ಕುಂಚ ಹಿಡಿದ ಕೈ ಮೀಟಿದ ತಂತಿ

 In RAGAMALA

ಟಿ ಎಸ್ ವೇಣುಗೋಪಾಲ್

[ಕೆ ವೆಂಕಟಪ್ಪನವರು ಹೆಸರಾಂತ ಕಲಾವಿದರು, ಶಿಲ್ಪಕಲಾವಿದರು. ಅವರಿಗೆ ಅಷ್ಟೇ ಪರಿಶ್ರಮ ಸಂಗೀತದಲ್ಲಿಯೂ ಇತ್ತು. ವೀಣೆಯನ್ನು ಶೇಷಣ್ಣನವರ ಬಳಿ ಕಲಿತಿದ್ದರು. ಶಾಸ್ತ್ರದ ತಿಳುವಳಿಕೆಯೂ ಇತ್ತು. ಅವರ ಸಂಗೀತದ ಆಯಾಮದ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಅವರು ವೇದಿಕೆ ಕಲಾವಿದರಾಗಲು ಕಲಿತವರಲ್ಲ. ಆತ್ಮಸಂತೋಷಕ್ಕಾಗಿ ನುಡಿಸಿಕೊಳ್ಳುತ್ತಿದ್ದವರು. ವಿ ಸೀತಾರಾಮಯ್ಯ, ಎಸ್ ಕೆ ರಾಮಚಂದ್ರರಾಯರು ಅವರ ಸಂಗೀತದ ಬಗ್ಗೆ ಬರೆದಿದ್ದಾರೆ. ಅವರನ್ನು ನಿಕಟವಾಗಿ ಬಲ್ಲ ಬಿ ಜಿ ಎಲ್ ಸ್ವಾಮಿಯವರು ಒಂದು ಸೊಗಸಾದ ಲೇಖನವನ್ನು ಬರೆದಿದ್ದಾರೆ. ಜೊತೆಗೆ ವೆಂಕಟಪ್ಪನವರ ಡೈರಿಯು ವೆಂಕಟಪ್ಪ: ಸಮಕಾಲೀನ ಪುನರವಲೋಕನ ಎಂದು ಪ್ರಕಟವಾಗಿದೆ. ನನಗೆ ವಿ ಸೀತಾರಾಮಯ್ಯನವರ ಪುಸ್ತಕ ಸಿಗಲಿಲ್ಲ. ಜೊತೆಗೆ ಉಳಿದ ಆಕರಗಳನ್ನು ಬಳಸಿಕೊಂಡು ಈ ಲೇಖನವನ್ನು ಸಿದ್ದಪಡಿಸಲಾಗಿದೆ. ಆ ಮಟ್ಟಿಗೆ ಈ ಲೇಖನ ಅಪೂರ್ಣ.]ಕೆ ವೆಂಕಟಪ್ಪನವರು ಚಿತ್ರಗಾರರ ಮನೆತನಕ್ಕೆ ಸೇರಿದವರು. ಅರಮನೆ, ಮಹಲು, ಗುಡಿ, ಚಾವಡಿಗಳಲ್ಲಿ ಗೋಡೆಗಳ ಮೇಲೆ ಬಣ್ಣಗಳಿಂದ ಚಿತ್ರಗಳನ್ನು ಬಿಡಿಸುವುದು, ಹಜಾರಗಳನ್ನು, ದಿವಾನಖಾನೆಗಳನ್ನು ಸಿಂಗರಿಸುವುದು ಇವರ ಕಸುಬು. ಇವರು ಹುಟ್ಟಿದ್ದು ಮೈಸೂರಿನಲ್ಲಿ, ೧೮೮೬ ಜೂನ್ ೨೩ರಂದು. ವೆಂಕಟಪ್ಪನವರ ತಂದೆ ದುರ್ಗದ ಕೃಷ್ಣಪ್ಪ ಮೈಸೂರು ಅರಮನೆಯಲ್ಲಿ ಖಾಸಾ ಚಿತ್ರಗಾರರಾಗಿ ಕೆಲಸ ಮಾಡುತ್ತಿದ್ದರು. ಅರಮನೆಯ ನೆರೆಯಲ್ಲೇ ವಾಸಿಸುತ್ತಿದ್ದರು. ಹಾಗಾಗಿ ವೆಂಕಟಪ್ಪನವರು ಬೆಳೆದದ್ದು ಅರಮನೆಯ ವಾತಾವರಣದಲ್ಲಿ. ಅರಮನೆಯ ನೆರವಿನಿಂದಲೇ ಮದರಾಸಿನ ಕಲಾಶಾಲೆ, ಕಲ್ಕತ್ತೆಯ ಕಲಾಶಾಲೆಯಲ್ಲಿ ಚಿತ್ರಕಲೆ ಕಲಿತರು. ಮೈಸೂರಿನ ರಾಜರ ಋಣ ಎಂದುಕೊಂಡು ಮೈಸೂರಿನಲ್ಲೇ ಉಳಿದರು. ಅಲ್ಲೇ ಚಿತ್ರಗಾರರಾಗಿ ಕೆಲಸ ಪ್ರಾರಂಭಿಸಿದರು. ಅವರ ಚಿತ್ರದ ಗುಣಮಟ್ಟವನ್ನು ಗಮನಿಸಿ, ವಯಸ್ಸಿನಲ್ಲಿ ಸಣ್ಣವರಾಗಿದ್ದರೂ ದೊಡ್ಡವರಿಗೆ ನೀಡುತ್ತಿದ್ದ ಮಜೂರಿಯನ್ನೇ ಅವರಿಗೂ ನೀಡುತ್ತಿದ್ದರು. ಅದು ಸ್ವಾಭಾವಿಕವಾಗಿಯೇ ಹಲವು ಹಿರಿಯರಿಗೆ ಬೇಸರ ತಂದಿತ್ತು. ಆಗ ಹಿರಿಯ ಕಲಾವಿದರೊಬ್ಬರು ಮೀಸೆ ಹೊತ್ತವರಿಗೂ ಒಂದೇ ಮಜೂರಿ, ಮೀಸೆ ಕಾಣದ ಹುಡುಗನಿಗೂ ಒಂದೇ ಮಜೂರಿ! ಇದು ಯಾವ ನ್ಯಾಯ ಅಂತ ಕೇಳಿದ್ದರಂತೆ. ಅದಕ್ಕೆ ವೆಂಕಟಪ್ಪ ಕೆಲಸ ಮಾಡುವುದು ಮೀಸೆಯಲ್ಲ, ಕೈ ಎಂದು ಉತ್ತರಿಸಿದ್ದರು. ಮೊದಲಿನಿಂದಲೂ ನೇರ ಮಾತು, ಸ್ವಾಭಿಮಾನಿ.
ಗುರುಗಳಾದ ಹ್ಯಾವೆಲ್ ಮತ್ತು ಅವನೀಂದ್ರ್ರನಾಥ ಟಾಗೂರರ ಗಾಢ ಪ್ರಭಾವ ಅವರ ಮೇಲಾಗಿತ್ತು. ಅವರೆಲ್ಲಾ ಭಾರತೀಯ ಕಲಾಪರಂಪರೆಗೆ ಸಮುಚಿತವಾದ ಕಲಾಶೈಲಿಯನ್ನು ಬೆಳೆಸಿಕೊಳ್ಳಬೇಕೆಂದು ನಂಬಿದವರು. ಚಿತ್ರಕಲೆ ಹಾಗೂ ಶಿಲ್ಪದಲ್ಲಿ ಅಪಾರ ಹೆಸರು ಮಾಡಿದ್ದ ವೆಂಕಟಪ್ಪನವರಿಗೆ ಸಂಗೀತದ ಒಲವು ಬಂದಿದ್ದು ಆಕಸ್ಮಿಕ. ಇವರು ಕಲ್ಕತ್ತೆಯಲ್ಲಿ ಇದ್ದಾಗ ಶ್ರೀರಂಗದ ರಾಮಸ್ವಾಮಿ ಆಯ್ಯಂಗಾರ್ ಎಂಬ ಸಂಗೀತ ವಿದ್ವಾಂಸರ ಪರಿಚಯ ಆಯಿತು. ಕಲ್ಕತ್ತೆಯಲ್ಲಿ ಸಂಗೀತ ಕಲಿಸುವುದಕ್ಕೆ ಅವಕಾಶ ಸಿಗಬಹುದೆಂಬ ನಿರೀಕ್ಷೆಯಿಂದ ಅಲ್ಲಿಗೆ ಬಂದಿದ್ದರು. ಅವರು ವೀಣೆ ಶೇಷಣ್ಣನವರ ಶಿಷ್ಯರು. ವೆಂಕಟಪ್ಪನವರು ಮೈಸೂರಿ ನವರು ಎಂದು ತಿಳಿದು ಅವರಲ್ಲಿಗೆ ಬಂದರು. ವೆಂಕಟಪ್ಟನವರ ಬಳಿಯಲ್ಲಿ ಒಂದು ವೀಣೆ ಇತ್ತು. ಅದನ್ನು ನೋಡಿ ಇವರಿಗೆ ವೀಣೆ ಕಲಿಸಲು ಪ್ರಾರಂಭಿಸಿದರು. ಆದರೆ ಬೇರೆ ಯಾರೂ ಶಿಷ್ಯರು ಸಿಗದಿದ್ದರಿಂದ ನಿರಾಸೆಯಿಂದ ಕಲ್ಕತ್ತ ಬಿಟ್ಟು ಹೊರಟರು. ಆದರೆ ವೆಂಕಟಪ್ಪನವರ ಸಂಗೀತಾಸಕ್ತಿ ಕಡಿಮೆಯಾಗಲಿಲ್ಲ. ಕಲಿತ ಪಾಠವನ್ನು ರೂಢಿಸಿಕೊಂಡರು, ಶಾಸ್ತ್ರ ಗ್ರಂಥಗಳನ್ನು ಓದಿದರು.
ಭಾರತೀಯ ಸಂಗೀತದಲ್ಲಿ ಶ್ರುತಿಗಳ ಸಂಖ್ಯೆ ಎಷ್ಟು ಎಂಬ ಚರ್ಚೆ ಈ ಶತಮಾನದ ಆದಿಭಾಗದಲ್ಲಿ ನಡೆಯುತ್ತಿತ್ತು. ಶ್ರುತಿಸಂಖ್ಯೆ ೨೨ ಎಂಬುದು ವೆಂಕಟಪ್ಪನವರ ಮತ. ಇದನ್ನು ಶ್ರುತಪಡಿಸುವುದಕ್ಕಾಗಿ ಎಂದೇ ಶ್ರುತಿವೀಣೆ ಎಂಬ ವಾದ್ಯವನ್ನು ತಯಾರಿಸಿದರು. ಶಾಸ್ತ್ರಗ್ರಂಥಗಳಲ್ಲಿ ಹೇಳಿರುವ ಇಪ್ಪತ್ತೆರಡು ಶ್ರುತಿಗಳ ಔಚಿತ್ಯ, ಅಗತ್ಯ ಹಾಗೂ ಪ್ರಯೋಜನಗಳನ್ನು ತಿಳಿಸುವುದು ಇದರ ಉದ್ದೇಶವಾಗಿತ್ತು. ಅದರ ಬಗ್ಗೆ ಅವರಿಗೆ ತುಂಬಾ ಮೆಚ್ಚುಗೆಯಿತ್ತು. ಹಲವು ಹಿರಿಯ ಸಂಗೀತಗಾರರು ಅದನ್ನು ಮೆಚ್ಚಿಕೊಂಡಿದ್ದರು. ಮುಂದೆ ಸುಪ್ರಸಿದ್ಧ ವಯಲಿನ್ ವಿದ್ವಾಂಸರಾಗಿದ್ದ ಮುರುಂಗಪುರಿ ಗೋಪಾಲಕೃಷ್ಣ ಅಯ್ಯರ್ ಪರಿಚಯ ಆಯಿತು. ಅದು ವೆಂಕಟಪ್ಪನವರಲ್ಲಿದ್ದ ಸಂಗೀತಾಭಿರುಚಿಯನ್ನು ಬೆಳೆಸಿತು. ಅವರಿಗೆ ವೀಣೆ ಶೇಷಣ್ಣನವರಲ್ಲಿ ಸಂಗೀತ ಕಲಿಯುವ ಬಯಕೆಯಿತ್ತು. ಆದರೆ ಅವರು ಹೇಳಿಕೊಡುತ್ತಾರೋ ಇಲ್ಲವೋ ಎನ್ನುವ ಅನುಮಾ ವಿತ್ತು.
ಬಂಗಾಲದ ಕಲಾಶಾಲೆಯಲ್ಲಿ ಕಲಿತ ಮೇಲೆ ವೆಂಕಟಪ್ಪನವರಿಗೆ ಲಂಡನ್ನಿಗೆ ಹೋಗಿ ಕಲಿಕೆಯನ್ನು ಮುಂದುವರಿಸಬೇಕೆಂಬ ಆಸೆಯಿತ್ತು. ಆದರೆ ಅದು ಯುದ್ಧದ ಸಮಯವಾದ್ದರಿಂದ ಸಾಧ್ಯವಾಗಲಿಲ್ಲ. ಸಂಗೀತದ ಒಲವು ಹೆಚ್ಚಿತು. ಶೇಷಣ್ಣನವರ ಬಳಿಯಲ್ಲೇ ಕಲಿಯಬೇಕೆಂಬ ಹಂಬಲ. ಆಗ ಅರಮನೆಯ ಸಂಗೀತಶಾಲೆಯಲ್ಲಿ ಶೇಷಣ್ಣನವರು ಶಿಕ್ಷಕರಾಗಿದ್ದರು. ಪ್ರಾರಂಭಿಕ ಶಿಕ್ಷಣವನ್ನು ವೀಣೆ ಸುಬ್ಬಣ್ಣನವರು ನೀಡುತ್ತಿದ್ದರು. ವೆಂಕಟಪ್ಪನವರ ಮನಸ್ಸೆಲ್ಲಾ ಶೇಷಣ್ಣನವರ ಮೇಲೆ. ಇವರಿಗೆ ಸುಬ್ಬಣ್ಣನವರ ಕ್ರಮ ಇಷ್ಟವಾಗುತ್ತಿರಲಿಲ್ಲ. ಜೊತೆಗೆ ಅವರು ಮನಸ್ಸಿಗೆ ಬಂದಾಗ ಬರುತ್ತಿದ್ದರು, ಹಲವು ಬಾರಿ ಶಿಷ್ಯರಿಂದಲೇ ಪಾಠ ಮಾಡಿಸುತ್ತಿದ್ದರು. ತೀರಾ ಶಿಸ್ತಿನ ವ್ಯಕ್ತಿತ್ವದ ವೆಂಕಟಪ್ಪನವರಿಗೆ ಇದು ಸಮ್ಮತವಿರಲಿಲ್ಲ. ಕೊನೆಗೆ ಒಂದು ದಿನ ಶೇಷಣ್ಣನವರಿಂದಲೇ ಕಲಿಯುವ ಸನ್ನಿವೇಶ ಒದಗಿ ಬಂತು. ಅಂದು ವಿದ್ಯಾರ್ಥಿಗಳು ಸುಬ್ಬಣ್ಣನವರಿಗಾಗಿ ಕಾಯುತ್ತಿದ್ದರು. ದಿಢೀರನೆ ಶೇಷಣ್ಣನವರು ಇವರ ತರಗತಿಗೆ ಬಂದರು. ಅವರ ಮುಂದೆ ವೆಂಕಟಪ್ಪ ನವರು ನುಡಿಸುವ ಅವಕಾಶ ಸಿಕ್ಕಿತು. ಅವರಿಂದ ಕಲಿಯುವ ಬಯಕೆಯನ್ನು ಇವರು ತೋಡಿ ಕೊಂಡರು. ಶೇಷಣ್ಣನವರಿಗೇನೂ ತಕರಾರಿರಲಿಲ್ಲ. ಆದರೆ ಸುಬ್ಬಣ್ಣನವರಿಗೆ ಬೇಸರವಾಗಬಹುದು ಎಂಬ ಆತಂಕವಿತ್ತು. ಸುಬ್ಬಣ್ಣನವರಿಗೆ ಬೇಸರವಾಗದಂತೆ ಬಿಡಾರಂ ಕೃಷ್ಣಪ್ಪನವರು ವೆಂಕಟಪ್ಪನವರ ಪಾಠವನ್ನು ಶೇಷಣ್ಣನವರಿಗೆ ವರ್ಗಾಯಿಸಿದರು. ಶೇಷಣ್ಣನವರ ವ್ಯಕ್ತಿತ್ವಕ್ಕೆ ವೆಂಕಟಪ್ಪ ಮಾರು ಹೋದರು. ಶೇಷಣ್ಣನವರ ಪ್ರತಿಕೃತಿಯನ್ನು ಶಿಲ್ಪದಲ್ಲಿ ಮೂಡಿಸುವ ಆಸೆ ಯಾಯಿತು. ಅದಕ್ಕಾಗಿ ಹಲವು ದಿನಗಳು ಶೇಷಣ್ಣ ನವರು ವೆಂಕಟಪ್ಪನವರ ಸ್ಟುಡಿಯೋಗೆ ಹೋಗಿ ಕೂರುತ್ತಿದ್ದರು. ಒಂದು ಅದ್ಭುತವಾದ ಕಲಾಕೃತಿ ಮೂಡಿಬಂತು. ಅದರಲ್ಲಿ ವೈಣಿಕಶಿಖಾಮಣಿಯ ಇಡೀ ಭಾವವೇ ಮೂಡಿದೆ. ಮುಂದೆ ಸಂಗೀತ ಶಾಲೆಗೆ ಹೋಗುವುದನ್ನು ಬಿಟ್ಟು ಶೇಷಣ್ಣನವರ ಮನೆಗೆ ಹೋಗಿ ಕಲಿಯಲಾರಂಭಿಸಿದರು. ಅಲ್ಲಿ ವಾಸುದೇವಾ ಚಾರ್ಯರು, ಟೈಗರ್ ವರದಾಚಾರ್ಯರು, ವೀಣಾ ಧನಮ್ಮಾಳ್ ಮೊದಲಾದವರ ಸಂಗೀತ ಕೇಳಿದರು. ಅವರ ಪರಿಚಯವೂ ಆಯಿತು.
ಇವರಿಗೆ ಸಂಗೀತದ ಹುಚ್ಚು ಹೆಚ್ಚಾಗುತ್ತಿರುವುದನ್ನು ಕಂಡು ಹಲವು ಕಲಾವಿದ ಹಿತೈಷಿಗಳಿಗೆ ಆತಂಕ ವಾಗತೊಡಗಿತು. ಚಿತ್ರಕಲೆಯನ್ನು ಬಿಡಬಾರದೆಂದು ಅವನೀಂದ್ರನಾಥರು ಅವರಿಗೆ ಪತ್ರ ಬರೆದರು. ಅದಕ್ಕೆ ಉತ್ತರವಾಗಿ ವೀಣೆಯ ಹುಚ್ಚು ಎಂಬ ಚಿತ್ರವನ್ನು ಬರೆದು ವೆಂಕಟಪ್ಪನವರು ಕಳುಹಿಸಿದರು. ವೀಣಾದೇವತೆಯ ಎದುರು ಕಲಾವಿದ ಹುಚ್ಚೆದ್ದು ಬೇಡಿಕೊಳ್ಳುತ್ತಿರುವ ಚಿತ್ರ ಇದು. ಇದರಲ್ಲಿ ಚಿತ್ರಕಲಾ ದೇವತೆ, ಶಿಲ್ಪದೇವತೆಗಳು ಬಂಧನದಲ್ಲಿದ್ದಾರೆ. ಗುರುಗಳ ಶಿಲ್ಪ ಮೂಲೆಗುಂಪಾಗಿ ನಿಂತಿದೆ. ಅದು ಸ್ಪಷ್ಟವಾಗಿ ಇವರಿಗಿದ್ದ ವೀಣೆಯ ಒಲವನ್ನು ತೋರುತ್ತದೆ. ಆದರೆ ಇವರು ಚಿತ್ರರಚನೆಯನ್ನಾಗಲಿ, ಶಿಲ್ಪವನ್ನಾಗಲಿ ಬಿಡಲಿಲ್ಲ. ಅದರೊಡನೆಯೇ ರಾತ್ರಿ ವೇಳೆಯಲ್ಲಿ ಸಂಗೀತ ಸಾಧನೆ ಮುಂದುವರಿಸಿದ್ದರು.
ಸಾಧನೆ ಹಾಗೂ ಬೋಧನೆ
ತಮ್ಮ ಶಿಷ್ಯರಾಗಬಯಸುವವರು ಶಿಸ್ತಿಗೆ ಒಳಪಡಬೇಕೆಂದು ಬಯಸಿದ್ದರು. ಕಠಿಣ ಸಾಧನೆ ಕಟುವಾದ ಮಾರ್ಗ. ಬೇಸರವಾಗುತ್ತದೆ, ನಿಜ. ಆದರೆ ಸಾಧನೆ, ಶಿಕ್ಷೆಯಿಲ್ಲದೆ ಯಾವ ವಿದ್ಯೆ ತಾನೆ ಸಿದ್ಧಿಸುತ್ತದೆ? ಎನ್ನುತ್ತಿದ್ದರು. ಅವರೂ ಕೂಡ ಅಂತಹ ಯಮಸಾಧಕರೇ ಆಗಿದ್ದರು. ವೆಂಕಟಪ್ಪನವರ ವೀಣೆಯ ಸಾಧಕವೆಲ್ಲ ರಾತ್ರಿಯಲ್ಲೇ. ಯಾರೂ ಬಂದು ಡಿಸ್ಟರ್ಬ್ ಮಾಡುವುದಿಲ್ಲ. ಹೊರಗಡೆ ಕಾರು, ಲಾರಿಗಳ ಓಡಾಟವಿರುವುದಿಲ್ಲ, ಶಾಂತವಾಗಿರುತ್ತದೆ ಎನ್ನುತ್ತಿದ್ದರು. ಅವರ ವೀಣಾವಾದನವನ್ನು ಯಾರಾದರೂ ಕೇಳಬಯಸಿದರೆ ಈ ನಟ್ಟಿರುಳಿಗಾಗಿ ಕಾದುಕೊಂಡಿರಬೇಕು. ಅದೂ ಬೇಕೆಂದವರಿಗೆಲ್ಲಾ ಲಭಿಸದು. ವೆಂಕಟಪ್ಪನವರೇ ಸ್ವತಃ ಆಹ್ವಾನಿಸಬೇಕು.
ಒಮ್ಮೆ ಬಿ.ಜಿ.ಎಲ್ ಸ್ವಾಮಿಯವರನ್ನು ನಾಳೆ ಕಲ್ಯಾಣಿರಾಗ ಸಾಧನೆ ಮಾಡುತ್ತೇನೆ. ನಿಮ್ಮ ತಂದೆಯವರನ್ನು (ಡಿವಿಜಿ) ಕರೆದುಕೊಂಡು ಬನ್ನಿ ಎಂದಿದ್ದರಂತೆ. ಸಮಯಕ್ಕೆ ಸರಿಯಾಗಿ ಹೋಗದಿದ್ದರೆ ಬಾಗಿಲು ತೆಗೆಯುತ್ತಿರಲಿಲ್ಲ. ಸಾಧನೆಯ ಸಮಯ ಬಿಟ್ಟು ಬೇರೆ ಸಮಯದಲ್ಲಿ ಅವರ ವೀಣೆ ಕೇಳಬೇಕು ಎಂದು ಯಾರಾದರೂ ಬಯಸಿದರೆ ನನಗೆ ಮೂಡ್ ಇಲ್ಲ ಎಂದು ಬಿಡುತ್ತಿದ್ದರಂತೆ. ವೆಂಕಟಪ್ಪನವರು ಸಂಗೀತ ಕಲೆಯನ್ನು ಮುಖ್ಯವಾಗಿ ತಮ್ಮ ಆತ್ಮಸಂತೋಷಕ್ಕಾಗಿ ಕಲಿತುಕೊಂಡಿದ್ದರು. ಯಾವಾಗ ವಾದ್ಯ ನುಡಿಸಬೇಕು ಅನ್ನಿಸುತ್ತದೊ, ಆಗ ಮಾತ್ರ ಅದನ್ನು ಮುಟ್ಟುತ್ತಿದ್ದರು. ಅವರು ತಮ್ಮ ವಾದನವನ್ನು ಸಾಧನೆಯೆಂಬ ದೃಷ್ಟಿಯಿಂದ ನೋಡುತ್ತಿದ್ದರೇ ಹೊರತು, ತಾವು ಪ್ರದರ್ಶನ ಮಾಡುತ್ತಿದ್ದೇನೆಂದು ಎಣಿಸಿದವರಲ್ಲ. ಈ ದೃಷ್ಟಿಯಿಂದ ನೋಡಿದಾಗ ಅವರು ಹೇಳುವ ಮೂಡಿಗೆ ಅರ್ಥ ಬರಬಹುದು. ಆದರೆ ಸಂಗೀತವನ್ನು ನೆಚ್ಚಿಕೊಂಡವನಿಗೆ ಮೂಡ್ ಬಂದಾಗ ಹಾಡುತ್ತೇನೆ ಅಂದರೆ ಅವನು ಬದುಕುವುದು ಹೇಗೆ?
ಅದೇನೆ ಇರಲಿ ವೆಂಕಟಪ್ಪನವರು ಅಂದು ರಾತ್ರಿ ನುಡಿಸಿದ ವೀಣಾಪ್ರಸ್ತುತಿಯ ಬಗ್ಗೆ ಬಿಜಿಎಲ್ ಸ್ವಾಮಿಯವರು ಹೇಳುವ ಮಾತುಗಳಿಂದ ನಮಗೆ ವೆಂಕಟಪ್ಪನವರು ಸಂಗೀತದ ಪರಿಚಯ ಸ್ವಲ್ಪ ಮಟ್ಟಿಗೆ ಆಗುತ್ತದೆ,
ಅವರು ರಾಗದ ಚೌಕಟ್ಟಿನ ಒಂದೊಂದು ಭಾಗವನ್ನೂ ವಿಂಗಡ ವಿಂಗಡವಾಗಿ, ಅಲೆ ಅಲೆಯಾಗಿ ಚೌಕಕಾಲದಲ್ಲಿ ವಿನ್ಯಾಸ ಮಾಡಿದರು. ಒಂದೊಂದು ಅಲೆಯ ಏರುಜಾರು, ಇಳಿವ ಜಾರು ಗಮಕಗಳನ್ನು ನುಡಿಸಿದರು, ಸ್ಥಾಯೀ ಭಾವಗಳನ್ನು ಒತ್ತಿ ತೋರಿಸಿದರು. ಎಲ್ಲವೂ ಎಷ್ಟು ಬೇಕೋ ಅಷ್ಟು. ಔಚಿತ್ಯದ ಮಿತಿಯನ್ನು ಮೀರಿದ್ದಲ್ಲ. ಅವರ ಶಿಲ್ಪಗಳಂತೆಯೇ.
ಷಡ್ಜದಿಂದ ಮಧ್ಯಮ ಕಾಲ (ತಾನ) ಆರಂಭವಾಯಿತು. ದಾಟುಗಮಕಗಳು, ಸ್ಪುರಿತಗಳು, ವಾದಿ ಸಂವಾದಿಗಳು ಲಲಿತವಾದ ಲಯವಿನ್ಯಾಸದಲ್ಲಿ ತಾಂಡವವಾಡಿದವು, ಲಾಸ್ಯವಾಡಿದವು. ಮೂರುವರೆ ಗಂಟೆ ವಾದನದಲ್ಲಿ ಒಂದು ಸಂಗತಿಯಾಗಲಿ, ಛಾಯೆಯಾಗಲಿ ಮರುಕಳಿಸಿರಬೇಕಲ್ಲ! ಒಂದು ಸಲವಾದರೂ ಗಮಕಚ್ಯುತಿಯಾಗಿರಬೇಕಲ್ಲ! ಒಂದು ಕ್ಷಣವಾದರೂ ಗಾಂಭೀರ್ಯ ತಗ್ಗಿರಬೇಕಲ್ಲ! ಅದು ರಾಕ್ಷಸಸಾಧನೆ ಮತ್ತು ಕಲ್ಪನೆಯ ಮನೋಧರ್ಮ- ಇವೆರಡರ ಮಿಳಿತ. ಮಧ್ಯಮಾವತಿಯ ತುಣುಕು ಸಂಗತಿಯೊಂದಿಗೆ ಸಾಧನೆ ಮುಕ್ತಾಯವಾಯಿತು.
ಕಛೇರಿಯಲ್ಲಿ ಸಂಗೀತ ಕೇಳುವಾಗಲೂ ಅಷ್ಟೇ ಏಕಾಗ್ರತೆಯಿಂದ ಕೇಳಬೇಕು. ಯಾರೂ ಡಿಸ್ಟರ‍್ಬ್ ಮಾಡಬಾರದು ಅಂತ ಯಾವುದೋ ಒಂದು ಮೂಲೆಯಲ್ಲಿ ಅಂಗವಸ್ತ್ರವನ್ನು ಮುಖಕ್ಕೆ ಹೊದ್ದುಕೊಂಡು ಕೂರುತ್ತಿದ್ದರಂತೆ. ಅವರು ಕೆಲವೇ ಸಂಗೀತಗಾರರ ಸಂಗೀತವನ್ನು ಕೇಳುತ್ತಿದ್ದರು. ಸಂಗೀತ ಕೇಳುವಾಗ ಅವರ ಸ್ಥಿತಿಯನ್ನು ಬಿಜಿಎಲ್ ಸ್ವಾಮಿ ತಮ್ಮ ಲೇಖನದಲ್ಲಿ ದಾಖಲಿಸಿದ್ದಾರೆ,
ಸಂಗೀತ ಕೇಳುವಾಗ ವೆಂಕಟಪ್ಪನವರು ಒಂದು ಪ್ರತಿಮೆ. ಕಾನ್ಸೆಂಟ್ರೇಷನ್ ಘನೀಭೂತವಾದ ಪ್ರತಿಮೆ. ಕಣ್ಣು ಮಾತ್ರ ಸ್ವಾಭಾವಿಕತೆಯ ಅನಿವಾರ್ಯ ದಿಂದಾಗಿ ಆಗಾಗ ಮಿಟುಕು ಹಾಕುತ್ತಿತ್ತೇ ಹೊರತು ದೇಹದ ಇನ್ನಾವ ಭಾಗವಾದರೂ ಒಂದಿಷ್ಟಾದರೂ ಚಲನೆ ತೋರಿಸುತ್ತಿರಲಿಲ್ಲ! ಯಾವುದೋ ಯೋಗಮುದ್ರೆಯಲ್ಲಿ ಮಂಡಿಸಿದ್ದವರಂತೆ ತೋರು ತ್ತಿದ್ದರು. ಕಲ್ಪನಾ ಸ್ವರಗಳ ಲಯವಿಸ್ತಾರ ಮಾಡುವಾಗ ಮಾತ್ರ ಬಲಗೈ ತೋರುಬೆರಳು ಆ ತಾಳವನ್ನು ಅನುಸರಿಸಿ ಮೃದುವಾಗಿ ಅಲುಗಾಡು ತ್ತಿತ್ತು.
ಅವರು ತುಂಬಾ ಸೂಕ್ಷ್ಮವಾಗಿ ಕೇಳುತ್ತಿದ್ದರು. ಕಛೇರಿಯನ್ನು ಕುರಿತು ಅವರು ವ್ಯಕ್ತಪಡಿಸುವ ಅಭಿಪ್ರಾಯ ಉತ್ತಮ ಸಂಗೀತ ವಿಮರ್ಶೆಗೆ ಒಳ್ಳೆಯ ಮಾದರಿ. ಒಮ್ಮೆ ಅವರು ವೆಂಕಟಸ್ವಾಮಿ ನಾಯ್ಡು ಅವರ ಕಾರ್ಯಕ್ರಮಕ್ಕೆ ಸ್ವಾಮಿಯವರ ಜೊತೆ ಹೋಗಿದ್ದರಂತೆ. ಅಂದಿನ ನುಡಿಸಾಣಿಕೆ ಕುರಿತು ವಾದ್ಯದ ಮೇಲೆ ಅವರ ಸಾಧನೆ ಅದ್ಭುತವಾದದ್ದು. ಕಮಾನಿನ ಒಂದೊಂದು ಎಳೆತದಲ್ಲೂ ರಾಗದ ಕಲ್ಪನೆಯ ರಸ ಚೆಲ್ಲುತ್ತದೆ. ಈ ರಾಗಕ್ಕೆ (ಆಗ ಅವರು ನುಡಿಸಿದ್ದು ಆರಭಿ ರಾಗದ ವರ್ಣ) ಅವರೋಹಣದಲ್ಲಿ ನಿಷಾದ ಅಲ್ಪಪ್ರಯೋU ದಲ್ಲಿರಬೇಕು ಎಂದು ಶಾಸ್ತ್ರ ಹೇಳುತ್ತದೆ. ಇದೊಂದನ್ನು ಅವರು ತಿಳಿದುಕೊಂಡುಬಿಟ್ಟಿದ್ದರೆ ನಮಗೆ ಪರಮಾ ನಂದವಾಗಿಬಿಡುತ್ತಿತ್ತು. ನಿಷಾದಸ್ವರ ಕಿವಿಯಲ್ಲಿ ಕುತ್ತಿದಂತೆ ಭಾಸವಾಗುತ್ತದೆ ಹೀಗೆ ಹೇಳುವಾಗ ಅವರು ತಮ್ಮ ತೃಪ್ತಿ ಹಾಗೂ ಅತೃಪ್ತಿಗಳೆರಡನ್ನು ತಿಳಿಸಿದ್ದರು. ಅಪರೂಪದ ಸಂಚಾರಗಳನ್ನು ಗುರುತು ಮಾಡಿಕೊಳ್ಳುತ್ತಿದ್ದರು. ಅದನ್ನು ಡೈರಿಯಲ್ಲೂ ದಾಖಲಿಸಿದ್ದರು. ಅವರ ಡೈರಿಯ ಉಲ್ಲೇಖವನ್ನು ಬಿಜಿಎಲ್ ಸ್ವಾಮಿಯವರು ತಮ್ಮದೇ ಭಾಷೆಯಲ್ಲಿ ಬರೆದಿದ್ದಾರೆ,
ಅದರಲ್ಲಿ ಅವರು ವೆಂಕಟಸ್ವಾಮಿ ನಾಯ್ಡುರವರ ವಾದನವನ್ನು ಮನಸಾರ ಕೊಂಡಾಡಿದ್ದರು. ಅವರ ಸಾಧನೆಯ ರೀತಿ ವಯೋಲಿನ್ ವಾದ್ಯದ ವೈಯಕ್ತಕತೆಯನ್ನು ಹೊರಗೆಳೆಯುತ್ತದೆ. ವಯೋಲಿ ನ್ನನ್ನು ವಯೋಲಿನ್ನಿನಂತೆ ನುಡಿಸಲು ಅರಿತ ಕಲಾವಿದ. ಧೇನುಕರಾಗದ ಕೀರ್ತನೆಗೆ ನಾಯ್ಡು ಅವರು ನೀಡಿದ್ದ ಕಲ್ಪನಾಸ್ವರಗಳು ಆ ರಾಗದ ವ್ಯಾಖ್ಯಾನವಿದ್ದಂತೆ ಇತ್ತು. ಜಿಂಗ್ಲಾ ರಾಗದ ವಿನ್ಯಾಸಕ್ಕೆ ಅಷ್ಟೊಂದು ಸಾಧ್ಯತೆ ಇದೆ ಎಂಬುದನ್ನು ಆಗತಾನೆ ಅರಿತುಕೊಂಡರಂತೆ. ವೆಂಕಟಸ್ವಾಮಿಯವರು ಪ್ರಯೋಗಿಸಿದ್ದ ಅಪರೂಪ ಸಂಚಾರಗತಿಗಳನ್ನು ಗುರುತು ಮಾಡಿಕೊಂಡಿದ್ದರು. ವಾದಕನನ್ನು ಹೈಲಿ ಕ್ರಿಯೇಟಿವ್ ಎಂದಿದ್ದರು. ಆರಭಿ ರಾಗದ ನಿಷಾದದ ಬಳಕೆಯನ್ನು ಟೀಕಿಸಿದ್ದರು. ಗುರುತು ಮಾಡಿ ಕೊಂಡಿದ್ದ ಅಪರೂಪದ ಸಂಚಾರಗಳನ್ನು ವೀಣೆಯಲ್ಲಿ ನುಡಿಸಿ ತೋರಿಸಿದ್ದರು. ಈ ಸಂಚಾರಗಳು, ಸ್ಥಾಯಿಗಳು ಶಾಸ್ತ್ರದಲ್ಲಿ ಹೇಳಿರುವ ಲಕ್ಷ್ಯಗಳಲ್ಲಿ ಸೇರ್ಪಡೆಯಾಗಿಲ್ಲ. ಸಂಗೀತ ಸಂಪ್ರದಾಯ ಪ್ರದರ್ಶಿನಿಯಲ್ಲಿ ಇವನ್ನು ಸೇರಿಸಿ ಬಿಡಬಹುದು! ಎಂದು ಬರೆದಿದ್ದರು.
ಅವರ ದೃಷ್ಟಿಯಲ್ಲಿ ಕಲೆ ಕುರಿತು ಅಭಿಪ್ರಾಯ ಹೇಳುವುದಕ್ಕೆ ಪರಿಶ್ರಮ ಇರಬೇಕು. ಅವನು ಒಬ್ಬ ಕಲಾವಿದನಾಗಿರಬೇಕು ಎಂಬುದು ಅವರ ಅಭಿಪ್ರಾಯವಲ್ಲ. ಅವನಿಗೊಂದು ರಸದೃಷ್ಟಿ ಯಿರಬೇಕು, ತಾರತಮ್ಯ ಜ್ಞಾನವಿರಬೇಕು. ಇದು ಬರಿಯ ಓದಿನಿಂದ ಸಿದ್ಧಿಸುವುದಿಲ್ಲ ಎನ್ನುತ್ತಿದ್ದರು. ಅದಕ್ಕೆ ಅವರೇ ನೀಡಿದ ಉದಾಹರಣೆಯನ್ನು ಉಲ್ಲೇಖಿಸಬಹುದು. ಬೇಸಗೆಯ ಕಾಲವನ್ನು ವೆಂಕಟಪ್ಪನವರು ಸಾಧಾರಣವಾಗಿ ಉದಕಮಂಡಲ ದಲ್ಲಿ ಕಳೆಯುತ್ತಿದ್ದರು. ವೀಣೆ, ಬಣ್ಣ, ಕುಂಚಾದಿ ಗಳೆಲ್ಲವನ್ನೂ ಜತೆಯಲ್ಲಿ ತೆಗೆದುಕೊಂಡು ಹೋಗುತ್ತಿದ್ದರು. ಎರಡು- ಮೂರು ತಿಂಗಳ ವಾಸಕ್ಕಾಗಿ ಮನೆಯೊಂದನ್ನು ಗೊತ್ತು ಮಾಡಿಕೊಳ್ಳು ತ್ತಿದ್ದರು. ಅವರಿಗೆ ಹಾಲು ವರ್ತನೆ ಕೊಡುವುದಕ್ಕೆ ಬಡಗನೊಬ್ಬ ಬರುತ್ತಿದ್ದನಂತೆ. ಇವರ ರೂಮಿನಲ್ಲಿದ್ದ ಸೂರ್ಯೋದಯ, ಸೂರ್ಯಾಸ್ತಮಯ ವರ್ಣ ಚಿತ್ರಗಳನ್ನು ನೋಡಿ ಇದು ಮುಂಬೆಳಗು, ಇದು ಮುಚ್ಚಂಜೆ ಎಂದು ಗುರುತಿಸಿಬಿಟ್ಟನಂತೆ. ಹೇಗಯ್ಯ ಹೇಳುತ್ತಿ? ಅಂತ ಕೇಳಿದರೆ ಬೆಳಗಿನ ಆಕಾಶದ ಬಣ್ಣವೇ ಬೇರೆ. ಸಂಜೆಯದೇ ಬೇರೆ ಎಂದನಂತೆ. ಈ ಅನುಭವಜ್ಞಾನವನ್ನು ಮೆಚ್ಚಿಕೊಂಡು ಅವನಿಗೆ ಇನಾಮನ್ನು ಕೊಟ್ಟು ಕಳುಹಿಸಿದರಂತೆ.

ಶಾಸ್ತ್ರ ಮತ್ತು ಕಲೆ
ವೆಂಕಟಪ್ಪನವರು ಸಂಪ್ರದಾಯಶರಣರು ಎಂದು ಹಲವರು ಅಪಾದಿಸಿರುವುದು ಉಂಟು. ಕಲೆಗಿಂತಲೂ ಶಾಸ್ತ್ರ ಅವರಿಗೆ ಮುಖ್ಯವಾಗಿತ್ತು ಎಂಬ ನಿರಾಧಾರವಾದ ದೂರು ಸಂದಿದೆ. ವೆಂಕಟಪ್ಪನವರನ್ನು ತಕ್ಕಮಟ್ಟಿಗೆ ತಿಳಿದವರು ಕೂಡ ಹೀಗೆ ಮಾತನಾಡಲಾರರು. ಶಾಸ್ತ್ರ ಸಂಪ್ರದಾಯಗಳಲ್ಲಿ ಅವರಿಗೆ ಗೌರವವಿತ್ತು ಎಂದು ಹೇಳಬಹುದೇ ಹೊರತು, ಅದಕ್ಕೆ ಅಂಟಿಕೊಂಡಿದ್ದರು ಎನ್ನುವುದು ಸರಿಯಲ್ಲ ಎನ್ನುವುದು ಬಿಜಿಎಲ್ ಸ್ವಾಮಿಯಂತ ಹವರ ಅಭಿಪ್ರಾಯ. ಹಾಗೆಯೇ ಶಿವತಾಂಡವದ ಉಬ್ಬು ಶಿಲ್ಪದಲ್ಲಿ ಶಿವನಿಗೆ ಎರಡೇ ಕೈಗಳನ್ನು ರೂಪಿಸಿರುವುದನ್ನು ಸಂಪ್ರದಾಯ ವಿರೋಧಿ ಎಂದು ಟೀಕಿಸಿದವರು ಇದ್ದಾರೆ. ವೆಂಕಟಪ್ಪನವರು ಶಾಸ್ತ್ರವನ್ನೇ ಕಲೆ ಎಂದು ಸಮನ್ವಯ ಮಾಡಿದ್ದವರಲ್ಲ.
ಸಂಗೀತದ ವಿಷಯದಲ್ಲಿ ವೆಂಕಟಪ್ಪನವರಿಗೆ ಇದ್ದ ದೃಷ್ಟಿವೈಶಾಲ್ಯಕ್ಕೆ ಸ್ವಾಮಿಯವರು ಕೊಡುವ ಒಂದು ಉದಾಹರಣೆಯನ್ನು ಉಲ್ಲೇಖಿಸಬಹುದು. ವಾಲ್ಟ್ ಡಿಸ್ನಿಯ ಕೃತಿ ಫ್ಯಾಂಟಾಸಿಯಾ ಚಲನಚಿತ್ರ ಬೆಂಗಳೂರಿನಲ್ಲಿ ಪ್ರದರ್ಶಿತವಾಯಿತು. ಸಂಗೀತಕ್ಕೆ ದೃಶ್ಯರೂಪವನ್ನು ಹೊಂದಾಣಿಸಿದ್ದ ಚಿತ್ರ ಅದು. ವೆಂಕಟಪ್ಪನವರಿಗೆ ಇದನ್ನು ಸ್ವಾಮಿಯವರು ತಿಳಿಸಿದರು. ನಾವು ನೋಡಬೇಕಲ್ಲ! ನೀವೂ ಬನ್ನಿ. ಹೋಗಿಬರೋಣ ಎಂದರು. ಅವರು ಸಂಗೀತ ಕೇಳುತ್ತಿದ್ದಾಗ ತೋರ್ಪಡಿಸಿದ್ದ ಪ್ರತಿಮೆತನವೇ ಇಲ್ಲಿಯೂ ಮೂಡಿ ಬಂದಿತ್ತು. ಇಂಟರ್‌ವಲ್ ಬಿಡುವಿನಲ್ಲೂ ಹೀಗೆಯೇ ಕುಳಿತಿದ್ದರು. ಚಿತ್ರ ಮುಗಿದ ಮೇಲೆ ಅವರು ನುಡಿದದ್ದು ಒಂದೇ ಒಂದು ವಾಕ್ಯ, ಅವರಿಗಿರುವ ಸಂಗೀತ ಚಿತ್ರದ ಕಲ್ಪನೆ ನಮಗೆ ಏಕೆ ಸಿದ್ಧಿಯಾಗಿಲ್ಲ?
ನಮ್ಮ ಬುದ್ಧಿ ಯಾಕೆ ಆ ದಾರಿಯಲ್ಲಿ ಹರಿಯುವುದಿಲ್ಲ? ಎಂದು ತಮಗೆ ತಾವೇ ಪ್ರಶ್ನೆ ಹಾಕಿಕೊಂಡರು. ನಮ್ಮ ರಾಗಗಳು ಬೇರೆ ಬೇರೆ ಭಾವನೆಗಳನ್ನು ಉಂಟುಮಾಡುತ್ತವೆ; ಒಂದೇ ರಾಗವೂ ಒಂದಕ್ಕಿಂತಲೂ ಹೆಚ್ಚು ಸಂಖ್ಯೆಯ ಭಾವಗಳನ್ನು, ರಸಗಳನ್ನೂ, ಉತ್ಪತ್ತಿ ಹೊಂದಾಣಿಕೆ ಗಳನ್ನು ಹೊರಗಾಣಿಸುತ್ತವೆ. ಆ ಭಾವನೆಗಳಿಗೆ ಒಂದು ವಿಷುಯಲ್ ರೂಪವನ್ನು ಕೊಡುವುದಕ್ಕೆ ನಾವೇಕೆ ಪ್ರಯತ್ನಪಡಲಿಲ್ಲ?
ರಾಗ-ರಾಗಿಣಿ ಚಿತ್ರಗಳಿವೆಯಲ್ಲ. .?
ಇವೆ. ಅವು ಅಷ್ಟೇನೂ ಸಫಲವಾಗಿಲ್ಲ. ತುಂಬಾ ಫಾರ‍್ಮಲೈಸ್ ಆದ ಸಂಪ್ರದಾಯದಲ್ಲಿ ಕೇಂದ್ರಿತವಾಗಿದೆ. ಆ ಚಿತ್ರಗಳನ್ನು ಬೇರೆ ದೃಷ್ಟಿಯಿಂದ ನೋಡಬಹುದು, ರಾಗಭಾವದ ದೃಷ್ಟಿಯಿಂದಲ್ಲ. ಎನ್ನುತ್ತಿದ್ದರು.
ಅವರು ಸಂಗೀತವನ್ನು ಕೇಳುವಾಗ ಚಿತ್ರಕಲೆಯ ನೋಟವು ಅದರಲ್ಲಿ ಸೇರಿರುತ್ತಿತ್ತು. ಸಂಗೀತ ಹಾಗೂ ಚಿತ್ರಕಲೆ ಅವರಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿತ್ತು. ನಾವು ಓಡುವ ನೀರು, ಚಲಿಸುವ ಮೋಡ ಇದರಲ್ಲಿ ನಾವು ಸುಂದರವಾಗಿದೆ ಎನ್ನುವುದು ಅನೇಕ ಸಲ ಚಲನೆಯ ಸರಣಿಯನ್ನು. ಅದೇ ನಾವು ಸಂಗೀತದ ಅಲಾಪನೆಯಲ್ಲಾಗಲಿ, ನೃತ್ಯದ ಅಂಗಹಾರಗಳಲ್ಲಾಗಲಿ ಕಾಣುವ ಸೊಬಗು. ಅಲೆಗಳ ಒಂದು ಚಲನೆ ಇದ್ದಂತೆ ಇನ್ನೊಂದು ಇರುವುದಿಲ್ಲ. ಆದರೆ ಎಲ್ಲವೂ ಒಂದೇ ಪ್ರವಾಹಕ್ಕೆ ಸೇರಿದ ಅಲೆಗಳೇ, ಅಲೆಗಳ ಸಮೂಹವೂ ಹಾಗೆಯೇ. ಒಂದಕ್ಕಿರುವ ಪ್ಯಾಟರ್ನ್ ಇನ್ನೊಂದು ಸಮೂಹಕ್ಕಿರುವುದಿಲ್ಲ. ನಮ್ಮ ವೀಣೆಯಲ್ಲೂ ನಾದತರಂಗಗಳು ಹಾಗೆಯೇ ಬರಬೇಕು. ಪೈಂಟಿಂಗ್‌ನಲ್ಲಿ ಎಷ್ಟು ಸಾಧ್ಯವೋ ಸ್ಟಡಿಮಾಡಿ ನೋಡಬೇಕು ಎನ್ನುವಾಗ ಅವರ ಮನಸ್ಸು ಹೀಗೆ ಕೆಲಸ ಮಾಡುತ್ತಿದ್ದಿರಬಹುದು.
ಬಿಜಿಎಲ್ ಸ್ವಾಮಿಯವರ ಪ್ರಕಾರ ಮದರಾಸಿನ ಸಂಗೀತ ಅಕಾಡೆಮಿ ನಡೆಸಿದ ಚರ್ಚೆಯ ವಿಷಯಗಳನ್ನು ತಪ್ಪದೆ ಓದುತ್ತಿದ್ದರು ಪೇಪರ್ ಕಟ್ಟಿಂಗ್‌ಗಳನ್ನು ಶೇಖರಿಸುತ್ತಿದ್ದರು; ಟಿಪ್ಪಣಿ ಬರೆದುಕೊಳ್ಳುತ್ತಿದ್ದರು. ಒಂದು ಸಲ ದಿವಂಗತ ಮುಡಿಕೊಂಡಾನ್ ವೆಂಕಟರಾಮ ಅಯ್ಯರ್ ಅವರು ಸಿಂಹನಂದನ ತಾಳವನ್ನು ಕುರಿತು ಪ್ರದರ್ಶನ ಮಾಡಿದರೆಂದು ವರದಿಯಾಗಿತ್ತು. ಎರಡು- ಮೂರು ದಿನವಾದ ಮೇಲೆ ವೆಂಕಟಪ್ಪನವರನ್ನು ಕಂಡಾಗ ನನಗೆ ತಾಳಜ್ಞಾನ ಅಷ್ಟಾಗಿಲ್ಲ. ಆ ಸಿಂಹನಂದನ ತಾಳದ ಸ್ವರೂಪವೇನು ಎಂದು ತಿಳಿದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆಯೇ? ಎಂದೆ.
ರೂಮಿನ ಮೂಲೆಯಲ್ಲಿ ಮೂಗಾಲಿಯ ಮೇಲಿದ್ದ ಕಪ್ಪು ಹಳಗೆಯ ಬಳಿ ಹೋಗಿ ತಾಳಪ್ರಮಾಣ ಸಂಕೇತಗಳನ್ನು ಬಳಸಿ ನಕ್ಷೆ ಬರೆದರು. ನಿಮಗೆ ೮ ಅಕ್ಷರ, ೧೬ ಅಕ್ಷರಗಳ ಆದಿತಾಳ ಗೊತ್ತಿರಬೇಕಲ್ಲವೇ?
ಅಲ್ಪಸ್ವಲ್ಪ ಗೊತ್ತಿರುವುದು ಅದೊಂದೇ!
ಅಷ್ಟು ಸಾಕು. ಹದಿನಾರು ಮಾತ್ರೆಯ ತಾಳ ಹಾಕಿ. . .
ಹಾಕಿದೆ.
ಅದೇನೋ ಕಾಕಪಾದ, ಪ್ಲುತ, ಎಂದೆಲ್ಲ ಸಾಲಾಗಿ ಹೇಳಿ, ಆಯಾ ಬಗೆಯ ಕ್ರಮವನ್ನು, ಬಾಹುಗಳನ್ನು ನಾಲ್ಕು ದಿಕ್ಕುಗಳಲ್ಲೂ ಚಾಚಿ ಮಡಿಸಿ, ಹಿಂದು ಮುಂದು ಮಾಡಿ ತೋರಿಸಿದರು(ಈಗ ಸಂಪೂರ್ಣವಾಗಿ ಮರೆತುಹೋಗಿದೆ)
ಕಾಲು ಗಂಟೆ ತಾವೂ ತಾಳಹಾಕುತ್ತ, ನನ್ನ ಕೈಲೂ ಹಾಕಿಸಿದರು. ವಿಷಯವನ್ನು ತಿಳಿದುಕೊಳ್ಳಬೇಕಾದದ್ದು ಸರಿಯೇ. ಇಂಥ ತಾಳಗಳನ್ನು ಕೇವಲ ಒಂದು ಶಿಕ್ಷೆಗಾಗಿ ಕಲಿತುಕೊಳ್ಳಬೇಕೇ ಹೊರತು ಪ್ರದರ್ಶನ ಮಾಡಬಾರದು ಎಂದರು.
ಈಗ ನೋಡಿ, ಶಾಸ್ತ್ರದಲ್ಲಿ ಹೇಳಿರುವ ರಾಗಗಳೆಲ್ಲವೂ ಕೇಳುವುದಕ್ಕೆ ಇಂಪಾಗಿರುತ್ತವೆಯೇ? ಸ್ವರಗಳ ವಿವಿಧ ಪರ‍್ಮುಟೇಷನ್ ಮತ್ತು ಕಾಂಬಿನೇಷನ್ ಪ್ರಕಾರ ಅನುಗೊಂಡ ರಾಗಗಳೂ ಅನೇಕ ಇವೆ. ಆದರೆ ಅವುಗಳಲ್ಲಿ ಶ್ರಾವ್ಯತೆ ಇರುತ್ತದೆಯೇ? ತಾಳಗಳಲ್ಲೂ ಹೀಗೆಯೇ. ಎಂದು ವಿವರಣೆ ಕೊಟ್ಟರು.

ಪ್ರಯೋಗ ಪ್ರಜ್ಞೆ
ವೆಂಕಟಪ್ಪನವರಿಗೆ ಪ್ರಯೋಗವಿಧಾನಗಳಲ್ಲಿ ತುಂಬಾ ಆಸಕ್ತಿ. ವೀಣಾವಾದ್ಯ ರಚನೆಯಲ್ಲೂ ಪ್ರಯೋಗಗಳು. ತಂತಿಯ ದಪ್ಪಕ್ಕೂ ನಾದದ ಟಿಂಬರಿಗೂ ಇರುವ ಅನ್ಯೋನ್ಯತೆ ಎಂಥದ್ದು, ವಾದ್ಯದ ಯಾವ ಯಾವ ಅಂಗಗಳಿಗೆ ಎಂತೆಂಥ ಮರಗಳನ್ನು ಉಪಯೋಗಿ ಸಿದರೆ ನಾದಕ್ಕೆ ಪೂರ್ಣಕಳೆ ಉಂಟಾಗುತ್ತದೆ- ಇದೇ ಮೊದಲಾದವುಗಳನ್ನು ಕುರಿತು ಆಳವಾಗಿ ಚಿಂತಿಸುತ್ತಿದ್ದರು. ಬೆಂಗಳೂರಿಗೆ ಬಂದು ನೆಲಸಿದ ಮೇಲೆ ವೆಂಕಟಪ್ಪನವರ ಪ್ರಾಯೋಗಿಕ ದೃಷ್ಟಿಗೆ ಹೊಸದೊಂದು ತಿರುವು ದಕ್ಕಿತು. ದಿವಂಗತ ಸರ್ ಸಿ. ವಿ. ರಾಮನ್ ಹಾಗೂ ವಿಕ್ರಂ ಸಾರಾಭಾಯ್ ವೆಂಕಟಪ್ಪನವರು ಸೃಜಿಸಿದ ವೀಣೆಗಳ ನಾದವನ್ನು ಶಾಸ್ತ್ರಸಲಕರಣೆಗಳ ಮೂಲಕ ವಿಶ್ಲೇಷಿಸಿ ಚರ್ಚೆ ನಡೆಸುತ್ತಿದ್ದರು.
ವೀಣೆಯನ್ನು ಕುರಿತು ಚೆನ್ನಾಗಿ ಅಧ್ಯಯನ ಮಾಡಿದ್ದ ವೆಂಕಟಪ್ಪ ಶಾಸ್ತ್ರಶುದ್ಧವಾದ ವೀಣೆಯೊಂದನ್ನು ಮಾಡಿಸಿಕೊಳ್ಳಬೇಕೆಂದು ಬಯಸಿ, ವೀಣೆಯನ್ನು ತಯಾರಿಸುವ ರುದ್ರಪ್ಪ ಎಂಬುವರನ್ನು ಕರೆಸಿ, ಅವರಿಗೆ ಅಳತೆಗಳನ್ನೂ ರೂಪವನ್ನೂ ತಿಳಿಯಹೇಳಿದರು. ೧೯೨೮ರ ಜನವರಿ ತಿಂಗಳ ಎರಡನೆಯ ದಿನದಂದು ರುದ್ರಪ್ಪ ಈ ವೀಣೆಯನ್ನು ವೆಂಕಟಪ್ಪನಿಗೆ ತಂದು ಕೊಟ್ಟರು. ರುದ್ರಪ್ಪನಿಗೆ ವೀಣೆಯ ತಯಾರಿಕೆ ಮನೆತನದಲ್ಲಿ ಬಂದದ್ದು. ಚೆನ್ನಾಗಿಯೇ ನುರಿತ ಕೈ ಅವರದ್ದು. ಆದರೆ ವೀಣೆ ನುಡಿಸಲು ಬಾರದು. ಅವರಿಗೆ ವೀಣೆ ನುಡಿಸುವುದನ್ನು ಇವರು ಕಲಿಸಿದರು. ವೀಣೆಯ ರುದ್ರಪ್ಪ ವೆಂಕಟಪ್ಪನ ಮೊದಲ ಶಿಷ್ಯ. ಇನ್ನೊಂದಿಷ್ಟು ಜನ ಅವರಿಗೆ ಶಿಷ್ಯರಿದ್ದರು. ವೆಂಕಟಪ್ಪನವರಿಗೆ ತಮ್ಮ ಬಳಿ ಚಿತ್ರಕಲೆ, ಸಂಗೀತ ಎರಡೂ ವಿಭಾಗದಲ್ಲಿ ಶಿಕ್ಷಣಕ್ಕೆಂದು ಬರುವವರ ಸಲುವಾಗಿ ಒಂದು ಕಲಾಶಾಲೆಯನ್ನು ತೆರೆಯಬೇಕೆಂದು ಆಸೆಯಿತ್ತು. ಈ ನಡುವೆ ೧೯೨೬ರ ಜುಲೈ ತಿಂಗಳಿನಲ್ಲಿ ಅವರ ಗುರುಗಳಾಗಿದ್ದ ಶೇಷಣ್ಣನವರು ತೀರಿಕೊಂಡರು. ಅದು ಅವರನ್ನು ತುಂಬಾ ಕಾಡಿತು. ಅದರ ಬಗ್ಗೆ ತಮ್ಮ ಡೈರಿಯಲ್ಲಿ ದಾಖಲಿಸಿದ್ದಾರೆ.
ಇವರಿಗೆ ಒಳ್ಳೆಯ ಹಾಸ್ಯಪ್ರಜ್ಞೆಯಿತ್ತು ಎಂದು ಹತ್ತಿರದಿಂದ ಬಲ್ಲವರು ಹೇಳುತ್ತಾರೆ. ವಿದ್ವಾಂಸರಿಗೆ ಸಂಬಂಧಿಸಿದಂತೆ ತಾವು ಕಂಡ ಪ್ರಸಂಗಗಳನ್ನು ಅವರು ತಮ್ಮದೇ ಆದ ಹಾಸ್ಯ ದೃಷ್ಟಿಯಿಂದ ವರ್ಣಿಸುತ್ತಿದ್ದರು.
ಒಮ್ಮೆ ವೈಣಿಕ ಶೇಷಣ್ಣನವರ ಬಳಿ ಶರ‍್ಮಾದೇವಿ ಸುಬ್ರಹ್ಮಣ್ಯಶಾಸ್ತ್ರಿ ಎಂಬುವರು ತಮಿಳುನಾಡಿನಿಂದ ಶಿಷ್ಯವೃತ್ತಿಗಾಗಿ ಬಂದರಂತೆ. ಶಿಷ್ಯನಿಗೆ ಕನ್ನಡ ಬಾರದು. ಶೇಷಣ್ಣನವರಿಗೆ ತಮಿಳಿನ ಪರಿಚಯ ಅಷ್ಟಾಗಿರಲಿಲ್ಲ. ಶೇಷಣ್ಣನವರು ನುಡಿಯುತ್ತಿದ್ದ ತಮಿಳನ್ನೂ, ಶಾಸ್ತ್ರಿ ಆಡುತ್ತಿದ್ದ ಕನ್ನಡವನ್ನೂ ಅನುಕರಣೆಮಾಡಿ ವೆಂಕಟಪ್ಪನವರು ಬಿದ್ದು ಬಿದ್ದು ನಗುತ್ತಿದ್ದರು. ಒಂದು ಸಲ ಶೇಷಣ್ಣನವರು ಪಂಚಮವನ್ನು ಬಿಗಿಯಾಗಿ ಎಳೆದುಬಿಡಿ. ಎಂದಾಗ ಸುಬ್ರಹ್ಮಣ್ಯ ಶಾಸ್ತ್ರಿ ಎದ್ದು ಬಂದು ಶೇಷಣ್ಣನವರ ಪಂಚೆಯನ್ನು ಗಟ್ಟಿಯಾಗಿ ಹಿಡಿದು ಜಗ್ಗಿಸಿದನಂತೆ! ಈ ಸಂದರ್ಭವನ್ನು ನೆನಿಸಿಕೊಳ್ಳುವಾಗ ವೆಂಕಟಪ್ಪನವರು ತೋರಿಸುತ್ತಿದ್ದ ಹಾವಭಾವಗಳು ಯಾರನ್ನಾದರೂ ನಗಿಸುತ್ತಿದ್ದವು.
ಕೊನೆಗೆ ಅವರ ಆರೋಗ್ಯ ತುಂಬಾ ಕೆಟ್ಟಿತ್ತು. ೧೯೬೫ರ ಮೇ ೨೫ನೇ ತಾರೀಖು ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ತೀರಿಕೊಂಡರು.
ವೆಂಕಟಪ್ಪನವರದು ನಿರಾಡಂಬರವಾದ ಪರಿಶುದ್ಧವಾದ ಬದುಕು. ಕಲೆಗಾಗಿಯೇ ಬದುಕಿ ಕಲೆಯೊಡನೆ ಐಕ್ಯವಾದವರು, ಕಠಿನ ಶಿಕ್ಷೆಯಿಂದ ಒಳಗುಹೊರಗುಗಳನ್ನು ಹಿಡಿತದಲ್ಲಿಟ್ಟುಕೊಂಡಿದ್ದವರು. ಮುಡಿಪಾಗಿಟ್ಟುಕೊಂಡಿದ್ದ ಧ್ಯೇಯಕ್ಕಾಗಿ ಅನೇಕ ತ್ಯಾಗಗಳನ್ನು ಮಾಡಿ, ನಿಷ್ಠೆಯಿಂದಲೂ ನಿತ್ಯತಪಸ್ಸಿ ನಿಂದಲೂ ಕಲಾಪೂರ್ಣತೆಯನ್ನು ಸಿದ್ಧಿಸಿಕೊಂಡಿದ್ದವರು.

Recent Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.