ವೀಣಾ ಎಸ್ ಬಾಲಚಂದರ್ ಅವರ ನೆನಪಿನಲ್ಲಿ
ಇಲ್ಲಿ ಗಣೇಶ ಉತ್ಸವ ಕಛೇರಿ ನುಡಿಸಿದ ತಕ್ಷಣ ನನಗೆ ಪ್ರಕಾಶ್ ಸಾರ್ ಫೋನ್ ಬಂತು. ಪ್ರಕಾಶ್ ಸಾರ್ ಅವರು ನನ್ನ ಗುರು ಬಾಲಚಂದರ್ ಅವರ ದೊಡ್ಡ ಅಭಿಮಾನಿ. ಬಾಲಚಂದರ್ ಅವರಂತಹ ಕಲಾವಿದ ಹಿಂದೆ ಇರಲಿಲ್ಲ ಮತ್ತು ಮುಂದೆ ಬರುವುದೂ ಇಲ್ಲ ಎನ್ನುವ ಭಾವನೆ ಪ್ರಕಾಶ್ ಅವರಿಗೆ ಇತ್ತು ನನಗನ್ನಿಸುತ್ತದೆ. ಅವರು ನನ್ನನ್ನು ಇಲ್ಲಿಗೆ ಕರೆದು, ಬಾಲಚಂದರ್ ಅವರ ನೆನಪಿನಲ್ಲಿ ನುಡಿಸಲು ಆಹ್ವಾನಿಸಿದ್ದೇ ನಿಜವಾದ ಗೌರವ ಎಂದು ನಾನು ಭಾವಿಸುತ್ತೇನೆ.
ಹೀಗೆ ಬಾಲಚಂದರ್ ಸಂಸ್ಮರಣಾ ಕಾರ್ಯಕ್ರಮಕ್ಕೆ ಕಾರಣರಾದ ವಿದ್ವಾನ್ ಎ ವಿ ಪ್ರಕಾಶ್ ಅವರನ್ನು ನೆನೆಸಿಕೊಂಡು ವಿದುಷಿ ಜಯಂತಿ ಕುಮರೇಶ್ ಸಂಗೀತ ಕಾರ್ಯಕ್ರಮ ಪ್ರಾರಂಭಿಸಿದರು. ಕಾರ್ಯಕ್ರಮದುದ್ದಕ್ಕೂ ತಾವು ಬಾಲಚಂದರ್ ಜೊತೆ ಕಳೆದ ಕೆಲವು ಸಂಗೀತಾತ್ಮಕ ಕ್ಷಣಗಳನ್ನು ಶ್ರೋತೃಗಳ ಜೊತೆ ಹಂಚಿಕೊಳ್ಳುತ್ತಾ ಹೋದರು. ಅದನ್ನು ತಿಲ್ಲಾನದ ಓದುಗರಿಗಾಗಿ ಇಲ್ಲಿ ಕನ್ನಡದಲ್ಲಿ ದಾಖಲಿಸುತ್ತಿದ್ದೇವೆ. ಎಸ್ಬಿ ಮಾಮ-ನಾನು ಬಾಲಚಂದರ್ ಸಾರ್ ಹಾಗೇ ಕರೆಯುತ್ತಿದ್ದುದು-ಅವರ ಕಾರ್ಯಕ್ರಮಗಳು ಯಾವಾಗಲೂ ಒಂದು ಸಾಂಪ್ರದಾಯಿಕ ಚೌಕಟ್ಟಿನಲ್ಲಿರುತ್ತಿರಲಿಲ್ಲ. ಒಂದು ಕಛೇರಿಯನ್ನು ಒಂದು ರಾಗದ ಆಲಾಪನೆಯಿಂದ ಪ್ರಾರಂಭಿಸುವುದು, ಅಥವಾ ಶ್ರೀ ಸುಬ್ರಮಣ್ಯಾಯ ನಮಸ್ತೆ ಕೃತಿಯಿಂದ ಪ್ರಾರಂಭಿಸುವುದು ಇಂದು ಆಗುತ್ತಿರುವ ಘಟನೆಯಲ್ಲ. ಅವರು ತುಂಬಾ ಹಿಂದೆಯೇ ಮಾಡಿದ್ದರು. ಕಾರ್ಯಕ್ರಮವನ್ನು ಒಂದು ವರ್ಣದಿಂದ ಪ್ರಾರಂಭಿಸಬೇಕು, ಅಥವಾ ಕಾರ್ಯಕ್ರಮ ಅಂದರೆ ಅದರಲ್ಲಿ ಒಂದು ಪ್ರಧಾನ ಐಟಮ್ ಅಥವಾ ಉಪಪ್ರಧಾನ ಕೃತಿ ಇರಬೇಕು ಎಂದು ಅವರು ಯೋಚಿಸುತ್ತಿರಲಿಲ್ಲ. ತಮ್ಮ ಸಂಗೀತದಲ್ಲಿ ಮುಳುಗಿ ಹೋಗುತ್ತಿದ್ದರು.
ಒಮ್ಮೆ ನನಗೆ ಅವರೊಂದಿಗೆ ಕೂರುವ ಸುಯೋಗ ಒದಗಿತು. ಬಹುಶಃ ನಾನಾಗ ೧೨ನೇ ತರಗತಿಯಲ್ಲಿದ್ದೆ, ಅವರೊಂದಿಗೆ ವೀಣೆ ಹಿಡಿದು ಕುಳಿತಿದ್ದೆ ಅಂತ ಮಾತ್ರ ಹೇಳೋಕ್ಕೆ ಸಾಧ್ಯ. ಅವರೊಂದಿಗೆ ನುಡಿಸಿದೆ ಎಂದು ಹೇಳುವುದಕ್ಕೆ ಸಾಧ್ಯವೇ ಇಲ್ಲ. ನಾನು ಪುಟ್ಟ ಹುಡುಗಿ, ಅವರೋ ವೀಣಾವಾದನದಲ್ಲಿ ದೈತ್ಯ. ಅದು ಮ್ಯೂಸಿಕ್ ಕಾಲೇಜಿಗಾಗಿ ನಡೆದ ಒಂದು ಕಾರ್ಯಕ್ರಮ. ಆ ಕಾಲದ ಸಂಗೀತ ಕ್ಷೇತ್ರದ ಘಟಾನುಘಟಿಗಳೆಲ್ಲಾ ಸೇರಿದ್ದರು. ಎಸ್ಬಿ ಮಾಮರವರ ನೋಟವೇ ಒವರ್ ಪವರಿಂಗ್. ಗ್ರಾಂಡ್ ಮ್ಯಾನ್. ನಾನಿನ್ನು ಚಿಕ್ಕವಳು. ನನಗೆ ಅವರು ವರ್ಣದಿಂದ ಪ್ರಾರಂಭಿಸುವುದಿಲ್ಲ ಎನ್ನುವುದೆಲ್ಲಾ ಗೊತ್ತಿರಲಿಲ್ಲ. ಅವರು ನನ್ನನ್ನು ಏನು ನುಡಿಸೋಣ ಅಂತ ಕೇಳಿದರು. ನಾನು ಮುಗ್ಧವಾಗಿ ನವರಾಗಮಾಲಿಕಾ ವರ್ಣ ಮಾಮ ಅಂದೆ. ಅವರು ನನ್ನ ಕಡೆ ನೋಡಿದರು. ಸರಿ ಅಂದರು. ಅವರು ನವರಾಗಮಾಲಿಕಾ ವರ್ಣದಲ್ಲಿ ಬರುವ ಒಂಬತ್ತು ರಾಗಗಳನ್ನು ಸುಮಾರು ಒಂದು ಗಂಟೆ ಆಲಾಪಿಸಿದರು. ಇನ್ನು ಮುಕ್ಕಾಲು ಗಂಟೆ ಆ ರಾಗಗಳಲ್ಲಿ ತಾನ ನುಡಿಸಿದರು. ನಂತರ ನವರಾಗಮಾಲಿಕಾ ವರ್ಣವನ್ನು ನುಡಿಸಿದರು. ಚರಣದಲ್ಲ್ಲಿ ಒಂಬತ್ತು ರಾಗಗಳಲ್ಲಿಯೂ ಸ್ವರ ಹಾಕಿದರು. ನಂತರ ಶ್ರೀರಾಗದಿಂದ ಕಛೇರಿಯನ್ನು ಮುಗಿಸಿದರು. ಇಡೀ ಕಛೇರಿಯಲ್ಲಿ ನುಡಿಸಿದ್ದು ಒಂದೇ ಕೃತಿ. ಅದು ನವರಾಗಮಾಲಿಕ ವರ್ಣ. ಅದು ಎಸ್ಬಿ ಮಾಮ ಅವರ ಹೆಚ್ಚುಗಾರಿಕೆ. ಅಂತಹ ಕ್ಷಣಗಳನ್ನು ನೆನೆಸಿಕೊಳ್ಳಲು ಇದು ಸೂಕ್ತ ಸಮಯ ಅಂತ ಭಾವಿಸಿದ್ದೇನೆ. ಇದು ಕಲಾರಸಿಕರಿಗೆ ಗೊತ್ತಿರಬೇಕು.
ಕುಮುದಪ್ರಿಯ ರಾಗದ ಕೃತಿ ಅವರಿಂದ ನಾನು ಕಲಿತ ಕೃತಿಗಳಲ್ಲಿ ಒಂದು. ಅವರ ತರಗತಿಗಳು ಕೂಡ ಸಂಪ್ರದಾಯಿಕ ವಾಗಿರುತ್ತಿರಲಿಲ್ಲ. ನಾನು ಪಾಠಕ್ಕೆ ಹೋದರೆ ಮುತ್ತುಸ್ವಾಮಿ ದೀಕ್ಷಿತರ ಪುಸ್ತಕ ತರಲು ಹೇಳಲು ಹೇಳಿದರು. ನಾನು ಕೊಟ್ಟೆ. ನನಗೆ ಕಣ್ಣು ಮುಚ್ಚಿ ಯಾವುದಾದರೂ ಪುಟ ತೆಗೆಯಲು ಹೇಳಿದರು. ನಾನು ಹಾಗೆ ತೆಗೆದಾಗ ಆ ಪುಟದಲ್ಲಿ ಅರ್ಧನಾರೀಶ್ವರಂ ಕೃತಿ ಇತ್ತು. ಅವರು ಹೇಳಿದರು. ನನಗೆ ಈ ಕೃತಿ ಬರೊಲ್ಲ. ಆದರೆ ಒಟ್ಟಿಗೆ ಕಲಿಯೋಣ ಅಂದರು. ಅವರು ಪಲ್ಲವಿಯಲಿ, ಅನುಪಲ್ಲವಿಯಲ್ಲಿ ಮೂವತ್ತು ನಲವತ್ತು ಸಂಗತಿಗಳನ್ನು ನುಡಿಸುತ್ತಿದ್ದರು. ಆದರೆ ಕಛೇರಿಯಲ್ಲಿ ಅವುಗಳಲ್ಲಿ ಒಂದು ಸಂಗತಿಯನ್ನೂ ನುಡಿಸುತ್ತಿರಲಿಲ್ಲ. ಅವರು ಪೂರ್ತಿ ಬೇರೆಯದೇ ಆದ ಸಂಗತಿಗಳನ್ನು ನುಡಿಸುತ್ತಿದ್ದರು. ಅವರದು ಅಂತಹ ಕಲ್ಪನಾಶಕ್ತಿ.
ಎಸ್ ಬಿ ಮಾಮ ಒಮ್ಮೆ ಭಾರತೀಯ ಸೈನ್ಯದ ಆಧಿಕಾರಿಗಳ ಮುಂದೆ ನುಡಿಸಬೇಕಾಗಿತ್ತು. ಅವರಿಗೆ ಕರ್ನಾಟಕ ಸಂಗೀತದ ಪರಿಚಯವಿರಲಿಲ್ಲ. ಎಸ್ಬಿ ಮಾಮ ಸಾಮಾನ್ಯವಾಗಿ ಐದಾರು ವೇಗದ ಕೃತಿಗಳನ್ನು ನುಡಿಸುವ ಥರದವರಲ್ಲ. ಒಂದು ವಿಶಾಲವಾದ ಆಲಾಪನೆಯನ್ನು ನುಡಿಸಿದರು. ಸ್ವಲ್ಪ ಹೊತ್ತಿನ ನಂತರ ಅಧಿಕಾರಿಗಳ ನಡುವೆ ಗುಸುಗುಸ ಪ್ರಾರಂಭವಾಯಿತು.. ತುಂಬಾ ಗದ್ದಲ ಪ್ರಾರಂಭವಾಯಿತು. ತಕ್ಷಣ ಮಾಮ ಜನಗನಮಣ ನುಡಿಸಲು ಪ್ರಾರಂಭಿಸಿದರು. ಎಲ್ಲಾ ಅಧಿಕಾರಿಗಳು ಎದ್ದು ನಿಂತರು. ಮಾಮ ಅದರಲ್ಲೆ ಅಲಾಪನೆ ನೆರವಲ್, ಸ್ವರಪ್ರಸ್ತಾರ, ಮನೋಧರ್ಮ ಎಲ್ಲಾ ಮುಕ್ಕಾಲು ಗಂಟೆ ನುಡಿಸಿದರು. ಮುಕ್ಕಾಲು ಗಂಟೆ ಎಲ್ಲಾ ನಿಂತೇ ಇದ್ದರು. ಪೂರ್ಣ ನಿಶ್ಶಬ್ಧತೆ ಇತ್ತು. ಎಸ್ಬಿ ಮಾಮ ಯಾವ ಅಡಚಣೆಯೂ ಇಲ್ಲದೆ ತಮ್ಮ ಕಛೇರಿಯನ್ನು ಮುಗಿಸಿದರು.