ರಂಗಸಂಗೀತದ ಇತಿಹಾಸ ಒಂದು ಪಕ್ಷಿನೋಟ -ಶೈಲಜಾ

 In RAGAMALA
 
ರಂಗಸಂಗೀತದ ಇತಿಹಾಸ ಎನ್ನುವುದು ಒಂದರ್ಥದಲ್ಲಿ ಇಡೀ ನಾಡಿನ ಚರಿತ್ರೆಯನ್ನು ಸುಮಾರಾಗಿ ಕಟ್ಟುವುದಕ್ಕೆ ಸಾಧ್ಯವಿರುವ ಒಂದು ಐತಿಹಾಸಿಕ ಆಕರ ಎಂದರೆ ಅತಿಶಯೋಕ್ತಿಯಲ್ಲ. ರಂಗಸಂಗೀತದ ಚರಿತ್ರೆಯ ಅಧ್ಯಯನ ರಂಗಭೂಮಿಯಲ್ಲಿ ಸಂಗೀತದ ಬಳಕೆ ಕುರಿತು ಆದಂತಹ ಬದಲಾವಣೆಗಳ ಮೇಲೆ ಬೆಳಕು ಚೆಲ್ಲುತ್ತವೆ. ಹಾಗೆಯೇ ಆಯಾ ಕಾಲಘಟ್ಟದ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಆಗುಹೋಗುಗಳು, ಕನ್ನಡ ಜನರ ಒಟ್ಟು ಮನಃಸ್ಥಿತಿ, ಸಾಂಸ್ಕೃತಿಕ ಕೊಡುಕೊಳೆ, ಜನರ ಅಭಿರುಚಿಯಲ್ಲಿ ಆಗಿರುವ ಬದಲಾವಣೆಗಳು, ಮುಂತಾದವುಗಳ ಒಂದು ಸೂಕ್ಷ್ಮಚಿತ್ರಣವೂ ದೊರೆ ಯುತ್ತವೆ.
 
ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವಿದೆ. ಕರ್ನಾಟಕದ ಒಳಗೇ ರಂಗಸಂಗೀತದ ಬೆಳವಣಿಗೆ, ಅದರ ಮೇಲಾದ ಪ್ರಭಾವಗಳು ಮತ್ತು ಅದರಲ್ಲಾದ ಮಾರ್ಪಾಡುಗಳಲ್ಲಿ ಸಾಕಷ್ಟು ವಿಭಿನ್ನತೆ ಇತ್ತು. ಅರಸರ ಆಶ್ರಯದಲ್ಲಿದ್ದ ಹಳೇ ಮೈಸೂರು ಪ್ರಾಂತ್ಯ, ಮಹಾ ರಾಷ್ಟ್ರಕ್ಕೆ ಒತ್ತಿಕೊಂಡಂತಿದ್ದ ಉತ್ತರಕರ್ನಾಟಕ ಮತ್ತು ಕೇರಳಕ್ಕೆ ತಾಗಿಕೊಂಡಂತಿದ್ದ ದಕ್ಷಿಣ ಕನ್ನಡ ಇವುಗಳಲ್ಲಿ ಆದ ಬದಲಾವಣೆಗಳಲ್ಲಿ ಸಾಕಷ್ಟು ವಿಭಿನ್ನತೆ ಇದೆ. ಕರ್ನಾಟಕದ ಒಳಗೆ ಕರ್ನಾಟಕ ಮತ್ತು ಹಿಂದುಸ್ತಾನಿ ಸಂಗೀತ ಇವುಗಳ ಪಾರಮ್ಯ ಮತ್ತು ಹರಡುವಿಕೆಯಲ್ಲಿ ಆದ ಬದಲಾವಣೆಯೂ ಸ್ವಲ್ಪ ಮಟ್ಟಿಗೆ ಅರ್ಥವಾಗು ತ್ತದೆ. ಹೆಣ್ಣುಮಕ್ಕಳು ನಾಟಕರಂಗಕ್ಕೆ ಕಾಲಿಟ್ಟಿದ್ದು ಮತ್ತು ಅವರ ಕೊಡುಗೆಯ ಒಂದು ಇಣುಕು ನೋಟವೂ ದಕ್ಕುತ್ತದೆ. ಕನ್ನಡ ಮತ್ತು ಮರಾಠಿ ರಂಗಸಂಗೀತದ ಕೊಡುಕೊಳೆಯನ್ನು ಗಮನಿಸು ವಾಗ ಸಾರ್ವಜನಿಕ ನೆನಪು ಎನ್ನುವುದು ಎಷ್ಟು ಬೇಗ ವಿಸ್ಮೃತಿಗೆ ಸರಿದುಬಿಡುತ್ತದೆ, ಹಾಗಾಗಿ ಇತಿಹಾಸ ಕಟ್ಟುವುದು ಎಷ್ಟು ಕಠಿಣವಾದ ಕೆಲಸ ಎನ್ನುವುದೂ ಅರಿವಾಗುತ್ತದೆ. ರಂಗಗೀತೆಗಳಿಗೆ ಮಾಡುತ್ತಿದ್ದ ರಾಗಸಂಯೋಜನೆಯನ್ನು ಸೂಕ್ಷ್ಮ್ತವಾಗಿ ಗಮನಿಸಿದರೆ ಅದರಲ್ಲಿಯೇ ವಸಾಹಾತು ವಿರುದ್ಧದ ಧೋರಣೆ ಯೂ ಕಾಣಿಸುತ್ತದೆ. ಸಂಪೂರ್ಣ ರಾಮಾಯಣ ಮುಂತಾದ ನಾಟಕಗಳಲ್ಲಿ ರಾಮಲಕ್ಷ್ಮಣ ಮತ್ತು ಸೀತೆ ಉತ್ತರಾದಿ ಪದ್ಧತಿಯಲ್ಲಿ ಹಾಡುತ್ತಿದ್ದರು. ಹನುಮಂತ ಮಾತ್ರ ದಕ್ಷಿಣಾದಿ ಪದ್ಧತಿಯಲ್ಲಿ ಹಾಡುತ್ತಿದ್ದ. ಆದರೆ ರಾವಣನ ಆಸ್ಥಾನದ ರಾಕ್ಷಸಗಣ ಗಳೆಲ್ಲವೂ ಶೂರ ಧೀರ ರಾವಣಾಸುರ ಎಂಬುದಾಗಿ ಇಂಗ್ಲಿಷ್ ಬ್ಯಾಂಡ್ ಮಟ್ಟಿನಲ್ಲಿ ಹಾಡುತ್ತಿದ್ದರು.
 
ರಂಗಭೂಮಿಯ ಪ್ರಮುಖ ಪ್ರಕಾರಗಳು ಜನಪದ ರಂಗಭೂಮಿ, ಯಕ್ಷಗಾನ, ಮೂಡಲ ಪಾಯ, ಸಣ್ಣಾಟ, ಪಾರಿಜಾತ, ಶ್ರೀಕೃಷ್ಣ ಪಾರಿಜಾತ. ಸಂಗೀತವು ಇವೆಲ್ಲದರ ಅವಿಭಾಜ್ಯ ಅಂಗವಾಗಿಯೇ ಬೆಳೆದಿದೆ. ಜನಪದ ರಂಗಭೂಮಿಯ ಶ್ರೇಷ್ಠ ಪ್ರಕಾರಗಳೆನಿಸಿರುವ ಮೂಡಲಪಾಯ ಮತ್ತು ಯಕ್ಷಗಾನಗಳು ಮೂಲತಃ ಸಂಗೀತ ಶೈಲಿಗಳು. ಕ್ರಮೇಣ ರಂಗಾಂಶವನ್ನು ಸೇರಿಸಿಕೊಂಡು ಅವು ರಂಗಕಲೆಯಾದವು. ಲಾವಣಿ, ಸಂಗೀತ, ಡಪ್ಪು ವಾದ್ಯವನ್ನು ಬಿಟ್ಟರೆ ಸಣ್ಣಾಟಗಳಿಗೆ ಆಕರ್ಷಣೆಯೇ ಇಲ್ಲ. ಇನ್ನು ಹತ್ತೊಂಬತ್ತು, ಇಪ್ಪತ್ತನೆಯ ಶತಮಾನಕ್ಕೆ ಬಂದರೆ ಆಗಿನ ನಾಟಕ ಕಂಪನಿಗಳನ್ನು ಸಂಗೀತ ನಾಟಕ ಮಂಡಳಿಗಳೆಂದೇ ಕರೆಯುತ್ತಿದ್ದರು. ಹಾಡುವುದೇ ನಾಟಕ ಮತ್ತು ಹಾಡು ಬಲ್ಲವನೇ ನಟ ಎಂಬ ವಾತಾವಣವಿತ್ತು.
 
ವೃತ್ತಿರಂಗಭೂಮಿ ಮೊದಲು ಪ್ರಾರಂಭವಾದದ್ದು ಉತ್ತರ ಕರ್ನಾಟಕದಲ್ಲಿ. ೧೮೬೯ರಲ್ಲಿ ಹಲಸಂಗಿ ಸಂಗೀತ ನಾಟಕ ಮಂಡಳಿ ಅಸ್ತಿತ್ವಕ್ಕೆ ಬಂದಿತು. ೧೮೭೭ರಲ್ಲಿ ಶಾಂತಕವಿಗಳ ನೇತೃತ್ವದಲ್ಲಿ ಶ್ರೀವೀರ ನಾರಾಯಣ ಪ್ರಾಸಾದಿಕ ಕೃತಪುರ ನಾಟಕ ಮಂಡಳಿ ಜನ್ಮ ತಳೆಯಿತು. ಅದು ಮುಖ್ಯವಾಗಿ ಜನ್ಮ ತಳೆದದ್ದು ನಮ್ಮ ಭಾಷೆಯಲ್ಲಿ ಏನಿದೆ ಎಂಬ ತಾತ್ಸಾರವನ್ನು ಹೋಗಲಾಡಿಸಲು. ಇಂದಿಗೆ ಸುಮಾರು ೧೪೦ ವರ್ಷಕ್ಕೆ ಹಿಂದೆಯೂ ಕರ್ನಾಟಕದಲ್ಲಿ ತಮ್ಮ ಭಾಷೆ, ನೆಲ, ಜಲ, ಇವುಗಳ ಒಗ್ಗೆ ಒಂದು ಬಗೆಯ ಅಭಿಮಾನ್ಯಶೂನ್ಯತೆ ಇತ್ತು. ಕನ್ನಡ ರಂಗಭೂಮಿಯ ಪ್ರಭಾವದಿಂದಲೇ ರೂಪುಗೊಂಡ ಮರಾಠಿ ರಂಗ ಭೂಮಿ ಅನುಕರಣೀಯವೆನಿಸಿತ್ತು.
 
೧೮೪೨ರಲ್ಲಿ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕರ್ಕಿಯ ಯಕ್ಷಗಾನ ಮೇಳವು ಮಹಾರಾಷ್ಟ್ರದ ಸಾಂಗ್ಲಿಯ ಸಂಸ್ಥಾನಿಕರಾದ ಅಪ್ಪಾಸಾಹೇಬ ಪಟವರ್ಧನ್ ಅವರ ಆಹ್ವಾನದ ಮೇರೆಗೆ ಅಲ್ಲಿಗೆ ಹೋಗಿ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಿತು. ಅಲ್ಲಿಯವರು ಅದರಿಂದ ತುಂಬಾ ಪ್ರಭಾವಿತರಾದರು. ಮರಾಠಿಯಲ್ಲೂ ಇಂತಹ ಪ್ರಯೋಗಗಳು ಆಗಬೇಕೆಂದು ಬಯಸಿದರು. ಆಗ ಅವರಲ್ಲಿ ಕೆಲಸ ಮಾಡುತ್ತಿದ್ದ ವಿಷ್ಣುದಾಸ ಭಾವೆಯವರು ಸೀತಾ ಸ್ವಯಂವರ ಎಂಬ ನಾಟಕವನ್ನು ರಚಿಸಿದರು. ಒಂದು ನಾಟಕ ಕಂಪನಿಯೂ ಅಸ್ತಿತ್ವಕ್ಕೆ ಬಂದಿತು. ಈ ಕಂಪನಿ ಯಕ್ಷಗಾನದ ಒಂದು ಸುಧಾರಿತ ಬೆಳವಣಿಗೆ ಯಾಗಿತ್ತು. ಈ ನಾಟಕ ಕಂಪನಿಯು ಕರ್ನಾಟಕ ದಲ್ಲಿಯೂ ಸಂಚರಿಸಿತು. ಮಹಾರಾಷ್ಟ್ರದ ರಂಗ ಭೂಮಿಗೆ ಕರ್ನಾಟಕ ಪ್ರೇರಣೆ ನೀಡಿತು ಆದರೆ ಅದನ್ನು ಅರಿಯದೆ ಕರ್ನಾಟಕದ ವೃತ್ತಿ ರಂಗಭೂಮಿ ಮರಾಠಿ ರಂಗಭೂಮಿಯನ್ನು ಅನುಕರಿಸಿತು. ಇದನ್ನು ಕಂಡ ಶಾಂತಕವಿಗಳು ಸ್ವತಃ ನಾಟಕಗಳನ್ನು ರಚಿಸಿ, ಕಂಪನಿಯನ್ನು ನಿರ್ಮಿಸಿ, ಕನ್ನಡತನವನ್ನು ಉಳಿಸಲು ಪ್ರಯತ್ನಿಸಿದರು. ಶಾಂತಕವಿಗಳೊಂದಿಗೆ ಡಂಬಳ ಹುಚ್ಚಾಚಾರ್ಯ, ಗುಡಿ ರಾಘವೇಂದ್ರಾಚಾರ್ಯ, ಬದಾಮಿ ಪುಟ್ಟಾಚಾರ್ಯ, ಕೊಣ್ಣೂರ ಜೀವೂ ಬಾಳಪ್ಪ, ನಾಗೇಶ ಭಟ್ಟ, ಮತ್ತು ತಮ್ಮಣ್ಣ ಭಟ್ಟ ಮೊದಲಾದವರು ರಂಗಭೂಮಿಯಲ್ಲಿ ಕ್ರಿಯಾಶೀಲ ರಾಗಿ ತೊಡಗಿಕೊಂಡರು.
 
ಆದರೂ ನಂತರದ ಕಂಪನಿಗಳು ಮರಾಠಿ ಕಂಪನಿಗಳ ಅನುಕರಣೆಯನ್ನು ಮತ್ತು ಮರಾಠಿಯಿಂದ ಕನ್ನಡಿಸುವುದನ್ನು ಬಿಡಲಿಲ್ಲ. ಕರ್ನಾಟಕದ ಜಾನಪದ ಮತ್ತು ಶಾಸ್ತ್ರೀಯ ಸಂಗೀತವನ್ನು ಆಧರಿಸಿ ರೂಪುಗೊಂಡು, ಜನಪ್ರಿಯವಾಗಿದ್ದ ಮರಾಠಿ ರಂಗಗೀತೆಗಳು ಮತ್ತು ಸಂಗೀತವನ್ನು ಕನ್ನಡ ಜನ ಅನುಕರಿಸುತ್ತಿದ್ದರು. ಅವರ ಅಜ್ಞಾನದ ತೀವ್ರತೆ ಎಷ್ಟಿತ್ತೆಂದರೆ, ಆ ರಂಗಗೀತೆಗಳು ಮೂಲತಃ ಕರ್ನಾಟಕದ್ದು ಎನ್ನುವುದು ಕೂಡ ಅವರಿಗೆ ತಿಳಿದಿರಲಿಲ್ಲ. ಆದರೆ ಮರಾಠಿಗರು ನಿಷ್ಠೆಯಿಂದ ಅದು ಕರ್ನಾಟಕದ್ದು ಎಂದು ಪ್ರತಿಹಾಡಿನ ಮೂಲಪ್ರತಿಯ ಮೇಲೆಯೂ ನಮೂದಿಸಿದ್ದರು.
೧೯೦೧ರಲ್ಲಿ ಕಾಡಸಿದ್ಧೇಶ್ವರ ಸಂಗೀತ ನಾಟಕ ಮಂಡಳಿ ಪ್ರಾರಂಭವಾಯಿತು. ಇದು ಕೊಣ್ಣೂರು ಕಂಪನಿಯೆಂದು ಪ್ರಸಿದ್ಧವಾಯಿತು. ೧೯೦೪ ಶಿರಹಟ್ಟಿ ವೆಂಕೋಬರಾಯರು ಮಹಾಲಕ್ಷ್ಮಿ ಪ್ರಾಸಾದಿತ ಸಂಗೀತ ನಾಟಕ ಮಂಡಳಿ ಪ್ರಾರಂಭಿಸಿದರು. ೧೯೧೩ರಲ್ಲಿ ವಾಮನರಾವ್ ಕುಲಕರ್ಣಿಯವರು ವಿಶ್ವಗುಣಾದರ್ಶ ಸಂಗೀತ ನಾಟಕ ಮಂಡಳಿಯನ್ನು ಪ್ರಾರಂಭಿಸಿದರು. ೧೯೧೯ರಲ್ಲಿ ಗರೂಡ ಸದಾಶಿವರಾಯರು ಶ್ರೀ ದತ್ತಾತ್ರೇಯ ಸಂಗೀತ ನಾಟಕ ಮಂಡಳಿ ಪ್ರಾರಂಭಿಸಿದರು. ೧೯೨೨ರಲ್ಲಿ ಕ್ಷ್ಮೇಶ್ವರದ ಬಚ್ಚಾಸಾನಿ ಕೇವಲ ಸ್ತ್ರೀಯರನ್ನೇ ಒಳಗೊಂಡ ಸ್ತ್ರೀ ಸಂಗೀತ ನಾಟಕ ಮಂಡಳಿಯನ್ನು ಪ್ರಾರಂಭಿಸಿದ ಸಾಹಸಕ್ಕೆ ಎಳೆಸಿದರು. ಇವೆಲ್ಲಾ ಕಂಪನಿಗಳೂ ಸಂಗೀತದಲ್ಲಿ ಹಲವು ಪ್ರಯೋಗಗಳನ್ನು ಮಾಡಿ ಅದನ್ನು ರಂಜನೀಯವಾಗಿಸಿದವು. ಯರಾಶಿ ಭರಮಪ್ಪನವರು ಕನ್ನಡ ನಾಟಕಗಳಲ್ಲಿ ಮೊದಲ ಬಾರಿಗೆ ಆರ್ಗನ್ ಹಾಗೂ ಸಾರಂಗಿಗಳನ್ನು ಬಳಸಿದರು.
 
ಕನ್ನಡ ವೃತ್ತಿರಂಗಭೂಮಿಯ ಆರಂಭದ ದಿನಗಳಲ್ಲಿ ಕನ್ನಡ ಭಾಷಾ ಪ್ರಾಂತ್ಯದಲ್ಲಿ ಎಲ್ಲೆಡೆ ಕರ್ನಾಟಕ ಸಂಗೀತವೇ ಇತ್ತು. ಆದರೆ ಕ್ರಮೇಣ ಉತ್ತರ ಕರ್ನಾಟಕದಲ್ಲಿ ಕರ್ನಾಟಕ ಸಂಗೀತ ಕಡಿಮೆಯಾಗುತ್ತಾ, ಹಿಂದುಸ್ತಾನಿ ಸಂಗೀತದ ಪಾರಮ್ಯ ಹೆಚ್ಚಾಯಿತು. ಉತ್ತರ ಕರ್ನಾಟಕವು ಹಿಂದುಸ್ತಾನಿ ಸಂಗೀತ ಪದ್ಧತಿಯ ಪ್ರಭಾವಕ್ಕೆ ಒಳಗಾಯಿತು. ಖ್ಯಾತ ಹಿಂದುಸ್ತಾನಿ ಗಾಯಕ ಭಾಸ್ಕರ ಬುವಾ ಬಖಲೆ ಧಾರವಾಡ ಟ್ರೇನಿಂಗ್ ಕಾಲೇಜಿನಲ್ಲಿ ಸಂಗೀತ ಶಿಕ್ಷಕರಾಗಿದ್ದರು. ಇತ್ತ ಕುಂದಗೋಳದಲ್ಲಿ ಸವಾಯಿ ಗಂಧರ್ವರು, ಅತ್ತ ಬೆಳಗಾವಿಯಲ್ಲಿ ರಾಮಕೃಷ್ಣ ಬುವಾ ವಝೇ ಹೀಗೆ ಈ ಶತಮಾನದ ಆರಂಭದಲ್ಲಿಯೇ ಉತ್ತರ ಕರ್ನಾಟಕವು ಹಿಂದುಸ್ತಾನಿ ಗಾಯಕರಿಂದ ಆವೃತವಾಗಿತ್ತು. ಆಗಾಗ ಮೈಸೂರು ದಸರಾ ಕಾರ್ಯಕ್ರಮಕ್ಕೆ ಬರುತ್ತಿದ್ದ ಅಬ್ದುಲ್ ಕರೀಂ ಖಾನ್ ಸಾಹೇಬರು ಮುಂತಾದವರು ಧಾರವಾಡ ದಲ್ಲಿ ಉಳಿದು, ಜಲಸಾ ಮುಗಿಸಿಕೊಂಡು ಹೋಗು ತ್ತಿದ್ದರು. ಸ್ವಾಭಾವಿಕವಾಗಿಯೇ ರಂಗಸಂಗೀತವೂ ಹಿಂದುಸ್ತಾನಿಯನ್ನೇ ಅನುಸರಿಸಿತು.
 
ಇನ್ನು ಒಂದೇ ಸಮನೆ ನುಗ್ಗುತ್ತಿದ್ದ ಮರಾಠಿ ಸಂಗೀತ ನಾಟಕ ಕಂಪನಿಗಳ ಹಾಡುಗಾರಿಕೆಯೂ ಅಲ್ಲಿನ ಕಿವಿಗಳಿಗೆ ಹಿಂದುಸ್ತಾನಿಯ ಚಟ ಹತ್ತಿಸಿತು. ಜೊತೆಗೆ ಇತ್ತ ಕಡೆಗೆ ಬಂದಿದ್ದ ಮರಾಠಿ ಅಧಿಕಾರಸ್ಥರು ಹಿಂದುಸ್ತಾನಿ ಗಾಯನದ ಪ್ರಸಾರಕ್ಕಾಗಿ ಹೆಣಗಿದ್ದೂ ಉಂಟು. ಇವುಗಳಿಂದ ಗಾನಸೌಂದರ್ಯಕ್ಕೆ ಕನ್ನಡಿಗರನ್ನೂ, ಕರ್ನಾಟಕ ಸಂಗೀತವನ್ನೂ ಮರಾಠಿ ಗರು ಆಶ್ರಯಿಸುತ್ತಿದ್ದ ಕಾಲ ಮರೆಯಾಗಿ ಕನ್ನಡಿಗರೇ ಮರಾಠಿಗರನ್ನು ಆಶ್ರಯಿಸುವಂತಾಯಿತು.
 
ಮರಾಠಿ ವಾತಾವರಣದಿಂದ ಬಂದ ರಾಮಚಂದ್ರ ಸಾವಂತ ಕನ್ನಡ ಪಾರಿಜಾತ ರಂಗಭೂಮಿಗೆ ಉತ್ತರಾದಿ ಸಂಗೀತವನ್ನು ಚೆನ್ನಾಗಿ ಪರಿಚಯಿಸಿದರು. ತಮ್ಮ ಪ್ರೇಕ್ಷಕರಿಗೆ ಹೊಸರುಚಿ ಸಿಗುತ್ತದೆ ಎಂದು ತಿಳಿದ ಕೌಜಲಗಿ ನಿಂಗವ್ವ ಇದಕ್ಕೆ ತಡೆಹಾಕದೆ ಸಾವಂತರಿಗೆ ಉತ್ತೇಜನ ನೀಡಿದಳು. ತನ್ನ ಕಂಪನಿ ಬೆಳೆದರೆ ಸಾಕೆನ್ನುವ ವ್ಯಾವಹಾರಿಕ ರೀತಿಯನ್ನು ಅನುಸರಿಸಿದಳು. ಆದರೆ ಸ್ವತಃ ಅವಳು ಕರ್ನಾಟಕಿ ಪದ್ಧತಿಯಲ್ಲಿಯೇ ಹಾಡುತ್ತಿದ್ದಳು. ಮುದವೀಡು ಕೃಷ್ಣರಾಯರು ಹೇಳುವಂತೆ ಆ ಕಾಲಕ್ಕೆ ಉತ್ತರ ಕರ್ನಾಟಕದಲ್ಲಿ ಕರ್ನಾಟಕ ಸಂಗೀತಕ್ಕೊಂದು ಶಕ್ತಿ ಕೊಡಬೇಕೆಂದು ಯತ್ನಿಸುತ್ತಿದ್ದ ಚಿಮ್ಮಲಗಿ ವೆಂಕಣ್ಣನವರ ಅಪಮೃತ್ಯುವಿನಿಂದ ಕರ್ನಾಟಕ ಸಂಗೀತ ಪರದೇಶಿಯಾಯಿತು.
 
ಮೈಸೂರಿನ ರಂಗಭೂಮಿಗೂ ಮತ್ತು ಉತ್ತರ ಕರ್ನಾಟಕದ ರಂಗಭೂಮಿಗೂ ಒಂದು ಮೂಲ ಭೂತ ವ್ಯತ್ಯಾಸವಿತ್ತು. ಉತ್ತರ ಕರ್ನಾಟಕದ ಜನರು ಕನ್ನಡವನ್ನು ಉಳಿಸಿಕೊಳ್ಳಲು ಹೋರಾಡಿ ಹೆಣಗಾಡ ಬೇಕಿತ್ತು. ಆದರೆ ಮೈಸೂರಿನ ಜನರಿಗೆ ಆ ಸಮಸ್ಯೆ ಇರಲಿಲ್ಲ. ಮೈಸೂರಿನ ಅರಸೊತ್ತಿಗೆಯೇ ಕನ್ನಡವನ್ನು ಉಳಿಸಿತು. ಒಳ್ಳೆಯ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿ, ಪಠ್ಯದಲ್ಲಿ ಸೇರಿಸಲಾಯಿತು. ಎಲ್ಲಾ ಮಿತಿಗಳ ನಡುವೆಯೂ ಈ ಎಲ್ಲಾ ಕಂಪನಿಗಳು ಕರ್ನಾಟಕದಲ್ಲಿ ಕನ್ನಡ ಪ್ರಜ್ಞೆಯನ್ನು ವ್ಯಾಪಕವಾಗಿ ಮೂಡಿಸಿದವು ಎನ್ನುವುದು ಗಮನಾರ್ಹ.
 
ಆರಂಭದಲ್ಲಿ ನಾಟಕದ ಕಂಪನಿಗಳ ಹೆಚ್ಚಿನ ನಟರು ಖ್ಯಾತ ಗಾಯಕರಾಗಿದ್ದರು. ಉತ್ತರ ಕರ್ನಾಟಕದಲ್ಲಿ ಹಿಂದುಸ್ತಾನಿ ಸಂಗೀತಗಾರರ ಒಡನಾಟ ಕಂಪನಿಗಳ ಜೊತೆಗಿತ್ತು. ಬಸವರಾಜ ಮನ್ಸೂರ್, ಮಲ್ಲಿಕಾರ್ಜುನ ಮನ್ಸೂರ್, ಬಸವರಾಜ ರಾಜಗುರು, ಮೃತ್ಯುಂಜಯಸ್ವಾಮಿ ಪುರಾಣಿಕಮಠ, ಚಂದ್ರಶೇಖರ ಪುರಾಣಿಕಮಠ, ಅಮೀರ್‌ಬಾಯಿ ಕರ್ನಾಟಕಿ, ಗೋಹರ್‌ಬಾಯಿ ಕರ್ನಾಟಕಿ, ಗುಳೇದ ಗುಡ್ಡ ಗಂಗೂಬಾಯಿ, ಗುರುರಾವ್ ದೇಶಪಾಂಡೆ, ನೀಲಕಂಠ ಬುವಾ ಗಾಡಗೋಳಿ, ಮುಂತಾದ ಹಿರಿಯರೆಲ್ಲರೂ ನಾಟಕ ಕಂಪನಿಗಳಲ್ಲಿಯೇ ತಮ್ಮ ಪ್ರಾರಂಭಿಕ ಸಂಗೀತ ಪಾಠವನ್ನು ಕಲಿತರು. ಅಬ್ದುಲ್ ಕರೀಂ ಖಾನ್ ಸಾಹೇಬರು, ಸವಾಯಿ ಗಂಧರ್ವ, ಭೀಮಸೇನ ಜೋಶಿ ಅವರೆಲ್ಲರೂ ತಮ್ಮ ಶಾಸ್ತ್ರೀಯ ಸಂಗೀತ ಕಚೇರಿಗಳಲ್ಲಿ ನಾಟ್ಯ ಸಂಗೀತವನ್ನು ಹಾಡುತ್ತಿದ್ದರು. ಹಲವೊಮ್ಮೆ ನಾಟ್ಯಸಂಗೀತವನ್ನು ರಚಿಸಿ ಕಂಪನಿಗಳಿಗೆ ಕೊಟ್ಟಿದ್ದರು. ಇನ್ನು ಹಳೇ ಮೈಸೂರು ಪ್ರಾಂತ್ಯದಲ್ಲಿ ಬಿಡಾರಂ ಕೃಷ್ಣಪ್ಪನವರು, ಚಿಕ್ಕರಾಮರಾಯರು, ಬೆಳಕವಾಡಿ ಶ್ರೀನಿವಾಸ ಅಯ್ಯಂಗಾರ್ಯರು, ಎ ವಿ ವರದಾಚಾರ್ಯರು, ಮಳವಳ್ಳಿ ಸುಂದರಮ್ಮ, ಮಳವಳ್ಳಿ ಸುಬ್ಬಣ್ಣ ಮುಂತಾದ ಖ್ಯಾತ ಸಂಗೀತಗಾರರು ನಾಟಕ ಕಂಪನಿಯಲ್ಲಿ ನಟರಾಗಿದ್ದರು.
ಮರಾಠಿ ರಂಗಭೂಮಿಗೆ ಹೋಲಿಸಿದರೆ ದಕ್ಷಿಣ ಭಾರತದ ರಂಗಭೂಮಿಗೆ ಮಹಿಳೆಯರ ಪ್ರವೇಶ ೧೯ನೇ ಶತಮಾನದ ಕೊನೆಯಲ್ಲೇ ಶುರುವಾಯಿತು. ಕನ್ನಡದಲ್ಲಿ ವೃತ್ತಿರಂಗಭೂಮಿ ಪ್ರವೇಶಿಸಿದ ಮೊದಲ ಗಾಯಕನಟಿ ಕೊಣ್ಣೂರು ಕಂಪನಿಯ ಎಲ್ಲೂ ಬಾಯಿ ಗುಳೇದಗುಡ್ಡ (೧೯೦೧) ಎನ್ನುತ್ತಾರೆ. ೧೯೦೪ರಲ್ಲಿ ರುದ್ರಾಸಾನಿಯವರು ಗುಬ್ಬಿ ಕಂಪನಿ ಪ್ರವೇಶಿಸಿದರು. ನಂತರದಲ್ಲಿ ಲಕ್ಷ್ಮೇಶ್ವರದ ಮರ್ದಾನ್ ಜಾನ್, ಲಕ್ಷ್ಮೇಶ್ವರದ ಬಚ್ಚಾಸಾನಿ, ಸುಶೀಲಾಬಾಯಿ ಕುಂದಾ ಪುರ, ಗಂಗೂಬಾಯಿ ಗುಳೇದಗುಡ್ಡ, ಸಂಜೀವಮ್ಮ, ಮರೆಮ್ಮನಹಳ್ಳಿ ಹನುಮಂತೆವ್ವ ಅಮೀರ್‌ಬಾಯಿ ಕರ್ನಾಟಕಿ, ರತ್ನಮ್ಮ ಗದಗ, ಮಳವಳ್ಳಿ ಸುಂದರಮ್ಮ, ಅಶ್ವತ್ಥಮ್ಮ, ಮುಂತಾದವರು ರಂಗವನ್ನು ಪ್ರವೇಶಿ ಸಿದರು. ಇವರೆಲ್ಲರೂ ಸೊಗಸಾದ ಗಾಯಕಿಯರು. ಇವರೆಲ್ಲರೂ ರಂಗಸಂಗೀತಕ್ಕೆ ಒಂದು ಘನತೆಯನ್ನು ತಂದುಕೊಟ್ಟರು. ಇವರಲ್ಲಿ ಹಲವರು ಆ ಕಾಲಕ್ಕೇ ತುಂಬಾ ಭಿನ್ನವಾಗಿ ಯೋಚಿಸಿದರು. ಲಕ್ಷ್ಮೇಶ್ವರ ಬಚ್ಚಾಸಾನಿ ೧೯೧೬ರಲ್ಲಿ ಸ್ತ್ರೀ ನಾಟಕ ಮಂಡಲಿಯನ್ನು ಕಟ್ಟಿದರು. ನಂತರ ಮೈಸೂರಿನ ಲಕ್ಷ್ಮಾಸಾನಿಯವರ ನಾಟಕ ಸಂಘ ಸ್ಥಾಪನೆಯಾದವು. ಮಳವಳ್ಳಿ ಸುಂದರಮ್ಮನವರು ೧೯೧೪ರಲ್ಲಿ ಸೀತಾಮನೋಹರ ಕಂಪನಿಯನ್ನು ಕಟ್ಟಿದರು. ಗಂಗೂಬಾಯಿ ಗುಳೇದಗುಡ್ಡ ಅವರ ಶ್ರೀಕೃಷ್ಣ ಸಂಗೀತ ನಾಟಕ ಮಂಡಳಿ (೧೯೨೦) ತುಂಬಾ ಹೆಸರುವಾಸಿಯಾಗಿತ್ತು.
 
ಎಷ್ಟೋ ಸಲ ರಂಗಗೀತೆಗಳನ್ನು ಹಾಡುವ ಹುರುಪಿನಲ್ಲಿ ಗಾಯಕನಟರು ಸನ್ನಿವೇಶದ ಔಚಿತ್ಯ ಮರೆತು ಜನರ ಬೇಡಿಕೆಗೆ ಸ್ಪಂದಿಸಿದ ಸಂದರ್ಭಗಳಿವೆ. ರಾಣಿ ರುದ್ರಮ್ಮ ನಾಟಕದ ಪ್ರಯೋಗದಲ್ಲಿ ಮಲ್ಲಸರ್ಜ ಪಾತ್ರಧಾರಿ ಬಾದಶಾಹ ಸಾಹೇಬ್ ಬೇವೂರ ಅವರು ತಾವು ಸೆರೆಯಾದಾಗ ಶಿವನನ್ನು ಪ್ರಾರ್ಥಿಸುತ್ತಾ ಭಸ್ಮಫಣಿ ತ್ರಿಶೂಲಧರ ಎಂಬ ಗೀತೆಯನ್ನು ಮಾಲಕೌನ್ಸ್ ರಾಗದಲ್ಲಿ ಹಾಡುತ್ತಾರೆ. ಆಗ ಜನ ಒನ್ಸ್‌ಮೋರ್ ಎಂದಾಗ ಮತ್ತೆ ಹಾಡುತ್ತಾ ಛಂದಗಾರಿಕೆಗಾಗಿ ಮಾಲಕೌನ್ಸ್ ರಾಗದಲ್ಲಿ ಭೈರವಿ ಮಿಶ್ರಮಾಡಿ ಅದರಲ್ಲಿಯೇ ಕೊಂಚ ಲಲಿತ್‌ಅನ್ನು ಮಿಶ್ರಗೊಳಿಸಿದಾಗ ಜನ ಮತ್ತಷ್ಟು ಖುಷಿ ಪಟ್ಟರು. ನಂತರ ಸೈಡ್ ವಿಂಗಿಗೆ ಬಂದ ಶಿವಲಿಂಗಸ್ವಾಮಿಗಳು “ಭಾಳ ಛಂದ ಹಾಡಿದಿರಿ. ಇದರಿಂದ ಸಂಗೀತ ಬದುಕಿತು ಆದರ ನಾಟಕ ಸತ್ತಿತ್ತು” ಎಂದರು. ಇಂತಹುದೇ ಘಟನೆ ಗೊರೂರು ರಾಮಸ್ವಾಮಿ ಅಯ್ಯಂಗಾರ್ಯರ ಹಳೆಯಪಳೆಯ ಮುಖಗಳು ಪ್ರಬಂಧ ಸಂಕಲನದಲ್ಲಿಯೂ ಬರುತ್ತದೆ. ವಲ್ಲಿ ಪರಿಣಯದಲ್ಲಿ ನಾಯಕನ ಪಾತ್ರ ಮಾಡುತ್ತಿದ್ದ ಸುಬ್ಬಯ್ಯ ಭಾಗವತರು ಹಾಡಲು ಕಟಾಂಜನಕ್ಕೆ ಬಂದರು. ಅದೊಂದು ಸೊಗಸಾದ ಹಾಡು. ಪ್ರಚಂಡ ಚಪ್ಪಾಳೆ ಬಿದ್ದಿತು. ಅವರು ತಮ್ಮ ಪಾತ್ರಾಭಿನಯ ಮುಂದುವರಿಸಲು ರಂಗಸ್ಥಳಕ್ಕೆ ಹೊರಡುವ ಮುಂಚೆಯೇ ’ಒನ್ಸ್ ಮೋರ್’ ಕೂಗು. ಅವರು ಮತ್ತೆ ಅದೇ ಹಾಡನ್ನು ಹಾಡಿದರು. ಮುಂದೆ ಇನ್ನೊಬ್ಬರು ಇನ್ನೊಂದು ಹಾಡನ್ನು ಕೇಳಿದರು, ಅದನ್ನೂ ಹಾಡಿದರು. ಆ ಹಾಡುಗಳಿಗೂ ಭಾಗವತರ ಪಾತ್ರ್ರದ ಹಾಡುಗಳಿಗೂ ಸಂಬಂಧವಿರಲಿಲ್ಲ. ಆದರೆ ಅವೆಲ್ಲ ಸುಬ್ಬಯ್ಯ ಭಾಗವತರ ಪ್ರಸಿದ್ಧ ಕೀರ್ತನೆಗಳು. ಅನಂತರ ಪ್ರೇಕ್ಷಕರಲ್ಲಿ ಪ್ರತಿಯೊಬ್ಬರೂ ತನತನಗೆ ಪ್ರಿಯವಾದ ಕೀರ್ತನೆಗಳನ್ನು ಕೇಳಿ ಹಾಡಿಸುತ್ತಿದ್ದರು. ಸುಬ್ಬಯ್ಯ ಭಾಗವತರು ಸುಮಾರು ಎರಡು ಗಂಟೆಗಳ ಕಾಲ ಸಂಗೀತವನ್ನೇ ಹಾಡಿಬಿಟ್ಟರು. ನಟನೆ ಮತ್ತು ಗಾಯನಗಳ ನಡುವಿನ ಅದ್ಭುತ ಸಮತೋಲನವನ್ನು ತಮ್ಮ ನಾಟಕಗಳಲ್ಲಿ ಸಾಧಿಸಿದವರು ವರದಾಚಾರ್ಯರು. ಅವರು ನಟ ಸಾಮ್ರಾಟ ಮತ್ತು ನಾಟಕ ಗಾಯಕ ಶಿರೋಮಣಿಯಾಗಿದ್ದರು.
 
ಇಪ್ಪತ್ತನೆಯ ಶತಮಾನವನ್ನು ರಂಗಗೀತೆಗಳ ಸುವರ್ಣ ಕಾಲ ಎನ್ನಬಹುದು. ಜನಸಾಮಾನ್ಯರು ರಂಗಗೀತೆಗಳನ್ನು ಅತಿಯಾಗಿ ಪ್ರೀತಿಸಿದ ಕಾಲವಿದು. ಈ ಪರ್ವ ಸುಮಾರು ೬೦ ವರ್ಷಗಳ ಕಾಲ ಇತ್ತು. ಉಳಿದ ಯಾವ ವೈಭವಗಳ ಹಂಗಿಲ್ಲದೆ ಕೇವಲ ಸಂಗೀತವನ್ನೇ ನೆಚ್ಚಿ ಬದುಕಿದ ಕಂಪನಿಗಳೂ ಈ ಕಾಲಘಟ್ಟದಲ್ಲಿ ಆಗಿ ಹೋಗಿವೆ. ಗದುಗಿನ ಪಂಚಾಕ್ಷರ ಗವಯಿಗಳ ಕಂಪನಿ, ಲಕ್ಷ್ಮಣರಾವ್ ಅಸುಂಡಿಯವರು ಹಾಗೂ ಅರ್ಜುನ್‌ಸಾ ನಾಕೋಡರ ಕಂಪನಿ, ಹಕ್ಕಂಡಿ ವೀರಪ್ಪನವರ ವಿಶ್ವರಂಜನ ಸಂಗೀತ ನಾಟಕ ಮಂಡಳಿ ಬರೀ ಸಂಗೀತವನ್ನೇ ನೆಚ್ಚಿಕೊಂಡಿತ್ತು. ನಲವಡಿ ಶ್ರೀಕಂಠ ಶಾಸ್ತ್ರಿಗಳು ಹೇಮರೆಡ್ಡಿ ಮಲ್ಲಮ್ಮ ನಾಟಕವನ್ನು ರಚಿಸಿದ್ದರು. ಈ ನಾಟಕಕ್ಕೆ ಸಂಗೀತ ಸಂಯೋಜಿಸಲು ಅವರು ಮಲ್ಲಿಕಾರ್ಜುನ ಮನ್ಸೂರರನ್ನು ಮುಂಬೈಯಿಂದ ಕರೆಸಿದರು. ಆಗ ಮನ್ಸೂರರು ಹಿಂದುಸ್ತಾನಿ ಸಂಗೀತದ ಅಪರೂಪದ ರತ್ನಗಳನ್ನು ಹೆಕ್ಕಿತಂದು ಕನ್ನಡ ರಂಗಭೂಮಿಗೆ ಕೊಡುಗೆ ನೀಡಿದರು. ಶರಣರ ಸೊಗಸಾದ ವಚನಗಳು ಶಾಸ್ತ್ರೀಯ ಸಂಗೀತದ ಭಾಗವಾಗಿ ಕಾಲಿಟ್ಟದ್ದು ಕೂಡ ವೃತ್ತಿರಂಗಭೂಮಿಯ ಮೂಲಕವೇ.
ರಂಗಗೀತೆಗಳು ಅತ್ಯಂತ ಜನಪ್ರಿಯವಾಗಲು ಗಾಯಕ ನಟ ನಟಿಯರು, ಸಂಗೀತ ನಿರ್ದೇಶಕರಷ್ಟೇ ಅದರ ರಚನಕಾರರೂ ಕಾರಣರಾಗಿದ್ದರು. ಈ ರಚನಕಾರರು ರಂಗಗೀತೆಯನ್ನು ಕೇವಲ ಶಬ್ದ ಸಮೂಹವನ್ನಾಗಿಸದೆ ಸಾಹಿತ್ಯಕೃತಿಯಾಗಿಸಲು ಪ್ರಯತ್ನಿಸಿದರು. ನಲವಡಿ ಶ್ರೀಕಂಠಶಾಸ್ತ್ರಿಗಳು, ಚಿಕ್ಕೋಡಿಯ ಶಿವಲಿಂಗಸ್ವಾಮಿಗಳು, ಗರೂಡ ಸದಾಶಿವರಾಯರು, ಕಂದಗಲ್ಲ ಹಣಮಂತರಾಯರು ಮುಂತಾದ ಹಲವರು ಸೊಗಸಾದ ರಂಗಗೀತೆಗಳನ್ನು ರಚಿಸಿದರು. ಇವರಲ್ಲಿ ನಲವಡಿ ಶ್ರೀಕಂಠಶಾಸ್ತ್ರಿಗಳು ಜನಪದ ಸಾಹಿತ್ಯದ ಸೊಗಡನ್ನೂ, ಕಂದಗಲ್ಲ ಹಣಮಂತರಾಯರು ಶಬ್ದ ವೈಭವವನ್ನು ರಂಗ ಭೂಮಿಗೆ ತಂದರು.
 
ಕ್ರಮೇಣ ಸಂಗೀತಗಾರರು ನಾಟಕ ಲೋಕದಿಂದ ವಿಮುಖರಾದರು. ಏಣಗಿ ಬಾಳಪ್ಪನವರು ಹೇಳುವಂತೆ ಅದಕ್ಕೆ ಹಲವು ಕಾರಣಗಳಿವೆ. ಆಕಾಶವಾಣಿಯು ಶಾಸ್ತ್ರೀಯ ಸಂಗೀತಕ್ಕೆ ತುಂಬಾ ಪ್ರಾಧಾನ್ಯ ನೀಡಿತು. ಅದರಲ್ಲಿ ಹಾಡಿದರೆ ದೇಶದ ಮೂಲೆ ಮೂಲೆಗೆ ತಲುಪುತ್ತಿತ್ತು. ಅವಕಾಶಗಳು ಹೆಚ್ಚಿಗೆ ಇದ್ದವು. ಅಲ್ಲಿ ಹಾಡುವುದು ಪ್ರತಿಷ್ಠೆಯ ವಿಷಯವಾಯಿತು. ಹಾಗಾಗಿ ಸಂಗೀತಗಾರರು ಅದರತ್ತ ಹೊರಳಿದರು. ರಂಗಭೂಮಿಯಿಂದ ಹಿಂದೆ ಸರಿದರು. ಎರಡನೆಯದಾಗಿ ಕಂಪನಿಯ ಮಾಲೀಕರು ಒಳ್ಳೆಯ ಸಂಗೀತದ ಗುರುಗಳನ್ನು ಕರೆತಂದು ಗಾಯಕರಿಗೆ ತರಬೇತಿ ಕೊಡಿಸುವುದನ್ನು ಕಡಿಮೆ ಮಾಡಿದರು. ಇದರಿಂದ ಗಾಯಕನಟರ ಗುಣಮಟ್ಟ ಕುಸಿಯಿತು. ಮಾಲೀಕರ ಗಮನ ಕೇವಲ ಗಲ್ಲಾಪೆಟ್ಟಿಗೆಯ ಗಳಿಕೆಯ ಮೇಲೆ ಇತ್ತು ಅಷ್ಟೆ. ಕಾಲ ಕಳೆದಂತೆ ವೈಭವದ ರಂಗಸಜ್ಜಿಕೆ, ಅಬ್ಬರದ ಮಾತು, ಅಭಿನಯಗಳು, ಹಾಸ್ಯಪಾತ್ರದ ರಂಜನೆ, ಜನಪ್ರಿಯವಾಯಿತು. ಸಂಗೀತದ ಸ್ಥಾನಮಾನವು ಕುಸಿದು ಅದು ಕೇವಲ ಹಿನ್ನೆಲೆ ಸಂಗೀತವಾಯಿತು. ಕ್ರಮೇಣ ಗಾಯಕ ನಟರ ಪರಂಪರೆ ಇಲ್ಲವಾಗಿ ಕೇವಲ ನಟರು ಮಾತ್ರ ಉಳಿದುಕೊಂಡರು.
 
೧೯೫೦ರ ನಂತರ ಹಾಡುಗಳು ಪ್ರೇಮಸಲ್ಲಾಪಕ್ಕೆ ದುಃಖದ ಸನ್ನಿವೇಶಕ್ಕೆ, ಕಪಿಚೇಷ್ಟೆಗೆ ಬಳಕೆಯಾದವು. ಹೆಚ್ಚಿನ ಹಾಡುಗಳು ಸಿನಿಮಾ ಹಾಡಿನ ಧಾಟಿಯನ್ನು ಅನುಸರಿಸಿದವು. ಕ್ರಮೇಣ ಸಂಗೀತದ ಸ್ಥಳವನ್ನು ಹಾಸ್ಯ ಆಕ್ರಮಿಸಿ ಕೊಂಡಿತು. ಶಾಸ್ತ್ರೀಯ ಸಂಗೀತ ದಿಂದ ರಂಗಭೂಮಿ ವಿಮುಖವಾಯಿತು. ಶಾಸ್ತ್ರೀಯ ಸಂಗೀತವನ್ನು ಬೇರೆಡೆ ಕೇಳಲು ಅವಕಾಶ ದೊರೆತ ಸಂಗೀತರಸಿಕರು ನಾಟಕಗಳಿಗೆ ಬರುವುದನ್ನೇ ನಿಲ್ಲಿಸಿದರು. ೧೯೭೫ರ ನಂತರವಂತೂ ನಾಟಕಗಳಿಗೆ ಸಿನಿಮಾಗಳೇ ಮಾದರಿಯಾದವು. ಒಟ್ಟಾರೆ ಅಭಿರುಚಿಯೇ ಬದಲಾಯಿತು. ನಾಟಕ ಮತ್ತು ಸಿನಿಮಾಗಳ ನಡುವೆ ವ್ಯತ್ಯಾಸವೇ ಇಲ್ಲದಂತಾಯಿತು. ಈ ಬದಲಾವಣೆ ಕಂಪನಿ ನಾಟಕಗಳ ಹೆಸರಿನ ಮೇಲೆ ತನ್ನ ಪ್ರಭಾವ ಬೀರಿತು. ಸಂಗೀತ ನಾಟಕ ಮಂಡಳಿ ಎಂಬ ಹೆಸರು ಬದಲಾಗಿ, ನಾಟ್ಯಸಂಘ ಎಂಬುದು ಮಾತ್ರ ಉಳಿದುಕೊಂಡಿತು.
 
ಇವೆಲ್ಲ ಬೆಳವಣಿಗೆಗಳ ಜೊತೆಗೆ ವೃತ್ತಿ ರಂಗ ಭೂಮಿಯನ್ನು ತೀರಾ ಕಟುವಾಗಿ ಟೀಕಿಸಿ, ಲೇವಡಿ ಮಾಡುವ ಪರಿಪಾಠ ಪ್ರಾರಂಭವಾಯಿತು. ಅವರಲ್ಲಿ ಪ್ರಮುಖರು ಕೈಲಾಸಂ ಮತ್ತು ಆದ್ಯ ರಂಗಾ ಚಾರ್ಯರು. ಕೈಲಾಸಂ ಅವರ ಕಿರುನಾಟಕ ನಂಕಂಪನಿ ವೃತ್ತಿರಂಗಭೂಮಿಯ ಕಟು ವಿಡಂಬನೆ. ಅದನ್ನು ಅವರು ರಂಗಭೂಮಿಯ ಪ್ರಕಾರ ಎಂದೇ ಭಾವಿಸುತ್ತಿರಲಿಲ್ಲ. ಆದ್ಯ ರಂಗಾಚಾರ್ಯರು ಸಂಪುಷ್ಠ ರಾಮಾಯಣ ಎಂಬ ವಿಡಂಬನಾತ್ಮಕ ಏಕಾಂಕ ನಾಟಕವನ್ನು ರಚಿಸಿದರು. ಅದರ ವಸ್ತುವೇ ಅನಕ್ಷರಸ್ಥ ನಟರು ತಮ್ಮ ಅಸಂಬದ್ಧ ಮಾತು ಹಾಗೂ ಹಾವಭಾವಗಳ ಮೂಲಕ ರಾಮಾಯಣ ನಾಟಕ ಆಡುವುದನ್ನು ಲೇವಡಿ ಮಾಡುವುದಾಗಿತ್ತು. ಹೊಸ ದೊಂದು ರಂಗಭೂಮಿಯನ್ನು ಹುಟ್ಟುಹಾಕುವುದು ಅವರ ಉದ್ದೇಶವಾಗಿತ್ತು. ಈ ಹೊತ್ತಿನಲ್ಲಿ ಸಂಗೀತವನ್ನು ರಂಗಭೂಮಿ ಹೆಚ್ಚುಕಡಿಮೆ ಕಳೆದುಕೊಂಡೇ ಬಿಟ್ಟಿತ್ತು ಎನ್ನಬಹುದೇನೋ. ಆದರೆ ಮತ್ತೆ ಹೊಸದೊಂದು ಬೆಳವಣಿಗೆ ಪ್ರಾರಂಭವಾಯಿತು.
 
ಆಧುನಿಕ ಕನ್ನಡ ನಾಟಕಗಳ ಒಂದು ಧಾರೆ ಮತ್ತೆ ನಾದದತ್ತ ತಿರುಗಿತ್ತು. ನವ್ಯ ಕಾಲದ ಹೆಚ್ಚಿನ ನಾಟಕಗಳು ಸಂಗೀತವನ್ನು ದೂರವೇ ಇಟ್ಟಿದ್ದವು. ಅಸಂಗತ ನಾಟಕಗಳಲ್ಲಿ ಸುಸಂಗತವಾದ ಲಯಬದ್ಧ ಸಂಗೀತದ ಅಳವಡಿಕೆ ಆಭಾಸವೆನಿಸಿತ್ತು. ಆದರೆ ವೃತ್ತಿರಂಗಭೂಮಿಯ ಅನುಭವಗಳನ್ನು ತಮ್ಮ ಒಡಲಲ್ಲಿ ಇಟ್ಟುಕೊಂಡಿದ್ದ ಬಿ ವಿ ಕಾರಂತರು ನವ್ಯಕ್ಕೆ ಹೊರತಾಗಿ ಎಂಬಂತೆ ಎಪ್ಪತ್ತರ ದಶಕದ ಕನ್ನಡ ರಂಗಭೂಮಿಗೆ ಸಂಗೀತದ ಮಳೆಗೆರೆದ ಋಷ್ಯಶೃಂಗರಾದರು. ಕನ್ನಡ ನಾಟಕರಂಗ ಅವರಿಂದ ಬಹು ಮುಖ್ಯ ತಿರುವನ್ನು ಪಡೆಯಿತು. ಜಾನಪದ ಸತ್ವವನ್ನು ಅದರೆಲ್ಲ ಕಸುವಿನೊಂದಿಗೆ ತರಹೊರಟ ಕಂಬಾರರು ಸಂಗೀತಮಯ ನಾಟಕಗಳ ಹರಿಕಾರರೇ ಆದರು. ಹಯವದನ, ಜೋಕುಮಾರಸ್ವಾಮಿ, ಸಂಗ್ಯಾಬಾಳ್ಯಾ, ಸತ್ತವರ ನೆರಳು ಬಂದವು. ಆಧುನಿಕ ಕನ್ನಡ ನಾಟಕಗಳು ಹೀಗೆ ನಾದದ ಜೀವಸ್ಪರ್ಶದಿಂದ ಹೊಸ ಆಯಾಮವನ್ನೇ ಪಡೆದುಕೊಂಡವು. ಆದರೆ ಆಧುನಿಕ ರಂಗಭೂಮಿಯಲ್ಲಿ ಸಂಗೀತ ಕೇವಲ ಕಾರ್ಯ ಸಾಧಕ (ಫಂಕ್ಷನಲ್) ಅನಿವಾರ್ಯವಲ್ಲ.
 
ಆದರೆ ಒಂದು ಕಾಲದಲ್ಲಿ ಅತ್ಯಂತ ವೈಭವದಿಂದ ಮೆರೆದ ರಂಗಸಂಗೀತ ಜನಸಾಮಾನ್ಯರ ತನಕ ಶಾಸ್ತ್ರೀಯ ಸಂಗೀತವನ್ನು ಒಯ್ದು ಅದಕ್ಕೆ ಒಂದು ವಿಸ್ತಾರವಾದ ವೇದಿಕೆಯನ್ನು ಕಲ್ಪಿಸುವ ಮಹಾನ್ ಕೆಲಸವನ್ನು ಮಾಡಿತು. ಹಿಂದೆಲ್ಲ ಒಳ್ಳೆಯ ಶಾಸ್ತ್ರೀಯ ಸಂಗೀತ ಸುಲಭವಾಗಿ ಕೇಳುವುದಕ್ಕೆ ಸಿಗುತ್ತಿರಲಿಲ್ಲ. ಸಾಹುಕಾರರು, ಶ್ರೀಮಂತರು ಮುಂತಾದವರು ಸಂಗೀತ ಕಚೇರಿಗಳನ್ನು ಏರ್ಪಡಿಸು ತ್ತಿದ್ದರು. ಆದರೆ ಜನಸಾಮಾನ್ಯರಿಗೆ ಇದು ಲಭ್ಯವಿರಲಿಲ್ಲ. ಸಂಗೀತ ಕೇಳಲು ಜನಸಾಮಾನ್ಯರು ನಾಟಕಕ್ಕೆ ಹೋಗುತ್ತಿದ್ದರು. ನಾಲ್ಕು ಐದು ಗಂಟೆಗಳ ಕಾಲ ನಾಟಕ ನೋಡಿ, ಸಂಗೀತ ಕೇಳಿ ತೃಪ್ತಿಪಡುತ್ತಿದ್ದರು.
 
ಆಕರ
ಡಾ ರಾಮಕೃಷ್ಣ ಮರಾಠೆ, ರಂಗಸಂಗೀತ
ಗಣೇಶ ಅಮೀನಗಡ, ಬಣ್ಣದ ಬದುಕಿನ ಚಿನ್ನದ ದಿನಗಳು
ಗೊರೂರು ರಾಮಸ್ವಾಮಿ ಅಯ್ಯಂಗಾರ್ಯರು, ಹಳೆಯ ಪಳೆಯ ಮುಖಗಳು
Recommended Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.