ಧ್ವನಿಯೆತ್ತಬೇಕಾದ ಸಮಯ ಬಂದಿದೆ – ಯೋಗೆಂದ್ರ ಯಾದವ್

 In SUTTA MUTTA

ದೇಶ ಕಪ್ಪು ಹಣದ ವಿರುದ್ಧ ಸಂದೇಹಾಸ್ಪದ ಸಮರದಲ್ಲಿ ನಿರತವಾಗಿದೆ. ಅದೇ ಸಂದರ್ಭದಲ್ಲಿ ನಾವು ಭ್ರಷ್ಟಾಚಾರದ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಾಗದ ಪರಿಸ್ಥಿತಿಗೆ ಸಿಲುಕುವ ಅಪಾಯದಲ್ಲಿದ್ದೇವೆ. ನಿಜ ಹೇಳಬೇಕೆಂದರೆ ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟಕ್ಕೇ ಹಿನ್ನೆಡೆಯಾಗುತ್ತಿದೆ. ಇತ್ತ ಎಲ್ಲರೂ ನೋಟು ಅಮಾನ್ಯೀಕರಣ ಕುರಿತ ಚರ್ಚೆಯಲ್ಲಿ ಬಿಸಿಯಾಗಿದ್ದಾರೆ. ಅತ್ತ ಪಾರ್ಲಿಮೆಂಟ್ ೧೯೮೮ರ ಭ್ರಷ್ಟಾಚಾರ ತಡೆ ಕಾಯ್ದೆಯಲ್ಲಿ ತಿದ್ದುಪಡಿಗಳನ್ನು ತರಲು ಸಜ್ಜಾಗಿದೆ. ತಿದ್ದುಪಡಿ ಅಂಗೀಕಾರವಾದಲ್ಲಿ ಅದು ಕೇವಲ ಭ್ರಷ್ಟಾಚಾರ ರಕ್ಷಣೆಯ ಕಾಯ್ದೆಯಷ್ಟೇ ಆಗಬಲ್ಲದು. ದುರಂತವೆಂದರೆ ಎಲ್ಲ ಪಕ್ಷಗಳೂ ಅದರ ಬೆಂಬಲಕ್ಕೆ ನಿಂತಿವೆ. ರಾಜಕೀಯ ಸಂಸ್ಥೆಗಳು ತಮ್ಮ ರಕ್ಷಣೆಗೆ ತಾವೇ ನಿಂತಾಗಲೆಲ್ಲಾ ಹೀಗೇ ಆಗುವುದು.
ಪಾರ್ಲಿಮೆಂಟಿನಲ್ಲಿ ಅನುಮೋದನೆಗಾಗಿ ಕಾದಿರುವ ೨೦೧೩ರ ಭ್ರಷ್ಟಾಚಾರ ತಡೆ (ತಿದ್ದುಪಡಿ) ಕಾಯ್ದೆಯಲ್ಲಿ ಕೇವಲ ಒಂದಿಷ್ಟು ತಿದ್ದುಪಡಿಗಳನ್ನು ಮಾಡುತ್ತಿದ್ದಾರೇನೋ ಎಂದು ಮೇಲ್ನೋಟಕ್ಕೆ ಅನ್ನಿಸುತ್ತದೆ. ಈ ಕಾಯ್ದೆಯನ್ನು ಮೊದಲಿಗೆ ೨೦೧೩ರಲ್ಲಿ ರಾಜ್ಯಸಭೆಯಲ್ಲಿ ಮಂಡಿಸಲಾಯಿತು. ಆಗ ಭ್ರಷ್ಟಾಚಾರ ವಿರೋಧಿ ಹೋರಾಟಗಳು ವ್ಯಾಪಕವಾಗಿ ನಡೆಯುತ್ತಿದ್ದವು. ಸಂಯುಕ್ತ ಪ್ರಗತಿಪರ ಒಕ್ಕೂಟ ಅಧಿಕಾರದಲ್ಲಿದ್ದಾಗ ಇದನ್ನು ಮಂಡಿಸಲಾಗಿತ್ತು. ಚಾಲ್ತಿಯಲ್ಲಿದ್ದ ಭ್ರಷ್ಟಾಚಾರ ವಿರೋಧಿ ಕಾಯ್ದೆಯನ್ನು ಇನ್ನಷ್ಟು ಬಿಗಿಗೊಳಿಸುವ ಉದ್ದೇಶದಿಂದ ಇದನ್ನು ಮುಂದಿಡಲಾಗಿತ್ತು. ಆದರೆ ತಿದ್ದುಪಡಿಯಾಗಲಿದ್ದ ಕೆಲವು ನಿಯಮಗಳು ಆತಂಕ ಮೂಡಿಸಿದ್ದವು. ೨೦೧೪ರಲ್ಲಿ ಅದಕ್ಕೆ ಇನ್ನೂ ಹೆಚ್ಚಿನ ಹಾಗೂ ಅಪಾಯಕಾರಿ ತಿದ್ದುಪಡಿಗಳನ್ನು ಸೂಚಿಸಲಾಯಿತು. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಸರ್ಕಾರ ಈಗ ಮಂಡಿಸುತ್ತಿರುವ ರೂಪದಲ್ಲಿ ಕಾಯ್ದೆಗೆ ನಿಜವಾಗಿಯೂ ಮಾರಣಾಂತಿಕ ಹೊಡೆತ ಬಿದ್ದಿದೆ. ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳೂ ಇರುವ ವರಿಷ್ಟ ಸಮಿತಿ ಇದಕ್ಕೆ ಈಗಾಗಲೇ ಸಮ್ಮತಿ ನೀಡಿದೆ. ಕ್ಯಾಬಿನೆಟ್ ಕೂಡ ಇದನ್ನು ಅಂಗೀಕರಿಸಿದೆ. ಈ ಪ್ರತಿಗಾಮಿ ಕಾಯ್ದೆಯು ಈ ವಿಂಟರ್ ಅಧಿವೇಶನದಲ್ಲಿ ಚರ್ಚೆಗೆ ಬರಬೇಕಿತ್ತು. ಆದರೆ ಅಧಿವೇಶನವೇ ಹೆಚ್ಚುಕಡಿಮೆ ಹಾಳಾಗಿದೆ.
ಹತ್ತು ಹಲವು ಸಮಸ್ಯೆಗಳ ಅಪಾಯಕಾರಿ ತಿದ್ದುಪಡಿ
ಈ ವರ್ಷ ಆಗಸ್ಟಿನಲ್ಲಿ ಮಸೂದೆಯ ಈ ಪರಿಷ್ಕೃತ ರೂಪ ಅಂಗೀಕೃತವಾಗಿದೆ. ಈ ತಿದ್ದುಪಡಿಯಿಂದ ಭ್ರಷ್ಟಾಚಾರ ವಿರೋಧಿ ಕಾಯ್ದೆ ದುರ್ಬಲಗೊಂಡಿದೆ. ಅಷ್ಟೇ ಅಲ್ಲ, ಅದರ ಮೂಲ ಉದ್ದೇಶಕ್ಕೆ ಹಲವು ರೀತಿಯಲ್ಲಿ ಅದು ಮಾರಕವಾಗಿದೆ. ಈ ಕಾಯ್ದೆ ಭ್ರಷ್ಟಾಚಾರದ ವ್ಯಾಖ್ಯೆಯನ್ನೇ ಸಂಕುಚಿತಗೊಳಿಸುತ್ತಿದೆ. ಭ್ರಷ್ಟಾಚಾರದ ವಿರುದ್ಧ ದೂರುಕೊಟ್ಟವನಿಗೇ ಅದನ್ನು ರುಜುವಾತು ಪಡಿಸುವ ಹೊಣೆಗಾರಿಕೆ ಹೆಚ್ಚಾಗಲಿದೆ. ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವವರ ಪರಿಸ್ಥಿತಿ ಕಠಿಣವಾಗುತ್ತದೆ. ಭ್ರಷ್ಟಾಚಾರದ ಆರೋಪಕ್ಕೆ ಒಳಗಾಗಿರುವ ಅಧಿಕಾರಿಗಳಿಗೆ ಹೆಚ್ಚಿನ ರಕ್ಷಣೆ ಸಿಗುತ್ತದೆ. ಮಸೂದೆಯಲ್ಲಿ ಸೇರಿಕೊಂಡಿರುವ ಒಂದು ಕ್ರೂರ ಕುಟಿಲ ಕಲಂನಿಂದಾಗಿ (ಛಿಟಚಿuse) ಬಾಬು-ನೇತ ಸಂಬಂಧಕ್ಕೆ ರಕ್ಷಣೆ ಸಿಕ್ಕಿದೆ. ಅವರು ಎಂದೂ ಯಾವುದೇ ಗಂಭೀರವಾದ ಭ್ರಷ್ಟಾಚಾರ ವಿರೋಧಿ ತನಿಖೆಯನ್ನು ಎದುರಿಸದೇ ಉಳಿಯಬಹುದು. ಈ ನಿಯಮ ಕಾಯ್ದೆಯಾಗಿಬಿಟ್ಟರೆ, ಈಗಾಗಲೇ ದುರ್ಬಲವಾಗಿರುವ ಭ್ರಷ್ಟಾಚಾರ ವಿರೋಧಿ ವ್ಯವಸ್ಥೆ ನಿರ್ನಾಮವಾಗುತ್ತದೆ.
ಮಸೂದೆಯಲ್ಲಿ ತರುತ್ತಿರುವ ಪ್ರತಿಯೊಂದು ಪ್ರಮುಖ ತಿದ್ದುಪಡಿಗಳೂ ಭ್ರಷ್ಟಾಚಾರವನ್ನು ತಡೆಯುವುದಕ್ಕಿಂತ ಭ್ರಷ್ಟರ ರಕ್ಷಣೆಗೇ ನೆರವಾಗುತ್ತದೆ. ಇದು ಹೇಗೆಂಬುದನ್ನು ಪರಿಶೀಲಿಸೋಣ.
ಮೊದಲನೆಯದಾಗಿ ಸರ್ಕಾರಿ ನೌಕರರ ಪ್ರಬಲವಾದ ಲಾಬಿಯ ಒತ್ತಾಯಕ್ಕೆ ಮಣಿದು ಈ ಪ್ರಸ್ತಾಪಿತ ತಿದ್ದುಪಡಿಯು ಭ್ರಷ್ಟಾಚಾರದ ವ್ಯಾಖ್ಯೆಯನ್ನೇ ಮಿತಿಗೊಳಿಸುತ್ತಿದೆ. ಹಾಲಿ ಇರುವ ಭ್ರಷ್ಟಾಚಾರ ತಡೆ ಕಾಯ್ದೆಯ ೧೩(೧) ಭಾಗದಲ್ಲಿ ಭ್ರಷ್ಟಾಚಾರದ ಹಲವು ಪರೋಕ್ಷ ರೂಪಗಳೂ ಅದರ ವ್ಯಾಖ್ಯೆಯಲ್ಲಿ ಸೇರಿದೆ. ಅವುಗಳಲ್ಲಿ ಕಾನೂನುಬಾಹಿರವಾಗಿ ಪಡೆಯುವ ಯಾವುದೇ ಮೌಲಿಕ ವಸ್ತು ಅಥವಾ ಆರ್ಥಿಕ ಅನುಕೂಲ ಅಥವಾ ಸರ್ಕಾರಿ ನೌಕರ ತನ್ನ ಅಧಿಕಾರದ ದುರುಪಯೋಗದಿಂದ ಪಡೆವ ಪ್ರತಿಫಲವೂ ಸೇರುತ್ತದೆ. ಆದರೆ ತಿದ್ದುಪಡಿಯಾಗಲಿರುವ ಮಸೂದೆಯಲ್ಲಿ ಇದನ್ನು ಕೈಬಿಟ್ಟಿದ್ದಾರೆ. ಇದಕ್ಕೆ ಬದಲಾಗಿ ಸರ್ಕಾರಿ ಸೇವಕನ ಅಪರಾಧಿ ದುರ್ನಡತೆ, ತನ್ನ ನಿಯಂತ್ರಣದಲ್ಲಿರುವ ಸ್ವತ್ತನ್ನು ಮೋಸದಿಂದ ದುರುಪಯೋಗಿಸುವುದು, ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿಯನ್ನು ಹೊಂದುವುದು ಮತ್ತು ಉದ್ದೇಶಪೂರ್ವಕವಾಗಿ, ಕಾನೂನುಬಾಹಿರವಾಗಿ ಅದನ್ನು ಹೆಚ್ಚಿಸಿಕೊಳ್ಳುವುದಕ್ಕೆ ಸೀಮಿತಗೊಳಿಸಲಾಗಿದೆ. ಈ ಹೊಸ ವ್ಯಾಖ್ಯೆಯ ಪ್ರಕಾರ ಆರ್ಥಿಕವಲ್ಲದ, ಪರೋಕ್ಷವಾದ ಅಥವಾ ಉದ್ದೇಶಪೂರ್ವಕ ವಂಚನೆಯೆಂದು ಯಾವುದನ್ನು ಸಾಬೀತುಮಾಡಲಾಗುವುದಿಲ್ಲವೋ ಅದನ್ನು ಭ್ರಷ್ಟಾಚಾರ ಎಂದು ಶಿಕ್ಷಿಸಲಾಗುವುದಿಲ್ಲ. ಈ ಉದ್ದೇಶಿತ ಮಸೂದೆಯನ್ನು ಜಾಗರೂಕವಾಗಿ ಪರಿಶೀಲಿಸಿದ ಕಾನೂನು ಸಮಿತಿಯು ಈ ಸಂಕುಚಿತ ವ್ಯಾಖ್ಯೆಯನ್ನು ವಿರೋಧಿಸಿತು. ಅದಕ್ಕೆ ಪರ್ಯಾಯವಾಗಿ ಹೆಚ್ಚು ವ್ಯಾಪಕವಾದ ವ್ಯಾಖ್ಯೆಯನ್ನು ಅದು ಸೂಚಿಸಿ, ಒಬ್ಬ ಸರ್ಕಾರಿ ನೌಕರನ ಅನುಚಿತ ಕೆಲಸ ಅಥವಾ ಚಟುವಟಿಕೆಯ ಫಲವಾಗಿ ಪಡೆಯುವ ಯಾವುದೇ ಯುಕ್ತವಲ್ಲದ ಅನುಕೂಲವೂ ಶಿಕ್ಷಾರ್ಹವಾಗಬೇಕು ಎಂದು ಶಿಫಾರಸ್ಸುಮಾಡಿತು. ಆದರೂ ಸರ್ಕಾರ ಹಾಗೂ ಪಾರ್ಲಿಮೆಂಟರಿ ಸಮಿತಿಯು ಈ ಸಲಹೆಯನ್ನು ಒಪ್ಪದೆ ಬಾಬು ಲಾಬಿಗೆ ಮಣೆ ಹಾಕಿದೆ.
ಇದು ತುಂಬಾ ಮುಖ್ಯವಾದ ಅಂಶ. ಯಾಕೆಂದರೆ ಇಡೀ ಭ್ರಷ್ಟಾಚಾರ ತಡೆ ಕಾಯ್ದೆಗಳಲ್ಲಿ (Pಅಂ) ಉನ್ನತ ಸ್ಥಾನದಲ್ಲಿನ ಭ್ರಷ್ಟಾಚಾರ ಕುರಿತ ಉಲ್ಲೇಖ ಬರುವುದು ಇದೊಂದೇ ಕಾಯ್ದೆಯಲ್ಲಿ (seಛಿಣioಟಿ ೧೩(೧) (ಜ)). ಅಂತಹ ಉನ್ನತ ಮಟ್ಟದಲ್ಲಿ ಮಾಮೂಲಿನ ಟೇಬಲ್ ಕೆಳಗಿನ ವ್ಯವಹಾರ ಸಾಮಾನ್ಯವಾಗಿ ನಡೆಯುವುದಿಲ್ಲ. ಭ್ರಷ್ಟ ಸರ್ಕಾರಿ ನೌಕರ ಸಾಮಾನ್ಯವಾಗಿ ಅಕ್ರಮ ಪ್ರತಿಫಲವನ್ನು ತೀರಾ ಗೋಪ್ಯವಾದ ರೀತಿಯಲ್ಲಿ ಪಡೆಯುತ್ತಾನೆ. ಅದು ವಿದೇಶಿ ವ್ಯವಹಾರ ಅಥವಾ ಒಳ್ಳೆಯ ಹುದ್ದೆ, ನಿವೃತ್ತಿಯ ನಂತರದ ಅನುಕೂಲಗಳು ಮುಂತಾದ ನಗದೇತರ ರೂಪದಲ್ಲಿರುತ್ತವೆ. ಬೋಫಾರ‍್ಸ್‌ನಿಂದ ಮೊದಲ್ಗೊಂಡು ೨ಜಿ ತನಕದ ಎಲ್ಲಾ ಪ್ರಮುಖ ಹಗರಣಗಳು, ಅದು ಕಾಮನ್‌ವೆಲ್ತ್ ಗೇಮ್ಸ್ ಹಗರಣವಿರಬಹುದು ಅಥವಾ ಕಲ್ಲಿದ್ದಲು ಹಗರಣವಿರಬಹುದು, ಅವೆಲ್ಲವೂ ಈ ಸೆಕ್ಷನ್ನಿನ ಪ್ರಕಾರ ಕ್ರಿಮಿನಲ್ ಅಪರಾಧವಾಗುತ್ತವೆ. ಆ ಕಾರಣಕ್ಕಾಗಿಯೇ ಅಧಿಕಾರಿಗಳು ಅ ಭಾಗವನ್ನು ಕೈಬಿಡಲು ಒತ್ತಾಯಿಸಿದ್ದು. ಅದಕ್ಕೆ ಅವರು ಕೊಟ್ಟ ಕಾರಣ ಅದು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಡ್ಡಿಯಾಗುತ್ತದೆ ಎನ್ನುವುದು. ಇಂತಹ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ಒಂದಿಷ್ಟು ಸ್ವಾತಂತ್ರ್ಯವನ್ನು ತೆಗೆದುಕೊಳ್ಳಬೇಕಾಗುತ್ತದೆ ಮತ್ತು ಅದರಿಂದ ನಿಜವಾಗಿ ತಪ್ಪುಗಳಾಗುವ ಸಾಧ್ಯತೆಗಳೂ ಇವೆ. ಆದರೆ ಈ ವಾದ ಸರಿಯಲ್ಲ. ನಿಷ್ಠಾವಂತ ಅಧಿಕಾರಿಗಳಿಗೆ ಈಗಿರುವ ಕಾನೂನಿನಲ್ಲೇ ಸಾಕಷ್ಟು ರಕ್ಷಣೆ ಇದೆ ಎಂದು ನಿವೃತ್ತ ಕ್ಯಾಬಿನೆಟ್ ಸೆಕ್ರೆಟರಿಯಾಗಿದ್ದ ಟಿ ಎಸ್ ಆರ್ ಸುಬ್ರಮಣಿಯನ್ ಪದೇ ಪದೇ ಹೇಳಿದ್ದಾರೆ. ಅವರು ಪ್ರಾಮಾಣಿಕತೆಗೆ ಹೆಸರುವಾಸಿಯಾಗಿದ್ದ ಅಧಿಕಾರಿ. ಆರ್ಥಿಕ ಅಥವಾ ಇನ್ನಿತರ ಲಾಭಕ್ಕಾಗಿ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಸ್ಪಷ್ಟವಾಗದ ಹೊರತು ಯಾವುದೇ ನ್ಯಾಯಯುತ ವ್ಯತ್ಯಾಸಗಳಿಗೆ (boಟಿಚಿ ಜಿiಜe ಜiಜಿಜಿeಡಿeಟಿಛಿe) ಅಥವಾ ತಪ್ಪಿಗೆ ಶಿಕ್ಷೆಯನ್ನು ವಿಧಿಸುವುದಿಲ್ಲ.
ಸಾಕ್ಷ್ಯದ ಮಿತಿಯನ್ನು ಏರಿಸಿರುವುದು
ಎರಡನೆಯದಾಗಿ ಯಾರಾದರೂ ಮಿತಿಗಿಂತ ಹೆಚ್ಚಾಗಿ ಆಸ್ತಿಯನ್ನು ಸೇರಿಸಿಕೊಂಡಿದ್ದಾರೆ ಎಂದು ವಾದಿಸುವುದು ಈ ತಿದ್ದುಪಡಿಯಿಂದ ಕಷ್ಟವಾಗಿದೆ. ಯಾಕೆಂದರೆ ಈಗ ನೀವು ಅದಕ್ಕೆ ಹೆಚ್ಚಿನ ಸಾಕ್ಷ್ಯವನ್ನು ಒದಗಿಸಬೇಕಾಗುತ್ತದೆ. ಈಗಿರುವ ಮಸೂದೆಯ ಪ್ರಕಾರ ತನ್ನ ತಿಳಿದಿರುವ ಮೂಲದ ವರಮಾನಕ್ಕಿಂತ ಹೆಚ್ವು ಪ್ರಮಾಣದ ಹಣವನ್ನು ಅಥವಾ ಆಸ್ತಿಯನ್ನು ಹೊಂದುವುದೇ ಭ್ರಷ್ಟಾಚಾರವನ್ನು ಸಾಬೀತುಗೊಳಿಸಲು ಸಾಕಾಗಿತ್ತು. ಆದರೆ ಮುಂದೆ ತನ್ನನ್ನು ಶ್ರೀಮಂತಗೊಳಿಸಿಕೊಳ್ಳುವ ದೃಷ್ಟಿಯಿಂದ ಪ್ರಮಾಣಮೀರಿದ ಆಸ್ತಿಯನ್ನು ಅಕ್ರಮವಾಗಿ, ಉದ್ದೇಶಪೂರ್ವಕವಾಗಿ ಸಂಪಾದಿಸಿದ್ದಾನೆ ಎನ್ನುವುದನ್ನು ಈಗ ಫಿರ್ಯಾದಿಯೇ ಸಾಬೀತು ಮಾಡಬೇಕಾಗುತ್ತದೆ. ರಾಜ್ಯಸಭೆಯ ವರಿಷ್ಟ ಸಮಿತಿಯು ಉದ್ದೇಶವನ್ನು ಸಾಬೀತುಗೊಳಿಸುವುದು ಕಡ್ಡಾಯವಾಗಬಾರದು ಎಂಬುದನ್ನು ಒಪ್ಪಿಕೊಳ್ಳುತ್ತz. ಆದರೆ ಈ ಬಗ್ಗೆ ಸರ್ಕಾರದ ಅಂತಿಮ ನಿಲುವು ಏನು ಎಂಬುದು ನಮಗೆ ಸ್ಪಷ್ಟವಾಗಿಲ್ಲ. ಜೊತೆಗೆ ಈಗ ಇರುವ ಮಸೂದೆಯಲ್ಲಿ ಸರ್ಕಾರಿ ನೌಕರನಿಗೆ ಆ ಸಮಯಕ್ಕೆ ಅನ್ವಯವಾಗುವ ಯಾವುದೇ ಕಾನೂನಿನ, ಕಟ್ಟಳೆಯ ಅಥವಾ ಆದೇಶದ ನಿಯಮಗಳಿಗೆ ಅನುಗುಣವಾಗಿ, ಗೊತ್ತಿರುವ ಮೂಲದ ವರಮಾನವನ್ನು ನಿರ್ಧರಿಸಲಾಗುತ್ತಿತ್ತು. ಅದಕ್ಕೆ ಮೊದಲು ಇದ್ದಂತಹ ಕಾಯೆಯಲ್ಲಿನ ನ್ಯೂನತೆಯನ್ನು ತೆಗೆಯುವ ಉದ್ದೇಶದಿಂದ ೧೯೮೮ರಲ್ಲಿ ಈ ಮಾರ್ಪಾಡು ತರಲಾಗಿತ್ತು. ಯಾಕೆಂದರೆ ಅದಕ್ಕೆ ಮುಂಚೆ ಹೆಚ್ಚಿನ ಆರೋಪಿಗಳು ಆದಾಯದ ಹೊಸ ಮೂಲವನ್ನು ವಿಚಾರಣೆಯ ಸಮಯದಲ್ಲಿ ತೋರಿಸುತ್ತಿದ್ದರು. ಹಾಗಾಗಿಯೇ ಹಲವರು ಪ್ರಮಾಣಕ್ಕೆ ಮೀರಿದ ಆಸ್ತಿಯನ್ನು ಹೊಂದಿದ್ದ ಪ್ರಕರಣಗಳಲ್ಲಿ ಖುಲಾಸೆಯಾಗುತ್ತಿದ್ದರು. ಆಶ್ಚರ್ಯ ಅಂದರೆ ಯಾವುದೇ ಪಾಲುದಾರರಿಂದ ಯವುದೇ ಶಿಫಾರಸ್ಸು ಬಂದಿಲ್ಲದಿದ್ದರೂ ೧೯೮೮ರಲ್ಲಿ ಸೇರಿಸಿದ್ದ ಈ ನಿಯಮವನ್ನು ತೆಗೆದುಹಾಕುವ ಪ್ರಸ್ತಾಪವನ್ನು ಸರ್ಕಾರ ಮುಂದಿಟ್ಟಿದೆ. ಇದು ಅಂಗೀಕೃತವಾದರೆ ದೊಡ್ಡ ಅಪರಾಧಿಗಳು ಪಾರಾಗುವುದಕ್ಕೆ ಬಹುಮುಖ್ಯವಾದ ದಾರಿ ಸಿಕ್ಕಂತಾಯಿತು.
ಮೂರನೆಯದಾಗಿ, ಪ್ರಸ್ತಾಪಿಸಲಾಗಿರುವ ತಿದ್ದುಪಡಿಯಲ್ಲಿ ಲಂಚಪಡೆದವನ ವಿರುದ್ದ ಸಾಕ್ಷ್ಯನೀಡುವುದು ಲಂಚಕೊಟ್ಟವನಿಗೆ ಹೆಚ್ಚು ಅಪಾಯಕಾರಿಯಾಗುತ್ತದೆ. ಯಾಕೆಂದರೆ ಈಗಿರುವ ಕಾನೂನಿನಲ್ಲಿ ಭ್ರಷ್ಟಾಚಾರದ ವಿಚಾರಣೆಯ ಸಮಯದಲ್ಲಿ ತಾನು ಲಂಚಕೊಟ್ಟೆ ಎಂದು ಹೇಳಿಕೆ ನೀಡಿದರೆ, ಆ ಹೇಳಿಕೆಯನ್ನು ಭ್ರಷ್ಟಾಚಾರದಲ್ಲಿ ತೊಡಗಿದ ಆರೋಪದಲ್ಲಿ ಅವನ ಮೇಲೆ ಕ್ರಮತೆಗೆದುಕೊಳ್ಳುವುದಕ್ಕೆ ಬಳಸಿಕೊಳ್ಳಲಾಗುತ್ತಿರಲಿಲ್ಲ. ಆದರೆ ಉದ್ದೇಶಿತ ತಿದ್ದುಪಡಿಯಲ್ಲಿ ಈ ಕಾಯ್ದೆಯನ್ನು ಕೈಬಿಡಲಾಗಿದೆ. ಲಂಚಕೊಡುವುದು ಹಾಗೂ ಪಡೆಯುವುದು ಎರಡೂ ಅಷ್ಟೇ ಶಿಕ್ಷಾರ್ಹ ಎಂದು ತಿದ್ದುಪಡಿ ತರಲಾಗಿದೆ. ಇದರಿಂದ ಸರ್ಕಾರಿ ಅಧಿಕಾರಿಗಳ ವಿರುದ್ಧ ಸಾಕ್ಷಿಯಾಗಿ ನಿಲ್ಲುವುದಕ್ಕೆ ಲಂಚಕೊಟ್ಟವರು ಹಿಂಜರಿಯುವಂತಾಗುತ್ತದೆ.
ಲಂಚಕೊಡುವವರನ್ನು ಸಂಪೂರ್ಣವಾಗಿ ಹೊರಗಿಡುವುದು ಸರಿಯಲ್ಲ ಅನ್ನುವುದರಲ್ಲಿ ಒಂದಿಷ್ಟು ಅರ್ಥವಿದೆ. ಆದರೆ ಅದನ್ನು ಸಂಪೂರ್ಣ ತೆಗೆಯುವ ಅವಶ್ಯಕತೆಯಿರಲಿಲ್ಲ. ಸರ್ಕಾರಕ್ಕೆ ಇನ್ನೂ ಉತ್ತಮ ಅವಕಾಶಗಳಿದ್ದವು. ಎರಡನೆ ಆಡಳಿತಾತ್ಮಕ ಸುಧಾರಣಾ ಸಮಿತಿ ಬಲವಂತದ ಹಾಗೂ ಶಾಮೀಲಾಗಿ ಲಂಚ ನೀಡುವುದರ (ಒಡಂಬಡಿಕೆ) ನಡುವೆ ವ್ಯತ್ಯಾಸವನ್ನು ಗುರುತಿಸಬೇಕೆನ್ನುವ ಸಲಹೆಯನ್ನು ಮುಂದಿಟ್ಟಿದೆ. ಒತ್ತಡಕ್ಕೆ ಮಣಿದು ಲಂಚಕೊಟ್ಟು ನಂತರ ಅದನ್ನು ವರದಿ ಮಾಡಿದವರಿಗೆ ಕೆಲವು ರಕ್ಷಣೆಯನ್ನು ನೀಡಬೇಕು. ಒಂದು ಹಂತದಲ್ಲಿ ಲಂಚಕೊಟ್ಟವರು ಒಂದು ವಾರದೊಳಗೆ ಘೋಷಣೆ ಮಾಡಿಕೊಂಡರೆ ಅವರಿಗೆ ವಿನಾಯಿತಿ ನೀಡಬಹುದೆಂಬ ಪ್ರಸ್ತಾಪವೂ ಬಂದಿತ್ತು. ಆದರೆ ಆ ಎಲ್ಲ ವಿಚಾರಗಳನ್ನು ತಿರಸ್ಕರಿಸಲಾಯಿತು. ಅಂತಿಮ ಪ್ರಸ್ತಾವನೆಯಲ್ಲಿ ಲಂಚಕೊಟ್ಟವರು ಮತ್ತು ಪಡೆದವರೂ ಇಬ್ಬರೂ ಶಿಕ್ಷಾರ್ಹರು. ಹೀಗಾಗಿಬಿಟ್ಟರೆ ಲಂಚಪಡೆದವನ ವಿರುದ್ಧ ಸಾಕ್ಷ್ಯ ನೀಡುವ ಅವಕಾಶವೇ ಕಡಿಮೆಯಾಗಿಬಿಡುತ್ತದೆ.
ನಾಲ್ಕನೇ ಬದಲಾವಣೆಯಿಂದ ಭ್ರಷ್ಟರ ಮೇಲೆ ಕಾನೂನು ಕ್ರಮ ಜರುಗಿಸುವ ಅವಕಾಶವೂ ಕಡಿಮೆಯಾಗುತ್ತದೆ. ಈಗಿರುವ ಕಾಯ್ದೆಯ ಪ್ರಕಾರ ಸೇವೆಯಲ್ಲಿರುವ ಸರ್ಕಾರಿ ನೌಕರನ ಮೇಲೆ ಕಾನೂನು ಕ್ರಮ ಜರಗಿಸಬೇಕಾದರೆ ಮೊದಲು ಸರ್ಕಾರದ ಅಥವಾ ಉನ್ನತ ಅಧಿಕಾರಿಗಳ ಅನುಮತಿ ಬೇಕು. ಇದರ ಹಿಂದಿರುವ ಮೂಲ ಉದ್ದೇಶ ನಿಷ್ಠಾವಂತ ಸರ್ಕಾರಿ ಅಧಿಕಾರಿಗಳಿಗೆ ಅನಾವಶ್ಯಕ ಕಿರುಕುಳ, ಹಿಂಸೆ ಹಾಗೂ ಕ್ಷುಲ್ಲಕ ವ್ಯಾಜ್ಯಗಳಿಂದ ರಕ್ಷಿಸುವುದಾಗಿತ್ತು. ಪ್ರಸ್ತಾಪಿತ ಮಸೂದೆಯಲ್ಲಿ ಇದನ್ನು ನಿವೃತ್ತ ಅಧಿಕಾರಿಗಳಿಗೂ ವಿಸ್ತರಿಸಲಾಗಿದೆ. ಇದು ಮೂಲ ಕಾಯ್ದೆಯ ಉದ್ದೇಶದ ದೃಷ್ಟಿಯಿಂದ ನ್ಯಾಯಯುತ ಹಾಗು ಅವಶ್ಯಕ. ಆದರೆ ಇದರ ಜೊತೆಗೆ ಅನಾವಶ್ಯಕವಾದ ಹಾಗೂ ಅರ್ಥವಿಲ್ಲದ ಮತ್ತೊಂದು ನಿಯಮವನ್ನು ಸೇರಿಸಿದ್ದಾರೆ. ಈಗ ಖಾಸಗಿ ವ್ಯಕ್ತಿಯೊಬ್ಬ ಒಬ್ಬ ಸರ್ಕಾರಿ ನೌಕರನ ಮೇಲೆ ಕಾನೂನು ಕ್ರಮತೆಗೆದುಕೊಳ್ಳಲು ಸರ್ಕಾರಕ್ಕೆ ಮನವಿ ಮಾಡಿಕೊಳ್ಳಬೇಕಾದರೆ ಅವನು ಇದಕ್ಕೆ ನ್ಯಾಯಾಲಯದ ಆದೇಶ ತರಬೇಕಾಗುತ್ತದೆ. ಇದರಿಂದ ತಪ್ಪಿತಸ್ತನಿಗೆ ಹೆಚ್ಚಿನ ಇನ್ನೊಂದು ರಕ್ಷಣೆ ಸಿಕ್ಕಂತಾಗುತ್ತದೆ. ಇದರಿಂದ ಭ್ರಷ್ಟಾಚಾರಕ್ಕೆ ಬಲಿಯಾದವನಿಗೆ ಹಾಗೂ ಭ್ರಷ್ಟಾಚಾರೀ ವಿರೋಧಿ ಕಾರ್ಯಕರ್ತನಿಗೆ ಭ್ರಷ್ಟ ಸರ್ಕಾರಿ ನೌಕರನ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುಬೇಕೆನ್ನುವ ಉತ್ಸಾಹಕ್ಕೆ ತಣ್ಣೀರು ಎರಚಿದಂತಾಗುತ್ತದೆ. ಸರ್ಕಾರ ಸ್ಪಷ್ಟವಾಗಿ ಸರ್ಕಾರಿ ನೌಕರನ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕಿಂತ ಅವನನ್ನು ರಕ್ಷಿಸುವುದಕ್ಕೇ ಹೆಚ್ಚಿನ ಕಾಳಜಿ ತೋರಿಸುತ್ತದೆ.
ಮೊದಲು ಒಪ್ಪಿಗೆ ಪಡೆಯಬೇಕು
ಅಂತಿಮವಾಗಿ ಎಲ್ಲದಕ್ಕಿಂತ ಮಾರಣಾಂತಿಕವಾದ ಹಾಗೂ ಅಪಾಯಕಾರಿಯಾದ ಕಾಯ್ದೆಯೊಂದನ್ನು ಸೇರಿಸಲಾಗಿದೆ. ಅದು ಅಷ್ಟಾಗಿ ಸಾರ್ವಜನಿಕ ಅವಗಾಹನೆಗೇ ಬಂದಿಲ್ಲ. ಅದು ಸೆಕ್ಷನ್ ೧೭ಎ. ಅದರ ಅನ್ವಯ ಪೂರ್ವಾನುಮತಿ ಇಲ್ಲದೆ ಅಪರಾಧವನ್ನು ಕುರಿತಂತೆ ವಿಚಾರಣೆಯನ್ನು ಅಥವಾ ತನಿಖೆಯನ್ನು ಪ್ರಾರಂಭಿಸುವುದಕ್ಕೂ ಸಾಧ್ಯವಿಲ್ಲ. ಸರ್ಕಾರ ಪ್ರಸ್ತಾಪಿತ ತಿದ್ದುಪಡಿಯ ಪ್ರಕಾರ ತನಿಖೆ ಪ್ರಾರಂಭಿಸುವುದಕ್ಕೆ ಲೋಕಾಯುಕ್ತ ಅಥವಾ ಲೋಕಾಪಾಲ್‌ನಿಂದ ಅನುಮೋದನೆ ಬೇಕು. ರಾಜ್ಯಸಭೆಯ ವರಿಷ್ಟ ಸಮಿತಿ ಇದನ್ನು ಇನ್ನಷ್ಟು ಹೊಲಸು ಮಾಡಿದೆ. ಅದು ಅಧಿಕಾರಿಯನ್ನು ನೌಕರಿಯಿಂದ ತೆಗೆಯುವ ಸಾಮರ್ಥ್ಯವಿರುವ ಅಧಿಕಾರದಿಂದ ಅನುಮತಿಯನ್ನು ಪಡೆಯಬೇಕೆನ್ನುತ್ತದೆ. ಇದರ ಪರಿಣಾಮ ಸ್ಪಷ್ಟ. ಈಗ ರಾಜಕೀಯ ಒಡೆಯರು, ಸರ್ಕಾರಿ ನೌಕರನ ವಿರುದ್ಧ ವಿಚಾರಣೆ ನಡೆಯಬೇಕೋ ಬೇಡವೋ ಅನ್ನುವುದನ್ನು ನಿರ್ಧರಿಸುತ್ತಾರೆ.
ಇದಕ್ಕೊಂದು ತರ್ಕವೇ ಇಲ್ಲ. ಈ ಮೊದಲೇ ಗಮನಿಸಿದಂತೆ ಕಾಯ್ದೆಯ ೧೯ನೇ ಪರಿಚ್ಛೇದವು (seಛಿಣioಟಿ ೧೯ ಂ oಜಿ ಣhe ಚಿಛಿಣ) ದುರುದ್ದೇಶಪುರಿತ ದಾವೆಗಳಿಂದ ಅಧಿಕಾರಿಗಳನ್ನು ರಕ್ಷಿಸುತ್ತದೆ. ನಿರಪರಾಧಿ ಅಧಿಕಾರಿಯನ್ನು ಯಾವುದೇ ನಂಬಲರ್ಹ ಆಧಾರಗಳಿಲ್ಲದಿದ್ದರೂ ಯಾರಾದರೂ ಹಿಂಸಿಸಬೇಕೆಂದು ಇಚ್ಛಿಸಿದರೆ ಸರ್ಕಾರವು ವಿಚಾರಣೆಗೆ ಅನುಮತಿಯನ್ನು ತಿರಸ್ಕರಿಸಬಹುದು. ಹಾಗಿದ್ದಾಗ ವಿಚಾರಣೆಗೆ ಮೊದಲೇ ಅನುಮತಿ ಪಡೆಯುವುದಕ್ಕೆ ಏಕೆ ಒತ್ತಾಯಿಸಬೇಕು. ಖಂಡಿತಾ, ವಿಚಾರಣೆ ನಡೆಯದೇ ಹೋದರೆ ನಂಬಲರ್ಹ ಸಾಕ್ಷ್ಯಗಳು ಇರುವುದಿಲ್ಲ. ಯಾವ ಆಧಾರದ ಮೇಲೆ ಸರ್ಕಾರ (ಅಥವಾ ಹಿಂದಿನ ಪ್ರಸ್ತಾಪವನ್ನು ಒಪ್ಪಿಕೊಂಡರೆ ಲೋಕಪಾಲ) ಅನುಮತಿ ನೀಡುತ್ತದೆ ಅಥವಾ ತಿರಸ್ಕರಿಸುತ್ತದೆ? ಅಥವಾ ಯಾವುದೇ ವಿಚಾರಣೆಯಾಗದಿದ್ದಾಗ ಅನುಮತಿ ಪಡೆಯುವುದಕ್ಕೆ ಸಾಕ್ಷ್ಯವನ್ನು ಯಾರೇ ಆದರೂ ಹೇಗೆ ಒದಗಿಸಬಲ್ಲರು? ಅನುಮತಿ ಕೊಟ್ಟರೂ ಅದರಿಂದ ಭ್ರಷ್ಟಚಾರಿಗಳಿಗೆ ನಡೆಯಲಿರುವ ವಿಚಾರಣೆಯ ಬಗ್ಗೆ ಮುನ್ಸೂಚನೆ ದೊರಕಿ ಅವರ ಸಾಕ್ಷ್ಯಗಳನ್ನು ಮುಚ್ಚಿಡುವುದಕ್ಕೆ ನೆರವಾಗುವುದಿಲ್ಲವೇ? ಈ ಅಪಾಯಕಾರಿ ಕಾಯ್ದೆಯಿಂದ ಒಂದು ಉದ್ದೇಶವಂತೂ ಈಡೇರಬಹುದು. ಉನ್ನತ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಭ್ರಷ್ಟಾಚಾರದ ಪ್ರಕರಣಗಳಲ್ಲಿ ಅಂತಿಮ ತೀರ್ಪುಗಾರರಾಗಿಬಿಡುತ್ತಾರೆ. ಒಬ್ಬ ರಾಜಕಾರಣಿಗೆ ಭ್ರಷ್ಟ ಅಧಿಕಾರಿಯನ್ನು ರಕ್ಷಿಸಬೇಕೆಂದಿದ್ದರೆ ಅವರನ್ನು ಕಾನೂನು ಕ್ರಮದಿಂದ ರಕ್ಷಿಸಬಹುದು (ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು) ಮಾತ್ರವಲ್ಲ ಯಾವುದೇ ಸಾಕ್ಷ್ಯಗಳು ಸಂಗ್ರಹವಾಗದಂತೆಯೂ ನೋಡಿಕೊಳ್ಳಬಹುದು.
ಮತ್ತೆ ಸಕ್ರಿಯವಾದ ಏಕ ಆದೇಶ
ಬಾಬುಗಳ ರಾಜ್ಯ ಕುಖ್ಯಾತ ಏಕೆ ಆದೇಶವನ್ನು ಮತ್ತೆ ತರುವಲ್ಲಿ ಯಶಸ್ವಿಯಾಗಿದೆ. ಹಳೆಯ ಸರ್ಕಾರಿ ಆದೇಶದ ಪ್ರಕಾರ (ಜಂಟಿ ಕಾರ್ಯದರ್ಶಿಗಿಂತ ಉನ್ನತ ಹುದ್ದೆಯ) ಯಾವುದೇ ಸರ್ಕಾರಿ ಅಧಿಕಾರಿಯ ವಿರುದ್ಧ ಸರ್ಕಾರದ ಅನುಮತಿ ಇಲ್ಲದೆ ವಿಚಾರಣೆ ನಡೆಸುವಂತಿಲ್ಲ. ಪ್ರಖ್ಯಾತ ವಿನೀತ್ ನಾರೇನ್ ಪ್ರಕರಣದಲ್ಲಿ ಈ ಮೊಕದ್ದಮೆಯಲ್ಲಿ ಸುಪ್ರೀಂ ಕೋರ್ಟ್ ೧೯೯೭ರಲ್ಲಿ ಈ ಆದೇಶವನ್ನು ಕಾನೂನು ಬಾಹಿರ ಎಂದು ತೀರ್ಪುನೀಡಿತ್ತು. ಸರ್ಕಾರ ಅದನ್ನು ೨೦೦೩ರಲ್ಲಿ ಕಾನೂನಿನ ಪ್ರಾವಿಷನ್ ಆಗಿ ಮತ್ತೆ ತಂದಿತು. ಅಂತಿಮವಾಗಿ ಇತ್ತೀಚೆಗೆ ೨೦೧೪ರಲ್ಲಿ ಸುಪ್ರಿಂಕೋರ್ಟಿನ ಸಂವಿಧಾನಾತ್ಮಕ ಪೀಠವೂ ಈ ಕಾಯ್ದೆಯು ಸಮಾನತೆಯ ಹಕ್ಕನ್ನೇ ಉಲ್ಲಂಘಿಸುತ್ತದೆ ಎನ್ನುವ ಕಾರಣಕ್ಕೆ ಅಸಂವಿಧಾನಾತ್ಮಕ ಎಂದು ತೀರ್ಪು ನೀಡಿದೆ. ಬಾಬು ರಾಜ್ಯದ ಶಕ್ತಿ ಮತ್ತು ನಾಯಕರ ಮೇಲೆ ಅದರ ನಿಯಂತ್ರಣ ಎಷ್ಟಿದೆಯೆಂದರೆ ಮತ್ತೆ ಮೂರನೇ ಬಾರಿಗೆ ಈ ವಿನಾಯಿತಿ ಕಾಯ್ದೆಯನ್ನು (immuಟಿiಣಥಿ ಛಿಟಚಿuse) ತರುವಲ್ಲಿ ಅದು ಯಶಸ್ವಿಯಾಗಿದೆ.
ಪಾರ್ಲಿಮೆಂಟಿನ ಛಳಿಗಾಲದ ಅಧಿವೇಶನ ಮುಕ್ತಾಯವಾಗುತ್ತಿರುವುದರಿಂದ ಈ ಮಸೂದೆಯನ್ನು ಬಜೆಟ್ ಅಧಿವೇಶನಕ್ಕೆ ಮುಂದೂಡಬಹುದು ಎನಿಸುತ್ತದೆ. ಇದರಿಂದ ಭ್ರಷ್ಟರಿಗೆ ರಕ್ಷಣೆ ನೀಡುವ ಕಾಯ್ದೆಯ ವಿರುದ್ಧ ಸಾರ್ವತ್ರಿಕ ಅಭಿಪ್ರಾಯ ಮೂಡಿಸಲು ಕಾಳಜಿಯುಳ್ಳ ಪ್ರಜೆಗಳಿಗೆ ಒಂದೆರಡು ತಿಂಗಳ ಕಾಲಾವಕಾಶ ಸಿಕ್ಕಿದೆ. ಭ್ರಷ್ಟಾಚಾರ ವಿರೋಧಿ ಆಂದೋಲನವನ್ನು ಪುನರ್‌ರೂಪಿಸಲು ಇದು ಸಮಯ.
ಅನುವಾದ
ಟಿ ಎಸ್ ವೇಣುಗೋಪಾಲ್
ಶೈಲಜ

Recommended Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.