ಪಾಕಿಸ್ತಾನಕ್ಕೆ ರೈಲು ಪಯಣ – ಅಮೃತಾ ದತ್

 In SUTTA MUTTA

ಪಾಕಿಸ್ತಾನಕ್ಕೆ ರೈಲು ಪಯಣ
ಅಮೃತಾ ದತ್

ಆ ಪಾಸ್‌ಪೋರ್ಟ್ ಕೆಂಪಗಿತ್ತು, ಮಾಮೂಲಿನಂತೆ ಶಾಯಿ ನೀಲಿ ಬಣ್ಣದ್ದಾಗಿರಲಿಲ್ಲ. ಅದರೊಳಗೆ ಹಳದಿಬಣ್ಣಕ್ಕೆ ತಿರುಗಿ ಮಾಸಿಹೋಗಿದ್ದ ಒಂದು ಪುಟದಲ್ಲಿ ಹುಡುಗನೊಬ್ಬನ ಫೋಟೊ. ಸೂಟಿಯಾದ ಮುಖ. ಅದು ಯಾರು ಅಂತ ತಿಳಿಯುತ್ತಿರಲಿಲ್ಲ. ಅದು ನಮ್ಮ ತಂದೆ. ಕವರ್ ಮೇಲೆ ಅಶೋಕ ಚಕ್ರದ ಲಾಂಛನದ ಕೆಳಗೆ ಬರೆದಿತ್ತು-ಇಂಡಿಯಾ-ಪಾಕಿಸ್ತಾನ್ ಪಾಸ್‌ಪೋರ್ಟ್ (ಈಸ್ಟ್ ಜೋನ್) ಅಂತ. ಆ ಹೈಫನ್ ವಿಶೇಷವಾಗಿತ್ತು. ಅದು ಎರಡು ವೈರಿ ದೇಶಗಳ ನಡುವಿನ ಮುಳ್ಳು ಬೇಲಿಯಾಗಿರಲಿಲ್ಲ್ಲ. ಬದಲಾಗಿ ಅದು ಗಡಿ ದಾಟಲು ಪರವನಾಗಿಯಾಗಿತ್ತು. ನಾನು ಕಲ್ಪಿಸಿಕೊಳ್ಳುವಂತೆ ಅದೊಂದು ಇಕ್ಕಟ್ಟಿನ ಹಾದಿಯೇ. ನಮ್ಮ ತಂದೆ ಹಾಗೂ ಅವರ ಸೋದರರಿಗೆ ೧೯೪೭ರ ನಂತರ ಹಳೆಯ ದೇಶದಿಂದ ಹೊಸ ದೇಶಕ್ಕೆ ಅಂದರೆ ಇಂಡಿಯಾದಿಂದ ಪೂರ್ವ ಪಾಕಿಸ್ತಾನಕ್ಕೆ ಹೋಗಿಬರಲು ಸಾಕಿತ್ತು. ಈ ಪರವಾನಗಿ ಇರುವವರೆಗೆ ಅವರು ಹೋಗಿಬಂದು ಮಾಡುತ್ತಿದ್ದರು.

ಉತ್ತರದಲ್ಲಿ ಹೇಗಿತ್ತೋ ಹಾಗೆಯೇ ಪೂರ್ವದಲ್ಲೂ ಇತ್ತು. ವಿಭಜನೆ ಅನ್ನೋದು ಮನೆಮಾರು ಆಸ್ತಿಪಾಸ್ತಿಗಳ ನಡುವೆ ಒಂದು ಬಲವಾದ ಗೆರೆ ಎಳೆದುಬಿಟ್ಟಿತ್ತು. ನಮ್ಮಜ್ಜ ಮೊಂಗೊಲಪುರ್ ಹಳ್ಳಿಯ ಇನ್ನೊಂದು ಬದಿಯ ಸಿಲ್ಹೆಟ್ಟನಲ್ಲಿ ಉಳಿದರು. ಅದು ಅವರಿಗೆ ಜನ್ಮ ನೀಡಿದ ಸ್ಥಳ. ಅವರ ಬೇರುಗಳು ಇದ್ದದ್ದೇ ಅಲ್ಲೇ. ಅವರ ಕೆಲವು ಮಕ್ಕಳು ನೂರಾರು ಕಿಲೋಮೀಟರುಗಳು ಪ್ರಯಾಣ ಮಾಡಿ, ಬ್ರಿಟಿಷರು ಕಟ್ಟಿದ್ದ ಟೀ ಎಸ್ಟೇಟಿಗೆ ಕೆಲಸ ಹುಡುಕಿಕೊಂಡು ಬಂದಿದ್ದರು. ಅವರೆಲ್ಲಾ ದಿಢೀರನೆ ಇನ್ನೊಂದು ದೇಶದವರಾಗಿಬಿಟ್ಟರು, ಅವರ ಹಣೇಬರಹವೇ ಬದಲಾಗಿಬಿಟ್ಟಿತು. ವಿಭಜನೆಯ ನಂತರವೂ ಆಗ ಒಂದಿಷ್ಟು ಫಾರ್ಮಗಳನ್ನು ಭರ್ತಿಮಾಡಿ ಚೆಕ್ ಪೋಸ್ಟ್‌ನಲ್ಲಿ ನೀಡಿ ಅಲ್ಲಿಗೂ ಇಲ್ಲಿಗೂ ಹೋಗಿಬರಬಹುದಿತ್ತು. ಅಂತಹ ಪಾಸ್‌ಪೋರ್ಟ್‌ಗಳನ್ನು ೧೯೫೦ರ ಆರಂಭದಲ್ಲಿ ಕೊಡುತ್ತಿದ್ದರು.

ಒಟ್ಟಿನಲ್ಲಿ ಸುಲಲಿತವಾಗಿ ನೀರಿನಂತೆ ಏಕವಾಗಿದ್ದ ನಾಡನ್ನು ಗೆರೆ ಎಳೆದು ಭೂಪಟವಾಗಿಸಿತ್ತು, ದೇಶವಾಗಿಸಿತ್ತು, ರಾಷ್ಟ್ರವಾಗಿಸಿತ್ತು, ತಾಯ್ನೆಲವಾಗಿಸಿ ಅಥವಾ ವೈರಿನೆಲವಾಗಿಸಿ, ನಡುಗಡ್ಡೆಕಟ್ಟಿಸಿಬಿಟ್ಟಿತು. ಜುಲೈ ೧೯೪೭ಕ್ಕೆ ಮೊದಲು ನಡೆದ ರೆಫರೆಂಡಂನಲ್ಲಿ ಸಿಲ್ಹೆಟ್ ಪ್ರಾಂತ್ಯವೂ ಪಾಕಿಸ್ತಾನಕ್ಕೆ ಸೇರಿತು. ಟೀ ತೋಟಗಳಿಗೆ ಹೆಸರುವಾಸಿಯಾಗಿದ್ದ ಸಿಲ್ಹೆಟ್ ಈ ಮೊದಲು ಅಸ್ಸಾಂನ ಭಾಗವಾಗಿತ್ತು. ಅಸ್ಸಾಮಿ ನಾಯಕರು ಬಂಗಾಳಿ ಪ್ರಾಬಲ್ಯದಿಂದ ಜಿಗುಪ್ಸೆಗೊಂಡಿದ್ದರು. ಇದನ್ನು ಅವರು ಜನಾಭಿಪ್ರಾಯ ಸಂಗ್ರಹಣೆಗೆ ಮೊದಲೇ ಆ ಬಗ್ಗೆ ಸ್ಪಷ್ಟ ಪಡಿಸಿದ್ದರು. ೧೯ನೇ ಶತಮಾನದಲ್ಲಿ ಬ್ರಿಟೀಷರು ಬಂಗಾಳಿಗಳು ಹೆಚ್ಚಿಗೆ ಇದ್ದ ಭಾಗವನ್ನು ಆಗ ಅಸ್ಸಾಮಿಗೆ ಸೇರಿಸಿದ್ದರಲ್ಲಿ ಕಂದಾಯ ಹೆಚ್ಚು ಬರುತ್ತೆ ಅನ್ನೋ ಆಸೆಯೂ ಇರಬೇಕು. ಆದರೀಗ ಅವರು ಅದನ್ನು ಯಾವ ಸಂಕೋಚವೂ ಇಲ್ಲದೆ ವಿಭಜಿಸಿಬಿಟ್ಟರು. ಬರಾಕ್ ಕಣಿವೆಯ ಒಂದಿಷ್ಟು ಭಾಗ ಬಿಟ್ಟರೆ ಉಳಿದದ್ದನ್ನೆಲ್ಲಾ ಪ್ರತ್ಯೇಕಿಸಿದರು. ಇಂದು ಅದರ ಅಂಚಿನಲ್ಲಿಯೇ ಇರುವ ಕರೀಂಗಂಜ್ ನಗರ ಹಾಗೂ ಅಲ್ಲಿ ನನ್ನಪ್ಪ ಬರಿಗಾಲಿನಲ್ಲೇ ಫುಟ್‌ಬಾಲ್ ಆಡಿದ್ದ ಆ ಕೆಸರು ಗದ್ದೆಗಳು-ಇವೆಲ್ಲವೂ ಕುಶಿಯರಾ ನದಿಯಲ್ಲಿಯೇ ತನ್ನ ಕಾಲುಗಳನ್ನು ಇಳಿಬಿಟ್ಟುಕೊಂಡಿದೆ. ನದಿಯ ಇನ್ನೊಂದು ಬದಿಯಲ್ಲಿ ಸಿಲ್ಹೆಟ್ ಇದೆ.

ಈ ಹೊಸ ರಾಷ್ಟ್ರ, ಈ ಪೌರತ್ವ ಮುಂತಾದ ಹೊಸ ಕಲ್ಪನೆಗಳಿಗೆ ಹೋಲಿಸಿದರೆ ಆ ಹಳೆಯ ಸಂಬಂಧಗಳೇ ತುಂಬಾ ಗಟ್ಟಿ ಎನಿಸುತ್ತದೆ. ಹಾಗಾಗಿ ನನ್ನ ತಂದೆ ಹಾಗೂ ಅವರ ಅಣ್ಣತಮ್ಮಂದಿರು ನಮ್ಮಲ್ಲಿಗೆ ಪದೇ ಪದೇ ಬಂದು ಹೋಗುತ್ತಿದ್ದರು. ಹಿಂದು-ಮುಸ್ಲಿಂ ಕೋಮುದಂಗೆಗಳು ಹಿಂದುಗಳನ್ನು ಭಾರತದ ಗಡಿಯತ್ತ ಧಾವಿಸುವಂತೆ ಮಾಡುತ್ತಿತ್ತು. ಆದರೂ ಹಲವರಿಗೆ ತಮ್ಮ ನೆಲೆ ಬದಲಿಸಬೇಕು ಅನ್ನಿಸಿರಲಿಲ್ಲ. ಪಾಕಿಸ್ತಾನಕ್ಕೆ ಹೋಗಿಬರುವ ರೈಲು ಹತ್ತಿ ಪದೇಪದೇ ಅಲ್ಲಿಗೂ ಇಲ್ಲಿಗೂ ಹೋಗಿಬರುತ್ತಿದ್ದರು. ಭಾರತಕ್ಕೆ ಸೇರಿದ ಮಹಿಸಾಸನ್ ರೈಲುನಿಲ್ದಾಣಕ್ಕೆ ಮೊದಲು ಹೋಗಿ, ಅಲ್ಲಿಂದ ಈಗ ವಿದೇಶವಾಗಿಬಿಟ್ಟಿದ್ದ ಲಾತು ನಗರಕ್ಕೆ ಬಂದು ಹೋಗುತ್ತಿದ್ದರು. ಆ ಲಾತು ನಗರ ಮಹಿಸಾಸನ್‌ಗೆ ಅನ್ಯೋನ್ಯವಾಗಿ ಅಂಟಿಕೊಂಡೇ ಇತ್ತು. ಆದರೆ ಅದು ವಿದೇಶೀ ನಾಡಾಗಿ ಬದಲಾಗಿತ್ತು. ಈ ಪ್ರಯಾಣಗಳು ೧೯೫೯ರ ಹೊತ್ತಿಗೆ ಕ್ರಮೇಣ ನಿಂತೇ ಹೋದವು. ಮಕ್ಕಳು ಬಾರದಿದ್ದಲ್ಲಿ ಮಕ್ಕಳನ್ನು ನೋಡಲು ಅವರ ತಂದೆಯೇ ಪಾಕಿಸ್ತಾನಿ ಪಾಸ್‌ಪೋರ್ಟಿನಲ್ಲಿ ಬರುತ್ತಿದ್ದರು. ನನ್ನಜ್ಜ ಕೊನೆಯ ಬಾರಿ ಕರಿಂಗಂಜ್‌ಗೆ ಬಂದಾಗ ಮಕ್ಕಳೆಲ್ಲಾ ಅವರನ್ನು ಅಕ್ಕರೆಯಿಂದ ಮುತ್ತಿಕೊಂಡಿದ್ದರು. ಆದರೂ ಅವರೋ ಮರಳಿಹೋಗಲು ಚಡಪಡಿಸುತ್ತಿದ್ದರು. ರೈಲ್ವೆ ಸ್ಟೇಷನ್ನಿಗೆ ನಡೆದುಕೊಂಡು ಹೊರಟೇಬಿಟ್ಟರು. ಹುಟ್ಟಿದ ಊರಿಗೆ ಹೋಗುವ ರೈಲನ್ನು ಯಾವಾಗ ಹತ್ತುತ್ತೇನೋ ಅಂತ ತವಕಿಸುತ್ತಿದ್ದರು. ಇಲ್ಲಿರಲು ನನಗೆ ಇಷ್ಟ ಇಲ್ಲ.. . ಇಲ್ಲಿ ಸಾಯೋದಕ್ಕಂತೂ ನನಗೆ ಬಿಲ್ಕುಲ್ ಇಷ್ಟ ಇಲ್ಲ ಅಂತ ವಾಪಸ್ಸು ಹೋಗಿಬಿಟ್ಟರು. ವಿದೇಶಿ ನೆಲದಲ್ಲಿ ಸಾಯುವ ಸ್ಥಿತಿ ಅವರಿಗೆ ಬರಲಿಲ್ಲ.

ಅದು ಅಂದರೆ ಪಶ್ಚಿಮ ಬಂಗಾಳ ಅವರ ಮಕ್ಕಳ ನಾಡಾಯಿತು. ಆದರೂ ಅದು ಅವರ ಮಕ್ಕಳಿಗೆ ಸುರಕ್ಷಿತ ಸ್ಥಳವಾಗಿರಲಿಲ್ಲ. ಅವರಲ್ಲಿ ಒಬ್ಬ ಮಗನಿಗಂತೂ ಅಲ್ಲಿ ಉಳಿಯುವುದು ಸುರಕ್ಷಿತವೆನಿಸಿರಲಿಲ್ಲ. ಅವರು ಆಯೂಬ್ ಖಾನರ ಆಡಳಿತದ ಪೂರ್ವ ಪಾಕಿಸ್ತಾನದಲ್ಲಿ ಪೋಲಿಸ್ ಅಧಿಕಾರಿಯಾಗಿದ್ದವರು. ಅವರು ೧೯೬೭ರ ಒಂದು ರಾತ್ರಿ ಆಲಿನಗರದ ಟೀ ತೋಟದಲ್ಲಿನ ತನ್ನ ಅಣ್ಣನ ಮನೆಗೆ ಬಂದು, ರೇಡಿಯೋ ಆನ್ ಮಾಡಿ, ದೀಪಗಳನ್ನು ಹಾಕಿ, ತನ್ನ ಅಣ್ಣನ ಮನೆಯವರನ್ನೆಲ್ಲಾ ಕರೆದುಕೊಂಡು ಆ ಕತ್ತಲೆಯಲ್ಲಿ ನಡೆದು ಬಿಟ್ಟರು-
ಭಾರತದ ಕಡೆಗೆ.
***
ಇತಿಹಾಸದ ಗೋಜಲಿನಲ್ಲಿ ಸಿಲುಕಿಕೊಂಡಿರುವ ನನ್ನಂತಹ ಮಂದಿ ಈ ಕಥೆಗಳನ್ನು ಕೇಳಿಕೊಂಡು ಬೆಳೆಯಲಿಲ್ಲ. ಊಟಕ್ಕೆ ಕೂತಾಗಲೂ ಬಿಟ್ಟುಬಂದ ಹುಟ್ಟೂರಿನ ಹಳಹಳಿಕೆ ನಮ್ಮನ್ನು ಕಾಡಲಿಲ್ಲ. ಬಿಟ್ಟುಬಂದ ಜನರಿಗಾಗಿ ಹಂಬಲಿಸಲಿಲ್ಲ. ವಿಭಜನೆಯಲ್ಲಿ ಕಳೆದುಕೊಂಡ ಸಾಮಾನು ಸಂಜಾಮುಗಳ ಬಗ್ಗೆ ಕೊರಗಲಿಲ್ಲ. ಯಾರಿಗೂ ಬೇಡವಾದ ಈ ಜನರು ಹುಟ್ಟಿಬೆಳೆದ ನೆನಪುಗಳ ವಾಂಛೆಗೆ ಜೋತುಬೀಳದೆ ವಲಸೆ ಹೋಗಲು ಸಿದ್ಧರಾಗಿದ್ದರು. ನನ್ನಪ್ಪ ಶಿಲ್ಲಾಂಗಿನ ಬೆಟ್ಟಗಳ ಕಡೆ ಸಾಗಿ ಅಲ್ಲವರಿಗೆ ಕೆಲಸ ಸಿಕ್ಕಿ ಅಲ್ಲೇ ಮನೆ ಮಾಡಿಕೊಂಡರು. ಈ ಬೆಟ್ಟದ ತಾಣ ಈ ಸಮುದಾಯಕ್ಕೆ ಆಧುನಿಕತೆಯೊಂದಿಗೆ ಮುಖಾಮುಖಿಯಾಗುವ ಅವಕಾಶವನ್ನು ಒದಗಿಸುವುದರ ಜೊತೆಗೆ ಆ ನೆಲದ ಹಿಮಾವೃತ ಪೈನ್ ಮರಗಳು ಹಾಗೂ ಮೋಡಿಮಾಡುವ ಆಕಾಶದ ಕಾವ್ಯವನ್ನೂ ಜೋಡಿಸಿತ್ತು. ಪಾಸ್ ಪೋರ್ಟ್ ಮೇಲೆ ಮುದ್ರೆಯುತ್ತಿರುವ ಈ ಕನಸಿನ ಮಂಜಿನ ನಗರಿಯಲ್ಲಷ್ಟೇ ಈ ಪೌರತ್ವದ ಭರವಸೆ ಈಡೇರುವುದಕ್ಕೆ ಸಾಧ್ಯವೇನೋ!

ನಾನು ಬೆಳೆದ ಷಿಲಾಂಗ್ ಅದು ಇನ್ನೂ ಛಿಧ್ರವಿಚ್ಛಿದ್ರ ನಗರವಾಗಿತ್ತು. ಎಳೆಯರಾದ ನಮಗೇನೆ ನಾವು ನೆಲ, ನೆಲೆಯಿಲ್ಲದವರು ಎಂಬ ಸತ್ಯ ಅರ್ಥ ಆಗಿತ್ತು. ಅದು, ಅಲ್ಲಿನ ರಸ್ತೆಗಳ ಮೇಲೆ ನಾವು ನಡೆದಾಡುವಾಗ ನಮ್ಮ ಹೆಜ್ಜೆಗಳನ್ನು ದುರ್ಬಲಗೊಳಿಸುತ್ತಿತ್ತು. ಮುಂದಿನ ಕೆಲವು ದಶಕಗಳಲ್ಲಿ ಈ ಬುಡಕಟ್ಟು ನಾಡಿನಲ್ಲಿ ಬಂಗಾಳಿಗಳು ಬೇಡದ ಜಞhಚಿಡಿ ಆಗಿಬಿಟ್ಟಿದ್ದೆವು. ಇದು ಬಿಹಾರಿ ಹಾಗೂ ನೇಪಾಳಿಗಳ ವಿಷಯದಲ್ಲೂ ನಿಜವಾಗಿತ್ತು. ನಿರಂತರ ಸುಲಿಗೆ, ದಾಳಿ ಹಾಗೂ ನಾವು ಅನುಭವಿಸಿದ ಹಿಂಸೆ- ಯಾವ ದಾಖಲೆಗಳೂ ಇಲ್ಲದೆ ಜರಗುತ್ತಿತ್ತು. ಮತ್ತು ನಮಗೆ ನ್ಯಾಯವೂ ಸಿಗುವುದಿಲ್ಲ ಎನ್ನುವುದೂ ಕೂಡ ತಿಳಿದಿತ್ತು. ಇದು ನಮ್ಮನ್ನು ಮತ್ತಷ್ಟು ಕುಗ್ಗಿಸಿತ್ತು. ಹಾಗಾಗಿ ಇನ್ನಷ್ಟು ಕಳೆದುಕೊಳ್ಳುವುದು ಬೇಡ ಅನ್ನಿಸಿತು. ಅಲ್ಲಿಂದ ಹೊರಟುಬಿಡೋಣ ಅನ್ನಿಸಿತು. ನಮ್ಮ ಅಪ್ಪಅಮ್ಮರು ಮತ್ತೊಂದು ವಲಸೆಗೆ ಮನಸ್ಸು ಮಾಡುವಂತಾಯಿತು.

ಹೊಗೆಯುಗುಳುತ್ತಿದ್ದ ಕಲ್ಕತ್ತೆಯ ಸಣ್ಣ ಅಪಾರ್ಟ್‌ಮೆಂಟುಗಳಲ್ಲಿ ಸಮುದಾಯದ ಹಲವು ಹಿರಿಯರು ಹರಿದು ಹಂಚಿಹೋಗಿದ್ದರು. ದಿಗ್ಬ್ರಾಂತರಾಗಿದ್ದ ಸಂಬಂಧಿಕರು ಕೊನೇಪಕ್ಷ ಇಲ್ಲಿ ನಾವು ಎರಡನೆಯ ದರ್ಜೆಯ ಪ್ರಜೆಗಳಲ್ಲ ಎಂದು ಆಗ್ಗಾಗ್ಗೆ ಹೇಳಿಕೊಳ್ಳುತ್ತಿದ್ದುದನ್ನು ನಾನು ಕೇಳಿಸಿಕೊಂಡಿದ್ದೇನೆ. ಕೆಲವೊಮ್ಮೆ ದೊಡ್ಡ ಪಟ್ಟಣ ಹುಟ್ಟುಹಾಕುವ ಒಂಟಿತನ, ಸ್ನೇಹಿತರನ್ನು ಕಳೆದುಕೊಂಡಿದ್ದರ ಜೊತೆಗೆ ನೆಲೆಕಂಡುಕೊಳ್ಳಲು ಸಾಧ್ಯವಾಗದ ತಲ್ಲಣ- ಇವೆಲ್ಲವೂ ಕೂಡಿಕೊಂಡು ಖಿನ್ನತೆಯಿಂದ ಎಲ್ಲರೂ ಬೆಪ್ಪಾಗಿದ್ದರು.
* * * *

ಎನ್‌ಆರ್‌ಸಿಗೆ ದಾಖಲೆ ನೀಡೋದಕ್ಕೆ ಅಂತ ನಮ್ಮಪ್ಪನನ್ನು ಹಳೆಯ ದಾಖಲೆಗಾಗಿ ಪೀಡಿಸುತ್ತಿದ್ದೆ. ಆಗ ನನ್ನ ಸಂಬಂಧಿ ಆ ಕೆಂಪು ಪಾಸ್‌ಪೋರ್ಟ್ ತಂದು ಕೊಟ್ಟ. ಅದನ್ನವನು ಜೋಪಾನವಾಗಿ ಇಟ್ಟುಕೊಂಡಿದಕ್ಕೆ ಥ್ಯಾಂಕ್ಸ್ ಹೇಳಲೇ ಬೇಕು. ಈ ಗಡಿಭಾಗಕ್ಕೆ ಯಾರ‍್ಯಾರು ಸೇರಿದ್ದಾರೆ ಅನ್ನೊ ಪ್ರಶ್ನೆಯನ್ನು ಈಗ ಅಸ್ಸಾಂ ಎನ್‌ಆರ್‌ಸಿ ಮುಂದೊಡ್ಡಿದೆ. ಈಶಾನ್ಯ ರಾಜ್ಯಗಳು ಸಿಎಎ ವಿರುದ್ಧ ಕೋಪದಿಂದ ಭುಗಿಲೆದ್ದಿವೆ. ಈಗ ೧೯೪೭ರ ಸ್ವಾತಂತ್ರ್ಯ ಅಂದರೆ ಏನು? ಅದು ಸ್ವಾತಂತ್ರವೋ ಅಥವಾ ನಂಬಿಕೆದ್ರೋಹವೋ ಅಂತ ಚಕಿತವಾಗಿದ್ದೇನೆ. ಸಿಎಎ ಎಂಬುದೊಂದು ಜಾದುಗಾರನ ಕಣ್ಕಟ್ಟು. ಸ್ವಾತಂತ್ರದ ನಂತರದ ಹಲವು ದಶಕಗಳು ಇಂದು ನಾವು ಬಾಂಗ್ಲಾದೇಶ್ ಎಂದು ಕರೆಯುತ್ತಿರುವ ನೆಲದಲ್ಲಿ ತಮ್ಮ ಧರ್ಮದ ಕಾರಣಕ್ಕಾಗಿ ಲಕ್ಷಾಂತರ ಹಿಂದುಗಳು ಹಿಂಸೆಗೊಳಗಾಗಿದ್ದರು. ಅವರುಗಳು ಭಾರತದಲ್ಲಿ ಆಶ್ರಯ ಕಂಡುಕೊಂಡರು. ಅದು ಒಳ್ಳೆಯದೋ ಕೆಟ್ಟದ್ದೋ ಗೊತ್ತಿಲ್ಲ. ೧೯೭೧ರ ನಂತರ ಮರುರೂಪುಗೊಳ್ಳುತ್ತಿರುವ ಪಶ್ಚಿಮ ಬಂಗಾಳದ ಚರಿತ್ರೆ ಇದು. ಇದು ನನ್ನ ಕುಟುಂಬದ ಚರಿತ್ರೆಯೂ ಹೌದು. ಹಾಗೆಯೇ ಭಾರತದಲ್ಲಿ ಬೆಳವಣಿಗೆ ಕಂಡುಕೊಳ್ಳುತ್ತಿರುವ ಮತ್ತು ಪರಿಪಾಟಲು ಪಾಡುತ್ತಿರುವ ಹಲವರ ಚರಿತ್ರೆ ಕೂಡ.

ಕೆಲವಾರು ವರ್ಷಗಳು ಸುಮಾರಾದ ಶಾಂತಿ ಹಾಗೂ ಸೌಹಾರ್ದದಿಂದಲೇ ಇದ್ದೆವು. ಈ ವರ್ತಮಾನದ ಗಲಭೆ ಮತ್ತೆ ಬಂಗಾಳಿಗಳನ್ನು ಆಶ್ರಯ ಮತ್ತು ನಿರಾಶ್ರಿತರು ಇವೆರಡರ ನಡುವಿನ ಕಮರಿಗೆ ತಂದು ನಿಲ್ಲಿಸಿದೆ. ಅದರಲ್ಲೂ ಈಶಾನ್ಯ ಭಾಗದ ಬುಡಕಟ್ಟುನಾಡಿನಲ್ಲಿ ಬಂಗಾಳಿಗಳ ಇರುವಿಕೆಯನ್ನು ವಿರೋಧಿಸಲಾಗುತ್ತಿದೆ. ಈ ಪ್ರಾಂತ್ಯವನ್ನು ಮಿಲಿಟರೀಕರಣಗೊಳಿಸಿ ಸವರ್ಣಿಯವಾಗಿಸುತ್ತಿರುವವರ ಪರವಾಗಿ ನಾವಿದ್ದೇವೆ ಎಂದು ಅನೇಕರು ಭಾವಿಸಿದ್ದಾರೆ. ನಮ್ಮದಾದರೂ ಎಂತಹ ಇತಿಹಾಸ? ನೆಲೆಕೆಳೆದುಕೊಂಡು, ಸಂಕಷಕ್ಕೊಳಗಾಗಿ, ಗುಳೇ ಬಂದು, ಬಾಂಗ್ಲಾದೇಶೀಯರು ಎಂಬ ತಿರಸ್ಕಾರಕ್ಕೊಳಗಾದ ಅಲ್ಪಸಂಖ್ಯಾತರ ಇತಿಹಾಸವಲ್ಲವೇ?

ಅಸ್ಸಾಮಿಗಳಿಗೆ ಮತ್ತು ಸಿಎಎ ವಿರುದ್ಧ ಹೋರಾಡುತ್ತಿರುವ ಸ್ಥಳೀಯರಿಗೆ ಬಂಗಾಳಿಗಳ ಬಗ್ಗೆ ಇನ್ನೂ ಸಂಶಯ ಉಳಿದಿದೆ. ಅವರಲ್ಲಿ ಭಾಷಾ ಗಲಭೆಯ ನೆನಪುಗಳು ಇನ್ನೂ ಮಾಸಿಲ್ಲ. ಉದಾರವಾದಿ ಎಡಪಂಥೀಯರಿಗೆ ನಾವು ಹಿಂದು ಸವರ್ಣೀಯರ ಒಂದು ಸಮುದಾಯ. ಅವರನ್ನು ಒಪ್ಪಿಕೊಳ್ಳುವುದು ಅವರಿಗೆ ಕಷ್ಟ. ಹಾಗೆ ಒಪ್ಪಿಕೊಂಡುಬಿಟ್ಟರೆ ಎಷ್ಟೋ ಮುಜುಗರಗಳನ್ನು ಎದುರಿಸಬೇಕಾಗುತ್ತದೆ. ನಮ್ಮ ಬವಣೆ, ನಮ್ಮ ಜರ್ಜರಿತ ಬದುಕಿನ ಗಾಯಗಳನ್ನು ಹಿಂದು ಬಲಪಂಥೀಯ ಗುಂಪು ಗುರುತಿಸುತ್ತದೆ. ನಿಜ, ಆದರೆ ಅಸ್ಸಾಮಿನಲ್ಲಿನ ಅವರ ಲೆಕ್ಕಾಚಾರ ಗಮನಿಸಿದರೆ ಅವರು ನಷ್ಟ ಕಟ್ಟಿಕೊಡುವ ಸೋಗಿನಲ್ಲಿ ನಮ್ಮನ್ನು ವಂಚಿಸುತ್ತಿದ್ದಾರೆ. ನಿಮಗಾಗಿರುವ ಆಘಾತವನ್ನು ನಮಗೆ ಕೊಟ್ಟುಬಿಡಿ, ನಿಮ್ಮ ಕೋಪವನ್ನು ತಣಿಸಲು ಇನ್ನೂ ಹೆಚ್ಚೆಚ್ಚ್ಚು ದ್ವೇಷವನ್ನು ನಾವು ನಿಮಗೆ ನೀಡುತ್ತೇವೆ ಎಂಬ ಭ್ರಮೆ ಹುಟ್ಟುಹಾಕುತ್ತಿದೆ. ದುರದೃಷ್ಟ ಎಂದರೆ ನನ್ನ ಕುಟುಂಬವೂ ಸೇರಿದಂತೆ ಬಹುಪಾಲು ಹಿಂದು ಕುಟುಂಬಗಳು ಈ ವ್ಯವಹಾರವನ್ನು ಒಪ್ಪಿಕೊಂಡಿದೆ.

ಅಸ್ಸಾಮಿನಲ್ಲಿ ಸಿಎಎ ವಿರುದ್ಧ ತೀವ್ರವಾದ ಆದರೆ ಮತೀಯವಲ್ಲದ ಪ್ರತಿಭಟನೆಯನ್ನು ನೋಡುತ್ತಿರುವಾಗ ನನ್ನ ಮನಸ್ಸಿನಲ್ಲಿ ಹೀಗೆ ಹೋರಾಡಲು ನಮಗೂ ಒಂದು ನಾಡು ಇದ್ದಿದ್ದರೆ ಏನಾಗುತ್ತಿತ್ತು ಎಂದು ದೇಶವಿಲ್ಲದವರೊಬ್ಬರ ಮನದಲ್ಲಿ ಮೂಡುವಂತಹ ಅಸೂಯೆ ಇಣಕಿತು. ಭೂಪ್ರದೇಶವೇ ಮಾನವನ ಘನತೆಯನ್ನು ನಿರ್ಧರಿಸುವ ಅಂಶವಾಗಿದೆಯೇ? ಆದರೆ ಹಾಗಿಲ್ಲ. ಕಾಲಿನಡಿ ನೆಲವೇ ಇಲ್ಲದಿದ್ದವರಿಗೂ ಅವರು ಹಿಂದು ಕ್ರೈಸ್ತ, ಮುಸಲ್ಮಾನ, ಸಿಖ್, ಅಥವಾ ಬೌದ್ಧ ಯಾವ ಧರ್ಮದವರೇ ಆಗಿರಲಿ, ಅವರಿಗೆ ಪೌರತ್ವವನ್ನು ನೀಡುವ ಆಶ್ವಾಸನೆ ನೀಡಲಾಯಿತು. ಆದರಿದು ಪೂರ್ತಿಯಾಗಿ ಈಡೇರಿಸಲಿಲ್ಲ. ಅಲ್ಲೂ ಹಲವು ವಂಚನೆಗಳು ಮತ್ತು ಹೊಂದಾಣಿಕೆಗಳು ನಡೆದವು. ಹಾಗಿದ್ದಾಗ್ಯೂ ಇತಿಹಾಸದ ವ್ಯತ್ಯಯಕ್ಕೆ ನಮಗಿದ್ದ ಆಯ್ಕೆ ಇದೇ ಆಗಿತ್ತು.

ಕದಡಿಹೋಗಿರುವ ಈಶಾನ್ಯ ರಾಜ್ಯದಿಂದ ದೂರದಲ್ಲಿರುವ ಬೆಂಗಳೂರಿನಲ್ಲಿನ ಅಪಾರ್ಟಮೆಂಟುಗಳಿಗೆ ಸಂಬಂಧಿಸಿದಂತೆ ವೃತ್ತಪತ್ರಿಕೆಯಲ್ಲಿ ವರದಿಯೊಂದು ಬಂದಿತ್ತು. ಕೆಲಸಗಾರರಲ್ಲಿ ಅಕ್ರಮ ಬಾಂಗ್ಲಾದೇಶೀ ಪ್ರತ್ಯೇಕಿಸುವ ಪ್ರಯತ್ನ ನಡೆಯುತ್ತಿದೆ ಅಂತ ಅದರಲ್ಲಿ ವರದಿಯಾಗಿತ್ತು. ಅಕಸ್ಮಾತ್ ಅದು ನನ್ನಪ್ಪನ ಕಣ್ಣಿಗೆ ಬಿತ್ತು. ಅವರು ನನಗೆ ಅದನ್ನು ತೋರಿಸಿದರು. ಅವರಿಗೆ ಅದು ಹೇಗೆ ತಿಳಿಯುತ್ತೆ ಗೊತ್ತೆ. ನನ್ನ ಊಟ ಆಯಿತು ಅನ್ನುವುದಕ್ಕೆ ಅಮಿ ಖಾಯೇಚಿ ಎನ್ನುವವರು ಸಕ್ರಮ. ಆಮಿ ಖಾಯ್‌ಸಿ ಎನ್ನುವವರು ಅಕ್ರಮ. ಅವರು ಅಂದರೆ, ಇಕ್ಕಟ್ಟಿಗೆ ಸಿಕ್ಕಿಸಿದ ಉಪಭಾಷೆಯನ್ನು ಮಾತನಾಡುವ ಮಂದಿ ತಲೆ ಎತ್ತಿ ಆಕಾಶ ನೋಡುತ್ತಾರೆ. ಅವರ ಮುಖದಲ್ಲಿ ನಿರಾಸೆಯ ನಗು. ಅಮ್ರಾರ್ ಆರ್ ಉಫಾಯ್ ನಾಯ್ – ಇನ್ನು ನಮ್ಮ ಕಥೆ ಮುಗಿಯಿತು.

Recent Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.