ಮರೆಯಲ್ಲೇ ಉಳಿದು, ನಮ್ಮಿಂದ ದೂರವಾದ ಪ್ರತಿಭೆ

 In RAGAMALA
 
 
 
ವಿದುಷಿ ಎಚ್ ಎಸ್ ಮಹಾಲಕ್ಷ್ಮಿಯವರು ಇಂದು ನಮ್ಮೊಂದಿಗಿಲ್ಲ. ಅತ್ಯಂತ ಹಿರಿಯ ಕಲಾವಿದೆ. ಇಂದೋ ನಾಳೆಯೋ ಬಿದ್ದು ಹೋಗುತ್ತದೇನೋ ಅನ್ನುವಂತಿದ್ದ ಒಂದು ಪುಟ್ಟ ಮನೆಯಲ್ಲಿ ಬಹುಕಾಲ ಜೀವನನಡೆಸಿದರು. ಅಲ್ಲಿಂದ ಬೇರೆಡೆ ಹೋಗುವುದಕ್ಕೂ ಅವರ ಮನಸ್ಸು ಒಪ್ಪುತ್ತಿರಲಿಲ್ಲ. ಅದಕ್ಕೇ ಒಗ್ಗಿ ಹೋಗಿದ್ದರು. ಅದು ಅವರ ಮನಸ್ಥಿತಿಯ ದ್ಯೋತಕವೂ ಹೌದು.
 
ಆ ಮನೆಯಲ್ಲೇ ಅವರ ಸಂಗೀತಜೀವನ ಮೂಡಿದ್ದು. ಅದರೊಂದಿಗೆ ಅವರ ಬದುಕಿನ ಸಾವಿರಾರು ನೆನಪುಗಳು ತೆಕ್ಕೆ ಹಾಕಿಕೊಂಡಿದ್ದವು. ಅದನ್ನು ಕಡಿದುಕೊಳ್ಳಲು ಅವರಿಗೆ ಇಷ್ಟವಿರಲಿಲ್ಲ. ಹಾಗಾಗಿ ಆ ಮನೆಯನ್ನು ಬಿಡಲು ಹಿಂದೇಟು ಹಾಕುತ್ತಿದ್ದರು. ಕೊನೆಗೂ ಮನೆಯವರ ಪ್ರೀತಿಯ ಒತ್ತಾಯಕ್ಕೆ, ಮಣಿದು ಅಣ್ಣನ ಮಕ್ಕಳ ಮನೆಯಲ್ಲಿ ಇದ್ದರು.
 
ಅಷ್ಟೊಂದು ಸರಳ ಅವರು. ಯಾರೂ ಅವರನ್ನು ಗುರುತಿಸುತ್ತಲೇ ಇರಲಿಲ್ಲ. ೫೦ಕ್ಕೂ ಹೆಚ್ಚು ವರ್ಷಗಳಿಗಿಂತ ಹೆಚ್ಚು ಕಾಲ ಅತ್ಯುತ್ತಮ ಕಲಾವಿದರಾಗಿ ಕಲಾಸೇವೆಗೇ ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದರೂ ಅವರು ಯಾರಿಗೂ ಅಷ್ಟೊಂದು ಪರಿಚಿತರಲ್ಲ. ಬರಬೇಕಾದ ಕೀರ್ತಿ ಬರಲಿಲ್ಲ. ಆದರೆ ಅದಕ್ಕಾಗಿ ಅವರು ಎಂದೂ ಕೊರಗಲಿಲ್ಲ. ಕಲೆಯನ್ನು ಅತೀವವಾಗಿ ಪ್ರೀತಿಸುತ್ತಿದ್ದರು. ಕೊನೆಯವರೆಗೂ ಕಾರ್ಯಕ್ರಮಗಳಿಗೆ ಬಂದು ಕುಳಿತು ಸಂತೋಷದಿಂದ ಕೇಳುತ್ತಿದ್ದರು. ಪರಿಚಿತರನ್ನು ಕೈಮುಗಿದು ಪ್ರೀತಿಯಿಂದ, ಗೌರವದಿಂದ ಮಾತನಾಡಿಸುತ್ತಿದ್ದರು. ಮಕ್ಕಳನ್ನೂ ’ಅಯ್ಯೋ ಎಷ್ಟು ಚೆನ್ನಾಗಿ ಹಾಡುತ್ತೀ’ ಎಂದು ಹುರಿದುಂಬಿಸುತ್ತಿದ್ದರು.
ಮಹಾಲಕ್ಷ್ಮಿಯವರು ಬೆಳೆದದ್ದು ಸಂಗೀತದ ವಾತಾವರಣದಲ್ಲಿ. ತಂದೆ ಶ್ರೀರಂಗಾಚಾರ್. ಅವರಿಗೆ ಚಿಕ್ಕವಯಸ್ಸಿನಿಂದಲೂ ಸಂಗೀತದ ಅಸಾಧ್ಯ ಗೀಳು. ಸಂಗೀತದ ಹುಚ್ಚು ಬಲವಾಗಿ ಸಂಗೀತ ಕಲಿಯಲು ಹೆಮ್ಮಿಗೆ ಬಿಟ್ಟು ಮದ್ರಾಸಿಗೆ ಹೊರಟರು. ಟೈಗರ್ ವರದಾಚಾರ್ಯರ ಬಳಿ ಗುರುಕುಲವಾಸ. ಮನೆಕೆಲಸದ ಜೊತೆಗೆ ಸಂಗೀತ ಶಿಕ್ಷಣ. ೧೫-೨೦ ವರ್ಷಗಳ ಕಠಿಣ ಸಂಗೀತ ಶಿಕ್ಷಣ. ಗಂಡ ಸಂಗೀತ ಕಲಿಯುವುದಕ್ಕೆ ಮದ್ರಾಸಿಗೆ ಹೊರಟಾಗ ಇಡೀ ಸಂಸಾರವನ್ನು ನಿಭಾಯಿಸುವ ಹೊಣೆ ಗರುಡಮ್ಮನವರದ್ದು. ಒಂದಿಷ್ಟು ಭೂಮಿಯಿತ್ತು. ಮೂರು ಗಂಡುಮಕ್ಕಳಿದ್ದರು. ಅನಂತಾಚಾರ್, ಶೇಷಮ್ಮ ಹಾಗೂ ಗೋಪಾಲಾಚಾರ್. ಹೇಗೋ ಸಂಸಾರ ನಿಭಾಯಿಸುತ್ತಿದ್ದರು ಅಮ್ಮ ಗರುಡಮ್ಮ ಗಮಕ ವಿಶಾರದೆ. ಆಶುಕವಿತೆಗಳನ್ನು ಚೆನ್ನಾಗಿ ರಚಿಸುತ್ತಿದ್ದರಂತೆ.
 
ಆದರೆ ಮುಂದೆ ಟೆನೆನ್ಸಿ ಕಾಯ್ದೆ ಬಂತು. ಇದ್ದ ಭೂಮಿಯನ್ನು ರೈತರಿಗೆ ವಹಿಸಿಕೊಡಬೇಕಾಯಿತು. ಯದುಗಿರಿ, ಮಹಾಲಕ್ಷ್ಮಿ ಹಾಗೂ ಬಿಳಿಗಿರಿಯವರು ಜನಿಸಿದರು. ಬದುಕು ದಿನದಿಂದ ದಿನಕ್ಕೆ ಕಠಿಣವಾಗುತ್ತಾ ಸಾಗಿತು. ಕೊನೆಗೆ ಶ್ರೀರಂಗಾಚಾರ್ಯರು ಮೈಸೂರಿನಲ್ಲಿ ಬಂದು ನೆಲೆಸಲು ತೀರ್ಮಾನಿಸಿದರು. ತಮ್ಮ ಸಂಬಂಧಿಯೊಬ್ಬರ ಪುಟ್ಟ ಮನೆಯಲ್ಲಿ ಕತ್ತವಾಡಿಪುರದ ಅಗ್ರಹಾರದಲ್ಲಿ ತಮ್ಮನ ಸಂಸಾರದ ಜೊತೆಗೆ ಇವರ ಸಂಸಾರವೂ ನಡೆದಿತ್ತು.
ಶ್ರೀರಂಗಾಚಾರ್ಯರು ತಾವು ಕಲಿತ ಪಾಠವನ್ನು ಅನಂತಚಾರ್ಯ ಹಾಗೂ ಶೇಷಮ್ಮನವರಿಗೆ ಕಲಿಸಿದರು. ಶೇಷಮ್ಮನವರೂ ಸಂಗೀತವನ್ನು ತುಂಬಾ ಪ್ರೀತಿಸುತ್ತಿದ್ದರು. ಟೈಗರ್ ವರದಾಚಾರ್ಯರು ಆಗಾಗ ಮೈಸೂರಿಗೆ ಬರುತ್ತಿದ್ದರು. ಹಾಗೆ ಬರುವಾಗ ಸಾಮಾನ್ಯವಾಗಿ ಪತ್ರ ಬರೆಯುತ್ತಿದ್ದರು. ಹಾಗೆ ಬರೆದ ಹಲವು ಪತ್ರಗಳನ್ನು ಗೆಳೆಯ ರಾಧೇಶನಲ್ಲಿ ನಾನು ನೋಡಿದ್ದೇನೆ. ಹಾಗೆ ಬಂದ ಒಂದು ಪತ್ರದ ಒಕ್ಕಣೆಯನ್ನು ಇಲ್ಲಿ ಕಾಣಿಸಿದ್ದೇನೆ.
 
My dear chi. Sreerangachary
I will be reaching Mysore by the mail train on the 24th Tuesday. I believe you will kindly arrange to send some of your boys, to meet me at the station, Mysore. I am bringing my people with children and friends with an appreciable luggage. It is therefore your help also at the station will be required. The rest in person. Hoping all (of) you are in good health. With my hearty Asheervadas to you all.
Affectionately yours,
K Varadachari
 
ಹಾಗೆಯೇ ಮುತ್ತಯ್ಯ ಭಾಗವತರೂ ಅರಮನೆಯ ಆಸ್ಥಾನದಲ್ಲಿ ಹಾಡಲು ಆಗಾಗ ಬರುತ್ತಿದ್ದರು. ಹೀಗೆ ಬಂದಾಗ ಸಾಮಾನ್ಯವಾಗಿ ಪೂರ್ಣಯ್ಯನವರ ಛತ್ರದಲ್ಲೋ ಅಥವಾ ಸೀತಾವಿಳಾಸ ಛತ್ರದಲ್ಲೋ ಉಳಿದುಕೊಳ್ಳುತ್ತಿದ್ದರಂತೆ. ಅಂತಹ ಸಮಯದಲ್ಲಿ ಶೇಷಮ್ಮನವರು ಹೋಗಿ ಅವರಲ್ಲಿ ಕಲಿತು ಬರುತ್ತಿದ್ದರು. ವೀಣೆ ವೆಂಕಟಪ್ಪನವರಿಂದಲೂ ಅವರು ಸಾಕಷ್ಟು ಕಲಿತಿದ್ದರು. ಗಾಯತ್ರಿ ರಾಮಾಯಣ, ಅಷ್ಟಲಕ್ಷ್ಮಿಶ್ತೋತ್ರ, ಶಾರದಾ ಸ್ತೋತ್ರ ಇವೆಲ್ಲವನ್ನು ಅವರಿಂದಲೇ ಕಲಿತಿದ್ದರು. ಬಹಳ ಅಪರೂಪದ ೧೪ ರಾಗಗಳಲ್ಲಿ ರಚಿತವಾದ ಗಾಯತ್ರಿ ರಾಮಾಯಣವನ್ನು, ಮತ್ತು ಉಳಿದ ಸ್ತೋತ್ರಗಳನ್ನು ತಂಗಿಯರಿಗೆ ಹೇಳಿಕೊಟ್ಟಿದ್ದರು.
೧೯೪೭ನೇ ಇಸವಿಯಲ್ಲಿ ಶ್ರೀರಂಗಾಚಾರ್ಯರು ಅನಾರೋಗ್ಯದಿಂದ ನಿಧನರಾದರು. ಆಗ ಮಹಾಲಕ್ಷ್ಮಿಯವರಿಗೆ ಕೇವಲ ೭ ವರ್ಷ. ಇಡೀ ಸಂಸಾರದ ಹೊಣೆ ದೊಡ್ಡ ಮಗ ಅನಂತಚಾರ್ಯರ ಮೇಲೆ ಬಿತ್ತು. ಅವರು ದಳವಾಯಿ ಸ್ಕೂಲಿನಲ್ಲಿ ಕೆಲಸ ಮಾಡುತ್ತಿದ್ದರು. ಎಲ್ಲಾ ಕಷ್ಟಕಾರ್ಪಣ್ಯಗಳ ನಡುವೆಯೂ ಸಂಗೀತ ಮಾತ್ರ ಮುಂದುವರಿದೇ ಇತ್ತು. ಶೇಷಮ್ಮ ತಂಗಿ ಮಹಾಲಕ್ಷ್ಮಿಗೆ ಸಂಗೀತ ಹೇಳಿಕೊಟ್ಟರು. ಅವರೇ ಮೊದಲ ಗುರು. ಮಹಾಲಕ್ಷ್ಮಿಯವರಿಗೆ ಎಲ್ಲಾ ಪ್ರಾಥಮಿಕ ಪಾಠಗಳು ಅವರಿಂದ ಆಗಿತ್ತು. ಅದೆಲ್ಲಾ ಅವರಿಗೆ ಕೊನೆಯ ತನಕವೂ ನೆನಪಿನಲ್ಲಿ ಉಳಿದಿತ್ತು. ರಾಧೇಶ್ ನೆನಪಿಸಿಕೊಳ್ಳುವಂತೆ ‘ಒಮ್ಮೆ ಅಣ್ಣನ ವೈಕುಂಠ ಸಮಾರಾಧನೆ ನಡೆಯುತ್ತಿತ್ತು. ಎಲ್ಲೋ ಮಾಚಿಯವರ (ಮಹಾಲಕ್ಷ್ಮಿಯವರ) ಸಂಗೀತ ಕೇಳಿಬರುತ್ತಿತ್ತು. ಒಳಗೆ ಹೋಗಿ ನೋಡಿದಾಗ ಮಾಚಿ ಚಿಕ್ಕಪ್ಟನವರ ಭಾವ ಚಿತ್ರದೆದುರು ಹಾಡುತ್ತಿದ್ದಳು. ಅದು ತನ್ನ ಅಕ್ಕ ಶೇಷಮ್ಮನಿಂದ ಕಲಿತ ’ಗಾಯತ್ರಿ ರಾಮಾಯಣ’. ಹಸ್ತಪ್ರತಿಯ ಸಹಾಯವಿಲ್ಲದೆ ದೀರ್ಘ ಸಾಹಿತ್ಯವನ್ನು ನೆನಪಿಟ್ಟುಕೊಂಡು ಹಾಡಿದ್ದನ್ನು ಕೇಳಿ ಬೆರಗಾಗಿ ಹೋದೆ. ಇಷ್ಟು ವರ್ಷಗಳಲ್ಲಿ ಮಾಚಿ ಈ ಕೃತಿಯನ್ನು ಹಾಡಿದ್ದು ಕೇಳಿದ್ದೂ ಇದೇ ಮೊದಲು. ಬಹುಶಃ ಮಾಚಿ ತನ್ನಣ್ಣನ ಸಾವಿಗೆ ಸಾಂತ್ವನ ಕಂಡುಕೊಳ್ಳಲು ಯತ್ನಿಸಿದ ಪರಿ ಇದೇನೋ!’
 
ಆದರೆ ಶೇಷಮ್ಮನವರಲ್ಲಿ ಪಾಠ ತುಂಬಾ ದಿನ ಮುಂದುವರಿಯಲಿಲ್ಲ. ಭಾವನವರಿಗೆ ಮುಂಬಾಯಿಗೆ ವರ್ಗಾವಾಯಿತು. ಜೊತೆಗೆ ಶೇಷಮ್ಮನವರು ಹೋಗಬೇಕಾಯಿತು. ಹಾಗಾಗಿ ವಿದ್ವಾನ್ ಬೆಳಕವಾಡಿ ಶ್ರೀನಿವಾಸ ಅಯ್ಯಂಗಾರ್ಯರಲ್ಲಿ ಕೆಲ ಕಾಲ ಸಂಗೀತ ಕಲಿತರು. ಮಹಾಲಕ್ಷ್ಮಿಯವರಿಗೆ ಮತ್ತೆ ನಿರಾಸೆಯೇ ಕಾದಿತ್ತು. ಶ್ರೀನಿವಾಸ ಅಯ್ಯಂಗಾರ್ಯರು ಬೆಂಗಳೂರಿಗೆ ಹೊರಟರು. ಮತ್ತೆ ಸಂಗೀತ ನಿಂತಿತು. ಈ ನಡುವೆ ಒಮ್ಮೆ ಬಂಡಿಕೇರಿ ಶ್ರೀನಿವಾಸ ದೇವಸ್ಥಾನದಲ್ಲಿ ವಿದ್ವಾನ್ ಸುಬ್ಬುಕೃಷ್ಣಯ್ಯನವರ ಸಂಗೀತ ಕಾರ್ಯಕ್ರಮವನ್ನು ಕೇಳಿ ಅವರ ಸಂಗೀತಕ್ಕೆ ಮಹಾಲಕ್ವ್ಮಿಯವರು ಮಾರು ಹೋದರು. ಒಳ್ಳೆಯ ಕಂಚಿನ ಕಂಠ, ಸ್ವಷ್ಟವಾದ ರಾಗಭಾವ, ಸಂಚಾರ, ಸುಲಲಿತವಾಗಿ ತ್ರಿಸ್ಥಾಯಿಯಲ್ಲಿ ಹಾಡುತ್ತಿದ್ದ ರೀತಿ ಕೇಳಲು ಸೊಗಸಾಗಿತ್ತು. ಕಲಿತರೆ ಸುಬ್ಬುಕೃಷ್ಣಯ್ಯನವರಲ್ಲೇ ಕಲಿಯುವುದು ಎಂದು ತೀರ್ಮಾನಿಸಿದರು. ಬಲವಂತವಾಗಿ ಅಣ್ಣನನ್ನು ಅವರ ಮನೆಗೆ ಕರೆದುಕೊಂಡು ಹೋದರು. ಯಾವ ಗುರುಗಳು ತಾನೆ ಸುಮ್ಮನೆ ಒಪ್ಪಿಕೊಂಡು ಬಿಡುತ್ತಾರೆ. ಹಾಡಲು ಹೇಳಿದರು. ಸೊಗಸಾದ ಪಾಠ ಆಗಿತ್ತು. ಸಲೀಸಾಗಿ ಹಾಡಿದರು. ರಾಗ, ಸಾಹಿತ್ಯ, ತಾಳ ಶುದ್ಧವಾಗಿ ಸೊಗಸಾಗಿ ಹಾಡಿಬಿಟ್ಟರು. ಬೇಡ ಅನ್ನುವುದಕ್ಕೆ ಅವಕಾಶವೇ ಇರಲಿಲ್ಲ. ಪಾಠ ಪ್ರಾರಂಭವಾಯಿತು.
 

ವಿದ್ವಾನ್ ಸುಬ್ಬುಕೃಷ್ಣ ಅವರಲ್ಲಿ ಪಾಠ

 
ವಿದ್ವಾನ್ ಎಸ್ ಸುಬ್ಬುಕೃಷ್ಣಯ್ಯನವರು ಬೆಳಕವಾಡಿ ಶ್ರೀನಿವಾಸ ಅಯ್ಯಂಗಾರ್ಯರ ಶಿಷ್ಯರು. ಮುಂದೆ ಟೈಗರ್ ವರದಾಚಾರ್ಯರು ಹಾಗೂ ಮುತ್ತಯ್ಯ ಭಾಗವತರಲ್ಲಿ ನೇರ ಶಿಕ್ಷಣ ಪಡೆದಿದ್ದರು. ಮದ್ರಾಸ್ ವಿಶ್ವವಿದ್ಯಾನಿಲಯ ಹಾಗೂ ಮ್ಯೂಸಿಕ್ ಅಕಾಡೆಮಿಯ ಟೀಚರ‍್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ಟೀಚರ‍್ಸ್ ಟ್ರೈನಿಂಗ್ ಪಡೆದರು. ಆಗ ಇವರೊಂದಿಗೆ ಬೆಳಕವಾಡಿ ಶ್ರೀನಿವಾಸ ಅಯ್ಯಂಗಾರ್ಯರು ಹಾಗೂ ಜಿಎನ್‌ಬಿ ಇವರ ಸಹ ಸಹಪಾಠಿಗಳಾಗಿದ್ದರಂತೆ. ಸುಬ್ಬುಕೃಷ್ಣ ಅವರದ್ದು ಅಗಾಧ ಸಂಗೀತ ಜ್ಞಾನ. ಎಷ್ಟು ಮೊಗೆದರೂ ತೀರದ ಸಂಪತ್ತು. ಹೆಸರಿನ ಆಸೆ ಇಲ್ಲ. ಮುಚ್ಚಿಡುವ ಮನಸ್ಸಿಲ್ಲ. ಶಿಷ್ಯರಿಗೆ ಹಗಲು ಇರಳು ಸಂಗೀತ ಕಲಿಸುತ್ತಿದ್ದರು.
 
ಮಹಾಲಕ್ಷ್ಮಿಯವರು ಇವರಲ್ಲಿ ಪಾಠಕ್ಕೆ ಹೋಗುವಾಗ ಹೈಸ್ಕೂಲಿನಲ್ಲಿ ಓದುತ್ತಿದ್ದರು. ಸಂಜೆ ೭ರ ನಂತರ ಪಾಠ ನಡೆಯುತ್ತಿತ್ತು. ಕಾಲಮಿತಿ ಇರಲಿಲ್ಲ. ಊಟ ನಿದ್ರೆಯನ್ನು ಮರೆತು ಅಭ್ಯಾಸ. ಗುರುಗಳ ಮನೆಯವರೆಲ್ಲಾ ನಿದ್ದೆಗೆ ಹೋದರೂ ಎಷ್ಟೋ ದಿನ ಇವರ ಸಂಗೀತಪಾಠ ಮುಗಿದಿರುತ್ತಿರಲಿಲ್ಲವಂತೆ. ಎಂದಾದರೂ ಮಹಾಲಕ್ಷ್ಮಿಯವರು ಪಾಠಕ್ಕೆ ಹೋಗದೇ ಹೋದರೆ, ಯಾಕೆ ಬರಲಿಲ್ಲ ಅಂತ ಮನೆಗೆ ಹುಡುಕಿಕೊಂಡು ಬರುತ್ತಿದ್ದರಂತೆ. ಸುಬ್ಬುಕೃಷ್ಣರಿಗೆ ಮೈಸೂರು ಸದಾಶಿವರಾಯರ ಕೃತಿಗಳನ್ನು ಕಂಡರೆ ತುಂಬಾ ಇಷ್ಟ. ಅದನ್ನು ಮಹಾಲಕ್ಷ್ಮಿಯವರಿಗೂ ಕಲಿಸಿದ್ದರು. ಅಷ್ಟೇ ಅಲ್ಲ ಶಿಷ್ಯೆ ಹಾಡುವಾಗ ತುಂಬಾ ಸಂತೋಷದಿಂದ ಕೇಳುತ್ತಿದ್ದರು. ಗಂಗಣಪತೇ ಹಾಗೂ ಪಾಲಯಮಾಂ ಕೃತಿಗಳಂತೂ ಕೇಳುತ್ತಾ ಮೆಚ್ಚುಗೆಯಿಂದ ಕಣ್ಣೀರು ಹಾಕುತ್ತಿದ್ದರಂತೆ.
ಮಹಾಲಕ್ಷ್ಮಿಯವರು ವಿದ್ವತ್ ಪರೀಕ್ಷೆ ಕಟ್ಟುವಾಗ ಪಠ್ಯಕ್ರಮ ಪೂರ್ತಿ ಆಗಿರಲಿಲ್ಲವಂತೆ. ಅದಕ್ಕೆ ಗುರುಗಳು ’ಪರೀಕ್ಷೆಗೆ ಧೈರ್ಯವಾಗಿ ಹೋಗಮ್ಮ, ಈಗ ಆಗಿರುವಷ್ಟನ್ನೇ ಪರೀಕ್ಷಕರು ಜೀರ್ಣಿಸಿಕೊಳ್ಳಲಿ’ ಎಂದಿದ್ದರಂತೆ. ಆ ಸಂದರ್ಭವನ್ನು ನೆನಸಿಕೊಳ್ಳುತ್ತಾ ಸುಬ್ಬುಕೃಷ್ಣ ಅವರ ಮಗ ಶ್ರೀ ಎಸ್ ನಂಜುಂಡಸ್ವಾಮಿಯವರು ‘ಫಲಿತಾಂಶ ಬಂದನಂತರ ಒಬ್ಬ ಪರೀಕ್ಷಕರು ನನ್ನ ತಂದೆಯವರಲ್ಲಿ ಕ್ಷಮೆಯಾಚಿಸಿದರು. ಕಾರಣ ಅವರ ನಿಕಟವರ್ತಿಯೊಬ್ಬರು ಮಗನೂ ಪರೀಕ್ಷೆಗೆ ಬಂದಿದ್ದು, ಅವನಿಗೆ ಉನ್ನತದರ್ಜೆ ಕೊಡದೆ ಮಹಾಲಕ್ಷ್ಮಿಗೆ ಕೊಟ್ಟರೆ ತಪ್ಪಾಗುತ್ತದೆ ಅಂತ ಅವನಿಗಿಂತ ಕಡಿಮೆ ಕೊಡಬೇಕಾಯ್ತಂತೆ. ನಂತರ ಅವರು ನಡೆಸುತ್ತಿದ್ದ ವಾರ್ಷಿಕ ಸಂಗೀತ ಕಾರ್ಯಕ್ರಮದಲ್ಲಿ ಕಛೇರಿ ನೀಡುವಂತೆ ಕೋರಿದರು.’ ಬೆಂಗಳೂರಿನಿಂದ ಬಂದಿದ್ದ ಇನ್ನೊಬ್ಬ ಪರೀಕ್ಷಕರು ‘ಮೈಸೂರಿನಲ್ಲಿ ಮಹಾಲಕ್ಷ್ಮಿ ಅನ್ನುವ ಹುಡುಗಿ ತುಂಬಾ ಚೆನ್ನಾಗಿ ಹಾಡಿದಳು. ಕಲಿತರೆ ಹಾಗೆ ಕಲಿಯಬೇಕು, ಹಾಗೆ ಹಾಡಬೇಕು’ ಅಂತ ಹೇಳಿದರಂತೆ. ಪರೀಕ್ಷೆಯಲ್ಲಿ ೨ ಚಿನ್ನದ ಪದಕ ಬಂತು. ಗುರುಗಳು ತಮಗೇ ಬಂದಷ್ಟು ಹಿಗ್ಗಿದ್ದರಂತೆ. ಸುಬ್ಬುಕೃಷ್ಣಯ್ಯನವರು ಮಹಾಲಕ್ಷ್ಮಿಗೆ ‘ನೋಡಮ್ಮ ನಮ್ಮನೆಯ ಅಟ್ಟದ ಗಳುಗಳು ಎಷ್ಟು ನಿನ್ನ ಸಂಗೀತ ಕೇಳಿವೆ ಅಂದರೆ, ಅವುಗಳನ್ನು ಮುಟ್ಟಿದರೆ ಅವು ಕೂಡ ಸಂಗೀತ ಹಾಡಬಹುದೇನೋ’ ಅಂತ ಹೇಳುತ್ತಿದ್ದರಂತೆ. ಅಷ್ಟೊಂದು ಅಭ್ಯಾಸ ಮಾಡಿದ್ದರು.
ಮಹಾಲಕ್ಷ್ಮಿಯವರು ಸಂಗೀತವನ್ನೇ ಬದುಕಾಗಿ ಮಾಡಿಕೊಂಡಿದ್ದರು. ಮದುವೆಯೂ ಆಗಲಿಲ್ಲ. ಸಂಗೀತ ಸೇವೆಯಲ್ಲೇ ತೊಡಗಿಕೊಂಡರು. ಇದಕ್ಕೆಲ್ಲಾ ಅಣ್ಣನ ಸಹಕಾರ ಇತ್ತು. ತಂಗಿ ಶ್ರೀಮತಿ ಯದುಗಿರಿಗೆ, ಅಕ್ಕನ ಮಕ್ಕಳಾದ ಸುಧಾ, ವಾಗೀಶರಿಗೆ, ಹಿರಿಯ ಅಣ್ಣನ ಮಕ್ಕಳಾದ ವಸುಧಾ, ರಾಧೇಶ್ ಅವರಿಗೆ ಸಂಗೀತ ಕಲಿಸಿದರು.
 

ಗುರುಗಳಾಗಿ ಮಹಾಲಕ್ಷ್ಮಿಯವರು

 
ಕೆ ವಾಗೀಶ್ ಅವರು ಅಂದಿನ ದಿನಗಳನ್ನು ನೆನಸಿಕೊಳ್ಳುತ್ತಾ,’ ಕಲ್ಪನಾ ಸ್ವರ ಹಾಕುವಾಗ ಸ್ವರಗಳ ಬಿಗು ಹೇಗಿರಬೇಕು. ರಾಗಭಾವ ಹೇಗೆ ಅದರೊಂದಿಗೆ ಕೂಡಿಕೊಂಡು ಬರಬೇಕು, ಅದರಲ್ಲಿ ಸ್ವರಗಳ ಜೋಡಣೆಗಳ ವೈವಿಧ್ಯತೆ ಹೇಗಿರಬೇಕು. ಷಡ್ಜದಲ್ಲಿ ಸಂಚಾರ ಮಾಡುವಾಗ ಸ್ವರದ ಉಚ್ಚಾರ ಯಾವ ರೀತಿ ಇರಬೇಕು. ಶ್ರುತಿ ಸಂಪೂರ್ಣವಾಗಿ ಮೈಗೂಡಿಸಿಕೊಂಡು ಹಾಡುವ ಸೂಕ್ಷ್ಮಾತಿಸೂಕ್ಷ್ಮ ವಿಚಾರಗಳು, ಸಾಹಿತ್ಯದ ಅರ್ಥ ತಿಳಿದು, ಅನುಭವಿಸಿ, ಹಾಡುವ ಕ್ರಮ- ಹೀಗೆ ಎಷ್ಟೆಷ್ಟೋ ವಿಷಯಗಳನ್ನು ನನ್ನ ಸಂಗೀತದಲ್ಲಿ ಅಳವಡಿಸಿಕೊಟ್ಟವರು ನನ್ನ ಚಿಕ್ಕಮ್ಮ’ ಎನ್ನುತ್ತಾರೆ. ಹಾಗೆಯೇ ಮುಂದುವರಿಯುತ್ತಾ ‘ರಾಗ ಹಾಡುವಾಗ ಅದರ ಲಯದ ಸ್ವಾನುಭವವಾಗಬೇಕು. ಶ್ರುತಿಯನ್ನು ಚೆನ್ನಾಗಿ ಸೇರಿಸಿಕೊಂಡು ಹಾಡಬೇಕು. ತಾರಸ್ಥಾಯಿ ಷಡ್ಜದಲ್ಲಿ ರಾಗ ಹಾಡುವಾಗ ಪ್ರಯೋಗಿಸುವ ’ತ’, ’ನ’ ಮುಂತಾದ ಅಕ್ಷರಗಳ ಉಚ್ಚಾರಣೆ ಹೇಗಿರಬೇಕು, ಅದರಲ್ಲಿನ ವೈವಿಧ್ಯತೆಗಳು ರಾಗಭಾವವನ್ನು ಹೇಗೆ ಮಾರ್ಪಡಿಸುತ್ತದೆ, ಮಾಡ್ಯುಲೇಷನ್ ಅಂದರೆ ಸಂಚು ಮಾಡಿ ಹಾಡುವ ಕಲೆಯನ್ನು ಹೇಗೆ ಅಭ್ಯಾಸ ಮಾಡಬೇಕು. . . . ಹೀಗೆ ಸಂಗೀತದ ಅನೇಕ ಸೂಕ್ಷ್ಮಾತಿಸೂಕ್ಷ್ಮಗಳನ್ನು ೨೪ ಗಂಟೆಗಳ ಕಾಲ ಹೇಳಿಕೊಡುತ್ತಾ ನನ್ನನ್ನು ತಯಾರು ಮಾಡಿದ ಕೀರ್ತಿ ನನ್ನ ಚಿಕ್ಕಮ್ಮನಿಗೆ ಸಲ್ಲಬೇಕು’ ಎನ್ನುತ್ತಾರೆ.
 
ಮಹಾಲಕ್ಷ್ಮಿಯವರ ಅಣ್ಣ ಶ್ರೀ ಅನಂತಾಚಾರ್ ಅವರ ಮಗಳು ಎ ವಸುಧಾ ಅತ್ತೆಯ ಪಾಠದ ದಿನಗಳನ್ನು ನೆನಸಿಕೊಳ್ಳುತ್ತಾ ‘ನಾನು ಕಛೇರಿ ನೀಡಲು ಪ್ರಾರಂಭವಾದ ದಿನಗಳವು. ನನ್ನ ಸಂಗೀತ ಪಾಠ ಕೆಲವೊಮ್ಮೆ ರಾತ್ರಿ ೧೨-೧ ಘಂಟೆಯವರಗೆ ಮುಂದುವರಿಯುತ್ತಿತ್ತು. ನನ್ನ ತಂದೆ ತಾಯಿಯವರು ಕೊಠಡಿಯ ಹೊರಗೆ ಕುಳಿತು ಕೇಳಿ ಆನಂದಿಸುತ್ತಿದ್ದರು. ನಮ್ಮ ಮನೆಯಲ್ಲಿ ಇದ್ದುದು ಒಂದೇ ಕೊಠಡಿ. ಆದ್ದರಿಂದ ಆ ಕೊಠಡಿಯನ್ನೇ ಸಂಗೀತಕ್ಕೆ ಬಿಟ್ಟುಕೊಟ್ಟು ಹೊರಗೆ ಕುಳಿತು ನನ್ನ ತಂದೆ-ತಾಯಿ ತೂಕಡಿಸುತ್ತಿದ್ದ ದಿನಗಳೂ ಉಂಟು. ಮಧ್ಯದಲ್ಲಿ ನನಗೆ ಮತ್ತು ನನ್ನ ಅತ್ತೆಯವರಿಗೆ ಕೇಸರಿ, ಬಾದಾಮಿ, ಕಲ್ಲುಸಕ್ಕರೆ ಏಲಕ್ಕ್ಕಿ ಇವೆಲ್ಲವನ್ನು ಅರೆದು ಹಾಕಿದ ಹಾಲನ್ನು ತಂದಿಡುತ್ತಿದ್ದರು. ಹೀಗೆ ಕಷ್ಟಪಟ್ಟು ನನ್ನನ್ನು ತಯಾರು ಮಾಡಿದ ಫಲವಾಗಿ ಸ್ಪರ್ಧೆಯಲ್ಲಿ ನನಗೆ ಮೊದಲನೆ ಬಹುಮಾನ ಬಂದಾಗ ಅಥವಾ ನನ್ನ ಕಛೇರಿ ಅದ್ಭುತವಾಗಿ ಮೂಡಿ ಬಂದಾಗ ನಮ್ಮತ್ತೆಗೆ ಆಗುತ್ತಿದ್ದ ಸಂತೋಷ ಹೆಮ್ಮ ಅಷ್ಟಿಷ್ಟಲ್ಲ.’
ಈ ಸಂತೋಷ ಮನೆಯವರಿಗೆ ಮಾತ್ರ ಸೀಮಿತವಾಗಿರಲಿಲ್ಲ. ಯಾರೇ ಚೆನ್ನಾಗಿ ಹಾಡಿದರೂ ಅಷ್ಟೇ ಖುಷಿಪಡುತ್ತಿದ್ದರು.
ಇವರ ಜೊತೆಗೇ ಹಾಡುತ್ತಿದ್ದ ಎಚ್ ಎಸ್ ಯದುಗಿರಿಯವರು ಕೂಡ ಇವರ ಶಿಷ್ಯರೆ. ಅವರ ಅನುಭವ ಕೂಡ ಅಕ್ಕನ ಇನ್ನೊಂದು ಸ್ವಭಾವವನ್ನು ತೋರಿಸುತ್ತದೆ. ’ಅಕ್ಕ ಪ್ರೀತಿಯಿಂದ ನನಗೆ ಪಾಠ ಹೇಳಿಕೊಡುತ್ತಿದ್ದರು. ಅದರಿಂದಾಗಿ ನನಗೆ ಮೈಸೂರಿನ ಲಲಿತಕಲಾ ಕಾಲೇಜಿಗೆ ಸೇರಿ, ಸಂಗೀತದಲ್ಲಿ ಸ್ನಾತಕೋತ್ತರ ಪದವಿಗಳಿಸಲು ಸಾಧ್ಯವಾಯಿತು. ನಾವಿಬ್ಬರೂ ಜೊತೆಯಾಗಿ ಹಾಡುವುದು ಎಂದರೆ ಮಹಾಲಕ್ಷ್ಮಿಯವರಿಗೆ ಪರಮಾನಂದ. ಹಾಗಾಗಿ ನಾವಿಬ್ಬರೂ ಒಟ್ಟಿಗೇ ಅನೇಕ ಕಚೇರಿಗಳನ್ನು ಮಾಡುವಂತಹ ಅವಕಾಶಗಳು ಕೂಡಿ ಬಂದವು.
 
ರಾಗ ವಿಸ್ತರಣೆಯಲ್ಲಾಗಲಿ, ನೆರವಲ್ ಮಾಡುವುದಾಗಲೀ, ಸ್ವರ ಪ್ರಸ್ತಾರದಲ್ಲಾಗಲೀ ಅಕ್ಕನ ಪಾಠಾಂತರ ಅದ್ಭುತವಾದದ್ದು. ಕೆಲವು ರಾಗದ ಕೀರ್ತನೆಗಳು-ಉದಾಹರಣೆಗೆ ಖರಹರಪ್ರಿಯದ ’ಶರಣಾಗತ’, ’ಕನುಗನಿ’ ’ಎಂದುಕುಪೆದ್ದಲ’ ತೋಡಿರಾಗದ ’ಮಂದರಧರಸುಂದರ’ ಇವುಗಳನ್ನು ಹಾಡುವ ಕ್ರಮ ಬಹಳ ಕಷ್ಟ. ಆದರೆ ಅಕ್ಕನ ಮಾರ್ಗದರ್ಶನದಲ್ಲಿ ಇಂತಹ ಕೀರ್ತನೆಗಳನ್ನು ಹಾಡುವುದರಲ್ಲಿ ಪಳಗಿದ್ದೇನೆ. ಇದಕ್ಕೆ ಕಾರಣ ಅಕ್ಕನ ಶಿಸ್ತು. ಸಂಗೀತದ ವಿಚಾರದಲ್ಲಿ ಅವರು ಬಹಳ ಖಡಾಖಂಡಿತ. ಇವತ್ತು ಇಷ್ಟೇ ಹೇಳಿಕೊಡೋದು. ಇದನ್ನು ಚೆನ್ನಾಗಿ ಅಭ್ಯಾಸ ಮಾಡು. ಅಮೇಲೆ ಮುಂದಿನದು ಎನ್ನುತ್ತಿದ್ದರು.’
ಅಕ್ಕತಂಗಿಯರು ಒಟ್ಟಿಗೆ ಹಲವು ಕಡೆ ಹಾಡಿದ್ದಾರೆ. ಅಕ್ಕ ತಂಗಿಯರು ಅಭ್ಯಾಸಕ್ಕೆ ಕುಳಿತರೆ ಸಮಯದ ಪರಿವಿಯೇ ಇರುತ್ತಿರಲಿಲ್ಲವಂತೆ. ‘ಏಳ್ರೇ ಸಾಕು, ಹಾಡಿ ಹಾಡಿ ಗಂಟಲಲ್ಲಿ ರಕ್ತಕಾರತ್ತೆ’ ಅಂತ ಮನೆಗೆ ಬಂದವರು ಹೇಳುತ್ತಿದ್ದರಂತೆ.
ಸಂಗೀತ ಸ್ಪರ್ಧೆಗಳಿಗೆ ಶಿಷ್ಯರನ್ನು ತುಂಬಾ ಆಸ್ಥೆಯಿಂದ ತಯಾರು ಮಾಡುತ್ತಿದ್ದರು. ಒಂದೇ ರಾಗದಲ್ಲಿ ಸ್ವರಜತಿಯಿಂದ ಹಿಡಿದು ಕೀರ್ತನೆಯವರೆಗೆ ಬರುವ ಎಲ್ಲಾ ರಚನೆಗಳನ್ನು ಆರಿಸಿ ಅಭ್ಯಾಸ ಮಾಡಿಸುತ್ತಿದ್ದರು. ಇಕ್ಕಟ್ಟಾದ ಮನೆಯಲ್ಲಿರುವ ಒಂದೇ ಕೋಣೆಯಲ್ಲಿ ಅಹೋರಾತ್ರಿ ರಾಗಾಲಾಪನೆಗಳ ಕಟ್ಟುನಿಟ್ಟಿನ ತರಬೇತಿ, ಮನೆಯ ಸದಸ್ಯರಿಗೆಲ್ಲ ನಿತ್ಯವೂ ಜಾಗರಣೆ. ಶಿಷ್ಯ ವಾಗೇಶ್‌ಗೆ ಯಾವ ಸಂಗೀತ ಸ್ಪರ್ಧೆಗೆ ಹೋದರೂ ಪ್ರಥಮ ಬಹುಮಾನ ಖಚಿತ, ಮೊದಲ ಸಲದ ಸ್ಪರ್ಧೆಯಲ್ಲೇ ವಾಗೀಶ್ ಬೆಳ್ಳಿ ಲೋಟ ಗೆದ್ದಾಗ, ಮಹಾಲಕ್ಷ್ಮಿಯವರು ಇಡೀ ಓಣೆಗೆ ಸಜ್ಜಿಗೆ ಹಂಚಿ ಸಂಭ್ರಮಿಸಿದರಂತೆ. ಗುರುಶಿಷ್ಯರಿಬ್ಬರಿಗೂ ಏಕಕಾಲದಲ್ಲಿ ದೊರೆಯುವ ವಿದ್ಯಾರ್ಥಿವೇತನ ವಸುಧಾಗೆ ಬಂದಾಗ, ಶಿಷ್ಯೆ ತನ್ನನ್ನು ಮೀರಿಸಿದಳಲ್ಲ ಎಂದು ಗುರು ಸಡಗರಿಸಿದ್ದೂ ಉಂಟು.
ಅವರಿಂದ ಹಲವು ಕಲಾವಿದರು ಹಲವು ಮೈಸೂರು ಸದಾಶಿವರಾಯರ ಕೃತಿಗಳನ್ನೋ, ಅಥವಾ ಅಪರೂಪದ ಕೆಲವು ಕೃತಿಗಳನ್ನು ಕಲಿತದ್ದು ಇದೆ.
ಅವರ ಸಂಗೀತದಲ್ಲಿ ಅನಾವಶ್ಯಕವಾದದ್ದು ಯಾವುದೂ ಇರಲಿಲ್ಲ. ಯಾವುದೇ ಆಡಂಬರವೂ ಇರಲಿಲ್ಲ. ಅವರದ್ದು ಬಹಳ ಭವ್ಯವಾದ, ಗಟ್ಟಿಯಾದ, ಶುದ್ಧ ಶಾಸ್ತ್ರೀಯವಾದ, ಭಾವಪೂರ್ಣ ಸಂಗೀತ. ನಿಜ ಕೆಲವು ಪ್ರಶಸ್ತಿಗಳು ಇವರಿಗೆ ಲಭಿಸಿವೆ. ಇವರ ಪ್ರತಿಭೆಗೆ ಅವು ಕಡಿಮೆ. ಎಷ್ಟೋ ದೊಡ್ಡ ಕಲಾವಿದರಿಗೆ ಆದಂತೆ ಇವರ ಹಿರಿಮೆಯನ್ನು ಕಲಾ ಜಗತ್ತು ಅವರು ಬದುಕಿರುವ ತನಕ ಗುರುತಿಸಲಿಲ್ಲ. ಇದೊಂದು ದುರಂತ.
 
[ಹೆಚ್ ಎಸ್ ಮಹಾಲಕ್ಷ್ಮಿಯವರನ್ನು ಕುರಿತು ಬರವಣಿಗೆ ಕಡಿಮೆ. ಒಂದು ಅಪವಾದ ಅಂದರೆ ವಿದುಷಿ ಸುಕನ್ಯಾ ಪ್ರಭಾಕರ್ ಹೊರತರುತ್ತಿರುವ ಸುರಭಿ ಸಿಂಚನ. ಅದು ಮಹಾಲಕ್ಷ್ಮಿಯವರಿಗಾಗಿಯೇ ಒಂದು ವಿಶೇಷ ಸಂಚಿಕೆಯನ್ನು ಹೊರತಂದದ್ದು ನಿಜವಾಗಿಯೂ ಶ್ಲಾಘನೀಯ. ಅದರಲ್ಲಿ ಅವರ ಆತ್ಮೀಯರು, ಮನೆಯವರು ದಾಖಲಿಸಿರುವ ಮಾಹಿತಿಯನ್ನು ಧಾರಾಳವಾಗಿ ಬಳಸಿಕೊಂಡಿದ್ದೇನೆ.]
Recommended Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.