ನಮ್ಮ ಯೋಚನೆಯ ದಿಕ್ಕನ್ನೇ ಬದಲಿಸಿದ ಇಬ್ಬರು ಇಸ್ರೇಲಿ ಗೆಳೆಯರು

 In Behavior Economics, ECONOMY

ರಿಚರ್ಡ್ ಡಿ ಥೇಲರ್ ಈ ಬಾರಿಯ ನೋಬೆಲ್ ಪ್ರಶಸ್ತಿ ಪುರಸ್ಕೃತರು. ಅವರಿಗೆ ೧೯೯೬ ಮೊದಲ ಭಾಗದಲ್ಲಿ ಒಂದು ಫೋನ್ ಕರೆ ಬರುತ್ತದೆ. ಎಮೋಸ್ ಅವರಿಗೆ ಕ್ಯಾನ್ಸರ್, ಅವರು ಹೆಚ್ಚೆಂದರೆ ಇನ್ನು ೬ತಿಂಗಳು ಬದುಕುತ್ತಾರೆ. ಥೇಲರ್‌ಗೆ ನಿಂತ ನೆಲವೇ ಕುಸಿದಂತಾಗುತ್ತದೆ. ಮಾತನಾಡುವುದಕ್ಕೆ ಆಗದೆ ಹೆಂಡತಿಗೆ ಫೋನ್ ಕೊಡುತ್ತಾರೆ. ಫೋನ್ ಮಾಡಿದ್ದು ಡೇನಿಯಲ್ ಕನೆಮನ್. ಡೆನಿಯಲ್ ಹಾಗೂ ಎಮೊಸ್ ಟ್ರಾವರ್‌ಸ್ಕಿ ಇಬ್ಬರೂ ಪ್ರಖ್ಯಾತ ಇಸ್ರೇಲಿ ಮನೋವಿಜ್ಞಾನಿಗಳು. ಅವರ ಸಂಶೋಧನೆ ಅರ್ಥಶಾಸ್ತ್ರದಲ್ಲಿ ಒಂದು ದೊಡ್ಡ ಅಲೆಯನ್ನೇ ಸೃಷ್ಟಿಸಿತು. ಕನೆಮನ್ ಅವರಿಗೆ ನೋಬಲ್ ಪ್ರಶಸ್ತಿ ಬಂತು. ಸತ್ತವರಿಗೆ ಅದನ್ನು ಕೊಡುವುದಿಲ್ಲ. ಹಾಗಾಗಿ ಎಮೊಸ್ ಅವರಿಗೆ ಬರಲಿಲ್ಲ. ಇವರಿಬ್ಬರ ಸಂಶೋಧನೆಯಿಂದ ಪ್ರೇರಿತರಾಗಿ ಬೆಳೆದವರು ಥೇಲರ್. ಇವರೆಲ್ಲರ ಒಟ್ಟಾರೆ ಅಧ್ಯಯನದ ಫಲವೇ ವರ್ತನ ಅರ್ಥಶಾಸ್ತ್ರ.
ಕ್ಯಾನ್ಸರ್ ಅಂತ ಗೊತ್ತಾದ ಮೇಲೂ ಎಮೋಸ್ ಕೊರಗುತ್ತಾ ಕೂರಲಿಲ್ಲ. ಅಧ್ಯಯನವನ್ನು ಮುಂದುವರಿಸಿದರು. ಕೈಯಲ್ಲಿ ಆಗುವವರೆಗೆ ಕಛೇರಿಗೆ ಹೋಗುತ್ತಿದ್ದರು. ಗೆಳೆಯರನ್ನು ಬಿಟ್ಟು ಯಾರೊಂದಿಗೂ ಖಾಯಿಲೆ ವಿಷಯವನ್ನು ಹೇಳಿಕೊಂಡಿರಲಿಲ್ಲ. ಸಾಯುತ್ತಿರುವ ಮನುಷ್ಯನಂತೆ ಜನ ತಮ್ಮನ್ನು ನೋಡುವುದು ಅವರಿಗೆ ಬೇಕಿರಲಿಲ್ಲ. ಹಿಂದೆ ಇಸ್ರೇಲ್ ಪರವಾಗಿ ಯುದ್ಧದಲ್ಲೂ ಭಾಗವಹಿಸಿದ್ದರು. ಪ್ರಜ್ಞೆ ತಪ್ಪಿಬಿದ್ದಿದ್ದ ಸೈನಿಕನೊಬ್ಬನನ್ನು ಉಳಿಸಿದ್ದ ಘಟನೆಯನ್ನು ಆತ್ಮೀಯರೊಂದಿಗೆ ಹಂಚಿಕೊಳ್ಳುತ್ತಾ ನಾನು ಅದೇ ಹೀರೋ ಇಮೇಜನ್ನು ಉಳಿಸಿಕೊಳ್ಳಬೇಕು ಅಂತ ಹೇಳಿದ್ದರಂತೆ.
ಹಾಗಾಗಿ ಖಾಯಿಲೆಗೆ ಸಂಬಂಧಿಸಿದಂತೆ ಅವರನ್ನು ಭೇಟಿಮಾಡುವುದಕ್ಕೆ ಸುತರಾಂ ಅವಕಾಶವಿರಲಿಲ್ಲ. ಸಂಶೋಧನೆಗೆ ಸಂಬಂಧಿಸಿದಂತೆ ಅವರೊಂದಿಗೆ ಚರ್ಚಿಸುವುದಕ್ಕೆ ಬಾಗಿಲು ಸದಾ ತೆರೆದಿತ್ತು. ಕನೆಮನ್ ಅವರನ್ನು ದಿನಾ ಭೇಟಿಯಾಗುತ್ತಿದ್ದರು. ತಮ್ಮಿಬ್ಬರ ಸಂಶೋಧನೆಗಳಿಗೆ ಸಂಬಂಧಿಸಿದಂತೆ ಎಲ್ಲಾ ಪ್ರಮುಖ ಲೇಖನಗಳನ್ನು ಸಂಕಲಿಸುವ ಯೋಜನೆಯನ್ನು ಅವರೊಂದಿಗೆ ಹಾಕಿಕೊಂಡರು. ಅದು ಚಾಯ್ಸ್, ವ್ಯಾಲ್ಯೂಸ್ ಹಾಗೂ ಫ್ರೇಮ್ಸ್ ಎನ್ನುವ ಹೆಸರಲ್ಲಿ ಪ್ರಕಟಗೊಂಡಿತು. ಆದರೆ ಅದನ್ನು ನೋಡಲು ಎಮೊಸ್ ಇರಲಿಲ್ಲ. ಪ್ರಾಸ್ಪೆಕ್ಟ್ ಸಿದ್ಧಾಂತ-ಪ್ರತೀಕ್ಷಾ ಸಿದ್ಧಾಂತ ಅವರಿಬ್ಬರ ಮಹತ್ತರ ಕೊಡುಗೆ. ಅದು ಹಲವು ಅಂಶಗಳನ್ನು ಪೋಣಿಸಿ ತಯಾರಾದ ಒಂದು ಸುಂದರ ಮಾಲೆ. ಅದರ ಕೆಲವು ಅಂಶಗಳನ್ನು ನೋಡೋಣ.
ಕತ್ತಲೆ ಕೋಣೆಯಲ್ಲಿದ್ದಾಗ ಒಂದು ಸಣ್ಣ ಬೆಳಕಿಗೂ ನೀವು ತುಂಬಾ ಸೂಕ್ಷ್ಮವಾಗಿರುತ್ತೀರಿ. ನಿಶ್ಯಬ್ದವಾಗಿದ್ದಾಗ ಸಣ್ಣ ಸದ್ದೂ ಚೆನ್ನಾಗಿ ಕೇಳಿಸುತ್ತದೆ. ಆದರೆ ನೀವು ಲೈಟ್ ಅನ್ ಮಾಡಿಬಿಟ್ಟರೆ, ಆ ಬೆಳಕು ನಿಮ್ಮ ಗಮನಕ್ಕೆ ಬರುವುದಿಲ್ಲ. ಅಥವಾ ಗದ್ದಲದ ನಡುವೆ ಸಣ್ಣ ಸದ್ದು ಕೇಳಿಸುವುದಿಲ್ಲ. ಇದು ಹಣದ ವಿಷಯದಲ್ಲೂ ನಿಜ. ನಿಮ್ಮಲ್ಲಿ ಏನೂ ಇಲ್ಲದೇ ಇದ್ದಾಗ ಲಕ್ಷ ರೂಪಾಯಿ ಸಿಕ್ಕರೆ ಆಗುವ ಸಂತೋಷ, ನಿಮ್ಮಲ್ಲಿ ಈಗಾಗಲೇ ಒಂದು ಲಕ್ಷವಿದ್ದಾಗ ಇನ್ನೊಂದು ಲಕ್ಷ ಸಿಕ್ಕರೆ ಆಗುವುದಿಲ್ಲ. ಈ ಸಂತೋಷವನ್ನು ಅರ್ಥಶಾಸ್ತ್ರದಲ್ಲಿ ಉಪಯುಕ್ತತೆ ಅನ್ನುತ್ತಾರೆ. ಉಪಯುಕ್ತತೆಯ ಸಿದ್ಧಾಂತ ಸರಳವಾಗಿ ಹೇಳುವುದು ಇದನ್ನೇ. ಅದು ಹೇಳುವ ಇನ್ನೊಂದು ಅಂಶ ಏನೆಂದರೆ ಜನ ನಷ್ಟವನ್ನು (ರಿಸ್ಕ್) ಬಯಸುವುದಿಲ್ಲ. ನಿಮ್ಮ ಮುಂದೆ ಎರಡು ಆಯ್ಕೆಗಳಿವೆ ಎಂದು ಭಾವಿಸಿಕೊಳ್ಳಿ. ಒಂದು ನಿಮಗೆ ಖಾತರಿಯಾಗಿ ೫೦೦ ರೂಪಾಯಿ ಸಿಗುತ್ತದೆ. ಇನ್ನೊಂದು ೮೦೦ ರೂಪಾಯಿ ಸಿಗುವ ಸಾಧ್ಯತೆ ಶೇಕಡ ೯೦ರಷ್ಟು ಇದೆ, ಎಂದರೆ ಜನ ಸಾಮಾನ್ಯವಾಗಿ ೫೦೦ ರೂಪಾಯಿ ಖಾತರಿಯಾಗಿ ಸಿಗುವ ಹಾದಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಇದನ್ನು ರಿಸ್ಕ್ ಅವರ್ಷನ್ ಅಂತ ಅರ್ಥಶಾಸ್ತ್ರಜ್ಞರು ಕರೆಯುತ್ತಾರೆ. ಅಂದರೆ ಜನ ರಿಸ್ಕ್‌ಗೆ ವಿಮುಖರಾಗುತ್ತಾರೆ. ಹಾಗಾಗಿ ರಿಸ್ಕ್ ತೆಗೆದುಕೊಂಡು ೮೦೦ ರೂಪಾಯಿಗೆ ಪ್ರಯತ್ನಿಸುವುದಕ್ಕಿಂತ ಖಾತ್ರಿಯಾಗಿ ಸಿಗುವ ೫೦೦ ರೂಪಾಯಿಗೆ ತೃಪ್ತರಾಗುತ್ತಾರೆ.
ಉಪಯುಕ್ತತೆಯ ಸಿದ್ಧಾಂತ ತಪ್ಪು ಅಂತ ಅಲ್ಲ. ಮನುಷ್ಯರ ನಿರ್ಧಾರಗಳನ್ನು ಆರ್ಥಿಕೇತರ ಅಂಶಗಳೂ ಪ್ರಭಾವಿಸುತ್ತವೆ ಎಂಬುದನ್ನು ಅದು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಜನರ ನಿರ್ಧಾರಗಳ ಹಿಂದೆ ಅವರ ಭಾವನೆಗಳೂ (ಎಮೋಷನ್) ಪ್ರಮುಖ ಪಾತ್ರವಹಿಸುತ್ತವೆ, ಅದನ್ನೂ ಈ ಸಿದ್ಧಾಂತದ ವ್ಯಾಪ್ತಿಗೆ ತರಬೇಕು ಎನ್ನುವುದು ಎಮೊಸ್ ಹಾಗೂ ಡೇನಿಯಲ್ ಅವರ ವಾದ. ಜೊತೆಗೆ ಉಪಯುಕ್ತತೆಯ ಸಿದ್ಧಾಂತ ಹಣದ ಉಪಯುಕ್ತತೆಯ ಬಗ್ಗೆ ಮಾತನಾಡುವಾಗ ಸಂಪತ್ತಿನ ಮಟ್ಟವನ್ನು ಪರಿಗಣಿಸುತ್ತದೆ. ಆದರೆ ಅದು ಸರಿಯಲ್ಲ ಎನ್ನುವುದು ಕನೆಮನ್‌ಗೆ ಸ್ಪಷ್ಟವಾಗಿತ್ತು. ಅವರು ಕೊಡುವ ಒಂದು ಉದಾಹರಣೆಯನ್ನು ಗಮನಿಸಿ.
ಇಂದು ಜ್ಯಾಕ್ ಹಾಗೂ ಜಿಲ್ ಬಳಿಯಲ್ಲಿ ೫ ಮಿಲಿಯನ್ನಿನಷ್ಟು ಸಂಪತ್ತಿದೆ.
ನಿನ್ನೆ ಜ್ಯಾಕ್ ಬಳಿಯಲ್ಲಿ ೧ ಮಿಲಿಯನ್ ಇತ್ತು ಹಾಗೂ ಜಿಲ್ ಬಳಿಯಲ್ಲಿ ೯ ಮಿಲಿಯನ್ ಇತ್ತು.
ಇಬ್ಬರೂ ಸಮಾನರಾಗಿ ಖುಷಿಯಿಂದಿದ್ದಾರಾ? (ಅಥವಾ ಇಬ್ಬರ ಉಪಯುಕ್ತತೆಯೂ ಒಂದೇ ಮಟ್ಟದ್ದೇ?)
ಖಂಡಿತಾ ಇಲ್ಲ. ಜಿಲ್ ೪ ಮಿಲಿಯನ್ ಕಳೆದುಕೊಂಡು ಹತಾಶನಾಗಿದ್ದಾನೆ. ಜ್ಯಾಕ್ ಸಂತೋಷದಿಂದ ಉಬ್ಬಿಹೋಗಿರುತ್ತಾನೆ. ಅಂದರೆ ಜನ ಸಂಪತ್ತಿನ ಮಟ್ಟವನ್ನು ನೋಡುವುದಿಲ್ಲ. ಅವರ ಸ್ಥಿತಿಯಲ್ಲಿ ಆಗಿರುವ ಬದಲಾವಣೆ ಅವರಿಗೆ ಮುಖ್ಯವಾಗುತ್ತದೆ.
ಕನೆಮನ್ ಅವರ ಈ ಚಿಂತನೆಯನ್ನು ಮುಂದುವರಿಸುತ್ತಾ ನಷ್ಟ ಎದುರಾದಾಗ ಜನ ಹೇಗೆ ಪ್ರತಿಕ್ರಿಯಿಸಬಹುದು ಅಂತ ಎಮೋಸ್, ಯೋಚಿಸತೊಡಗಿದರು. ಅದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಒಂದು ಸಣ್ಣ ಪ್ರಯೋಗ ಮಾಡಿದರು. ಜನರ ಮುಂದೆ ಒಂದು ಪ್ರಶ್ನೆಯನ್ನಿಟ್ಟರು.
ಕೆಳಗಿನ ಎರಡರಲ್ಲಿ ಯಾವುದನ್ನು ಆರಿಸಿಕೊಳ್ಳುತ್ತೀರಿ?
೧. ಇದನ್ನು ಆಯ್ಕೆ ಮಾಡಿಕೊಂಡರೆ ನಿಮಗೆ ಖಂಡಿತವಾಗಿ ೫೦೦ರೂ ನಷ್ಟವಾಗುತ್ತದೆ.
೨. ಲಾಟರಿಯಲ್ಲಿ ನಿಮಗೆ ೧೦೦೦ ರೂಪಾಯಿ ಕಳೆದುಕೊಳ್ಳುವ ಸಾಧ್ಯತೆ ಶೇಕಡ ೫೦ರಷ್ಟಿದೆ
ಬಹುಪಾಲು ಜನ ಎರಡನೆಯದನ್ನು ಆಯ್ಕೆ ಮಾಡಿಕೊಂಡರು. ಅಂದರೆ ಲಾಟರಿಗೆ ಸಿದ್ಧರಾದರು. ಡೇನಿ ಹಾಗೂ ಎಮೊಸ್ ಅವರಿಗೆ ದೊಡ್ಡ ಆಶ್ಚರ್ಯ. ನಾವು ಪ್ರಾರಂಭದಲ್ಲಿ ಗಮನಿಸಿದ ಹಾಗೆ ಜನ ಲಾಭದ ನಿರೀಕ್ಷೆಯಲ್ಲಿದ್ದಾಗ, ಖಾತ್ರಿಯಾಗಿ ಲಾಭ ಬರುವ ಸಾಧ್ಯತೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ನಷ್ಟ ನಿಮ್ಮ ಮುಂದೆ ಇದ್ದಾಗ ಲಾಟರಿಯನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ರಿಸ್ಕ್ ತೆಗೆದುಕೊಳ್ಳಲು ತಯಾರಾಗಿರುತ್ತೇವೆ. ಅಂದರೆ ಲಾಭ ಹಾಗೂ ನಷ್ಟಗಳ ಎದುರಿನಲ್ಲಿ ನಮ್ಮ ವರ್ತನೆಗಳು ಭಿನ್ನವಾಗಿರುತ್ತವೆ. ಅದು ಅವರಿಗೆ ಅದೊಂದು ಅದ್ಭುತ ಅನ್ವೇಷಣೆ. ಅಂದರೆ ಲಾಭದ ಎದುರಿಗೆ ರಿಸ್ಕ್ ತೆಗೆದುಕೊಳ್ಳಲು ಬಯಸದ ಜನ, ನಷ್ಟ ಎದುರಾದಾಗ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿರುತ್ತಾರೆ.
ಈ ಪ್ರವೃತ್ತಿಯನ್ನು ರಾಜಕೀಯ ನಿರ್ಧಾರಗಳಲ್ಲೂ ನೋಡಬಹುದು. ಅಮೇರಿಕೆಯ ಚುನಾವಣೆಯನ್ನೇ ತೆಗೆದುಕೊಳ್ಳಿ. ಕ್ಲಿಂಟನ್ ಹಾಗೂ ಟ್ರಂಪ್ ನಡುವೆ ಜನ ಆಯ್ಕೆ ಮಾಡಿಕೊಳ್ಳಬೇಕಿತ್ತು. ಕ್ಲಿಂಟನ್ ಗೆದ್ದರೆ ಏನು ಮಾಡುತ್ತಾರೆ ಎಂಬುದನ್ನು ಊಹಿಸಬಹುದಿತ್ತು. ಈಗಿನ ಹಲವು ನೀತಿಗಳನ್ನು ಮುಂದುವರೆಸುತ್ತಿದ್ದರು. ಜನ ಸಧ್ಯದ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಬೇಸತ್ತಿದ್ದರು. ಅಂದರೆ ಅವರಿಗೆ ಕ್ಲಿಂಟನ್ ಗೆದ್ದರೆ ಆಗುವ ನಷ್ಟದ ಬಗ್ಗೆ ಸ್ಪಷ್ಟ ಅರಿವಿತ್ತು. ಆದರೆ ಟ್ರಂಪ್ ಏನು ಮಾಡಬಹುದು ಅನ್ನುವುದು ಖಾತ್ರಿಯಿಲ್ಲ. ಟ್ರಂಪ್ ಹೇಳಿದಂತೆ ಎಲ್ಲಾ ಆಗಿಬಿಟ್ಟರೆ? ಜನ ರಿಸ್ಕ್ ತೆಗೆದುಕೊಂಡರು. ಇದನ್ನು ಭಾರತಕ್ಕೂ ಒಂದಿಷ್ಟು ಬದಲಾವಣೆಯೊಂದಿಗೆ ಅನ್ವಯಿಸಬಹುದು.
ನಷ್ಟಕ್ಕೆ ಜನ ಹೆಚ್ಚು ಭಾವೋದ್ವೇಗದಿಂದ ಪ್ರತಿಕ್ರಿಯಿಸುತ್ತಾರೆ. ರಾತ್ರಿ ಮನೆಗೆ ಮಗಳು ಬರುವುದು ತಡವಾದಾಗ, ಹೆದರಿಕೆಗೆ ಕಾರಣವಿಲ್ಲ ಎಂದು ಗೊತ್ತಿದ್ದರೂ ಅವಳು ಬರುವವವಕ ತುಂಬಾ ಆತಂಕಗೊಳ್ಳ್ಳುತ್ತೇವೆ. ಅಂದರೆ, ನಾವು ನಷ್ಟಕ್ಕೆ ಹೆಚ್ಚು ತೀವ್ರವಾಗಿ ಸಂವೇದಿಸುತ್ತೇವೆ.
ಎಲ್ಲೋ ಅಪರೂಪಕ್ಕೆ ಆಗಬಹುದಾದ ದುರಂತವನ್ನು ಆಗೇಬಿಡುತ್ತದೆ ಅನ್ನುವಂತೆ ಯೋಚಿಸುತ್ತೇವೆ. ಅರ್ಥಶಾಸ್ತ್ರಜ್ಞರು ಈ ಭಾವನಾತ್ಮಕ (ಎಮೋಷನಲ್) ಅಂಶಗಳನ್ನು ಗಮನಕ್ಕೆ ತೆಗೆದುಕೊಳ್ಳಲಿಲ್ಲ. ಅವರ ಗಮನವೆಲ್ಲಾ ಹಣವನ್ನು ಕುರಿತಂತೆ ಜನ ಹೇಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದರ ಕಡೆಯೇ ಇದ್ದುದರಿಂದಲೋ ಏನೋ ಇದನ್ನು ಕಡೆಗಣಿಸಿಬಿಟ್ಟರು. ಡ್ಯಾನಿಯಲ್ ಮತ್ತು ಎಮೋಸ್ ಈ ಅಂಶಗಳನ್ನು ಸೇರಿಸಿಕೊಂಡು ತಮ್ಮ ಪ್ರತೀಕ್ಷಾ ಸಿದ್ಧಾಂತವನ್ನು (ಪ್ರಾಸ್ಪೆಕ್ಟ್ ಸಿದ್ಧಾಂತ) ರೂಪಿಸಿದರು. ಇದು ವರ್ತನ ಅರ್ಥಶಾಸ್ತ್ರದ ಬಹುದೊಡ್ಡ ಕೊಡುಗೆಯಾಯಿತು. ಅದು ಅರ್ಥಶಾಸ್ತ್ರದೊಳಕ್ಕೆ ಮನಃಶಾಸ್ತ್ರ ನುಸುಳುವುದಕ್ಕೆ ಬೇಕಾದ ಒಂದು ದೊಡ್ಡ ಕಿಂಡಿಯನ್ನು ಕೊರೆಯಿತು. ಈ ಇಬ್ಬರು ಇಸ್ರೇಲಿ ಮನೋವಿಜ್ಞಾನಿಗಳು ಒಟ್ಟಾಗಿ ಸೇರಿ ಮಾಡಿದ ಅಧ್ಯಯನ ನಮ್ಮ ಯೋಚನೆಯ ದಿಕ್ಕನ್ನೇ ಬದಲಿಸಿಬಿಟ್ಟಿತು.

Recommended Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.