ಕೇರಳದ ವಿಕೋಪ ಹೊಸ ಚಿಂತನೆಗೆ ಅವಕಾಶ ಮಾಡಿಕೊಡಲಿ- ಶಿವ್ ವಿಶ್ವನಾಥನ್
ವಿಕೋಪಗಳು ಒಂದು ಕಥಾನಕವಾಗಿ ಹಿಡಿಯುವ ಹಾದಿಯನ್ನು ಊಹಿಸಿಬಿಡಬಹುದು. ಅದು ಒಂದು ಹಗರಣವಾಗಿಯೋ ಅಥವಾ ಬಿಕ್ಕಟ್ಟಿನ ಕ್ಷಣವಾಗಿಯೋ ಪ್ರಾರಂಭವಾಗುತ್ತದೆ. ನಂತರ ಕೆಲ ಕಾಲ ಆ ಕುರಿತು ಜನ ಕಾರ್ಯಪ್ರವೃತ್ತರಾಗುತ್ತಾರೆ. ನಿಧಾನವಾಗಿ ಅದನ್ನು ಮರೆತು ನಿರ್ಲಿಪ್ತರಾಗಿಬಿಡುತ್ತಾರೆ. ಜನ ವಿಕೋಪಗಳನ್ನು ಅನುಭವಿಸಿ ದಣಿಯುತ್ತಾರೆ. ಜೀವನ ಹಾಗೇ ಸಾಗುತ್ತದೆ. ನೀತಿಗಳು ಮಾಮೂಲಿ ಕ್ಲೀಷೆಯನ್ನು ಧ್ವನಿಸುತ್ತಾ ಮರೆಯಾಗಿಬಿಡುತ್ತವೆ. ಅದಕ್ಕೆ ಬಲಿಯಾದವರು ಮಾತ್ರ ತಮ್ಮ ನಾಗರಿಕ ಪ್ರಜ್ಞೆಯನ್ನು ಮತ್ತೆ ಪಡೆದುಕೊಳ್ಳಲು ಹೋರಾಟವನ್ನು ಮುಂದುವರಿಸುತ್ತಾರೆ. ಆದರೆ ಕೇರಳದಲ್ಲಿ ೨೧೦೮ರ ನೆರೆ ಇಂತಹ ಒಂದು ಕ್ಲೀಷೆಯ ಕಥಾನಕ ಆಗಲಿಲ್ಲ.
ಮುಂಚೂಣಿಗೆ ಬಂದ ನಾಯಕತ್ವ
ಕೇರಳದಲ್ಲಿ ಈ ಬಾರಿ ಬಂದದ್ದು ಹಿಂದೆಂದೂ ಬಾರದಿದ್ದಂತಹ ಆಗಾಧವಾದ ಪ್ರವಾಹ. ಈ ಪ್ರಮಾಣದ ಪ್ರವಾಹವನ್ನು ಯೋಚಿಸಬೇಕಾದರೆ ನೀವು ೧೯೨೪ಕ್ಕೆ ಹೋಗಬೇಕು. ಆದರೂ ಈ ವಿಕೋಪ ಉತ್ಪ್ರೇಕ್ಷೆಯನ್ನು ತಪ್ಪಿಸಿಕೊಂಡಿತು. ಇದನ್ನು ಗಮನಿಸಿದ ಒಬ್ಬ ಸೂಕ್ಷ್ಮ ಪ್ರೇಕ್ಷಕ ಹೇಳುವಂತೆ ಇದೊಂದು ಭಾವೋದ್ವೇಗವನ್ನು ಮೀರಿಕೊಂಡ ಪ್ರವಾಹ. ಅದಕ್ಕೆ ಬಂದ ಪ್ರತಿಕ್ರಿಯೆ ವಾಸ್ತವಿಕವಾಗಿತ್ತು, ವ್ಯವಹಾರಿಕವೂ ಪ್ರಾಯೋಗಿಕವೂ ಆಗಿತ್ತು. ಜನ ತಕ್ಷಣ ಕಾರ್ಯಪ್ರವೃತ್ತರಾದರು. ಆದರೆ ದೊರಕಬಹುದಾಗಿದ್ದ ಸಹಾಯ ಹಾಗೂ ಪರಿಹಾರಗಳ ಮಿತಿಯ ಅರಿವು ಅವರಿಗಿತ್ತು. ಇದಕ್ಕೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕಾರ್ಯಶೈಲಿ ಹಾಗೂ ನಾಯಕತ್ವ ಬಹುಮಟ್ಟಿಗೆ ಕಾರಣ. ಅವರು ಅಲ್ಲೇ ನಿಂತು ಸ್ವತಃ ಎಲ್ಲವನ್ನು ನಿರ್ವಹಿಸಿದರು. ತಮ್ಮ ಹಿತವನ್ನೂ ಕಡೆಗಾಣಿಸದೆ, ಆದರೆ ಜನರ ಕಾಳಜಿಯನ್ನೇ ಮುಖ್ಯವಾಗಿ ಮಾಡಿಕೊಂಡು ಒಂದು ಕ್ರಮವನ್ನು ರೂಪಿಸಿದ್ದರು. ಸಮಸ್ಯೆಯ ಅಗಾಧತೆ ಹಾಗೂ ಅದನ್ನು ಸರಿಪಡಿಸುವುದಕ್ಕೆ ಬೇಕಾದ ಧೀರ್ಘಕಾಲೀನ ಪ್ರಯತ್ನವನ್ನು ಸ್ಪಷ್ಟವಾಗಿ ವಿವರಿಸುವುದಕ್ಕೆ ಅವರಿಗೆ ಸಾಧ್ಯವಾಗಿತ್ತು.
ಶ್ರೀ ವಿಜಯನ್ ಅವರಿಗೆ ಇನ್ನೊಬ್ಬರನ್ನು ದೂಷಿಸುವುದಕ್ಕೆ ಅಥವಾ ಚುನಾವಣಾ ರಾಜಕೀಯ ಮಾಡಲು ಸಮಯವಿರಲಿಲ್ಲ. ಅವರು ಸಮಚಿತ್ತದಿಂದ ಕೇಂದ್ರವನ್ನು ಹಾಗೂ ದಕ್ಷಿಣದ ರಾಜ್ಯಗಳನ್ನು ನಿರ್ವಹಿಸುತ್ತಿದ್ದ ರೀತಿ ಒಂದು ಮಾಗಿದ ನಾಯಕತ್ವವನ್ನು ತೋರಿಸುತ್ತಿತ್ತು. ಸಣ್ಣ ಸಣ್ಣದರಲ್ಲೂ ತಪ್ಪು ಕಂಡುಹಿಡಿಯುವ ಪ್ರವೃತ್ತಿಯನ್ನು ದೂರವಿಡುವುದರ ಮೂಲಕ ಪ್ರವಾಹವನ್ನು ಕುರಿತ ಚರ್ಚೆಗೆ ಅವರು ಒಂದು ಪಕ್ವತೆಯನ್ನು ತಂದುಕೊಟ್ಟಿದ್ದರು. ಎಲ್ಲೂ ದೂಷಣೆಯ ಆಟಕ್ಕೆ ಅವಕಾಶವಿರಲಿಲ್ಲ. ಆದರೆ ನಿರ್ವಹಿಸಬೇಕಾದ ಜವಾಬ್ದಾರಿಯ ಸರಮಾಲೆಯ ಬಗ್ಗೆ ಅವರಿಗೆ ಸ್ಪಷ್ಟತೆಯಿತ್ತು. ಜನರ ಕಾಳಜಿಯೇ ತನಗೆ ಮುಖ್ಯ, ಸಿದ್ಧಾಂತ ಹಾಗೂ ಧರ್ಮ ಅಲ್ಲ ಅನ್ನುವುದನ್ನು ಅವರು ಸ್ಪಷ್ಟಪಡಿಸಿದ್ದರು. ಪರಿಹಾರವು ಪಕ್ಷಪಾತರಹಿತವಾಗಿ ಇರುವಂತೆ ನೋಡಿಕೊಂಡರು. ಅದನ್ನು ಪಕ್ಷದ ದೃಷ್ಟಿಯಿಂದ ನೋಡುವುದಕ್ಕೂ ಅವಕಾಶ ಕೊಡಲಿಲ್ಲ. ಅವರು ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕಿಸ್ಟ್)ಕ್ಕೆ ಸೇರಿದ್ದಿರಬಹುದು. ಆದರೆ ಅವರು ಕೇರಳದ ಮುಖ್ಯಮಂತ್ರಿಯಾಗಿ ನಡೆದುಕೊಂಡರು. ಕ್ರೈಸ್ತರಿಗೆ ಸಹಾಯವಾಗುತ್ತದೆ, ಹಾಗಾಗಿ ಕೇರಳಕ್ಕೆ ನೆರವು ನೀಡಬೇಡಿ ಅನ್ನುವ ಬಲಪಂಥೀಯರು ಹರಡಿದ ಸುದ್ದಿಗಳಿಗೆ ಅವರು ಗಮನಕೊಡಲಿಲ್ಲ. ಅವರಿಗೆ ತಮ್ಮ ಉದ್ದೇಶ ಹಾಗೂ ಆದ್ಯತೆಗಳ ಕುರಿತು ಸ್ಪಷ್ಟತೆಯಿತ್ತು. ಇದು ಚುನಾವಣಾ ಅಥವಾ ಗುಂಪು ರಾಜಕೀಯಕ್ಕೆ ಸಮಯವಲ್ಲ ಎಂಬುದು ಅವರಿಗೆ ಸ್ಪಷ್ಟವಾಗಿತ್ತು.
ವಿಜಯನ್ ಅವರ ಇರುವಿಕೆಯ ಶೈಲಿಯೇ ಚರ್ಚೆಯನ್ನು ಸಾಧ್ಯವಾಗಿಸಿದೆ. ಚರ್ಚೆಯ ವಿಷಯ ತಕ್ಷಣದ ನೆರವಿನ ಕಥಾನಕವಲ್ಲ. ಕೇರಳದ ಬೆಳವಣಿಗೆಯ ದೃಷ್ಟಿಯಿಂದ ಪ್ರವಾಹವನ್ನು ಒಂದು ರೂಪಕವಾಗಿ ಚರ್ಚಿಸುವುದು ಅದರ ಮುಖ್ಯ ಕಾಳಜಿಯಾಗಿತ್ತು. ಜನ ಪರಸ್ಪರ ಕೇಳಿಸಿಕೊಳ್ಳುತ್ತಿದ್ದರು. ನಮ್ಮ ಪ್ರಮುಖ ಪರಿಸರತಜ್ಞರಾದ ಮಾಧವ ಗಾಡ್ಗೀಳ್ ’ಈಗ ಶೌರ್ಯಸಾಹಸಗಳು ಮಾತ್ರ ಸಾಕಾಗುವುದಿಲ್ಲ’ ಎಂದು ಹೇಳುತ್ತಿದ್ದಾಗ ಜನರ ಕೇಳಿಸಿಕೊಳ್ಳುತ್ತಿದ್ದ ರೀತಿಯಲ್ಲ್ಲಿ ಇದು ಸ್ಪಷ್ಟವಾಗಿ ಗೋಚರವಾಗುತ್ತಿತ್ತು. ಕೇರಳದ ಪ್ರವಾಹ ಅತಿಯಾದ ಮಳೆಯಿಂದಾಗಿ ಆಗಿದೆ ಅನ್ನುವುದನ್ನು ತಳ್ಳಿಹಾಕಲಾಗುವುದಿಲ್ಲ, ಆದರೆ ಜೊತೆಗೆ ಅದನ್ನು ಮನುಷ್ಯನಿರ್ಮಿತ ಪ್ರಕೋಪವಾಗಿಯೂ ನೋಡಬೇಕು ಎಂದೂ ಹೇಳಿದರು.
ಮಾಧವ ಗಾಡ್ಗೀಳ್ ಕೇರಳದ ಬೆಳವಣಿಗೆಯನ್ನು ಕುರಿತಂತೆ ಧೀರ್ಘಕಾಲೀನ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ ಎಂಬುದನ್ನು ಜನ ಅರ್ಥಮಾಡಿಕೊಂಡಿದ್ದರು. ಅದರಲ್ಲಿ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ ಪಕ್ಷ ಎರಡರ ಜವಾಬ್ದಾರಿಯೂ ಇದೆ. ಅದಕ್ಕೆ ಬಂದ ಪ್ರತಿಕ್ರಿಯೆ ಮುಕ್ತವಾಗಿತ್ತು. ಯಾಕೆಂದರೆ ಅವರು ತಮ್ಮ ವರದಿಯ ಪರವಾಗಿ ವಾದಿಸುತ್ತಿರಲಿಲ್ಲ ಎಂಬುದನ್ನು ಪ್ರೇಕ್ಷಕರು ಮನಗಂಡಿದ್ದರು. ಗಾಡ್ಗೀಳ್ ಭವಿಷ್ಯದಲ್ಲಿ ಜನರು ಅನುಭವಿಸಬಹುದಾದ ಯಾತನೆಯನ್ನು ತೊಡೆದುಹಾಕುವ ಬಗೆಯನ್ನು ಗಮನಿಸುತ್ತಿದ್ದರು. ಭವಿಷ್ಯವನ್ನು ಕುರಿತಂತೆ ರಾಜಕೀಯ ಹಾಗೂ ವಿಜ್ಞಾನ ಈ ಪರಸ್ಪರ ಹೊಣೆಗಾರಿಕೆಯನ್ನು ಸೃಷ್ಟಿಸಲು ಒಂದಾಗಿತ್ತ್ತು.
ಈ ಕಥಾನಕದ ಶಕ್ತಿ ಅಂದರೆ ಒಂದು ಕಾಲಸೂಚಿಯನ್ನು ರೂಪಿಸಿದ್ದು ಮತ್ತು ಅದರಲ್ಲಿ ಹೊಣೆಗಾರಿಕೆಯ ಸ್ವರೂಪವನ್ನು ಸ್ಪಷ್ಟವಾಗಿ ವಿವರಿಸಿದ್ದು. ಜನರ ಪ್ರತಿಕ್ರಿಯೆಯ ಧಾಟಿ ಮತ್ತು ನಡವಳಿಕೆ ಚರ್ಚೆಯ ಗುಣಮಟ್ಟವನ್ನು ಪ್ರಭಾವಿಸಿತ್ತು. ವಿಕೋಪಕ್ಕೆ ಕೇರಳ ಧೈರ್ಯ ಹಾಗೂ ಘನತೆಯಿಂದ ಪ್ರತಿಕ್ರಿಯಿಸಿತ್ತು. ಒಂದು ಮಿಲಿಯನ್‌ಗಿಂತ ಹೆಚ್ಚು ಮಂದಿ ತಮ್ಮ ಮನೆಗಳು ಹಾಳಾಗಿವೆ ಅಥವಾ ನಾಶಗೊಂಡಿವೆ ಅನ್ನುವುದನ್ನು ಅರ್ಥಮಾಡಿಕೊಂಡು ತಾತ್ಕಾಲಿಕ ಕ್ಯಾಂಪುಗಳಿಗೆ ಹೋಗಿದ್ದರು
ಸಾಮಾಜಿಕ ಐಕ್ಯತೆ
ಪ್ರತಿಕ್ರಿಯೆಗಳು ಅದರಲ್ಲೂ ವಿಶೇಷವಾಗಿ ವಯಸ್ಸಾದವರ ಪ್ರತಿಕ್ರಿಯೆಗಳು ಇಡೀ ಚರ್ಚೆಯ ಘನತೆಯನ್ನು ಮತ್ತಷ್ಟು ಹೆಚ್ಚಿಸಿತ್ತು. ಕೇರಳವು ಬಲಿಪಶುವಾದ ಜನರ ಗುಂಪಿನಂತೆ ನಡೆದುಕೊಳ್ಳಲಿಲ್ಲ. ಅದು ಕರ್ತೃತ್ವಕ್ಕೆ ಒತ್ತುನೀಡಿತು ಮತ್ತು ಪೌರಕರ್ತವ್ಯಕ್ಕೆ ಒಂದು ಆವರಣವನ್ನು ನಿರ್ಮಿಸಿಕೊಟ್ಟಿತು. ರಾಜ್ಯದಿಂದಾಚೆ ನೆಲೆಸಿರುವ ಕೇರಳಿಗರು ತಕ್ಷಣವೇ ಸ್ಪಂದಿಸಿದರು. ಸರ್ಕಾರದ ಆಡಳಿತದ ವಿಧಾನ ಮತ್ತು ಸ್ವಯಂಸಹಾಯದ ಉತ್ಸಾಹಗಳ ನಡುವೆ ಕೇರಳ ತುಂಬಾ ವಿಶಿಷ್ಟವಾದ ಸಾಮಾಜಿಕ ಐಕ್ಯತೆಯನ್ನು ಸೃಷ್ಟಿಸಿತು. ಜನ ಪರಸ್ಪರ ತಮ್ಮ ತಪ್ಪನ್ನು ಒಪ್ಪಿಕೊಂಡರು. ಕಾರ್ಯಕ್ಷಮತೆ ಮತ್ತು ಸಹಾನುಭೂತಿಯ ಪ್ರಬಲ ಸಂವೇದನೆಯನ್ನು ಸ್ವಯಂಸಹಾಯತತ್ವವು ಮತ್ತಷ್ಟು ಹೆಚ್ಚಿಸಿತು. ಇಂತಹ ಆದರ್ಶಪ್ರಾಯವಾದ ಪೌರಪ್ರಜ್ಞೆಯ ಕಲ್ಪನೆ ಚರ್ಚೆಯು ಯಾವ ಹಾದಿಯಲ್ಲಿ ಸಾಗಬೇಕೆಂಬುದನ್ನು ನಿರ್ಧರಿಸಿತು. ಪ್ರವಾಹದಿಂದ ಪಾರಾದವರು ಮತ್ತು ಸಂತ್ರಸ್ತರು ಇಬ್ಬರೂ ತಾವು ನಾಗರಿಕರು ಎಂಬುದನ್ನು ಒತ್ತಿ ಹೇಳಿದರು ಮತ್ತು ಇಂತಹ ವಿಕೋಪದ ಪರಿಸ್ಥಿತಿಯಲ್ಲಿ ನಾಗರಿಕ ಕರ್ತವ್ಯಗಳ ವಿಸ್ತೃತವಾದ ವಿವರಣೆಯು ಕೇರಳವನ್ನು ಪ್ರಜಾಸತ್ತಾತ್ಮಕ ಕಲ್ಪನೆಯ ಮಾದರಿಯನ್ನಾಗಿ ಮಾಡಿದೆ. ರಾಜಕೀಯ ಅರ್ಥಶಾಸ್ತ್ರವನ್ನು ಮೀರಿಕೊಂಡ ಭಾಷೆಯೊಂದು ಯಾತನೆಗೆ ದೊರಕಿತು. ಆದರೆ ಪರಿಸರ ಮತ್ತು ಅಭಿವೃದ್ಧಿಯಲ್ಲಿ ಯಾತನೆಯು ಒಂದು ದೂರಗಾಮಿಯಾದ ಸ್ಥಾನವನ್ನು ಕಂಡುಕೊಂಡಿತು. ಪ್ರವಾಹ ಎನ್ನುವುದು ದೇವರು ಅಥವಾ ಪ್ರಕೃತಿಯ ಕೃತ್ಯವಾಗದೇ, ಸಮಾಜಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಬೇಕಾದ ಒಂದು ಸಾಮಾಜಿಕ ಸಂಗತಿಯಾಯಿತು.
ಕೇಂದ್ರವು ಒಂದು ವೇಳೆ ತುಂಬಾ ಸಂಕುಚಿತವಾಗಿ ಮತ್ತು ಸ್ಥಳೀಯವಾಗಿ ಪ್ರತಿಕ್ರಿಯಿಸಿದರೂ ಕೂಡ, ಅಂತಿಮವಾಗಿ ಪ್ರವಾಹಗಳು ಪ್ರಜಾಸತ್ತಾತ್ಮಕ ಕಲ್ಪನೆಗೆ ಒಂದು ಸವಾಲಾಗುತ್ತವೆ ಅಷ್ಟೇ ಅಲ್ಲ ಫೆಡರೇಷನ್ನಿನ ಪರಿಕಲ್ಪನೆಯ ಭವಿಷ್ಯವನ್ನು ಪುನರ್ ಪರಿಶೀಲಿಸುವಂತೆ ನಮ್ಮನ್ನು ಒತ್ತಾಯಿಸುತ್ತದೆ ಎನ್ನುವುದು ಕೇರಳ ಸರ್ಕಾರಕ್ಕೆ ಅರಿವಾಗಿತ್ತು. ಕೇಂದ್ರ ಸರ್ಕಾರ ಊಹಿಸಲೂ ಸಾಧ್ಯವಾಗದ ಪ್ರಮಾಣದ ಅನುದಾನವನ್ನು ನೀಡುವ ಇಂಗಿತವನ್ನು ಪಶ್ಚಿಮ ಏಷ್ಯಾ ವ್ಯಕ್ತಪಡಿಸಿದಾಗ ಕೇಂದ್ರದಲ್ಲಿ ಗದ್ದುಗೆ ಹಿಡಿದಿರುವ ಭಾರತೀಯ ಜನತಾ ಪಕ್ಷ ಅದನ್ನು ತಿರಸ್ಕರಿಸಿತು. ಈಗ ನಮ್ಮ ಮುಂದಿರುವ ಪ್ರಶ್ನೆ ಪ್ರಭುತ್ವದ ಸ್ವಾಯತ್ತತೆಯ ಹಿಂದಿನ ಕನಸುಗಳನ್ನು ಪ್ರಶ್ನಿಸಬಹುದೇ ಅಥವಾ ವಿದೇಶೀ ನೆರವನ್ನೂ ಇನ್ನೂ ಕಳಂಕದ ಕಣ್ಣಿನಿಂದಲೇ ನೋಡಬೇಕೆ ಎಂಬುದು. ನೋವಿನ ವಿಚಾರವೆಂದರೆ, ಸಿಲಿಕಾನ್ ಕಣಿವೆಯಲ್ಲಿ ಅನಿವಾಸಿಗಳ (ಎನ್‌ಆರ್‌ಐಗಳ) ಹೂಡಿಕೆಯ ಬಗ್ಗೆ ತುಂಬಾ ಉತ್ಸುಕವಾಗಿರುವ ಬಿಜೆಪಿಯು ಕೊಲ್ಲಿ ರಾಷ್ಟ್ರಗಳ ರಾಜಕೀಯ ಅರ್ಥಶಾಸ್ತ್ರದಲ್ಲ್ಲಿ ತನ್ನ ಪಾತ್ರವನ್ನು ಸ್ವಲ್ಪವೂ ಅರ್ಥಮಾಡಿಕೊಂಡಿಲ್ಲ.
ಅಲ್ಲಿ ಮತ್ತೆ ನವೀಕರಣಗೊಂಡಿದ್ದು ಒಂದು ರಾಜ್ಯಕ್ಕಿಂತ ಹೆಚ್ಚಾಗಿ ಸಾಮಾಜಿಕ ಪ್ರಜ್ಞೆ. ಹಿಂದಿದ್ದ ಕೇರಳವನ್ನು ನೆರೆ ಸಂಪೂರ್ಣವಾಗಿ ಅಳಿಸಿಹಾಕಿದೆ ಎಂಬ ಒಂದು ಅರಿವು ಅಲ್ಲಿ ಮೂಡಿದೆ. ಹಳೆಯದರ ಸ್ಥಳದಲ್ಲಿ ಒಂದು ಹೊಸ ಸಮಾಜವನ್ನು ಕಂಡಕೊಳ್ಳಬೇಕಾಗಿದೆ. ರಕ್ಷಣೆ, ಪರಿಹಾರ, ಪುನರ್‌ವಸತಿ ಎಂಬ ಪ್ರಕೋಪದ ಮಾಮೂಲಿ ಕಥಾನಕದಿಂದ ರಕ್ಷಣೆ, ಪರಿಹಾರ ಹಾಗೂ ಪುನರ್‌ನಿರ್ಮಾಣ ಸಾಧ್ಯವಾಗಿದೆ. ಪರಿಸರ ಹಾಗೂ ಬೆಳವಣಿಗೆಯನ್ನು ಕುರಿತು ಯೋಚಿಸುವ ಒಂದು ಹೊಸ ಕೇರಳವನ್ನು ಸೃಷ್ಟಿಸಿಬೇಕಾಗಿದೆ ಎಂಬುದರ ಬಗ್ಗೆ ಶ್ರೀ ವಿಜಯನ್ ಅವರಿಗೆ ಸ್ಪಷ್ಟವಿದೆ. ಹಳೆಯ ದುರಂತದಿಂದ ಚೇತರಿಸಿಕೊಳ್ಳುವುದರ ಜೊತೆಗೆ ಮೂಲ ಸೌಕರ್ಯದ ಬಾಳಿಕೆಯ ಬಗ್ಗೆಯೂ ಯೋಚನೆ ಮಾಡಬೇಕಾಗಿದೆ. ವಿಜಯನ್ ಅವರೇ ಹೇಳಿರುವಂತೆ ೧೯೨೪ರ ಪ್ರವಾಹದ ಸಮಯದಲ್ಲಿ ಒಂದು ಅಣಿಕಟ್ಟು ಇತ್ತು. ಇಂದು ೪೨ ದೊಡ್ಡ ಅಣಿಕಟ್ಟುಗಳೂ ಸೇರಿದಂತೆ ೮೨ ಅಣೆಕಟ್ಟುಗಳು ಇವೆ. ಇಂದು ಹೊಸ ಬಗೆಯ ನಿಯಂತ್ರಣ ಹಾಗೂ ತಾಳಿಕೆಯನ್ನು ಕಂಡುಕೊಳ್ಳಬೇಕಾಗಿದೆ. ಈ ಚಿಂತನೆಯ ಹಿಂದೆ ಸರ್ಕಾರಗಳು ಇಂತಹ ದುರಂತಗಳನ್ನು ಮಾದರಿಯಾಗಬಲ್ಲಂತಹ ಬದಲಾವಣೆಯ ಕ್ಷಣಗಳಾಗಿ ಬಳಸಿಕೊಳ್ಳಬೇಕು ಎಂಬ ವಿಚಾರವೂ ಇತ್ತು. ಕೇರಳಕ್ಕೆ ಆವಶ್ಯಕವಾಗಿರುವ ಮೂಲಭೂತ ಸೌಕರ್ಯವನ್ನು ನಿರ್ಮಿಸುವುದಕ್ಕೆ ಕನಿಷ್ಟ ಎರಡು ದಶಕಗಳು ಬೇಕು. ಒಂದು ಪ್ರವಾಹವೆನ್ನುವುದು ಪ್ರಜಾಸತ್ತಾತ್ಮಕತೆ ಹಾಗು ಆಡಳಿತವನ್ನು ಕುರಿತು ಮರುಚಿಂತನೆ ಮಾಡುವುದಕ್ಕೆ, ಅದನ್ನು ಪರಿಸರ, ಸಂಸ್ಕೃತಿ ಹಾಗೂ ಬದುಕಿನೊಂದಿಗೆ ಮತ್ತೆ ಜೋಡಿಸುವುದಕ್ಕೆ ಒಂದು ಅವಕಾಶವಾಗಿದೆ.
ಆದರೂ ಇನ್ನೂ ಉತ್ತರಕಂಡುಕೊಳ್ಳಬೇಕಾದ ಹಲವಾರು ಪ್ರಶ್ನೆಗಳಿವೆ. ಗಾಡ್ಗೀಳ್ ಹೇಳಿದ್ದು ಸರಿ. ನಮಗೆ ಒಂದು ನೈತಿಕ ಹಾಗೂ ಆರ್ಥಿಕ ಕಲ್ಪನೆಯಾಗಿ ಪರಿಸರಾತ್ಮಕ ಒಳನೋಟ ಇರಬೇಕು. ಪ್ರಕೃತಿಯನ್ನು ಧರ್ಮದರ್ಶಿತ್ವದ (ಟ್ರಸ್ಟೀಶಿಪ್‌ನ) ಕ್ರಿಯೆಯಾಗಿ ನೋಡುವುದಕ್ಕೆ ಸಾಧ್ಯವಾಗಬೇಕು. ಅದರ ಶಕ್ತಿ ಹಾಗೂ ಕೋಪವನ್ನು ಅರ್ಥಮಾಡಿಕೊಳ್ಳುವುದಕ್ಕೆ ಆಗಬೇಕು. ಪ್ರವಾಹದಿಂದ ಪಾರಾಗಿ ಉಳಿದವರೊಬ್ಬರು ನದಿ ತಾನು ಕಳೆದುಕೊಂಡಿದ್ದ ತನ್ನತನವನ್ನು ಮತ್ತೆ ಪಡೆದುಕೊಂಡಿದೆ ಎಂದು ಹೇಳಿದರಂತೆ. ತನ್ನ ಸಂಪ್ರದಾಯಿಕ ಹಾಗೂ ಜಾಗತಿಕ ಪ್ರಜ್ಞೆಯನ್ನು ಸೃಜನಶೀಲ ಬಗೆಗಳಲ್ಲಿ ಬೆಸೆಯುತ್ತಿರುವ ಕೇರಳಕ್ಕೆ ತನ್ನ ನಾಶವಾಗಿರುವ ಪರಿಸರಾತ್ಮಕ ಅಸ್ತಿತ್ವವನ್ನು ಬಳಕೆ ಹಾಗೂ ಬೆಳವಣಿಗೆಯ ಮರೆವನ್ನು ಮೀರಿಕೊಂಡು ನೋಡುವುದಕ್ಕೆ ಬಹುಶಃ ಇದು ಸಕಾಲವೆನಿಸುತ್ತದೆ.
ನೆನಪಿಡಲು ಕಲಿಯೋಣ
ಹಳೆಯ ಮಾದರಿಗಳ ದುರಂತದ ಸಂದರ್ಭದಲ್ಲಿನ ಒಂದು ದೊಡ್ಡ ತಪ್ಪನ್ನು ಗಮನಿಸಬೇಕು. ದುರಂತಗಳು ಪ್ರಮಾಣ ಎಷ್ಟೇ ದೊಡ್ಡದಿರಲಿ, ಆ ಸಂದರ್ಭದ ಕಾರ್ಯನೀತಿಯ ನೆನಪುಗಳು ನಮ್ಮಲ್ಲಿ ಉಳಿದಿರುವುದಿಲ್ಲ. ಹಳೆಯ ಪಾಠಗಳನ್ನು ನಾವು ಕಲಿಯುವುದಿಲ್ಲ ಹೊಸದನ್ನೂ ಮರೆತುಬಿಡುತ್ತೇವೆ. ಕಥಾನಕವಾಗಿ ದುರಂತಗಳಿಗೆ ಕಥೆಹೇಳುವ ಗುಣ ಇರಬೇಕು. ನೀತಿಕಥೆಗಳಂತೆ ಅವುಗಳನ್ನು ಪುನರಾವರ್ತಿಸುತ್ತಿರಬೇಕು, ಮತ್ತೆ ಮತ್ತೆ ಹೊಸ ರೀತಿಯಲ್ಲಿ ಹೇಳುತ್ತಿರಬೇಕು, ಮರುಚಿಂತನೆ ಮಾಡುತ್ತಿರಬೇಕು. ಕಥೆಗಾರ ಹಾಗೂ ನೀತಿ ರೂಪಿಸುವವನು ಪ್ರವಾಹ ಕೇರಳವನ್ನು ಪುನರುಜ್ಜೀವನಗೊಳಿಸಿ, ಪುನರ್ ನಿರ್ಮಿಸುವ ಚಿತ್ರವನ್ನು ನೇಯುತ್ತಿರಬೇಕು. ನೋವಿನ ಕಥನವನ್ನು ನ್ಯಾಯದ ಹೊಸ ಮಾದರಿಗಳನ್ನಾಗಿ ಬದಲಿಸಬೇಕು. ಈ ಸಮಸ್ಯೆಗೆ ಪರಿಹಾರಕಂಡುಕೊಳ್ಳಲು ಮನಸ್ಸಿನ ಹೊಸ ಪಂಚಾಯಿತಿಗಳನ್ನು ಕೇರಳ ಸೃಷ್ಟಿಸಬೇಕು.
https://www.thestate.news/current-affairs/2018/08/31/lets-make-a-new-thought-on-kerala-disaster