ನನ್ನ ತಂದೆಯ ರಸಯಾತ್ರೆಯ ಅಂತ್ಯ

 In RAGAMALA

೧೯೮೧ರಲ್ಲಿ ನನ್ನ ತಂದೆ ತಮ್ಮ ರಸಯಾತ್ರೆಯ ನಿರೂಪಣೆಯನ್ನು ನಿಲ್ಲಿಸಿದ್ದರು. ಆಮೇಲೂ ಅವರು ಹನ್ನೊಂದು ವರ್ಷಗಳು ನಮ್ಮೊಡನಿದ್ದರು. ಅವರು ನಮ್ಮನ್ನಗಲಿದ್ದು ೧೯೯೨ರ ಸೆಪ್ಟೆಂಬರ್ ೧೨ರಂದು.
ಅವರ ರಸಯಾತ್ರೆಯಲ್ಲಿ ಅವರ ಸುಖದುಃಖಗಳಿಗೆ ಹೆಗಲುಕೊಟ್ಟು ಅಚಲವಾಗಿ ನಿಂತವಳು ನನ್ನವ್ವ ಗಂಗಮ್ಮ. ಅಮ್ಮ ೧೯೮೩ರಲ್ಲಿ ತೀರಿಹೋದಳು. ಅದು ಅಪ್ಪನಿಗೆ ಸಹಿಸಲಾರದ ಹೊಡೆತ. ಅಲ್ಲೀ ತನಕ ಅಪ್ಪ ಕಣ್ಣೀರಿಟ್ಟದ್ದನ್ನೇ ನಾನು ನೋಡಿರಲಿಲ್ಲ. ಅಮ್ಮ ತೀವ್ರವಾದ ಸಂಧಿವಾತದಿಂದ ನರಳುತ್ತಿದ್ದಳು. ಅವಳು ಹೋದ ದಿವಸ ಅಪ್ಪನ ಕಣ್ಣಲ್ಲಿ ಸುಮ್ಮನೇ ನೀರು ಹರೀತ್ತಿತ್ತು. ತುಂಬಾ ನೊಂದಿದ್ದರು. ಮಗಾ, ನಿಮ್ಮಮ್ಮ ನನಗೆ ಮೋಸಮಾಡಿಬಿಟ್ಳು, ಎಂದಷ್ಟೇ ಹೇಳಿದರು. ನಮ್ಮಪ್ಪ ನಮ್ಮಮ್ಮನನ್ನು ತುಂಬಾ ಆತುಕೊಂಡಿದ್ರು. ಅಪ್ಪನಿಗೆ ಅವರು ಬಹುದೊಡ್ಡ ಆಸರೆಯಾಗಿದ್ರು. ಅಪ್ಪನ್ನ ಅವರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ರು. ಅಪ್ಪನಿಗೆ ಅವರು ಅಷ್ಟೊಂದು ಪ್ರೀತೀನ ಕೊಡದೇ ಇದ್ದಿದ್ರೆ ಅಪ್ಪ ಈ ಎತ್ತರಕ್ಕೆ ಏರೋದಕ್ಕೆ ಸಾಧ್ಯವಿರಲಿಲ್ಲ. ಅಪ್ಪನ ೬೫ನೇ ಹುಟ್ಟುಹಬ್ಬ ಬೆಂಗ್ಳೂರಿನಲ್ಲಿ ಆಯ್ತು. ಆವತ್ತು ಅಪ್ಪ ಸಾರ್ವಜನಿಕವಾಗಿ ಅಮ್ಮನ್ನ ಹೊಗಳಿದ್ರು. ಅವಳು ಅಷ್ಟು ಗಟ್ಟಿಯಾಗಿ ನನ್ನ ಜೊತೇಗೆ ನಿಂತದ್ರಿಂದ್ಲೇ ಇವತ್ತು ನನ್ನ ಬದುಕು ಮತ್ತೆ ನನ್ನ ಸಂಗೀತ ಈ ಮಟ್ಟದಲ್ಲಿ ಇರೋಕ್ಕಾಯ್ತು, ಅಂದ್ರು. ಅಪ್ಪ ಇದನ್ನ ಹೇಳ್ತಿದ್ಹಂಗೆ ಅಪ್ಪನ ಅಭಿಮಾನಿಗಳು ಕವಿ ಒಡೆದುಹೋಗೋ ಅಷ್ಟು ಜೋರಾಗಿ ಚಪ್ಪಾಳೆ ತಟ್ಟಿದ್ರು. ಈ ದುಃಖ ಹಾಗೂ ಇನ್ನೆಷ್ಟೋ ದುರಂತಗಳ ನೋವಿನಿಂದ ಅಪ್ಪನಿಗೆ ಚೇತರಿಸಿಕೊಳ್ಳೋಕೆ ಸಾಧ್ಯವಾಗಿದ್ದು ಅವರ ಅಧ್ಯಾತ್ಮಿಕ ಗುರುಗಳ ಆಶೀರ್ವಾದ ಹಾಗು ಅವರ ವಿವೇಕದ ಮಾತುಗಳಿಂದ. ಗುರುಗಳನ್ನು ಅವರು ಗಾಢವಾಗಿ ನಂಬಿದ್ದರು.
೧೯೯೧ರಲ್ಲಿ ಅಪ್ಪಂಗೆ ಮೂತ್ರಪಿಂಡದ ಸಮಸ್ಯೆ ಕಾಣಿಸಿಕೊಂಡ್ತು. ಹುಬ್ಬಳ್ಳಿಯಲ್ಲೇ ಆಸ್ಪತ್ರೆಗೆ ಸೇರಿಸಿದ್ವಿ. ಆದರೆ ಆಮೇಲೆ ಡಯಾಲಿಸಿಸ್‌ಗೆ ಅಂತ ಬೆಂಗಳೂರು ಕಿಡ್ನಿ ಫೌಂಡೇಷನ್‌ಗೆ ಸೇರಿಸಿದ್ವಿ. ಅಪ್ಪ ಬದುಕಿಡೀ ಒಂದು ಥರಾ ಸ್ಥಿತಪ್ರಜ್ಞರಾಗೇ ಇದ್ದೋರು. ಇದನ್ನೂ ಅಷ್ಟೇ ಸಮಚಿತ್ತದಿಂದ ಸ್ವೀಕರಿಸಿದ್ರು. ಇವೆಲ್ಲವೂ ಆಗುತ್ತೆ ಅಂತ ನನಗೇ ಸಮಾಧಾನ ಹೇಳಿದ್ರು. ಅವರ ಮಕ್ಕಳು, ಅಳಿಯಂದಿರು, ಆತ್ಮೀಯ ಗೆಳೆಯರು, ನಾವೆಲ್ಲರೂ ಅವರ ಪಕ್ಕದಲ್ಲೇ ಇದ್ವಿ. ಅವರ ಅಭಿಮಾನಿಗಳು ಹಿತೈಷಿಗಳು, ಸಹಕಲಾವಿದರು ಪದೇ ಪದೇ ಅವರ ಆರೋಗ್ಯ ವಿಚಾರಿಸ್ತಾನೇ ಇದ್ರು. ಆದರೆ ಅದೇನು ಗೊಂದಲವಾಯ್ತೋ ಗೊತ್ತಿಲ್ಲ. ಒಬ್ಬ ಹೆಸರಾಂತ ಕಲಾವಿದರು ಅವರ ಚಿಕಿತ್ಸೆಗೆ ಅಂತ ಚೆಕ್ ಕಳ್ಸಿಕೊಟ್ರು. ಅವರ ಉದ್ದೇಶವೇನೋ ಒಳ್ಳೇದಿತ್ತು. ಆ ಬಗ್ಗೆ ಅವರು ಪತ್ರಿಕಾ ಹೇಳಿಕೇನೂ ನೀಡಿದ್ರು! ಅಪ್ಪ ಸಿಕ್ಕಾಪಟ್ಟೆ ಕೆರಳಿಬಿಟ್ರು. ನಾನು ತಕ್ಷಣವೇ ಆ ಚೆಕ್ಕನ್ನ ವಾಪಸ್ ಕಳಿಸ್ದೆ.
ಕಿಡ್ನಿ ಫೌಂಡೇಷನ್‌ನಲ್ಲಿ ಅಪ್ಪನ್ನ ನೋಡ್ಕೊತಿದ್ದ ಡಾ. ತಲವಾಲ್ಕರ್ ಕರುಣಾಮಯಿ. ಅತ್ಯಂತ ಮಾನವೀಯ ಜೀವ. ಡಯಾಲಿಸಿಸ್‌ನ ಮೊದಲ ದಿನಾನ ನನಗೆ ಮರೆಯೋಕ್ಕೇ ಸಾಧ್ಯವಿಲ್ಲ. ಶುದ್ಧೀಕರಣಕ್ಕೆ ಅಂತ ಅಪ್ಪನ ರಕ್ತ ಹಲವು ನಳಿಕೆಗಳಲ್ಲಿ ಹಾದು ಹೋಗ್ತಿತ್ತು. ಅಪ್ಪ ನನ್ನನ್ನ ಕರೆದ್ರು, ಮಗಾ, ಭೈರವದ ದುಃಖ ದೂರ್ ಕರಿಯೇ ಹಾಡು ಅಂದ್ರು. ಚಕಿತನಾಗಿ ತಲವಾಲ್ಕರರತ್ತ ನೋಡ್ದೆ. ಅವ್ರು ಕೇಳಿದ್ದನ್ನ ಹಾಡಿ ಅಂತಂದ್ರು. ನನ್ನೆಲ್ಲ ದುಃಖಾನ ಅದುಮಿಟ್ಟು, ಹಾಡಿದೆ. ನಾನು ಹಾಡುವಾಗ ಎಂದಿನಂತೆಯೇ ಅಪ್ಪ ತಿದ್ದಿದರು. ಇನ್ನೊಂದಿಷ್ಟು ಹಾಡು ಅಂತ ಉತ್ತೇಜಿಸಿದ್ರು. ನಿಮ್ಮ ತಂದೆ ಅಸಾಧಾರಣ ವ್ಯಕ್ತಿ. ಸಂಗೀತ ಅಕ್ಷರಶಃ ಅವರ ಒಡಲಲ್ಲೇ ಇದೆ ಅಂತಂದ್ರು ಡಾ. ತಲವಾಲ್ಕರ್. ಕೆಲವೇ ತಿಂಗಳುಗಳಲ್ಲಿ ಅಪ್ಪ ಚೇತರಿಸಿಕೊಂಡ್ರು. ಡಾಕ್ಟ್ರು ಅವರನ್ನ ಮನೆಗೆ ಕರ‍್ಕೊಂಡು ಹೋಗ್ಬೋದು ಅಂದ್ರು. ಆದರೆ ತಮ್ಮ ಆರೋಗ್ಯ ಸುಧಾರಿಸಿದ್ಯಾ ಅನ್ನೋದನ್ನ ಪತ್ತೆ ಮಾಡ್ಕೊಳಕ್ಕೆ ಅಪ್ಪ ತಮ್ಮದೇ ಆದ ಕ್ರಮ ಕಂಡ್ಕೊಂಡಿದ್ರು. ಆಸ್ಪತ್ರೆಯ ಹಾಸಿಗೆ ಮೇಲೆ ಕೂತು, ಅಲ್ಲಿಗೇ ತಾನ್ಪುರ ತರೋಕ್ಕೆ ಹೇಳಿ, ಒಂದಿಪ್ಪತ್ತು ನಿಮಿಷ ಹಾಡಿದ್ರು. ಆರೋಗ್ಯ ಸರಿಹೋಗಿದೆ ಅಂತ ಸ್ವತಃ ಅವ್ರ ಮನಸ್ಸಿಗೇ ಅನ್ಸಿದ್ ಮೇಲೆ ಮನೆಗೆ ಬರೋಕ್ಕೆ ಒಪ್ಪಿದ್ರು. ಆಸ್ಪತ್ರೆ ಖರ್ಚಿನ ಹೆಚ್ಚಿನ ಭಾಗಾನ ಕರ್ನಾಟಕ ಸರ್ಕಾರ ಕೊಟ್ತು. ಆರು ತಿಂಗ್ಳು ಆದ್ಮೇಲೆ ತಾವು ಮಾಡಿದ ಕಚೇರಿಯಿಂದ ಬಂದ ಸಂಭಾವನೇನೆಲ್ಲ ಅಪ್ಪ ಆ ಆಸ್ಪತ್ರೆಗೇ ನೀಡಿದ್ರು.
೧೯೮೧ರಿಂದ ೯೨ರ ನಡುವೆ ಅಪ್ಪಂಗೆ ಹಲವು ಪ್ರಶಸ್ತಿ ಗೌರವಗಳು ಸಂದವು. ಅವುಗಳಲ್ಲಿ ಪ್ರಮುಖವಾದವು ವಿಶ್ವಭಾರತಿ ವಿಶ್ವವಿದ್ಯಾನಿಲಯದ ದೇಶಿಕೋತ್ತಮ (೧೯೮೮), ಹಾಫೀಜ಼್ ಅಲಿ ಖಾನ್ ಪ್ರಶಸ್ತಿ (೧೯೯೧) ಮತ್ತೆ ಪದ್ಮ ವಿಭೂಷಣ (೧೯೯೨). ಪದ್ಮ ಪ್ರಶಸ್ತಿಯನ್ನು ಅವರು ಸ್ವೀಕರಿಸಿದ ಆ ಕ್ಷಣ ನನ್ನ ಮನದಲ್ಲಿ ಹಾಗೇ ಉಳಿದಿದೆ. ಸಮಾರಂಭಕ್ಕೆ ಒಂದು ದಿನ ಮೊದಲು ಅಲ್ಲಿ ಹೇಗೆ ಇರಬೇಕು ಅನ್ನೋದನ್ನ ಪ್ರಶಸ್ತಿ ಪುರಸ್ಕೃತರಿಗೆ ಹೇಳಿಕೊಡ್ತಾರೆ. ಅಪ್ಪಂಗೆ ಅದು ತಮಾಷೆ ಅನ್ಸಿತ್ತು. ಕಾರ್ಯಕ್ರಮದ ದಿನ ನಮ್ಮನ್ನ ರಾಷ್ಟ್ರಪತಿ ಭವನಕ್ಕೆ ಕರ‍್ಕೊಂಡುಹೋದ್ರು. ಕಾರ್ಯಕ್ರಮ ಪ್ರಾರಂಭ ಆಯ್ತು. ಅಪ್ಪನ ಹೆಸರನ್ನು ಕರೆದ್ರು. ಅವರು ಪ್ರಶಸ್ತಿ ತೊಗೋತಿದ್ದಾಗ ಕಾಲ ಅಲ್ಲೇ, ಹಾಗೇ, ಸ್ತಬ್ಧವಾಗಿಬಿಟ್ಟಿದೆ ಅಂತ ನನಗನ್ಸಿತ್ತು.
ಭಾರತದ ಯಾವುದೋ ಹಳ್ಳಿಯ ಈ ಮನುಷ್ಯ ತನ್ನ ಇಡೀ ಬದುಕನ್ನ ಸಂಗೀತಕ್ಕೇ ಕೊಟ್ಟುಬಿಟ್ಟಿದ್ರು. ಸರಳವಾದ ಪಂಚೆ ಮತ್ತು ಜುಬ್ಬಾ ಧರಿಸಿದ್ದ ಈ ಬಡಕಲು ಜೀವಿ ಭಾರತದ ಅಧ್ಯಕ್ಷ ಆರ್ ವೆಂಕಟರಾಮನ್ ಅವರಿಂದ ದೇಶದ ಅತ್ಯುನ್ನತ ಪ್ರಶಸ್ತಿ ತೊಗೊಳೋದಕ್ಕೆ ವೇದಿಕೆಯತ್ತ ಹೋಗ್ತಾ ಇದ್ರು.
ಇದು ಹೇಗೆ ಸಾಧ್ಯ ಆಯ್ತು ಅನ್ನೋ ಅಚ್ಚರೀಲೇ ನಾನಿದ್ದೆ. ಆಗ ಮೂರು ಸತ್ಯಗಳು ನನ್ನ ಮನಸ್ಸಿಗೆ ಬಂದವು. ಅವರ ಗುರುಗಳು ಅವರಿಗೆ ತೆರೆದ ಮನಸ್ಸಿನಿಂದ ಪಾಠ ಹೇಳಿಕೊಟ್ಟಿದ್ರು. ಎರಡನೇದಾಗಿ ಸಂಗೀತಕ್ಕಾಗಿ ಅವ್ರು ಮಾಡಿದ ತಪಸ್ಸು ಅವ್ರಿಗೆ ಫಲ ನೀಡಿದೆ. ಮೂರನೇದಾಗಿ ಅಪ್ಪನಿಗೆ ತಮ್ಮ ಸಂಗೀತ ಮತ್ತು ಆಧ್ಯಾತ್ಮದ ಗುರುಗಳಲ್ಲಿ ಇದ್ದ ಅಚಲವಾದ ಶ್ರದ್ಧೆ ನಂಬಿಕೆಗಳು ಇದಕ್ಕೆಲ್ಲಾ ಕಾರಣ. ಅವರು ಅಧ್ಯಕ್ಷರ ಹತ್ತಿರಕ್ಕೆ ಹೋದಂತೆಲ್ಲಾ ನನ್ನ ಎದೆಬಡಿತ ಕೆಲ ಕ್ಷಣಗಳು ನಿಂತೇ ಹೋದಂತೆ ಅನ್ನಿಸಿತು. ಏಕೆಂದರೆ ಅವರು ಕೆಂಪು ನೆಲಹಾಸಿನ ಮೇಲೆ ನಡೆಯೋಕ್ಕೆ ಬದಲು ಅದರ ಪಕ್ಕದಲ್ಲಿ ನಡೀತಿದ್ರು. ಆ ಕೆಂಪು ರತ್ನಗಂಬಳಿ ಇವರಂತಹ ಸಾಧಕರಿಗೆಂದೇ ಹಾಸಿದ್ದಾರೆ ಅನ್ನೋದು ಇವರಿಗೆ ತಿಳಿದಿರಲಿಲ್ಲವೋ ಅಥವಾ ಈ ಸರಳ ದೈವಭೀರು ಜೀವಕ್ಕೆ ಬಹುಶಃ ಜನರ ಕಣ್ಣಿಗೆ ಕಾಣಿಸಿಕೊಳ್ಳುವುದು ಬೇಕಿರಲಿಲ್ಲವೋ, ತಿಳೀಲಿಲ್ಲ. ಮರಳಿ ಮನೆಗೆ ಬಂದು ನನ್ನ ಸೋದರಿಯರಿಗೆ ಸಮಾರಂಭದ ಬಗ್ಗೆ ಹೇಳೋವಾಗ ಅಧ್ಯಕ್ಷರ ಮನೆ ಔತಣಕ್ಕೆ ಅಮಿತಾಬಚ್ಚನ್ ಮತ್ತು ಮನೋಜ್‌ಕುಮಾರ್ ಅಂಥಾ ಸಿನಿಮಾ ನಟರು ಬಂದಿದ್ದನ್ನೂ, ಮತ್ತೆ ತಾನವರನ್ನು ನೋಡಿದ್ದನ್ನು ತುಂಬಾ ಸಂಭ್ರಮದಿಂದ ಹೇಳಿದ್ರು. ನನ್ನ ಅಕ್ಕಂದಿರು, ಅಪ್ಪಾ ಪ್ರಶಸ್ತಿ ಸ್ವೀಕರಿಸೋವಾಗ ಹೇಗನ್ನಿಸಿತು, ಅಂತ ಮತ್ತೆ ಮತ್ತೆ ಕೇಳಿದಾಗ ಏನೂ ಅನ್ನಿಸಲಿಲ್ಲ ಮಗಳೆ. ಹಲವು ಪ್ರಶಸ್ತಿಗಳಲ್ಲಿ ಇದೂ ಒಂದು ಅಷ್ಟೆ ಅಂದರು. ನಮ್ಮನ್ನು ವಿಚಲಿತಗೊಳಿಸುವಂತಹ ಸರಳತೆ ಅವರದು.
ಮುರುಘಾಮಠದಲ್ಲಿ ಅಪ್ಪ ತಮ್ಮ ಸಂಗೀತಸೇವೆ ಸಲ್ಲಿಸಿದ ಮೂರು ತಿಂಗಳ ನಂತರ ಅಂದರೆ ೧೯೯೨ರ ಆಗಸ್ಟ್‌ನಿಂದ ದೆಹಲಿ, ಮುಂಬೈ, ಪುಣೆ, ಕೊಲ್ಕತ್ತಾಗಳಲ್ಲಿ ಸುಂಟರಗಾಳಿಯಂತೆ ಪಯಣಿಸುತ್ತಾ ಕಚೇರಿ ಮಾಡಿದರು. ಅಪ್ಪಾ, ಸ್ವಲ್ಪ ನಿಧಾನಿಸಿ, ಇಷ್ಟೊಂದು ಕಚೇರಿಗಳನ್ನು ಒಪ್ಪಿಕೊಳ್ಳಬೇಡಿ, ಎಂದು ಹೇಳುತ್ತಲೇ ಇದ್ದೆ. ನೀರಿನಿಂದ ಹೊರಗೆ ಬಾ ಎಂದು ಮೀನಿಗೆ ಸಲಹೆ ನೀಡೋದಕ್ಕೆ ಸಾಧ್ಯವೇ? ಅವರನ್ನು ಸುಮ್ಮನೆ ಕೂರಿಸೋಕ್ಕೆ ಸಾಧ್ಯವೇ ಇರಲಿಲ್ಲ. ಅವರ ಜೀವಿತದ ಕೊನೆಯ ಒಂದು ವರ್ಷದಲ್ಲಿ ಅವರ ಕಚೇರಿಯನ್ನು ಬೇರೆ ಬೇರೆ ಕಡೆಗಳಲ್ಲಿ ಕೇಳಿದ್ದವರು, ಪಂಡಿತ್‌ಜೀ ಕೊನೆಗೆ ಹಾಡಿದ್ದು ನಮ್ಮೂರಿನಲ್ಲಿಯೇ ಅಲ್ವಾ, ಅಂತ ಕೇಳೋರು. ನನಗಾದರೂ ಹೌದು ಅನ್ನೋದನ್ನ ಬಿಟ್ಟು ಬೇರೇನು ಉಳಿದಿತ್ತು?
೧೯೯೨ರ ಜನವರಿ, ಫೆಬ್ರುವರಿ, ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳಲ್ಲಿ ನಾನು ಎಷ್ಟು ಬೇಡವೆಂದರೂ ಕೇಳದೆ ಹಲವು ಕಡೆಗಳಲ್ಲಿ ಕಚೇರಿ ಮಾಡಿದರು. ಪುಣ್ಯಕ್ಕೆ ಮೇ ಮತ್ತು ಜೂನಿನಲ್ಲಿ ಕಾರ್ಯಕ್ರಮಗಳು ಇರಲಿಲ್ಲ. ೧೯೯೨ ಜೂನ್ ೩೦ರಂದು ಧಾರವಾಡದ ಆಕಾಶವಾಣಿಗೆ ಹಾಡಿದರು. ನನ್ನ ಬೇಡಿಕೆಯ ಮೇರೆಗೆ ನಟ್ ಮತ್ತು ಮಿಯಾ-ಕಿ-ಮಲ್ಹಾರ್ ಹಾಡಿದ್ರು. ನಾನವರಿಗೆ ಗಾಯನ ಸಹಕಾರ ನೀಡುತ್ತಿದ್ದೆ. ಅಂದು ಅವರು ಕರೀಂ ನಾಮ್ ತೇರೋ ಎಂಬ ಪ್ರಖ್ಯಾತ ಬಂದಿಶ್‌ಅನ್ನು ಸಾಮಾನ್ಯವಾಗಿ ಎಲ್ಲರೂ ಹಾಡೋ ತೀನ್ ತಾಲ್‌ಗೆ ಬದಲಾಗಿ ರೂಪಕ್‌ದಲ್ಲಿ ಹಾಡಿದಾಗ ನನಗೆ ಆಶ್ಚರ್ಯವಾಯ್ತು. ಧಾರವಾಡದ ಆಕಾಶವಾಣಿಯಿಂದ ನಮ್ಮನೆಗೆ ಎರಡೇ ಹೆಜ್ಜೆ. ಮನೆಗೆ ನಡ್ಕೊಂಡು ಬರ‍್ತಾ ಇದ್ದಾಗ ಎಡಗಡೆ ಹೆಗಲು ಎರಡು ಮೂರು ದಿನದಿಂದ ತುಂಬಾ ನೋಯ್ತಿದೆ ಅಂತ ಅಂದ್ರು. ಈಗಲೇ ಡಾಕ್ಟರನ್ನು ಕಂಡು ಬರೋಣ ಅಂತ ಹೇಳಿ, ನಮ್ಮ ಕುಟುಂಬದ ಗೆಳೆಯರೂ ಆಗಿದ್ದ ಮೂಳೆತಜ್ಞ ಡಾ. ದಿಲೀಪ್ ದೇಶಪಾಂಡೆ ಅವರ ಬಳಿ ಹೋದೆವು. ಅವರು ಭುಜದ ನೋವು ಬಿಟ್ಟು ಇನ್ನೇನನ್ನೂ ಹೇಳಿಕೊಳ್ಳಲಿಲ್ಲ. ಹಾಗಾಗಿ ಅದಕ್ಕಾಗೋ ಔಷಧ ಮತ್ತು ನೋವಿರೋ ಜಾಗಕ್ಕೆ ಹಾಕ್ಕೊಳ್ಳಕ್ಕೆ ಒಂದು ಕಾಲರ್ ಕೊಟ್ರು.
ಹದಿನೈದು ದಿನ ಆದ್ರೂ ನೋವು ಕಡಿಮೆ ಆಗ್ಲಿಲ್ಲ. ಅದಕ್ಕೆ ಅವರನ್ನ ಒಂದು ನರ್ಸಿಂಗ್‌ಹೋಮಿಗೆ ಸೇರ‍್ಸಿ ಎಲ್ಲಾ ಪರೀಕ್ಷೆ ಮಾಡ್ಸಿದ್ವಿ. ಎದೆಯ ಎಕ್ಸರೇಯಲ್ಲಿ ಶ್ವಾಸಕೋಶಗಳಲ್ಲಿ ಸೋಂಕಿದೆ ಅಂತ ಹೇಳಿ, ಇನ್ನೂ ಕೆಲವು ಪರೀಕ್ಷೆಗಳನ್ನು ಮಾಡಿದ್ರು. ಮೊದಲು ತೆಗೆದ ಎಕ್ಸ್‌ರೇಯಲ್ಲಿ ಅವರ ಪುಪ್ಪುಸದಲ್ಲಿ ಒಂದು ಗುಳ್ಳೆ ಕಂಡುಬಂದಿತ್ತು. ಅದು ಕ್ಷಯರೋಗ ಅಂತಂದು, ಅದಕ್ಕೆ ಚಿಕಿತ್ಸೆ ನೀಡಿದರು. ಅಪ್ಪ ಸಾಕಷ್ಟು ಚೇತರಿಸಿಕೊಂಡ್ರು. ನರ್ಸಿಂಗ್‌ಹೋಂನಿಂದ ಮನೆಗೆ ಬಂದ್ರು.
ಆಗ ಅಪ್ಪ ನಮ್ಮನೇಲಿ ಬಂದು ಇರ‍್ತೀನಿ ಅಂತ ಹೇಳಿ ನಮ್ಮೆಲರನ್ನೂ ಅಚ್ಚರಿಗೊಳಿಸಿದ್ರು. ಹಿಂದೇನೂ ಅಪ್ಪ ನಮ್ಮನೆಗೆ ಎಷ್ಟೋ ಸಾರಿ ಬಂದಿದ್ರು. ಆದ್ರೆ ಎಂದೂ ನಮ್ಮನೇಲಿ ಉಳಿದಿರಲಿಲ್ಲ. ಇಂತಹ ದಿಢೀರ್ ಬದಲಾವಣೆಗೇನು ಕಾರಣ ಅನ್ನೋದು ನನಗೆ ಇಂದಿಗೂ ತಿಳೀದು. ಅದೇನೇ ಇರಲಿ, ನನಗಂತೂ ತುಂಬಾ ಖುಷಿಯಾಗಿತ್ತು. ನನ್ನ ಹೆಂಡತಿ ಮತ್ತು ನನ್ನ ಮೂರು ಹೆಣ್ಣುಮಕ್ಕಳ ಖುಷಿಯಂತೂ ಹೇಳತೀರದು. ನನ್ನ ಹೆಂಡತಿಯ ಅಡುಗೆ ಅವರಿಗೆ ತುಂಬಾ ಇಷ್ಟ. ಸದಾ ಅದನ್ನು ಹೊಗಳ್ತಿದ್ರು. ಅಪ್ಪಂಗೆ ಬೇಕಾದ ಎಲ್ಲಾ ವ್ಯವಸ್ಥೇನೂ ಮಾಡಿದ್ವಿ. ಮೊಮ್ಮಕ್ಕಳು ಮತ್ತು ಸೊಸೆ ಜೊತೆ ಅಪ್ಪ ಸಂತೋಷವಾಗಿ ಕಾಲ ಕಳೀತಿದ್ರು. ಅವರ ಆತ್ಮೀಯ ಗೆಳೆಯರು ಅವರನ್ನು ನೋಡಕ್ಕೆ ಬರ‍್ತಿದ್ರು. ಅವರ ಅದ್ಭುತ ಸಾಂಗತ್ಯದಲ್ಲಿ ದಿನಗಳು ಸರಿದದ್ದೇ ತಿಳೀಲಿಲ್ಲ. ಅಪ್ಪ ನಮ್ಮನೆ, ನಮ್ಮ ವಂಶ, ನಮ್ಮ ಪೂರ್ವಿಕರು, ಹೀಗೆ ಎಲ್ಲಾ ವಿಷಯ ನನ್ನ ಹೆಂಡತಿ ಹತ್ರ ವಿವರವಾಗಿ ಹೇಳ್ತಿದ್ರು. ಮಾವ-ಸೊಸೆ, ತಾತ-ಮೊಮ್ಮಕ್ಕಳ ಆತ್ಮೀಯತೆಯ ಈ ಮಹಾಪೂರದಲ್ಲಿ ಕೆಲವೊಮ್ಮೆ ನಮ್ಮನೇಲಿ ನಾನೇ ಹೊರಗಿನವನು ಅಂತ ಅನ್ನಿಸ್ತಿತ್ತು! ಅಪ್ಪ ನಮ್ಮ ಜೊತೆ ತುಂಬಾ ಖುಷಿಯಾಗಿದ್ರು. ಅವರ ಪೂಜೆ, ಮತ್ತೆ ಇತರ ನಿತ್ಯಕರ್ಮಗಳು ನಿರಾತಂಕವಾಗಿ ನಡೆಯೋ ಹಾಗೆ ನೋಡಿಕೊಂಡ್ವಿ. ಇಪ್ಪತ್ತು ದಿನ ಆದ ಮೇಲೆ ಅಪ್ಪ ತಮ್ಮ ಮನೆಗೆ ಹೋಗ್ತೀನಿ ಅಂತಂದ್ರು. ಅವರು ನಮ್ಮ ಜೊತೆಗಿದ್ದ ಆ ದಿನಗಳು ಮರೆಯಲಾಗದ ಅದ್ಭುತ, ಸೊಗಸಿನ ದಿನಗಳು.
ಕೆಲವು ದಿನಗಳ ನಂತರ ಅಪ್ಪ ಎದೆನೋವು ಅಂದ್ರು. ಮತ್ತೆ ನರ್ಸಿಂಗ್‌ಹೋಂಗೆ ಹೋದ್ವಿ. ಇನ್ನೂ ಹೆಚ್ಚಿನ ಪರೀಕ್ಷೆಗಳನ್ನು ಮಾಡಿ ಎಕ್ಸ್‌ರೇ ತೆಗೆದರು. ಆಗಸ್ಟ್ ಮೊದಲ ವಾರದಲ್ಲಿ ಅವರಿಗೆ ಪುಪ್ಪುಸದ ಕ್ಯಾನ್ಸರ್ ಅಂತ ಡಾಕ್ಟರ್ ಹೇಳಿದಾಗ ದಿಕ್ಕೆಟ್ಟ ನಮಗೆ ನಿಂತ ನೆಲ ಬಿರಿದಿತ್ತು. ೫೦ ವರ್ಷಗಳಿಂದ ಅಪ್ಪನ ಗೆಳೆತನದಲ್ಲಿ ದಿವ್ಯವಾದ ಸಂಗೀತಾನ ಸೃಷ್ಟಿಸುತ್ತಾ, ಅವರು ಹೇಳಿದಂತೆ ಏರಿಳೀತಾ, ಲಕ್ಷಾಂತರ ರಸಿಕರನ್ನು ತೃಪ್ತಿಪಡಿಸಿದ್ದ ಆ ಪುಪ್ಪುಸ ಅಪ್ಪನೊಂದಿಗೆ ಮುನಿದಿತ್ತು.
ನಿಮಗೆ ಕ್ಯಾನ್ಸರ್ ಆಗಿದೆ ಅಂತ ಹೇಳೋ ಧೈರ್ಯ ನಮಗ್ಯಾರಿಗೂ ಇರಲಿಲ್ಲ. ಈ ವಯಸ್ಸಿನಲ್ಲಿ ಅವರಿಗೆ ಕಿಮೋಥೆರೆಪಿ ಬೇಡ ಅಂದ್ರು ಡಾಕ್ಟರ್. ಅವರಿಗೆ ವಿಷಯ ಹೇಳೋದು ಒಳ್ಳೇದು, ಮುಚ್ಚಿಡೋದು ಸರಿಯಲ್ಲ ಅಂತ ನನಗನ್ನಿಸಿತ್ತು. ಇದನ್ನೂ ಅವರು ಸ್ಥಿತಪ್ರಜ್ಞತೆಯಿಂದಲೇ ಸ್ವೀಕರಿಸ್ತಾರೆ ಅನ್ನೋದು ನನ್ನ ಆಳದ ನಂಬಿಕೆಯಾಗಿತ್ತು. ಆದರೆ ನನ್ನ ಸಹೋದರಿಯರು, ಸಂಬಂಧಿಕರು, ಅವರ ಆತ್ಮೀಯ ಗೆಳೆಯರು ಅವರಿಗೆ ವಿಷಯ ಹೇಳೋದು ಬೇಡ ಅಂತ ನನ್ನನ್ನು ತಡೆದರು.
ಅವರು ಸಾಯುವ ಕೆಲವು ದಿನಗಳ ಮೊದಲು ಮುರುಘಾಮಠದಲ್ಲಿ ತಮ್ಮ ವಾರ್ಷಿಕ ಸಂಗೀತಸೇವೆ ಮಾಡಿಯೇ ತೀರುತ್ತೇನೆ ಅಂತ ಹಟ ಮಾಡಿದ್ರು. ನಾವೆಲ್ಲರೂ ಕಂಗಾಲಾದೆವು. ನಮ್ಮ ಕುಟುಂಬದ ವೈದ್ಯರೂ, ಆತ್ಮೀಯ ಮಿತ್ರರೂ ಆಗಿದ್ದ ಡಾ ದೇಶಪಾಂಡೆ, ಡಾ. ವಾಗ್ಲೆ ಮತ್ತು ಡಾ. ಧೂಳಪ್ಪನವರ್ ತುರ್ತುಚಿಕಿತ್ಸಾ ಉಪಕರಣಗಳನ್ನು ಮಠಕ್ಕೇ ತಂದುಬಿಡೋದು ಅಂತ ತೀರ್ಮಾನಿಸಿದರು. ೧೯೯೨ರ ಆಗಸ್ಟ್ ೧೭ರಂದು ತಮ್ಮ ಆಧ್ಯಾತ್ಮಿಕ ಗುರುಗಳ ಮುಂದೆ ಹಾಡಿದ್ದೇ ಅವರ ಕೊನೆಯ ಕಾರ್ಯಕ್ರಮ. ಅಂದು ಅವರು ಹೇಮನಟ್ ರಾಗದಲ್ಲಿ ತುಂ ಬಿನ್ ಮೈ ಕೋ ಕಲನ ಪರತ್ ಹೇ ಬೀತ್ ಗಯಿ ಹಾಡಿದರು. ಈ ತನಕ ನಾವ್ಯಾರೂ ಕೇಳಿರದಿದ್ದ ವಚನವನ್ನು ಹಾಡಿ ತಮ್ಮ ಸೇವೆಯನ್ನು ಮುಗಿಸಿದರು. ಕೊನೆಗೂ ತಮ್ಮ ಹಟ ಸಾಧಿಸಿಕೊಂಡರು. ಆ ವಚನ ಯಾವುದೆಂದು ನನಗೆ ಇವತ್ತಿಗೂ ತಿಳಿಯದು. ಆ ದಿನದ ಕಾರ್ಯಕ್ರಮವನ್ನು ಧ್ವನಿಮುದ್ರಿಸಿದ್ದಾರೆ. ಆದರೆ ನನಗೇಕೋ ಅದನ್ನು ಕೇಳೋ ಮನಸ್ಸಿಲ್ಲ. ಆ ದಿನದ ನೆನಪು ನನ್ನೆದೆಯನ್ನ ಹಿಂಡುತ್ತೆ. ಸೆಪ್ಟೆಂಬರ್ ೧೨ರ ಬೆಳಗಿನ ಜಾವ ಮೂರು ಗಂಟೆ ಇರಬೇಕೇನೋ. ನಾವೆಲ್ಲರೂ ಸರದಿಯ ಮೇಲೆ ಅಪ್ಪನ್ನ ನೋಡಿಕೊಳ್ತಾ ಇದ್ವಿ. ನಾನು ಆಗಷ್ಟೇ ಮಲಗೋಕ್ಕೆ ಬಂದಿದ್ದೆ. ನನ್ನ ಚಿಕ್ಕಪ್ಪ ಅವರನ್ನು ನೋಡಿಕೊಳ್ತಿದ್ರು. ಅಪ್ಪ ಕೊನೆಯುಸಿರೆಳೆಯುತ್ತಿದ್ದಾರೆ ಅಂತ ಬಂದು ನನ್ನನ್ನು ಎಬ್ಬಿಸಿದರು. ನಾನು ಅಪ್ಪನ ಬಳಿ ಓಡಿ, ಅವರ ತಲೆಯನ್ನು ನನ್ನ ತೊಡೆಯ ಮೇಲೆ ಇಟ್ಟುಕೊಂಡು ತಾನ್‌ಪುರವನ್ನು ನುಡಿಸಲಾರಂಭಿಸಿದೆ. ದುಃಖತಪ್ತರಾಗಿದ್ದ ತನ್ನ ಸಹೋದರಿಯರನ್ನು ಅಳಬೇಡಿ ಎಂದು ಗದರುತ್ತಿದ್ದೆ. ಪಾಪ ಅವರೆಲ್ಲರೂ ನನ್ನೊಂದಿಗೆ ಸಹಕರಿಸಿದರು. ಹಲವು ದಶಕಗಳು ಅವರ ಆಪ್ತಸಖನಾಗಿದ್ದ ಆ ತಾನ್‌ಪುರದ ನಾದವನ್ನು ಕೇಳಿಸಿಕೊಳ್ಳುತ್ತಿದ್ದಾರೆಂಬ ಅಸ್ಪಷ್ಟ ಸೂಚನೆಗಳು ಕಂಡುಬರುತ್ತಿತ್ತು. ಅದನ್ನು ಆಲಿಸುತ್ತಾ, ಶಾಂತವಾಗಿ ನಾದದಲ್ಲಿ ಲೀನವಾದರು. ಅವರ ರಸಯಾತ್ರೆ ಮುಗಿದಿತ್ತು.

Recommended Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.