ತಲೆಮಾರಿನ ಕಣ್ಣಲ್ಲಿ ವೀಣಾ ಧನಮ್ಮಾಳ್

 In RAGAMALA

ಶೈಲಜ    

 

dhanammalಎಂ.ಎಸ್. ಸುಬ್ಬುಲಕ್ಷ್ಮಿಯ ತಾಯಿ ಮಧುರೈ ಷಣ್ಮುಗವಡಿವು ಮಗಳ ಭವಿಷ್ಯವನ್ನು ಕುರಿತು ಬಂಗಾರದ ಕನಸುಗಳನ್ನು ಕಟ್ಟಿಕೊಂಡು ಮದ್ರಾಸಿಗೆ ಬರುವಾಗ ವಾಸಕ್ಕೆ ಪುರುಸವಾಕಂ ಬಡಾವಣೆಯಲ್ಲೇ ಮನೆಮಾಡಬೇಕೆಂಬ ಉದ್ದೇಶವಿಟ್ಟುಕೊಂಡು ಅಲ್ಲೇ ಮನೆ ಮಾಡಿದರು, ಏಕೆಂದರೆ ತನ್ನ ಕಾಲದಲ್ಲಿಯೇ ವಿಶೇಷ ಪ್ರಖ್ಯಾತಿ ಪಡೆದು ಸಂಗೀತವಲಯಗಳಲ್ಲಿ ಮನೆಮಾತಾಗಿದ್ದ ವೀಣಾ ಧನಮ್ಮಾಳ್ ಅವರ ಮನೆ ಆ ರಸ್ತೆಯಲ್ಲೆ ಇತ್ತು ಎನ್ನುವುದು ಅವರಿಗೆ ಅತ್ಯಂತ ಹೆಮ್ಮೆಯ ವಿಚಾರವಾಗಿತ್ತು. ಆ ಕಾಲದ ಅತ್ಯುತ್ಕೃಷ್ಟ ವೀಣಾವಿದುಷಿ ಆಗಿದ್ದ ಧನಮ್ಮಾಳ್ ಬಗ್ಗೆ ಅಪಾರವಾದ ಗೌರವವಿತ್ತು, ಏಕೆಂದರೆ, ಅವರು, ತನ್ನ ಪ್ರತಿಭೆಯಿಂದಾಗಿಯೇ ಹಿರಿಯ ಕಿರಿಯ ಸಂಗೀತ ವಿದ್ವಾಂಸರೆಲ್ಲರ ಗೌರವಕ್ಕೆ ಪಾತ್ರರಾಗಿದ್ದ ಪ್ರಪ್ರಥಮ ಮಹಿಳೆಯಾಗಿದ್ದರು1
ಸಮುದಾಯದ ನೆನಪಿನಲ್ಲಿ ಸ್ಪಷ್ಟವಾಗಿ ದಾಖಲಾಗಿದ್ದ ಏಳು ತಲೆಮಾರುಗಳ ಇತಿಹಾಸ ವೀಣಾ ಧನಮ್ಮಾಳ್ ಕುಟುಂಬಕ್ಕಿತ್ತು.  ವೀಣಾ ಧನಮ್ಮಾಳ ಅಜ್ಜಿಯ ಅಜ್ಜಿ ಪಾಪಮ್ಮಾಳ್ ತಂಜಾವೂರು ರಾಜಾಸ್ಥಾನದ ಸಂಗೀತ ವಿದುಷಿ ಮತ್ತು ರಾಜನರ್ತಕಿಯಾಗಿದ್ದಳು.  ಧನಮ್ಮಾಳ ಅಜ್ಜಿ ಕಾಮಾಕ್ಷಮ್ಮ ತ್ರಿಮೂತರ್ಿಗಳಲ್ಲಿ ಒಬ್ಬರಾದ ಶಾಮಾ ಶಾಸ್ತ್ರಿಯವರ ಶಿಷ್ಯೆಯಾಗಿದ್ದಳು.  ಧನಮ್ಮಾಳ ತಾಯಿ ಸುಂದರಮ್ಮ ಶಾಮಾಶಾಸ್ತ್ರಿಗಳ ಮಗ ಸುಬ್ಬರಾಯ ಶಾಸ್ತ್ರಿಗಳ ಶಿಷ್ಯೆ.2 ಧನಮ್ಮಾಳ್ ಹುಟ್ಟಿದ್ದು 1868ರಲ್ಲಿ ಮದ್ರಾಸಿನ ಜಾಜರ್್ ಟೌನಿನ ನಾಟ್ಟು ಪಿಳ್ಳೈಯಾರ್ ರಸ್ತೆಯಲ್ಲಿ. ವಸಾಹತು ಆಡಳಿತ ಮತ್ತು ಕ್ರೈಸ್ತ ಮಿಷನರಿಗಳ ಪ್ರಭಾವ ಹಾಗೂ ಪ್ರಚಾರದಿಂದ ನೃತ್ಯವು ಸಾಮಾಜದಲ್ಲಿ ನೈತಿಕ ಅಧಃಪತನಕ್ಕೆ ಕಾರಣವಾಗುತ್ತದೆ ಎನ್ನುವ ಅಭಿಪ್ರಾಯ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿತ್ತು.  ಆ ಕಾಲದಲ್ಲಿ ನೃತ್ಯವನ್ನು ಕುರಿತು ಸಾಮಾಜಿಕ ಅಭಿಪ್ರಾಯ ಬದಲಾಗುತ್ತಿತ್ತು. ಜೊತೆಗೆ ನೃತ್ಯ ಮತ್ತು ನೃತ್ಯ ಪರಂಪರೆಯನ್ನು ಪೋಷಿಸುತ್ತಿದ್ದ ದೇವದಾಸಿಯರಿಗೆ ದೇವಾಲಯದ ಆಶ್ರಯ ತಪ್ಪಿಹೋಗಿ ಬೇರೆ ಬದುಕನ್ನು ಹುಡುಕಿಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಿದ್ದ ಸಾಮಾಜಿಕ ಸಂದರ್ಭ ಅದು.  ಬಹುತೇಕ ದೇವದಾಸಿಯರು ನೃತ್ಯವನ್ನು ಹೆಚ್ಚುಕಡಿಮೆ ಬಿಟ್ಟು ಸಂಗೀತವನ್ನು ಜೀವನೋಪಾಯಕ್ಕೆ ಅವಲಂಬಿಸಿದರು.  ಹೀಗೆ ಬದಲಾದ ಪರಿಸ್ಥಿತಿಯಲ್ಲಿ ಧನಮ್ಮಾಳ್ ಅವರ ಅಜ್ಜಿ ಕಾಮಾಕ್ಷಿಯಮ್ಮ ತಂಜಾವೂರಿನಿಂದ ಬದುಕನ್ನು ಅರಸಿಕೊಂಡು ಮದ್ರಾಸಿಗೆ ಬಂದರು. ರಂಗೂನ್ ಕೃಷ್ಣಸ್ವಾಮಿ ಮೊದಲಿಯಾರ್ ಅವರಿಗೆ ಆಶ್ರಯನೀಡಿ ಪೋಷಕರಾದರು.  ಧನಮ್ಮ ಮತ್ತು ಅವರ ಸಹೋದರಿ ರೂಪವತಿ ಇಬ್ಬರೂ ಹಾಡುಗಾರಿಕೆ ಯನ್ನು ಕಲಿತರು.  ತಾಯಿ ಮತ್ತು ಅಜ್ಜಿ ಯಿಂದ ಶಾಮಾಶಾಸ್ತ್ರಿಗಳ, ಸುಬ್ರಾಯಶಾಸ್ತ್ರಿಗಳ ಕೃತಿ ಗಳೆಲ್ಲವನ್ನೂ ಅಕ್ಕತಂಗಿಯರಿಬ್ಬರು ಕಲಿತರು.  ಧನಮ್ಮಳ ಧ್ವನಿ ತುಂಬಾ ಮಧುರವಾಗಿತ್ತು.  ಆದರೆ, ಅದಕ್ಕೆ ಒಳ್ಳೆಯ ಗಾತ್ರವಿರಲಿಲ್ಲ. ಧನಮ್ಮಾಳ ಧ್ವನಿ ವೀಣೆಯ ನಾದದೊಂದಿಗೆ ಸೊಗಸಾಗಿ ಮಿಳಿತವಾಗುತ್ತದೆ ಎನ್ನುವ ಕಾರಣಕ್ಕಾಗಿ ಅವರ ಅಜ್ಜಿ ವೀಣಾವಾದವನ್ನು ಆಯ್ಕೆಮಾಡಿಕೊಳ್ಳುವಂತೆ ಧನಮ್ಮಾಳಿಗೆ ಸಲಹೆ ನೀಡುತ್ತಾರೆ. ಆದರೆ ಧನಮ್ಮಾಳಿಗೆ ಒಂದು ವಾದ್ಯವಾಗಿ ವೀಣೆಯ ಬಗ್ಗೆ ತನ್ನದೇ ಆದ ಅನುಮಾನಗಳಿದ್ದವು.  ಆತನಕ ಅವರು ಕೇಳಿದ ವೀಣೆಯಲ್ಲವೂ ಹಾಸಿಗೆ ಹೊಲೆಯುವವರು ಹತ್ತಿಯನ್ನು ಶುದ್ಧ ಮಾಡುವಾಗ ಬಳಸುವ ಪಿಂಜರಾದ ಠೋಯ್ ಠೋಯ್ ಎಂಬ ಅಸಹನೀಯವಾದ ಸದ್ದಿನಂತಿತ್ತು.  ಈ ಸಂದರ್ಭದಲ್ಲಿ ಅವರಿಗೆ ಮದ್ರಾಸಿನಲ್ಲಿ ಕಲ್ಯಾಣಕೃಷ್ಣ ಭಾಗವತರ ವೀಣಾವಾದನವನ್ನು ಕೇಳುವ ಅವಕಾಶ ಒದಗಿಬಂತು.  ಅಂದು ಅವರ ಮನಸ್ಸು ಒಂದು ದೃಢವಾದ ನಿಧರ್ಾರಕ್ಕೆ ಬಂದಿತು. ಅದೇ ಕೊನೆ ಅವರು ಅವರ ಸಹೋದರಿ ರೂಪವತಿಯೊಂದಿಗೆ ಹಾಡಿದ್ದು. ಅಳಗ ಸಿಂಗ್ರಾಚಾರ್ ಅವರ ಬಳಿ ವೀಣೆಯ ಶಿಕ್ಷಣ ಪ್ರಾರಂಭವಾಯಿತು.3
    ಅಂದಿನ ಸಂಗೀತ ಪ್ರಪಂಚದ ಹಲವಾರು ದೈತ್ಯರು ಮತ್ತು ದಿಗ್ಗಜರು ಧನಮ್ಮಾಳ ಸಂಗೀತದ ಬದುಕನ್ನು ರೂಪಿಸಿದರು.  ಸಾತ್ತನೂರ್ ಪಂಚನದಯ್ಯರ್ (ಅವರು ದೀಕ್ಷಿತರ ಶಿಷ್ಯರು) ಅವರು ತಾನವನ್ನು ನುಡಿಸುವ ತಂತ್ರಗಾರಿಕೆಯನ್ನು ಕಲಿಸಿದರು. ತಾಯಿ ಮತ್ತು ಅಜ್ಜಿಯಿಂದ ಸಂಗೀತ ತ್ರಿಮೂತರ್ಿಗಳ ಕೃತಿ ಭಂಡಾರ ವನ್ನೇ ತಮ್ಮದನ್ನಾಗಿಸಿಕೊಂಡರು. ಅಸಂಖ್ಯಾತ ವರ್ಣ ಗಳನ್ನು ಕಲಿತರು.  ಮತ್ತು ವರ್ಣಗಳು ಅವರ ವಿಶೇಷ ಪರಿಣತಿಯ ಕ್ಷೇತ್ರವೂ ಆಗಿತ್ತು. ಪುರಂದರ ದಾಸರ ದೇವರನಾಮಗಳು ಮತ್ತು ಆ ಕಾಲದ ತಮಿಳು ವಾಗ್ಗೇಯಕಾರರ ಕೃತಿಗಳನ್ನು ಕಲಿತರು. ಆಧುನಿಕ ಕನರ್ಾಟಕ ಸಂಗೀತದ ಇತಿಹಾಸದಲ್ಲಿ ಧನಮ್ಮಾಳ್ ಒಬ್ಬರನ್ನು ಬಿಟ್ಟರೆ ಯಾವುದೇ ಒಬ್ಬ ವ್ಯಕ್ತಿ ಇಷ್ಟು ಅಪಾರ ಸಂಖ್ಯೆಯಲ್ಲಿ ಕೃತಿಗಳನ್ನು ಕಲಿತಿರುವ ನಿದರ್ಶನವೇ ಇಲ್ಲ.  ಧನಮ್ಮಾಳ್ ಒಂದು ಅಪರೂಪದ ಹಾಗು ವಿಶೇಷವಾದ ಉದಾಹರಣೆ ಅಷ್ಟೇ.  ಅವರು ಹೆಚ್ಚುಕಡಿಮೆ ಸಂಗೀತದ ವಿಶ್ವಕೋಶ ಇದ್ದಂತೆ ಇದ್ದರು.  ಎರಡು ಅಥವಾ ಮೂರು ತಲೆಮಾರಿನಲ್ಲಿ ಸಂಗೀತದ ಬೆಳವಣಿಗೆ ಆದ ಕ್ರಮಕ್ಕೆ ಧನಮ್ಮಾಳ್ ಒಂದು ಜೀವಂತ ದಾಖಲೆಯಂತಿದ್ದರು.  ಆ ಕಾಲದಲ್ಲಿ ಪದಂ ಪ್ರಸ್ತುತಿಗೆ ತುಂಬಾ ಹೆಸರುವಾಸಿಯಾಗಿದ್ದ, ಅಂಧರಾಗಿದ್ದ ವೈಣಿಕ ಪದಂ ಬಾಲದಾಸ್ ತಾನು ಸುಪ್ರಸಿದ್ಧ ಗೌರಿ ಅಮ್ಮಾಳ್ ಮೂಲಕ ಕಲಿತಿದ್ದನ್ನೆಲ್ಲಾ ಧನಮ್ಮಾಳಿಗೆ ಧಾರೆ ಎರೆದರು.  ಧನಮ್ಮಾಳ ಗ್ರಹಿಕೆಯ ವೇಗ ವನ್ನು ಕಂಡು ಚಕಿತರಾದ ಅವರು ಆಕೆಗೆ ಬೆಂಕಿ ಪೊಟ್ಟಣ ಎಂದು ಅಡ್ಡ ಹೆಸರಿಟ್ಟಿದ್ದರು.  ಪದಂ ಪೊನ್ನುಸ್ವಾಮಿ ಯಿಂದ ಅವರು ಘನಂ ಕೃಷ್ಣಯ್ಯರ್ ಮತ್ತು ಸುಬ್ಬು ಅಯ್ಯರ್ ಅವರ ತಮಿಳು ಪದಗಳನ್ನು ಕಲಿತರು.  ತನ್ನ ಸಮಕಾಲೀನರಾದ ಅರಿಯಾಕುಡಿ ರಾಮಾನುಜ ಅಯ್ಯಂಗಾರ್ ಮತ್ತು ನೈನಾ ಪಿಳ್ಳೆ ಅವರ ಒಡನಾಟದಲ್ಲಿ ಧನಮ್ಮಾ ತನ್ನ ಸಂಗೀತಜ್ಞಾನದ ವ್ಯಾಪ್ತಿಯನ್ನು ಮತ್ತಷ್ಟು ಹಿಗ್ಗಿಸಿಕೊಂಡರು.  ಆ ಕಾಲದಲ್ಲಿ ಆರು ಭಾಷೆಗಳಲ್ಲಿದ್ದ ಸಂಗೀತರಚನೆಗಳನ್ನು ಅರ್ಥವರಿತು, ತಪ್ಪಿಲ್ಲದೆ ಹಾಡುತ್ತಿದ್ದ ಏಕೈಕ ವ್ಯಕ್ತಿ ಅವರಾಗಿದ್ದರು.  
 ಆ ಕಾಲದಲ್ಲಿ ವೀಣಾವಾದನವನ್ನು ತನ್ನ ಕ್ಷೇತ್ರವನ್ನಾಗಿ ಧನಮ್ಮಾಳ್ ಆಯ್ಕೆಮಾಡಿಕೊಂಡಿದ್ದು ಕೂಡ ಒಂದು ವಿಶೇಷವೆನಿಸಿಕೊಂಡಿತ್ತು, ಏಕೆಂದರೆ ವೀಣಾ ವಾದನ ಹೆಚ್ಚುಕಡಿಮೆ ಗಂಡಸರ ಏಕಸ್ವಾಮ್ಯ ವಾಗಿತ್ತು.  ತಂಜಾವೂರು, ಮೈಸೂರು, ಆಂಧ್ರದ ವೀಣಾ ಪರಂಪರೆ ಗಳಲ್ಲಿ ಆಗ ಇದ್ದ ಅತ್ಯಂತ ಪ್ರತಿಭಾವಂತ ವೈಣಿಕ ರೆಲ್ಲರೂ ಪುರುಷರೇ – ಕಾರೈಕುಡಿ ಸಹೋದರರು, ವೀಣಾ ಶೇಷಣ್ಣ ಮತ್ತು ಸುಬ್ಬಣ್ಣ, ವಿಜಯನಗರಂನ ವೀಣಾ ವೆಂಕಟರಮಣದಾಸರು ಮುಂತಾದವರು.4
ತಂಜಾವೂರು ಬಾನಿಯ ಪ್ರಮುಖ ಪ್ರತಿನಿಧಿಯಾದ ಧನಮ್ಮಾಳ ಪ್ರಕಾರ ವೀಣೆಯು, ಗಾಯನ ಶೈಲಿಗೆ ಅತ್ಯಂತ ಹತ್ತಿರವಿರಬೇಕಿತ್ತು.  ಹೆಚ್ಚುಕಡಿಮೆ ಗಾಯನವನ್ನು ಅನುಕರಿಸಬೇಕಿತ್ತು. ಮಾನವ ಶಾರೀರವು ಹೊರಹೊಮ್ಮಿಸುವ ಪ್ರತಿಯೊಂದು ಗಮಕದ ವಿಶಿಷ್ಟತೆಯನ್ನು ಮತ್ತು ಕೃತಿಯ ಸಾಹಿತ್ಯದ ಪ್ರತಿಯೊಂದು ಅಕ್ಷರವನ್ನೂ ವೀಣಾವಾದನವು ಬಿಂಬಿಸಬೇಕು ಎನ್ನುವುದು ಧನಮ್ಮಾಳ ಉದ್ದೇಶವಾಗಿತ್ತು. ಆದರೆ ಮಾನವ ಶಾರೀರಕ್ಕೆ ಸಾಧ್ಯವಾಗುವ ನಿರಂತರತೆಯನ್ನು ವೀಣೆಯಲ್ಲಿ ಮೂಡಿಸುವುದು ತುಂಬಾ ಕಷ್ಟಸಾಧ್ಯವಾದ ಕೆಲಸವಾಗಿತ್ತು. ಅದನ್ನು ವೀಣೆಯಲ್ಲಿ ಸಾಧಿಸಲು ಒಂದು ವಿಶೇಷವಾದ ನುಡಿಸಾಣಿಕೆಯ ತಂತ್ರವನ್ನೇ ಧನಮ್ಮಾಳ್ ರೂಪಿಸಿಕೊಳ್ಳಬೇಕಾಯಿತು. ಹಾಗಾಗಿಯೇ ಅವರು ಮೀಟುಗಳನ್ನು ಆದಷ್ಟು ಕಡಿಮೆಮಾಡಿಕೊಂಡು ಒಂದು ಮನೆಯೊಳಗೇ ಹಲವಾರು ಸ್ವರಗಳನ್ನು ಎಳೆದು ನುಡಿಸುವ ಭಿನ್ನವಾದ ನುಡಿಸಾಣಿಕೆಯನ್ನು ರೂಢಿಸಿಕೊಂಡರು.  ಮೈಸೂರು ಮತ್ತು ಆಂಧ್ರ ಬಾನಿಗಳು ವೀಣೆಗೆ ಒಂದು ವಾದ್ಯವಾಗಿ ವಿಶೇಷ ಅಸ್ಮಿತೆಯನ್ನು ನೀಡುವ ದಿಕ್ಕಿನಲ್ಲಿ ಚಿಂತನೆಯನ್ನು ನಡೆಸಿತು.  ಅವರ ಪ್ರಕಾರ ವೀಣೆಯ ಉದ್ದೇಶ ಮಾನವಶಾರೀರವನ್ನು ಅನುಕರಿಸುವುದಾಗಿರಲಿಲ್ಲ.  ವೀಣೆಯಲ್ಲಿ ವೇಗವನ್ನು ಅಂದರೆ ದ್ರುತಕಾಲದ ಲಯವನ್ನು ಸಾಧಿಸುವತ್ತ ಅವರು ಗಮನ ಹರಿಸಿದರು.  ಹಾಗಾಗಿಯೇ ಧನಮ್ಮಾಳ್ ಅವರ ವಾದನ ಶೈಲಿ ಇವರೆಲ್ಲರ ವಾದನಶೈಲಿಗಿಂತ ಸಾಕಷ್ಟು ಭಿನ್ನವಾಗಿತ್ತು5
ಇಷ್ಟೆಲ್ಲಾ ಪ್ರತಿಭೆಯಿದ್ದರೂ ನೆರವಲ್ ಮಾಡುವುದು ಮತ್ತು ಕಲ್ಪನಾಸ್ವರವನ್ನು ನುಡಿಸುವುದನ್ನು ಕುರಿತು ಧನಮ್ಮಾಳ್ ಸ್ವಲ್ಪವೂ ತಲೆಕಡಿಸಿಕೊಳ್ಳುತ್ತಿರಲಿಲ್ಲ.  ಅವರು ನೆರವಲ್ ಮಾಡುತ್ತಿದ್ದುದು ತುಂಬಾ ಅಪರೂಪವಾಗಿತ್ತು ಅವರ ಪ್ರಕಾರ ಮಹಾನ್ ವಾಗ್ಗೇಯಕಾರರು ರಚಿಸಿರುವ ಕೃತಿಗಳ ಸಂಗತಿಗಳಲ್ಲಿ ರಾಗಭಾವದ ದೃಷ್ಟಿಯಿಂದ ಉತ್ತಮ ಪಡಿಸಬೇಕಾದುದು ಏನೂ ಇರಲಿಲ್ಲ.  ಹಾಗಾಗಿ ಅವರ ಮನೋಧರ್ಮ ಹೆಚ್ಚಾಗಿ ರಾಗಾಲಾಪನೆಗಳಲ್ಲಿ ವ್ಯಕ್ತವಾಗುತ್ತಿತ್ತು.  ಅವರು ರಾಗವನ್ನು ವಿಸ್ತರಿಸುತ್ತಿದ್ದ ಕ್ರಮ ಅತ್ಯಂತ ವ್ಯವಸ್ಥಿತವಾಗಿತ್ತು.  ಮತ್ತು ಅವರ ವ್ಯಕ್ತಿತ್ವದ ವಿಶಿಷ್ಟ ಛಾಪು ಅವರ ಆಲಾಪನೆಗಳು ಮತ್ತು ಕೃತಿಯ ಪ್ರಸ್ತುತಿಯಲ್ಲಿ ಸ್ಪಷ್ಟವಾಗಿ ಮೂಡಿಬರುತ್ತಿತ್ತು.  
    ಧನಮ್ಮಾಳ್ ಅವರು ಟೈಗರ್ ವರದಾ ಚಾರ್ಯರ ಹಿರಿಯ ಸಮಕಾಲೀನರಾಗಿದ್ದರು.  ಅವರಿಬ್ಬರೂ ಆತ್ಮೀಯ ಗೆಳೆಯರಾಗಿದ್ದರು.  ಮುತ್ತಯ್ಯ ಭಾಗವತರೂ ಧನಮ್ಮಾಳ್ ಅವರಿಗೆ ತುಂಬಾ ಆತ್ಮೀಯರಾಗಿದ್ದರು.  ಮದ್ರಾಸಿಗೆ ಬಂದಾಗ ಅವರು ಧನಮ್ಮಾಳ್ ಮನೆಗೆ ಹೋಗುವುದನ್ನು ಯಾವ ಕಾರಣಕ್ಕೂ ತಪ್ಪಿಸಿಕೊಳ್ಳುತ್ತಿರಡಲಿಲ್ಲ. ಆ ವೇಳೆಗಾಗಲೇ ತಮ್ಮ ದೃಷ್ಟಿಯನ್ನು ಹೆಚ್ಚು ಕಡಿಮೆ ಕಳೆದುಕೊಂಡಿದ್ದ ಧನಮ್ಮಾಳ್ ಅವರನ್ನು ಟೈಗರ್ ಮತ್ತು ಮುತ್ತಯ್ಯ ಭಾಗವತರಿಬ್ಬರೂ ಬ್ರಾಡ್ ವೇನಲ್ಲಿದ್ದ ಹ್ಯಾರಿಸನ್ಗೆ ಕರೆದೊಯ್ಯುತ್ತಿದ್ದರು ಮತ್ತು ಅಲ್ಲಿ ಸುಮಾರು ಹೊತ್ತು ಸಂತೋಷವಾಗಿ ಕಾಲ ಕಳೆದು ನಂತರ ಮನೆಗೆ ಹಿಂದಿರುಗುತ್ತಿದ್ದರು.6  
    ಆ ಕಾಲದ ವಿದ್ವಾಂಸರಲ್ಲಿ ಟೈಗರ್ ಮತ್ತು ಧನಮ್ಮಾಳ್ ಅವರಿಬ್ಬರಿಗೂ ಬೇರೆಲ್ಲರಿಗಿಂತಲೂ ತುಂಬಾ ವಿಭಿನ್ನವಾದ, ವಿಶಿಷ್ಟ ಶೈಲಿಯಿತ್ತು. ಟೈಗರ್ ಮತ್ತು ಧನಮ್ಮಾಳ್ ಅವರ ಶೈಲಿಯಲ್ಲಿ ಕಂಡುಬರುತ್ತಿದ್ದ ವೈರುಧ್ಯ ತುಂಬಾ ಕುತೂಹಲಕಾರಿಯಾಗಿದೆ. ಕೃತಿಯಾಗಲಿ ಅಥವಾ ರಾಗವಾಗಲಿ ತುಂಬಾ ತೀವ್ರವಾಗಿ ಮತ್ತು ಕ್ಲುಪ್ತವಾಗಿ ಪ್ರಸ್ತುತಿ ಪಡಿಸುವುದು ಧನಮ್ಮಾಳ್ ಶೈಲಿಯಾಗಿತ್ತು.  ರಾಗಭಾವ ತುಂಬಿ ಹೊರಹೊಮ್ಮುತ್ತಿದ್ದ ಕೆಲವೇ ಕೆಲವು ಸಂಗತಿಗಳನ್ನು ಅವರು ವೀಣೆಯಲ್ಲಿ ನುಡಿಸಿದರೆ ಸಾಕಿತ್ತು,  ರಾಗವನ್ನು ಸಂಪೂರ್ಣವಾಗಿ ಕೇಳಿದ ಸಂತೃಪ್ತಿ ರಸಿಕರಿಗೆ ದೊರಕು ತ್ತಿತ್ತು. ರಾಗವನ್ನು ತುಂಬಾ ವಿಸ್ತಾರಮಾಡುತ್ತಿದ್ದ ವಿದ್ವಾಂಸರಿಗೆ ಅವರು ಆಗಾಗ ಛೀಮಾರಿಹಾಕುತ್ತಿದ್ದರು.  ಆದರೆ ಟೈಗರ್ ರಾಗವನ್ನು ರಸಿಕರು ದಂಗು ಬಡಿದು ಹೋಗುವ ಮಟ್ಟಕ್ಕೆ ವಿಸ್ತಾರ ಮಾಡುತ್ತಿದ್ದರು. ಅದರೆ ಅದರ ಪ್ರತಿ ಅಕಾರ ಉಕಾರವೂ ಭಾವಭರಿತವಾಗಿ, ರಕ್ತಿಸಹಿತವಾಗಿ ಇರುತ್ತಿತ್ತು. ರಾಗಾಲಾಪನೆ ದೀರ್ಘವಾದರೆ ಉಳಿದವರಿಗೆ ಛೀಮಾರಿ ಹಾಕುತ್ತಿದ್ದ ಧನಮ್ಮಾಳ್, ಟೈಗರ್ ಅವರ ಆಲಾಪನೆಯನ್ನು ಮಾತ್ರ ಸಕ್ಕರೆ ಮಿಠಾಯಿಯಂತಿದೆ ಎಂದು ಮೆಚ್ಚಿಕೊಳ್ಳುತ್ತಿದರು. ಪೂರ್ಣಚಂದ್ರಿಕೆ, ಜನರಂಜನಿ ಹಾಗೂ ದಬರ್ಾರ್ ಅಂತಹ ರಾಗಗಳನ್ನು ವಿಸ್ತಾರ ಮಾಡಬಾರದು ಎನ್ನುವುದು ಧನಮ್ಮಾಳ ಅವರ ಅಭಿಪ್ರಾಯವಾಗಿತ್ತು. ಆದರೆ ಈ ರಾಗಗಳನ್ನು ಟೈಗರ್ ಅವರು ವಿಸ್ತರಿಸಿದಾಗ ಧನಮ್ಮಾಳ್ ಅಪಾರ ಮೆಚ್ಚುಗೆ ಸೂಚಿಸುತ್ತಿದ್ದರು.  ಕ್ಷೇತ್ರಜ್ಞರ ಪದಗಳನ್ನು ಹಾಡುವುದು ಇಬ್ಬರಿಗೂ ಪರಮಪ್ರಿಯವಾಗಿತ್ತು, ಆದರೆ ಇಬ್ಬರೂ ಅದನ್ನು ಪ್ರಸ್ತುತಪಡಿಸುತ್ತಿದ್ದ ರೀತಿ ತೀರಾ ಬೇರೆಯಾಗಿತ್ತು.  ರಾಗದ ಅಪರೂಪದ ಸಂಗತಿಗಳನ್ನು ಬಳಸಿ ನಡು ನಡುವಿನ ಅಂತರವನ್ನು ತುಂಬಲು, ಪದದ ವಿಳಂಬ ಗತಿ ಟೈಗರ್ ಅವರಿಗೆ ಅಪಾರ ಅವಕಾಶವನ್ನು ಒದಗಿಸು ತ್ತಿತ್ತು.  ಧನಮ್ಮಾಳ್ ವಿಳಂಬಗತಿಯಲ್ಲಿ ಪದವನ್ನು ಅತ್ಯಂತ ಅಚ್ಚುಕಟ್ಟಾಗಿ ಮತ್ತು ಪರಿಪೂರ್ಣವಾಗಿ ನರೂಪಿಸು ತ್ತಿದ್ದರು. ಟೈಗರ್ ಅವರದ್ದು ಫ್ರೀಹ್ಯಾಂಡ್ ಡ್ರಾಯಿಂಗ್ ಆದರೆ, ಧನಮ್ಮಾಳ್ ಅವರದ್ದು ಎಚ್ಚರಿಕೆಯಿಂದ ಮಾಡಿದ ವರ್ಣಚಿತ್ರವಾಗಿರುತ್ತಿತ್ತು.  ಲಕ್ಷಣಪೂರ್ವ ಹಾಡಿಕೆ ಟೈಗರ್ ಅವರ ಹೆಗ್ಗುರುತು. ಧನಮ್ಮಾ ಅದಕ್ಕೆ ಅಷ್ಟೊಂದು ಪ್ರಾಮುಖ್ಯ ವನ್ನೇ ನೀಡುತ್ತಿರಲಿಲ್ಲ. ಅಲ್ಲಿ ಇಲ್ಲಿ ಕೆಲವು ಕುಂದುಗಳಿದ್ದರೂ ಕೂಡ ಆಕೆಯ ವೀಣೆಯ ನಿನಾದ, ಹಾಡಿಕೆಯ ಮಾಧುರ್ಯ ಮತ್ತು ಭಾವಪೂರ್ಣತೆ ಅದನ್ನೆಲ್ಲಾ ಮರೆಸಿಬಿಡುತ್ತಿತ್ತು. ಅವರಿಗೆ ಸಂಗೀತದ ವ್ಯಾಕರಣಕ್ಕಿಂತ ಸಂಗೀತದ ಭಾವವೇ ಮುಖ್ಯವಾಗಿತ್ತು.  ಟೈಗರ್ ಅವರ ಸಂಗೀತ, ಪ್ರವಾಹದ ಭರದಲ್ಲಿ ಉಕ್ಕಿ ಬೆಟ್ಟದಿಂದ ಕೆಳಗೆ ಹರಿವ ನದಿಯಂತಿದ್ದರೆ, ಧನಮ್ಮಾಳ್ ಅವರ ಸಂಗೀತ ಬಯಲಿನಲ್ಲಿ ಶಾಂತವಾಗಿ, ಸುಲಲಿತ ವಾಗಿ ನೆಮ್ಮದಿಯಿಂದ ಸಾಗಿಹೋಗುವ ನದಿಯಂತಿತ್ತು.7  
    ವಿಳಂಬಕಾಲ ಹೆಚ್ಚುಕಡಿಮೆ ಧನಮ್ಮಾಳ್ ಬಾನಿಯ ಹೆಗ್ಗುರುತಾಗಿತ್ತು. ಅಷ್ಟೇ ಅಲ್ಲ ಅದನ್ನು ಅವರು ಸಂಗೀತದ ಮೂಲ ಲಕ್ಷಣ ಎಂದು ಭಾವಿಸಿ ಕೊಂಡಿದ್ದರು. ಅವರ ಮೊಮ್ಮಗಳು ಬೃಂದಾ, ಕಾಂಚೀಪುರಂ ನೈನಾ ಪಿಳ್ಳೆಯವರಲ್ಲಿ ಸಂಗೀತವನ್ನು ಕಲಿತಾಗ ದ್ರುತಗತಿಯಲ್ಲಿ ಹಾಡುವುದು ಆಕೆಗೆ ಅಭ್ಯಾಸವಾಯಿತು.  ಅಲ್ಲಿಂದ ವಾಪಸ್ಸು ಬಂದು ಅಜ್ಜಿಯ ಮುಂದೆ ಹಾಡಿದಾಗ ಅವರು ವ್ಯಂಗ್ಯವಾಗಿ, ಅದ್ಯಾಕೆ ಇಷ್ಟು ಓಡುತ್ತಿದ್ದೀಯೆ? ನೀನೇನಾದರೂ ಬೋಟ್ ಟ್ರೇನ್ ಹತ್ತಬೇಕಾಗಿದೆಯೇ? ಎಂದು ಕೇಳಿದರು. (ಕೊಲೊಂಬೋಯಿಂದ ಇಂಗ್ಲೆಂಡಿಗೆ ಹೋಗಬೇಕಾದ ಪ್ರಯಾಣಿಕರನ್ನು ಮದ್ರಾಸಿನಿಂದ ಕೊಲೊಂಬೋಗೆ ಕೊಂಡೊಯ್ಯುತ್ತಿದ್ದ ರೈಲು).8
   ಧನಮ್ಮಾಳ್ ವೀಣೆ ನುಡಿಸುವಾಗ ತಂಬೂರಿಯ ಶ್ರುತಿ ಯೊಂದನ್ನು ಬಿಟ್ಟು ಬೇರೆ ಏನನ್ನೂ ಇಟ್ಟುಕೊಳ್ಳುತ್ತಿರಲಿಲ್ಲ.  ಮೃದಂಗವನ್ನು ಇಟ್ಟುಕೊಳ್ಳುತ್ತಲೇ ಇರಲಿಲ್ಲ, ಏಕೆಂದರೆ ಅದು ವೀಣೆಯ ಮೃದು ಮಧುರವಾದ ಮೆಲು ನಾದವನ್ನು ಮುಚ್ಚಿಹಾಕಿಬಿಡುತ್ತದೆ ಎಂದು. ಜೊತೆಗೆ ವೀಣೆಯಲ್ಲಿಯೇ ಇರುವ ತಾಳದ ತಂತಿಗಳಿಂದಾಗಿ ವೀಣೆಯ ರಚನೆ ತನ್ನಲ್ಲೇ ತಾಳವನ್ನು ಒಳಗೊಂಡಿದೆ ಎನ್ನುವುದು ಅವರ ಅಭಿಪ್ರಾಯವಾಗಿತ್ತು. ಜೊತೆಗೆ ಇನ್ನೂ ಒಂದು ಕಾರಣವಿದ್ದಿರಬಹುದು.  ಅದನ್ನು ಸೂಕ್ಷ್ಮವಾಗಿ  ರಂಗ ರಾಮಾನುಜ ಅಯ್ಯಂಗಾರ್ಯರು ಪ್ರಸ್ತಾಪಿಸು ತ್ತಾರೆ. ಆ ಕಾಲದಲ್ಲಿ ಹೆಂಗಸರಿಗೆ ಪಕ್ಕವಾದ್ಯ ನುಡಿಸುವುದರ ಬಗ್ಗೆ ಸಾಕಷ್ಟು ಹಿಂಜರಿಕೆ ಗಳಿದ್ದವು. ಹೆಂಗಸರಿಗೆ ಪಕ್ಕ ವಾದ್ಯ ನುಡಿಸುವುದಕ್ಕೆ ಬಹುತೇಕ ಗಂಡಸರು ಒಪ್ಪುತ್ತಿರಲಿಲ್ಲ. ಹಾಗಾಗಿ ಹೆಂಗಸರು ಪಕ್ಕವಾದ್ಯಕ್ಕೆ ತಮ್ಮದೇ ಆದ ಒಂದು ಗುಂಪನ್ನು ಕಟ್ಟಿಕೊಳ್ಳಬೇಕಾಗಿತ್ತು.9 ಈ ಸಮಸ್ಯೆಯನ್ನು ಆ ಕಾಲದ ಪ್ರತಿಯೊಬ್ಬ ಮಹಿಳೆಯೂ ಬೇರೆ ಬೇರೆ ರೀತಿಯಲ್ಲಿ ಪರಿಹರಿಸಿಕೊಂಡರು. ಧನಮ್ಮಾಳ್ ಅದನ್ನು ಪರಿಹರಿಸಿಕೊಂಡ ರೀತಿ ತೀರಾ ವಿಶಿಷ್ಟವಾಗಿತ್ತು.  ವೀಣೆ ಒಂದು ಪರಿಪೂರ್ಣವಾದ ವಾದ್ಯ ಅದಕ್ಕೆ ಮೃದಂಗವೇ ಆಗಲಿ ಅಥವಾ ಇನ್ಯಾವುದೇ ಪಕ್ಕವಾದ್ಯದ ಅವಶ್ಯಕತೆ ಇಲ್ಲ ಎಂಬ ನಿಲುವಿಗೆ ಬಂದರು.10 ಆದರೆ ಇಂತಹ ಒಂದು ನಿಲುವಿಗೆ ಬಂದರು ಎನ್ನುವ ಕಾರಣಕ್ಕೆ ಅವರು ಸಂಗೀತದಲ್ಲಿ ಲಯದ ಪಾತ್ರವನ್ನು ಕಡೆಗಾಣಿಸಿದರು ಎಂದು ಭಾವಿಸುವುದು ತಪ್ಪಾಗುತ್ತದೆ. ಅವರ ಸಮಕಾಲೀನರು ಹೇಳುವ ಪ್ರಕಾರ ಧನಮ್ಮಾಳ್ ಅವರ ಲಯಜ್ಞಾನ ಪರಿಪೂರ್ಣವಾಗಿತ್ತು. ಅವರ ನುಡಿಸಾಣಿಕೆಯ ಕಾಲ ಪ್ರಮಾಣ ವಿಳಂಬವಾಗಿದ್ದರಿಂದ ಅದನ್ನು ನಿಭಾಯಿ ಸಲು ಲಯದ ಮೇಲೆ ಬೇರೆಲ್ಲರಿಗಿಂತ ಹೆಚ್ಚಿನ ಪ್ರಭುತ್ವ ಅವರಿಗೆ ಬೇಕಾಗಿತ್ತು. ತುಂಬಾ ಸಾಮಾನ್ಯವಾಗಿ ಬಳಕೆಯಲ್ಲಿದ್ದ ತಾಳಗಳನ್ನು ನುಡಿಸುವಾಗಲೂ ಧನಮ್ಮಾಳ್ ತುಂಬಾ ಸ್ವಾತಂತ್ರ್ಯ ವನ್ನು ತೆಗೆದುಕೊಂಡು ಎಲ್ಲೂ ಲಯಕ್ಕೆ ಲೋಪವಾಗದಂತೆ ಅದನ್ನು ತಮಗೆ ಬೇಕಾದ ಕಾಲಪ್ರಮಾಣದಲ್ಲಿ ನುಡಿಸುತ್ತಿದ್ದರು.11
    ಸಂಗೀತದಲ್ಲಿ ವೇಗವನ್ನು, ದ್ರುತಕಾಲವನ್ನು ಕುರಿತು ಧನಮ್ಮಾಳಿಗಿದ್ದ ಪೂವರ್ಾಗ್ರಹವೇ ಕಲ್ಪನಾಸ್ವರಗಳ ಬಗ್ಗೆ ಅವರಿಗಿದ್ದ ಹೇವರಿಕೆಗೆ ಕಾರಣವಾಗಿತ್ತು.  ಸ್ವರಹಾಕು ವುದು ಹೆಚ್ಚಿನಬಾರಿ ಒಂದೇ ಸಮನೆ ಪಟಾಕಿ ಸಿಡಿಸಿದಂತೆ ಇರುತ್ತದೆ ಎನ್ನುವ ಕಾರಣಕ್ಕೇ ಅವರು ಸ್ವರಹಾಕುವುದನ್ನು ವಿರೋಧಿಸುತ್ತಿದ್ದರು.  ಇದರ ಜೊತೆಗೆ ಅವರಿಗೆ  ಹೆಣ್ತನದ ಬಗ್ಗೆ  ಇದ್ದ ಪರಿಕಲ್ಪನೆಯೂ ಇದಕ್ಕೆ ಕಾರಣವಾಗಿತ್ತು.  ನಿಧಾನ, ನೆಮ್ಮದಿ,   ಮಾಧುರ್ಯ,  ಮೃದುತ್ವ, ಇವುಗಳನ್ನು ಅವರು ಸ್ತ್ರೀತ್ವದ ಆಯಾಮ ಗಳೆಂದು ಭಾವಿಸಿದ್ದರು.  ಇವುಗಳನ್ನು ಸೂಕ್ತ ವಾಗಿ ಅಭಿವ್ಯಕ್ತಿಸು ವುದು ಈ ಗುಣ ಗಳನ್ನೇ ಮೈ ದುಂಬಿಸಿ ಕೊಂಡಿರುವ ಮಹಿಳೆಯರಿಗೆ ಮಾತ್ರ ಸಾಧ್ಯ ಎಂದು ಅವರು ಭಾವಿಸಿದ್ದರು.  ಅವರ ಮೊಮ್ಮಗ ಟಿ ಶಂಕರನ್ ಜಾವಳಿ ಯೊಂದನ್ನು ಅವರ ಮುಂದೆ ಪ್ರಸ್ತುತಪಡಿಸಿ ಅವರನ್ನು ಮೆಚ್ಚಿಸಲು ಪ್ರಯತ್ನಿಸಿದಾಗ, ಉದ್ದುದ್ದನೆಯ ಪೊತ್ತೆ ಮೀಸೆ ಬೆಳೆಸಿಕೊಂಡಿರುವ ನಿನ್ನಂತಹ ಪುಂಡರು ಇಂತಹ ಮುದ್ದು ಪ್ರೇಮಗೀತೆಗೆ ಏನು ನ್ಯಾಯ ಒದಗಿಸಲು ಸಾಧ್ಯ? ಎಂದು ಲೇವಡಿ ಮಾಡಿದರು.12  ಹೆಂಗಸರು ತೊಡೆಯ ಮೇಲೆ ಜೋರಾಗಿ ತಾಳಬಡಿದುಕೊಂಡು ಹಾಡುವುದನ್ನು ಅವರು ದ್ವೇಷಿಸುತ್ತಿದ್ದರು.  ಹೆಂಗಸರು ತುಂಬಾ ಗತ್ತಿನಿಂದ ಹಾಡುವುದು ಕೂಡ ಅವರಿಗೆ ಇಷ್ಟವಾಗುತ್ತಿರಲಿಲ್ಲ.  ತಮ್ಮ ಮಗಳು ಕಾಮಾಕ್ಷಿಯ ಮೊಮ್ಮಗಳು ಬೃಂದಾಳನ್ನು ಕಾಂಚೀಪುರಂ ನೈನಾ ಪಿಳ್ಳೆಯ ಬಳಿ ಸಂಗೀತಕ್ಕೆ ಸೇರಿಸಿದಾಗಲೂ ಧನಮ್ಮಾಳಿಗೆ ಇವೇ ಗಾಭರಿಗಳಿದ್ದವು.   ಹೀಗಾಗಿ ಎಲ್ಲೋ ಒಂದು ಕಡೆ ತನ್ನ ಕಾಲದ ಪುರುಷ ಪ್ರಪಂಚವು ಹೆಂಗಸರಿಗಾಗಿ ರೂಪಿಸಿದ ಮೌಲ್ಯಗಳಿಗೆ ಧನಮ್ಮಾಳ್ ಅವರ ನಿಲುವು ಚೆನ್ನಾಗಿ ಹೊಂದಿಕೊಳ್ಳುತ್ತದೆ ಅನ್ನಿಸುತ್ತದೆ.  ಆದರೆ, ಧನಮ್ಮಾಳ ಬದುಕಿನ ಉಳಿದ ಆಯ್ಕೆಗಳು, ಅವರ ಮಾತಿನ ವೈಖರಿ, ಅವರ ಸ್ವತಂತ್ರವಾದ ವ್ಯಕ್ತಿತ್ವ, ಯಾವುದೇ ವಿಚಾರದ ಬಗ್ಗೆಯಾಗಲಿ ಅವರ ಗಟ್ಟಿಯಾದ ನಿಲುವು, ಮತ್ತು ನನ್ನ ವೀಣೆ ಕೇಳಬೇಕೆಂದಿದ್ದರೆ ನನ್ನ ಮನೆಗೆ ಬನ್ನಿ ನಾನು ಯಾರಿಗಾಗಿಯೂ ನುಡಿಸುವವಳಲ್ಲ ಎನ್ನುವ ದಾಢ್ರ್ಯ ಇವುಗಳನ್ನು ಗಮನಿಸಿದಾಗ ಅವರು ಪುರುಷ ಪ್ರಧಾನ ಮೌಲ್ಯಗಳ ಚೌಕಟ್ಟಿನೊಳಗೆ ಇದ್ದರೋ ಅಥವಾ ಆ ಚೌಕಟ್ಟನ್ನು ತನ್ನ ಪ್ರತಿಭೆಯ ಮೂಲಕ ತಿರುಗು ಮುರುಗು ಮಾಡುತ್ತಿದ್ದರೋ ಎನ್ನುವ ಅನುಮಾನ ಕಾಡುತ್ತದೆ.  
    ಜಾವಳಿಯ ಪ್ರಸ್ತುತಿಗೆ ಧನಮ್ಮಾಳ್ ಒಂದು ಗೌರವವನ್ನು ಮತ್ತು ಘನತೆಯನ್ನು ಒದಗಿಸಿಕೊಟ್ಟರು.  ಪಟ್ಟಣಂ  ಸುಬ್ರಮಣ್ಯ ಅಯ್ಯರ್, ಪಟ್ಟಾಭಿರಾಮಯ್ಯ, ತಿರುಪತಿ  ನಾರಾಯಣ ಸ್ವಾಮಿ, ಮತ್ತು ಎಲ್ಲದಕ್ಕಿಂತ ಮುಖ್ಯವಾಗಿ ಧರ್ಮಪುರಿ ಸುಬ್ಬ ರಾಯರ ಜಾವಳಿ ಗಳನ್ನು ಧನಮ್ಮಾಳ್ ಜನಪ್ರಿಯಗೊಳಿಸಿದರು.  ಧನಮ್ಮಾಳ್ ಪದಂ ಮತ್ತು ಜಾವಳಿಗಳನ್ನು ಜನಪ್ರಿಯ ಗೊಳಿಸಿದರು ಎನ್ನುವ ಅಂಶವನ್ನು ಒಪ್ಪಿಕೊಳ್ಳುತ್ತಲೇ ಪದಂ ಮತ್ತು ಜಾವಳಿಗಳ ನಿಜವಾದ ಸೌಂದರ್ಯ ವನ್ನು ಹೊರಹೊಮ್ಮಿಸಲು ಮಾನವ ಶಾರೀರದ ಅವಶ್ಯಕತೆ ಇದೆ. ವೀಣೆಯಲ್ಲಿ ಅದರ ನಿಜವಾದ ಸೌಂದರ್ಯವನ್ನು ಸಂಪೂರ್ಣವಾಗಿ ಹೊರಹೊಮ್ಮಿಸುವುದು ಸಾಧ್ಯವಿಲ್ಲ. ಎನ್ನುವ ಅಭಿಪ್ರಾಯವನ್ನು ಟಿ.ಬೃಂದಾ ವ್ಯಕ್ತಪಡಿಸುತ್ತಾರೆ.  ಜೊತೆಗೆ ಆಂಧ್ರಬಾನಿಯವರ ಮನಸ್ಸಿನಲ್ಲಿ ಕ್ಷೇತ್ರಜ್ಞರ ಪದಗಳನ್ನು ಧನಮ್ಮಾಳ್ ಪ್ರಸ್ತುತಪಡಿಸುತ್ತಿದ್ದ ಕ್ರಮ ಸರಿಯಿರಲಿಲ್ಲ; ಅವರು ಅದರ ಪ್ರಸ್ತುತಿಯನ್ನು ಕಲಸುಮೇಲೋಗರ ಮಾಡಿಬಿಟ್ಟಿದ್ದರು. ಎನ್ನುವ ಅಭಿಪ್ರಾಯವಿತ್ತು ಎನ್ನುವ ಅಂಶವನ್ನೂ ಟಿ. ಬೃಂದಾ ದಾಖಲಿಸುತ್ತಾರೆ.13
    ಧನಮ್ಮಾಳ್ ಬಾನಿಯ ಸಂಗೀತ ಭಾವಪ್ರಧಾನ ವಾದ, ವಿಳಂಬಗತಿಯ ಸಂಗೀತ.  ಮುಕ್ತಾರವರ ಪ್ರಕಾರ ಗಮಕಗಳ ಸೃಷ್ಟಿಗೆ ಕಾರಣವಾದ ಅನುಸ್ವರಗಳು, ಜಾರುಗಳು ಹಾಗೂ ಕಾರ್ವೆಗಳು ಇವುಗಳೇ ಧನಮ್ಮಾಳ್ ಬಾನಿಯ ಸಂಗೀತದ ಮುಖ್ಯ ಲಕ್ಷಣ.  ಯಾವುದೇ ಸ್ವರವನ್ನು ಬೋಳು ಬೋಳಾಗಿ ಅನುಸ್ವರವಿಲ್ಲದೆ ಒಂಟಿಯಾಗಿ ಬಿಡುವುದನ್ನು ಈ ಬಾನಿಯಲ್ಲಿ ಕಾಣಲು ಸಾಧ್ಯವೇ ಇಲ್ಲ.  ಅದು ಯಾವುದೋ ಒಂದು ಅನುಸ್ವರದ ಸಾಹಚರ್ಯದಲ್ಲಿ ಮಾತ್ರವೇ ಕಾಣಿಸಿಕೊಳ್ಳಲು ಸಾಧ್ಯ.  ಪ್ರತಿಯೊಂದು ಸ್ವರ ಮತ್ತು ಅನುಸ್ವರವನ್ನೂ ಭಾವತುಂಬಿ ಹಾಡಬೇಕಿತ್ತು.  ಯಾವುದೂ ರಸಹೀನವಾಗಿರಬಾರದು.  ಇದನ್ನು ಧನಮ್ಮಾಳ್ ಬಾನಿ ಅತ್ಯಂತ ಪರಿಪೂರ್ಣವಾಗಿ ಸಾಧಿಸಿತ್ತು.14  
    ನೃತ್ಯದ ಅತ್ಯಂತ ಸೂಕ್ಷ್ಮವಾದ ಹಾಗೂ ಸಂಕೀರ್ಣವಾದ ಭಾವಾಭಿವ್ಯಕ್ತಿಯ ನಿಕಟ ಸಂಪರ್ಕ ಧನಮ್ಮಾಳ್ ಬಾನಿಯ ಸಂಗೀತಕ್ಕೆ ಒಂದು ವಿಶಿಷ್ಟವಾದ ಆಯಾಮವನ್ನು ನಡಿತ್ತು. ಧನಮ್ಮಾಳ್ ಬಾನಿಯ ಸಂಗೀತಕ್ಕೆ ಅಪೂರ್ವವಾದ ಕಲಾತ್ಮಕ ಅಭಿವ್ಯಕ್ತಿ ಉಂಟಾಗುವುದಕ್ಕೆ ಅವರಿಗೆ ನೃತ್ಯಕ್ಕೆ ಸಂಬಂಧಿಸಿದ ಕೃತಿಭಂಡಾರದ ಪರಿಣತಿ ಇರುವುದೇ ಕಾರಣ ಎಂದು ಫುಲ್ ಬ್ರೈಟ್ ವಿದ್ಯಾಥರ್ಿ ವೇತನ ಪಡೆದು ಭರತ ನಾಟ್ಯದಲ್ಲಿ ಬಳಕೆಯಾಗುತ್ತಿದ್ದ ಕನರ್ಾಟಕ ಸಂಗೀತದ ಅಧ್ಯಯನಕ್ಕೆ ಭಾರತಕ್ಕೆ ಆಗಮಿಸಿದ ಮತ್ತು ನಂತರದ ದಿನಗಳಲ್ಲಿ ಹೆಸರಾಂತ ಸಂಗೀತ ಗಾರನೆಂದು ಪ್ರಸಿದ್ಧಿ ಪಡೆದ ದಿವಂಗತ ಜಾನ್ ಬಿ ಹಿಗ್ಗಿನ್ಸ್ಗೆ ಗಾಢವಾಗಿ ಅನ್ನಿಸಿತ್ತು.
    ಧನಮ್ಮಾಳ್ ಅವರ ಉಛ್ರಾಯದ ದಿನಗಳಲ್ಲಿ ಮೈಸೂರು, ತಿರುವಾಂಕೂರು, ವಿಜಯನಗರಂ, ದರ್ಭಂಗಾ, ತೇಹ್ರಿ-ಗರವಾಲ್, ಬರೋಡದ ಗಾಯಕವಾಡ್ ಮಹಾರಾಜರು ಅವರ ಸಂಗೀತದ ಆರಾಧಕರಾಗಿದ್ದರು.  ಅವರ ಕಛೇರಿಗಳಿಗೆ ಲಾಡರ್್ ರಿಪ್ಪನ್, ಲಾಡರ್್ ಕಾಮರ್ಿಕಲ್ ಬರುತ್ತಿದ್ದರು.  ಧನಮ್ಮಾಳ್ ಅವರಿಗೆ ಹಿಂದುಸ್ಥಾನಿ ಸಂಗೀತದಲ್ಲಿ ಒಳ್ಳೆಯ ಪರಿಶ್ರಮವಿತ್ತು.  ಅವರು ನುಡಿಸುತ್ತಿದ್ದ ಸೋಹನಿ, ಮಾಲ್ಕೌನ್ಸ್, ಮುಲ್ತಾನಿ ರಾಗಗಳಿಗೆ ಆಕರ್ಾಟಿನ ನವಾಬರಾದ ನವಾಬ್ ಅಲಿ ಖಾನ್ ಮಾರುಹೋಗಿದ್ದರು.  ಧನಮ್ಮಾಳ್ ಅವರಿಗೆ ಅಬ್ದುಲ್ ಕರೀಂಖಾನ್ ಬಗ್ಗೆ ಅಪಾರ ಮೆಚ್ಚುಗೆ ಇತ್ತು.  ಕರೀಂಖಾನರಿಗೂ ಧನಮ್ಮಾಳ್ ಸಂಗೀತವೆಂದರೆ ತುಂಬಾ ಗೌರವವಿತ್ತು.  ಅವರ ಇಡೀ ಕುಟುಂಬಕ್ಕೆ ಕರೀಂಖಾನರು ಮತ್ತು ಅವರ ಶಿಷ್ಯೆ ರೋಷನಾರಾ ಬೇಗಂ ಜೊತೆ ತುಂಬಾ ಆತ್ಮೀಯವಾದ ಒಡನಾಟವಿತ್ತು.  
    ಧನಮ್ಮಾಳ್ ಅವರ ಜೀವಿತದ ಅವಧಿ ಯಲ್ಲಿಯೇ ಅವರ ಸಮಕಾಲೀನ ಪುರುಷ ಸಂಗೀತ ಗಾರರೆಲ್ಲರೂ ಅವರನ್ನು ತಮ್ಮ ಸರಿ ಸಮಾನರೆಂದು ಒಪ್ಪಿ ಕೊಂಡಿದ್ದರು. ಧನಮ್ಮಾಳ್ ಅವರನ್ನು ಬಿಟ್ಟರೆ ಅಂತಹ ಅಗಾಧ ಪ್ರತಿಭೆಯಿರುವ ಯಾವೊಬ್ಬ ಮಹಿಳೆಯೂ ಆ ಕಾಲದಲ್ಲಿ ಇರಲಿಲ್ಲ ಎನ್ನುವುದು ಶಮ್ಮಂಗುಡಿ ಶ್ರೀನಿವಾಸ ಅಯ್ಯರ್ ಅವರ ಅಭಿಪ್ರಾಯ ವಾಗಿತ್ತು.15 ಅವರ ಕಾಲದ ಘನ ವಿದ್ವಾಂಸರೆಲ್ಲರೂ ಅವರ ಸಂಗೀತದ ಮೋಡಿಗೆ ಮನಸೋತವರೇ ಆಗಿದ್ದರು.  
    1920 ರಿಂದ 1930ರ ದಶಕದ ಅವಧಿಯಲ್ಲಿ ಜಾರ್ಜ್ ಟೌನಿನ ಅವರ ಮನೆಯಲ್ಲಿ ನಡೆಯುತ್ತಿದ್ದ ಶುಕ್ರವಾರದ ಸಂಜೆಯ ವೀಣೆಯ ವಿನಿಕೆಗಾಗಿ ರಸಿಕರು ಕಾತರದಿಂದ ಕಾಯುತ್ತಿದ್ದರು. ಸಂಗೀತದ ರಸದೌತಣನವನ್ನು ಸವಿಯಲು ರಸಿಕರು ಸದ್ದಿಲ್ಲದೆ ಬೆಕ್ಕಿನ ಹೆಜೆಯಿಟ್ಟು ವಿನಿಕೆ ಪ್ರಾರಂಭವಾಗುವ ಮೊದಲೇ ಬಂದು ಕೂರುತ್ತಿದ್ದರು. ತಡವಾಗಿ ಬರುವವರು ಬಹಳ ಹೆದರಿಕೆಯಿಂದ ನಿಶ್ಶಬ್ಧವಾಗಿ ಬರುತ್ತಿದ್ದರು, ಇಲ್ಲದಿದ್ದರೆ ಯಾರದು ಆ ಜ್ಞಾನಶೂನ್ಯ?16 ಎನ್ನುವ ಮಾತಿನ ಚಾಟಿಯೇಟಿಗೆ ತುತ್ತಾಗುತ್ತಿದ್ದರು.  ಒಂದು ಸಲವಂತೂ ಅವರ ಅಂದಿನ ಕಾರ್ಯಕ್ರಮಕ್ಕೆ ಪೋಷಕರಾಗಿದ್ದ, ಘನ ಶ್ರೀಮಂತರಾಗಿದ್ದ ಚೆಟ್ಟಿಯಾರ್ ಅವರು ಸ್ವಲ್ಪ ತಡವಾಗಿ ಬಂದಾಗ ಧನಮ್ಮಾಳ್ ಅವರನ್ನೂ ಬಿಡದೆ ಆಕ್ಷೇಪಿಸಿದಾಗ ಅವರು ಅತ್ಯಂತ ವಿನಯದಿಂದ ಕ್ಷಮೆ ಕೋರುತ್ತಾರೆ.  ಶುಕ್ರವಾರ ಸಂಜೆಯ ಹೊತ್ತಿನಲ್ಲಿ ಅಮ್ಮ ವೀಣೆ ನುಡಿಸುತ್ತಿದ್ದಾರೆ ಎಂದು ಆ ಹೊತ್ತಿನಲ್ಲಿ ರಸ್ತೆಯಲ್ಲಿ ಮಾರಾಟ ಮಾಡುವವರೂ ಕೂಡ, ಆ ರಸ್ತೆಯಲ್ಲಿ ಮೌನವಾಗಿ ಸಾಗಿಹೋಗುತ್ತಿದ್ದರು, ಮತ್ತು ನೆರೆಹೊರೆಯವರು ಸದ್ದಿಲ್ಲದೆ ನಿಶ್ಶಬ್ಧವಾಗಿ ಇರುತ್ತಿದ್ದರು.  ಶುಕ್ರವಾರ 6ರಿಂದ 8ರವರೆಗೆ ಸಾಸುವೆ ಸಿಡಿದರೆ ಅಜ್ಜಿಯ ಸಂಗೀತಕ್ಕೆ ತೊಂದರೆ ಯಾಗುತ್ತದೆ ಅಂತ ನಮ್ಮ ಮನೆಯಲ್ಲಿ ಒಗ್ಗರಣೆಯನ್ನೂ ಹಾಕುತ್ತಿರಲಿಲ್ಲ, ಎಂದು ಅವರ ಮೊಮ್ಮಗಳು ಬಾಲಸರಸ್ವತಿ ನೆನಪಿಸಿಕೊಳ್ಳುತ್ತಾರೆ.17 ತಡವಾಗಿ ಬರುವುದು ಮತ್ತು ವಿನಿಕೆಯ ಮಧ್ಯೆ ಎದ್ದುಹೋಗುವುದು ಇವೆರೆಡನ್ನೂ ಧನಮ್ಮಾಳ್ ಸಹಿಸುತ್ತಿರಲಿಲ್ಲ.  ಸಧ್ಯ, ನೀವು ತೊಲಗಿ ಹೋಗುವವರು ತೊಲಗಿದರೆ ನಾನಾದರೂ ನೆಮ್ಮದಿಯಾಗಿ ನುಡಿಸಿಕೊಳ್ಳಬಹುದು ಎಂದು ವ್ಯಂಗ್ಯವಾಗಿ ಹೇಳುತ್ತಿದ್ದರು.  ಮೂವತ್ತರ ದಶಕದ ಹೊತ್ತಿಗೆ ಹೆಚ್ಚು ಕಡಿಮೆ ದೃಷ್ಟಿಯನ್ನು ಕಳೆದುಕೊಂಡಿದ್ದರೂ ಕೂಡ ನುಡಿಸುವಾಗ ಒಂದೇ ಒಂದು ತಪ್ಪನ್ನೂ ಮಾಡು ತ್ತಿರಲಿಲ್ಲ.  ಕಛೇರಿಯನ್ನು ಕರಾರುವಾಕ್ಕಾಗಿ ಸಂಜೆ ಆರು ಗಂಟೆಗೆ ಪ್ರಾರಂಭ ಮಾಡುತ್ತಿದ್ದ ಅವರು ಕೋಟೆಯ ಫಿರಂಗಿ ಎಂಟು ಗಂಟೆಗೆ ಸಿಡಿದಾಗ ವೀಣೆಯನ್ನು ಕೆಳಗಿಡುತ್ತಿದ್ದರು.18  ಯಾರಾದರೂ ವಿನಿಕೆಯಲ್ಲಿ ಭಲೇ, ಭೇಷ್ ಎಂದು ಉದ್ಗಾರವೆತ್ತಿದರೆ, ಧನಮ್ಮಾಳ್ ತುಂಬಾ ಸಿಟ್ಟಾಗಿ ಬಿಡುತ್ತಿದ್ದರು. ತಲೆಮಾರುಗಳಿಂದ ಪುರುಷರು ದೇವದಾಸಿ ಯರನ್ನು ನಡೆಸಿಕೊಂಡ ಪರಿಯ ಬಗ್ಗೆಯೇ ಇದ್ದ ಸಿಟ್ಟಿನ ಅಭಿವ್ಯಕ್ತಿ ಅದಾಗಿತ್ತಾ?  
ಧನಮ್ಮಾಳ್ ಅವರಿಗೆ ವಯಸ್ಸಾಗುತ್ತಿದ್ದ ಕಾಲಕ್ಕೆ ಗ್ರಾಮಾಫೋನ್ ಸಂಸ್ಕೃತಿ ಕಾಲಿಡತೊಡಗಿತು.  ಆದರೆ ಅವರಿಗೆ ಗ್ರಾಮಾಫೋನಿಗೆ ನುಡಿಸುವುದು ಬಿಲ್ಕುಲ್ ಇಷ್ಟವಿರಲಿಲ್ಲ.  ಆದರೆ ಅವರ ಆತ್ಮೀಯ ಗೆಳೆಯರಾಗಿದ್ದ  ಟಿ.ಟಿ. ಕೃಷ್ಣಮಾಚಾರಿ ಮುಂತಾದವರ ಬಲವಂತಕ್ಕೆ ಕಟ್ಟುಬಿದ್ದು ರೆಕಾಡರ್ಿಂಗಿಗೆ ನುಡಿಸಲು ಒಪ್ಪಿಕೊಂಡರು.  ಆದರೆ ಅದರಲ್ಲಿ ಧನಮ್ಮಾಳ ಸಂಗೀತದ ಸೊಗಡಿನ ಒಂದು ಹನಿಯೂ ದೊರಕುವುದಿಲ್ಲ.19
    ಧನಮ್ಮಾಳ್ ಸಣ್ಣಗೆ, ಕಪ್ಪಗಿದ್ದರು ಮತ್ತು ಪುಟ್ಟ ಆಕಾರದ ಹೆಂಗಸು.  ಹೆಚ್ಚಿನ ಒಡವೆಗಳನ್ನು ಧರಿಸುತ್ತಿರಲಿಲ್ಲ.  ಯಾವಾಗಲೂ ಹತ್ತಿಯ ಸೀರೆಗಳನ್ನೇ ಉಡುತ್ತಿದ್ದರು.  ಆದರೆ ಅವರ ರಸಪ್ರಜ್ಞೆ ಮಾತ್ರ ಅತ್ಯುತ್ಕೃಷ್ಟ ಮಟ್ಟದ್ದು.  ತಾವು ಹಾಕುತ್ತಿದ್ದ ತಾಂಬೂಲಕ್ಕೆ ಲಕ್ನೋದ ಸುಪ್ರಸಿದ್ಧ ಜರದಾ ಅವರಿಗೆ ಆಗಬೇಕಿತ್ತು.  ಕಛೇರಿಯ ಕೋಣೆಗೆ ಅತ್ಯಂತ ಸುವಾಸನಾಯುಕ್ತವಾದ ಶುಭ್ರವಾದ ತಾಜಾ ಮಲ್ಲಿಗೆಯೇ ಆಗಬೇಕಿತ್ತು.  ಬೆರಳಿಗೆ ಹಚ್ಚಿಕೊಳ್ಳಲು ಅತ್ಯಂತ ಒಳ್ಳೆಯ ಸ್ವಾಗ್ ಬೇಕಿತ್ತು.  ಇಂಥ ದಿಲ್ದಾರ್ ಐಷಾರಾಮದಿಂದ ತಮ್ಮ ಆಸ್ತಿಯನ್ನೆಲ್ಲಾ ಅವರು ಕಳೆದುಕೊಂಡು ಕೊನೆಗಾಲದ ಹೊತ್ತಿಗೆ ಹೆಚ್ಚುಕಡಿಮೆ ಬಡತನದ ಅಂಚಿನಲ್ಲಿದ್ದರು.  ಆದರೆ ಎಂತಹ ಕಷ್ಟದಲ್ಲೂ ಅವರು ಸಂಗೀತವನ್ನು ವಾಣಿಜ್ಯೀಕರಿಸಿ, ಮಾರಾಟದ ಸರಕನ್ನಾಗಿ ಮಾಡಿಕೊಂಡಿರಲಿಲ್ಲ.  
ಸಂಗೀತದಷ್ಟೇ ತಮ್ಮ ಮಾತಿಗೂ ಕೂಡ ಧನಮ್ಮಾಳ್ ಹೆಸರುವಾಸಿಯಾಗಿದ್ದರು.  ಧನಮ್ಮಾಳ್ ಸ್ವಭಾವತಃ ತುಂಬಾ ಮಿತಭಾಷಿ ಮತ್ತು ಅವರ ಮಾತು ತುಂಬಾ ನಿಷ್ಟುರವಾಗಿ ಹಾಗೂ ಕಟುವಾಗಿ ಇರುತ್ತಿತ್ತು.  ಅವರ ಮಾತಿನ ಮೊನಚಿಗೆ ಮತ್ತು ವ್ಯಂಗ್ಯಕ್ಕೆ ಎಲ್ಲರೂ ಹೆದರುತ್ತಿದ್ದರು – ಮನೆಯವರೂ ಸೇರಿದಂತೆ.  ಧನಮ್ಮಾಳಿಗೆ ನಾಲ್ಕುಜನ ಹೆಣ್ಣುಮಕ್ಕಳಿದ್ದರು  ರಾಜಲಕ್ಷ್ಮಿ, ಲಕ್ಷ್ಮೀರತ್ನಂ, ಜಯಮ್ಮಾಳ್ ಮತ್ತು ಕಾಮಾಕ್ಷಿ.  ಸುಪ್ರಸಿದ್ಧ ಹಾಡುಗಾರ್ತಿಯರು ಬೃಂದ ಮತ್ತು ಮುಕ್ತ, ಅಪ್ರತಿಮ ನೃತ್ಯಗಾರ್ತಿ ಬಾಲಸರಸ್ವತಿ, ಕೊಳಲುವಾದಕ ಟಿ ವಿಶ್ವನಾಥನ್, ಲೇಖಕ ಟಿ. ಶಂಕರನ್, ಮೃದಂಗಂವಾದಕ ಟಿ. ರಂಗನಾಥನ್, ಇವರೆಲ್ಲರೂ ಧನಮ್ಮಾಳ್ ಅವರ ಮೊಮ್ಮಕ್ಕಳು. ಧನಮ್ಮಾಳ್ ಜೊತೆ ಮಾತನಾಡಲು ಮಕ್ಕಳಿಗೆ ಹೋಗಲಿ ಮೊಮ್ಮಕ್ಕಳಿಗೂ ತುಂಬಾ ಹೆದರಿಕೆ, ಏಕೆಂದರೆ ಅವರ ಮಾತಿನ ಹೊಡೆತವನ್ನು ತಡೆದು ಕೊಳ್ಳುವುದು ಕಷ್ಟವಾಗಿತ್ತು.  
ಬಾಲ ಸರಸ್ವತಿ ನೃತ್ಯವನ್ನೇ ಕಲಿಯುತ್ತೇನೆಂದು ಹಟಮಾಡಿದಾಗ ಅವರಮ್ಮ ಜಯಮ್ಮಾಳ್ ಹೆದರಿ, ಹೆದರಿ ಈ ವಿಚಾರವನ್ನು ಧನಮ್ಮಾಳ ಗಮನಕ್ಕೆ ತಂದು ಅನುಮತಿಯನ್ನು ಕೇಳಿದಾಗ, ಆ ವೇಳೆಗಾಗಲೇ ದೃಷ್ಟಿ ಹೆಚ್ಚುಕಡಿಮೆ ಮಂದವಾಗಿದ್ದ ಧನಮ್ಮಾಳ್ ನಿನ್ನ ಮಗಳು ಹೇಗಿದ್ದಾಳೆ?  ಹಲ್ಲು ಚೆನ್ನಾಗಿದ್ದು ಮೆಳ್ಳಗಣ್ಣು ಇಲ್ಲದಿದ್ದರೆ ಸಾಕು ನೃತ್ಯ ಕಲಿಯಬಹುದು ಎಂದಾಗ ಮನೆಯಲ್ಲಿ ಎಲ್ಲರೂ ಸುಸ್ತು. ಮದ್ರಾಸ್ ಮ್ಯೂಸಿಕ್ ಅಕಾಡೆಮಿ ಪ್ರಾರಂಭವಾದ ಹೊಸತರಲ್ಲಿ ಅಲ್ಲಿ ಸಂಗೀತವನ್ನು ಕುರಿತು ಚಚರ್ೆ ಮತ್ತು ಸೋದಾಹರಣ ಭಾಷಣಗಳನ್ನು ಏರ್ಪಡಿಸುತ್ತಿದ್ದರು. ಆಗ ಒಮ್ಮೆ ಧನಮ್ಮಾಳ್ ನಿಮಗೆ ಗೊತ್ತಾ ಮ್ಯೂಸಿಕ್ ಅಕಾಡೆಮಿಯಲ್ಲಿ ಸಂಗೀತವನ್ನು ಮಾತನಾಡುತ್ತಾರಂತೆ. ಎಂದಿದ್ದರು. ಅರಿಯಾಕುಡಿ ಯವರಿಗೆ ಸಂಗೀತ ರತ್ನಾಕರ ಬಿರುದನ್ನು ನೀಡಿದ ಸುದ್ದಿ ಕಿವಿಗೆ ಬಿದ್ದಾಗ ಓ ಹೌದಾ, ನಾನು ಅದೊಂದು ಗ್ರಂಥದ ಹೆಸರು ಅಂತ ತಿಳಿದುಕೊಂಡಿದ್ದೆ ಎಂದು ಬಹಳ ಮುಗ್ಧವಾಗಿ ಆದರೆ ವ್ಯಂಗ್ಯಭರಿತವಾಗಿ ಹೇಳಿದರಂತೆ.  ಮುಂದೆ ಬೃಂದಾ, ಬಾಲಸರಸ್ವತಿ ಮತ್ತು ವಿಶ್ವನಾಥ್ ಅವರಿಗೆಲ್ಲಾ ಪ್ರತಿಷ್ಠಿತ ಸಂಗೀತ ಕಲಾನಿಧಿ ಪ್ರಶಸ್ತಿ ಬಂದಾಗ ಧನಮ್ಮಾಳ್ ಬದುಕಿದ್ದಿದ್ದರೆ ಏನು ಹೇಳುತ್ತಿದ್ದರೋ ಎಂದು ಅವರೆಲ್ಲರಿಗೂ ಕುತೂಹಲವಿತ್ತಂತೆ.  
1938ರಲ್ಲಿ ಧನಮ್ಮಾಳ್ ತಮ್ಮ 72ನೇ ವಯಸ್ಸಿ ನಲ್ಲಿ ಬಾಲಸರಸ್ವತಿಯ ಮನೆಯಲ್ಲಿ ಮರಣ ಹೊಂದಿದರು. ಕೊನೆಯುಸಿರೆಳೆಯುವ ಹೊತ್ತಿನಲ್ಲಿ ಗೋಡೆಯ ಕಡೆ ತಿರುಗಿಕೊಂಡು ಮುವ್ವಗೋಪಾಲ ಎಂದು ಹೇಳಿ ತಮ್ಮ ಸಂಗೀತದ ಬದುಕಿನ ಕಾರುಬಾರು (ತ್ಯಾಗರಾಜರ ಮುಖಾರಿ ರಾಗದ ಕೃತಿ, ಅದನ್ನು ಧನಮ್ಮಾ ಅತ್ಯದ್ಭುತವಾಗಿ ನುಡಿಸುತ್ತಿದ್ದರು) ಮುಗಿಸಿ ದರು.  ಮುವ್ವ ಗೋಪಾಲ ಎನ್ನುವುದು ಪದ ಚಕ್ರವರ್ತಿ ಕ್ಷೇತ್ರಯ್ಯನವರ ಅಂಕಿತವಾಗಿತ್ತು

Recent Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.