ಬುದ್ಧಿ ಭಾವಗಳ ಅಪೂರ್ವ ಸಂಗಮ, ಶೈಲಜ

 In RAGAMALA

ಬುದ್ಧಿ ಭಾವಗಳ ಅಪೂರ್ವ ಸಂಗಮ
ಶೈಲಜ
ಇದೇ ಸೆಪ್ಟೆಂಬರ್ ೧೪ಕ್ಕೆ ನೂರು ವರ್ಷಗಳನ್ನು ಪೂರೈಸುವ ವಿದ್ವಾನ್ ರಾಮನಾಡ್ ಕೃಷ್ಣನ್ ಅವರನ್ನು ಕರ್ನಾಟಕ ಸಂಗೀತದ ಅನ್‌ಸಂಗ್ ಹೀರೋ ಎನ್ನಬಹುದೇನೋ. ಸಂಗೀತದ ಅಕಡೆಮಿಕ್ ವಲಯಗಳು ಅವರ ಅನನ್ಯತೆಯನ್ನು ಗುರುತಿಸಿ, ಕೊಂಡಾಡಿ, ಅಲ್ಲಿಗೆ ತಮ್ಮ ಕರ್ತವ್ಯ ಮುಗಿಸಿವೆ. ಅವರ ಪಲ್ಲವಿಯ ಪ್ರಸ್ತುತಿ ತೀರಾ ವಿಶೇಷ ಎಂದು ಆಗ ಆಕಾಶವಾಣಿಯ ನಿರ್ದೇಶಕ ರಾಗಿದ್ದ ಜಿಎನ್‌ಬಿ ಅದನ್ನು ಆಕಾಶವಾಣಿಯ ಆರ್ಕೈವ್ಸ್‌ಗೆ ಧ್ವನಿಮುದ್ರಿಸಿ ಕಾಪಾಡಿದರು. ಲಾಲ್ಗುಡಿ ಜಯರಾಮನ್ ಇವರನ್ನು ಸಂಗೀತ-ಗಾರರ ಸಂಗೀತಗಾರ ಎಂದರು. ಅಸ್ಮಿತೆಯೇ ಇಲ್ಲದಿದ್ದ ಪೂರ್ಣಷಡ್ಜ, ಫಲಮಂಜರಿಯಂತಹ ರಾಗಗಳಿಗೆ ಅಸ್ಮಿತೆಯನ್ನು ನೀಡಿದ ಮಹಾನ್ ಸೃಜನಶೀಲ ಕಲಾವಿದ ಎಂದು ಕೊಂಡಾಡಿ ದ್ದಾರೆ. ಅವರ ಬಗ್ಗೆ ಒಂದಿಷ್ಟು ಓದೋಣ ಅಂತ ಹೊರಟಾಗ ಸಂಗೀತನೃತ್ಯಗಳಿಗೇ ಮೀಸಲಾಗಿರುವ ಮದ್ರಾಸಿನ ಶ್ರುತಿ ಮಾಸ ಪತ್ರಿಕೆಯ ಒಂದು ಸಂಪುಟದಲ್ಲಿ ಬಿಟ್ಟರೆ ಬೇರೆಲ್ಲೂ ಏನೂ ಮಾಹಿತಿ ದೊರಕಲಿಲ್ಲ. ದ ಹಿಂದು ಪತ್ರಿಕೆ ಪ್ರಕಟಿಸಿದ ’ಆನ್ ಮ್ಯೂಸಿಕ್,’ ವಿ ಶ್ರೀರಾಂ ಅವರ ’ಕರ್ನಾಟಿಕ್ ಸಮ್ಮರ್’, ಇಂದಿರಾ ಮೆನನ್ ಅವರ ’ಗ್ರೇಟ್ ಮಾಸ್ಟರ‍್ಸ್ ಆಫ್ ಕರ್ನಾಟಿಕ್ ಮ್ಯೂಸಿಕ್’ ಇಂತಹ ಹತ್ತು ಹಲವಾರು ಪುಸ್ತಕಗಳಲ್ಲಿ ಅವರ ಕುರಿತ ಪ್ರಸ್ತಾಪವೇ ಇಲ್ಲ. ವಿಪರ್ಯಾಸವೆಂದರೆ ಅವರ ವಿದ್ಯಾರ್ಥಿಗಳ ಬಗ್ಗೆ ಪ್ರಸ್ತಾಪವಿದೆ. ಹೆಚ್ಚಿನ ಪ್ರಶಸ್ತಿ ಪುರಸ್ಕಾರಗಳಂತೂ ಅವರ ಬಳಿ ಸುಳಿಯಲೇ ಇಲ್ಲ. ಇಂತಹ ಎಲೆ ಮರೆಯ, ಹದವಾಗಿ ಮಾಗಿದ, ಅಪರೂಪದ ಅನನ್ಯ ಕಲಾವಿದ ರಾಮನಾಡ್ ಕೃಷ್ಣನ್.
ಅವರು ಹುಟ್ಟಿದ್ದು ೨೦೧೮ರ ಸೆಪ್ಟೆಂಬರ್ ೧೪ರಂದು ಕೇರಳದ ಅಳಪ್ಪುಳಾದಲ್ಲಿ. ಆದರೆ ವೈದ್ಯನಾಥನ್ ಬೃಹನ್ನಾಯಕಿ ದಂಪತಿಗಳು ನಾಲ್ಕು ತಿಂಗಳ ಮಗುವಿನೊಂದಿಗೆ ತಮಿಳು ನಾಡಿನ ರಾಮನಾಥಪುರಂನಲ್ಲಿ (ರಾಮನಾಡ್) ನೆಲೆಸಿದರು. ಹಾಗಾಗಿ ರಾಮನಾಡ್ ಅವರ ಹೆಸರಿಗೆ ಅಂಟಿಕೊಂಡಿತು. ಎಂಟು ಜನ ಒಡ ಹುಟ್ಟುಗಳಿದ್ದ ಕೃಷ್ಣನ್ ತಮ್ಮ ಸಹೋದರ ಲಕ್ಷ್ಮೀನಾರಾಯಣ ಅವರಿಂದ ಸಂಗೀತದ ಕಲಿಕೆ ಪ್ರಾರಂಭಿಸಿದರು. ನಂತರ ಹರಿಕೇಶನಲ್ಲೂರ್ ಮುತ್ತಯ್ಯ ಭಾಗವತರ ಶಿಷ್ಯ ಶಂಕರಶಿವಂ ಅವರಲ್ಲಿ ಮುಂದುವರೆಸಿದರು. ಏಳು ತುಂಬುವ ಹೊತ್ತಿಗೆ ಅರುಣಾಚಲ ಕವಿಯ ’ರಾಮನಾಟಕ’ದ ಕೃತಿಗಳೆಲ್ಲವೂ ಕೃಷ್ಣನ್ ಅವರ ನಾಲಗೆಯಲ್ಲಿ ಆಡುತ್ತಿದ್ದವು. ಇನ್ನು ಲಯ ರಕ್ತದಲ್ಲಿಯೇ ಬೆರೆತುಹೋಗಿತ್ತು. ಹಾಗಾಗಿ ಅತ್ಯಂತ ಸಂಕೀರ್ಣ ತಾಳಗಳಲ್ಲಿದ್ದ ತಿರುಪ್ಪುಗಳನ್ನು ತಮ್ಮ ಗುರು ಶಂಕರಶಿವಂ ಜೊತೆಗೆ ನಿರಾಯಾಸವಾಗಿ ಹಾಡುತ್ತಿದ್ದರು. ಇವರನ್ನು ತಾಳ ಹಾಕುವಂತೆ ಹೇಳಿ, ಮೃದಂಗ ನುಡಿಸಲು ಪುದುಕ್ಕೋಟೆ ದಕ್ಷಿಣಾಮೂರ್ತಿ ಪಿಳ್ಳೈ ಅವರಿಗೆ ಎಲ್ಲಿಲ್ಲದ ಖುಷಿ. ಜಿಎನ್‌ಬಿ ಎಂದರೆ ಕೃಷ್ಣನ್‌ಗೆ ಬಲು ಪ್ರೀತಿ. ಅವರ ಕಛೇರಿ ಎಲ್ಲಿದ್ದರೂ ಕೃಷ್ಣನ್ ಅಲ್ಲಿ ಹಾಜರ್. ಪಾಪನಾಶಂ ಶಿವನ್ ಎಂದರೆ ಕೃಷ್ಣನ್‌ಗೆ ತುಂಬಾ ಗೌರವಾದರಗಳು. ಅವರನ್ನು ಜೀವಂತ ತ್ಯಾಗರಾಜ ಎನ್ನುತ್ತಿದ್ದರು. ಶಿವನ್‌ಗೂ ಕೃಷ್ಣನ್ ಎಂದರೆ ತುಂಬಾ ಪ್ರೀತಿ. ೧೯೭೩ರ ಜನವರಿ ೨೯ರಂದು ಕೃಷ್ಣನ್ ಅವರ ಸಾವಿನ ಸುದ್ದಿ ತಿಳಿದ ಕೂಡಲೆ ಶಿವನ್ ತಮ್ಮ ಕಛೇರಿಯನ್ನು ಅರ್ಧದಲ್ಲೇ ನಿಲ್ಲಿಸಿದರ.
ಕೃಷ್ಣನ್ ಸಂಗೀತಪ್ರಪಂಚಕ್ಕೆ ಕಾಲಿಟ್ಟದ್ದು ಕರ್ನಾಟಕ ಸಂಗೀತದ ಬಂಗಾರದ ದಿನಗಳಲ್ಲಿ; ಜಿಎನ್‌ಬಿ, ಆಲತ್ತೂರ್, ಸೆಮ್ಮಂಗುಡಿ, ಚೆಂಬೈ ಮುಂತಾದ ವರೆಲ್ಲ ಅನಭಿಷಿಕ್ತ ಚಕ್ರವರ್ತಿಗಳಂತೆ ದರ್ಬಾರ್ ನಡೆಸುತ್ತಿದ್ದ ಕಾಲದಲ್ಲಿ. ಈ ದಿಗ್ಗಜಗಳ ನಡುವೆ ಸ್ವಂತದ ಸಂಗೀತಾತ್ಮಕ ವ್ಯಕ್ತಿತ್ವ ರೂಪಿಸಿಕೊಂಡು ಅನನ್ಯವಾಗಿ ನೆಲೆಯೂರುವುದು ಕಲಾವಿದರಿಗೆ ಸವಾಲಾಗಿದ್ದ ಕಾಲ ಅದು. ಆ ಕಾಲಘಟ್ಟದಲ್ಲಿ ತಮ್ಮ ವಿಶಿಷ್ಟ ಛಾಪು ಮೂಡಿಸಿದ ಕಲಾವಿದ ಕೃಷ್ಣನ್. ಸಂಗೀತದ ಕಲಾತ್ಮಕ ಸೌಂದರ್ಯದಲ್ಲಿ ಹೊಸ ಒಳನೋಟಗಳನ್ನು ಸದಾ ಹುಡುಕುತ್ತಿದ್ದ ಅವರ ಪ್ರಯೋಗಶೀಲ, ಕ್ರಾಂತಿಕಾರಿ ಮನಸ್ಸು ಇದಕ್ಕೆ ಸಹಕಾರಿಯಾಯಿತು. ಅವರ ಸಂಗೀತ ಹತ್ತರಲ್ಲಿ ಹನ್ನೊಂದಾಗದಂತೆ ಅದಕ್ಕೊಂದು ಹೊಸ ದಿಕ್ಕು ದೊರೆತದ್ದು ವೀಣಾ ಧನಮ್ಮಾಳರ ಸಂಗೀತಕ್ಕೆ ತೆರೆದುಕೊಂಡಾಗ. ಧನಮ್ಮಾಳ್ ಶೈಲಿಯ ಸಂಗೀತದ ನಾದ ಮಾಧುರ್ಯ, ಕಲಾತ್ಮಕತೆ ತಮ್ಮನ್ನು ಆವರಿಸಿ ಕೊಂಡಿತು ಎಂದು ಕೃಷ್ಣನ್ ಸದಾ ಸ್ಮರಿಸುತ್ತಿದ್ದರು. ಇದರಿಂದ ಅವರು ಕರ್ನಾಟಕ ಸಂಗೀತವನ್ನು ಗ್ರಹಿಸುತ್ತಿದ್ದ ಕ್ರಮವೇ ಬದಲಾಯಿತು. ಭವಿಷ್ಯದಲ್ಲಿ ಅವರ ಸಂಗೀತದಲ್ಲಿ ಭಾವಪ್ರಧಾನವಾಗಿದ್ದು ಈ ಪ್ರಭಾವದಿಂದಲೇ.
ಧನಮ್ಮಾಳ್ ಅವರ ಮೊಮ್ಮಗಳು ಟಿ ಬೃಂದಾ ಅವರಲ್ಲಿ ಪದಂ, ಜಾವಳಿಗಳು ಮತ್ತು ಇತರ ರಚನೆಗಳನ್ನು ಕಲಿತು ತಮ್ಮ ಕೃತಿಸಂಚಯವನ್ನು ವಿಸ್ತರಿಸಿಕೊಂಡರು. ಈ ಒಡನಾಟದಿಂದ ಹೊಸ ಹೊಳಪಿನಿಂದ ಕೂಡಿದ ರಾಮನಾಡ್ ಶೈಲಿ ಹುಟ್ಟಿತು. ಧನಮ್ಮಾಳರ ಶೈಲಿಗೆ ನಿಷ್ಠರಾಗಿ ಇದ್ದುಕೊಂಡೇ ಕೃಷ್ಣನ್ ಮೂರು ಕಾಲ -ಪ್ರಮಾಣದಲ್ಲಿ ಅಸಾಧಾರಣ ನಿಖರತೆಯನ್ನು ಸಾಧಿಸಿಕೊಂಡರು. ಇಂತಹ ಪರಿಣತಿಯಿಂದಾಗಿ ತ್ರಿಕಾಲಗಳಲ್ಲಿಯೂ ಗಮಕಗಳ ಸೂಕ್ಷ್ಮತೆ ಮತ್ತು ಸೌಂದರ್ಯಕ್ಕೆ ಧಕ್ಕೆ ಬಾರದಂತೆ, ಸ್ಪಷ್ಟತೆಯಿಂದ, ಕರಾರುವಾಕ್ಕಾಗಿ ಹಾಡಲು ಸಾಧ್ಯವಾಗುತ್ತಿತ್ತು. ಅವರ ಆಲಾಪನೆಗಳು ಕಡೆದಿಟ್ಟಂತೆ ನಿಖರವಾಗಿ, ಚೊಕ್ಕವಾಗಿ, ಸ್ಪಷ್ಟವಾಗಿ, ಅಚ್ಚುಕಟ್ಟಾಗಿ ಇರುತ್ತಿದ್ದವು. ಅದಕ್ಕೂ ಧನಮ್ಮಾಳರ ಪ್ರಭಾವವೇ ಕಾರಣ. ಟಿ ಎಂ ಕೃಷ್ಣ ಗುರುತಿಸುವಂತೆ ಬೃಂದಾರವರ ಗಮಕಗಳು ಮತ್ತು ಜಿಎನ್‌ಬಿಯವರ ಬಿರ್ಕಾಗಳ ಹದವಾದ ಪಾಕ ಕೃಷ್ಣನ್ ಅವರ ಸಂಗೀತದಲ್ಲಿತ್ತು. ಕೃತಿಯಲ್ಲಿ ಇಲ್ಲದ ಸಂಗತಿಗಳನ್ನು ಅವರು ಸಾಮಾನ್ಯವಾಗಿ ಆಲಾಪನೆಯಲ್ಲಿ ಹಾಡುತ್ತಿರಲಿಲ್ಲ. ಕೃಷ್ಣನ್ ಅವರ ಶೈಲಿಯ ಹೆಗ್ಗುರುತು ಭಾವಕ್ಕೆ ತಕ್ಕಂತೆ, ಹದವರಿತು ಧ್ವನಿಯಲ್ಲಿ ಏರಿಳಿತಗಳನ್ನು ಮೂಡಿಸುವುದು. ಮೈಕ್ ಇಲ್ಲದ ಕಾಲದಲ್ಲಿಯೂ ಅವರು ವಾಯ್ಸ್ ಮಾಡ್ಯುಲೇಟ್ ಮಾಡುತ್ತಿದ್ದರು. ಅವರ ಶ್ರುತಿಶುದ್ಧತೆ ಅಪರೂಪದ್ದು. ಅದರ ಬಗ್ಗೆ ಅವರ ಶತಮಾನದ ಆಚರಣೆಯ ಸಂದರ್ಭದಲ್ಲಿ ಟಿ ಎಂ ಕೃಷ್ಣ ಅತ್ಯಂತ ಮನೋಜ್ಞವಾಗಿ ಮಾತ ನಾಡಿದ್ದಾರೆ.
ರಾಮನಾಡ್ ಅವರು ಯಾವಾಗಲೂ ಕರ್ನಾಟಕ ಸಂಗೀತದಲ್ಲಿ ವೈದೃಶ್ಯ (ಕಾಂಟ್ರಾಸ್ಟ್) ಕುರಿತು ಹೇಳುತ್ತಿದ್ದರು. ಅವರ ಆಲಾಪನೆಯಲ್ಲಿ ಈ ಅಂಶ ಎದ್ದು ಕಾಣುತ್ತಿತ್ತು. ವಿಳಂಬಕಾಲದ ಗಮಕಗಳನ್ನು ಹಾಡುವಾಗ ನಡುವಿನಲ್ಲಿ ದಿಢೀರ್ ಎಂದು ಸೊಗಸಾದ ಚುರುಕಾದ ಬಿರ್ಕಾಗಳು ಮಿಂಚಿ ಕಣ್ಣು ಕೋರೈಸುತ್ತಿದ್ದವು. ಅಂತೆಯೇ ಚುರುಕಾಗಿ ಚಿಮ್ಮಿ ಬರುವ ಗಮಕಗಳ ನಡುವೆ ಪ್ಲೇನ್ ನೋಟು ಗಳನ್ನು ಅವರು ಸುಂದರವಾಗಿ ಹೆಣೆಯುತ್ತಿದ್ದರು. ಇವುಗಳ ನಡುವೆ ತುಂಬಾ ಅರ್ಥಪೂರ್ಣವಾದ ವಿರಾಮಗಳು ಇರುತ್ತಿದ್ದವು. ಮಂದ್ರಸ್ಥಾಯಿಯಲ್ಲಿನ ತುಂಬುಕಂಠದ ಆಲಾಪನೆಗೆ ವೈದೃಶ್ಯ ಒದಗಿಸು ವಂತೆ ತಾರಸ್ಥಾಯಿಯ ಕಾರ್ವೆಯಲ್ಲಿ ಕಂಠವನ್ನು ಸಂಪೂರ್ಣವಾಗಿ ಮೃದುಗೊಳಿಸಿ ನ್ಯಾಸಮಾಡು ತ್ತಿದ್ದರು. ಅವರ ಕಲ್ಪನಾಸ್ವರಗಳು ಗಮಕಗಳಿಂದ ಅಲಂಕೃತಗೊಂಡು, ರಾಗಭಾವದಲ್ಲಿ ಮಿಂದೆದ್ದು ಬರುತ್ತಿದ್ದವು. ಯಾವ ಕೃತಿ ಎಷ್ಟು ಆಲಾಪನೆ ನೆರವಲ್ ಮತ್ತು ಸ್ವರ ಪ್ರಸ್ತಾಪವನ್ನು ತಾಳಿಕೊಳ್ಳುತ್ತದೆ ಎಂಬ ಅಸಾಧಾರಣ ಪ್ರಮಾಣ ಪ್ರಜ್ಞೆ ಅವರಲ್ಲಿತ್ತು. ಕೃತಿಗಳನ್ನು ಪ್ರಸ್ತುತಪಡಿಸುವಾಗ ಅತ್ಯಂತ ಸೂಕ್ಷ್ಮವಾದ ವಿವರಗಳು ಮತ್ತು ಜಟಿಲವಾದ ಸಂಗತಿಗಳ ವಿನ್ಯಾಸ ತುಂಬಾ ಸ್ಫುಟವಾಗಿ ಮೂಡುತ್ತಿದ್ದವು. ಉದಾಹರಣೆಗೆ ಅವರ ಶ್ರೀ ಮಾನಿನಿ ಅಥವಾ ಲಾವಣ್ಯ ರಾಮ ಕೃತಿಗಳ ಪ್ರಸ್ತುತಿಯನ್ನು ಗಮನಿಸಬಹುದು. ರಾಗದ ಸೌಂದರ್ಯ ಪ್ರಕಟಗೊಳ್ಳಲು ಅನುವಾಗುವಂತೆ ಅವಶ್ಯವಿದ್ದ ಕಡೆ ಸಂಗತಿಗಳಲ್ಲಿ ಏರಿಳಿತಗಳನ್ನು ಮಾಡುತ್ತಿದ್ದರು.
ಶಹನಾ, ಸಾವೇರಿ, ಬೇಗಡೆ, ಕೀರವಾಣಿ, ಭೈರವಿ, ಮತ್ತು ಮಧ್ಯಮಾವತಿಯಂತಹ ರಾಗಗಳು ಮತ್ತು ರಾಮನಾಡ್ ಕೃಷ್ಣನ್ ಎಂದರೆ ಸಮಾನರ್ಥಕ ಪದಗಳು ಎನ್ನುವಂತಾಗಿತ್ತು. ಅವರಿಗೆ ಶಹನಾ ಕೃಷ್ಣನ್ ಎಂದೇ ಹೆಸರಾಗಿತ್ತು. ಪೂರ್ಣಚಂದ್ರಿಕೆ, ಬಹುದಾರಿ, ಫಲಮಂಜರಿ, ಜನರಂಜನಿ, ಮಾಳವಿ, ಪೂರ್ಣಷಡ್ಜ, ಜಯ-ಮನೋಹರಿ ಮುಂತಾದ ರಾಗಗಳು ಅವರಿಗಾಗೇ ಸೃಷ್ಟಿಯಾಗಿವೆ ಎನ್ನುವಂತೆ ಹಾಡುತ್ತಿದ್ದರು. ಆ ರಾಗಗಳಿಗೆ ಒಂದು ಚಹರೆಯನ್ನು ನೀಡಿ ಸ್ಪಷ್ಟವಾದ ವ್ಯಕ್ತಿತ್ವವನ್ನು ರೂಪಿಸಿಕೊಟ್ಟರು. ಟಿ ಎಂ ಕೃಷ್ಣ ಹೇಳುವಂತೆ ಫಲಮಂಜರಿಯಂತಹ ರಾಗಗಳನ್ನು ಹಾಡಲು ರಾಮನಾಡ್ ಕೃಷ್ಣನ್ ಅವರು ಕಡೆದಿಟ್ಟ ರಾಗದ ಮಾದರಿ ಬಿಟ್ಟರೆ ನಮಗೆ ಬೇರೇನಿದೆ?
ಕೃಷ್ಣನ್ ಅವರ ಸಂಗೀತವನ್ನು ಪಿಟೀಲು ಚೌಡಯ್ಯನವರು ಮೊದಲಬಾರಿಗೆ ಕೇಳಿದ್ದು ೧೯೫೭ರಲ್ಲಿ, ಸಂಗೀತ ಕಲಾನಿಧಿ ಬಿರುದನ್ನು ಸ್ವೀಕರಿಸಿದಾಗ. ಅತ್ಯಂತ ಜಟಿಲವಾದ, ಸಂಕೀರ್ಣ ನಡೆಯ ಪಲ್ಲವಿಯನ್ನು ತುಂಬಾ ಸುಲಭವಾಗಿ, ಆದರೆ ನಿಖರವಾಗಿ ಹಾಡಿದರು. ಅದನ್ನು ಕೇಳಿದ ಚೌಡಯ್ಯನವರು ಇಂತಹ ಸಾಮರ್ಥ್ಯವಿರುವ ಕಲಾವಿದರು ಅಕಾಡೆಮಿಯ ಪ್ರಮುಖ ವೇಳೆಯಲ್ಲಿ ಹಾಡಬೇಕು, ಎಂದು ತುಂಬಿದ ಸದಸ್ಸಿನಲ್ಲಿ ಹೇಳಿದರು. ಮರುವರ್ಷ ಕೃಷ್ಣನ್ ಪ್ರಮುಖ ವೇಳೆಯಲ್ಲಿ ಹಾಡಿದ ಕಛೇರಿಗೆ ತಾವೇ ಪಕ್ಕವಾದ್ಯ ನುಡಿಸಿದರು. ಚೌಡಯ್ಯನವರಿಗೆ ಸಂಗೀತ ಕಲಾನಿಧಿ ಬಂದ ವರ್ಷ ಅವರು ಅಕಾಡೆಮಿ ಯಲ್ಲಿ ಹಾಡಿದ ಖಂಡನಡೆಯ ಅದ್ಭುತವಾದ ಪಲ್ಲವಿಯನ್ನು ಕೇಳಿದ ಪಳನಿ ಸುಬ್ರಹ್ಮಣ್ಯ ಪಿಳ್ಳೈ ಕಛೇರಿಯ ನಂತರ ಕೃಷ್ಣನ್ ಅವರನ್ನು ಭೇಟಿಯಾದರು. ವಯಸ್ಸಿನಲ್ಲಿ ತಮಗಿಂತ ಕಿರಿಯರಾದ ಕೃಷ್ಣನ್‌ಗೆ ನುಡಿಸಬೇಕು ಎಂದು ತಮಗೆ ಆಸೆಯಾಗಿದೆ ಎಂದು ತಿಳಿಸಿದರು. ಆಕಾಶವಾಣಿಯ ಸಂಗೀತ ಸಮ್ಮೇಳನದಲ್ಲಿ ಕೃಷ್ಣನ್ ಒಂದು ವಿಶೇಷವಾದ ರಾಗ ತಾನ ಪಲ್ಲವಿ ಹಾಡಿದರು. ಅದನ್ನು ಕೇಳುತ್ತಿದ್ದ ಪಳನಿಯವರು, ಸ್ಫೂರ್ತಿಗೊಂಡು ಕಾರ್ಯಕ್ರಮ ಮುಗಿದ ಕೂಡಲೆ ಆ ಪಲ್ಲವಿಗೆ ಹಲವು ಆವರ್ತಗಳನ್ನು ನುಡಿಸಿದರು (ತಿರುಚ್ಚಿ ಶಂಕರನ್). ಅತ್ಯಂತ ಕ್ಲಿಷ್ಟವಾದ ಲೆಕ್ಕಾಚಾರವಿರುವ ಪಲ್ಲವಿಯನ್ನು ರಾಗಸುಧಾರಸದಲ್ಲಿ ಅದ್ದಿ, ಕಿವಿಗೆ ಆಪ್ಯಾಯಮಾನ ಆಗುವಂತೆ ಮತ್ತು ಕೇಳುಗರು ಸಲೀಸಾಗಿ ಮೆಚ್ಚುವಂತೆ ಹಾಡುವ ಅಗಾಧ ಪಾಂಡಿತ್ಯ ರಾಮನಾಡ್ ಅವರಿಗಿತ್ತು (ಉಮಯಾಳಪುರಂ ಶಿವರಾಮನ್). ಕೃಷ್ಣನ್ ಅವರು ಹಾಕುತ್ತಿದ್ದ ಸರ್ವಲಘು ನಡೆಯ ಸ್ವರಗಳು ತುಂಬಾ ವಿಶೇಷ. ಅವರು ಕಲ್ಯಾಣಿಯ ’ಅಮ್ಮ ರಾವಮ್ಮ’ ಕೃತಿಗೆ ಹಾಕುತ್ತಿದ್ದ ಸರ್ವಲಘು ಸ್ವರಗಳು ತುಂಬಾ ಜಟಿಲವೆನಿಸುತ್ತಿತ್ತು. ಆದರೆ ವಾಸ್ತವವಾಗಿ ಅವುಗಳ ವಿನ್ಯಾಸ ತುಂಬಾ ಸರಳವಾಗಿತ್ತು. ಅವು ತುಂಬಾ ಜಟಿಲವಾಗಿವೆ ಎನ್ನುವ ಕಲ್ಪನೆ ಮೂಡುವಂತೆ ಕೃಷ್ಣನ್ ಅವುಗಳನ್ನು ಜೋಡಿಸುತ್ತಿದ್ದರು, ಎನ್ನುತ್ತಿದ್ದರು ಲಾಲ್‌ಗುಡಿಯವರು.
೧೯೬೭ರಲ್ಲಿ ಕೃಷ್ಣನ್ ಅಮೆರಿಕೆಯ ವೆಸ್ಲಿಯನ್ ವಿಶ್ವವಿದ್ಯಾನಿಲಯಕ್ಕೆ ಸಂದರ್ಶಕ ಪ್ರಾಧ್ಯಾಪಕರಾಗಿ ಹೋದರು. ಆದರೆ ಅಲ್ಲಿ ದೊರಕುವ ದೊಡ್ಡ ಮೊತ್ತದ ಸಂಭಾವನೆಗಿಂತಲೂ ಪರಿಚಿತ ಹಾಗೂ ಅರಿವುಳ್ಳ ಕೇಳುಗರಿಗೆ ಹಾಡುವುದೇ ಹೆಚ್ಚು ತೃಪ್ತಿ ನೀಡುತ್ತದೆ ಎಂದು ಹೇಳಿ ಮೂರೇ ತಿಂಗಳಿನಲ್ಲಿ ಭಾರತಕ್ಕೆ ವಾಪಸ್ಸಾದರು. ೧೯೭೦ರ ಆರಂಭಿಕ ವರ್ಷಗಳಲ್ಲಿ ಮದ್ರಾಸಿನ ಕರ್ನಾಟಿಕ್ ಮ್ಯೂಸಿಕ್ ಕಾಲೇಜಿನಲ್ಲಿ ಅವರು ಪ್ರಾಧ್ಯಾಪಕರಾಗಿದ್ದರು.
ಬಿರುದು ಬಾವಲಿಗಳು ಕಲಾವಿದನ ಯಶಸ್ಸಿನ ಸೂಚಿ ಎಂದವರು ಭಾವಿಸಿರಲೇ ಇಲ್ಲ. ತಮ್ಮ ಸಂಗೀತದ ಸೂಕ್ಷ್ಮಗಳು ಮತ್ತು ಸೊಗಸನ್ನು ಆಸ್ವಾದಿಸಬಲ್ಲ ಅರಿವುಳ್ಳ ಕೇಳುಗರ ಮುಂದೆ ತಮ್ಮ ಕಲಾತ್ಮಕತೆಯನ್ನು ಪ್ರಸ್ತುತ ಪಡಿಸಬೇಕೆಂಬುದು ಅವರ ಏಕೈಕ ಗುರಿಯಾಗಿತ್ತು. ಆ ಅರ್ಥದಲ್ಲಿ ಅವರು ನಿಜವಾಗಿ ಯಶಸ್ವಿ ಕಲಾವಿದರಾಗಿದ್ದರು.
ಕೃಷ್ಣನ್ ತುಂಬಾ ಸರಳವಾದ ವ್ಯಕ್ತಿ. ಅವರಿಗೆ ತುಂಬಾ ಜನ ಕೇಳುಗರು ತಮ್ಮ ಸಂಗೀತವನ್ನು ಕೇಳಬೇಕು, ಮೆಚ್ಚುಗೆ ಸೂಚಿಸಬೇಕು ಎನ್ನುವ ಆಸೆಯೇ ಇರಲಿಲ್ಲ. ಬೃಂದಮ್ಮ ನನ್ನ ಸಂಗೀತವನ್ನು ಮೆಚ್ಚಿದ್ದಾರೆ ಅದಕ್ಕಿಂತ ಶ್ರೇಷ್ಠವಾದ ಪ್ರಶಸ್ತಿ ಯಾವುದೂ ಇಲ್ಲ ಎಂದು ಕೃಷ್ಣನ್ ಹೇಳುತ್ತಿದ್ದರು. ಬೃಂದಾರಿಗೂ ಕೃಷ್ಣನ್ ಅವರ ಸಂಗೀತದ ಬಗ್ಗೆ ತುಂಬಾ ಗೌರವವಿತ್ತು. ಹಾಗಾಗಿಯೇ ತಮ್ಮ ಮಗಳು ವೇಗವಾಹಿನಿಯನ್ನು ಅವರ ಬಳಿ ಪಾಠಕ್ಕೆ ಸೇರಿಸಿದರು. ಕೃಷ್ಣನ್ ಹಿಂದುಸ್ತಾನಿ ಸಂಗೀತವನ್ನು ತುಂಬಾ ಆಸ್ವಾದಿಸು ತ್ತಿದ್ದರು. ’ಕಲಯೆ ಯಶೋದ’ (ಶುದ್ಧ ಸಾರಂಗ) ’ಗೋವರ್ಧನ ಗಿರಿಧರ’ (ದರ್ಬಾರಿ ಕಾನಡಾ) ಮುಂತಾದ ತರಂಗಗಳಿಗೆ ರಾಗ ಸಂಯೋಜನೆ ಮತ್ತು ಅವುಗಳ ಹೃದಯಸ್ಪರ್ಶಿ ಪ್ರಸ್ತುತಿಯಲ್ಲಿ ಹಿಂದುಸ್ತಾನಿ ಪ್ರಭಾವ ನಿಚ್ಚಳವಾಗಿ ಕಾಣುತ್ತದೆ.
ಬಹಳ ಸೂಕ್ಷ್ಮ ಮತ್ತು ಭಾವುಕ ಸ್ವಭಾವದ ಕೃಷ್ಣನ್ ಅವರಿಗೆ ತಮ್ಮ ಕುಟುಂಬ ಮತ್ತು ಪರಿಚಿತರೊಂದಿಗೆ ಇರುವುದು ಹೆಚ್ಚು ನೆಮ್ಮದಿ ಎನಿಸಿತ್ತು. ಅವರ ಇಬ್ಬರು ಮಕ್ಕಳು ರಾಮ ನಾಥನ್ ಮತ್ತು ವೈದ್ಯನಾಥನ್. ಅವರಿಗೆ ತಂದೆಯೊಂದಿಗೆ ತುಂಬಾ ಆತ್ಮೀಯತೆ ಆದರೆ ಅಷ್ಟೇ ಗೌರವ. ತಂದೆ ತಮ್ಮ ಅಭಿಪ್ರಾಯಗಳನ್ನು ಮಕ್ಕಳ ಮೇಲೆ ಹೇರುತ್ತಿರಲಿಲ್ಲ. ತಮಗೆ ಅವರು ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು ಎಂದು ಮಕ್ಕಳು ನೆನಪಿಸಿಕೊಳ್ಳುತ್ತಾರೆ. ತಮ್ಮ ಕುಟುಂಬ ಮತ್ತು ಸಂಗೀತ ಬಿಟ್ಟರೆ ಅವರಿಗೆ ಬೇರೊಂದು ಲೋಕವೇ ಇರಲಿಲ್ಲ. ಕೃಷ್ಣನ್ ತಮ್ಮ ಧ್ವನಿಮುದ್ರಿಕೆ ಗಳನ್ನು ಕೇಳಲು ಇಷ್ಟಪಡುತ್ತಿರಲಿಲ್ಲ ಮತ್ತು ತಮ್ಮ ಕಛೇರಿಗಳ ತಾಂತ್ರಿಕ ವಿಶ್ಲೇಷಣೆ ಮಾಡುವುದನ್ನೂ ಪ್ರೋತ್ಸಾಹಿಸುತ್ತಿರಲಿಲ್ಲ. ೧೯೭೩, ಜನವರಿ ೨೯ರಂದು ಅವರು ಹೃದಯಸಂಬಂಧಿ ತೊಂದರೆಯಿಂದ ತೀರಿಕೊಂಡರು. ೨೦೦೭ರಲ್ಲಿ ತಮ್ಮ ತಂದೆಯ ನೆನಪಿನಲ್ಲಿ ಮಗ ರಾಮನಾಥನ್ ತಂದೆಯನ್ನು ಕುರುತು ’ರಾಮನಾಥಪುರಂ ಕೃಷ್ಣನ್- ಸಂಗೀತ ಗಾರರ ಸಂಗೀತಗಾರ’ ಎಂಬ ಡಿವಿಡಿಯನ್ನು ಹೊರ ತಂದರು. ಅದರಲ್ಲಿ ವಿಭಿನ್ನ ಕಲಾವಿದರು ಮತ್ತು ಕೃಷ್ಣನ್ ಅವರ ಹಲವು ಆತ್ಮೀಯರು ಅವರ ಬಗ್ಗೆ ಮಾತನಾಡಿದ್ದಾರೆ. ಕೃಷ್ಣನ್ ಅವರನ್ನು ಕುರಿತ ಒಂದು ಬಹುಮುಖ್ಯ ಆಕರ ಇದಾಗಿದೆ.
ಕೃಷ್ಣನ್ ಅವರ ಶಿಷ್ಯಪಡೆ ಸಾಕಷ್ಟು ದೊಡ್ಡದು. ಖ್ಯಾತ ನರ್ತಕಿಯರಾದ ಕಮಲಾ ನಾರಾಯಣ್ ಮತ್ತು ಕೆ ಜೆ ಸರೋಜ ಮತ್ತು ಖ್ಯಾತ ಹಿನ್ನೆಲೆ ಗಾಯಕಿ ಟಿ ವಿ ರತ್ನಂ ಇವರ ಶಿಷ್ಯರು. ಇವರಲ್ಲದೆ ಉಷಾ ಸಾಗರ್, ಪದ್ಮಲೋಚನಿ ನಾಗರಾಜನ್, ವೇಗವಾಹಿನಿ ವಿಜಯರಾಘವನ್, ರೀqಂ ರಾಜನ್, ನಾಗಮಣಿ ಶ್ರೀನಾಥ್, ನಿರ್ಮಲಾ ಸೌಂದರರಾಜನ್, ನಟರಾಜನ್, ವೈದ್ಯನಾಥನ್, ನೈಯ್ಯಂಟಿಕರ ವಾಸುದೇವನ್, ಜಾನಕಿ ಸುಂದರರಾಜನ್, ಕಲ್ಪಕಂ ರಾಮನ್, ರಾಘವ ರಾವ್ ಮತ್ತು ಕರ್ನಾಟಕ ಸಂಗೀತದ ಅಧ್ಯಯನಕ್ಕಾಗಿ ವಿದ್ಯಾರ್ಥಿವೇತನ ಪಡೆದು ಬಂದ ಜಾನ್ ಹಿಗ್ಗಿನ್ಸ್, ಮುಂತಾದವರು.

Recommended Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.