ಕರ್ನಾಟಕ ಸಂಗೀತದಲ್ಲಿ ಕೃತಿಚೌರ್ಯ ಕುರಿತು ಮಾತನಾಡುವವರಿಗೆ ಪರಂಪರೆಯ ಅರಿವಿಲ್ಲ.

 In RAGAMALA

’ವೈರ್’ ಪತ್ರಿಕೆಯಲ್ಲಿ ಪ್ರಕಟವಾದ ಲೇಖಕ ಟಿ ಎಂ ಕೃಷ್ಣ ಅವರ ಲೇಖನ 

ಕರ್ನಾಟಕ ಸಂಗೀತದ ವಾಗ್ಗೇಯಕಾರರ ನಡುವ ಪರಸ್ಪರ ಎಷ್ಟೋ ಶತಮಾನಗಳ ಅಂತರವಿದ್ದರೂ ಎಷ್ಟೋ ವಿಚಾರಗಳು, ಸಂಗತಿಗಳು ಮತ್ತು ಮಟ್ಟುಗಳನ್ನು ಪೂರ್ಣವಾಗಿ ಮತ್ತು ಭಾಗಶಃ ಅನುಕರಿಸಿದ್ದಾರೆ, ಅವುಗಳಿಂದ ಸ್ಫೂರ್ತಿ ಪಡೆದಿದ್ದಾರೆ ಮತ್ತು ಅವುಗಳನ್ನು ಹಂಚಿಕೊಂಡಿದ್ದಾರೆ. ಹಾಗಾಗಿ ಆಪಾದಿಸಿ, ದೂಷಿಸುವವರು ಗತಕಾಲದಿಂದ ಖಂಡಿತಾ ಕಲಿಯಬೇಕಾಗಿದೆ.

ಕ್ರೈಸ್ತ ಸಾಹಿತ್ಯವನ್ನು ಕರ್ನಾಟಕ ರಾಗದಲ್ಲಿ ಹಾಡಿರುವುದಕ್ಕೆ ಸಂಬಂಧಿಸಿಂತೆ ಹುಟ್ಟುಹಾಕಿರುವ ಗದ್ದಲ ಗಲಾಟೆಯಿಂದಾಗಿ, ಇಂದು, ಒಂದು ಗಂಭೀರ, ವಿವೇಕಯುತ ಸಂವಾದ ಸಾಧ್ಯವಿಲ್ಲದಂತಾಗಿದೆ. ಕುಪಿತನಾಗಿರುವ ಪ್ರತಿಯೊಬ್ಬ ಹಿಂದುವಿಗೂ ನೊಂದುಕೊಳ್ಳುವುದಕ್ಕೆ ತನ್ನದೇ ಆದ ಕಾರಣವಿದೆ. ಅವರಲ್ಲಿ ಕೆಲವರಂತೂ ಇದು ಕೃತಿಚೌರ್ಯಕ್ಕೆ ಸಂಬಂಧಪಟ್ಟ ವಿಷಯ ಎಂದು ಪದೇ ಪದೇ ಹೇಳುತ್ತಿದ್ದಾರೆ. ಹಾಗಾಗಿ ಈ ಕೃತಿಚೌರ್ಯದ ವಿಚಾರವನ್ನು ಸ್ವಲ್ಪ ಗಮನಿಬೇಕು.

ಮೊಟ್ಟ ಮೊದಲನೆಯದಾಗಿ ಯಾವ ಕರ್ನಾಟಕ ಸಂಗೀತಗಾರನೂ ’ರಾಮ’ ಎಂದಿರುವ ಕಡೆ ’ಕ್ರಿಸ್ತ’ ಎಂದು ಬದಲಾಯಿಸಿಕೊಂಡು ತ್ಯಾಗರಾಜರ ಕೃತಿಯನ್ನು ಹಾಡಿಲ್ಲ. ಇದನ್ನು ನಾನು ಮತ್ತೊಮ್ಮೆ ಸ್ಪಷ್ಟಪಡಿಸಲು ಬಯಸುತ್ತೇನೆ. ಒಂದು ವೇಳೆ ಹಾಗಾಗಿದ್ದಲ್ಲಿ, ಖಂಡಿತವಾಗಿಯೂ ಅದು ಕಲಾತ್ಮಕ ಗೂಂಡಾಗಿರಿ. ಇಂತಹ ಕೆಲಸ ಮಾಡಿರುವವರನ್ನು ನಾನು ಗಂಭೀರವಾಗಿ ಪ್ರಶ್ನಿಸುತ್ತಿದ್ದೆ ಮತ್ತು ಇಂತಹ ಗೂಂಡಾಗಿರಿಯನ್ನು ವಿರೋಧಿಸುವವರನ್ನು ಬೆಂಬಲಿಸುತ್ತಿದ್ದೆ. ಆದರೆ ನನಗೆ ತಿಳಿದಿರುವಂತೆ ಇದು ಹೀಗಾಗಿಲ್ಲ.

ಕರ್ನಾಟಕ ಸಂಗೀತದ ಮೌಖಿಕ ಮತ್ತು ಲಿಖಿತ ಇತಿಹಾಸದತ್ತ ಸುಮ್ಮನೆ ಕಣ್ಣು ಹಾಯಿಸಿದರೂ ಸಾಕು, ಕೃತಿಚೌರ್ಯ ಕುರಿತ ಇಂತಹ ಎಲ್ಲಾ ಆಪಾದನೆಗಳೂ ಹಿಡಿತಕ್ಕೆ ಸಿಗದೆ, ನುಣುಚಿಕೊಳ್ಳುವ ಹಾಗೂ ಜಾಣತನದ ಸ್ವರೂಪದ್ದಾಗಿವೆ ಎನ್ನುವುದು ಸ್ಪಷ್ಟ. ಇದರ ಹಲವು ಸೂಕ್ಷ್ಮಗಳನ್ನು ಗಮನಿಸೋಣ.

ತ್ಯಾಗರಾಜರು ತಮ್ಮ ರಚನೆಗಳಲ್ಲಿ ಹದಿಮೂರನೇ ಶತಮಾನದ ಶ್ರೇಷ್ಠ ಸಿದ್ಧಾಂತಿ, ಪ್ರಾಚೀನ ಭಾರತದ ಅಭಿಜಾತ ಸಂಗೀತದ ಅತ್ಯಂತ ನಿರ್ಣಾಯಕ ಕೃತಿ ಸಂಗೀತ ರತ್ನಾಕರದ ಕರ್ತೃ ಸಾರಂಗದೇವನ ವಿಚಾರಗಳನ್ನು ಮತ್ತು ಇನ್ನೂ ಹಲವರ ವಿಚಾರಗಳನ್ನು ಧಾರಾಳವಾಗಿ ಬಳಸಿಕೊಂಡರು. ತ್ಯಾಗರಾಜರ ನಾದ ತನುಮನಿಶಂ ಶಂಕರಂ ಕೃತಿಯ ಪಲ್ಲವಿ ಸಂಗೀತ ರತ್ನಾಕರದ ಆರಂಭದ ಶ್ಲೋಕ ಬ್ರಹ್ಮಾ ಗ್ರಂಥಿಜ. . . . ವಂದೇ ನಾದ ತನುಂ. . . . . ಶಂಕರಂ ಎನ್ನುವುದನ್ನು ಅಕ್ಷರಶಃ ಹಾಗೆಯೇ ಬಳಸಿಕೊಂಡಿದೆ. ಅದೇ ರೀತಿಯಲ್ಲಿ ಸಂಗೀತ ರತ್ನಾಕರ ನಾದ ಎಂದರೆ ನಕಾರಂ ಪ್ರಾಣ ನಾಮಾನಂ ಎಂಬ ವ್ಯಾಖ್ಯಾನಿಸುತ್ತದೆ. ಇದೇ ಕಲ್ಪನೆ ಮೋಕ್ಷಮು ಗಲದಾ ಕೃತಿಯಲ್ಲಿ ಕಂಡುಬರುತ್ತದೆ. ಕರ್ನಾಟಕ ಸಂಗೀತದ ಅತ್ಯಂತ ಪ್ರಭಾವಿ ಕಲಾವಿದರಲ್ಲಿ ಒಬ್ಬರಾದ ಪುರಂದರದಾಸರಿಂದಲೂ ತ್ಯಾಗರಾಜರು ಪ್ರಭಾವಿತರಾಗಿದ್ದರು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಪುರಂದರದಾಸರ ಸ್ಮರಣೆ ಒಂದೆ ಸಾಲದೆ ಮತ್ತು ಹರಿಕಥಾ ಶ್ರವಣ ಮಾಡೋ ಕೃತಿಗಳ ಅನುರಣನ ತ್ಯಾಗರಾಜರ ಸ್ಮರಣೆ ಸುಖಮು ಮತ್ತು ರಾಮಕಥಾ ಸುಧಾ ರಸ ಕೃತಿಗಳಲ್ಲಿ ಕಾಣುತ್ತದೆ. ಹಸ್ತಿವದನಾಯ ಮತ್ತು ಪಂಚಮಾತಂಗ ಮುಖ ಮುಂತಾದ ಕೃತಿಗಳಲ್ಲಿ ದೇವಿಯ ಮೂರ್ತಿಯನ್ನು ವಿವರಿಸಲು ಧ್ಯಾನ ಶ್ಲೋಕಗಳಲ್ಲಿ ಬಳಸಿರುವ ಪದಗಳನ್ನು ಮುತ್ತುಸ್ವಾಮಿ ದೀಕ್ಷಿತರು ಬಳಸಿದ್ದಾರೆ. ಆದಿ ಶಂಕರರ ಸೌಂದರ್ಯ ಲಹರಿಯ ಶ್ಲೋಕ ಸುಧಾ ಸಿಂಧೋರ್ಮಧ್ಯೆ ಎನ್ನವುದರ ಛಾಯೆ ದೀಕ್ಷಿತರ ಗೌರಿ ಗಿರಿರಾಜಕುಮಾರಿ ಕೃತಿಯಲ್ಲಿ ಕಂಡುಬರುತ್ತದೆ.

ಹೀಗೆ ಬಳಸಿಕೊಳ್ಳುವಾಗ, ಅದು ಕೇವಲ ಕಲ್ಪನೆಗಳು ಮತ್ತು ಆಧ್ಯಾತ್ಮಿಕ ದೃಷ್ಟಿಕೋನಗಳನ್ನು ಬಳಸಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ನಾರಾಯಣ ತೀರ್ಥರ ರಚನೆಗಳಲ್ಲಿರುವ ಸಂಗತಿಗಳನ್ನು ಸಾಲುಗಳನ್ನು ತ್ಯಾಗರಾಜರು ಅಕ್ಷರಶಃ ಹಾಗೆಯೇ ಬಳಸಿಕೊಂಡಿದ್ದಾರೆ. ಬಂಗಾಳ ರಾಗದ ಕೃತಿಯ ಗಿರಿರಾಜಸುತಾ ತನಯಾ ಎನ್ನುವ ಪದಗಳು ಗಣೇಶನನ್ನು ಕುರಿತ ನಾರಾಯಣ ತೀರ್ಥರ ಶ್ಲೋಕ ಗಿರಿರಾಜಸುತಾ ಸೂನುವಿನಂತೆಯೇ ಇದೆ. ಹಾಗೆಯೇ ತ್ಯಾಗರಾಜರ ರಾಗ ಸುಧಾ ರಸ ಕೃತಿಯ ಯಾಗ ಯೋಗ ತ್ಯಾಗ ಭೋಗ ಫಲಮೊಸಂಗೆ ಎನ್ನುವ ಸಾಲುಗಳನ್ನು ನಾರಾಯಣ ತೀರ್ಥರ ರಾಮಕೃಷ್ಣ ಗೋವಿಂದೇತಿ ಎಂಬ ರಚನೆಯಲ್ಲಿರುವ ಯಾಗ ಯೋಗ ರಾಗ ಭೋಗ ತ್ಯಾಗ ಎನ್ನುವ ಸಾಲುಗಳೊಂದಿಗೆ ಹೋಲಿಸಿ ನೋಡಿ. ತ್ಯಾಗರಾಜರನ್ನು ತುಂಬಾ ಗಾಢವಾಗಿ ಪ್ರಭಾವಿಸಿದ ಮತ್ತೊಬ್ಬ ವಾಗ್ಗೇಯಕಾರ ಭದ್ರಾಚಲ ರಾಮದಾಸರು. ಅವರ ಕಂಟಿ ನೇದು ಮಾ ರಾಮುಲ್ಲನ್ನು ಕನುಕೊಂಟಿ ನೇನು ಎನ್ನುವುದು ಹೊಸ ಹೊಳಪು ಮತ್ತು ನಾದದೊಂದಿಗೆ ಕನುಕೊಂಟಿನಿ ಶ್ರೀರಾಮುನಿ ನೇದು ಎಂಬ ತ್ಯಾಗರಾಜರ ಕೃತಿಯಲ್ಲಿ ಮೂಡಿಬಂದಿದೆ! ರಾಮದಾಸರು, ಅನ್ನಮಯ್ಯ ಮತ್ತು ತ್ಯಾಗರಾಜರು ಈ ಮೂವರದ್ದೂ ನಾಮೊರಾಲಗಿಂಪ ಎಂದು ಪ್ರಾರಂಭವಾಗುವ ರಚನೆ ಇದೆ. ಹಾಗಾದರೆ ರಾಮದಾಸರು ಅನ್ನಮಯ್ಯನವರ ಮತ್ತು ತ್ಯಾಗರಾಜರು ರಾಮದಾಸರ ಕೃತಿಯನ್ನು ಕದ್ದಿದ್ದಾರೆ ಎಂದು ನಾವು ಹೇಳಬಹುದೇ?

ಇನ್ನು ರಚನೆಗಳಲ್ಲಿ ಇರುವ ರಾಗಭಾವವನ್ನು ಕುರಿತು ಏನು ಹೇಳಬಹುದು? ಈ ದಾರಿಯನ್ನು ನಾವು ಹಿಡಿದರೆ ಕರ್ನಾಟಕದ ಎಲ್ಲಾ ಪ್ರಮುಖ ವಾಗ್ಗೇಯಕಾರರ ಮೇಲೂ ಕೃತಿಚೌರ್ಯದ ಕೇಸು ಹಾಕಬೇಕಾಗುತ್ತದೆ ಎಂದು ಮುಲಾಜಿಲ್ಲದೆ ಹೇಳಬೇಕಾಗುತ್ತದೆ. ಮುತ್ತುಸ್ವಾಮಿ ದೀಕ್ಷಿತರ ರಚನೆ ಎಂದು ಭಾವಿಸಿರುವ ’ಗಣನಾಯಕಂ’ ಮತ್ತು ತ್ಯಾಗರಾಜರ ’ಶ್ರೀ ಮಾನಿನಿ’ ಎರಡರ ಮಟ್ಟಿನಲ್ಲಿ ಒಂದು ಚೂರೂ ವ್ಯತ್ಯಾಸವಿಲ್ಲ. ತಮ್ಮ ಶ್ರೀ ವಲ್ಲೀಪತೇ ಕೃತಿಯ ರಾಗಮಟ್ಟು ತ್ಯಾಗರಾಜರದ್ದು ಎಂದು ಸ್ವತಃ ಸುಬ್ಬರಾಮ ದೀಕ್ಷಿತರೇ ಹೇಳುತ್ತಾರೆ.

ಸುಮಸಾಯಕ ಎನ್ನುವ ವರ್ಣ ಮತ್ತು ಸರಸಲನು ಎರಡೂ ಒಂದು ಇನ್ನೊಂದರ ಕಾರ್ಬನ್ ಪ್ರತಿಗಳಂತಿವೆ. ಪಾಪನಾಶಂ ಶಿವನ್ ಅವರ ’ಕರುಣೈ ಸೈವಾ’ ಮತ್ತು ’ನೀದಂ ಉನ್ನೈ ನಂಬಿನೇನ್’ ಕೃತಿಗಳ ರಾಗಮಟ್ಟು ಕ್ರಮವಾಗಿ ’ರಘುನಾಯಕ’ ಮತ್ತು ಪರಿಧಾನ ಮಿಚ್ಚಿತೆ ಇದ್ದಂತೆಯೇ ಇವೆ. ಪೈಯ್ಯಡ ಎನ್ನುವ ಪದಂ ಮತ್ತು ’ಚಲಿನೇನೇಟ್ಲು ಸಹಿಂತ್ಸುವೆ’ ಎಂಬ ಜಾವಳಿಗಳಿಗೆ ತಮಿಳು ಸಾಹಿತ್ಯವನ್ನು ಪಾಪನಾಶಂ ಶಿವನ್ ರಚಿಸಿದ್ದಾರೆ. ತ್ಯಾಗರಾಜರ ’ಮನಸುಲೋನಿ ಮರ್ಮಮುಲು’ ಕೃತಿಯ ತಮಿಳು ಅವತಾರವೇ ಪಾಪನಾಶಂ ಶಿವನ್ ಅವರ ’ತುಣೈ ಪುರಿಂದರುಳ್’ ಕೃತಿ. ರಮಣ ಮಹರ್ಷಿಗಳನ್ನು ಕುರಿತು ರಚಿಸಿರುವ ಹೆಚ್ಚಿನ ಕೃತಿಗಳಿಗೆ ತ್ಯಾಗರಾಜರ ಕೃತಿಗಳ ವರ್ಣಮಟ್ಟನ್ನೇ ಬಳಸಿಕೊಳ್ಳಲಾಗಿದೆ, ಉದಾಹರಣೆಗೆ ಮಾತಾ ಪಿತ ನೀ ಅಲ್ಲವೋ ಎನ್ನುವುದು ’ಮಾಕೇಲರಾ ವಿಚಾರಮು’ ಎಂಬ ತ್ಯಾಗರಾಜರ ಕೃತಿಯಂತೆಯೇ ಇದೆ.

ಕರ್ನಾಟಕ ಸಂಗೀತದಲ್ಲಿ ವರ್ಣಮಟ್ಟು ಎನ್ನುವ ಕಲ್ಪನೆಯಿದೆ ಎನ್ನುವುದು ಓದುಗರು ತಿಳಿದುಕೊಳ್ಳಬೇಕು. ಇದು ಒಂದು ರಾಗದಲ್ಲಿನ ರಚನೆಗಳಿಗೆ ಬಳಸುವಂತಹ ಸ್ಟಾಂಡರ್ಡೈಸ್ಡ್ ಮಟ್ಟನ್ನು ಸೂಚಿಸುತ್ತದೆ. ಈ ಮಟ್ಟು ಇಡೀ ರಚನೆಯಲ್ಲಿ ಆರಂಭದಿಂದ ಅಂತ್ಯದವರೆಗೂ ಇರುತ್ತದೆ. ಆದರೆ ಸಾಹಿತ್ಯ ಬದಲಾಗುವುದರಿಂದ ಅಲ್ಲಿ ಇಲ್ಲಿ ಕೆಲವು ಸಣ್ಣ ಪುಟ್ಟ ಸೊಗಸು, ಸಿಂಗಾರಗಳು ಅಥವಾ ಹೊಂದಾಣಿಕೆಗಳನ್ನು ಮಾಡಿಕೊಳ್ಳಲಾಗುತ್ತದೆ. ವಾಗ್ಗೇಯ ರಚನೆಯ ಸಂದರ್ಭದಲ್ಲಿ ಒಂದು ರಾಗದ ಇಂತಹ ಪರಿಚಿತ ವರ್ಣಮಟ್ಟು ಅದರಲ್ಲಿ ಇದ್ದೇ ಇರುತ್ತದೆ. ಹಾಗಾಗಿಯೇ ಒಂದು ರಾಗದಲ್ಲಿ ರಚನೆ ಮಾಡುವಾಗ ಎಲ್ಲಾ ವಾಗ್ಗೇಯಕಾರರು ಮತ್ತು ರಾಗಸಂಯೋಜಕರು ಒಂದು ವರ್ಣಮಟ್ಟನ್ನು ಪದೇ ಪದೇ ಬಳಸುತ್ತಾರೆ.

ಭದ್ರಾಚಲ ರಾಮದಾಸರ ನನ್ನು ಬ್ರೋವಮನಿ ಚೆಪ್ಪವೆ, ನಾರಾಯಣ ತೀರ್ಥರ ಕಥಯಾ ಕಥಯಾ ಮಾಧವಂ, ಪುರಂದರದಾಸರ ನಂಬಿ ಕೆಟ್ಟವರಿಲ್ಲವೋ ರಂಗಯ್ಯ ನಿನ್ನ ಇವೆಲ್ಲವನ್ನೂ ಕಲ್ಯಾಣಿ ರಾಗದಲ್ಲಿ, ಒಂದೇ ರೀತಿಯಲ್ಲಿ ಹಾಡುತ್ತಾರೆ. ಹುಸೇನಿ ರಾಗದ ಏಮಂದಾಯರಾನ ಎಂಬ ಸ್ವರಜತಿಗೆ ಹಲವು ಒಡಹುಟ್ಟುಗಳಿದ್ದಾರೆ! ಉಪಚಾರಮುಲನು, ಜನನೀ ಮಾಮವ, ಯಾರುಕ್ಕು ಪೊನ್ನಂಬಲಂ ಕೃತಿಗಳು ಒಂದೇ ಬಗೆಯಲ್ಲಿ ಪ್ರಾರಂಭವಾಗುತ್ತವೆ. ಅಂತೆಯೇ ತ್ಯಾಗರಾಜರ ಮನಸು ಸ್ವಾಧೀನ ಮತ್ತು ದೀಕ್ಷಿತರ ಅಕ್ಷಯ ಲಿಂಗವಿಭೋ ಕೃತಿಗಳು ಆರಂಭವಾಗುವ ವರ್ಣಮಟ್ಟು ಒಂದೇ ರೀತಿ ಇದೆ. ಸ್ವಾತಿ ತಿರುನಾಳರ ಶಂಕರಾಭರಣ ರಾಗದ ಭಕ್ತ ಪಾರಾಯಣ ಎನ್ನುವ ಕೃತಿಯೂ ಇದೇ ವರ್ಣಮಟ್ಟನ್ನು ಅನುಸರಿಸುತ್ತದೆ. ನನ್ನ ವಾದವನ್ನು ಸಮರ್ಥಿಸುವಂತಹ ಇನ್ನೂ ಹಲವಾರು ಉದಾಹರಣೆಗಳಿವೆ. ನಾನು ಕೇವಲ ಕೆಲವನ್ನಷ್ಟೆ ಇಲ್ಲಿ ಉದಾಹರಿಸಿದ್ದೇನೆ. ಆದರೆ ನಾನು ಇಷ್ಟಕ್ಕೇ ನಿಲ್ಲಿಸುತ್ತಿಲ್ಲ.

ಇಂದು ಕರ್ನಾಟಕ ಸಂಗೀತದ ಬಗ್ಗೆ ಯಾವ ಅರಿವೂ ಇಲ್ಲದವರು ಹೀಗೆ ಸಂಗೀತಗಾರ ಮೇಲೆ ಕೃತಿಚೌರ್ಯದ ಆರೋಪ ಹೊರಿಸಿ ನೋಯಿಸುತ್ತಿರುವಾಗ, ಇದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಂದ ಸೂಕ್ತವಾದ ದೃಷ್ಟಿಕೋನವನ್ನು ಪಡೆಯುವುದು ತುಂಬಾ ಮುಖ್ಯ. ಕರ್ನಾಟಕ ಸಂಗೀತದಂತಹ ಪರಂಪರೆಗಳಲ್ಲಿ ಕಾಪಿರೈಟ್ ಮತ್ತು ಅತಿಕ್ರಮಣದಂತಹ ವಿಚಾರಗಳನ್ನು ಇಟ್ಟುಕೊಂಡು ಮಾತನಾಡುವುದು ತುಂಬಾ ಕಷ್ಟ ಮತ್ತು ತುಂಬಾ ಜಟಿಲ. ಏಕೆಂದರೆ ವಾಗ್ಗೇಯಕಾರರು ಪರಸ್ಪರ ಒಬ್ಬರಿಂದೊಬ್ಬರು ಸ್ಫೂರ್ತಿ ಪಡೆದಿದ್ದಾರೆ, ತಮಗೆ ಬೇಕೆನಿಸಿದ ಭಾವ, ವಿಚಾರಗಳು, ಸಂಗತಿಗಳು, ಪದಗಳು ಮುಂತಾದವುಗಳನ್ನು ಕೆಲವೊಮ್ಮ ಸಾರಾಸಗಟಾಗಿ, ಇಲ್ಲವೇ ಭಾಗಶಃ ಎರವಲು ಪಡೆದಿದ್ದಾರೆ. ಹೀಗೆ ತಮಗಿಂತ ಎಷ್ಟೋ ತಲೆಮಾರು, ಎಷ್ಟೋ ಶತಮಾನಗಳಷ್ಟು ಪುರಾತನರಿಂದ ಎರವಲು ಪಡೆದಿದ್ದಾರೆ. ಹಾಗಾಗಿ ಕಾಲಯಾನದಲ್ಲಿ ನಾವು ಒಂದು ಚೂರು ಹಿಂದಕ್ಕೆ ತೆರಳಿ, ಇವೆಲ್ಲವನ್ನೂ ಅರಿತು, ದೂಷಿಸುವುದನ್ನು ನಿಲ್ಲಿಸಬೇಕು.

ಮುತ್ತುಸ್ವಾಮಿ ದೀಕ್ಷಿತರು ’‘God save the gracious king/queen’ ’ ಎನ್ನುವುದನ್ನು ಸಂತತಂ ಪಾಹಿಮಾಂ ಸಂಗೀತ ಶ್ಯಾಮಲೆ ಎಂದು ಬದಲಾಯಿಸಿದರು. ಅಲ್ಲಿ ದೇವರು ಖಂಡಿತವಾಗಿಯೂ ಕ್ರಿಸ್ತ ಮತ್ತು ದೀಕ್ಷಿತರ ಸಂಗೀತ ಶ್ಯಾಮಲೆ ನಮ್ಮ ಕಲಾದೇವತೆ ಸರಸ್ವತಿ. ದೀಕ್ಷಿತರು ತಮ್ಮೊಳಗೆ ’ಅನ್ಯ’ವಾದುದಕ್ಕೆ ಎಡೆಮಾಡಿಕೊಟ್ಟರು. ಇದು ನಾವು ಖುಷಿಪಟ್ಟು, ಕಲಿಯಬೇಕಾದ ವಿಚಾರ.

ಭಾರತ ಎನ್ನುವುದು ಹಲವಾರು ಸಂಸ್ಕೃತಿಗಳ ಒಂದು ಸಮನ್ವಯ ಎಂದು ನಾವು ಮಾತನಾಡುತ್ತೇವೆ. ಹೀಗೆ ಮಾತನಾಡುವಾಗ ನಾವು ಸಂಕುಚಿತವಾದ್ದನ್ನು ಬದಿಗಿಡುತ್ತಾ, ಉದಾರವಾಗಿರುವುದನ್ನು ಎತ್ತಿ ಹಿಡಿಯುತ್ತಿದ್ದೇವೆ. ಮುತ್ತುಸ್ವಾಮಿ ದೀಕ್ಷಿತರು ಅತ್ಯಂತ ಸಾಂಪ್ರದಾಯಸ್ಥ ಅದ್ವೈತಿ ಬ್ರಾಹ್ಮಣ. ಆದರೆ ಅವರೊಳಗೊಬ್ಬ ಉದಾರವಾದಿ ಇದ್ದ. ಅವರಿಗೆ ಆ ಹಾಡು ಕ್ರಿಸ್ತನನ್ನು ಕುರಿತದ್ದೋ, ಜಾಲಿ ಪಾರ್ಟಿಯ ಜಿಗ್ ನೃತ್ಯದ್ದೋ ಅಥವಾ ಸೈನಿಕರ ಪಥಸಂಚಲನದ ಮಟ್ಟೋ ಎನ್ನುವುದು ಮುಖ್ಯವಾಗಲೇ ಇಲ್ಲ. ಅವರಿಗೆ ಮುಖ್ಯವಾದದ್ದು ಅದರ ರಾಗ, ಲಯ ಮತ್ತು ಉಲ್ಲಾಸದ ಭಾವ. ಅದನ್ನು ಅವರು ಪಾರ್ವತಿ, ಗಣಪತಿ, ಶಿವ, ವಿಷ್ಣು ಮತ್ತು ಸುಬ್ರಹ್ಮಣ್ಯ ಎಂದು ಕಲ್ಪಿಸಿಕೊಂಡರು. ಅವರ ಕಾಲದಲ್ಲಿಯೂ ಇಂದಿನಂತೆಯೇ ಜನ ತಮ್ಮ ಧರ್ಮಶ್ರದ್ಧೆಯನ್ನು ಬದಲಿಸಿಕೊಳ್ಳುತ್ತಿದ್ದರು. ಆದರೆ ಅದರಲ್ಲಿ ಅವರು ದ್ವೇಷ ವೈಷಮ್ಯವನ್ನು ಕಾಣಲಿಲ್ಲ. ತಮ್ಮ ನಂಬಿಕೆಗೆ ಅವರು ಸಂಪೂರ್ಣ ನಿಷ್ಠರಾಗಿದ್ದರು ಮತ್ತು ತಮ್ಮ ಸುತ್ತಲಿನ ಉಳಿದೆಲ್ಲ ಆಗುಹೋಗುಗಳಿಂದ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಿದ್ದರು.

Recommended Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.