ಜನ-ಕೇಂದ್ರಿತ ಸ್ಪಂದನ ಬೇಕು – ಪಿನರಾಯಿ ವಿಜಯನ್

 In corona-covid-19, ECONOMY

ಪಿನರಾಯಿ ವಿಜಯನ್, ಮುಖ್ಯ ಮಂತ್ರಿಗಳು, ಕೇರಳ
ಅನುವಾದ: ಟಿ ಎಸ್ ವೇಣುಗೋಪಾಲ್

ಕೋವಿಡ್-೧೯ ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ಇಂಡಿಯಾ ಇಂದು ಅತ್ಯಂತ ಸಂಕಷ್ಟದ ಹಂತದಲ್ಲಿದೆ. ಲಾಕ್‌ಡೌನ್ ಅನಿವಾರ್ಯವಾಗಿದೆ. ಪ್ರಧಾನ ಮಂತ್ರಿಯವರು ಘೋಷಿಸುವುದಕ್ಕೂ ಮೊದಲೇ ಕೇರಳವೂ ಸೇರಿದಂತೆ ಸುಮಾರು ೨೧ ರಾಜ್ಯಗಳು ಲಾಕ್ ಡೌನ್ ಘೋಷಿಸಿದ್ದವು. ಈ ಭೀಕರ ಬಿಕ್ಕಟ್ಟನ್ನು ಎದುರಿಸುವಲ್ಲಿ ನಾವೆಲ್ಲರೂ ಒಂದಾಗಿ ನಿಲ್ಲುವುದು ತಂಬಾ ಮುಖ್ಯ.
ನಾವು ಲಾಕ್ ಡೌನ್ ಹಾದಿಯಲ್ಲಿ ಸಾಗುತ್ತಿರುವ ಸಂದರ್ಭದಲ್ಲಿ ರಾಜ್ಯಕ್ಕೆ ಬಹಳವಾದ ಮುಖ್ಯವಾದ ಜವಾಬ್ದಾರಿಗಳಿವೆ. ಜನರ ಘನತೆ ಹಾಗೂ ಅವರ ಹಕ್ಕನ್ನು ರಕ್ಷಿಸುತ್ತಲೇ ಲಾಕ್ ಡೌನ್ ಅನ್ನು ಜಾರಿಗೊಳಿಸುವುದರಲ್ಲಿ ಅದು ಮುಂದಾಳತ್ವ ವಹಿಸಬೇಕು. ಜನರಲ್ಲಿ ಲಾಕ್ ಡೌನ್ ಸಮಯದಲ್ಲಿ ಏನು ಮಾಡಬೇಕು ಏನು ಮಾಡಬಾರದು ಎಂಬುದರ ಬಗ್ಗೆ ಅರಿವು ಮೂಡಿಸಬೇಕು. ಸಮಾಜದ ಎಲ್ಲಾ ವರ್ಗದ ಜನರನ್ನು ತನ್ನೊಟ್ಟಿಗೆ ತೆಗೆದುಕೊಂಡು ಹೋಗುವುದಕ್ಕೆ ಅದಕ್ಕೆ ಸಾಧ್ಯವಾಗಬೇಕು.
ಆರೋಗ್ಯ ವ್ಯವಸ್ಥೆ ೨೪ ಗಂಟೆಯೂ ಕೆಲಸ ಮಾಡುತ್ತಿರಬೇಕು. ಅದೇ ಸಮಯದಲ್ಲಿ ಜನತೆ ಕೂಡ ತನ್ನ ಜವಾಬ್ದಾರಿಯನ್ನು ನಿರ್ವಹಿಸಬೇಕು. ಲಾಕ್‌ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಒಂದೊಂದು ಜೀವವೂ ಮುಖ್ಯ. ನಾವು ಸ್ವಲ್ಪ ಎಚ್ಚರ ತಪ್ಪಿದರೂ ಸೋಂಕಿತರ ಸಂಖೈ ತಕ್ಷಣ ಏರಿಬಿಡಬಹುದು. ನಾವು ಈವರೆಗೆ ಸಾಧಿಸಿದ್ದೆಲ್ಲಾ ವ್ಯರ್ಥವಾಗಿಬಿಡಬಹುದು.
ಲಾಕ್ ಡೌನ್ ಸಮಯವನ್ನು ಕೇಂದ್ರ ಕೇವಲ ಸೋಂಕಿನ ಸರಪಳಿಯನ್ನು ತುಂಡರಿಸುವುದಕ್ಕೆ ಮಾತ್ರವಲ್ಲ ಸೊಂಕಿತರನ್ನು ಒಟ್ಟಾರೆ ಜನರಿಂದ ಪ್ರತ್ಯೇಕಿಸಿಟ್ಟು ನೋಡಿಕೊಳ್ಳುವುದಕ್ಕೆ ಗಮನಕೊಡಬೇಕು. ತೀವ್ರ ನಿಗಾ ಬೇಕಾದವರೂ ಸೇರಿದಂತೆ ವಿವಿಧ ಹಂತದಲ್ಲಿರುವ ಸೋಂಕಿತರಿಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಕೇಂದ್ರ ಕಾರ್ಯೋನ್ಮುಖವಾಗಬೇಕು. ಪ್ರಧಾನ ಮಂತ್ರಿಯವರು ೧೫,೦೦೦ ಕೋಟಿ ರೂಪಾಯಿಗಳನ್ನು ತುರ್ತು ಸಂದರ್ಭಕ್ಕೆ ಮೀಸಲಿಟ್ಟಿರುವುದನ್ನು ಸ್ವಾಗತಾರ್ಹ. ಆದರೆ ಈ ಹಣವನ್ನು ಹೇಗೆ ಖರ್ಚು ಮಾಡಲಾಗುತ್ತದೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಮೂಲಭೂತ ಸೌಲಭ್ಯವನ್ನು ಹೆಚ್ಚಿಸುವುದರಲ್ಲಿ ರಾಜ್ಯಗಳಿಗೆ ಹೇಗೆ ನೆರವು ನೀಡಲಾಗುತ್ತದೆ ಎನ್ನುವುದು ಸ್ಪಷ್ಟವಾಗಬೇಕು.

ಆರೋಗ್ಯಕ್ಕಾಗಿ ಒಟ್ಟಾಗಿ ಕೆಲಸ ಮಾಡೋಣ
ಕೇಂದ್ರ ಸರ್ಕಾರ ಮಾರ್ಚ ೨೬ರಂದು ಹಲವು ಪ್ರಮುಖ ಕ್ರಮಗಳನ್ನು ಘೋಷಿಸಿದೆ. ನಾನು ಈ ಪರಿಹಾರ ಕ್ರಮಗಳನ್ನು ಸ್ವಾಗತಿಸುತ್ತೇನೆ. ಬರುವ ದಿನಗಳಲ್ಲಿ ಇದನ್ನು ಮತ್ತಷ್ಟು ವಿಸ್ತರಿಸಬೇಕೆಂದು ಒತ್ತಾಯಿಸುತ್ತೇನೆ.
ನಾವು ರಾಷ್ಟ್ರ ಮಟ್ಟದಲ್ಲಿ ಇದಕ್ಕೆ ಸಾಕಷ್ಟು ತಯಾರಿಯನ್ನು ಮಾಡಿಕೊಳ್ಳಬೇಕು. ಅದೇ ಸಮಯದಲ್ಲಿ ಆರೋಗ್ಯ ರಾಜ್ಯದ ವಿಷಯ ಅನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ವಿತ್ತೀಯ ಫೆಡರಿಲಿಸಂ, ವಿಕೇಂದ್ರಿತ ಆಡಳಿತ ಮತ್ತು ತಮ್ಮ ಅವಶ್ಯಕತೆ ಹಾಗೂ ಬೇಕುಗಳನ್ನು ನೋಡಿಕೊಳ್ಳಲು ರಾಜ್ಯಗಳಿಗೆ ನಮ್ಯತೆ ಬೇಕು. ಇವೆಲ್ಲಾ ವೈರಾಣು ವಿರುದ್ಧದ ಹೋರಾಟದ ಭಾಗವಾಗಬೇಕು. ಲಾಕ್ ಡೌನ್ ನಿಭಾಯಿಸುವುದು ಮತ್ತು ನಂತರದ ಆರ್ಥಿಕ ಮರುಚೇತರಿಕೆ ಕೂಡ ಈ ಹೋರಾಟದ ಭಾಗವೇ. ಕೇಂದ್ರ ಸರ್ಕಾರವು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಂತ್ರಿಗಳನ್ನೊಳಗೊಂಡ ಸಲಹಾ ಸಮಿತಿಯನ್ನು ಸ್ಥಾಪಿಸಬೇಕು. ಎದುರಾಗುತ್ತಿರುವ ತೊಂದರೆಗಳನ್ನು ಹಾಗೂ ಪ್ರಗತಿಯನ್ನು ಪರಿಶೀಲಿಸುವುದು ಅದರ ಕೆಲಸವಾಗಬೇಕು. ವಿವಿಧ ರಾಜ್ಯಗಳ ನನ್ನ ಸಹದ್ಯೋಗಿಗಳು ವಿಭಿನ್ನ ಕ್ರಮಗಳನ್ನು ತೆಗದುಕೊಳ್ಳುತ್ತಿದ್ದಾರೆ. ನಮಗೆ ಒಬ್ಬರಿಂದ ಒಬ್ಬರಿಗೆ ಪರಸ್ಪರ ಕಲಿಯುವುದಕ್ಕೆ ಹಲವು ಅಂಶಗಳಿರಬಹುದು.
ಕೇರಳದಲ್ಲಿ ನಾವು ಅವಶ್ಯಕ ವಸ್ತುಗಳು ದೊರೆಯುವಂತೆ ಮಾಡಲು ಬಹಳ ಪ್ರಯತ್ನ ಮಾಡುತ್ತಿದ್ದೇವೆ. ಅದರಲ್ಲೂ ವಿಶೇಷವಾಗಿ ಆಹಾರ ಮತ್ತು ಔಷಧಿಗಳು ಸಿಗುವಂತೆ ಮಾಡಲು ತುಂಬಾ ಪ್ರಯತ್ನಿಸುತ್ತಿದ್ದೇವೆ. ವಿಶೇಷವಾಗಿ ದುರ್ಬಲ ವರ್ಗದ ಜನರನ್ನು ರಕ್ಷಿಸಿವ ಪ್ರಯತ್ನ ನಡೆದಿದೆ. ಶಾಲೆಗಳನ್ನು ಮಾರ್ಚ್ ೧೦ರಂದು ಕೇರಳದ ಸರ್ಕಾರ ಮುಚ್ಚಿದ ಕೂಡಲೆ ನಮ್ಮ ಮಹಿಳಾ ಹಾಗು ಶಿಶು ಅಭಿವೃದ್ಧಿ ಇಲಾಖೆಯು ಪ್ರತಿಯೊಬ್ಬ ಶಾಲಾ ಪೂರ್ವ ವಿದ್ಯಾರ್ಥಿಗಳಿಗೆ ಪ್ರತಿ ಅಂಗನವಾಡಿ ಕೇಂದ್ರಗಳಲ್ಲಿ ಅಕ್ಕಿ, ಬೇಳೆ, ಗೋಧಿ ತರಿ, ಕಡಲೆಕಾಯಿ, ಬೆಲ್ಲ, ಎಣ್ಣೆ ಇವುಗಳನ್ನು ದೊರಕುವಂತೆ ವ್ಯವಸ್ಥೆ ಮಾಡಿತು. ಗರ್ಬಿಣಿ ಹಾಗು ಹಾಲುಕುಡಿಸುತ್ತಿರುವ ತಾಯಂದಿರಿಗೆ ಮತ್ತು ಆರು ತಿಂಗಳಿನಿಂದ ಮೂರು ವರ್ಷದ ಮಕ್ಕಳಿಗೆ ಆರು ತಿಂಗಳಿಗೆ ಬೇಕಾಗುವ ಮನೆಗೆ ರೇಷನ್ ವಿತರಿಸಲು ಕ್ರಮ ತೆಗೆದುಕೊಳ್ಳಲಾಯಿತು.
ಈ ಯೋಜನೆಯನ್ನು ೩೩,೧೧೫ ಕೇಂದ್ರಗಳಲ್ಲಿ ತರಲಾಗಿದೆ. ನಮಗೆ ೮.೩ ಲಕ್ಷ ಜನರ ಪೋಷಕಾಂಶಗಳ ಅವಶ್ಯಕೆಯನ್ನು ಪೂರೈಸಲು ಸಾಧ್ಯವಾಗಿದೆ. ಕೆಲವು ಅಂಗನವಾಡಿಗಳಲ್ಲಿ ತರಕಾರಿ ಹಾಗೂ ಮೊಟ್ಟಿಗಳನ್ನು ಕೂಡ ವಿತರಿಸಲಾಗಿದೆ. ಭಾರತದ ಸುಪ್ರಿಂ ಕೋರ್ಟು ಕೂಡ ಈ ದಿಕ್ಕಿನಲ್ಲಿ ನಮ್ಮ ರಾಜ್ಯ ಮಾಡಿರುವ ಪ್ರಯತ್ನವನ್ನು ಮೆಚ್ಚಿಕೊಂಡಿದೆ. ಇದು ನಮಗೆ ಸಂತೋಷದ ವಿಷಯ.

ಕೇರಳ ಮಾದರಿ
ಕೇರಳ ಪ್ರತಿಯೊಬ್ಬರಿಗೂ ಅವಶ್ಯಕ ಸಾಮಾನುಗಳು ಹಾಗೂ ಸೇವೆಗಳು ದೊರಕುವ ಹಾಗೆ ನೋಡಿಕೊಳ್ಳುತ್ತದೆ. ಲಾಕ್ ಡೌನ್ ಸಮಯದಲ್ಲಿ ಒಬ್ಬನೇ ಒಬ್ಬ ವ್ಯಕ್ತಿಯೂ ಹಸಿವಿನಿಂದ ಇರುವುದಕ್ಕೆ ನಮ್ಮ ಸರ್ಕಾರ ಬಿಡುವುದಿಲ್ಲ. ನಮ್ಮ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಬಲಗೊಳಸಿದ್ದೇವೆ. ಆಧ್ಯತೆಯ ಪಟ್ಟಿಯಲ್ಲಿ ಬಾರದ ಎಲ್ಲಾ ಕುಟುಂಬಗಳಿಗೂ ಪ್ರತಿತಿಂಗಳು ಪುಕ್ಕಟೆ ೧೫ ಕೆಜಿ ಆಹಾರ ಪದಾರ್ಥ ಸಿಗುವಂತೆ ನೋಡಿಕೊಳ್ಳಲಾಗಿದೆ. ಇದನ್ನು ಆಧ್ಯತೆಯ ಗುಂಪಿನಲ್ಲಿ ಬರುವ ಪ್ರತಿ ಕುಟುಂಬಗಳಿಗೆ ನೀಡುವ ೩೫ ಕೆಜಿ ಜೊತೆಗೆ ಹೆಚ್ಚುವರಿಯಾಗಿ ನೀಡಲಾಗುತ್ತದೆ. ಕ್ವಾರಂಟೈನಲ್ಲಿರುವ ಜನರಿಗೆ ಅವಶ್ಯಕತೆ ಬಂದ ಸಂದರ್ಭದಲ್ಲಿ ಸರ್ಕಾರ ಈಗಾಗಲೇ ಅಂತಹ ಕಿಟ್ಟನ್ನು ವಿತರಿಸುತ್ತಿದೆ. ಪಡಿತರ ಅಂಗಡಿಗಳಲ್ಲಿ ಹಾಗೂ ದಿನಸಿ ಅಂಗಡಿಗಳಲ್ಲಿ ಜನ ಗುಂಪು ಸೇರುವುದನ್ನು ತಪ್ಪಿಸಲು ಮನೆಮನೆಗೆ ಅವುಗಳನ್ನು ವಿತರಿಸಲು ವ್ಯವಸ್ಥೆ ಮಾಡಲಾಗಿದೆ. ಅದನ್ನು ತಳಮಟ್ಟದಲ್ಲಿ ಜಾರಿಗೊಳಿಸಲು ನಾವು ನಮ್ಮ ಸ್ಥಳೀಯ ಸಂಘಟನೆಗಳನ್ನು ಬಳಸಿಕೊಳ್ಳಲು ಯೋಚಿಸುತ್ತಿದ್ದೇವೆ. ರಾಜ್ಯ ಸರ್ಕಾರದ ಕ್ಯಾಂಟೀನ್ ಮೂಲಕ ಪ್ಲೇಟಿಗೆ ೨೦ ರೂಪಾಯಿಯಂತೆ ಪೌಷ್ಟಿಕ ಊಟವನ್ನು ಕೊಡಲಾಗುತ್ತಿದೆ.
ನಮ್ಮ ಕೈಗಾರಿಕಾ ಇಲಾಖೆಯು ತನ್ನ ಸರ್ಕಾರಿ ವಲಯದ ಉದ್ದಿಮೆಗಳನ್ನು ಹ್ಯಾಂಡ್ ಸ್ಯಾನಿಟೈಸರ್ ಬಾಟೆಲುಗಳ ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸಲು ಸೂಚಿಸಲಾಗಿದೆ. ಅವು ನಮ್ಮ ಕರೆಗೆ ತಕ್ಷಣ ಸ್ಪಂದಿಸಿ ಪ್ರತಿ ದಿನ ಒಂದು ಲಕ್ಷ ಬಾಟೆಲುಗಳನ್ನು ಹೆಚ್ಚುವರಿಯಾಗಿ ತಯಾರಿಸುತ್ತಿವೆ. ಕೋವಿಡ್-೧೭ ಚಿಕಿತ್ಸೆಗೆ ಬೇಕಾದ ಔಷಧಿಗಳ ಕೊರತೆ ಬೀಳದಂತೆ ನೋಡಿಕೊಳ್ಳಲು ಕೇರಳ ಸರ್ಕಾರದ ಡ್ರಗ್ಸ್ ಅಂಡ್ ಫಾರ್ಮಸಿಟಿಕಲ್ ಲಿಮಿಟೆಡ್ ಅವರಿಗೆ ೨೫ ಕೋಟಿ ರೂಪಾಯಿಗಳನ್ನು ನೀಡಿದೆ. ನಮ್ಮ ಜೈಲುವಾಸಿಗಳನ್ನು, ಸರ್ಕಾರದ ಕುಟುಂಬಶ್ರೀ ಯೋಜನೆಯಡಿಯಲ್ಲಿ ಬರುವ ಸ್ವಸಹಾಯ ಗುಂಪುಗಳನ್ನು, ನಮ್ಮ ರಬ್ಬರ್ ಪಾರ್ಕಿನಿಂದ ಕೆಲಸ ಮಾಡುತ್ತಿರುವ ಉದ್ದಿಮೆಗಳನ್ನು ಎನ್೯೫, ಎರಡು ಪದರದ ಮತ್ತು ಮೂರು ಪದರದ ಮಾಸ್ಕ್‌ಗಳನ್ನು ಮತ್ತು ಸರ್ಜಿಕಲ್ ಸರ್ಜಿಕಲ್ ಗ್ಲೌಸುಗಳನ್ನು ತಯಾರಿಸಲು ಸಂಘಟಿಸಲಾಗಿದೆ. ನಮ್ಮ ಖಾದೀ ಸರ್ಕಾರಿ ಉದ್ದಿಮೆಗಳನ್ನು ಸಾಕಷ್ಟು ಪ್ರಮಾಣದ ಬೆಡಶೀಟುಗಳನ್ನು ಮತ್ತು ಟವೆಲ್ಲುಗಳನ್ನು ಆಸ್ಪತ್ರೆಗಳಲ್ಲಿ ಬಳಸಲು ತಯಾರಿಸಲು ಕೇಳಿಕೊಳ್ಳಲಾಗಿದೆ. ಅವುಗಳನ್ನು ಒಮ್ಮೆ ಮಾತ್ರ ಬಳಸಲಾಗುತ್ತದೆ. ರಾಜ್ಯದಲ್ಲಿ ಇಂಟರ್ ನೆಟ್ ಸೇವಾದಾರರನ್ನು ಅವರ ಜಾಲದ ಸಾಮರ್ಥ್ಯವನ್ನು ಶೇಕಡ ೩೦ರಿಂದ ೪೦ರಷ್ಟು ಹೆಚ್ಚಿಸಲು ಕೇಳಿಕೊಂಡಿದ್ದೇವೆ. ಇದರಿಂದ ಜನ ಮನೆಯಿಂದ ಕೆಲಸ ಮಾಡುವುದಕ್ಕೆ ಸಾಧ್ಯವಾಗುತ್ತದೆ.
ಲಾಕ್‌ಡೌನನ್ನು ಪೂರ್ಣ ಪ್ರಮಾಣದಲ್ಲಿ ಗಂಭೀರವಾಗಿ ಜಾರಿಗೊಳಿಸುವ ಸಮಯದಲ್ಲಿ, ನಮ್ಮ ಮುಂದಿರುವ ಉಳಿದ ಪ್ರಮುಖ ಸವಾಲುಗಳನ್ನು ನಾವು ಕಡೆಗಣಿಸಬಾರದು. ಭಾರತದ ಒಟ್ಟು ಜನಸಂಖ್ಯೆಯಲ್ಲಿ ಬಡವರ ಸಂಖ್ಯೆ ತುಂಬಾ ಹೆಚ್ಚಿದೆ. ಅವರಲ್ಲಿ ಹೆಚ್ಚಿನವರು ಹಲವು ಆರ್ಥಿಕ ಹಾಗೂ ಸಾಮಾಜಿಕ ಶೋಷಣೆಗೆ ಒಳಗಾದವರು. ಅವರು ಅನೌಪಚಾರಿಕ ಹಾಗೂ ಅಸಂಘಟಿತ ಕ್ಷೇತ್ರಗಳಲ್ಲಿ ದುಡಿದು ಜೀವನ ಸಾಗಿಸುತ್ತಿದ್ದಾರೆ. ಅಲ್ಲಿ ಅವರಿಗೆ ಉದ್ಯೋಗದ ರಕ್ಷಣೆಯಾಗಲಿ, ವರಮಾನದ ನಿರಂತರತೆಯಾಗಲಿ ಇಲ್ಲ. ಲಾಕ್ ಡೌನ್ ಆವಧಿಯಲ್ಲಿ ಅವರ ಬದುಕನ್ನು ನಾವು ರಕ್ಷಿಸಬೇಕು.

ಆರ್ಥಿಕ ಕ್ರಮಗಳು
ಇದಕ್ಕೆ ಸಂಬಂಧಿಸಿದಂತೆ ಕೇರಳ ಸರ್ಕಾರವೂ ೨೦,೦೦೦ ಕೋಟಿ ರೂಪಾಯಿಯ ಆರ್ಥಿಕ ಮರುಚೇತರಿಕೆಯ ಪ್ಯಾಕೇಜನ್ನು ಘೋಷಿಸಿದೆ. ನಮಗೆ ೨೦೨೦ ಹಣಕಾಸು ವರ್ಷದಲ್ಲಿ ೨೫,೦೦೦ ಕೋಟಿ ರೂಪಾಯಗಳಷ್ಟು ಸಾಲ ಪಡೆದುಕೊಳ್ಳಲು ಅವಕಾಶವಿದೆ. ನಾವು ಕೇಂದ್ರ ಸರ್ಕಾರವನ್ನು ಈ ಸಾಲದ ಅರ್ಧ ಭಾಗವನ್ನು ಏಪ್ರಿಲ್ ತಿಂಗಳಲ್ಲೇ ತೆಗೆದುಕೊಳ್ಳಲು ಅವಕಾಶ ಮಾಡಿಕೊಡಬೇಕೆಂದು ಕೇಳಿಕೊಂಡಿದ್ದೇವೆ. ಅದು ಸರ್ಕಾರ ಘೋಷಿಸಿರುವ ೨೦,೦೦೦ ಕೋಟಿ ರೂಪಾಯಿಯ ಪ್ಯಾಕೇಜಿನ ಪ್ರಮುಖ ಮೂಲ. ಹೀಗೆ ಮೊದಲೇ ಖರ್ಚು ಮಾಡಿಬಿಡುವುದರಿಂದ ವರ್ಷದ ನಂತರದ ಭಾಗದಲ್ಲಿ ಖರ್ಚನ್ನು ಕಡಿಮೆ ಮಾಡಲಾಗುತ್ತದೆ ಎಂದು ಅರ್ಥವಲ್ಲ. ಅದಕ್ಕಾಗಿಯೇ ನಾವು ಕೇಂದ್ರ ಸರ್ಕಾರವನ್ನು ವಿತ್ತೀಯ ಜವಾಬ್ದಾರಿ ಹಾಗೂ ಬಜೆಟ್ ನಿರ್ವಹಣೆ ಕಾಯ್ದೆಯಡಿ ನಮ್ಯತೆಂiನ್ನು ಒದಗಿಸಲು ಕೇಳಿಕೊಂಡಿದ್ದೇವೆ. ಕೇಂದ್ರವೂ ಅದಕ್ಕೆ ಅವಕಾಶ ಮಾಡಿಕೊಡುತ್ತದೆ ಎಂಬ ನಿರೀಕ್ಷೆಯಲ್ಲಿದ್ದೇವೆ.
ನಮ್ಮ ೨೦,೦೦೦ ಕೋಟಿ ರೂಪಾಯಿಯ ಆರ್ಥಿಕ ಪ್ಯಾಕೇಜನ್ನು ಸುಮಾರಾಗಿ ಕೆಳಕಂಡಂತೆ ಖರ್ಚುಮಾಡಲಾಗುತ್ತದೆ. ಪಿಂಚಣೆದಾರರ ಅನುಕೂಲಕ್ಕಾಗಿ ಎರಡು ತಿಂಗಳ ಭದ್ರತಾ ಪಿಂಚಣಿಯನ್ನು ಮುಂಗಡವಾಗಿ ನೀಡಲಾಗುತ್ತದೆ. ಬಿಪಿಎಲ್ ಮತ್ತು ಅಂತ್ಯೋದಯ ವಿಭಾಗಕ್ಕೆ ಪ್ರತಿ ಕುಟುಂಬಕ್ಕೆ ೧೦೦೦ ರೂಪಾಯಿ ನೀಡುವುದಕ್ಕಾಗಿ ೧,೩೨೦ ಕೋಟಿ ರೂಪಾಯಿಯನ್ನು ಮೀಸಲಿಡಲಾಗಿದೆ. ೧೦೦ ಕೋಟಿ ರೂಪಾಯಿಗಳನ್ನು ಅವಶ್ಯಕತೆಯಿರುವ ಕುಟುಂಬಗಳಿಗೆ ಆಹಾರ ಪದಾರ್ಥಗಳನ್ನು ನೀಡಲು ಇಡಲಾಗಿದೆ. ೫೦ ಕೋಟಿ ರೂಪಾಯಿಗಳನ್ನು ಪೌಷ್ಟಿಕ ಊಟಕ್ಕೆ ೨೦ ರೂಪಾಯಿಯಂತೆ ರಿಯಾಯತಿಯಲ್ಲಿ ನೀಡಲು ಖರ್ಚುಮಾಡಲಾಗುತ್ತದೆ. ಸುಮಾರು ೫೦೦ ಕೋಟಿ ರೂಪಾಯಿಯನ್ನು ಸಮಗ್ರ ಆರೋಗ್ಯ ಪ್ಯಾಕೇಜಿಗಾಗಿ ಮೀಸಲಿಡಲಾಗಿದೆ. ಅದರಲ್ಲಿ ಸಾರ್ವಜನಿಕ ಆರೋಗ್ಯ ಸೌಲಭ್ಯವನ್ನು ಸುಧಾರಿಸಲು ಮತ್ತು ರಾಜ್ಯವನ್ನು ಅಂತಹ ಸೋಂಕನ್ನು ಎದುರಿಸಲು ಸನ್ನದ್ದುಗೊಳಿಸಲು ಬಳಸಲಾಗುತ್ತದೆ. ೨೦೦೦ ಕೋಟಿ ಮೊತ್ತವನ್ನು ಕುಟುಂಬಶ್ರೀ ಯೋಜನೆಯಡೀ ಸಾಲವನ್ನು ವಿತರಿಸಲು ಇಡಲಾಗಿದೆ. ೨೦೦೦ ಕೋಟಿ ರೂಪಾಯಿಗಳನ್ನು ಉದ್ಯೋಗ ಖಾತ್ರಿ ಕಾರ್ಯಕ್ರಮವನ್ನು ವಿಸ್ತರಿಸಲು ಬಳಸಿಕೊಳ್ಳಲಾಗುತ್ತದೆ. ಇನ್ನು ೧೪,೦೦೦ ಕೋಟಿ ರೂಪಾಯಿಗಳನ್ನು ಏಪ್ರಿಲ್ ೨೦೨೦ ರವರೆಗೆ ರಾಜ್ಯ ಸರ್ಕಾರದ ಎಲ್ಲಾ ಬಾಕಿಗಳನ್ನು ಚುಕ್ತಾ ಮಾಡಲು ಬಳಸಿಕೊಳ್ಳಲಾಗುತ್ತದೆ.
ಸಾರಿಗೆ ವಾಹನಗಳಿಗೂ ತೆರಿಗೆ ಕಟ್ಟಲು ಸಮಯ ಮಿತಿಯಲ್ಲಿ ರಿಯಾಯಿತಿಯನ್ನು ನೀಡಲಾಗಿದೆ. ಆಟೋ ಹಾಗೂ ಟ್ಯಾಕ್ಸಿಗಳಿಗೆ ಫಿಟ್‌ನೆಸ್ ಚಾರ್ಜ ಕಟ್ಟಲು ಕೂಡ ಇದೇ ರೀತಿಯ ರಿಯಾಯಿತಿ ತೋರಲಾಗಿದೆ. ತೊಂದರೆಗೊಳಗಾದ ಉದ್ದಿಮೆಗಳಗೆ ಕೂಡ ನೀರು ಹಾಗೂ ವಿದ್ಯುತ್ ಬಿಲ್ ಪಾವತಿಸಲು ಕೊನೆಯ ದಿನವನ್ನು ವಿಸ್ತರಿಸಲಾಗಿದೆ. ಸಿನಿಮಾ ಮಂದಿರಗಳಿಗೆ ಮನೋರಂಜನೆ ತೆರಿಗೆಯಲ್ಲಿ ಕಡಿತ ಮಾಡಲಾಗಿದೆ.
ಈ ಆವಧಿಯಲ್ಲಿ ವಿತ್ತೀಯ ಸಾಂಪ್ರದಾಯಿಕತೆಯನ್ನು ಕೈ ಬಿಡೋಣ. ವಿಶೇಷ ಸಂದರ್ಭದಲ್ಲಿ ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ವಿತ್ತೀಯ ಜವಾಬ್ದಾರಿ ಹಾಗೂ ಬಜೆಟ್ ನಿರ್ವಹಣೆ ಕಾಯ್ಕೆಯ ನಿಯಮಗಳನ್ನು ಬದಿಗಿಡಬೇಕಾಗುತ್ತದೆ. ಜನರ ಹಾಗೂ ಅವರ ಜೀವನೋಪಾಯವನ್ನು ಲಾಕ್ ಡೌನ್ ಆವಧಿಯಲ್ಲಿ ರಕ್ಷಿಸುವುದಕ್ಕಾಗಿ ಆರ್ಥಿಕ ಉತ್ತೇಜನ ತುಂಬಾ ತುರ್ತಾಗಿ ಆಗಬೇಕು.
ಇಂದು ಮಾನವೀಯತೆಯ ಒಳಿತು ಮತ್ತು ರಕ್ಷಣೆಗಾಗಿ ನಡೆಯುತ್ತಿರುವ ಸಮರದಲ್ಲಿ ಜಗತ್ತು ಒಟ್ಟಾಗಿ ನಿಲ್ಲಬೇಕು. ನಾವು ಜಾಗತಿಕ ಹಾಗೂ ರಾಷ್ಟ್ರಗಳ ಅನುಭವದಿಂದ ಪಾಠ ಕಲಿಯಬೇಕು, ಶಕ್ತಿ ಪಡೆದುಕೊಳ್ಳಬೇಕು. ಅಷ್ಟೇ ಅಲ್ಲ ಕೋವಿಡ್ -೧೯ ಮಹಾಮಾರಿಯ ಸವಾಲನ್ನು ಎದುರಿಸಲು ಜನ-ಕೇಂದ್ರಿತ ಪ್ರತಿಸ್ಪಂದನವನ್ನು ಸಂಘಟಿಸುವ ದಿಕ್ಕಿನಲ್ಲಿ ನಮ್ಮ ಪ್ರಯತ್ನವನ್ನು ದುಪ್ಟಟಗೊಳ್ಳಬೇಕು.

 

http://varthabharati.erelego.com/archive/viewpage.php?edn=Mangalore&date=2020-04-01&edid=VARTABARTI_MAN&pn=4#Page/4/Article/VARTABARTI_MAN_20200401_4_1/414px/1A44A2E

Recommended Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.