ಪು.ತಿ.ನ ಸಂಗೀತ ಪ್ರಯೋಗಗಳು-ವೀಣೆ ದೊರೆಸ್ವಾಮಿ ಅಯ್ಯಂಗಾರ್

 In RAGAMALA

ನನಗೆ ಪು.ತಿ. ನರಸಿಂಹಾಚಾರ್ ಅವರು ಪರಿಚಯವಾದದ್ದು ಸುಮಾರು ಐವತ್ತು ವರ್ಷಗಳ ಹಿಂದೆ. ನನ್ನ ವಿದ್ಯಾಗುರುಗಳಾದ ಮೈಸೂರಿನ ಶ್ರೀ ವೆಂಕಟಕೃಷ್ಣಪ್ಪನವರ ಮನೆಯಲ್ಲಿ ಶ್ರೀ ಅನಂತಕೃಷ್ಣಶರ್ಮ ಅವರು ಪು.ತಿ.ನ. ಅವರಿಗೆ ನನ್ನ ಬಗ್ಗೆ ಹೇಳಿದ್ದರು ಅನ್ನಿಸುತ್ತೆ. ಒಂದು ರಾತ್ರಿ ನಾನು ಅಭ್ಯಾಸ ಮಾಡುತ್ತಿದ್ದ ವೆಂಕಟಕೃಷ್ಣಪ್ಪನವರ ಮನೆಗೆ ಪು.ತಿ.ನ. ಬಂದಿದ್ದರು. ನನ್ನ ಗುರುಗಳು ಮಲಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆಗ ನನಗೆ ವೀಣೆಯನ್ನು ನುಡಿಸಲು ಹೇಳಿದರು. ಪು.ತಿ.ನ. ತುಂಬ ಖುಷಿಪಟ್ಟರು. ಅಲ್ಲಿಂದ ನಮ್ಮ ಸ್ನೇಹ ಅಂಕುರವಾಯಿತು. ಅವರ ವ್ಯಕ್ತಿತ್ವದ ಹರಡು ಗೊತ್ತಾದ್ದು ನಾನು ಬೆಂಗಳೂರು ಆಕಾಶವಾಣಿ ಸಂಗೀತ ನಿರ್ದೇಶಕನಾದ ಮೇಲೆ.
ಅವರ ಅನೇಕ ಗೀತ ನಾಟಕಗಳಿಗೆ ಸಂಗೀತ ಸಂಯೋಜಿಸಿ, ಸ್ವರಪ್ರಸ್ತಾರ ಹಾಕಿ, ಪ್ರಸಾರ ಮಾಡುವ ಅವಕಾಶ ಸಿಕ್ಕಿತು. ಹೀಗಾಗಿ ಅವರ ಸಂಗೀತ ಕಲ್ಪನಾ ಸಾಮರ್ಥ್ಯ, ಅವರ ಗೀತ ನಾಟಕಗಳ ವೈವಿಧ್ಯ ಸೂಕ್ಷ್ಮವಾದ ಸಂವೇನಾಶೀಲತೆಗಳ ಶ್ರೀಮಂತಿಕೆ ಪರಿಚಯವಾಯಿತು.

ಕನ್ನಡಕ್ಕೆ ಪುತಿನ ಅವರ ಕೊಡುಗೆ ಗೀತನಾಟಕಗಳದ್ದೇ ಹೆಚ್ಚು ಎಂದೇ ಹೇಳಬೇಕು. ನಮ್ಮಲ್ಲಿ ಮೊದಲು ಗೀತನಾಟಕಗಳಿದ್ದರೂ ಅವುಗಳಲ್ಲಿ ಸಂಗೀತ ಪರಿಕಲ್ಪನೆಗಳು ತುಂಬಾ ಕಡಿಮೆ. ಯಾರೋ ಬರೆಯುತ್ತಿದ್ದರು, ಮತ್ಯಾರೋ ಸಂಗೀತ ಅಳವಡಿಸುತ್ತಿದ್ದರು. ಹೀಗಾಗಿ ಬರೆದವರ ಮನಸ್ಸಿನಲ್ಲಿದ್ದುದು ಒಂದಾದರೆ, ಸಂಗೀತ ಸಂಯೋಜಿಸಿಕೊಂಡ ನಂತರ ಬೇರೊಂದು ಸ್ವರೂಪವನ್ನು ಪಡೆದುಕೊಳ್ಳುತ್ತಿದ್ದ ಸಂದರ್ಭಗಳು ಹೆಚ್ಚಾಗಿತ್ತು. ಆದರೆ ಪುತಿನ ಅವರದ್ದು ಹಾಗಲ್ಲ. ನಿಖರವಾದ ಕಲ್ಪನಾ ಶಕ್ತಿ. ಅದಕ್ಕೆ ಅಷ್ಟೇ ಸ್ಪಷ್ಟವಾದ, ವೈವಿಧ್ಯದ ಸಂಗೀತಪ್ರಯೋಗ. ಒಮ್ಮೆ ತಮ್ಮ ಹಾಡಿನ ಸಂಗೀತದ ಬಗ್ಗೆ ಹೀಗೆ ಹೇಳಿದರು – ಯಾರೋ ನನ್ನ ಸ್ವಪ್ನದಲ್ಲಿ ಬಂದು ಹಾಡಿದ ಹಾಗಾಗುತ್ತದೆ. ತಕ್ಷಣ ಎದ್ದು ಹಾಗೇ ಬರೆದು ಬಿಡುತ್ತೇನೆ. ಮುಂದಿನ ಸಂಗೀತ ತಾನೇ ತಾನಾಗಿ ಬರುತ್ತದೆ. ಆ ಸಂಗೀತದ ಗುಂಗನ್ನು ನೆನಪಿನಲ್ಲಿಟ್ಟುಕೊಂಡು ಅದಕ್ಕೆ ತಕ್ಕ ಚೌಕಟ್ಟನ್ನು ಕೊಡುವಷ್ಟು ಶಾಸ್ತ್ರಜ್ಞನಲ್ಲ ಎಂದು ಅವರೇ ಒಂದೆಡೆ ಹೇಳುತ್ತಾರೆ. ನನ್ನ ಅನುಭವದಲ್ಲಿ ಗೀತೆಗಳ ರಚನೆ ಕವನಗಳಷ್ಟು ಸುಲಭವಲ್ಲ.
ಕವನಗಳ ಉಗಮಕ್ಕೆ ವಿಷಾದದ ನೀಲಚ್ಛಾಯೆ ಸಾಕು; ಹಾಡುಗಳೋ ಮನಸ್ಸು ಗೆಲುವಾಗಿರುವಾಗ ಮಾತ್ರ ಹುಟ್ಟುತ್ತವೆ. ನಾನು ನಿರ್ಲಿಪ್ತವೂ ಸ್ವತಂತ್ರವೂ ಆದಾಗ ಮಾತ್ರ ಮನಸ್ಸು ಗೆಲವುಗೂಡಿರುತ್ತದೆ. ಪು.ತಿ.ನ. ಅವರು ನೇರ ಸಂಗೀತಾಭ್ಯಾಸ ಮಾಡಿದವರಲ್ಲ. (ಹಾಗೆಯೇ ಕನ್ನಡ ಸಾಹಿತ್ಯವನ್ನಾಗಲಿ, ಇಂಗ್ಲಿಷಿನಲ್ಲಾಗಲಿ) ಬಹುಶಃ ಮೇಲುಕೋಟೆಯ ವಾತಾವರಣದಲ್ಲಿ ಬಾಲ್ಯದಿಂದಲೂ ದೇವಸ್ಥಾನದಲ್ಲಿ ಮಂತ್ರಘೋಷಗಳು ಕಿವಿಯ ಮೇಲೆ ಬಿದ್ದು, ಸಂಗೀತದ ಆಸಕ್ತಿ ಹುಟ್ಟಿರಬೇಕೆನಿಸುತ್ತದೆ. ಮೇಲಾಗಿ ಅವರ ತಂದೆಯವರು ಕೂಡಾ ಸಂಗೀತಾಭಿರುಚಿ ಹೊಂದಿದವರು. ಹೀಗಾಗಿ ಪು.ತಿ.ನ. ಅವರಿಗೆ ಶಾಸ್ತ್ರ ಗೊತ್ತಿಲ್ಲದಿದ್ದರೂ ಅದರಲ್ಲಿ ಸಾಕಷ್ಟು ಆಸಕ್ತಿಯನ್ನು, ಅನುಭವವನ್ನು ಪಡೆದವರು. ಅವರ ಗೀತನಾಟಕಗಳಿಗೆ ಸಾಹಿತ್ಯ ಕೃತಿಯಷ್ಟೇ ಅಲ್ಲ, ಸಂಗೀತ ಕೃತಿಗಳಾಗಿಯೂ ಉಳಿದುಕೊಳ್ಳುವ ಸಾಮರ್ಥ್ಯವಿದೆ. ಗೀತೆಗಳ ಸೃಷ್ಟಿಯಲ್ಲಿ ಗಾಂಭೀರ್ಯವಿದೆ, ಬಿಗಿಯಿದೆ, ಕುಶಲತೆಯಿದೆ, ಕಲಾಪರಿಪೂರ್ಣತೆಯಿದೆ. ಶ್ರೋತೃಗಳ ಮನಸ್ಸನ್ನು ಸೆರೆಹಿಡಿದು ನಿಲ್ಲಿಸುವ ಸಾಮರ್ಥ್ಯವಿದೆ. ಇದಕ್ಕೆ ಮುಖ್ಯ ಕಾರಣ ಗೀತೆಗಳಲ್ಲಿರುವ ವೈವಿಧ್ಯ. ಯಾವ ಹಾಡಿನಲ್ಲಿಯೂ ಅನುಕರಣವಿಲ್ಲ. ಒಂದೊಂದೂ ಸ್ವತಂತ್ರ ಕೃತಿಯಿಂದ ಮೂರ್ತಿವೆತ್ತ ರಚನೆಗಳು. ಶಾಸ್ತ್ರೀಯವಾದ ಕೆಲವು; ನೂರಕ್ಕೆ ನೂರುಭಾಗ ನವೀನತೆಯಿಂದ ಶೋಭಿಸುವ ಸುಗಮ ಸಂಗೀತದ ಛಾಪುಳ್ಳ ಗೀತೆಗಳು ಹಲವು; ಜಾನಪದ ಧಾಟಿಯಲ್ಲಿರುವ ಹಾಡುಗಳು, ಹೀಗೆ ವಿವಿಧ ರಸಪಾಕಗಳನ್ನೊಳಗೊಂಡ ಗೀತ ರೂಪಕಗಳು ವಿವಿಧ ಅಭಿರುಚಿಯುಳ್ಳ ರಸಿಕರಿಗೆಲ್ಲರಿಗೂ ಆಪ್ಯಾಯಮಾನವಾಗುತ್ತವೆ. ಅವರು ಕೆಲವು ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತದ ಮಟ್ಟುಗಳನ್ನು ಬಳಸಿಕೊಂಡಿದ್ದುಂಟು. ಉದಾಹರಣೆಗೆ ಖರಹರಪ್ರಿಯ (ಸಖಹರೇ), ಕನ್ನಡ (ಹಿಡಿದು ತರುವೆ ಜಿಂಕೆ), ರಂಜನಿ (ಕೊಳಲನೂದು ಗೋಪಾಲ), ತೋಡಿ (ಶಾರದೀ ಶೋಭಾ), ಬೇಗಡೆ (ಗಿರಿಧರ ಕಾಳಮೇಘ), ನಾಟಕುರಂಜಿ (ಆಡು ಬಾ), ಯದುಕುಲ ಕಾಂಬೋಜಿ (ಮಿಥಿಲೆ ನೀ ಪುಣ್ಯ ನಗರಿ), ಸುರಟಿ (ಆರರಿವರಾಪರಿಯ), ಬಾಗೇಶ್ರೀ, ಜಂಜೂಟಿ ಮುಂತಾದ ರಾಗಗಳನ್ನು ಬಳಸುವುದರ ಮೂಲಕ ಶಾಸ್ತ್ರಕ್ಕೆ ಪೂಜೆ ಮರ್ಯಾದೆ ಸಲ್ಲಬೇಕೆಂಬ ವಿದ್ವಾಂಸರ ದೃಷ್ಟಿಯಲ್ಲೂ, ದರ್ಪದಲ್ಲೂ ತಲೆಯೆತ್ತಿ ನಿಲ್ಲಬಲ್ಲ ಕೃತಿಗಳನ್ನು ನೀಡಿದ್ದಾರೆ.
ಪ್ರಸಿದ್ಧ ವಾಙ್ಮಯಕಾರರು ಹಿಂಡಿ ಹೀರಿರುವ ರಾಗಗಳಲ್ಲಿ ಚರ್ವಿತ ಚರ್ವಣವಲ್ಲದ ಗೀತೆಗಳನ್ನು ರಚಿಸಿರುವ ಪು.ತಿ.ನ. ಅವರ ಕಲ್ಪನಾ ಸಾಮರ್ಥ್ಯಕ್ಕೆ ಸಾಕ್ಷಿನುಡಿಯುತ್ತವೆ. ಅಷ್ಟೇ ಅಲ್ಲ ಕೆಲ ರಾಗಗಳ ಆರೋಹಣದಲ್ಲೋ, ಅವರೋಹಣದಲ್ಲೋ ಒಂದು ಸ್ವರ ಸೇರಿಸಿಯೋ ಅಥವಾ ಬಿಟ್ಟೋ ಅಥವಾ ಅದಲು ಬದಲು ಮಾಡಿಯೋ
ಒಂದು ಹೊಸ ರೀತಿಯ ಹೊಳಪನ್ನು ತರುತ್ತಾರೆ. ಅವುಗಳಿಗೆ ನಾನೇ ಕೆಲ ಹೆಸರುಗಳನ್ನು ಕೊಟ್ಟಿದ್ದೇನೆ. ‘ಸಂಜೀವಿನಿ’, ‘ಹರಿಣಿ’, ‘ಋತುವಿಲಾಸಿನಿ’, ‘ಗಾಂಧಾರಲೋಲ’, ಇತ್ಯಾದಿ. ಇನ್ನೂ ನಾಮಕರಣವಾಗದ ರಾಗಗಳೂ ಹಲವಿವೆ. ಅವರದು ವರ್ಣಮಟ್ಟಲ್ಲ. ಎಷ್ಟೇ ಲಘುವಾಗಿದ್ದರೂ ರಸಾನುಭವದಲ್ಲಿ ಅಗ್ಗವಿಲ್ಲ, ಅನುಕರಣವಿಲ್ಲ.

ಗೀತನಾಟಕಗಳಲ್ಲಿ ಕೆಲವಕ್ಕೆ ಅವರು ರಾಗವನ್ನಾಗಲೀ, ಸ್ವರಪ್ರಸ್ತಾರವನ್ನಾಗಲೀ ಹಾಕಿಲ್ಲ. ಉದಾಹರಣೆಗೆ ಅಹಲ್ಯೆ. ಅದು ಹೇಗೆ ಬಂದರೂ ಒಪ್ಪಿಕೊಳ್ಳುತ್ತಾರೆ. ತಾವು ಸೂಚಿಸಿದ ಸಂಗೀತವನ್ನು ಬದಲಿಸಿದಾಗ ಅವರಿಗೆ ಬೇಸರವಾಗಿರುವುದೂ ಉಂಟು. ನಾನು ‘ಹಂಸದಮಯಂತಿ’ ರೂಪಕವನ್ನು ಆಕಾಶವಾಣಿಗೆ ಅಳವಡಿಸುವಾಗ ಅವರ ಸಹಾಯವನ್ನು ಪಡೆದದ್ದುಂಟು. ‘ಇದು ಹೀಗಲ್ಲ, ನನ್ನ ಮನಸ್ಸಿನಲ್ಲಿದ್ದುದು ಈ ರೀತಿ, ಇದು ಹೀಗೆ ಬರಬೇಕು’ ಮುಂತಾಗಿ ಕೆಲವನ್ನು ಹಾಡಿ ತೋರಿಸಿದರು. ನಾನು ಸ್ವರಲಿಪಿಯಲ್ಲಿ ಬರೆದುಕೊಂಡು ಪ್ರಸ್ತುತಪಡಿಸಬೇಕಾಯಿತು. ಅವರ ಗೋಕುಲ ನಿರ್ಗಮನವು ಹಾಗೆ. ಅದೊಂದು ಅಪೂರ್ವ ಕೃತಿ ಎನ್ನುತ್ತಾರೆ ಬಲ್ಲವರು. ನಾನು ದೆಹಲಿ ಆಕಾಶವಾಣಿಗೆ ಅದನ್ನು ಸಂಯೋಜಿಸಿದಾಗಲೂ ಅವರೇ ಖುದ್ದು ಹಾಡುಗಳನ್ನು ಹಾಡಿ, ಸೂಚಿಸಿ, ನಂತರ ಖುಷಿ ಪಟ್ಟರು. ಆದರೆ ಈಚೆಗೆ ಬಿ.ವಿ. ಕಾರಂತರು ನಿರ್ದೇಶಿಸಿದ ನಾಟಕದ ದೃಶ್ಯಾವಳಿಗಳು ತುಂಬ ಚೆನ್ನಾಗಿದ್ದರೂ ಸಂಗೀತ ಅಷ್ಟಾಗಿ ಮೆಚ್ಚಿಗೆಯಾಗಲಿಲ್ಲ. ಬಿ.ವಿ.ಕಾರಂತರು ದೊಡ್ಡ ವಿದ್ವಾಂಸರು. ಅವರ ಪ್ರಯೋಗಗಳ ಬಗೆಗೆ ಪು.ತಿ.ನ. ಪ್ರೀತಿಯನ್ನಿಟ್ಟುಕೊಂಡವರು. ಆದರೂ ಪು.ತಿ.ನ. ಕಲ್ಪಿಸಿದ ಸಂಗೀತ ಬದಲಾಯಿಸಿದ್ದು ಅವರಿಗೆ ತೃಪ್ತಿಯಾಗಲಿಲ್ಲ.

ಪು.ತಿ.ನ. ಅವರ ಆರಾಧ್ಯದೈವ ಕೃಷ್ಣ. ಆದರೆ ತುಂಬಾ ಇಷ್ಟವಾದವನು ರಾಮ. ಅವರು ಬರೆದಿರುವ ಅನೇಕ ಗೀತನಾಟಕಗಳು ರಾಮಾಯಣ ಅಥವಾ ರಾಮನಿಗೆ ಸಂಬಂಧಿಸಿದ್ದು. ಉದಾ – ಸೀತಾಪರಿಣಯ, ಶಬರಿ, ಅಹಲ್ಯೆ, ರಾಮೋದಯ, ರಾಮಪಟ್ಟಾಭಿಷೇಕ, ಹರಿಣಾಭಿಸರಣ, ಇತ್ಯಾದಿ.

ಸಂಗೀತ ಎನ್ನುವುದು ಬಹಳ ದಿನಗಳಿಂದಲೂ ಒಂದು ಪರಂಪರೆಯ ಅಂತರಂಗದಲ್ಲಿ ತನ್ನತನವನ್ನು ಅಂತರ್ಗತ ಮಾಡಿಕೊಂಡು ಬಂದಿರುವ ಕಲೆ. ಅದನ್ನು ಬದಲಿಸಲು, ಈ ಪರಂಪರೆಯಲ್ಲಿ ಹೊಸತನ್ನು ತರುವುದಕ್ಕೆ ಒಬ್ಬ ಪ್ರತಿಭಾಶಾಲಿಗೆ ಮಾತ್ರ ಸಾಧ್ಯ. ಎಷ್ಟೋ ಜನ ಶಾಸ್ತ್ರೀಯ ಸಂಗೀತವನ್ನು ಬದಲಿಸಿದ್ದೀನಿ,
ಹೊಸರೂಪ ಕೊಟ್ಟಿದ್ದೀನಿ ಅನ್ನುತ್ತಾರೆ. ಆದರೆ ಏನೇ ಬದಲಾದರೂ ಅದರ ಅಂಗರಂಗದೊಳಗೆ ಬದಲಾಗಬೇಕು. ಇಲ್ಲದಿದ್ದರೆ ಅದು ನಗೆಪಾಟಲಿಗೆ ಈಡಾಗುತ್ತದೆ. ಈ ಹಿನ್ನೆಲೆಯಲ್ಲಿ ಪು.ತಿ.ನ. ಅವರ ಗೀತನಾಟಕಗಳನ್ನು ಹಾಗು ಅವರ ಸಂಗೀತ ಪ್ರಯೋಗಗಳನ್ನು ನೋಡಬೇಕೆನಿಸುತ್ತದೆ.

Recommended Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.