ಮಲ್ಲಿಕಾರ್ಜುನ ಮನಸೂರರು – ಅಲ್ಲಿ ಇಲ್ಲಿ ಮಾತಾಡಿದ್ದು

 In RAGAMALA

ಮನ್ಸೂರರು ಮಾತಾಡಿದ್ದಕ್ಕಿಂತ ಸುಮ್ಮನಿದ್ದದ್ದೇ ಹೆಚ್ಚು. ಅವರು ಸಾಮಾನ್ಯವಾಗಿ ಕೇಳಿದ್ದಕ್ಕೆ ಉತ್ತರ ಅಂತ ಏನಾದರೂ ಹೇಳುತ್ತಿದ್ದರೇ ಹೊರತು ಅವರಾಗಿ ಅವರು ಮಾತನಾಡುತ್ತಲೇ ಇರಲಿಲ್ಲ. ಹೀಗೆ ಅಪರೂಪವಾಗಿ ವಿಭಿನ್ನ ವಿಚಾರಗಳ ಬಗ್ಗೆ ಅವರು ಅಲ್ಲಿ ಇಲ್ಲಿ ಮಾತನಾಡಿದ್ದರ ಒಂದು ಸಣ್ಣ ಸಂಗ್ರಹ ಇಲ್ಲಿದೆ.

ಘರಾನಾ ಕುರಿತು.
ನಾನು ಜೈಪುರ-ಅತ್ರೌಲಿ ಘರಾನಕ್ಕೆ ಪ್ರವೇಶ ಪಡೆಯುವುದಕ್ಕೆ ಮೊದಲೇ ನನಗೆ ಗ್ವಾಲಿಯರ್ ಘರಾನದ ಹಿನ್ನೆಲೆಯಿತ್ತು. ಹಾಗಾಗಿ ಇವೆರಡನ್ನೂ ಸಮನ್ವಯಗೊಳಿಸಿಕೊಳ್ಳುವುದು ನನಗೆ ಅನಿವಾರ್ಯವಾಯ್ತು. ಇವೆರಡೂ ಶೈಲಿಗಳು ಬೇರೆ ಬೇರೆಯವೇ ಆಗಿದ್ದವು. ಅತ್ರೌಲಿ ಗಾಯಕರು ಧ್ರುಪದ್ ಗಾಯಕಿಯ ಸಂಪ್ರದಾಯದಲ್ಲಿ ಹಾಡುತ್ತಿದ್ದರು ಮತ್ತು ಅವರು ಧ್ರುಪದ್ ಗಾಯಕಿಯನ್ನು ಖ್ಯಾಲ ಗಾಯಕಿಗೆ ಬದಲಾಯಿಸಿದ್ದರು. ಆದರೆ ಗ್ವಾಲಿಯರ್ ಘರಾನವು ಟಪ್ಪಾ ಶೈಲಿಯನ್ನು ಆಧರಿಸಿತ್ತು. ನಾನು ಧ್ರುಪದ್ ಕಲಿಯಲಿಲ್ಲ. ಆದರೆ ನನ್ನ ಗುರುಗಳಿಂದಾಗಿ ನನಗದರ ಹಿನ್ನೆಲೆ ದಕ್ಕಿತ್ತು.

ಶುದ್ಧ ಹಾಗೂ ಜೋಡ್ ರಾಗಗಳ ಗಾಯನ
ಶುದ್ಧರಾಗಗಳಾದ ಭೂಪಾಲಿ, ಯಮನ್, ತೋಡಿ, ದೇಸ್‌ಕಾರ್ ಮುಂತಾದ ರಾಗಗಳನ್ನು ಹಾಡುವಂತೆಯೇ ಹಲವಾರು ಮಿಶ್ರರಾಗಗಳನ್ನು ಹಾಡುವುದರಲ್ಲಿ ಪರಿಣತಿಯನ್ನು ಸಾಧಿಸುವುದು ನನ್ನ ತಲೆಮಾರಿನವರಿಗೆ ಕಷ್ಟವಿರಲಿಲ್ಲ, ಏಕೆಂದರೆ ನಾವು ಈ ತಲೆಮಾರಿನವರಂತಲ್ಲ, ನಾವು ಯೋಚಿಸುತ್ತಿದ್ದ ಕ್ರಮ ಭಿನ್ನವಾಗಿತ್ತು.

ಲಯಕರಿಯನ್ನು ಕುರಿತು.
ಲಯಕರಿಯು ರಾಗವನ್ನು ಬೆಳಸುವುದಕ್ಕೆ ತುಂಬಾ ಸಹಕಾರಿ ಎನ್ನುವುದು ನನ್ನ ಅಭಿಪ್ರಾಯ. ಆದರೆ ಸಂಗೀತಗಾರನಿಗೆ ಬಂದಿಶ್‌ನ ಲಯವನ್ನು ಆಲಿಸುವುದಕ್ಕೆ ಬರಬೇಕು. ನಾನು ತೀನ್‌ತಾಲ್, ರೂಪಕ್, ಝಂಪೆ, ಝುಮರ್ ತಾಲ್ ಮುಂತಾದ ವಿಭಿನ್ನ ತಾಳಗಳಲ್ಲಿ ಹಾಡುತ್ತೇನೆ ಆದರೆ ಇವುಗಳಲ್ಲೆಲ್ಲಾ ಮುಖ್ಯವಾದುದು ಲಯ. ಅದನ್ನು ಸರಿಯಾಗಿ ಗ್ರಹಿಸಬೇಕು.

ವಿಶ್ವವಿದ್ಯಾಲಯದಲ್ಲಿ ಸಂಗೀತ ಶಿಕ್ಷಣ ನೀಡುವುದರ ಬಗ್ಗೆ.
ಇಂದು ಸಂಗೀತ ಶಾಲೆಗಳಲ್ಲಿ ಮತ್ತು ವಿಶ್ವವಿದ್ಯಾಲಯಗಳಲ್ಲಿ ಕಲಿಸುತ್ತಿರುವುದು ಸಂಗೀತದ ಮೂಲತತ್ವಗಳನ್ನು ಅರಿತುಕೊಳ್ಳುವುದಕ್ಕೆ ಮಾತ್ರ ಸಹಕಾರಿಯಾಗಿದೆ. ಅಲ್ಲಿ ಸಂಗೀತದ ವಿದ್ಯಾರ್ಥಿಗಳಿಗೆ ಪ್ರವೇಶ ಪಡೆಯಬೇಕಾದರೆ ಒಂದು ಸಾಂಪ್ರದಾಯಿಕ ಶಿಕ್ಷಣವೂ ಇರಬೇಕೆನ್ನುವ ನಿಯಮವಿದೆ. ಅದು ನಿಜವಾಗಲೂ ದುರದೃಷ್ಟಕರವಾದ ಅಂಶ. ಸಾಂಪ್ರದಾಯಿಕ ಶಿಕ್ಷಣವಿಲ್ಲದ ಆದರೆ, ಸಹಜವಾಗಿಯೇ ಸಂಗೀತದಲ್ಲಿ ಒಲವು ಮತ್ತು ಪ್ರತಿಭೆ ಇರುವ ವಿದ್ಯಾರ್ಥಿಗಳು ಈ ಸಂಗೀತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹಾಗಾಗಿಯೇ ನಾನು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಂಗೀತದಲ್ಲಿ ನಿಜವಾದ ಆಸಕ್ತಿ ಮತ್ತು ಪ್ರತಿಭೆ ಇರುವವರಿಗೆ ಅವರ ಉಳಿದ ಯಾವುದೇ ಸಾಂಪ್ರದಾಯಿಕ ಶೈಕ್ಷಣಿಕ ಅರ್ಹತೆಯನ್ನೂ ಪರಿಗಣಿಸದೆ ಸಂಗೀತದ ಆರು ವರುಷಗಳ ಸರ್ಟಿಫಿಕೇಟ್ ಕೋರ್ಸಿಗೆ ಪ್ರವೇಶ ನೀಡಬೇಕು ಎಂಬ ನಿಯಮವನ್ನು ರೂಪಿಸಿದೆ.

ಗುರುಶಿಷ್ಯ ಪರಂಪರೆಯನ್ನು ಕುರಿತು.
ನಾನು ಮೂಲತಃ ಒಬ್ಬ ಘರಾನದ ಮನುಷ್ಯ. ನಮ್ಮ ಸಂಗೀತ ಪರಂಪರೆಗೆ ಘರಾನಾ ವ್ಯವಸ್ಥೆಯು ತುಂಬಾ ಮುಖ್ಯವಾದುದು. ಅದಿಲ್ಲದೆ ನಿಜವಾದ ಕಲಾವಿದರ ತಲೆಮಾರೊಂದು ಬರುವುದು ಸಾಧ್ಯವೇ ಇಲ್ಲ.

ಇಂದಿನ ಶಿಷ್ಯ ಪರಂಪರೆಯ ಬಗ್ಗೆ.
ಇಂದು ಈ ಕ್ಷೇತ್ರದಲ್ಲಿ ತುಂಬಾ ಸಮರ್ಥವಾಗಿ ಕಲಿಸುವ ಗುರುವಿನ ಕೊರತೆ ಇದೆ. ಆದರೆ ತುಂಬಾ ಸಮರ್ಪಣ ಭಾವ ಮತ್ತು ಶಿಸ್ತಿನಿಂದ ಕಲಿಯುವ ಶಿಷ್ಯರ ಕೊರತೆಯೂ ಅಷ್ಟೇ ಇದೆ. ಈ ನನ್ನ ವಿಚಾರದಲ್ಲೇ ಹೇಳುವುದಾದರೆ, ನಾನು ಹಲವಾರು ಶಿಷ್ಯರಿಗೆ ಕಲಿಸಲು ಪ್ರಯತ್ನಿಸಿದ್ದೇನೆ. ಆದರೆ ಒಬ್ಬರೂ ಈ ವೃತ್ತಿಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ.

ಹಿಂದೂಸ್ತಾನಿ ಸಂಗೀತದ ಕೇಳುಗರ ರಸಾಭಿಜ್ಞತೆಯನ್ನು ಕುರಿತು.
ಅಭಿಜಾತ ಸಂಗೀತವನ್ನು ಕೇಳುವವರಿಗೆಲ್ಲರಿಗೂ ಅದರ ಬಗ್ಗೆ ಪ್ರೀತಿ ಅಥವಾ ಅದನ್ನು ಕುರಿತು ಅಭಿರುಚಿ ಇರುವುದಿಲ್ಲ. ಇಂದು ನಾವು ಜನಸಾಮಾನ್ಯರು ಸಂಗೀತವನ್ನು ಆಸ್ವಾದಿಸುತ್ತಿರುವ ಕಾಲದಲ್ಲಿ ಇದ್ದೇವೆ. ಸಾಮಾನ್ಯ ಜನರಿಗೆ ಶಾಸ್ತ್ರೀಯ ಸಂಗೀತದ ಸೂಕ್ಷ್ಮ ಹಾಗೂ ಉತ್ಕೃಷ್ಟ ಅಂಶಗಳನ್ನು ಅರ್ಥಮಾಡಿಕೊಂಡು, ಅದನ್ನು ಸವಿಯುವುದನ್ನು ಹಲವಾರು ರೀತಿಗಳಲ್ಲಿ ಕಲಿಸಬೇಕು; ಉದಾಹರಣೆಗೆ ಸ್ವರ, ಲಯ, ಬಂದಿಶ್, ಇನ್ನೂ ಮುಂತಾದವುಗಳೆಂದರೇನು ಎನ್ನುವುದನ್ನು ಸರಳವಾದ ಭಾಷೆಯಲ್ಲಿ ತಿಳಿಸಿಕೊಡಬೇಕು.

ಸಂಗೀತದಲ್ಲಿ ಹೊಸಪ್ರಯೋಗಗಳನ್ನು ಕುರಿತು
ಇಂದು ನಮ್ಮಲ್ಲಿ ಹೊಸಸೃಷ್ಟಿ ಎನ್ನುವ ಹೆಸರಿನಲ್ಲಿ ಬರುತ್ತಿರುವ ರಾಗಗಳೆಲ್ಲವೂ ಹೆಚ್ಚುಕಡಿಮೆ ನಮ್ಮ ಅತ್ಯಂತ ಪ್ರಮುಖವಾದ, ಮತ್ತು ತುಂಬಾ ಮಧುರವಾದ ಖ್ಯಾತ ರಾಗಗಳನ್ನು ತಿರುಚಿ, ಸವರಿ, ಕತ್ತರಿಸಿ ರೂಪಿಸಿರುವ ರಾಗಗಳು ಅಷ್ಟೆ. ಈಗಾಗಲೇ ಪ್ರಚಲಿತದಲ್ಲಿರುವ ವೈವಿಧ್ಯಮಯ ರಾಗಗಳನ್ನು ಸಿದ್ಧಿಸಿಕೊಳ್ಳಲು ನಮ್ಮ ಇಡೀ ಆಯುಷ್ಯ ಸಾಲುವುದಿಲ್ಲ. ಅವುಗಳಲ್ಲದೆ, ಇನ್ನು ನೂರಾರು ಪುರಾತನವಾದ ಮತ್ತು ಅಷ್ಡೇನೂ ಪರಿಚಿತವಲ್ಲದ ರಾಗಗಳು ಸರಿಯಾದ ಕಲಾವಿದನೊಬ್ಬನ ಬರವಿಗಾಗಿ ಕಾಯುತ್ತಿವೆ. ಪರಿಸ್ಥಿತಿ ಹೀಗಿರುವಾ ಹೊಸ ರಾಗಗಳ ಮಾತೇಕೆ?

ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತದ ಏಕೀಕರಣವನ್ನು ಕುರಿತು
ಮುಂದೆ ಎಂದಾದರೂ ಇವೆರಡೂ ಪದ್ಧತಿಗಳನ್ನು ಒಂದುಗೂಡಿಸುವುದಕ್ಕೆ ಸಾಧ್ಯ ಆಗಬಹುದೇನೋ; ಆದರೆ ಅದು ಖಂಡಿತವಾಗಿಯೂ ಉಪಯುಕ್ತವಲ್ಲ. ಈ ಎರಡೂ ಪದ್ಧತಿಗಳು ಹಲವಾರು ಶತಮಾನಗಳಿಂದ ವಿಕಾಸಗೊಂಡು ಶ್ರೀಮಂತವಾಗಿವೆ ಅಷ್ಟೇ ಅಲ್ಲ ನೆಮ್ಮದಿಯಿಂದ ಒಟ್ಟಿಗಿವೆ. ಈಗ ಅವುಗಳನ್ನು ಬಲವಂತವಾಗಿಯಾದರೂ ಏಕೆ ಒಂದು ಮಾಡಬೇಕು? ಹಾಗೆ ಮಾಡಿದಲ್ಲಿ ಎರಡೂ ಪದ್ಧತಿಗಳು ತಮ್ಮ ವೈಶಿಷ್ಟ್ಯ ಮತ್ತು ಅನನ್ಯತೆಗಳನ್ನು ಕಳೆದುಕೊಳ್ಳುತ್ತವೆ.

ಭಾರತೀಯ ಸಂಗೀತದ ಬಗ್ಗೆ ಪಾಶ್ಚಿಮಾತ್ಯರ ಆಸಕ್ತಿಯನ್ನು ಕುರಿತು
ಸಂಗೀತ ಕಛೇರಿಗಳನ್ನು ನೀಡಲು ನಾನೆಂದೂ ಹೊರದೇಶಗಳಿಗೆ ಹೋಗಿಲ್ಲ. ಸಂಗೀತ ಇಲ್ಲಿಂದ ಅಲ್ಲಿಗೆ ರಫ್ತಾಗುವುದು ಸಂತೋಷದ ವಿಚಾರವೇ. ಅಲ್ಲಿ ನೆಲೆಸಿರುವ ಭಾರತೀಯರು ತಮ್ಮ ತಾಯ್ನಾಡಿನ ಸಂಗೀತಕ್ಕಾಗಿ ಹಾತೊರೆಯುತ್ತಿರುತ್ತಾರೆ, ಅವರಿಗೆ ಇದು ನೆಮ್ಮದಿಯನ್ನು ನೀಡುತ್ತದೆ. ಭಾರತೀಯ ಸಂಗೀತದ ಬಗ್ಗೆ ಇರುವ ಕುತೂಹಲದಿಂದಾಗಿ ಮತ್ತು ತಮ್ಮ ಭಾರತೀಯ ಗೆಳೆಯರನ್ನು ಮೆಚ್ಚಿಸುವ ಕಾರಣಕ್ಕಾಗಿ ವಿದೇಶೀಯರು ಈ ಸಂಗೀತವನ್ನು ಕೇಳಲು ಬರುತ್ತಾರೆ ಅಷ್ಟೆ ಎಂದು ನನಗನ್ನಿಸುತ್ತದೆ. ಆದರೆ ದುರದೃಷ್ಟದ ಮಾತೆಂದರೆ ನಮ್ಮ ಹೆಚ್ಚಿನ ಸಂಗೀತಗಾರರು ಅದರಲ್ಲೂ ಹೆಚ್ಚಾಗಿ ವಾದ್ಯಗಾರರು ಈ ವಿದೇಶೀಯರನ್ನು ದಂಗುಬಡಿಸಲು ಹಲವು ಬಗೆಯ ದೊಂಬರಾಟ ಹಾಗೂ ಚಮತ್ಕಾರಗಳನ್ನು ಮಾಡುತ್ತಾರೆ. ತಾವು ಅಲ್ಲಿ ಚಪ್ಪಾಳೆ ಗಿಟ್ಟಿಸಲು ಮಾಡಿದ ದೊಂಬರಾಟವನ್ನು ಇಲ್ಲಿಯೂ ಮಾಡಿ ತೋರಿಸುತ್ತಿದ್ದಾರೆ. ಇದೇ ಪ್ರವೃತ್ತಿ ಹೀಗೇ ಮುಂದುವರೆದಲ್ಲಿ ಅದು ಭಾರತೀಯ ಸಂಗೀತಕ್ಕೆ ತುಂಬಾ ಮಾರಕವಾಗಿ ಪರಿಣಮಿಸುತ್ತದೆ.

ಸಂಗೀತ ವಿಮರ್ಶೆಯನ್ನು ಕುರಿತು
ಒಬ್ಬ ಕಲಾವಿದ ತನ್ನ ಸಂಗೀತವನ್ನು ಮತ್ತು ಅದರ ಮಟ್ಟವನ್ನು ತಾನೇ ವಿಮರ್ಶಿಸಿಕೊಳ್ಳಲು ಸಾಧ್ಯವಾಗಬೇಕು ಎನ್ನುವುದು ನನ್ನ ನಂಬಿಕೆ. ಕೆಲವು ಅಪರೂಪದ ಸಂದರ್ಭಗಳನ್ನು ಬಿಟ್ಟರೆ ಉಳಿದಂತೆ ಪತ್ರಿಕೆಯ ವಿಮರ್ಶೆಗಳನ್ನು ನಾನು ಓದುವುದಿರಲಿ, ನೋಡುವುದೂ ಇಲ್ಲ. ಪೂರ್ವಾಗ್ರಹವಿಲ್ಲದ ಹಾಗೂ ತಿಳುವಳಿಕೆಯಿಂದ ಕೂಡಿದ ವಿಮರ್ಶೆ ಪತ್ರಿಕೆಗಳಲ್ಲಿ ಬರುವುದೇ ಇಲ್ಲ. ಶಾಸ್ತ್ರೀಯ ಸಂಗೀತವನ್ನು ಸರಿಯಾಗಿ ಅರ್ಥಮಾಡಿಕೊಂಡು ವಿಮರ್ಶಿಸಬೇಕಾದರೆ ವಿಮರ್ಶಕರು ಹಾಗೂ ರಸಿಕರು ಇಬ್ಬರೂ ಪ್ರಾಜ್ಞರೂ, ತಾಳ್ಮೆಯುಳ್ಳವರೂ ಹಾಗೂ ನಿಷ್ಪಕ್ಷಪಾತಿಗಳೂ ಆಗಿರಬೇಕು.

ವಿದ್ಯಾರ್ಥಿಗಳು ಮತ್ತು ಸಂಗೀತಾಭ್ಯಾಸವನ್ನು ಕುರಿತು
ಹಾಡುವುದು ಎಂದರೇನು? ಅದು ಮೂಲಭೂತವಾಗಿ ಒಬ್ಬ ವ್ಯಕ್ತಿಯ ಕಲ್ಪನಾಶೀಲತೆಗೆ ಕೊಡುವ ವ್ಯಾಯಾಮವೇ ಹೊರತು ಬೇರೇನಲ್ಲ. ಒಂದು ರಾಗದ ವಾದಿ-ಸಂವಾದಿ ಸ್ವರಕ್ಕಷ್ಟೇ ಅಂಟಿಕೊಂಡುಬಿಟ್ಟರೆ ಏನೂ ಉಪಯೋಗವಿಲ್ಲ. ಉಳಿದ ಸ್ವರಗಳೂ ಇರುತ್ತವೆ. ಯಮನ್‌ನಲ್ಲಿ ಕೇವಲ ನಿಷಾದ ಮತ್ತು ಗಾಂಧಾರ ಹಾಡಿದರೆ ಸಾಲದು, ಪಂಚಮವನ್ನು ಎಲ್ಲಿ ಹಾಡಿದರೆ ಸೊಗಸುತ್ತದೆ ಎನ್ನುವುದೂ ತಿಳಿದಿರಬೇಕು. ಇವುಗಳನ್ನು ವಿದ್ಯಾರ್ಥಿಯು ಕಲಿಯಬೇಕು. ಹಿಂದೆಲ್ಲಾ ಗುರುಗಳು ಶಿಷ್ಯರಿಗೆ ಹೇಗೆ ಪಾಠಹೇಳುತ್ತಿದ್ದರೆಂದರೆ, ಸ್ವರಗಳು ಶ್ರುತಿಶುದ್ಧವಾಗಿ, ಒಂದರಿಂದೊಂದು ಸಹಜವಾಗಿ ಬಂದ ನಂತರವೇ ಅವುಗಳನ್ನು ಎಲ್ಲಿ ಹೇಗೆ ಬಳಸಬೇಕು ಎಂದು ಶಿಷ್ಯರಿಗೆ ಕಲಿಸುತ್ತಿದ್ದರು. ಜೊತೆಗೆ ಸಂಗೀತವು ಮೂಲತಃ ಒಂದು ಶ್ರವಣವಿದ್ಯೆ. ಹಾಗಾಗಿ ತುಂಬಾ ಕೇಳಬೇಕು ಮತ್ತು ಸಂಗೀತದ ಬಗ್ಗೆ ಸದಾ ಆಲೋಚಿಸುತ್ತಿರಬೇಕು. ಸಂಗೀತದ ಕೇಳ್ಮೆ ಮತ್ತು ಚಿಂತನೆಗೇ ಹೆಚ್ಚಿನ ಪ್ರಾಮುಖ್ಯ ನೀಡಬೇಕು.

ಸಂಗೀತಗಾರ ನಿತ್ಯ ರಿಯಾಜ್ ಮಾಡಬೇಕು. ಒಂದು ದಿನ ತಪ್ಪಿದರೂ ಸಂಗೀತ ನಾವು ಹೇಳಿದಂತೆ ಕೇಳುವುದಿಲ್ಲ. ನನ್ನ ಜೀವನದಲ್ಲಿ ಎಂದೂ ನಾನು ರಿಯಾಜ್ ತಪ್ಪಿಸಿಲ್ಲ. ಅದಕಾರಣವೇ ನಾನು ಯಾವುದೇ ರಾಗವನ್ನು ಥಟ್ಟನೆ ಎತ್ತಿಕೊಳ್ಳುತ್ತಿದ್ದೆ ಮತ್ತು ಕಿಡ್ನಿ ಆಪರೇಷನ್ ಆಗಿ, ಇಳಿವಯಸ್ಸಿನಲ್ಲೂ ನನ್ನ ಧ್ವನಿ ಕುಗ್ಗದಿರಲು ರಿಯಾಜೇ ಕಾರಣ. ನಿತ್ಯ ರಿಯಾಜಿನಿಂದ ಹೊಸ ಹೊಸ ಆಯಾಮಗಳು ದೊರೆತು ಸಂಗೀತದ ಆತ್ಮವನ್ನು ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯವಾಗುತ್ತದೆ. ಸಂಗೀತಗಾರ ರಾಗಗಳಿಗೆ, ಸೂರುಗಳಿಗೆ ಪ್ರಾಮಾಣಿಕವಾಗಿರಬೇಕು. ಶುದ್ಧ ಸೂರು, ಶುದ್ಧ ಶ್ರುತಿಯನ್ನು ಮೈಗೂಡಿಸಿಕೊಂಡರೆ ಮಾತ್ರ ಸಂಗೀತಗಾರ ಗೆಲ್ಲುತ್ತಾನೆ.

Recommended Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.