ಜೀವಂತ ಪರಂಪರೆ, ಜಡಗೊಂಡ ಸಂಪ್ರದಾಯ ಮತ್ತು ಟಿ. ಎಂ. ಕೃಷ್ಣ

 In RAGAMALA

ಹೊಸ ತಲೆಮಾರಿನ ಕರ್ನಾಟಕ ಸಂಗೀತ ಕಲಾವಿದರಲ್ಲಿ ತುಸು ಒಡೆದುನಿಲ್ಲುವ ಶ್ರೀ ಟಿ ಎಂ ಕೃಷ್ಣ ಅವರನ್ನು ಅರ್ಥಮಾಡಿಕೊಳ್ಳುವುದರಲ್ಲಿ ಅನಗತ್ಯ ಗೊಂದಲಗಳು ಬೇಕಾಗಿಲ್ಲ.
ಕರ್ನಾಟಕ ಸಂಗೀತ ಈಗ ನಿಂತನೀರಾಗಿದೆ. ಅದನ್ನು ಮತ್ತೆ ಪರಂಪರೆಯ ಮುಖ್ಯವಾಹಿನಿಗೆ ಸೇರಿಸಲು ಪ್ರಯತ್ನಿಸುವುದಕ್ಕೆ ಸಂಪ್ರದಾಯಬದ್ಧ ಸಂಗೀತ ಪದ್ಧತಿಯಲ್ಲೇ ತರಬೇತಿಹೊಂದಿದ ಶ್ರೀ ಕೃಷ್ಣ ಅವರೇ ಸಮರ್ಥರು.
ಏಕೆಂದರೆ ಬಹುಪಾಲು ಕರ್ನಾಟಕ ಸಂಗೀತ ವಿದ್ವಾಂಸರಂತೆ ಶ್ರೀ ಕೃಷ್ಣ ಅವರು ಸಾಂಪ್ರದಾಯಿಕ ವೈದಿಕ ಕುಟುಂಬದಿಂದ ಬಂದವರು. ಅವರು ಸಂಗೀತ ಕಲಿತದ್ದು ತೀರಾ ಸಂಪ್ರದಾಯಬದ್ಧ ಪದ್ಧತಿಯಲ್ಲೇ. ತೀರಾ ಎಳೆಯ ವಯಸ್ಸಿನಲ್ಲೇ ಅವರು ಈ ಪದ್ಧತಿಯಲ್ಲಿ ನುರಿತು, ವಿದ್ವಾಂಸರಿಂದ ಭಲೆ ಎನಿಸಿಕೊಂಡವರು. ಬಿ ಸೀತಾರಾಮ ಶರ್ಮ ಅವರಲ್ಲಿ ಹಲವು ವರ್ಷಗಳ ಕಾಲ ಶಿಷ್ಯವೃತ್ತಿ ಮಾಡಿ- ಆ ಎಳೆಯ ವಯಸ್ಸಿನಲ್ಲೇ ಗುರುಗಳು ನಿರ್ದೇಶಿಸುತ್ತಿದ್ದ ಸಂಗೀತ ರಚನೆಗಳಿಗೆ ಸ್ವರಪ್ರಸ್ತಾರ ಸಿದ್ದಪಡಿಸುವಲ್ಲಿ ನೆರವಾಗುತ್ತಿದ್ದರು. ಮುಂದೆ ರಾಗ-ತಾನ-ಪಲ್ಲವಿಯನ್ನು ಕುರಿತು ವಿದ್ವಾನ್ ಚೆಂಗಲ್‌ಪೇಟ್ ರಂಗನಾಥನ್ ಅವರ ಕೈಯಡಿ ಪಳಗಿದವರು. ಮುಂದೆ ಅತ್ಯಂತ ಸಂಪ್ರದಾಯವಾದಿ ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಅವರಲ್ಲಿ ಅಭ್ಯಾಸ ಮಾಡಿ ಅವರ ಮೆಚ್ಚಿನ ಶಿಷ್ಯರಾದವರು.
ಈ ಹಿನ್ನೆಲೆಯಲ್ಲಿ ಗಾಯನ ಕಛೇರಿಗಳನ್ನು ಕೊಟ್ಟ ಕೃಷ್ಣ ಬಹುಬೇಗ ತಮ್ಮ ಸಂಗೀತದಿಂದ ಖ್ಯಾತರಾದರು. ಎಲ್ಲ ಪ್ರತಿಭಾವಂತ ಕಲಾವಿದರಿಗೆ ಸಿಕ್ಕಿದಷ್ಟೇ ಕಛೇರಿಗಳು ಇವರಿಗೂ ಸಿಗುತ್ತಿದ್ದವು. ಖ್ಯಾತಿ-ಹಣ ಯಾವುದಕ್ಕೂ ಕೊರತೆಯಿರಲಿಲ್ಲ. ಈಗಿನಂತೆ ಆಗಲೂ ಅವರ ಸಂಗೀತಕ್ಕೆ ಜನ ಮುಗಿಬೀಳುತ್ತಿದ್ದರು.
ಆದರೆ ಅವರೊಳಗೆ ಏನೋ ಅತೃಪ್ತಿ ಮೂಡಿಕೊಳ್ಳತೊಡಗಿತು. ಜಿಡ್ಡು ಕೃಷ್ಣಮೂರ್ತಿ ಅವರ ಶಾಲೆಯಲ್ಲಿ, ಆ ಚಿಂತನೆಯ ಹಿನ್ನಲೆಯಲ್ಲಿ ಬೆಳೆದ ಇವರಿಗೆ, ಸಂಗೀತ ಎಂದರೆ ಅದು ಆತ್ಮದ ಅಭಿವ್ಯಕ್ತಿ, ಅದು ಕೇವಲ ಕಲಿತದ್ದರ ಪ್ರಸ್ತುತಿಯಲ್ಲ ಎನಿಸಿತು. ಆದರೆ ಕರ್ನಾಟಕ ಸಂಗೀತ ಕಛೇರಿಗಳಲ್ಲಿ ಕೆಲವು ಜಡಗೊಂಡ ಪದ್ಧತಿಗಳು ಉಳಿದುಕೊಂಡಿದ್ದವು. ನಿದರ್ಶನಕ್ಕೆ ವರ್ಣಗಳ ಹಾಡುಗಾರಿಕೆ. ವರ್ಣದ ಹಾಡಿಕೆಯನ್ನು ಬಾಯಪುಚಾರಕ್ಕೆ-ಕಾವೇರುವುದಕ್ಕೆ ಕಛೇರಿಯಲ್ಲಿ ಹಾಡುವುದು ಸಂಪ್ರದಾಯವಾಗಿಬಿಟ್ಟಿತ್ತು. ಮಾತು ಮುಖ್ಯವಲ್ಲ ವರ್ಣ, ಕಲೆಯ ಅಭಿವ್ಯಕ್ತಿಗೆ ನೆರವಾಗುವುಲ್ಲವೇ? ಅದನ್ನೇ ಪ್ರಧಾನವಾಗಿ ಯಾಕೆ ಹಾಡಬಾರದು ಎಂದು ಕಛೇರಿಗಳಲ್ಲಿ ವರ್ಣವನ್ನು ಪ್ರಧಾನವಾಗಿ ಹಾಡತೊಡಗಿದರು.
ಇಂಥ ಪ್ರಶ್ನೆಗಳನ್ನು ಕೇಳಿಕೊಂಡವರಲ್ಲಿ ಟಿ ಎಂ ಕೃಷ್ಣ ಮೊದಲಿಗರೂ ಅಲ್ಲ, ಕೊನೆಯವರೂ ಅಲ್ಲ. ಅರವತ್ತು ವರ್ಷಗಳ ಹಿಂದೆಯೇ ರಾಳ್ಳಪಳ್ಳಿ ಅನಂತ ಕೃಷ್ಣ ಶರ್ಮ ಅವರೂ ಕೇಳಿಕೊಂಡಿದ್ದರು. ಮುಂದೆಯೂ ಈ ಪ್ರಶ್ನೆ ಮಾರ್ದನಿಸುತ್ತಿರುತ್ತದೆ.
ಟಿ ಎಂ ಕೃಷ್ಣ ಸಂಪ್ರದಾಯಬದ್ಧ ಸಂಗೀತವನ್ನು ಅದರ ಜೀವಂತ ಕಲಾಪರಂಪರೆಗೆ ಮರಳಿಸಲು ಯತ್ನಿಸುತ್ತಿದ್ದಾರೆ ಅಷ್ಟೆ. ಅದಲ್ಲದೆ ಕಾಲಕ್ಕೆ ತಕ್ಕಂತೆ ಕಲೆಯ ಹೊರರೂಪ ವೇಗವಾಗಿ ಬದಲಾಗುತ್ತದೆ. ನಲವತ್ತು ವರ್ಷಗಳ ಹಿಂದೆ ಸಂಗೀತದಿಂದ ಮೋಕ್ಷ ಲಾಭವನ್ನು ಹಾರೈಸುತ್ತಿದ್ದ ಶ್ರೋತೃವೃಂದ ಈಗ ಕಡಮೆಯಾಗಿದ್ದಾರೆ. ಹಬ್ಬ ಹರಿದಿನಗಳ ಧಾರ್ಮಿಕ ವಾತಾವರಣದಲ್ಲಿ ನಡೆಯುವ ಕಛೇರಿಗಳಿಗಿಂತ ಧರ್ಮನಿರಪೇಕ್ಷ ವಾತಾವರಣದಲ್ಲಿ ಕೇವಲ ಸಂಗೀತವನ್ನು ಕೇಳಬಯಸುವ ಹೊಸ ತಲೆಮಾರಿನ ತರುಣ-ತರುಣಿಯರು ಹಿಂದಿನ ತಲೆಮಾರಿನವರಂತೆ ಒಂದೇ ಜಾತಿ-ಮತಗಳಿಗೆ ಸೇರಿದವರೂ ಅಲ್ಲ. ಅವರ ಹಿನ್ನೆಲೆಗೆ ಆಧುನಿಕ ಸಿನಿಮಾ-ಪಾಶ್ಚಾತ್ಯ ಸಂಗೀತ ಪದ್ಧತಿಗಳೂ ಇವೆ. ಕರ್ನಾಟಕ ಸಂಗೀತದ ಸ್ವಂತಿಕೆಯನ್ನು ನಾಶಮಾಡದೇ ಹೊಸತಲೆಮಾರನ್ನು ಕರ್ನಾಟಕ ಸಂಗೀತ ಮುಟ್ಟಬೇಕಾಗಿದೆ. ಅವರ ಸಂಕೀರ್ಣ ಭಾವನೆಗಳ ಅಭಿವ್ಯಕ್ತಿಯೂ ಆಗಬೇಕಾಗಿದೆ.
ಕಾಲದೊಡನೆ ತನ್ನ ಗತಿಯನ್ನೂ ಬದಲಾಯಿಸಕೊಳ್ಳದೇ ಇದ್ದರೆ, ಕಲೆ ಜಡವಾಗಿಬಿಡುತ್ತದೆ. ಕವಿ ಪುತಿನ. ಹೇಳುವಂತೆ- ಕಲೆ ಪರಿವರ್ತನೆಗೊಳ್ಳುವುದರಿಂದಲೇ ಪರಂಪರೆಯನ್ನು ಸಂರಕ್ಷಿಸಿಕೊಳ್ಳುತ್ತದೆ. ಬದಲಾಗದಿದ್ದರೆ ಪರಂಪರೆ ನಷ್ಟವಾಗುತ್ತದೆ.
ಟಿ ಎಂ ಕೃಷ್ಣ ಸಂಗೀತದಲ್ಲಿ ಒಮ್ಮೊಮ್ಮೆ ತರುವ ಮಾರ್ಪಾಟುಗಳು ಸಂಗೀತ ಪರಂಪರೆಗೆ ಅನುಗುಣವಾಗೇ ಇದೆ. ಧರ್ಮನಿರಪೇಕ್ಷ ಸಂಗೀತ ಪರಂಪರೆ ನಮ್ಮದು. ಶಿಶುನಾಳ ಶರೀಫ, ಕಬೀರ, ಮುಂತಾದವರನ್ನೂ ಒಳಮಾಡಿಕೊಂಡ ಪರಂಪರೆ ಅದು. ಮುಸ್ಲಿಂ ಹಾಡುಗಾರ ಶ್ರೀರಾಮನನ್ನು ಹೊಗಳಿ ಹಾಡಿದ್ದನ್ನು ಮೆಚ್ಚಿಕೊಂಡಂತೆಯೇ ಹಿಂದೂ ಸಂಗೀತಗಾರ ಏಸು, ಅಲ್ಲಾರನ್ನು ಕುರಿತು ಹಾಡಿದಾಗಲೂ ಪ್ರೀತಿಯಿಂದಲೇ ಒಳದೆಗೆದುಕೊಳ್ಳುತ್ತಾರೆ. ನಮ್ಮ ಪರಂಪರೆ ನಮಗೆ ಕಲಿಸಿರುವುದು ಅದನ್ನೇ. ’ಈಶ್ವರ ಅಲ್ಲಾ ತೆರೋ ನಾಮ್’
ಪರಂಪರೆಯನ್ನು ಅರಿಯದವರು ತೆಗೆಯುವ ತಗಾದೆಗಳಿಗೆ ಕಲಾರಸಿಕರು ಹೆಚ್ಚು ಮಹತ್ವ ಕೊಡುವುದಿಲ್ಲ. ಮುಪ್ಪಿನ ಷಡಕ್ಷರಿ ದೇವರು ಒಬ್ಬನೇ ಎನ್ನುತ್ತಾ,
’ಹೋರಾಟವಿಕ್ಕಿಸಲು ಬೇರಾದೆಯಲ್ಲದೆ
ಬೇರುಂಟೆ ಜಗದೊಳಗೆ
ಶಂಭುಲಿಂಗವೇ
ಎಂದದ್ದನ್ನು ಮರೆಯದಿದ್ದರೆ ಯಾರು ತಾನೆ ಹೋರಾಟಕ್ಕೆ ಇಕ್ಕಿಸುತ್ತಾರೆ’

 

Recommended Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.