ನೇಪಥ್ಯದಲ್ಲೇ ರಿಂಗಣಿಸಿದ ಅನ್ನಪೂರ್ಣಾದೇವಿ

 In RAGAMALA

 

ಭಾರತೀಯ ಶಾಸ್ತೀಯ ಸಂಗೀತಕ್ಕೆ ಬಾಬಾ ನೀಡಿದ ಬಹುದೊಡ್ಡ ಕೊಡುಗೆ ಬಹುಶಃ ಅನ್ನಪೂರ್ಣಾದೇವಿ ಎನಿಸುತ್ತದೆ. ಮೈಹರಿನ ಮಹಾರಾಜ ಬೃಜನಾಥ್ ಆ ಮಗುವನ್ನು ಅನ್ನಪೂರ್ಣಾ ಎಂದು ಕರೆದರು. ಐಶ್ವರ್ಯ ಹಾಗು ಸಮೃದ್ಧಿಯ ಸಂಕೇತವಾದ ಭಾರತೀಯ ದೇವತೆಯ ಹೆಸರು ಅದು. ಮನೆಯಲ್ಲಿ ಅಪ್ಪ ಕರೆದ ಹೆಸರು ರೋಶನಾರಾ. ಅವಳಿಗೆ ಸಂಗೀತ ಹೇಳಿಕೊಡುವ ಮನಸ್ಸು ಬಾಬಾಗೆ ಇರಲಿಲ್ಲ. ಅವರಕ್ಕ ಜಹಾನಾರಾಗೆ ಬಾಬಾ ಸೊಗಸಾಗಿ ಸಂಗೀತ ಕಲಿಸಿದ್ದರು. ಜಹಾನಾರಾ ಸಂಗೀತದ ಬಗ್ಗೆ ತುಂಬಾ ವ್ಯಾಮೋಹ ಬೆಳೆಸಿಕೊಂಡಿದ್ದರು. ಆದರೆ ಗಂಡನ ಮನೆಯವರಿಗೆ ಸಂಗೀತದ ಗಂಧಗಾಳಿ ಇರಲಿಲ್ಲ. ಅಷ್ಟೇ ಅಲ್ಲ, ಅವರು ಸಂಗೀತವನ್ನು ದ್ವೇಷಿಸುತ್ತಿದ್ದರು. ಅವಳ ಸಂಗೀತಾಸಕ್ತಿಯನ್ನು ಹತ್ತಿಕ್ಕಿದರು. ಅವಳಿಗೆ ಹಾಡುವುದಕ್ಕೇ ಬಿಡುತ್ತಿರಲಿಲ್ಲ. “ನಿನ್ನ ತಂಬೂರಿಯನ್ನು ಸುಟ್ಟುಬಿಡುತ್ತೇವೆ” ಇತ್ಯಾದಿ ಬೆದರಿಕೆಗಳನ್ನು ಹಾಕುತ್ತಿದ್ದರು. ಅವರ ಕಿರುಕುಳ ತಾಳಲಾರದೆ ಜಹಾನಾರಾ ತವರಿಗೆ ಬಂದು ಕೊನೆಗೆ ತಾಯಿಯ ತೊಡೆಯ ಮೇಲೆ ಪ್ರಾಣಬಿಟ್ಟಳು. ಈ ದುರಂತದ ನೆನಪು ಬಾಬಾರನ್ನು ಸದಾ ಕಾಡುತ್ತಿತ್ತು. ಹಾಗಾಗಿ ಇನ್ನೊಬ್ಬ ಮಗಳಿಗೆ ಈ ಸ್ಥಿತಿ ಬೇಡವೇ ಬೇಡವೆಂದು ಆವಳನ್ನು ಸಂಗೀತದಿಂದ ದೂರವೇ ಇಟ್ಟಿದ್ದರು. ಬಾಬಾ ತಮ್ಮ ಇಡೀ ಸಮಯವನ್ನು ಮಗ ಆಲಿ ಅಕ್ಬರ್‌ಖಾನ್‌ಗೆ ಸಂಗೀತ ಕಲಿಸಲು ಮೀಸಲಿಟ್ಟರು.

ಒಮ್ಮೆ ತಾನವೊಂದನ್ನು ಎಷ್ಟು ಬಾರಿ ಹೇಳಿ ಕೊಟ್ಟಾಗಲೂ ಅಲಿ ಅಕ್ಬರ್‌ಗೆ ಬಾರದಿದ್ದಾಗ, ಸಿಟ್ಟಿಗೆದ್ದ ಬಾಬಾ, ಅವನನ್ನು ಬೈದು ಮಾರುಕಟ್ಟೆಗೆ ಹೋದರು. ಅದರೆ ಪಾಕೀಟು ಮರೆತಿದ್ದರಿಂದ ಅರ್ಧದಾರಿಯಲ್ಲೇ ವಾಪಸ್ಸು ಬಂದರು. ಅವರ ಸಿಟ್ಟಿನ್ನೂ ಆರಿರಲಿಲ್ಲ್ಲ. ಮನೆಯೊಳಗೆ ಕಾಲಿಟ್ಟಾಗ ಸೊಗಸಾದ ಧ್ವನಿಯೊಂದು ಹಾಡುತ್ತಿರುವುದು ಕೇಳಿತು. ಬಾಬಾ ಹೇಳಿಕೊಟ್ಟಿದ್ದ ಆ ’ತಾನನ್ನು ಅನ್ನಪೂರ್ಣಾ ತನ್ನ ಕಂಚಿನಂತಹ ದನಿಯಲ್ಲಿ ಅಣ್ಣನಿಗೆ ಹೇಳಿಕೊಡುತ್ತಿದ್ದಳು. ಅಂದಿನಿಂದ ಬಾಬಾ ಆಕೆಗೂ ಸಂಗೀತ ಕಲಿಸುವುದಕ್ಕೆ ಪ್ರಾರಂಭಿಸಿದರು.
ಇದು ಮುಂದೆ ಭಾರತೀಯ ವಾದ್ಯಸಂಗೀತದಲ್ಲಿ ವಿಶ್ವದಲ್ಲೇ ಅತಿ ಉತ್ಕೃಷ್ಟ ಕಲಾವಿದೆಯ ಜನನಕ್ಕೆ ನಾಂದಿಯಾಯಿತು..
ಬಾಬಾ ಅವರನ್ನು ತನ್ನ ಅತ್ಯಂತ ಪ್ರೀತಿಯ ಶಿಷ್ಯ ರವಿಶಂಕರ್‌ಗೆ ಕೊಟ್ಟು ಮದುವೆ ಮಾಡಿದರು. ಸಮಾನಮನಸ್ಕರ ಈ ಮದುವೆಯಿಂದ ಅವಳು ಸುಖವಾಗಿರುತ್ತಾಳೆಂದು ಅವರು ಭಾವಿಸಿದ್ದರು. ಮದುವೆಯಾದಾಗ ಅನ್ನಪೂರ್ಣಾಗೆ ಹದಿನೈದು ವರ್ಷ, ರವಿಶಂಕರ್‌ಗೆ ಇಪ್ಪತ್ತೊಂದು ವರ್ಷ. ರವಿಶಂಕರ್ ಹಾಗೂ ಅನ್ನಪೂರ್ಣಾದೇವಿ ಒಂದೆರಡು ಬಾರಿ ಸುರಬಹಾರ್ ಹಾಗೂ ಸಿತಾರ್ ಜುಗಲ್‌ಬಂದಿ ನುಡಿಸಿದರು. ಆದರೆ ಇವರಿಬ್ಬರ ದಾಂಪತ್ಯ ಬಹುಕಾಲ ಬಾಳಲಿಲ್ಲ. ಅನ್ನಪೂರ್ಣಾದೇವಿಯವರು ಸಾರ್ವಜನಿಕವಾಗಿ ಸಂಗೀತ ಕಾರ್ಯಕ್ರಮ ನೀಡುವುದನ್ನೇ ನಿಲ್ಲಿಸಿದರು. ಅಷ್ಟೇ ಏಕೆ ಹೊರ ಪ್ರಪಂಚದ ಜೊತೆಗಿನ ಸಂಬಂಧವನ್ನೇ ಕಡಿದುಕೊಂಡು ನಾಲ್ಕು ಗೋಡೆಗಳಿಗೆ ತಮ್ಮ ಬದುಕನ್ನು ಸೀಮಿತಗೊಳಿಸಿಕೊಂಡರು. ಈ ಬಗ್ಗೆ ಎಂದೂ, ಎಲ್ಲೂ, ಏನನ್ನೂ ಹೇಳಲಿಲ್ಲ, ಕಾರಣ ನೀಡಲಿಲ್ಲ, “ನಾನು ಸಾರ್ವಜನಿಕ ಕಾರ್ಯಕ್ರಮದಿಂದ ಹಿಂದೆ ಸರಿದದ್ದಕ್ಕೆ ನಿಜವಾದ ಕಾರಣ ನನ್ನೊಂದಿಗೇ ನನ್ನ ಗೋರಿಯಲ್ಲಿ ಮುಚ್ಚಿಹೋಗುತ್ತದೆ” ಎಂದರು ಅಷ್ಟೆ. ಇದು ಇನ್ನಷ್ಟು ಊಹಾಪೋಹಗಳಿಗೆ ಎಡೆಕೊಟ್ಟಿತು. ಅವರು ಹೀಗಾಗುವುದಕ್ಕೆ ರವಿಶಂಕರ್ ಅವರೇ ಕಾರಣ ಎನ್ನುವ ಆರೋಪವಿದೆ. ಆದರೆ ನಿಜವಾದ ಕಾರಣ ತಿಳಿದಿಲ್ಲ.

ಅದೇನೇ ಇರಲಿ, ತಂದೆಯಂತೆ ಅನ್ನಪೂರ್ಣಾದೇವಿಯವರೂ ದೊಡ್ಡ ಕಲಾವಿದೆ ಹಾಗೂ ಮಹಾನ್ ಗುರು. ಅವರು ಹಿಂದೂಸ್ತಾನಿ ಸಂಗೀತಕ್ಷೇತ್ರದ ಅತ್ಯುತ್ಕೃಷ್ಟ ವಾದಕಿ ಎಂಬುದರ ಬಗ್ಗೆ ಅಭಿಪ್ರಾಯಬೇಧವೇ ಇಲ್ಲ. ಅವರು ನುಡಿಸುತ್ತಿದ್ದದ್ದು ಸುರ್‌ಬಹಾರ್, ಆದರೆ ಸಿತಾರ್‌ವಾದನದಲ್ಲೂ ಅಪಾರ ಪರಿಣತಿ ಅವರಿಗಿತ್ತು. ಅವರ ಸಂಗೀತವನ್ನು ಕೇಳಿರುವವರು ಎಲ್ಲೋ ಕೆಲವೇ ಕೆಲವರು. ಪ್ರಾರಂಭದಲ್ಲಿ ರವಿಶಂಕರ್ ಜೊತೆ ನುಡಿಸಿದ ಜುಗಲ್‌ಬಂದಿಗಳು ಬೆರಳೆಣಿಕೆಯಷ್ಟು ಮಾತ್ರ. ರವಿಶಂಕರರ ಜೊತೆಗಿನ ದಾಂಪತ್ಯ ಮುರಿದುಬಿದ್ದ ಮೇಲಂತೂ ಅವರ ಸಂಗೀತವನ್ನು ಕೇಳುವ ಭಾಗ್ಯ ದೊರಕಿದ್ದು ಅವರ ಕೆಲವು ಶಿಷ್ಯರಿಗೆ ಮಾತ್ರ. ಹರಿಪ್ರಸಾದ್ ಚೌರಾಷಿಯ, ನಿಖಿಲ್ ಬ್ಯಾನರ್ಜಿ, ನಂತರದಲ್ಲಿ ನಿತ್ಯಾನಂದ ಹಳ್ದೀಪುರ್, ಬಸಂತ್ ಕಾಬ್ರ, ಅಶೀಶ್ ಖಾನ್ ಮೊದಲಾದ ಹಲವು ಪ್ರತಿಭಾವಂತ ಶಿಷ್ಯರನ್ನು ತಯಾರು ಮಾಡಿದ ಖ್ಯಾತಿ ಇವರದು. ಖ್ಯಾತ ಸರೋದ್‌ವಾದಕ ರಾಜೀವ್ ತಾರಾನಾಥ್ ಕೂಡ ಇವರಲ್ಲಿ ಅಭ್ಯಾಸ ಮಾಡಿದ್ದಾರೆ.

ನಾಲ್ಕು ಗೋಡೆಗಳ ಒಳಗಿದ್ದುಕೊಂಡೇ ಸಂಗೀತದ ಅಂತರಾಳ, ಆಧ್ಯಾತ್ಮಿಕ ದಾರಿಯನ್ನು ಹುಡುಕಿಕೊಳ್ಳುತ್ತಾ, ಎಲ್ಲಾ ಕೀರ್ತಿ, ಬಿರುದು-ಬಾವಲಿಗಳ ಆಮಿಷಗಳಿಂದ ದೂರ ಉಳಿದರು. ಇವರ ಮನೆಬಾಗಿಲು ಸಾರ್ವಜನಿಕರ ಪಾಲಿಗೆ ಮುಚ್ಚಿತ್ತು. ಕೆಲವೇ ಆಯ್ದ ವಿದ್ಯಾರ್ಥಿಗಳಿಗೆ ಮಾತ್ರ ಪಾಠಮಾಡುತ್ತಾ ಮನೆಯೊಳಗೇ ಉಳಿದುಬಿಟ್ಟರು. ರವಿಶಂಕರರ ಕೀರ್ತಿ ಜಗತ್ತಿನ ಉದ್ದಗಲಕ್ಕೂ ಹರಡುತ್ತಾ ಹೋಯಿತು. ಆದರೆ ಇವರು ತಮ್ಮ ಮಗ ಶುಭೇಂದುವಿಗೆ ಪಾಠ ಹೇಳಿಕೊಡುತ್ತಾ ಬಾಂಬೆಯಲ್ಲಿನ ಫ್ಲಾಟ್‌ಗೆ ತಮ್ಮ ಬದುಕನ್ನು ಸೀಮಿತಗೊಳಿಸಿಕೊಂಡು ಮೌನದೊಂದಿಗೆ ಗೆಳೆತನ ಮಾಡಿಕೊಂಡರು. ಕೊನೆಗೆ ಮಗನನ್ನೂ ಕಳೆದುಕೊಂಡರು. ಆ ನೋವಿಗೂ ಇವರ ಪ್ರತಿಕ್ರಿಯೆ ಮತ್ತೆ ಮೌನ.

ವಿದ್ಯಾಥಿಗಳ ಮಟ್ಟಿಗೆ ಅವರು ತಾಯಿ. ಅನ್ನಪೂರ್ಣಾದೇವಿಯನ್ನು ಅವರೆಲ್ಲಾ ’ಮಾ’ ಎಂದೇ ಕರೆಯುತ್ತಾರೆ. ವಿದ್ಯಾರ್ಥಿಗಳು ಅವರನ್ನು ಸಂತಳೆಂದು ಭಾವಿಸಿದ್ದಾರೆ. ಅವರಿಗೆ ವಾದ್ಯದ ಮೇಲಿರುವ ಹಿಡಿತ ಹಾಗೂ ಸಂವಹನ ಸಾಮರ್ಥ್ಯವನ್ನು ಅವರ ವಿದ್ಯಾರ್ಥಿಗಳು ತುಂಬ ಗೌರವದಿಂದ ನೆನೆಯುತ್ತಾರೆ. ಕಲಿಸುವ ವಿಷಯದಲ್ಲಿ ಮಾತ್ರ ಅವರು ರಾಜಿ ಮಾಡಿಕೊಳ್ಳುವುದೇ ಇಲ್ಲ. ಶುದ್ಧ, ಅಪ್ಪಟ, ಅಪರಂಜಿ ಸಂಗೀತದ ಒಡತಿ ಅವರು. ಅವರದ್ದು ’ತಾಯಿಹೃದಯ’ ಎನ್ನುತ್ತಾರೆ, ಅವರಿಂದ ಕೆಲವು ಕಾಲ ಪಾಠ ಕಲಿತಿರುವ ಪಂಡಿತ್ ರಾಜೀವ್ ತಾರಾನಾಥ್. ರವಿಶಂಕರ್ ತಮ್ಮ ಇಳಿವಯಸ್ಸಿನಲ್ಲೂ, ಅನಾರೋಗ್ಯದ ಪರಿಸ್ಥಿತಿಯಲ್ಲೂ, ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಸಿತಾರನ್ನು ಮಾರ್ಪಡಿಸಿಕೊಂಡು ಕೊನೆಯವರೆಗೂ ಕಾರ್ಯಕ್ರಮ ನೀಡುತ್ತಲೇ ಸಾಗಿದರು. ಅನ್ನಪೂರ್ಣದೇವಿಯವರು ಕಾಲಾತೀತವಾದ, ತೀರಾ ಶ್ರೀಮಂತವಾದ, ಸಾಂಪ್ರದಾಯಿಕ ಸಂಗೀತದ ಕಣಜವಾಗಿ, ಅದರ ವಾಹಕರಾಗಿ, ಜೀವಂತ ಸಂಕೇತವಾಗಿ, ಝಗಮಗಿಸುವ ಸಾರ್ವಜನಿಕ ವೇದಿಕೆಗೆ ವಿಮುಖರಾಗಿ ಬದುಕುತ್ತಿದ್ದಾರೆ.

 

ಟಿ ಎಸ್ ವೇಣುಗೋಪಾಲ್

Recommended Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.