ಭಿನ್ನಮತದ ಸ್ವಭಾವ, ಸುಂದರ್ ಸರುಕ್ಕಾಯ್

 In SUTTA MUTTA

 

ಪರಸ್ಪರ ಭಿನ್ನಮತ ತೋರುವುದು ಮನುಷ್ಯನ ಮೂಲಭೂತ ಸ್ವಭಾವ. ಪ್ರತಿಯೊಬ್ಬರೂ ಒಂದಲ್ಲ ಒಂದು ವಿಷಯಕ್ಕೆ ಅಸಮ್ಮತಿ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಹಾಗೆ ಯಾವಾಗಲೂ ಯಾವುದಕ್ಕೂ ಅಸಮ್ಮತಿಯನ್ನೇ ತೋರದ ಮನುಷ್ಯ ಇರುವುದಕ್ಕೆ ಸಾಧ್ಯವೇ ಇಲ್ಲ. ಒಂದು ಮಗು ’ನಾನು’ ಮತ್ತು ’ನನ್ನದು’ ಅನ್ನುವ ಅರಿವನ್ನು-ತನ್ನತನದ ಪ್ರಜ್ಞೆಯನ್ನು ಅರ್ಥಪೂರ್ಣವಾಗಿ ಕಂಡುಕೊಳ್ಳುವುದು ಅದು ’ಇಲ್ಲ’ ಅಂತ ಹೇಳಲು ಪ್ರಾರಂಭಿಸಿದಾಗಲೇ. ಅದಿಮ ಹಂತದಲ್ಲಿ, ನಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸಿದಾಗಲೇ ನಾವು ವ್ಯಕ್ತಿಗಳಾಗುವುದು. ಅಪ್ಪ ಮಕ್ಕಳ ನಡುವೆ ಭಿನ್ನಾಭಿಪ್ರಾಯ ಇಲ್ಲದ ಕುಟುಂಬಗಳೇ ಇಲ್ಲ. ಈ ಭಿನ್ನಾಭಿಪ್ರಾಯವನ್ನು ನಿರ್ವಹಿಸುವ ಕ್ರಮವನ್ನು ಕಲಿತಾಗಲೇ ಕುಟುಂಬದಲ್ಲಿ ಸಾಮರಸ್ಯದ ಬದುಕು ಸಾಧ್ಯ. ಭಿನ್ನಾಭಿಪ್ರಾಯಗಳನ್ನು ಅಧಿಕಾರಯುತವಾಗಿ ಹತ್ತಿಕ್ಕುವ ಕುಟುಂಬಗಳಲ್ಲಿ ಸಾಮರಸ್ಯ ಸಾಧ್ಯವಿಲ್ಲ.
ಅದೂ ಒಂದು ಅಸ್ತಿತ್ವದ ಕ್ರಮ
ಮನೆಯಲ್ಲಿ, ನಮ್ಮ ಸ್ನೇಹಿತರೊಂದಿಗೆ ಮತ್ತು ನಾವು ಕೆಲಸ ಮಾಡುವ ಕಡೆ ನಮ್ಮ ಸಹದ್ಯೋಗಿಗಳೊಂದಿಗೆ ನಮಗೆ ಭಿನ್ನಾಭಿಪ್ರ್ರಾಯವಿರುತ್ತದೆ. ಈ ರೀತಿಯ ಭಿನ್ನಾಭಿಪ್ರಾಯಗಳ ಮೂಲಕವೇ ಅವರೊಂದಿಗೆ ನಮ್ಮ ಸಂಬಂಧ ಬೆಳೆಯುವುದು. ಸ್ನೇಹಿತರೊಂದಿಗಿನ ನಮ್ಮ ಸಂಬಂಧ ನಿಂತಿರುವುದೇ, ಉಳಿದ ವಿಷಯಗಳ ಜೊತೆಗೆ, ನಾವು ನಮ್ಮ ಭಿನ್ನಾಭಿಪ್ರಾಯಗಳ ನಡುವೆ ಹೇಗೆ ಬದುಕುವುದಕ್ಕೆ ಕಲಿತಿದ್ದೇವೆ ಎಂಬುದರ ಮೇಲೆ. ಗಂಡ ಹೆಂಡಿರ ಸಂಬಂಧದಲ್ಲಿ ಭಿನ್ನಾಭಿಪ್ರಾಯದ ಕ್ಷಣಗಳು ತುಂಬಿರುತ್ತವೆ. ನಮ್ಮ ಸ್ನೇಹಿತರು ಹಾಗೂ ಸಂಬಂಧಿಗಳಲ್ಲಿ ಎಲ್ಲರೂ ನಮ್ಮನ್ನು ಯಾವಾಗಲೂ ಒಪ್ಪಿಕೊಳ್ಳುವರೇ ಆಗಿಬಿಟ್ಟರೆ, ನಮಗೆ ಸ್ನೇಹಿತರು ಹಾಗೂ ಸಂಬಂಧಿಕರೇ ಇರುವುದಿಲ್ಲ. ನಮಗೆ ಸಾಮಾಜಿಕ ಅಸ್ತಿತ್ವ ಸಾಧ್ಯವಾಗಬೇಕಾದರೆ ಮೊಟ್ಟ ಮೊದಲಿಗೆ ನಮಗೆ ಬೇರೆಯವರ ಜೊತೆ ಬದುಕುವುದಕ್ಕೆ ಸಾಧ್ಯವಾಗಬೇಕು. ಇನ್ನೊಬ್ಬರ ಜೊತೆ ಬದುಕುವುದು ಅಂದರೆ ಅವರು ನಮ್ಮನ್ನು ಒಪ್ಪದಿದ್ದಾಗಲೂ ಅವರ ಜೊತೆ ಬದುಕುವುದನ್ನು ಕಲಿಯುವುದು.
ಭಿನ್ನಮತ ಅನ್ನುವುದು ನಮ್ಮಲ್ಲಿ ಎಷ್ಟೊಂದು ಬೆರತುಹೋಗಿದೆಯೆಂದರೆ, ನಮ್ಮನ್ನು ವಿರೋಧಿಸುವುದಕ್ಕೆ ಬೇರೆ ಯಾರೂ ಬೇಕಾಗಿಲ್ಲ. ನಮ್ಮ ಜೊತೆಗೇ ನಮಗೆ ಸದಾ ಭಿನ್ನಮತವಿರುತ್ತದೆ. ಹಲವಾರು ’ನಾನು’ಗಳು ಸೇರಿ ನಾವು ಆಗಿದ್ದೇವೇನೋ ಅನ್ನುವ ರೀತಿಯಲ್ಲಿ ಯಾವಾಗಲೂ ನಾವು ನಮ್ಮೊಂದಿಗೇ ವಾದಿಸುತ್ತಿರುತ್ತೇವೆ. ನಾವು ಯೋಚಿಸುವಾಗ ನಮ್ಮೊಳಗಿನ ಹಲವಾರು ’ನಾನು’ಗಳೊಂದಿಗೆ ನಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸುತ್ತಿರುತ್ತೇವೆ. ನಾವು ನಮ್ಮ ಮನಸ್ಸಿನೊಳಗಿನ ಈ ವಿರೋಧವನ್ನು ನಿಗ್ರಹಿಸಿಬಿಟ್ಟರೆ, ನಮ್ಮ ಆಲೋಚನೆಯೇ ನಿಂತುಹೋಗುತ್ತದೆ. ನಮ್ಮೊಳಗಿನ ಹಲವು ’ನಾನು’ಗಳ ನಡುವೆ ನಡೆಯುವ ಈ ಭಿನ್ನಮತದ ಸಂವಾದದಿಂದಾಗಿಯೇ ನಮ್ಮ ಹಲವಾರು ಅರ್ಥಪೂರ್ಣ ಕ್ರಿಯೆಗಳು ನಡೆಯುತ್ತಿರುವುದು.
ಸಾಮಾಜಿಕ ಪ್ರತಿರೋಧ
ಹಾಗಾಗಿ ಪ್ರತಿರೋಧ ಅನ್ನುವುದು ಅಸ್ತಿತ್ವದ ಒಂದು ನಿಯಮ. ಪ್ರತಿರೋಧ ಸಮಸ್ಯೆಯಲ್ಲ, ನಿಜವಾದ ಸಮಸ್ಯೆ ಅಂದರೆ ಮೌನವಾದ ಸಮ್ಮತಿ. ನಾವು ಸಾಮೂಹಿಕವಾಗಿ ಸಮ್ಮತಿಸಿದಾಗ, ವ್ಯಕ್ತ ಅಭಿಪ್ರಾಯಗಳನ್ನು, ಗತಿಸಿದ ಕ್ರಿಯೆಗಳನ್ನು ಮೌನವಾಗಿ ಸಮ್ಮತಿಸುತ್ತಿರುತ್ತೇವೆ. ಇದು ನಿಜವಾಗಿ ಮನುಷ್ಯನ ಅಸ್ತಿತ್ವವಾದೀ ಲಕ್ಷಣವಲ್ಲ, ’ದಾಸ್ಯದಲ್ಲಿರುವ ಮನಸ್ಸಿನ’ ಲಕ್ಷಣ. ಸಮ್ಮತಿ ಅನ್ನುವುದು ಸಮಾಜ ಒಂದಾಗುವ ಕ್ರಮ ಮತ್ತು ಅದು ಸ್ಥಿರ ಸಮಾಜಕ್ಕೆ ಅವಶ್ಯಕ ಅಂತ ಕೆಲವರು ಹೇಳಬಹುದು. ಅದು ಪೂರ್ಣ ತಪ್ಪು. ಒಂದು ಮಗು ಅಸಮ್ಮತಿಯನ್ನು ಸೂಚಿಸುವುದರ ಮೂಲಕ ತನ್ನತನದ ಪ್ರಜ್ಞೆಯನ್ನು ಕಂಡುಕೊಳ್ಳುವ ಹಾಗೆ, ಒಂದು ಸಮಾಜವೂ ಭಿನ್ನಮತ ವ್ಯಕ್ತಪಡಿಸುವುದನ್ನು ಕಲಿಯುವುದರ ಮೂಲಕವೇ ತನ್ನ ಅಸ್ತಿತ್ವವನ್ನು ಕಂಡುಕೊಳ್ಳುತ್ತದೆ. ನಮ್ಮ ಸಮಾಜಕ್ಕೆ, ದೇಶಕ್ಕೆ ಪ್ರಬಲವಾದ ಅಸ್ತಿತ್ವ ಸಾಧ್ಯವಾಗಬೇಕಾದರೆ ಅಲ್ಲಿ ಬೇರೆ ರೀತಿಯ ಭಿನ್ನಮತ ಇರಬೇಕು.
ಪ್ರತಿರೋಧವಿದ್ದಾಗಲೇ ಸಾಮಾಜಿಕ ಆವಶ್ಯಕತೆಯನ್ನು ರೂಪಿಸುವ ಕ್ರಿಯೆ ಸಾಧ್ಯವಾಗುವುದು. ಎಲ್ಲವನ್ನೂ ಎಲ್ಲರೂ ಯಾವಾಗಲೂ ಒಪ್ಪಿಕೊಳ್ಳುವ ಜನರೇ ಒಂದು ಗುಂಪಿನಲ್ಲಿದ್ದರೆ ಅದು ನಿಜವಾಗಿ ಒಂದು ಸಮಾಜವಾಗುವುದಕ್ಕೆ ಸಾಧ್ಯವೇ ಇಲ್ಲ. ಅದು ಕೆಲವರೇ ಆಡಳಿತ ನಡೆಸುವ ಆಲಿಗಾರ್ಕಿಯಷ್ಟೇ ಆಗಬಲ್ಲದು. ಭಿನ್ನಾಭಿಪ್ರಾಯ ಹಾಗೂ ಪ್ರತಿರೋಧದ ಮೂಲಕವಷ್ಟೇ ಒಂದು ಗುಂಪು ಸಮಾಜವಾಗಬಲ್ಲದು. ಒಂದು ಸಭ್ಯ ಸಮಾಜವನ್ನು ನಿರ್ಮಿಸುವ ಪ್ರಕ್ರಿಯೆಯಲ್ಲಿ ಎಲ್ಲವನ್ನು ಒಟ್ಟಿಗೆ ಹಿಡಿದಿದುವುದಕ್ಕೆ ಭಿನ್ನಮತಕ್ಕೆ ಮಾತ್ರ ಸಾಧ್ಯ ಅನ್ನುವುದು ನಿಜವಾದ ವಿರೋಧಾಭಾಸ.
ಸಮಾಜದ ಸದಸ್ಯರು ಯಾವಾಗಲೂ ಒಂದಲ್ಲ ಒಂದು ವಿಷಯಕ್ಕೆ ಪರಸ್ಪರ ಅಸಮ್ಮತಿಯನ್ನು ತೋರಿಸುತ್ತಲೇ ಇರುತ್ತಾರೆ. ಹಾಗಾಗಿ ಒಂದು ಸಮಾಜ ಪರಿಪಕ್ವ ಸಮಾಜ ಆಗಬೇಕಾದರೆ ಅದಕ್ಕೆ ಪ್ರತಿರೋಧವನ್ನು ನಿರ್ವಹಿಸುವ ಸಾಮರ್ಥ್ಯ ಇರಬೇಕು. ಈಗ ನಮ್ಮ ಮುಂದೆ ಇರುವ ವ್ಯವಸ್ಥೆಗಳಲ್ಲಿ, ಪ್ರತಿರೋಧವನ್ನು ನಿರ್ವಹಿಸುವುದಕ್ಕೆ ತೀರಾ ಅತ್ಯುತ್ತಮ ಮಾದರಿಯೆಂದರೆ ಪ್ರಜಾಸತ್ತಾತ್ಮಕ ಸಮಾಜ. ಅದರಲ್ಲಿ ಪ್ರತಿರೋಧ ವ್ಯಕ್ತಪಡಿಸುವವನಿಗೆ ಆಗುವ ತೊಂದರೆ ಕನಿಷ್ಟ ಪ್ರಮಾಣದಾಗಿರುತ್ತದೆ. ಪ್ರಜಾಸತ್ತೆಯ ನಿಜವಾದ ಕರ್ತವ್ಯವೇ ಅದು. ಚುನಾವಣೆಗಳು ಹಾಗೂ ಮತದಾರರು ಅದಕ್ಕೆ ಕಾರಣವಾಗುತ್ತದೆ. ಪ್ರಜಾಸತ್ತೆಯ ಅಂತಃಸತ್ವ ನಮಗೆ ನಿಜವಾಗಿ ಕಾಣುವುದೇ ಅದು ಭಿನ್ನಮತವನ್ನು ನಿರ್ವಹಿಸುವುದಕ್ಕೆ ಬಳಸುವ ಕ್ರಮದಲ್ಲಿ. ಅದು ಭಿನ್ನಮತವನ್ನು ಚರ್ಚೆ ಹಾಗೂ ಸಂವಾದಗಳು ಹಾಗೂ ನಿರ್ದಿಷ್ಟ ನೈತಿಕ ಕ್ರಮಗಳನ್ನು ಅನುಸರಿಸಿ ನಿಭಾಯಿಸಬೇಕು.
ಒಂದು ಪ್ರಜಾಸತ್ತಾತ್ಮಕ ಸಮಾಜ ವೈಯಕ್ತಿಕ ಭಿನ್ನಮತಗಳನ್ನು ಸಾಮಾಜಿಕ ಆಚರಣೆಗಳಾಗಿ ಪರಿವರ್ತಿಸುವುದಕ್ಕೆ ಪ್ರಯತ್ನಿಸುತ್ತದೆ. ಆ ಮೂಲಕ ಅದು ಭಿನ್ನಮತವನ್ನು ನಿರ್ವಹಿಸುತ್ತದೆ. ಶೈಕ್ಷಣಿಕ ಹಾಗೂ ಸಂಶೋಧನೆ ಈ ಎರಡು ಪ್ರಮುಖ ಚಟುವಟಿಕೆಗಳಲ್ಲಿ ಭಿನ್ನಮತ ತುಂಬಾ ಮುಖ್ಯವಾಗುತ್ತದೆ. ಹಳೆಯದನ್ನು ಬದಲಿಸುವ ಮೂಲಕವೇ ಮುಂದಿನ ಸಮಾಜ ಉಳಿದುಕೊಳ್ಳುವುದಕ್ಕೆ ಸಾಧ್ಯ. ಹೊಸ ಜ್ಞಾನ ಹಾಗೂ ಜಗತ್ತನ್ನು ಗ್ರಹಿಸಿಕೊಳ್ಳುವ ಹೊಸ ಕ್ರಮಗಳು-ಅದು ಒಳ್ಳೆಯದಿರಲಿ, ಕೆಟ್ಟದಿರಲಿ- ಪ್ರತಿ ಸಮಾಜದ ಭಾಗವಾಗಿರುತ್ತವೆ.
ಹೊಸ ಜ್ಞಾನ, ಹೊಸ ಗ್ರಹಿಕೆಗಳು ಹೇಗೆ ಸೃಷ್ಟಿಯಾಗುತ್ತವೆ? ಹೆಚ್ಚಿನ ಹೊಸ ವಿಚಾರಗಳು ಹಿಂದಿನ ಸ್ಥಾಪಿತ ಕ್ರಮಗಳು ಹಾಗೂ ಸತ್ಯವನ್ನು ಪ್ರಶ್ನಿಸುವ ಮೂಲಕವೇ ಹುಟ್ಟುಕೊಂಡಿರುವುದು. ವಿಜ್ಞಾನ ಅದರ ವಿಶಾಲ ಅರ್ಥದಲ್ಲಿ ಭಿನ್ನಮತವಿಲ್ಲದೇ ಸಾಧ್ಯವೇ ಇಲ್ಲ. ಇನ್ನೊಬ್ಬರ ನಿಲುವಿನಲ್ಲಿನ ದೋಷಗಳನ್ನು ಕಂಡುಕೊಳ್ಳುವ ಮೂಲಕವೇ ಹೊಸ ವಿಜ್ಞಾನ ಸೃಷ್ಟಿಯಾಗಿರುವುದು. ಯಾವುದೇ ಇಬ್ಬರೂ ದಾರ್ಶನಿಕರ ನಡುವೆ ಒಂದು ಅಂಶವನ್ನು ಕುರಿತಂತೆ ಸಹಮತ ಸಾಧ್ಯವಿಲ್ಲ. ಯಾವುದೇ ಇಬ್ಬರೂ ಸಮಾಜ ವಿಜ್ಞಾನಿಗಳು ಪರಸ್ಪರರ ಚಿಂತನೆಗಳನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುವುದಿಲ್ಲ. ಕಲಾವಿದರು ತನ್ನ ಸ್ನೇಹಿತರು, ಸಮಕಾಲೀನರು ಹಾಕಿಕೊಂಡು ಗಡಿಗಳನ್ನು ನಿರಂತರವಾಗಿ ಒಡೆಯುತ್ತಲೇ ಇರುತ್ತಾರೆ. ಬುದ್ಧ ಹಾಗೂ ಮಹಾವೀರ ಮೊದಲಿಗೆ ಭಿನ್ನಮತೀಯರು, ನಂತರ ದಾರ್ಶನಿಕರು. ಭಿನ್ನಮತ ಹಾಗೂ ಅವುಗಳನ್ನು ನಿರ್ವಹಿಸುವ ಕ್ರಮವನ್ನು ಕುರಿತ ಅಸಂಖ್ಯಾತ ಕಥೆಗಳಿಂದ ರಾಮಾಯಣ ಮತ್ತು ಮಹಾಭಾರತ ತುಂಬಿಹೋಗಿದೆ.
ಹಾಗಾಗಿ ಒಬ್ಬ ಶೈಕ್ಷಣಿಕ ಭಿನ್ನಮತ ವ್ಯಕ್ತಪಡಿಸಿದರೆ, ಅದು ಅವನ ವೃತ್ತಿ ಬದುಕಿನ ನಿರೀಕ್ಷೆ! ಭಿನ್ನಮತ ಅನ್ನುವುದು ಕೇವಲ ಟೀಕೆಗೆ ಸಂಬಂಧಿಸಿದ್ದಲ್ಲ. ಅದು ಹೊಸ ದೃಷ್ಟಿಕೋನವನ್ನು ತೋರುವುದಕ್ಕೂ ಅವಶ್ಯಕ. ಒಬ್ಬ ವಿಜ್ಞಾನಿ ಭಿನ್ನಮತ ವ್ಯಕ್ತಪಡಿಸಿದ ಅನ್ನುವ ಕಾರಣಕ್ಕೆ ವೈಜ್ಞಾನಿಕ ಸಮುದಾಯ ಅವನನ್ನು ಬಂಧಿಸುವುದಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಭಿನ್ನಮತದ ಹೆಸರಿನಲ್ಲಿ ಸಾಮಾಜ ವಿಜ್ಞಾನಿಗಳು ಹಾಗೂ ಕಲಾವಿದರ ಮೇಲೆ ಹೆಚ್ಚೆಚ್ಚು ದಾಳಿಮಾಡಲಾಗುತ್ತಿದೆ. ಇಂದು ಇಂದು ಯಾವ ಮಟ್ಟಕ್ಕೆ ಬೆಳೆದಿದೆಯೆಂದರೆ, ವಿಭಾಗದ ಸದಸ್ಯರು ಕಾನೂನುಬಾಹಿರ ಗುತ್ತಿಗೆ ಕ್ರಮವನ್ನು ವಿರೋಧಿಸಿದರೆ ಅವರು ಕಿರುಕುಳ ಹಾಗೂ ಅಮಾನತ್ತನ್ನು ಅನುಭವಿಸಬೇಕಾಗುತ್ತದೆ.
ಭಿನ್ನಮತ ಬೇಕಿರುವುದು ಕೇವಲ ಪ್ರಜಾಸತ್ತೆಗೆ ಮಾತ್ರವಲ್ಲ. ಮಾನವ ಕುಲ ಬದುಕಿ ಉಳಿಯುವುದಕ್ಕೂ ಅದು ಅವಶ್ಯಕ. ಭಿನ್ನಮತವನ್ನು ನಿರ್ಮೂಲನ ಮಾಡಲು ಹೊರಟಿರುವ ಯಾವುದೇ ಸಮಾಜವಾದರೂ ಕೊನೆಗೆ ತನ್ನನ್ನೇ ನಿರ್ಮೂಲನ ಮಾಡಿಕೊಳ್ಳುತ್ತದೆ. ನಾವು ನಾಜಿ ಜರ್ಮನಿಯ ಹಾಗೂ ಸ್ಟಾಲಿನಿನ್ನನ ರಷ್ಯಾದ ಉದಾಹರಣೆಗಳನ್ನು ಮರೆಯಬಾರದು. ಭಿನ್ನಮತವನ್ನು ಗೌರವದಿಂದ ಹಾಗೂ ನೈತಿಕವಾಗಿ ನಿರ್ವಹಿಸವ ಆಚರಣೆಗಳಿಂದ ಮೂಲಕ ಮಾತ್ರ ಒಂದು ಬಾಳಿಕೆಯ, ಸಾಮರಸ್ಯದ ಸಮಾಜವನ್ನು ನಿರ್ಮಿಸುವುದಕ್ಕೆ ಸಾಧ್ಯ.
ಭಿನ್ನಮತದ ನೈತಿಕತೆ
ಭಿನ್ನಮತ ಪ್ರಜಾಸತ್ತೆಗೆ ಒಳ್ಳೆಯದು ಅನ್ನುವ ಕಾರಣಕ್ಕೆ ಮಾತ್ರ ಸರಿ ಅಂತ ಅಲ್ಲ್ಲ. ಭಿನ್ನಮತದಲ್ಲಿ ಒಂದು ಮೂಲಭೂತ ನೈತಿಕ ತತ್ವವೂ ಇದೆ. ಭಿನ್ನಮತವನ್ನು ಹತ್ತಿಕ್ಕುವ ಯಾವುದೇ ಸಮಾಜವೂ ಅನೈತಿಕವಾಗಿ ನಡೆದುಕೊಳ್ಳುತ್ತಿರುತ್ತದೆ. ಭಿನ್ನಮತದ ಜೊತೆಗೆ ತೆಕ್ಕೆಹಾಕಿಕೊಂಡಿರುವ ಎರಡು ನೈತಿಕ ತತ್ವಗಳನ್ನು ಇಲ್ಲಿ ಉಲ್ಲೇಖಿಸುತ್ತೇನೆ. ಮೊದಲನೆಯದು ಅಹಿಂಸೆಯೊಂದಿಗಿನ ಅದರ ಸಂಬಂಧ. ಅಹಿಂಸಾತತ್ವವು ಭಾರತೀಯ ವಿಶಿಷ್ಟ ಭಿನ್ನಮತದ ಆಚರಣೆಯ ಅವಿಭಾಜ್ಯ ಅಂಗವಾಗಿದೆ. ಇದು ಪುರಾತನ ಕಾಲದಿಂದ, ಗಾಂಧಿ ಹಾಗೂ ಅಂಬೇಡ್ಕರ್‌ವರೆಗಿನ ಎಲ್ಲ ಆಚರಣೆಯ ಭಾಗವಾಗಿದೆ. ಎರಡನೆಯದಾಗಿ, ಅದು ಸಮಾಜದಲ್ಲಿ ದುಸ್ಥಿತಿಯಲ್ಲಿ ಇರುವವರನ್ನು ರಕ್ಷಿಸುವ ಒಂದು ನೈತಿಕ ಕ್ರಮ. ಭಿನ್ನಮತ ಅನ್ನುವುದನ್ನು ಒಂದು ದೂರು ಅನ್ನುವಂತೆ ನೋಡಬಾರದು. ನಮಗೆ ಎಷ್ಟೇ ಸೌಲಭ್ಯವಿದ್ದಾಗ್ಯೂ ನಾವೆಲ್ಲಾ ಸಾಮಾನ್ಯವಾಗಿ ದೂರುತ್ತಲೇ ಇರುತ್ತೇವೆ. ಸಾಮಾಜಿಕ ಭಿನ್ನಮತ ಅನ್ನುವುದು ಹಲವಾರು ಕಾರಣಕ್ಕೆ ಶೋಷಿತರಾಗಿರುವ ಹಾಗೂ ಅಂಚಿಗೆ ದೂಡಲ್ಪಟ್ಟವರ ಆವಶ್ಯಕ ಧ್ವನಿ. ಸಾಮಾಜಿಕ ಬದುಕಿನಲ್ಲಿ ಮೂಲಭೂತ ಘನತೆಯಿಂದಲೂ ವಂಚಿತರಾಗಿರುವ ಅವರಿಗೆ ಈ ಜಗತ್ತಿನಲ್ಲಿ ಇರುವುದು ಇದೊಂದೇ ದಾರಿ.
ಒಂದು ಸಮಾಜದಲ್ಲಿ ತೀರಾ ವಂಚನೆಗೆ ಒಳಗಾದವರಿಗೆ, ಉಳಿದವರಿಗಿಂತಲೂ ಭಿನ್ನಮತ ಹಾಗೂ ಪ್ರತಿರೋಧ ವ್ಯಕ್ತಪಡಿಸುವ ಹೆಚ್ಚಿನ ಹಕ್ಕು ಇದೆ. ಇದು ನೈತಿಕವಾದ ತತ್ವ. ಸೌಲಭ್ಯವನ್ನು ಪಡೆದುಕೊಂಡವರು ಅವರ ಭಿನ್ನಮತವನ್ನು ಒಪ್ಪದೇ ಇರಬಹುದು ಅಥವಾ ಆ ಬಗ್ಗೆ ಅವರಿಗೆ ಸಹಾನೂಭೂತಿಯೂ ಇಲ್ಲದೇ ಇರಬಹುದು. ಆದಾಗ್ಯೂ ಇದೊಂದು ನೈತಿಕ ತತ್ವ. ಮಾಗಿದ ಒಂದು ಸಮಾಜವನ್ನು ಬಾಳಿಸುವುದಕ್ಕೆ ಇದೊಂದೇ ನಿಜವಾದ ನೈತಿಕ ತತ್ವ. ಹಾಗಾಗಿ ಶೋಷಿತ ಹಾಗೂ ಅಂಚಿಗೆ ತಳ್ಳಲ್ಪಟ್ಟ ಜನರ ಭಿನ್ನಮತದ ಧ್ವನಿ ನಮ್ಮ ಕಿವಿಗೆ ಬಿದ್ದಾಗ, ಅವರ ಭಿನ್ನಮತಕ್ಕೆ ಹೆಚ್ಚಿನ ಅವಕಶವನ್ನು ಹಾಗೂ ಹೆಚ್ಚಿನ ಸ್ವಾತಂತ್ರ್ಯವನ್ನು ಕೊಡುವುದು ಸವಲತ್ತು ಪಡೆದುಕೊಂಡವರ ನೈತಿಕ ಜವಾಬ್ದಾರಿ. ನಮ್ಮಲ್ಲಿ ಯಾರಾದರೂ ಅದರಲ್ಲೂ ವಿಶೇಷವಾಗಿ ಹೆಚ್ಚಿನ ಸವಲತ್ತು ಪಡೆದುಕೊಂಡವರು, ಅನೇಕ ರೀತಿಯ ಅನ್ಯಾಯಗಳಿಂದ ನರಳುತ್ತಿರುವವರ ಭಿನ್ನಮತವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವ ಸರ್ಕಾರವನ್ನು ಬೆಂಬಲಿಸಿದರೆ, ಈ ಅನೈತಿಕ ಕೃತ್ಯದಲ್ಲಿ ನಾವು ಭಾಗಿಗಳಾಗುತ್ತಿರುತ್ತೇವೆ. ನಾವು ಮನೆಯಲ್ಲಿ ಆರಾಮಾಗಿ ಕುಳಿತುಕೊಂಡು, ಬಡವರ ಹಾಗೂ ಶೋಷಿತರ ಹಕ್ಕುಗಳಿಗಾಗಿ ಹೋರಾಡುವವರನ್ನು ತೆಗಳುತ್ತಿದ್ದರೆ ನಾವು ಅನೈತಿಕವಾಗಿ ನಡೆದುಕೊಳ್ಳುತ್ತಿರುತ್ತೇವೆ. ಅವರನ್ನು ದೇಶದ ಹೆಸರಿನಲ್ಲಿ ಖಂಡಿಸಿದರೆ, ನಾವು ಈಗಾಗಲೇ ದೂಡಲ್ಪಟ್ಟವರನ್ನು ಮತ್ತಷ್ಟು ದೂಡುವ ಅನೈತಿಕ ಕೆಲಸವನ್ನು ಮಾಡುತ್ತಿರುತ್ತೇವೆ.

Recent Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.