ಕಳಚಿ ಬಿದ್ದಿತು ಗೆಳೆಯಾ- ಜಗದ ಸಂತೆಯ ಚಿಂತೆ

 In RAGAMALA

ಕಿಶೋರಿ ಅಮೋನ್ಕರ್
ನಾನು ನನ್ನ ಧ್ವನಿ ಕಳೆದುಕೊಂಡಿದ್ದ ಆ ದಿನಗಳು ನನಗೆ ಚೆನ್ನಾಗಿ ನೆನಪಿದೆ. ಆರು ವರುಷಗಳು ನನಗೆ ಹಾಡಲೇ ಆಗಿರಲಿಲ್ಲ. ನಮ್ಮಮ್ಮ ಹಾಡುತ್ತಿದ್ದಾಗ ಅವಳಿಗೆ ಸಾಥ್ ನೀಡಲು ನನಗಾಗುತ್ತಿರಲಿಲ್ಲ. ಅವಳ ಬೇರೆ ಶಿಷ್ಯರು ಸಾಥ್ ನೀಡುತ್ತಿದ್ದರು. ನಾನು ಮಲ್ಲಿಕಾರ್ಜುನ ಮನ್ಸೂರರ ಸಂಗೀತವನ್ನು ಕೇಳಿದ್ದು ಆ ಹೊತ್ತಿನಲ್ಲಿ, ಅವರು ಅಲ್ಲಾದಿಯಾಖಾನ್ ಸಾಹೇಬರ ಪುಣ್ಯತಿಥಿಯಲ್ಲಿ ಹಾಡಲು ಬಂದಾಗ. ನಾನು ಅವರ ಎದುರಿಗೇ ಕುಳಿತಿದ್ದೆ. ಅವರು ಕಬೀರಿ ಭೈರವ್ ಹಾಡುತ್ತಿದ್ದರು. ಅದರಲ್ಲೊಂದು ಕೋಮಲ ರಿಷಭವಿತ್ತು. ಅವರು ಆ ಸ್ವರವನ್ನು ಹಾಡುವಾಗ ಅದು ನನ್ನ ಎದೆಯನ್ನು ಸೀಳುತ್ತಿದೆ ಎಂದು ಭಾಸವಾಗುತ್ತಿತ್ತು. ಅಂಥ ಯಾತನೆ ಅದರಲ್ಲಿತ್ತು. ನನ್ನ ಅಂದಿನ ಆ ಮನಃಸ್ಥಿತಿಯಲ್ಲಿ ಕಬೀರಿ ಭೈರವ್‌ದಂತಹ ಘನವಾದ ಪ್ರಮುಖ ರಾಗಿಣಿಯನ್ನು ಕೇವಲ ಒಂದೇ ಒಂದು ಸ್ವರದಲ್ಲಿ ಹಾಗೆ ಅಭಿವ್ಯಕ್ತಿಸಬಹುದು ಎನ್ನುವುದು ನಿಜವಾಗಿಯೂ ನನಗೆ ಅಚ್ಚರಿಯನ್ನು ಹುಟ್ಟಿಸಿತ್ತು. ಮನ್ಸೂರರ ಆ ಕೋಮಲ ರಿಷಭ ಎಷ್ಟು ಶಕ್ತಿಶಾಲಿಯಾಗಿತ್ತೆಂದರೆ, ಅದರ ಆಧಾರದ ಮೇಲೆ ಕಬೀರಿ ಭೈರವ್ ರಾಗವು ಒಂದು ಬೃಹತ್ ಭವ್ಯಸೌಧದ ಹಾಗೆ ರೂಪುತಳೆದು ನಿಂತಿತ್ತು. ಅವರ ಸಂಗೀತವೂ ಅಷ್ಟೇ ಬೃಹತ್ತಾಗಿತ್ತು. ಆ ರಾಗದ ಮೊಟ್ಟಮೊದಲ ಸ್ವರ ಷಡ್ಜ ಮನ್ಸೂರರ ಕಂಠದಲ್ಲೇ ಮನೆಮಾಡಿಕೊಂಡಿತ್ತು.
ಇನ್ನೊಂದು ಸಂದರ್ಭದಲ್ಲಿ ಅವರು ಸರಳವಾದ ಭೈರವ್ ರಾಗವನ್ನು ಹಾಡುತ್ತಿದ್ದರು. ದೈವತ ಮತ್ತು ಮಧ್ಯಮಗಳನ್ನು ಬಳಸಿ ಅವರು ಮಾಡುತ್ತಿದ್ದ ಸಂಗತಿಗಳು ತುಂಬಾ ಶ್ರೇಷ್ಠವಾದ, ಅಸಾಧಾರಣ ಸಂಗತಿಗಳಾಗಿದ್ದವು. ಸ್ವರಗಳ ಮೇಲೆ ಸಂಪೂರ್ಣ ಪ್ರಭುತ್ವ ಹಾಗೂ ನಿಯಂತ್ರಣ ಇಲ್ಲದೇ ಹೋದಲ್ಲಿ ಹಾಗೆ ಹಾಡುವುದು ಸಾಧ್ಯವೇ ಇಲ್ಲ.
ಮಲ್ಲಿಕಾರ್ಜುನರು ತಮ್ಮ ಜೈಪುರ್-ಅತ್ರೌಲಿ ಪರಂಪರೆಯೊಳಗೇ ಹೊಸ ಅಭಿವ್ಯಕ್ತಿಯನ್ನು ಹುಡುಕಿಕೊಂಡಿದ್ದರು. ಆದರೆ ಅವರು ನನ್ನ ತಾಯಿಯಂತೆ ಅಲ್ಲಾದಿಯಾಖಾನ್ ಸಾಹೇಬರು ಹಾಡುತ್ತಿದ್ದಂತೆಯೇ ಹಾಡುತ್ತಿರಲಿಲ್ಲ. ಅವರ ಸ್ವಂತಿಕೆ ಹಾಗೂ ತನ್ನತನವೂ ಆ ಗಾಯನದಲ್ಲಿ ಇತ್ತು. ನಾನು ಮಲ್ಲಿಕಾರ್ಜುನ ಅವರಿಂದ ಕಲಿತದ್ದು ಈ ಸ್ವಂತಿಕೆಯ ಅಭಿವ್ಯಕ್ತಿಯನ್ನೇ.
ತಾನು ಕಲಿತ ಲಯಕರಿಯನ್ನು ಅವರು ಪರಿಷ್ಕೃತಗೊಳಿಸಿಕೊಂಡು ಬದಲಾಯಿಸಿಕೊಂಡಿದ್ದು ಅವರನ್ನು ಒಬ್ಬ ಜನಪ್ರಿಯ ಗಾಯಕನನ್ನಾಗಿ ಮಾಡಿತು. ನಮ್ಮ ಘರಾನದಲ್ಲಿ ಆಲಾಪನೆಯು ಲಯದೊಂದಿಗೇ ರೂಪುಗೊಳ್ಳುತ್ತಾ ಹೋಗುತ್ತದೆ. ನಾವು ಆಲಾಪನೆ ಮಾಡುವಾಗ ಲಯವನ್ನು ಬಿಟ್ಟುಬಿಡುವುದಿಲ್ಲ. ಆಯಾ ರಾಗಕ್ಕೆ ತಕ್ಕಂತೆ ಆಲಾಪ ಮತ್ತು ಅಲಂಕಾರ ಇವೆರಡನ್ನೂ ಸರಿದೂಗಿಸಿಕೊಂಡು ಹೋಗಬೇಕು. ಆಗ ಮಾತ್ರ ರಾಗದ ನಿಜಸ್ವರೂಪ ಪ್ರಕಟಗೊಳ್ಳುತ್ತದೆ. ಮಲ್ಲಿಕಾರ್ಜುನರ ಪ್ರಸ್ತುತಿಯಲ್ಲಿ ಲಯಕರಿಯು ಹೆಚ್ಚಾಗಿರುತ್ತಿತ್ತು ಮತ್ತು ಅವರು ಲಯವನ್ನು ಸಭಿಕರಿಗೆ ತೋರಿಸುತ್ತಿದ್ದರು. ಜನರು ಈ ಲಯಕರಿಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳುತ್ತಿದ್ದರು ಮತ್ತು ಸಹಜವಾಗಿ ಅದಕ್ಕೆ ಮಿಡಿಯುತ್ತಿದ್ದರು.
ಸಂಗೀತ ಎನ್ನುವುದು ಕೊನೆಗೂ ನೀವು ಮತ್ತು ನಿಮ್ಮ ಆತ್ಮ. ಮಲ್ಲಿಕಾರ್ಜುನರು ಹಾಡಿದಾಗ ಅವರ ಕಂಠದಿಂದ ಹೊರಹೊಮ್ಮುವ ಮೊದಲ ಷಡ್ಜ ತಂಬೂರಿಯೊಂದಿಗೆ ಸಂಪೂರ್ಣವಾಗಿ ಲೀನವಾಗಿ ಅನಂತದೆಡೆಗೆ ಸಾಗುತ್ತಿತ್ತು. ಅದು ನಿರಂತರವಾಗಿತ್ತು. ಅದನ್ನು ಒಂದು ದಿವ್ಯ ಕ್ಷಣ ಎಂದು ಕರೆಯಬಹುದೇನೋ. ನಮ್ಮ ಇಡೀ ಬದುಕಿನ ಸಂಗೀತದ ತಪಃಚರ್ಯೆಯಲ್ಲಿ ಅಂತಹ ಒಂದೇ ಒಂದು ಕ್ಷಣ ದಕ್ಕಿದರೆ ಅದನ್ನು ಒಂದು ಶ್ರೇಷ್ಠವಾದ ಕ್ಷಣವೆಂದು ಕರೆಯಬಹುದು. ಮೆಹಫಿಲ್ಲಿನಲ್ಲಿ ಹಾಡುತ್ತಿದ್ದಾಗಲೂ ಮಲ್ಲಿಕಾರ್ಜುನರು ತಮಗೋಸ್ಕರವೇ ಹಾಡಿಕೊಳ್ಳುತ್ತಿದ್ದರು. ಅದು ಅವರ ಆತ್ಮದೊಂದಿಗೆ ಅವರು ನಡೆಸುತ್ತಿದ್ದ ಸಂವಾದವಾಗಿತ್ತು. ಪಾವನಗೊಳಿಸುವುದು ಎಂದರೆ ಮತ್ತಿನ್ನೇನು? ಮರಾಠಿಯ ಗಾದೆಯೊಂದು ಹೇಳುವಂತೆ ಎಲ್ಲಿ ಭಾವವಿದೆಯೋ ಅಲ್ಲಿ ಭಗವಂತನಿದ್ದಾನೆ. ಪ್ರೀತಿಯಿಲ್ಲದೆ ಪಾವನಗೊಳಿಸುವುದು ಸಾಧ್ಯವೇ? ಮಲ್ಲಿಕಾರ್ಜುನರು ತಮ್ಮ ಗೆಳೆಯರು, ನಮ್ಮಂಥ ಮಕ್ಕಳು, ಎಲ್ಲರನ್ನೂ ಪ್ರೀತಿಸುತ್ತಿದ್ದರು ಮತ್ತು ಎಲ್ಲದಕ್ಕಿಂತ ಹೆಚ್ಚಾಗಿ ತಮ್ಮ ಸಂಗೀತವನ್ನು ಪ್ರೀತಿಸುತ್ತಿದ್ದರು. ಹಾಗಾಗಿಯೇ ಅವರಿಗೆ ಸಂಗೀತ ಪರಮಾನಂದಕರವಾಗಿತ್ತು.

Recommended Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.