ಮೈಸೂರು ವೀಣಾ ಪರಂಪರೆ – ಒಂದು ಕಿರುನೋಟ -ಟಿ.ಎಸ್. ವೇಣುಗೋಪಾಲ್

 In RAGAMALA

 
ಇಂದು ಮೈಸೂರಿನದೆಂದು ಹೇಳಬಹುದಾದ ವೀಣಾ ಪರಂಪರೆಯ ಮೂಲವನ್ನು ಹೈದರಾಲಿ, ಟಿಪ್ಪುಸುಲ್ತಾನ್ ಮತ್ತು ಮುಮ್ಮಡಿಕೃಷ್ಣರಾಜರ ಆಸ್ಥಾನಗಳಲ್ಲಿ ಗುರುತಿಸಬಹುದು. ಆ ಕಾಲಘಟ್ಟದಲ್ಲಿ ಹಲವಾರು ಹಿರಿಯ ಸಂಗೀತ ವಿದ್ವಾಂಸರು ಮೈಸೂರಿನ ಕಲಾಪ್ರಪಂಚದಲ್ಲಿ ಸಂಗೀತಕ್ಕೊಂದು ಗಟ್ಟಿಯಾದ ಸ್ಥಾನವನ್ನು ಸೃಷ್ಟಿಸಿದರು. ಮೈಸೂರಿನ ವೀಣಾ ಪರಂಪರೆಯನ್ನು ಈ ಹಿರಿಯರು, ಅವರ ಮಕ್ಕಳು, ಮೊಮ್ಮಕ್ಕಳು ಮತ್ತು ಶಿಷ್ಯರ ಮೂಲಕವೇ ಕಟ್ಟುವುದು ಸಾಧ್ಯ. ಹಾಗೆ ಕಟ್ಟುವಾಗ ಕೂಡ ಮೈಸೂರು ಪರಂಪರೆಯ ವಾದನದ ಶೈಲಿಯಲ್ಲಿ ಆದ ಹಲವಾರು ಬದಲಾವಣೆಗಳು ತುಂಬಾ ನಿರ್ದಿಷ್ಟವಾಗಿ ಯಾವಾಗ ಆಯಿತು ಎಂದು ಹೇಳುವುದು ಕಷ್ಟ.
ಇಲ್ಲಿನ ವೀಣಾ ಪರಂಪರೆಗಳಲ್ಲಿ ಮುಖ್ಯವಾದವು ವೀಣೆ ಸಾಂಬಯ್ಯನವರ ಪರಂಪರೆ, ವೀಣೆ ಶಾಮಣ್ಣನವರ ಪರಂಪರೆ ಹಾಗೂ ವೀಣಾಭಕ್ಷಿ ವೆಂಕಟಸುಬ್ಬಯ್ಯನವರ ಪರಂಪರೆ. ಇವುಗಳಲ್ಲ್ಲಿ ವೀಣಾಭಕ್ಷಿ ವೆಂಕಟಸುಬ್ಬಯ್ಯನವರ ಶಿಷ್ಯಪರಂಪರೆ ತುಂಬಾ ಪ್ರಮುಖವಾದ ಪರಂಪರೆಯಾಗಿ ಬೆಳೆದು, ಆ ಪರಂಪರೆಯವರು ಮೈಸೂರು ಶೈಲಿಯ ಪ್ರವರ್ತಕರೆಂದು ಹೆಸರುವಾಸಿಯಾದರು. ಆದರೆ, ನಾವಿಂದು ಮೈಸೂರು ಶೈಲಿಯೆಂದು ಮಾತನಾಡುವಾಗ ಮೈಸೂರು ವೀಣಾವಾದನ ಪರಂಪರೆಯಲ್ಲಿ ಪರಸ್ಪರ ಸಂಪೂರ್ಣ ಬೇರೆಯಾಗಿದ್ದ ಹಲವಾರು ಶೈಲಿಗಳು ಇದ್ದವು ಎನ್ನುವ ಸತ್ಯವನ್ನು ಮರೆಯಬಾರದು. ಅವುಗಳಲ್ಲಿ ಒಂದು ನಿರ್ದಿಷ್ಟ ಶೈಲಿಯನ್ನು ಇಂದು ನಾವು ಹೆಚ್ಚುಕಡಿಮೆ ಮೈಸೂರು ವೀಣಾ ಶೈಲಿಯೆಂದು ಕರೆಯುತ್ತಿದ್ದೇವೆ ಎನ್ನುವುದೂ ತಿಳಿದಿರಬೇಕು.
ವೀಣೆ ಸಾಂಬಯ್ಯ
ಮೈಸೂರಿನಲ್ಲಿ ವೀಣೆಗೆ ಪ್ರಸಿದ್ಧವಾಗಿದ್ದ ಮನೆತನ ಸಾಂಬಯ್ಯ, ಕಾಳಹಸ್ತಯ್ಯ, ವೆಂಕಟರಾಮಯ್ಯ ಮತ್ತು ಆತ್ಮರಾಮಯ್ಯ ಎಂಬ ನಾಲ್ವರು ಅಣ್ಣತಮ್ಮಂದಿರದ್ದು. ಅವರಲ್ಲಿ ಹಿರಿಯರಾದ ಸಾಂಬಯ್ಯನವರದು ದೊಡ್ಡ ಹೆಸರು. ಇವರೂ ಕೂಡ ಮುಮ್ಮಡಿ ಕೃಷ್ಣಪ್ರಭುಗಳ ಆಶ್ರಯದಲ್ಲಿದ್ದರು. ಒಮ್ಮೆ ಕುಚೇಷ್ಟೆಗೆಂದು ಅವರು ವೀಣೆಗೆ ತಂತಿಯ ಬದಲು ಕಿತ್ತಾನಾರಿನ ಹುರಿಯನ್ನೇ ಕಟ್ಟಿ ನುಡಿಸಬಲ್ಲರೆಂಬ ವದಂತಿಯನ್ನು ಹಬ್ಬಿಸಿ ದೊರೆಗಳವರೆಗೂ ಮುಟ್ಟಿಸಿದರು. ಈ ಕುಚೇಷ್ಟೆಯನ್ನರಿಯದ ಕೃಷ್ಣ ಪ್ರಭುಗಳು ಈ ಕೌಶಲವನ್ನು ತಮಗೆ ತೋರಿಸಬೇಕೆಂದು ಪಟ್ಟುಹಿಡಿದರಂತೆ. ಬೇರೆ ಉಪಾಯವಿಲ್ಲದೆ ಸಾಂಬಯ್ಯನವರು ವೀಣೆಗೆ ಕಿತ್ತಾನಾರನ್ನೇ ಕಟ್ಟಿದರು; ದೇವಿಯನ್ನು ನೆನೆಯುತ್ತಾ ನುಡಿಸಿದರಂತೆ. ನಾದ ಮಾಧುರ್ಯ ಕೇಳಿ ಇಡೀ ಸಭೆ ಪುಲಕಿತವಾಯಿತಂತೆ. ಅದೇನೇ ಇರಲಿ, ಇವರಿಗೆ ವೀಣೆಯ ಮೇಲೆ ಇದ್ದ ಹಿಡಿತ ಪ್ರಶ್ನಾತೀತವಾದದ್ದು. ಇವರ ತಮ್ಮ ವೆಂಕಟರಾಮಯ್ಯನವರ ಮಕ್ಕಳು ರಾಮಸ್ವಾಮಯ್ಯ ಮತ್ತು ಲಕ್ಷ್ಮಣಯ್ಯನವರಿಬ್ಬರೂ ವೀಣಾವಾದನ ಕೋವಿದರಾಗಿದ್ದರು.

ಸವ್ಯಸಾಚಿ ಅಯ್ಯಂಗಾರ್ಯರು:
ಮೈಸೂರಿನ ವೀಣಾ ಪರಂಪರೆಯಲ್ಲಿ ಇನ್ನೊಂದು ದೊಡ್ಡ ಹೆಸರು ಸವ್ಯಸಾಚಿ ಅಯ್ಯಂಗಾರ್ಯರದ್ದು. ಇವರ ನಿಜವಾದ ಹೆಸರು ತಿಳಿಯದು. ಇವರು ಬಲಗೈ ಬೆರಳುಗಳಿಂದ ತಂತಿಗಳನ್ನು ಮಿಡಿದು, ಎಡಗೈ ಬೆರಳುಗಳಿಂದ ಮೆಟ್ಟುಗಳಲ್ಲಿ ನುಡಿಸುವಷ್ಡೇ ಸಲೀಸಾಗಿ, ಪ್ರೌಢವಾಗಿ ಎಡಗೈ ಬೆರಳುಗಳಿಂದ ತಂತಿಗಳನ್ನು ಮಿಡಿದು ಬಲಗೈ ಬೆರಳುಗಳಿಂದ ಮೆಟ್ಟುಗಳಲ್ಲಿ ನುಡಿಸುತ್ತಿದ್ದರಂತೆ. ಇದರಿಂದಾಗಿಯೇ ಇವರು ಸವ್ಯಸಾಚಿ ಎನಿಸಿಕೊಂಡಿದ್ದರು.
ವೀಣೆ ಶಾಮಣ್ಣ ೧೮೨೮-೧೯೦೮
ಮೈಸೂರಿನ ಅರಸರ ಆಶ್ರಯ ಪಡೆದಿದ್ದ ಮತ್ತೊಬ್ಬ ಪ್ರಮುಖ ವೈಣಿಕರು ರಾಮಭಾಗವತರು. ಇವರ ಮಗನೇ ಪ್ರಸಿದ್ಧರಾದ ವೀಣೆ ಶಾಮಣ್ಣ. ಪರದೇಶದ ಜಲತರಂಗ್ ವಿದ್ವಾಂಸರೊಬ್ಬರು ಮೈಸೂರಿಗೂ ಬಂದಿದ್ದರು. ಅವರು ನಾಟಕುರಂಜಿ ರಾಗದಲ್ಲಿ ದ್ರುತಗತಿಯ ಪಲ್ಲವಿಯೊಂದನ್ನು ನುಡಿಸಿದರು. ಅದನ್ನು ತ್ರಿಕಾಲ ಮಾಡಿ ಅದನ್ನು ಮೀರಿಸುವಂತೆ ಸ್ಥಳೀಯ ವಿದ್ವಾಂಸರಿಗೆ ಸವಾಲೆಸೆದರು. ಇಲ್ಲಿಯ ವಿದ್ವಾಂಸರು ಕಂಗಾಲಾದರು. ಆಗ ಮೈಸೂರಿನ ಕೀರ್ತಿಯನ್ನು ಉಳಿಸಿದವರು ವೀಣೆ ಶಾಮಣ್ಣನವರು. ಅದೇ ನಾಟಕುರಂಜಿಯಲ್ಲಿ ’ಅನ್ನಿಟಿಕಿ ನೀವೇ ಅಧಿಕಾರಿಯೈ’ ಎಂದು ದೇವರಿಗೆ ಅನ್ವರ್ಥವಾಗಿ ಅರ್ಪಿಸಿದ ಪಲ್ಲವಿಯೊಂದನ್ನು ಅದೇ ತಾಳದಲ್ಲಿ ನುಡಿಸಿದರು. ಅಷ್ಟೇ ಅಲ್ಲ, ಪರದೇಶದ ವಿದ್ವಾಂಸನು ಮೂರನೇ ಕಾಲದಲ್ಲಿ ನಿಲ್ಲಿಸಿದ್ದನ್ನೇ ಇವರು ತಮ್ಮ ಮೊದಲನೆಯ ಕಾಲವೆಂದು ಸ್ವೀಕರಿಸಿ, ಇದಕ್ಕೆ ತ್ರಿಕಾಲವನ್ನು ಎಂದರೆ ನಾಲ್ಕರಷ್ಟು ವೇಗದಲ್ಲಿ ಗಮಕಶುದ್ಧವಾಗಿ ನುಡಿಸಿದರು. ಅಷ್ಟು ಮಾತ್ರವಲ್ಲದೆ, ಕಾಲಿನಲ್ಲಿ ಒಂದು, ಕಂಠದಲ್ಲಿ ಒಂದು, ಕೈಬೆರಳುಗಳಲ್ಲಿ ಒಂದು – ಹೀಗೆ ಮೂರು ಬೇರೆ ಬೇರೆ ತಾಳಕ್ರಮಗಳನ್ನು ಒಂದೇ ಕಾಲದಲ್ಲಿ ಬಳಸಿಕೊಂಡು, ಒಂದೇ ಎಡಪಿಗೆ ಅಷ್ಟೂ ಅನ್ವಯವಾಗುವಂತೆ ತಂದು ನಿಲ್ಲಿಸಿ ತೋರಿಸಿದರು. ಪರದೇಶದ ವಿದ್ವಾಂಸ ಹೇಳದೆ ಕೇಳದೆ ಕಂಬಿಕಿತ್ತನಂತೆ. ವೀಣೆ ಶಾಮಣ್ಣನವರು ವೀಣೆಯಲ್ಲಿ ಮಾತ್ರವಲ್ಲದೆ ಪಿಟೀಲು, ಸ್ವರಬತ್ ಮೊದಲಾದ ವಾದ್ಯಗಳಲ್ಲೂ ಪ್ರವೀಣರಾಗಿದ್ದರು. ಅವರ ಸೋದರಳಿಯ ಚಿಕ್ಕಸುಬ್ಬರಾಯರೂ ವೀಣಾಗಾಯನ ಪಟುಗಳು. ವೀಣಾ ವೆಂಕಟಗಿರಿಯಪ್ಪನವರು ಇವರ ಶಿಷ್ಯರು. ಶಾಮಣ್ಣನವರಿಗೆ ರಾಮಣ್ಣ ಮತ್ತು ಸುಬ್ರಮಣ್ಯಯ್ಯರ್ ಎಂಬ ಇಬ್ಬರು ಮಕ್ಕಳು. ಇಬ್ಬರೂ ವೀಣಾವಾದಕರೇ. ವೀಣೆ ರಾಮಣ್ಣನವರ ಮಗ ವೀಣಾವೆಂಕಟಸುಬ್ಬಯ್ಯ ವೀಣೆ ಶಾಮಣ್ಣನವರಿಂದ ಬಲಿಷ್ಠವಾದ ಸಂಗೀತ ಸಂಪ್ರದಾಯವೊಂದು ಬೆಳೆದುಬಂದಿತು. ಇವರ ಪ್ರಮುಖ ಶಿಷ್ಯರು ಬೂದಿಹಾಳಿನ ವೀಣಾ ಪದ್ಮನಾಭಯ್ಯನವರು, ಕರಿಗಿರಿರಾಯರು, ವೀಣೆ ಲಕ್ಷ್ಮೀನಾರಾಯಣಪ್ಪನವರು, ಚಿಂತಾಮಣಿ ಸುಬ್ಬರಾಯರು, ಕೊಳ್ಳೇಗಾಲದ ದಕ್ಷಿಣಾಮೂರ್ತಿಶಾಸ್ತ್ರಿಯವರು.

ವೀಣೆ ಪದ್ಮನಾಭಯ್ಯನವರು (೧೮೪೭)

ಇವರು ಬೂದಿಹಾಳಿನಲ್ಲಿ-ಎಂದರೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ಶ್ರೀರಾಮಪುರದಲ್ಲಿ ೧೮೪೭ರಲ್ಲಿ ಜನಿಸಿದರು. ಅವರಿಗೆ ಬಾಲ್ಯದಲ್ಲಿ ವೀಣೆ ಶಾಮಣ್ಣನವರ ಶಿಷ್ಯರೇ ಆಗಿದ್ದ ಹೊಸದುರ್ಗದ ವೆಂಕಟೇಶಶಾಸ್ತ್ರಿಗಳಿಂದ ವೀಣೆ ಹಾಗೂ ಗಾಯನವೆರಡರಲ್ಲೂ ಪಾಠವಾಯಿತು. ನಂತರ ಪ್ರೌಢಶಿಕ್ಷಣವನ್ನು ಅವರು ವೀಣೆ ಶಾಮಣ್ಣನವರಲ್ಲಿ ಪಡೆದರು. ಇಲ್ಲಿ ಪದ್ಮನಾಭಯ್ಯನವರು ಹಾಡಿಕೆ ಹಾಗೂ ವೀಣಾವಾದನಗಳೆರಡನ್ನೂ ವಶಮಾಡಿಕೊಂಡರು. ಶ್ರುತಿಲಯಗಳ ಶುದ್ಧಿಗಾಗಿ, ನಿಖರತೆಗಾಗಿ ಜೀವನವಿಡೀ ಸಾಧನೆಮಾಡಿದರು. ಪ್ರಚಾರಕ್ಕಾಗಿ ಬಯಸದೆ ಎಲೆಮರೆಯಲ್ಲೇ ಸಂಪ್ರದಾಯಶುದ್ಧಿಗಾಗಿ ಶ್ರಮಿಸುತ್ತಾ, ಪಕ್ವವಾಗುತ್ತಾ ಬೆಳೆದರು. ಪದ್ಮನಾಭಯ್ಯನವರ ಶಿಷ್ಯರಲ್ಲಿ ಹಾಡಿಕೆಗೆ ಹೆಸರಾದವರು ವಾಸುದೇವಾಚಾಂiiರು. ವೀಣೆಗೆ ಹೆಸರಾದವರು ಸುಂದರಶಾಸ್ತ್ರಿಗಳು. ರಾಮೋತ್ಸವದ ಸಂದರ್ಭದಲ್ಲಿ ಮೈಸೂರಿನಲ್ಲಿ ಸಂಗೀತಸೇವೆ ಪ್ರಾರಂಭವಾದ್ದೇ ಇವರಿಂದ ಎನ್ನಬಹುದು.
ಪದ್ಮನಾಭಯ್ಯನವರ ಒಬ್ಬನೇ ಮಗ ಶಿವರಾಮಯ್ಯ ಕೂಡ ವೀಣೆಯ ವಿದ್ವಾಂಸರಾಗಿ ಹೆಸರು ಮಾಡಿದ್ದರು ಹಾಗೂ ಆಸ್ಥಾನ ವಿದ್ವಾಂಸರಾಗಿದ್ದರು. ವೀಣೆ ಪದ್ಮನಾಭಯ್ಯನವರು ಪ್ರಸಿದ್ಧ ವೈಣಿಕರಷ್ಟೇ ಅಲ್ಲ, ಶ್ರೇಷ್ಠ ವಾಗ್ಗೇಯಕಾರರೂ ಆಗಿದ್ದರು. ಇವರು ಅನೇಕ ಸ್ವರಜತಿಗಳನ್ನು, ಜತಿಸ್ವರಗಳನ್ನು, ಕೃತಿಗಳನ್ನು ಹಾಗೂ ’ಪದ್ಮನಾಭ ಪಂಚರತ್ನ’ ಎಂಬ ಕೃತಿ ಗುಚ್ಛವನ್ನು ರಚಿಸಿದರು. ’ಅಶೇಷ ಪದ್ಮನಾಭ ಸಂಪುಟ’ ಎಂಬ ಶೀರ್ಷಿಕೆಯಲ್ಲಿ ಇವರ ರಚನೆಗಳು ಪ್ರಕಟವಾಗಿವೆ.

ವೀಣಾ ಶಿವರಾಮಯ್ಯ (೧೮೮೬-೧೯೪೬) ತಂದೆ ಪದ್ಮನಾಭಯ್ಯ ಅವರಲ್ಲೇ ವೀಣೆಯನ್ನು ಕಲಿತರು. ಆದರೆ ಅವರಿಗೆ ಕೇವಲ ೧೪ ವರ್ಷವಿದ್ದಾಗಲೇ ತಂದೆ ತೀರಿಕೊಂಡರು ಹಾಗಾಗಿ ಇಡೀ ಮನೆಯ ಜವಾಬ್ದಾರಿ ಇವರ ಮೇಲೆ ಬಿತ್ತು. ಆದರೆ ಅವರು ಸಂಗೀತವನ್ನು ಮಾತ್ರ ಬಿಡಲಿಲ್ಲ. ಕೆಲವರ ಸಲಹೆಯ ಮೇರೆಗೆ ವೀಣೆ ಶೇಷಣ್ಣನವರಲ್ಲಿ ವೀಣೆ ವಿದ್ಯಾಭ್ಯಾಸಕ್ಕೆ ಸೇರಿದರು. ಆದರೆ, ಶೇಷಣ್ಣ ಮತ್ತು ಪದ್ಮನಾಭಯ್ಯನವರ ನಡುವೆ ಸಂಬಂಧ ಅಷ್ಟು ಚೆನ್ನಾಗಿರಲಿಲ್ಲ. ಹಾಗಾಗಿ ಶಿವರಾಮಯ್ಯನನ್ನು ಶೇಷಣ್ಣನವರು ನೇರವಾಗಿ ಶಿಷ್ಯನೆಂದು ಸ್ವೀಕರಿಸಲಿಲ್ಲ. ತಮ್ಮ ವಾದನವನ್ನು ಕೇಳಲು ಅವಕಾಶ ಮಾಡಿಕೊಟ್ಟರು. ಆದರೆ ಶಿವರಾಮಯ್ಯನವರ ಸಜ್ಜನಿಕೆಯು ಶೇಷಣ್ಣನವರ ಮನಸ್ಸನ್ನು ಗೆದ್ದಿತು. ಶೇಷಣ್ಣನವರು ಅವರಿಗೆ ಪಾಠ ಹೇಳಿಕೊಟ್ಟಿದ್ದಷ್ಟೇ ಅಲ್ಲದೆ, ಅರಮನೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರಲ್ಲಿ ಒಂದುಗಂಟೆಯ ವೀಣಾವಾದನಕ್ಕೆಂದು ತಮ್ಮೊಂದಿಗೆ ಕರೆದುಕೊಂಡು ಹೋದರು. ಮುಂದೆ ಪಂಚವೀಣಾ ಕಾರ್ಯಕ್ರಮಕ್ಕೆ ಅವರೊಂದಿಗೆ ಇವರೂ ಒಬ್ಬ ಖಾಯಂ ವೈಣಿಕರಾದರು. ಇವರು ಹಲವಾರು ಕೃತಿಗಳನ್ನು ಅಪರೂಪದ ರಾಗಗಳಲ್ಲಿ ರಚಿಸಿದ್ದಾರೆ. ಅಷ್ಟೇ ಅಲ್ಲ ಕೇವಲ ಮೂರು ಸ್ವರಗಳಾದ ಷಡ್ಜ, ಗಾಂಧಾರ, ಪಂಚಮಗಳಿಂದ ಸ.ಗ.ಪ.ಸ ಎಂಬ ಅಪೂರ್ವವಾದ, ’ಸ್ವಯಂಭೂಸ್ವರ’ ರಾಗವನ್ನು ಅನ್ವೇಷಿಸಿದರು. ಈ ರಾಗದಲ್ಲಿ ನಾಲ್ಕು ಸುಂದರ ಕೃತಿಗಳನ್ನು ರಚಿಸಿದ್ದಾರೆ. ಇದನ್ನು ಕೇಳಿ ಹಿರಿಯರಾದ ಸುಬ್ಬಣ್ಣ, ವಾಸುದೇವಾಚಾರ್, ಮುತ್ತಯ್ಯ ಭಾಗವತರು ಇವರೆಲ್ಲಾ ಮೆಚ್ಚಿದ್ದಾರೆ. ಇದು ಉಳಿದವರಿಗೂ ಸ್ಪೂರ್ತಿ ನೀಡಿತು. ಮುತ್ತಯ್ಯ ಭಾಗವತರ ’ನಿರೋಷ್ಠ’ ರಾಗದ ರಚನೆಗೂ ಇದೇ ಸ್ಫೂರ್ತಿಯಾಗಿತ್ತು ಎಂದು ಹೇಳುತ್ತಾರೆ. ಇವರ ರಚನೆಗಳನ್ನು ಒಳಗೊಂಡ ’ಶಿವರಾಮ ಸಂಗೀತಸುಧಾ-ಭಾಗ-೧ ಮತ್ತು ೨’ ಪ್ರಕಟವಾಗಿದೆ.
ವೀಣಾ ಭಕ್ಷಿ ವೆಂಕಟಸುಬ್ಬಯ್ಯನವರ ಪರಂಪರೆ:
ವೆಂಕಟಸುಬ್ಬಯ್ಯನವರು ಭೈರವಿ ರಾಗದ ಸುಪ್ರಸಿದ್ಧ ಅಟ್ಟತಾಳದ ವರ್ಣ ವಿರಿಬೋಣಿಯನ್ನು ರಚಿಸಿದ ಆದಿಅಪ್ಪಯ್ಯನವರ ವಂಶಸ್ಥರು. ಇವರು ಗಾಯನ ಹಾಗೂ ವೀಣಾವಾದನದಲ್ಲಿ ಪ್ರಸಿದ್ಧರಾಗಿದ್ದವರು. ಆದಿಅಪ್ಪಯ್ಯನವರ ವಂಶಕ್ಕೆ ಸೇರಿದವರು ಅಪ್ಪಯ್ಯ, ಕುಪ್ಪಯ್ಯ ಮತ್ತು ಶೇಷಯ್ಯ ಎಂಬ ಸಹೋದರರು. ಅಂದಿನ ರಾಜಕೀಯ ಅಭದ್ರತೆಯ ಪರಿಸ್ಥಿತಿಯಲ್ಲಿ ಈ ವೈಣಿಕ ಸೋದರರಿಬ್ಬರೂ ಶರಭೋಜಿ ಮಹಾರಾಜರ ಆಶ್ರಯಕ್ಕಾಗಿ ತಂಜಾವೂರಿಗೆ ವಲಸೆಹೋದರು. ಅಲ್ಲಿನ ವಿದ್ವಾಂಸರು ಒಡ್ಡಿದ ಪಣದಲ್ಲಿ ಅವರನ್ನೇ ಸೋಲಿಸಿ ಶರಭೋಜಿ ಮಹಾರಾಜರ ಮೆಚ್ಚುಗೆಯನ್ನು ಸಂಪಾದಿಸಿ ಅನೇಕ ಜಹಗೀರುಗಳನ್ನು ಬಹುಮಾನವಾಗಿ ಪಡೆದ ರಮ್ಯವಾದ ಕಥೆ ಇವರ ಬಗ್ಗೆ ಇದೆ.
ವೆಂಕಟಸುಬ್ಬಯ್ಯ ಕುಪ್ಪಯ್ಯನವರ ಮಗನ ಮಗ. ವೀಣಾ ವೆಂಕಟಸುಬ್ಬಯ್ಯನವರು ಆಸ್ತಿಯ ವಿಭಜನೆಗೆ ಸಂಬಂಧಿಸಿದ ಗೊಂದಲದಿಂದ ಬೇಸತ್ತು ತಂಜಾವೂರಿನಿಂದ ಕರ್ಣಾಟಕದ ಮುಮ್ಮಡಿ ಕೃಷ್ಣಪ್ರಭುಗಳ ಆಶ್ರಯಕ್ಕೆ ಬಂದರು. ದೊರೆಗಳಿಗೆ ವೆಂಕಟಸುಬ್ಬಯ್ಯನವರು ಬಲಗೈ. ಅವರ ಮಾತೇ ವೇದವಾಕ್ಯ. ಮೈಸೂರಿನ ಸಂಗೀತ ಸಾಮ್ರಾಜ್ಯದ ದೊರೆ. ಇವರ ಮನೆ ಎರಡನೆಯ ಅರಮನೆಯಂತಿತ್ತು. ರಾಜೋಚಿತವಾದ ಏಳು ಬಿಚ್ಚುಗತ್ತಿಯ ಪಹರೆಯ ಗೌರವ ಸಂದದ್ದು ಇಡೀ ಭಾರತೀಯ ಸಂಗೀತ ಇತಿಹಾಸದಲ್ಲಿ ಇವರೊಬ್ಬರಿಗೆ ಮಾತ್ರ. ಇವರಿಗೆ ಮಕ್ಕಳಿಲ್ಲದ ಕಾರಣ ಇವರು ದೊಡ್ಡ ಶೇಷಣ್ಣ ಎನ್ನುವ ಹುಡುಗನನ್ನು ದತ್ತು ತೆಗೆದುಕೊಂಡರು. ಇವರ ಮಗ ವೀಣೆ ಸುಬ್ಬಣ್ಣ. ಕೆಲ ಕಾಲಾನಂತರ ಶರಭೋಜಿ ಮಹಾರಾಜರ ಆಸ್ಥಾನ ವಿದ್ವಾಂಸರಾಗಿದ್ದ ವೀಣೆ ಸೋಮಣ್ಣನವರ ಮಗ ಚಿಕ್ಕರಾಮಪ್ಪನವರು ಮೈಸೂರಿನ ಆಶ್ರಯವನ್ನು ಬಯಸಿ ಬಂದರು. ಚಿಕ್ಕರಾಮಪ್ಪನವರೂ ವೆಂಕಟಸುಬ್ಬಯ್ಯನವರ ಮನೆಯಲ್ಲೇ ಉಳಿದರು. ವೆಂಕಟಸುಬ್ಬಯ್ಯನವರು ದೊಡ್ಡಶೇಷಣ್ಣ ಮತ್ತು ಚಿಕ್ಕರಾಮಪ್ಪ ಇಬ್ಬರಿಗೂ ತಾವೇ ವೀಣೆ ಹಾಗೂ ಗಾಯನ ಎರಡನ್ನೂ ಹೇಳಿಕೊಟ್ಟರು. ದೊಡ್ಡಶೇಷಣ್ಣನವರ ಮಗ ಸುಬ್ಬಣ್ಣ ಹಾಗೂ ಚಿಕ್ಕರಾಮಪ್ಪನವರ ಮಗ ಚಿಕ್ಕ ಶೇಷಣ್ಣ (ಇವರೇ ಮುಂದೆ ವೈಣಿಕ ಶಿಖಾಮಣಿ ಶೇಷಣ್ಣ) ಇಬ್ಬರಿಗೂ ದೊಡ್ಡ ಶೇಷಣ್ಣನವರೇ ಗುರುಗಳು. ಇಬ್ಬರ ಗುರುಗಳು ಒಬ್ಬರೇ ಆದರೂ ಇವರಿಬ್ಬರ ವೀಣಾವಾದನ ಶೈಲಿ ಮಾತ್ರ ತುಂಬಾ ಭಿನ್ನವಾಗಿತ್ತು. ಇದನ್ನು ಗುರುತಿಸುತ್ತಾ ದೊರೆಸ್ವಾಮಿ ಅಯ್ಯಂಗಾರ್ಯರು ಹೇಳುತ್ತಾರೆ, ಮೈಸೂರು ಸದಾಶಿವರಾಯರ ಬಳಿ ಹಾಡುಗಾರಿಕೆ ಅಭ್ಯಾಸ ಮಾಡಿದ ಸುಬ್ಬಣ್ಣನವರ ಶೈಲಿಯಲ್ಲಿ ಹಾಡಿಕೆಯ ಒಲವೇ ಹೆಚ್ಚಾಗಿತ್ತು ಆದರೆ ಶೇಷಣ್ಣನವರು ಮೈಸೂರು ಶೈಲಿಯ ಹೆಗ್ಗುರುತಾದ ವಾದನದ ಶೈಲಿಗೆ ಹೆಚ್ಚು ಒಲಿದರು.
ವೀಣೆ ಸುಬ್ಬಣ್ಣ (೧೮೫೪-೧೯೩೯)
ಇವರು ರಾಜಕುಮಾರನಂತೆ ಬೆಳೆದರು. ಆಗರ್ಭ ಶ್ರೀಮಂತರು. ತಂದೆ ದೊಡ್ಡ ಶೇಷಣ್ಣನವರೇ ಇವರ ಗುರುಗಳು. ಗಂಟೆಗಟ್ಟಲೆ ಅಖಂಡ ಸಾಧನೆ. ಹತ್ತಾರು ತಾನಗಳ ಅಭ್ಯಾಸ. ಭಿನ್ನ ರಾಗಗಳಲ್ಲಿ ಅನೇಕ ರಚನೆಗಳ ಅಧ್ಯಯನ ಹೀಗೆ ನಡೆದಿತ್ತು ಇವರ ಸಂಗೀತ ಸಾಧನೆ. ಇವರು ಪ್ರವರ್ಧಮಾನಕ್ಕೆ ಬರುತ್ತಿದ್ದ ಕಾಲದಲ್ಲಿ ಮೈಸೂರು ಸಂಸ್ಥಾನವನ್ನು ಚಾಮರಾಜ ಒಡೆಯರು ಆಳುತ್ತಿದ್ದರು. ಮಹಾರಾಜರಿಗೆ ಸುಬ್ಬಣ್ಣನವರ ಬಗ್ಗೆ ಸಲಿಗೆ, ಸ್ನೇಹ ಹಾಗೂ ಇಬ್ಬರೂ ಶಾಲಾ ಒಡನಾಡಿಗಳು. ಸಂಗೀತದ ವಿಷಯದಲ್ಲಿ ಸುಬ್ಬಣ್ಣನವರು ದೊರೆಗಳಿಗೆ ಆಪ್ತ ಸಲಹೆಗಾರರೂ ಆಗಿದ್ದರು. ಅವರನ್ನು ರಾಜರು ಪ್ರೀತಿ, ಸಲುಗೆಯಿಂದ ’ಸುಬ್ಬು’ ಎಂದೇ ಸಂಬೋಧಿಸುತ್ತಿದ್ದರು. ಚಾಮರಾಜ ಒಡೆಯರ ಕಾಲದಲ್ಲಿ ಆಸ್ಥಾನ ವಿದ್ವಾಂಸರಾಗಿದ್ದ ಸುಬ್ಬಣ್ಣನವರು ಮುಂದೆ ’ಭಕ್ಷಿ’ಗಳೂ ಆದರು. ಸುಬ್ಬಣ್ಣನವರ ವೀಣೆ ಮತ್ತು ಗಾಯನ ಎರಡೂ ಘನವಾದುದು. ತಮ್ಮ ಕಛೇರಿಯಲ್ಲಿ ’ಚಿಟ್ಟೆ’ಗಿಂತ ಸೃಜನಶೀಲತೆಗೆ ಪ್ರಾಮುಖ್ಯ ನೀಡುತ್ತಿದ್ದರು. ಕೃತಿಗಳನ್ನು ಆರಿಸಿಕೊಳ್ಳುತ್ತಿದ್ದುದು ಕಡಿಮೆ. ಆಲಾಪನೆ, ತಾನಗಳಿಗೆ ಹೆಚ್ಚು ಸಮಯ ಮೀಸಲು. ಪಲ್ಲವಿಯೇ ಅವರ ಕಛೇರಿಯ ಪ್ರಧಾನ ಭಾಗವಾಗಿರುತ್ತಿತ್ತು. ಹೀಗಾಗಿ ಕಾರ್ಯಕ್ರಮದ ಬಹುಭಾಗ ಮನೋಧರ್ಮ ಸಂಗೀತವೇ ಆಗಿರುತ್ತಿತ್ತು. ಚಪ್ಪಾಳೆಗಾಗಿ ಏನನ್ನೂ ಹಾಡುತ್ತಿರಲಿಲ್ಲ. ಕೆಲವೊಮ್ಮೆ ವೀಣೆಯ ಜೊತೆಗೆ ಹಾಡುತ್ತಿದ್ದರು. ಅವರದ್ದು ಗಂಧರ್ವ ಕಂಠ. ತಾನು ಸಂಗೀತದಲ್ಲಿ ಲೀನವಾಗಿ ಅನುಭವಿಸಿ ನುಡಿಸುತ್ತಿದ್ದರಿಂದ ಕೇಳುಗರಿಗೂ ತೀವ್ರ ನಾದಾನುಭವ ಉಂಟಾಗುತ್ತಿತ್ತು. ಅವರ ಕೃತಿ ಭಂಡಾರ ಅಗಾಧವಾಗಿತ್ತು. ಆದರೂ ಹೊಸ ಕೃತಿ ಕಿವಿಗೆ ಬಿದ್ದರೆ ತಕ್ಷಣ ಅಧ್ಯಯನ ಮಾಡಿ ಶಿಷ್ಯರಿಗೆ ಹೇಳಿಕೊಡುತ್ತಿದ್ದರು. ಕಾಂಬೋಧಿ, ಶಂಕರಾಭರಣ, ಕಲ್ಯಾಣಿ, ಕೇದಾರಗೌಳ, ಬೇಗಡೆ ರಾಗಗಳನ್ನು ಸಾಮಾನ್ಯವಾಗಿ ವಿಸ್ತಾರಕ್ಕೆ ಆರಿಸಿಕೊಳ್ಳುತ್ತಿದ್ದರು. ಪ್ರಾರಂಭದಲ್ಲಿ ಒಂದೆರಡು ರಚನೆಗಳನ್ನು ಕಿರಿದಾಗಿ ತೆಗೆದುಕೊಂಡು ಮಧ್ಯಮಕಾಲ, ಪಲ್ಲವಿಗಳಿಗೆ ಸರಿಯುತ್ತಿದ್ದರು. ಕೊನೆಯಲ್ಲಿ ಒಂದೆರಡು ಜಾವಳಿಗಳನ್ನು ತಿಲ್ಲಾನಗಳನ್ನು ನುಡಿಸುತ್ತಿದ್ದರು.
ಸ್ವತಃ ಶ್ರೀಮಂತರಾಗಿದ್ದ ಇವರಿಗೆ ಜೀವನ ನಿರ್ವಹಣೆಗಾಗಿ ಕಛೇರಿ ಮಾಡುವ ಅವಶ್ಯಕತೆ ಇರಲಿಲ್ಲ. ಹಾಗಾಗಿ ಅಷ್ಟಾಗಿ ಪ್ರವಾಸ ಮಾಡುತ್ತಿರಲಿಲ್ಲ. ತಾವು ಹೋದೆಡೆ ರಾಜರು, ಜಮೀನ್ದಾರರಿಗೆ ಇವರೇ ಬೆಲೆಬಾಳುವ ಉಡುಗೊರೆಗಳನ್ನು ನೀಡುತ್ತಿದ್ದರು. ಅರಮನೆಯಲ್ಲಿ ಕಛೆರಿಯಾದ ನಂತರ ಹೊರಗಿನ ಕಲಾವಿದರ ವಿನಿಕೆ ಸುಬ್ಬಣ್ಣನವರ ಮನೆಯಲ್ಲೂ ನಡೆಯುತ್ತಿತ್ತು. ಒಮ್ಮೆ ಮಹಾವೈದ್ಯನಾಥ ಅಯ್ಯರ್ ಅವರು ಇವರ ಮನೆಯಲ್ಲಿ ಹಾಡಿದಾಗ, ಆ ದಿವ್ಯಗಾನಕ್ಕೆ ಮನಸೋತು ಬಹು ಬೆಲೆ ಬಾಳುವ ತಮ್ಮ ಪಚ್ಚೆ ಉಂಗುರವನ್ನೇ ಸುಬ್ಬಣ್ಣನವರು ಗಾಯಕರಿಗೆ ತೊಡಿಸಿ ’ಈ ಉಂಗುರಕ್ಕೆ ಇದೇ ಸರಿಯಾದ ಸ್ಥಾನ’ ಎಂದರಂತೆ. ಹಾಗೆಯೇ ಒಮ್ಮೆ ಪೂಚಿ ಶ್ರೀನಿವಾಸ ಅಯ್ಯಂಗಾರ್ಯರು ಕಛೇರಿಯ ಸಮಯವಾದರೂ ಏನನ್ನೋ ಹುಡುಕುತ್ತಾ ಇದ್ದರಂತೆ. ನಂತರ ಮಹಾರಾಜರು ನೀಡಿದ್ದ ಉಂಗುರ ಕಳೆದು ಹೋಗಿರುವುದಾಗಿ ಹೇಳಿದರಂತೆ. ಸುಬ್ಬಣ್ಣನವರು ತಮ್ಮ ಉಂಗುರದ ಪೆಟಾರಿಯನ್ನೇ ಕಲಾವಿದರ ಮುಂದಿಟ್ಟು, ಯಾವ ರತ್ನದ ಉಂಗುರವನ್ನಾದರೂ ತೆಗೆದುಕೊಳ್ಳಿ| ಈಗ ನಿಮ್ಮ ಸಂಗೀತ ನಮ್ಮನ್ನು ಸಂತೋಷಪಡಿಸಬೇಕು’ ಅಂದರಂತೆ.
ಮಕ್ಕಳಿಲ್ಲದ ಸುಬ್ಬಣ್ಣನವರು ತಮ್ಮ ಶಿಷ್ಯರನ್ನೇ ವಾತ್ಸಲ್ಯದಿಂದ ನೋಡಿಕೊಳ್ಳುತ್ತಿದ್ದರು. ಬೆಳಗಿನ ಹೊತ್ತು ಶಿಷ್ಯರ ಜೊತೆ ತಾವೂ ನುಡಿಸುತ್ತಾ ಮಾರ್ಗದರ್ಶನ ನೀಡುತ್ತಿದ್ದರು. ನಿತ್ಯ ಸಾಧನೆಗೆ ಮೋಹನದ ಸ್ವರಜತಿ(ವಿಜಯನಗರದ ಗುರುರಾಯರ ರಚನೆ), ಕಾಪಿ ರಾಗದ ಸ್ವರಜತಿ (ಅವರದೇ ಸ್ವಂತ ರಚನೆ), ಭೈರವಿ ರಾಗದ ವೀರಿಬೋಣಿ ವರ್ಣ ಇವುಗಳನ್ನು ನುಡಿಸಿಕೊಳ್ಳುತ್ತಿದ್ದರು. ಅನೇಕ ಶಿಷ್ಯರನ್ನು ತಮ್ಮ ಮನೆಯಲ್ಲೇ ಸಲಹಿಕೊಂಡು ವಿದ್ಯಾದಾನ ಮಾಡುತ್ತಿದ್ದರು. ಚಿಕ್ಕರಾಮರಾಯರು, (ಹಿರಿಯ)ಬೆಳಕವಾಡಿ ಶ್ರೀನಿವಾಸಯ್ಯಂಗಾರ್, ಸ್ವರಮೂರ್ತಿ ವಿ. ಎನ್. ರಾವ್, ಆರ್.ಎಸ್. ಕೇಶವಮೂರ್ತಿ, ರಾಜಣ್ಣ, ಶ್ರೀಕಂಠ ಅಯ್ಯರ್, ಸುಬ್ಬಮ್ಮ(ಅಕ್ಕಮ್ಮಣ್ಣಿ) ಮತ್ತು ಕುಮುದಾ-ಆಂಡಾಳ್ ಸಹೋದರಿಯರು ಇವರುಗಳು ಸುಬ್ಬಣ್ಣನವರಿಂದ ಕ್ರಮವಾದ ಶಿಕ್ಷಣ ಪಡೆದರು. ಅಲ್ಲದೆ, ಹೆಚ್ ಪಿ ಕೃಷ್ಣರಾವ್, ಜಸ್ಟಿಸ್ ಮಹದೇವಯ್ಯ, ವೀಣೆ ವೆಂಕಟಗಿರಿಯಪ್ಪ. ಪಿಟೀಲು ಚೌಡಯ್ಯ, ಸುಬ್ಬಣ್ಣನವರಿಂದ ಆಗಾಗ್ಗೆ ಮಾರ್ಗದರ್ಶನ ಪಡೆಯುತ್ತಿದ್ದರು. ಇದಲ್ಲದೆ, ಅರಮನೆ ಚಂದ್ರಶಾಲಾ ತೊಟ್ಟಿಯಲ್ಲಿ ಕಿರಿಯ ವಿದ್ವಾಂಸರುಗಳಿಗೆ ಪಾಠವನ್ನು ಹೇಳಿ ಅವರನ್ನು ತಿದ್ದುತ್ತಾ ಪರಿಷ್ಕಾರಗೊಳಿಸುತ್ತಿದ್ದರು. ಸುಬ್ಬಣ್ಣನವರು ಸ್ವರಜತಿ, ವರ್ಣ, ಕೃತಿಗಳನ್ನು ರಚಿಸಿದ್ದಾರೆ. ಕಾಂಬೋಧಿ, ಕರ್ನಾಟಕ ಕಾಪಿ, ಕೀರವಾಣಿಗಳಲ್ಲಿ ಸ್ವರಜತಿಗಳನ್ನೂ; ಅಠಾಣ, ಪೂರ್ವಿಕಲ್ಯಾಣಿ ರಾಗಗಳಲ್ಲಿ ವರ್ಣಗಳನ್ನೂ, ಯುವರಾಜ ಶ್ರೀಕಂಠೀರವ ನರಸಿಂಹರಾಜ ಒಡೆಯರವರ ವಿವಾಹ ಮಹೋತ್ಸವದ ಸಂದರ್ಭದಲ್ಲಿ ನವರಾಗಮಾಲಿಕೆಯೊಂದನ್ನು ಅವರು ರಚಿಸಿದ್ದಾರೆ. ೧೩.೭.೧೯೩೯ರಂದು ಅವರ ನಿಧನದೊಂದಿಗೆ ಮೈಸೂರು ವೀಣಾ ಪರಂಪರೆಯ ಭವ್ಯ ಕೊಂಡಿಯೊಂದು ಕಳಚಿಕೊಂಡಿತು.

ಆರ್.ಎಸ್. ಕೇಶವಮೂರ್ತಿಗಳು (೧೯೦೩-೧೯೮೨)

ಆರ್.ಎಸ್. ಕೇಶವಮೂರ್ತಿಗಳು (೧೯೦೩) ಸುಬ್ಬಣ್ಣನವರ ಪರಂಪರೆಯನ್ನು ಗಟ್ಟಿಯಾಗಿ ಬೆಳೆಸಿದರು. ಕೇಶವಮೂರ್ತಿಗಳು ಹಾಸನ ಜಿಲ್ಲೆಯ ಬೇಲೂರಿನಲ್ಲಿ ಜನಿಸಿದರು. ಕೇಶವಮೂರ್ತಿಗಳಿಗೆ ಪ್ರಾರಂಭದಲ್ಲಿ ವೀಣೆ ಪಾಠ ಅವರ ಚಿಕ್ಕಪ್ಪ ವೆಂಕಟರಮಣಯ್ಯನವರಿಂದ ಆಯಿತು. ಕಾರಣಾಂತರಗಳಿಂದ ೧೯ನೇ ವಯಸ್ಸಿನಲ್ಲಿ ಊರನ್ನು ಬಿಡಬೇಕಾಗಿ ಬಂದು ಕೇಶವಮೂರ್ತಿಗಳು ಮೈಸೂರನ್ನು ಸೇರಿದರು. ನಂತರ ಸುಮಾರು ಆರು ವರ್ಷಗಳ ಕಾಲ ಸುಬ್ಬಣ್ಣನವರಲ್ಲಿ ಅವರ ಪಾಠ ಸಾಗಿತು. ಗುರುಗಳ ಹರಕೆಯಿಂದ ಇವರು ಉತ್ತರ ಹಿಂದೂಸ್ಥಾನದ ಉದ್ದಗಲಕ್ಕೂ ಸುಮಾರು ಎಂಟು ತಿಂಗಳು ಸಂಚರಿಸಿ ಕಾರ್ಯಕ್ರಮ ನೀಡಿ ಬಂದರು. ಮುಂಬಯಿಯ ಕೃಷ್ಣವಿಜಯ ಕ್ಲಬ್ಬಿನಲ್ಲಿ ಕೇಸರ್‌ಬಾಯಿಯವರ ಗಾಯನವಿದ್ದ ದಿವಸವೇ ಕೇಶವಮೂರ್ತಿಗಳಿಗೆ ವೀಣಾವಾದನಕ್ಕೆ ಅವಕಾಶ ದೊರೆಯಿತು. ಇವರ ಸಂಗೀತವನ್ನು ಬಹುವಾಗಿ ಮೆಚ್ಚಿದ ಕೇಸರ್‌ಬಾಯಿಯವರು ಇವರಿಗೆ ಖಾನ್ ಸಾಹೇಬ್ ಮಂಜೀಖಾನರ ಪರಿಚಯ ಮಾಡಿಕೊಟ್ಟರು. ಇವರ ಸಂಗೀತವನ್ನು ಮೆಚ್ಚಿದ ಖಾನರು ಹಲವೆಡೆಗಳಲ್ಲಿ ಇವರ ಸಂಗೀತ ಕಾರ್ಯಕ್ರಮಕ್ಕೆ ನೆರವಾದರು. ಮಹಾತ್ಮಾ ಗಾಂಧಿಯವರ ಮುಂದೆ ನುಡಿಸಿ ಮೆಚ್ಚುಗೆ ಗಳಿಸಿದ ಮತ್ತೋರ್ವ ಕರ್ನಾಟಕದ ಸಂಗೀತಗಾರರು ಇವರು. ಕವಿಗುರು ರವೀಂದ್ರರು ಇವರ ಸಂಗೀತವನ್ನು ಮೆಚ್ಚಿ ಇವರನ್ನು ಶಾಂತಿನಿಕೇತನಕ್ಕೆ ಆಹ್ವಾನಿಸಿದ್ದರು.
ಕೇಶವಮೂರ್ತಿಗಳು ೧೯೨೪ರಲ್ಲೇ ನಾದದಲ್ಲಿ ಸಂಶೋಧನೆ ಮಾಡಿ, ವೀಣೆಯ ನಾದವನ್ನು ಹೆಚ್ಚಿಸಲು (ಧ್ವನಿವರ್ಧಕದ ಸೌಕರ್ಯವಿಲ್ಲದ ಕಾಲದಲ್ಲಿ) ವೀಣೆಗೆ ಸಾಧಾರಣವಾಗಿ ಇರುವ ಏಳು ತಂತಿಗಳ ಜೊತೆಗೆ ಇನ್ನು ಹದಿನೇಳು ಅನುರಣನ, ಸ್ನೇಹಸ್ಪಂದನ ತಂತಿಗಳನ್ನು ಜೋಡಿಸಿ, ತುಂಬುನಾದ ಬರುವಂತೆ ಮಾಡಿದರು. ಹಾಗಾಗಿಯೇ ಅ.ನ.ಕೃ ಹೇಳುವಂತೆ, ಕೇಶವಮೂರ್ತಿಗಳ ವಾದ್ಯವಾದನದಲ್ಲಿ ಕೆಲವು ಹೆಚ್ಚಿನ ಗುಣಗಳಿವೆ. ಅವರ ವೀಣೆಯೇ ಒಂದು ಅಪರೂಪದ ವಸ್ತು. ನಾದ ಸೌರಭ ತುಂಬಿ ಬರುತ್ತದೆ. ದೊಡ್ಡ ಸಭಾಮಂದಿರದಲ್ಲಿ ಕೂಡ ಸ್ಪಷ್ಟವಾಗಿ ಕೇಳಿಸುವಷ್ಟು ನಾದಸಂಪತ್ತು ಆ ವಾದ್ಯದಲ್ಲಿ ಅಡಕವಾಗಿದೆ. ವೀಣೆಯಲ್ಲಿ ಎಷ್ಟು ಸಂಗೀತವನ್ನು ತೆಗೆಯಬಹುದೋ ಅಷ್ಟನ್ನೂ ಕೇಶವಮೂರ್ತಿಗಳು ತೆಗೆಯುತ್ತಾರೆಂದು ಹೇಳಬಹುದು. ಗಮಕವಾಗಲಿ, ತಾನವಾಗಲಿ, ನೆರವಲ್ಲಾಗಲಿ, ರಾಗದ ಎಳೆತ ಜೀರುಗಳಾಗಲೀ ನಿಷ್ಕೃಷ್ಟವಾಗಿ ತುಂಬಿ ಬರುತ್ತದೆ. ನಾಲ್ಕಾರು ವಾದ್ಯಗಳ ಮೇಳದಲ್ಲಿ ದೊರೆಯುವ ಸಮರಸ ಕೇಶವಮೂರ್ತಿಗಳೊಬ್ಬರ ವಾದ್ಯವಾದನದಲ್ಲಿ ದೊರೆಯುತ್ತದೆ ಇವರ ಗುರುಗಳಾದ ಸುಬ್ಬಣ್ಣನವರು, ತಮ್ಮ ಕನಕ ರಜತ ಸರಸ್ವತೀ ವೀಣೆಯನ್ನು ಅವರಿಗೆ ಕೊಟ್ಟು ಈ ವೀಣೆಯಲ್ಲಿ ಲಕ್ಷ್ಮೀ ಸರಸ್ವತಿಯರು ಆವಾಹನೆಯಾಗಿದ್ದಾರೆ. ಇದರೊಂದಿಗೆ ನಾನೂ ಆವಾಹನೆಯಾಗಿ ಬರುತ್ತಿರುವೆನು. ನಿಮ್ಮ ವಂಶ, ನಿಮ್ಮ ಕೀರ್ತಿ ನೂರ್ಮಡಿ ವೃದ್ಧಿಸಲಿ ಎಂದಿದ್ದರಂತೆ.
ಇವರಿಗೆ ಬಂದ ಪ್ರಶಸ್ತಿಗಳು ಹಲವಾರು. ಇವರು ವಿದ್ಯಾದಾನ ಮಾಡಿದ ಶಿಷ್ಯರು ಅನೇಕರು. ಇವರ ಹನ್ನೊಂದು ಮಕ್ಕಳಲ್ಲಿ ಆರ್. ಕೆ. ಶ್ರೀನಿವಾಸಮೂರ್ತಿಯವರು ದೇಶದ ಪ್ರಮುಖ ವೀಣಾ ವಾದಕರಲ್ಲೊಬ್ಬರು. ಎರಡನೆಯರು ಆರ್.ಕೆ. ಸೂರ‍್ಯನಾರಾಯಣರು ತಮ್ಮ ಅಪ್ರತಿಮಸಾಧನೆ, ಲಕ್ಷ್ಯ ಲಕ್ಷಣಗಳೆರಡರಲ್ಲಿನ ಪ್ರೌಢಿಮೆಯಿಂದ ವಾಗ್ಗೇಯಕಾರರೂ ಆಗಿ, ದೇಶ ವಿದೇಶಗಳಲ್ಲಿ ಖ್ಯಾತಿ ಪಡೆದರು. ತರುವಾಯ ಆರ್.ಕೆ. ರಾಘವನ್, ಆರ್.ಕೆ. ಶಂಕರನ್, ಆರ್.ಕೆ. ಚಂದ್ರಶೇಖರ್, ಆರ್.ಕೆ. ಪ್ರಕಾಶ್, ಆರ್.ಕೆ. ಪ್ರಸನ್ನಕುಮಾರ್, ಆರ್ ಕೆ. ಪದ್ಮನಾಭ ಇವರೂ ಕೂಡ ಹೆಸರಾಂತ ವೈಣಿಕರು. ಹೆಚ್.ಎಸ್. ಕೃಷ್ಣಮೂರ್ತಿ ಹಾಗೂ ಗೀತಾ ಶಾಂಪ್ರಕಾಶ್ ಕೂಡ ಅವರ ಶಿಷ್ಯರಲ್ಲಿ ಪ್ರಮುಖರು.

ವೀಣೆ ಶೇಷಣ್ಣನವರು: ೧೮೫೨-೧೯೨೬
ವೀಣೆ ಶೇಷಣ್ಣನವರ ಬಗ್ಗೆ ಪ್ರತ್ಯೇಕವಾದ ಲೇಖನವೊಂದು ಈ ಸಂಚಿಕೆಯಲ್ಲಿ ಇರುವುದರಿಂದ ಇಲ್ಲಿ ಆ ಬಗ್ಗೆ ವಿವರವಾಗಿ ಬರೆಯುತ್ತಿಲ್ಲ. ಕನ್ಯಾಕುಮಾರಿಯಿಂದ ದೆಹಲಿಯವರಗೆ ವಿವಿಧ ಪ್ರಾಂತ್ಯ, ಅರಮನೆ, ಉತ್ಸವಗಳಲ್ಲಿ ಶೇಷಣ್ಣನವರ ವಿನಿಕೆ ಹೆಸರು ಮಾಡಿತ್ತು. ಜೀವನ ಕಾಲದಲ್ಲಿಯೇ ಇವರು ವೀಣೆಗೆ ಅನ್ವರ್ಥನಾಮವಾಗಿಬಿಟ್ಟಿದ್ದರು. ಅಷ್ಟೇ ಅಲ್ಲ ಒಂದು ದೊಡ್ಡ ಶಿಷ್ಯವರ್ಗವನ್ನೇ ತಯಾರು ಮಾಡಿದ್ದರು. ವೆಂಕಟಗಿರಿಯಪ್ಪ, ಶರ್ಮಾದೇವಿ ಸುಬ್ರಮಣ್ಯ ಶಾಸ್ತ್ರಿ, ಭೈರವಿ ಲಕ್ಷ್ಮೀನಾರಾಯಣಪ್ಪ, ಚಿತ್ರಶಿಲ್ಪಿ ವೆಂಕಟಪ್ಪ, ವಿ. ನಾರಾಯಣ ಅಯ್ಯರ್, ತಿರುಮಲೆ ರಾಜಮ್ಮ, ಎಂ.ಎಸ್. ಭೀಮರಾವ್ ಹಾಗೂ ಶೇಷಣ್ಣನವರು ಅಣ್ಣನ ಮೊಮ್ಮಗ ಎ. ಎಸ್. ಚಂದ್ರಶೇಖರಯ್ಯ ಮತ್ತು ಮೊಮ್ಮಗ ಸ್ವರಮೂರ್ತಿ ವಿ.ಎನ್. ರಾವ್. ಶೇಷಣ್ಣನವರ ಪರಂಪರೆಯನ್ನು ಸಮರ್ಥವಾಗಿ ಮುಂದುವರೆಸಿದವರಲ್ಲಿ ಭೈರವಿ ಲಕ್ಷ್ಮೀನಾರಣಪ್ಪ ಹಾಗೂ ವೆಂಕಟಗಿರಿಯಪ್ಪನವರು ಪ್ರಮುಖರು.
ಭೈರವಿ ಲಕ್ಮೀನಾರಣಪ್ಪನವರ ತಾತ ಚಿಕ್ಕ ಲಕ್ಷ್ಮೀನಾರಣಪ್ಪನವರು ಮುಮ್ಮಡಿ ಕೃಷ್ಣರಾಜ ಪ್ರಭುಗಳ ಸೇವೆಯಲ್ಲಿದ್ದರು. ಚಿಕ್ಕ ಲಕ್ಷ್ಮೀನಾರಣಪ್ಪನವರು ಅರಮನೆಯೊಳಗಿನ ಪ್ರಸನ್ನ ಕೃಷ್ಣಸ್ವಾಮಿಯ ಗುಡಿಯಲ್ಲಿ ನಿತ್ಯಸಂಗೀತ ಸೇವೆಗೆಂದು ವೈಣಿಕ ಹಾಗೂ ಗಾಯಕರಾಗಿದ್ದರು. ಇವರಿಗೆ ಇಬ್ಬರು ಗಂಡುಮಕ್ಕಳು: ಶೀನಪ್ಪ ಮತ್ತು ಕೃಷ್ಣಪ್ಪ. ಕೃಷ್ಣಪ್ಪನವರು ಹೆಸರಾಂತ ವೀಣಾವಾದಕರು. ಭೈರವಿ ಲಕ್ಷ್ಮೀನಾರಣಪ್ಪನವರು (೧೮೭೮) ಕೃಷ್ಣಪ್ಪನವರ ಮಗ. ೧೮ನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ಲಕ್ಷ್ಮೀನಾರಣಪ್ಪನವರನ್ನು ಅವರ ತಾಯಿ ಸತ್ಯಭಾಮಮ್ಮ ಶೇಷಣ್ಣನವರ ಬಳಿ ವೀಣೆಪಾಠಕ್ಕೂ ಮತ್ತು ವಾಸುದೇವಾಚಾರ್ಯರ ಬಳಿ ಹಾಡುಗಾರಿಕೆಗೂ ಸೇರಿಸಿದರು. ಮಾನವ ದೇಹದ ಪ್ರತಿರೂಪವೇ ವೀಣೆಯೆಂದು ಲಕ್ಷ್ಮೀನಾರಣಪ್ಪನವರ ನಂಬಿಕೆ. ಹಾಗಾಗಿ ವೀಣೆಯನ್ನು ಹಾಡಿಕೆಯ ಶೈಲಿಯಲ್ಲಿ ’ನುಡಿಸಬೇಕಲ್ಲದೆ’ ಬಾರಿಸಬಾರದೆಂದು ಹೇಳುತ್ತಿದ್ದರು. ಅವರು ತಾನವನ್ನು ನುಡಿಸುವುದರಲ್ಲಿ ಪರಿಣತರು. ಆದರೆ ಅವರು ಶುದ್ಧತಾನವನ್ನು ಮಾತ್ರ ನುಡಿಸುತ್ತಿದ್ದರು, ಕೂಟ ತಾನವನ್ನು ನುಡಿಸುತ್ತಿರಲಿಲ್ಲ. ಅವರು ವೀಣೆಯೊಂದಿಗೆ ಕೃತಿಗಳನ್ನು ಹಾಡಿಕೊಂಡು ನುಡಿಸುತ್ತಿದ್ದರು. ಪಲ್ಲವಿಯ ನುಡಿಸುವಿಕೆಯಂತೂ ನೆರವಲ್ ಹಾಡಿಕೆಯ ಪ್ರತಿಬಿಂಬವೇ. ಟೈಗರ್ ವರದಾಚಾರ್ಯರಿಗೆ ಲಕ್ಷ್ಮೀನಾರಣಪ್ಪನವರ ವೀಣೆಗಾನದಲ್ಲಿ ಅಮಿತ ಪ್ರೇಮ. ಮೈಸೂರಿನಲ್ಲಿ ಅವರಿದ್ದ ಏಳುವರ್ಷದಲ್ಲಿ ತಮಗೆ ತೋರಿದಾಗ ರಾತ್ರಿ ೯ರ ಮೇಲೆ ತಮ್ಮ ಪತ್ನಿಯನ್ನೂ ಕರೆದುಕೊಂಡು ಬಂದು ಅವರ ವೀಣೆಯನ್ನು ಕೇಳುವುದೇ ಅಲ್ಲದೆ, ತಾವೂ ವೀಣೆಯೊಡನೆ ಮನಸಾರ ಹಾಡುತ್ತಿದ್ದರು. ಅವರ ವೀಣೆಯೊಂದಿಗೆ ಹಾಡುವುದೇ ಒಂದು ಹಬ್ಬ ಎಂದು ಪದೇ ಪದೇ ಹೇಳುತ್ತಿದ್ದರು. ಟೈಗರ್ ಹಾಡಿಕೆ, ಲಕ್ಷ್ಮೀನಾರಣಪ್ಪನವರ ವೀಣೆ, ಬೆಳಕವಾಡಿ ಶ್ರೀನಿವಾಸ ಅಯ್ಯಂಗಾರ್ಯರ ಪಿಟೀಲು ಇವುಗಳನ್ನು ಕೇಳುವುದೇ ಒಂದು ರಸದೌತಣ. ಡಾ. ಮುತ್ತಯ್ಯ ಭಾಗವತರು ಅವರನ್ನು ತಮ್ಮ ಪತ್ನಿಗೆ ವೀಣಾ ಗುರುಗಳಾಗಿ ನೇಮಕ ಮಾಡಿದ್ದರು. ಲಕ್ಷ್ಮೀನಾರಣಪ್ಪನವರ ಭೈರವೀ ರಾಗದ ನುಡಿಸುವಿಕೆಗೆ ಮನಸೋತ ಮದ್ರಾಸಿನ ಚೆಲ್ಲಾ ಗುರುಸ್ವಾಮಿ ಚೆಟ್ಟಿಯವರು ಅವರನ್ನು ಭೈರವಿ ಲಕ್ಷ್ಮೀನಾರಣಪ್ಪ ಎಂದು ಕರೆದರು. ಇವರ ಶಿಷ್ಯರಲ್ಲಿ ತೀರಾ ಪ್ರಮುಖರು ಇವರ ಪುತ್ರ ಎಲ್. ರಾಜಾರಾವ್, (ಪುಸ್ತಕ ಸುರಭಿಯಲ್ಲಿ ಇವರನ್ನು ಕುರಿತು ವಿವರವಾಗಿ ಇದೆ. ಚೌಡಯ್ಯನವರ ಸಹೋದರಿ ಮೀನಾಕ್ಷಮ್ಮ, ಮಹಾರಾಣಿ ಕಾಲೇಜಿನ ನಿವೃತ್ತ ಸಂಗೀತ ಪ್ರಾಧ್ಯಾಪಕಿ ಶಾರದಮ್ಮ, ಮುಂತಾದವರು.

ವೀಣೆ ವೆಂಕಟಗಿರಿಯಪ್ಪನವರು ೧೮೮೭-೧೯೫೨
ವೀಣೆ ವೆಂಕಟಗಿರಿಯಪ್ಪನವರು ವೀಣೆ ಶೇಷಣ್ಣನವರ ಪರಂಪರೆಯನ್ನು ಮತ್ತು ಶೈಲಿಯನ್ನು ಅವರದೇ ಜಾಡಿನಲ್ಲಿ ಅತ್ಯಂತ ಸಮರ್ಥವಾಗಿ ಮುಂದಕ್ಕೆ ಕೊಂಡೊಯ್ದರು. ಅವರು ೨೬-೪-೧೮೮೭ರಂದು ಹೆಗ್ಗಡದೇವನ ಕೋಟೆಯ ವೈದಿಕ ಮನೆತನದಲ್ಲಿ ಜನ್ಮ ತಾಳಿದರು. ತಂದೆ ವೆಂಕಟರಾಮಯ್ಯ, ತಾಯಿ ನರಸಮ್ಮ, ಕೇವಲ ಹನ್ನೊಂದು ತಿಂಗಳ ಹಸುಗೂಸಾಗಿದ್ದಾಗಲೇ ತಂದೆಯನ್ನು ಕಳೆದುಕೊಂಡರು. ತಾಯಿ ನರಸಮ್ಮ ಮಗುವಿನೊಂದಿಗೆ ತಮ್ಮ ತಂದೆ ದೊಡ್ಡಸುಬ್ಬರಾಯರಲ್ಲಿ ಆಶ್ರಯ ಪಡೆದರು. ವೆಂಕಟಗಿರಿಯಪ್ಪನವರಿಗೆ ಐದನೆಯ ವರ್ಷದಿಂದಲೇ ದೊಡ್ಡಸುಬ್ಬರಾಯರಿಂದ ವೀಣೆ ಪಾಠ. ನಂತರ ಚಿಕ್ಕಸುಬ್ಬರಾಯರಲ್ಲಿ ಪಾಠ. ಮಗನಂತೆಯೇ ಬೆಳೆದ ಸೂಕ್ಷ್ಮಮತಿಯಾದ ವೆಂಕಟಗಿರಿಯಪ್ಪನವರಿಗೆ ಮೀಟಿನ ಸೂಕ್ಷ್ಮ, ಎಡಗೈ ಬೆರಳುಗಳ ಕೌಶಲ್ಯ ಎಲ್ಲವನ್ನೂ ಶಿಸ್ತಿನಿಂದ ಸಂಪ್ರದಾಯಕ್ಕೆ ತಕ್ಕಂತೆ ಶ್ರದ್ದೆಯಿಂದ ಸುಮಾರು ಒಂದು ಸಾವಿರ ಕೀರ್ತನೆಗಳನ್ನು ಚಿಕ್ಕಸುಬ್ಬರಾಯರು ಕಲಿಸಿದರು. ನಂತರ ಅರಮನೆಯಲ್ಲಿ ಅವರು ಆಸ್ಥಾನ ವಿದ್ವಾಂಸರಾದರು. ಆ ಸಮಯದಲ್ಲಿ ಅವರಿಗೆ ವೀಣೆ ಶೇಷಣ್ಣನವರ ಪರಿಚಯವಾಯಿತು. ಅವರ ಶೈಲಿಯಿಂದ ಆಕರ್ಷಿತರಾದ ಇವರು ಅವರ ಪ್ರಾಮಾಣಿಕ ವಿದ್ಯಾರ್ಥಿಯಾಗಿ, ಅಭ್ಯಾಸ ಮಾಡಿ ಅವರ ಮೆಚ್ಚುಗೆಗೆ ಪಾತ್ರರಾದರು. ಅವರ ಶಿಷ್ಯರಾದ ದೊರೆಸ್ವಾಮಿ ಅಯ್ಯಂಗಾರ್ ತಮ್ಮ ಆತ್ಮಚರಿತ್ರೆಯಲ್ಲಿ ವಂಕಟಗಿರಿಯಪ್ಪನವರ ವ್ಯಕ್ತಿತ್ವವನ್ನು ಸೊಗಸಾಗಿ ಚಿತ್ರಿಸುತ್ತಾರೆ: ಅವರ ವಿನಿಕೆ ಬಹು ಸರಳವಾದದ್ದು; ಅಷ್ಟೇ ಪರಿಣಾಮಕಾರಿಯಾದದ್ದು. ಇದು ಹಿರಿಯ ಕಲಾವಿದರಲ್ಲಿ ಮಾತ್ರ ಕಂಡು ಬರುವ ಲಕ್ಷಣ. ಮೀಟಿನ ಹದ ನನ್ನ ಗುರುಗಳಿಗೆ ಕರಗತವಾಗಿತ್ತು. ನಮ್ಮ ಮೈಸೂರು ಶೈಲಿಯ ವೈಶಿಷ್ಟ್ಯದಂತೆ ಎಡಗೈಯ ಬೆರಳುಗಳನ್ನು ಬಿಡಿಸಿ ಲೀಲಾಜಾಲವಾಗಿ ನುಡಿಸುವುದರಲ್ಲಿ ಅವರು ಸಿದ್ದಹಸ್ತರು. ಧ್ವನಿವರ್ಧಕ ಇಲ್ಲದ ಕಾಲದಲ್ಲಿಯೂ, ದೊಡ್ಡದೊಂದು ಸಭಾಭವನದಲ್ಲಿ ಸುಮಾರು ನೂರೈವತ್ತು ಇನ್ನೂರು ರಸಿಕರು ಒಟ್ಟಿಗೆ ಕುಳಿತು ಕೇಳಿ ಆನಂದಿಸಬಹುದಾದ ನಾದಮಾಧುರ್ಯ ಅವರದು. ಏನನ್ನೇ ನುಡಿಸಿದರೂ, ಗುರುಗಳ ವಿನಿಕೆಯಲ್ಲಿ ನಾದಸಂಪತ್ತು ಎದ್ದು ತೋರುತ್ತಿತ್ತು. ಪೂಜ್ಯ ಶೇಷಣ್ಣನವರನ್ನು ಆದರ್ಶ ಎಂದು ಭಾವಿಸಿ ಅಭ್ಯಸಿಸಿದ್ದರಿಂದ, ಗುರುಗಳಿಗೇ ಅರಿವಿಲ್ಲದಂತೆ ಶೇಷಣ್ಣನವರ ಜಾಡು ಅವರಿಗೆ ಒಲಿದು ಬರುತ್ತಿತ್ತು. ಗುರುಗಳ ಮತ್ತೊಂದು ವೈಶಿಷ್ಟ್ಯವೆಂದರೆ ಪಂಡಿತರನ್ನೂ ಪಾಮರರನ್ನೂ ಅವರು ಸಮಾನವಾಗಿ ರಂಜಿಸುತ್ತಿದ್ದರು. ಅವರ ಕಛೇರಿಯನ್ನು ಕೇಳಿದ ಮೇಲೆ ಅನೇಕರು ಅವರ ಹತ್ತಿರ ಬಂದು ’ಶೇಷಣ್ಣನವರನ್ನೇ ಕೇಳಿದ ಹಾಗಾಯ್ತು ದೇವ್ರು|’ ಎಂದು ಸಂತೋಷ ವ್ಯಕ್ತಪಡಿಸುತ್ತಿದ್ದರು.”
“ಗುರುಗಳ ಕಛೇರಿ ನಿರ್ವಹಣೆ ಬಗ್ಗೆ ಹೇಳುವುದಾದರೆ ಅವರ ಹಾವಭಾವ, ಮುಖ ಚಹರೆ ಅತ್ಯಂತ ಗಂಭೀರ; ಶಾಂತ! ಎಂತಹ ಕ್ಲಿಷ್ಟಕರ ಸಂಗತಿಯನ್ನು ನುಡಿಸಬೇಕಾದರೂ ಯಾವುದೇ ರೀತಿಯ ಮುಖವಿಕಾರ ತೋರುತ್ತಿರಲಿಲ್ಲ. ಅಂಗಚೇಷ್ಟೆಗಳಂತೂ ಇರುತ್ತಲೇ ಇರಲಿಲ್ಲ. ಗಂಭೀರವಾದೊಂದು ಸುಂದರ ವಿಗ್ರಹದಂತೆ ವೇದಿಕೆಯ ಮೇಲೆ ಗುರುಗಳು ಕಂಗೊಳಿಸುತ್ತಿದ್ದರು. ಅವರಿಗೆ ಶೇಷಣ್ಣನವರ ಬಗ್ಗೆ ಅಪರಿಮಿತ ಭಕ್ತಿ. ವೀಣೆ ಶೇಷಣ್ಣೋರ ಜತೇನೆ ಹೋಯ್ತು….. ಅವರ ಜತೇನೇ ತಗೊಂಡು ಹೊರಟು ಹೋದ್ರು. . . ತಮ್ಮ ತಲೆದೆಸೆಯಲ್ಲಿ ಶೇಷಣ್ಣನವರ ಭಾವಚಿತ್ರ ಹಾಕಿಕೊಂಡಿದ್ದರು. ಆ ಪಟಕ್ಕೆ ಕೈಮುಗಿದ ಮೇಲೆಯೇ ಅವರ ದಿನಚರಿ ಆರಂಭವಾಗುತ್ತಾ ಇದ್ದದ್ದು” ಎಂದು ದೊರೆಸ್ವಾಮಿ ಅಯ್ಯಂಗಾರ್ಯರು ಹೇಳುತ್ತಿದ್ದರು.
ಸಂಗೀತ ಕ್ಷೇತ್ರಕ್ಕೆ ಅವರ ಕೊಡುಗೆ ಸಾಕಷ್ಟಿದೆ. ಭ್ರಮರಹಂಸಿ, ಮಹೇಶ್ವರಿ, ಶಂಭುಪ್ರಿಯ ಮುಂತಾದ ರಾಗಗಳಲ್ಲಿ ಅವರು ಹಲವಾರು ರಚನೆಗಳನ್ನು ಮಾಡಿ ತನ್ಮೂಲಕ ಆ ರಾಗಗಳನ್ನು ಬೆಳಕಿಗೆ ತಂದರು. ಅನೇಕ ಹೊಸ ರಾಗಗಳ ಪರಿಚಯ ಎಲ್ಲರಿಗೂ ದೊರೆಯುವಂತಾಯ್ತು. ಇವರು ನಗಮಾ ಎನ್ನುವ ಹೊಸ ಸಂಗೀತ ಪ್ರಕಾರವನ್ನು ಕಂಡುಹಿಡಿದು, ಬೇಹಾಗ್, ಹಿಂದೋಳ, ಕೀರವಾಣಿ ಮುಂತಾದ ರಾಗಗಳಲ್ಲಿ ಅವುಗಳ ರಚನೆ ಮಾಡಿದರು. ಇವೆರಡು ಅವರ ಮುಖ್ಯ ಕೊಡುಗೆಗಳಲ್ಲಿ ಕೆಲವು.. ಅವರ ಮಕ್ಕಳ ಪೈಕಿ ವೀಣೆ ಕಲಿತವರೆಂದರೆ ಪರಿಮಳ, ಅಮೃತ, ಪ್ರಭಾಕರ ಮತ್ತು ಡಾ ಹರಿಪ್ರಸಾದ್. ಇವರ ಶಿಷ್ಯರಲ್ಲಿ, ವೀಣೆ ದೊರೆಸ್ವಾಮಿ ಅಯ್ಯಂಗಾರ್, ರಂಗನಾಯಕಿ, ರಾಜಲಕ್ಷ್ಮಿ, ಆರ್.ಎನ್. ದೊರೆಸ್ವಾಮಿ, ಎಂ. ಜೆ. ಶ್ರೀನಿವಾಸ ಅಯ್ಯಂಗಾರ್, ಎಂ ಚೆಲುವರಾಯಸ್ವಾಮಿ ಮುಖ್ಯರು. ಇವರಿಗೆ ಬಂದ ಬಿರುದುಗಳು ಹಲವಾರು. ಕುಂಭಕೋಣದ ಶ್ರೀಗಳಿಂದ ವೈಣಿಕಶಿಖಾಮಣಿ, ಮಹಾರಾಜರಿಂದ ವೈಣಿಕ ಪ್ರವೀಣ. ಸಂಗೀತ ವಿಶಾರದ ಮುಂತಾದ ಬಿರುದುಗಳು ಇವರಿಗೆ ಸಂದಿವೆ.

ವೀಣೆ ದೊರಸ್ವಾಮಿ ಅಯ್ಯಂಗಾರ್- ವಾಸುದೇವಾಚಾರ್ಯರು
ದೊರಸ್ವಾಮಿ ಅಯ್ಯಂಗಾರ್(೧೯೨೦-೧೯೯೭) ಅವರು ಶೇಷಣ್ಣ ಹಾಗೂ ವೆಂಕಟಗಿರಿಯಪ್ಪನವರು ಬೆಳೆಸಿದ ಶೈಲಿಯನ್ನು ಮುಂದುವರೆಸಿದರು.

ಇವರ ಶ್ರೇಯಸ್ಸಿಗೂ, ಪುರೋಭಿವೃದ್ಧಿಗೂ ಕಾರಣರಾದ ನಾಲ್ವರು ಹಿರಿಯರು ಎದ್ದು ಕಾಣುತ್ತಾರೆ; ತಾತ ಜನಾರ್ದನ ಅಯ್ಯಂಗಾರ್, ತಂದೆ ವೆಂಕಟೇಶ ಅಯ್ಯಂಗಾರ್, ಗುರು ಚಿಕ್ಕಸುಬ್ಬರಾಯರು ಮತ್ತು ಗುರು ವೆಂಕಟಗಿರಿಯಪ್ಪನವರು. ವೆಂಕಟಗಿರಿಯಪ್ಪನವರನ್ನು ಕುರಿತು ’ಇಂಥ ಗುರು ಯುಗಕೊಬ್ಬರೆ!’ ಎಂದು ಭಕ್ತಿಪೂರ್ವಕವಾಗಿ ಇವರು ಹೇಳುತ್ತಾರೆ. ಆದರೆ ನನಗನ್ನಿಸುತ್ತದೆ,-ಇಂಥ ಗುರುಗಳಿಗೆ ದೊರೆಸ್ವಾಮಿ ಅಯ್ಯಂಗಾರ್ಯರಂತಹ ಶಿಷ್ಯರೂ ಯುಗಕ್ಕೊಬ್ಬರೇ.
ತಾತ ಜನಾರ್ದನ ಅಯ್ಯಂಗಾರ್ಯರು ತಮ್ಮ ಸ್ವಂತ ಸ್ಥಳವಾದ ಮಾದಿಹಳ್ಳಿಯನ್ನು ಬಿಟ್ಟದ್ದು, ಸಂಗೀತದಲ್ಲಿ ಆಸಕ್ತಿ ತೋರುತ್ತಿದ್ದ ವೆಂಕಟೇಶ ಅಯ್ಯಂಗಾರ್ಯರನ್ನು ಆ ವಿದ್ಯೆಯಲ್ಲಿ ಪರಿಣತರನ್ನಾಗಿ ಮಾಡಬೇಕೆಂದು ಆಸೆ ಹೊತ್ತದ್ದು,…….. ಆ ಗುರುಗಳು ಇವರನ್ನು ಶಿಷ್ಯರನ್ನಾಗಿ ಸ್ವೀಕರಿಸಿದ್ದು, ಇವೆಲ್ಲ ದೈವ ಪ್ರೇರಣೆಯಿಂದಾದದ್ದು ಎನ್ನಿಸುತ್ತದೆ. ತಾತನವರಿಗೆ ಆ ಮನಸ್ಸು ಬರದೇ ಇದ್ದಿದ್ದರೆ ದೊರೆಸ್ವಾಮಿ ಅಯ್ಯಂಗಾರ್ಯರು ನಮಗೆ ದೊರೆಯುತ್ತಿರಲಿಲ್ಲ. ಅವರ ಗುರುಗಳಾದ ವೆಂಕಟಗಿರಿಯಪ್ಪನವರು ಇವರಿಗೆ ಪದೇ ಪದೇ ವೀಣೆಯ ಸೊಂಪಿನ ವಿಚಾರವಾಗಿ ಒತ್ತುಕೊಟ್ಟು ಹೇಳುತ್ತಿದ್ದರು. ಬಾಣಂತಿ ಹುಲಿ ತನ್ನ ಮರಿಯನ್ನು ನೋಯಿಸದಂತೆಯೂ, ಕೆಳಕ್ಕೆ ಜಾರಿ ಬೀಳದಂತೆಯೂ ಕಚ್ಚಿಕೊಂಡು ಓಡಾಡುವಂತೆ ಒಂದು ಮೀಟು ಸಪ್ತಸ್ವರವನ್ನು ಆಡಿಸಬೇಕಂತೆ. ಅದು ಸುಲಭವಾಗಿ ಲಭಿಸುವ ಸಿದ್ಧಿಯಲ್ಲ.”
“ದೊರೆಸ್ವಾಮಿ ಅಯ್ಯಂಗಾರ್ಯರ ವೀಣಾವಾದನವನ್ನು ಒಮ್ಮೆ ಕೇಳಿದವರಿಗೆ ಅದನ್ನು ಮತ್ತೆ ಮತ್ತೆ ಕೇಳಬೇಕೆಂಬ ಬಯಕೆ ಹೊಮ್ಮುತ್ತದೆ. ಅದು ಕೇವಲ ಮನರಂಜನೆಗೆ ಸೀಮಿತವಾಗಿಲ್ಲ. ಅದು ಸ್ವರಲಯಗಳ ಕ್ರೀಡೆ ಮಾತ್ರವಲ್ಲ. ಸುಗಂಧ ತೈಲವನ್ನು ತಿಕ್ಕಿ, ಅಂಗಗಳನ್ನು ತೀಡಿ, ಹಿಸುಕಿ, ಬೆನ್ನನ್ನು ಮೃದುವಾಗಿ ಗುದ್ದಿ, ತಲೆಯನ್ನು ತಟತಟನೆ ತಟ್ಟಿ, ಬಿಸಿನೀರೆರೆದು, ಹಬೆಯಲ್ಲಿ ಕುಳ್ಳಿರಿಸಿ, ಮೈಯ್ಯನ್ನು ಹಗುರ ಮಾಡಿ ಉಲ್ಲಾಸಗೊಳಿಸುವ ಅಂಗಮರ್ದನ ಕುಶಲರಂತೆ ವರ್ತಿಸಲೂ ಅವರು ಹಿಂಜರಿಯುವುದಿಲ್ಲ.”
“ದೊರೆಸ್ವಾಮಿ ಅಯ್ಯಂಗಾರ್ಯರು ರಸೋಪಾಸಿಗಳು. ವೀಣೆ ಅವರ ಕಾಮಧೇನು. ಅವರು ನಾಲ್ಕು ವರ್ಷದ ಹುಡುಗನಾಗಿರುವಾಗಲೇ ತಂದೆಯ ಮುಂದೆ ಕುಳಿತು ಅವರು ನುಡಿಸುತ್ತಿದ್ದ ವೀಣೆಯನ್ನು ಕೇಳುತ್ತಾ ಆನಂದಪರವಶರಾಗುತ್ತಿದ್ದರು. ಈ ಆನಂದವನ್ನು ತಮ್ಮ ವೀಣೆಯ ಮೂಲಕ ಸಾಕ್ಷಾತ್ಕರಿಸಿಕೊಳ್ಳಬೇಕೆಂಬುದು ಅವರ ಧ್ಯೇಯ. ನೆಟ್ಟ ಮನಸ್ಸಿನಿಂದ ವೀಣಾಭ್ಯಾಸದಲ್ಲಿ ನಿರಂತರವಾಗಿ ತೊಡಗಿರುವುದು, ತದಿತರ ವಿಷಯದಲ್ಲಿ ವಿರಕ್ತರಾಗಿರುವುದು ಅವರ ಜೀವನವೃತ್ತಾಂತದಲ್ಲಿ ಕಂಡುಬರುತ್ತದೆ. ಅದಲ್ಲದೆ ಆ ಆನಂದವನ್ನು ಜಗತ್ತಿನ ರಸಿಕಸಮಾಜಕ್ಕೆ ವಿತರಿಸಿ, ಹಸಿವು ನೀರಡಿಕೆಗಳನ್ನು ತಣಿಸುವ, ಪುಷ್ಟಿಗೊಳಿಸುವ ಅಸಾಧಾರಣವಾದ ಅಧ್ಯಾತ್ಮಿಕ ಗುಣ ಅವರ ನುಡಿಕೆಯಲ್ಲಿದೆ. ಮೇಲಾಗಿ ಎಲ್ಲ ವಾದ್ಯಗಳಿಗೂ ಸಮಾನವಾದ ಒಂದು ಗುಣ ವೀಣೆಗೂ ಅನ್ವಯಿಸುತ್ತದೆ. ಇದರಲ್ಲಿ ಮಾತುಗಳು ಕೇಳಿಬರವು; ಅದು ಉಪದೇಶ ಮಾಡುವುದಿಲ್ಲ; ಯಾವ ದೇವರನ್ನೂ ಹೊಗಳುವುದಿಲ್ಲ. ಭಾಷಾಭಿಮಾನವನ್ನು ಕೆಣಕುವುದಿಲ್ಲ. ಆಸ್ತಿಕ-ನಾಸ್ತಿಕ, ಆ ದೇಶ-ಈ ದೇಶ, ಆ ಸಿದ್ದಾಂತ-ಈ ಸಿದ್ದಾಂತ ಎಂದು ನಮ್ಮನ್ನು ತೊಳಲಾಡಿಸುವುದಿಲ್ಲ. ಕನಸುಗಾರರು ತಮ್ಮ ತಮ್ಮ ಕನಸುಗಳಲ್ಲಿ ಸ್ವೇಚ್ಚೆಯಿಂದ ಸ್ವಚ್ಛಂದವಾಗಿ ಅಲೆದಾಡುವ ಸ್ವಾತಂತ್ರ್ಯವನ್ನು ನಿರ್ಬಂಧಿಸುವುದಿಲ್ಲ. ಇದು ನನಗೆ ಬಹಳ ಪ್ರಿಯವಾದ ಗುಣ. ಆದ್ದರಿಂದ ಅದರ ವ್ಯಾಪ್ತಿ ದೊಡ್ಡದು. ದೊರೆಸ್ವಾಮಿ ಅಯ್ಯಂಗಾರ್ಯರ ಕೀರ್ತಿ ದಿಗಂತ ವಿಶ್ರಾಂತ ಆಗಿರುವುದಕ್ಕೆ ಇದೂ ಒಂದು ಮುಖ್ಯ ಕಾರಣ.”
“ದೊರೆಸ್ವಾಮಿ ಅಯ್ಯಂಗಾರ್ಯರು ಬಹಳ ಪ್ರತಿಭಾಶಾಲಿ. ಅವರದು ಬಹಳ ಹೊಳಹುಗಳುಳ್ಳ ಮೇಧೆ. ಆ ಹೊಳಹುಗಳು ತಾವೇ ಒಡೆದುಬಂದು ವೀಣೆಯಲ್ಲಿ ಪ್ರಕಾಶಗೊಂಡಾಗ ಅವುಗಳ ಸೌಂದರ್ಯ ನಮ್ಮನ್ನು ಬೆರಗುಗೊಳಿಸುತ್ತದೆ. ಆ ಹೊಳಹುಗಳೋ, ಅವರ ಸ್ವಾಧೀನದಲ್ಲಿಲ್ಲ! ಮನ ಬಂದಾಗ ಸುಳಿದು ಹಾಗೆಯೇ ಮಾಯವಾಗಿಬಿಡುತ್ತವೆ! ಇಚ್ಚಿಸಿದಾಗ ದೊರೆಯುವಂಥವಲ್ಲ.”
“ದೊರೆಸ್ವಾಮಿ ಅಯ್ಯಂಗಾರ್ಯರು ’ವೀಣೆಯ ಮರ್ಮ ನನಗಿನ್ನೂ ಸಿಕ್ಕಿಲ್ಲ. ಒಮ್ಮೊಮ್ಮೆ ಸಿಕ್ಕಿದಂತೆ ತೋರಿ, ಹಾಗೆಯೇ ಮರೆಯಾಗಿಬಿಡುತ್ತದೆ’ ಎಂದು ಹೇಳಿಕೊಂಡಿದ್ದಾರೆ. ನಾನು ಮರ್ಮಗಳನ್ನು ಹಾಗೆಯೇ ನನ್ನ ತಲೆಯೊಳಗೆ ಇಟ್ಟುಕೊಂಡಿದ್ದೇನೆ. ಸಂಗೀತಗಾರ ನಾದೋಪಸಕನಾದರೆ ಕವಿ ರೂಪೋಪಾಸಕ. ಅಮೂರ್ತ ಭಾವಗಳನ್ನು ಮೂರ್ತಿಕರಿಸಿ, ಕಣ್ಣುಗಳ ಮೂಲಕ, ಸಂಜ್ಞೆಗಳ ಮೂಲಕ ಸಹೃದಯರ ಮನೋಬುದ್ಧ್ಯಾತ್ಮಕಗಳನ್ನು ಆರಾಧಿಸುವುದು ಅವನ ರಹಸ್ಯ.”
ಅನೇಕ ವಿದ್ವನ್ಮಂಡಳಿಗಳ ಸದಸ್ಯರಾಗಿದ್ದ, ಹಲವು ಸಂಸ್ಥೆಗಳಿಂದ ಪುರಸ್ಕೃತರಾಗಿರುವ ಇವರು ತುಂಬಿದ ಕೊಡ. ಯಾವುದಕ್ಕೂ ಆಸೆ ಪಡದೆ, ದೊರಕಿದ್ದರಲ್ಲಿ ತೃಪ್ತರಾಗಿ, ಶಾಸ್ತ್ರೀಯ ಸಂಗೀತವನ್ನು, ಮೈಸೂರು ಶೈಲಿಯನ್ನು ಮುಂದುವರಿಸುತ್ತಾ ಜೀವನ ಕಳೆದರು. ಇವರ ಪ್ರಮುಖ ಶಿಷ್ಯರು ಇವರ ಮಗ ಡಿ ಬಾಲಕೃಷ್ಣ, ಹಾಗೂ ದಿವಂಗತ ಸಿ. ಕೃಷ್ಣಮೂರ್ತಿ. ಸಿ.ಕೃಷ್ಣಮೂರ್ತಿಯವರ ಶಿಷ್ಯರಲ್ಲಿ ಪ್ರಮುಖರು ಗೀತಾ ರಮಾನಂದ್, ರೇವತಿ ಮೂರ್ತಿ, ವಿಶಾಲಾಕ್ಷಿ ಜಿ.ಎಸ್, ಮಂಜುಳಾ, ರಾಧಿಕಾ ಭಾಸ್ಕರ್, ಭಾಗ್ಯಲಕ್ಷ್ಮಿ ಎಸ್ ಮುಂತಾದವರು.

ಆರ್ ಎನ್ ದೊರೆಸ್ವಾಮಿ (೧೯೧೬-೨೦೦೨)
ಆರ್ ಎನ್ ದೊರೆಸ್ವಾಮಿ ೧೯೧೬ರಲ್ಲಿ ರುದ್ರಪಟ್ಟಣದಲ್ಲಿ ಜನಿಸಿದರು. ಶಾಲೆಯ ಶಿಕ್ಷಣ ಅವರಿಗೆ ಹಿಡಿಸಲಿಲ್ಲ. ಮೊದಲಿಗೆ ರುದ್ರಪಟ್ಟಣದ ಸೂರ‍್ಯನಾರಾಯಣರಲ್ಲಿ, ನಂತರ ಚಿದಂಬರದ ಶ್ರೀನಿವಾಸ ಅಯ್ಯರ್ ಅವರಲ್ಲಿ, ಆಮೇಲೆ ಸೇಲಮ್ಮಿನ ದೊರೆಸ್ವಾಮಿ ಅಯ್ಯಂಗಾರ್ಯರ ಬಳಿ ಇವರ ಸಂಗೀತ ಪಾಠ ಆಯಿತು. ಆದರೆ ಶಾರೀರದ ತೊಂದರೆಯಿಂದಾಗಿ ಹಾಡುಗಾರಿಕೆಯನ್ನು ಬಿಟ್ಟು ವೀಣೆಯ ಕೈಹಿಡಿದರು. ಶಾರೀರ ಸಂಪತ್ತಿಲ್ಲದವರು ಹಾಡುವುದಕ್ಕೆ ಹೋಗಬಾರದು, ಎಂದು ವೆಂಕಟಗಿರಿಯಪ್ಪನವರು ಶಿಷ್ಯನಿಗೆ ಸೂಚಿಸಿ ವೀಣೆಪಾಠ ಪ್ರಾರಂಭಿಸಿದರು. ಅವರಲ್ಲಿ ಸುಮಾರು ೧೨ ವರ್ಷ ಪಾಠ. ಗುರುಗಳೊಂದಿಗೆ ಕಛೇರಿ, ಆಕಾಶವಾಣಿ ಕಾರ್ಯಕ್ರಮ, ಮೈಸೂರು, ಮದ್ರಾಸು, ಹೈದರಾಬಾದು, ಧಾರವಾಡ, ಬೆಂಗಳೂರು, ಮಂಗಳೂರು, ಮುಂಬಯಿ, ದೆಹಲಿಗಳಲ್ಲಿ ವೀಣಾ ಕಾರ್ಯಕ್ರಮ ನೀಡಿ ಮೆಚ್ಚುಗೆ ಗಳಿಸಿದರು. ಸುಮಾರು ೨೦ ವರ್ಷ ಮೈಸೂರಿನ ಅರಮನೆಯ ಆಸ್ಥಾನ ವಿದ್ವಾಂಸರಾದರು. ಅಧ್ಯಯನ, ಸಂಗೀತ ಕಾರ್ಯಕ್ರಮ ಇದರೊಂದಿಗೆ ಇವರಿಗೆ ಅಂಟಿಕೊಂಡು ಬಂದ ಮತ್ತೊಂದು ವೃತ್ತಿ ಅಧ್ಯಾಪನ. ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ೧೨ ವರ್ಷ, ಮೈಸೂರಿನ ಲಲಿತ ಕಲೆಗಳ ಕಾಲೇಜಿನಲ್ಲಿ ಹನ್ನೆರಡು ವರ್ಷ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಇವರ ಶಿಷ್ಯರಲ್ಲಿ ರಾಜಲಕ್ಷ್ಮಿ ತಿರುನಾರಾಯಣ್, ದೇವಕಿ ವೀರಸುಬ್ರಮಣ್ಯಂ, ವತ್ಸಲ ರಾಮಕೃಷ್ಣ ಇವರ ಪ್ರಮುಖರು. ಸಂಶೋಧನಾ ಕೃತಿರಚನೆಗಳಲ್ಲೂ ಇವರಿಗೆ ತುಂಬಾ ಆಸಕ್ತಿ. ವೀಣಾ ವೆಂಕಟಗಿರಿಯಪ್ಪನವರ ರಚನೆಗಳು, ತ್ಯಾಗರಾಜರ ನೌಕಾಚರಿತ್ರದ ಅನುವಾದ, ಸಂಗೀತ ಶಾಸ್ತ್ರ ಪರಿಚಯ, ಕರ್ನಾಟಕ ಸಂಗೀತದ ಗೇಯ ರಚನೆಗಳು-ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ. ಇವರು ವಾಗ್ಗೇಯಕಾರರೂ ಕೂಡ. ಕನ್ನಡ ಸಂಸ್ಕೃತ ತೆಲುಗು ಭಾಷೆಗಳಲ್ಲಿ ಅರವತ್ತಕ್ಕೂ ಹೆಚ್ಚು ರಚನೆಗಳನ್ನು ಮಾಡಿದ್ದಾರೆ.

ಎಂ. ಜೆ. ಶ್ರೀನಿವಾಸ ಅಯ್ಯಂಗಾರ್-೧೯೨೪
ಎಂ.ಜೆ.ಶ್ರೀನಿವಾಸ ಅಯ್ಯಂಗಾರ್ ಅವರು (೧೯೨೪) ವೆಂಕಟಗಿರಿಯಪ್ಪನವರ ಪ್ರಮುಖ ಶಿಷ್ಯರಲ್ಲಿ ಮತ್ತೊಬ್ಬರು. ತಂದೆ ಜನಾರ್ದನ ಅಯ್ಯಂಗಾರರು ವೀಣಾ ವಾದಕರು. ಐದು ವರ್ಷದ ಮಗ ಶ್ರೀನಿವಾಸ ತಂದೆ ವೀಣೆ ನುಡಿಸುವಾಗ ಸೈಕಲ್ಲಿನ ಬೆಲ್ಲಿನಲ್ಲಿ ತಾಳ ಹಾಕುವುದನ್ನು ಕಂಡ ತಂದೆ ತಮ್ಮ ಸಹಪಾಠಿಗಳಾಗಿದ್ದ ವೀಣೆ ವೆಂಕಟಗಿರಿಯಪ್ಪನವರಲ್ಲಿ ಮಗನನ್ನು ಪಾಠಕ್ಕೆ ಸೇರಿಸಿದರು. ಅಲ್ಲಿಂದ ಮುಂದೆ ಅವರ ಬದುಕೇ ವೀಣೆ ಮತ್ತು ವೀಣೆಯೇ ಅವರ ಬದುಕಾಯ್ತು. ಶೇಷಣ್ಣನವರ ನೇರ ಪರಂಪರೆಗೇ ಸೇರಿದ್ದಾಗ್ಯೂ ಕೂಡ ನುಡಿಸಾಣಿಕೆಯಲ್ಲಿ ಎಂಜೆಎಸ್ ಅವರ ವಿನಿಕೆಯಲ್ಲಿ ಅವರ ಒಲವು ಹಾಡಿಕೆಯ ಶೈಲಿಯತ್ತಲೇ. ಎಂ.ಜೆ.ಎಸ್ ಅವರ ಸಂಗೀತ ವಿನಿಕೆಯಲ್ಲಿ ಸಿಗುವ ಸುಖ ಮಾದಕವಲ್ಲ. ಅವರ ಸಂಗೀತಕ್ಕೆ ಅಬ್ಬರವಿಲ್ಲ. ರಂಜನೆಯ ಗುರಿಯೂ ಇಲ್ಲ ಅದು ಸುಮ್ಮನೆ ಅವರೊಳಗಿಂದ ಹೊರಬಂದ ಬೆಳಕಿನ ಕೋಲು ಅಷ್ಟೇ. ಅವರ ವಿನಿಕೆಯನ್ನು ಒಮ್ಮೆ ಕೇಳಿದವರು ಅದನ್ನು ಮರೆಯುವುದು ಸಾಧ್ಯವೇ ಇಲ್ಲ. ವೀಣೆಯೊಳಗೇ ತಮ್ಮ ಜೀವ ಇಟ್ಟಿರುವ ಇವರ ಬೆರಳ ಹುಕುಮಿಗೆ ತಕ್ಕಂತೆ ನಡೆದಾಡುತ್ತಾ ರಾಗಲಯಗಳು ಕುಣಿಯತೊಡಗುತ್ತವೆ. ಆ ಸ್ವರ-ಬಾಲರೊಡನೆ ಆಡುತ್ತಾ ಕೂರುವ ಎಂಜೆಎಸ್ ಅವರಿಗೆ ವ್ಯಾವಹಾರಿಕ ಲೋಕದ ಯಾವ ಮೈಲಿಗೆಯೂ ಸೋಕುವುದಿಲ್ಲ. ನನಗೆ ಯಾವ ಅತೃಪ್ತಿಯೂ ಇಲ್ಲ, ಸಾಕಷ್ಟು ಕೊಟ್ಟಿದ್ದಾನೆ ಭಗವಂತ ಎಂಬ ಈ ಶ್ರದ್ಧೆಯೇ ಅವರನ್ನು, ಮತ್ತವರ ಸಂಗೀತವನ್ನೂ ಉಳಿಸಿದ್ದು. ಪರಂಪರೆಯನ್ನು ಬೆಳಸಿದಲ್ಲದೆ, ಶುದ್ಧ ಸಂಗೀತ ಉಳಿಯದು ಎಂಬುದು ಎಂಜೆಎಸ್ ಅವರ ದೃಢವಾದ ನಂಬಿಕೆ. ಹಾಗಾಗಿಯೇ ಮನಬಿಚ್ಚಿ ಪಾಠಹೇಳಿ ಗಟ್ಟಿಯಾದ ಶಿಷ್ಯಪರಂಪರೆಯನ್ನು ತಯಾರಿಸಿದ ಹೆಗ್ಗಳಿಕೆ ಅವರದು. ಅವರ ಪರಂಪರೆಯನ್ನು ನಿರಂತರವಾಗಿ ಬೆಳಸಿಕೊಂಡು ಹೋಗುತ್ತಿರುವ ಪ್ರಮುಖ ಶಿಷ್ಯರು ಶ್ರೀಮತಿಯರಾದ ಎ.ಎಸ್. ಪದ್ಮ, ಎಂ.ಕೆ. ಸರಸ್ವತಿ, ಎಸ್. ರಾಜಲಕ್ಷ್ಮಿ, ಎಂ.ಕೆ. ಜಯಶ್ರೀ ಪ್ರಸಾದ್, ಎಸ್.ವಿ. ಸಹನಾ, ಮುಂತಾದವರು.

ಪ್ರೊ. ರಾ. ವಿಶ್ವೇಶ್ವರನ್

ವಿಶ್ವೇಶ್ವರನ್  ಮೈಸೂರಿನ ವೀಣಾವಾದಕರ ಪರಂಪರೆಯಲ್ಲಿ ಬೇರೆಯಾಗಿ ನಿಲ್ಲುವ ಮತ್ತೊಂದು ಹೆಸರು. ೧೯೩೧ರಲ್ಲಿ ಹೆಸರಾಂತ ಸಂಗೀತಗಾರರ ಕುಟುಂಬದಲ್ಲಿ ಜನಿಸಿದರು. ಇವರ ತಾಯಿ ವರಲಕ್ಷ್ಮಿ ವೀಣಾ ಸುಂದರ ಶಾಸ್ತ್ರಿಗಳ ಶಿಷ್ಯರು. ತಂದೆ ರಾಮಯ್ಯ ಸಂಗೀತ ರಸಿಕರು. ವಿಶ್ವೇಶ್ವರನ್ ಅವರು ಬಾಲಪ್ರತಿಭೆ. ಅಣ್ಣ ರಾ.ಸೀತಾರಾಮ್ ಅವರಲ್ಲಿ ೫ನೇ ವಯಸ್ಸಿನಲ್ಲೇ ಸಂಗೀತಾಭ್ಯಾಸ ಪ್ರಾರಂಭಿಸಿ ೯ನೇ ವಯಸ್ಸಿನಲ್ಲಿ ಕಛೇರಿ ಮಾಡಿದವರು. ತನಗೆ ವೀಣೆಯಲ್ಲಿ ಸರಸ್ವತಿಯೇ ಗುರು ಎಂದು ವಿಶ್ವೇಶ್ವರನ್ ಹೇಳುತ್ತಾರೆ. ಸ್ವಂತ ಪ್ರತಿಭೆಯಿಂದ ವೀಣಾವಾದನದಲ್ಲಿ ತಮ್ಮದೇ ಆದ ವಾದನ ತಂತ್ರವನ್ನು ನಿರ್ಮಿಸಿಕೊಂಡು, ತಮ್ಮ ಸಂಶೋಧನೆಯ ಫಲವಾಗಿ ಗಾಯನ ಶೈಲಿಯ ವೈಣಿಕ ಶ್ರೇಷ್ಠರು ಎಂದು ಸ್ವದೇಶ ವಿದೇಶಗಳಲ್ಲಿ ಮಾನ್ಯತೆ ಪಡೆದಿದ್ದಾರೆ. ಅವರ ವೀಣಾವಾದನ ಶೈಲಿಯ ಬಗ್ಗೆ ಡಾ.ಎಸ್. ಬಾಲಚಂದರ್ ಅವರಿಗೆ ಅಪಾರ ಮೆಚ್ಚುಗೆ. ಒಂದು ಮೀಟಿನಿಂದ ಹಲವಾರು ಸ್ವರಗಳ ನಾದೋತ್ಪತ್ತಿ ಮಾಡುವ, ಬಲಗೈ ಬೆರಳುಗಳಿಂದ ತಂತಿಯನ್ನು ಮೀಟದೆಯೇ ಅದೆಷ್ಟೋ ನಿಮಿಷಗಳ ರಾಗಾಲಾಪನೆಯನ್ನು ನುಡಿಸುವ ಇವರ ವಿಶೇಷ ವೀಣಾವಾದನ ತಂತ್ರವು ವೀಣಾ ವಾದ್ಯದ ಚರಿತ್ರೆಯಲ್ಲೇ ಏಕೈಕ ದಾಖಲೆ ಎಂದು ಹೇಳುತ್ತಾರೆ. ಇವರು ಶ್ರೇಷ್ಠವಾದಕರೇ ಅಲ್ಲದೆ ಸಂಗೀತ ಶಾಸ್ತ್ರಜ್ಞರು ಮತ್ತು ವಾಗ್ಗೇಯಕಾರರು. ಮೈಸೂರಿನ ಲಲಿತಕಲಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಕೆಲವಾರು ಪ್ರಮುಖ ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಅವರ ಪ್ರಮುಖ ಶಿಷ್ಯರು ಸುಧಾ ವಾದಿರಾಜ್, ಸರ್ವಮಂಗಳಾ ಶಂಕರ್, ವೀಣಾ ಜಯಂತ್, ವಿದ್ಯಾ ನಟರಾಜ್, ಉಷಾ ವಿಶ್ವೇಶ್ವರನ್, ನಾಗಮಣಿ ಶ್ರೀನಾಥ್ ಮುಂತಾದವರು.
ನೀಲಮ್ಮ ಕಡಾಂಬಿ:
ಜೂನ್ ೧೧, ೧೯೧೧ರಲ್ಲಿ ಜನಿಸಿದ ನೀಲಮ್ಮನವರದ್ದು ಸಂಗೀತದ ಕುಟುಂಬವೇ. ಮೊದಲು ಅಣ್ಣನಿಂದ ವೀಣೆ ಕಲಿತ ಇವರು ಮುಂದೆ ವಿದ್ವಾನ್ ಲಕ್ಷ್ಮೀನಾರಣಪ್ಪ, ಅಮೇಲೆ ವೆಂಕಟಗಿರಿಯಪ್ಪನವರಲ್ಲಿ ವೀಣಾವಾದನವನ್ನೂ, ವಾಸುದೇವಾಚಾರ್ಯ, ಚೌಡಯ್ಯ ಹಾಗೂ ರಾಮರತ್ನಂ ಅವರಲ್ಲಿ ಹಾಡುಗಾರಿಕೆಯನ್ನು ಕಲಿತರು. ಬಹುಶಃ ಸಾರ್ವಜನಿಕ ವೇದಿಕೆಯ ಮೇಲೆ ಸಂಗೀತ ಕಛೇರಿ ಮಾಡಿದ ಮೊದಲ ಮಹಿಳೆ ನೀಲಮ್ಮ ಕಡಾಂಬಿಯವರಿರಬೇಕು. ಇವರು ವೀಣಾವಾದನದ ಜೊತೆಗೆ ಹಾಡುತ್ತಿದ್ದರು. ಇವರು ಕಚೇರಿಗಳಲ್ಲಿ ಕರ್ನಾಟಕ ಸಂಗೀತ ಸಂಪ್ರದಾಯದೊಂದಿಗೆ ಕೊನೆಯಲ್ಲಿ ಹಿಂದುಸ್ಥಾನಿ ಮಟ್ಟುಗಳನ್ನೂ ನುಡಿಸುತ್ತಿದ್ದುದು ಹೊಸ ಆಕರ್ಷಣೆಯಾಗಿತ್ತು. ಗಾನಕಲಾಭೂಷಣ ಮೊದಲಾದ ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದಿವೆ. ಇವರ ಶಿಷ್ಯರಲ್ಲಿ ಪ್ರಸಿದ್ಧರಾದ ಕೆಲವರು- ದಿವಂಗತ ಜಯಮ್ಮ, ದಿವಂಗತ ವತ್ಸಲ ರಾಮಕೃಷ್ಣ, ದಿವಂಗತ ಶ್ರೀದೇವಿ, ದಿವಂಗತ ಜಾನಕಮ್ಮ, ವಿದುಷಿ ಜಿ.ವಿ. ರಂಗನಾಯಕಮ್ಮ. ಆದರೆ ಇವರ ಕೊನೆಯ ದಿನಗಳು ಚೆನ್ನಾಗಿರಲಿಲ್ಲ. ಚಿತ್ತಭ್ರಮಣೆಗೂ ಒಳಗಾಗಿದ್ದರು ಎನ್ನುವುದು ದುರಂತದ ಸಂಗತಿ. ಯಾರ ಗಮನಕ್ಕೂ ಬರದೆ ಕೆಲಕಾಲ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸ್ಥಿತಿ ತಲುಪಿದ್ದರು. ಡಿಸೆಂಬರ್ ೧೪, ೧೯೯೮ ರಂದು ಅಸುನೀಗಿದರು.

ಶ್ರೀಮತಿ ಚೊಕ್ಕಮ್ಮನವರು

ಶ್ರೀಮತಿ ಚೊಕ್ಕಮ್ಮನವರು ನರಸಿಂಹ ಅಯ್ಯಂಗಾರ್ ಮತ್ತು ರುಕ್ಕಮ್ಮನವರ ಕೊನೆಯ ಮಗಳು. (೧೮-೦೯-೧೯೨೨). ಮಕ್ಕಳಿಲ್ಲದ ಅಕ್ಕ ಭಾವ ಅವರನ್ನು ಪ್ರೀತಿಯಿಂದ ಬೆಳೆಸಿದರು ಮತ್ತು ಅವರ ಅಭಿವೃದ್ಧಿಗೆ ಶ್ರಮಿಸಿದರು. ಆಟವಾಡುತ್ತಾ ಹಾಡುತ್ತಿದ್ದ ಚೊಕ್ಕಮ್ಮನವರ ಕಂಠಮಾಧುರ್ಯಕ್ಕೆ ಬೆರಗಾದ ವಿರೂಪಾಕ್ಷ ಶಾಸ್ತ್ರಿಗಳೇ ಅವರ ಮೊದಲ ಗುರುವಾದರು. ಮುಂದೆ ಅವರು ಸ್ವರಮೂರ್ತಿ ವಿ.ಎನ್ ರಾಯರಿಂದಲೂ, ವೀಣೆ ಸುಬ್ಬಣ್ಣನವರ ಶಿಷ್ಯರಾದ ದೇವಪ್ಪನವರಿಂದಲೂ ಪಾಠಕಲಿತು, ಮುಂದೆ ಟಿ.ಎಂ.ಪುಟ್ಟಸ್ವಾಮಯ್ಯನವರು ಮತ್ತು ತಿಟ್ಟೆ ಕೃಷ್ಣಅಯ್ಯಂಗಾರರಲ್ಲಿ ಮುಂದುವರೆಸಿದರು. ಮೈಸೂರು ವಾಸುದೇವಾಚಾರ್ಯರು ಹಾಗೂ ಅಲಂಗುಡಿ ರಾಮಚಂದ್ರನ್ ಅವರಲ್ಲಿಯೂ ಅಭ್ಯಾಸ ಮಾಡುವ ಭಾಗ್ಯ ಇವರಿಗೆ ದೊರಕಿತು. ವೀಣೆಯೊಡನೆ ಹಾಡುವ ಇವರ ವೈಖರಿಗೆ ಮನಸೋತ ಸರ್ ಸಿ.ವಿ.ರಾಮನ್ ಅದನ್ನು ಉಳಿಸಿಕೊಳ್ಳುವಂತೆ ಅವರನ್ನು ಆಶೀರ್ವದಿಸಿದರು. ಇವರಿಗೆ ಕರ್ನಾಟಕ ಕಲಾತಿಲಕ, ಸ್ವರಕಿನ್ನರಿ, ವೀಣಾವಾದನ ಚತುರೆ, ಗಾನಕಲಾಭೂಷಣ ಮುಂತಾದ ಬಿರುದುಗಳು ಸಂದಿವೆ.

ಪರಂಪರೆಯ ಮುಂದರುವರಿಕೆ
ಕರ್ನಾಟಕದ ವೀಣಾವಾದನದ ಪರಂಪರೆಯನ್ನು ಮುಂದುವರೆಸಿಕೊಂಡುಹೋಗುತ್ತಿರುವವರು ಹೆಸರಾಂತ ವೀಣಾವಾದಕರು ಡಾ. ವಿಜಯರಾಘವನ್, ಎಂ.ಆರ್. ಶಶಿಕಾಂತ್, ಶ್ಯಾಮಪ್ರಕಾಶ್ ಸಿ, ಅಶ್ವಿನ್, ಪ್ರವೀಣ್, ಪ್ರಶಾಂತ್ ಅಯ್ಯಂಗಾರ್, ರಮೇಶ್ ಹೆಚ್.ಎಸ್, ಇ.ಪಿ. ಅಲಮೇಲು, ಅಂಬುಜಾ ಕೃಷ್ಣ, ಅನುರಾಧ ಮಧುಸೂಧನ್, ಅರುಂಧತಿ ವಿ ರಾvಜಿ, ಭಾಗ್ಯಲಕ್ಷ್ಮಿ ಚಂದ್ರಶೇಖರ್, ಚಿತ್ರಲಿಂಗಂ, ಭಾರತಿ ಎನ್, ಗೀತಾ ನವಲೆ, ಗೀತಾ ಶಾಮಪ್ರಕಾಶ್, ಮಂಜುಳಾ ಸುರೇಂದ್ರ. ವಿದ್ಯಾ ನಟರಾಜ್, ಶ್ರೀಲಕ್ಷ್ಮಿ, ವೀಣಾ ಕಿನ್ಹಾಳ್, ಸುಮಂಗಲಿ ಉಪಾಧ್ಯಾಯ, ವಾಣಿ ಯದುನಂದನ್, ಕುಸುಮಾರಾವ್, ಮುಂತಾದವರು.

Recent Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.