ಲಾಕ್ ಡೌನ್‌ನ ಆರ್ಥಿಕ ಪರಿಣಾಮಗಳು- ಪ್ರೊ. ಎಂ. ಚಂದ್ರ ಪೂಜಾರಿ

 In corona-covid-19, ECONOMY

 

ಕೊರೊನಾ ಹತೋಟಿಗೆ ಲಾಕ್‌ಡೌನ್ ಬಿಟ್ಟರೆ ಬೇರೆ ದಾರಿಯೇ ಇಲ್ಲ ಎಂದು ಸರಕಾರ ೨೧ ದಿನಗಳ ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಿದೆ. ಲಾಕ್‌ಡೌನ್ ಪರಿಣಾಮದ ಬಗ್ಗೆ ಮಾತಾಡುವ ಮುನ್ನ ಕೊರೊನಾ ಹತೋಟಿಗೆ ಲಾಕ್‌ಡೌನ್ ಬಿಟ್ಟರೆ ಬೇರೆ ದಾರಿಯೇ ಇಲ್ಲ ಎನ್ನುವ ಸರಕಾರದ ನಿರ್ಧಾರದ ಬಗ್ಗೆ ಆಲೋಚಿಸಬೇಕಾಗಿದೆ. ಈ ನಿರ್ಧಾರ ಚೀನಾವನ್ನು ನೋಡಿ ಬಂದ ತೀರ್ಮಾನ. ಚೀನಾ ಕೂಡ ನಮ್ಮ ಹಾಗೆ ದೊಡ್ಡ ದೇಶ. ನಮ್ಮಿಂದಲೂ ಹೆಚ್ಚು ಜನಸಂಖ್ಯೆ ಇರುವ ದೇಶ. ಜೊತೆಗೆ ಅವರು ನಮ್ಮ ನೆರೆ ದೇಶ. ಅಲ್ಲಿನ ಜನಜೀವನ ಮತ್ತು ನಮ್ಮ ಜೀನವದ ನಡುವೆ ಸಾಕಷ್ಟು ಸಾಮ್ಯತೆ ಇದೆ. ಅಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕಗೊಂಡ ವೂಹಾನ್ ಮಹಾನಗರ ಮತ್ತು ಅದು ಇರುವ ಹುಬೆ ಪ್ರಾಂತ್ಯವನ್ನು ಎರಡು ಹಂತಗಳಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡಿ ವೈರಸ್ ಹಾವಳಿಯನ್ನು ಹತೋಟಿಗೆ ಚೀನಾ ತಂದಿದೆ. ಚೀನಾದ ಈ ಮಾದರಿಯನ್ನು ಅನುಸರಿಸದ ಇಟಲಿ, ಬ್ರಿಟನ್, ಆಮೇರಿಕಾದಂತಹ ದೇಶಗಳು ದೊಡ್ಡ ಮಟ್ಟಿನ ಅನಾಹುತವನ್ನು ಎದರಿಸುತ್ತಿವೆ. ನಮ್ಮಲ್ಲಿ ಚೀನಾದಂತೆ ದೊಡ್ಡ ಸಂಖ್ಯೆಯಲ್ಲಿ ಜನರಿದ್ದಾರೆ. ಜೊತೆಗೆ ಚೀನಾದ ಸಿಟಿಗಳಂತೆಹ ನಮ್ಮ ಸಿಟಿಗಳಲ್ಲು ಕೂಡ ಜನದಟ್ಟಣಿ ಇದೆ. ಇವೆಲ್ಲ ಕಾರಣಗಳಿಂದ ಲಾಕ್‌ಡೌನ್ ಕೊರೊನಾ ವೈರಸ್ ಹತೋಟಿಗೆ ಉತ್ತಮ ಮಾರ್ಗವೆಂದು ಬಗೆಯಲಾಗಿದೆ. ಆದರೆ ಚೀನಾ ಕೇವಲ ಲಾಕ್‌ಡೌನ್‌ನಿಂದ ಕೊರೊನಾ ವಿರುದ್ಧ ಯಶಸ್ಸು ಪಡೆದಿಲ್ಲ. ಲಾಕ್‌ಡೌನ್ ಜೊತೆಗೆ ಅಲ್ಲಿನ ಸಾರ್ವಜನಿಕ ಆರೋಗ್ಯ ವ್ಯವಸ್ಥೆ, ಮಾಹಿತಿ ತಂತ್ರಜ್ಞಾನ ಮತ್ತು ಅವುಗಳ ಬಳಕೆ, ಸರಕಾರದ ಸ್ಪಂದನೆ ಇವೆಲ್ಲವೂ ಚೀನಾದ ಯಶಸ್ಸಿನ ಹಿಂದೆ ಕೆಲಸ ಮಾಡಿವೆ. ಚೀನಾದಲ್ಲಿ ಅತ್ಯುತ್ತಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಇದೆ. ಇದೇ ಕಾರಣದಿಂದ ಚೀನಾ ಕೆಲವೇ ಕೆಲವು ದಿನಗಳಲ್ಲಿ ಸಾವಿರಾರು ಬೆಡ್‌ಗಳ ಆಸ್ಪತ್ರೆಗಳನ್ನು ನಿರ್ಮಿಸುವುದರ ಜೊತೆಗೆ ದೊಡ್ಡ ಸಂಖ್ಯೆಯಲ್ಲಿ ವೈದ್ಯರನ್ನು, ನರ್ಸ್‌ಗಳನ್ನು, ಆರೋಗ್ಯ ಸಹಾಯಕರನ್ನು, ಆಸ್ಪತ್ರೆಗಳಲ್ಲಿ ಕೆಲಸ ಮಾಡುವವರಿಗೆ ರಕ್ಷಣ ಕವಚಗಳನ್ನು, ಔಷಧಿಯನ್ನು ಪೂರೈಕೆ ಮಾಡಿದೆ. ಅಲ್ಲಿನ ಮಾಹಿತಿ ತಂತ್ರಜ್ಞಾನ ಫೇಸ್ ರೀಡಿಂಗ್, ಸಿಸಿ ಟಿವಿಗಳ ಮೂಲಕ ಸಂಗ್ರಹಿಸಿದೆ ಮಾಹಿತಿಯನ್ನು ಆರೋಗ್ಯ ಸವಲತ್ತುಗಳನ್ನು ತಲುಪಿಸಲು ಪರಿಣಾಮಕಾರಿಯಾಗಿ ಬಳಸಿಕೊಂಡಿದೆ. ಅಲ್ಲಿನ ಸರಕಾರ ವೈರಸ್ ಇರುವಿಕೆಯನ್ನು ಆರಂಭದಲ್ಲಿ ನಿರಾಕರಿಸಿದರೂ ನಂತರ ಸಮರೋಪಾದಿಯಲ್ಲಿ ಪರಿಹಾರ ಕಾರ್ಯಕ್ರಮ ಕೈಗೊಂಡಿದೆ. ಚೀನಾದ ಇಂತಹ ವ್ಯವಸ್ಥೆಯನ್ನು ಆಮೇರಿಕಾ, ಇಟಲಿ, ಸ್ಪೇಯಿನ್, ಫ್ರಾನ್ಸ್ ಮುಂತಾದ ಯುರೋಪಿಯನ್ ದೇಶಗಳ ಆರೋಗ್ಯದ ವ್ಯವಸ್ಥೆಗೆ ಹೋಲಿಸಿದರೆ ಲಾಕ್‌ಡೌನ್ ಒಂದೇ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ ಎನ್ನುವ ತೀರ್ಮಾನಕ್ಕೆ ಬರಬೇಕಾಗುತ್ತದೆ.

ಆಮೇರಿಕಾ ಮತ್ತು ಯುರೋಪಿಯನ್ ದೇಶಗಳಲ್ಲಿ ಆರೋಗ್ಯ ವ್ಯವಸ್ಥೆ ಸಂಪೂರ್ಣ ಖಾಸಗಿ ಉದ್ದಿಮೆಗಳ ಹತೋಟಿಯಲ್ಲಿದೆ. ಅಲ್ಲಿನ ಜನರು ಹೆಲ್ತ್ ಇನ್ಸೂರೆನ್ಸ್ ಇದ್ದರೆ ಮಾತ್ರ ಬದುಕು ಉಳಿಯಲು ಸಾಧ್ಯ. ಕೋಟ್ಯಾಂತರ ಅಮೆರಿಕನ್ನರಿಗೆ ಇಂತಹ ಇನ್ಶೂರೆನ್ಸ್ ಸಹ ಇಲ್ಲ. ಆಮೇರಿಕಾದಲ್ಲಿ ಒಬಾಮ ಅಧಿಕಾರದಲ್ಲಿ ಇದ್ದಾಗ ಜಾರಿಗೆ ತಂದ ಸೀಮಿತವಾದರೂ ಇನ್ಶೂರೆನ್ಸ್ ಕವರೇಜ್ ನ್ನು ವಿಸ್ತರಿಸುವ ’ಒಬಾಮ ಕೇರ್’ ಟ್ರಂಪ್ ಬಂದ ನಂತರ ಮೊಟಕುಗೊಂಡಿದೆ. ಇಟಲಿ, ಫ್ರಾನ್ಸ್, ಸ್ಪೆಯೀನ್ ದೇಶಗಳಲ್ಲೂ ಇದೇ ಸ್ಥಿತಿ. ಇವೇ ಕಾರಣದಿಂದ ಈ ದೇಶಗಳಲ್ಲಿ ಸೊಂಕು ತಗಲಿದ ಮತ್ತು ಮೃತಪಟ್ಟವರ ಸಂಖ್ಯೆ ಚೀನಾದ ಸಂಖ್ಯೆಯನ್ನು ಮೀರಿಸಿವೆ. ಇವೆಲ್ಲದರ ಹಿನ್ನೆಲೆಯಲ್ಲಿ ನಮ್ಮ ದೇಶದ ಲಾಕ್‌ಡೌನ್ ಕ್ರಮವನ್ನು ನೋಡಿದರೆ ಪರಿಣಾಮವನ್ನು ಊಹಿಸಬಹುದು. ಪಾಶ್ಚಿಮಾತ್ಯ ದೇಶಗಳಂತೆ ನಮ್ಮ ಆರೋಗ್ಯ ವ್ಯವಸ್ಥೆ ಕೂಡ ಖಾಸಗಿ ಉದ್ದಿಮೆಗಳ ಹಿಡಿತದಲ್ಲಿದೆ. ಸರಕಾರ ಆರೋಗ್ಯ ಕ್ಷೇತ್ರದ ಮೇಲೆ ಅತ್ಯಂತ ಕನಿಷ್ಠ ವಿನಿಯೋಜಿಸುತ್ತಿದೆ. ಶೇ.೭೦ ರಷ್ಟಿರುವ ಖಾಸಗಿ ಸವಲತ್ತುಗಳು ನಮ್ಮ ದೇಶದ ಶೇ.೩೦ರಷ್ಟು ಅನುಕೂಲಸ್ಥರಿಗೆ ಸೇವೆ ನೀಡುತ್ತಿವೆ. ಅತ್ಯಂತ ಕನಿಷ್ಠ ಸವಲತ್ತು ಹೊಂದಿರುವ ಸರಕಾರಿ ವ್ಯವಸ್ಥೆಯನ್ನು ಬಡವರು ಅವಲಂಬಿಸಿದ್ದಾರೆ. ಇದರಿಂದಾಗಿ ಆ ವ್ಯವಸ್ಥೆಯಲ್ಲಿ ಕುಂದುಕೊರತೆ ಬಗ್ಗೆ ಬಡವರ ದೂರುಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸುವುದಿಲ್ಲ.

ವೈದ್ಯರ, ಔಷಧಿ, ಇಕ್ವಿಪ್‌ಮೆಂಟ್ ಮತ್ತು ಇತರ ಮೂಲಸೌಕರ್ಯಗಳ ಕೊರತೆ ಅನುಭವಿಸುತ್ತಿರುವ ಸರಕಾರಿ ಆರೋಗ್ಯ ವ್ಯವಸ್ಥೆಯು ಕೊರೊನಾದಂತಹ ಮಹಾಮಾರಿಯನ್ನು ಪರಿಹರಿಸುವುದು ದೂರದ ಮಾತು. ಇಂತಹ ಸಂದರ್ಭದಲ್ಲಿ ಕೊರೊನಾ ವೈರಸ್ ದೇಶವ್ಯಾಪಿ ಹಬ್ಬದಂತೆ ನೋಡಿಕೊಳ್ಳಲು ಲಾಕ್‌ಡೌನ್ ಸುಲಭದ ದಾರಿ. ಆದರೆ ಲಾಕ್ ಡೌನ್ ದೇಶದ ಜನರ ಮೇಲೆ ಅದರಲ್ಲೂ ತಳಸ್ತರದ ಜನರ ಮೇಲೆ ಮಾಡುವ ಪರಿಣಾಮವನ್ನು ಊಹಿಸಲು ಅಸಾಧ್ಯ. ವಲಸೆ ಕಾರ್ಮಿಕರ ಭೀಕರ ಸ್ಥಿತಿ ಎಲ್ಲ ವ್ಯವಸ್ಥೆಯಲ್ಲೂ ತಳಸ್ತರದ ಜನರು ಉತ್ಪಾದನೆಯ ಮೂಲವೂ ಹೌದು, ಗ್ರಾಹಕರೂ ಹೌದು. ಕೊರೊನಾ ವೈರಸ್ ಮಾನವ ಸಂಪನ್ಮೂಲದ ಮೇಲೆ ದಾಳಿ ಮಾಡುತ್ತಿದೆ. ಇದನ್ನು ತಡೆಯಲು ಸರಕಾರ ಲಾಕ್ ಡೌನ್ ಘೋಷಿಸಿದೆ. ಆದರೆ ಲಾಕ್ ಡೌನ್‌ನ್ನು ಘೋಷಿಸುವ ಮುನ್ನ ಆರು ಕೋಟಿಯಷ್ಟಿರುವ ಅಲೆಮಾರಿಗಳು, ೪೦ ಕೋಟಿಗಿಂತಲೂ ಹೆಚ್ಚು ಸಂಖ್ಯೆಯಲ್ಲಿರುವ ಅಸಂಘಟಿತ ಕಾರ್ಮಿಕರು, ಸಣ್ಣಪುಟ್ಟ ವ್ಯಾಪಾರಿ, ಸಣ್ಣ ಉದ್ಯಮಿಗಳ ಇರುವಿಕೆಯನ್ನು ಸರಕಾರ ಪರಿಗಣಿಸಿಯೇ ಇಲ್ಲ. ಎಲ್ಲ ಗ್ರಾಮೀಣ ಪ್ರದೇಶಗಳಿಂದಲೂ ನಗರ ಪ್ರದೇಶಗಳಿಗೆ ಹೊಟ್ಟೆಪಾಡಿಗಾಗಿ ವಲಸೆ ಹೋಗುವುದು ಸಾಮಾನ್ಯ. ಸಣ್ಣಪುಟ್ಟ ನಗರಗಳಿಗೆ ಸಣ್ಣ ಸಂಖ್ಯೆಯಲ್ಲಿ ವಲಸೆ ಹೋದರೆ ದೊಡ್ಡ ನಗರಗಳಿಗೆ ಬರುವ ವಲಸೆ ಕಾರ್ಮಿಕರ ಸಂಖ್ಯೆ ದೊಡ್ಡದಿದೆ. ಕರ್ನಾಟಕದ ಹಲವು ನಗರಗಳಲ್ಲಿ ಇಂದು ಸ್ಥಳೀಯ ಕೆಲಸಗಾರರಿಗಿಂತ ಹೆಚ್ಚು ಉತ್ತರ ಪ್ರದೇಶ, ಬಿಹಾರ, ಒರಿಸ್ಸಾ ಹೀಗೆ ಹಲವು ಉತ್ತರ ಭಾರತ ರಾಜ್ಯಗಳ ಕೆಲಸಗಾರರಿದ್ದಾರೆ. ಇದು ಕರ್ನಾಟಕದ ಕತೆ ಮಾತ್ರವಲ್ಲ, ದಕ್ಷಿಣದ ಎಲ್ಲ ರಾಜ್ಯಗಳ ಕತೆಯೂ ಹೆಚ್ಚು ಕಡಿಮೆ ಇದೆ. ಉತ್ತರ ಭಾರತದ ಅಭಿವೃದ್ಧಿ ಹೊಂದಿದ ರಾಜ್ಯಗಳಲ್ಲೂ ಇದೇ ಸ್ಥಿತಿ ಇದೆ. ಲಾಕ್ ಡೌನ್ ಘೋಷಿಸುವ ಮುನ್ನ ವಲಸೆ ಕಾರ್ಮಿಕರಿಗೆ ಎರಡು ಆಯ್ಕೆಗಳನ್ನು ನೀಡಬಹುದಿತ್ತು.

ಒಂದು, ಅವರು ವಲಸೆಗೆ ಬಂದ ಸ್ಥಳದಲ್ಲೇ ಮುಂದುವರಿಯಲು ವ್ಯವಸ್ಥೆ ಕಲ್ಪಿಸುವುದು. ಎರಡು, ಮುಂದುವರಿಯಲು ಆಸಕ್ತಿ ಇಲ್ಲದಿದ್ದರೆ ಊರಿಗೆ ಹಿಂತಿರುಗಲು ಅವಕಾಶ ನೀಡುವುದು. ವಲಸೆ ಕಾರ್ಮಿಕರು ಬಂದ ಸ್ಥಳದಲ್ಲೇ ಇರಬೇಕಾದರೆ ಅವರಿಗೆ ವಾಸ ಇರಲು ಅವಶ್ಯವಿರುವ ಸವಲತ್ತುಗಳನ್ನು – ಆಹಾರ, ನೀರು, ವಸತಿ ಮತ್ತು ಇತರ ಮೂಲಸೌಕರ್ಯಗಳನ್ನು ಒದಗಿಸಬೇಕಿತ್ತು. ಒಂದು ವೇಳೆ ಅವರು ಊರಿಗೆ ಹೋಗಲು ಆಸಕ್ತರಾಗಿದ್ದರೆ ಅವರು ಹಿಂತಿರುಗಿ ಹೋಗಲು ಒಂದೆರಡು ದಿನಗಳ ಅವಕಾಶ ಮತ್ತು ಸಾರಿಗೆ ವ್ಯವಸ್ಥೆ ಮಾಡುವುದು. ಇಂತಹ ಪೂರ್ವ ತಯಾರಿ ಇಲ್ಲದೆ ನೋಟು ರದ್ದತಿ ತರಹ ಒಂದೇ ಉಸಿರಲ್ಲಿ ೨೧ ದಿನಗಳ ಲಾಕ್‌ಡೌನ್ ಘೋಷಿಸಿ ಎಲ್ಲ ಸಾರಿಗೆ ವ್ಯವಸ್ಥೆಯನ್ನು ರದ್ದುಗೊಳಿಸಿದರೆ ಏನಾಗಬಹುದು? ನೋಟು ಚಲಾವಣೆ ಅರ್ಥ ವ್ಯವಸ್ಥೆಯ ರಕ್ತ ಸಂಚಲನದಂತೆ ಕೆಲಸ ಮಾಡುತ್ತದೆ. ಅದನ್ನು ಏಕ್‌ದಂ ನಿಲ್ಲಿಸಿದ ಕಾರಣ ಇಡೀ ಅರ್ಥ ವ್ಯವಸ್ಥೆಯೇ ಕುಸಿದು ಬಿತ್ತು. ಇದಕ್ಕಿಂತಲೂ ಭೀಕರವಾದ ಪರಿಣಾಮವನ್ನು ಪೂರ್ವ ಸೂಚನೆ ಇಲ್ಲದೆ ಘೋಷಿಸಿದ ಲಾಕ್‌ಡೌನ್ ಮಾಡಬಹುದು. ವಲಸೆ ಕಾರ್ಮಿಕರು ಬಂದ ಸ್ಥಳದಲ್ಲಿ ಕೆಲಸವಿಲ್ಲದೆ, ಅನ್ನ ನೀರಿಲ್ಲದೆ ಪರದಾಡುತ್ತಿರುವುನ್ನು ನಾವೆಲ್ಲ ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ಬಂದ ಸ್ಥಳದಲ್ಲಿ ಆಶ್ರಯವಿಲ್ಲ, ಊರಿಗೆ ಹೋಗುವ ಎಂದರೆ ಎಲ್ಲ ಸಾರಿಗೆಗಳು ಬಂದ್ ಆಗಿವೆ. ಸಣ್ಣಪುಟ್ಟ ಮಕ್ಕಳನ್ನು ನಡೆಸಿಕೊಂಡು, ಹಸು ಕೂಸುಗಳನ್ನು ಕಂಕುಳದಲ್ಲಿ ಎತ್ತಿಕೊಂಡು ಕಿಲೋಮೀಟರ್ ಗಟ್ಟಲೆ ನಡೆದುಕೊಂಡು ಹೋಗುವ ದೃಶ್ಯ ಕಲ್ಲು ಮನಸ್ಸನ್ನು ಕರಗಿಸಬಹುದು. ವಿದೇಶದಲ್ಲಿರುವ ಭಾರತದ ಪ್ರಜೆಗಳನ್ನು ವಿಮಾನದ ಮೂಲಕ ಭಾರತಕ್ಕೆ ತರಬೇಕೆಂದು ತೋಚುವ ಸರಕಾರಕ್ಕೆ ನಮ್ಮದೇ ದೇಶದೊಳಗೆ ದುಡಿಯುವ ಲಕ್ಷಾಂತರ ಕಾರ್ಮಿಕರನ್ನು ಮನೆ ಸೇರಿಸಬೇಕೆನ್ನುವ ಕನಿಷ್ಠ ಯೋಚನೆ ಬರಲಿಲ್ಲ. ಇದೇ ಕಾರ್ಮಿಕರು ಇದ್ದ ಸ್ಥಳದಲ್ಲಿ ಉದ್ಯೋಗ, ಆಹಾರ, ಕುಡಿಯುವ ನೀರು ಇತ್ಯಾದಿಗಳ ಖರೀದಿಗೆ ಬೀದಿಗೆ ಬಂದರೆ ಪೋಲಿಸರ ಹೊಡೆತ. ತಮ್ಮದೇ ವ್ಯವಸ್ಥೆ ಮಾಡಿಕೊಂಡು ಊರಿಗೆ ಹೋಗಲು ಪ್ರಯತ್ನಿಸಿದರೆ ಅಲ್ಲೂ ಪೋಲಿಸ್ ಹೊಡೆತ. ಪೋಲಿಸ್ ಹೊಡೆಯುವುದು ಸರಿಯಲ್ಲ ಎನ್ನುವ ಬದಲು ಇವರೆಲ್ಲ ಯಾಕಾದರೂ ಬೀದಿಗೆ ಬರುತ್ತಾರೆಂದು ಬಡಜನರನ್ನೇ ಜರಿಯುವ ಮಾಧ್ಯಮ. ಇವೆಲ್ಲವನ್ನು ನೋಡಿದರೆ ನಮ್ಮದೊಂದು ನಾಗರಿಕ ಸಮಾಜವೇ ಎನ್ನುವ ಸಂದೇಹ ಕಾಡುತ್ತಿದೆ. ಬಡವರು ವೈರಸ್ ವಾಹಕರಲ್ಲ ಹಿಂದೆ ಬಡವರನ್ನು ವೈರಸ್ ತರಹ ಏಪ್ರಿಲ್ ೬-೧೨, ೨೦೨೦ ೭ ನೋಡುತ್ತಿದ್ದರು. ಇಂದು ಬಡವರನ್ನು ವೈರಸ್ ವಾಹಕದ ರೂಪದಲ್ಲಿ ನೋಡುತ್ತಿದ್ದಾರೆ. ವೈರಸ್ ಬಡವರಿಂದಲೇ ಹರಡುತ್ತಿದೆ, ಅವರ ಚಲನೆಯನ್ನು ಹತ್ತಿಕ್ಕಿದ್ದರೆ ವೈರಸ್ ಚಲನೆಯನ್ನು ಹತೋಟಿಗೆ ತರಬಹುದೆನ್ನುವ ದೃಷ್ಟಿಕೋನ ಇದು.

ವೈರಸ್ ಭಾರತದಲ್ಲಿ ಸೃಷ್ಟಿಯಾಗಿಲ್ಲ, ಹೊರಗಿನಿಂದ ಬಂದಿದೆ ಮತ್ತು ಇದನ್ನು ಬಡವರು ಭಾರತಕ್ಕೆ ತಂದಿಲ್ಲ. ಮಧ್ಯಮ ಮತ್ತು ಶ್ರೀಮಂತ ವರ್ಗ ತಂದಿವೆ. ಭಾರತ ಲಾಕ್‌ಡೌನ್ ಆದಾಗ ಅವರು ಉದ್ಯೋಗಕ್ಕಾಗಿ, ಊಟಕ್ಕಾಗಿ, ಸಹಾಯಕ್ಕಾಗಿ ಹೊರಗೆ ಓಡಾಡುವ ಅಗತ್ಯವಿಲ್ಲ. ಹೊರಗೆ ಹೋಗದಿದ್ದರೂ ಸಂಬಳ, ಪಿಂಚಣಿ, ಡಿವಿಡೆಂಡ್, ಬಡ್ಡಿ, ಬಾಡಿಗೆ ಇತ್ಯಾದಿ ರೂಪಗಳಲ್ಲಿ ಅವರಿಗೆ ಆದಾಯ ಬರುತ್ತದೆ. ಆದರೆ ಹೊರಗೆ ಹೋಗಿ ದುಡಿಯದಿದ್ದರೆ ಜೀವಂತ ಇರಲು ಸಾಧ್ಯವೇ ಇಲ್ಲ ಎನ್ನುವವರು ಏನು ಮಾಡಬೇಕು? ಇಂತಹ ಅಯೋಜಿತ ಲಾಕ್‌ಡೌನ್ ಅಸಂಘಟಿತ ವಲಯದ ದುಡಿಮೆಯನ್ನು ನಂಬಿದ ಎಲ್ಲರ ಬದುಕನ್ನು ನರಕಸದೃಶ್ಯ ಮಾಡುವುದನ್ನು ಈಗಾಗಲೇ ನೋಡುತ್ತಿದ್ದೇವೆ. ದುಡಿಮೆ ಇಲ್ಲದ, ಆದಾಯವಿಲ್ಲದ, ಊಟವಿಲ್ಲದ ಇವರ ರೋಗ ನಿರೋಧಕ ಕ್ಷೀಣಿಸುತ್ತದೆಂದು ಹೇಳಲು ವೈದ್ಯರು ಬೇಕಿಲ್ಲ. ಇವರೆಲ್ಲ ಮಹಾಮಾರಿಗೆ ಬಲುಬೇಗ ತುತ್ತಾಗಬಹುದು. ತುಂಬಾ ತಡವಾಗಿ ಘೋಷಿಸಿದ ಅರೆಬರೆ ಪರಿಹಾರಗಳ ಭರವಸೆ ಸಕಾಲದಲ್ಲಿ ತಲುಪಿದರೆ ಪುಣ್ಯ. ಒಂದು ವೇಳೆ ಸರಕಾರ ಇವರಿಗೆ ನೀಡುವ ಕನಿಷ್ಠ ಸವಲತ್ತನ್ನೂ ಸಕಾಲದಲ್ಲಿ ತಲುಪಿಸದಿದ್ದರೆ ಇವರೆಲ್ಲ ಮಹಾಮಾರಿಯಿಂದ ತಪ್ಪಿಸಿಕೊಂಡರೂ, ಆಹಾರದ ಕೊರತೆಯಿಂದ ಸಾಯುವ ಸಾಧ್ಯತೆ ಹೆಚ್ಚಿದೆ. ನಮ್ಮ ದುಡಿಮೆಗಾರರ ಶೇ.೯೪ ರಷ್ಟು ಜನ ಅಸಂಘಟಿತ ವಲಯದಲ್ಲಿ ದುಡಿಯುತ್ತಿದ್ದಾರೆ. ನಮ್ಮ ಜಿಡಿಪಿಯ ಶೇ.೪೯ ರಷ್ಟು ಇವರ ದುಡಿಮೆಯಿಂದ ಬರುತ್ತಿದೆ. ನೋಟು ರದ್ದತಿ ಸಂದರ್ಭದಲ್ಲೂ ಮೊದಲು ಅಸಂಘಟಿತ ವಲಯದ ಆರ್ಥಿಕ ಚಟುವಟಿಕೆಗಳು ಕುಂಠಿತಗೊಂಡವು. ಆಗ ಅದು ಮಾಧ್ಯಮದಲ್ಲಿ ದೊಡ್ಡ ಸುದ್ದಿಯಾಗಲಿಲ್ಲ. ಸಂಘಟಿತ ಮತ್ತು ಅಸಂಘಟಿತ ವಲಯಗಳು ಪರಸ್ಪರ ಅವಲಂಬಿತ. ಸಂಘಟಿತ ವಲಯದ ಹಲವು ಬಿಡಿಭಾಗಗಳು ಅಸಂಘಟಿತ ವಲಯದಲ್ಲಿ ಉತ್ಪಾದನೆಯಾಗುತ್ತವೆ. ಜೊತೆಗೆ ಸಂಘಟಿತ ವಲಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಸಂಘಟಿತ ಕಾರ್ಮಿಕರಿದ್ದಾರೆ. ಅಷ್ಟು ಮಾತ್ರವಲ್ಲ ಸಂಘಟಿತ ವಲಯದ ಉತ್ಪಾದನೆಯ ಅನುಭೋಗದಲ್ಲಿ ಅಸಂಘಟಿತ ವಲಯದ ದುಡಿಮೆಗಾರರ ಪಾತ್ರವೂ ಇದೆ. ಹೀಗಾಗಿ ಸಂಘಟಿತ ವಲಯದ ಉತ್ಪಾದನೆ ಮತ್ತು ಬೇಡಿಕೆ ಎರಡೂ ಕೂಡ ಅಸಂಘಟಿತ ವಲಯದ ಉತ್ಪಾದನೆ ಮತ್ತು ಬೇಡಿಕೆ ಮೇಲೆ ನಿಂತಿದೆ. ಇದೇ ಕಾರಣದಿಂದ ನೋಟು ರದ್ದತಿಯ ತಕ್ಷಣದ ಪರಿಣಾಮವಾಗಿ ಅಸಂಘಟಿತ ವಲಯದ ಆರ್ಥಿಕ ಚಟುವಟಿಕೆಗಳು ಕುಂಠಿತಗೊಂಡರೆ ನಂತರದ ದಿನಗಳಲ್ಲಿ ಇದರ ಪರಿಣಾಮ ಸಂಘಟಿತ ವಲಯದ ಮೇಲೂ ಕಾಣಲು ಆರಂಭವಾಯಿತು. ಆ ಸಂದರ್ಭದಲ್ಲಿ ಮಾಧ್ಯಮಗಳು ಕಿರುಚಾಡಲು ಆರಂಭಿಸಿದವು. ಸರಕಾರ ಎಚ್ಚೆತ್ತುಕೊಂಡು ಸಂಘಟಿತ ವಲಯದ ಉದ್ಯಮಿಗಳಿಗೆ ಕೋಟಿಗಟ್ಟಲೆ ತೆರಿಗೆ ವಿನಾಯಿತಿ ನೀಡಿದೆ. ಅಸಂಘಟಿರ ವಲಯದಲ್ಲಿ ದುಡಿಯುವವರ ಆದಾಯ ಹೆಚ್ಚಿಸಲು ಏನೇನೂ ಕ್ರಮ ಕೈಗೊಳ್ಳಲಿಲ್ಲ. ಇದರಿಂದ ನಮ್ಮ ದೇಶದ ಜಿಡಿಪಿ ಕುಸಿದು ಪಾತಾಳ ಸೇರಿತು. ಇಂತಹ ಸಂದರ್ಭದಲ್ಲಿ ಈ ಮಹಾಮಾರಿ ವಕ್ಕರಿಸಿದೆ. ಈ ಸಂದರ್ಭದಲ್ಲಾದರೂ ಸರಕಾರ ಎಚ್ಚತ್ತುಕೊಂಡು ತಳಸ್ತರದ ಜನರ ಕೈಯಲ್ಲಿ ಅಲ್ಪಸ್ವಲ್ಪ ಹಣ ಇರುವಂತೆ ನೋಡಿಕೊಳ್ಳಬೇಕಿತ್ತು. ಆದರೆ ಅಂತಹ ಕ್ರಮಗಳು ಇನ್ನೂ ಜಾರಿಗೆ ಬಂದಿಲ್ಲ. ಇದರಿಂದಾಗಿ ನೋಟು ರದ್ದತಿ ಪರಿಣಾಮದ ಮತ್ತೊಂದು ಮತ್ತು ಬಹುಶಃ ಇನ್ನಷ್ಟು ಭೀಕರ ರೂಪವನ್ನು ಅಯೋಜಿತ ಲಾಕ್‌ಡೌನ್‌ನಿಂದಲೂ ನಿರೀಕ್ಷಿಸಬಹುದು. ಕೃಷಿ, ಸಣ್ಣಪುಟ್ಟ ವ್ಯಾಪಾರ, ಉದ್ದಿಮೆ, ಅಸಂಘಟಿತ ವಲಯದ ದುಡಿಮೆ ಎಲ್ಲವೂ ಮೊದಲ ಹಂತದಲ್ಲಿ ದೊಡ್ಡ ಮಟ್ಟಿನ ಕುಸಿತ ಕಾಣಲಿವೆ. ಶೇ.೭೦ ರಷ್ಟು ಜನ ಈಗಾಗಲೇ ಅತ್ಯಂತ ಕನಿಷ್ಠ ಆದಾಯದಲ್ಲಿ ಬದುಕುತ್ತಿದ್ದಾರೆ. ಇವರು ಅವಲಂಬಿಸಿದ ಎಲ್ಲ ಕ್ಷೇತ್ರಗಳು ಕುಸಿತ ಕಾಣುವುದರಿಂದ ಇವರು ಅಲ್ಲಿ ಉದ್ಯೋಗ ನಿರೀಕ್ಷಿಸುವುದು ಕಷ್ಟ. ಸಂಘಟಿತ ವಲಯ ಇವರನ್ನು ಹತ್ತಿರ ಸೇರಿಸದಿರುವುದರಿಂದ ಅಸಂಘಟಿತ ವಲಯದಲ್ಲೂ ದೊಡ್ಡ ನಿರುದ್ಯೋಗ ಸೃಷ್ಟಿಯಾಗಬಹುದು. ಆದಾಯ ಗಳಿಸುವ ದಾರಿಗಳೆಲ್ಲ ಮುಚ್ಚುವುದರಿಂದ ಇವರ ಆರೋಗ್ಯ, ಬದುಕು ಎಲ್ಲವೂ ಕಠಿಣ ಪರೀಕ್ಷೆಗೆ ಒಳಗಾಗಬಹುದು. ಯಾವ ಕ್ರಮ ಕೈಗೊಳ್ಳಬಹುದು? ಇಂತಹ ಕರಾಳ ಭವಿಷ್ಯ ಅನಿವಾರ‍್ಯವೆನ್ನಲ್ಲ. ಸರಕಾರ ಮನಸ್ಸು ಮಾಡಿದರೆ ಈ ಸ್ಥಿತಿಯನ್ನು ಸಂಪೂರ್ಣವಲ್ಲದಿದ್ದರೂ ಬಹುತೇಕ ಬದಲಾಯಿಸಬಹುದು.

ಸರಕಾರ ತಕ್ಷಣಈ ಆರು ಕ್ರಮಗಳನ್ನು ತೆಗೆದುಕೊಳ್ಳಬೇಕು.

ಒಂದು, ಅಸಂಘಟಿತ ವಲಯದಲ್ಲಿ ದುಡಿಯುವವರನ್ನು ಗುರುತಿಸುವುದು ಮತ್ತು ಅವರಿಗೆ ಕನಿಷ್ಠ ಮೂಲ ಸೌಕರ್ಯಗಳನ್ನು ಪೂರೈಸುವುದು. ಅಸಂಘಟಿತ ವಲಯದಲ್ಲಿರುವವರನ್ನು ಗುರುತಿಸಲು ಸಾಕಷ್ಟು ಸಾಧನಗಳಿವೆ. ಆಧಾರ್, ರೇಶನ್ ಕಾರ್ಡ್, ಬಿಪಿಎಲ್ ಸರ್ವೇ ಇತ್ಯಾದಿ ಮಾಹಿತಿಗಳನ್ನು ಬಳಸಿಕೊಂಡು ಅತೀ ಜರೂರು ಮೂಲ ಸೌಕರ್ಯಗಳ ಅವಶ್ಯಕತೆ ಇರುವವರನ್ನು ಗುರುತಿಸಬಹುದು. ಗುರುತಿಸಿದ ನಂತರ ಪಂಚಾಯಿತಿಗಳ ಮೂಲಕ ಅಥವಾ ಇತರ ವಿಕೇಂದ್ರೀಕೃತ ವ್ಯವಸ್ಥೆ ಮೂಲಕ ಅವರಿಗೆ ಆಹಾರ ಸಾಮಗ್ರಿ ಮತ್ತು ಇತರ ಸವಲತ್ತುಗಳನ್ನು ಕನಿಷ್ಠ ಮೂರು ತಿಂಗಳಾದರೂ ಪೂರೈಕೆ ಮಾಡಬೇಕು. ಮೂಲಸೌಕರ್ಯಗಳಲ್ಲಿ ನೀರು ಪೂರೈಕೆ ಅತೀ ಮುಖ್ಯ. ಸೋಕು ತಗಲದಂತೆ ಇರಲು ಆಗಾಗ್ಗ ಸಾಬೂನು ಹಾಕಿ ಕೈತೊಳೆಯಬೇಕೆನ್ನುತ್ತಾರೆ. ಕುಡಿಯುವ ನೀರಿಗೆ ಪರದಾಡುವ ಜನ ಅಗಾಗ್ಗ ಕೈತೊಳೆಯಬೇಕಾದರೆ ನೀರಿನ ಪೂರೈಕೆ ಅತೀ ಅವಶ್ಯ. ಶುಚಿತ್ವ ಕಾಪಾಡಲು ಕೂಡ ನೀರಿನ ಪೂರೈಕೆ ಮುಖ್ಯ.

ಎರಡು, ಅತ್ಯಂತ ಕನಿಷ್ಠ ರೋಗ ನಿರೋಧಕ ಶಕ್ತಿ ಹೊಂದಿರುವ ಇವರೆಲ್ಲ ಬಹುಬೇಗ ಸೋಂಕಿಗೆ ಬಲಿಯಾಗುವ ಸಾಧ್ಯತೆ ಇದೆ. ಆದುದರಿಂದ ಕೊರೊನಾರೋಗದ ಲಕ್ಷಣ ಇದ್ದವರನ್ನು ಮಾತ್ರ ಪರೀಕ್ಷಿಸುವ ಸರಕಾರದ ಇಂದಿನ ನಿಲುವನ್ನು ಬದಲಾಯಿಸಿಕೊಂಡು ಕೊರೊನಾ ಸೋಂಕಿತರನ್ನು ಪತ್ತೆ ಹಚ್ಚಲು ರ‍್ಯಾಂಡಮ್ ಪರೀಕ್ಷೆಗಳನ್ನು ನಡೆಸಬೇಕು.

ಮೂರು, ಕೊರೊನಾ ರೋಗದ ಶಂಕಿತರನ್ನು ಮನೆಯಲ್ಲೇ ಪ್ರತ್ಯೇಕವಾಗಿ ಇರಬೇಕೆನ್ನುವ ಸರಕಾರದ ಇಂದಿನ ನಿಲುವು ತಳಸ್ತರದ ಜನರಿಗೆ ಅನ್ವಯಿಸುವುದು ಸರಿಯಲ್ಲ. ಏಕೆಂದರೆ ಬಹುತೇಕ ಸಂದರ್ಭದಲ್ಲಿ ಇವರೆಲ್ಲ ಒಂದೆರಡು ಕೊಠಡಿಗಳುಳ್ಳ ಸಣ್ಣಪುಟ್ಟ ವಸತಿಯಲ್ಲಿರುತ್ತಾರೆ. ಇಂತಹ ಸಣ್ಣ ಜಾಗದಲ್ಲಿ ಏಳೆಂಟು ಮಂದಿ ವಾಸಿಸುವುದು ಸಾಮಾನ್ಯ. ಇಂತಹ ಸಣ್ಣ ಜಾಗದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಸಾಧ್ಯವೇ ಇಲ್ಲ. ಅಷ್ಟು ಮಾತ್ರವಲ್ಲ ಮನೆಯ ಎಲ್ಲರಿಗೂ ಸೋಂಕು ತಗಲುವ ಸಾಧ್ಯತೆ ಹೆಚ್ಚಿದೆ. ಆದುದರಿಂದ ತಳಸ್ತರದ ಜನರ ಶಂಕಿತರನ್ನು ಆಸ್ಪತ್ರೆಯಲ್ಲಿ ಸೇರಿಸಿ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನು ತಕ್ಷಣ ಜಾರಿಗೆ ತರಬೇಕು.

ನಾಲ್ಕು, ದುಡಿಯುವ ಸ್ಥಳದಲ್ಲಿ ಅಥವಾ ಸಣ್ಣಪುಟ್ಟ ಫ್ಯಾಕ್ಟರಿಗಳಲ್ಲಿ ಒಬ್ಬ ಕೆಲಸಗಾರರಿಗೆ ಸೋಕು ತಗಲಿದರೆ ಎಲ್ಲ ಕಾರ್ಮಿಕರನ್ನು ಮನೆಯಲ್ಲೇ ಇರಬೇಕೆಂದು ತಾಕೀತು ಮಾಡುವ ಇಂದಿನ ಸರಕಾರದ ನಿಲುವನ್ನು ಬದಲಾಯಿಸಿಕೊಳ್ಳಬೇಕು. ಮೇಲೆ ಹೇಳಿದಂತೆ ಸಣ್ಣಪುಟ್ಟ ಫ್ಯಾಕ್ಟರಿಗಳಲ್ಲಿ ದುಡಿಯುವವರೆಲ್ಲ ಮನೆಯಲ್ಲೆ ಉಳಿದರೆ ಫ್ಯಾಕ್ಟರಿ ಬಂದ್ ಆಗುತ್ತದೆ. ಜೊತೆಗೆ ಎಲ್ಲ ಕೆಲಸಗಾರರು ಆದಾಯ ಕಳೆದುಕೊಳ್ಳುತ್ತಾರೆ. ಇಂತಹ ದೂರಾಲೋಚನೆಯಿಲ್ಲದ ಕ್ರಮದ ಬದಲು ಫ್ಯಾಕ್ಷರಿಯ ಎಲ್ಲ ಕಾರ್ಮಿಕರನ್ನು ಪರೀಕ್ಷಿಸಿ ಯಾರೂ ಶಂಕಿತರಿದ್ದಾರೋ ಅವರನ್ನು ಆಸ್ಪತ್ರೆಗೆ ಸೇರಿಸುವ ಕ್ರಮ ಕೈಗೊಳ್ಳಬೇಕು.

ಐದು, ದೇಶ, ರಾಜ್ಯ, ಜಿಲ್ಲೆ, ತಾಲ್ಲೂಕು, ಹಳ್ಳಿಗಳೆಲ್ಲ ಬೇಲಿ ಹಾಕಿಕೊಂಡು ಕೂತಿವೆ. ಇಂತಹ ಸ್ಥಿತಿಯಲ್ಲಿ ಜರೂರು ಚಿಕಿತ್ಸೆಗೆ ಪ್ರಯಾಣಿಸುವುದು ಕಷ್ಟವಾಗಿದೆ. ಅವುಗಳ ಜೊತೆಗೆ ಸರಕುಗಳ ಸಾಗಾಟ ಕೂಡ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಸರಕುಗಳ ಸಾಗಾಟ ನಡೆಯದಿದ್ದರೆ ರೈತರು ಬೆಳೆಯುವುದಿಲ್ಲ. ಇದೇ ಚಕ್ರ ಮುಂದುವರಿದರೆ ಆಹಾರ ಕೊರತೆ ಸೃಷ್ಟಿಯಾಗುವುದರಲ್ಲಿ ಸಂದೇಹವೇ ಇಲ್ಲ. ಇದು ದೊಡ್ಡ ಮಟ್ಟಿನ ಸಾಮಾಜಿಕ ಅಶಾಂತಿಗೆ ಕಾರಣವಾಗಬಹುದು. ಆದುದರಿಂದ ಸರಕಾರಗಳು ಈ ಬೇಲಿ ಹಾಕುವ ಕ್ರಮವನ್ನು ಶಿಸ್ತುಬದ್ಧಗೊಳಿಸಿ ಸರಕು ಸಾಗಾಟ ಹಾಗೂ ಎಮರ್ಜನ್ಸಿ ಮೆಡಿಕಲ್ ಸೇವೆಗೆ ಓಡಾಡುವುದನ್ನು ಆದಷ್ಟು ಬೇಗ ಸರಾಗಗೊಳಿಸಬೇಕು.

ಆರು, ಮಾಧ್ಯಮಗಳು ಜನರನ್ನು ಭಯಭೀತರನ್ನಾಗಿಸುವುದನ್ನು ಕಡಿಮೆ ಮಾಡಿ ವೈರಸ್ ಬಗ್ಗೆ ಶಿಕ್ಷಣ ಕೊಡುವುದನ್ನು ಕಲಿಯಬೇಕು. ಜೊತೆಗೆ ಪಂಚಾಯತ್, ತಾಲ್ಲೂಕು, ಜಿಲ್ಲಾ ಸ್ತರದಲ್ಲಿರುವ ಆರೋಗ್ಯ ವ್ಯವಸ್ಥೆ ಎದುರಿಸುತ್ತಿರುವ ಕುಂದುಕೊರತೆಗಳನ್ನು ಸರಕಾರದ ಗಮನಕ್ಕೆ ತರುವ ಅಗತ್ಯವಿದೆ. ಈ ಕುಂದುಕೊರತೆಗಳು ಪರಿಹಾರವಾದರೆ ರೋಗ ಹರಡಿದರೂ ಹತೋಟಿಗೆ ತರಬಹುದು.

ದುಡಿಯುವ ಜನ ದೇಶದ ಆಸ್ತಿ ಹಿಂದೆ ಮತ್ತು ಇಂದೂ ನಮ್ಮ ಸಂಸ್ಕೃತಿಯಲ್ಲಿ ದೈಹಿಕ ಶ್ರಮ ಪಡುವವರಿಗೆ ಬೆಲೆ ಇರಲಿಲ್ಲ. ಹಿಂದೆ ಕೂಡ ಸಮಾಜದ ಕಟ್ಟಕಡೆಯ ವ್ಯಕ್ತಿಗಳ ಶ್ರಮದ ಮೇಲೆ ನಮ್ಮ ಕೃಷಿ ಮತ್ತು ಇತರ ಉತ್ಪಾದನೆಗಳು ನಿಂತಿದ್ದವು. ಆದರೆ ಅವರನ್ನು ಊರೊಳಗೆ ಬಿಟ್ಟುಕೊಳ್ಳಲಿಲ್ಲ. ಅವರನ್ನು ಹತ್ತಿರ ಸೇರಿಸಲಿಲ್ಲ. ಅವರನ್ನು ಮುಟ್ಟಿದರೆ ಮಡಿಮೈಲಿಗೆ ಆಗುತ್ತಿತ್ತು. ಇವತ್ತು ನಾವು ಕೊರೊನಾ ವೈರಸನ್ನು ನೋಡುವ ರೀತಿಯಲ್ಲಿ ಹಿಂದೆ ನಮ್ಮದೇ ದುಡಿಯುವ ಜನರನ್ನು ನೋಡುವ ಪಾಠವನ್ನು ನಮ್ಮ ಮಹಾನ್ ಸಂಸ್ಕೃತಿ ಕಲಿಸಿದೆ. ಈ ಪಾಠ ಇಂದೂ ಕೂಡ ಆಚರಣೆಯಲ್ಲಿದೆ. ವಲಸೆ ಕಾರ್ಮಿಕರಿಗೆ, ಬಡವರಿಗೆ, ಸಣ್ಣಪುಟ್ಟ ವ್ಯಾಪಾರಿ ಉದ್ಯಮಿಗಳಿಗೆ ಒಂದಿಷ್ಟು ವ್ಯವಸ್ಥೆ ಮಾಡದೆ ಏಕ್‌ದಂ ಲಾಕ್‌ಡೌನ್ ಮಾಡುವುದು ಇದೇ ಮಾನಸಿಕ ಸ್ಥಿತಿಯನ್ನು ತೋರಿಸುತ್ತದೆ. ಕಾರ್ಮಿಕರು, ಬಡವರು, ಸಾಮಾನ್ಯ ಜನರು ಬೀದಿಗೆ ಬಂದಾಗ ಮನಸ್ಸೋ ಇಚ್ಚೆ ಲಾಠಿ ಬೀಸುವುದು ಪೋಲಿಸರ ಮಾನಸಿಕ ಸ್ಥಿತಿಯನ್ನು ತೋರಿಸುತ್ತಿಲ್ಲ; ಅಧಿಕಾರದಲ್ಲಿರುವವರ ಮಾನಸಿಕ ಸ್ಥಿತಿಯನ್ನು ತೋರಿಸುತ್ತಿದೆ. ಇಂತಹ ಘಟನೆಯನ್ನು ನಿಂದಿಸುವ ಬದಲು ಸರಕಾರ, ಪೋಲಿಸ್ ಮಾಡುವುದೇ ಸರಿ ಎಂದು ಬಿಂಬಿಸುವ ಮಾಧ್ಯಮ ಕೂಡ ಸೂಕ್ಷ್ಮತೆಯಿಲ್ಲದ ಸರಕಾರದ ಧೊರಣೆಯ ಮುಂದುವರಿಕೆ ಆಗಿದೆ. ಇವೆಲ್ಲ ಬದಲಾಗಬೇಕಾಗಿದೆ. ಮಸೀದಿ, ಮಂದಿರ, ಗುಡಿಗೋಪುರಗಳಲ್ಲಿ, ಹಳೇ ಧಾರ್ಮಿಕ ಗ್ರಂಥಗಳಲ್ಲಿ ಸಂಸ್ಕೃತಿಯ ದೊಡ್ಡಸ್ತಿಕೆಯನ್ನು ನೋಡುವ ಚಟ ನಮಗೆ ಚರಿತ್ರೆಯಿಂದ ಬಂದಿದೆ. ಕಲ್ಲಲ್ಲಿ, ಮಣ್ಣಲ್ಲಿ, ಮರದಲ್ಲಿ, ನೀರಲ್ಲಿ, ಪ್ರಾಣಿಗಳಲ್ಲಿ ದೇವರನ್ನು ನೋಡುವ ಪಾಠ ಕೂಡ ಸಂಸ್ಕೃತಿಯಿಂದ ಬಂದಿದೆ. ಆದರೆ ನಮ್ಮ ಹಾಗೆ ಇರುವ ಮತ್ತೊಬ್ಬ ಮನುಷ್ಯನಲ್ಲಿ ದೇವರನ್ನು ನೋಡುವ ಪಾಠ ನಮಗೆ ಎಲ್ಲೂ ಸಿಕ್ಕಿಲ್ಲ. ಆದರೆ ಚರಿತ್ರೆಯಿಂದ ಬಂದ ಸಂಸ್ಕೃತಿ ಮತ್ತು ದೇವರ ಕಲ್ಪನೆಗಳು ಇಂದು ಏನೇನೂ ಉಪಯೋಗವಿಲ್ಲ ಎನ್ನುವ ಸತ್ಯ ನಮಗೆಲ್ಲ ಅರ್ಥವಾಗಬೇಕಾಗಿದೆ. ಮಹಾನ್ ಸಂಸ್ಕೃತಿಯ ಲಕ್ಷಣವನ್ನು ನೋಡುವ ಮಾನದಂಡವೇ ಬದಲಾಗಬೇಕಾಗಿದೆ. ಸಮಾಜದ ಕಟ್ಟೆ ಕಡೆಯ ವ್ಯಕ್ತಿಯ ಬದುಕು ಹೇಗಿದೆ ಮತ್ತು ಅವರನ್ನು ಸಮಾಜ ಹೇಗೆ ನೋಡುತ್ತಿದೆ ಎನ್ನುವುದು ಮಹಾನ್ ಸಂಸ್ಕೃತಿಯ ಲಕ್ಷಣವಾಗಬೇಕಾಗಿದೆ. ಮತ್ತೊಬ್ಬರು ಚೆನ್ನಾಗಿದ್ದರೆ ಮಾತ್ರ ನಾವು ಚೆನ್ನಾಗಿರಲಿ ಸಾಧ್ಯ ಎನ್ನುವ ಪಾಠವನ್ನು ಈ ಮಹಾಮಾರಿ ಮಾಡುತ್ತಿದೆ. ಆದುದರಿಂದ ಎಲ್ಲ ವರ್ಗದ ಜನರನ್ನು ದೇಶದ ಆಸ್ತಿಯೆಂದು ಪರಿಗಣಿಸಿ ಅವರನ್ನು ರಕ್ಷಿಸಲು ಎಲ್ಲ ಕ್ರಮಗಳನ್ನು ತುರ್ತಾಗಿ ಕೈಗೊಳ್ಳುವುದು ಇಂದಿನ ಅನಿವಾರ್ಯತೆ.

ಕೃಪೆ : ಜನಶಕ್ತಿ

Recommended Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.