ನನ್ನ ಸಿನಿಮಾದಲ್ಲಿ ಸಂಗೀತ – ಸತ್ಯಜಿತ್ ರೇ

 In CINEMA, RAGAMALA

 

ಸತ್ಯಜಿತ್ ರೇ ಅವರಿಗೆ ಹಲವಾರು ಕ್ಷೇತ್ರಗಳಲ್ಲಿ ಪ್ರತಿಭೆ ಇತ್ತು. ಸಂಗೀತ ಕೂಡ ಅವರು ತುಂಬಾ ಇಷ್ಟಪಡುತ್ತಿದ್ದ ಒಂದು ಕ್ಷೇತ್ರ. ಅವರ ಸಂಗೀತ ವನ್ನು ಕುರಿತಂತೆ ಜಗತ್ತಿನ ಪ್ರಖ್ಯಾತ ಡಾಕ್ಯು ಮೆಂಟರಿ ಸಿನಿಮಾ ನಿರ್ದೇಶಕ ಪಿಯರೆ ಅಂಡ್ರೆ ಬೌಟಾಂಗ್ ಸಂದರ್ಶನ ಮಾಡಿದ್ದಾರೆ. ಒಂದು ಡಾಕ್ಯುಮೆಂಟರಿ ಸಿನಿಮಾ ಕೂಡ ಬಂದಿದೆ. ಹೀಗೆ ಹಲವು ಕಡೆಯಿಂದ ಅವರ ನಿಲುವನ್ನು ಸಂಗ್ರಹಿಸಿ ಅವರ ಮಾತುಗಳಲ್ಲೇ ಇಲ್ಲಿ ಕೊಡಲಾಗಿದೆ.

ಬಾಲ್ಯದ ಸಂಗೀತ ಪ್ರಭಾವಗಳು

ನಾನು ಸಂಗೀತದ ಕುಟುಂಬದಲ್ಲಿ ಜನಿಸಿದೆ. ನನ್ನ ತಾತ ಉಪೇಂದ್ರ ಕಿಶೋರ್ ಸಂಯೋಜಕ ರಾಗಿದ್ದರು. ಅವರು ವಯೋಲಿನ್, ಕೊಳಲು ಪಕಾವಜ್‌ಗಳನ್ನು ನುಡಿಸುತ್ತಿದ್ದರು. ನಮ್ಮ ಅಮ್ಮನ ತಾತ ಕಾಳಿ ನಾರಾಯಣ ಗುಪ್ತೋ ಅದ್ಭುತವಾದ ಕಂಪೋಸರ್ ಆಗಿದ್ದರು. ನಮ್ಮ ಅಮ್ಮನ ಮನೆಯವರಿಗೆ ಸಂಗೀತ ರಕ್ತದಲ್ಲೇ ಇತ್ತು. ನಮ್ಮ ಅಮ್ಮ, ಅವರ ಅಜ್ಜಿ, ಎಲ್ಲರೂ ಹಾಡುತ್ತಿದ್ದರು. ನಾನು ಸಂಗೀತದ ವಾತಾವರಣದಲ್ಲೇ ಬೆಳೆದೆ. ಹುಟ್ಟಿನಿಂದ ರಬೀಂದ್ರ ಸಂಗೀತ, ಬ್ರಹ್ಮೊ ಸಂಗೀತ ಇವುಗಳನ್ನು ಕೇಳಿಕೊಂಡೇ ಬೆಳೆದೆ. ನನಗೆ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತ ತುಂಬಾ ಚಿಕ್ಕ ವಯಸ್ಸಿನಿಂದಲೇ ಪರಿಚಿತ. ನಮ್ಮ ಮನೆಯಲ್ಲಿ ಕೆಲವು ಧ್ವನಿಮುದ್ರಣಗಳಿದ್ದವು. ಅವು ಎಲ್ಲಿಂದ ಬಂತು ಅನ್ನುವುದು ನನಗೆ ಗೊತ್ತಿಲ್ಲ. ನಾನು ಚಿಕ್ಕವನಿದ್ದಾಗಲೇ ಬೆಥೋವನ್ ಮತ್ತಿತರ ಕೆಲವು ಪಾಶ್ಚಾತ್ಯ ಸಂಗೀತಗಾರರ ಕೃತಿಗಳನ್ನು ಕೇಳಿದ್ದೆ. ನನಗೆ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ನೀಡಿದ್ದ ಗ್ರಾಮೋಫೋನ್ ತಟ್ಟೆಗಳೆಲ್ಲಾ ಬಹುತೇಕ ಪಾಶ್ಚಾತ್ಯ ಸಂಗಿತಗಾರರದ್ದೇ ಆಗಿತ್ತು. ಹಾಗಾಗಿ ಪಾಶ್ಚಾತ್ಯ ಸಂಗೀತ ನನಗೆ ಎಂದೂ ಅಪರಿಚಿತವಾಗಿರಲಿಲ್ಲ. ನಾನು ಬಂಗಾಳಿ ಸಂಗೀತದ ಜೊತೆಜೊತೆಗೆ ಒಂದಲ್ಲ ಒಂದು ಬಗೆಯ ಪಾಶ್ವಾತ್ಯ ಸಂಗೀತ ವನ್ನೂ ಕೇಳುತ್ತಿದ್ದೆ. ನನ್ನ ಶಾಲೆಯ ಕೊನೆಯ ದಿನಗಳಲ್ಲಿ ಸಂಗೀತ ಕೇಳುವುದು ನನ್ನ ಗಂಭೀರ ಆಸಕ್ತಿಯಾಗಿಬಿಟ್ಟಿತು. ಆಗ ನನಗೆ ೧೩-೧೪ ವರ್ಷ ಇರಬಹುದು. ನನಗೊಬ್ಬ ಸ್ನೇಹಿತನಿದ್ದ. ಅವನು ಸಾಕಷ್ಟು ಅನುಕೂಲಸ್ಥ ಕುಟುಂಬದವನು. ಅವನಿಗೂ ಪಾಶ್ಚಾತ್ಯ ಸಂಗೀತದಲ್ಲಿ ಆಸಕ್ತಿಯಿತ್ತು. ಧ್ವನಿಮುದ್ರಣಗಳನ್ನು ಕೊಂಡುಕೊಳ್ಳುತ್ತಿದ್ದ. ಬೆಥೋ ವನ್, ಮೊಜಾರ್ಟ್, ಬಾಕ್ ಅವರೆಲ್ಲರ ಸಂಗೀತ ವನ್ನು ನಾನು ಕೇಳಿದ್ದು ಅವನ ಮನೆಯಲ್ಲಿ. ಹಾಗಾಗಿ ಸಂಗೀತಕ್ಕೆ ನಾನು ಬಹಳ ಚಿಕ್ಕವಯಸ್ಸಿನಲ್ಲೆ ತೆರೆದುಕೊಂಡೆ. ಬೇರೆ ಮಕ್ಕಳು ಪದ್ಯಗಳನ್ನು ಓದಿ ಬರೆದು ಮಾಡುತ್ತಿದ್ದಾಗ ನಾನು ಸಂಗೀತ ಕೇಳಲು ಪ್ರಾರಂಭಿಸಿದೆ. ಲೈಬ್ರರಿಯಲ್ಲಿ ಸಂಯೋಜ ಕರ ಬಗ್ಗೆ ಅವರ ಕೃತಿಗಳ ಬಗ್ಗೆ ಓದುತ್ತಿದ್ದೆ. ಪುಸ್ತಕಗಳನ್ನು ಕೊಂಡುಕೊಳ್ಳುವುದು ನನಗಾಗ ಸಾಧ್ಯವಿರಲಿಲ್ಲ.
ನಾನು ಅಪು ತ್ರಿವಳಿ ಚಿತ್ರದ ಸಂದರ್ಭದಲ್ಲಿ ರವಿಶಂಕರ್ ಅವರ ಜೊತೆಯಲ್ಲಿ ಕೆಲಸಮಾಡಿದೆ. ಆಮೇಲೆ ಜಲಸಾ ಘರ್‌ನಲ್ಲಿ ವಿಲಾಯತ್ ಖಾನ್ ಜೊತೆ, ದೇವಿ ಸಿನಿಮಾದಲ್ಲಿ ಅಲಿ ಅಕ್ಬರ್‌ಖಾನ್ ಸಾಹೇಬರ ಜೊತೆಯಲ್ಲಿ ಕೆಲಸ ಮಾಡಿದ್ದೇನೆ. ಅವರೆಲ್ಲಾ ಬಿಡುವಿಲ್ಲದಂತಹ ಅಂತರರಾಷ್ಟೀಯ ಕಂಪೋಸರ್‌ಗಳು ಆಗಿಬಿಟ್ಟರು. ನನಗೆ ಬೇಕಾದಾಗ ಅವರು ಸಿಗುತ್ತಿರಲಿಲ್ಲ. ಆ ಸಮಯದಲ್ಲಿ ನನಗೆ ನನ್ನದೇ ಆದ ಸಂಗೀತಾತ್ಮಕ ಚಿಂತನೆಗಳು ಬರುತ್ತಿತ್ತು. ವೃತ್ತಿಪರ ಸಂಯೋಜಕರಿಗೆ ಹೀಗೆ ಮಾಡಿ ಎಂದು ಹೇಳುವುದು ನನಗೆ ಸಾಧ್ಯ ಇರಲಿಲ್ಲ. ಹಾಗಾಗಿ ತೀನ್ ಕನ್ಯಾ ಸಿನಿಮಾದಲ್ಲಿ ನಾನೇ ಸಂಗೀತ ಸಂಯೋಜನೆಗೆ ಕೈಹಾಕಿದೆ. ಪ್ರಾರಂಭದಲ್ಲಿ ತುಂಬಾ ಕಷ್ಟವಾಯಿತು. ಕ್ರಮೇಣ ಅದರಲ್ಲಿ ಒಂದಿಷ್ಟು ಪರಿಣತಿ ಸಾಧ್ಯವಾಯಿತು.
ಒಬ್ಬ ನಿರ್ದೇಶಕನಿಗೆ ಸಿನಿಮಾದಲ್ಲಿ ಸಂಗೀತ ಎಲ್ಲಿ ಬೇಕು ಎಂಬುದು ತಿಳಿದಿರಬೇಕು. ಅದಕ್ಕೆ ನಿರ್ದೇಶಕರಿಗೆ ಸಂಗೀತದ ಬಗ್ಗೆ ತಿಳಿವಳಿಕೆ ಇರ ಬೇಕು. ಆದರೆ ಇಂತಹ ಆದರ್ಶ ಸ್ಥಿತಿ ಯಾವಾಗ ಲೂ ಸಾಧ್ಯವಿಲ್ಲ. ಕೆಲವು ನಿರ್ದೇಶಕರಿಗೆ ಸಂಗೀತದ ಬಗ್ಗೆ ತಿಳಿವಳಿಕೆ ಇರುವುದಿಲ್ಲ. ಅಂತಹ ಸಂದರ್ಭ ದಲ್ಲಿ ಅವರು ಸಂಪೂರ್ಣವಾಗಿ ವೃತ್ತಿಪರ ಸಂಯೋಜಕರನ್ನೇ ಅವಲಂಬಿಸಬೇಕಾಗುತ್ತದೆ. ವೃತ್ತಿಪರ ಸಂಯೋಜಕ ಸಮರ್ಥನಾಗಿರಬೇಕು. ನನಗೆ ಸಂಗೀತ ತಿಳಿದಿರುವುದರಿಂದ ಹಾಗೂ ನನ್ನ ಮೊದಲ ಒಲವು ಸಂಗೀತವೇ ಆಗಿದ್ದರಿಂದ ಸಂಗೀತವನ್ನು ಎಲ್ಲಿ ಬಳಸಬೇಕು ಎಂಬುದರ ಬಗ್ಗೆ ನನ್ನದೇ ಆದ ನಿರ್ದಿಷ್ಟವಾದ ಚಿಂತನೆಗಳಿವೆ.
ಸಿನಿಮಾಕ್ಕೆ ಧ್ವನಿ ಬಂದ ಪ್ರಾರಂಭದಲ್ಲ್ಲಿ ಸಂಗೀತವನ್ನು ಬಳಸುತ್ತಿರಲಿಲ್ಲ. ನೀವು ೧೯೩೦ರ ಆರಂಭದ ಸಿನಿಮಾಗಳನ್ನು ನೋಡಿದರೆ ಅಲ್ಲಿ ಸಂಗೀತ ಇರಲಿಲ್ಲ. ಕ್ರಮೇಣ ಹಿನ್ನೆಲೆ ಸಂಗೀತ ಪ್ರಾರಂಭವಾಯಿತು. ವೃತ್ತಿಪರ ಸಂಯೋಜಕರು ಹುಟ್ಟಿಕೊಂಡರು. ಸಿನಿಮಾ ಎನ್ನುವುದು ಸಂಪೂರ್ಣವಾಗಿ ಸಂಗೀತದಲ್ಲೇ ಮುಳುಗಿ ಹೋಗಿದ್ದ ಒಂದು ಹಂತವೂ ಇತ್ತು. ನಂತರ ಒಂದು ಸಮತೋಲನ ಸಾಧ್ಯವಾಯಿತು. ಅವಶ್ಯಕ ಎನಿಸಿದಾಗಷ್ಟೇ ಸಂಗೀತವನ್ನು ಬಳಸಲಾಯಿತು. ಆದರೂ ಒಂದು ರೀತಿಯ ಸಂಪ್ರದಾಯ ಪ್ರಾರಂಭವಾಯಿತು. ದುಃಖದ ಸಂದರ್ಭದಲ್ಲಿ ಒಂದು ರೀತಿಯ ಸಂಗೀತ, ಸಂತೋಷದ ಹೊತ್ತಿನಲ್ಲಿ ಒಂದು ರೀತಿಯ ಸಂಗೀತ, ಸಸ್ಪೆನ್ಸ್ ಇದ್ದಾಗ ಇನ್ನೊಂದು ರೀತಿಯ ಸಂಗೀತ ಬಳಸು ವುದು ಸಿದ್ಧಸೂತ್ರವಾಗಿಬಿಟ್ಟಿತು. ಕೆಲವೊಮ್ಮೆ ನಿರ್ದೇಶಕರುಗಳು ಸೋಮಾರಿಗಳಾಗಿ ಈ ಸೂತ್ರಕ್ಕೆ ಕಟ್ಟುಬಿದ್ದರು. ಹೊಸದಾಗಿ ಯೋಚಿಸುವುದನ್ನೇ ಬಿಟ್ಟರು. ನಿರ್ದೇಶಕರು ಹಳಸಲಾದ ಸಂಪ್ರದಾಯ ಗಳನ್ನು ಕೈಬಿಟ್ಟು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರಬೇಕು.
ನಾನು ಸಂಗೀತವನ್ನು ಕಡಿಮೆ ಬಳಸುತ್ತೇನೆ. ಪಶ್ಚಿಮದಲ್ಲಿ ಬರ್ಗಮನ್ ಅಂತಹ ಕೆಲವು ನಿರ್ದೇಶಕರು ಸಿನಿಮಾದಲ್ಲಿ ಸಂಗೀತವನ್ನು ಬಹುತೇಕ ಬಳಸುವುದೇ ಇಲ್ಲ. ನಾವು ಈಗಲೂ ಸಿನಿಮಾದಲ್ಲಿ ಸಂಗೀತವನ್ನು ಬಳಸುತ್ತಿದ್ದೇವೆ. ಇದನ್ನು ಹೆಚ್ಚಾಗಿ ಜನರಿಗಾಗಿ ಬಳಸುತ್ತೇವೆ. ಸಿನಿಮಾದಲ್ಲಿ ಮೂಡುಗಳು ಬದಲಾದರೆ ಪ್ರೇಕ್ಷಕ ರಿಗೆ ಅರ್ಥವಾಗುವುದಿಲ್ಲ ಅನ್ನುವ ಗಾಬರಿ ನಮಗೆ. ಹಾಗಾಗಿ ಬದಲಾದ ಮೂಡುಗಳಿಗೆ ಹಿನ್ನೆಲೆ ಸಂಗೀತ ಬಳಸಿ ಒತ್ತುಕೊಡುತ್ತೇವೆ. ಆದರೂ ನಾನು ಸಂಗೀತವನ್ನು ಆದಷ್ಟು ಕಡಿಮೆ, ಮತ್ತು ತೀರಾ ಅವಶ್ಯವಿದ್ದಾಗ ಮಾತ್ರ ಬಳಸುತ್ತೇನೆ. ನಿಜವಾಗಿ ಹೇಳಬೇಕೆಂದರೆ, ಸಂಗೀತವೇ ಇಲ್ಲದೆ ಸಿನಿಮಾ ಮಾಡುವುದಕ್ಕೆ ಸಾಧ್ಯವಾಗಬೇಕು.
ಸಿನಿಮಾದಲ್ಲಿ ಯಾವ ಸಂಗೀತ ಬಳಸುತ್ತೇವೆ ಅನ್ನೋದನ್ನು ಸಿನಿಮಾ ನಿರ್ಧರಿಸುತ್ತದೆ. ನಿಜ, ನಾನು ಐರೋಪ್ಯ ಹಾಗೂ ಭಾರತೀಯ ಸಂಗೀತ ವನ್ನು ಮಿಶ್ರ ಮಾಡಿದ್ದೇನೆ. ಯಾಕೆಂದರೆ ನಮ್ಮದು ಮಿಶ್ರಿತ ಜೀವನ ಶೈಲಿ. ನಾವು ಐರೋಪ್ಯ ಮಾದರಿಯ ಮನೆಯಲ್ಲಿ ವಾಸಿಸುತ್ತಿದ್ದೇವೆ. ಮನೆಯ ತುಂಬಾ ಇಂಗ್ಲಿಷ್ ಪುಸ್ತಕವನ್ನು ತುಂಬಿಕೊಂಡಿರುತ್ತೇವೆ. ಹೊರಗೆ ಹೋಗುವಾಗ ಐರೋಪ್ಯ ಮಾದರಿಯ ಬಟ್ಟೆಗಳನ್ನು ಧರಿಸುತ್ತೇವೆ. ಶುದ್ಧ ಭಾರತೀಯತೆ ಅನ್ನುವುದು ಉಳಿದಿಲ್ಲ. ವಸಾಹತು ಆಳ್ವಿಕೆಯಿಂದಲೋ ಅಥವಾ ಮತ್ತೆ ಇನ್ಯಾವುದೋ ಕಾರಣಕ್ಕೆ ನಮ್ಮದು ಇಂದು ಮಿಶ್ರ ಜೀವನಶೈಲಿಯಾಗಿಬಿಟ್ಟಿದೆ. ಹಾಗಾಗಿ ಇಂದು ನಾವು ಸಮಕಾಲೀನ ವಸ್ತುವುಳ್ಳ ಹಾಗೂ ನಗರದ ಸಮಕಾಲೀನ ಚಿತ್ರಕ್ಕೆ ಶುದ್ಧ ಶಾಸ್ತ್ರೀಯ ಸಂಗೀತ ಬಳಸಿದರೆ ಅದು ಸರಿಹೋಗುವುದಿಲ್ಲ. ಹಾಗಾಗಿ ನಾನು ಸಾಮಾನ್ಯವಾಗಿ ಎರಡು ಶೈಲಿಗಳನ್ನೂ ಮಿಶ್ರ ಮಾಡುತ್ತೇನೆ. ಪಾಶ್ಚಿಮಾತ್ಯ ಪ್ರಭಾವಕ್ಕೆ ಅಷ್ಟಾಗಿ ಒಳಗಾಗದ, ಶುದ್ಧ ಬದುಕಿನ, ಹಳ್ಳಿಗೆ ಸಂಬಂಧಿಸಿದ ಕಥೆಯಾಗಿದ್ದರೆ ಮಾತ್ರ ಜಾನಪದ ಮಟ್ಟುಗಳನ್ನು, ಭಾರತೀಯ ವಾದ್ಯಗಳನ್ನು, ಭಾರತೀಯ ಜಾನಪದ ವಾದ್ಯಗಳನ್ನು ಬಳಸಿ ಕೊಳ್ಳುತ್ತೇನೆ. ಅಲ್ಲಿಗೆ ಅದು ಹೊಂದಿಕೊಳ್ಳುತ್ತದೆ. ಉಳಿದಂತೆ ನಾನು ಹೆಚ್ಚಾಗಿ ಭಾರತೀಯ ಹಾಗೂ ಪಾಶ್ಚಿಮಾತ್ಯ ಶೈಲಿಗಳನ್ನು ಮಿಶ್ರಮಾಡಿದ್ದೇನೆ. ಸಮಕಾಲೀನ ಸನ್ನಿವೇಶದಲ್ಲಿ ನೀವು ಸಂಗೀತವನ್ನು ಬಳಸುವುದಾದರೆ ಅದು ಮಿಶ್ರಸಂಗೀತ ಆಗಿರುತ್ತದೆ. ನಾನು ಪಟ್ಟಣದ, ಸಮಕಾಲೀನ ವಸ್ತುವಿರುವ ಸಿನಿಮಾಗಳಲ್ಲಿ ಆದಷ್ಟು ಕಡಿಮೆ ಸಂಗೀತವನ್ನು ಬಳಸುತ್ತೇನೆ. ವಾಸ್ತವದ ಬದುಕಿನಲ್ಲಿ ನಮ್ಮ ಸುತ್ತಮುತ್ತ ಇರುವ ಶಬ್ದವನ್ನೇ ಸೃಜನಶೀಲವಾಗಿ ಸಂಗೀತದ ಉದ್ದೇಶವನ್ನು ಪೂರೈಸುವಂತೆ ಬಳಸುವುದಕ್ಕೆ ಸಾಧ್ಯ.
ಸಿನಿಮಾ ಹಾಗೂ ಸಂಗೀತ ಎರಡೂ ಕಾಲದಲ್ಲಿ ನಡೆಯುವಂಥದ್ದು. ಇವೆರಡೂ ಕಾಲದಲ್ಲಿ ಅಸ್ತಿತ್ವದಲ್ಲಿರುವ ಕಲಾ ಪ್ರಕಾರಗಳು. ನೀವು ೯೦ ನಿಮಿಷದ ಸಿನಿಮಾವನ್ನು ೯೦ ನಿಮಿಷ ನೋಡಬೇಕು. ಹಾಗೆಯೇ ಸಂಗೀತವೂ ಕೂಡ. ಹಾಗೆ ಅದು ಆ ಅವಧಿಯನ್ನು ಪೂರೈಸಿದ ಮೇಲಷ್ಟೇ ಅದರ ಸಂಪೂರ್ಣ ಹಂದರ ಮೈತಳೆದು ನಿಮಗೊಂದು ಸಮಗ್ರ ಅನುಭವ ಆಗುವುದು. ಆ ದೃಷ್ಟಿಯಿಂದ ಸಂಗೀತ ಮತ್ತು ಸಿನಿಮಾ ಒಂದೇ ಬಗೆಯ ಕಲೆಗಳು. ಸಂಗೀತ ಹಾಗೂ ಸಿನಿಮಾ ಈ ಅರ್ಥದಲ್ಲಿ ಒಂದನ್ನೊಂದು ಹೆಚ್ಚು ಹೋಲುತ್ತವೆ. ಇದು ಬೇರೆ ಕಲೆಗಳಿಗೆ ಅನ್ವಯಿಸುವುದಿಲ್ಲ. ನೀವು ಒಂದು ಪೇಂಟಿಂಗ್ ಅನ್ನು ಹತ್ತು ನಿಮಿಷ ನೋಡಬಹುದು ಅಥವಾ ಒಂದು ಗಂಟೆಯೂ ನೋಡಬಹುದು. ವ್ಯತ್ಯಾಸ ವೇನೂ ಆಗುವುದಿಲ್ಲ. ನೀವು ಒಂದು ಪುಸ್ತಕವನ್ನು ಓದುವಾಗ ಹತ್ತು ಪುಟ ಓದಿ ನಿಲ್ಲಿಸಿಬಿಡಬಹುದು, ನಂತರ ಮತ್ತೆ ಓದಬಹುದು. ಒಂದು ಪುಸ್ತಕವನ್ನು ಒಂದು ಸಲಕ್ಕೇ ಓದಿ ಮುಗಿಸಬೇಕು ಅಂತೇನು ಇಲ್ಲ.
ಸಿನಿಮಾ ಎನ್ನುವುದು ಒಂದು ಘಟನೆಗಳ ಸರಣಿಗೆ ಸಂಬಂಧಿಸಿರುತ್ತದೆ. ಅಂದರೆ ಒಂದು ಕಥೆ ಅಂತ ಅಂದುಕೊಳ್ಳಬಹುದು. ಹಾಗಾದರೆ ಐರೋಪ್ಯ ಸಂಗೀತದಲ್ಲೂ ಹೀಗೆ ಒಂದು ಸ್ಟೋರಿ ಅಂದರೆ ಘಟನೆಗಳ ಸರಣಿ ಇರುತ್ತದೆಯೇ ಎಂಬ ಪ್ರಶ್ನೆ ಮುಖ್ಯವಾಗುತ್ತದೆ. ೧೮ನೇ ಶತಮಾನದ ಐರೋಪ್ಯ ಸಂಗೀತ ಅಂದರೆ ಸುಮಾರಾಗಿ ಸೊನಾಟಾ ಹುಟ್ಟಿದ ಕಾಲ ಅಂತ ಅಂದುಕೊಳ್ಳಿ. ಆ ಸಂಗೀತಕ್ಕೆ ಈ ಮಾತು ಅನ್ವಯಿಸುತ್ತದೆ. ಬಿಥೋವನ್ ಸಂಗೀತವನ್ನು ನಾಟಕೀಕರಿಸಿದ/ದೃಶ್ಯೀಕರಿಸಿದ. ಮೊದಲು ಎಕ್ಸ್‌ಪೊಸಿಷನ್ (ಸಾಮಾನ್ಯವಾಗಿ ಮುಂದೆ ವೈವಿಧ್ಯ ಕೊಟ್ಟು ವಿಸ್ತರಿಸಲಾಗುವ ಪ್ರಧಾನ ಅಥವಾ ಪುನರಾವರ್ತಕ ಸ್ವರಸಂಗತಿ) ಬರುತ್ತದೆ, ಬೆಳೆವಣಿಗೆ (ಇಲ್ಲಿ ಪ್ರಧಾನ ಭಾಗವನ್ನು ಬಗೆ ಬಗೆಯಾದ ತಂತ್ರಗಳನ್ನು ಬಳಸಿಕೊಂಡು ವಿಸ್ತರಿಸಲಾಗುತ್ತದೆ), ಪುನರಾವರ್ತನ (ಸೊನಾಟಾದಲ್ಲಿ ಕೃತಿಯ ಪ್ರಧಾನ ಸ್ವರಸಂಗತಿಯ ಖಂಡವನ್ನು ಮತ್ತೆ ನುಡಿಸುವ ಭಾಗ), ಕೋಡ (ಕೃತಿಯ ಪ್ರಧಾನಭಾಗ ಮುಗಿದ ಮೇಲೂ ಅದರ ಮುಕ್ತಾಯವನ್ನು ಹೆಚ್ಚು ಆಹ್ಲಾದಕರ ಮಾಡಲು ಅದಕ್ಕೆ ಸೇರಿಸುವ ಭಾಗ) ಇವೆಲ್ಲಾ ಸೇರಿ ಒಂದು ನಾಟಕೀಯ ಚೌಕಟ್ಟು ಅದಕ್ಕೆ ಬಂದುಬಿಟ್ಟಿತ್ತು. ಬಿಥೋವನ್ನನ ಸಂಗೀತದಲ್ಲಿ ಪೌರುಷ, ಸ್ತ್ರೀತ್ವ, ಹೀಗೆ ಮಾನವ ಸ್ವಭಾವಕ್ಕೆ ಸಂಬಂಧಿಸಿದ ಹಲವು ಅಂಶಗಳು ಇವೆ. ತುಂಬಾ ಭಾವನಾತ್ಮಕ ಗುಣ ಅವನ ಸಂಗೀತಕ್ಕಿದೆ. ಬಿಥೋವನ್, ಮೊಜ಼ಾರ್ಟ್, ಹೈಡನ್, ಶೂಬರ್ಟ್, ಶೂಮನ್ ಮುಂತಾದ ವರೆಲ್ಲ ಇರುವ ಈ ಐವತ್ತು ಅಥವಾ ಅರವತ್ತು ವರ್ಷಗಳ ಅವಧಿಯ ಸಂಗೀತಕ್ಕೂ ಸಿನಿಮಾಕ್ಕೂ ತುಂಬಾ ಸಾಮ್ಯವಿದೆ. ನಂತರ ಇಪ್ಪತ್ತನೆಯ ಶತಮಾನದಲ್ಲಿ ಈ ವಿನ್ಯಾಸ ಸಂಪೂರ್ಣವಾಗಿ ಛಿದ್ರವಾಯಿತು. ಈಗ ಪೌರುಷ, ಸ್ತ್ರೀತ್ವ, ಬೆಳೆವಣಿಗೆ, ಪುನರಾ-ವರ್ತನೆ ಇವೆಲ್ಲವನ್ನು ನಾವು ಕಾಣು ವುದೇ ಇಲ್ಲ.
ಮಾಡ್ಯುಲೇಷನ್ ಅಂದರೆ ಏರಿಳಿತಗಳನ್ನು ಸಿನಿಮಾ ಹಾಗೂ ಸಂಗೀತ ಎರಡರಲ್ಲೂ ಕಾಣ ಬಹುದು. ನಮ್ಮದು ಸಿನಿಮಾವನ್ನು ಹೋಲು ವಂತಹ ಸಂಗೀತವಲ್ಲ ಅಂದರೆ ಅದರಲ್ಲಿ ನಾಟಕೀ ಯತೆ ಇಲ್ಲ. ಅದು ತುಂಬಾ ಹೆಚ್ಚು ಅಲಂಕಾರಿಕ ವೂ ಆಗಿದೆ. ಪ್ರಾರಂಭದಲ್ಲಿ ಲಯ ತುಂಬಾ ಸರಳವಾದ ಗತಿಯಲ್ಲಿ ಸಾಗುತ್ತದೆ. ನಿಧಾನವಾಗಿ ಆರಂಭವಾಗಿ ಕೊನೆಗೆ ವೇಗದಲ್ಲಿ ಮುಕ್ತಾಯ ವಾಗುತ್ತದೆ. ನಡುವಿನಲ್ಲಿ ಹೆಚ್ಚಿನ ಬದಲಾವಣೆ ಹಾಗೂ ಭಿನ್ನತೆಗಳು ಇರುವುದಿಲ್ಲ. ನಿಧಾನವಾಗಿ ಪ್ರಾರಂಭವಾಗಿ, ಅಮೇಲೆ ಸ್ವಲ್ಪ ವೇಗ ಹೆಚ್ಚುತ್ತದೆ, ಹಾಗೇ ಹೆಚ್ಚುತ್ತಲೇ ಹೋಗಿ, ಕೊನೆಗೆ ಅತಿವೇಗದಲ್ಲಿ ಮುಕ್ತಾಯವಾಗುತ್ತದೆ. ಅದರ ವಿನ್ಯಾಸ ದೇವ ಸ್ಥಾನದ ರಚನೆಯ ಹಾಗಿದೆ. ಮೊದಲು ಬಲವಾದ ಅಡಿಪಾಯ, ಅಮೇಲೆ ಕುಸುರಿ ಕೆಲಸ, ಅಲಂಕಾರಿ ಕೆ ಕೆಲಸ, ಕೊನೆಗೆ ಮೇಲೆ ಶಿಖರ. ಎಲ್ಲಾ ಕಡೆಯೂ ಸಂಗೀತ ಹೀಗೇ ಇರುತ್ತದೆ ಅಂತ ಅನ್ನಿಸುತ್ತದೆ. ನಾನದನ್ನು ಗಮನಿಸಿದ್ದೇನೆ.
ನನ್ನ ಮೊದಲ ಸಿನಿಮಾಗಳಲ್ಲಿ ಇದು ಹೆಚ್ಚಾಗಿ ಈ ರೀತಿ ಇರಲಿಲ್ಲ. ಅವುಗಳಲ್ಲಿ ರವಿಶಂಕರ್ ಅಂತಹವರು ಸಂಯೋಜನೆ ಮಾಡುತ್ತಿದ್ದರು. ಅವರೆಲ್ಲಾ ಸಂಗೀತ ಸಂಯೋಜಕರಲ್ಲ. ಪ್ರತಿಭಾ ವಂತ ಕಲಾವಿದರು. ಅವರಿಗೆ ನಾನು ನನಗೆ ಹದಿನೇಳು ಸೆಕೆಂಡಿನ ಸಂಗೀತ ಬೇಕು ಅಂದಾಗ ಅವರು ಕೈಚೆಲ್ಲಿ ನಾವು ಮೂರು ನಿಮಿಷ ನುಡಿಸುತ್ತೇವೆ, ನಿಮಗೆ ಬೇಕಾದ್ದನ್ನು ನೀವು ಆರಿಸಿಕೊಳ್ಳಿ ಅನ್ನುತ್ತಿದ್ದರು. ಹಾಗಾಗಿ ಹೆಚ್ಚಿನ ಕೆಲಸ ಸಂಕಲನದ ಕೊಠಡಿಯಲ್ಲಿ ನಡೆಯುತ್ತಿತ್ತು. ಕೆಲವೊಮ್ಮ ಕೆಲವು ಘಟನೆಗಳಿಗೆ ಸೂಕ್ತವಾದ ಸಂಗೀತ ನನಗೆ ಸಿಗುತ್ತಿರಲಿಲ್ಲ್ಲ. ಅಂತಹ ಸಂದರ್ಭ ದಲ್ಲಿ ಶೂಬರ್ಟ್ ಅವರ ಸಂಗೀತವನ್ನು ಹಿಮ್ಮುಖವಾಗಿ ಹಾಕುತ್ತಿದ್ದೆ, ಹಾಗೆಯೇ ಸಿಬೆಲಿ ಯಸ್ ಸಂಗೀತವನ್ನು ಬಳಸಿಕೊಂಡಿದ್ದೇನೆ. ಯಾರೂ ಅದನ್ನು ಗುರುತಿಸಿಲ್ಲ. ಆದರೆ ಅದು ಚೆನ್ನಾಗಿ ಸೇರಿಕೊಂಡಿದೆ. ನಾನು ಜಲಸಾ ಘರ್ ಸಿನಿಮಾದಲ್ಲಿ ಅದನ್ನು ಬಳಸಿಕೊಂಡಿದ್ದೇನೆ. ಅದು ಪರಿಣಾಮಕಾರಿಯಾಗಿ ಬಂದಿದೆ. ಜಲಸಾ ಘರ್ ಸಿನಿಮಾದಲ್ಲಿ ಅವನು ಓಹ್ ಕತ್ತಲಾಗುತ್ತಿದೆ, ದೀಪಗಳು ಆರಿಹೋಗುತ್ತಿವೆ ಅನ್ನುತ್ತಾನೆ. ಆಗ ಒಂದು ಸಂಗೀತ ಬರುತ್ತದೆ. ಅಲ್ಲಿ ಸಂಗೀತ ನಿರ್ದೇಶಕರು ಕೊಟ್ಟ ಸಂಗೀತ ನನಗೆ ಸಾಲುವು ದಿಲ್ಲ ಅನ್ನಿಸಿತು. ಅದಕ್ಕೆ ಬೇರೆ ರೀತಿಯ ಟೆಕ್ಚರ್ ಬೇಕು ಅನ್ನಿಸಿತು. ಸಿಬಿಲಿಯಸ್ ಧ್ವನಿಮುದ್ರಣ ಆ ಕೊರತೆಯನ್ನು ನೀಗಿಸಿತು. ಅಲ್ಲಿ ಎರಡನ್ನೂ ಸೇರಿಸಿದ್ದೇನೆ. ವಾಸ್ತವ ಅಂದರೆ ಅದರಿಂದ ತೊಂದರೆ ಆಗಲಿಲ್ಲ, ಅನುಕೂಲವಾಗಿದೆ. ನಾನು ಬೇರೆ ಸಂಗೀತಗಾರರ ಜೊತೆ ಕೆಲಸಮಾಡುವಾಗ ಎಲ್ಲಾ ರೀತಿಯ ಟ್ರಿಕ್ಸಗಳನ್ನು ಮಾಡುತ್ತಿದ್ದೆ. ಕೆಲವೊಮ್ಮೆ ಅವರಿಗೆ ನೋವಾಗುತ್ತಿತ್ತು, ಕೆಲವೊಮ್ಮ ಆಶ್ಚರ್ಯ ಪಡುತ್ತಿದ್ದರು. ಹಲವು ಬಾರಿ ಅವರ ಸಂಗೀತವನ್ನು ಮೊಟಕು ಮಾಡುತ್ತಿದ್ದೆ, ಕೆಲವೊಮ್ಮೆ ಲಂಬಿಸುತ್ತಿದ್ದೆ ಅಥವಾ ನಿಧಾನ ಮಾಡುತ್ತಿದ್ದೆ, ಅದರ ವೇಗವನ್ನು ಅರ್ಧಕ್ಕೆ ಇಳಿಸಿಬಿಡುತ್ತಿದ್ದೆ, ಇದರಿಂದ ಧೀರ್ಘವಾಗುತ್ತಿತ್ತು ಮತ್ತು ಅದಕ್ಕೆ ಒಂದು ಹೊಸ ನಾದಗುಣ (ಟಿಂಬರ್) ಸಿಗುತ್ತಿತ್ತು.
ನನಗೆ ಮೊದಲಿನಿಂದಲೂ ಸ್ವತಃ ನಾನೇ ಸ್ವತಂತ್ರವಾಗಿ ಸಂಗೀತ ಸಂಯೋಜನೆ ಮಾಡ ಬೇಕು ಎನ್ನುವ ಆಸೆಯಿತ್ತು. ಉಳಿದ ಸಂಯೋಜ ಕರಿಗೆ ಪ್ರತಿಯಾಗಿ ಮಾಡಬೇಕು ಅಂತ ಅಲ್ಲ. ಅದು ನನ್ನ ಉದ್ದೇಶವೂ ಅಲ್ಲ. ನಾನು ಕೇವಲ ನನ್ನ ಸಂತೋಷಕ್ಕಾಗಿ ಕೆಲಸ ಮಾಡುತ್ತೇನೆ. ನನಗೆ ಸಂಗೀತ ಸಂಯೋಜನೆ ಇಷ್ಟ ಅದಕ್ಕಾಗಿ ನಾನು ಅದನ್ನು ಮಾಡುತ್ತೇನೆ. ನನಗೆ ಸಂಗೀತ, ಹಾಡು, ಹಿನ್ನಲೆ ಸಂಗೀತ ಇವೆಲ್ಲಾ ಕಂಪೋಸ್ ಮಾಡು ವುದು ಇಷ್ಟದ ಕೆಲಸ. ನಾನು ಒಂದಿಬ್ಬರು ಬೇರೆ ನಿರ್ದೇಶಕರಿಗೂ ಕೆಲಸ ಮಾಡಿದ್ದೇನೆ. ಶೇಕ್ಸ್ ಪಿಯರ್‌ವಾಲ ಅಂತಹ ಸಿನಿಮಾಕ್ಕೆ ಸಂಗೀತ ಕಂಪೋಸ್ ಮಾಡಿದ್ದೇನೆ. ಆದರೆ ನಾನು ಯಾವಾಗಲೂ ನನಗಾಗಿ ಮಾತ್ರ ಕೆಲಸ ಮಾಡು ತ್ತೇನೆ. ಈಗ ಮಾತ್ರವಲ್ಲ ಮುಂದಕ್ಕೂ ನನಗೋಸ್ಕರ ನಾನು ಸಂಗೀತ ಸಂಯೋಜನೆ ಮಾಡುತ್ತೇನೆ.

Recommended Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.