ಶರಭ ಶಾಸ್ತ್ರಿಗಳು ಹಾಗೂ ಅವರ ಶಿಷ್ಯರ ಪ್ರಸಂಗ

 In RAGAMALA

ಮಹಾನ್ ಸಂಗೀತಗಾರ ಹಾಗೂ ಕೊಳಲುವಾದಕ ಶರಭಶಾಸ್ತ್ರಿಗಳಿಗೆ ಇಬ್ಬರು ಶಿಷ್ಯರಿದ್ದರು – ಒಬ್ಬ ಸಂಜೀವ, ಇನ್ನೊಬ್ಬ ರಾಮು.
ಸಂಜೀವ ಕೊಳಲನ್ನು ಕಲಿಯುವುದನ್ನು ಆಯ್ದುಕೊಂಡ. ಅದನ್ನು ಕಲಿಯುವುದರಲ್ಲಿ ಅಪಾರ ಆಸಕ್ತಿ ವಹಿಸಿದ. ಆದರೆ ರಾಮುವಿಗೆ ಸಂಗೀತ ಕಲಿಯುವುದರಲ್ಲಿ ಅಂತಹ ಆಸಕ್ತಿ ಇರಲಿಲ್ಲ. ಅವನಿಗೆ ಅಕ್ಕಪಕ್ಕದವರನ್ನು ಅನುಕರಣೆ ಮಾಡುವುದರಲ್ಲಿ ಹೆಚ್ಚಿನ ಆಸಕ್ತಿ. ಪಕ್ಷಿ, ಬೆಕ್ಕು, ನಾಯಿ, ಕಪ್ಪೆ ಇವುಗಳ ಧ್ವನಿಗಳನ್ನು ಅನುಕರಿಸುವುದರಲ್ಲಿ ಅಪಾರ ಆಸಕ್ತಿ. ಅವನ ಆಸಕ್ತಿಯೆಲ್ಲ ಇದನ್ನು ಮುಂದುವರಿಸುವುದರಲ್ಲೇ ಇತ್ತು.
ಶರಭ ಶಾಸ್ತ್ರಿಗಳು ಶಿಸ್ತಿಗೆ ಹಾಗೂ ಕಟ್ಟುನಿಟ್ಟಿನ ಅಭ್ಯಾಸಕ್ಕೆ ಹೆಸರಾದವರು. ಹಾಗಿದ್ದರೂ ಅವರು ರಾಮುವಿನ ಈ ನಗಿಸುವ ಕಲೆಯಲ್ಲಿ ಆಗ ಈಗ ಸಂತೋಷ ಕಂಡುಕೊಳ್ಳುತ್ತಿದ್ದರು. ಜೊತೆಗೆ ಗುರುಗಳ ಎಲ್ಲಾ ಅವಶ್ಯಕತೆಗಳನ್ನೂ ರಾಮು ನೋಡಿಕೊಳ್ಳುತ್ತಿದ್ದ. ಹಾಗಾಗಿ ರಾಮುವಿನ ಬಗ್ಗೆ ಗುರುಗಳಿಗೆ ಸ್ವಲ್ಪ ಹೆಚ್ಚಿನ ಮಮತೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸಂಜೀವನಿಗೆ ರಾಮುವಿನ ಬಗ್ಗೆ ಸ್ವಲ್ಪ ಅಸೂಂiಯಿತ್ತು. ಹಾಗಾಗಿ ಅವಕಾಶ ಸಿಕ್ಕಾಗಲೆಲ್ಲಾ ರಾಮುವನ್ನು ಪೀಡಿಸುವುದಕ್ಕೆ ಸಂಜೀವ ಪ್ರಯತ್ನಿಸುತ್ತಿದ್ದ.
ತುಂಟಾಟದ ರಾಮುವಿನ ಮಾತುಗಳಲ್ಲಿ ಹಾಗೂ ಕೆಲಸದಲ್ಲಿ ಅಪಾರವಾದ ಹಾಸ್ಯಪ್ರಜ್ಞೆ ಇರುತ್ತಿತ್ತು. ಸಂಜೀವನ ಕೊಳಲುವಾದನ ಹಾಗೂ ಸಂಗೀತ ಜ್ಞಾನದ ಬಗ್ಗೆ ಅವನಿಗೆ ಅಪಾರ ಪ್ರೀತಿ ಇದ್ದರೂ, ತನ್ನ ಬಗ್ಗೆ ಸಂಜೀವ ತೋರುತ್ತಿದ್ದ ಚಿಲ್ಲರೆ ಅಸೂಯೆಯ ಅವನಿಗೆ ಸಿಟ್ಟಿತ್ತು. ಹಾಗಾಗಿ ಅವನನ್ನು ಇಕ್ಕಟ್ಟಿಗೆ ಸಿಕ್ಕಿಸಲು ಸದಾ ಹೊಂಚು ಹಾಕುತ್ತಿದ್ದ. ಅದಕ್ಕೆ ಸರಿಯಾಗಿ ಒಮ್ಮೆ ಶರಭಶಾಸ್ತ್ರಿಗಳು ತನ್ನ ಗೆಳೆಯನನ್ನು ನೋಡಲು ಪಕ್ಕದ ಊರಿಗೆ ಹೋಗಬೇಕಾಯಿತು. ಅವರು ಸಂಜೀವನಿಗೆ ತಾನು ಬರುವವರೆಗೆ ದೀಕ್ಷಿತರ ಹೊಸ ಕೃತಿಯೊಂದನ್ನು ಅಭ್ಯಾಸ ಮಾಡಲು ಸೂಚಿಸಿದರು. ಜೊತೆಗೆ ರಾಮುವಿಗೆ ತಂಬೂರಿ ಮೀಟಿ ಸಹಕಾರ ನೀಡಲು ಹೇಳಿದರು. ಸಂಜೀವ ಹೊಸ ಕೃತಿಯ ಅಭ್ಯಾಸ ಪ್ರಾರಂಭಿಸಿದ. ರಾಮು ತಂಬೂರ ಶ್ರುತಿಮಾಡಿಕೊಂಡ. ಸಂಜೀವನ ಸೊಗಸಾದ ನುಡಿಸಾಣಿಕೆ ತಂಬೂರದ ಶೃತಿಯೊಂದಿಗೆ ಮಿಲಿನವಾಗಿ ಒಳ್ಳೆಯ ನಾದ ಕೊಠಡಿಯೆಲ್ಲಾ ತುಂಬಿಕೊಂಡಿತ್ತು. ಎಲ್ಲಾ ಸಾಂಗವಾಗಿ ಸುಸೂತ್ರವಾಗಿ ನಡೆಯುತ್ತಿತ್ತು.
ಕಿಟಕಿಯಿಂದ ಗುರುಗಳು ಬರುವುದು ರಾಮುವಿಗೆ ಕಂಡಿತು. ಮೆತ್ತಗೆ ತಂಬೂರ ಮೀಟುವುದನ್ನು ನಿಲ್ಲಿಸಿ, ಮೀಟುತ್ತಿರುವಂತೆ ನಟಿಸುತ್ತಾ ತಂಬೂರದ ಶೃತಿಯನ್ನು ಬಾಯಲ್ಲಿ ಅನುಕರಿಸಲು ಪ್ರಾರಂಭಿಸಿದ. ಅದು ತಂಬೂರದ ಶೃತಿಯಂತೇ ಇತ್ತು.
ಶರಭಶಾಸ್ತ್ರಿಗಳು ಒಳಗೆ ಬಂದರು. ರಾಮು ಶೃತಿಯನ್ನು ಅರ್ಧಮನೆ ಇಳಿಸಿಬಿಟ್ಟ. ಸಂಜೀವನ ನುಡಿಸಾಣಿಕೆ ಶೃತಿಗೆ ಹೊಂದಿಕೆಯಾಗಲಿಲ್ಲ. ಅದನ್ನು ಗಮನಿಸದೇ ಗುರುಗಳನ್ನು ಮೆಚ್ಚಿಸಬೇಕೆಂದು ಸಂಜೀವ ಪೂರ್ಣ ಧ್ವನಿಯಲ್ಲಿ ನುಡಿಸುತ್ತಿದ್ದ.
ಶರಭಶಾಸ್ತ್ರಿಗಳು ಕಿವಿ ಮುಚ್ಚಿಕೊಂಡರು. ಮುಖ ಕೆಂಪಾಯ್ತು. ಕಣ್ಣುಗಳು ಕೆಂಡವಾದವು. ಮೂರ್ಖ ಜೋರಾಗಿ ಕೂಗಿದರು. ನಿನಗೆ ನುಡಿಸುವಾಗ ಶ್ರುತಿಯನ್ನು ಗಮನಿಸಬೇಕೆಂಬ ಪರಿಜ್ಞಾನವೂ ಇಲ್ಲವೆ? ತಂಬೂರದ ಶ್ರುತಿಯೇ ಬೇರೆಯಿದೆ, ನೀನು ನುಡಿಸುತ್ತಿರುವ ಶ್ರುತಿಯೇ ಬೇರೆಯಿದೆ ಎಂದು ಕೂಗಾಡಿದರು.
ಸಂಗೀತ ನಿಂತು ಹೋಯಿತು. ಒಂದು ಕ್ಷಣ ಪೂರ್ಣ ಮೌನ. ಶಾಸ್ತ್ರಿಗಳು ಶಾಂತವಾದರು.
ನೋಡಿಲ್ಲಿ ಸಂಜೀವ. ಶ್ರುತಿ ಲಯಗಳು ನಮ್ಮ ಎರಡು ಕಣ್ಣುಗಳಿದ್ದಂತೆ. ನೀನು ಚೆನ್ನಾಗಿ ನುಡಿಸುತ್ತೀಯ, ಒಳ್ಳೆಯ ಕಲಿಕೆಯ ಜ್ಞಾನವೂ ಇದೆ. ಆದರೆ ಇತ್ತೀಚೆಗೆ ನಿನ್ನ ಎರಡು ಕಣ್ಣುಗಳ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದೀಯ. ಕೆಲವು ದಿನಗಳ ಹಿಂದೆ ನೀನು ಲಯ ತಪ್ಪಿಸುವುದನ್ನು ನಾನು ಗಮನಿಸಿದೆ. . ..
ಇಲ್ಲ ಗುರುಗಳೆ, ಅದು ರಾಮ ಮಾಡಿದ್ದು. ತಾಳವನ್ನು ಸ್ವಲ್ಪ ಮೊದಲೇ ತಟ್ಟಿ ಹಾಗೆ ಮಾಡಿದ ಸಂಜೀವ ಅಳಲು ತೋಡಿಕೊಂಡ.
ಅಬದ್ಧ ಹೇಳುವುದು ಬಿಡು. ನೀನು ನಿಜವಾದ ಸಂಗೀತಗಾರನಾಗಿದ್ದರೆ ಯಾರೂ ನಿನ್ನನ್ನು ತಪ್ಪಿಸುವುದಕ್ಕೆ ಸಾಧ್ಯವಿಲ್ಲ. ಲಯ ಅನ್ನುವುದು ನಿನ್ನ ದೇಹದ ಲಯದ ಭಾಗವಾಗಿಬಿಡಬೇಕು. ಇದು ನಿನ್ನ ಬೆರಳಿನ ತುದಿಯಲ್ಲಿರಬೇಕು. ನಿನ್ನ ಹಾಡು ಶ್ರುತಿ, ಲಯ ಹಾಗೂ ಸ್ವರಗಳು ಒಂದಾಗಿ ಬೆರೆತುಹೋಗಬೇಕು. ಅರ್ಥವಾಯ್ತೆ? ಎಂದರು.
ಅರ್ಥ ಆಯ್ತು ಸಾರ್. ನಿಮ್ಮ ಸಲಹೆಯನ್ನು ಮನಸ್ಸಿನಲ್ಲೇ ಇಟ್ಟುಕೊಂಡಿರುತ್ತೇನೆ. ಅಂದ ಸಂಜೀವ. ಆ ಸಂಜೀವನೆ ನಂತರದಲ್ಲಿ ಮಹಾನ್ ಸಂಗೀತಗಾರ ಹಾಗೂ ಅಗ್ರಮಾನ್ಯ ಕೊಳಲುವಾದಕನೆಂದು ಹೆಸರು ಮಾಡಿದ ಪಲ್ಲಡಂ ಸಂಜೀವರಾವ್.
ರಾಮು ಮುಂದೆ ಬೆಳೆದು ವಿಕಟಂ ರಾಮಸ್ವಾಮಿಶಾಸ್ತ್ರಿಗಳಾದರು. ಅವರು ತಮ್ಮ ಕ್ಷೇತ್ರದಲ್ಲಿ ಹೆಸರು ಮಾಡಿದವರೆ.
ಇವರಿಬ್ಬರೂ ತಮ್ಮ ಜೀವನವಿಡೀ ತುಂಬಾ ಅತ್ಮೀಯ ಗೆಳೆಯರಾಗಿದ್ದರು ಎಂಬುದು ಈಗ ಇತಿಹಾಸ.

ಶೃತಿ ಪತ್ರಿಕೆಯಲ್ಲಿ, ವಾಯುಪುತ್ರ ಬರೆದ ಲೇಖನದ ಅನುವಾದ ೧, ನವೆಂಬರ್, ೧೯೮೪
ವೇಣುಗೋಪಾಲ್

Recommended Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.