ಪಿಎಲ್‌ಐ ಯೋಜನೆಯೂ ಹಾಗೂ ನಮ್ಮ ನರಸಾಪುರದ ಕಾರ್ಮಿಕನೂ

 In ARTHA- ಅರ್ಥ, general

Venugopal T S

ಕೆಲ ವರ್ಷಗಳ ಹಿಂದೆ ಬೆಂಗಳೂರಿನ ಬಳಿ ನರಸಾಪುರದಲ್ಲಿ ಐಫೋನ್ ಅಸೆಂಬಲ್ ಮಾಡುವ ವಿಸ್ಟ್ರಾನ್ ಕಾರ್ಖಾನೆಯ ಆವರಣದಲ್ಲಿ ಕಾರ್ಮಿಕರು ಸಂಬಳ ಬಾಕಿ ಇದೆ ಅನ್ನುವ ಕಾರಣಕ್ಕೆ ದೊಡ್ಡದಾಗಿ ಗದ್ದಲ ಮಾಡಿದ್ದರು, ಕಾರ್ಖಾನೆಗೆ ಸೇರಿದ ಹಲವು ವಸ್ತುಗಳನ್ನು, ಆವರಣದ ಮುಂದೆ ನಿಂತಿದ್ದ ವಾಹನಗಳನ್ನು ನಾಶಮಾಡಿದ್ದರು. ಅದೊಂದು ಅದು ತೈವಾನಿನ ಕಂಪೆನಿ. ಸರ್ಕಾರ ಕಾಡಿ ಬೇಡಿ, ಅವರಿಗೆ ಸಬ್ಸಡಿ ನೀಡಿ ನಮ್ಮಲ್ಲಿ ಮೊಬೈಲ್ ಉತ್ಪಾದಿಸಲು ಕರೆದುಕೊಂಡು ಬಂದಿತ್ತು. ಇತ್ತೀಚೆಗಷ್ಟೇ ಪ್ರಾರಂಭವಾಗಿತ್ತು. ಅವರನ್ನು ಸಮಾಧಾನಪಡಿಸಬೇಕಿತ್ತು. ಸ್ವಾಭಾವಿಕವಾಗಿಯೇ ಕಾರ್ಮಿಕರ ಮೇಲೆ ಕ್ರಮತೆಗೆದುಕೊಳ್ಳಲು ಸರ್ಕಾರ ಮುಂದಾಗಿತ್ತು. ಆದರೆ ನಂತರ ವಿಚಾರಣೆಯಿಂದ ವಿಸ್ಟ್ರಾನ್ ಕಡೆಯಿಂದ ಕಾರ್ಮಿಕರ ಕಾನೂನಿನ ಉಲ್ಲಂಘನೆಯಾಗಿದೆ ಅನ್ನುವುದು ತಿಳಿಯಿತು. ಕೊನೆಗೆ ಘಟಕದ ಉಪಾಧ್ಯಕ್ಷನ ಮೇಲೆ ತಪ್ಪು ಹೊರೆಸಿ ಅವನನ್ನು ತೆಗೆಯಲಾಯಿತು. ಇದು ಮೊಬೈಲ್ ಫೋನ್ ಉತ್ಪಾದನೆಗೆ ಸಂಬಂಧಿಸಿದ ಒಂದು ಸುದ್ದಿ.
ಇನ್ನೊಂದು ಸುದ್ದಿ ಸರ್ಕಾರದ್ದು. ಭಾರತ ಕಳೆದ ಐದು ವರ್ಷಗಳಲ್ಲಿ ಒಂದು ಮಹಾನ್ ಮೊಬೈಲ್ ಉತ್ಪಾದಕ ದೇಶವಾಗಿ ಬೆಳೆದಿದೆ. ರಫ್ತು ತೀವ್ರವಾಗಿ ಏರಿದೆ. ೨೦೧೭-೧೮ರಲ್ಲಿ ಭಾರತದ ನಿವ್ವಳ ರಫ್ತು ೩.೩ ಬಿಲಿಯನ್ ಇದ್ದುದು, ೨೦೨೨-೨೩ರಲ್ಲಿ ೯.೮ ಬಿಲಿಯನ್ ಆಗಿದೆ. ಅಂದರೆ ೧೩.೧ ಬಿಲಿಯನ್ ಹೆಚ್ಚಿದೆ. ಇದು ಭಾರತ ಹಮ್ಮಿಕೊಂಡಿರುವ ಪಿಎಲ್‌ಐ ಯೋಜನೆಯ ಫಲ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ.
ಮೇಲಿನ ಎರಡು ಸುದ್ದಿಗಳು ಬೇರೆಯಾಗಿಯೇ ಕಂಡರೂ ಒಂದಕ್ಕೊಂದು ತೆಕ್ಕೆಹಾಕಿಕೊಂಡಿವ. ಪಿಎಲ್‌ಐ ಯೋಜನೆಯ ಪರಿಣಾಮವೇ ನರಸಾಪುರದ ಘಟನೆ.


ಏನಿದು ಪಿಎಲ್‌ಐ ಯೋಜನೆ?


ಮೊದಲಿಗೆ ಪಿಎಲ್‌ಐ ಯೋಜನೆ ಅನುಷ್ಠಾನಕ್ಕೆ ಬಂದ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳೋಣ. ಭಾರತದಲ್ಲಿ ಉತ್ಪಾದನಾ ಕ್ಷೇತ್ರ ದುರ್ಬಲವಾಗಿದೆ. ಅದಕ್ಕೆ ನಮ್ಮಲ್ಲಿರುವ ಕೆಲವು ಸಮಸ್ಯೆಗಳು ಕಾರಣ. ಮೂಲಸೌಕರ್ಯ ಅಷ್ಟು ಚೆನ್ನಾಗಿಲ್ಲ. ನುರಿತ ಕೆಲಸಗಾರರಿಲ್ಲ, ಬಂಡವಾಳ ದುಬಾರಿ ಇತ್ಯಾದಿ, ಇತ್ಯಾದಿ. ಇವನ್ನು ಪರಿಹರಿಸಿದರೆ ಬಂಡವಾಳಿಗರು ಭಾರತಕ್ಕೆ ಬರುತ್ತಾರೆ. ಆದರೆ ಈ ಸಮಸ್ಯೆಗಳನ್ನು ಪರಿಹರಿಸುವುದು ಸುಲಭ ಅಲ್ಲ. ಅದಕ್ಕೆ ಸಾಕಷ್ಟು ಸಮಯ ಬೇಕು. ಹಾಗಾಗಿ ಸರ್ಕಾರಕ್ಕೆ ಪರ್ಯಾಯ ಮಾರ್ಗವೊಂದು ತುರ್ತಾಗಿ ಬೇಕಿತ್ತು. ಆ ಹಿನ್ನೆಲೆಯಲ್ಲಿ ಪಿಎಲ್‌ಐ ಯೋಜನೆ ಬಂದಿದೆ.
ಪಿಎಲ್‌ಐ ಯೋಜನೆಯನ್ನು ಎರಡು ಹಂತಗಳಲ್ಲಿ ಜಾರಿಗೊಳಿಸಲಾಗಿದೆ. ಮೊದಲನೆಯದಾಗಿ ಭಾರತದಲ್ಲಿ ತಯಾರು ಮಾಡಬೇಕು ಅಂದುಕೊಂಡಿರುವ ವಸ್ತುಗಳಿಗೆ ಬಾಹ್ಯ ಸ್ಪರ್ಧೆಯಿಂದ ರಕ್ಷಣೆ ನೀಡಬೇಕು. ಅಂದರೆ ವಿದೇಶಗಳಿಂದ ಮೊಬೈಲ್ ಭಾರತದ ಮಾರುಕಟ್ಟೆಗೆ ಬರಬಾರದು. ಅದಕ್ಕೆ ಒಂದು ಕ್ರಮವೆಂದರೆ ಅವುಗಳ ಮೇಲೆ ಸುಂಕ ಹಾಕುವುದು. ಆಗ ಅವನ್ನು ಆಮದು ಮಾಡಿಕೊಳ್ಳುವುದು ದುಬಾರಿಯಾಗುತ್ತದೆ. ಆ ಉದ್ದೇಶದಿಂದ ಮೊಬೈಲ್ ಆಮದಿನ ಮೇಲೆ ಶೇಕಡ ೨೦ರಷ್ಟು ಸುಂಕ ಹಾಕಲಾಯಿತು. ಮೊಬೈಲ್ ಆಮದು ದುಬಾರಿಯಾಯಿತು. ಉದಾಹರಣೆಗೆ ಐಫೋನ್ ೧೩ ಪ್ರೋ ಮ್ಯಾಕ್ಸ್ ಷಿಕಾಗೊದಲ್ಲಿ ನಿಮಗೆ ೯೨೫೦೦ ರೂಪಾಯಿಗೆ ಸಿಗುತ್ತದೆ. ಅದನ್ನೇ ಭಾರತದಲ್ಲಿ ಕೊಳ್ಳುವುದಕ್ಕೆ ೧,೨೯,೦೦೦ ರೂಪಾಯಿ ತೆರಬೇಕಾಗುತ್ತದೆ. ಸ್ವಾಭಾವಿಕವಾಗಿಯೇ ಆಮದು ಕಡಿಮೆಯಾಗುತ್ತದೆ. ಭಾರತದಲ್ಲಿನ ಉತ್ಪಾದಕರಿಗೆ ಸ್ಪರ್ಧೆ ಕಮ್ಮಿಯಾಗುತ್ತದೆ.
ಎರಡನೆಯ ಕ್ರಮವೆಂದರೆ ಭಾರತದಲ್ಲಿ ಉತ್ಪಾದಿಸುವುದಕ್ಕೆ ಉತ್ತೇಜನ ನೀಡುವುದು. ಅದೇ ಉದ್ದೇಶಕ್ಕೆ ಪಿಎಲ್‌ಐ-ಪ್ರೊಡಕ್ಷನ್ ಲಿಂಕಡ್ ಇನ್ಸೆಂಟಿವ್ ಯೋಜನೆಯನ್ನು ಜಾರಿಗೆ ತರಲಾಗಿದೆ. ಅಂದರೆ ಭಾರತದಲ್ಲಿ ಉತ್ಪಾದನೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಭಾರತದಲ್ಲಿ ಉತ್ಪಾದನೆಯಾದ ಪ್ರತಿ ಮೊಬೈಲಿಗೆ ಅದರ ಮಾರಾಟ ಬೆಲೆಯ ಶೇಕಡ ೪ ರಿಂದ ೬ರಷ್ಟು ಸಬ್ಸಿಡಿಯನ್ನು ಕೊಡಲಾಗುತ್ತಿದೆ. ಜೊತೆಗೆ ರಾಜ್ಯ ಸರ್ಕಾರಗಳು ತಮ್ಮ ರಾಜ್ಯಗಳಲ್ಲಿ ಪಿಎಲ್‌ಐ ಯೋಜನೆಯಲ್ಲಿ ಬರುವ ಉದ್ದಿಮೆಗಳಿಗೆ ಹಲವು ರೀತಿಯ ಸೌಲಭ್ಯ ನೀಡುತ್ತವೆ. ಉದಾಹರಣೆಗೆ ಜಿಎಸ್‌ಟಿಯಲ್ಲಿ ರಿಯಾಯಿತಿ, ವಿದ್ಯುತ್ ಹಾಗೂ ಭೂಮಿಗೆ ಸಬ್ಸಿಡಿ.


ಈ ಕ್ರಮಗಳಿಂದ ಸರ್ಕಾರದ ಪ್ರಕಾರ ಭಾರತ ಕಳೆದ ಐದು ವರ್ಷಗಳಲ್ಲಿ ಮೊಬೈಲ್ ಉತ್ಪಾದನೆಯಲ್ಲಿ ಪ್ರಮುಖ ರಾಷ್ಟ್ರವಾಗಿ ಬೆಳೆದಿದೆ. ರಫ್ತಿನಲ್ಲಿ ಆಗಿರುವ ಹೆಚ್ಚಳ ಇದಕ್ಕೆ ಸಾಕ್ಷಿ. ಈ ಯೋಜನೆಯಿಂದ ಸಾಕಷ್ಟು ಉದ್ಯೋಗಗಳೂ ಸೃಷ್ಟಿಯಾಗುತ್ತಿದೆ. ಹಾಗಾಗಿ ಇದನ್ನು ಬೇರೆ ಕ್ಷೇತ್ರಗಳಿಗೂ ವಿಸ್ತರಿಸಲಾಗುತ್ತಿದೆ, ಇದು ಸರ್ಕಾರದ ವಿವರಣೆ.
ಆದರೆ ಹಲವರ ದೃಷ್ಟಿಯಲ್ಲಿ ಈ ಯೋಜನೆ ಸರ್ಕಾರ ಬಣ್ಣಿಸುತ್ತಿರುವ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲ. ಇದರಲ್ಲಿ ಹಲವು ಸಮಸ್ಯೆಗಳಿವೆ. ರಘುರಾಂ ರಾಜನ್ ಗುರುತಿಸುವಂತೆ ’ಉತ್ಪಾದನೆ’ಯ ವ್ಯಾಖ್ಯೆಯಲ್ಲೇ ಸಮಸ್ಯೆಯಿದೆ. ಅದು ಎಷ್ಟು ಸಡಿಲವಾಗಿದೆ ಅಂದರೆ ಬಿಡಿಭಾಗಗಳು ಕೂಡಿಸುವುದೂ ಉತ್ಪಾದನೆ ಅನಿಸಿಕೊಳ್ಳುತ್ತದೆ. ರಾಜನ್ ಹೇಳುವಂತೆ ಇಲ್ಲಿ ಆಗುತ್ತಿರುವುದು ಬಹುತೇಕ ಬಿಡಿಭಾಗಗಳ ಅಸೆಂಬ್ಲಿ ಕೆಲಸವೆ. ಬೇರೆಡೆ ತಯಾರಾದ ಬಿಡಿಭಾಗಗಳನ್ನು ತಂದು ಇಲ್ಲಿ ಜೋಡಿಸುತ್ತಿದ್ದೇವೆ ಅಷ್ಟೆ. ಉತ್ಪಾದನೆ ಮಾಡುತ್ತಿಲ್ಲ.
ಇದರಲ್ಲಿ ಸಮಸ್ಯೆ ಏನು ಅಂತ ಕೇಳಬಹುದು.
ಇದನ್ನು ಅರ್ಥಮಾಡಿಕೊಳ್ಳುವುದಕ್ಕೆ ಇಡೀ ಉತ್ಪಾದನಾ ಪ್ರಕ್ರಿಯೆಯನ್ನು ಒಮ್ಮೆ ಗಮನಿಸೋಣ. ಉತ್ಪಾದನೆ ವಿವಿಧ ಹಂತಗಳಲ್ಲಿ ನಡೆಯುತ್ತದೆ. ಪ್ರತಿಹಂತದಲ್ಲೂ ಒಂದಿಷ್ಟು ಮೌಲ್ಯ ಸೇರುತ್ತಾ ಹೋಗುತ್ತದೆ. ಆದರೆ ಎಲ್ಲಾ ಹಂತಗಳಲ್ಲೂ ಒಂದೇ ಪ್ರಮಾಣದಲ್ಲಿ ಮೌಲ್ಯದ ಸೇರ್ಪಡೆಯಾಗುವುದಿಲ್ಲ. ಅತಿ ಹೆಚ್ಚು ಮೌಲ್ಯ ತರುವ ಕೆಲಸವೆಂದರೆ ಉತ್ಪಾದನೆಯ ಪೂರ್ವ ಹಂತ ಮತ್ತು ಉತ್ಪಾದನೆಯ ನಂತರದ ಹಂತಗಳಲ್ಲಿ ನಡೆಯುವ ಕೆಲಸಗಳು. ಉತ್ಪಾದನೆಯ ಹಂತದಲ್ಲಿ ಕನಿಷ್ಠ ಮೌಲ್ಯದ ಸೇರ್ಪಡೆಯಾಗುತ್ತದೆ. ಉತ್ಪಾದನೆಯ ಪೂರ್ವ ಹಂತ ಅಂದರೆ ಆರ್ ಅಂಡ್ ಡಿ, ವಿನ್ಯಾಸ ರಚನೆ ಇವುಗಳಿಗೆ ಹೆಚ್ಚಿನ ಬೆಲೆ ಸಿಗುತ್ತದೆ. ಹಾಗೆಯೇ ಉತ್ಪಾದನೆಯ ನಂತರದ ಮಾರಾಟದ ಹಂತದಲ್ಲಿ ತೊಡಗಿದವರು ಹೆಚ್ಚು ಹಣ ಮಾಡಿಕೊಳ್ಳುತ್ತಾರೆ. ನಿಜವಾಗಿ ಉತ್ಪಾದನೆಗೆ ಸಿಗುವುದು ತುಂಬಾ ಕಡಿಮೆ.


ಉದಾಹರಣೆಗೆ ಐಫೋನ್ ತೆಗೆದುಕೊಳ್ಳಿ. ಯಾವುದೇ ಉತ್ಪಾದನೆಯನ್ನು ಮಾಡದ ಆಪಲ್ ಕಂಪೆನಿಗೆ ಒಟ್ಟು ಮಾರುಕಟ್ಟೆ ಬೆಲೆಯ ಶೇಕಡ ೬೦ರಷ್ಟು ಹೋಗುತ್ತದೆ. ಉತ್ಪಾದಿಸುವವರಿಗೆ ಸಿಗುವುದು ಶೇಕಡ ೩೦. ಅದರಲ್ಲೂ ಅಸೆಂಬಲ್ ಮಾಡುವುದಕ್ಕೆ ಸಿಗುವುದು ಕೇವಲ ಶೇಕಡ ೪. ಅಂದರೆ ಭಾರತದಲ್ಲಿ ಆಗುತ್ತಿರುವ ಕೆಲಸಕ್ಕೆ ಸಿಗುತ್ತಿರುವುದು ಪ್ರತಿ ನೂರು ರೂಪಾಯಿಗೆ ಕೇವಲ ೪ ರೂಪಾಯಿ. ಅದಕ್ಕೆ ಸರ್ಕಾರ ಕೊಡುತ್ತಿರುವ ಸಬ್ಸಿಡಿ ೬ ರೂಪಾಯಿ. ಅಂದರೆ ಸರ್ಕಾರ ಕೊಡುತ್ತಿರುವ ಸಬ್ಸಿಡಿಯಷ್ಟು ಮೌಲ್ಯವೂ ಇಲ್ಲಿ ಸೃಷ್ಟಿಯಾಗುತ್ತಿಲ್ಲ. ಅಷ್ಟೇ ಅಲ್ಲ, ನಾವು ಅಸೆಂಬಲ್ ಹಂತವನ್ನು ಮೀರಿಕೊಂಡು ಉತ್ಪಾದನೆಯ ಹಂತಕ್ಕೆ ಹೋಗುವ ಯಾವ ಸೂಚನೆಯೂ ಕಾಣುತ್ತಿಲ್ಲ. ಇದು ರಾಜನ್ ಅವರ ಆತಂಕ.


ಜೊತೆಗೆ ರಾಜನ್ ಹೇಳುವಂತೆ ನಾವು ಸಬ್ಸಿಡಿ ನಿಲ್ಲಿಸಬಿಟ್ಟರೆ ಅವರು ಇಲ್ಲಿ ಉಳಿಯುವ ಖಾತರಿ ಇಲ್ಲ. ಅವರೇನು ಇಲ್ಲಿ ತುಂಬಾ ಬಂಡವಾಳ ಹೂಡಿಲ್ಲ. ಅಸೆಂಬಲ್ ಮಾಡುವುದಕ್ಕೆ ಒಂದು ಜಾಗ ಅಷ್ಟೆ. ಹಾಗಾಗಿ ಉತ್ಪಾದನೆ ಅಗ್ಗವಾಗುವ ಜಾಗಗಳಿಗೆ ಸಲಿಸಾಗಿ ಹೋಗಿಬಿಡಬಹುದು.


ರಘುರಾಂ ರಾಜನ್ ಹೇಳುವಂತೆ ಭಾರತ ಜಾಗತಿಕ ಮೌಲ್ಯ ಸೇರ್ಪಡೆಯ ಸರಪಳಿಯಲ್ಲಿ ಅತ್ಯಂತ ಕನಿಷ್ಠ ಮೌಲ್ಯ ತಂದು ಕೊಡುವ ಭಾಗವನ್ನು ಆರಿಸಿಕೊಂಡಿದೆ. ಅಲ್ಲೇ ಸಮಸ್ಯೆಯಿದೆ. ನಾವು ಅತಿ ಹೆಚ್ಚು ಬೆಲೆ ಇರುವ ವಿನ್ಯಾಸ ಇತ್ಯಾದಿ ಬೌದ್ಧಿಕ ಅಂಶಗಳಿಗೆ ಗಮನಕೊಡಬೇಕು. ಯಾಕೆಂದರೆ ನಿಜವಾಗಿ ಹೆಚ್ಚಿನ ಲಾಭ ಸಿಗುವುದು ಅದರಲ್ಲಿ. ಅಷ್ಟೇ ಅಲ್ಲ ನಮಗೆ ಹೆಚ್ಚಿನ ಪರಿಣತಿ ಇರುವುದೂ ಬೌದ್ಧಿಕ ಕ್ಷೇತ್ರದಲ್ಲಿ. ಅದರಿಂದಾಗಿಯೇ ಏನನ್ನೂ ಉತ್ಪಾಸದೇ ವಿನ್ಯಾಸ ಹಾಗೂ ಸಂಶೋದನೆಯಲ್ಲಿ ತೊಡಗಿರುವ ಅಪಲ್ ಕಂಪೆನಿಯ ಮೌಲ್ಯ ಇಂದು ೩ ಟ್ರಿಲಿಯನ್ ಡಾಲರ್. ಆಪಲ್ ಕಂಪೆನಿಗಾಗಿ ಎಲ್ಲವನ್ನೂ ತಯಾರಿಸಿಕೊಡುವ ಫಾಕ್ಸ್‌ಕಾನ್ ಮೌಲ್ಯ ೫೦ ಬಿಲಿಯನ್. ಅಂದರೆ ಆಪಲ್ ಆಸ್ತಿ ೬೦ ಪಟ್ಟು ಹೆಚ್ಚಿಗೆ ಇದೆ.
ಮೊಬೈಲ್ ರಫ್ತು ಆಮದಿನ ಕಥೆಯನ್ನು ನೋಡೋಣ
ಇತ್ತೀಚಿನ ದಿನಗಳಲ್ಲಿ ಭಾರತದ ಮೊಬೈಲ್ ಫೋನ್ ರಫ್ತು ಹೆಚ್ಚಿರುವುದು ತುಂಬಾ ಆಸಕ್ತಿಯನ್ನು ಕೆರಳಿಸಿದೆ. ಏಪ್ರಿಲ್ ೨೦೧೭-೧೮ರಲ್ಲಿ ಮೊಬೈಲ್ ಫೋನಿನ ಆಮದು ೩.೬ ಬಿಲಿಯನ್ ಡಾಲರ್ ಇತ್ತು. ಆದರೆ ಫೋನಿನ ರಫ್ತು ಕೇವಲ ೩೩೪ ಮಿಲಿಯನ್ ಡಾಲರ್ ಇತ್ತು. ಹಾಗಾಗಿ ನಿವ್ವಳ ರಫ್ತು ಅಂದರೆ ರಫ್ತಿನ ಮೌಲ್ಯದಲ್ಲಿ ಆಮದಿನ ಮೌಲ್ಯವನ್ನು ಕಳೆದಾಗ -೩.೩ ಬಿಲಿಯನ್ ಡಾಲರ್ ಆಗುತ್ತದೆ. ೨೦೨೨-೨೦೨೩ರ ಮಾರ್ಚ್‌ನಲ್ಲಿ ಫೋನ್ ಆಮದು ೧.೬ ಬಿಲಿಯನ್ ಡಾಲರಿಗೆ ಇಳಿಯಿತು. ಆದರೆ ಫೋನಿನ ರಫ್ತು ಸುಮಾರು ೧೧ ಬಿಲಿಯನ್ ಡಾಲರ್ ಆಯಿತು. ನಿವ್ವಳ ರಫ್ತು ೯.೮ ಬಿಲಿಯನ್ ಡಾಲರ್ ಆಯಿತು. ಅಂದರೆ ೨೦೧೭-೧೮ಕ್ಕೆ ಹೋಲಿಸಿದರೆ ೧೩.೧ ಬಿಲಿಯನ್ ಡಾಲರ್ ಅಷ್ಟು ಹೆಚ್ಚಾಗಿದೆ. ಹಾಗಾದರೆ ಭಾರತ ಮೊಬೈಲ್ ಉತ್ಪಾದನೆಯ ದೈತ್ಯ ಶಕ್ತಿಯಾಗಿದೆಯೇ?
ಮೇಲು ನೋಟಕ್ಕೆ ಇದು ನಿಜ ಎಂದು ತೋರುತ್ತದೆ. ೨೦೧೮ರಲ್ಲಿ ಆಮದಿನ ಮೇಲೆ ಸುಂಕ ಹಾಕಿದ ಕೂಡಲೆ ಆಮದು ಕಮ್ಮಿಯಾಗಿರುವುದು ಹಾಗೂ ಪಿಎಲ್‌ಐ ಜಾರಿಗೆ ಬಂದ ಕೆಲವು ತಿಂಗಳಲ್ಲಿ ರಫ್ತು ಹೆಚ್ಚಾಗಿರುವುದು ಕಾಣುತ್ತದೆ. ನಿವ್ವಳ ರಫ್ತು ಐದು ತಿಂಗಳ ನಂತರ ಧನಾತ್ಮಕವಾಗಿರುವುದು ಕಾಣುತ್ತದೆ. (ಚಿತ್ರ-೧) ಇದನ್ನು ಪಿಎಲ್‌ಐ ಯೋಜನೆಯ ಯಶಸ್ಸು ಎಂದು ಭಾವಿಸಲಾಗಿದೆ. ಆದರೆ ರಘುರಾಂ ರಾಜನ್ ಹೇಳುವಂತೆ ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ವಾಸ್ತವ ಬೇರೆಯಾಗಿಯೇ ಕಾಣುತ್ತದೆ.
ಮೊದಲಿಗೆ ಆಮದು ಕಮ್ಮಿಯಾಗಿರುವುದನ್ನು ನೋಡೋಣ. ಇಲ್ಲಿ ಇನ್ನೊಂದು ಸಾಧ್ಯತೆ ಕಾಣುತ್ತದೆ. ಫೋನುಗಳನ್ನು ಆಮದು ಮಾಡಿಕೊಳ್ಳುವ ಬದಲು ಅಸೆಂಬಲ್‌ಗೆ ಸಿದ್ಧವಾದ ಬಿಡಿಭಾಗಗಳ ಕಿಟ್ಟನ್ನು ಆಮದು ಮಾಡಿಕೊಂಡು ಇಲ್ಲಿ ಅಸೆಂಬಲ್ ಮಾಡುತ್ತಿರುವ ಸಾಧ್ಯತೆಯಿದೆ. ಆ ಕಾರಣಕ್ಕೂ ಆಮದು ಕಡಿಮೆಯಾಗಿ ತೋರುತ್ತಿರಬಹುದು. ಆದರೆ ಅಂತಹ ಕಿಟ್ಟುಗಳ ಆಮದಿಗೆ ಸಂಬಂಧಿಸಿದಂತೆ ನಮಗೆ ಮಾಹಿತಿ ಸಿಗುವುದಿಲ್ಲ. ವ್ಯಾಪಾರಕ್ಕೆ ಸಂಬಂಧಿಸಿದಂತೆ ಲಭ್ಯವಿರುವ ಅಂಕಿಅಂಶಗಳಿಂದ ಆ ಮಾಹಿತಿಯನ್ನು ರಾಜನ್ ಹೆಕ್ಕಿಕೊಳ್ಳುತ್ತಾರೆ.


ಚಿತ್ರ-೧
೨೦೧೮ರ ಏಪ್ರಿಲ್‌ನಲ್ಲಿ ಮೊಬೈಲ್ ಉತ್ಪಾದನೆಗೆ ಬೇಕಾದ ಸೆಮಿಕಂಡಕ್ಟರ್, ಕ್ಯಾಮೆರಾಗಳು, ಬ್ಯಾಟರಿಗಳು ಇತ್ಯಾದಿ ಪ್ರಮುಖ ಪದಾರ್ಥಗಳ ಆಮದು ದಿಢೀರನೆ ಹೆಚ್ಚಾಯಿತು. ಆಗಿನ್ನೂ ಪಿಎಲ್‌ಐ ಯೋಜನೆ ಪ್ರಾರಂಭವಾಗಿರಲಿಲ್ಲ. ಅಂದರೆ ಫೋನುಗಳ ಬಿಡಿಭಾಗಗಳನ್ನು ಜೋಡಿಸುವ ಕೆಲಸ ಭಾರತದಲ್ಲಿ ಈ ಮೊದಲೇ ಪ್ರಾರಂಭವಾಗಿತ್ತು ಅಂತ ಭಾವಿಸುವುದಕ್ಕೂ ಅವಕಾಶವಿದೆ. ಮೊಬೈಲ್ ಫೋನ್ ರಫ್ತು ಹೆಚ್ಚಾಗಿದ್ದೂ ಕೂಡ ೨೦೨೧ರ ಕೊನೆಯ ತ್ರೈಮಾಸಿಕದಲ್ಲೇ.


೨೦೨೩ರಲ್ಲಿ ೩೨.೪ ಬಿಲಿಯನ್ ಮೌಲ್ಯದ ಸೆಮಿಕಂಡಕ್ಟರ್, ಪಿಸಿಬಿಎಗಳು, ಕ್ಯಾಮೆರಾಗಳು ಇತ್ಯಾದಿ ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳಲಾಗಿತ್ತು. ಇವಿಷ್ಟೂ ಕೇವಲ ಮೊಬೈಲ್ ಅಸೆಂಬಲ್ ಮಾಡುವುದಕ್ಕೇ ಬಳಕೆಯಾಗಿರಬೇಕು ಅಂತ ಏನೂ ಅಲ್ಲ. ಬೇರೆ ಎಲೆಕ್ಟ್ರಾನಿಕ್ ವಸ್ತುಗಳ ತಯಾರಿಕೆಯಲ್ಲೂ ಬಳಕೆಯಾಗಿರಬಹುದು. ಉದಾಹರಣೆಗೆ ಲಿಥಿಯಾಂ ಐಯಾನ್ ಬ್ಯಾಟರಿಯನ್ನು ಕ್ಯಾಮರಗಳಿಗೆ ಬಳಸಿರಬಹುದು. ಇವುಗಳಲ್ಲಿ ಮೊಬೈಲ್ ತಯಾರಿಕೆಯಲ್ಲಿ ಎಷ್ಟು ಬಳಕೆಯಾಗಿವೆ ಅನ್ನುವ ಮಾಹಿತಿ ಇಲ್ಲದ ಕಾರಣ ಕೇವಲ ಊಹೆಯನ್ನಷ್ಟೇ ಮಾಡಬಹುದು. ರಾಜನ್ ಅದೇ ಕೆಲಸವನ್ನು ಮಾಡುತ್ತಾರೆ. ಶೇಕಡ ನೂರರಷ್ಟು ಬಳಕೆಯಾಗಿರಬಹುದಾದ ಸಾಧ್ಯತೆಯಿಂದ ಪ್ರಾರಂಭಿಸಿ, ಶೇಕಡ ೮೦, ಶೇಕಡ ೬೦ ಹಾಗೂ ಶೇಕಡ ೪೦ರಷ್ಟು ಬಳಕೆಯಾಗಿರುವ ಸಾಧ್ಯತೆಗಳನ್ನು ಪರಿಶೀಲಿಸುತ್ತಾರೆ. (ಚಿತ್ರ-೨)


ಶೇಕಡ ನೂರರಷ್ಟೂ ಬಳಕೆಯಾಗಿದ್ದರೆ ನಿವ್ವಳ ರಫ್ತು ೨೦೧೭ರಲ್ಲಿ -೧೨.೭ ಇದ್ದುದು ೨೦೨೩ರಲ್ಲಿ -೨೧.೩ ಆಗುತ್ತದೆ. ಅಂದರೆ ಪಿಎಲ್‌ಐ ಯೋಜನೆಯಿಂದ ಅವಲಂಬನೆ ಹೆಚ್ಚಾಗಿದೆ ಅನ್ನುವ ತೀರ್ಮಾನ ಅನಿವಾರ್ಯವಾಗುತ್ತದೆ. ಶೇಕಡ ೮೦ ಅಥವಾ ಶೇಕಡ ೬೦ರಷ್ಟು ಇದ್ದಾಗಲೂ ಪ್ರವೃತ್ತಿಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಶೇಕಡ ೪೦ಕ್ಕಿಂತ ಕಡಿಮೆಯಾದಾಗ ಮಾತ್ರ ನಿವ್ವಳ ರಫ್ತು ಧನಾತ್ಮಕವಾಗುವುದು ಎಂದು ರಾಜನ್ ಅವರ ಅಧ್ಯಯನ ತಿಳಿಸುತ್ತದೆ. ಆದರೆ ಅದು ಖಂಡಿತಾ ಶೇಕಡ ೪೦ಕ್ಕಿಂತ ಹೆಚ್ಚಿರಲೇಬೇಕು ಅನ್ನುವುದು ರಾಜನ್ ಅವರ ಊಹೆಯಾಗಿತ್ತು.


ಮಂತ್ರಿಗಳಾದ ರಾಜೀವ್ ಚಂದ್ರಶೇಖರ್ ಅವರು ತಮ್ಮ ಪ್ರತಿಕ್ರಿಯೆಯಲ್ಲಿ ಶೇಕಡ ೬೫ರಷ್ಟು ಮೊಬೈಲ್ ತಯಾರಿಕೆಯಲ್ಲಿ ಬಳಕೆಯಾಗುತ್ತಿದೆ ಎಂದು ತಿಳಿಸುವ ಮೂಲಕ ರಾಜನ್ ಅವರ ಸಮಸ್ಯೆಯನ್ನು ಪರಿಹರಿಸಿದ್ದಾರೆ. ಈಗ ಅದು ಕೇವಲ ಊಹೆಯಲ್ಲ. ನಿವ್ವಳ ರಫ್ತು ಋಣಾತ್ಮಕವಾಗಿದೆ ಅನ್ನುವುದು ಅಧಿಕೃತ. ಮೊಬೈಲ್ ಫೋನಿನ ರಫ್ತು ತುಂಬಾ ಹೆಚ್ಚಿದೆ ಹಾಗೂ ಅಮದು ಕಡಿಮೆಯಾಗಿದೆ ಅನ್ನುವ ಸರ್ಕಾರದ ವಾದವನ್ನು ಮಂತ್ರಿಗಳೇ ಅಲ್ಲಗೆಳೆದಿದ್ದಾರೆ. ಜೊತೆಗೆ ಈ ಕಂಪೆನಿಗಳ ಲಾಭ, ಇತ್ಯಾದಿ ಹೊರಗೆ ಹರಿದು ಹೋಗುತ್ತಿವೆ. ಅದನ್ನೂ ಲೆಕ್ಕಕ್ಕೆ ತೆಗೆದುಕೊಂಡರೆ ರಫ್ತಿನ ಮೌಲ್ಯ ಇನ್ನಷ್ಟು ಕಡಿಮೆಯಾಗುತ್ತದೆ.
ನಾವು ರಫ್ತು ಮಾಡುವ ವಸ್ತುಗಳಲ್ಲಿ ಬಹುತೇಕ ನಾವು ಅಮದು ಮಾಡಿಕೊಂಡ ವಸ್ತುಗಳು ಸೇರಿವೆ. ನಾವು ಮೊಬೈಲನ್ನು ರಫ್ತು ಮಾಡುತ್ತಿದ್ದೇವೆ ಅಂತ ಹೇಳುವಾಗ ಆಮದಿನ ಬಗ್ಗೆಯೂ ಮಾತನಾಡಬೇಕು. ಆಗ ನಾವು ಎಷ್ಟು ಮೌಲ್ಯ ಸೇರ್ಪಡೆ ಮಾಡಿದ್ದೇವೆ ಅನ್ನುವುದು ತಿಳಿಯುತ್ತದೆ. ನಾವು ರಫ್ತು ಮಾಡುವುದಕ್ಕಿಂತ ೧೧ ಬಿಲಿಯನ್ನಿನಷ್ಟು ಹೆಚ್ಚು ಆಮದು ಮಾಡಿಕೊಳ್ಳುತ್ತಿದ್ದೇವೆ. ನಾವು ಅಸೆಂಬಲ್ ಮಾಡುವ ಮಟ್ಟದಿಂದ ಮೇಲಕ್ಕೆ ಹೋಗುವುದು ಯಾವಾಗ?


ಮೇಲಿನ ಹಂತಕ್ಕೆ ಹೋಗುವುದು ಯಾವಾಗ?


ಇದಕ್ಕೆ ಪ್ರತಿಕ್ರಿಯಿಸುತ್ತಾ ರಾಜೀವ್ ಚಂದ್ರಶೇಖರ್ ಅವರು ಪ್ರತಿಯೊಂದು ಸಂಕೀರ್ಣವಾದ ಉತ್ಪಾದನೆಯೂ ಪ್ರಾರಂಭವಾಗುವುದು ಅಸೆಂಬಲ ಮಾಡುವ ಹಂತದಿಂದಲೇ. ವ್ಯವಸ್ಥೆ ಬೆಳೆದಂತೆ, ರಫ್ತು ಹೆಚ್ಚಾದಂತೆ ಹೊಸ ಕೆಲಸಗಳು ಸೃಷ್ಟಿಯಾಗುತ್ತವೆ. ಹೆಚ್ಚಿನ ಮೌಲ್ಯವರ್ಧನೆಯಾಗುತ್ತದೆ. ಸ್ಥಳೀಯ ಕಂಪೆನಿಗಳು ಜಾಗತಿಕ ಪೂರೈಕೆಯ ವ್ಯವಸ್ಥೆಯಲ್ಲಿ ಪಾಲ್ಗೊಳ್ಳುತ್ತವೆ. ಇದರ ಅರಿವು ರಘುರಾಂ ರಾಜನ್ ಅವರಿಗೆ ಇದ್ದಂತಿಲ್ಲ ಎಂದು ಲೇವಡಿ ಮಾಡುತ್ತಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಭಾರತವೂ ಉತ್ಪಾದಿಸುತ್ತದೆ ಎಂದು ಹೇಳುತ್ತಾರೆ. ಅವರು ಚೀನಾ ಉದಾಹರಣೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಮಾತನಾಡುತ್ತಿದ್ದಾರೆ. ನಿಜ, ಚೀನಾ ಅಸೆಂಬಲ್ ಮಾಡುವುದರಿಂದ ಪ್ರಾರಂಭಿಸಿತ್ತು. ಬೇರೆ ದೇಶಗಳಲ್ಲಿ ಉತ್ಪಾದನೆ ದುಬಾರಿಯಾಗಿ ಮೇಲ್‌ಸ್ತರಕ್ಕೆ ಹೋಗತೊಡಗಿದಾಗ ಚೀನಾ ಉತ್ಪಾದನೆಯಲ್ಲಿ ತೊಡಗಿತು. ಸಮಸ್ಯೆಯೆಂದರೆ ನಾವು ಚೀನಾ ಪ್ರಾರಂಭಿಸಿದ ಎಷ್ಟೋ ವರ್ಷಗಳ ಮೇಲೆ ಪ್ರಾರಂಭಿಸುತ್ತಿದ್ದೇವೆ. ಈಗ ನಮಗೆ ವಿಯೆಟ್ನಾಂ ಅಂತಹ ಹಲವರು ಪ್ರತಿಸ್ಪರ್ಧಿಗಳು ಇದ್ದಾರೆ. ಜೊತೆಗೆ ಚೀನಾ ಅಸೆಂಬಲ್ ಮಾಡುವ ಕೆಲಸವನ್ನು ನಿಲ್ಲಿಸಿಲ್ಲ. ಅದನ್ನೂ ಮಾಡುತ್ತಿದೆ. ಅವರಿಗೆ ಅಂತಹ ಕೆಲಸ ಮಾಡುವುದಕ್ಕೆ ಬೇಕಾದ ನುರಿತ ಕೆಲಸಗಾರರಿದ್ದಾರೆ. ಹಾಗಾಗಿ ನಾವು ಉತ್ಪಾದನೆಯಲ್ಲಿ ಮೇಲಿನ ಹಂತಕ್ಕೆ ಹೋಗುವುದು ಸುಲಭದ ಕೆಲಸವಲ್ಲ. ಅದಕ್ಕೆ ಬೇಕಾದ ತಯಾರಿಯೂ ಕಾಣುತ್ತಿಲ್ಲ. ಭಾರತಕ್ಕೆ ಬಂದು ಉತ್ಪಾದನೆ ಮಾಡುವುದಕ್ಕೆ ಲಂಚ ಕೊಡುತ್ತಿದ್ದೇವೆಯೇ ಹೊರತು ಮುಂದಿನ ಹಂತಕ್ಕೆ ಹೋಗಲು ಬೇಕಾದ ವ್ಯವಸ್ಥೆಯನ್ನು ರೂಪಿಸುವುದಕ್ಕೆ ಬಂಡವಾಳ ಹೂಡುತ್ತಿಲ್ಲ.


ಉತ್ಪಾದಕರನ್ನು ದುಡ್ಡುಕೊಟ್ಟು ಉಳಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಎಲ್ಲಿ ಉತ್ಪಾದನೆ ಅಗ್ಗವಾಗುತ್ತದೋ ಅಲ್ಲಿಗೆ ಅವರು ಹೋಗುತ್ತಾರೆ. ಚೀನಾ, ವಿಯೆಟ್ನಾಂ ಜೊತೆ ಸ್ಪರ್ಧಿಸಬೇಕಾದರೆ ನಮ್ಮಲ್ಲಿರುವ ನ್ಯೂನತೆಗಳನ್ನು ಸರಿಪಡಿಸಬೇಕು. ಈ ಯೋಜನೆ ಫಲಕಾರಿಯಾಗದೇ ಹೋದರೆ, ಇಡೀ ಹಣ ವೇಸ್ಟ್ ಆಗುತ್ತದೆ. ಇದರ ಬದಲು ಶಿಕ್ಷಣದಲ್ಲಿ ಹಣ ತೊಡಗಿಸಿದ್ದರೆ ಸಮಾಜಕ್ಕೂ ಒಳ್ಳೆಯದು, ಆರ್ಥಿಕತೆಗೂ ಒಳ್ಳೆಯದು. ಐಎಲ್‌ಒ ಪ್ರಕಾರ ೨೦೧೨ ಇಂದ ೨೦೨೧ ವರೆಗೆ ೯೭ ಮಿಲಿಯನ್ ಉದ್ಯೋಗದಿಂದ ೧೦೦ ಮಿಲಿಯನ್ ಉದ್ಯೋಗವನ್ನು ಸಾಧಿಸಿದ್ದೇವೆ. ಅಂದರೆ ೯ ವರ್ಷಗಳಲ್ಲಿ ಮೂರು ಮಿಲಿಯನ್ ಉದ್ಯೋಗ ಸೃಷ್ಟಿಯಾಗಿದೆ. ಅದು ತುಂಬಾ ಕಡಿಮೆ. ಅದರೆ ಸೇವಾ ಕ್ಷೇತ್ರದಲ್ಲಿ ೨೦ ಮಿಲಿಯನ್ ಉದ್ಯೋಗಗಳು ಸೃಷ್ಟಿಯಾಗಿವೆ. ಅಂದರೆ ನಾವು ಸೇವಾ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಸುವಲ್ಲಿ ಹೆಚ್ಚು ಯಶಸ್ವಿಯಾಗಿದ್ದೇವೆ.


ನಾವು ಇನ್ನೂ ಚಿಪ್ ಉತ್ಪಾದನೆಯ ಬಗ್ಗೆಯೇ ಯೋಚಿಸುತ್ತಿದ್ದೇವೆ. ಚಿಪ್ ಉತ್ಪಾದನೆ ಉತ್ಪಾದನೆಯ ಸರಪಳಿಯ ಅಂತಿಮ ಹಂತ. ಅದು ತುಂಬಾ ದುಬಾರಿ. ಫೌಂಡ್ರಿಗಳನ್ನು ಸ್ಥಾಪಿಸುವುದಕ್ಕೆ ಬಿಲಿಯನ್‌ಗಟ್ಟಲೆ ಹಣಬೇಕಾಗುತ್ತದೆ. ಆದರೆ ನಮಗೆ ಚಿಪ್ ವಿನ್ಯಾಸಗೊಳಿಸುವಲ್ಲಿ ಹೆಚ್ಚು ಪರಿಣತಿಯಿದೆ. ಅದಕ್ಕೆ ಬುದ್ದಿವಂತಿಕೆ ಬೇಕು, ಚಿಪ್ ಡಿಸೈನ್ ಮಾಡುವ ಇಂಜಿನಿಯರುಗಳನ್ನು ಸೃಷ್ಟಿಸಬೇಕು. ಅದಕ್ಕೆ ನಮ್ಮ ಇಂಜಿಯನಿಯರಿಂಗ್ ವಿದ್ಯಾರ್ಥಿಗಳ ಗುಣಮಟ್ಟವನ್ನು ಸುಧಾರಿಸಬೇಕು. ಚೀನಾ ಆಗಲು ಹೆಣಗಾಡುವ ಬದಲು ಇಂಡಿಯಾ ಆಗೇ ಉಳಿದು ಸೇವಾ ಕ್ಷೇತ್ರವನ್ನು ಬೆಳೆಸಬಹುದು ಅನ್ನುವುದು ರಾಜನ್ ಅಭಿಪ್ರಾಯ.
ಅಂದರೆ ನಾವು ಅತಿ ಹೆಚ್ಚು ಮೌಲ್ಯ ಸೃಷ್ಟಿಸುವ ಕೆಲಸದ ಕಡೆ ಗಮನ ಕೊಡಬೇಕು. ಬೌದ್ಧಿಕ ಸೇವೆ ಅಂದರೆ ಅರ್ ಅಂಡ್ ಡಿ, ವಿನ್ಯಾಸದ ರಚನೆ ಇವುಗಳ ಕಡೆ ಗಮನ ಕೊಡಬೇಕು. ನಮಗೆ ಅಲ್ಲಿ ಸಾಮರ್ಥ್ಯವಿದೆ. ಜಗತ್ತಿನ ಅತಿದೊಡ್ಡ ಚಿಪ್ ಉತ್ಪಾದಕರಾದ ಟಿಎಸ್‌ಎಂಸಿಯ ಮೌಲ್ಯ ೪೫೦ ಮಿಲಿಯನ್ ಡಾಲರ್. ಕೇವಲ ಚಿಪ್ ವಿನ್ಯಾಸ ಮಾಡುವ ವಿಡಿಯಾದ ಮೌಲ್ಯ ಒಂದು ಟ್ರಿಲಿಯನ್ ಡಾಲರ್. ನಾವು ಚಿಪ್ ಉತ್ಪಾದನೆಗೆ ಹೋಗಬೇಕಾಗಿಲ್ಲ. ಚಿಪ್ ವಿನ್ಯಾಸ ಮಾಡಬಹುದು. ನಾವು ಈಗಾಗಲೆ ಆ ಕ್ಷೇತ್ರದಲ್ಲಿದ್ದೇವೆ. ನಮಗಿರುವ ಸಾಮರ್ಥ್ಯದ ಮೇಲೆ ಕೇಂದ್ರೀಕರಿಸಬೇಕು. ನಮ್ಮ ಮಿತಿಯ ಮೇಲಲ್ಲ.


ಮೈಕ್ರಾನ್ ಪ್ಲಾಂಟಿನಲ್ಲಾಗುತ್ತಿರುವ ೨.೭೫ ಬಿಲಿಯನ್ ಹೂಡಿಕೆಯ ಶೇಕಡ ೭೫ರಷ್ಟು ಹಣ ಬರುತ್ತಿರುವುದು ಕೇಂದ್ರ ಹಾಗೂ ಗುಜರಾತ್ ಸರ್ಕಾರದಿಂದ. ೭೫೦ ಮಿಲಿಯನ್ ಡಾಲರ್ ಹಣವನ್ನು ಮಾತ್ರ ಮೈಕ್ರಾನ್ ಹಾಕುತ್ತಿದೆ. ಅದೇ ಅಮೇರಿಕೆಯಲ್ಲಿ ಅದು ೨೦೦ ಬಿಲಿಯನ್ ಡಾಲರಿಗೂ ಹೆಚ್ಚು ಹಣ ಹೂಡುತ್ತಿದೆ. ಮೈಕ್ರಾನ್ ಇಲ್ಲಿ ಕೇವಲ ಅಸೆಂಬ್ಲಿಂಗ್ ಹಾಗೂ ಟೆಸ್ಟಿಂಗ್ ಮಾಡುತ್ತಿದೆ. ನಾವು ಇದರಿಂದ ಸ್ವತಂತ್ರವಾಗುವುದಿಲ್ಲ. ನಾವು ವೇಫರುಗಳನ್ನು ಆಮದು ಮಾಡಿಕೊಳ್ಳುತ್ತೇವೆ, ಎಚ್ಚಿಂಗ್ ಇನ್ನೆಲ್ಲೊ ಆಗುತ್ತದೆ. ನಮಗೆ ಏನು ಲಾಭ? ೫೦೦೦ ಉದ್ಯೋಗ ಸೃಷ್ಟಿಯಾಗಬಹುದು. ೫೦೦೦ ಕೆಲಸಕ್ಕೆ ೨ ಬಿಲಿಯನ್ ಡಾಲರ್. ಅಂದರೆ ಒಂದು ಕೆಲಸಕ್ಕೆ ೨.೫ ಕೋಟಿ. ೨ ಬಿಲಿಯನ್ ಡಾಲರ್ ಅಂದರೆ ೧೬೫೦೦ ಕೋಟಿ ರೂಪಾಯಿ. ಇಡೀ ಉನ್ನತ ಶಿಕ್ಷಣ ಬಜೆಟ್ ೪೪೦೦೦ ಕೋಟಿ ರೂಪಾಯಿ. ಒಂದು ಶ್ರೀಮಂತ ಸೆಮಿಕಂಡಕ್ಟರ್ ಉದ್ದಿಮೆಗೆ ಸಬ್ಸಿಡಿಕೊಡುವುದಕ್ಕೆ ಅದರ ಶೇಕಡ ೩೩ರಷ್ಟನ್ನು ಖರ್ಚು ಮಾಡುತ್ತಿದ್ದೇವೆ. ಅದರ ಒಂದಿಷ್ಟು ಉತ್ಪಾದನೆಯನ್ನು ಭಾರತಕ್ಕೆ ತರುವುದಕ್ಕೆ ಇಷ್ಟೊಂದು ಹಣ ಖರ್ಚು ಮಾಡುತ್ತಿದ್ದೇವೆ. ಈ ಎಲ್ಲಾ ಉದ್ದಿಮೆಗಳಿಗೂ ಚೀನಾದ ಬಗ್ಗೆ ಆತಂಕವಿದೆ. ಅವರು ಚೀನಾ ಬದಲು ಬೇರೆ ದೇಶಗಳಲ್ಲಿ ಉತ್ಪಾದಿಸುವುದಕ್ಕೆ ಉತ್ಸುಕರಾಗಿದ್ದಾರೆ. ಸಬ್ಸಿಡಿ ಕೊಡದೇ ಇವರನ್ನು ಆಕರ್ಷಿಸುವ ಸಾಧ್ಯತೆ ಇತ್ತು ಅನಿಸುತ್ತದೆ.


ರಾಜೀವ್ ಚಂದ್ರಶೇಖರ್ ಅವರ ಇನ್ನೊಂದು ಆಕ್ಷೇಪವೆಂದರೆ ರಘುರಾಂ ರಾಜನ್ ೨೦೧೭-೧೮ ಅನ್ನು ೨೦೨೨-೨೩ಗೆ ಹೋಲಿಸಿದ್ದಾರೆ. ೨೦೧೩-೨೦೧೪ನ್ನು ಹೋಲಿಕೆಗೆ ಆರಿಸಿಕೊಳ್ಳಬೇಕಿತ್ತು. ಅಗ ೧೪೦೦% ಮೊಬೈಲ್ ಉತ್ಪಾದನೆಯಲ್ಲಿ ಹೆಚ್ಚುವರಿ ಕಾಣಿಸುತ್ತಿತ್ತು. ಹಾಗೆಯೇ ರಫ್ತಿನಲ್ಲಿ ೧೨೦೦% ರಫ್ತಿನಲ್ಲಿ ಹೆಚ್ಚು ಕಾಣಿಸುತ್ತಿತ್ತು ಅಂದಿದ್ದಾರೆ. ಮೋದಿ ಸರ್ಕಾರದ ಸಾಧನೆಯನ್ನು ಕಡಿಮೆಯಾಗಿ ತೋರಿಸುವುದಕ್ಕೆ ಹೀಗೆ ಮಾಡಲಾಗಿದೆ ಎನ್ನುವುದು ಅವರ ಅಕ್ಷೇಪ.


೨೦೧೭ನ್ನು ಹೋಲಿಕೆಗೆ ಆರಿಸಿಕೊಂಡಿದ್ದರ ಹಿಂದೆ ಇರುವ ತರ್ಕ ಏನೆಂದರೆ, ಮೊಬೈಲ್ ಫೋನಿನ ಮೇಲೆ ಸುಂಕ ವಿಧಿಸಲು ಪ್ರಾರಂಭಿಸಿದ್ದು ೨೦೧೮ರಲ್ಲಿ. ಪಿಎಲ್‌ಐ ಜಾರಿಗೆ ಬಂದಿದ್ದು ೨೦೨೦ರ ಪ್ರಾರಂಭದಲ್ಲಿ. ಹಾಗಾಗಿ ಹೋಲಿಕೆಗೆ ಅದರ ಹಿಂದಿನ ವರ್ಷ ಅಂದರೆ ೨೦೧೭ ಅನ್ನು ತೆಗೆದುಕೊಳ್ಳುವುದು ಅತ್ಯಂತ ಸಮಂಜಸವಾಗಿದೆ. ಎರಡನೆಯದಾಗಿ ೨೦೧೩-೧೪ ಅನ್ನು ಆರಿಸಿಕೊಂಡಿದ್ದರೆ ಸರ್ಕಾರಕ್ಕೇ ಮುಜಗರವಾಗುತ್ತಿತ್ತು. ಯಾಕೆ ೯ ವರ್ಷವಾದರೂ ಇನ್ನೂ ಅಸೆಂಬಲ್ ಮಾಡುವ ಮಟ್ಟದಿಂದ ಮೇಲಕ್ಕೆ ಹೋಗಿಲ್ಲ ಅನ್ನುವುದಕ್ಕೆ ಅವರು ಉತ್ತರ ಕೊಡಬೇಕಾಗುತ್ತಿತ್ತು.


ಜೊತೆಗೆ ಇದರಿಂದ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗುವ ಬಗ್ಗೆಯೂ ಖಾತರಿ ಇಲ್ಲ. ಸರ್ಕಾರದ ಸಂಸ್ಥೆಯಾದ ಡಿಪಿಐಐಟಿ ಪಿಎಲ್‌ಐ ಫಲಾನುಭವಿ ಕೈಗಾರಿಕೆಗಳ ಹೂಡಿಕೆ ಹಾಗೂ ಉದ್ಯೋಗದ ಪ್ರಮಾಣವನ್ನು ಕುರಿತಂತೆ ಅಂಕಿ ಅಂಶವನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ ಮೊಬೈಲ್ ಕ್ಷೇತ್ರದಲ್ಲಿ ನಿರೀಕ್ಷಿತ ಹೂಡಿಕೆಯಲ್ಲಿ ಶೇಕಡ ೩೮ರಷ್ಟು ಈಗಾಗಲೇ ಆಗಿದೆ. ಆದರೆ ನಿರೀಕ್ಷಿತ ಉದ್ಯೋಗದಲ್ಲಿ ಸೃಷ್ಟಿಯಾಗಿರುವುದು ಕೇವಲ ಶೇಕಡ ೪ರಷ್ಟು. ಹಾಗಾಗಿ ಇದರಿಂದ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗಿಬಿಡುತ್ತದೆ ಅಂತ ಭಾವಿಸುವುದಕ್ಕೆ ಪುರಾವೆಗಳಿಲ್ಲ.


ಮಂತ್ರಿಗಳು ಚೀನಾ ಮೊಬೈಲ್ ಉತ್ಪಾದನೆ ಪ್ರಾರಂಭಿಸಿದಾಗ ಇದ್ದ ಮಟ್ಟಕ್ಕಿಂತ ನಾವು ಉತ್ತಮ ಮಟ್ಟದಲ್ಲಿ ಇರುತ್ತೇವೆ ಅನ್ನುವ ಭರವಸೆಯನ್ನು ಕೊಡುತ್ತೇವೆ ಎಂದಿದ್ದಾರೆ. ಅದೇನು ದೊಡ್ಡದಲ್ಲ. ಯಾಕೆಂದರೆ ಆಗ ಚೀನಾದ ಆರ್ಥಿಕತೆ ಇದ್ದ ಸ್ಥಿತಿಗಿಂತ ಇಂದು ನಮ್ಮ ಆರ್ಥಿಕತೆ ದೊಡ್ಡದಿದೆ. ಹಾಗಾಗಿ ನಮಗೆ ಅದಕ್ಕಿಂತ ದೊಡ್ಡ ಮಟ್ಟದಲ್ಲಿ ಅಸೆಂಬಲ್ ಮಾಡುವುದಕ್ಕೆ ಸಾಧ್ಯವಾಗಬಹುದು. ಅದು ದೊಡ್ಡ ವಿಷಯವಲ್ಲ. ಆದರೆ ಮುಂದಿನ ಹಂತಕ್ಕೆ ಹೋಗುವುದಕ್ಕೆ ನಮ್ಮ ತಯಾರಿ ಏನು, ಅನ್ನುವುದು ಈಗಿನ ಪ್ರಶ್ನೆ.
ನಾವು ಊಹಿಸಿದಷ್ಟು ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ವಿದೇಶಿ ನೇರ ಬಂಡವಾಳ ಹರಿದು ಬರುತ್ತಿಲ್ಲ, ಉತ್ಪಾದನೆ ಪ್ರಾರಂಭವಾಗುತ್ತಿಲ್ಲ. ಉತ್ಪಾದನೆಗೆ ಬಂದವರು ಸಬ್ಸಿಡಿ ನಿಲ್ಲಿಸಿದರೆ ಇಲ್ಲೇ ಉಳಿಯುತ್ತಾರಾ? ಹಾಗೆ ಹೋದರೆ ಉದ್ಯೋಗ ಉಳಿಯುತ್ತದಾ ಯಾವುದೂ ಸ್ಪಷ್ಟವಿಲ್ಲ. ಬೇರೆ ಕ್ಷೇತ್ರಗಳಿಗೆ ಈ ಯೋಜನೆಯನ್ನು ವಿಸ್ತರಿಸುವ ಮೊದಲು ಸರ್ಕಾರ ಇದನ್ನು ಪರಿಶೀಲಿಸಬೇಕು. ಉದ್ದಿಮೆಗಳನ್ನು, ಕ್ಷೇತ್ರಗಳನ್ನು ಆಯ್ಕೆಮಾಡಿಕೊಳ್ಳುವಲ್ಲಿ ಪಾರದರ್ಶಕತೆ ಇರಬೇಕು. ಸರ್ಕಾರದ ಬಳಿ ಅಂಕಿಅಂಶ ಇದೆ. ಇದರ ಸಫಲತೆಯ ಅಥವಾ ವಿಫಲತೆಯ ಬಗ್ಗೆ ವಸ್ತುನಿಷ್ಠ ಪರಿಶೀಲನೆಯನ್ನು ಸ್ವತಂತ್ರ ಏಜೆನ್ಸಿಯ ಮೂಲಕ ಮಾಡಿಸಬೇಕು. ಇದರಲ್ಲಿ ಲಕ್ಷಾಂತರ ಕೋಟಿ ಸಾರ್ವಜನಿಕ ಹಣ ಬಳಕೆಯಾಗುತ್ತಿದೆ. ಹಾಗಾಗಿ ಸಾರ್ವಜನಿಕರಿಗೆ ಮಾಹಿತಿ ಇರಬೇಕು. ಚರ್ಚೆಯಾಗಬೇಕು ಅನ್ನುವ ರಘುರಾಂ ರಾಜನ್ ಅವರ ಅಭಿಪ್ರಾಯ ಸರಿ.

ಕೆಲಸಗಾರರ ಬವಣೆ


ಆದರೆ ರಘುರಾಂ ರಾಜನ್ ಗಮನಿಸದೇ ಇರುವ ಇನ್ನೂ ಒಂದು ಅಂಶವಿದೆ. ಅದು ಅಸೆಂಬಲ್ ಘಟಕಗಳಲ್ಲಿ ಕೆಲಸ ಮಾಡುವ ಕೆಲಸಗಾರರ ಕಷ್ಟ. ಈಗಾಗಲೇ ಗಮನಿಸಿರುವಂತೆ ಉತ್ಪಾದಿಸುವವರಿಗೆ ಒಟ್ಟಾರೆ ಮೊಬೈಲ್ ಬೆಲೆಯಲ್ಲಿ ಸಿಗುವ ಪಾಲು ತುಂಬಾ ಕಡಿಮೆ. ಅದರಲ್ಲೂ ಬಿಡಿಭಾಗಗಳ ಜೊಡಣೆಗೆ ಸಿಗುವುದು ಕೇವಲ ಶೇಕಡ ೨ರಿಂದ ೪. ಹಾಗಾಗಿ ಕಾರ್ಮಿಕರಿಗೆ ಸಿಗುವುದು ಕನಿಷ್ಠ ಕೂಲಿ, ಕನಿಷ್ಠ ಸೌಲಭ್ಯಗಳು. ದುಡಿಮೆಯ ಆವಧಿಯನ್ನು ಹೆಚ್ಚಿಸುವ ಮೂಲಕ ಉತ್ಪಾದಕತೆಯನ್ನು ಹೆಚ್ಚಿಸುವ ಪ್ರಯತ್ನ ನಡೆಯುತ್ತಿರುತ್ತದೆ. ಬಹುರಾಷ್ಟ್ರೀಯ ಕಂಪೆನಿಗಳಿಗೆ ಅನುಕೂಲಕ್ಕೆ ತಕ್ಕಂತೆ ಕಾರ್ಮಿಕ ಕಾನೂನುಗಳನ್ನು ಸಡಿಲಗೊಳಿಸಲಾಗುತ್ತಿರುತ್ತದೆ. ಕರ್ನಾಟಕದಲ್ಲಿ ಆಗಿದ್ದೂ ಇದೇ. ಕಾರ್ಮಿಕರಿಗೆ ಸಂಬಳವೂ ಸರಿಯಾಗಿ ಸಿಗದೇ ಹೋಗಿದ್ದರಿಂದ ವಿಸ್ಟ್ರಾನ್ ಕಂಪೆನಿಯಲ್ಲಿ ಕಾರ್ಮಿಕರು ಗಲಾಟೆ ಮಾಡಿದ್ದು. ಇದು ಯಾರೋ ಒಬ್ಬ ಅಧಿಕಾರಿಯ ದುಷ್ಟ ನಡತೆಯಿಂದ ಆಗಿದ್ದಲ್ಲ. ಜಾಗತಿಕ ಉತ್ಪಾದನೆಯಲ್ಲಿ ಮೌಲ್ಯ ಸೇರ್ಪಡೆಯ ಸರಪಳಿಯ ಪ್ರಕ್ರಿಯೆಯೇ ಸ್ವಾಭಾವದಲ್ಲೇ ಸಮಸ್ಯೆಯಿದೆ. ಉತ್ಪಾದನೆ ಅತ್ಯಂತ ಅಗ್ಗವಾಗಿ ಆಗಬೇಕೆಂದರೆ ಕೂಲಿ ಕಡಿಮೆಯಾಗಬೇಕು. ಕಾರ್ಮಿಕರಿಗೆ ಸಿಗುವ ಸೌಲಭ್ಯದಲ್ಲಿ ಕಡಿತವಾಗಬೇಕು. ದುರಂತವೆಂದರೆ ಅತ್ಯಂತ ಅಗ್ಗವಾಗಿ ಉತ್ಪಾದಿಸಿಕೊಡಲು ಬಾಂಗ್ಲಾದೇಶದಿಂದ ಹಿಡಿದು ವಿಯಟ್ನಾಂವರೆಗೆ ಹಲವು ದೇಶಗಳು ಸ್ಪರ್ಧೆಗೆ ನಿಂತಿವೆ. ಕಾರ್ಮಿಕರನ್ನು ಕನಿಷ್ಟಕೂಲಿಗೆ, ಕನಿಷ್ಟ ಸೌಲಭ್ಯವಿರುವ ವಾತಾವರಣದಲ್ಲಿ ದುಡಿಸುವುದಕ್ಕೆ ಭಾರತವೂ ಸಜ್ಜಾಗಿದೆ.
ಭಾರತದಲ್ಲಿ ಹೊಸ ಕಾರ್ಮಿಕರ ಕಾನೂನನ್ನು ಕೇಂದ್ರ ಜಾರಿಗೆ ತಂದಿದೆ. ಕರ್ನಾಟಕವೂ ಕೆಲಸದ ಅವಧಿಯನ್ನು ೪೮ ಗಂಟೆಗಳಿಂದ ೬೦ ಗಂಟೆಗೆ ಹೆಚ್ಚಿಸಲು ಪ್ರಯತ್ನಿಸಿತು. ವಿರೋಧ ತೀವ್ರವಾಗಿದ್ದರಿಂದ ಹಿಂದಕ್ಕೆ ಸರಿಯಿತು. ವಿಸ್ಟ್ರಾನ್ ಮಾಲಿಕರಿಗೆ ಕೆಲಸದ ಅವಧಿಯನ್ನು ದಿನಕ್ಕೆ ೧೨ ಗಂಟೆಗೆ ವಿಸ್ತರಿಸಬೇಕೆಂಬ ಆಸೆಯಿದೆ.


ಸರ್ಕಾರ ಪಿಎಲ್‌ಐ ಜಾರಿಗೆ ತರುವುದಕ್ಕೆ ಇನ್ನೆರಡು ಸಮರ್ಥನೆ ನೀಡಬಹುದು. ಡಬ್ಲ್ಯುಟಿಒನ ನಿಯಮಗಳ ಪ್ರಕಾರ ನೇರವಾಗಿ ವ್ಯಾಪಾರಕ್ಕೆ, ಅಂದರೆ ರಫ್ತಿಗೆ ಸಬ್ಸಿಡಿ ಕೊಡುವುದಕ್ಕೆ ಅವಕಾಶವಿಲ್ಲ. ಹಾಗಾಗಿ ಉತ್ಪಾದನೆಯ ಹೆಸರಲ್ಲಿ ಸಬ್ಸಿಡಿ ಕೊಡಲಾಗುತ್ತಿದೆ. ಆದರೆ ಅಂತಿಮವಾಗಿ ಇದರಿಂದ ರಫ್ತಿಗೆ ಅನುಕೂಲವಾಗುತ್ತದೆ. ಆದರೆ ಆ ಮೂಲಕ ಭಾರತ ಒಂದು ದೊಡ್ಡ ರಫ್ತು ಕೇಂದ್ರವಾಗಿ ಬೆಳೆಯುತ್ತದೆ ಅನ್ನುವುದಕ್ಕೆ ಆಧಾರಗಳಿಲ್ಲ.


ಎರಡನೆಯದಾಗಿ ಭಾರತದಲ್ಲಿ ಒಟ್ಟಾರೆ ಜಿಡಿಪಿಯಲ್ಲಿ ಉತ್ಪಾದನೆಯ ಪಾಲು ತುಂಬಾ ಕಡಿಮೆ. ಪಿಎಲ್‌ಐ ಮೂಲಕ ಉತ್ಪಾದನೆಯನ್ನು ಹೆಚ್ಚವಿಸುವುದರಿಂದ ಜಿಡಿಪಿಯಲ್ಲಿ ಉತ್ಪಾದನೆಯ ಪಾಲು ಹೆಚ್ಚುತ್ತದೆ. ಆದರೆ ನಾವು ಈಗಾಗಲೇ ಗಮನಿಸಿರುವಂತೆ ಅಸೆಂಬಲ್ ಮಾಡುವುದರಿಂದ ಸೇರಿಕೊಳ್ಳುವ ಮೌಲ್ಯ ತುಂಬಾ ಕಡಿಮೆ. ಅದಕ್ಕಾಗಿ ಸಬ್ಸಿಡಿಯನ್ನೂ ಕೊಡಲಾಗುತ್ತದೆ. ಅಷ್ಟೇ ಅಲ್ಲ ಅದರಿಂದ ಬರುವ ಲಾಭವನ್ನು ವಿದೇಶಿ ಉದ್ದಿಮೆಗಳು ಹೊರಗೆ ಕಳಿಸಿಬಿಡುತ್ತಾರೆ. ಹಾಗಾಗಿ ಜಿಡಿಪಿಯಲ್ಲಿ ಉತ್ಪಾದನೆಯ ಪಾಲು ಹೆಚ್ಚುತ್ತದೆ ಅನ್ನುವುದು ಕೇವಲ ಭ್ರಮೆ ಅನ್ನುತ್ತಾರೆ ಅರ್ಥಶಾಸ್ತ್ರಜ್ಞ ಸಿ ಪಿ ಚಂದ್ರಶೇಖರ್. ಜೊತೆಗೆ ಅವರು ಮುಂದುವರಿದು ಹೇಳುವಂತೆ:
“ಮೌಲ್ಯ ಸೇರ್ಪಡೆಯ ಸರಪಳಿಯಲ್ಲಿ ತೀರಾ ಕೆಳಗಿನ ಹಂತಕ್ಕೆ ಸೇರುವುದಕ್ಕೆ ತವಕಪಡುತ್ತಿರುವುದರಲ್ಲೇ ಸಮಸ್ಯೆಯಿದೆ. ಕಾರ್ಮಿಕರ ಹಿತಾಸಕ್ತಿಯನ್ನು ಬದಿಗೊತ್ತಿ ವಿದೇಶಿ ಉದ್ದಿಮೆದಾರರ ಭುಜದ ಮೇಲೆ ಕುಳಿತು ವಿದೇಶಿ ಮಾರುಕಟ್ಟೆಯನ್ನು ನೆಚ್ಚಿಕೊಂಡು ಬೆಳೆಯುವ ಯೋಚನೆಯೇ ಸರಿಯಲ್ಲ. ಇದು ಆತ್ಮನಿರ್ಭರ ಭಾರತ ಹಿಡಿಯಬೇಕಾದ ದಾರಿಯಲ್ಲ.”


[ಈ ಲೇಖನಕ್ಕೆ ರಘುರಾಂ ರಾಜನ್ ಅವರ ಲೇಖನ, ಅವರು ದಿ ವೈರ್‌ಗೆ ನೀಡಿದ ಸಂದರ್ಶನ, ರಾಜೀವ್ ಚಂದ್ರಶೇಖರ್ ಅವರ ಪ್ರತಿಕ್ರಿಯೆ, ಹಾಗೂ ಸಿ ಪಿ ಚಂದ್ರಶೇಖರ್ ಅವರ ಲೇಖನಗಳನ್ನು ಬಳಸಿಕೊಳ್ಳಲಾಗಿದೆ.]

Recommended Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.