ಮೂರು ಆಸ್ಪತ್ರೆ ಅಲೆದರು. ಕೊನೆಗೆ ಬೆಡ್ ಸಿಕ್ಕಿತ್ತು. ಆದರೆ ತುಂಬಾ ತಡವಾಗಿತ್ತು
ಲೂಯಿಸ್ ಅರೆಲ್ಲಾನೊಗೆ ತನಗೆ ಆರೋಗ್ಯ ಸರಿ ಇಲ್ಲ ಅನ್ನಿಸಿತು. ಕೊರೋನಾ ವೈರಾಣು ಸೋಂಕಿನ ಲಕ್ಷಣಗಳೇಲ್ಲಾ ಇವೆ ಅನ್ನಿಸಿತು. ಲೂಯಿಸ್ ಅರೆಲ್ಲಾನೊ ಮೊದಲಿಗೆ ಹತ್ತಿರದ ಬ್ರೂಕಲಿನ್ ಆಸ್ಪತ್ರೆಗೆ ಹೋದರು. ಅಲ್ಲಿ, ಈಗ ಬೇಡ, ಆರೋಗ್ಯದ ಸ್ಥಿತಿ ಗಂಭೀರವೆನಿಸಿದಾಗ ಬನ್ನಿ ಅಂತ ಹೇಳಿ ಕಳುಹಿಸಿದರು.
ಒಂದೆರಡು ದಿನಗಳಲ್ಲಿ ಆರೋಗ್ಯ ಹದಗೆಟ್ಟಿತು. ಮನೆಯವರು ಅವರನ್ನು ನ್ಯೂ ಜರ್ಸಿಯ ಆಸ್ಪತ್ರೆಗೆ ಕರೆದುಕೊಂಡು ಹೋದರು. ಎಂಟು ಗಂಟೆ ಕಾದರು. ಇನ್ನೂ ಏಳೆಂಟು ಗಂಟೆ ಕಾಯಬೇಕಾಗಬಹುದು ಅಂತ ಆಸ್ಪತ್ರೆಯ ಸಿಬ್ಬಂದಿಗಳು ಹೇಳಿದರು. ತಿರುಗಿ ಮನೆಗೆ ಬಂದರು.
೬೫ ವರ್ಷದ ಅರೆಲ್ಲನೊ ಅವರ ಆರೋಗ್ಯ ತುಂಬಾ ಹದಗೆಟ್ಟಿದೆ, ಈಗ ಅವರನ್ನು ಆಸ್ಪತ್ರೆಗೆ ಸೇರಿಸಿಕೊಳ್ಳುತ್ತಾರೆ ಅಂತ ಅಂದುಕೊಳ್ಳುವ ವೇಳೆಗೆ ಕೋವಿಡ್-೧೯ರಿಂದ ದೇಹ ತುಂಬಾ ಬಳಲಿತ್ತು. ಅವರು ತುಂಬಾ ದಣಿದಿದ್ದರು.
ಆಸ್ಪತ್ರೆಯಲ್ಲಿ ಐದು ದಿನ ಇದ್ದರು. ಏಪ್ರಿಲ್ ೫ರಂದು ಕಾರ್ಡಿಯೊಪಲ್ಮನರಿ ಅರೆಸ್ಟ್‌ನಿಂದ ತೀರಿಕೊಂಡರು. ಸತ್ತ ಎರಡು ದಿನಗಳ ಮೇಲೆ ಅವರ ವೈರಾಣು ಪರೀಕ್ಷೆಯ ಫಲಿತಾಂಶ ಬಂದಿತು.ಪಾಸಿಟಿವ್ ಎಂದು ಅದರಲ್ಲಿ ನಮೂದಿಸಿತ್ತು.
ಅವರನ್ನು ಆಸ್ಪತ್ರೆಗೆ ದಾಖಲು ಮಾಡಿಕೊಂಡಿದ್ದರೆ, ಅವರ ಸ್ಥಿತಿ ನಿಜವಾಗಿಯೂ ತುಂಬಾ ಗಂಭೀರವಾಗಿತ್ತು ಅಂತ ಗೊತ್ತಾಗುತ್ತಿತ್ತು ಅಂತ ಅವರ ಸೋದರ ದುಃಖ ತೋಡಿಕೊಂಡ.
ಅರೆಲ್ಲನೊ ಶುಶ್ರೂಷೆ ಪಡೆಯುವುದಕ್ಕೆ ಪಟ್ಟ ಪಾಡನ್ನು ನೋಡಿದರೆ ನ್ಯೂಯಾರ್ಕ್ ಹಾಗೂ ನ್ಯೂಜರ್ಸಿಯಲ್ಲಿ ನರ್ಸುಗಳು ಹಾಗೂ ಡಾಕ್ಟರುಗಳು ಇರುವ ಅತ್ಯಲ್ಪ ಸೌಲಭ್ಯವನ್ನು ಹಂಚುವುದಕ್ಕೆ ಪಡುತ್ತಿರುವ ಪಾಡು ತಿಳಿಯುತ್ತದೆ. ಅವೆರಡು ಕರೋನಾ ವೈರಾಣುವಿನಿಂದ ತುಂಬಾ ಜರ್ಝರಿತವಾದ ರಾಜ್ಯಗಳು. ಬಂದ ರೋಗಿಗಳನ್ನೆಲ್ಲಾ ಸೇರಿಸಿಕೊಳ್ಳುವುದಕ್ಕೆ ಆಗುವುದಿಲ್ಲ. ಹಾಸಿಗೆಯೂ ಇಲ್ಲ, ವೆಂಟೆಲೇಟರ್‌ಗಳೂ ಇಲ್ಲ.
ಹೆಚ್ಚಿನ ಸಂದರ್ಭಗಳಲ್ಲಿ ಆರೋಗ್ಯ ಸಿಬ್ಬಂದಿಗಳು ಒಂದೆರಡು ನಿಮಿಷಗಳಲ್ಲಿ ರೋಗಿಗೆ ತುರ್ತಾಗಿ ಚಿಕಿತ್ಸೆ ಬೇಕಾ ಅಥವಾ ಕಾಯಬಹುದಾ ಅಂತ ನಿರ್ಧರಿಸಬೇಕು. ಯಾರನ್ನು ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಬೇಕು, ಯಾರು ಮನೆಯಲ್ಲೇ ಸುಧಾರಿಸಿಕೊಳ್ಳಬಹುದು ಅಂತ ತೀರ್ಮಾನಿಸಬೇಕು. ಹೆಚ್ಚಿನ ರೋಗಿಗಳಿಗೆ ಅದು ಸಾವು ಬದುಕಿನ ನಿರ್ಧಾರವಾಗಿರುತ್ತದೆ.
ಕೊರೋನಾ ವೈರಾಣುವಿನ ಸ್ವಭಾವವೇ ತುಂಬಾ ಸಂಕೀರ್ಣ ಮತ್ತು ಗೂಢ. ಹಾಗಾಗಿ ಪ್ರಾರಂಭದಲ್ಲೇ ನಿರ್ಧಾರ ತೆಗೆದುಕೊಳ್ಳುವುದು ಸುಲಭದ ಕೆಲಸವಲ್ಲ. ಮೊದಲು ಪರವಾಗಿಲ್ಲ, ಅಷ್ಟೇನು ಗಂಭೀರವಿಲ್ಲ ಅನ್ನಿಸಿರುತ್ತೆ. ಕೆಲವೇ ಕ್ಷಣಗಳಲ್ಲಿ ತುಂಬಾ ಗಂಭೀರವಾಗಿಬಿಡಬಹುದು.
ಅರೆಲ್ಲಾನೊ ಅವರಿಗೆ ಮಾರ್ಚಿ ಕೊನೆಯಲ್ಲಿ ಜ್ವರ ಕಾಣಿಸಿಕೊಂಡಿತು. ಮಾರ್ಚಿ ೨೬ರಂದು ಅವರನ್ನು ಬ್ರೂಕ್ಲಿನ್ ತುರ್ತು ಚಿಕಿತ್ಸಾ ವಿಭಾಗದಲ್ಲಿ ನೋಡಿದ ವೈದ್ಯರು ನ್ಯುಮೋನಿಯಾ ಆಗಿದೆ ಅಂತ ಹೇಳಿದರು ಎಂದು ಅವರ ಮನೆಯವರು ಹೇಳಿದರು. ಎರಡು ದಿನದ ನಂತರ ಉಸಿರಾಡೋದಕ್ಕೆ ಕಷ್ಟವಾಗುತ್ತಿದೆ ಅಂತ ಅವರು ಹೇಳಿದರು. ಆದರೆ ಆಸ್ಪತ್ರೆಗೆ ದಾಖಲಾಗುವುದಕ್ಕೆ ಅವಕಾಶವಾಗಲಿಲ್ಲ.
ಅವರನ್ನು ಆಸ್ಪತ್ರೆಗೆ ಸೇರಿಸುವುದಕ್ಕೆ ಒಂದು ವಾರ ಸತತವಾಗಿ ಹೋರಾಡಬೇಕಾಯಿತು. ಅಂತ ಅವರ ಒಬ್ಬನೇ ಮಗ ಕಾರ್ಲೊಸ್ ಅರೆಲ್ಲನೊ ಹೇಳಿದ. ಆಸ್ಪತ್ರೆಗೆ ಸೇರಿಸುವುದಕ್ಕೆ ಅವರು ಪಟ್ಟ ಹರಸಾಹಸವನ್ನು ವಿವರಿಸಿದ. ಕೊನೆಗೆ ಸಾಧ್ಯವಾಯಿತು. ಆದರೆ ತುಂಬಾ ತಡವಾಗಿತ್ತು.
ಸಿಟಿ ಕೌನ್ಸಿಲ್ ಹೆಲ್ತ್ ಕೇರ್‌ನ ಮುಖ್ಯಸ್ಥ ಮಾರ್ಕ್ ಲೆವಿನ್ ಆಸ್ಪತ್ರೆಗಳು ಹಲವರನ್ನು ಆಚೆಗೆ ಕಳುಹಿಸುತ್ತಿವೆ ಅದರಲ್ಲಿ ನ್ಯೂಮೊನಿಯಾ ಮಾದರಿಯ ಲಕ್ಷಣಗಳಿರುವರೂ ಸೇರಿದ್ದಾರೆ ಎಂದು ಟ್ವೀಟ್ ಮಾಡಿದ. ಅದನ್ನು ಅಲ್ಲಿಯ ಮೇಯರ್ ಮತ್ತು ಆಸ್ಪತ್ರೆಯ ಜನ ಬಲವಾಗಿ ಅಲ್ಲಗೆಳೆದರು.
ನಮ್ಮ ಆಸ್ಪತ್ರೆ ನ್ಯೂಮೊನಿಯಾ ಇರುವವರನ್ನು ಸೇರಿಸಿಕೊಂಡಿಲ್ಲ ಅನ್ನುವುದು ಬೇಜವಾಬ್ದಾರಿಯ, ಸತ್ಯಕ್ಕೆ ದೂರವಾದ ಮತ್ತು ಸಲ್ಲದ ದೂರು. ಎಂದು ತಿಳಿಸಿದರು.
ರೋಗಿಗಳ ಆರೋಗ್ಯ ಸ್ಥಿತಿ ಅಷ್ಟು ಗಂಭೀರವಿಲ್ಲದಿದ್ದಾಗ ಅವರನ್ನು ಮನೆಯಲ್ಲೇ ಉಳಿದುಕೊಳ್ಳುವಂತೆ ಆಸ್ಪತ್ರೆಗಳ ಸಿಬ್ಬಂದಿಗಳು ಹೇಳಿರುವುದು ನಿಜ ಎಂದು ಡಾಕ್ಟರ್ ಕಟ್ಜ್ ಹೇಳಿದರು. ಆದರೆ ಉಸಿರಾಡುವುದಕ್ಕೆ ಕಷ್ಟ ಪಡುತ್ತಿದ್ದ ನ್ಯೂಮೋನಿಯಾ ರೋಗಿಗಳನ್ನು ನಾವು ಹಾಗೆ ಕಳುಹಿಸಿಲ್ಲ ಎಂದು ಹೇಳಿದರು.
ಅರೆಲ್ಲಾನೊ ಅಪಾರ್ಟಮೆಂಟ್ ಒಂದರಲ್ಲಿ ತನ್ನ ಸೋದರಿಯ ಮನೆಯಲ್ಲಿ ಇದ್ದರು. ಜೊತೆಗೆ ೯೬ವರ್ಷದ ತಂದೆ ವಾಸಿಸುತ್ತಿದ್ದರು. ಕೆಮ್ಮು ಮತ್ತು ಜ್ವರ ಪ್ರಾರಂಭವಾದ ಮೇಲೆ ನಡುಮನೆಯಲ್ಲಿ ಮಲಗುತ್ತಿದ್ದರು.
ಅವರದ್ದು ತುಂಬಾ ಅನ್ಯೋನ್ಯವಾಗಿದ್ದ ಕುಟುಂಬ.
ಅರೆಲ್ಲಾನೊ ಹುಟ್ಟಿದ್ದು ಇಕ್ವಡಾರ್‌ನ ಅಲೌಸಿಯಲ್ಲಿ. ಅಲ್ಲಿ ಮನೋವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದರು. ಆದರೆ ಅಮೇರಿಕೆಗೆ ಬಂದ ಮೇಲೆ ಅದಕ್ಕೆ ಬೇಕಾದ ಪರೀಕ್ಷೆಯನ್ನು ಪಾಸು ಮಾಡಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ಕಾಲೇಜೊಂದರಲ್ಲಿ ಆಫೀಸ್ ಇತ್ಯಾದಿ ಕ್ಲೀನ್ ಮಾಡಿಕೊಂಡಿದ್ದರು. ಕೊನೆಗೆ ಮನೆಯ ಸಹಾಯಕರಾಗಿ ಸೇವೆ ಮಾಡುತ್ತಿದ್ದರು. ವೃದ್ಧರನ್ನು ನೋಡಿಕೊಳ್ಳುತ್ತಿದ್ದರು.
ಹೀಗೆ ಕೆಲಸ ಮಾಡುತ್ತಿದ್ದಾಗ ಒಂದು ದಿನ ಆರೋಗ್ಯ ತಪ್ಪಿತು. ಅವರಿಗೂ ತಮ್ಮ ಸೋದರಿಯಂತೆ ಸಕ್ಕರೆ ಖಾಯಿಲೆ ಇತ್ತು. ಆದರೆ ಆರೋಗ್ಯ ತಪ್ಪಿದ ಆರಂಭದಲ್ಲಿ ಉಸಿರಾಟದ ಸಮಸ್ಯೆ ಇರಲಿಲ್ಲ. ಆದರೂ ಮನೆಯಲ್ಲಿದ್ದಾಗ ಅವರು ಪ್ರತ್ಯೇಕವಾಗಿರುವಂತೆ ಮನೆಯವರು ವ್ಯವಸ್ಥೆ ಮಾಡಿದ್ದರು. ಆದರೆ ಬರುಬರುತ್ತಾ ಅವರ ಆರೋಗ್ಯ ತುಂಬಾ ಹದಗೆಟ್ಟಿತು.
ತುರ್ತು ಚಿಕಿತ್ಸಾ ಕೇಂದ್ರದಿಂದ ಬಂದ ಮೇಲೆ ಎರಡೇ ದಿನಕ್ಕೆ ಅವರಿಗೆ ಉಸಿರಾಡುವುದಕ್ಕೆ ತುಂಬಾ ಕಷ್ಟವಾಯಿತು. ಮೇಲುಸಿರು ಬಿಡುತ್ತಿದ್ದರು. ಅವರ ಸೋದರಿ ಅಂಬ್ಯುಲೆನ್ಸ್ ಕರೆದರು. ಅವರನ್ನು ಬ್ರೂಕ್‌ಲಿನ್ನಿನ ವುಡ್‌ಹಲ್ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋದರು.
ಅದು ನ್ಯೂಯಾರ್ಕಿನಲ್ಲಿ ಕರಾಳ ದಿನ. ಒಂದೇ ದಿನಕ್ಕೆ ೧೦೦೦ಕ್ಕೂ ಹೆಚ್ಚು ಜನ ಆಸ್ಪತ್ರೆ ಸೇರಿದ್ದರು. ೧೨೬೦ ಮುಟ್ಟುತ್ತೆ ಅನ್ನುತ್ತಿದ್ದರು.
ಮನೆಯವರು ಆಸ್ಪತ್ರೆಯ ಸಿಬ್ಬಂದಿಗಳಿಗೆ ಅರೆಲ್ಲನೊ ಆರೋಗ್ಯ ಪರಿಸ್ಥಿತಿ ವಿವರಿಸಿದರು. ಅವರಿಗೆ ನ್ಯುಮೋನಿಯಾ ಎಂದು ಹೇಳಿದ್ದಾರೆ. ಅವರಿಗೆ ಡಯಾಬಿಟಿಸ್ ಇದೆ. ಕೊವಿಡ್ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ ಎಂಬ ಎಲ್ಲಾ ವಿವರಗಳನ್ನು ನೀಡಿದರು. ಆದರೆ ಆಸ್ಪತ್ರೆಯವರು ಅವರನ್ನು ದಾಖಲು ಮಾಡಿಕೊಳ್ಳಲಿಲ್ಲ. ಮನೆಯವರಿಗೆ ಕಾರಣ ತಿಳಿಯಲಿಲ್ಲ. ಆಗ ಆಸ್ಪತ್ರೆಯಲ್ಲಿ ಇರುವ ಸ್ಥಳವನ್ನು ರೋಗಿಗಳಿಗೆ ರೇಷನ್ ರೀತಿಯಲ್ಲಿ ಹಂಚುತ್ತಿದ್ದರು. ತುಂಬಾ ರೋಗಿಗಳು ಬರುವ ನಿರೀಕ್ಷೆ ಇತ್ತು. ಹಾಸಿಗೆ ಮತ್ತು ವೆಂಟಿಲೇಟರ್‌ಗಳ ಕೊರತೆ ತೀವ್ರವಾಗಿತ್ತ್ತು.
ನನಗೆ ಹೆದರಿಕೆ ಆಯಿತು. ಅವರು ಮನೆಗೆ ಕಳುಹಿಸಿಬಿಡುತ್ತಾರೆ ಅಂದುಕೊಂಡಿರಲಿಲ್ಲ.
ಅರೆಲ್ಲಾನೊ ಸ್ಥಿತಿಯಲ್ಲಿ ಯಾವುದೇ ಸುಧಾರಣೆಯು ಆಗಲಿಲ್ಲ ಅಪಾರ್ಟಮೆಂಟಿನ ಹಾಗೂ ಕುಟುಂಬದ ಉಳಿದವರಿಗೂ ಅದು ಹರಡಿಬಿಡಬಹುದು ಅನ್ನುವ ಗಾಬರಿ ಪ್ರಾರಂಭವಾಯಿತು. ಅವರನ್ನು ನ್ಯೂ ಜರ್ಸಿಗೆ ಕರೆದುಕೊಂಡು ಹೋಗುವುದು ಒಳ್ಳೆಯದು ಎಂದು ಮಗ ನಿರ್ಧರಿಸಿದ. ಮಗ ಕಾರ್ಲೊಸ್ ವಾಸವಾಗಿದ್ದ ಜಾಗ ಅದು. ಮತ್ತು ಅಲ್ಲಿ ನ್ಯೂಯಾರ್ಕಗಿಂತ ಪರಿಸ್ಥಿತಿ ಪರವಾಗಿರಲಿಲ್ಲ. ತಂದೆ ಬದುಕುವ ಸಾಧ್ಯತೆ ಅಲ್ಲಿ ಜಾಸ್ತಿ ಅಂತ ಯೋಚಿಸಿದ.
ಪ್ರಯಾಣದ ಉದ್ದಕ್ಕೂ ಅರೆಲ್ಲಾನೊ ಕಾರಿನಲ್ಲಿ ಹಿಂಬದಿಯ ಸೀಟಿನಲ್ಲಿ ಕೂತಿದ್ದರು. ಉಸಿರಾಡುವುದಕ್ಕೆ ತುಂಬಾ ಕಷ್ಟ ಪಡುತ್ತಿದ್ದರು. ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಮಧ್ಯಾಹ್ನದ ವೇಳೆಗೆ ನ್ಯೂಜರ್ಸಿಯ ಓವರ್‌ಲುಕ್ ಮೆಡಿಕಲ್ ಸೆಂಟರ್‌ಗೆ ಬಂದರು. ಅಲ್ಲಿ ಕೊರೋನಾಕ್ಕಾಗಿ ಒಂದು ತಾತ್ಕಾಲಿಕ ತುರ್ತು ಕೊಠಡಿಯನ್ನು ಸಿದ್ಧ ಪಡಿಸಿದ್ದರು. ಅಲ್ಲೇ ಕಾಯುವುದಕ್ಕೆ ಹೇಳಿದರು. ಸುಮಾರು ಎಂಟು ಗಂಟೆ ಕಾದರೂ ಬೆಡ್ ಸಿಗಲಿಲ್ಲ. ಇನ್ನೂ ಎಳೆಂಟು ಗಂಟೆ ಕಾಯಬೇಕಾಗಬಹುದು ಎಂದು ತಿಳಿಸಿದರು. ಆಗಲೇ ರಾತ್ರಿ ೧೧ ಗಂಟೆ. ಇವರಿಗಿಂತ ಮುಂಚೆ ೧೦ ಜನ ರೋಗಿಗಳು ಬಂದಿದ್ದರು.
ತುಂಬಾ ನಿರಾಶನಾಗಿದ್ದೆ, ನಮ್ಮಪ್ಪನಿಗೆ ಅಷ್ಟು ಹೊತ್ತು ಕಾಯುವುದಕ್ಕೆ ಆಗುತ್ತೆ ಅಂತ ಅನ್ನಿಸಲಿಲ್ಲ. ಮನೆಗೆ ಕರೆದುಕೊಂಡು ಹೋಗೋಣ ಎಂದು ನಿರ್ಧರಿಸಿದೆ.
ಅಂದು ತುಂಬಾ ಕೊರೋನಾ ರೋಗಿಗಳು ಬಂದುಬಿಟ್ಟಿದ್ದರು. ಅವರು ನಿರೀಕ್ಷೆ ಮಾಡಿರಲಿಲ್ಲ. ಅಂಬ್ಯುಲೆನ್ಸಿನಲ್ಲಿ ಇನ್ನೂ ರೋಗಿಗಳು ಬರುತ್ತಲೇ ಇದ್ದರು. ಇದನ್ನು ತಿಳಿಸಿದ್ದು ಆಸ್ಪತ್ರೆಯ ಪ್ರತಿನಿಧಿಯೇ. ಬರುತ್ತಿದ್ದ ಅಂಬ್ಯುಲೆನ್ಸನ್ನು ಹತ್ತಿರದ ಬೇರೆ ಆಸ್ಪತ್ರೆಯ ಕಡೆ ತಿರುಗಿಸುವಂತೆ ಕೇಳಿಕೊಳ್ಳಲಾಗಿತ್ತು.
ಒವರ್ ಲುಕ್ ಆಸ್ಪತ್ರೆಯಲ್ಲಿ ರೋಗಿಗಳ ಸ್ಥಿತಿಯನ್ನು ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಆದರೆ ಯಾವ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ಅವರು ತಿಳಿಸಲಿಲ್ಲ.
ಇದರಿಂದ ರೋಗಿಗಳು ಹೆಚ್ಚು ಹೊತ್ತು ಕಾಯಬೇಕಾಗುತ್ತದೆ. ಆದರೆ ಒವರ್ ಲುಕ್ ಆಸ್ಪತ್ರೆಯಲ್ಲಿ ಯಾವುದೇ ರೋಗಿಯನ್ನು ಚಿಕಿತ್ಸೆಯಿಲ್ಲದೆ ಕಳುಹಿಸಿಲ್ಲ. ನಮ್ಮಲ್ಲಿ ಚಿಕಿತ್ಸ್ಸೆ ಕೋರಿ ಬಂದವರಿಗೆಲ್ಲಾ ಚಿಕಿತ್ಸೆ ನೀಡುತ್ತಿದ್ದೇವೆ. ತುರ್ತು ವಿಭಾಗಕ್ಕೆ ಅಂಬ್ಯುಲೆನ್ಸಿನಲ್ಲಿ ಬಂದವರನ್ನೂ ನೋಡಿಕೊಳ್ಳುತ್ತಿದ್ದೇವೆ. ನಮ್ಮ ಸಿಬ್ಬಂದಿಗಳು ರೋಗಿಗಳಿಗೆ ಸೂಕ್ತ ತುರ್ತು ಚಿಕಿತ್ಸೆ ಸಿಗುವುದಕ್ಕೆ ಬೇಕಾದ ವ್ಯವಸ್ಥೆಯನ್ನು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಎಂದು ಅವರು ತಿಳಿಸಿದರು.
ಯಾರೋ ಶ್ವಾಸಕೋಶವನ್ನು ಚಾಕುವಿನಿಂದ ಕುಯ್ಯುತ್ತಿರುವಷ್ಟು ನೋವಾಗುತ್ತದೆ ಎಂದು ಅರೆಲ್ಲಾನೊ ಹೇಳಿಕೊಂಡಿದ್ದರಂತೆ. ರಾತ್ರಿ ತಂದೆ ಉಸಿರಾಡುವುದು ಕೇಳಿಸುತ್ತಿತ್ತು. ಅಷ್ಟು ಜೋರಾಗಿ ಉಸಿರಾಡುತ್ತಿದ್ದರು.
ಏಪ್ರಿಲ್ ಒಂದರಂದು ಅವರನ್ನು ಅಂಬ್ಯುಲೆನ್ಸಿನಲ್ಲಿ ಟ್ರಿನಿಟಾಸ್ ರೀಜಿನಲ್ ಮೆಡಿಕಲ್ ಸೆಂಟರ್‌ಗೆ ಸ್ಥಳಾಂತರಿಸಿದರು. ತನ್ನನ್ನು ಒಂದು ಖಾಸಗಿ ರೂಮಿನಲ್ಲಿ ಇಟ್ಟಿದ್ದಾರೆ ಎಂದು ಅವರು ಮಗನಿಗೆ ಮೆಸೇಜ್ ಮಾಡಿದ್ದರು.
ಕೊನೆ ಸಮೀಪದಲ್ಲಿದೆ ಅನ್ನುವುದಕ್ಕೆ ಯಾವುದೇ ಸೂಚನೆಯೂ ಇರಲಿಲ್ಲ. ಟ್ರಿನಿಟಾಸ್‌ನಲ್ಲಿ ಇರುವವರೆಗೆ ಆಸ್ಪತ್ರೆಗೆ ಫೋನ್ ಮಾಡಿ ತಂದೆಯ ಆರೋಗ್ಯದ ಬಗ್ಗೆ ಪ್ರತಿದಿನ ವಿಚಾರಿಸಿಕೊಳ್ಳುತ್ತಿದ್ದರು.
ಮಲೇರಿಯಾಕ್ಕೆ ಕೊಡುತ್ತಿದ್ದ ಔಷಧ ಹೈಡ್ರೋಕ್ಸಿಕ್ಲೋರೊ ಕ್ವಿನ್ ಕೊಡುತ್ತಿದ್ದರು. ಜೊತೆಗೆ ಆಕ್ಸಿಜನ್. ಜ್ವರ ಕಮ್ಮಿಯಾಗಿದೆ ಆದರೆ ಆರೋಗ್ಯದಲ್ಲಿ ಸುಧಾರಣೆ ಕಾಣುತ್ತಿಲ್ಲ ಅಂತ ನರ್ಸುಗಳು ತಿಳಿಸಿದ್ದರು. ಕೆಲವು ದಿನ ಟಿವಿ ನೋಡುತ್ತಿದ್ದರು. ಅಮೇಲೆ ಓಡಾಡಲು ಆಗುತ್ತಿಲ್ಲ ಅಂತ ಕ್ಯಾಥಿಟರ್ ಹಾಕಿದ್ದರು. ತಾನು ಆಕ್ಸಿಜನ್ ಮಾಸ್ಕ್ ಹಾಕಿಕೊಂಡಿದ್ದ ಸೆಲ್ಫಿಯನ್ನು ಮಗನಿಗೆ ಕಳುಹಿಸಿದ್ದರು. ಕೆಲವೊಮ್ಮ ಗಟ್ಟಿ ಪದಾರ್ಥಗಳನ್ನು ತಿನ್ನುವುದಕ್ಕೆ ನೀಡುತ್ತಿದ್ದರು. ಆದರೂ ಆಯಾಸ ಕಡಿಮೆಯಾಗುತ್ತಿಲ್ಲ ಅಂತ ಮಗನಿಗೆ ಹೇಳುತ್ತಿದ್ದರಂತೆ.
ಮಗ ನಿರಂತರವಾಗಿ ಆಸ್ಪತ್ರೆಯೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದ. ಹಾಗಾಗಿ ನರ್ಸ್ ಫೊನ್ ಮಾಡಿದ ತಕ್ಷಣ ಏನೋ ತೊಂದರೆಯಿರಬೇಕು ಅಂತ ಅನ್ನಿಸಿತು. ಏಪ್ರಿಲ್ ೫ರಂದು ತಂದೆಯ ಹೃದಯ ಮತ್ತು ಶ್ವಾಸಕೋಸ ದಿಢೀರನೆ ಕೆಲಸಮಾಡುವುದು ನಿಂತು ಹೋಗಿತ್ತಂತೆ ಸಿಬ್ಬಂದಿಗಳು ಕ್ರಮ ತೆಗೆದುಕೊಂಡು ಸರಿಪಡಿಸಿದರು ಅಂತ ನರ್ಸ್ ಹೇಳಿದರು. ತಂದೆಯನ್ನು ಇಂಟ್ಯುಬೇಟ್ ಮಾಡುವುದಕ್ಕೆ ಅನುಮತಿಯನ್ನು ಪಡೆದುಕೊಂಡರು. ಆದರೆ ಅದರ ಅವಶ್ಯಕತೆಯೇ ಬರಲಿಲ್ಲ. ಸಂಜೆ ೬.೧೦ಕ್ಕೆ ಅರೆಲ್ಲನೊ ಕೊನೆಯುಸಿರೆಳೆದರು ಎಂದು ನರ್ಸ್ ಫೋನ್ ಮಾಡಿ ತಿಳಿಸಿದರು.
ಕಾರ್ಲೊಸ್‌ಗೆ ಇದ್ಯಾವುದೂ ಗೊತ್ತಿರಲಿಲ್ಲ. ೫:೪೫ಕ್ಕೆ ಅಪ್ಪನಿಗೆ ವಾಟ್ಸ್ ಅಪ್ ಮೆಸೇಜ್ ಕಳುಹಿಸಿದ್ದ.
ಹೈ ಪಾಪ, ನೀನು ಸುಧಾರಿಸಿಕೊಳ್ಳುತ್ತಿದ್ದೀಯ ಅಂತ ಭಾವಿಸಿದ್ದೇನೆ. ನಾವು ನಿಮ್ಮನ್ನು ತುಂಬಾ ಪ್ರೀತಿಸುತ್ತೇವೆ. ಹೋರಾಡುವುದನ್ನು ನಿಲ್ಲಿಸಬೇಡಿ. ನಿಮಗೆ ಸಾಮರ್ಥ್ಯವಿದೆ. ಇಲ್ಲಿ ನಾನು ಮತ್ತು ಅಮ್ಮ ಚೆನ್ನಾಗಿದ್ದೇವೆ ಪಾ
ಅರೆಲ್ಲಾನೊಯಿಂದ ಅದಕ್ಕೆ ಉತ್ತರ ಬರಲಿಲ್ಲ.
ಹಲವು ದಿನಗಳ ನಂತರ ಕಾರ್ಲೋಸ್ ಮತ್ತು ಅವರ ೯೬ವರ್ಷದ ತಾತ ಇಬ್ಬರಿಗೂ ಕರೋನಾ ಪಾಸಿಟಿವ್ ಎಂದು ವರದಿ ಬಂದಿದೆ.
Jeffery C. Mays contributed reporting. Susan Beachy contributed research.
https://www.nytimes.com/2020/04/19/nyregion/new-york-new-jersey-coronavirus-hospitals.html