ಮೈಸೂರು ಶೈಲಿಯ ನಿಧಿನಾಗರ- ವೀಣಾ ವಿದ್ವಾನ್ ಎಂ. ಜೆ. ಶ್ರೀನಿವಾಸ ಅಯ್ಯಂಗಾರ್

 In RAGAMALA

 

ಇತ್ತೀಚೆಗೆ ೧೩/೦೨/೨೦೧೩ರಂದು ವೀಣಾ ವಿದ್ವಾನ್ ಎಂ. ಜೆ. ಶ್ರೀನಿವಾಸ ಅಯ್ಯಂಗಾರ್ ಅವರ ನಿಧನದೊಂದಿಗೆ ವೀಣೆ ಶೇಷಣ್ಣನವರ ಭವ್ಯ ವೀಣಾ ಪರಂಪರೆಯ ಒಂದು ದೊಡ್ಡ ಕೊಂಡಿ ಕಳಚಿಹೋಯಿತು. ವೀಣೆ ಶೇಷಣ್ಣನವರ ಪ್ರೀತಿಪಾತ್ರ ಶಿಷ್ಯರಾಗಿದ್ದ ವೀಣಾ ವೆಂಕಟಗಿರಿಯಪ್ಪನವರ ಮೂವರು ಪ್ರಮುಖ ಶಿಷ್ಯರಲ್ಲಿ ಎಂಜೆಎಸ್ ಒಬ್ಬರು. ಇವರ ಉಳಿದಿಬ್ಬರು ಸಹಪಾಟಿಗಳು ವೀಣಾ ದೊರೆಸ್ವಾಮಿ ಅಯ್ಯಂಗಾರ್ಯರು ಮತ್ತು ಆರ್ ಎನ್ ದೊರೆಸ್ವಾಮಿಯವರು. ೧೯೨೪ರ ಮೇ ೨೦ರಂದು ಜನಿಸಿದ ಎಂಜೆಎಸ್ ಅವರ ತಂದೆ ಬಿ. ಜನಾರ್ಧನ ಅಯ್ಯಂಗಾರ್ಯರು ಮತ್ತು ತಾಯಿ ಜಾನಕಮ್ಮ. ತಂದೆಯೇ ಅವರ ಮೊದಲ ಗುರುಗಳು. ಜನಾರ್ಧನ ಅಯ್ಯಂಗಾರ್ಯರು ವೀಣಾ ವೆಂಕಟಗಿರಿಯಪ್ಪನವರ ಶಿಷ್ಯರು. ಮಗನಿಗೆ ಮೊದಲು ಪ್ರಾರಂಭಿಸಿದ್ದು ಹಾಡುಗಾರಿಕೆಯನ್ನು. ಲಯ ಎನ್ನುವುದು ಬಾಲ್ಯದಿಂದಲೇ ಇವರ ಉಸಿರಿನಲ್ಲಿ ಸೇರಿಹೋಗಿತ್ತು. ತಾನು ನುಡಿಸುವಾಗ ಇವರ ತಂದೆ ಸೈಕಲ್ಲಿನ ಬೆಲ್ಲನ್ನು ಎಳೆಯ ಶ್ರೀನಿವಾಸನ ಕೈಲಿ ಕೊಟ್ಟು ಇದನ್ನು ನಾನು ನುಡಿಸುವುದಕ್ಕೆ ಸರಿಯಾಗಿ ಬಾರಿಸುತ್ತಿರು ಎಂದು ಹೇಳುತ್ತಿದ್ದರಂತೆ. ಆದರೆ ಟಾನ್ಸಲ್ಸಿನ ತೊಂದರೆಯಿಂದಾಗಿ ಹಾಡಿಕೆ ಕಷ್ಟವಾದಾಗ ಎಂಜೆಎಸ್ ಅವರು ವೀಣೆಯತ್ತ ಹೊರಳಿದರು. ಇದು ಸಂಗೀತಲೋಕಕ್ಕೆ ಒದಗಿದ ಭ್ಯಾಗವೆಂದೇ ಹೇಳಬಹುದು ಏಕೆಂದರೆ ವೀಣಾವಾದನದಲ್ಲಿ ಒಂದು ವಿಶಿಷ್ಟ ಶೈಲಿ ಮತ್ತು ಒಂದು ಗಟ್ಟಿ ಪರಂಪರೆಯನ್ನೇ ಅವರು ಸೃಷ್ಟಿಸಿದರು.
ವೈಣಿಕ ಪ್ರವೀಣ ವೆಂಕಟಗಿರಿಯಪ್ಪನವರ ಬಳಿ ಕಲಿಯಲಿಕ್ಕಾಗಿ ಮೈಸೂರಿಗೆ ಬಂದ ಎಂಜೆಎಸ್ ಸವೆಸಿದ ಹಾದಿ ಬಹು ದುರ್ಗಮ. ಗುರುಗಳ ಮನೆಯ ಬಳಿಯೇ ಒಂದು ಕೋಣೆ ಮಾಡಿಕೊಂಡು, ಪರಕಾಲ ಮಠದಲ್ಲಿ ಊಟ ಮಾಡಿಕೊಂಡು ಗುರುಗಳ ಬಳಿ ಪಾಠಕಲಿಯುತ್ತಿದ್ದರು. ಒಂದೆಡೆಯಿಂದ ಇನ್ನೊಂದೆಡೆಗೆ ಎಲ್ಲವೂ ನಡಿಗೆಯಲ್ಲೇ ಸಾಗಬೇಕಿತ್ತು. ಆದರೆ ಆ ನಡಿಗೆ ಅಂದು ಕಲಿತ ಪಾಠ ಮನನಮಾಡಿಕೊಳ್ಳಲು, ಕಛೇರಿಯಲ್ಲಿ ಕೇಳಿದ್ದ ಅಪರೂಪದ ಸಂಚಾರಗಳನ್ನು ಮತ್ತು ಮುಕ್ತಾಯಗಳನ್ನು ಮತ್ತೆ ಮತ್ತೆ ಹೇಳಿಕೊಂಡು ನೆನಪಿಟ್ಟುಕೊಳ್ಳಲು ಮತ್ತು ಸ್ವತಃ ತಾನೇ ಹೊಸ ಸಂಚಾರಗಳನ್ನು ಕಲ್ಪಿಸಿಕೊಳ್ಳಲು ಮೀಸಲಾಗಿತ್ತು. ಹೀಗೆ ಸಂಗೀತದ ಜೊತೆ ಬದುಕನ್ನೂ ಕಲಿತರು. ಆ ಹೊತ್ತು ಕಲಿಸಿದ ಕಷ್ಟಸಹಿಷ್ಣುತೆ, ತಾಳ್ಮೆ, ಸಮಾಧಾನ, ಶ್ರಮಜೀವನ, ಸಂಯಮ, ನೆನಪಿಟ್ಟುಕೊಳ್ಳುವಿಕೆ, ಧನಾತ್ಮಕ ಚಿಂತನೆ ಮುಂತಾದ ಮೌಲ್ಯಗಳು ಇವರ ಬದುಕನ್ನೇ ರೂಪಿಸಿ ಇವರ ವ್ಯಕ್ತಿತ್ವಕ್ಕೊಂದು ಮೆರಗುನೀಡಿದವು. ಒಂದರ್ಥದಲ್ಲಿ ಎಂ.ಜೆ. ಶ್ರೀನಿವಾಸ ಅಯ್ಯಂಗಾರ್ ಎನ್ನುವ ಹೆಸರು ಕೇವಲ ಒಂದು ಹೆಸರಲ್ಲ ಬದುಕಿಗೆ ಬಹುಮುಖ್ಯವಾದ ಮೌಲ್ಯಗಳ ಒಂದು ಸಂಗಮ. ಯಾವೊಂದು ಮೌಲ್ಯವನ್ನೂ ಎಂದು ಎಲ್ಲಿಯೂ ಮಾತನಾಡದೆ, ಅವುಗಳನ್ನು ಸ್ವತಃ ತಾವೇ ಬದುಕಿ ತೋರಿಸಿ ಕೊಟ್ಟವರು ಎಂಜೆಎಸ್. ಹಾಗೆ ಬದುಕುವಾಗಲೂ ನಾನು ಹೀಗೆ ಬದುಕುತ್ತಿದ್ದೇನೆ ಎಂದು ಬೀಗಿದವರೂ ಅಲ್ಲ. ಬದುಕಿನ ಸಹಜ ಲಯವೇ ಅದು ಎನ್ನುವಂತೆ ತುಂಬಾ ಸ್ವಾಭಾವಿಕವಾಗಿ ಇರುವ ಧೀಮಂತ ವ್ಯಕ್ತಿ.
ಮೈಸೂರು ವೀಣಾ ಶೈಲಿಯನ್ನು ವೆಂಕಟಗಿರಿಯಪ್ಪನವರ ಗರಡಿಯಲ್ಲಿ ಮೈಗೂಡಿಸಿಕೊಂಡ ಎಂಜೆಎಸ್ ಅಷ್ಟಕ್ಕೇ ನಿಲ್ಲದೇ ಮತ್ತಷ್ಟು ಅಂಶಗಳನ್ನು ಅದಕ್ಕೆ ಹದವಾಗಿ ಬೆರೆಸಿಕೊಳ್ಳುವುದರ ಮೂಲಕ ತಮ್ಮದೇ ಶೈಲಿಯನ್ನು ರೂಪಿಸಿಕೊಳ್ಳುವುದರ ಮೂಲಕ ಶೇಷಣ್ಣನವರ ಪರಂಪರೆಯನ್ನು ಮತ್ತಷ್ಟು ಬೆಳೆಸಿದರು. ವಾದ್ಯದ ತಂತ್ರಗಾರಿಕೆಗೆ ಮತ್ತು ಅದರ ಸಾಧ್ಯತೆಗಳಿಗೆ ಹೆಚ್ಚು ಗಮನ ಹರಿಸುತ್ತಿದ್ದ ಮೈಸೂರು ಶೈಲಿಗೆ ಗಾಯನದ ಕೆಲವು ನವುರಾದ ಸೂಕ್ಷ್ಮ ಗಮಕಗಳನ್ನು ತರುವ ಮೂಲಕ ಎಂಜೆಎಸ್ ಅವರು ವೀಣೆಯಲ್ಲಿ ವಿಭಿನ್ನ ಬಗೆಯ ಪರಿಷ್ಕರಣವನ್ನು ಸಾಧಿಸಿಕೊಂಡರು. ಎಂಜೆಎಸ್ ಶಿಷ್ಯರೊಬ್ಬರು ವೀಣೆ ನುಡಿಸಿದಾಗ ವೀಣೆಯ ಫಿಂಗರಿಂಗ್ ಎಂದರೆ ಹೀಗಿರಬೇಕು ಎಂದು ಪದ್ಮವಿಭೂಷಣ ಟಿ.ಎನ್ ಶೇಷಗೋಪಾಲನ್ ಅವರು ಉದ್ಗರಿಸಿದರು. ಅರಿಯಾಕುಡಿ, ಅಲತ್ತೂರ್ ಹಾಗೂ ಜಿಎನ್‌ಬಿ ಅವರ ಬಾನಿಯಿಂದ ಪ್ರಭಾವಿತರಾಗಿದ್ದ ಎಂಜೆಎಸ್ ಅವರೆಲ್ಲರ ಹಾಡುಗಾರಿಕೆಯ ಸೂಕ್ಷ್ಮಗಳನ್ನೂ ತಮ್ಮ ವಾದನಶೈಲಿಗೆ ಅಳವಡಿಸಿಕೊಂಡಿದ್ದರು. ಕೃತಿಪ್ರಧಾನವಾಗಿರುವ ಕರ್ನಾಟಕ ಸಂಗೀತದಲ್ಲಿ ಯಾವುದೇ ಕೃತಿಯನ್ನಾಗಲಿ ಯಾವ ಗತಿಯಲ್ಲಿ ಎತ್ತಿಕೊಂಡರೆ ಸೊಗಸುತ್ತದೆ ಎನ್ನುವುದನ್ನು ಅರಿಯಾಕುಡಿ ಮತ್ತು ಜಿಎನ್‌ಬಿ ಅವರಿಂದ ತಾನು ಗ್ರಹಿಸಿಕೊಂಡೆ ಎನ್ನುವುದನ್ನು ಹಲವಾರು ಬಾರಿ ಅವರು ಹೇಳಿದ್ದಾರೆ. ಮೆಟ್ಟಿಲುಗಳ ಮೇಲೆ ನುಡಿಸಿಕೊಂಡು ವೇಗದ ಗಮಕಗಳನ್ನು ಮತ್ತು ನಿರಂತರತೆಗಳನ್ನು ವೀಣೆಯಲ್ಲಿ ಸಾಧಿಸಕೊಂಡ ಮೈಸೂರು ಬಾನಿಯ ವೀಣೆಗೆ, ಒಂದೇ ಮನೆಯಲ್ಲಿ ಎಳೆದುಕೊಂಡು ಸಂಕೀರ್ಣವಾದ ಗಮಕಗಳನ್ನು ಮೂಡಿಸುವುದರ ಮೂಲಕ ಬೇರೊಂದು ಬಗೆಯ ನಿರಂತರತೆಯನ್ನೂ ಹಾಗೂ ಅಗಾಧವಾದ ಗಾಂಭೀರ್ಯವನ್ನೂ ಎಂಜೆಎಸ್ ತಂದುಕೊಟ್ಟರು. ತಮ್ಮ ಬದುಕಿನಲ್ಲಿಯಂತೆಯೇ ಅವರು ವೀಣಾವಾದನದಲ್ಲೂ ಯಾವುದನ್ನೂ ಅತಿಗಳಿಗೆ ಕೊಂಡೊಯ್ಯಲಿಲ್ಲ.
ಪ್ರದರ್ಶನ ಕಲೆಗಳು ಉಳಿಯುವುದು ಸಾತತ್ಯದಿಂದಲೇ ಎನ್ನುವುದನ್ನು ಮನಗಂಡಿದ್ದ ಎಂಜೆಎಸ್ ಸಂಗೀತ ಕಲಿಸುವುದನ್ನು ಕುರಿತು ತುಂಬಾ ಗಂಭೀರವಾಗಿ ಆಲೋಚಿಸಿದರು. ವಿದ್ಯಾರ್ಥಿಯ ಮಟ್ಟ ಏನೇ ಇರಲಿ ಕಲಿಸುವ ವಿಷಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಾರದು ಆದರೆ ಕಲಿಸುವ ಕ್ರಮವನ್ನು ಬದಲಿಸಿಕೊಳ್ಳಬೇಕು ಎನ್ನುವುದು ಅವರ ಆಲೋಚನೆಯಾಗಿತ್ತು. ಇಂದು ಶಿಕ್ಷಣ ತಜ್ಞರು ತುಂಬಾ ಮುಖ್ಯ ಎಂದು ಹೇಳುವ ’ನಾನ್‌ಕರೆಕ್ಷನಲ್ ಮೆಥಡ್’ಅನ್ನು ಎಂಜೆಎಸ್ ಸದ್ದಿಲ್ಲದೆ ತಮ್ಮ ಕಲಿಸುವಿಕೆಯಲ್ಲಿ ಅಳವಡಿಸಿಕೊಂಡುಬಿಟ್ಟಿದ್ದರು. ವಿದ್ಯಾರ್ಥಿಯು ನುಡಿಸುವಾಗ ನೀನು ಈ ಜಾಗ ತಪ್ಪು ನುಡಿಸಿದೆ ಎಂದು ಅವರು ಹೇಳುತ್ತಲೇ ಇರಲಿಲ್ಲ. ಬದಲಾಗಿ ಆ ಭಾಗವನ್ನು ಎರಡು ಮೂರು ಸಲ ತಾವೂ ನುಡಿಸಿ, ವಿದ್ಯಾರ್ಥಿಯೂ ಅದನ್ನು ನುಡಿಸುವಂತೆ ಮಾಡುತ್ತಿದ್ದರು. ಆಗಲೂ ಅದು ಬಾರದಿದ್ದರೆ ಅಂದಿನ ಪಾಠದಲ್ಲೇ ಅದು ಬರಬೇಕೆಂದು ಹಟಮಾಡಿ, ಮತ್ತೆ ಮತ್ತೆ ವಿದ್ಯಾರ್ಥಿ ಅದನ್ನು ನುಡಿಸುವಂತೆ ಅವರು ಒತ್ತಾಯ ಮಾಡುತ್ತಿರಲಿಲ್ಲ. ಏಕೆಂದರೆ ಅದು ವಿದ್ಯಾರ್ಥಿಯ ಆತ್ಮಸ್ಥೈರ್ಯವನ್ನು ಕುಗ್ಗಿಸುತ್ತದೆ ಎನ್ನುವುದು ಅವರಿಗೆ ಸ್ಪಷ್ಟವಾಗಿತ್ತು. ಬದಲಾಗಿ ವಿದ್ಯಾರ್ಥಿಗಳಿಗೆ ಕಷ್ಟವಾದ ಭಾಗವನ್ನು ನೆನಪಿಟ್ಟುಕೊಂಡು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗೇ ಅರಿವಾಗದಂತೆ ಅದನ್ನು ಕಲಿಸಿಬಿಡುತ್ತಿದ್ದರು. ಅವರಿಗೆ ತಾನೇನು ಕಲಿಸಬೇಕು, ಎಷ್ಟು ಕಲಿಸಬೇಕು ಮತ್ತು ಹೇಗೆ ಕಲಿಸಬೇಕು ಎನ್ನುವುದರ ಬಗ್ಗೆ ತುಂಬಾ ಸ್ಪಷ್ಟತೆ ಇತ್ತು. ಅವರಿಗೆ ಸಂಗೀತದಂತೆ ಕಲಿಸುವಿಕೆಯೂ ಒಂದು ತಪಸ್ಸಾಗಿತ್ತು. ಹಾಗಾಗಿ ಬೇರೆಲ್ಲರಿಗಿಂತ ಅತಿ ಹೆಚ್ಚು ಸಂಖ್ಯೆಯಲ್ಲಿ ಕಛೇರಿ ಕಲಾವಿದರನ್ನು ರೂಪಿಸುವುದಕ್ಕೆ ಎಂಜೆಎಸ್ ಅವರಿಗೆ ಸಾಧ್ಯವಾಯಿತು.
ಎಂಜೆಎಸ್ ಅವರ ಬದುಕಿನ ಕ್ರಮ ಎಲ್ಲ ಕಾಲದಲ್ಲೂ ಮೌಲ್ಯಯುತವಾಗಿ, ನೆಮ್ಮದಿಯಿಂದ, ಸಮಾಜಮುಖಿಯಾಗಿ ಬದುಕಬೇಕನ್ನುವವರಿಗೆ ಒಂದು ಅತ್ಯುತ್ತಮ ಮಾದರಿ. ತನಗೆ ಇದು ಬರಬೇಕಿತ್ತು, ಅದು ಬರಬೇಕಿತ್ತು, ತನಗೆ ಇದು ದೊರಕಿಲ್ಲ, ಅದು ದೊರಕಿಲ್ಲ ಎಂದು ಒಂದೇ ಒಂದು ದಿನವೂ ಕೊರಗಿದವರಲ್ಲ. ಅಧಿಕಾರ, ಶ್ರೀಮಂತಿಕೆ, ಅಂತಸ್ತು ಇವುಗಳತ್ತ ಅಪ್ಪಿ ತಪ್ಪಿಯೂ ಕಣ್ಣು ಹಾಯಿಸಿದವರಲ್ಲ. ಹಾಗಾಗಿಯೇ ಆತ್ಮಶ್ಲಾಘನೆ ಮತ್ತು ಪರನಿಂದನೆ ಎರಡನ್ನೂ ಅವರು ಎಂದೂ ಮಾಡಲಿಲ್ಲ. ತಮ್ಮ ವೃತ್ತಿಯೇ ವೀಣಾವಾದನವಾದರೂ ಎಂದೂ ಯಾರ ಬಳಿಯೂ ವಶೀಲಿ ಬಾಜಿಯನ್ನೂ ಮಾಡಲಿಲ್ಲ. ಹಿರಿಯ ಹಾಗೂ ಕಿರಿಯ ಸಮಕಾಲೀನ ಸಂಗೀತ ದಿಗ್ಗಜರೆಲ್ಲರೂ ಇವರ ವಿನಿಕೆಯನ್ನು ಮೆಚ್ಚಿದ್ದರು. ಸಂಗೀತ ಕಲಾಭಿವರ್ಧಿನಿ ಸಭೆಯಲ್ಲಿ ಇವರು ನುಡಿಸಿದಾಗ ಮೈಸೂರು ವಾಸುದೇವಾಚಾರ್ಯರು ಇವರ ನುಡಿಸಾಣಿಕೆಯನ್ನು ಮುಕ್ತಕಂಠದಿಂದ ಹೊಗಳಿದ್ದರು. ದಸರೆಯಲ್ಲಿ ಮೈಸೂರು ದರ್ಬಾರಿನಲ್ಲಿ ಇವರು ನುಡಿಸಿದಾಗ ಇವರಿಗೆ ಪಕ್ಕವಾದ್ಯ ನುಡಿಸುತ್ತಿದ್ದ ಪದ್ಮಭೂಷಣ ಸಂಗೀತಕಲಾನಿಧಿ ಉಮಯಾಳಪುರಂ ಸಿವರಾಮನ್ ಅವರು ’ಇದು ಎಂಥಾ ಸೊಗಸಾದ ವೀಣಾವಾದನ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಎಂಜೆಎಸ್ ಅವರು ದೇಶದ ಎಲ್ಲಾ ಪ್ರಮುಖ ಸಭೆಗಳಲ್ಲಿ ಮತ್ತು ನಗರಗಳಲ್ಲಿ ಕಛೇರಿಗಳನ್ನು ನೀಡಿದ್ದರು. ಆಕಾಶವಾಣಿಯ ’ಎ-ಟಾಪ್’ ಕಲಾವಿದರು. ಎಲೆಮರೆಯ ಕಾಯಿಯಂತೆಯೇ ಉಳಿದರೂ ಗೌರವಾದರಗಳು, ಪ್ರಶಸ್ತಿ-ಪುರಸ್ಕಾರಗಳು ಇವರ ಪ್ರತಿಭೆಯನ್ನರಸಿ ತಾವೇ ಇವರ ಬಳಿಗೆ ಬಂದಿವೆ. ಗಾನಕಲಾ ಪರಿಷತ್ತಿನ ’ಗಾನಕಲಾಭೂಷಣ’ (೧೯೯೩), ಸಂಗೀತ ನೃತ್ಯ ಅಕಾಡೆಮಿಯ ’ಗಾನಕಲಾತಿಲಕ’ (೧೯೯೪), ಕರ್ನಾಟಕ ಸರ್ಕಾರದ ’ರಾಜ್ಯೋತ್ಸವ ಪ್ರಶಸ್ತಿ’ (೧೯೯೪), ಚೌಡಯ್ಯ ಸ್ಮಾರಕ ’ಕಲಾಜ್ಯೋತಿ ಪ್ರಶಸಿ’ (೧೯೯೯) ಆದರ್ಶ ಸಂಸ್ಥೆಯ ’ಗಾಯನ ಲಯ ಸಾಮ್ರಾಟ, ಅನನ್ಯ ಅಕಾಡೆಮಿಯ ಲೈಫ್ ಟೈಮ್ ಅಚೀವ್‌ಮೆಂಟ್ ಪ್ರಶಸ್ತಿ ’ಅನನ್ಯ ಕಲಾಕೌಸ್ತುಭ’, ೨೦೦೪ರಲ್ಲಿ ಕರ್ನಾಟಕ ಸರ್ಕಾರದ ’ಕನಕ ಪುರಂದರ ಪ್ರಶಸ್ತಿ’(ಇದು ಸಂದಿರುವ ಕರ್ನಾಟಕದ ಮೊಟ್ಟ ಮೊದಲ ವೈಣಿಕರು ಇವರು). ಇವೆಲ್ಲಾ ಸಂದ ಸಂದರ್ಭದಲ್ಲಿ ಅವರೊಳಗಿನ ವಿನಯ ಅವರ ಮಾತಿನಲ್ಲಿ ಧ್ವನಿತವಾಗಿದೆ ನನಗಿಂತ ಹಿಂದೆ ಸಂಗೀತಕ್ಕಾಗಿ ಬದುಕನ್ನು ಮುಡುಪಾಗಿಟ್ಟಿದ್ದ ಹಲವು ಸಂಗೀತಗಾರರಿದ್ದರು, ಸಂಗೀತವೇ ಬದುಕಾಗಿರುವ ನನ್ನ ಹಲವಾರು ಸಮಕಾಲೀನರೂ ಇದ್ದಾರೆ. ಹಾಗೆಯೇ ಸಂಗೀತವನ್ನೇ ಉಸಿರನ್ನಾಗಿಸಿಕೊಂಡು ಬದುಕುವ ಸಾಧ್ಯತೆ ಇರುವ ಹಲವಾರು ಯುವ ಪ್ರತಿಭೆಗಳೂ ಇದ್ದಾರೆ. ಹಾಗಾಗಿ ಇಂದು ನನಗೆ ಸಂದಿರುವ ಬಿರುದನ್ನು ನಾನು ಈ ಅಖಂಡ ಸಂಗೀತ ಪರಂಪರೆಗೆ ಸಂದಿರುವ ಬಿರುದು ಎಂದು ಭಾವಿಸುತ್ತೇನೆ.
ಕೆರೆಯ ನೀರನು ಕೆರೆಗೆ ಚೆಲ್ಲಿ ಎನ್ನುವಂತೆ ತಮಗೆ ಪ್ರಶಸ್ತಿಗಳ ಮೂಲಕ ದೊರಕಿದ ಯಾವ ಹಣವನ್ನೂ ಅವರು ಸ್ವಂತಕ್ಕೆ ಬಳಸಿಕೊಳ್ಳಲಿಲ್ಲ. ಅದನ್ನು ಹಲವಾರು ಸಂಗೀತ ಸಭೆಗಳಲ್ಲಿ ದತ್ತಿ ನಿಧಿಯಾಗಿ ಇಟ್ಟರು. ಉಳಿದ ಹಣವನ್ನು ಅಂಧರ ಶಾಲೆಯೊಂದಕ್ಕೆ ವಂತಿಕೆಯನ್ನಾಗಿ ನೀಡಿಬಿಟ್ಟರು. ಗಾಂಧೀಜಿಯು ಪ್ರತಿಪಾದಿಸಿದ ’ವಾಲೆಂಟರಿ ಪಾವರ್ಟಿ’ಯ ತತ್ವಕ್ಕೆ ಇವರ ಬದುಕಿಗಿಂತ ಒಳ್ಳೆಯ ನಿದರ್ಶನ ದೊರಕುವುದು ಸಾಧ್ಯವಿಲ್ಲವೆನಿಸುತ್ತದೆ.
ಇಂದು ಕಲೆ ಎನ್ನುವುದು ಹೆಚ್ಚುಕಡಿಮೆ ಹಣಮಾಡುವ ರೇಸ್ ಆಗಿರುವ ಸಂದರ್ಭದಲ್ಲಿ ಸಂಗೀತ ನಿಜವಾಗಿಯೂ ನೀಡಬೇಕಾದ್ದು ನೆಮ್ಮದಿಯನ್ನು. ಆದರೆ ಮೊದಲು ಅದು ನಮ್ಮಲ್ಲಿ ಮೂಡಬೇಕು. ಆಗ ಮಾತ್ರ ನಮ್ಮ ಸಂಗೀತ ಕೇಳುಗರಿಗೂ ನೆಮ್ಮದಿಯನ್ನು ಕೊಡಬಲ್ಲದು. ಸಂಗೀತ ನನಗೆ ಎಲ್ಲವನ್ನೂ ನೀಡಿದೆ. ಆ ನೆಮ್ಮದಿ ನನಗಿದೆ. ಎನ್ನುವ ಎಂಜೆಎಸ್ ಅವರ ಮಾತು ಸದಾ ನೆನಪಿಡಬೇಕಾದದ್ದು.

Recent Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.