ರೆಹಮಾನ್ ಜೊತೆಯಲ್ಲಿ ಮಾತುಕಥೆ

 In RAGAMALA

ಪದ್ಮಶ್ರೀ ಅಲ್ಲಾ ರಖ್ಖಾ ರೆಹಮಾನ್ ಅವರ ಪರಿಚಯ ಮಾಡಿಕೊಡುವ ಅವಶ್ಯಕತೆ ಇಲ್ಲ್ಲ. ಹಲವಾರು ರಾಷ್ಟ್ರೀಯ ಪ್ರಶಸ್ತಿಗಳು, ಅಕಾಡೆಮಿ ಪ್ರಶಸ್ತಿಗಳು, ಆಸ್ಕರ್ ಪ್ರಶಸ್ತಿಗಳು ಹೀಗೆ ಪ್ರಶಸ್ತಿ, ಬಹುಮಾನಗಳಿಗೆ ಲೆಕ್ಕವೇ ಇಲ್ಲ. ಇವರು ನಿರ್ದೇಶಿಸಿದ ಧ್ವನಿಸುರುಳಿಗಳು ಮಿಲಿಯನ್ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ’ಮದ್ರಾಸಿನ ಮೊಜಾರ್ಟ್’, ’ಮ್ಯೂಸಿಕ್ ವಿಜರ್ಡ್’ ಹೀಗೆ ಹಲವಾರು ಹೆಸರುಗಳಿಂದ ಜನ ಇವರನ್ನು ಬಣ್ಣಿಸುತ್ತಾರೆ.
ತಂದೆ ಸತ್ತಾಗ ಎಂಟನೇ ವರ್ಷದಲ್ಲೇ ಮನೆ ಜವಾಬ್ದಾರಿಯನ್ನು ಹೊತ್ತು, ಓದು ಬಿಟ್ಟು, ಕೀ ಬೋರ್ಡ್ ಸಹಾಯಕನಾಗಿ ವೃತ್ತಿಯನ್ನು ಪ್ರಾರಂಭಿಸಿ, ಇಂದು ಜಗತ್ತಿನಾದ್ಯಂತ ಎಲ್ಲಾ ಭಾಷೆಯ ಸಿನಿಮಾಗಳಿಗೂ ಬೇಕಾಗಿರುವ ವ್ಯಕ್ತಿ ಎ. ಆರ್. ರೆಹಮಾನ್. ಅವರು ಕ್ರಮಿಸಿದ ದಾರಿ ನಿಜಕ್ಕೂ ರೋಚಕವಾದದ್ದು.
ಮಲೆಯಾಳಂ ಸಿನಿಮಾಗಳಲ್ಲಿ ಸಂಗೀತ ಸಂಯೋಜಕರಾಗಿ ಕೆಲಸ ಮಾಡುತ್ತಿದ್ದ ಆರ್. ಕೆ. ಶೇಖರ್ ಅವರ ಮಗ ದಿಲೀಪ್ ಕುಮಾರ್, ಎ.ಆರ್. ರೆಹಮಾನ್ ಆದ ಕ್ಷಣದಿಂದ ಹಿಡಿದು ಜಗದ್ವಿಖ್ಯಾತ ಕಲಾವಿದನಾಗಿ ಬೆಳೆಯುವವರೆಗಿನ ವಿವಿಧ ಹಂತಗಳನ್ನು ರೆಹಮಾನ್ ಅವರ ಮಾತುಗಳಲ್ಲೇ ಕಟ್ಟಿಕೊಡುವ ಪ್ರಯತ್ನ- ಎ.ಆರ್. ರೆಹಮಾನ್- ದಿ ಸ್ಪಿರಿಟ್ ಆಫ್ ಮ್ಯೂಸಿಕ್ ಪುಸ್ತಕ. ನಸ್ರೀನ್ ಮುನ್ನಿ ಕಬೀರ್ ಅವರು ಎ ಆರ್ ರೆಹಮಾನ್ ಅವರನ್ನು ನಾಲ್ಕು ವರ್ಷಗಳ ಕಾಲ ವಿವಿಧ ಸಮಯದಲ್ಲಿ ಮಾತನಾಡಿಸಿ ಈ ಪುಸ್ತಕವನ್ನು ಸಿದ್ಧಪಡಿಸಿದ್ದಾರೆ. ಇಡೀ ಪುಸ್ತಕ ಒಂದು ದೀರ್ಘ ಆದರೆ ಆತ್ಮೀಯವಾದ ಮಾತುಕಥೆಯ ರೂಪದಲ್ಲೇ ಇದೆ. ಇದು ಒಬ್ಬ ಕಲಾವಿದನ ಪ್ರಯಾಣವನ್ನು, ಅವನ ಬದುಕನ್ನು ತೀರಾ ಪ್ರೀತಿಯಿಂದ ಕಟ್ಟಿಕೊಡುತ್ತದೆ. ಈಗಾಗಲೇ ಹಲವು ಪುಸ್ತಕಗಳನ್ನು ಬರೆದಿರುವ, ಹಲವಾರು ಸಾಕ್ಷ್ಯಚಿತ್ರಗಳನ್ನು ತೆಗೆದಿರುವ ನಸ್ರೀನ್‌ಗೆ ಹಿಂದಿ ಸಿನಿಮಾ ಜಗತ್ತು ತುಂಬಾ ನಿಕಟವಾಗಿ ಗೊತ್ತು. ಹಾಗಾಗಿ ಅವರು ಕಟ್ಟಿಕೊಡುವ ಹಿಂದಿ ಸಿನಿಮಾ ಜಗತ್ತಿನ ಅನುಭವ ತೀರಾ ಅಥೆಂಟಿಕ್ ಆಗಿದೆ. ಆದರೆ ಅಷ್ಟೇ ಆಳವಾದ ಅನುಭವ ದಕ್ಷಿಣ ಭಾರತೀಯ ಸಿನಿಮಾಗಳಿಗೆ ಸಂಬಂಧಿಸಿದಂತೆ ಇಲ್ಲದೇ ಹೋದರೂ, ಅದಕ್ಕೆ ಬೇಕಾದ ತಯಾರಿ ಮಾಡಿಕೊಂಡು ಇಲ್ಲಿ ಚರ್ಚೆ ನಡೆಸಿದ್ದಾರೆ. ರೆಹಮಾನ್ ಕೂಡ ಅಂತಹ ಸಮಯದಲ್ಲಿ ಹೆಚ್ಚೆಚ್ಚು ಅನುಭವವಗಳನ್ನು ಹಂಚಿಕೊಳ್ಳುತ್ತಾ, ಕೊರತೆಯಾಗದಂತೆ ನೋಡಿಕೊಂಡಿದ್ದಾರೆ.
ಜನಕ್ಕೆ ಹೊಸದೊಂದು ಸಿಗುವ ತನಕ ಅಂಥದ್ದು ಇತ್ತು ಅಂತ ಗೊತ್ತಿರುವುದಿಲ್ಲ. ನೀವು ಹೊಸದನ್ನು ಸೃಷ್ಟಿಸಬೇಕು. ಮೊದಲು ಜನರಿಗೆ ಏನು ಬೇಕು ಅದನ್ನು ಕೊಡಿ. ನಂತರ ನಿಮಗೆ ಇಷ್ಟವಾದದ್ದನ್ನು ಮಾಡಿ. ಖಂಡಿತಾ ಜನ ಅದನ್ನು ಇಷ್ಟಪಡುತ್ತಾರೆ. ಅದಕ್ಕೆ ಬದ್ಧರಾಗೇ ಇರಿ. ನಾವು ಹೇಗೆ ಇದ್ದೇವೋ ಅದೇ ವಾಸ್ತವ. ಚೆನ್ನಾಗಿದ್ದೀವೋ ಇಲ್ಲವೋ. ನಾವಿರುವುದೇ ಹೀಗೆ. ಈಗ ನಮ್ಮ ರೂಪವನ್ನು ಬದಲಿಸಲು ಸಾಧ್ಯವಿಲ್ಲ. ಆದರೆ ಜಗತ್ತು ನಮ್ಮನ್ನು ನೋಡುವ ಕ್ರಮವನ್ನು ಬದಲಿಸಬಹುದು
ಇದು ರೆಹಮಾನ್ ನಂಬಿದ ನಿಲುವು. ಹಾಗೇ ಇಂದು ಜಗತ್ತು ರೆಹಮಾನ್ ಅವರನ್ನು ನೋಡುವ ದೃಷ್ಟಿಯೇ ಬದಲಾಗಿದೆ. ಹಿಂದಿಯೇ ಬಾರದ ಒಬ್ಬ ಪಕ್ಕಾ ತಮಿಳು ಹುಡುಗನನ್ನು ಹಿಂದಿ ಜಗತ್ತು ಆತ್ಮೀಯವಾಗಿ ಸ್ವಾಗತಿಸಿದೆ. ಅಷ್ಟೇ ಅಲ್ಲ ಇಡೀ ಜಗತ್ತೇ ಇಂದು ರೆಹಮಾನ್ ಅವರನ್ನು ಬೆರಗಿನಿಂದ ನೋಡುತ್ತದೆ.
ನಮ್ಮ ತಂದೆ ತಾಯಿ ನನ್ನ ಅಜ್ಜ ಅಜ್ಜಿಯರ ಮನೆಯಲ್ಲಿ ವಾಸಿಸುತ್ತಿದ್ದರು. ಅವರು ಚೆನ್ನೈನ ಪುದುಪೇಟೆಯಯ ಮೌಂಟ್ ರೋಡಿನಲ್ಲಿ ಒಂದು ಬಾಡಿಗೆ ಮನೆಯಲ್ಲಿ ಇದ್ದರು. ನಾನು ಜನವರಿ ೬, ೧೯೬೭ ಬೆಳಗ್ಗೆ ೫.೫೦ಕ್ಕೆ ಹುಟ್ಟಿದೆ. ಅಂದು ಶುಕ್ರವಾರ. ನನ್ನ ಅಮ್ಮನ ಪಕ್ಕದಲ್ಲಿ ಮುತ್ತಜ್ಜ ಹಾಗೂ ನನ್ನ ಅಪ್ಪ ಇದ್ದರು. ಹೆರಿಗೆ ಮಾಡಿಸುವುದಕ್ಕೆ ಯಾವುದೇ ದಾದಿಯರೂ ಇರಲಿಲ್ಲ.
ನಾನು ತುಂಬಾ ಪೀಚಾಗಿದ್ದೆ. ನಾಲ್ಕು ವರ್ಷವಾಗುವರೆಗೆ ಹೊಟ್ಟೆ ನೋವಿನಿಂದ ಒದ್ದಾಡುತ್ತಿದ್ದನಂತೆ. ನನಗೆ ಸ್ನೇಹಿತರು ತುಂಬಾ ಕಡಿಮೆ. ಯಾವಾಗಲೂ ಒಬ್ಬನೇ ಇರುತ್ತಿದ್ದೆ. ನನಗೆ ಐದು ವರ್ಷವಾಗಿದ್ದಾಗ ರೂಮಿನಲ್ಲಿ ಬಾಗಿಲು ಹಾಕಿಕೊಂಡು ಗಂಟಗಟ್ಟಲೇ ಹಾರ್ಮೋನಿಯಂ ನುಡಿಸಿಕೊಳ್ಳುತ್ತಿದ್ದೆನಂತೆ. ನಾನು ಮೃದು ಸ್ವಾಭಾವದ ಹುಡುಗ.
ನಮ್ಮ ತಂದೆ ತುಂಬಾ ದಿನ ಬದುಕಲಿಲ್ಲ. ಖಾಯಿಲೆ ಯಾವುದು ಅಂತಲೂ ತಿಳಿಯಲಿಲ್ಲ. ೯ ಸೆಪ್ಟೆಂಬರ್ ೧೯೭೬ರಲ್ಲಿ ನಿಧನಹೊಂದಿದರು. ಆಗ ಅವರಿಗೆ ಕೇವಲ ೪೩ವರ್ಷ. ನನಗೆ ಎಂಟು ವರ್ಷ.
ನಮ್ಮ ಅಪ್ಪ ನನಗಾಗಿ ಬಂಗಲೆ ಬಿಟ್ಟು ಹೋಗಲಿಲ್ಲ ನಿಜ. ಆದರೆ ಹಲವಾರು ಸಂಗೀತ ವಾದ್ಯಗಳನ್ನು ಬಿಟ್ಟು ಹೋಗಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಸಂಗೀತಗಾರರ ಗುಡ್‌ವಿಲ್ ಬಿಟ್ಟುಹೋದರು. ಅವರಲ್ಲಿ ಕೆಲವರು ಇಂದಿಗೂ ನನ್ನೊಂದಿಗೆ ಕೆಲಸ ಮಾಡುತ್ತಿದ್ದಾರೆ.
ಹೀಗೆ ರೆಹಮಾನ್ ಅವರ ಬದುಕು ಅನಾವರಣಗೊಳ್ಳುತ್ತಾ ಹೋಗುತ್ತದೆ. ಇದೊಂದು ನಿರ್ದಿಷ್ಟ ಕಲಾನುಕ್ರಮಣಿಯಲ್ಲಿ ಸಾಗುವುದಿಲ್ಲ. ಹಿಂದೆ ಮುಂದೆ ಮಾತು ಹೋದ ಹಾದಿಯಲ್ಲಿ ಹೋಗುತ್ತಿರುತ್ತದೆ. ಅವರ ಬದುಕಿನ ವಿಭಿನ್ನ ಮಜಲುಗಳನ್ನು ಪರಿಚಯಿಸುತ್ತಾ ಹೋಗುತ್ತದೆ. ರೆಹಮಾನ್ ಅವರಿಗೆ ಎಲ್ಲಾ ರೀತಿಯ ಸಂಗೀತದಲ್ಲೂ ಪರಿಶ್ರಮವಿತ್ತು. ಕಲಿತಿದ್ದರು. ಹಿಂದುಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಪಾಶ್ಚಾತ್ಯ ಸಂಗೀತ ಎಲ್ಲವನ್ನೂ ಗುರುಮುಖೇನ ಕಲಿತಿದ್ದರು. ಸೂಫಿ ದರ್ಶನದಲ್ಲಿ ಅಪಾರ ನಂಬಿಕೆ ಇರುವ ರೆಹಮಾನ್ ಒಂದು ರೀತಿಯಲ್ಲಿ ಆಧ್ಯಾತ್ಮಿಕ ಜೀವಿ. ಭಗವದ್ಗೀತೆಯ ನಿಷ್ಕಾಮ ಕರ್ಮದ ಬಗ್ಗೆ ಮಾತನಾಡುತ್ತಲೇ ಮೈಕಲೇಂಜಲೋ ಉದಾಹರಣೆಯನ್ನು ನೆನೆದುಕೊಳ್ಳುತ್ತಾರೆ. ಒಂದು ಛಾಪೆಲ್ಲಿನ ಹಿಂಬಾಗದಲ್ಲಿ ಮೈಕಲೇಂಜಲೋ ಒಂದು ಚಿತ್ರ ರಚಿಸುತ್ತಿರುತ್ತಾನೆ. ಆಗ ಯಾರೊ ಯಾರು ನೋಡದ ಕಡೆ ಯಾಕೆ ಚಿತ್ರ ರಚಿಸುತ್ತಿದ್ದೀಯೆ? ಎಂದು ಕೇಳಿದಾಗ ಮೈಕಲೇಂಜಲೋ ನನಗೆ ಜನರ ಮೆಚ್ಚುಗೆ ಬೇಕಾಗಿಲ್ಲ. ದೇವರ ಮೆಚ್ಚುಗೆ ಬೇಕು ಅನ್ನುತ್ತಾನೆ. ಇದನ್ನು ಹಲವು ಕಡೆ ರೆಹಮಾನ್ ಉಲ್ಲೇಖಿಸುತ್ತಾರೆ. ಸಂಗೀತಕ್ಕೆ ಜನರನ್ನು ಒಂದು ಮಾಡುವ ಶಕ್ತಿ ಇದೆ ಎಂದು ರೆಹಮಾನ್ ಅಚಲವಾಗಿ ನಂಬಿರುವಂತೆ ಕಾಣುತ್ತದೆ. ಸಂಗೀತ, ತಂತ್ರಜ್ಞಾನ ಎಲ್ಲವನ್ನು ಒಟ್ಟಿಗೆ ತಂದು ತಮ್ಮದೇ ಆದ ಧ್ವನಿಯನ್ನು, ಇಂಪನ್ನು ಕಂಡುಕೊಳ್ಳುತ್ತಾ ಸಾಗುತ್ತಿರುವ ರೆಹಮಾನ್ ತಮಗೆ ಬೇಕಾದ, ಆಳವಾದ, ಬಹುಕಾಲ ಉಳಿಯಬಲ್ಲ ಸಂಗೀತವನ್ನು ಕಂಡುಕೊಳ್ಳಲು ಸದಾ ಹಾತೊರೆಯುತ್ತಾ ಇರುತ್ತಾರೆ. ಜಗತ್ತಿನ ಹಲವು ಕಡೆ ಮನೆ ಹೊಂದಿರುವ ರೆಹಮಾನ್ ತಮಿಳುನಾಡಿನ ತನ್ನ ಮನೆಯಲ್ಲೇ ನೆಮ್ಮದಿ ಕಂಡುಕೊಳ್ಳುತ್ತಾರೆ. ಕಂಪ್ಯೂಟರ್ ಇಂಜಿನಿಯರ್ ಆಗಬೇಕೆಂದು ಆಸೆ ಇಟ್ಟುಕೊಂಡಿದ್ದ ರೆಹಮಾನ್ ಬಿ.ಇ. ಮಾಡದಿದ್ದರೂ ತಂತ್ರಜ್ಞಾನವನ್ನು ಕಲಿತು ಏಷ್ಯಾದಲ್ಲೇ ಸುಸಜ್ಜಿತವಾದ ರೆಕಾರ್ಡಿಂಗ್ ಸ್ಟುಡಿಯೋವನ್ನು ಚೆನ್ನೈನಲ್ಲಿ ಸ್ಥಾಪಿಸಿದ್ದಾರೆ.
ರೆಹಮಾನ್ ಅವರ ಸಂಗೀತವನ್ನು, ಅವರ ವ್ಯಕ್ತಿತ್ವವನ್ನು, ಸಿನಿಮಾ ಸಂಗೀತ ಇಂದು ಹಿಡಿದಿರುವ ದಾರಿಯನ್ನು ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ಇದೊಂದು ಉಪಯುಕ್ತ ಪುಸ್ತಕ.

Recent Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.