ಮರಾಠಿ ರಂಗಭೂಮಿಯ ಅಪ್ರತಿಮ ‘ಕಲಾವಿದೆ’ -ಬಾಲಗಂಧರ್ವ

 In RAGAMALA

ಬಾಲಗಂಧರ್ವರು ಮಹಾರಾಷ್ಟ್ರದ ರಂಗಭೂಮಿಯ ಗುಣಮಟ್ಟವನ್ನು ಔನ್ನತ್ತ್ಯಕ್ಕೆ ಏರಿಸಿದ ಮಹಾನ್ ಕಲಾವಿದ. ಅವರ ಸ್ತ್ರೀಪಾತ್ರದ ಅಭಿನಯದ ಸಹಜತೆ, ನಯನಾಜೂಕುಗಳು ಸ್ವತಃ ಸ್ತ್ರೀಯರೇ ಆ ಪಾತ್ರ ನಿರ್ವಹಿಸಿದ್ದರೂ ಬಾಲಗಂಧರ್ವರನ್ನು ಸರಿಗಟ್ಟುವುದು ಸಾಧ್ಯವಿರಲಿಲ್ಲ. ಇದರ ಜೊತೆಗೆ ಬಾಲಗಂಧರ್ವರು ಸಂಗೀತದಲ್ಲಿ ಪ್ರೌಢಗಂಧರ್ವರೆ. ಮಾನಾಪಮಾನ ನಾಟಕದ ಭಾಮಿನಿಯಾಗಿ, ಸಂಶಯ ಕಲ್ಲೋಳ ನಾಟಕದ ಶತತಾರಾ ಆಗಿ, ಸುಭದ್ರದ ಸುಭದ್ರೆಯಾಗಿ, ಸ್ವಯಂವರ ನಾಟಕದ ರುಕ್ಮಿಣಿಯಾಗಿ, ಏಕಚಾಪಲ್ಯ ನಾಟಕದ ಸಿಂಧುವಾಗಿ, ದ್ರೌಪದಿ ನಾಟಕದ ದ್ರೌಪದಿಯಾಗಿ, ಮೃಚ್ಛಕಟಿಕದ ವಸಂತಸೇನೆಯಾಗಿ, ವಿದ್ಯಾಹರಣದ ದೆವಯಾನಿಯಾಗಿ ಹೀಗೆ ನಾಯಕಿಯ ಪಾತ್ರಗಳಲ್ಲಿ ರಂಗಸಂಗೀತವನ್ನು ಸೂರೆ ಮಾಡಿದರು. ಬಾಲಗಂಧರ್ವರ ಬದುಕು ವೃತ್ತಿಯ ಕಥೆ ಮರಾಠಿ ನೃತ್ಯನಾಟಕದ ಏಳುಬೀಳುಗಳ ಚರಿತ್ತೆಯೆ. ಇಡೀ ಈ ಇತಿಹಾಸದ ೭೨ವರ್ಷಗಳ ಸಾಕ್ಷಿಯಾಗಿ ಬದುಕಿದರು.
ಇವರ ಮೂಲ ಹೆಸರು ನಾರಾಯಣ ಶ್ರೀಪಾದ ರಾಜಹಂಸ್. ಹುಟ್ಟಿದ್ದು ಜೂನ್ ೨೬, ೧೮೮೮ ಬಾಂಬೆ ಪ್ರಾಂತ್ಯದ ಸತಾರ ಜಿಲ್ಲೆಯ ನಾಗತಾಣೆ ಗ್ರಾಮದಲ್ಲಿ. ಇವರದು ಮಧ್ಯಮವರ್ಗದ ಬ್ರಾಹ್ಮಣ ಕುಟುಂಬ. ಮನೆಯಲ್ಲಿ ಸಂಗೀತ ಇತ್ತು. ತಂದೆಗೆ ಹಾಡೋದು ಅಂದರೆ ತುಂಬ ಇಷ್ಟ. ಸ್ವಂತ ಖುಷಿಗೆ ಸಿತಾರ್ ನುಡಿಸಿಕೊಳ್ಳುತ್ತಿದ್ದರು. ತಾಯಿ ಅನ್ನಪೂರ್ಣಾಬಾಯಿ ಕೂಡ ಹಾಡುತ್ತಿದ್ದರು. ಆನಂತರ ಅವರು ಜಲಗಾಂವ್‌ನಲ್ಲಿ ಸಂಬಂಧಿಗಳಾದ ಅಬಾಸಾಹೇಬ್ ಮನೆಗೆ ಹೋದರು. ಅವರಿಗೆ ನಾರಾಯಣನನ್ನು ಕಂಡರೆ ತುಂಬಾ ಪ್ರೀತಿ. ನಾರಾಯಣನಿಗೆ ಓದಿನಲ್ಲಿ ಸ್ವಲ್ಪವೂ ಆಸಕ್ತಿ ಇರಲಿಲ್ಲ. ಒಳ್ಳೆಯ ಕಂಠವಿತ್ತು. ಜಲಗಾಂವ್‌ನಲ್ಲ್ಲಿ ಹಲವಾರು ನಾಟಕಗಳನ್ನು ನೋಡುವ ಅವಕಾಶ ಸಿಕ್ಕಿತು. ಆಗ ಅವರು ಮರಾಠಿ ರಂಗಭೂಮಿಯತ್ತ ಆಕರ್ಷಿತರಾದರು. ಅಬಸಾಹೇಬರು ನಾರಾಯಣನನ್ನು ಮೆಹಬೂಬ್ ಖಾನರಲ್ಲಿ ಶಾಸ್ತ್ರೀಯ ಸಂಗೀತ ಕಲಿಯಲು ಸೇರಿಸಿದರು. ಅವರು ನಾರಾಯಣನಿಗೆ ಶಾಸ್ತ್ರೀಯ ಸಂಗೀತದ ಒಳ್ಳೆಯ ಬುನಾದಿ ಹಾಕಿಕೊಟ್ಟರು. ಜೊತೆಗೆ ಸ್ಪಷ್ಟವಾಗಿ, ಭಾವಪೂರ್ಣವಾಗಿ ಹಾಡಲು ಕಲಿಸಿದರು.
ಅವರು ಸುಮಾರು ಹತ್ತು ವರ್ಷವಾಗಿದ್ದಾಗ ಬಾಲಗಂಗಾಧರ ತಿಲಕರ ಮುಂದೆ ಹಾಡುವ ಅವಕಾಶ ಅವರಿಗೆ ಸಿಕ್ಕಿಂತಂತೆ. ಹಾಡನ್ನು ಕೇಳಿದ ತಿಲಕರು ಎಷ್ಟು ಸೊಗಸಾಗಿ ಹಾಡುತ್ತಾನೆ ಈ ಬಾಲಗಂಧರ್ವ ಅಂದರಂತೆ. ಅಂದಿನಿಂದ ನಾರಾಯಣ ಬಾಲಗಂಧರ್ವ ಆಗಿಬಿಟ್ಟ.
ದುರದೃಷ್ಟವಶಾತ್ ತಂದೆಗೆ ಅಪಘಾತವಾಗಿ, ಕಾಲಿಗೆ ಗಂಭೀರವಾದ ಪೆಟ್ಟಾಯಿತು. ಮನೆಯ ಆದಾಯದ ಮೂಲ ತಪ್ಪಿಹೋಯಿತು. ಅಮ್ಮ ಕೂಡ ಖಾಯಿಲೆ ಬಿದ್ದರು. ಅಷ್ಟು ಸಾಲದು ಎಂಬಂತೆ ಬಾಲಗಂಧರ್ವನಿಗೂ ನಾಯಿ ಕಚ್ಚಿತು. ಅವರನ್ನು ಚಿಕಿತ್ಸೆಗೆಂದು ಕೊಲ್ಹಾಪುರಕ್ಕೆ ಕರೆದೊಯ್ದರು. ಅದು ಅವರಿಗೆ ಒಳ್ಳೆಯದೇ ಆಯಿತು. ಅಲ್ಲಿ ಅಪ್ಪಯ್ಯ ಬುವಾ ಅವರಿಂದ ಪಾಠ ಕಲಿಯುವ ಅವಕಾಶ ಸಿಕ್ಕಿತು. ಛತ್ರಪತಿ ಶಾಹು ಮಹಾರಾಜ್ ಅವರ ಪರಿಚಯ ಆಯಿತು. ಪ್ರಖ್ಯಾತ ಗಾಯಕ ಅಲ್ಲಾದಿಯಾ ಖಾನ್ ಬಳಿ ಇವರಿಗೆ ಸಂಗೀತ ಕಲಿಸುವ ಇರಾದೆ ಛತ್ರಪತಿ ಶಾಹು ಮಹಾರಾಜ್‌ಗೆ ಇತ್ತು. ಆದರೆ ಬಾಲಗಂಧರ್ವರಿಗೆ ಕಿವಿಗೆ ನಂಜಾಗಿದ್ದರಿಂದ ಒಂದು ಕಿವಿ ಅಷ್ಟು ಸರಿಯಾಗಿ ಕೇಳಿಸುತ್ತಿರಲಿಲ್ಲ. ಅದಕ್ಕೂ ಶಾಹು ಮಹಾರಾಜ್ ಚಿಕಿತ್ಸೆ ಕೊಡಿಸಿದರು.
ಹಲವು ಹಿತಚಿಂತಕರು ಇವರ ಕುಟುಂಬಕ್ಕೆ ನೆರವಾಗಲು ಉತ್ಸುಕರಾಗಿದ್ದರು. ಬಾಲಗಂಧರ್ವ ಅವರ ಸಂಗೀತ ಕಾರ್ಯಕ್ರಮವನ್ನು ಕಿರ್ಲೋಸ್ಕರ್ ನಾಟಕ ಮಂಡಳಿಯಲ್ಲಿ ಏರ್ಪಡಿಸಲಾಗಿತ್ತು. ಎಲ್ಲರಿಗೂ ಅದು ತುಂಬಾ ಇಷ್ಟವಾಗಿಬಿಟ್ಟಿತು. ಅಲ್ಲೇ ಎರಡು ವರ್ಷದಲ್ಲಿ ಹೆಸರು ಮಾಡಿದರು.
ಆ ಸಮಯದಲ್ಲಿ ಕಂಪೆನಿಗೆ ಸುಂದರ ಕಂಠದಮ ಸುರೂಪಿ ಮಹಿಳಾ ಪಾತ್ರ ನಿರ್ವಹಿಸಬಲ್ಲ ಕಲಾವಿದ ಬೇಕಾಗಿತ್ತು. ಬಾಲಗಂಧರ್ವ ಅದಕ್ಕೆ ಸೂಕ್ತ ಆಯ್ಕೆಯಾಗಿಬಿಟ್ಟರು.
ದೇವಲ್ ಅವರ ಮಾರ್ಗದರ್ಶನದಲ್ಲಿ ಶಾಕುಂತಲ ನಾಟಕದಲ್ಲಿ ಪಾತ್ರವಹಿಸಿದರು. ದೇವಲ್ ಸ್ವಾಭಾವಿಕ ನಟಣೆಗೆ ತುಂಬಾ ಪ್ರಾಮುಖ್ಯ ನೀಡುತ್ತಿದ್ದರು. ದೇವಲ್ ಅತ್ಯುತ್ತಮ ಗುರುಗಳು. ಶಾಕುಂತಲ ನಾಟಕವನ್ನು ಹೊಸದಾಗಿ ನಿರ್ಮಿಸಿದ ಥಿಯೇಟರಿನಲ್ಲಿ ಪ್ರದರ್ಶಿಸಿದರು. ಮೀರಜ್ ನ ಮಹಾರಾಜರೂ ನೋಡಲು ಬಂದಿದ್ದರು. ಅದೊಂದು ಅದ್ವೀತಿಯ ಯಶಸ್ಸು ಸಾಧಿಸಿಬಿಟ್ಟಿತು. ಅಂದಿನಿಂದ ಬಾಲಗಂಧರ್ವ ಮರಾಠಿ ರಂಗಭೂಮಿಯ ಧೃವತಾರೆಯಾಗಿಬಿಟ್ಟರು. ಕಿರ್ಲೋಸ್ಕರ್ ಮಂಡಳಿಯ ದೆಸೆಯೇ ಬದಲಾಗಿಬಿಟ್ಟಿತು.
ಮುಂದೆ ಬಾಲಗಂಧರ್ವ ಲಕ್ಷ್ಮೀಬಾಯಿಯನ್ನು ಮದುವೆಯಾದರು. ಆದರೆ ಪತ್ನಿ ಲಕ್ಷ್ಮಿ ಪಾಪ ಜೀವನದಲ್ಲಿ ಸುಖವನ್ನು ಕಾಣಲೇ ಇಲ್ಲ. ಸಾಯುವ ಸಂದರ್ಭದಲ್ಲೂ ಗಂಡ ಪಕ್ಕದಲ್ಲಿ ಇರಲಿಲ್ಲ.
ನಾಟಕದಲ್ಲಿ ಜಯಭೇರಿ ಸಾಧಿಸಿದ ಬಾಲಗಂಧರ್ವರ ವಿಜಯಯಾತ್ರೆ ದೇಶದ ಉದ್ದಗಲಕ್ಕೂ ನಡೆಯಿತು. ಹಣಕಾಸಿನ ದೃಷ್ಟಿಯಿಂದ ಹಾಗೂ ಬಾಲಗಂಧರ್ವರ ಕೀರ್ತಿಯ ದೃಷ್ಟಿಯಿಂದ ಇದು ಅದ್ಭುತ ಯಶಸ್ಸು. ಇವರ ಮಹಿಳೆಯ ಪಾತ್ರನೋಡಿ ಆ ಕಾಲದ ಯುವಕರು ಮೋಹಕರಾಗಿದ್ದರು.
೧೯೧೧ರಲ್ಲಿ ಮಾನಾಪಮಾನ ನಾಟಕದ ಮೊದಲ ಪ್ರದರ್ಶನ. ಅಂದೇ ಬಾಲಗಂಧರ್ವರ ಹಿರಿಯ ಮಗನ ಸಾವು. ಎಲ್ಲರೂ ನಾಟಕವನ್ನು ಮುಂದೂಡಲು ಕೇಳಿಕೊಂಡರು. ನನ್ನ ಕುಟುಂಬದಲ್ಲಿ ದುರ್ಘಟಣೆ ನಡೆದಿದೆ. ಆದರೆ ಈ ಕ್ಷೇತ್ರಕ್ಕು ನನ್ನ ಜವಾಬ್ದಾರಿ ಇದೆ. ನಾನು ನನ್ನ ಸಾಕಿದವರ, ಪ್ರೇಕ್ಷಕರ ಆಸಕ್ತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು ನಾಟಕ ನಡೆಯಲಿ ಅಂದರಂತೆ!

ಜೀವನದ ಕೊನೆಯ ಗಳಿಗೆಯಲ್ಲಿ ಬಾಲಗಂಧರ್ವ ಗೋಹರ್‌ಜಾನ್‌ರನ್ನು ಮದುವೆಯಾಗುತ್ತಾರೆ.
ಗೋಹರಜಾನ್ ಕರ್ನಾಟಕಿ ಕನ್ನಡ ರಂಗಭೂಮಿ ಕಂಡ ಅಪರೂಪದ ಕಲಾವಿದೆ. ವಾಣಿವಿಲಾಸ ಕಂಪನಿಯಲ್ಲಿದ್ದು ರಂಗಭೂವಿಯ ಸೇವೆಗೈದ ಈ ಕಲಾವಿದೆ ತನ್ನ ಕಂಪೆನಿ ನಿಂತ ಮೇಲೆ ಮುಂದೆ ಬಾಲಗಂಧರ್ವರ ಪತ್ನಿಯಾಗಿ ಮರಾಠಿಯ ರಂಗಭೂಮಿಗೆ ವಲಸೆ ಹೋದವಳು. ಈಕೆಯ ರಂಗಪ್ರೀತಿ ಎಷ್ಟೊಂದು ಆಳವಾಗಿತ್ತೆಂದರೆ ಆ ಕಾಲದಲ್ಲಿ ಒಂದು ಲಕ್ಷ ರೂ. ಬೆಲೆಬಾಳುವ ಆಭರಣಗಳನ್ನು ನೀಡಿ ಮುಳುಗುತ್ತಿದ್ದ ಬಾಲಗಂಧರ್ವರ ಕಂಪೆನಿಯನ್ನು ಎತ್ತಿ ನಿಲ್ಲಿಸಿದ ತ್ಯಾಗಜೀವಿ.ಮುಂದೆ ವಿಷಯ ತಿಳಿದು ಮರಾಠಿಯ ರಂಗರಸಿಕರು ಒಂದು ಲಕ್ಷ ರೂಪಾಯಿ ವಂತಿಗೆ ಸೇರಿಸಿ ಅದನ್ನು ಗೋಹರಜಾನಳಿಗೆ ನೀಡಿ ಸಾಲದ ಋಣದಿಂದ ಮರಾಠಿಯ ಕಂಪೆನಿಯನ್ನು ಮುಕ್ತಗೊಳಿಸಿದರಂತೆ!
ಬಾಲಗಂಧರ್ವರ ಬದುಕನ್ನು ಕುರಿತ ಸಿನಿಮಾ ವನ್ನು ರವೀಂದ್ರ ಜಾದವ್ ತೆಗೆದಿದ್ದಾರೆ. ಅದರ ಚಿತ್ರವನ್ನು ತಿಲ್ಲಾನದ ಈ ಸಂಚಿಕೆಯ ಮುಖಪುಟದಲ್ಲಿ ಬಳಸಿಕೊಳ್ಳಲಾಗಿದೆ.

Recent Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.