ವಿತ್ತೀಯ ಕೊರತೆ ಎಂಬ ಪವಿತ್ರ ಹಸು

 In ECONOMY

ವಿತ್ತೀಯ ಕೊರತೆ ಎಂಬ ಪವಿತ್ರ ಹಸು
ಇತ್ತೀಚಿನ ದಿನಗಳಲ್ಲಿ ಒಂದು ಸಂತೋಷದ ವಿಷಯ ಅಂದರೆ, ಆರ್ಥಿಕ ಅಂಶಗಳು ಹೆಚ್ಚೆಚ್ಚು ಚರ್ಚೆಯಾಗುತ್ತಿವೆ. ಜಿಡಿಪಿ, ವಿತ್ತೀಯ ಕೊರತೆ, ಇತ್ಯಾದಿ ಹಲವು ಅಂಶಗಳು ಪತ್ರಿಕೆಗಳ ಪ್ರಮುಖ ಸುದ್ದಿಗಳಾಗುತ್ತಿವೆ. ಕೆಲವೊಮ್ಮೆ ಅದನ್ನೇ ಸರ್ಕಾರದ ಸೋಲುಗೆಲುವಿನ ಅಂಶಗಳಾಗಿ ಯೋಚಿಸುತ್ತಾ ಕುಳಿತಿದ್ದೇವೆ. ಅದನ್ನು ನಿಜವಾಗಿ ಒಂದು ಮಾಪನವನ್ನಾಗಿ ಒಪ್ಪಿಕೊಳ್ಳಬೇಕಾ ಅನ್ನುವ ಅನುಮಾನವೂ ನಮಗೆ ಬರುತ್ತಿಲ್ಲ. ಅವುಗಳನ್ನು ಆಧರಿಸಿ ಹಲವು ರೇಟಿಂಗ್ ಏಜೆನ್ಸಿಗಳು ದೇಶದ ಆರ್ಥಿಕತೆಯನ್ನು ಕುರಿತಂತೆ ರೇಟಿಂಗ್ ನೀಡುತ್ತಿವೆ. ಅವು ಆರ್ಥಿಕತೆಯನ್ನು ಕುರಿತ ನಮ್ಮ ತೀರ್ಮಾನಗಳಿಗೆ ಸಮರ್ಥನೆಯಾಗಿಬಿಡುತ್ತಿವೆ. ಅವು ಒಟ್ಟಾರೆ ಏನು ಹೇಳುತ್ತಿವೆ ಎನ್ನುವುದನ್ನು ಕುರಿತ ಚರ್ಚೆಗಳು ತುಂಬಾ ಕಡಿಮೆ.
ವಿತ್ತೀಯ ಕೊರತೆಯ ವಿಷಯವನ್ನೇ ತೆಗೆದುಕೊಳ್ಳಿ. ಅದು ಜಿಡಿಪಿಯ ಶೇಕಡ ೩ರಷ್ಟನ್ನು ಮೀರಬಾರದು ಅಂತ ಹೇಳಲಾಗುತ್ತಿದೆ. ಇದನ್ನು ನಾವೆಲ್ಲಾ ಒಪ್ಪಿಕೊಂಡುಬಿಟ್ಟಿದ್ದೇವೆ. ಏನಿದು ವಿತ್ತೀಯ ಕೊರತೆ? ತುಂಬಾ ಸರಳವಾಗಿ ಹೇಳಬೇಕಾದರೆ ಸರ್ಕಾರದ ಆದಾಯ ಹಾಗೂ ಖರ್ಚಿನ ನಡುವಿನ ವ್ಯತ್ಯಾಸ. ಖರ್ಚು ಜಾಸ್ತಿಯಾದಾಗ ಕೊರತೆಯುಂಟಾಗುತ್ತದೆ. ಹಾಸಿಗೆ ಇದ್ದಷ್ಟು ಕಾಲು ಚಾಚು, ಇತ್ಯಾದಿ ಮಾತುಗಳನ್ನು ಕೇಳಿದ್ದೇವೆ. ಮನಸ್ಸಿಗೆ ಬಂದಂತೆ ಖರ್ಚುಮಾಡಿದರೆ ಬೆಳವಣಿಗೆ ಸಾಧ್ಯ ಇಲ್ಲ. ಅದಕ್ಕೊಂದು ಮಿತಿ ಇರಬೇಕು. ಏನದು ಮಿತಿ? ಅದು ಒಟ್ಟು ಜಿಡಿಪಿಯ ಶೇಕಡ ೩ಕ್ಕಿಂತ ಹೆಚ್ಚಿರಬಾರದು ಅಂತ ಯುರೋಪಿಯನ್ ಯೂನಿಯನ್ ಅಂದುಕೊಂಡಿದೆ. ಅದನ್ನು ಮಾಸ್ಟ್ರಿಚ್ಟ್ ನಿಯಮ ಅಂತ ಕರೆಯುತ್ತಾರೆ. ಇದನ್ನು ಹಲವು ದೇಶಗಳು ಒಪ್ಪಿಕೊಂಡಿವೆ. ಆದರೆ ಮೀರಿದರೆ ಆಗಬಹುದಾದ ಆರ್ಥಿಕ ಪರಿಣಾಮಗಳೇನು? ಶೇಕಡ ಮೂರೇ ಯಾಕಿರಬೇಕು. ನಮಗೆ ಸ್ಪಷ್ಟವಾದ ಒಂದು ಆರ್ಥಿಕ ಸಮರ್ಥನೆ ಸಿಗುವುದಿಲ್ಲ. ಹಾಗೆಯೇ ಸಾಲದ ಮಿತಿಯನ್ನು ಕೂಡ ಒಟ್ಟು ಜಿಡಿಪಿಯ ಶೇಕಡ ೬೦ರಷ್ಟು ಇರಬಹುದು, ಅಂತ ವಾದಿಸಲಾಗಿದೆ. ನಾವು ಭಾರತೀಯರು ಅದನ್ನೇ ನಿಯಮ ಮಾಡಿಕೊಂಡುಬಿಟ್ಟಿದ್ದೇವೆ. ಅದನ್ನು ಲಕ್ಷಣರೇಖೆಯಂತೆ ಅನುಸರಿಸಿಕೊಂಡು ಬರುತ್ತಿದ್ದೇವೆ. ಅದೊಂದು ಪವಿತ್ರ ಹಸುವಾಗಿಬಿಟ್ಟಿದೆ. ಅದನ್ನು ರಕ್ಷಿಸುವುದು ಆದ್ಯ ಕರ್ತವ್ಯವಾಗಿಬಿಟ್ಟಿದೆ.
ಜಗತ್ತೆಲ್ಲಾ ಅದನ್ನು ಅನುಸರಿಸಿಕೊಂಡು ಬರುತ್ತಿಲ್ಲ. ಉದಾಹರಣೆಗೆ ಸಾಲದ ಪ್ರಮಾಣವನ್ನು ತೆಗೆದುಕೊಳ್ಳಿ. ಜಪಾನಿನಲ್ಲಿ ಸಾಲದ ಪ್ರಮಾಣ ಜಿಡಿಪಿಯ ಶೇಕಡ೨೩೫ರಷ್ಟು ಇದೆ, ಅಮೇರಿಕೆಯಲ್ಲಿ ಅದು ಶೇಕಡ ೧೦೮ ಇದೆ, ಸಿಂಗಪುರದಲ್ಲಿ ಅದು ಶೇಕಡ ೧೧೧ ಇದೆ. ಯುರೋಪಿಯನ್ ಯೂನಿಯನ್ನಿನಲ್ಲಿ ಕೂಡ ಅದರ ಸರಾಸರಿ ತೆಗೆದುಕೊಂಡರೆ ಅದು ಶೇಕಡ ೯೧ರಷ್ಟು ಇದೆ. ಹಾಗಾಗಿ ಅದನ್ನು ಹಾಗೆ ಕಟ್ಟುನಿಟ್ಟಾಗಿ ಅನುಸರಿಸಿಕೊಂಡು ಬರುತ್ತಿರುವ ದೇಶಗಳು ಕಡಿಮೆ. ನಿಜವಾಗಿ ಸಾಲದ ಪ್ರಮಾಣ ಆಧರಿಸಬೇಕಾಗಿರುವುದು ಮತ್ತು ಆಧರಿಸಿರುವುದು ಸಾಲವನ್ನು ನಿರ್ವಹಿಸುವ ಸಾಮರ್ಥ್ಯವನ್ನು. ಸಾಲ ಸುಮ್ಮನೇ ಸೇರಿಕೊಳ್ಳುತ್ತಾ ಹೋಗಬಾರದು. ಆರ್ಥಿಕತೆಗೆ ಅದನ್ನು ತಾಳಿಕೊಳ್ಳುವುದಕ್ಕೆ ಸಾಧ್ಯವಾಗಬೇಕು. ಸಾಲದ ವಿಷಯ ಮಾತನಾಡುವಾಗಲೂ ಅದು ರೂಪಾಯಿ ರೂಪದಲ್ಲಿದೆಯೋ ಅಥವಾ ವಿದೇಶಿ ಹಣದಲ್ಲಿ ಹಣದಲ್ಲಿ ಮರುಪಾವತಿ ಮಾಡಬೇಕೋ ಅನ್ನುವುದು ಮುಖ್ಯ. ಉದಾಹರಣೆಗೆ ರೂಪಾಯಿಯ ರೂಪದಲ್ಲಿದ್ದರೆ ಸಮಸ್ಯೆಯೇ ಇಲ್ಲ. ಡಾಲರಿನಲ್ಲೋ, ಪೌಂಡಿನಲ್ಲೋ ಅಂದರೆ ವಿದೇಶಿ ವಿನಿಮಯದಿಂದ ಮರುಪಾವತಿ ಮಾಡಬೇಕಾಗುತ್ತದೆ ಎಂದಾಗ ಅದು ಸ್ವಲ್ಪ ತೊಂದರೆಯ ವಿಷಯ. ಅಂದರೆ ಇಡೀ ಸಾಲ ಸಮಸ್ಯೆಯಲ್ಲ. ವಿದೇಶಿ ಕರೆನ್ಸಿಯಲ್ಲಿ ಮರುಪಾವತಿ ಮಾಡಬೇಕಾದ ಅನುಪಾತ ಮುಖ್ಯ. ಅದು ಹೆಚ್ಚು ಗಂಭೀರವಾದದ್ದು. ಅದನ್ನು ಬಿಟ್ಟರೆ ಉಳಿದ ಸಾಲ ತಾಳಿಕೊಳ್ಳಬಹುದಾದ ಸಾಲಗಳೇ.
ಇದಕ್ಕೆ ಸಂಬಂಧಿಸಿದಂತೆ ಎಫ್‌ಆರ್‌ಬಿಎಂ (ಫಿಸ್ಕಲ್ ರೆಸ್ಪಾನ್ಸಿಬಿಲಿಟಿ ಅಂಡ್ ಬಜೆಟ್ ಮ್ಯಾನೇಜ್‌ಮೆಂಟ್) ಅಂತ ಒಂದು ಕಾಯ್ದೆ ಇದೆ. ಅದನ್ನು ಪರಿಷ್ಕರಿಸುವುದಕ್ಕೆ ಎನ್ ಕೆ ಸಿಂಗ್ ಅವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ನೇಮಿಸಲಾಗಿತ್ತು. ಅದು ದೀರ್ಘವಾದ ವರದಿಯನ್ನು ಇತ್ತೀಚೆಗೆ ನೀಡಿದೆ. ಸರ್ಕಾರದ ಪ್ರಮುಖ ಆರ್ಥಿಕ ಸಲಹೆಗಾರರಾದ ಅರವಿಂದ ಸುಬ್ರಮಣಿಯನ್ ಕೂಡ ಅದರ ಒಬ್ಬ ಸದಸ್ಯರು. ಒಟ್ಟಾರೆ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಈ ಮಿತಿಯನ್ನು ಕುರಿತು ಎಲ್ಲಾ ಸದಸ್ಯರಲ್ಲೂ ಒಮ್ಮತವಿದ್ದರೂ ವಿವರಗಳ ಬಗ್ಗೆ ಭಿನ್ನಾಬಿಪ್ರಾಯಗಳಿವೆ. ಸುಬ್ರಮಣಿಯನ್ ತಮ್ಮ ಅಸಮ್ಮತಿಯನ್ನು ದಾಖಲಿಸಿದ್ದಾರೆ. ಅದಕ್ಕೆ ಸಮಿತಿಯ ಉಳಿದವರ ಉತ್ತರವೂ ಇದೆ. ಅದು ಈ ಮಿತಿಯನ್ನು ಸಮ್ಮತಿಸಿದೆ. ಅವರು ತಮ್ಮ ಬೆಂಬಲಕ್ಕೆ ಕೆನೆತ್ ರೋಗಾಫ್ ಹಾಗೂ ಕಾರ್ಮನ್ ರೀನ್‌ಹರ್ಟ ಅವರ ಅಧ್ಯಯನವನ್ನು ಉಲ್ಲೇಖಿಸುತ್ತಾರೆ. ಶೇಕಡ ೯೦ಕ್ಕಿಂತ ಹೆಚ್ಚಿನ ಸಾಲದ ಅನುಪಾತ ದೇಶದ ಆರ್ಥಿಕ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ ಎಂಬುದು ಅದರ ಪ್ರಮುಖ ವಾದ. ಆದರೆ ಹಲವಾರು ಅಧ್ಯಯನಗಳು ಅದನ್ನು ತಳ್ಳಿಹಾಕಿವೆ. ಅಷ್ಟೇ ಅಲ್ಲ ಆ ಅಧ್ಯಯನದಲ್ಲಿ ಇರುವ ಮೂಲಭೂತ ಸಮಸ್ಯೆಗಳನ್ನು ಮುಂದಿಟ್ಟಿವೆ. ಉದಾಹರಣೆಗೆ ಥಾಮಸ್ ಹರ್ನ್‌ಡನ್, ಮೈಕೇಲ್ ಆಶ್, ಹಾಗು ರಾಬರ್ಟ್ ಪಾಲಿನ್ ಅವರ ಲೇಖನವನ್ನು ಉದಾಹರಣೆಗೆ ಗಮನಿಸಿಬಹುದು. ಅವರು ಮೂಲ ಲೇಖನದಲ್ಲಿನ ಅಂಕಿಅಂಶಗಳನ್ನೇ ಬಳಸಿಕೊಂಡು ಅದಕ್ಕೆ ವ್ಯತಿರಿಕ್ತವಾದ ಸಾಧ್ಯತೆಗಳನ್ನು ತೋರಿಸಿದ್ದಾರೆ. ಅಂದರೆ ಸಾಲದ ಪ್ರಮಾಣ ಹೆಚ್ಚಿದ್ದಾಗ ಅತ್ಯಂತ ಬೆಳವಣಿಗೆಯನ್ನು ಸಾಧಿಸಿರುವ ಹಲವು ಪ್ರಕರಣಗಳನ್ನು ಉಲ್ಲೇಖಿಸಿದ್ದಾರೆ. ಆ ಮೂಲಕ ಸಾಲದ ಅನುಪಾತಕ್ಕೂ ದೇಶದ ಪ್ರಗತಿಯ ನಡುವಿನ ಸಂಕೀರ್ಣತೆಯನ್ನು ತೋರಿಸಿದ್ದಾರೆ. ಸುಬ್ರಮಣಿಯನ್ ಕೂಡ ಕಾರ್ಮನ್ ಹಾಗೂ ರೋಗಾಫ್ ಅವರ ಅಧ್ಯಯನದ ಬಗ್ಗೆ ಅನುಮಾನವನ್ನು ತಮ್ಮ ಟಿಪ್ಪಣಿಯಲ್ಲಿ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ೨೦೦೮ರಲ್ಲಿ ಆರ್ಥಿಕ ಬಿಕ್ಕಟ್ಟಿನಲ್ಲಿ ನರಳಿದ ದೇಶಗಳಲ್ಲಿ ಯಾವುವು ಸಡಿಲವಾದ ಹಣಕಾಸು ನೀತಿಯನ್ನು ಅನುಸರಿಸಿ, ಉದಾರವಾಗಿ ಬಂಡವಾಳ ತೊಡಗಿಸಿದವೋ ಅವು ಬಿಕ್ಕಟ್ಟಿನಿಂದ ಬೇಗ ಹೊರಬಂದಿವೆ. ಹಾಗಾಗಿ ಸಾಲದ ಅನುಪಾತ ಇಷ್ಟೇ ಇರಬೇಕು ಅನ್ನುವುದರ ಬಗ್ಗೆ ನಿಶ್ಚಿತವಾದ ಉತ್ತರವಿಲ್ಲ. ಇದನ್ನು ಪ್ರಾರಂಭದಲ್ಲಿ ತುಂಬಾ ಉತ್ಸಾಹದಿಂದ ಪ್ರೋತ್ಸಾಹಿಸಿದ ದೇಶಗಳೂ ಈಗ ಇದಕ್ಕೆ ಜೋತುಬಿದ್ದಿಲ್ಲ. ಆದರೆ ಯಾಕೋ ಪರಿಷ್ಕರಣಾ ಸಮಿತಿ ಅದನ್ನು ಲಕ್ಷಣ ರೇಖೆಯಿದ್ದ ಹಾಗೆ, ಅದನ್ನು ಮೀರಬಾರದು ಎಂಬ ನಿಲುವಿಗೆ ಬಂದಿದೆ. ಇಂಡೊನೇಷ್ಯಾ, ಟರ್ಕಿ ಇಂತಹ ದೇಶಗಳ ಉದಾಹರಣೆಗಳನ್ನು ಕೊಟ್ಟಿದ್ದಾರೆ. ಆದರೆ ಅಲ್ಲಿ ನಿಮಗೆ ಆರ್ಥಿಕ ಸ್ಥಿರತೆ ಕಾಣಿಸುತ್ತಿಲ್ಲ. ಜೊತೆಗೆ ಈ ಶೇಕಡ ೬೦ನ್ನು ಕೇಂದ್ರದ ಪಾಲು ಶೇಕಡ ೪೦ ಹಾಗೂ ರಾಜ್ಯದ ಪಾಲು ಶೇಕಡ ೨೦ರಷ್ಟು ಅಂತ ಹಂಚಿಕೆ ಮಾಡಿದೆ. ಈ ರೀತಿಯ ರಾಷ್ಟ್ರ ಹಾಗೂ ರಾಜ್ಯಗಳ ನಡುವಿನ ಸಾಲದ ವಿತರಣೆಯ ಪ್ರಮಾಣಕ್ಕೂ ಅಂತಹ ಸಮರ್ಥನೆ ಇದ್ದಂತಿಲ್ಲ. ಈಗ ಇರುವ ಸಾಲ ಆ ಪ್ರಮಾಣದಲ್ಲಿ ಇದೆ ಎಂಬುದೇ ಕಾರಣವಾಗಿದ್ದರೆ ಅದೇನು ಒಳ್ಳೆಯ ಸಮರ್ಥನೆಯಲ್ಲ.
ಈ ಸಾಲದ ಮಿತಿಯನ್ನು ಸಾಧಿಸುವುದಕ್ಕೆ ವಿತ್ತೀಯ ಕೊರತೆಯನ್ನು ಮಾರ್ಗವಾಗಿ ಬಳಸಿಕೊಳ್ಳಲಾಗುತ್ತಿದೆ. ಅಂದರೆ ವಿತ್ತೀಯ ಕೊರತೆಯ ಮಿತಿಯನ್ನು ಕಾಪಾಡಿಕೊಂಡು ಬಂದರೆ ಸಾಲದ ಅವಶ್ಯಕತೆ ಬರುವುದಿಲ್ಲ. ಅದು ಮಿತಿಯಲ್ಲಿರುತ್ತದೆ ಎಂಬುದು ಇದರ ಹಿಂದಿನ ತರ್ಕ. ಅಷ್ಟೇ ಅಲ್ಲ ವಿತ್ತೀಯ ಕೊರತೆಯ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳುತ್ತಾ ಕೊನೆಗೆ ಕೊರತೆಯೇ ಇಲ್ಲದಂತೆ ನೋಡಿಕೊಳ್ಳಬೇಕೆಂಬುದು ಆಶಯ. ಈ ಸಮಿತಿಯು ಪ್ರತಿವರ್ಷ ಶೇಕಡ ೦.೨೫ರಷ್ಟು ಇಳಿಸುತ್ತಾ ೨೦೨೨-೨೩ರ ವೇಳೆಗೆ ಅದರ ಮಿತಿಯನ್ನು ಶೇಕಡ ೦.೮ ಕ್ಕೆ ಇಳಿಸಬೇಕು ಎಂದು ಸಲಹೆ ನೀಡುತ್ತಿದೆ. ತಾತ್ಕಾಲಿಕ ಕೊರತೆಯನ್ನು ಭರಿಸಲು ಬಿಟ್ಟಂತೆ ಯಾವುದೇ ಕಾರಣಕ್ಕೂ ಕೇಂದ್ರ ಬ್ಯಾಂಕಿನಿಂದ ಸಾಲ ಪಡೆಯಬಾರದು ಎಂದು ತಾಕೀತು ಮಾಡಿದೆ. ಈ ಬಗ್ಗೆ ಸುಬ್ರಮಣಿಯನ್ ಹಾಗೂ ಉಳಿದ ಸಮಿತಿಯ ಸದಸ್ಯರ ನಡುವೆ ಸಾಕಷ್ಟು ಚರ್ಚೆ ನಡೆದಿದೆ. ಆದರೆ ಯಾರೊಬ್ಬರೂ ಸಾಲ ಹಾಗೂ ವಿತ್ತೀಯ ಕೊರತೆಯ ಅನುಪಾತವನ್ನು ಕುರಿತಂತೆ ಸೈದ್ಧಾಂತಿಕ ಅಥವಾ ಎಂಪಿರಿಕಲ್ ಆದ ಸಮರ್ಪಕವಾದ ಕಾರಣವನ್ನು ಕೊಟ್ಟಿದ್ದಾರೆ ಅನ್ನಿಸುವುದಿಲ್ಲ.
ಇಷ್ಟೊಂದು ಪವಿತ್ರ ಅಂತ ಹೇಳಿಕೊಳ್ಳುವ ಈ ಅನುಪಾತವನ್ನು ಸರ್ಕಾರಗಳು ಕಾಪಾಡಿಕೊಂಡು ಬರುತ್ತಲೂ ಇಲ್ಲ. ಅದನ್ನು ಮೀರಲು ತಮ್ಮದೇ ಆದ ದಾರಿಯನ್ನು ಕಂಡುಕೊಳ್ಳುತ್ತಿವೆ. ಒಂದು ಕ್ರಮ ಅಂದರೆ ಸರ್ಕಾರಗಳು ಬಜೆಟ್ಟಿನ ವ್ಯಾಪ್ತಿಯ ಆಚೆಗೆ ಹಲವಾರು ಖರ್ಚುಗಳನ್ನು ಮಾಡಿಬಿಡುತ್ತವೆ. ಸರ್ಕಾರಗಳು ಮಾಡುವ ಇನ್ನೊಂದು ಮೋಸ ಅಂದರೆ ಸರ್ಕಾರಿ ಕಾರ್ಯಕ್ರಮಗಳು ಹಾಗೂ ಸಾರ್ವಜನಿಕ ಉದ್ದಿಮೆಗಳ ಖರ್ಚನ್ನು ತಡೆಹಿಡಿದುಬಿಡುತ್ತದೆ. ಉದಾಹರಣಗೆ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯಡಿಯಲ್ಲಿ ಕೇಂದ್ರವೂ ರಾಜ್ಯ ಸರ್ಕಾರಗಳಿಗೆ ಕೊಡಬೇಕಾಗಿದ್ದ ೬೦೦೦ ಕೋಟಿ ರೂಪಾಯಿಗಳನ್ನು ತಡೆಹಿಡಿದಿತ್ತು. ಹೀಗೆ ಹಲವಾರು ಉದಾಹರಣೆಗಳನ್ನು ನೀಡಬಹುದು. ಖರ್ಚು ಸರ್ಕಾರ ಘೋಷಿಸಿರುವ ಮಿತಿಯನ್ನು ಸಾಮಾನ್ಯವಾಗಿ ಮೀರಿರುತ್ತದೆ.
ಸರ್ಕಾರ ಈ ವರ್ಷ ವಿತ್ತೀಯ ಕೊರತೆ ಒಟ್ಟು ಜಿಡಿಪಿಯ ಶೇಕಡ ೩.೨ರಷ್ಟಕ್ಕೆ ಉಳಿಸಿಕೊಳ್ಳಲು ನಿರ್ಧರಿಸಿದೆ. ಆದರೆ ಅಕ್ಟೋಬರ್ ಕೊನೆಯ ವೇಳೆಗೆ ಅದು ಒಟ್ಟಾರೆ ಕೊರತೆಯ ಶೇಕಡ ಈಗಾಗಲೇ ಶೇಕಡ ೯೬.೧ರಷ್ಟು ಮುಟ್ಟಿಬಿಟ್ಟಿದೆ. ಹಾಗಾಗಿ ಸರ್ಕಾರ ತನ್ನ ಖರ್ಚನ್ನು ಕಡಿಮೆ ಮಾಡಿಕೊಳ್ಳಬೇಕು ಎನ್ನುವ ಎಚ್ಚರಿಕೆಯನ್ನು ರವಾನಿಸಲಾಗುತ್ತಿದೆ. ಜೊತೆಗೆ ಕಂದಾಯದ ಸಂಗ್ರಹವೂ ಕಡಿಮೆಯಾಗಿದೆ. ಕಳೆದ ವರ್ಷ ಶೇಕಡ ೫೧ರಷ್ಟು ಇದ್ದದ್ದು ಈ ವರ್ಷ ಬಜೆಟ್ ಅಂದಾಜಿನ ಕೇವಲ ೪೮ರಷ್ಟು ಇದೆ. ತೆರಿಗೆಯೇತರ ಆದಾಯ ಶೇಕಡ ೩೩ಕ್ಕೆ ಇಳಿದಿದೆ( ಕಳೆದ ವರ್ಷ ಶೇಕಡ ೫೨ರಷ್ಟಿತ್ತು). ನಿರ್ನೋಟೀಕರಣದಿಂದಾಗಿ ಆರ್‌ಬಿಐನಿಂದ ಬರುವ ಡಿವಿಡೆಂಡ್ ಕೂಡ ೩೫,೦೦೦ಕೋಟಿಯಷ್ಟು ಕಡಿಮೆ ಆಗಿಬಿಟ್ಟಿದೆ. ಇತ್ತೀಚೆಗೆ ಜಿಎಸ್‌ಟಿಯಲ್ಲಿ ಕೆಲವು ಸರಕುಗಳಿಗೆ ತೆರಿಗೆ ಕಡಿಮೆ ಮಾಡಿರುವುದರಿಂದ ಅಕ್ಟೋಬರ್ ತಿಂಗಳಿನಲ್ಲಿ ೧೦,೦೦೦ ಕೋಟಿ ರೂಪಾಯಿಗಳಷ್ಟು ಸಂಗ್ರಹ ಕಡಿಮೆಯಾಗಿದೆ ಎನ್ನಲಾಗಿದೆ.
ಹಾಗಾಗಿ ವಿತ್ತೀಯ ಕೊರತೆ ಶೇಕಡ ೩.೨ನ್ನು ಮೀರಲೂಬಹುದು. ನಾವೇ ಹಾಕಿಕೊಂಡ ಸಲ್ಲದ ಮಿತಿಗೆ ಗಂಟು ಬೀಳದೆ ಹೆಚ್ಚಿನ ಬಂಡವಾಳ ಹೂಡುವುದು ಅನಿವಾರ್ಯ. ಒಳ್ಳೆಯ ನೀತಿಯೂ ಹೌದು. ಆರ್ಥಿಕತೆ ಬಿಕ್ಕಟ್ಟನ್ನು ಎದುರಿಸುತ್ತಿದ್ದಾಗ, ಒಟ್ಟಾರೆ ಬಂಡವಾಳ ಹೂಡಿಕೆಗೆ ಪೂರಕ ವಾತಾವರಣ ಇಲ್ಲದಿದ್ದಾಗ, ಅಂದರೆ ಸಧ್ಯ ಭಾರತ ಎದುರಿಸುತ್ತಿರುವ ಪರಿಸ್ಥಿತಿಯಲ್ಲಿ ಸರ್ಕಾರ ಬಂಡವಾಳ ಹೂಡುವುದು ಅನಿವಾರ್ಯ. ಜೊತೆಗೆ ಆರೋಗ್ಯ, ಶಿಕ್ಷಣ ಇತ್ಯಾದಿ ಕ್ಷೇತ್ರಗಳಿಗೆ ಹೂಡಿಕೆ ತುಂಬಾ ಕಡಿಮೆಯಾಗಿದ್ದು ಅವು ಸೊರಗಿವೆ. ಉದ್ಯೋಗ ಸೃಷ್ಟಿ ತುಂಬಾ ಕಡಿಮೆಯಾಗಿದೆ. ಅಸಮಾನತೆ ತುಂಬಾ ಹೆಚ್ಚಿದೆ. ಇಂತಹ ಹತ್ತು ಹಲವಾರು ಸಮಸ್ಯೆಗಳು ಬಂಡವಾಳ ಹೂಡಿಕೆಯನ್ನು ಬೇಡುತ್ತವೆ. ಸರ್ಕಾರವೇ ಇದಕ್ಕೆ ಮುಂದೆ ಬರಬೇಕು. ಒಮ್ಮೆ ವಾತಾವರಣ ಪೂರಕವಾದರೆ ಖಾಸಗಿ ಬಂಡವಾಳವೂ ಹರಿದು ಬರಬಹುದು.
ಟ ಎಸ್ ವೇಣುಗೋಪಾಲ್

Recommended Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.