ಕಿವಿ ತಣಿವ ಮೊದಲೇ. . . . . – ಮ್ಯಾಂಡೊಲಿನ್ ಶ್ರೀನಿವಾಸ್

 In RAGAMALA

೧೯೮೧ರಲ್ಲಿ ೧೨ರ ಹರೆಯದ ಹುಡುಗ ಶ್ರೀನಿವಾಸ್ ಚೆನ್ನೈನ ಇಂಡಿಯನ್ ಫೈನ್‌ಆರ್ಟ್ಸ್ ಸೊಸೈಟಿಯಲ್ಲಿ ಸಂಭ್ರಮದಿಂದ ಕಛೇರಿ ನುಡಿಸಲು ಕುಳಿತಿದ್ದ. ತೆರೆ ಸರಿದಾಗ ಅವನ ಕಣ್ಣಿಗೆ ಮೊದಲು ಕಂಡಿದ್ದು ವೀಣಾದೈತ್ಯ ಎಸ್. ಬಾಲಚಂದರ್, ಅದರ ಮುಂದಿನ ಸಾಲಿನಲ್ಲಿ ಸಂಗೀತ ದಿಗ್ಗಜ ಟಿ.ಎನ್ ಶೇಷಗೋಪಾಲನ್, ಅದರ ಮುಂದಿನ ಸಾಲಿನಲ್ಲಿ ಮೊನುಚು ಮಾತಿನ ವಿಮರ್ಶಕ ಸುಬ್ಬುಡು. ಎದೆಬಡಿತ ಏರದೆ ಇನ್ನೇನಾದೀತು. ಆದರೆ ಒಡಲಿನ ಭಾಗವೇ ಆಗಿದ್ದ ಸಂಗೀತ ಹೊರಹೊಮ್ಮಿದಂತೆಲ್ಲಾ ಆ ಹುಡುಗನ ಪಾಲಿಗೆ ಅವರ‍್ಯಾರು ಇರಲಿಲ್ಲ. ವಾದನ ಮುಗಿದ ಕೂಡಲೇ ವೇದಿಕೆಯೇರಿ ಬಾಲಚಂದರ್ ಆಡಿದ ಮಾತುಗಳು ಶ್ರೀನಿವಾಸನ ಸಂಗೀತದ ಆಳ-ಅಗಲಕ್ಕೆ ಹಿಡಿದ ಕನ್ನಡಿಯಾದರೆ, ವೇದಿಕೆ ಏರಿದ ಶೇಷಗೋಪಾಲನ್ ಅವರು ಅವನ ಬೆರಳಿಗೆ ತೊಡಿಸಿದ ಬಂಗಾರದ ಉಂಗುರ ಅವನ ಸಂಗೀತದ ಅಪರಂಜಿತನವನ್ನು ಎತ್ತಿಹೇಳುತ್ತಿತ್ತು. ಮಾರನೆಯ ದಿನದ ಪತ್ರಿಕೆಯಲ್ಲಿ ಬಂದ ಸುಬ್ಬುಡು ವಿಮರ್ಶೆ ಅವನ ಸಂಗೀತದ ಹಿರಿಮೆಯನ್ನು ಜಗತ್ತಿಗೇ ಸಾರಿ ಹೇಳಿತು.
ಅಪರೂಪದ, ಅಸಾಧಾರಣ ಪ್ರತಿಭೆಯೊಂದು ಹೊರಹೊಮ್ಮುವುದಕ್ಕೆ ಜೀವದೊಳಗಿನ ಒತ್ತಡಕ್ಕಿಂತ ಬೇರೇನೂ ಬೇಡ ಎನ್ನುವುದಕ್ಕೆ ಶ್ರೀನಿವಾಸ್‌ಗಿಂತ ಬೇರೆ ಉದಾಹರಣೆಯೇ ಬೇಡವೆನಿಸುತ್ತದೆ. ಹೇಳಿಕೊಳ್ಳುವಂತಹ ದೊಡ್ಡ ಸಂಗೀತದ ಹಿನ್ನೆಲೆ ಶ್ರೀನಿವಾಸ್‌ಗೆ ಇರಲಿಲ್ಲ. ತಂದೆ ಕೆಲವು ಆರ‍್ಕೆಸ್ಟ್ರಾಗಳಲ್ಲಿ ಮ್ಯಾಂಡೊಲಿನ್ ಹಾಗು ಗಿಟಾರ್ ನುಡಿಸುತ್ತಿದ್ದರು. ಮ್ಯಾಂಡೊಲಿನ್ ನೋಡುವಾಗಲೆಲ್ಲಾ ಹುಡುಗನ ಕಲ್ಪನೆ ಗರಿಕೆದರುತ್ತಿತ್ತು. ಅಪ್ಪ ಮನೆಯಲ್ಲಿಲ್ಲದಾಗ ಮೆತ್ತಗೆ ಅದನ್ನು ಎತ್ತಿ ನುಡಿಸಲು ಪ್ರಯತ್ನಿಸುತ್ತಿದ್ದನು. ಮಗನ ಪ್ರತಿಭೆ ಗಮನಿಸಿದ ಅಪ್ಪ ತಾನೇ ಕಲಿಸಲು ಪ್ರಾರಂಭಿಸಿದರು. ಆದರೆ ಹಿರಿಯರ ಮನದಲ್ಲಿ ಹಲವು ಗಂಭೀರ ಅನುಮಾನಗಳು – ಈ ಪಾಶ್ಚಿಮಾತ್ಯ ವಾದ್ಯದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಸಾಧ್ಯವೇ, ಇದರಿಂದ ಮಗ ಮುಂದೆ ಬರುವುದಕ್ಕಾಗುತ್ತದೆಯೇ, ಈವರೆಗೆ ಕರ್ನಾಟಕ ಸಂಗೀತವನ್ನು ಇದರಲ್ಲಿ ಯಾರೂ ನುಡಿಸಿಲ್ಲ, ಇಂತಹ ಪಾಶ್ಚಾತ್ಯ ವಾದ್ಯವನ್ನು ಸಾಂಪ್ರದಾಯಿಕ ಸಂಗೀತಲೋಕ ಒಪ್ಪಿಕೊಳ್ಳುವುದೇ, – ಹೀಗೆ. ಪ್ರತಿಭಾವಂತ ಹುಡುಗನ ವಿದ್ಯೆ ಈ ವಾದ್ಯದಿಂದಾಗಿ ಹಾಳಾಗಿಬಿಡುವುದಲ್ಲ ಎನ್ನುವ ಆತಂಕ ಉಳಿದವರನ್ನೂ ಕಾಡಿತ್ತು. ಹಾಗಾಗಿ ಮ್ಯಾಂಡೊಲಿನ್ ಕೈಬಿಟ್ಟು ಬೇರೆ ವಾದ್ಯವನ್ನು ಆರಿಸಿಕೊಳ್ಳಲು ಒತ್ತಾಯಪೂರ್ವಕ ಸಲಹೆಯನ್ನೂ ನೀಡಿದರು.
ಆದರೆ ಕಲಿಯಲು ಪ್ರಾರಂಭಿಸಿದ ನಾಲ್ಕೇ ತಿಂಗಳೊಳಗೆ ಬಾಲಪಾಠಗಳನ್ನೆಲ್ಲಾ ಅರಗಿಸಿಕೊಂಡು, ಸಂಗೀತಗಾರರಿಗೆ ಅದರಲ್ಲೂ ವಾದಕರಿಗೆ ಸವಾಲೆಸೆವ ಭೈರವಿ ರಾಗದ ವೀರಿಬೋನಿ ವರ್ಣದ ಅಭ್ಯಾಸ ಪ್ರಾರಂಭ. ಕೆಲವೇ ದಿನಗಳಲ್ಲಿ ಚಂಬೈ ವೈದ್ಯನಾಥ ಭಾಗವತರ ಶಿಷ್ಯರಾಗಿದ್ದ ರುದ್ರರಾಜು ಸುಬ್ಬರಾಜು ಅವರಲ್ಲಿ ಶಿಷ್ಯವೃತ್ತಿ. ಗುರುಗಳಿಗೆ ಈ ವಾದ್ಯ ಸಂಪೂರ್ಣವಾಗಿ ಅಪರಿಚಿತ. ಅವರು ಹಾಡುತ್ತಿದ್ದರು, ಇವನು ವಾದ್ಯದಲ್ಲಿ ನುಡಿಸುತ್ತಿದ್ದ. ಅದು ಅನುಕೂಲವೇ ಆಯಿತೆನಿಸುತ್ತದೆ. ಗುರುವಿಗೆ ಶಿಷ್ಯನ ಬಗ್ಗೆ ಅಪಾರ ಹೆಮ್ಮೆ, ಪ್ರೀತಿ. ಬರೀ ತಾವು ಹಾಡುವುದನ್ನು ಕೇಳಿ ಸಂಗೀತದ ಸೂಕ್ಷ್ಮವನ್ನೆಲ್ಲಾ ಗ್ರಹಿಸುತ್ತಿದ್ದ ರೀತಿ, ಶಿಷ್ಯನ ಅಸಾಧಾರಣ ನೆನಪಿನಶಕ್ತಿ, ಲಯಜ್ಞಾನ ಇವನ್ನು ವಿವರಿಸುವುದೇ ಅವರಿಗೊಂದು ಖುಷಿ. ಶ್ರೀನಿವಾಸ್‌ಗೆ ಸಂಗೀತದ ಸ್ವರಲಿಪಿ ಓದುವುದಕ್ಕೆ ಬರುತ್ತಿತ್ತು ಆದರೆ ಶ್ರೀನಿವಾಸ್ ನಿಜವಾಗಿಯೂ ಕಲಿತಿದ್ದು ತನ್ನ ಕಿವಿ ಮತ್ತು ಮನಸ್ಸಿನ’ ಮೂಲಕ ಎಂಬ ಗಮನಾರ್ಹ ಅಂಶವನ್ನು ಅವರ ಗುರು ಹೇಳುತ್ತಾರೆ. ಶಿಷ್ಯನಿಗೂ ಅವರ ಬಗ್ಗೆ ಅಪಾರ ಗೌರವ ಅವರೊಬ್ಬರೂ ಮಹಾನ್ ಗುರು, ಅವರಂತಹ ಗುರು ಸಿಗುವುದಕ್ಕೆ ಪುಣ್ಯ ಮಾಡಿರಬೇಕು. ತಾನಿರುವ ಕಟ್ಟಡದಲ್ಲೇ ತನಗಂತಹ ಅವಕಾಶ ಸಿಕ್ಕಿದ್ದು ತನ್ನ ಅದೃಷ್ಟ ಅಂದುಕೊಳ್ಳುತ್ತಿದ್ದರು ಶ್ರೀನಿವಾಸ್.
ಕರ್ನಾಟಕ ಶಾಸ್ತ್ರೀಯ ಸಂಗೀತದ ಕ್ಷೇತ್ರದಲ್ಲಿ ಹಲವು ಬಾಲ ಪ್ರತಿಭೆಗಳು ಬಂದರು. ಕೆಲವರು ಸಂಗೀತದ ತಾಂತ್ರಿಕ ಅಂಶಗಳನ್ನಷ್ಟನ್ನೇ ಗ್ರಹಿಸಿರುತ್ತಾರೆ, ಬೇಕಾದ ಪಕ್ವತೆ ದಕ್ಕಿರುವುದಿಲ್ಲ್ಲ. ಹಾಗಾಗಿ ಬಂದಷ್ಟೆ ಬೇಗ ಮರೆಯಾಗಿ ಬಿಡುತ್ತಾರೆ. ಪಕ್ವತೆ ದಕ್ಕುವುದು ಕೆಲವರಿಗಷ್ಟೇ. ಅಂತಹ ಕೆಲವೇ ಕೆಲವರ ಪಟ್ಟಿಗೆ ಫ್ಲೂಟ್ ಮಾಲಿ, ಮೃದಂಗದ ಪಾಲ್ಘಾಟ್ ಮಣಿಅಯ್ಯರ್, ವೀಣಾ ಬಾಲಚಂದರ್, ಚಿತ್ರವೀಣಾ ರವಿಕಿರಣ್, ಬಾಲಮುರುಳಿಕೃಷ್ಣ, ಮ್ಯಾಂಡೊಲಿನ್ ಶ್ರೀನಿವಾಸ್ ಸೇರುತ್ತಾರೆ. ಮಾಲಿ, ರವಿಕಿರಣ್, ಬಾಲಚಂದರ್ ಅವರಂತೆ ಶ್ರೀನಿವಾಸ್ ಕೂಡ ತಾವು ಆರಿಸಿಕೊಂಡ ವಾದ್ಯಕ್ಕೆ ಒಂದು ಘನತೆಯನ್ನು ತಂದುಕೊಟ್ಟರು. ಅಷ್ಟೇ ಅಲ್ಲ ಅವರ ಕೈಯಿನ ಮಾಂತ್ರಿಕಸ್ಪರ್ಶದ ನಂತರ ಆ ಮಾಧ್ಯಮವೇ ಬದಲಾಗಿಬಿಟ್ಟಿತು. ಇವರೆಲ್ಲರಿಗಿಂತ ಶ್ರೀನಿವಾಸ್ ಸ್ವಲ್ಪ ಭಿನ್ನ. ಉಳಿದವರು ಕೈಗೆತ್ತಿಕೊಂಡ ವಾದ್ಯಗಳು ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ಅಪರಿಚಿತವಾಗಿರಲಿಲ್ಲ. ಆದರೆ ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಮ್ಯಾಂಡೊಲಿನ್ ಬಳಕೆಯಲ್ಲೇ ಇರಲಿಲ್ಲ್ಲ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಅದನ್ನು ಪರಿಪೂರ್ಣವಾಗಿ ರೂಪಿಸಿದ ಕೀರ್ತಿ ಸಂಪೂರ್ಣವಾಗಿ ಶ್ರೀನಿವಾಸ್ ಅವರಿಗೇ ಸೇರಬೇಕು.
ಶ್ರೀನಿವಾಸ್‌ಗೆ ಸಂಗೀತದ ಸಾಧ್ಯತೆಗಳನ್ನು ಅರ್ಥಮಾಡಿಕೊಂಡು ಅರಗಿಸಿಕೊಳ್ಳುತ್ತಲೇ ವಾದ್ಯದ ಅಪರಿಮಿತ ಸಾಧ್ಯತೆಗಳನ್ನು ಕಂಡುಕೊಂಡು ಅದರಲ್ಲಿ ಕರ್ನಾಟಕ ಸಂಗೀತವನ್ನು ಅದರಲ್ಲಿ ಅಭಿವ್ಯಕ್ತಿಸಬೇಕಾಗಿತ್ತು. ಕರ್ನಾಟಕ ಸಂಗೀತದ ಜಾಯಮಾನಕ್ಕೆ ಒಗ್ಗಿಸಲು ಮ್ಯಾಂಡೊಲಿನ್ನಿನಲ್ಲಿ ಶ್ರೀನಿವಾಸನ್ ಒಂದಿಷ್ಟು ಬದಲಾವಣೆಗಳನ್ನು ಮಾಡಿಕೊಂಡರು. ಪಾಶ್ಚಿಮಾತ್ಯ ಮ್ಯಾಂಡೊಲಿನ್ನಿನಲ್ಲಿ ಎಂಟು ತಂತಿಗಳಿದ್ದವು. ಶ್ರೀನಿವಾಸ್ ಅದನ್ನು ಐದಕ್ಕೆ ಇಳಿಸಿಕೊಂಡರು. ಇದರಿಂದ ಮಂದ್ರಸ್ಥಾಯಿ ನುಡಿಸುವುದಕ್ಕೆ ತುಂಬಾ ಅನುಕೂಲವಾಯಿತು. ಕರ್ನಾಟಕ ಸಂಗೀತದ ಅಸ್ಮಿತೆ ಇರುವುದೇ ಅದರ ವೈವಿಧ್ಯಮಯ ಹಾಗೂ ಸಂಕೀರ್ಣ ಗಮಕಗಳಲ್ಲಿ. ಕರ್ನಾಟಕ ಸಂಗೀತದ ಜೀವಾಳವೇ ಈ ಗಮಕಗಳು. ಇವು ಕರ್ನಾಟಕ ಸಂಗೀತಕ್ಕೆ ಒಂದು ವಿಶಿಷ್ಟತೆಯನ್ನು ತಂದುಕೊಟ್ಟಿವೆ. ವಿಭಿನ್ನ ರಾಗಗಳಲ್ಲಿ ಹಾಗೂ ಒಂದೇ ರಾಗದೊಳಗೆ ವಿವಿಧ ಸ್ವರಗಳ ನಡುವೆ ಈ ಗಮಕಗಳು ವ್ಯವಹರಿಸುವ ರೀತಿಯೇ ತುಂಬಾ ಸಂಕೀರ್ಣವಾದದ್ದು. ವಿದ್ವಾನ್ ಟಿ.ಎಂ.ಕೃಷ್ಣ ಹೇಳುವಂತೆ ಇವುಗಳನ್ನು ಅತ್ಯಂತ ಕರಾರುವಾಕ್ಕಾಗಿ ಹೊರಹೊಮ್ಮಿಸುವುದು ಗಾಯನದಲ್ಲಿ ಕೂಡ ತುಂಬಾ ಕಷ್ಟ. ಇನ್ನು ವಾದನದಲ್ಲಂತೂ ಅದು ಸವಾಲೇ ಸರಿ. ಈ ಸೂಕ್ಷ್ಮತೆ ಹಲವು ವಾದ್ಯಗಳಲ್ಲಿ ಸಾಧ್ಯವಾಗುವುದಿಲ್ಲ, ಅಷ್ಟೇ ಅಲ್ಲ ಕೆಲವು ವಾದ್ಯಗಳು ಇವುಗಳನ್ನು ವಿರೂಪಗೊಳಿಸಿಬಿಡುತ್ತವೆ. ಈ ಸವಾಲಿಗೆ ಅತ್ಯಂತ ಯಶಸ್ವಿಯಾಗಿ, ಸೃಜನಶೀಲವಾಗಿ ಮುಖಾಮುಖಿಯಾಗಿ, ಈ ಪದ್ಧತಿಯ ಅತಿ ಸೂಕ್ಷ್ಮ ಗಮಕವನ್ನೂ ಅತ್ಯಂತ ಸಮರ್ಪಕವಾಗಿ, ಕರಾರುವಾಕ್ಕಾಗಿ ಮ್ಯಾಂಡೋಲಿನ್ನಿನಲ್ಲಿ ಮೂಡಿಸಿದ್ದು ಶ್ರೀನಿವಾಸ್. ಕರ್ನಾಟಕ ಸಂಗೀತದಲ್ಲಿ ಪ್ರತಿಯೊಬ್ಬ ಸಂಗೀತಗಾರನನ್ನು ಒರೆಗೆ ಹಚ್ಚುವ ತೋಡಿ, ಬೇಗಡೆ ಮೊದಲಾದ ರಾಗಗಳು ಶ್ರೀನಿವಾಸರ ಮ್ಯಾಂಡೊಲಿನ್ನಿನಲ್ಲಿ ಪರಿಪೂರ್ಣವಾಗಿ ಮೂಡಿ ಬರುತ್ತಿದ್ದವು.
ಕೆಲವು ವಾದ್ಯಗಳಿಗೆ ಕೆಲವು ಮಿತಿಗಳಿರುತ್ತವೆ. ಹಾಗಿದ್ದಾಗ್ಯೂ ಅವುಗಳನ್ನು ಈ ಸಂಗೀತಕ್ಕೆ ಒಗ್ಗಿಸಲು ಹೊರಟಾಗ ಆ ಸಂಗೀತದ ಹರವು ಕುಗ್ಗಿಹೋಗುತ್ತದೆ. ಎಷ್ಟೇ ಪ್ರಯತ್ನಿಸಿದರೂ ಅವುಗಳಿಗೆ ಕರ್ನಾಟಕ ಸಂಗೀತದ ಕಲಾತ್ಮಕತೆಯನ್ನು ಅಭಿವ್ಯಕ್ತಿಸಲು ಆಗುವುದಿಲ್ಲ. ಇದು ಕಲಾವಿದನ ಮಿತಿಯಲ್ಲ. ವಾದ್ಯದ ಮಿತಿ. ಹಾರ್ಮೋನಿಯಂ, ಜಲತರಂಗ್ ಇವುಗಳಿಗೆ ಇಂತಹ ಮಿತಿ ಇತ್ತು. ಟಿ.ಎಂ. ಕೃಷ್ಣ ಗುರುತಿಸುವಂತೆ ಮ್ಯಾಂಡೊಲಿನ್ನಿಗೆ ವಾದ್ಯವಾಗಿ ಕರ್ನಾಟಕ ಸಂಗೀತಕ್ಕೆ ಒಗ್ಗಿಕೊಳ್ಳುವ ಸಾಧ್ಯತೆ ಇತ್ತು ಮತ್ತು ಶ್ರೀನಿವಾಸ್‌ಗೆ ಅಗಾಧವಾದ ಪ್ರತಿಭೆಯಿತ್ತು. ಎರಡೂ ಒಂದಕ್ಕೊಂದು ಮೇಳೈಸಿತು. ಹೀಗೆ ಇನ್ನೂ ಕೆಲವು ಪಾಶ್ಚಾತ್ಯವಾದ್ಯಗಳು ತುಂಬಾ ಯಶಸ್ವಿಯಾಗಿ ಕರ್ನಾಟಕ ಸಂಗೀತಕ್ಕೆ ಸೇರ್ಪಡೆಯಾಗಿವೆ. ವಯೋಲಿನ್ ರೂಪಾಂತರಗೊಂಡು ಕರ್ನಾಟಕ ಸಂಗೀತದ ಭಾಗವಾಗಿಬಿಟ್ಟಿದೆ. ಎ.ಕೆ.ಸಿ. ನಟರಾಜನ್ ಅವರು ಕರ್ನಾಟಕ ಸಂಗೀತದ ಘನತೆಗೆ ದಕ್ಕೆಯಾಗದಂತೆ ಕ್ಲಾರಿಯೋನೆಟ್ಟನ್ನು ಒಗ್ಗಿಸಿದ್ದಾರೆ.
ಕೇವಲ ಪ್ರತಿಭೆ ಇದ್ದುಬಿಟ್ಟರೆ ಸಾಲದು. ಜೊತೆಗೆ ತಕ್ಕ ಪರಿಶ್ರಮ ಮತ್ತು ಸಾಧನೆಯಿದ್ದಾಗ ಮಾತ್ರ ಅದು ಹಲವು ಕಾಲ ನಿಲ್ಲಬಲ್ಲದು. ಸಂದರ್ಶನವೊಂದರಲ್ಲಿ, ನಾನು ಮ್ಯಾಂಡೊಲಿನ್ ಕಲಿಯಲಾರಂಭಿಸಿದಾಗ ದಿನಕ್ಕೆ ಎಂಟು-ಹತ್ತು ಗಂಟೆಗಳ ಕಾಲ ಅಭ್ಯಾಸ ಮಾಡುತ್ತಿದ್ದೆ. ಈಗ ವಿಶ್ವಪರ್ಯಟನೆಯ ಹಾಗೂ ಕಾರ್ಯಕ್ರಮಗಳ ಒತ್ತಡವಿರುವಾಗಲೂ ಮದ್ರಾಸಿನಲ್ಲಿ ಇದ್ದಾಗಂತೂ ಕೊನೇಪಕ್ಷ ಐದು ಗಂಟೆಗಳ ಕಾಲ ಅಭ್ಯಾಸ ಮಾಡುತ್ತೇನೆ. ಸರಳೆಗಳನ್ನು ಮಾಯಾಮಾಳವಗೌಳದಲ್ಲಿ, ತ್ರಿಕಾಲದಲ್ಲಿ ನುಡಿಸಿ, ನಂತರ ತೋಡಿ, ಕಲ್ಯಾಣಿ, ಶಂಕರಾಭರಣ ಮುಂತಾದ ಮೇಳಕರ್ತ ರಾಗಗಳನ್ನು ನುಡಿಸುತ್ತೇನೆ. ದಿನಕ್ಕೆ ಒಂದು ರಾಗವನ್ನು ನುಡಿಸುತ್ತೇನೆ. ಹಾಗೆ ನುಡಿಸುವಾಗ ಎಲ್ಲ ಗಮಕಗಳೂ ಶುದ್ಧವಾಗಿ ಬರುತ್ತಿವೆ ಎನ್ನುವುದನ್ನು ಖಚಿತಪಡಿಸಿಕೊಳ್ಳುತ್ತೇನೆ ಎಂದು ಹೇಳಿದ್ದರು.
ಮೊದಲಲ್ಲಿ ಅವರ ಸಂಗೀತದಲ್ಲಿ ವೇಗ ಹೆಚ್ಚು ಇತ್ತು. ಕ್ರಮೇಣ ಒಳ್ಳೆಯ ಸಂಗೀತದಲ್ಲಿ ಅವಸರಕ್ಕೆ ಸ್ಥಾನವಿಲ್ಲ ಎಂಬುದನ್ನು ಮನಗಂಡ ಶ್ರೀನಿವಾಸ್ ಅವರ ಸಂಗೀತ ಸಾವಕಾಶದಿಂದ ಅರಳಲಾರಂಭಿಸಿತು. ಅವರ ಕೃತಿಪ್ರಸ್ತುತಿಯಲ್ಲಿ ಹೊಮ್ಮುವ ಮನೋಧರ್ಮದಿಂದ ಅವರ ಸಂಗೀತ ಉಳಿದ ಹಲವರಿಗಿಂತ ಭಿನ್ನವಾಗುತ್ತದೆ. ಸಂಗತಿಗಳು ಒಂದಾದ ಮೇಲೊಂದು ನಿರಂತರವಾಗಿ ಅನಾವರಣಗೊಳ್ಳುತ್ತಾ ಹೋಗುತ್ತವೆ. ಅವರಿಗೆ ಅನೇಕ ವರ್ಷಗಳು ವಯೋಲಿನ್ ಸಹಕಾರ ನೀಡಿದ ಎಚ್.ಕೆ.ವೆಂಕಟರಾಮ್ ಅವರು ಶ್ರೀನಿವಾಸ್ ಪ್ರಸ್ತುತಪಡಿಸುತ್ತಿದ್ದ ’ರಘುವಂಶಸುಧಾ’ ಕೃತಿಯಲ್ಲಿ ಐವತ್ತು ಅರವತ್ತು ಸಂಗತಿಗಳು ಒಂದಾದ ಮೇಲೊಂದರಂತೆ ಹೊರಹೊಮ್ಮುತ್ತಿದ್ದುದನ್ನು ಬೆರಗಿನಿಂದ ನೆನೆಸಿಕೊಳ್ಳುತ್ತಾರೆ.
ಮ್ಯಾಂಡೊಲಿನ್‌ಗೆ ಇವರು ಮಾಡಿಕೊಂಡ ಬದಲಾವಣೆಯಿಂದ ಅದರ ಸಾಧ್ಯತೆ ಹೆಚ್ಚಾಯಿತೇ ಹೊರತು ವಾದ್ಯದ ಮೂಲ ಸಾಧ್ಯತೆಗೇನು ಧಕ್ಕೆಯಾಗಲಿಲ್ಲ. ಹಾಗಾಗಿಯೇ ಈ ಆವಿಷ್ಕಾರವನ್ನು ಪಾಶ್ಚಾತ್ಯರೂ ಮೆಚ್ಚಿಕೊಂಡಿದ್ದರು. ಶ್ರೀನಿವಾಸ್ ಒಂದು ಘಟನೆಯನ್ನು ನೆನಪಿಸಿಕೊಳ್ಳುತ್ತಾ ವೆಸ್ಟ್ಟ್ ಬರ್ಲಿನ್ನಿನಲ್ಲಿ ವಿಶೇಷವಾಗಿ ಮ್ಯಾಂಡೊಲಿನ್‌ಗೆಂದೇ ನಡೆದ ಜಾಸ್ ಫೆಸ್ಟಿವಲ್ಲಿನಲ್ಲಿ ನನಗೆ ಒಂದು ಗಂಟೆ ನುಡಿಸಲು ಅವಕಾಶ ನೀಡಿದ್ದರು. ಕಾರ್ಯಕ್ರಮ ಮುಗಿದ ಮೇಲೆ ಪ್ರೇಕ್ಷಕರು ನನ್ನ ಸಂಗೀತವನ್ನು ಮತ್ತಷ್ಟು ಕೇಳಲು ಬಯಸಿದರು. ಸ್ಥಳೀಯರ ಸಂಗೀತ ಮುಗಿದ ಮೇಲೆ ನನಗೆ ಮತ್ತೊಂದು ಗಂಟೆ ನುಡಿಸಲು ಕೇಳಿಕೊಂಡರು. ಅಷ್ಟೇ ಅಲ್ಲ ಮುಕ್ತಾಯದ ಕಾರ್ಯಕ್ರಮವೂ ನನ್ನ ಪಾಲಿಗೆ ಬಂತು. ಪಾಲ್ಗೊಂಡಿದ್ದ ಎಲ್ಲಾ ಕಲಾವಿದರು ಒಟ್ಟಾಗಿ ಸೇರಿ ಅದನ್ನು ನುಡಿಸಬೇಕಿತ್ತು. ಇಡೀ ಬ್ಯಾಂಡ್ ನುಡಿಸುವುದಕ್ಕೆ ಕೀರವಾಣಿಯಲ್ಲಿ ಒಂದು ರಚನೆಯನ್ನು ಮಾಡಿದೆ. ಅದು ತುಂಬಾ ಯಶಸ್ವಿಯಾಯಿತು ಎಂದು ಹೇಳುತ್ತಾರೆ.
ಈ ಜಾಸ್ ಸಮ್ಮೇಳನದಲ್ಲಿ ೧೪ ವರ್ಷದ ಈ ಹುಡುಗನ ಪ್ರತಿಭೆಯನ್ನು ನೋಡಿ ಬೆರಗಾದ ಜಾನ್ ಮಾಕ್‌ಲಾಗ್‌ಲಿನ್ ’ಶಕ್ತಿ’ ತಂಡಕ್ಕೆ ಶ್ರೀನಿವಾಸ್ ಅವರನ್ನು ಆಹ್ವಾನಿಸುತ್ತಾರೆ. ಅದರಲ್ಲಿ ಭಾರತದ ಜಾಕಿರ್ ಹುಸೇನ್, ಶಂಕರ್ ಮಹದೇವನ್, ವಿ ಸೆಲ್ವಗಣೇಶ್ ಮೊದಲಾದ ಖ್ಯಾತನಾಮರೆಲ್ಲಾ ಇದ್ದರು. ಇದರಿಂದ ಶ್ರೀನಿವಾಸ್ ಅವರ ಬದುಕಿನಲ್ಲೊಂದು ಹೊಸ ಹಾದಿ ತೆರೆಯಿತು. ಈ ತಂಡದೊಂದಿಗೆ ಇವರು ವಿಶ್ವಪರ್ಯಟನೆ ಮಾಡಿದರು. ಈ ಒಡನಾಟದ ಪ್ರಭಾವ ಇವರ ಸಂಗೀತದ ಮೇಲೂ ಆಗಿದೆ. ಆ ಬಗ್ಗೆ ಕೆಲವರ ತಕರಾರೂ ಇದೆ. ಈ ವಿಶ್ವಖ್ಯಾತಿಯ ನಡುವೆ ಸ್ಥಳೀಯ ಸಂಗೀತ ಕಾರ್ಯಕ್ರಮಗಳನ್ನು ಇವರು ಕಡೆಗಣಿಸಲಿಲ್ಲ್ಲ, ಹಿಂದಿನಷ್ಟೇ ತೀವ್ರತೆಯಿಂದ ಅದರಲ್ಲಿ ತೊಡಗಿಕೊಂಡಿದ್ದರು. ಸಣ್ಣಪುಟ್ಟ ಸಭೆ, ದೇವಸ್ಥಾನಗಳಲ್ಲಿ ಕಾರ್ಯಕ್ರಮ ನೀಡುತ್ತಲೇ ಇದ್ದರು.
ಇವರ ಮುಡಿಗೇರಿದ ಪ್ರಶಸ್ತಿಗಳು ಹಲವಾರು – ಪದ್ಮಶ್ರೀ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ತಮಿಳುನಾಡು ಸರ್ಕಾರದ ಆಸ್ಥಾನ ವಿದ್ವಾನ್ ಪ್ರಶಸ್ತಿ, ಮೈಸೂರು ಟಿ ಚೌಡಯ್ಯ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ, ಮ್ಯೂಸಿಕ್ ಅಕಾಡೆಮಿಯ ಬೆಸ್ಟ್ ಆರ್ಟಿಸ್ಟ್ ಪ್ರಶಸ್ತಿ, ರಾಜೀವ್ ಗಾಂಧಿ ನ್ಯಾಷನಲ್ ಇಂಟಿಗ್ರೇಷನ್ ಪ್ರಶಸ್ತಿ ಹೀಗೆ ಹಲವಾರು.
ಇವರ ಸಹೋದರ ಯು ರಾಜೇಶ್ ಮ್ಯಾಂಡೊಲಿನ್‌ವಾದನ ಮುಂದುವರೆಸಿದ್ದಾರೆ. ೩೦ಕ್ಕೂ ಹೆಚ್ಚು ಶಿಷ್ಯರಿದ್ದಾರೆ. ಆದರೇನು, ಶ್ರೀನಿವಾಸ್ ಇಲ್ಲ. ಆ ಕೊರತೆ ತುಂಬಿಸುವುದಕ್ಕೆ ಸಾಧ್ಯವೇ ಇಲ್ಲ. ವಿದ್ಯೆ, ಕೀರ್ತಿ, ಸಾವು ಎಲ್ಲವೂ ಇವರ ಪಾಲಿಗೆ ಬೇಗಲೇ ಬಂದುಬಿಟ್ಟಿತು.
ಶ್ರೀನಿವಾಸ್ ಇಲ್ಲದಿದ್ದರೂ ಅವರ ಸಂಗೀತ ಇಂದು ನಮ್ಮೊಂದಿಗಿದೆ ಅನ್ನುವುದು ನಮ್ಮ ಸಮಾಧಾನಕ್ಕೆ ಹೇಳಿಕೊಳ್ಳುವ ಮಾತು ಅಷ್ಟೆ. ಶ್ರೀನಿವಾಸ್‌ಗೆ ಸಾವು ಬರಬಾರದಿತ್ತು. ಅದೂ ಇಷ್ಟು ಬೇಗ.
ಟಿ ಎಸ್ ವೇಣುಗೋಪಾಲ್ ಹಾಗೂ ಶೈಲಜ
ಸಿ ಎಚ್ ೭೩, ೭ನೇ ಮುಖ್ಯ ರಸ್ತೆ, ಸರಸ್ವತಿಪುರಂ
ಮೈಸೂರು-೯

Recommended Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.