ಬೃಹತ್ ದುರಂತದ ಸೃಷ್ಟಿ -ಮನಮೋಹನ್ ಸಿಂಗ್

 In ECONOMY

ನಿರ್ನೋಟಿಕರಣವನ್ನು ಜಾರಿಗೊಳಿಸಿದ ಕೆಲವೇ ದಿನಗಳಲ್ಲಿ ಶ್ರೀ ಮನಮೋಹನ್ ಸಿಂಗ್ ಆಡಿದ್ದ ಮಾತುಗಳು
ಬೃಹತ್ ದುರಂತದ ಸೃಷ್ಟಿ
ಮನಮೋಹನ್ ಸಿಂಗ್
ದಿ ಹಿಂದೂ ಪತ್ರಿಕೆ, ೯ ಡಿಸೆಂಬರ್ ೨೦೧೬

ಹಣ ಮನುಷ್ಯನಲ್ಲಿ ವಿಶ್ವಾಸವನ್ನು ಮೂಡಿಸುತ್ತದೆ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ನವೆಂಬರ್ ೯, ೨೦೧೬ರ ಮಧ್ಯರಾತ್ರಿ ಕೈಗೊಂಡ ಒಂದು ನಿರ್ಧಾರ ಲಕ್ಷಾಂತರ ಭಾರತೀಯರ ವಿಶ್ವಾಸವನ್ನು ನಾಶಗೊಳಿಸಿದೆ. ರಾತ್ರೋರಾತ್ರಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ೫೦೦ ಹಾಗೂ ೧೦೦೦ರೂಗಳ ಶೇಕಡ ೮೫ಕ್ಕೂ ಹೆಚ್ಚಿನ ಮೌಲ್ಯದ ಹಣಕ್ಕೆ ಬೆಲೆ ಇಲ್ಲದಂತೆ ಮಾಡಿಬಿಟ್ಟಿದ್ದಾರೆ. ಭಾರತ ಸರ್ಕಾರ ತಮ್ಮ ಹಣವನ್ನು ಹಾಗೂ ತಮ್ಮನ್ನು ರಕ್ಷಿಸುತ್ತದೆ ಎಂದು ತಮ್ಮ ದೇಶದ ಮೇಲೆ ಅಪಾರ ಭರವಸೆ ಇಟ್ಟುಕೊಂಡಿದ್ದ ಜನರ ಭರವಸೆಯನ್ನು ಪ್ರಧಾನಮಂತ್ರಿಗಳ ಒಂದು ದುಡುಕಿನ ನಿರ್ಧಾರ ಛಿದ್ರಗೊಳಿಸಿಬಿಟ್ಟಿತು.
ಪ್ರಧಾನ ಮಂತ್ರಿಗಳು ದೇಶವನ್ನು ಕುರಿತು ಮಾಡಿದ ತಮ್ಮ ಭಾಷಣದಲ್ಲಿ ದೇಶದ ಬೆಳವಣಿಗೆಯ ಚರಿತ್ರೆಯಲ್ಲಿ ಬಲವಾದ ಹಾಗೂ ನಿರ್ಣಾಯಕವಾದ ನಿಲುವನ್ನು ತೆಗೆದುಕೊಳ್ಳಬೇಕಾದ ಸಮಯ ಬಂದಿದೆ ಎಂದು ಹೇಳಿದ್ದಾರೆ. ಅವರು ತಮ್ಮ ಈ ನಿರ್ಧಾರಕ್ಕೆ ಎರಡು ಕಾರಣಗಳನ್ನು ನೀಡಿದ್ದಾರೆ. ಒಂದು ಖೋಟಾ ನೋಟಿನ ಮೂಲಕ ದೇಶದ ಮೇಲೆ ದಾಳಿಮಾಡುತ್ತಿರುವ ಗಡಿಯಾಚೆಗಿನ ಶತ್ರುಗಳನ್ನು ನಿಯಂತ್ರಿಸುವುದು. ಎರಡನೆಯದು ಕಪ್ಪು ಹಣ ಹಾಗೂ ಭ್ರಷ್ಟಾಚಾರದ ನಿಯಂತ್ರಣವನ್ನು ಮುರಿಯುವುದು
ಎರಡೂ ಘನವಾದ ಉದ್ದೇಶಗಳೆ ಮತ್ತು ಅದನ್ನು ತುಂಬು ಹೃದಯದಿಂದ ಬೆಂಬಲಿಸಬೇಕು. ಭಯೋತ್ಪಾದನೆ ಹಾಗೂ ಸಾಮಾಜಿಕ ವಿಭಜನೆಗಳಂತೆಯೇ ಖೋಟಾನೋಟು ಹಾಗೂ ಕಪ್ಪು ಹಣ, ದೇಶದ ಕಲ್ಪನೆಗೆ ಒಂದು ದೊಡ್ಡ ಅಡ್ಡಿ. ನಮ್ಮಲ್ಲಿರುವ ಎಲ್ಲಾ ಶಸ್ತ್ರಗಳನ್ನು ಬಳಸಿ ಅವನ್ನು ನಿರ್ಮೂಲನ ಮಾಡಬೇಕು. ಆದರೆ ಚಾಲ್ತಿಯಲ್ಲಿರುವ ನರಕದ ಮಾರ್ಗವನ್ನು ಒಳ್ಳೆಯ ಉದ್ದೇಶದಿಂದಲೇ ನಿರ್ಮಿಸಲಾಗಿರುತ್ತದೆ ಎಂಬ ಜನಪ್ರಿಯ ನಾಣ್ಣುಡಿಯನ್ನು ನೆನಪಿಸಿಕೊಳ್ಳುವುದು ಒಳ್ಳೆಯದು. ಅದು ಈ ಸಂದರ್ಭದಲ್ಲಿ ಒಂದು ಉಪಯುಕ್ತ ಎಚ್ಚರಿಕೆಯ ಮಾತಾಗಬಹುದು.
ಪ್ರಧಾನ ಮಂತ್ರಿಗಳು ಒಂದೇ ರಾತ್ರಿ ೫೦೦ ಹಾಗೂ ೧೦೦೦ ರೂಪಾಯಿಗಳ ನೋಟುಗಳನ್ನು ಅಮಾನ್ಯ ಮಾಡುವ ನಿರ್ಧಾರದ ಹಿಂದೆ ಎಲ್ಲ ಹಣವೂ ಕಪ್ಪು ಹಣ ಹಾಗೂ ಎಲ್ಲಾ ಕಪ್ಪು ಹಣವೂ ನಗದು ರೂಪದಲ್ಲಿದೆ ಎಂಬ ತಪ್ಪು ಕಲ್ಪನೆ ಇದೆ. ಅದು ವಾಸ್ತವವಲ್ಲ. ಅದೇಕೆ ಅಲ್ಲ ಅನ್ನುವುದನ್ನು ನೋಡೋಣ.
ಅಸ್ಥವ್ಯಸ್ಥಗೊಂಡ ಜನಜೀವನ
ಶೇಕಡ ೯೦ಕ್ಕೂ ಹೆಚ್ಚು ಜನ ಇಂದಿಗೂ ತಮ್ಮ ಕೂಲಿಯನ್ನು ಹಣದ ರೂಪದಲ್ಲೇ ಪಡೆಯುತ್ತಾರೆ. ಅವರಲ್ಲಿ ನೂರಾರು ಮಿಲಿಯನ್ ಕೃಷಿ ಕಾರ್ಮಿಕರು, ನಿರ್ಮಾಣದ ಕೆಲಸದಲ್ಲಿ ತೊಡಗಿರುವ ಕೆಲಸಗಾರರು ಮೊದಲಾದವರು ಬರುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ೨೦೦೧ರಿಂದ ಈವರೆಗೆ ಬ್ಯಾಂಕ್ ಶಾಖೆಗಳು ಕೇವಲ ಎರಡರಷ್ಟಾಗಿವೆ. ೬೦೦ಮಿಲಿಯನ್ನಿಗೂ ಹೆಚ್ಚಿನ ಭಾರತೀಯರು ವಾಸಿಸುತ್ತಿರುವ ಪಟ್ಟಣ ಅಥವಾ ಹಳ್ಳಿಗಳಲ್ಲಿ ಇಂದಿಗೂ ಬ್ಯಾಂಕುಗಳಿಲ್ಲ. ಅವರು ಬಳಸುತ್ತಿರುವ ಹಣವನ್ನು ನ್ಯಾಯಬದ್ಧವೆಂದು ಒಪ್ಪಿಕೊಳ್ಳುತ್ತಿರುವುದರಿಂದಲೇ ಅವರ ಜೀವನ ಸಾಧ್ಯವಾಗಿದೆ. ಅವರು ತಮ್ಮ ಹಣವನ್ನು ನಗದಿನಲ್ಲಿ ಕೂಡಿಡುತ್ತಾರೆ. ಅದು ಹೆಚ್ಚು ಹೆಚ್ಚಾದಂತೆ ಅದನ್ನು ೫೦೦ ಅಥವಾ ೧೦೦೦ರೂಪಾಯಿಗಳಲ್ಲಿ ಕೂಡಿಡುತ್ತಾರೆ. ಅದನ್ನು ಕಪ್ಪು ಹಣ ಎಂದು ಮಸಿಬಳಿಯುವುದು ಹಾಗೂ ನೂರಾರು ಮಿಲಿಯನ್ ಜನರ ಬದುಕನ್ನು ಅಸ್ತವ್ಯಸ್ತಗೊಳಿಸುವುದು ಮಹಾನ್ ದುರಂತ. ಬಹುಸಂಖ್ಯಾತ ಭಾರತೀಯರು ಹಣದ ರೂಪದಲ್ಲೇ ಸಂಪಾದಿಸುತ್ತಾರೆ, ಹಣದಲ್ಲೇ ವ್ಯವಹರಿಸುತ್ತಾರೆ, ಹಣದಲ್ಲೇ ಸಂಗ್ರಹಿಸುತ್ತಾರೆ. ಇವೆಲ್ಲವೂ ಕಾನೂನುಬದ್ಧವಾದ ಪ್ರಕ್ರಿಯೆಗಳೆ. ಯಾವುದೇ ಸರ್ವತಂತ್ರ ದೇಶದಲ್ಲಿ ಪ್ರಜೆಗಳ ಹಕ್ಕನ್ನು ಹಾಗೂ ಬದುಕನ್ನು ರಕ್ಷಿಸಬೇಕಾದದ್ದು, ಒಂದು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರದ ಮೂಲಭೂತ ಕರ್ತವ್ಯ. ಆದರೆ ಪ್ರಧಾನಮಂತ್ರಿಗಳ ನಿರ್ಧಾರ ಈ ಮೂಲಭೂತ ಕರ್ತವ್ಯದ ಅಣಕವಾಗಿದೆ.
ಭಾರತದಲ್ಲಿ ಕಪ್ಪು ಹಣ ನಿಜಕ್ಕೂ ಕಾಳಜಿಯ ವಿಷಯ. ಅಕ್ರಮ ಮೂಲಗಳಿಂದ ಹಣ ಸಂಪಾದಿಸುವವರು ತಮ್ಮ ವರಮಾನವನ್ನು ವರ್ಷಗಳಿಂದ ಶೇಕರಿಸಿಟ್ಟಿರುವ ಸಂಪತ್ತೇ ಕಪ್ಪು ಹಣ. ಇವರು ಬಡವರಂತಲ್ಲ. ಇವರಿಗೆ ಹಣವನ್ನು ಶೇಖರಿಸಿಡಲು ಭೂಮಿ, ಚಿನ್ನ, ವಿದೇಶಿ ವಿನಿಮಯ ಹೀಗೆ ಹಲವಾರು ದಾರಿಗಳಿರುತ್ತವೆ. ಕಳೆದ ಹಲವು ದಶಕಗಳಲ್ಲಿ ಹಲವು ಸರ್ಕಾರಗಳು, ವರಮಾನ ತೆರಿಗೆ ಇಲಾಖೆ, ಕಾಯ್ದೆ ಜಾರಿಗೊಳಿಸುವ ಅಧಿಕಾರಿಗಳು ಸ್ವಯಂ ಘೋಷಣೆಯಂತಹ ಯೋಜನೆಗಳಿಂದ ಈ ಅಕ್ರಮ ಸಂಪತ್ತನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಹಲವಾರು ಪ್ರಯತ್ನಗಳನ್ನು ಮಾಡಿವೆ. ಆದರೆ ಹಾಗೆ ಮಾಡುವಾಗ ಅಂತಹ ಅಕ್ರಮ ಸಂಪತ್ತನ್ನು ಇಟ್ಟುಕೊಂಡಿದ್ದಾರೆ ಅನ್ನುವ ಅನುಮಾನವಿದ್ದವರ ಮೇಲೆ ಮಾತ್ರ ದಾಳಿನಡೆಸಲಾಗುತ್ತಿತ್ತು. ಸಾರಾಸಗಟಾಗಿ ಎಲ್ಲಾ ಪ್ರಜೆಗಳ ಮೇಲೆ ದಾಳಿ ನಡೆಯುತ್ತಿರಲಿಲ್ಲ. ಈ ಹಿಂದೆ ನಡೆದಿದ್ದ ಇಂತಹ ಕ್ರಮಗಳನ್ನು ಗಮನಿಸಿದಾಗ ಅಕ್ರಮ ಸಂಪತ್ತಿನ ಬಹುಪಾಲನ್ನು ಅವರು ಹಣದ ರೂಪದಲ್ಲಿ ಸಂಗ್ರಹಿಸುತ್ತಿರಲಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಎಲ್ಲಾ ಕಪ್ಪು ಹಣವೂ ನಗದಿನ ರೂಪದಲ್ಲಿರುವುದಿಲ್ಲ. ಅದರ ಒಂದು ಸಣ್ಣ ಭಾಗವಷ್ಟನ್ನೇ ಹಣದ ರೂಪದಲ್ಲಿ ಇಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಪ್ರಧಾನಮಂತ್ರಿಗಳ ನಿರ್ಧಾರದಿಂದ ನಿಜವಾಗಿ ಮತ್ತು ಗಂಭೀರವಾಗಿ ತೊಂದರೆಯಾಗಿರುವುದು ತಮ್ಮ ಸಂಪಾದನೆಯನ್ನು ಹಣದಲ್ಲಿ ಪಡೆಯುತ್ತಿರುವ ನಿಷ್ಠಾವಂತ ಭಾರತೀಯರಿಗೇ. ನಿಜವಾದ ಕಪ್ಪುಹಣ ಕೂಡಿಟ್ಟವನಿಗೆ ಒಂದು ತರಚುಗಾಯವೂ ಆಗಿಲ್ಲ. ಅದಕ್ಕಿಂತ ಸರ್ಕಾರ ೨೦೦೦ರೂಪಾಯಿಯನ್ನು ಚಲಾವಣೆಗೆ ತರುವುದರ ಮೂಲಕ ಅಕ್ರಮವಾಗಿ ಹಣವನ್ನು ಶೇಖರಿಸಿಡುವ ಪ್ರಕ್ರಿಯೆಯನ್ನೇ ಸಲೀಸು ಮಾಡಿದೆ. ಈ ಕೆಟ್ಟ ಕ್ರಮ ಒಟ್ಟಾರೆಯಾಗಿ ಕಪ್ಪುಹಣದ ನಿರ್ಮೂಲನವನ್ನೂ ಮಾಡುತ್ತಿಲ್ಲ. ಅದರ ಹರಿವನ್ನು ತಪ್ಪಿಸುತ್ತಲೂ ಇಲ್ಲ.
ಬಿಲಯನ್‌ಗಟ್ಟಲೆ ಹಳೆಯ ನೋಟಿನ ಸ್ಥಳದಲ್ಲಿ ಹೊಸ ನೋಟುಗಳನ್ನು ತರುವುದು ತ್ರಾಸದಾಯಕ ಕೆಲಸ ಅನ್ನುವುದರಲ್ಲಿ ಅನುಮಾನವಿಲ್ಲ. ಹೆಚ್ಚಿನ ದೇಶಗಳಿಗೆ ಇದು ದೊಡ್ಡ ಸವಾಲು. ಭಾರತದಂತಹ ವೈವಿಧ್ಯಮಯ ದೇಶದಲ್ಲಂತೂ ಅದು ದುಪ್ಟಟ್ಟು ಕಷ್ಟ. ಅದರಿಂದಾಗಿಯೇ ಹೆಚ್ಚಿನ ದೇಶಗಳಲ್ಲಿ ನೋಟು ಬದಲಾವಣೆಯನ್ನು ಒಂದು ನಿರ್ದಿಷ್ಟ ಕಾಲಾವಧಿಯಲ್ಲಿ ಮಾಡಲಾಗುತ್ತದೆ. ದಿಢೀರನೆ ರಾತ್ರೋರಾತ್ರಿ ಮಾಡುವುದಿಲ್ಲ. ತಮ್ಮ ಮೂಲಭೂತ ಬದುಕಿಗೆ ಅನಿವಾರ್ಯವಾದ ಒಂದಿಷ್ಟು ಹಣವನ್ನು ಪಡೆಯಲು ಲಕ್ಷಾಂತರ ಬಡ ಭಾರತೀಯರು ಮೈಲುದ್ದದ ಕ್ಯೂನಲ್ಲಿ ನಿಲ್ಲುವ ಸುದ್ಧಿ ನಿಜಕ್ಕೂ ಎದೆ ಕರಗಿಸುವಂತಹದ್ದು. ಯುದ್ಧದ ಸಮಯದಲ್ಲಿ ಪಡಿತರ ಆಹಾರವನ್ನು ಪಡೆಯಲು ದೊಡ್ಡ ಕ್ಯೂನಲ್ಲಿ ನಿಂತ ಅನುಭವವಿರುವ ನನಗೆ ಮುಂದೊಂದು ದಿನ ನಮ್ಮ ದೇಶದ ಹೆಂಗಸರು ಗಂಡಸರು ರೇಷನ್ನಿನಲ್ಲಿ ವಿತರಿಸುತ್ತಿರುವ ಹಣಕ್ಕಾಗಿ ಕ್ಯೂನಲ್ಲಿ ನಿಲ್ಲುವ ಪರಿಸ್ಥಿತಿ ಬರುತ್ತದೆ ಎಂದು ನಾನು ಊಹಿಸಿಯೇ ಇರಲಿಲ್ಲ. ಈ ಎಲ್ಲಾ ತೊಂದರೆಯನ್ನು ಕೇವಲ ಒಂದು ಆತುರದ ನಿರ್ಧಾರಕ್ಕಾಗಿ ಅನುಭವಿಸಬೇಕಾಗಿ ಬಂದಿದೆ ಅನ್ನುವುದು ಇನ್ನೂ ಹೆಚ್ಚಿನ ದುಃಖದ ವಿಷಯ.
ಸರ್ಕಾರದ ಈ ನಿರ್ಧಾರದಿಂದ ಆಗುವ ಬೃಹತ್ ಅರ್ಥಶಾಸ್ತ್ರೀಯ ಪರಿಣಾಮ ಹಾನಿಕಾರಕವಾದದ್ದು. ಭಾರತದ ವಾಣಿಜ್ಯ ಹಲವಾರು ವರ್ಷಗಳಲ್ಲೇ ಈಗ ತುಂಬಾ ಕನಿಷ್ಟ ಮಟ್ಟದಲ್ಲಿದೆ. ಕೈಗಾರಿಕಾ ಉತ್ಪಾದನೆ ಕುಸಿಯುತ್ತಿದೆ, ಉದ್ಯೋಗ ನಿರ್ಮಾಣ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಇಂತಹ ಸಮಯದಲ್ಲಿ ಈ ನಿರ್ಧಾರ ಆರ್ಥಿಕತೆಗೆ ಧನಾತ್ಮಕವಾಗಿ ಹೊಡೆತಕೊಡುತ್ತದೆ. ಭಾರತದ ನಗದು ಹಾಗೂ ನಿವ್ವಳ ರಾಷ್ಟ್ರೀಯ ಉತ್ಪನ್ನದ ನಡುವಿನ ಅನುಪಾತ ಬೇರೆ ದೇಶಗಳಿಗೆ ಹೋಲಿಸಿದರೆ ಹೆಚ್ಚಿದೆ ಅನ್ನುವುದು ನಿಜ. ಅದರಿಂದ ಭಾರತೀಯ ಆರ್ಥಿಕತೆ ಹೆಚ್ಚಾಗಿ ಹಣವನ್ನು ಅವಲಂಬಿಸಿದೆ ಎನ್ನುವುದು ಇನ್ನೂ ಸ್ಪಷ್ಟವಾಗುತ್ತದೆ. ಒಂದು ದೇಶದ ಬೆಳವಣಿಗೆಯ ದೃಷ್ಟಿಯಿಂದ ಅನುಭೋಗಿಯ ವಿಶ್ವಾಸ ಕೂಡ ತುಂಬಾ ಮುಖ್ಯವಾಗುತ್ತದೆ. ದಿಢೀರನೆ ರಾತ್ರೋರಾತ್ರಿ ತೆಗೆದುಕೊಂಡ ಈ ನಿರ್ಧಾರ ಲಕ್ಷಾಂತರ ಭಾರತೀಯ ಅನುಭೋಗಿಗಳ ವಿಶ್ವಾಸವನ್ನು ಕೊಂದಿದೆ. ಇದು ಹಲವು ರೀತಿಯಲ್ಲಿ ಆರ್ಥಿಕವಾಗಿ ಪರಿಣಾಮ ಬೀರುತ್ತದೆ. ಬಹುಸಂಖ್ಯಾತ ಭಾರತೀಯರು ನ್ಯಾಯವಾಗಿ ಸಂಪಾದಿಸಿದ್ದ ಹಣವನ್ನು ರಾತ್ರೋರಾತ್ರಿ ಬರಿದು ಮಾಡಲಾಗಿದೆ. ಅಷ್ಟೇ ಅಲ್ಲ, ಜೊತೆಗೆ ಹೊಸ ನೋಟನ್ನು ಪಡೆಯಲು ಕ್ಯೂ ನಿಲ್ಲಬೇಕಾದ ಕಷ್ಟ ಬೇರೆ. ಇದು ಮಾಡಿರುವ ಗಾಯ ಸಾಕಷ್ಟು ಆಳವಾದದ್ದು. ಮಾಯುವುದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ. ಇದು ನಿವ್ವಳ ರಾಷ್ಟ್ರೀಯ ಉತ್ಪನ್ನ ಹಾಗೂ ಉದ್ಯೋಗ ಸೃಷ್ಟಿಯನ್ನು ಅಲೆಅಲೆಯಾಗಿ ಕಾಡುತ್ತದೆ. ಮುಂದಿನ ತಿಂಗಳುಗಳಲ್ಲಿ ನಾವು ಒಂದು ದೇಶವಾಗಿ ಕಷ್ಟದ ಕಾಲವನ್ನು ಎದುರಿಸುವುದಕ್ಕೆ ತಯಾರಾಗಿರಬೇಕೆಂದು ವಿನಯದಿಂದ ಕೇಳಿಕೊಳ್ಳುತ್ತೇನೆ.
ಅನುದ್ದೇಶಿತ ಪರಿಣಾಮಗಳು
ಕಪ್ಪು ಹಣ ನಮ್ಮ ಸಮಾಜಕ್ಕೆ ಒಂದು ಪಿಡುಗು. ಅದನ್ನು ನಿರ್ಮೂಲನ ಮಾಡಬೇಕು. ಆದರೆ ಅದನ್ನು ಮಾಡುವಾಗ ನಾವು ಉಳಿದ ಲಕ್ಷಾಂತರ ನಿಷ್ಠಾವಂತ ಪ್ರಜೆಗಳ ಮೇಲೆ ಅದು ಮಾಡಬಹುದಾದ ಪರಿಣಾಮದ ಅರಿವು ನಮಗಿರಬೇಕು. ನಮ್ಮಲ್ಲಿ ಎಲ್ಲದಕ್ಕೂ ಪರಿಹಾರವಿದೆ ಹಾಗೂ ಹಿಂದಿನ ಸರ್ಕಾರಗಳು ಕಪ್ಪುಹಣವನ್ನು ತಡೆಯುವಲ್ಲಿ ಆಸಕ್ತಿ ತೋರಲಿಲ್ಲ ಅಂತ ನಂಬಿಕೊಳ್ಳುವುದಕ್ಕೆ ಆಸೆಯಾಗಬಹುದು ಹಾಗೂ ಅದು ನೆಮ್ಮದಿಯನ್ನು ಕೊಡಬಹುದು. ಅದು ಹಾಗಲ್ಲ. ದೇಶದ ನಾಯಕರು ಹಾಗೂ ಸರ್ಕಾರಗಳು ದೇಶದ ಬಲಹೀನರ ಹಿತವನ್ನು ನೋಡಿಕೊಳ್ಳಬೇಕು. ಆ ಜವಾಬ್ದಾರಿಯಿಂದ ನುಣಚಿಕೊಳ್ಳುವ ಪ್ರಶ್ನೆಯೇ ಇಲ್ಲ. ನಾವು ತೆಗೆದುಕೊಳ್ಳುವ ಎಷ್ಟೋ ನಿರ್ಧಾರಗಳಿಂದ ಅನುದ್ದೇಶಿತ ಪರಿಣಾಮಗಳೂ ಆಗಬಹುದು. ಈ ಅಪಾಯ ಇದ್ದದ್ದೇ. ಇಂತಹ ಅಪಾಯಗಳನ್ನು ಹಾಗೂ ಅಂತಹ ನಿರ್ಧಾರಗಳಿಂದ ಆಗಬಹುದಾದ ಅನಾನುಕೂಲಗಳನ್ನು ಎಚ್ಚರಿಕೆಯಿಂದ ಅವಲೋಕಿಸಬೇಕು. ಕಪ್ಪು ಹಣದ ವಿರುದ್ದ ಸಮರ ಸಾರುವುದು ಆಕರ್ಷಣೀಯವಾಗಿ ತೋರಬಹುದು. ಆದರೆ ನಮ್ಮ ನಿರ್ಧಾರದಿಂದ ಒಬ್ಬನೇ ಒಬ್ಬ ನಿಷ್ಠಾವಂತ ಭಾರತೀಯನ ಜೀವಕ್ಕೂ ಹಾನಿಯಾಗಬಾರದು ಎನ್ನುವ ಹೊಣೆಗಾರಿಕೆಯೂ ನಮಗಿರಬೇಕು.

Recent Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.