ನಿಮ್ಮ ಮನಸ್ಸಿಗೆ ಕನ್ನ ಹಾಕುವರು ಬರುತ್ತಿದ್ದಾರೆ, ಎಚ್ಚರಿಕೆ!

 In SUTTA MUTTA

 

ಕೇಂಬ್ರಿಡ್ಜ್ ಅನಲಿಟಿಕಾ ಸಂಸ್ಥೆ ಇಂದು ತುಂಬಾ ಸುದ್ದಿಯಲ್ಲಿದೆ. ತನ್ನ ವ್ಯವಹಾರಕ್ಕಾಗಿ ಫೇಸ್‌ಬುಕ್ಕಿನ ಕೋಟ್ಯಾಂತರ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಅವರ ಅನುಮತಿಯಿಲ್ಲದೆ ದೋಚಿದೆ ಎಂಬ ಆರೋಪ ಅದರ ಮೇಲಿದೆ. ಟ್ರಂಪ್ ಗೆಲ್ಲುವುದರಲ್ಲಿ, ಬ್ರಿಟನ್ ಯೂರೋಪಿಯನ್ ಯುನಿಯನ್ನಿನಿಂದ ಹೊರಬರುವಲ್ಲಿ, ಅಷ್ಟೇ ಅಲ್ಲ ಭಾರತದ ಚುನಾವಣೆಯಲ್ಲೂ ಅದರ ಕೈವಾಡ ಇದೆ ಎಂದು ಪತ್ರಿಕೆಗಳು ವರದಿ ಮಾಡಿವೆ.
ನಾವು ಎಲ್ಲಿದ್ದೇವೆ, ಏನು ತಿನ್ನುತ್ತೇವೆ, ಏನು ಮಾಡುತ್ತೇವೆ, ನಮ್ಮ ಇಷ್ಟಾನಿಷ್ಟಗಳೇನು, ನಮ್ಮ ವಯಸ್ಸು, ಲಿಂಗ ಹೀಗೆ ಎಲ್ಲಾ ಮಾಹಿತಿಗಳು ಫೇಸ್‌ಬುಕ್, ಗೂಗಲ್ ಇತ್ಯಾದಿ ವೇದಿಕೆಗಳ ಮಾಲಿಕರಲ್ಲಿ ಯಥೇಚ್ಛವಾಗಿವೆ. ಹಣಕೊಟ್ಟರೆ ನಿಮಗೆ ಅದು ಸಿಗುತ್ತದೆ. ಮಾರುಕಟ್ಟೆ ಸಂಸ್ಥೆಗಳು, ಸಂಶೋಧಕರು, ಉದ್ದಿಮೆದಾರರು ಇವರೆಲ್ಲಾ ಅದೇ ಕೆಲಸ ಮಾಡುತ್ತಿದ್ದಾರೆ. ಬಳಕೆದಾರರ ಆಸಕ್ತಿಗೆ ತಕ್ಕಂತೆ ಮಾಹಿತಿಯನ್ನು ರವಾನಿಸುವುದಕ್ಕೆ, ಅವರ ಮೇಲೆ ಪ್ರಭಾವ ಬೀರುವುದಕ್ಕೆ ಈ ಮಾಹಿತಿಯನ್ನು ಬಳಸಿಕೊಳ್ಳುತ್ತಿದ್ದಾರೆ. ಇವರಂತವರಿಗೆ ನಮ್ಮ ವೈಯಕ್ತಿಕ ಮಾಹಿತಿಗಳನ್ನು ಮಾರಿಕೊಂಡೇ ಫೇಸ್‌ಬುಕ್ಕಿನ ಮಾಲಿಕ ಜ಼ಕರ್‌ಬರ್ಕ್ ಇಂದು ಪ್ರಪಂಚದ ಅತಿದೊಡ್ಡ ಶ್ರೀಮಂತರ ಸಾಲಿನಲ್ಲಿ ನಿಂತಿರುವುದು.
ಗೂಗಲ್, ಫೇಸ್‌ಬುಕ್ ಯಾವುದನ್ನೇ ಸ್ವಲ್ಪ ಗಮನಿಸಿ. ಅವು ನಿಮ್ಮ ವ್ಯಕ್ತಿತ್ವವನ್ನು, ನಿಮ್ಮ ಸ್ವಭಾವವನ್ನು ಗಮನಿಸುತ್ತಿರುತ್ತವೆ. ನಿಮ್ಮ ಪ್ರೊಫೈಲ್‌ನ್ನು ರೂಪಿಸುತ್ತಿರುತ್ತವೆ. ಫೇಸ್‌ಬುಕ್ಕಿನಲ್ಲಿ ನೀವು ಒತ್ತುವ ಲೈಕುಗಳನ್ನೇ ಬಳಸಿ ನಿಮ್ಮ ನಡವಳಿಕೆಗಳನ್ನು, ನಿಮ್ಮ ಒಲವುಗಳನ್ನು ಅವರು ಅರ್ಥಮಾಡಿಕೊಳ್ಳುತ್ತಿರುತ್ತಾರೆ. ಹೆಚ್ಚೆಚ್ಚು ಮಾಹಿತಿ ಸಿಕ್ಕಷ್ಟು ನಿಮ್ಮ ಪರಿಚಯ ಅವರಿಗೆ ಚೆನ್ನಾಗಿ ಆಗುತ್ತಾ ಹೋಗುತ್ತದೆ. ನಿಮ್ಮ ಗೆಳೆಯರಿಗಿಂತ, ನಿಮ್ಮ ಮನೆಯವರಿಗಿಂತ, ಕೊನೆಗೆ ನಿಮಗಿಂತ ನಿಮ್ಮನ್ನು ಅವರು ಚೆನ್ನಾಗಿ ಅರ್ಥಮಾಡಿಕೊಂಡುಬಿಡುತ್ತಾರೆ. ನಿಮ್ಮ ಬಗ್ಗೆ ನಿಮಗೆ ಗೊತ್ತಿರುವುದಕ್ಕಿಂತ ಹೆಚ್ಚಿಗೆ ಅವರಿಗೆ ಗೊತ್ತಿರುತ್ತದೆ!
ಇದಕ್ಕಾಗಿ ಅವರು ಗಣಕವಿಜ್ಞಾನವನ್ನು, ಡೇಟಾ ಸೈನ್ಸನ್ನು ಬಳಸಿಕೊಳ್ಳುತ್ತಾರೆ. ಅವರ ಬಳಿ ಇರುವ ವಿಪುಲವಾದ ದತ್ತಾಂಶಗಳ ಆಳದಲ್ಲಿ ಅಡಗಿರುವ ಗುಟ್ಟನ್ನು ಅರ್ಥಮಾಡಿಕೊಳ್ಳಲು ಪರಿಣತರು ಸೂತ್ರಗಳನ್ನು ಹೆಣೆಯುತ್ತಾರೆ. ಇದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ ಈಗ ಆ ಅಸ್ತ್ರವನ್ನು ರಾಜಕೀಯದಾಟದಲ್ಲಿ ಬಳಸಲಾಗುತ್ತಿದೆ. ಮನುಷ್ಯರ ಮನಸ್ಸನ್ನು, ವರ್ತನೆಯನ್ನು, ಅಭಿಪ್ರಾಯವನ್ನು ತಿದ್ದಲು ಅದನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ.
ಈಗ ಕೇಂಬ್ರಿಡ್ಜ್ ಅನಲಿಟಿಕವನ್ನು ಚುನಾವಣೆ ಪ್ರಚಾರಕ್ಕೆ ನೇಮಿಸಿಕೊಳ್ಳುತ್ತೀರಿ ಅಂತಿಟ್ಟುಕೊಳ್ಳಿ. ನಿಮ್ಮ ಮುಂದೆ ಮೂರು ರೀತಿಯ ಜನ ಇರುತ್ತಾರೆ. ಒಂದು ಗುಂಪಿನವರು ನಿಮ್ಮ ಕಟ್ಟಾ ಬೆಂಬಲಿಗರು. ಇನ್ನೊಂದು ಗುಂಪಿನವರು ವಿರೋಧಿಗಳು. ಇನ್ನೂ ಒಂದು ನಿಲುವಿಗೆ ಬರದೇ ಇರುವವರದ್ದು ಮೂರನೇ ಗುಂಪು. ಯಾವ್ಯಾವುದೋ ಕಾರಣಕ್ಕೆ ಅವರಿಗೆ ಒಂದು ನಿಲುವಿಗೆ ಬರುವುದಕ್ಕೆ ಸಾಧ್ಯವಾಗಿರುವುದಿಲ್ಲ. ಅದಕ್ಕೆ ಅವರಿಗೆಲ್ಲಾ ಬೇರೆ ಬೇರೆಯದೇ ಆದ ಕಾರಣಗಳಿರುತ್ತವೆ. ಅದನ್ನು ಅರ್ಥ ಮಾಡಿಕೊಂಡರೆ, ಅದಕ್ಕೆ ತಕ್ಕಂತೆ ಅವರಿಗೆ ಮೆಸೇಜುಗಳನ್ನು ಕಳುಹಿಸಿ ಅವರ ಮನಸ್ಸನ್ನು ಪ್ರಭಾವಿಸಬಹುದು. ನಾವು ಕೋಟ್ಯಾಂತರ ಜನರ ವೈಯಕ್ತಿಕ ವಿವರಗಳನ್ನು ಫೇಸ್‌ಬುಕ್ಕಿನಿಂದ ಪಡೆದುಕೊಂಡು, ಅದನ್ನು ಬಳಸಿಕೊಂಡು ಅವರ ಒಳಗಿನ ಮನಸ್ಸನ್ನು ಪ್ರಭಾವಿಸಲು ಮಾಡೆಲ್ಲುಗಳನ್ನು ನಿರ್ಮಿಸಿದೆವು. ಎಂದು ಕೇಂಬ್ರಿಡ್ಜ್ ಅನಲಿಟಿಕಾ ಸಂಸ್ಥೆಯ ಸಹಸ್ಥಾಪಕ ಕ್ರಿಸ್ಟೋಫರ್ ವೈಲಿ ಹೇಳಿದ್ದಾನೆ. ಸಂಸ್ಥೆಯ ವಹಿವಾಟಿನ ವಿವರಗಳನ್ನು ಗಾರ್ಡಿಯನ್ ಮೊದಲಾದ ಪತ್ರಿಕೆಗಳಿಗೆ ನೀಡಿದ ಸಂದರ್ಶನಗಳಲ್ಲಿ ಅವನು ದಾಖಲಿಸಿದ್ದಾನೆ.
ದೇಶದ ಜನರ ಮನಸ್ಸಿನ ಮೇಲೆ ಅನೈತಿಕ ಆಟ ಆಡಿದವರಲ್ಲಿ ವೈಲಿ ಕೂಡ ಒಬ್ಬ. ಅವನು ಲಂಡನ್ ಸ್ಕೂಲ್ ಆಫ್ ಎಕಾನಿಮಿಕ್ಸ್‌ನಲ್ಲಿ ಓದುತ್ತಿದ್ದಾಗಲೇ ಅವನಿಗೆ ರಾಜಕೀಯ ನಂಟಿತ್ತು. ಕೆನಡಾದ ಲಿಬರಲ್ ಡೆಮಾಕ್ರೆಟಿಕ್ ಪಕ್ಷಕ್ಕೆ ದತ್ತಾಂಶಗಳನ್ನು ಬಳಸಿಕೊಳ್ಳಲು ನೆರವಾಗುತ್ತಿದ್ದ. ೧೮ ವರ್ಷದವನಿದ್ದಾಗಲೇ ಅವನಿಗೆ ದತ್ತಾಂಶದ ಜಗತ್ತು ಆಟದ ಮೈದಾನವಾಗಿಬಿಟ್ಟಿತ್ತು. ಅದರ ಪ್ರತಿ ಇಂಚೂ ಅವನಿಗೆ ಅರ್ಥವಾಗಿತ್ತು. ಈ ಮೇಧಾವಿಯ ಮಾತನ್ನು ಡೆಮಾಕ್ರಿಟಿಕ್ ಪಕ್ಷದ ಹಿರಿಯ ರಾಜಕಾರಣಿಗಳೂ ಗಂಭೀರವಾಗಿ ಕೇಳಿಸಿಕೊಳ್ಳುತ್ತಿದ್ದರು. ಅವನು ಫ್ಯಾಷನ್ನಿನ ಜಾಡು ಹಿಡಿದು ಸಂಶೋಧನೆ ಮಾಡುತ್ತಿದ್ದ. ರಾಜಕೀಯವೂ ಒಂದು ರೀತಿಯಲ್ಲಿ ಫ್ಯಾಷನ್ ಇದ್ದ ಹಾಗೆ. ಇಂದು ಯಾರೂ ಇಷ್ಟಪಡದ ಒಂದು ಸರಕನ್ನು ನಾಳೆ ಎಲ್ಲರೂ ಬಳಸುವಂತೆ ಮಾಡುವುದು ಹೇಗೆ? ಅದೇ ಜಾಹಿರಾತಿನ ಕೆಲಸ.
ಅವನಿಗೆ ಸ್ವೀವ್ ಬ್ಯಾನನ್ ಪರಿಚಯವಾಯಿತು. ಬ್ಯಾನನ್ ಕೇಂಬ್ರಿಡ್ಜ್ ಅನಲಿಟಿಕಾ ಸಂಸ್ಥೆಯ ಸ್ಥಾಪಕ. ಟ್ರಂಪಿನ ಇಡೀ ಸಿದ್ದಾಂತದ ಚೌಕಟ್ಟನ್ನು ರೂಪಿಸಿದವನೇ ಅವನು ಅನ್ನುವ ಮಾತಿದೆ. ಇಟಾಲಿಯನ್ ಫ್ಯಾಸಿಸ್ಟ್ ಬಲಪಂಥೀಯ ಚಿಂತಕ ಜುಲಿಯಸ್ ಎವೋಲನ ಚಿಂತನೆಗಳಿಂದ ಪ್ರಭಾವಿತನಾದವನು. ಬ್ಯಾನನ್ ಬಲಪಂಥೀಯ ಸಿದ್ದಾಂತವನ್ನು ಪುನರ್‌ಸ್ಥಾಪಿಸುವುದನ್ನೇ ಬದುಕಿನ ಗುರಿಮಾಡಿಕೊಂಡಿರುವವನು. ಇನ್ನು ಅನೆಲಿಟಿಕಾ ಸಂಸ್ಥೆಗೆ ಹಣ ಹೂಡಿದವನು ರಾಬರ್ಟ್ ಮರ್ಸರ್. ಮರ್ಸರ್ ರಿಪಬ್ಲಿಕನ್ ಪಕ್ಷಕ್ಕೆ ಹಣ ನೀಡುತ್ತಿದ್ದ ಅಮೇರಿಕೆಯ ದೊಡ್ಡ ಸಿರಿವಂತ. ದುಡ್ಡು, ಬುದ್ದಿಮತ್ತೆ, ರಾಜಕೀಯ ಚಾಣಾಕ್ಷತನ ಒಟ್ಟಿಗೆ ಸೇರಿಕೊಂಡಿತು. ಸಾಮಾಜಿಕ ಮಾಧ್ಯಮಗಳನ್ನು ಹಾಗೂ ಬೃಹತ್ ಪ್ರಮಾಣದ ದತ್ತಾಂಶಗಳನ್ನು ಬಳಸಿಕೊಂಡು ಜಗತ್ತನ್ನು ಕೆಲವರ ಇಷ್ಟಕ್ಕೆ ತಕ್ಕಂತೆ ರೂಪಿಸುವುದಕ್ಕೆ ನಡೆಸುವ ಮಾಹಿತಿ ಕಾರ್ಯಾಚರಣೆಯ ಕೇಂದ್ರ ಸೃಷ್ಟಿಯಾಯಿತು.
ಆ ಸಮಯದಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಸೈಕೋಮೆಟ್ರಿ ಕೇಂದ್ರದಲ್ಲಿ ಇಬ್ಬರು ಮನೋವಿಜ್ಞಾನಿಗಳು -ಮಿಕಲ್ ಕೊಸಿನ್ಸ್‌ಕಿ ಆಗೂ ಡೇವಿಡ್ ಸ್ಟಿಲ್‌ವೆಲ್ ಜನರ ವ್ಯಕ್ತಿತ್ವನ್ನು ಅಧ್ಯಯನ ಮಾಡುವ ವಿಧಾನಗಳನ್ನು ಕುರಿತು ಪ್ರಯೋಗ ಮಾಡುತ್ತಿದ್ದರು. ಸ್ಟಿಲ್‌ವೆಲ್ ಮೈಪರ್ಸನಾಲಿಟಿ ಅನ್ನುವ ಆಪ್ ತಯಾರಿಸಿದ್ದ. ಅದು ತುಂಬಾ ಜನಪ್ರಿಯವಾಗಿತ್ತು. ಅದು ಬಳಕೆದಾರರ ಪ್ರೊಫೈಲ್ ತಯಾರಿಸುತ್ತಿತ್ತು. ಅದಕ್ಕಾಗಿ ಜನರ ವ್ಯಕ್ತಿತ್ವದ ಐದು ಪ್ರಮುಖ ಗುಣಗಳನ್ನು-ನಿಷ್ಕಪಟತೆ, ಆತ್ಮಸಾಕ್ಷಿಕತೆ, ಬಾಹ್ಯಪ್ರವೃತ್ತಿ, ಒಪ್ಪಿತವಾಗುವ ಗುಣ, ನರವಿಕೃತಿ- ಇವುಗಳನ್ನು ಬಳಸಿಕೊಳ್ಳಲಾಗುತ್ತಿತ್ತು. ಜನ ಫೇಸ್‌ಬುಕ್ಕಿನಲ್ಲಿ ಮಾಡುವ ಲೈಕ್ಸ್ಗಳನ್ನೇ ಬಳಸಿಕೊಂಡು ಅವರ ಹಾಗೂ ಅವರ ಗೆಳೆಯರ ಸ್ವಭಾವವನ್ನು ಅಳೆದುಬಿಡಬಹುದಿತ್ತು. ಜನರ ಸ್ವಭಾವವನ್ನು ಅಳೆಯುವ ಒಂದು ಮಾನಸಿಕ ಮಾಪನ ಸಿಕ್ಕಿತು. ಮನುಷ್ಯನ ಸ್ವಭಾವವನ್ನು ಕುರಿತಂತೆ ಹೊಸ ಹೊಳವುಗಳು ಸಿಗತೊಡಗಿದವು. ಉದಾಹರಣೆಗೆ ನಾನು ಇಸ್ರೇಲನ್ನು ದ್ವೇಷಿಸುತ್ತೇನೆ ಅನ್ನುವುದನ್ನು ಇಷ್ಟಪಟ್ಟವರು ಹೆಚ್ಚಾಗಿ ನೈಕ್ ಶೂಗಳನ್ನು ಹಾಗೂ ಕಿಟ್‌ಕ್ಯಾಟ್‌ಗಳನ್ನು ಇಷ್ಟಪಡುತ್ತಿದ್ದರಂತೆ. ೨೦೧೩ರಲ್ಲಿ ಈ ಕುರಿತು ಅವರ ಪ್ರಮುಖ ಸಂಶೋಧನಾ ಲೇಖನ ಪ್ರಕಟವಾಯಿತು. ಅದು ನೂರಾರು ಸಾಧ್ಯತೆಗಳಿಗೆ ತೆರೆದುಕೊಂಡಿತು. ಈ ಬಗ್ಗೆ ಸಂಶೋಧನೆಗಳಲ್ಲಿ ಹಣತೊಡಗಿಸಲು ಹಲವರು ಮುಂದೆ ಬಂದರು.
ವೈಲಿಗೂ ಇಂತಹ ಒಂದು ಸಾಧನ ಬೇಕಿತ್ತು. ಅವನು ಆಗ ಲಿಬರಲ್ ಡೆಮಾಕ್ರೆಟಿಕ್ಸ್ ಬೆಂಬಲಿಗರ ಮನಸ್ಸನ್ನು ಅರ್ಥಮಾಡಿಕೊಳ್ಳಲು ಹೆಣಗುತ್ತಿದ್ದ. ಈ ಸಂಶೋಧನೆಯಿಂದ ಅವನಿಗೆ ಎಲ್ಲವೂ ಸ್ಪಷ್ಟವಾಗತೊಡಗಿತು. ತನ್ನೆಲ್ಲಾ ಹುಚ್ಚು ಯೋಚನೆಗಳನ್ನು ಪ್ರಯೋಗ ಮಾಡಿ ನೋಡುವುದಕ್ಕೆ ವೈಲ್‌ಗೆ ಕೆಂಬ್ರಿಡ್ಜ್ ಅನಲಿಟಿಕಾದಲ್ಲಿ ಅವಕಾಶವಿತ್ತು. ಆದರೆ ಅವನಿಗೆ ಮಾಹಿತಿ ಬೇಕಾಗಿತ್ತು. ಕೊಸಿನ್ಸ್ಕಿ ಬಳಿ ಫೇಸ್‌ಬುಕ್ ಮಾಹಿತಿ ಇತ್ತು. ಆದರೆ ಅವನು ಕೊಡಲು ತಯಾರಿರಲಿಲ್ಲ. ಅವನಿಲ್ಲದಿದ್ದರೆ ಇನ್ನೊಬ್ಬ. ಕೇಂಬ್ರಿಡ್ಜ್‌ನ ಮಾಹಿತಿ ವಿಜ್ಞಾನಿ ಅಲೆಕ್ಸಾಂಡರ್ ಕೋಗನ್ ಮುಂದೆ ಬಂದ. ಮಾಹಿತಿ ಕಬಳಿಸಲು ಣhisismಥಿಜigiಣಚಿಟಟiಜಿe ಅಂತ ಒಂದು ಆಪ್‌ಅನ್ನು ರೂಪಿಸಿದ. ಅದನ್ನು ಬಳಸಲು ಒಪ್ಪಿಕೊಂಡವರಿಗೆ ಹಣ ಕೊಡುವುದಾಗಿ ಜಾಹಿರಾತು ನೀಡಿದ. ಸುಮಾರು ಜನ ಮುಂದೆ ಬಂದರು. ಇವನು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ತಮ್ಮ ಮಾಹಿತಿ ಮಾತ್ರವಲ್ಲ ತಮ್ಮ ಗೆಳೆಯರ ವೈಯಕ್ತಿಕ ಮಾಹಿತಿಯನ್ನು ಇವನಿಗೆ ಒಪ್ಪಿಸಿಬಿಟ್ಟರು. ಮಿಲಿಯನ್‌ಗಟ್ಟಲೇ ಜನರ ವೈಯಕ್ತಿಕ ಮಾಹಿತಿ ನಿರಾಯಸವಾಗಿ ಕೇಂಬ್ರಿಜ್ಜ್ ಅನಲಿಟಿಕಾಗೆ ಸಿಕ್ಕಿತು. ಅವರ‍್ಯಾರಿಗೂ ಇದರ ಪರಿವೆಯೇ ಇಲ್ಲ. ಹೀಗೆ ಅವರಿಂದ ಶೈಕ್ಷಣಿಕ ಉದ್ದೇಶಗಳಿಗೆ ಸಂಗ್ರಹಿಸಿದ ಮಾಹಿತಿಯನ್ನು ಅವರ ಅನುಮತಿಯಿಲ್ಲದೆ ಮೂರನೆಯವರಿಗೆ ಮಾರುವುದು ಕಾನೂನು ಬಾಹಿರ. ಇಡೀ ವ್ಯವಹಾರವೇ ಅನೈತಿಕವಾದದ್ದು. ಅವರ‍್ಯಾರಿಗೂ ಇದು ಸಮಸ್ಯೆಯೇ ಅಲ್ಲ.
ಈಗ ಜನರ ಮನಸ್ಸಿನ ಮೇಲೆ ಮಾನಸಿಕ ಕಾರ್ಯಚರಣೆ ನಡೆಸುವುದಕ್ಕೆ ಬೇಕಾದ ಎಲ್ಲವೂ ಅವರಿಗೆ ಸಿಕ್ಕಂತಾಯಿತು. ಇದು ಅವರ ಪರಿಣತಿಯ ಕ್ಷೇತ್ರವಾಯಿತು. ಗಾಳಿಸುದ್ಧಿ, ಸುಳ್ಳುಸುದ್ಧಿ, ತಪ್ಪುಮಾಹಿತಿ ಇವೆಲ್ಲವನ್ನು ಬಳಸಿಕೊಂಡು ಜನರ ಮೇಲೆ ದಾಳಿಮಾಡುವುದಕ್ಕೆ ಮಾಹಿತಿ ಕಾರ್ಯಾಚರಣೆ ಎಂಬ ಇನ್ನೊಂದು ಶಸ್ತ್ರಾಸ್ತ್ರ ರೂಪುಗೊಂಡಿತು. ಇದಕ್ಕೆ ಮಿಲಿಟರಿ, ರಾಜಕೀಯ, ಚುನಾವಣೆ ಇತ್ಯಾದಿ ಕ್ಷೇತ್ರಗಳು ಒಳ್ಳೆಯ ಮಾರುಕಟ್ಟೆಯನ್ನು ಒದಗಿಸಿತು. ಸಮರಕ್ಕೆ ಭೂಮಿ, ಸಾಗರ, ವಾಯು ಹಾಗೂ ಆಕಾಶದ ಜೊತೆಗೆ ಎಂಬ ಐದನೇ ಆಯಾಮ ಸೃಷ್ಟಿಯಾಯಿತು. ಇದರಿಂದ ಪ್ರತ್ಯೇಕವಾಗಿ ಬೇಕಾದವರಿಗೆ, ಬೇಕಾದ ಮೆಸೇಜ್‌ನ್ನು ಜಾಗರೂಕತೆಯಿಂದ ಹೆಣೆದು ಕಲಿಸುವುದಕ್ಕೆ ಸಾಧ್ಯವಾಯಿತು. ಪ್ರತಿಹಂತದಲ್ಲಿ ಅವರ ಪ್ರತಿಕ್ರಿಯೆಯನ್ನು ಗ್ರಹಿಸಿಕೊಂಡು ಮಾರ್ಪಾಡು ಮಾಡಿಕೊಂಡು ಜನರನ್ನು ಅವರಿಗೆ ಗೊತ್ತಾಗದ ಹಾಗೆ ಪ್ರಭಾವಿಸುತ್ತಾ ಹೋಗಬಹುದಿತ್ತು.
ಆಗ ಯೂರೋಪಿಯನ್ ಯೂನಿಯನ್ನಿನಿಂದ ಇಂಗ್ಲೆಂಡ್ ಹೊರಬರುವ ಆಂದೋಲನದ ನಡೆಯುತ್ತಿತ್ತು. ಅದರಲ್ಲಿ ನಿಗೆಲ್ ಫರಾ ಸಕ್ರಿಯನಾಗಿದ್ದ. ಅವನು ಸ್ಟೀವ್ ಬ್ಯಾನನ್ ಗೆಳೆಯ. ಅಲ್ಲಿ ಈ ಹೊಸ ಮಾನಸಿಕ ಅಸ್ತ್ರದ ಪ್ರಯೋಗ ನಡೆಯಿತು. ನಂತರ ಅಮೇರಿಕೆಯಲ್ಲಿ ಚುನಾವಣೆಯಲ್ಲಿ ಟ್ರಂಪಿನ ಪರವಾಗಿ ಜನರ ಮನಸ್ಸನ್ನು ಒಳಿಸಲು ಇದನ್ನು ಬಳಸಲಾಯಿತು. ನೂರಾರು ಕಡೆ ಇದರ ಬಳಗೆಯಾಗಿದೆಯಂತೆ. ಆದರೆ ಇದು ನಿಜವಾಗಿ ಎಷ್ಟರ ಮಟ್ಟಿಗೆ ಪರಿಣಾಮಕಾರಿ ಅನ್ನುವುದನ್ನು ಖಚಿತವಾಗಿ ಹೇಳುವುದಕ್ಕಾಗುವುದಿಲ್ಲ.
ವರ್ತನ ಅರ್ಥಶಾಸ್ತ್ರಜ್ಞರು ಈ ಮನವೊಲಿಸುವ, ಪ್ರಭಾವಿಸುವ ಕ್ರಿಯೆಯನ್ನು ನಡ್ಜಿಂಗ್ ಅಂತ ಕರೆಯುತ್ತಾರೆ. ಸಿಗರೇಟು ಬಿಡಿಸಲು, ಕ್ಷಯಕ್ಕೆ ಸಮಯಕ್ಕೆ ಸರಿಯಾಗಿ ಔಷಧಿ ತೆಗೆದುಕೊಳ್ಳುವಂತೆ ಮಾಡಲು, ತೆರಿಗೆಗಳನ್ನು ಸಮಯಕ್ಕೆ ಸರಿಯಾಗಿ ಕಟ್ಟುವಂತೆ ಮಾಡುವುದಕ್ಕೆ ಮನವೊಲಿಸುವ ವಿಧಾನಗಳನ್ನು ರೂಪಿಸುವುದು ಸರಿ. ಆದರೆ ರಾಜಕೀಯವಾಗಿ ಜನರ ಅರಿವಿಗೆ ಬಾರದಂತೆ ಅನೈತಿಕ ವಿಧಾನಗಳನ್ನು ಬಳಸಿ ಮನಸ್ಸನ್ನು ಪ್ರಭಾವಿಸುವ ಕ್ರಮ ಗಾಬರಿ ತರುವಂತಹದ್ದು. ಇಂತಹ ಅಪಾಯದ ಬಗ್ಗೆ ಚರ್ಚಿಸುವಾಗೆಲ್ಲಾ ಥೇಲರ್ ಮೊದಲಾದ ಹಲವು ವರ್ತನ ಅರ್ಥಶಾಸ್ತ್ರಜ್ಞರು ನೈತಿಕತೆ ಹಾಗೂ ಸಮಾಜದ ಒಳಿತನ್ನು ಕುರಿತು ಮಾತನಾಡುತ್ತಾರೆ.
ಭಾವೋದ್ವೇಗದ ಮಟ್ಟದಲ್ಲಿ, ಇಷ್ಟೊಂದು ವ್ಯಾಪಕವಾಗಿ, ಮಿಥ್ಯೆಯನ್ನು ಸೃಷ್ಟಿಸಿ ಜನರ ಮನಸ್ಸಿನ ಮೇಲೆ ಆಟ ಆಡುವ ಈ ಅನೈತಿಕ ಆಟ ನಿಜಕ್ಕೂ ಆತಂಕಕಾರಿ.

Recent Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.