ಕವಿ ಪುತಿನ ಅವರೊಂದಿಗೆ ಸಂದರ್ಶನ

 In RAGAMALA

ಕವಿ ಪು. ತಿ ನರಸಿಂಹಚಾರ್ಯರನ್ನು ವೀಣೆ ದೊರೆಸ್ವಾಮಿ ಅಯ್ಯಂಗಾರ್ಯರು ಆಕಾಶವಾಣಿಗಾಗಿ ಮಾಡಿದ ಸಂದರ್ಶನವನ್ನು ತುಂಬಾ ಹಿಂದೆ ಕೇಳಿದ್ದೆ. ತುಂಬಾ ಇಷ್ಟ ಆಗಿತ್ತು. ಅದಕ್ಕಾಗಿ ಹುಡುಕಾಡುತ್ತಿದ್ದೆ. ಆಕಾಶವಾಣಿಯವರು ಅಮೃತ ಮಹೋತ್ಸವದ ಸಂದರ್ಭದಲ್ಲಿ ತಂದ ಸ್ಮರಣ ಸಂಚಿಕೆಯಲ್ಲಿ ಅದು ಸಿಕ್ಕಿತು. ಆದರೆ  ಮುದ್ರಣದೋಷಗಳಿವೆ. ಕೆಲವು ಸಾಲುಗಳು ಸ್ಪಷ್ಟವಿಲ್ಲ. ಆದರೂ ಅದು ಎತ್ತುವ ವಿಷಯಗಳ ದೃಷ್ಟಿಯಿಂದ ಇದು ದಾಖಲಿಸಲೇ ಬೇಕಾದ ಸಂದರ್ಶನ ಅನ್ನಿಸಿ ಅದನ್ನು ಇಲ್ಲಿ ನೀಡಲಾಗಿದೆ. ಯಾರಿಗಾದರೂ ಮೂಲ ಸಿಕ್ಕಿರಬಹುದು. ಅಥವಾ ಇದನ್ನು ಸರಿಪಡಿಸಲು ಆಗಬಹುದು.

ಕವಿ ಪುತಿನ ಅವರೊಂದಿಗೆ ಸಂದರ್ಶನ

ಸಂದರ್ಶಕರು: ವಿ ದೊರೆಸ್ವಾ,ಮಿ ಅಯ್ಯಂಗಾರ್

interview with putina

interview with putina

ದೊರೆ: ನಮಸ್ಕಾರ ನರಸಿಂಹಾಚಾರ್ರೆ
ಪುತಿನ: ನಮಸ್ಕಾರ ದೊರೆಸ್ವಾಮಿ ಅಯ್ಯಂಗಾರ್ರೆ
ದೊರೆ: ಬಹಳ ಸಂತೋಷ ನಿಮ್ಮನ್ನ ಮೈಸೂರು ಆಕಾಶವಾಣಿಯಲ್ಲಿ ನೋಡ್ತಾ ಇರೋದು. ತಾವು ಕಾವ್ಯಪ್ರಪಂಚದಲ್ಲಿ ಒಳ್ಳೆಯ, ಪ್ರತಿಷ್ಠಿತರಾದ ಕವಿಗಳು. ನಿಮ್ಮ ಅನೇಕ ಗೀತರೂಪಕಗಳನ್ನು ನಿರ್ದೇಶನ ಮಾಡುವ ಭಾಗ್ಯ ನನಗೆ ಸಿಕ್ಕಿತ್ತು. ಆವಾಗ ನಿಮ್ಮ ಕವಿತಾಚಾತುರ್ಯ ನೋಡಿ ತುಂಬಾ ಸಂತೋಷಪಟ್ಟಿದ್ದೇನೆ. ಆದರೆ ಈ ಸಂಗೀತದಲ್ಲಿ ನಿಮಗೆ ಅಭಿರುಚಿ ಹ್ಯಾಗೆ ಬಂತು? ನೀವು ಸಂಗೀತ ಕ್ರಮವಾಗಿ ಅಭ್ಯಾಸ ಮಾಡಿದೋರಲ್ಲ. ಗುರುಗಳಿಂದ ಶಿಕ್ಷಣ ಪಡೆದವರಲ್ಲ, ಇದು ನನ್ನನ್ನ ಯಾವಾಗಲೂ ಬಾಧಿಸ್ತಾನೆ ಇದೆ. 

ಪುತಿನ: ಕವಿತೆ ಬರೆಯೋದಕ್ಕೆ ಮೊದಲು ನನಗೆ ಸಂಗೀತದ ಪರಿಚಯ ತುಂಬಾ ಇತ್ತು. ಸಂಗೀತದ ಅಭಿರುಚಿ, ಚಿಕ್ಕಂದಿನಿಂದ ಇತ್ತು. ಇದಕ್ಕೆ ಕಾರಣ ಏನು ಅಂದರೆ ನಮ್ಮೂರ ದೇವಸ್ಥಾನ. ನಮಗೆ ದೇವಸ್ಥಾನ ಅನ್ನತಕ್ಕದ್ದು ಚತುಃಸ್ಥಾನದಲ್ಲಿ ಒಂದು. ಶ್ರೀವೈಷ್ಣವರಿಗೆ ನಾಲ್ಕು ದೇವಸ್ಥಾನಗಳಲ್ಲಿ ಮೇಲುಕೋಟೆ ದೇವಸ್ಥಾನವಂತೂ ನಿತ್ಯಸ್ಮರಣೀಯವಾದ ಒಂದು. ಆದ್ದರಿಂದ ಎಲ್ಲ ಕಡೆಯ ಸಂಗೀತಗಾರರೂ ಬಂದು, ಅಲ್ಲಿ ದೇವರಿಗೆ ತಮ್ಮ ಪ್ರಥಮ ನಿವೇದನೆಯನ್ನು ಮಾಡಿಬಿಟ್ಟು ಹೋಗ್ತಾ ಇದ್ದರು. ನಮ್ಮೂರಿನಲ್ಲಿ ರಸಿಕರು ಇದ್ದರು, ವಿದ್ವಾಂಸರಿದ್ದರು. ವಿದ್ವಾಂಸರು ಶ್ಲೋಕವನ್ನು ಹೇಳಬೇಕಾದರೆ ಯಾವಾಗಲೂ ರಾಗದಲ್ಲೇ ಹೇಳ್ತಾ ಇದ್ದರು. ಪುರಾಣ ಪ್ರವಚನ ಮಾಡಬೇಕಾದರೆ ಅರ್ಥಹೇಳುವವರು ಒಬ್ಬರು, ಪುರಾಣ ಓದುವವರು ಒಬ್ಬರು ಇದ್ದರು. ಆ ಪುರಾಣ ಓದುವವರ ಕಂಠ ಸುಶ್ರಾವ್ಯವಾಗಿ ಅನೇಕ ರಾಗಗಳಲ್ಲಿ ಸಂಚಾರ ಮಾಡ್ತಾ ಇತ್ತು. ತುಂಬಾ ಸೊಗಸಾಗಿರ್ತಿತ್ತು. ಅದರಿಂದ ಏನಾಯ್ತು ಅಂದರೆ ನನಗೆ ದೇವಸ್ಥಾನದಲ್ಲಿ ಉತ್ಸವಕಾಲದಲ್ಲಿ ಹರಕೆ ಕಟ್ಟಿಕೊಂಡು ಬರ್ತಾ ಇದ್ದರು ಮುಖ್ಯವಾಗಿ ಓಲಗ ಮೇಳದವರು. ನನಗೆ ಓಲಗ ಅಂದರೆ ತುಂಬಾ ಇಷ್ಟ. ಅದು ಬಿಟ್ಟರೆ ವೀಣೆ. ಎರಡೇ ಇಷ್ಟವಾದದ್ದು. ವೀಣೆ ಯಾತಕ್ಕೆ ಇಷ್ಟ ಅಂತಾ ಹೇಳಿದ್ರೆ, ಆ ವೀಣೆ ಅನ್ನೋದನ್ನು ಸ್ತೋತ್ರಪುಷ್ಪವನ್ನಾಗಿ ಅರ್ಪಿಸುತ್ತಾರೆ. ಮಂತ್ರ ಪುಷ್ಟವನ್ನು ಅರ್ಪಿಸುತ್ತಾರೆ. ಅದರ ಕೊನೆಯಲ್ಲಿ ವೀಣೆ ನುಡಿಸ್ತಾ ಇದ್ದರು. ಆ ದೇವಸ್ಥಾನದ ಆವರಣದಲ್ಲಿ ಅವರು ಸಣ್ಣದಾಗಿ ನುಡಿಸಿದರೂ ಕೂಡ ಆ ಸುಶ್ರವ್ಯವಾದ ನಾದ ಕೇಳಿದ್ರೆ ಮನಸ್ಸಿಗೆ ತುಂಬಾ ಆಪ್ಯಾಯಮಾನವಾಗಿರ್ತಿತ್ತು. ಬೇರೆ ಒಂದು ಲೋಕವನ್ನೇ ಸೃಷ್ಟಿಸುವಂತಾಗುತ್ತಿತ್ತು. ಆದ್ದರಿಂದ ನನಗೆ ಏನೇ ಗೊತ್ತಿಲ್ಲ ಅಂದರೂ ಆ ಸ್ತೋತ್ರ ಪಾಠಗಳನ್ನು ರಾಗವಾಗಿ ಹೇಳ್ತಾ ಇದ್ರಲ್ಲ ಇದು ಮತ್ತು ಜಾತ್ರೆ, ಉತ್ಸವದ ಸಮಯದಲ್ಲಿ ಬರುತ್ತಿದ್ದಂತಹ ವಿದ್ವಾಂಸರು ಮತ್ತೆ ಪಲ್ಲವೋತ್ಸವದ ಸಮಯದಲ್ಲಿ ಬರುತ್ತಿದ್ದಂತಹ ವಿದ್ವಾಂಸರು ಮತ್ತೆ ಪಲ್ಲವೋತ್ಸವದ ಕಾಲದಲ್ಲಿ ಮೈಸೂರು ಕಡೆಯಿಂದ ವಾಸುದೇವಾಚಾರ್ಯರು, ಬಿಡಾರಂ ಕೃಷ್ಣಪ್ಪನವರು, ವೀಣೆ ಶೇಷಣ್ಣನವರು ಇವರೆಲ್ಲ ನಮ್ಮ ಮನೆಯ ಎದುರು ಮನೆಯಲ್ಲೇ ಬಿಡಾರ ಮಾಡ್ತಾ ಇದ್ರು.

  ವೀಣೆ ಶೇಷಣ್ಣನವರ ವೀಣೆಯ ಪರಿಚಯ ನಾನು ಒಂಬತ್ತು ವರ್ಷದ ಬಾಲಕನಾಗಿದ್ದಾಗಿನಿಂದ ಇದೆ. ಆಮೇಲೆ ಮೈಸೂರಿಗೆ ಬಂದ ಮೇಲೆ ಈ ಕೃಷ್ಣೋತ್ಸವಗಳು, ರಾಮೋತ್ಸವಗಳು ನವರಾತ್ರಿಗಳು ನಡೀತಿದ್ದವು. ಟೈಗರ್ ವರದಾಚಾರ್ ಅವರು ನಾನು ವಿದ್ಯಾರ್ಥಿಯಾಗಿದ್ದಾಗ ನಮ್ಮ ಮನೆ ಮಗ್ಗುಲಲ್ಲೇ ವಸತಿ ಮಾಡಿದ್ದರು. ಅಮೇಲೆ ವಾಸುದೇವಾಚಾರ್ಯರು ಈ ಗಣಪತಿ ಉತ್ಸವದಲ್ಲಿ ಪಾಲ್ಗೊಂಡು ತಮ್ಮ ಹೊಸ ಹೊಸ ರಚನೆಗಳು ಏನಿತ್ತು ಅದನ್ನು ಅವರು ಅಲ್ಲಿ ನಿರೂಪಿಸುತ್ತಿದ್ದರು. ನಾಲ್ಕು ವೇದಗಳ ಪಾರಾಯಣ ಆದ ಮೇಲೆ ಇವರ ಸಂಗೀತ ಸ್ವಲ್ಪ ನಡೀತಾ ಇತ್ತು. ಆ ಗಣಪತಿ ಪೂಜೆ, ವೇದಪಾರಾಯಣ, ಇವರ ಸಂಗೀತ ಕೇಳ್ತಾ ಇದ್ದರೆ, ಈ ಲೋಕವೇ ಬೇರೆ, ನಾವಿರುವ ಲೋಕವೇ ಬೇರೆ ಅನ್ನಿಸ್ತಿತ್ತು.
ನಾನು ಬೆಂಗಳೂರಿಗೆ ಬಂದ ಮೇಲೆ ಅನೇಕ ದೊಡ್ಡ ಸಂಗೀತಗಾರರ ಸಂಗೀತವನ್ನು ಕೇಳ್ತಾ ಇದ್ದೆ. ಆ ಸಂಗೀತಗಳೆಲ್ಲ ಜ್ಞಾನ ರೂಪದಲ್ಲಿ ಇದ್ದವು. ಈವಾಗದು ಜ್ಞಾಪಕ ಇಲ್ಲ. ಅನುಭವ ನನಗೆ ಜ್ಞಾನರೂಪದಲ್ಲಿ ಇರುತ್ತೆ, ವಿವರಗಳು ಜ್ಞಾಪಕ ಇರೋದಿಲ್ಲ, ಆದರೆ ಸಂಗೀತಾಭ್ಯಾಸ ಮಾಡುವವರಿಗೆ ಜ್ಞಾನದ ಜೊತೆಗೆ ವಿವರಗಳು ಜ್ಞಾಪಕ ಬರುತ್ತದೆ.
 
ananya

Doreswamy Iyengar lighting lamp

 ದೊರೆ: ಹಾಗಾದರೆ ನಿಮ್ಮ ಪ್ರಕಾರ ಈ ಕ್ರಮಬದ್ಧವಾಗಿ ಶಿಕ್ಷಣ ಆಗಿಲ್ದೇ ಇರೋದು ಒಂದು ವಿಧದಲ್ಲಿ ನಿಮಗೆ ಒಳ್ಳೇದಾಯ್ತು, ಹೊಸ ಹೊಸ ರಚನೆಗಳನ್ನು ಮಾಡೋದಕ್ಕೆ.
ಪುತಿನ: ಹೌದು ಸರಿ. ಆಮೇಲೆ ಇನ್ನೊಂದು ಸ್ವಾರಸ್ಯ ಹೇಳ್ತೀನಿ. ನಾನು ಸಂಗೀತಗಾರನಲ್ಲದೇ ಹೋದ್ರಿಂದ ಒಂದು ಪಕ್ಷ, ನಾನು ಏನೇ ಒಂದು ಅಪಸ್ವರ ಹಾಡಿ ಅಥವಾ ಇನ್ನೇನೋ ತಪ್ಪನ್ನ ಮಾಡಿದ್ರೆ ಅದನ್ನು ಯಾರು ಪ್ರಶ್ನಿಸೋದಿಲ್ಲ.
ದೊರೆ: ಹೌದು, ಸಂಗೀತ ವಿದ್ವಾಂಸ ತಪ್ಪು ಮಾಡಿದರೆ ಖಂಡಿತಾ ಪ್ರಶ್ನೆ ಮಾಡ್ತಾರೆ
ಪುತಿನ: ರಸಿಕತೆ ಬೇರೆ, ಸ್ವರಗೀತೆ ಬೇರೆ. ಶಾಸ್ತ್ರಕ್ಕೆ ಸರಿಯಾಗಿ ಇದೆಯೋ, ಭರತನ ನೂರೆಂಟು ಕರ್ಣಗಳು ಸರಿಯಾಗಿದೆಯೋ ಅದು ಬೇರೆ. ಇದು ಸರಿಯಾಗಿ ಇಲ್ಲ, ಸ್ವಾರಸ್ಯವಿಲ್ಲ ಅಂತ ಎಕ್ಸಾಮಿನರ್ಸ್ ನಂಬರ್ ಹಾಕ್ತಾರಲ್ಲ ಅದು ಬೇರೆ. ಒಟ್ಟಿನಲ್ಲಿ ನಾಟ್ಯ ಚೆನ್ನಾಗಿತ್ತೆ, ಸರಸವಾಗಿತ್ತೆ, ಹಾಗಿರುತ್ತೆ, ಹೀಗಿರುತ್ತೆ ಅಂತಾ ನೋಡೋ ನಮ್ಮಂಥ ರಸಿಕರು ಹೇಳ್ತಾರಲ್ಲ ಅದು ಬೇರೆ.  ಆದರೆ ನನಗೆ ಸಹಗೀತೆ ಬೇಕು. ಸಹಗೀತೆ ಪೂರ್ವರಚನೆಗಳಿಗಿಂತ ನವೀನವಾಗಿರುತ್ತೆ. ಇದು ಸಂಗೀತದ ಪ್ರಪಂಚಕ್ಕೆ ಒಂದು ಕಾಣಿಕೆಯಾಗುತ್ತೆ, ಹೊಸದಾಗುತ್ತೆ ಸಂಗೀತದ ವಿಕಾಸಕ್ಕೆ. ಸಂಗೀತ ಅನ್ನೋ ಅಂಥದ್ದು ಸ್ಟಾಟಿಕ್ ಅಲ್ಲ. ಅದು ತಲೆಮಾರಿನಿಂದ ತಲೆಮಾರಿಗೆ ಹೋಗ್ತಾ ಇರುತ್ತೆ. ಹೇಗೆ ಭಾವನೆಗಳು ಬದಲಾಗ್ತಾ ಹೋಗ್ತಾ ಇರುತ್ತೋ ಹಾಗೆ ಸಂಗೀತಾನೂ ಬದಲಾಯಿಸಿ ಬದಲಾಯಿಸಿ ಹೋಗ್ತಾ ಇರುತ್ತೆ.  ಪರಂಪರೆ ಈ ಬದಲಾವಣೆಗೆ ಎಡೆಕೊಡದೇ ಹೋದರೆ ಆ ಪರಂಪರೆ ನಷ್ಟ ಆಗಿಬಿಡುತ್ತೆ. ಪರಂಪರೆಯನ್ನು ಉಳಿಸಿಕೊಳ್ಳೋದಕ್ಕೆ ಈ ಬದಲಾವಣೆ ತಂದೇ ತೀರಬೇಕಾಗುತ್ತದೆ.
 ದೊರೆ: ನೀವು ಸಂಗೀತದ ಅನುಭವದಿಂದ ಮೊದಲು ಸಂಗೀತ ಕವಿತೆಗಳನ್ನು ಬರೀತಾ ಇದ್ರಾ ಅಥವಾ ಪದ್ಯ ಬರೀತಾ ಇದ್ರ?
ಪುತಿನ: ನಾನು ಮೊದಲು ಮಟ್ಟುಹಾಕಿ ಬರೀತಾ ಇರಲಿಲ್ಲ. ಹೀಗೆ ರಿಸೈಟೇಷನ್ ಪ್ರಕಾರವಾಗಿ ಬರೀತಾ ಇದ್ದೆ ಪದ್ಯಾನಾ. ನಾನು ಅದಕ್ಕೇ ‘ಅಹಲ್ಯೆ’ಗೆ ಸಂಪೂರ್ಣವಾಗಿ ಸಂಗೀತ ಹಾಕಿಲ್ಲ. ಶಬರಿಗೆ ಹಾಕಿಲ್ಲ.
ದೊರೆ: ನಿಮ್ಮ ಮನಸ್ಸಿನಲ್ಲಿ ಸಂಗೀತ ಅನ್ನೋದು ಕಾಣ್ತಾ ಇರಲಿಲ್ಲ. ಶಬರಿಗೆ ಹಾಕಿಲ್ಲ. ಅದನ್ನು ಬೇರೆಯವರು ಯಾರಾದರೂ ಸಂಗೀತ ವಿದ್ವಾಂಸರು ಸಂಗೀತಕ್ಕೆ ಅಳವಡಿಸಿದರೆ ನೀವು ಒಪ್ಪಿಕೊಳ್ತೀರಾ?
ಪುತಿನ: ನೋಡಬೇಕು. ಅದನ್ನು ನಾನು ಕೇಳಿ ಹೇಳ್ಬೇಕು.  ಯಾಕೇಂದ್ರೆ ನಾನು ಅನೇಕ ರಚನೆಗಳಲ್ಲಿ ಕೆಲವನ್ನು ಒಪ್ಪಿಕೊಂಡಿದ್ದೇನೆ, ಕೆಲವನ್ನು ಒಪ್ಪಿಕೊಂಡಿಲ್ಲ.
ದೊರೆ: ಹೌದು, ನೀವು ಅನೇಕ ಸಂಗೀತ ರೂಪಕಗಳಿಗೆ ನೀವೇ ಸಂಗೀತಾನೂ ಕೊಟ್ಟಿದ್ದೀರಿ.
ಪುತಿನ: ಹೌದು ಕೊಟ್ಟಿದ್ದೇನೆ. ಯಾಕೆ ಕೊಟ್ಟಿದ್ದೀನಿ ಅಂದರೆ ನಾನು ಆ ಸಾಲುಗಳನ್ನು ರಚನೆ ಮಾಡಿದೆ.
 IMG_2411-2
 40162  ದೊರೆ: ರಚನೆ ಅಂದರೆ ಏನು ರಚನೆ? ಪಠ್ಯಾನೇ ಅಥವಾ ಸಂಗೀತಾನೆ?
ಪುತಿನ: ರಚನೆ ಅಂದರೆ ಸಂಗೀತ. ಸಂಗೀತ ರಚನೆ, ಸಂಗೀತ ಈ ಸ್ವರದಲ್ಲಿ ಹೀಗೆ ಹೋಗಬೇಕು ಅಂತಾ.
ದೊರೆ: ಈ ಸಾಹಿತ್ಯ ಸಂಗೀತ ಒಟ್ಟಿಗೆ ಬಂತೇ?
ಪುತಿನ: ಇಲ್ಲ, ಇಲ್ಲ. ನನಗೆ ಇತ್ತೀಚೆಗೆ ಯಾವಾಗಲೂ ಸಂಗೀತ ಮೊದಲು ಬರುತ್ತೆ. ಈವಾಗ ಈ ಹಂಸ ದಮಯಂತಿ ಗೀತೆಗಳಿದ್ಯಲ್ಲ ಅದಕ್ಕೆಲ್ಲ ಮೊದಲು ಸಂಗೀತ ಆಮೇಲೆ ಅದರ ಸಾಹಿತ್ಯ. ಆ ಸಂಗೀತದ ಹೊಳಪು ನನಗೆ ಗೊತ್ತಾಗಿಬಿಡುತ್ತೆ. ಇದು ಹೊಸದಾಗಿರುತ್ತೆ. ಇದು ನಿಜವಾದ ಸಂಗೀತಗಾರರ ಕಿವಿಗೆ ಬಿದ್ದರೆ ಅವರು ಇದನ್ನು ಆಸಕ್ತಿಯಿಂದ ಸ್ವೀಕರಿಸಬಹುದು ಅನ್ನೋ ಭಾವ ನನಗೆ ಬರುತ್ತೆ. ಈ ವಸಂತ ಚಂದನದ ಸಂಗೀತ ಇದೆಯಲ್ಲಾ ಅದು ನವೀನ, ಅದು ಹ್ಯಾಗೆ ಬಂತು ಅಂತಾ ಹೇಳಿದ್ರೆ ಅದೊಂದು ಲಹರಿಯಲ್ಲಿ ಬಂತು.
ದೊರೆ: ವಸಂತ ಚಂದನ ನಾನು ಮೊದಲ ಸಲ ಕೇಳಿದಾಗ, ಅಲ್ಲಿಯತನಕ ತಾವೊಬ್ಬ ಸಂಗೀತ ರಸಿಕರು, ಆನಂದವಾಗಿ ಅನೇಕ ರಾಗಸಂಗೀತ ಕೇಳಿ ಆನಂದಪಡ್ತೀರ ಅಂತ ಇದ್ದೆ ನಾನು. ವಸಂತ ಚಂದನದ ಕೆಲವು ಮಟ್ಟುಗಳನ್ನು ನಾನು ಮೊದಲ ಬಾರಿ ಸುಮಾರು 35 ವರ್ಷಗಳ ಹಿಂದೆ ಕೇಳಿದಾಗ ಇದು ನೀವು ಮಾಡಿದ್ದು ಅಂತ ನನಗೆ ಗೊತ್ತಿರಲಿಲ್ಲ. ಯಾರೋ ಸಂಗೀತಗಾರರು ಅಳವಡಿಸಿದ್ದಾರೆ ಅಂತಾ ಇದ್ದೆ. ಆಮೇಲೆ ನೀವೇ ಮಾಡಿದ್ದು ಅಂತ ತಿಳಿದು ಬಹಳ ಆಶ್ಚರ್ಯ ಆಯ್ತು. ಅದರಲ್ಲಿ ಜಾನಪದ ದಾಟಿಯ ಅನೇಕ ಗೀತೆಗಳು ಇವೆ. ಆದರಲ್ಲಿ ಶಾಸ್ತ್ರೀಯ ಸಂಗೀತ ಅಷ್ಟಾಗಿ ಇಲ್ಲ. ಸುಗಮ ಸಂಗೀತ ಇದೆ. ಆದರೂ ಒಂದು ಗಾಂಭಿರ್ಯ ಇದೆ ಅದರಲ್ಲಿ. ಆಗಿನಿಂದ ನಿಮ್ಮ ಸಂಗೀತ, ಕವಿತಾ ರಚನೆ ಚಾತುರ್ಯದಲ್ಲಿ ನನಗೆ ಆಸಕ್ತಿ ಬಂತು.
ಪುತಿನ: ಅದಕ್ಕೆ ಏನು ಕಾರಣ ಅಂತಾ ಹೇಳಿದರೆ, ಮನಸ್ಸು ಹಗುರವಾಗಿರುತ್ತೆ. ಒಂದು ತರಹ ಲಹರಿಯಲ್ಲಿ ಇರ್ತೀವಿ.
ದೊರೆ: ಯಾವ ಲಹರಿ ಸಂಗೀತ ಲಹರೀನೋ?
ಪುತಿನ: ನಾನು ಬಸ್ಸಿನಲ್ಲಿ ಅನೇಕ ಸಂಗೀತ ರಚನೆಗಳನ್ನು ತೂರಿಬಿಟ್ಟಿದ್ದೇನೆ. ಫಸ್ಟ್ ಕ್ಲಾಸ್ ರಚನೆಗಳು.
 

ದೊರೆ: ಅಮೇಲೆ ಅದಕ್ಕೆ ಸಾಹಿತ್ಯ?
ಪುತಿನ: ಸಾಹಿತ್ಯ ನನಗೆ ಬಂದಿರೋದೇ ಆಮೇಲೆ. ನಾನು ಹೇಳಿದೆನಲ್ಲ ಶಂಕರಾಭರಣ ಒಂದು ವರ್ಷದಿಂದ ನನ್ನ ತಲೇಲಿ ಇದೆ. ಅದಕ್ಕೆ ಈಗ ಸಿಕ್ತು ಸಾಹಿತ್ಯ, ಸಂಗೀತದ ಕಾಂತಿಯನ್ನು ಕಡಿಮೆ ಮಾಡದ ರೀತಿ ನಾನು ಶಬ್ದಗಳನ್ನು ಪ್ರಯೋಗಿಸಬೇಕು. ಬರೀ ರಾಮ ಗೋವಿಂದ ಅಂದರೆ ಅಗೋದಿಲ್ಲ.
ದೊರೆ: ನಿಮ್ಮ ರಚನೆಗಳ ಸಂಗೀತದ ಮರ್ಮ ಏನೂಂತ ಈವಾಗ ಗೊತ್ತಾಯ್ತು ನನಗೆ. ನೀವು ಮೊದಲು ಸಂಗೀತದ ಕಲ್ಪನೆ ಮಾಡಿಕೊಂಡು ಆಮೇಲೆ ಸಾಹಿತ್ಯ ಹೊಂದಿಸಿಕೊಳ್ತೀರಿ.
ಪುತಿನ: ಅದೂ ಸಂಗೀತ ಕಳೆಗುಂದದ ಹಾಗೆ. ನೀವು ಹೇಗೆ ವೀಣೆಯಲ್ಲಿ ಸಾಹಿತ್ಯವನ್ನು ಕಳೆದು ಸಂಗೀತವನ್ನು ಬಾರಿಸ್ತಿರೋ ಹಾಗೆ ನಾವು ಸಂಗೀತವನ್ನು ಕಳೆದು ಸಾಹಿತ್ಯವನ್ನು ಓದಿದರೂ ಕೂಡ ಈ ಭಾವ ಗಟ್ಟಿಯಾಗಿರುತ್ತೆ. ಸಾಹಿತ್ಯರಸಿಕರಿಗೆ ಅಲ್ಲಿ ಭಾವ ಚೆನ್ನಾಗಿದೆ ಅಂತಾ ಗೊತ್ತಾಗುತ್ತದೆ.

ದೊರೆ: ನಿಮ್ಮ ಸಂಗೀತವಲ್ಲದ ಕವಿತೆಗಳಿವೆಯಲ್ಲಾ ಅದರ ಪೊಯೆಟ್ರಿನೂ ಈ ಪೊಯೆಟ್ರಿನೂ ಒಂದೇ ಆಗಿದೆಯೋ ಅಥವಾ ಏನಾದರೂ ವ್ಯತ್ಯಾಸ ಇದೆಯೇ?
ಪುತಿನ: ನೋಡಿ ‘ಹಂಸ ದಮಯಂತಿ’ ಅನ್ನೋ ಕೃತಿಗೆ ನನಗೆ ಯಾತಕ್ಕೆ ಬಹುಮಾನ ಕೊಟ್ಟಿದ್ದಾರೆ? ಸಾಹಿತ್ಯಕ್ಕೆ ಕೊಟ್ಟಿದ್ದಾರೆ. ಅದು ಗಟ್ಟಿ ಸಾಹಿತ್ಯ. ಆ ಗಟ್ಟಿ ಸಾಹಿತ್ಯದ ಮೇಲೆ ಒಂದು ವ್ಯಾಖ್ಯೆ ಕೊಡಬಲ್ಲೆ, ಸಂಗೀತಾನ ಬಿಟ್ಟುಬಿಡಿ. ಸಂಗೀತ ಕಳೆದುಬಿಡಿ. ಎರಡು ಸ್ವಾರಸ್ಯ ಇದೆ. ಒಂದು ಸಾಹಿತ್ಯದಲ್ಲಿ ನುರಿತು ಬುದ್ಧಿಯನ್ನು ಉಪಯೋಗಿಸಿ ಉತ್ತು ಉತ್ತು ಅದರಲ್ಲಿ ರಸವನ್ನು ಗ್ರಹಿಸಬೇಕು. ಅದು ಸ್ವಲ್ಪ ಗಟ್ಟಿಯಾಗಬೇಕು. ಅರ್ಥಬೇಕು, ಅದಕ್ಕೆ ಶಬ್ಧ, ಶಬ್ಧದಿಂದ ಅರ್ಥಕ್ಕೆ ಹೋಗಿ, ಅರ್ಥದಿಂದ ನೀವು ಭಾವವನ್ನು ಹಿಡಿದುಕೊಂಡು ಅದರಿಂದ ನೀವು ಆತ್ಮಕ್ಕೆ ಬೇಕಾದ ಸುಖವನ್ನು ಪಡೆಯಬೇಕು, ಹೀಗಿದೆ. ಸಂಗೀತ ಹಾಗಲ್ಲ. ಸ್ವರದ ಚಾತುರ್ಯ ಅದು ಕಿವಿಗೆ ಬಿದ್ದ ತಕ್ಷಣ ಮನಸ್ಸಿಗೆ ಆನಂದ ಆಗಿಬಿಡುತ್ತೆ. ಚೆನ್ನಾಗಿದೆ ಚೆನ್ನಾಗಿಲ್ಲ ಎರಡೇ ಅದಕ್ಕೆ ಇರೋದು.

 
Foreign tour

Foreign tour

putinaweb3 ದೊರೆ: ಆದ್ರೂ, ನೀವು ಈವಾಗ ಹಳೆಯ, ಸಂಪ್ರದಾಯಿಕವಾದ ಪ್ರಾಚೀನವಾದ ರಾಗ ಶಂಕರಾಭರಣ(ದಲ್ಲಿ ರಚನೆಮಾಡಿದಾಗ) ಇದರಲ್ಲಿ ಕೂಡ ಶಂಕರಾಭರಣದ ಛಾಯೆ, ಅದರ ವ್ಯಕ್ತಿತ್ವ ಇಲ್ಲದೇ ಹೋದರೆ ಅದರಲ್ಲೂ ನಾವು ಆಕ್ಷೇಪಣೆ ತೆಗೀಬೇಕಾಗುತ್ತೆ.
ಪುತಿನ: ಅದಕ್ಕೇನೆ ನಾವು ಸಹೃದಯರ ಹತ್ತಿರ ಒಪ್ಪಿಸೋದು. ನನ್ನ ಕವಿತೆಗಳನ್ನು ಶ್ರೀಕಂಠಯ್ಯನವರು, ಶಿವರಾಮಶಾಸ್ತ್ರಿಗಳ ಹತ್ತಿರ ಯಾಕೆ ಒಪ್ಪಿಸುತ್ತಿದ್ದೆ ನಾನು? ನಾನು ಮೊದಲು ಕಾಗದ ಬರೀತಾ ಇದ್ದೆ ಶ್ರೀಕಂಠಯ್ಯನವರಿಗೆ.  ಕಾಗದದಲ್ಲಿ ಒಂದು ಪದ್ಯ ಬರೆದು ಕಳಿಸ್ತಾ ಇದ್ದೆ. ಶಿವರಾಮ ಶಾಸ್ತ್ರಿಗಳು, ಶ್ರೀಕಂಠಯ್ಯನವರು ಏನು ಮಾಡಿದರು ಅಂದ್ರೆ ಅವನ್ನೆಲ್ಲಾ ಶೇಖರಣೆ ಮಾಡಿ, ಕಾಪಿಮಾಡಿ, ಅಚ್ಚಿಗೆ ಕೊಟ್ಟು, ಪಬ್ಲಿಷ್ ಮಾಡಿ, ಭೇಷ್ ಅಂದ್ರು.  ಅವರು ಇಲ್ದೇ ಹೋದ್ರೆ ಮೂಲೆ ಸೇರಿಬಿಡ್ತಾ ಇತ್ತು.  ತಿಚಿ ಟಿಠಣ ಛಠಣಜಡಿಜಜ ಚಿಛಠಣಣ ಣ.  ನಾನು ಸಂಗೀತದಲ್ಲಿ ಯಾಕೆ ಬರೀತೀನಿ ಅಂದರೆ ಒರಿಜಿನಲ್ ಆಗಿದ್ರೆ ಸಂಗೀತಕ್ಕೆ ಸೇರಿಸಬಹುದು ಇದನ್ನ. ಕನರ್ಾಟಕ ಸಂಗೀತದಲ್ಲಿ ಶಂಕರಾಭರಣದಲ್ಲಿ ಅನೇಕ ವಿಧವಾದ ಕೀರ್ತನೆಗಳು ಇವೆ. ಇದೂ ಹಾಗೇ ಇದ್ದರೆ ಇದನ್ಯಾಕೆ ನಾವು ಮಾಡಬೇಕು. ಅದನ್ನೇ ಕೇಳಿ ಸಂತೋಷಪಡಬಹುದಲ್ಲ. ಹಾಗೇ ಒಂದು ರಾಗದಲ್ಲಿ ಎಷ್ಟು ಒರಿಜಿನಲ್ ಮೈಂಡ್, ಎಷ್ಟು ವಿಧವಾದ ಮುಖಗಳನ್ನು, ಎಷ್ಟು ವಿಧವಾದ ಕೀರ್ತನೆಗಳನ್ನು, ಲಯಭಾಗಗಳನ್ನು ತರುತ್ತೀವೊ ಶಂಕರಾಭರಣದ ವೈಭವ ಅಷ್ಟು ಹೆಚ್ಚುತ್ತೆ, ಆದ್ದರಿಂದ ಸಂಗೀತಗಾರರು ಏನ್ಮಾಡಬೇಕು ಅಂದರೆ ಆಸ್ತಿಕರಿಂದ ಬರಲಿ, ಪಾಮರರಿಂದ ಬರಲಿ, ವಿಷದಿಂದಲೂ ಸಹ ಅಮೃತವನ್ನು ಸಂಗ್ರಹಿಸಬೇಕು. ನೀವು ಇವನು ಪಾಮರ, ಸಂಗೀತ ಗೊತ್ತಿಲ್ಲ ಅಂತ ಬಿಟ್ಟುಬಿಟ್ಟರೆ ಏನಾಗುತ್ತೆ ಅಂದರೆ ನಿಮ್ಮ ಶಂಕರಾಭರಣದ ಒಂದು  ಮುಖ ಹೋಗಿಬಿಡುತ್ತದೆ. ಆದ್ದರಿಂದ ಇವನ್ನ ಗಮನಿಸಬೇಕು ನೀವು.
ದೊರೆ: ಹೌದು. ಇಂಥ ಅನೇಕ ನಿಮ್ಮ ರಚನೆಗಳು, ಅದರ ಸಂಗೀತ, ಸಾಹಿತ್ಯ ಮೌಲ್ಯ ಬಹಳ ಚೆನ್ನಾಗಿದೆ. ಯಾಕೆ ಅಂತಾ ಹೇಳತೀನಿ. ಅದನ್ನ ವಾದ್ಯದಲ್ಲಿ ನುಡಿಸಿದ್ರೂ ಅದರ ಸಾಹಿತ್ಯ ಇಲ್ಲದೇ ಕೇಳಬಹುದು. ಕೆಲವನ್ನು ನಾನು ನುಡಿಸ್ತಾ ಇದ್ದೀನಿ. ಚೆನ್ನಾಗಿದೆ. ಅದರ ಸಂಗೀತಮೌಲ್ಯ ಚೆನ್ನಾಗಿದೆ ಅಂತ ಆಯ್ತು. ಅದಕ್ಕೆ ಸಾಹಿತ್ಯದ ಸಹಾಯಾನೇ ಇಲ್ಲದೇ ಅದು ನಿಲ್ಲುತ್ತೆ. ಹಾಗೇ ಅದೇ ಹಾಡುಗಳು ಸಾಹಿತ್ಯದಲ್ಲಿ ಕಾವ್ಯವಾಗಿ ನಿಲ್ಲಬಲ್ಲವು.

 

 

ಪುತಿನ: ಅದೇ ಹೇಳ್ತಾ ಇದ್ದೀನಲ್ಲ. ಅದಕ್ಕೇ ಪ್ರೈಜ್ ಕೊಟ್ಟಿರೋದು ಅಂತಾ. ನೀವು ಯಾವ ಹಾಡಾದ್ರೂ ಸರಿ. ದೀಪಲಕ್ಷ್ಮಿ ಅನ್ನೋದು ನಮ್ಮ ಹಂಸ ದಮಯಂತಿಯಲ್ಲಿ ಒಂದು ಪೋರ್ಷನ್.
ದೊರೆ: ಅದೇ ನಿಮ್ಮ ವಿಶೇಷ.
ಪುತಿನ: ಹಾಂ, ನಾನು ಹೇಳಿದೆನಲ್ಲ, ಬದಲಾವಣೆ ಅಗತ್ಯ. ಈ ಕನರ್ಾಟಕ ಸಂಗೀತಕ್ಕೆ ಒಂದು ವೈಶಿಷ್ಟ್ಯ ಇದೆ ಅಂತ. ನೀವು ಯಾವುದನ್ನು ಭಾವಿಸಿಕೊಂಡು ಒಂದು ವೈಶಿಷ್ಟ್ಯ ಅಂತಾ ಹೇಳ್ತೀರೋ ಅದೇ ಸಂಪ್ರದಾಯ. ಆ ವೈಶಿಷ್ಟ್ಯವನ್ನು ನೀವೂ ಉಜರ್ಿತಗೊಳಿಸಿಕೊಂಡು ಬರಬೇಕಾದರೆ ಬದಲಾವಣೆಯಿಂದ ಮಾತ್ರ ಆಗುತ್ತೆ.
ದೊರೆ: ಹಾಗೇನೆ ಆಗ್ತಾ ಇರೋದು, ಹಾಗೇ ಬೆಳೀತಿರೋದು ಕಲೆ.
ಪುತಿನ: ಈಗ ನಿಮ್ಮ ಶೈಲಿ, ವೀಣೆ ಶೇಷಣ್ಣ ಅವರ ಶೈಲಿ ಮತ್ತು ವೆಂಕಟಗಿರಿಯಪ್ಪ ಅವರ ಶೈಲಿನೂ ಕೇಳಿದ್ದೀನಿ. ಆ ಮೂರಕ್ಕೂ ವ್ಯತ್ಯಾಸವಿದೆ. ವ್ಯತ್ಯಾಸವಿದೆಯೋ ಇಲ್ವೋ, ಬದಲಾವಣೆ ಇದೆಯಲ್ವೋ?  ಆದರೆ ಆ ಸಂಪ್ರದಾಯ ಇದೆ. ಅಂದರೆ ಬದಲಾವಣೆಯಿಂದ ನೀವು ಸಂಪ್ರದಾಯವನ್ನು ಪೋಷಿಸಿಕೊಂಡು ಬಂದಿದ್ದೀರಿ.
ದೊರೆ: ನೀವು ಸಂಗೀತದಲ್ಲೂ ಇದೇ ನಿಯಮಾನ ಅನುಸರಿಸಿದ್ದೀರಿ. ಕೆಲವು ಕೀರ್ತನೆಗಳೂ ಇವೆ.
ಪುತಿನ: ಮಡಿಯಿಲ್ಲದೆ, ಆದರೆ ನಾಜೂಕಾದ ನವರಾಗದ ರಚನೆಗಳೂ ಇವೆ. ಫಾರ್ ಎಕ್ಸಾಂಪಲ್, ವಾಸಂತಿ ಮಾಧವಿಯಲ್ಲಿ, ನಾನು ವಸಂತ ಕಾಲದ ವೈಭವವನ್ನು ವರ್ಣನೆ ಮಾಡಿದೆ. ಬಹಳ ಖುಷಿಯಾಗಿತ್ತು.
ದೊರೆ: ಆ ರಾಗ ಬಹಳ ಮಡಿಯಾಗಿ, ಸಂಪ್ರದಾಯವಾಗಿ ಬಂದ ರಾಗ ಅಲ್ಲ. ಇದಕ್ಕೆ ಏನು ಹೆಸರಿಟ್ಟಿದ್ದೀರಿ?
ಪುತಿನ: ವಾಸಂತಿ ಅಂತ.
ದೊರೆ: ಸಂಪ್ರದಾಯವಾದ ಸಂಗೀತದಲ್ಲಿ ಈ ರಾಗವನ್ನು ಇಲ್ಲಿಯತನಕ ನಾನು ಕೇಳಿಲ್ಲ. ಈ ಹೊಸ ಕಲ್ಪನೆ, ಸಂಗೀತ ಕಲ್ಪನೆ ನಿಮಗೆ ಹ್ಯಾಗೆ ಬಂತು?
ಪುತಿನ: ಅದೇ ‘ಯದ್ ಭಾವಂ ತದ್ ಭವತೀ’
ದೊರೆ: ಆ ಸಂದರ್ಭಕ್ಕೆ ತಕ್ಕಂತೆ ಆ ಗೇಯನಾಟಕದಲ್ಲಿ ಇದು ತಾನಾಗೇ ಒದಗಿ ಬಂತೇ ಅಂತಾ.
ಪುತಿನ: ಹೌದು, ಯಾಕೇಂದ್ರೆ ರಾಮೋದಯ ಅನ್ನೋ ನಾಟಕ ಬರೀಬೇಕಾದ್ರೆ ಅದರಲ್ಲಿ ತನ್ಮಯನಾಗಿ ಒಂದು ತಿಂಗಳು ಇರ್ತೀನಿ. ಬೇರೆ ಏನೂ ಇಲ್ಲ. ಊಟ ಮಾಡ್ತೀನಿ, ಆಫೀಸಿಗೆ ಹೋಗ್ತೀನಿ, ಕೆಲಸ ಮಾಡ್ತಾ ಇರ್ತೀನಿ. ಬೇರೆ ಏನೂ ಇರೋದಿಲ್ಲ ಅಲ್ಲಿ. ಈ ಚಿಂತನೆಯೇ ಇರುತ್ತೆ. ಇದು ಮುಖ್ಯ ನನಗೆ ಅಲ್ಲಿ. ಈ ತನ್ಮಯತೆ ಇರದೇ ಹೋದರೆ ನಮಗೆ ಸಂಗೀತ ಸಿಕ್ಕೊಲ್ಲ. ಭಾವ ಸಿಕ್ಕೊಲ್ಲ.
ದೊರೆ: ನೀವು ಈಗ ಶಬರಿ, ಅಹಲ್ಯೆ, ಇವುಗಳಿಗೆ ಮೊದಲು ನಾನು ಸಂಗೀತದ ಕಲ್ಪನೆ ಮಾಡಲಿಲ್ಲ ಅಂದಿರಿ. ಅದನ್ನ ಮೊದಲು ಬರೆದಿರಾ ಅಥವಾ ಗೋಕುಲ ನಿರ್ಗಮನ, ಹರಿಣಾಭಿಸರಣ ಇದನ್ನೆಲ್ಲ ಮೊದಲು ಬರೆದ್ರಾ?
ಪುತಿನ: ಮೊದಲು ಅಹಲ್ಯೆ.
ದೊರೆ: ಆವಾಗ ಸಂಗೀತ ನಿಮ್ಮ ಮನಸ್ಸಿನಲ್ಲಿ ಅದಕ್ಕೆ ಮೂಡ್ತಾ ಇತ್ತಾ?
ಪುತಿನ: ಸುಮಾರು. ಅಂದ್ರೆ ಹಿಡಿತ ಇಲ್ಲ. ಏನೋ ಸಂಗೀತ ಹಾಕಿದ್ರೆ ಚೆನ್ನಾಗಿರುತ್ತೆ ಅಂತಾ. ಖಚಿತ ಸ್ವರ ಇರಲಿಲ್ಲ. ಗೋಕುಲ ನಿರ್ಗಮನ ಮಾತ್ರ ಹಾಡಿಕೊಂಡು ಬರೆದೆ. ಅದರಲ್ಲಿ ಸ್ವಲ್ಪ ಶಾಸ್ತ್ರೀಯ ಸಂಗೀತದ ಒಲವೇ ಕಂಡುಬರುತ್ತೆ.
ದೊರೆ: ನಾಟಕುರಂಜಿ, ಖರಹರಪ್ರಿಯ, ರಂಜನಿ ಮೊದಲಾದ ರಾಗಗಳು ಇವೆ. ನಂತರದಲ್ಲಿ ನೀವು ಬರೆದ ನೃತ್ಯರೂಪಕಗಳಲ್ಲಿ ನವೀನವಾದ ರಾಗಗಳು ಬಂದಿವೆ.
ಪುತಿನ: ಯಾಕೇಂತ ಹೇಳಿದ್ರೆ ಗೋಕುಲ ನಿರ್ಗಮನ ಒಂದು ಪೌರಾಣಿಕವಾದ ಕಥೆ. ಅದಕ್ಕೆ ಜಾಸ್ತಿ ಮ್ಯೂಸಿಕ್ ಹಾಕಬೇಕು ಅಂತ ನನಗೆ ತೋರಲಿಲ್ಲ. ಈ ವಸಂತ ಚಂದನ ಅನ್ನೋದು ಋತುವೈಭವ. ಅದೊಂದು ಸೆಕ್ಯುಲಾರ್ ಪೊಯೆಂ. ನಮ್ಮಲ್ಲಿ ಸೆಕ್ಯುಲಾರ್ ಮ್ಯೂಸಿಕ್ ಇಲ್ಲವಲ್ಲ. ನಮ್ಮಲ್ಲಿ ಪ್ರತಿಯೊಂದಕ್ಕೂ ತ್ಯಾಗರಾಜರು. ಫ್ಯೂನರಲ್ಲಿಗೂ ತ್ಯಾಗರಾಜರು, ಮದುವೆಗೂ ತ್ಯಾಗರಾಜರು, ಎಲ್ಲದಕ್ಕೂ ತ್ಯಾಗರಾಜರೇ.
ದೊರೆ: ಮ್ಯೂಸಿಕ್ ಅನ್ನೋದೇ ಒಂದು ಸ್ವತಂತ್ರವಾದ ಕಲೆ. ಸೆಕ್ಯುಲಾರ್ ಮ್ಯೂಸಿಕ್ ಯಾಕೆ ಬೇಕು ಅಂತೀನಿ.
ಪುತಿನ: ಫ್ಯೂನರಲ್ಲಿಗೆ ಏನು ಮಾಡ್ತೀರಾ?
ದೊರೆ: ಫ್ಯೂನರಲ್ಲಿಗೆ ಸಂಗೀತಾನೆ ಬೇಡ ಅಂತೀನಿ ನಾನು.
ಪುತಿನ: ಸಂಗೀತ ಬೇಕಾಗುತ್ತೆ. ಫ್ಯೂನರಲ್ಲಿಗೆ ಬ್ಯಾಂಡ್, ಸ್ಲೋ ಮೋಷನ್ ಬ್ಯಾಂಡ್ ಬೇಕಾಗುತ್ತೆ. ಹೀಗೇ ಪ್ರತಿಯೊಂದಕ್ಕೆ, it expresses any feeling you want to. Music is the best method to express feelings.
ದೊರೆ: ನಾಟಕದ ಸಂಗೀತ, ಅದರಿಂದ ನಿಮಗೇನಾದರೂ ಸ್ಪೂತರ್ಿ ಬಂದಿದೆಯೇ?
ಪುತಿನ: ಈ ಒಳ್ಳೇ ಸಂಗೀತವನ್ನು ಕೇಳಿ, ಈ ಸಂಗೀತವನ್ನು ನಾಟಕದಲ್ಲಿ ಈ ಪಾತ್ರ, ಈ ಸಂದರ್ಭದಲ್ಲಿ ಹಾಡಿಬಿಟ್ಟರೆ ಅಷ್ಟು ಚೆನ್ನಾಗಿರುತ್ತೆ ಅಂತ ಅನ್ನಿಸಿದೆ ನನಗೆ. ನಮ್ಮ ಭೈರವಿಯಲ್ಲಿ ವೀಣೆ ಶೇಷಣ್ಣವರು ಬಾರಿಸಿದರೆ ಹೇಗೆ ಇಂತಹ ಸಂದರ್ಭದಲ್ಲಿ? ಈ ರಾಗವನ್ನು ಈ ಸ್ತರದಲ್ಲಿ, ಆ ಸಂದರ್ಭದಲ್ಲಿ, ಹೇಳಿಬಿಟ್ಟರೆ, ಆ ದೃಶ್ಯ ಎಷ್ಟು ಮನೋಹರವಾಗಿರುತ್ತೆ, ಎಷ್ಟು ಚೆನ್ನಾಗಿರುತ್ತೆ? ಈ ಪರಿಸರರಹಿತವಾದ ಸಂಗೀತ ಇದೆಯಲ್ಲಾ, ಅದು ಪರಿಸರದಲ್ಲಿ ಎಷ್ಟೊ ಸೊಗಸುತ್ತೆ ಅನ್ನೋದನ್ನು ನಾನು ಅನೇಕ ಸಲ ಯೋಚಿಸಿದ್ದೇನೆ. ನಾನು ಹೇಳಿದೆನಲ್ಲ ಸಂಗೀತಜ್ಞಾನ ಹೀಗೆ ಸ್ವರಗಳಾಗಿ ಹೊರಳುತ್ತಲ್ಲ, ಜ್ಞಾನ ವಿವರಗಳಲ್ಲಿ.
ದೊರೆ: ಭಾವ ಜ್ಞಾನ
ಪುತಿನ: ಹಾಂ ಭಾವಜ್ಞಾನ. ಆ ಭಾವಕ್ಕೆ ಅತ್ಯುತ್ತಮವಾದ ಸಂಗೀತ ಕೇಳುವ ಜ್ಞಾನ ಇದೆ. ಆ ಜ್ಞಾನದಿಂದ ಸಾಹಿತ್ಯ ಹೊರಡುತ್ತೆ. ಹೇಗೆ ಹೊರಡುತ್ತೆ, ನವೀನವಾಗೇ ಹೊರಡುತ್ತೆ!
ದೊರೆ: ನಮಗೆ ಫಲಿತಾಂಶ ಮುಖ್ಯ. ಶಾಶ್ವತವಾಗಿ ನಿಲ್ಲುವಂತಹ ಅನೇಕ ಒಳ್ಳೆಯ ರಚನೆಗಳು ನಿಜವಾಗಲೂ ಬಂದಿದೆ. ಬಹಳ ಸಂತೋಷ ನರಸಿಂಹಾಚಾರ್ರೇ.
ಪುತಿನ: ವಂದನೆಗಳು
 

Recent Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.