ನಾದತಪಸ್ಸಿನಲ್ಲಿ ಕಿಶೋರಿತಾಯಿ

 In RAGAMALA

ನಾದತಪಸ್ಸಿನಲ್ಲಿ ಕಿಶೋರಿತಾಯಿ, ಟಿ ಎಸ್ ವೇಣುಗೋಪಾಲ್, ಶೈಲಜ

ನನ್ನಪ್ಪ ತೀರಿಕೊಂಡಾಗ ನಾನು ತುಂಬಾ ಸಣ್ಣವಳು. ಆಗ ನಮ್ಮಮ್ಮನ ಬಳಿ ಹಣವಿರಲಿಲ್ಲ, ಬೇರೆಯವರ ಬೆಂಬಲವೂ ಇರಲಿಲ್ಲ. ನಾವು ಮೂವರು ಒಡಹುಟ್ಟಿದವರು. ನಾನೇ ದೊಡ್ಡವಳು, ನನ್ನ ನಂತರ ತಮ್ಮ ಮತ್ತು ತಂಗಿ ಕೊನೆಯವಳು. ಮೂವರನ್ನು ಓದಿಸಿ, ಸಂಗೀತ ಮುಂತಾದ್ದನ್ನು ಕಲಿಸುವ ಹೊಣೆ ಅವರ ಮೇಲೆ ಬಿತ್ತು. ತುಂಬಾ ಕಷ್ಟಪಟ್ಟರು. ಆದರೆ ಕಷ್ಟದ ಅನುಭವ ಒಂದಿಷ್ಟೂ ನಮಗಾಗದಂತೆ ಬೆಳೆಸಿದರು. ನಮ್ಮನ್ನು ಚೆನ್ನಾಗಿ ಓದಿಸಿದರು. ಅಮ್ಮ ಪಟ್ಟ ಕಷ್ಟಗಳನ್ನು ನಾನಿಲ್ಲಿ ವಿವರಿಸುತ್ತಿಲ್ಲ. ಕಾರ್ಯಕ್ರಮ ನೀಡಲು ಮೂರನೆಯ ದರ್ಜೆ ಬೋಗಿಗಳಲ್ಲಿ ಪಯಣಿಸುತ್ತಿದ್ದರು. ನಿದ್ದೆಗಳಿಲ್ಲದ ರಾತ್ರಿಗಳೇ ಹೆಚ್ಚು. ನಾನು ಸ್ವಲ್ಪ ದೊಡ್ಡವಳಾದ ಮೇಲೆ ನನ್ನನ್ನೂ ಜೊತೆಗೆ ಕರೆದೊಯ್ಯುತ್ತಿದ್ದರು. ಅಮ್ಮನಿಗೆ ತಂಬೂರ ನುಡಿಸುವುದು, ಹೀಗೆ ಸಣ್ಣಪುಟ್ಟ ರೀತಿಯಲ್ಲಿ ನೆರವಾಗುತ್ತಿದ್ದೆ. ಎಷ್ಟೋ ಸಲ ರಾತ್ರಿಯಿಡೀ ಅಮ್ಮನ ಭುಜಕ್ಕೊರಗಿ ಪ್ರಯಾಣ ಮಾಡಿದ ನೆನಪು ನನಗೆ ಇನ್ನೂ ಚೆನ್ನಾಗಿದೆ. ಅದು ಗಾಯಕಿಯರಿಗೆ ಅಷ್ಟಾಗಿ ಗೌರವವಿಲ್ಲದಿದ್ದ ಕಾಲ. ಆ ಅಗೌರವದ ದಿನಗಳೆಲ್ಲಕ್ಕೂ ನಾನು ಸಾಕ್ಷಿ. ಜನ ಅವರನ್ನು ನೋಡುತ್ತಿದ್ದ, ನಡೆಸಿಕೊಳ್ಳುತ್ತಿದ್ದ ರೀತಿ ನನಗೆ ಇಷ್ಟವಾಗುತ್ತಿರಲಿಲ್ಲ. ಆದರೆ ಅವರು ಸಂಪಾದಿಸಲೇಬೇಕಿತ್ತು. ಅವರು ಎಲ್ಲಾ ಬಗೆಯ ತ್ಯಾಗವನ್ನೂ ಮಾಡಿದರು. ಎಷ್ಟೋ ಬಾರಿ ಗೌರವಕ್ಕೆ, ಸ್ವಾಭಿಮಾನಕ್ಕೆ ಪೆಟ್ಟಾಗಿತ್ತು. ನಾನು ನಮ್ಮ ಅಮ್ಮನಿಗೆ ಜನ್ಮಜನ್ಮಕ್ಕೂ ತುಂಬಾ ಋಣಿ. ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಕಿಶೋರಿ ಬಾಲ್ಯದಿಂದಲೂ ಸಂಗೀತದಲ್ಲಿ ಅಪಾರ ಪ್ರತಿಭೆಯಿದ್ದ ಹುಡುಗಿ. ಕಿಶೋರಿಯವರಿಗೆ ಸುಮಾರು ಹತ್ತು ವರ್ಷವಾಗಿದ್ದಾಗ ಅವರಿಗೆ ಸಂಗೀತ ಕಲಿಸಲು ಅವರ ತಾಯಿ ಗುರುಗಳೊಬ್ಬರನ್ನು ನೇಮಿಸಿದ್ದರು. ಕಿಶೋರಿಯವರ ಧ್ವನಿ ಸುಲಲಿತವಾಗಿಲ್ಲ, ನಮ್ಯವಾಗಿಲ್ಲ ಎಂಬ ಬೇಸರ ಆ ಗುರುಗಳಿಗಿತ್ತು. ಇದನ್ನು ಅವರು ಅಮ್ಮ ಮತ್ತು ಮಗಳಿಗೆ ಹೇಳಿದರು. ಈ ಆಕ್ಷೇಪ ಕಿಶೋರಿಯವರನ್ನು ತುಂಬಾ ಚುಚ್ಚಿತ್ತು. ಬಹುಶಃ ಅವರ ತಾಯಿಗೂ ನೋವಾಗಿತ್ತು ಎನಿಸುತ್ತದೆ. ಅಂದಿನಿಂದ ಕಿಶೋರಿಗೆ ಅಮ್ಮ ಮೋಗೂಬಾಯಿಯವರೇ ಪಾಠ ಹೇಳಿಕೊಡಲಾರಂಭಿಸಿದರು. ನಮ್ಮಮ್ಮ ಸಂಗೀತದ ಬಗ್ಗೆ ಮಾತನಾಡುತ್ತಿರಲಿಲ್ಲ. ಅವರು ಹಾಡುತ್ತಿದ್ದರು, ನಾನು ಹಾಗೇ ಹಾಡುತ್ತಿದ್ದೆ. ಅವರನ್ನು ಏನೂ ಕೇಳದೆ ಹಾಗೆ ಹಾಡುತ್ತಿದ್ದೆ. ಅವರು ಸ್ಥಾಯಿ ಮತ್ತು ಅಂತರಾ ಎರಡು ಸಲ ಮಾತ್ರ ಹಾಡುತ್ತಿದ್ದರು. ಅಷ್ಟರಲ್ಲಿ ಅದರ ಎಲ್ಲಾ ಛಾಯೆಗಳನ್ನೂ ಗ್ರಹಿಸಬೇಕಿತ್ತು. ಶುದ್ಧಕಲ್ಯಾಣ್ ರಾಗದ ರಿಷಭಕ್ಕೂ ಮತ್ತು ಭೂಪ್ ರಾಗದ ರಿಷಭಕ್ಕೂ ಇರುವ ವ್ಯತ್ಯಾಸವೇನು ಎಂದು ನನ್ನನ್ನು ಕೇಳುತ್ತಿದ್ದರು. ಅವೆರಡೂ ರಾಗದ ರಿಷಭ ಒಂದೇ. ಆದರೆ ಈ ರಾಗಗಳಲ್ಲಿ ಅವುಗಳನ್ನು ಅನುಸಂಧಾನ ಮಾಡಿ, ಸ್ಪರ್ಶಿಸುವ ರೀತಿ ಸ್ವಲ್ಪ ಬೇರೆ. ಹೀಗೆ ಅಮ್ಮ ಪ್ರಶ್ನಿಸಿದಾಗ, ಉತ್ತರ ಹುಡುಕಲು ನಾನು ತುಂಬಾ ಆಳವಾಗಿ ಯೋಚಿಸಬೇಕಾಗುತ್ತಿತ್ತು.

ಅವರು ಏಕಾಗ್ರತೆಯನ್ನು ಕಲಿಸಿದರು. ವಿಭಿನ್ನ ಬಂದಿಶ್‌ಗಳು, ರಾಗಗಳು, ಮುಂತಾದವನ್ನು ಕಲಿಸುತ್ತಲೇ ನನಗವರು ಸ್ವರದ ಸಾಂಪ್ರದಾಯಿಕ ಜ್ಞಾನ, ಸಾಂಪ್ರದಾಯಿಕ ಕ್ರಮ, ಸಾಂಪ್ರದಾಯಿಕ ಶುದ್ಧತೆಯನ್ನು ಕಲಿಸಿದರು. ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಒಂದಿಷ್ಟು ಮರಾಠಿ ಹಾಡುಗಳು, ಭಜನ್‌ಗಳು ಹೀಗೆ ಎಲ್ಲಾ ಬಗೆಯ ಸಂಗೀತ ನನಗೆ ಗೊತ್ತಿರಬೇಕು ಅನ್ನುವುದು ಅವರ ಆಸೆಯಾಗಿತ್ತು.

ಕಿಶೋರಿಯವರಿಗೆ ಬೇರೆ ಬೇರೆ ಶೈಲಿಯ ಹಲವು ಸಂಗೀತಗಾರರಿಂದ ಶಿಕ್ಷಣವನ್ನು ಕೊಡಿಸಿದರು. ಆಗ್ರಾ ಘರಾನೆಯ ಅನ್ವರ್ ಹುಸೇನ್‌ಖಾನ್, ಭೇಂಡೀ ಬಜ಼ಾರ್ ಘರಾನೆಯ ಅಂಜಿನೀಬಾಯಿ ಮಲ್ಪೇಕರ್, ಗ್ವಾಲಿಯರ್ ಘರಾನೆಯ ಶರದ್‌ಚಂದ್ರ ಅರೋಲ್‌ಕರ್ ಮತ್ತು ಮೋಹನ್‌ರಾವ್ ಪಾಲೇಕರ್, ಗೋವಾದ ಹೆಸರಾಂತ ಸಂಗೀತಗಾರ ಬಾಲಕೃಷ್ಣ ಬುವಾ ಪರ್ವತ್ಕರ್ ಮುಂತಾದವರಿಂದ ಶಿಕ್ಷಣ ಪಡೆದರು. ಇಂತಹ ವ್ಯೆವಿಧ್ಯಮಯ ಕಲಿಕೆಯಿಂದ ಅವರಿಗೆ ಘರಾನೆಗಳನ್ನು ಮೀರಿ ಯೋಚಿಸುವುದಕ್ಕೆ ಸಾಧ್ಯವಾಯಿತು. ಮೂಲತಃ ಅವರು ಆತ್ರೌಲಿ ಜೈಪುರ್ ಘರಾನೆಯವರಾದರೂ ಅವರ ಸೃಜನಶೀಲ ಪ್ರತಿಭೆಯಿಂದಾಗಿ ಅವರು ಸಂಗೀತವನ್ನು ಹೆಚ್ಚು ಸ್ವೀಕರಣಶೀಲ ಹಾಗೂ ಪ್ರಾತಿನಿಧಿಕವಾಗುವಂತೆ ಮಾಡಿದರು. ಅವರದು ಅತ್ರೌಲಿ ಜೈಪುರ ಎಂಬ ಬುನಾದಿಯ ಮೇಲೆ ನಿರ್ಮಿತವಾದ ಒಂದು ಭವ್ಯ ಸಂಗೀತಸೌಧ.

ಉಳಿದಂತೆ ಕಿಶೋರಿಯವರ ಬಾಲ್ಯ ಉಳಿದೆಲ್ಲಾ ಸಾಮಾನ್ಯ ಮಕ್ಕಳಂತೆಯೇ ಇತ್ತು. ಅವರೊಬ್ಬ ಪ್ರತಿಭಾವಂತ ವಿದ್ಯಾರ್ಥಿನಿ. ವೈದ್ಯರಾಗಬೇಕೆಂಬ ಆಸೆ ಅವರಿಗಿತ್ತು. ಬಾಂಬೆಯ ಜೈಹಿಂದ್ ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಇಂಟರ್‌ಮೀಡಿಯೆಟ್ ಓದುತ್ತಿದ್ದರು. ಆದರೆ ತೀವ್ರ ಅನಾರೋಗ್ಯದಿಂದಾಗಿ ಅವರಿಗೆ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಅಲ್ಲಿಂದ ಮುಂದೆ ತನ್ನ ನಸೀಬಿನಲ್ಲಿರುವುದೇ ಸಂಗೀತ ಎನ್ನುವುದನ್ನು ಒಪ್ಪಿಕೊಂಡು ಕಿಶೋರಿ ಅದನ್ನೇ ಮುಂದುವರೆಸಿದರು. ಸಿನಿಮಾದಲ್ಲಿ ಹಿನ್ನೆಲೆ ಗಾಯಕಿಯಾಗಲೂ ಪ್ರಯತ್ನಿಸಿದರು. ೧೯೬೪ರಲ್ಲಿ ಗೀತ್ ಗಾಯಾ ಪಥ್ಥರೋನೆ ಸಿನಿಮಾದಲ್ಲಿ ಹಾಡಿದರು. ಇದರಿಂದ ಸಿಟ್ಟಿಗೆದ್ದ ಅವರಮ್ಮ, ಸಿನಿಮಾದಲ್ಲಿ ಹಾಡುವುದಾದರೆ ಇನ್ನು ಮೇಲೆ ನನ್ನ ತಂಬೂರಿಯನ್ನು ಮುಟ್ಟಬೇಡ ಎಂದು ತಾಕೀತು ಮಾಡಿದರು.

ಕಿಶೋರಿಯವರನ್ನು ಹೀಗೆ ಮತ್ತು ಇಷ್ಟೇ ಎಂದು ಸರಳಗೊಳಿಸಿ ವರ್ಣಿಸುವುದು ತುಂಬಾ ಕಷ್ಟ. ಅವರೊಳಗೆ ಅಪಾರ ವೈವಿಧ್ಯತೆಯಿತ್ತು. ಅಮೂರ್ತತೆಯನ್ನು ತುಂಬಾ ಇಷ್ಟಪಡುತ್ತಿದ್ದರು, ವಿಭಿನ್ನ ಚಿಂತನೆಗಳನ್ನು ಸೊಗಸಾಗಿ ಒತ್ತಟ್ಟಿಗೆ ನೋಡುವುದಕ್ಕೆ ಅವರಿಗೆ ಸಾಧ್ಯವಾಗುತ್ತಿತ್ತು. ವಿಜ್ಞಾನದ ವಿದ್ಯಾರ್ಥಿಯಾಗಿ ಎಲ್ಲದರಲ್ಲೂ ವೈಜ್ಞಾನಿಕ ಕುತೂಹಲ ತೋರುತ್ತಿದ್ದರಂತೆ. ಅಷ್ಟೇ ಅಲ್ಲ ಕಲೆಯನ್ನು ಹಾಗೂ ಕಲೆಯ ಸೃಷ್ಟಿಯನ್ನು ಕುರಿತ ಪ್ರಾಚೀನ ಹಾಗೂ ಆಧುನಿಕ ಸಿದ್ಧಾಂತಗಳನ್ನು ತೀರಾ ವೈಜ್ಞಾನಿಕವಾಗಿ ಗ್ರಹಿಸುವುದಕ್ಕೆ ಅವರಿಗಾಗುತ್ತಿತ್ತು. ಹಾಗೆಯೇ ನಾವು ಮೂಢನಂಬಿಕೆ ಎಂದು ತಳ್ಳಿಹಾಕಿಬಿಡಬಹುದಾದ ಎಷ್ಟೋ ವಿಚಾರಗಳನ್ನು ಆಳವಾಗಿ ನಂಬಿಕೊಂಡಿದ್ದರು. ಗುರು ರಾಘವೇಂದ್ರನಲ್ಲಿ ಮಗುವಿನಂತಹ ನಂಬಿಕೆ ಇಟ್ಟುಕೊಂಡಿದ್ದರು. ನನಗೆ ಮಗುವಿನ ಹಾಗೆ ಇರೋದಕ್ಕೆ ತುಂಬಾ ಇಷ್ಟ. ನಾನು ಮಗುವಿನಷ್ಟೆ ಮೂರ್ಖಳು ಹಾಗು ಹಠಮಾರಿ. ಆದರೆ ನನಗೆ ಅದು ತುಂಬಾ ಮುಖ್ಯವಾದ ಸ್ಥಿತಿ. ಆದರೆ ಕಲೆಯ ವಿಷಯಕ್ಕೆ ಬಂದಾಗ ನಾನು ಮಗುವಲ್ಲ ಎನ್ನುತ್ತಿದ್ದರು.

ಕಿಶೋರಿ ತುಂಬಾ ಓದುತ್ತಿದ್ದರು. ಜ್ಞಾನ ಅನ್ನೋದು ಕೇವಲ ಪುಸ್ತಕ ಅಥವಾ ಪ್ರಯೋಗಾಲಯಕ್ಕೆ ಬಂದಿಯಲ್ಲ ಎನ್ನುತ್ತಿದ್ದರು. ಆದರೆ ಬೇಕಾದ ಪುಸ್ತಕಕ್ಕಾಗಿ ಅವರು ಸಿಕ್ಕ ಸಿಕ್ಕ ಅಂಗಡಿ, ಲೈಬ್ರರಿ ಅಲೆಯುತ್ತಿದ್ದರು. ಡಾ. ಪಾಂಡೆಯವರ ಇಂಡಿಯನ್ ಏಸ್ತೆಟಿಕ್ಸ್ ಪುಸ್ತಕಕ್ಕೆ ಹುಡುಕಾಡಿದ್ದನ್ನು ಹಲವರು ನೆನಪಿಸಿಕೊಳ್ಳುತ್ತಾರೆ. ಅವರ ಮನೆಯಲ್ಲಿ ಒಂದು ದೊಡ್ಡ ಲೈಬ್ರರಿಯೇ ಇದೆಯಂತೆ. ಬೆಳಗ್ಗೆ ಬೇಗ ಎದ್ದು ನಿಷ್ಠಾವಂತ ವಿದ್ಯಾರ್ಥಿಯಂತೆ ತಮ್ಮ ಮೆಚ್ಚಿನ ಪುಸ್ತಕಗಳನ್ನು ಓದುತ್ತಾ, ಅವುಗಳನ್ನು ಅರ್ಥೈಸಿ, ವ್ಯಾಖ್ಯಾನಿಸುತ್ತಾ ಕೂರುತ್ತಿದ್ದರು. ನಂತರ ಅಡುಗೆ ಮನೆಯಲ್ಲಿ ಒಂದಿಷ್ಟು ಕೆಲಸ ಮಾಡಿದ ನಂತರ ಸಂಗೀತದ ಸ್ವರಗಳೊಂದಿಗಿನ ಅವರ ಜೀವನ ಪ್ರಾರಂಭವಾಗುತ್ತಿತ್ತು. ಪದಗಳೊಂದಿಗಿನ ಒಡನಾಟದಿಂದ ಸರೆಗಮ ಜಗತ್ತಿಗೆ ಅವರ ಪ್ರಯಾಣ ತಂಬೂರದ ಮೇಲೆ ಬೆರಳು ಒಂದು ತಂತಿಯಿಂದ ಇನ್ನೊಂದಕ್ಕೆ ಹೋಗುವಷ್ಟೆ ಸಲೀಸಾಗಿ ನಡೆದುಹೋಗುತ್ತಿತ್ತು.

ಧ್ಯಾನೇಶ್ವರ, ತುಕಾರಾಂ, ಮೀರಾ ಇವರೆಲ್ಲಾ ಅವರ ಸಂಗೀತದ ಒಡನಾಡಿಗಳಾಗಿದ್ದರೆ, ಭರತ ಮುನಿ, ಸಾರಂಗದೇವ, ನಾರದ ಇವರೆಲ್ಲಾ ಅವರ ಚಿಂತನಾ ಲೋಕದ ಸಂಗಾತಿಗಳಾಗಿದ್ದರು. ಇಬ್ಬರ ಒಡನಾಟವೂ ಅವರಿಗೆ ಸಂತೋಷದಾಯಕವಾಗಿತ್ತು. ಸೊಗಸಾಗಿ ಮಾತನಾಡುತ್ತಿದ್ದರು. ಎಲ್ಲವನ್ನೂ ಅಷ್ಟು ಚೆನ್ನಾಗಿ ಮಾಡಬೇಕೇ? ಬೇರೆಯವರಿಗೆ ಮಾಡುವುದಕ್ಕೆ ಏನು ಉಳಿಸುವುದಿಲ್ಲವೇ? ಎಂದು ಜನ ಅವರನ್ನು ಕೇಳಿದ್ದೂ ಉಂಟು.

ಅವರಿಗೆ ಸಂಗೀತ ಎಂದಿಗೂ ಒಂದು ಮನರಂಜನೆ ಅಥವಾ ಭೋಗದ ವಸ್ತುವಾಗಿರಲಿಲ್ಲ. ಸಂಗೀತ ಈಶ್ವರನನ್ನು ತಲುಪಲು ಒಂದು ಸಾಧನ, ಒಂದು ಮಾರ್ಗ. ಸ್ವರ ಎನ್ನುವುದು ಪರಮಾತ್ಮನ ಒಂದು ರೂಪ. ಹಾಡುವಾಗ ಇದು ನಮ್ಮ ಮನಸ್ಸಿನಲ್ಲಿ ಯಾವಾಗಲೂ ಇರಬೇಕು. ನಾನು ಜನರನ್ನು ಮೆಚ್ಚಿಸುವುದಕ್ಕೆ ಹಾಡುವುದಿಲ್ಲ. ಪರಮಾತ್ಮನಿಗಾಗಿ ಹಾಡುತ್ತೇನೆ. ಸಾಯುವ ಮೊದಲು ಅವನನ್ನು ನಾನು ಕಾಣಬೇಕು. ಹಾಗಾಗಿ ನಾನು ಹಾಡುವಾಗ ಕೇಳುಗರೇ ದೇವರಾಗಿ ಬಿಡುತ್ತಾರೆ. ನಾನು ಅವರ ಸೇವೆ ಮಾಡುತ್ತೇನೆ. ಎಂದವರು ಯಾವಾಗಲೂ ಹೇಳುತ್ತಿದ್ದರು. ಅವರು ಹಾಡುವಾಗ ಸಭಾಂಗಣ ದೇಗುಲವಾಗಿಬಿಡುತ್ತಿತ್ತು. ಶ್ರೋತೃಗಳೇ ಅವರ ದೇವರಾಗುತ್ತಿದ್ದರು. ಅದರಿಂದಾಗಿಯೇ ಅವರ ಕಾರ್ಯಕ್ರಮ ಎಲ್ಲೇ ನಡೆಯಲಿ ಅವರು ಜನರಿಗೆ ತಲೆಬಾಗಿ ವಂದಿಸುತ್ತಿದ್ದರು.

ನಾವು ಚಿಕ್ಕಂದಿನಿಂದಲೇ ಸ್ವರವನ್ನು ಭಗವಂತ ಎಂದು ಭಾವಿಸಿಕೊಂಡು ಬಂದವರು. ಸ್ವರ ಸದಾ ನನ್ನ ಮನದಲ್ಲಿ ಇರುತ್ತಿತ್ತು. ನಾನು ಈ ಸ್ವರವನ್ನು ಹೇಗೆ ನೋಡುವುದು. ನಾನು ಇಲ್ಲಿ ಸಂಗೀತದ ಬಗ್ಗೆ ಮಾತನಾಡುತ್ತಿಲ್ಲ. ಅದು ಬೇರೆ. ಸ್ವರದ ಭಾಷೆಯ ಬಗ್ಗೆ ಮಾತನಾಡುತ್ತಿದ್ದೇನೆ. ನಿಮಗೆ ಸ್ವರದ ಮೂಲಕವೇ ನೇರವಾಗಿ ಸಂವಹಿಸಲು ಸಾಧ್ಯವಾಗಬೇಕು. ಪ್ರಪಂಚದಲ್ಲಿ ಸ್ವರ ಒಂದು ಬಿಟ್ಟು ಬೇರೆಯಾವುದೇ ಭಾಷೆಯೂ ಇಲ್ಲದೇ ಹೋಗಿದ್ದರೆ ಎಂದು ನಾನು ಎಷ್ಟೋ ಬಾರಿ ಯೋಚಿಸುತ್ತೇನೆ. ರಾಗ ಅನ್ನುವುದು ಸ್ಕೇಲ್ ಅಲ್ಲ. ಅದು ಸೂಕ್ಷ್ಮವಾದ ಅನುಸ್ವರಗಳಿಂದ ರೂಪುಗೊಂಡಿದೆ. ನಿಮಗೆ ವಾದಿ, ಸಂವಾದಿ, ಇತ್ಯಾದಿ ಮೂಲವಿಷಯಗಳು ಗೊತ್ತಿರಬೇಕು. ಆದರೆ ರಾಗ ಚಲಿಸುತ್ತಿರುವಾಗ, ಅದಕ್ಕೊಂದು ಜೀವಂತ ಅಸ್ತಿತ್ವ ಬಂದು ಬಿಡುತ್ತದೆ. ನಾನು ರಾಗಕ್ಕೆ ಶರಣಾಗಿಬಿಡುತ್ತೇನೆ. ನಾನು ರಾಗದಲ್ಲಿನ ಸ್ವರಗಳ ವಿಭಿನ್ನ ಛಾಯೆಗಳನ್ನು, ಸ್ವರಗಳ ಸ್ಥಾನವನ್ನು ತೋರಿಸುವಂತೆ ನಾನದನ್ನು ಬೇಡಿಕೊಳ್ಳುತ್ತೇನೆ. ಇದಕ್ಕೆ ಸೂಚಿತ ವ್ಯಾಕರಣವನ್ನು ಮೀರಿ ಆಚೆಗೆ ಹೋಗಬೇಕಾಗುತ್ತದೆ. ಅಮೋಲ್ ಪಾಲೇಕರ್ ನಿರ್ದೇಶಿಸಿರುವ ಭಿನ್ನ ಷಡ್ಜ ಡಾಕ್ಯುಮೆಂಟರಿಯಲ್ಲಿ ಒಂದು ಕಡೆ ಭಾಗ್ಯಶ್ರೀ ರಾಗದಲ್ಲಿ ಪಂಚಮವನ್ನು ವಿಸ್ತರಿಸುವ ಬಗ್ಗೆ ಮಾತನಾಡುವಾಗ ರಾಗವೇ ತನ್ನನ್ನು ಹಾಗೆ ವಿಸ್ತರಿಸು ಎಂದು ಅವರನ್ನು ಮೊರೆಯಿಡುತ್ತಿರುವಂತೆ ಭಾಸವಾಗುತ್ತಿತ್ತಂತೆ.

ಸ್ವರ ಅನ್ನುವುದು ತೀರಾ ದೈವಿಕವಾದದ್ದು. ಆ ಸ್ಥಿತಿಯನ್ನು ತಲುಪಬೇಕಾದರೆ ನಿಮಗೆ ನಿಮ್ಮನ್ನು ಸಂಪೂರ್ಣವಾಗಿ ಮರೆಯುವುದಕ್ಕೆ ಸಾಧ್ಯವಾಗಬೇಕು. ನೀವು ಯಾರೊಂದಿಗೆ ನಿಜವಾಗಿ ಇರಬೇಕೋ ಅವರಲ್ಲಿ ಒಬ್ಬರಾಗಬೇಕು ಎಂದು ಅವರಿಗೆ ತೀವ್ರವಾಗಿ ಅನ್ನಿಸಿತ್ತು. ಹಾಗಾಗಿಯೇ ಅವರ ಸಂಗೀತಕ್ಕೆ ಕೇಳುಗರನ್ನು ಮಂತ್ರಮುಗ್ಧಗೊಳಿಸುವ, ಆಳವಾದ ಧ್ಯಾನಸ್ಥ ಗುಣ ಸಾಧ್ಯವಾಗಿರುವುದು. ಅದು ನಮ್ಮನ್ನು ಪರಿವರ್ತಿಸಿಬಿಡುತ್ತದೆ.

ಟಿ ಎಂ ಕೃಷ್ಣ ಹೇಳುವಂತೆ ಕಿಶೋರಿಯವರನ್ನು ಆಲಿಸುವುದೆಂದರೆ, ಅದು ಕೇವಲ ಸಂಗೀತದ ಸೌಂದರ್ಯವನ್ನಷ್ಟೇ ಆಸ್ವಾದಿಸುವುದಲ್ಲ, ಅದನ್ನೂ ಮೀರಿದ್ದು. ಅವರು ಹಾಡುವಾಗ ರಾಗದಾಚೆಗಿನ ಯಾತ್ರೆಯಲ್ಲಿದ್ದಾರೆ ಎನಿಸುತ್ತದೆ. ಅವರು ಸಂಪೂರ್ಣವಾಗಿ ಬೇರೆಯೇ ಮಟ್ಟಕ್ಕೆ ಹೋಗಿಬಿಟ್ಟಿರುತ್ತಾರೆ. ರಾಗ ಬದುಕಿನೊಂದಿಗೆ ಬೆರೆತು, ಕಿಶೋರಿ ಅಮೋನ್ಕರ್ ಆ ಅನುಭವದ ವಾಹಕಿಯಾಗಿಬಿಡುತ್ತಾರೆ. ಒಮ್ಮೆ ಅವರು ಹಾಡುವಾಗ ನಾನು ಸುಂದರವಾಗಿ ಕಾಣುತ್ತೇನೆಂದು ಜನ ಹೇಳುತ್ತಾರೆ. ಅದಕ್ಕುತ್ತರ ಇಂದು ದೊರಕಿದೆ ಎನಿಸುತ್ತದೆ. ಹಾಡುವಾಗ ನನ್ನ ಸ್ವರಗಳು, ಲಯ ಮತ್ತು ಸ್ವತಃ ನನ್ನನ್ನೂ ಸೇರಿದಂತೆ ಎಲ್ಲವೂ ಸುಂದರವಾಗಿರಬೇಕು. ಈ ನನ್ನ ಹಂಬಲ ಅದೆಷ್ಟು ತೀವ್ರವಾದುದೆಂದರೆ ವೇದಿಕೆಯ ಮೇಲೆ ಸುಂದರವಾಗಿ ಕಾಣುವುದು ಕಿಶೋರಿಯಲ್ಲ, ಅಲ್ಲಿ ಸೌಂದರ್ಯವೇ ಮೈತಳೆದಿರುತ್ತದೆ. ನಿಜ, ಅಷ್ಟೆ ಅಲ್ಲ, ಅವರು ಬಳಸುವ ಹೊಸ ಸಂಚಾರಗಳು ಆಯಾ ರಾಗದ ಭಾವ, ಕಲಾತ್ಮಕತೆ ಹಾಗೂ ಸೌಂದರ್ಯಕ್ಕೆ ಧಕ್ಕೆಯುಂಟುಮಾಡುವುದಿಲ್ಲ. ಅದರಿಂದಾಗಿಯೇ ಆ ಬಗ್ಗೆ ಎಷ್ಟೇ ಟೀಕೆ ಬಂದರೂ ಅವರು ಅವುಗಳನ್ನು ಬದಲಿಸಿಕೊಂಡಿಲ್ಲ.

ಜ಼ಕೀರ್ ಹುಸೇನ್ ಹೇಳುವಂತೆ ಪ್ರತಿ ಬಾರಿ ಹಾಡುವಾಗಲೂ ಒಬ್ಬ ಕಲಾವಿದನಿಗೆ ನಿರ್ವಾಣ ಸಾಧಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಅಂತಿಮವಾಗಿ ನಿಮಗೆ ಪ್ರಯಾಣ ಮುಖ್ಯವಾಗಿತ್ತದೇ ಹೊರತು ಗುರಿಯಲ್ಲ. ಅವರ ಸಂಗೀತ ನಿಜವಾಗಿ ಯಶಸ್ವಿಯಾಗುವುದು ಅವರ ’ಸಂಗೀತ’ವು ಆಗುವ ’ಪ್ರಕ್ರಿಯೆ’ಯಲ್ಲಿ. ಕಿಶೋರಿಯು ಹಾಡುವಾಗ, ಅಥವಾ ಸಾಧನೆ ಮಾಡುವಾಗ ಏನನ್ನೋ ಹುಡುಕುತ್ತಿರುತ್ತಾರೆ ಅನ್ನಿಸುತ್ತಿರುತ್ತದೆ. ಅವರು ಸ್ವರಗಳ ಮೂಲಕ ಏನೋ ಗಂಭೀರವಾದದನ್ನು ಹುಡುಕುತ್ತಿರುತ್ತಾರೆ. ಕೇಳುಗರನ್ನೂ ಜೊತೆಗೆ ಕರೆದೊಯ್ಯುತ್ತಿರುತ್ತಾರೆ. ಹಾಗಾಗಿ ಅವರ ಸಂಗೀತಯಾತ್ರೆಯಲ್ಲಿ ಕೇಳುಗರಲ್ಲೂ ಅಂತಹುದೇ ಭಾವೋತ್ಕಟತೆ ಇರಬೇಕಾಗುತ್ತದೆ. ಅವರು ಆ ಪ್ರಕ್ರಿಯೆಯಲ್ಲಿ ಕೇಳುಗರ ಸಹಕಾರವನ್ನು ಬಯಸುತ್ತಿರುತ್ತಾರೆ. ಅದು ಸಿಗದೇ ಹೋದಾಗ ಸಿಟ್ಟಾಗುತ್ತಾರೆ. ಆಗವರಿಗೆ ಸಣ್ಣಪುಟ್ಟದ್ದೂ ಕಿರಿಕಿರಿಯಾಗುತ್ತದೆ.

ಅವರು ಎಂದು ಪ್ರಶಸ್ತಿಗೆ ಪ್ರಾಶಸ್ಯ ಕೊಟ್ಟವರಲ್ಲ. ಭಾರತರತ್ನ ಬರಲಿಲ್ಲ ಅನ್ನುವ ಬೇಸರವಿದೆಯೇ ಅಂದಾಗ, ಅವೆಲ್ಲಾ ತೀರಾ ಐಹಿಕವಾದದ್ದು, ನನಗೆ ಅದರಲ್ಲಿ ಆಸಕ್ತಿಯಿಲ್ಲ್ಲ. ಸಂಗೀತದ ಮೂಲಕ ಶಾಂತಿಯನ್ನು ಕಂಡುಕೊಳ್ಳುವುದಕ್ಕೆ ನನಗೆ ಸಾಧ್ಯವಾಗಬೇಕು ಎಂದಿದ್ದರು. ಜೊತೆಗೆ ಭೀಮಸೇನ್ ಜೋಷಿಯವರಿಗೆ ಭಾರತರತ್ನ ಬಂದ ಬಗ್ಗೆ ಪ್ರಾಸ್ತಾಪಿಸುತ್ತಾ ಅವರಿಗೆ ಅದು ಬಂದಾಗ ಅವರಿಗೆ ತಾವು ಏನು ಸ್ವೀಕರಿಸುತ್ತಿದ್ದೇವೆ ಅನ್ನುವುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿದ್ದರು. ೧೦ವರ್ಷ ಮೊದಲೂ ಸೊಗಸಾಗಿ ಹಾಡುತ್ತಿದ್ದರು. ಆಗಲೇ ಏಕೆ ಗುರುತಿಸುವುದಕ್ಕೆ ಸಾಧ್ಯವಾಗಲಿಲ್ಲ ಎಂದಿದ್ದರು. ಅದನ್ನವರು ಉಲ್ಲೇಖಿಸಿದ್ದು ಪ್ರಶಸ್ತಿಯೆಲ್ಲಾ ಅಷ್ಟು ಮುಖ್ಯವಲ್ಲ ಎಂದು ಹೇಳುವುದಕ್ಕೆ.

ಅವರ ಬಗ್ಗೆ ಹಲವು ವಿವಾದಗಳು ಇವೆ. ಹಲವು ಆಕ್ಷೇಪಗಳೂ ಇವೆ. ಸಿಡುಕಿ ಎನ್ನುತ್ತಾರೆ, ಜಂಭ ಅನ್ನುತ್ತಾರೆ. ಜನರನ್ನು ಕಾಯಿಸುತ್ತಾರೆ ಎನ್ನುವ ಟೀಕೆಯಿದೆ. ಇವೆಲ್ಲವನ್ನೂ ಅರ್ಥಮಾಡಿಕೊಳ್ಳವ ಮನಸ್ಸಿದ್ದರೆ ಅರ್ಥಮಾಡಿಕೊಳ್ಳಬಹುದು.

ಇತ್ತೀಚೆಗೆ ಒಂದು ಕಾರ್ಯಕ್ರಮ ನೀಡುತ್ತಿದ್ದರು. ಹಾಡುವುದಕ್ಕೆ ತುಂಬಾ ಶ್ರಮವಾಗುತ್ತಿತ್ತು. ತುಂಬಾ ಕೆಮ್ಮುತ್ತಿದ್ದರು. ಪದೇ ಪದೇ ಬಿಸಿ ನೀರು ಕುಡಿಯುತ್ತಿದ್ದರು, ಈಗ ನನ್ನ ಸಂಗೀತದಲ್ಲಿ ಸಾಧ್ಯವಾಗುತ್ತಿರುವುದು ಹಲವು ವರ್ಷಗಳ ಹಿಂದೆ ಸಾಧ್ಯವಾಗಿರಲಿಲ್ಲ. ಹೆಚ್ಚು ನೀರವತೆ ಇದೆ. ನನ್ನ ಹಾದಿ ನನಗೆ ಗೊತ್ತಾಗಿದೆ, ನನ್ನ ಗುರಿ ಸ್ಪಷ್ಟವಾಗುತ್ತಿದೆ. ಅದನ್ನು ತಲುಪುತ್ತೇನೋ ಇಲ್ಲವೋ ಗೊತ್ತಿಲ್ಲ. ಬದುಕಿರುವವರೆಗೂ ಪ್ರಯತ್ನಿಸುತ್ತಿರುತ್ತೇನೆ ಎಂದಿದ್ದರು. ಸ್ವರಗಳ ಮೂಲಕ ದೇವರನ್ನು ಕಾಣಬೇಕು ಅಂದುಕೊಂಡು ಸಂಗೀತವನ್ನು ಧ್ಯಾನವಾಗಿ ಭಾವಿಸುತ್ತಾ ಕೊನೆಗೆ ಧ್ಯಾನ ಮಾಡುತ್ತಲೇ ಕೊನೆಯುಸಿರೆಳೆದ ಕಿಶೋರಿ ನಮ್ಮನ್ನು ಬಹುಕಾಲ ಕಾಡುತ್ತಾರೆ, ನಮ್ಮ ಮನಸ್ಸಿನಲ್ಲಿ ಬಹುಕಾಲ ಉಳಿಯುತ್ತಾರೆ.

ಟಿ ಎಸ್ ವೇಣುಗೋಪಾಲ್, ಶೈಲಜ
ಸಿ ಎಚ್ ೭೩, ೭ನೇ ಮುಖ್ಯ ರಸ್ತೆ
ಸರಸ್ವತೀ ಪುರಂ
ಮೈಸೂರು-೯

Recommended Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.