ಬಿಕ್ಕಟ್ಟು ಅಂತರರಾಷ್ಟ್ರೀಯವಾಗಲಿ – ಜೋಸೆಫ್ ಈ ಸ್ಟಿಗ್ಲಿಟ್ಜ್

 In corona-covid-19, ECONOMY

೨೦೦೧ರಲ್ಲಿ ನೋಬೆಲ್ ಪುರಸ್ಕೃತರು. ಕೊಲಂಬಿಯ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಅವರ ಇತ್ತೀಚಿನ ಪುಸ್ತಕ ಪೀಪಲ್ ಪವರ್ ಅಂಡ್ ಪ್ರಾಫಿಟ್ಸ್: ಪ್ರೊಗ್ರೆಸಿವೆ ಕ್ಯಾಪಿಟಲಿಸಂ ಫಾರ್ ಎನ್ ಎಜ್ ಆಫ್ ಡಿಸ್ಕಂಟೆಂಟ್.


ಈ ಕೊರೋನಾ ವೈರಸ್ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹರಡುತ್ತಾ ಹೋಗುತ್ತಿದೆ. ಅದು ಯಾವುದೇ ರಾಷ್ಟ್ರೀಯ ಗಡಿಗಳನ್ನಾಗಲಿ ಅಥವಾ ದೊಡ್ಡ, ಸುಂದರವಾದ ಗಡಿ ಗೋಡೆಗಳನ್ನಾಗಲಿ ಲೆಕ್ಕಿಸುತ್ತಿಲ್ಲ. ಅಥವಾ ಬಿಕ್ಕಟ್ಟಿನಿಂದ ಆಗುತ್ತಿರುವ ಆರ್ಥಿಕ ದುಷ್ಪರಿಣಾಮಗಳು ನಿಲ್ಲುತ್ತಿಲ್ಲ. ಕೋವಿಡ್-೧೯ ಮಹಾಮಾರಿ ಪ್ರಾರಂಭವಾಗುತ್ತಿದ್ದಂತೆಯೇ ಇದು ಜಾಗತಿಕ ಸಮಸ್ಯೆ ಹಾಗೂ ಇದಕ್ಕೆ ಪರಿಹಾರವನ್ನು ಜಾಗತಿಕ ಮಟ್ಟದಲ್ಲೇ ಯೋಚಿಸಬೇಕು ಅನ್ನುವುದು ಸ್ಪಷ್ಟವಾಗಿತ್ತು.
ಶ್ರೀಮಂತ ಆರ್ಥಿಕತೆಗಳು ಇದಕ್ಕೆ ಹಲವು ಮಗ್ಗಲಿನಿಂದ ಪ್ರತಿಕ್ರಿಯಿಸಬೇಕು. ಅವರಲ್ಲಿ ಕರುಣೆ ಅನ್ನುವುದು ಇದ್ದರೆ ಸಾಕು. ಹೀಗೆ ಸ್ಪಂದಿಸುವುದಕ್ಕೆ ಇನ್ಯಾವ ಸಮರ್ಥನೆಯೂ ಬೇಕಾಗಿಲ್ಲ. ಆದರೆ ಜಾಗತಿಕ ಕ್ರಿಯೆ ಅನ್ನುವುದು ಸ್ವಹಿತಾಸಕ್ತಿಯ ವಿಷಯವೂ ಹೌದು. ಈ ಮಹಾಮಾರಿ ಎಲ್ಲೇ ಇದ್ದರೂ ಜಗತ್ತಿನ ಎಲ್ಲಾ ಕಡೆಗೂ ಅದರ ಅಪಾಯ ತಟ್ಟುತ್ತದೆ. ಅದು ಆರ್ಥಿಕವಾಗಿ ಹಾಗೂ ಒಂದು ಸೋಂಕಾಗಿ ಎಲ್ಲರನ್ನೂ ಕಾಡುತ್ತದೆ

.
ಅಭಿವೃದ್ಧಿಶೀಲ ಹಾಗೂ ಉದಯೋನ್ಮುಖ ರಾಷ್ಟ್ರಗಳ ಆರ್ಥಿಕತೆಯ ಮೇಲೆ ಕೋವಿಡ್-೧೯ ಪ್ರಭಾವ ಈಗ ಕಾಣಿಸಿಕೊಳ್ಳುತ್ತಿದೆ. ಆದರೆ ಮುಂದುವರಿದ ದೇಶಗಳಿಗೆ ಹೋಲಿಸಿದರೆ ಈ ದೇಶಗಳು ಈ ಮಹಾಮಾರಿಯಿಂದ ಹೆಚ್ಚು ಹಾನಿಗೊಳಗಾಗುತ್ತವೆ ಅನ್ನುವುದು ಸ್ಪಷ್ಟ. ಬಡದೇಶಗಳಲ್ಲಿ ಜನ ಹೆಚ್ಚು ಒತ್ತೊತ್ತಿಗೆ ಬದುಕುತ್ತಿರುತ್ತಾರೆ. ಅಲ್ಲಿಯ ಬಹುಪಾಲು ಜನರಿಗೆ ಈಗಾಗಲೇ ಆರೋಗ್ಯದ ಸಮಸ್ಯೆಗಳಿವೆ. ಹಾಗಾಗಿ ಅವರಿಗೆ ಈ ಸೋಂಕು ತಗುಲುವ ಅಪಾಯ ಹೆಚ್ಚು. ಮತ್ತು ಮುಂದುವರಿದ ದೇಶಗಳಿಗೆ ಹೋಲಿಸಿದರೆ ಈ ದೇಶಗಳ ಆರೋಗ್ಯ ವ್ಯವಸ್ಥೆ ಕೂಡ ಮಹಾಮಾರಿಯನ್ನು ನಿರ್ವಹಿಸುವುದಕ್ಕೆ ಅಷ್ಟೊಂದು ಸಿದ್ಧವಾಗಿಲ್ಲ.
ಮಾರ್ಚ್ ೩೦ರ ಸಂಯುಕ್ತ ರಾಷ್ಟ್ರಗಳ ವ್ಯಾಪಾರ ಹಾಗೂ ಅಭಿವೃದ್ಧಿ ಸಮ್ಮೇಳನದ ವರದಿ ನೋಡಿದರೆ ಈ ಅಭಿವೃದ್ಧಿಶೀಲ ಹಾಗೂ ಉದಯೋನ್ಮುಖ ರಾಷ್ಟ್ರಗಳು ಅನುಭವಿಸಬೇಕಿರುವ ಪಾಡಿನ ಒಂದು ಚಿತ್ರ ಸಿಗುತ್ತದೆ. ಅವುಗಳಲ್ಲಿ ಅತ್ಯಂತ ಯಶಸ್ವಿಯಾಗಿರುವ ದೇಶಗಳು ರಫ್ತನ್ನು ಆಧರಿಸಿದ ಬೆಳವಣಿಗೆಯನ್ನು ನೆಚ್ಚಿಕೊಂಡಿವೆ. ಈಗ ಜಾಗತಿಕ ಆರ್ಥಿಕತೆ ಕುಗ್ಗುವುದರಿಂದ ಸ್ವಾಭಾವಿಕವಾಗಿಯೇ ರಫ್ತು ಕುಸಿಯುತ್ತದೆ. ಜಾಗತಿಕ ಹೂಡಿಕೆಯ ಹರಿವೂ ತುಂಬಾ ಕಡಿಮೆಯಾಗುತ್ತಿದೆ. ಜೊತೆಗೆ ಸರಕಿನ ಬೆಲೆಗಳು ಕುಸಿಯುತ್ತಿವೆ. ನೈಸರ್ಗಿಕ ಸಂಪನ್ಮೂಲಗಳನ್ನು ರಫ್ತು ಮಾಡುತ್ತಿರುವ ರಾಷ್ಟ್ರಗಳ ಹಾದಿ ತುಂಬಾ ಕಠಿಣವಾಗಿದೆ ಎನ್ನುವುದನ್ನು ಇದರಿಂದ ಅರ್ಥಮಾಡಿಕೊಳ್ಳಬಹುದು.
ಹಿಂದುಳಿದ ರಾಷ್ಟ್ರಗಳ ಸಾವರಿನ್ ಸಾಲದ ವರಮಾನದ ಹರವನ್ನು (ಈಲ್ಡ್ ಸ್ಪ್ರೆಡ್) ಗಮನಿಸಿದರೆ ಅದು ಈಗಲೇ ಪ್ರಾರಂಭವಾಗಿದೆ. ಈ ವರ್ಷ ತೀರಿಸಬೇಕಾಗಿರುವ ಸಾಲಗಳನ್ನು ಹೊಂದಿಸುವುದಕ್ಕೆ ಹಲವು ಸರ್ಕಾರಗಳಿಗೆ ತುಂಬಾ ಕಷ್ಟವಾಗುತ್ತದೆ.
ಅಷ್ಟೇ ಅಲ್ಲ ಅಭಿವೃದ್ಧಿಶೀಲ ಹಾಗೂ ಉದಯೋನ್ಮುಖ ರಾಷ್ಟ್ರಗಳಿಗೆ ಈ ಮಹಾಮಾರಿಯನ್ನು ಎದುರಿಸುವುದಕ್ಕೆ ಇರುವ ದಾರಿಗಳೂ ಕೆಲವೇ. ಅವು ಬಡರಾಷ್ಟ್ರಗಳ ಮಟ್ಟಿಗೆ ಸುಲಭದ ದಾರಿಗಳೂ ಅಲ್ಲ. ಅಲ್ಲಿಯ ಜನ ಅಂದಿನ ಊಟವನ್ನು ಅಂದೇ ದುಡಿದುಕೊಳ್ಳಬೇಕು. ಜೊತೆಗೆ ಅವಶ್ಯಕವಾಗಿರುವ ಸಾಮಾಜಿಕ ರಕ್ಷಣೆಯೂ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಅದಾಯವೂ ಇಲ್ಲ ಅಂದರೆ ಉಪವಾಸವೇ ಗತಿ. ಆದರೆ ಈ ದೇಶಗಳಿಗೆ ತಮ್ಮ ದೇಶಗಳಲ್ಲಿ ಅಮೇರಿಕೆಯಲ್ಲಿ ಕೊಡುತ್ತಿರುವಷ್ಟು ಪರಿಹಾರವನ್ನು ಕೊಡುವುದಕ್ಕೆ ಸಾಧ್ಯವಿಲ್ಲ. ಅಮೇರಿಕೆಯಲ್ಲಿ ೨ ಟ್ರಿಲಿಯನ್ ನೆರವಿನ ಪ್ಯಾಕೇಜ್ ಘೋಷಿಸಿದ್ದಾರೆ. ಅದರಿಂದ ವಿತ್ತೀಯ ಕೊರತೆ ಜಿಡಿಪಿಯ ಶೇಕಡ ೧೦ರಷ್ಟು ಹೆಚ್ಚಾಗುತ್ತದೆ. ಮಹಾಮಾರಿಗೆ ಮೊದಲು ಅದು ಶೇಕಡ ೫ರಷ್ಟಿತ್ತು.
ಜಿ೨೦ರ ನಾಯಕರು ಮಾರ್ಚ್ ೨೬ರಂದು ನಡೆದ ತುರ್ತು ಶೃಂಗ ಸಭೆಯ ಅಧಿಕೃತ ಪ್ರಕಟಣೆಯಲ್ಲಿ ಮಹಾಮಾರಿಯಿಂದ ಆಗಿರುವ ಆರ್ಥಿಕ ಹಾಗೂ ಸಾಮಾಜಿಕ ಹಾನಿಯನ್ನು ಕಡಿಮೆ ಮಾಡಲು, ಜಾಗತಿಕ ಬೆಳವಣಿಗೆಯನ್ನು ಮತ್ತೆ ಪ್ರಾರಂಭಿಸಲು, ಮಾರುಕಟ್ಟೆಯ ಸ್ಥಿರತೆಯನ್ನು ಕಾಪಾಡಿಕೊಳ್ಳಲು, ಹಾಗೂ ಚೇತರಿಕೆಯನ್ನು ಬಲಪಡಿಸಲು ಬೇಕಾದ್ದನ್ನೆಲ್ಲಾ ಮಾಡಲು ಹಾಗೂ ಲಭ್ಯವಿರುವ ಎಲ್ಲಾ ನಿಯಮಗಳನ್ನು ಬಳಸಿಕೊಳ್ಳಲು ತಿಳಿಸಿದೆ. ಮತ್ತು ಅದಕ್ಕೆ ಬದ್ಧವಾಗಿದೆ. ಅಭಿವೃದ್ಧಿಶೀಲ ಹಾಗೂ ಉದಯೋನ್ಮುಖ ರಾಷ್ಟ್ರಗಳು ಇಂದು ಇರುವ ದುಸ್ಥಿತಿಯಲ್ಲಿ ಇದನ್ನು ಸಾಧಿಸುವುದಕ್ಕೆ ಕನಿಷ್ಠ ಎರಡು ಕೆಲಸಗಳನ್ನು ಮಾಡಬಹುದು.
ಮೊದಲನೆಯದಾಗಿ ಅಂತರಾಷ್ಟ್ರೀಯ ಹಣಕಾಸು ನಿಧಿಯ ವಿಶೇಷ ಪಡೆಯುವ ಹಕ್ಕಿನ (ಸ್ಪೆಷಲ್ ಡ್ರಾಯಿಂಗ್ ರೈಟನ- ಎಸ್‌ಡಿಆರ್) ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು. ಇದೊಂದು ರೀತಿಯ ಜಾಗತಿಕ ನಗದು. ಇದನ್ನು ಸೃಷ್ಟಿಸುವ ಅಧಿಕಾರ ಆ ಸಂಸ್ಥೆಗಳಿಗೆ ಇದೆ. ಜಾನ್ ಮೆನಾರ್ಡ ಕೇನ್ಸ್ ಇದನ್ನು ೧೯೪೪ರ ಬ್ರೆಟನ್‌ವುಡ್ ಸಮ್ಮೇಳನದಲ್ಲಿ ಸೂಚಿಸಿದ. ಇದು ಅಂತರರಾಷ್ಟ್ರೀಯ ಹಣಕಾಸು ನಿಧಿಯ ಅವಶ್ಯಕ ಭಾಗ.
ಪ್ರತಿಯೊಂದು ದೇಶವೂ ತನ್ನ ಪ್ರಜೆಗಳನ್ನು ಮತ್ತು ತನ್ನ ದೇಶದ ಆರ್ಥಿಕತೆಯನ್ನು ಈ ಬಿಕ್ಕಟ್ಟಿನ ಸಂದರ್ಭದಲ್ಲಿ ರಕ್ಷಿಸುವುದಕ್ಕೆ ಬಯಸುತ್ತದೆ. ಇಂತಹ ಸಮಯದಲ್ಲಿ ಅಂತರ್ರಾಷ್ಟ್ರೀಯ ನಿಧಿ ಅಂತಹ ರಾಷ್ಟ್ರಗಳಿಗೆ ನೆರವು ನೀಡಬೇಕು. ಹಾಗೂ ಅಂತಹ ನೆರವು ನೀಡುವುದಕ್ಕೆ ಬೇಕಾದ ಸಾಧನಗಳು ಅಂತಹ ಸಂಸ್ಥೆಗಳಿಗೆ ಇರಬೇಕು. ಅಭಿವೃದ್ಧಿಶೀಲ ಹಾಗೂ ಉದಯೋನ್ಮುಖ ರಾಷ್ಟ್ರಗಳ ಬಜೆಟ್ಟಿಗೆ ಹೊರೆಯಾಗಬಾರದು.
ಸಾಮಾನ್ಯವಾಗಿ ಎಸ್‌ಡಿಆರ್‌ನಲ್ಲಿ ಶೇಕಡ ೪೦ರಷ್ಟು ಅಭಿವೃದ್ಧಿಶೀಲ ಹಾಗೂ ಉದಯೋನ್ಮುಖ ಆರ್ಥಿಕತೆಗೆ ಹೋಗುತ್ತವೆ. ಅದು ಆ ರಾಷ್ಟ್ರಗಳ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಅದರ ಜೊತೆಗೆ ಅಮೇರಿಕೆಯಂತಹ ಶ್ರೀಮಂತ ರಾಷ್ಟ್ರಗಳು ತಮ್ಮ ಪಾಲಿನ ಎಸ್‌ಡಿಆರ್‌ಗಳನ್ನು ಬಡ ರಾಷ್ಟ್ರಗಳ ನೆರವಿಗೆ ರಚನೆಯಾಗಿರುವ ಟ್ರಸ್ಟ್ ಒಂದಕ್ಕೆ ಕೊಡುಗೆಯಾಗಿ ಕೊಟ್ಟರೆ ಅಥವಾ ಸಾಲವಾಗಿ ನೀಡಿದರೆ ಇನ್ನೂ ಒಳ್ಳೆಯದು. ನೆರವನ್ನು ಪಡೆದುಕೊಳ್ಳುತ್ತಿರುವ ದೇಶಗಳಿಗೆ ಕೆಲವು ಷರತ್ತುಗಳನ್ನು ಹಾಕಬಹುದು. ಉದಾಹರಣೆಗೆ ಈ ಹಣವನ್ನು ಸಾಲ ತೀರಿಸುವುದಕ್ಕೆ ಬಳಸಬಾರದು. ಇದು ನಿರೀಕ್ಷಿತವೇ ಆಗಿದೆ.
ಅಭಿವೃದ್ಧಿಶೀಲ ಹಾಗೂ ಉದಯೋನ್ಮುಖ ಆರ್ಥಿಕತೆಗಳಿಗೆ ಸಾಲವನ್ನು ಮರುಪಾವತಿ ಮಾಡುವುದಕ್ಕೆ ನೀಡುವ ಅವಧಿಯನ್ನು ವಿಸ್ತರಿಸಬೇಕು. ಇದು ತುಂಬಾ ಮುಖ್ಯ. ಅಮೇರಿಕೆಯ ಆರ್ಥಿಕತೆಯನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಅಮೇರಿಕೆಯ ಗೃಹ ಹಾಗೂ ನಗರಾಭಿವೃದ್ಧಿ ಇಲಾಖೆಯು ಫೆಡರಲ್ ವಿಮೆ ಇರುವ ಅಡಮಾನವನ್ನು ೬೦ ದಿನ ರದ್ದುಮಾಡುವುದಿಲ್ಲ ಎಂದು ಘೋಷಿಸಿದೆ. ಇದರ ಅರ್ಥ ಇಷ್ಟೆ. ಅಂದರೆ ಕೋವಿಡ್ -೧೯ಬಿಕ್ಕಟ್ಟಿಗೆ ಪ್ರತಿಕ್ರಿಯೆಯಾಗಿ ಇಡೀ ಅಮೆರಿಕೆಯ ಆರ್ಥಿಕತೆಯನ್ನು ತಟಸ್ಥಗೊಳಿಸಲಾಗಿದೆ. ಈ ಘೋಷಣೆ ಅದರ ಒಂದು ಭಾಗ. ಕೆಲಸಗಾರರು ಮನೆಯಲ್ಲಿದ್ದಾರೆ. ಹೋಟೆಲ್ಲುಗಳು ಮುಚ್ಚಿವೆ. ವಿಮಾನಗಳು ಹಾರುತ್ತಿಲ್ಲ. ಸಾಲಗಾರ ಒಬ್ಬ ಮಾತ್ರ ಯಾಕೆ ಹಣ ಮಾಡುತ್ತಾ ಹೋಗಬೇಕು. ಅವರು ವಿಧಿಸುತ್ತಿರುವ ಬಡ್ಡಿದರ ಅವರಿಗೆ ಸಾಕಷ್ಟು ಆದಾಯವನ್ನು ತಂದುಕೊಟ್ಟಿದೆ. ಅವರಿಗೆ ನಷ್ಟ ಇಲ್ಲ. ಹಾಗಿದ್ದಾಗ ಸಾಲಕೊಟ್ಟವರು ಅಂತಹ ರಿಯಾಯ್ತಿ ತೋರಬೇಕಾಗುತ್ತದೆ. ಇಲ್ಲದೇ ಹೋದರೆ ಸಾಲಪಡೆದವರು ತಮಗೆ ಸಾಧ್ಯವಿರುವುದಕ್ಕಿಂತ ಹೆಚ್ಚು ತೆರಬೇಕಾಗುತ್ತದೆ. ಈ ಬಿಕ್ಕಟ್ಟಿನಿಂದಾಗಿ ಅಂತಹ ಹಲವಾರು ಸಾಲಗಾರರು ಸೃಷ್ಟಿಯಾಗುತ್ತಾರೆ.
ಈ ರೀತಿಯ ರಿಯಾಯ್ತಿಯನ್ನು ದೇಶದೊಳಗೆ ಹಾಗು ಅಂತರರಾಷ್ಟ್ರೀಯವಾಗಿ ನೀಡುವುದು ತುಂಬಾ ಮುಖ್ಯ. ಪ್ರಸ್ತುತ ಪರಿಸ್ಥಿತಿಯಲ್ಲಿ ಹಲವಾರು ದೇಶಗಳು ಸಾಲ ತೀರಿಸುವ ಸ್ಥಿತಿಯಲ್ಲಿ ಇಲ್ಲ. ಮರುಪಾವತಿಗೆ ಜಾಗತಿಕವಾಗಿ ರಿಯಾಯಿತಿ ತೋರಿಸದಿದ್ದರೆ ಬೇಪಾವತಿಯ ಪ್ರಕರಣಗಳು ತುಂಬಾ ಹೆಚ್ಚಬಹುದು. ಬಹುತೇಕ ಅಭಿವೃದ್ಧಿಶೀಲ ಹಾಗೂ ಉದಯೋನ್ಮುಖ ಆರ್ಥಿಕತೆಗಳಲ್ಲಿ ಸರ್ಕಾರಕ್ಕೆ ಇರುವುದು ಎರಡೇ ಆಯ್ಕೆ. ಒಂದು ಹೆಚ್ಚಿನ ವರಮಾನವನ್ನು ಸಾಲಕೊಟ್ಟ ವಿದೇಶಿಯರಿಗೆ ಕೊಡುವುದು ಅಥವಾ ತನ್ನ ಹೆಚ್ಚಿನ ಪ್ರಜೆಗಳನ್ನು ಸಾಯುವುದಕ್ಕೆ ಬಿಡುವುದು. ಹೆಚ್ಚಿನ ದೇಶಗಳಿಗೆ ಸ್ವಾಭಾವಿಕವಾಗಿಯೇ ಎರಡನೇ ಆಯ್ಕೆ ಸಾಧ್ಯವಿಲ್ಲ. ಹಾಗಾಗಿ ಅಂತರರಾಷ್ಟ್ರೀಯ ಸಮುದಾಯ ಈಗ ರಿಯಾಯ್ತಿಯನ್ನು ತೋರಬೇಕು. ಅದು ಕ್ರಮಬದ್ಧವಾದ ರಿಯಾಯಿತಿಯಾಗಿದ್ದರೆ ಪರವಾಗಿಲ್ಲ. ಇಲ್ಲದೇ ಹೋದರೆ ಅನಿವಾರ್ಯವಾಗಿ ಅದು ತೀವ್ರವಾದ ಪ್ರಕ್ಷುಬ್ಧತೆಗೆ ದಾರಿಮಾಡಿಕೊಡುತ್ತದೆ. ಜಾಗತಿಕ ಆರ್ಥಿಕತೆಗೆ ಅಪಾರವಾದ ನಷ್ಟ ಉಂಟಾಗುತ್ತದೆ
ಸಾವರಿನ್ ಸಾಲವನ್ನು ಪುನರ್ ಹೊಂದಿಸುವುದಕ್ಕೆ ಒಂದು ಸಾಂಸ್ಥಿಕ ವ್ಯವಸ್ಥೆ ಇದ್ದರೆ ಅದು ಇನ್ನೂ ಒಳ್ಳೆಯದು. ೨೦೧೫ರಲ್ಲಿ ಅಂತರರಾಷ್ಟ್ರೀಯ ಸಮುದಾಯ ಅಂತಹ ಒಂದು ಪ್ರಯತ್ನ ಮಾಡಿತ್ತು. ಆಗ ಸಂಯುಕ್ತ ರಾಷ್ಟ್ರಗಳ ಅಸೆಂಬ್ಲಿ ಎಲ್ಲರೂ ಹಂಚಿಕೊಳ್ಳಬಹುದಾದ ಒಂದು ನಿಯಮಗಳ ಗುಚ್ಛವನ್ನು ತಯಾರಿಸಿತ್ತು. ಅದಕ್ಕೆ ವ್ಯಾಪಕವಾದ ಬೆಂಬಲ ಇತ್ತು. ದುರಾದೃಷ್ಟ ಅಂದರೆ ಪ್ರಮುಖ ಲೇಣಿದಾರ ದೇಶಗಳಿಂದ ಅವಶ್ಯಕವಾದ ಷೇರುಗಳನ್ನು ಕೊಂಡುಕೊಳ್ಳುವುದಕ್ಕೆ ವ್ಯವಸ್ಥೆಯಲ್ಲಿ ಅವಕಾಶ ಕಲ್ಪಿಸಿರಲಿಲ್ಲ. ಇಂದಿನ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಅಂತಹ ಒಂದು ವ್ಯವಸ್ಥೆಯನ್ನು ಸ್ಥಾಪಿಸುವುದಕ್ಕೆ ಬಹುಶಃ ಈಗ ತುಂಬಾ ತಡವಾಗಿರಬಹುದು. ಆದರೆ ಮುಂಬರುವ ದಿನಗಳಲ್ಲಿ ಹಲವು ಬಿಕ್ಕಟ್ಟುಗಳು ಬರಲಿವೆ. ಅಂದರೆ ಮಹಾಮಾರಿಯ ನಂತರದ ಪುನರ್‌ಚೇತನಕ್ಕೆ ಸಾವರಿನ್ ಸಾಲದ ಪುನರ್‌ಸಂಘಟನೆಗೆ ಅವಕಾಶ ಮಾಡಿಕೊಡಬೇಕು. ಅದು ಆದ್ಯತೆಯ ಕೆಲವಾಗಬೇಕು.
ಜಾನ್ ಡೋನ್ ಅವರ ಪ್ರಖ್ಯಾತ ಮಾತುಗಳನ್ನು ನೆನಪಿಸಿಕೊಳ್ಳೋಣ ಯಾವೊಬ್ಬ ಮನುಷ್ಯನೂ ದ್ವೀಪವಲ್ಲ. . . ಮನುಷ್ಯ ಮಾತ್ರವಲ್ಲ ಯಾವ ದೇಶವೂ ದ್ವೀಪವಲ್ಲ್ಲ. ಇದನ್ನು ಕೋವಿಡ್-೧೯ರ ಬಿಕ್ಕಟ್ಟು ಸೊಗಸಾಗಿ ಮನವರಿಕೆ ಮಾಡಿಕೊಟ್ಟಿದೆ. ಅಂತರರಾಷ್ಟ್ರೀಯ ಸಮುದಾಯ ಇದನ್ನು ಅಲಕ್ಷಿಸಬಾರದು.

Recommended Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.