ ಕಾನ್ಟೆಬಲ್ ಹೇಳಿದರು.
ಮರಳಿ ಮನೆಗೆ
ಈ ಕ್ಯಾಂಪಿನಲ್ಲಿ ಈಗ ಹೆಚ್ಚು ಜನರಿಲ್ಲ. ಇಲ್ಲಿನ ಹೆಚ್ಚಿನವರು ಉತ್ತರ ಕರ್ನಾಟಕದಿಂದ ಬಂದಿರುವವರು. ಅವರಲ್ಲಿ ಹಲವರು ಈಗಾಗಲೇ ತಮ್ಮೂರಿಗೆ ವಾಪಸ್ಸು ಹೋಗಿದ್ದಾರೆ. ಮೇಸ್ತ್ರಿಗಳು ಮತ್ತು ಆರ್ಥಿಕವಾಗಿ ಸ್ವಲ್ಪ ಚೆನ್ನಾಗಿರುವವರು ಕಳೆದ ಎರಡು ದಿನಗಳ ಹಿಂದೆ ಟ್ರಕ್ಕು ಮತ್ತು ಮಿನಿಬಸ್ಸುಗಳಲ್ಲಿ ಊರಿಗೆ ಹೋದರು. ಒಬ್ಬೊಬ್ಬರಿಂದ ಟಿಕೆಟ್ಟಿಗೆ ಸುಮಾರು ೨೦೦೦ ರೂಗಳು ತೆಗೆದುಕೊಂಡಿದ್ದಾರೆ. ನಮ್ಮಂತೆ ಕಾಸಿಲ್ಲದವರು ಇಲ್ಲಿಯೇ ಇದ್ದೀವಿ ಎಂದು ಕಲಬುರ್ಗಿಯಿಂದ ಕಟ್ಟಡ ಕಾರ್ಮಿಕಳಾಗಿ ಬಂದು ಕಂಡಲಹಳ್ಳಿಯ ಕ್ಯಾಂಪಿನಲ್ಲಿರುವ ಯೆಲ್ಲಮ್ಮ ಹೇಳುತ್ತಾಳೆ. ಪ್ರಯಾಣ ಅಂದರೆ ಹೆದರಿಕೆ ಆಗುತ್ತದೆ. ಆ ಹೆದರಿಕೆಯಿಂದಲೇ ಉತ್ತರ ಮತ್ತು ಪೂರ್ವದ ರಾಜ್ಯಗಳಿಂದ ಬಂದಿರುವ ವಲಸೆ ಕಾರ್ಮಿಕರೆಲ್ಲರೂ ಊರಿಗೆ ಹೋಗದೆ ಅಲ್ಲೇ ಉಳಿದುಕೊಂಡಿದ್ದಾರೆ. ಜೊತೆಗೆ ಈಗಾಗಲೆ ಹೊರಟವರು ರೈಲುನಿಲ್ದಾಣದಲ್ಲಿಯೇ ಸಿಕ್ಕಿಹಾಕಿಕೊಂಡಿದ್ದಾರೆ ಎನ್ನುವ ಸುದ್ದಿಯೂ ಅವರನ್ನು ಊರಿಗೆ ಹೋಗದಂತೆ ತಡೆದಿದೆ.
ಇಲ್ಲಿಯೇ ಉಳಿದವರು ಬದುಕು ನಡೆಸಲು ಹೆಣಗಾಡುತ್ತಿದ್ದಾರೆ.

Recommended Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.