ಯಾರೂ ತೋಟಿಗಳಾಗುವುದು ಬೇಡ

 In SUTTA MUTTA

ಯಾರೂ ತೋಟಿಗಳಾಗುವುದು ಬೇಡ
ಅನುವಾದ : ಟಿ ಎಸ್ ವೇಣುಗೋಪಾಲ್, ಶೈಲಜ
ಬೆಜವಾಡಾ ವಿಲ್ಸನ್ ಕೈಯಾರೆ ಮಲ ಶುಷಿಗೊಳಿಸುವುದರ ವಿರುದ್ಧ, ಆ ವ್ಯವಸ್ಥೆಯನ್ನು ನಿರ್ಮೂಲ ಮಾಡುವುದಕ್ಕೆ ಹೋರಾಟ ನಡೆಸುತ್ತಿದ್ದಾರೆ. ಮೂರು ದಶಕಗಳಿಂದ ಅವರ ಹೋರಾಟ ನಡೆದಿದೆ. ೧೯೯೪ರಲ್ಲಿ ಸಫಾಯಿ ಕರ್ಮಚಾರಿ ಅಂದೋಲವನ್ನು ಪ್ರಾರಂಭಿಸಿದರು. ಇತ್ತಿಚೆಗೆ ಅವರನ್ನು ಪೆರುಮಾಳ್ ಮುರುಗನ್ ಸಂದರ್ಶಿಸಿದರು. ಹಿಂದು ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಸಂದರ್ಶನದ ಅನುವಾದವನ್ನು ಇಲ್ಲಿ ನೀಡುತ್ತಿದ್ದೇನೆ. ಬಿಜೆಪಿ ಹೆಗಡೆಯಂತವರು ಮಾಡುತ್ತಿರುವ ಗದ್ದಲದ ಹಿನ್ನೆಲೆಯಲ್ಲಿ ಇಂತಹ ಎಚ್ಚರ ನಮ್ಮನ್ನು ಕಾಪಾಡಬಹುದೇನೊ?
ಪೆರುಮಾಳ್ ಮುರುಗನ್: ಇಂದು ದೆಹಲಿಯಲ್ಲಿ ಇಬ್ಬರು ಕೈಯಾರೆ ಮಲ ಶುಚಿಗೊಳಿಸುವ ತೋಟಿಗಳು ಸತ್ತರಂತೆ. . . .
ವಿಲ್ಸನ್: ಹೌದು, ಇಬ್ಬರು ಸತ್ತರು. ಹೋದವಾರ ಮೂವರು ಸತ್ತಿದ್ದರು. ಕೇವಲ ದೆಹಲಿಯಲ್ಲಿ ಮಾತ್ರವಲ್ಲ, ಎಲ್ಲಾ ಕಡೆಯಲ್ಲೂ ಅವರು ಸಾಯುತ್ತಲೇ ಇದ್ದಾರೆ. ಇದು ನನಗೆ ಹೊಸದಲ್ಲ. ಆದರೆ ಇತ್ತೀಚೆಗಷ್ಟೆ ಅವರ ಜೀವಕ್ಕೂ ಬೆಲೆ ಕೊಡಲು ಪ್ರಾರಂಭಿಸಿದ್ದೇವೆ. ಸಾಫಾಯಿ ಕರ್ಮಚಾರಿ ಆಂದೋಲನ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಸುಪ್ರಿಂ ಕೋರ್ಟಿನಲ್ಲಿ ಮೊಕದ್ದಮೆ ಹೂಡಿತ್ತು. ಅದು ಮಾರ್ಚಿ ೨೭, ೨೦೧೭ರಂದು ತೀರ್ಪು ನೀಡಿದೆ.
ಯಾವುದೇ ವ್ಯಕ್ತಿಯು ಕೈಯಾರೆ ಮಲಶುಚಿ ಮಾಡಬಾರದು ಹಾಗೂ ಅದಕ್ಕೆ ಯಂತ್ರಗಳನ್ನು ಬಳಸಬೇಕು ಎಂದು ಅದು ತನ್ನ ತೀರ್ಪಿನಲ್ಲಿ ತಿಳಿಸಿದೆ. ಮನುಷ್ಯರನ್ನು ಬಳಸಿಕೊಳ್ಳುವುದು ಅನಿವಾರ್ಯವಾದ ಸಂದರ್ಭಗಳಲ್ಲಿ ಅವರ ರಕ್ಷಣೆಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅದು ಆದೇಶಿಸಿದೆ. ಆದರೆ ಸರ್ಕಾರಗಳು ಈವರೆಗೂ ಅಂತಹ ಯಾವುದೇ ಸುರಕ್ಷಣಾ ಕ್ರಮಗಳನ್ನು ತೆಗೆದುಕೊಂಡಿಲ್ಲ. ಅದಕ್ಕೆ ಬೇಕಾದ ತಂತ್ರಜ್ಞಾನವನ್ನೂ ಬಳಸುತ್ತಿಲ್ಲ.
ಕೈಯಾರೆ ಮಲ ಶುಚಿ ಮಾಡುವುದನ್ನು ೧೯೯೩ರಲ್ಲಿ ಅಧಿಕೃತವಾಗಿ ರದ್ದುಗೊಳಿಸಲಾಯಿತು. ಹಾಗೆ ಸತ್ತವರ ಕುಟುಂಬದವರಿಗೆ ೧೦ ಲಕ್ಷ ರೂಪಾಯಿಗಳ ಪರಿಹಾರ ನೀಡಬೇಕೆಂದು ನ್ಯಾಯಾಲಯ ೨೦೧೪ರಲ್ಲಿ ತೀರ್ಪು ನೀಡಿತ್ತು. ಹಾಗೆ ಕೈಯಾರೆ ಮಲ ಶುಚಿಮಾಡುತ್ತಾ ಸತ್ತವರ ೧೪೭೦ ಪ್ರಕರಣಗಳನ್ನು ನಾವು ದಾಖಲು ಮಾಡಿದ್ದೇವೆ. ಆದರೆ ಹಲವು ಪ್ರಕರಣಗಳಲ್ಲಿ ಅದಕ್ಕೆ ಬೇಕಾದಂತಹ ದಾಖಲೆಗಳು ಲಭ್ಯವಿರಲಿಲ್ಲ.
ಮರಣ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆಯೂ ಒಂದು ಸಮಸ್ಯೆ ಇದೆ. ಹಲವು ಸಂದರ್ಭಗಳಲ್ಲಿ ಅಂತಹ ಪ್ರಮಾಣಪತ್ರಗಳಲ್ಲಿ ಸಾವಿಗೆ ಕಾರಣವನ್ನು ಸ್ಪಷ್ಟವಾಗಿ ನಮೂದಿಸಿರುವುದಿಲ್ಲ. ಕೈಯಾರೆ ಮಲ ಶುಚಿ ಮಾಡುತ್ತಾ ಯಾರಾದರೂ ಸತ್ತರೆ ಅದಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿರಬೇಕು. ಆದರೆ ಹಲವು ಸಂದರ್ಭಗಳಲ್ಲಿ ಎಫ್‌ಐಆರ್ ದಾಖಲೇ ಆಗಿರುವುದಿಲ್ಲ. ಇದರಿಂದಾಗಿ ಹಲವು ಕುಟುಂಬಗಳಿಗೆ ಪರಿಹಾರ ಸಿಗುವುದೇ ಇಲ್ಲ.
ನಂತರ ನಮಗೆ ಒಂದು ವಿಷಯ ಅರಿವಿಗೆ ಬಂತು. ನಾವು ನಿಜವಾಗಿ ಏನು ಮಾಡುತ್ತಿದ್ದೇವೆ? ಯಾರಾದರೂ ಸಾಯುವವರೆಗೆ ಕಾಯುತ್ತಾ ಕೂತಿದ್ದು, ನಂತರ ಅವರ ಕುಟುಂಬಕ್ಕೆ ೧೦ ಲಕ್ಷ ಪರಿಹಾರ ಕೊಡಿಸುವುದಕ್ಕೆ ಪ್ರಯತ್ನಿಸುತ್ತಿದ್ದೇವೆ. ಸತ್ತವರನ್ನು ಲೆಕ್ಕಹಾಕುವುದಕ್ಕೆ ಪ್ರಾರಂಭಸಿದ್ದೇವೆ. ಇದು ಸರಿಯಾ? ನಿಜವಾಗಿ ಸಾವನ್ನು ತಪ್ಪಿಸುವುದಕ್ಕೆ ನಾವು ಏನಾದರೂ ಮಾಡಬೇಕು. ಅಮೇಲೆ ನಮ್ಮನ್ನು ಕೊಲ್ಲುವುದನ್ನು ನಿಲ್ಲಿಸಿ ಎಂದು ಘೋಷಣೆ ಕೂಗುವುದಕ್ಕೆ ಪ್ರಾರಂಭಿಸಿದೆವು! ಈಗ ನಾವು ಯಾರೂ ಜಾಡಮಾಲಿಯಾಗಬಾರದು ಎಂದು ಹೋರಾಡುತ್ತಿದ್ದೇವೆ.
ಅದು ಅವರೇ ಆರಿಸಿಕೊಂಡಿರುವ ಕೆಲಸ ಎಂದು ಕೆಲವರು ವಾದಿಸುತ್ತಿದ್ದಾರೆ. ಕೈಯಾರೆ ಮಲಶುಚಿ ಮಾಡುತ್ತೇವೆ ಅನ್ನುವುದು ಅವರದೇ ನಿರ್ಧಾರ ಎಂಬುದು ಅವರ ವಾದ. ಸುಳ್ಳು, ಯಾರೂ ಬರೀ ಕೈಯಿಂದ ಮನುಷ್ಯನ ಕಕ್ಕಸ್ಸು ಬಳಿಯಲು ಬಯಸುವುದಿಲ್ಲ. ರಾಜಕೀಯ ಕಾರಣಗಳಿಂದಾಗಿ ಈ ಕ್ಷೇತ್ರದಲ್ಲಿ ತಂತ್ರಜ್ಞಾನವನ್ನು ಬಳಸುತ್ತಿಲ್ಲ. ಅದಕ್ಕೆ ರಾಜಕೀಯ ಛಲ ಬೇಕು. ಆ ಛಲ ತೊರದೇ ಇರುವುದರಿಂದಲೇ ನಾವು ಇದನ್ನು ಸರ್ಕಾರ ಮಾಡುತ್ತಿರುವ ಕೊಲೆ ಎಂದು ನಾವು ಕರೆಯುತ್ತಿದ್ದೇವೆ. ಈ ಪದ್ಧತಿಯನ್ನು ನಿಲ್ಲಿಸುವುದು ನಮ್ಮ ಉದ್ದೇಶ.
ಪೆರುಮಾಳ್ ಮುರುಗನ್: ನೀವು ಒಂದು ತಿಂಗಳಲ್ಲಿ ಒಂಬತ್ತು ಜನ ಸತ್ತರು ಎಂದು ಹೇಳತ್ತಿದ್ದಿರಿ. ಅವರೆಲ್ಲಾ ಕೈಯಾರೆ ಮಲಶುಚಿ ಮಾಡುವುದರಿಂದಲೇ ಸತ್ತರೆ?
ಹೌದು. ಅವರೆಲ್ಲಾ ನೆಲದ ಕೆಳಗಿನ ಮೋರಿ ಹಾಗೂ ಸೆಪ್ಟಿಕ್ ಟ್ಯಾಂಕನ್ನು ಶುಚಿಗೊಳಿಸುತ್ತಿದ್ದಾಗ ಸತ್ತಿದ್ದಾರೆ. ಈಗ ಎಲ್ಲಾ ಜವಾಬ್ದಾರಿಗಳನ್ನು ಕಂಟ್ರಾಕ್ಟರುಗಳಿಗೆ ವಹಿಸಿಬಿಟ್ಟಿದ್ದಾರೆ. ಸಮಸ್ಯೆ ಬಂದಾಗ, ಕಂಟ್ರಾಕ್ಟರುಗಳು ನಾವು ಕೆಲಸಗಾರರನ್ನು ಕಂಟ್ರಾಕ್ಟ್ ಆಧಾರದ ಮೇಲೆ ನೇಮಕ ಮಾಡಿಕೊಳ್ಳುತ್ತೇವೆ ಎಂದು ಸಾವಿನ ಜವಾಬ್ದಾರಿಯಿಂದ ನುಣಚಿಕೊಳ್ಳುತ್ತಾರೆ. ಆದರೆ ಇದು ಅಷ್ಟು ಸುಲಭವಲ್ಲ. ಪ್ರಾರಂಭಿಕ ಕೆಲಸ ದೆಹಲಿ ಜಲ ನಿಗಮ ಅಥವಾ ಮುನಿಸಿಪಾಲಿಟಿಯ ಜವಾಬ್ದಾರಿ.
ಪೆರುಮಾಳ್ ಮುರುಗನ್: ನಿಮಗೆ ಅವರಿಗಾಗಿ ಏನಾದರೂ ಮಾಡಬೇಕು, ಅವರ ಬೆಂಬಲಕ್ಕೆ ನಿಲ್ಲಬೇಕು ಅಂತ ಯಾವಾಗ ಅನ್ನಿಸಿತು?
ಯಾವಾಗಿನಿಂದ ಅಂತ ಕರಾರುವಕ್ಕಾಗಿ ಹೇಳುವುದು ಕಷ್ಟ. ನಾನೂ ಅದೇ ಜಾತಿಯಲ್ಲಿ ಹುಟ್ಟಿದವನು ಎಂದು ತಿಳಿಯುವುದಕ್ಕೇ ಸ್ವಲ್ಪ ಸಮಯ ಹಿಡಿಯಿತು. ನನ್ನ ತಂದೆ ತಾಯಿ, ನನ್ನ ಅಣ್ಣ ಇದೇ ಕೆಲಸ ಮಾಡುತ್ತಿದ್ದರು. ನಾನಿದ್ದ ಪ್ರದೇಶದಲ್ಲಿ ೧೧೮ ಮನೆಗಳಿದ್ದವು. ಅವರೆಲ್ಲರೂ ಇದೇ ಕೆಲಸ ಮಾಡುತ್ತಿದ್ದರು. ಅವರಿಗೆ ಬೇರೆ ಕೆಲಸ ಸಿಗುತ್ತಿರಲಿಲ್ಲ. ಅವರು ಕಾರ್ಪೋರೇನ್ನಿಗೆ ಹೋಗಲಿ, ಮುನಿಸಿಪಾಲಿಟಿಗೆ ಹೋಗಲಿ, ಚಿನ್ನದ ಗಣಿಗೆ ಹೋಗಲಿ ಅವರಿಗೆ ಕೆಲಸ ಸಿಗುತ್ತಿರಲಿಲ್ಲ. ಅಲ್ಲಿ ಕಕ್ಕಸ್ಸುಗಳು, ಮೋರಿಗಳು, ಚರಂಡಿಗಳು ಹೀಗೆ ಬೇರೆ ಬೇರೆ ವಿಭಾಗಗಳಿದ್ದರೂ, ಎಲ್ಲಾ ಕಡೆಯಲ್ಲೂ ಅವರ ಕೆಲಸ ಒಂದೆ. ಕಕ್ಕಸ್ಸು ಶುಚಿಗೊಳಿಸುವುದು.
ನಮ್ಮ ತಂದೆ ತಾಯಿಗಳಿಗೆ ನಾನು ಆ ಕೆಲಸ ಮಾಡುವುದು ಇಷ್ಟವಿರಲಿಲ್ಲ. ನನ್ನನ್ನು ಶಾಲೆಗೆ ಕಲಿಸಿದರು. ನನ್ನ ಜಾತಿಯನ್ನು ಹೇಳಿಕೊಳ್ಳುವುದಕ್ಕೆ ನನಗೆ ನಾಚಿಕೆಯಾಗುತ್ತಿತ್ತು. ಬೇರೆ ಮಕ್ಕಳೊಂದಿಗೆ ಆಡವಾಡುತ್ತಿದ್ದಾಗ ಅವರು ನನ್ನನ್ನು ತೋಟಿ ಎನ್ನುತ್ತಿದ್ದರು. ನನ್ನನ್ನು ಯಾಕೆ ಹಾಗೆ ಕರೆಯುತ್ತಾರೆ ಎಂದು ಅಮ್ಮನನ್ನು ಕೇಳಿದಾಗೆಲ್ಲ ಅವರು ನಮ್ಮ ಮನೆ ಹತ್ತಿರ ಒಂದು ತೊಟ್ಟಿ ಇದೆಯಲ್ಲ ಅದಕ್ಕೆ ಹಾಗೆ ಕರೆಯುತ್ತಾರೆ ಎನ್ನುತ್ತಿದ್ದರು.
ಅಮೇಲೆ ನಾನು ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಪಾಠ ಹೇಳಿಕೊಡುತ್ತಿದ್ದೆ. ಆಗ ಅವರ ಮನೆಗಳಲ್ಲಿ ನಿರಂತರವಾಗಿ ಜಗಳ ನಡೆಯುತ್ತಿರುವ ವಿಷಯ ಗೊತ್ತಾಯಿತು. ಮನೆಯಲ್ಲಿ ಗಂಡಸರು ಕುಡಿತು ಬರುತ್ತಿದ್ದುದು ಈ ಜಗಳಗಳಿಗೆ ಬಹುತೇಕ ಕಾರಣ ಅನ್ನುವುದೂ ತಿಳಿಯಿತು. ಅವರು ಬೆಳಗ್ಗೆ ಒಂಬತ್ತು ಗಂಟೆಗೇ ಕುಡಿಯುವುದಕ್ಕೆ ಪ್ರಾರಂಭಿಸುತ್ತಿದ್ದರು. ನಾನು ಅವರೊಂದಿಗೆ ಮಾತನಾಡಬೇಕೆಂದು ತೀರ್ಮಾನಿಸಿದೆ. ಅವರನ್ನು ಕ್ರಿಕೇಟ್, ಫುಟ್ ಬಾಲ್ ಇತ್ಯಾದಿ ಆಟಗಳಲ್ಲಿ ತೊಡಗಿಸಲು ಪ್ರಾರಂಭಿಸಿದೆ.
ನಿಜವಾದ ಸಮಸ್ಯೆ ಏನು ಅನ್ನುವುದು ನನಗೆ ಅರ್ಥವಾಗುವುದಕ್ಕೆ ಸಾಧ್ಯವೇ ಇಲ್ಲ ಅಂತ ಅವರು ಹೇಳುತ್ತಿದ್ದರು. ತಮ್ಮ ಕೆಲಸದ ಕಳಂಕವನ್ನು ಮರೆಯುವುದಕ್ಕೆ ಕುಡಿಯುತ್ತೇವೆ ಅನ್ನುತ್ತಿದ್ದರು. ಅದಕ್ಕೆ ಹೆಂಗಸರು ಕುಡಿಯದೇ ಕೆಲಸ ಮಾಡುತ್ತಾರಲ್ಲ ಎಂದು ನಾನು ವಾದಿಸುತ್ತಿದ್ದೆ. ಅದಕ್ಕೆ ಅವರು ನಾವು ಬೆಳಗ್ಗೆ ಕುಡಿಯುತ್ತೇವೆ, ಅವರು ರಾತ್ರಿ ಕುಡಿಯುತ್ತಾರೆ ಎನ್ನುತ್ತಿದ್ದರು. ಅವರು ನಿಜ ಹೇಳುತ್ತಿದ್ದಾರೆ ಎಂದು ನನಗೆ ಮನವರಿಕೆಯಾಯಿತು. ನೀವು ಈ ಕೆಲಸವನ್ನು ಮಾಡುವುದಕ್ಕೆ ಕುಡಿಯುತ್ತಿದ್ದೀರಿ. ನಿಮಗೆ ಬೇರೆ ಕೆಲಸ ಸಿಕ್ಕರೆ ನೀವು ಕುಡಿಯುವುದನ್ನು ನಿಲ್ಲಿಸುತ್ತೀರಾ? ಅಂತ ಕೇಳಿದೆ.
ಕೊನೆಗೆ ಒಂದು ದಿನ ಒಬ್ಬನ ಜೊತೆ ಅವರು ಕೆಲಸ ಮಾಡುವ ಜಾಗಕ್ಕೆ ಹೋದೆ. ಅವನು ಮಲ ತೆಗೆಯುವುದಕ್ಕೆ ಅಂತ ಟ್ಯಾಂಕಿನಲ್ಲಿ ಒಂದು ಬಕೆಟ್ ಹಾಕಿದ. ಅದು ಕೆಳಗೆ ಬಿದ್ದು ಹೋಯಿತು. ಅದನ್ನು ತೆಗೆಯುವುದಕ್ಕೆ ಕೈ ಹಾಕಿದ. ಅವನು ಏನು ಮಾಡುತ್ತಿದ್ದಾನೆ ಅಂತ ನನಗೆ ಅರ್ಥ ಆಗಲಿಲ್ಲ. ಕೈಗೆ ಬಕೆಟ್ ಸಿಗಲಿಲ್ಲ. ಬಾಕೆಟ್ ತೆಗೆಯುವುದಕ್ಕೆ ಅವನೇ ಟ್ಯಾಂಕಿನೊಳಗೆ ಇಳಿದು ಬಿಟ್ಟ. ನಾನು ಅವನನ್ನೇ ನೋಡುತ್ತಿದ್ದೆ. ಅವನು ಮಣ್ಣಿನ ಜೊತೆ ಆಟವಾಡುವ ಮಕ್ಕಳ ರೀತಿಯಲ್ಲಿ ಕಕ್ಕಸ್ಸಿನಲ್ಲಿ ಬಕೆಟ್ ಹುಡುಕುತ್ತಿದ್ದ.
ಇದೆಂತ ಕೆಲಸ? ನೀನು ಏನು ಮಾಡುತ್ತಿದ್ದೀಯ? ಮೇಲೆ ಬಾ ಅಂತ ಕೂಗಿದೆ. ಅವನು ಮೇಲೆ ಬರುವುದಕ್ಕೆ ಒಪ್ಪಲಿಲ್ಲ. ನಾನು ಸುತ್ತ ಇದ್ದವರ ಕೈಹಿಡಿದುಕೊಂಡು ಇಂತ ಕೆಲಸ ಮಾಡಬೇಡಿ ಅಂತ ಕೇಳಿಕೊಂಡೆ. ಅವರು ತಮ್ಮ ಕೈಗಳು ಕೊಳಕಾಗಿವೆ, ಮುಟ್ಟಬೇಡ ಅಂದರು.
ನನಗೆ ಆಗ ಹದಿನೆಂಟೋ ಹತ್ತೊಂಬತ್ತೋ ವರ್ಷ. ನನ್ನನ್ನು ದೂರ ತಳ್ಳಿದರು. ನಾನು ತಬ್ಬಿಬ್ಬಾಗಿ ಅಲ್ಲೇ ನಿಂತಿದ್ದೆ. ನಾನು ಅತ್ತೆ, ಗೋಗರೆದೆ. ನೀವೂ ಮನುಷ್ಯರು, ನೀವು ಹೇಗೆ ಮಾಡಬಾರದು ಅಂತ ಅವರಿಗೆ ಹೇಳಿದೆ. ನಾನು ನೆಲದ ಮೇಲೆ ಬಿದ್ದು ಹೊರಳಾಡಿದೆ. ಜೋರಾಗಿ ಅಳಲು ಪ್ರಾರಂಭಿಸಿದೆ.
ಮುದುಕಿಯೊಬ್ಬಳು ಹತ್ತಿರ ಬಂದು ಯಾಕೆ ಹೀಗೆ ಮಾಡುತ್ತಿದ್ದೀಯ, ಏಳು ಅಂತ ನನಗೆ ಹೇಳಿದಳು. ಅದಕ್ಕೆ ನಾನು, ಅವರು ಈ ಕೆಲಸವನ್ನು ಮುಂದೆಂದು ಮಾಡುವುದಿಲ್ಲ ಅಂತ ಭರವಸೆ ಕೊಟ್ಟರೆ ಮಾತ್ರ ಏಳುತ್ತೇನೆ ಅಂತ ಹೇಳಿದೆ. ಆ ಹೆಂಗಸಿನ ಹೆಸರು ಪಿಚ್ಚಮ್ಮ. ಅವರು ಈ ಕೆಲಸಮಾಡುವುದನ್ನು ನಿಲ್ಲಿಸುವುದಕ್ಕೆ ಹೇಳು ಎಂದು ಪಿಚ್ಚಮ್ಮನನ್ನು ಗೋಗರೆದೆ. ಈ ಮಗು ಅಳುತ್ತಿದೆ. ಅದು ತಪ್ಪು ಅಂತ ಈ ಮಗು ಹೇಳುತ್ತಿದೆ. ಈ ಮಗು ಹೇಳುತ್ತಿರುವುದು ನಿಜ ಅಲ್ವ? ಹೊರಗೆ ಬನ್ನಿ ಅಂತ ಅವಳು ಹೇಳಿದಳು. ಈಗ ನಾನು ಹೊರಗೆ ಬಂದರೂ ನಾಳೆ ಈ ಕೆಲಸ ಮಾಡಲೇ ಬೇಕು ಅಂತ ಅವನು ಉತ್ತರಿಸಿದ. ಆದರೆ ಅವರು ಕೆಲಸ ನಿಲ್ಲಿಸಿ ಮೇಲೆ ಬಂದರು.
ಪಿಚ್ಚಮ್ಮನ ಕಣ್ಣಲ್ಲಿ ಆ ವೇಳೆಗಾಗಲೇ ನೀರು ತುಂಬಿಕೊಂಡಿತ್ತು. ನಾನು ಮಾಡಿದ್ದು ಸರಿ ಅಂತ ಅವಳೇ ಮೊದಲು ನನಗೆ ಹೇಳಿದ್ದು. ನನ್ನ ಕೈಗಳನ್ನು ನೋಡು, ನನ್ನ ಬದುಕನ್ನು ನೋಡು ಅಂತ ನನಗೆ ನೊಂದು ಹೇಳಿದಳು. ನಾನು ಅವಳನ್ನು ಬಿಗಿಯಾಗಿ ಹಿಡಿದುಕೊಂಡು ಅಳಲು ತೊಡಗಿದೆ. ಅಳಬೇಡ. ನೀನು ಮಾಡುತ್ತಿರುವುದು ಸರಿ. ಇದನ್ನು ಮಾಡುವುದಕ್ಕೆ ಯಾರಿಗೂ ದೈರ್ಯವಿರಲಿಲ್ಲ. ಅವರೆಲ್ಲಾ ಊಟದ ಹಿಂದೆ ಬಿದ್ದಿದ್ದಾರೆ. ಆದರೆ ಎಂಥ ಊಟ? ಈ ಕೆಲಸ ಮಾಡಿದ ಮೇಲೆ ಸರಿಯಾಗಿ ಊಟ ಮಾಡುವುದಕ್ಕೂ ಆಗುವುದಿಲ್ಲ. ಎಲೆ ಅಡಿಕೆ ಹಾಕಿಕೊಂಡು ಕೂರುತ್ತೇವೆ, ಎಂತಹ ಬದುಕು ಇದೆ?
ನಾನು ಮನೆಗೆ ಹೋದಮೇಲೆ ನಮ್ಮ ತಂದೆ ತಾಯಿಯರನ್ನು ಅವರಿಗೆ ಇವೆಲ್ಲಾ ಗೊತ್ತಾ ಅಂತ ಕೇಳಿದೆ. ಅವರು ಅದರಲ್ಲಿ ಹೊಸದೇನಿದೆ ಅಂದರು.
ಪೆರುಮಾಳ್ ಮುರುಗನ್: ಅವರು ಇದನ್ನೆಲ್ಲಾ ನಿಮ್ಮಿಂದ ಹೇಗೆ ಮುಚ್ಚಿಟ್ಟಿದ್ದರು?
ನನಗೆ ಅದು ಸ್ವಲ್ಪವೂ ಗೊತ್ತಿರಲಿಲ್ಲ. ನಾನು ಅದನ್ನು ನೋಡಿರಲೂ ಇಲ್ಲ. ನಮ್ಮ ಅಪ್ಪ ೧೯೭೬ರಲ್ಲಿ ನಿವೃತ್ತರಾಗಿದ್ದರು. ನಮ್ಮ ಅಮ್ಮ ಕೆಲಸ ಮಾಡುತ್ತಿರಲಿಲ್ಲ. ನನ್ನ ಅಣ್ಣ ಟ್ಯಾಕ್ಸಿ ಡ್ರೈವರ್ ಅಂತ ಸುಳ್ಳು ಹೇಳಿದ್ದ. ಅವನು ಮದುವೆ ಆಗಿದ್ದು ಹಾಗೆಯೇ. ಒಮ್ಮೆ ಅವನ ಹತ್ತಿರ ಕೆಟ್ಟ ವಾಸನೆ ಬರುತ್ತಿದೆ ಅಂತ ನಮ್ಮ ಅತ್ತಿಗೆ, ಹೇಳಿದಳು. ಅದಕ್ಕವನು ತಾನು ಮಲ ಹೊತ್ತಿದ್ದ ಟ್ರಾಕ್ಟರನ್ನು ಓಡಿಸುತ್ತಿದ್ದರಿಂದ ಆ ವಾಸನೆ ಬರುತ್ತಿರಬಹುದು ಅಂತಹ ಸಮಜಾಯಿಸಿ ಕೊಟ್ಟಿದ್ದ. ಅಣ್ಣ ಯಾವಾಗಲೂ ತನ್ನ ಬಟ್ಟೆಗಳನ್ನು ಚೆನ್ನಾಗಿ ಇಸ್ತ್ರಿ ಮಾಡಿ ಹಾಕಿಕೊಳ್ಳುತ್ತಿದ್ದ. ಅವನಿಗೆ ಬರೆಯಲು ಬರುತ್ತಿರಲಿಲ್ಲ. ಅದರೆ ಒಂದು ’ಸಹಿ’ ಅಂತ ಮಾಡುತ್ತಿದ್ದ. ಅವನು ಮಾಡುತ್ತಿದ್ದ ಕೆಲಸಕ್ಕೂ ಅವನು ತೋರಿಸಿಕೊಳ್ಳುತ್ತಿದ್ದಕ್ಕೂ ಅಜಗಜಾಂತರ ವ್ಯತ್ಯಾಸವಿತ್ತು.
ನನಗೆ ಆ ಕೆಲಸದ ನೇರ ಅನುಭವವೇ ಇರಲಿಲ್ಲ. ಅಂದು ಆರು ಗಂಟೆಗೆ ಮನೆಬಿಟ್ಟು ರಾತ್ರಿ ಇಡೀ ಸುತ್ತಾಡಿದೆ. ಏನು ಮಾಡಬಹುದು ಅಂತ ಯೋಚಿಸುತ್ತಿದ್ದೆ.
ಸಾಯುವ ಬಗ್ಗೆ ಯೋಚಿಸಿದೆ. ಸಾಯುವುದು ಸುಲಭ, ಬದುಕುವುದು ಕಷ್ಟ ಅನ್ನಿಸಿತು. ನೀರಿನ ಟ್ಯಾಂಕೊಂದರ ಮುಂದೆ ನಿಂತುಕೊಂಡೆ. ಅದಕ್ಕೊಂದು ನಲ್ಲಿ ಇತ್ತು. ತಿರುಗಿಸಿದರೆ ನೀರು ಶ್ ಅಂತ ಹರಿದುಕೊಂಡು ಹೋಗುತ್ತಿತ್ತು. ನನಗೆ ನನ್ನ ಯೋಚನೆಯನ್ನು ಈ ಹರಿಯುವ ನೀರಿನೊಂದಿಗೆ ಹಂಚಿಕೊಳ್ಳಬೇಕು ಅನ್ನಿಸಿತು. ಅದು ಶ್ ಶ್ ಅಂತಲೇ ಇತ್ತು. ಅದು ನನಗೆ ಸಾಯಬೇಡ ಎಂದು ಹೇಳುತ್ತಿದೆ ಅಂದುಕೊಂಡೆ.
ಎದ್ದೆ. ಬೆಳಗಾಗಿತ್ತು. ಬೆಳಕು ಕ್ಷಣ ಮಾತ್ರದಲ್ಲಿ ಹರಡಿತು. ನನ್ನ ಬದುಕಿನಲ್ಲಿ ಮೊಟ್ಟಮೊದಲ ಬಾರಿಗೆ ಬೆಳಕುಮೂಡಿದೆ ಅನ್ನಿಸಿತು. ರೋಮಾಂಚನವಾಯಿತು. ಆಕಾಶ ಸಂಪೂರ್ಣ ಮಾರ್ಪಾಡಾಗಿತ್ತು. ಆಕಾಶವೇ, ನಾನು ತುಂಬಾ ನೋವಿನಲ್ಲಿದ್ದೇನೆ. ನಿನ್ನ ಕೆಳಗಡೆ ತುಂಬಾ ಜನ ಇದ್ದಾರೆ. ಅವರಿಗೆಲ್ಲಾ ಹೇಳು. ಇದು ಭಯಂಕರ ಅಂತ ಅವರಿಗೆಲ್ಲಾ ಹೇಳು. ಯಾವುದೇ ಮನುಷ್ಯರು ಇಂತ ಅವಮಾನವನ್ನು ಅನುಭವಿಸಬಾರದು ಅಂತ ಅವರಿಗೆ ಹೇಳು. ಹೇಳುತ್ತೀಯಾ?” ಅಂತ ಕೇಳಿದೆ.
ಪೆರುಮಾಳ್ ಮುರುಗನ್: ಅಮೇಲೆ ಏನು ಮಾಡಿದಿರಿ?
ತೋಟಿಗಳನ್ನೆಲ್ಲಾ ಮಾತನಾಡಿಸುತ್ತಾ ಹೋದೆ. ಅವರ ಕಷ್ಟಸುಖ ವಿಚಾರಿಸಿದೆ. ಕ್ರಮೇಣ ಜನ ನನ್ನನ್ನು ಗುರುತಿಸ ತೊಡಗಿದರು. ಬಸವಲಿಂಗಪ್ಪ ಅನ್ನವರೊಬ್ಬರು ಆ ಬಗ್ಗೆ ನನ್ನೊಂದಿಗೆ ಮಾತನಾಡಿದರು. ಕುವೆಂಪು ಬಗ್ಗೆ ಅವರು ನನಗೆ ಹೇಳಿದರು. ಅವರು ಜಲಗಾರರು ಅಂತ ಒಂದು ಕಥೆಯನ್ನು ಬರೆದಿದ್ದಾರೆ. ಅದರಲ್ಲಿ ಶಿವ ಧರ್ಮೋಪದೇಶ ನೀಡುತ್ತಿರುತ್ತಾನೆ. ಒಬ್ಬ ತೋಟಿ ಅದನ್ನು ದೂರದಲ್ಲಿ ಕೂತು ಕೇಳಿಸಿಕೊಳ್ಳುತ್ತಾನೆ. ತೋಟಿ ಅದನ್ನು ಕೇಳಿಸಿಕೊಳ್ಳಬಾರದು. ಆದರೆ ಕುವೆಂಪು ಕಥೆಯಲ್ಲಿ ಶಿವ ತೋಟಿಯ ಹತ್ತಿರ ಹೋಗಿ ಅವನ ಜೊತೆಯಲ್ಲಿ ಮಾತನಾಡುತ್ತಾನೆ. ಇದನ್ನು ನಮ್ಮ ಜನರಿಗೆ ಹೇಳಿದೆವು.
ದಿನ ಕಳೆದಂತೆ ನನಗೆ ಕರೆಗಳು ಬರುವುದಕ್ಕೆ ಪ್ರಾರಂಭವಾದವು. ನಾನು ನಿಜ ಹೇಳುತ್ತಿದ್ದೇನೆ ಅಂತ ಜನರಿಗೆ ನಂಬಿಕೆ ಬಂತು. ಕೈಯಾರೆ ಮಲ ಶುಚಿಮಾಡುವುದು ಅಪಾಯಕಾರಿ ಎಂದು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದೆ. ಪತ್ರದ ಉಳಿದ ಭಾಗವನ್ನು ನಿಲ್ಲಿಸಿ, ನಿಲ್ಲಿಸಿ ಅಂತ ಬರೆದು ತುಂಬಿಸಿದೆ. ನಂತರ ಕೋಲಾರದ ಚಿನ್ನದ ಗಣಿಯ ನಿರ್ದೇಶಕರಿಗೆ ಪತ್ರ ಬರೆದೆ. ಅದಕ್ಕೆ ಪ್ರತಿಕ್ರಿಯೆ ಬರಲಿಲ್ಲ. ಒಂದು ವಾರದ ನಂತರ ಈ ಬಗ್ಗೆ ಕ್ರಮತೆಗದುಕೊಳ್ಳದಿದ್ದರೆ ಆಗುವ ಕಾನೂನಾತ್ಮಕ ಪರಿಣಾಮಗಳನ್ನು ಕುರಿತು ಎಚ್ಚರಿಸಿ ಮೊತ್ತೊಂದು ಪತ್ರ ಬರೆದೆ. ಅದಕ್ಕೆ ಉತ್ತರ ಬಂತು. ಕೈಯಾರೆ ಮಲಶುಚಿಗೊಳಿಸುವರ ಸಂಖ್ಯೆಯನ್ನು ಕಡಿಮೆ ಮಾಡಿದ್ದೇವೆ ಅಂತ ಅದರಲ್ಲಿ ತಿಳಿಸಿದ್ದರು.
ನಾನು ಪತ್ರವನ್ನು ಹಳ್ಳಿಯಲ್ಲಿ ಎಲ್ಲರಿಗೂ ತೋರಿಸಿದೆ. ಪತ್ರದಲ್ಲಿ ಕಕ್ಕಸ್ಸು ನಿರ್ಮಿಸುವುದಕ್ಕೆ ೧೮ ಲಕ್ಷ ಮಂಜೂರು ಮಾಡಲಾಗಿದೆ ಎಂದು ತಿಳಿಸಲಾಗಿತ್ತು. ನಾನು ಪಟ್ಟಣದಲ್ಲಿದ್ದ ಕಕ್ಕಸ್ಸುಗಳನ್ನು ಲೆಕ್ಕಹಾಕಿದೆ. ಅದಕ್ಕು ಮಂಜೂರಾಗಿರುವ ಹಣಕ್ಕೂ ತಾಳೆಯಾಗುತ್ತಿರಲಿಲ್ಲ.
ನಾನು ಮತ್ತೊಂದು ಪತ್ರಬರೆದೆ. ನಿರ್ದೇಶಕರಿಗೆ ಈಗ ಯೋಚನೆ ಶುರವಾಯಿತು. ಸಂತ ಜಾನ ವೈದ್ಯಕೀಯ ಕಾಲೇಜಿನ ಪಿ ಎಸ್ ರಾವ್ ದಿ ನ್ಯೂ ಇಂಡಿಯನ್ನ ಎಕ್ಸ್‌ಪ್ರೆಸ್‌ನಲ್ಲಿ ನನ್ನ ಬಗ್ಗೆ ಒಂದು ಅಂಕಣ ಬರೆದರು. ಅಮೇಲೆ ಬೆಂಗಳೂರಿನ ದಿನಪತ್ರಿಕೆಯೊಂದರಲ್ಲಿ ಶೇಮ್ ಅನ್ನುವ ಹೆಸರಿನಲ್ಲಿ ಒಂದು ದೊಡ್ಡ ಲೇಖನ ಪ್ರಕಟವಾಯಿತು.
ರಾಮಕೃಷ್ಣ ಹೆಗ್ಗಡೆ ಹಾಗು ದೇವೇಗೌಡರು ಭಾಗವಹಿಸಿದ್ದ ಒಂದು ಕಾರ್ಯಕ್ರಮದಲ್ಲಿ ಅವರಿಗೆ ಆ ಲೇಖನದ ಪ್ರತಿಯನ್ನು ಹಾಗು ಒಂದು ಪತ್ರವನ್ನು ಕೊಟ್ಟೆವು. ಆಗ ಕರ್ನಾಟಕದಲ್ಲಿ ಜನತಾ ಪಕ್ಷ ಆಳುತ್ತಿತ್ತು. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತ ಇತ್ತು. ಕೋಲಾರ ಕೇಂದ್ರಾಡಳಿತದಲ್ಲಿ ಬರುತ್ತಿದ್ದರಿಂದ ಕೇಂದ್ರವನ್ನು ಅಸ್ಪಶ್ಯತೆಯನ್ನು ಆಚರಿಸುತ್ತಿದೆ ಎಂದು ಇವರು ಆಪಾದಿಸಿದರು. ರಾತ್ರೋರಾತ್ರಿ ನಾನು ಹೀರೋ ಮಾಡಿಬಿಟ್ಟರು.
ಕೆಲವೇ ದಿನಗಳಲ್ಲಿ ಅಧಿಕಾರಿಗಳು ಒಣ ಟಾಯಲೆಟ್ಟುಗಳನ್ನು ಕೆಡವಿ ಹೊಸ ಕಕ್ಕಸ್ಸುಗಳ್ನು ನಿರ್ಮಿಸಿದರು. ಅವರಿಗೆ ಪರ್ಯಾಯ ಉದ್ಯೋಗ ವ್ಯವಸ್ಥೆಗಾಗೊ ಆಟೋಗಳನ್ನು ಹಾಗೂ ಹಸುಗಳನ್ನು ಕೊಟ್ಟರು.
ನನಗೆ ಸ್ವಲ್ಪ ಮಟ್ಟಿಗೆ ಖುಷಿಯಾಯಿತು. ನಮಗೆ ಇನ್ನೇನು ಬೇಕು? ಕೈಯಾರೆ ಮಲ ಶುಚಿಗೊಳಿಸುವುದನ್ನು ನಿಲ್ಲಿಸುವುದಕ್ಕೆ ಕಕ್ಕಸ್ಸುಗಳನ್ನು ನಿರ್ಮಿಸಬೇಕೆಂದು ನಾನು ಬಯಸಿದ್ದೆ. ಅದು ಆಯಿತು. ನಾನು ಸುಮ್ಮನಾದೆ. ಸೈಕಲ್‌ನಲ್ಲಿ ಎಲ್ಲಾ ಕಡೆ ಸುತ್ತುತ್ತಿದ್ದೆ.
ನಾನು ಕರ್ನಾಟಕ ಹಾಗೂ ಆಂದ್ರ ಪ್ರದೇಶ ಎಲ್ಲಾ ಸುತ್ತಿದೆ. ಎಸ್ ಆರ್ ಶಂಕರ್ ಅಂತ ಒಬ್ಬ ಐಎಎಸ್ ಅಧಿಕಾರಿಯ ಪರಿಚಯ ಆಯಿತು. ಅವರು ನನಗೆ ಚಳುವಳಿಯ ಬಗ್ಗೆ ಅದನ್ನು ಸಂಘಟಿಸುವುದರ ಬಗ್ಗೆ ತಿಳಿಸಿಕೊಟ್ಟರು. ಕ್ರಮೇಣ ನಾನು ಹಾಗೂ ಇನ್ನು ಕೆಲವರು ಸರ್ಕಾರದೊಂದಿಗೆ ವ್ಯವಹರಿಸುವುದಕ್ಕೆ ಪ್ರಾರಂಭಿಸಿದೆವು. ನಮ್ಮ ಸಂಘಟನೆಗೆ ಯಾವುದೇ ಹೆಸರೂ ಇರಲಿಲ್ಲ. ಹಾಗೇ ಒಂದು ದಶಕ ಕೆಲಸ ಮಾಡಿದೆವು. ಅಮೇಲೆ ೧೯೯೨ರಲ್ಲಿ ನಮ್ಮ ಸಂಘಟನೆಗೆ ಸಫಾಯಿ ಕರ್ಮಾಚಾರಿ ಆಂದೋಲನ ಅಂತ ಹೆಸರಿಟ್ಟೆವು. ಮೆರವಣೆಗೆ ನಡೆಸಿದೆವು. ಈವರೆಗೆ ನಮ್ಮಲ್ಲಿ ೬೦೦೦ಜನ ಸ್ವಯಂ ಸೇವಕರಿದ್ದಾರೆ. ಅವರಲ್ಲಿ ೨೦೦ಜನ ಪೂರ್ಣಕಾಲಿಕ ಸ್ವಯಂಸೇವಕರು. ನನಗೆ ಮ್ಯಾಗಸೆಸೆ ಪ್ರಶಸ್ತಿ ಬಂದ ಮೇಲೆ ಹೆಚ್ಚೆಚ್ಚು ಜನ ಉತ್ಸಾಹದಿಂದ ಮುಂದೆ ಬರುತ್ತಿದ್ದಾರೆ. ಡಾಕ್ಟರುಗಳು, ಇಂಜಿನಿಯರುಗಳು, ವಿಜ್ಞಾನಿಗಳು ನಮ್ಮೊಂದಿಗೆ ಕೆಲಸಮಾಡಲು ಉತ್ಸುಕರಾಗಿದ್ದಾರೆ.
ನಮಗೆ ಯಾವುದೇ ಅಸ್ಮಿತೆಗಳಿಲ್ಲ. ನಿನ್ನೆ ಒಬ್ಬ ಮುಸ್ಲಿಂ ಸತ್ತು ಹೋದ. ನಾವು ಮಣ್ಣುಮಾಡಲು ಹೋಗಿದ್ದೆವು. “ನಿಮಗೆ ಅವರು ಸಂಬಂಧ ಅಂದಿರಿ, ನೀವು ಮುಸ್ಲಿಮರ?” ಅಂತ ನಮ್ಮನ್ನು ಅವರು ಕೇಳಿದರು. ಈ ದೇಶದಲ್ಲಿ ಸೆಪ್ಟಿಕ್ ಟ್ಯಾಂಕ್ ಕ್ಲೀನ್ ಮಾಡುತ್ತಾ ಸತ್ತವರೆಲ್ಲಾ ನಮ್ಮ ಸಂಬಂಧಿಕರೇ ಅಂತ ಉತ್ತರಕೊಟ್ಟೆವು.
ಇಂದಿಗೂ ೧.೬ಲಕ್ಷ ಜನ ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ ಹಾಗು ಒರಿಸ್ಸಾದಲ್ಲಿ ಕೈಯಾರೆ ಮಲಶುಚಿಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರಗಳು ಸತ್ಯವನ್ನು ಒಪ್ಪಿಕೊಳ್ಳುವುದಕ್ಕೆ ತಯಾರಿಲ್ಲ.
ಪೆರುಮಾಳ್ ಮುರುಗನ್: ಒಣ ಕಕ್ಕಸ್ಸುಗಳು ಇದ್ದಾಗ ಮಾತ್ರ ಕೈಯಾರೆ ಮಲಶುಚಿಗೊಳಿಸುತ್ತಿದ್ದರು. ಈಗ ಹಾಗೆ ಕೈಯಲ್ಲಿ ಶುಚಿಮಾಡುವರು ಇಲ್ಲ ಅಂತಲೇ ಬಹುಪಾಲು ಜನ ಇಂದಿಗೂ ನಂಬಿಕೊಂಡಿದ್ದೇವೆ.
ಒಣ ಕಕ್ಕಸ್ಸುಗಳು ಇಂದಿಗೂ ಇವೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ್, ಗುಜರಾತ್, ರಾಜಾಸ್ತಾನ್, ಕಾಶ್ಮೀರ್ ಹಾಗೂ ಉತ್ತರಾಚಲದಲ್ಲಿ ಇಂದಿಗೂ ನೀರಿಲ್ಲದ ಒಣ ಕಕ್ಕಸ್ಸುಗಳು ಇವೆ. ತಲೆಯ ಮೇಲೆ ಮಲಹೊರುವ ಪದ್ಧತಿ ಇಂದಿಗೂ ಇದೆ. ಎಲ್ಲಾ ಕಡೆಯಲ್ಲೂ ಇಲ್ಲ. ಕೆಲವೊಮ್ಮೆ ಬಕೆಟ್ಟುಗಳನ್ನು ಡಾಲ್ಡಾ ತುಪ್ಪದ ಡಬ್ಬಗಳನ್ನು ಮಲತುಂಬಲು ಬಳಸಲಾಗುತ್ತಿದೆ. ನಮಗಿರುವ ಅಂಕಿ ಅಂಶಗಳ ಪ್ರಕಾರ ೧.೬ ಲಕ್ಷ ಜನ ಇಂದಿಗೂ ಆ ಕೆಲಸ ಮಾಡುತ್ತಿದ್ದಾರೆ. ನಮ್ಮ ಅಂಕಿಅಂಶಗಳು ವಾಸ್ತವಕ್ಕೆ ತುಂಬಾ ಹತ್ತಿರವಿದೆ.
ಫ್ಲಷ್ ವ್ಯವಸ್ಥೆ ಜಾರಿಗೆ ಬಂದ ಮೇಲೆ ಪ್ರತಿಮನೆಯಲ್ಲಿ ಒಂದು ಸೆಪ್ಟಿಕ್ ಟ್ಯಾಂಕ್ ಇರುತ್ತದೆ. ಆದರೆ ಅದನ್ನು ಸ್ವಚ್ಛಗೊಳಿಸುವುದಕ್ಕೆ ಮುನಿಸಿಪಾಲಿಟಿಗಳು ಸೂಕ್ತ ಯಂತ್ರಗಳನ್ನು ವ್ಯವಸ್ಥೆಮಾಡಿಕೊಂಡಿಲ್ಲ. ಐದು ಲಕ್ಷ ಜನ ಇರುವ ಕಡೆ ಕನಿಷ್ಟ ೫೦ ಅಂತಹ ಯಂತ್ರಗಳಿರಬೇಕು. ಆದರೆ ಒಂದೋ ಎರಡೋ ಯಂತ್ರಗಳನ್ನು ಇಟ್ಟುಕೊಂಡಿದ್ದಾರೆ. ಶೇಕಡ ೮೦ಕ್ಕಿಂತ ಹೆಚ್ಚು ಮುನಿಸಿಪಾಲಿಟಿಗಳಲ್ಲಿ ಒಂದೂ ಯಂತ್ರಗಳಿಲ್ಲ. ಇಂತಹ ಪ್ರದೇಶಗಳಲ್ಲಿ ಮನುಷ್ಯರೇ ಕೈಯಾರೆ ಅದನ್ನು ಸ್ವಚ್ಛಮಾಡುತ್ತಾರೆ.
ಮೋರಿಯಲ್ಲಿ ಏನಾದರೂ ಸಿಕ್ಕಿಹಾಕಿಕೊಂಡು ಅಡಚನೆಯಾದಾಗ ಸರಿಪಡಿಸುವುದಕ್ಕೆ ಜನರನ್ನು ಒಳಗೆ ಇಳಿಸುತ್ತಾರೆ. ಅಂತ ಹಲವು ಸಂದರ್ಭಗಳಲ್ಲಿ ಜನ ಸಾಯತ್ತಾರೆ. ಇಂತಹ ಘಟನೆಗಳು ಪದೇ ಪದೇ ಆಗುತ್ತಿರುತ್ತದೆ.
ಭಾರತೀಯ ರ‍್ಯಲ್ವೇಯಲ್ಲಿ ೧.೭೪ ಕೋಚುಗಳಲ್ಲಿ ಕಕ್ಕಸ್ಸುಗಳಿವೆ. ಅವು ರೈಲ್ವೆ ಹಳಿಗಳಿಗೆ ತೆರೆದುಕೊಂಡಿರುತ್ತವೆ. ಹಳಿಗಳ ಮೇಲೆ ಬಿದ್ದಿರುವ ಕಕ್ಕಸ್ಸನ್ನು ಮನುಷ್ಯರೇ ಸ್ವಚ್ಛಮಾಡಬೇಕು.
೨೦೧೯ರವೇಳೆಗೆ ೨೧,೦೦೦ ಕಕ್ಕಸ್ಸುಗಳನ್ನು ನಿರ್ಮಿಸುವ ಯೋಜನೆ ಇದೆ. ಕಕ್ಕಸ್ಸನ್ನು ತೆಗೆಯುವುದಕ್ಕೆ ತಂತ್ರಜ್ಞಾನ ಬಳಸಿಕೊಳ್ಳದೇ ಹೋದರೆ, ಸೆಪ್ಟಿಕ್ ಟ್ಯಾಂಕನ್ನು ಶುಚಿಗೊಳಿಸಲು ಅದರೊಳಕ್ಕೆ ಯಾರು ಇಳಿಯಬೇಕು? ಈ ವಿಷಯಗಳನ್ನು ಗಂಭೀರವಾಗಿ ಯೋಚಿಸಬೇಕು.
ಪೆರುಮಾಳ್ ಮುರುಗನ್: ಸರ್ಕಾರಗಳು ಯಂತ್ರಗಳನ್ನು ಯಾಕೆ ಬಳಸುತ್ತಿಲ್ಲ?
ಆ ಕೆಲಸ ಮಾಡುತ್ತಿರುವವರು ಪರಿಶಿಷ್ಟ ಜಾತಿ ಹಾಗೂ ಅಂಚಿಗೆ ತಳ್ಳಿದ ಸಮುದಾಯಕ್ಕೆ ಸೇರಿದವರು. ಅವರ ಧ್ವನಿ ಎಂದೂ ಬಲಹೀನವೇ. ಅವರಿಗೆ ರಾಜಕೀಯ ಪ್ರಭಾವವು ಇರುವುದಿಲ್ಲ. ಯಂತ್ರಗಳನ್ನು ಬಳಸುವುದಕ್ಕೆ ಹಣಬೇಕು. ರಾಜಕಾರಣಿಗಳಿಗೆ ಏನಾದರೂ ಮಾಡಬೇಕಾದರೆ ಹಣ ಸಿಗಬೇಕು ಅಥವಾ ಓಟು ಸಿಗಬೇಕು.
ಅವರಿಗೆ ಈ ತೋಟಿ ಕೆಲಸ ಒಂದು ರಾಷ್ಟ್ರೀಯ ವಿಷಯವಲ್ಲ ಅನ್ನುತ್ತಾರೆ. ಭಾಷಾಪ್ರೇಮವೋ, ರಾಷ್ಟ್ರ ಪ್ರೇಮವೋ ಆದರೆ ಅವು ರಾಷ್ಟ್ರೀಯ ಭಾವನೆಗಳು ಎಣಿಸಿಕೊಳ್ಳುತ್ತವೆ.
ಎರಡನೆಯದಾಗಿ ತೋಟಿಗಳು ಕಕ್ಕಸ್ಸು ಸ್ವಚ್ಛ ಮಾಡುವುದರಲ್ಲಿ ಅವರಿಗೆ ಯಾವ ಸಮಸ್ಯೆಯೂ ಕಾಣುವುದಿಲ್ಲ. ಅದು ಅವರ ಕೆಲಸ, ಅದರಲ್ಲಿ ತಪ್ಪೇನಿದೆ ಅಂತ ಅವರು ಯೋಚಿಸುತ್ತಾರೆ.
ರೈತರು ಗದ್ದೆಯಲ್ಲಿ ಕೆಲಸ ಮಾಡುವ ಹಾಗೆ, ಹೆಂಗಸರು ಮನೆ ಕೆಲಸ ಮಾಡುವ ಹಾಗೆ, ತೊಟ್ಟಿ ಕಕ್ಕಸ್ಸನ್ನು ಸ್ವಚ್ಛಮಾಡುತ್ತಾರೆ. ಇಂತಹ ಮನೋಭಾವ ಆಳವಾಗಿ ಬೇರೂರಿದೆ. ಇದು ನಮಗೆ ಅರ್ಥವಾಗಬೇಕಾದರೆ ಜಾತಿಯ ಭಾವನೆ ಹಾಗೂ ಅತಿರೇಕದ ದೇಶಪ್ರೇಮವನ್ನು ನಮಗೆ ಮೀರಿಕೊಳ್ಳುವುದಕ್ಕೆ ಸಾಧ್ಯವಾಗಬೇಕು. ಆದರೆ ಅವರೆಡು ನಮ್ಮನ್ನು ಆವರಿಸಕೊಂಡು ಬಿಟ್ಟಿವೆ.
೯೦ರ ನಂತರ ದಲಿತ ಚಳುವಳಿಗಳಲ್ಲಿ ಹೊಸ ಅರಿವು ಬಂದಿದೆ. ಈಗ ಅವರು ಇದನ್ನೆಲ್ಲಾ ಗಮನಿಸುತ್ತಿದ್ದಾರಾ? ಅವರ ಕೊಡುಗೆ ಏನು?
ಅರುಂಧತಿಯಾರ್ ತಮ್ಮ ಸಮಸ್ಯೆಗಳನ್ನು ಕುರಿತು ಮಾತನಾಡಬೇಕು. ಪರಿಯಾಗಳು ತಮ್ಮ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಬೇಕು. ಪಲ್ಲರುಗಳು ಅವರ ನೋವನ್ನು ಧ್ವನಿಸಬೇಕು. ದಲಿತ ಚಳುವಳಿಗಳು ತಮ್ಮ ಸಮಸ್ಯೆಗಳನ್ನೂ ಮೀರಿ ಉಳಿದ ಎಲ್ಲರನ್ನೂ ಕಾಡುವ ವಿಷಯಗಳ ಬಗ್ಗೆಯೂ ಮಾತಾಡಬೇಕು ಅಂತ ಜನ ಹೇಳುತ್ತಾರೆ. ಅದೂ ಆಗಿದೆ.
ತಮ್ಮ ದಾರಿಯಲ್ಲಿ ಸಾಗಿದರೆ ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಬಹುದು ಎಂದು ಅಂಬೇಡ್ಕರ್ ಹೇಳಿದ್ದಾರೆ. ನಾವು ನಮ್ಮ ಕಛೇರಿಯಲ್ಲಿ ಅಂಬೇಡ್ಕರ್ ಅವರ ಫೋಟೊಗಳನ್ನು ಹಾಕಿಕೊಂಡಿದ್ದೇವೆ. ಅವರು ರೂಪಿಸಿದ ಸಂವಿಧಾನ ಸ್ವತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವವನ್ನು ಕುರಿತು ಮಾತನಾಡುತ್ತದೆ. ಸ್ವತಂತ್ರ ಇನ್ನೂ ಪ್ರಾರಂಭ ಕೂಡ ಆಗಿಲ್ಲ. ಸಮಾನತೆ ಹಾಗೂ ಬ್ರಾತೃತ್ವಕ್ಕೆ ಇನ್ನೂ ತುಂಬಾ ದೂರ ಸಾಗಬೇಕು. ಇಲ್ಲಿ ಎಲ್ಲರೂ ಹೇಗೆ ಸಮಾನರಾಗಿರುವುದಕ್ಕೆ ಸಾಧ್ಯ? ಕೆಲಸದವಳು ನಮ್ಮೊಂದಿಗೆ ಕುಳಿತು ಹೇಗೆ ಊಟಮಾಡುವುದಕ್ಕೆ ಸಾಧ್ಯ. ನಮ್ಮ ಸಮಾನತೆಯ ಭಾವನೆಯೇ ತುಂಬಾ ಕಳಪೆಯಾದದ್ದು.
ನಮ್ಮಲ್ಲಿ ಬ್ರಾತತ್ವ ಜಾತಿಯೊಳಗಷ್ಟೇ ಸಾಧ್ಯ. ಭಾರತ ಬ್ರಾತತ್ವದ ಸಮಾಜ. ಅದರಲ್ಲಿ ಬ್ರಾಹ್ಮಣ ಸಮಾಜ ಇದೆ. ರೆಡ್ಡಿಗಳ ಸಮಾಜ ಇದೆ. ಮತ್ತು ಒಂದು ದಲಿತ ಸಮಾಜ ಇದೆ. ಪ್ರತಿ ಸಮಾಜದೊಳಗೆ ಬ್ರಾತೃತ್ವದ ಭಾವನೆ ಇದೆ. ಆದರೆ ಅದರಾಚೆಗೆ ಬರುವುದು ಯಾರಿಗೂ ಬೇಡ.
ಭಾರತದಲ್ಲಿ ೬,೪೦,೦೦೦ ಹಳ್ಳಿಗಳಿವೆ. ಜಾತಿಯಿಲ್ಲದ ಯಾವುಂದೂ ಹಳ್ಳಿಗಳಿಲ್ಲ. ಪ್ರತಿಯೊಂದು ಜಾತಿಯವರು ಬೇರೆ ಬೇರೆ ಜಾಗಗಳಲ್ಲಿ ವಾಸಿಸುತ್ತಾರೆ. ಇಂದಿಗೂ ನಾವು ಎಲ್ಲರೂ ಒಟ್ಟಿಗೆ ಬದುಕುವುದಕ್ಕೆ ಬಿಡುತ್ತಿಲ್ಲ. ನಾವೆಲ್ಲ ಒಟ್ಟಾಗಿ ಅಣ್ಣತಮ್ಮ ಅಕ್ಕ ತಂಗಿಯರಲ್ಲ. ಅದು ಸಾಧ್ಯವಾಗಿದ್ದರೆ ಕೈಯಾರೆ ಮಲಶುಚಿಮಾಡುವ ಪದ್ಧತಿ ಅದರಷ್ಟಕ್ಕೆ ಮಾಯವಾಗಿಬಿಡುತ್ತಿತ್ತು.
ಪೆರುಮಾಳ್ ಮುರುಗನ್: ಶೌಚಾಲಯಗಳಿಗೆ ಏಕೆ ತಂತ್ರಜ್ಞಾನವಿಲ್ಲ?
ಕಕ್ಕಸ್ಸು ಸ್ವಚ್ಛಮಾಡುವುದು ದಲಿತರಿಗೆ ಮೀಸಲಾದ ಕೆಲಸ. ಹಾಗಾಗಿ ಆ ಕ್ಷೇತ್ರದಲ್ಲಿ ಬೆಳವಣಿಗೆ ಆಗಿಲ್ಲ. ಮನೆಗೆ ಆಹಾರವನ್ನು ಸರಬರಾಜು ಮಾಡುವುದಕ್ಕೆ ನಮ್ಮಲ್ಲಿ ಆಪ್‌ಗಳು ಸಿಗುತ್ತವೆ. ಮನುಷ್ಯರೇ ನೆರವೇ ಇಲ್ಲದೆ ಮನಗೆ ಸಾಮಾನು ಬಂದು ಬೀಳುತ್ತವೆ. ಆದರೆ ಮಲ ಸ್ವಚ್ಛಮಾಡುವುದಕ್ಕೆ ಅವರಿಗೆ ತಂತ್ರಜ್ಞಾನವನ್ನು ಪತ್ತೆಹಚ್ಚುವುದಕ್ಕೆ ಸಾಧ್ಯವಾಗಿಲ್ಲ. ಈ ತಾರತಮ್ಯಕ್ಕೆ ಜಾತಿಯೇ ಕಾರಣ.
ಇನ್ನೊಂದು ಘೋರ ಅಪರಾಧ ಅಂದರೆ ಈ ವೃತ್ತಿಯನ್ನು ದೈವಿಕರಿಸುವುದು. ಅವರನ್ನು ’ಅಮ್ಮ’ ಅಂತ ಕರೆಯುವುದರ ಮೂಲಕ ಅವರನ್ನು ಶುಚಿಮಾಡುತ್ತಲೇ ಇರಿ ಅನ್ನುತ್ತಿದ್ದೇವೆ. ಗಾಂಧಿ ಹೇಳಿದ್ದೂ ಇದನ್ನೇ. ಮುಂದಿನ ಜನ್ಮದಲ್ಲಿ ತೋಟಿಯಾಗಿ ಹುಟ್ಟುತ್ತೇನೆ ಎಂದು ಅವರು ಹೇಳಿದ್ದರು. ಆದರೆ ನಾವು ಹೇಳುವುದು ಯಾರೂ ತೊಟ್ಟಿಯಾಗಬಾರದು ಅಂತ. ತೋಟಿಯ ಕೆಲಸ ಅದ್ಯಾತ್ಮಿಕವಾದದ್ದು ಎಂದು ನರೇಂದ್ರ ಮೋದಿಯವರೂ ಹೇಳಿದ್ದಾರೆ. ಅದು ಅಂತಹ ದೈವಿಕವಾದ ಅನುಭವವಾದರೆ ನೀವೇ ಯಾಕೆ ಮಾಡಬಾರದು?
ಮಣಿ ಅನ್ನುವವರು ಕೊಯಂಬತ್ತೂರಿನ ಒಬ್ಬ ಚಾಲಕ. ಅವರು ಕಕ್ಕಸ್ಸು ಸಾಗಿಸುವ ಟ್ರಾಕ್ಟರಿನಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ಅವರು ಜುಲೈನಲ್ಲಿ ನಿವೃತ್ತರಾದರು. ನಾನು ಅವರೊಂದಿಗೆ ಮಾತನಾಡಿದಾಗ ಅವರು ಹೇಳಿದರು : ಇದೊಂದು ಘೋರವಾದ ಕೆಲಸ. ಯಾವಾಗ ಬೇಕಾದರು ಸತ್ತು ಹೋಗಬಹುದಿತ್ತು. ಇಷ್ಟೊಂದು ಧೀರ್ಘಕಾಲ ಆ ಕೆಲಸ ಮಾಡಿ ಇನ್ನೂ ಜೀವಂತವಾಗಿದ್ದೇನೆ ಎಂದು ನೆನೆಸಿಕೊಂಡರೆ ಆಶ್ಚರ್ಯವಾಗುತ್ತದೆ. ಜೀವಂತವಾಗಿ ಹೊರಗೆ ಬಂದಿದ್ದೇನೆ. ಈ ಕೆಲಸವನ್ನು ಮಾತ್ರ ಯಾರೂ ಮಾಡಬಾರದು. ನಾನು ಎಂದಿಗೂ ಮತ್ತೆ ತೋಟಿಯಾಗಿ ಹುಟ್ಟಲು ಬಯಸುವುದಿಲ್ಲ.”
ಯಾವುದೇ ರಂಗ ತೆಗೆದುಕೊಳ್ಳಿ, ವ್ಯಾಪಕವಾದ ಸಂಶೋಧನೆಗಳಾಗಿವೆ. ಆದರೆ ಶೌಚಾಲಯಕ್ಕೆ ಸಂಬಂಧಿಸಿದಂತೆ ಮಾತ್ರ ಯಾವುದೇ ಸಂಶೋಧನೆಯೂ ಆಗಿಲ್ಲ. ನಾವು ೧೩೦ ಕೋಟಿ ಜನ ಇದ್ದೇವೆ. ಪ್ರತಿದಿನ ನಾವು ಕಕ್ಕಸ್ಸು ಮಾಡುತ್ತೇವೆ. ಅದನ್ನು ಸ್ವಚ್ಛಮಾಡುವುದಕ್ಕೇ ಒಂದು ಜಾತಿ ಇದೆ. ಅದರ ಬಗ್ಗೆ ನಾವು ಯೋಚಿಸುವುದೂ ಇಲ್ಲ.
ಪೆರುಮಾಳ್ ಮುರುಗನ್: ನಿಮಗೆ ರಾಮೋನ್ ಮ್ಯಾಗ್‌ಸೆಸೆ ಪ್ರಶಸ್ತಿ ಬಂದಿದೆ. ಅದರ ಬಗ್ಗೆ ಹೇಳಿ.
ಅದು ತುಂಬಾ ಕಷ್ಟ. ನನಗೆ ತುಂಬಾ ಕಳವಳವಾಯಿತು. ನನಗೆ ಏನು ಮಾಡಬೇಕು ಅಂತ ಗೊತ್ತಾಗಲಿಲ್ಲ. ಅದಕ್ಕೆ ಮೊದಲು ಹಲವರಿಗೆ ಆ ಪ್ರಶಸ್ತಿ ಸಿಕ್ಕಿದೆ, ನಿಜ. ನಾನು ಸರ್ಕಾರ ಕೊಟ್ಟ ಪ್ರಶಸ್ತಿಗಳನ್ನೂ ಸೇರಿದಂತೆ ಹಲವು ಪ್ರಶಸ್ತಿಗಳನ್ನು ತಿರಸ್ಕರಿಸಿದ್ದೇನೆ. ನಾನು ಕೇವಲ ಒಬ್ಬ ಪ್ರತಿನಿಧಿ. ನಾನು ನನ್ನ ಜೊತೆ ಕೆಲಸಮಾಡುವವರನ್ನು ಬಿಟ್ಟು ಎಲ್ಲೂ ಹೋಗುವುದಿಲ್ಲ.
ಉತ್ತರಭಾರತದಲ್ಲಿ ಒಂದು ಲಕ್ಷ ತೊಟ್ಟಿಗಳು ಆ ಕೆಲಸವನ್ನು ಬಿಡುವುದಾಗಿ ಘೋಷಿಸಿದರು. ಅದಕ್ಕೆ ಪರ್ಯಾಯವಾಗಿ ಬೇರೆ ಕೆಲಸ ಹಾಗೂ ಪರಿಹಾರವನ್ನು ಕೊಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು. ರಾಜಸ್ತಾನದಲ್ಲಿ ಕೂಡ ಜನ ತಮ್ಮ ವೃತ್ತಿಯನ್ನು ಬಿಟ್ಟರು. ನಾನು ಅವರನ್ನು ಕಂಡು, ನೀವು ದೈರ್ಯವಂತರು ಅಂತ ಹೇಳಿದೆ. ನನಗೆ ನಿಮ್ಮ ಭಾಷೆ ಮಾತನಾಡುವುದಕ್ಕೆ ಬರುವುದಿಲ್ಲ. ಆದರೆ ನಿಮ್ಮ ನಿರ್ಧಾರದಿಂದ ನನಗೆ ಖುಷಿಯಾಗಿದೆ ಎಂದು ತಿಳಿಸಿದೆ. ಯಾರಿಗಾದರೂ ಪ್ರಶಸ್ತಿ ಕೊಡುವುದಾದರೆ ಅವರಿಗೆ ಅದು ಸಲ್ಲಬೇಕು. ಆ ವೃತ್ತಿಯನ್ನು ಬಿಟ್ಟು ಹೊರನಡೆದವರಿಗೆ ಅದು ಸಿಗಬೇಕು. ನಾನು ಆ ಸಾಲಿನಲ್ಲಿ ಕಡೆಯವನು. ಅವರು ನಿಜಕ್ಕೂ ಅದಕ್ಕೆ ಅರ್ಹರು.

Recommended Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.