ಕಲೆಯ ಉದ್ದೇಶ, ಕಲೆಯನ್ನು ಪುನರ್‌ರೂಪಿಸಬೇಕಾಗಿದೆ

 In RAGAMALA

ಕಲೆಯನ್ನು ಪುನರ್ರೂಪಿಸಬೇಕಾಗಿದೆ

ಟಿ ಎಂ ಕೃಷ್ಣ

ಟಿ ಎಂ ಕೃಷ್ಣ ಕರ್ನಾಟಕ ಸಂಗೀತದಲ್ಲಿ ಹಲವು ಕಾರಣಕ್ಕೆ ಗಮನ ಸೆಳೆಯುತ್ತಿದ್ದಾರೆ. ಸಂಗೀತದಲ್ಲಿ ಅವರ ಪ್ರಯೋಗಗಳು, ಸಂಗೀತವನ್ನು ಕುರಿತ ಭಿನ್ನ ನಿಲುವುಗಳು ಹಾಗೂ ವಿಶ್ಲೇಷಣೆಗಳು, ಸಂಗೀತದಾಚೆಗಿನ ಆಗುಹೋಗುಗಳನ್ನು ಕುರಿತ ಪ್ರತಿಕ್ರಿಯೆಗಳು ಹೀಗೆ ಹಲವು ವಿಷಯಗಳನ್ನು ಕುರಿತಂತೆ ಅವರು ಚರ್ಚೆಗೊಳಗಾಗಿದ್ದಾರೆಸಂಗೀತವನ್ನು ಕುರಿತಂತೆ ಅವರ ಸದರನ್ಮ್ಯೂಸಿಕ್ ತುಂಬಾ ಗಮನ ಸೆಳೆದ ಪುಸ್ತಕ. ಅದರ ಮುಂದುವರಿಕೆಯಾಗಿ ಇತ್ತೀಚಿಗೆ ಅವರು ರಿಶೇಪಿಂಗ್ ಆರ್ಟ್ ಪುಸ್ತಕ ಬರೆದಿದ್ದಾರೆ. ಕಲೆಯ ಸೃಷ್ಟಿ, ಅದರ ಅಭಿವ್ಯಕ್ತಿ, ಪ್ರಸರಣ ಇತ್ಯಾದಿಗಳನ್ನು ಕುರಿತಂತೆ ಹಲವು ಮೌಲಿಕ ಪ್ರಶ್ನೆಗಳನ್ನು ಎತ್ತಿದ್ದಾರೆ. ಹಾಗೆಯೇ ತಮ್ಮ ಇತರ ಬರಹಗಳಲ್ಲಿ ಚರ್ಚಿಸಿರುವ ಲಿಂಗ, ಜಾತಿ ಇತ್ಯಾದಿ ತಾರತಮ್ಯಗಳನ್ನು ಕುರಿತ ಚರ್ಚೆಯನ್ನು ಮುಂದುವರೆಸಿದ್ದಾರೆ.

ಸಾಮಾಜಿಕ ಹಾಗೂ ರಾಜಕೀಯ ಸಂದರ್ಭದಲ್ಲಿ ಕಲೆ, ಕಲಾವಿದನ ಪಾತ್ರ ಕುರಿತು ಚಿಂತಿಸುತ್ತಾ, ಕಲೆ ಹಾಗೂ ಹಾಗೂ ಪ್ರಜಾಪ್ರಭುತ್ವದ ನಡುವಿರುವ ಸಾಮ್ಯವನ್ನು ಕುರಿತ ಅವರ ವಿಚಾರಗಳು ಚಿಂತನ ಯೋಗ್ಯವಾಗಿವೆ. ಕಲೆ ಇಂದು ಮನುಷ್ಯನ ವ್ಯಕ್ತಿತ್ವವನ್ನು ಬದಲಿಸುವುದಕ್ಕೆ, ಅವನ ಆಂತರ್ಯವನ್ನು ಪರೀಕ್ಷಿಸುವಂತೆ ಪ್ರೇರೇಪಿಸುವುದಕ್ಕೆ ವಿಫಲವಾಗಿದೆ. ನಾವು ನಿಟ್ಟಿನಲ್ಲಿ ಇಂದು ಕಲೆಯನ್ನು ಪುನರ್ರೂಪಿಸಬೇಕಾಗಿದೆ ಎಂದು ಟಿ ಎಂ ಕೃಷ್ಣ ಪುಸ್ತಕದಲ್ಲಿ ಪ್ರಬಲವಾಗಿ ವಾದಿಸುತ್ತಾರೆ. ಅದಕ್ಕೆ ತಮ್ಮದೇ ಆದ ದಾರಿಯನ್ನು ಸೂಚಿಸುತ್ತಾರೆ.

ಅವರ ಚಿಂತನೆಯ ಪರಿಚಯ ಮಾಡಿಸುವ ದೃಷ್ಟಿಯಿಂದ ಪುಸ್ತಕದ ಕೊನೆಯ ಅಧ್ಯಾಯವನ್ನು ಸಂಗ್ರಹಿಸಲಾಗಿದೆ.

 

ಕಲೆಯ ಉದ್ದೇಶ

ಮನುಷ್ಯ ಒಂದು ಸಂಕೀರ್ಣ ಜೀವಿ. ಎಲ್ಲವೂ ತನ್ನ ಅಂಕೆಯಲ್ಲಿ, ಒಡೆತನದಲ್ಲಿರಬೇಕು, ಎಲ್ಲವನ್ನೂ ತಾನೇ ನಿಯಂತ್ರಿಸಬೇಕು, ಎಂದು  ಬಯಸುವುದು ಅವನ ಒಂದು ಮುಖವಾದರೆ ಅವನಿಗೆ ಇನ್ನೊಂದು ಸುಂದರವಾದ ತೀರಾ ಸೂಕ್ಷ್ಮವಾದ, ಕರುಣಾಮಯಿಯಾದ ವ್ಯಕ್ತಿತ್ವವೂ ಇದೆ. ಜೀವನದುದ್ದಕ್ಕೂ ಇವೆರಡರ ನಡುವೆ ಹೊಯ್ದಾಟ ನಡೆಯುತ್ತಲೇ ಇರುತ್ತದೆ. ಒಮ್ಮೊಮ್ಮೆ ಒಂದು ಮುಖ ಮೇಲುಗೈ ಸಾಧಿಸುತ್ತದೆ. ಡೆಮಾಕ್ರಸಿ ಅಥವಾ ಪ್ರಜಾಪ್ರಭುತ್ವ ನಮಗೆ ಮುಖ್ಯ ವಾಗುವುದು ಇಂತಹ ಪರಿಸ್ಥಿತಿಯಲ್ಲೇ. ಪ್ರಜಾ ಸತ್ತೆಯ ವಿಷಯದಲ್ಲಿ ಯಾವುದೇ ರಾಜಿಯೂ ಇರಬಾರದು. ಮಾನವೀಯತೆಯನ್ನು ಸಾಧಿಸು ವುದಕ್ಕೆ ಅದೊಂದು ಪ್ರಮುಖ ಸಾಧನ.  ಪ್ರಜಾಸತ್ತೆ ನಮ್ಮನ್ನು ಇನ್ನಷ್ಟು ಉತ್ತಮ ಮನುಷ್ಯರನ್ನಾಗಿ ಮಾಡುವುದಕ್ಕೆ ಬಯಸುತ್ತಿರುತ್ತದೆ. ಅದೇ ಅದರ ಉದ್ದೇಶ. ಹಾಗಾಗಿಯೇ ಅದಕ್ಕೆ ಇಂದಿಗೂ ಜೀವಂತವಾಗಿರುವುದಕ್ಕೆ ಸಾಧ್ಯವಾಗಿದೆ. ಕಲೆ ಯಂತೆ ಪ್ರಜಾಸತ್ತೆ ಕೂಡ ಮನುಷ್ಯನ ಆಂತರ್ಯ ವನ್ನು ಅರ್ಥಮಾಡಿಕೊಳ್ಳುವ ಉದ್ದೇಶಪೂರ್ವಕ ಕ್ರಿಯೆ. ಪ್ರತಿಯೊಬ್ಬ ಪ್ರಜೆ,  ಸಮುದಾಯ ಹಾಗೂ ಸರ್ಕಾರಗಳು  ಮಾನವೀಯತೆಯನ್ನು ಉಳಿಸಿ ಕೊಳ್ಳಬೇಕೆಂದು ಕಲೆ ಮತ್ತು ಪ್ರಜಾಸತ್ತೆಗಳೆರಡೂ ಒತ್ತಾಯಿಸುತ್ತವೆ. ಹಾಗಾಗಿಯೇ ಅದನ್ನು ಸಾಧಿಸು ವುದು ಯಾವ ಕಾಲಕ್ಕೂ ಅಷ್ಟು ಸುಲಭವಲ್ಲ.

ನಾವು ಬೇರೆ ಬೇರೆ ಕಲಾಪ್ರಕಾರಗಳನ್ನು ರೂಪಿಸಿಕೊಳ್ಳುವುದು ಈ ಮಾನವೀಯತೆಯ ಮಿಡಿತದಿಂದಾಗಿಯೇ. ಈ ಮಿಡಿತದಿಂದಾಗಿಯೇ ನಾವು ನಮ್ಮ ಗುರಿಗಳನ್ನು, ನಮ್ಮ ಸಂಬಂಧಗಳನ್ನು, ನಮ್ಮ ಪಾಲ್ಗೊಳ್ಳುವಿಕೆಯನ್ನು ಕಟ್ಟಿಕೊಳ್ಳುತ್ತೇವೆ. ಕಲೆ ಮತ್ತು ಪ್ರಜಾಸತ್ತೆಗಳೆರಡೂ ನಮ್ಮಲ್ಲಿ ಸಮಾನತೆ, ಸ್ವಾತಂತ್ರ್ಯ, ಅಭಿವ್ಯಕ್ತಿ ಹಾಗೂ ಅನುಕಂಪೆಯನ್ನು ಮೂಡಿಸುವ ಮತ್ತು ಬೆಳೆಸುವ ಕೆಲಸವನ್ನು ಸೊಗಸಾಗಿ ಮಾಡುತ್ತವೆ. ಕಲೆ ಮತ್ತು ಪ್ರಜಾಪ್ರಭುತ್ವ ಎರಡೂ ತಮ್ಮ ಆದರ್ಶ ಸ್ಥಿತಿಯಲ್ಲಿ ಮಾನವ ತನ್ನ ಅಂತರಂಗವನ್ನು ಶೋಧಿಸಿ, ಕಾರುಣ್ಯವನ್ನು  ಕಂಡುಕೊಳ್ಳಲು ಅವಶ್ಯಕವಾದ ಎಲ್ಲವನ್ನೂ ಒದಗಿಸುತ್ತವೆ.

ಕಲೆ ಮತ್ತು ಪ್ರಜಾಸತ್ತೆಗಳೆರಡರಲ್ಲೂ ಒಂದಿಷ್ಟು ಅಸ್ಪಷ್ಟತೆಯ ಅಂಶಗಳೂ ಇವೆ. ಅವುಗಳ ಉದ್ದೇಶ  ನಮಗೆ ಒಟ್ಟಾರೆಯಾಗಿ ಭಾಸವಾಗುತ್ತದೆ. ಆದರೆ ಒಂದು ಗ್ರಂಥವನ್ನೋ ಅಥವಾ ಸಂವಿಧಾನ ವನ್ನೋ ಆಧರಿಸಿ ಅವುಗಳ  ಸೂಕ್ಷ್ಮಗಳನೆಲ್ಲಾ ರೂಪಿಸಿಕೊಳ್ಳಲು  ಸಾಧ್ಯವಿಲ್ಲ. ಅದು ಸತ್ಯದೊಂದಿ ಗಿನ ಒಂದು ಪ್ರಯೋಗ. ಅದು ಜನರು, ಜನರಿ ಗಾಗಿ ಮಾಡುವ ಒಂದು ಮನವಿ. ನೈತಿಕತೆಯನ್ನು ಸಾಧಿಸುವುದು ಈ ಮನವಿಯ ಹಿಂದಿನ ಉದ್ದೇಶ. ಆದರೆ ಇಲ್ಲಿ ನೈತಿಕತೆ ಅನ್ನುವಾಗ ನಾವು ಮೊರಾಲಿಟಿ ಅಥವಾ ಸನ್ನಡ ತೆಯ ಕುರಿತು ಮಾತನಾಡುತ್ತಿಲ್ಲ. ಯಾಕೆಂದರೆ ಸನ್ನಡತೆ ಎನ್ನುವುದು ಯಾವುದೋ ಕೆಲವು ಸಾಮಾಜಿಕ ಮತ್ತು ಧಾರ್ಮಿಕ  ಸಂಪ್ರದಾಯ/ಶಿಷ್ಟಾಚಾರಗಳು ವಿಧಿಸಿರುವ ಮತತತ್ವಗಳು ಅಥವಾ ಸಿದ್ಧಾಂತಗಳು. ಆದರೆ ಎಥಿಕ್ಸ್ ಅಥವಾ ನೈತಿಕತೆ ಎನ್ನುವುದು ಹಾಗಲ್ಲ. ಅದಕ್ಕೆ ಧರ್ಮ, ಸಮಾಜ, ಇತ್ಯಾದಿ ಬಾಹ್ಯ ನಂಬಿಕೆಗಳ ಹಂಗಿಲ್ಲ. ಮನುಷ್ಯ ತನ್ನ ಅಂತರಂಗದಲ್ಲಿ ಯಾವುದನ್ನು ಸರಿ ಎಂದು ಭಾವಿಸಿಕೊಂಡಿರುತ್ತಾನೋ ಅದರಿಂದ ಹುಟ್ಟಿರುವ ಪ್ರಜ್ಞೆ. ನಾವು ಇಂತಹ ನೈತಿಕತೆಗೆ ಬದ್ಧರಾಗಿರ ಬೇಕೆಂದು ಕಲೆ ಮತ್ತು ಪ್ರಜಾಸತ್ತೆ ಎರಡೂ ನಿರೀಕ್ಷಿಸುತ್ತವೆ.

ಪ್ರಜಾಸತ್ತೆ ಜೀವಂತವಿರುವ ಸಮಾಜದಲ್ಲಿ ಅನ್ಯಾಯಗಳು ನಡೆದಾಗ ಅವುಗಳನ್ನು ಆಂದೋಲನಗಳು, ವಿರೋಧಗಳು ಮುನ್ನೆಲೆಗೆ ತರುತ್ತವೆ. ನನ್ನ ರಾಜ್ಯವಾದ ತಮಿಳುನಾಡಿನಲ್ಲಿ, ರೈತರು ತಮ್ಮ ಚಳುವಳಿಯ ಭಾಗವಾಗಿ ಇಲಿ ಗಳನ್ನು ತಿಂದು, ತಲೆ ಬೋಳಿಸಿಕೊಂಡು ಪ್ರತಿ ಭಟಿಸಿದರು. ಇವೆಲ್ಲಾ ಅವರು ನಮ್ಮ ನಾಗರಿಕ ಸಮಾಜದ, ಭಾರತ ಸರ್ಕಾರದ ಗಮನಸೆಳೆಯಲು ಮಾಡಿದ ಹತಾಶ ಪ್ರಯತ್ನಗಳು.

ಪ್ರಜಾಸತ್ತೆ ಅನ್ನುವುದು ಕಲೆಯ ಒಂದು ರೂಪ ಎಂದು ನಾನು ಹೇಳುತ್ತಿಲ್ಲ. ಅವು ಮನುಷ್ಯನ ಮೇಲೆ ಉಂಟು ಮಾಡುವ ಪ್ರಭಾವದ ಮಟ್ಟಿಗೆ ಸೈದ್ಧಾಂತಿಕವಾಗಿ ಅವೆರಡು ಒಂದೇ ರೀತಿಯವು ಎಂದಷ್ಟೇ ನಾನು ಹೇಳುತ್ತಿರುವುದು. ಪ್ರಜಾಸತ್ತೆ ತನ್ನ ಆದರ್ಶ ಸ್ಥಿತಿಯಲ್ಲಿ ಕಲೆಯ ಸ್ಪಿರಿಟ್ಟನ್ನು ಮೈಗೂಡಿಸಿಕೊಂಡಿರುತ್ತದೆ. ಅಥವಾ ಇದನ್ನು ತಿರುಗು ಮುರುಗ ಮಾಡಿ ಕಲೆಯ ಹಿಂದೆ ಇರುವುದು ಪ್ರಜಾಸತ್ತಾತ್ಮಕ ಸ್ಪಿರಿಟ್ ಅಂತಲೂ ಅನ್ನಬಹುದು. ಪ್ರಜಾಸತ್ತಾತ್ಮಕತೆ ಅನ್ನುವುದು ಬದುಕಿನ ಅತ್ಯಂತ ಆಳವಾದ ಅಸಂಗತತೆಯನ್ನು ಪ್ರಶ್ನಿಸುತ್ತದೆ. ಅದು ನಮ್ಮಲ್ಲಿರುವ ಅತಿಯಾಸೆ ಯನ್ನು ಗುರುತಿಸುತ್ತದೆ. ಅದು ಮನುಷ್ಯನ ಈ ಅಪಾಯಕಾರಿ ಪ್ರವೃತ್ತಿಗೆ ಸವಾಲಾಗಬಲ್ಲುದು.  ಮತ್ತು ಅದನ್ನು ನಿಯಂತ್ರಿಸಬಲ್ಲದು. ನಮ್ಮ ಪ್ರತಿಯೊಬ್ಬರಲ್ಲೂ ಒಬ್ಬ ಉತ್ತಮ ಮನುಷ್ಯ ಇದ್ದಾನೆ ಎಂದು ಅದು ನಮ್ಮನ್ನು ಎಚ್ಚರಿಸುತ್ತಾ ಇರುತ್ತದೆ. ನಮ್ಮ ಪರಿಸರವನ್ನು ರೂಪಿಸುವುದೇ ಪ್ರಜಾಸತ್ತೆ. ಹಾಗಾಗಿ ಅದು ಇಡೀ ಸಮಾಜವನ್ನು ಆವರಿಸಿಕೊಳ್ಳದೇ ಹೋದರೆ ಕಲೆ ಸೊರಗುತ್ತದೆ. ಪ್ರಜಾಸತ್ತಾತ್ಮಕ ಪ್ರಕ್ರಿಯೆ ಶಕ್ತಿಶಾಲಿಯಾಗಿದ್ದಾಗ ಕಲ್ಪನೆಗಳು ನಿರ್ಭಿಡೆಯಿಂದ ಸೃಜನಶೀಲವಾಗಿ ಹೊರಹೊಮ್ಮುತ್ತದೆ. ಧ್ವನಿ ಹಾಗೂ ಬೆಳಕಿನ ತಡೆಗಳನ್ನು ಮೀರಿಕೊಂಡು ಕಲಾವಿದ ವ್ಯಕ್ತ ಪಡಿಸುತ್ತಾನೆ. ಆದರೆ ಈ ರೀತಿಯ ಚಿಂತನೆ ಯಲ್ಲಿ ಒಂದು ಸಮಸ್ಯೆ ಇದೆ. ಕೆಲವೊಮ್ಮೆ ಪ್ರಜಾ ಸತ್ತಾತ್ಮಕತೆ ಅನ್ನುವುದು ಸಮಾಜದಲ್ಲಿ ಇಲ್ಲದೇ ಹೋದಾಗ ಅಥವಾ ಅದಕ್ಕೆ ಧಕ್ಕೆ ಯಾದಾಗ ಅದನ್ನು ಸೃಜನಶೀಲವಾಗಿ ವಿರೋಧಿ ಸುತ್ತಾ ಕಲಾವಿದ ಹುಟ್ಟಿಕೊಳ್ಳುತ್ತಾನೆ. ಇವರೆಲ್ಲಾ ತಮ್ಮ ಕಲೆಯೊಳಗೇ ಜೀವಿಸುತ್ತಿರುವ ಕಲಾವಿದರು. ತಿಳಿದೋ, ತಿಳಿಯದೆಯೋ ಇವರೆಲ್ಲರೂ ಸಾಮಾಜಿಕ-ರಾಜಕೀಯ ಕಟ್ಟುಪಾಡುಗಳನ್ನು ಉಲ್ಲಂಘಿಸುತ್ತಾರೆ. ಸ್ವತಃ ತಮ್ಮನ್ನು ಕಲೆಯ ಮಾಧ್ಯಮವಾಗಲು ಅವಕಾಶ ಮಾಡಿಕೊಡುತ್ತಾರೆ. ಪ್ರಜಾಸತ್ತೆಯ ಗುರಿ ಪ್ರೀತಿಸುವ, ಕಕ್ಕುಲಾತಿ , ಕಾಳಜಿ ಹಾಗೂ ಸಹಾನುಭೂತಿಯುಳ್ಳ, ಕಾರ್ಯ ಪ್ರವೃತ್ತರಾಗುವ  ತ್ಯಾಗಜೀವಿಗಳನ್ನು ಸೃಷ್ಟಿಸುವುದು.  ಆದರೆ ಇದು ಸಾಧ್ಯವಾಗಬೇಕಾದರೆ ಪ್ರಜಾಸತ್ತಾತ್ಮಕ ಹಾಗೂ ಸಮಾಜವಾದೀ ವ್ಯವಸ್ಥೆಯೊಳಗೆ ಪ್ರಜಾಸತ್ತಾತ್ಮಕ ಸಿದ್ಧಾಂತಗಳನ್ನು ಬೆಸೆಯುವುದಕ್ಕೆ ಸಾಧ್ಯವಾಗಬೇಕು. ಹೀಗಾದಾಗ ನಮ್ಮ ಎಲ್ಲಾ ಸಮಸ್ಯೆಗಳೂ ಬಗೆಹರಿಯುತ್ತವೆ ಎಂದಲ್ಲ. ಆದರೆ ಈ ವ್ಯವಸ್ಥೆಯನ್ನು ಸ್ಥಾಪಿಸುವವರಿಗೆ ಪ್ರಜಾಸತ್ತಾ ತ್ಮಕ ಆಶಯವಿರಬೇಕು. ಆಗ ಹೊಸ ವಿಚಾರಗಳಿಗೆ, ಚಿಂತನೆಗೆಳನ್ನು ಮರುಪರೀಕ್ಷೆ ಮಾಡಿಕೊಳ್ಳು ವುದಕ್ಕೆ, ಅದರಲ್ಲಿನ ತಪ್ಪುಗಳನ್ನು  ಸರಿಪಡಿಸಿಕೊಳ್ಳು ವುದಕ್ಕೆ ಸಂವಿಧಾನ ನಮಗೆ ಪ್ರೇರಣೆ ನೀಡುತ್ತದೆ. ಆದರೂ ನಾವೂ ಇಡೀ ವ್ಯವಸ್ಥೆಯನ್ನು ಕಡು ಎಚ್ಚರದಿಂದ ಗಮನಿಸುತ್ತಿರಬೇಕು. ಯಾಕೆಂದರೆ ಅಧಿಕಾರದ ಮದವಿರುವ ಒಂದು ಸಣ್ಣ ಗುಂಪಿನ ಕೈಗೆ ಅಧಿಕಾರ ಸಿಕ್ಕಬಿಟ್ಟರೆ ಪ್ರಜಾಸತ್ತಾತ್ಮಕತೆ ಉಸಿರುಕಟ್ಟಿ ಸಾಯಬಹುದು. ಹಾಗಾದಾಗ ನಾಗರಿಕ ಸಮಾಜ ಕ್ರಿಯಾತ್ಮಕವಾಗಿ ಅದನ್ನು ಪ್ರಶ್ನಿಸಬೇಕು. ಯಾವುದೇ ಹಿಂಸೆಗೂ ಹೆದರದೆ ಪ್ರತಿರೋಧ ವ್ಯಕ್ತಪಡಿಸಬೇಕು. ಪ್ರಜಾಸತ್ತಾತ್ಮಕತೆಯ ಸೃಜನಶೀಲತೆ ಇರುವುದೇ ಅದರ ಸ್ವರೂಪದಲ್ಲಿ, ಪ್ರಜೆಗಳ ಕಟ್ಟೆಚ್ಚರದಲ್ಲಿ, ನಿರಂತರವಾಗಿ ವಿಸ್ತಾರಗೊಳ್ಳುತ್ತಿರುವ ಮನುಷ್ಯನ ಸಾಧ್ಯತೆಗಳಲ್ಲಿ. ಆದರೆ ಪ್ರಜಾಸತ್ತೆ ಬಲಹೀನವಾಗಿಬಿಟ್ಟರೆ, ಕೆಲವರಿಗೇ ವಿಧೇಯವಾಗಿಬಿಟ್ಟರೆ ಅದು ಕೆಲವರ ಹಿತಾಸಕ್ತಿಯನ್ನಷ್ಟೆ ಕಾಪಾಡುತ್ತದೆ. ಮಿಕ್ಕ ಎಲ್ಲರಿಗೂ ಅದೊಂದು ನಿರ್ಬಂಧವಾಗಿಬಿಡುತ್ತದೆ.

ಕಲೆ ಪ್ರಜಾಸತ್ತೆಯನ್ನು ಬಹುವಾಗಿ ಹೋಲು ತ್ತದೆ. ಆದರೆ ಮನುಷ್ಯ ಅದನ್ನು ಬಹುಮೊದಲೇ ಸೃಷ್ಟಿಸಿಕೊಂಡುಬಿಟ್ಟಿದ್ದ. ಅವನಿಗೆ ತನ್ನೊಳಗಿನ ಸೌಂದರ್ಯದೊಂದಿಗೆ ಸಂಬಂಧ ಕಂಡುಕೊಳ್ಳ ಬೇಕಾಗಿತ್ತು. ಅದಕ್ಕಾಗಿ ಅವನು  ಕಲೆಯ ಅಸಂಗತ ಕಲ್ಪನೆಗಳಿಂದ ವಿವಿಧ ರೂಪಗಳನ್ನು, ಪ್ರಕಾರ ಗಳನ್ನು, ಕಲಾತ್ಮಕ ರಚನೆಗಳನ್ನು, ಮಾಧ್ಯಮಗಳನ್ನು ಕಟ್ಟಿಕೊಂಡಿದ್ದ. ಕಲೆಯ ಅಭಿವ್ಯಕ್ತಿಯಿಂದ ಮನುಷ್ಯ ಹೆಚ್ಚು ಅಸಲಿ, ಸತ್ಯವಂತ, ಭಾವುಕ iತ್ತು ಸೂಕ್ಮಸಂವೇದಿ ಆಗಿರುತ್ತಾನೆ ಎನ್ನುವುದು ಅವರ ನಿರೀಕ್ಷೆಯಾಗಿತ್ತು.

ಪ್ರತಿಯೊಂದು ಸಂಸ್ಕೃತಿಯೂ ಕಲೆಯ ಸಾಧ್ಯತೆಗಳನ್ನು ನಿರೂಪಿಸುವುದಕ್ಕೆ ತನ್ನದೇ ಆದ ದಾರಿಯನ್ನು ಕಂಡುಕೊಂಡಿರುತ್ತವೆ. ಪ್ರತಿ ಸಂಸ್ಕೃತಿಯೂ ಬದುಕಿನ ಸೊಗಸು, ಭವ್ಯತೆಯನ್ನು ಸಂಭ್ರಮಿಸುವ ಉತ್ಸವವಾಗಿ ಪ್ರಾರಂಭವಾಯಿತು. ಆದರೆ ಸಾಮಾಜಿಕ ಸಂಘಟನೆಗಳು, ಉತ್ಸವಗಳು ಹಾಗೂ ಅರಿತುಕೊಳ್ಳುವ ಸಾಮರ್ಥ್ಯ ಇವುಗಳು ಸಂಸ್ಕೃತಿಯ ದುಷ್ಟತನಗಳನ್ನು ಬಯಲುಮಾಡಿತು. ಇದಕ್ಕೆ ಧರ್ಮವನ್ನು ತಂದು ಸೇರಿಸಲಾಯಿತು. ಬಿಡಿಸಲಾಗದ ಒಂದು ಸಂಯೋಜನೆ  ಹುಟ್ಟಿ ಕೊಂಡಿತು. ಕಲೆ ಇದಕ್ಕೆ ಆಹುತಿಯಾಯಿತು. ಕಲೆ ಸದಾ ನಮ್ಮಲ್ಲಿ ತಳಮಳವನ್ನು ಹುಟ್ಟಿಸುತ್ತಾ ನಮ್ಮನ್ನು ಆತ್ಮಾವಲೋಕನ ಮಾಡಿಕೊಳ್ಳಲು ಒತ್ತಾಯಿಸುತ್ತದೆ. ಹಾಗಾಗಿ ಅದನ್ನು ಪಳಗಿಸಿ ಕೇವಲ ಆಕರ್ಷಣೆಯ ವಸ್ತುವನ್ನಾಗಿ ಮಾಡಿ ಬಿಟ್ಟೆವು. ಹೀಗೆ ಕೇವಲ ಆಕರ್ಷಣೆಯಾಗಿಬಿಟ್ ಕಲೆ ಮನುಷ್ಯನನ್ನು ಬದಲಿಸುವ ಆಂತರಿಕ ಶಕ್ತಿಯನ್ನು ಸಂಪೂರ್ಣವಾಗಿ ಕಳೆದುಕೊಂಡಿತು.

ಬಹು ದಿನಗಳಿಂದಲೂ ಕಲೆ ಈ ಬಂಧನದಲ್ಲಿಯೇ ಉಳಿದುಬಿಟ್ಟಿದೆ. ಆದರೂ ಕೆಲವೊಮ್ಮೆ, ನಾವದನ್ನು ಎಷ್ಟೇ ನಿಯಂತ್ರಿಸಲು ಪ್ರ್ರಯತ್ನಿಸಿದರೂ ಕೆಲವು ಅಪರೂಪದ ಕ್ಷಣಗಳಲ್ಲಿ  ಅದು ನಮ್ಮ ಬಿಗಿಮುಷ್ಠಿಯಿಂದ ಹೊರಬಂದು  ನಮ್ಮ ನಿಜಸ್ವರೂಪಕ್ಕೆ ಕನ್ನಡಿ ಹಿಡಿದುಬಿಡುತ್ತದೆ.  ಆ ಬಿಡುಗಡೆ, ಆ ಸ್ವಾತಂತ್ರ್ಯ ಇವು ನಿಜವಾದರೂ  ತುಂಬಾ ಅಲ್ಪಕಾಲಿಕ. ತುಂಬಾ ಬೇಗನೆ ನಾವದನ್ನು ಎರಡು ಕೈಗಳಿಂದ ಫಕ್ಕನೆ ಹಿಡಿದು ಮತ್ತೆ ಇಕ್ಕಟ್ಟಿನ ಕೋಣೆಯಲ್ಲಿ ಬಂಧಿಸಿಬಿಡುತ್ತೇವೆ.

ಕಲೆಯಿಂದ ಸಿಗುವ ಸುಖ ಪ್ರಜಾಸತ್ತೆಯಿಂದ ಸಿಗುವ ಸುಖದ ರೀತಿಯದಲ್ಲ ಏಕೆಂದರೆ ಅದರಲ್ಲಿ ಸಿಗುವ ಆನಂದ ಅದರ ವಿಕಟತೆ ಮತ್ತು ಅಸಾಂಗತ್ಯವನ್ನು ಮರೆಸಿ ಬಿಡುತ್ತದೆ. ಅಂಚಿನಲ್ಲಿ ಇರುವವರು ಸಮಾನತೆಗಾಗಿ ಹೋರಾಡುತ್ತಾರೆ, ಕೆಲವು ಸಮುದಾಯಗಳ ಅಧಿಪತ್ಯವನ್ನು ವಿರೋಧಿಸುತ್ತಾರೆ. ಆದರೆ ಅವರು ಕಲಾತ್ಮಕತೆಯ ಸಮರವನ್ನು ಸಾರುವುದಿಲ್ಲ. ಸಾಮಾಜಿಕ-ರಾಜ ಕೀಯ-ಸಾಂಸ್ಕೃತಿಕ ಹಾಗೂ ಕಲಾತ್ಮಕ ಅಸಮಾನತೆ ನಮ್ಮ ಸುತ್ತಲೂ ಇದೆ ಅಷ್ಟೇ ಅಲ್ಲ, ಅದು ಕಲೆಯ ನೀಲಿನಕ್ಷೆಯ ಭಾಗವಾಗಿಬಿಟ್ಟಿದೆ. ಅದನ್ನು ನಾವು ವಿರೋಧಿಸಬೇಕು. ಹಲವು ನೆಲೆಗಳಿಂದ ಅದನ್ನು ಎದುರಿಸಬೇಕು. ಕಲೆಯ ಮೂಲಕ ಸಮಾನತೆಯನ್ನು ಸಾಧಿಸುವುದಕ್ಕೆ ನಾವು ಪ್ರಯತ್ನಿಸಬೇಕು. ಅದನ್ನು ಒಳಗಿನಿಂದ, ಹೊರಗಿ ನಿಂದ, ಎರಡೂ ಕಡೆಗಳಿಂದ, ಅಥವಾ ಎರಡನ್ನೂ ಮೀರಿದ ಮಾರ್ಗದಿಂದ ಯತ್ನಿಸ ಬೇಕು. ಯಾವುದೋ ಒಂದು ಮಾರ್ಗದಿಂದ ಮಾತ್ರ ಇದು ಸಾಧ್ಯವಿಲ್ಲ. ಇದು ಒಳಗಿನಿಂದಲೇ ಒಡೆ ಯುತ್ತಾ, ವಿಕಾಸವಾಗುತ್ತಾ ಹೋಗಬೇಕಾದ ಪ್ರಕ್ರಿಯೆ. ಇದರಲ್ಲಿ ಯಾವುದೇ ರಾಜಿಯೂ ಇg ಬಾರದು. ಇದು ಆಳವಾಗಿ ನಾವ್ಯಾರು ಅನ್ನುವ ದನ್ನು ಶೋಧಿಸಿಕೊಂಡು ಹೋಗುವ ಪ್ರಕ್ರಿಯೆ.

ನನ್ನ ಕಲೆಯ ಜೀವನದುದ್ದಕ್ಕೂ ನನ್ನ ಮಿತಿಗಳನ್ನು ಅರ್ಥಮಾಡಿಕೊಳ್ಳುವುದರ ಮೂಲಕ ಎಷ್ಟನ್ನೋ ಗ್ರಹಿಸಿದ್ದೇನೆ. ಹಾಗೆಯೇ ಸಂಸ್ಕೃತಿ, ಜನ, ರಾಜಕೀಯ, ಗುರುತು, ಒಡೆತನ, ಹಂಚಿ ಕೊಳ್ಳುವುದು, ನಿಯಂತ್ರಣ, ಧರ್ಮ ಅವಕಾಶ ಇವುಗಳೊಂದಿಗೆ ಹೋರಾಡುತ್ತಾ ಬಂದಿದ್ದೇನೆ.  ನನ್ನೊಳಗಿನ ಹಾಗೂ ಹೊರಗಿನ ಎಷ್ಟೋ ವಿಷಯಗಳು ನನಗೆ ತಿಳಿದಿಲ್ಲ. ಆದರೆ ನನ್ನೊಳಗಿನ ಯಾವುದೋ ಒಂದು ನನ್ನನ್ನು ನಿರಂತರವಾಗಿ ಪ್ರಯತ್ನಿಸಲು, ಹುಡುಕಲು ಅನಂತವಾದ ಈ ಹಾದಿಯಲ್ಲಿ ಸಾಗಲು ಒತ್ತಾಯಿಸುತ್ತಿದೆ.

Recent Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.