ಜಾನ್ ಬಿ ಹಿಗ್ಗಿನ್ಸ್

 In RAGAMALA

 

೧೯೮೪, ಡಿಸೆಂಬರ್ ತಿಂಗಳ ಕಡು ಚಳಿಯ ಒಂದು ರಾತ್ರಿ. ಮನೆಗೆ ಊಟಕ್ಕೆ ಬಂದಿದ್ದ ಅತಿಥಿಗಳು ಹೋಗುವಾಗ ತಡವಾಗಿತ್ತು. ರಿಯಾ ಅಡುಗೆ ಮನೆಯಲ್ಲಿ ಪಾತ್ರೆಗಳನ್ನು ತೊಳೆದು ಒಪ್ಪ ಮಾಡುತ್ತಿದ್ದಳು. ಮಕ್ಕಳು ಲ್ಯೂಕ್ ಮತ್ತು ನಿಕೊ ಮಹಡಿಯ ಮೇಲಿನ ಕೊಠಡಿಯಲ್ಲಿ ಮಲಗಿಯಾಗಿತ್ತು. ಪಕ್ಕದ ಮನೆಯ ಹುಡುಗಿ ಅಡುಗೆ ಮನೆಯ ಬಾಗಿಲು ತಟ್ಟಿದ್ದು ಕೇಳಿಸಿತು. ಇವರ ಮನೆಯಿಂದ ಫೋನ್ ಮಾಡಲು ಬಂದಿದ್ದಳು. ಒಂದೆರಡು ಕರೆಗಳನ್ನು ಮಾಡಿದಳು. ಒಂದು ಆಸ್ಪತ್ರೆಗೆ, ಅಂಬ್ಯುಲೆನ್ಸ್‌ಗಾಗಿ. ಇನ್ನೊಂದು ಪೋಲಿಸ್ ಠಾಣೆಗೆ. ರಿಯಾಗೆ ಅದರ ಪರಿವೆಯೇ ಇಲ್ಲ. ಅವಳ ಗಮನವೆಲ್ಲಾ ಪಾತ್ರೆ ಒಪ್ಪ ಮಾಡುವುದರತ್ತಲೇ ಇತ್ತು.
ಕೆಲಸ ಮುಗಿಸಿ ಬಂದಾಗ ತುಂಬಾ ಹೊತ್ತಾಗಿದೆ ಎನ್ನುವುದು ಗೊತ್ತಾಯಿತು. ನಾಯಿಯನ್ನು ಹೊರಗೆ ಕರೆದುಕೊಂಡು ಹೋಗಿದ್ದ ಗಂಡ ಇನ್ನೂ ಬಂದಿರಲಿಲ್ಲ. ಯಾಕೆ ಇಷ್ಟು ಹೊತ್ತಾಯಿತು ಎಂದು ನೋಡಲು ರಿಯಾ ರಸ್ತೆಗೆ ಬಂದಳು. ಸ್ವಲ್ಪ ದೂರದಲ್ಲಿ ಒಂದಿಷ್ಟು ಜನ ಗುಂಪು ಸೇರಿದ್ದರು. ಗಂಡನ ಚಪ್ಪಲಿ ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಕಣ್ಣಿಗೆ ಬಿತ್ತು. ಕುಡಿದು ಟ್ರಕ್ ಚಲಿಸುತ್ತಿದ್ದ ಡ್ರೈವರ್ ಇವರ ಗಂಡನ ಪ್ರಾಣಕ್ಕೆ ಎರವಾಗಿದ್ದ.
ಕರ್ನಾಟಕ ಸಂಗೀತದ ಅಪ್ರತಿಮ ಮೇಧಾವಿ ಜಾನ್ ಬಿ ಹಿಗ್ಗಿನ್ಸ್ ಇಲ್ಲವಾಗಿದ್ದರು. ಎರಡು ದೇಶಗಳ ನಡುವಿನ ಸಾಂಸ್ಕೃತಿಕ ಸೇತುವೆ ಆ ಕರಾಳ ಘಳಿಗೆಯಲ್ಲಿ ಕಡಿದುಬಿದ್ದಿತ್ತು. ಅದು ಕರ್ನಾಟಕ ಶಾಸ್ತ್ರೀಯ ಸಂಗೀತದ ಅತ್ಯಂತ ಘೋರ ಘಳಿಗೆ.
ವೆಸ್ಲಿಯನ್ ವಿಶ್ವವಿದ್ಯಾನಿಲಯದಲ್ಲಿ ‘ದೇವತೆ ಯಂತೆ ಹಾಡುತ್ತಿದ್ದ’, ‘ಅಪ್ರತಿಮ ಮೇಧಾವಿ’, ಹೀಗೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಹಿಗ್ಗಿನ್ಸ್ ಬಾಲಸರಸ್ವತಿಯ ನೃತ್ಯ ನೋಡಿ ಸಂಪೂರ್ಣ ಬದಲಾಗಿದ್ದರು. ಅದೊಂದೇ ನಿಜವಾದ ಕಲೆ ಅನ್ನಿಸಿತು. ಕೇವಲ ನೃತ್ಯ ಮಾತ್ರವಲ್ಲ ಜೊತೆಗಿನ ಸಂಗೀತ ಅವರನ್ನು ಮೋಡಿಮಾಡಿತ್ತು. ಈತನಕ ಕೇಳಿದ್ದ ಎಲ್ಲಾ ಸಂಗೀತಕ್ಕಿಂತ ಈ ಸಂಗೀತ ತೀರಾ ಭಿನ್ನವಾಗಿತ್ತು ಅಂತ ಹಿಗ್ಗಿನ್ಸ್ ಹೇಳಿಕೊಂಡಿದ್ದರು.
ತನಗೆ ಸಂಗೀತ ಕಲಿಸಲು ಅಂದು ಕೊಳಲು ನುಡಿಸಿದ್ದ ಬಾಲಾ ಅವರ ಸೋದರ ಟಿ ವಿಶ್ವನಾಥ್ ಅವರಿಗೆ ದುಂಬಾಲು ಬಿದ್ದರು. ವಿಶ್ವ ಅವರ ಸಲಹೆಯಂತೆ ಮೊದಲಿಗೆ ಭಾರತೀಯ ಸಂಗೀತವನ್ನು ಕುರಿತು ಆಳವಾಗಿ ಅಭ್ಯಾಸ ಮಾಡಿದ್ದ ಡಾಕ್ಟರ್ ಬ್ರೌನ್ ಮತ್ತು ಬಾಲಸರಸ್ವತಿಯ ಇನ್ನೊಬ್ಬ ಸೋದರ ಮೃದಂಗವಾದಕ ಟಿ ರಂಗನಾಥನ್ ಬಳಿಯಲ್ಲಿ ಭಾರತೀಯ ಸಂಗೀತಕ್ಕೆ ಪ್ರವೇಶವನ್ನು ಪಡೆದರು. ಒಬ್ಬರು ಸಂಗೀತದ ಸಿದ್ಧಾಂತಗಳ ಪರಿಚಯ ಮಾಡಿಕೊಟ್ಟರೆ, ಮತ್ತೊಬ್ಬರು ಲಯದ ಸೂಕ್ಷ್ಮಗಳನ್ನು ತಿಳಿಸಿ ಕೊಟ್ಟರು. ನಂತರ ಟಿ ವಿಶ್ವನಾಥನ್ ಅವರ ಬಳಿ ಸಂಗೀತ ಕಲಿತರು. ಮುಂದೆ ಆಲತ್ತೂರು ಸಹೋದರರ ಪರಿಚಯವೂ ಆಯಿತು.
ಕಠಿಣ ಪರಿಶ್ರಮದಿಂದ ಸಂಗೀತವನ್ನು ಚೆನ್ನಾಗಿ ಮೈಗೂಡಿಸಿಕೊಂಡರು. ಭಾರತೀಯ ಪರಂಪರೆಯ ಪರಿಚಯವಿಲ್ಲದ, ಇಲ್ಲಿಯ ಕಲೆಯ ಗಂಧಗಾಳಿಯಿಲ್ಲದ ಹಿಗ್ಗಿನ್ಸ್ ಸಂಗೀತದ ಜೊತೆಗೆ ಸಂಸ್ಕೃತ, ತೆಲುಗು, ತಮಿಳು ಕಲಿತರು.
ಅರಿಯಾಕುಡಿ, ಚೆಂಬೈ, ಮಧುರೈ ಮಣಿ ಅಯ್ಯರ್ ಅವರೆಲ್ಲಾ ಹಾಡುತ್ತಿದ್ದ ಕ್ಷೇತ್ರದಲ್ಲಿ ಹಾಡುವುದು ಕಡಿಮೆ ಸಂಗತಿಯಾಗಿರಲಿಲ್ಲ. ಹೆದರಿಕೆಯಿಂದಲೇ ಮೊದಲ ಕಾರ್ಯಕ್ರಮ ನೀಡಿದ ಈ ಬಿಳಿಯ ವಿದೇಶಿ ಹಿಗ್ಗಿನ್ಸ್ ಕೆಲವೇ ದಿನಗಳಲ್ಲಿ ಪ್ರೌಢಿಮೆ ಸಾಧಿಸಿ ಹೆಸರುಮಾಡಿ ದರು.
ದುರಾದೃಷ್ಟವಶಾತ್ ವಿಧಿ ಬಹಳ ಬೇಗನೆ ಇವರ ಬದುಕನ್ನು ಮೊಟಕುಗೊಳಿಸಿತು.

Image may contain: 1 person

Recommended Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.